Tag: destroy

  • ಕಿಡಿಗೇಡಿಗಳಿಂದ ಟೊಮೆಟೊ ಬೆಳೆಗೆ ಕಳೆ ನಾಶಕ ಸಿಂಪಡಣೆ

    ಕಿಡಿಗೇಡಿಗಳಿಂದ ಟೊಮೆಟೊ ಬೆಳೆಗೆ ಕಳೆ ನಾಶಕ ಸಿಂಪಡಣೆ

    – ಕೊಯ್ಲಿಗೆ ಬಂದಿದ್ದ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ

    ಕೋಲಾರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು 2 ಎಕರೆ ಟೊಮೆಟೊ ತೋಟಕ್ಕೆ ಕಳೆ ನಾಶಕ ಸಿಂಪಡಣೆ ಮಾಡಿ ವಿಕೃತಿ ಮೆರೆದಿದ್ದಾರೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಫಸಲಿಗೆ ಬಂದಿದ್ದ ಟೊಮೆಟೊ ಬೆಳೆ ನಾಶವಾಗಿದೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಳೆಸಂದ್ರ ಗ್ರಾಮದ ರೈತ ಅರ್ಜುನಪ್ಪ ಎಂಬವರ ಟೊಮೆಟೊ ತೋಟಕ್ಕೆ ಕಿಡಿಗೇಡಿಗಳು ಕಳೆದ ರಾತ್ರಿ ಕಳೆ ನಾಶಕ ಸಿಂಪಡಣೆ ಮಾಡಿದ್ದಾರೆ. ಪರಿಣಾಮ 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸುಮಾರು 10 ಸಾವಿರ ಟೊಮೆಟೊ ಸಸಿಗಳು ಫಸಲಿನ ಸಮೇತ ಒಣಗಲಾರಂಭಿಸಿವೆ.

    ಟೊಮೆಟೊ ಬೆಲೆ ಗಗನಕ್ಕೇರಿರುವ ಹಿನ್ನೆಲೆ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಕಳೆ ನಾಶಕ ಸಿಂಪಡಣೆ ಮಾಡಿದ್ದಾರೆ ಎಂಬುದು ರೈತರ ಆರೋಪ. ಇನ್ನೇನೂ ಕೊಯ್ಲಿಗೆ ಬಂದಿದ್ದ ಲಕ್ಷಾಂತರ ರೂಪಾಯಿಯ ಫಸಲು ನಾಶವಾಗಿದ್ದು, ರೈತ ಕಂಗಾಲಾಗಿದ್ದಾನೆ. ಈಗಾಗಲೇ 15 ಕೆ.ಜಿ ಟೊಮೆಟೊ ಬಾಕ್ಸ್ 700 ರಿಂದ 800 ರೂಪಾಯಿಗೆ ತಲುಪಿದ್ದು, ಲಕ್ಷಾಂತರ ರೂಪಾಯಿಯ ನಿರೀಕ್ಷೆಯಲ್ಲಿದ್ದ ರೈತನಿಗೆ ಆಘಾತವಾಗಿದೆ.

    ವಿಚಾರ ತಿಳಿದು ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆರವಿಗಾಗಿ ರೈತರು ಇಲಾಖೆ ಮೊರೆ ಹೋಗಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • 22.5 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ

    22.5 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ

    ಕಾರವಾರ: ಚುನಾವಣೆ ಬಳಿಕ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕು ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾದ ಲಕ್ಷಾಂತರ ಮೌಲ್ಯದ ಅಕ್ರಮ ಮದ್ಯವನ್ನ ಅಬಕಾರಿ ಇಲಾಖೆ ವತಿಯಿಂದ ಇಂದು ನಾಶಪಡಿಸಲಾಯಿತು.

    ಅಬಕಾರಿ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಒಟ್ಟು 109 ಅಕ್ರಮ ಮದ್ಯ ಸಾಗಾಟ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಒಟ್ಟು 22,50,866 ಲಕ್ಷ ರೂ. ಮೌಲ್ಯದ ಗೋವಾ ಫೆನ್ನಿ, ಕರ್ನಾಟಕ ಹಾಗೂ ಇತರೇ ರಾಜ್ಯಗಳ ಮದ್ಯ ಸೇರಿ ಸುಮಾರು 8,654 ಲೀಟರ್ ಅಕ್ರಮ ಮದ್ಯವನ್ನ ವಶಪಡಿಸಿಕೊಳ್ಳಲಾಗಿತ್ತು. ಈ ಮದ್ಯವನ್ನು ಇಂದು ಅಬಕಾರಿ ಇಲಾಖೆ ಸಿಬ್ಬಂದಿ ನಾಶ ಮಾಡಿದ್ದಾರೆ.

    ವಶಪಡಿಸಿಕೊಳ್ಳಲಾಗಿದ್ದ ಅಕ್ರಮ ಗೋವಾ ಮದ್ಯವನ್ನ ಇಲಾಖೆ ಸಂಗ್ರಹಿಸಿ ಇಟ್ಟಿತ್ತು. ಇಂದು ಅಬಕಾರಿ ಉಪ ಆಯುಕ್ತರ ಕಚೇರಿ ಹಿಂಬದಿಯಲ್ಲಿಯೇ ಇಲಾಖೆಯ ಉಪ ಆಯುಕ್ತ ಎಲ್.ಮಂಜುನಾಥ್ ಹಾಗೂ ಸಿಬ್ಬಂದಿ ಸೇರಿ ಮದ್ಯವನ್ನು ಚೆಲ್ಲಿ ನಾಶಗೊಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಉಪಆಯುಕ್ತ ಎಲ್.ಮಂಜುನಾಥ್, ಚುನಾವಣೆ ನಂತರ ವಶಪಡಿಸಿಕೊಂಡಿದ್ದ ಮದ್ಯವನ್ನು ಇಂದು ನಾಶ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಸೇರಿಕೊಂಡು ಚುನಾವಣೆ ನಂತರ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಭಾರೀ ಪ್ರಮಾಣ ಮದ್ಯವನ್ನು ವಶಪಡಿಸಿಕೊಂಡಿತ್ತು. ದಾಖಲಾದ 109 ಮೊಕದ್ದಮೆಗಳಲ್ಲಿ ಸುಮಾರು 26 ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ನಮ್ಮ ವಶಕ್ಕೆ ನೀಡಿದ್ದಾರೆ. ಉಳಿದ 83 ಪ್ರಕರಣಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

  • ರಾತ್ರೋರಾತ್ರಿ ಕಿಡಿಗೇಡಿಗಳಿಂದ 500ಕ್ಕೂ ಹೆಚ್ಚು ಅಡಿಕೆ ಗಿಡಗಳು ನಾಶ

    ರಾತ್ರೋರಾತ್ರಿ ಕಿಡಿಗೇಡಿಗಳಿಂದ 500ಕ್ಕೂ ಹೆಚ್ಚು ಅಡಿಕೆ ಗಿಡಗಳು ನಾಶ

    ದಾವಣಗೆರೆ: ರಾತ್ರೋರಾತ್ರಿ ಕಿಡಿಗೇಡಿಗಳು 500ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನಾಶ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮರುಳಸಿದ್ದಪ್ಪ ಎಂಬವರಿಗೆ ಸೇರಿದ ಅಡಿಕೆ ಮರಗಳಾಗಿದ್ದು, ಭಾನುವಾರ ಮರುಳ ಸಿದ್ದಪ್ಪ ಸಂಬಂಧಿಕರ ಮದುವೆಗೆಂದು ಹೋಗಿದ್ದರು. ಮದುವೆ ಮುಗಿಸಿ ಇಂದು ಬೆಳಗ್ಗೆ ಬಂದು ಅಡಿಕೆ ಮರಗಳನ್ನು ನೋಡಿ ಆಕಾಶವೇ ಕಳಚಿ ಬಿದ್ದಂತಾಗಿದೆ.

    ಕಳೆದ ನಾಲ್ಕೈದು ವರ್ಷಗಳಿಂದ ಕಷ್ಟ ಪಟ್ಟು ಸಾಕಿದ್ದ ಅಡಿಕೆ ಮರಗಳು ನೆಲಸಮವಾಗಿದೆ. ವೈಯಕ್ತಿಕ ದ್ವೇಷದಿಂದ ಅಡಿಕೆ ಮರಗಳನ್ನು ಕಡಿದಿದ್ದಾರೆ. ಇಂತಹ ಕೆಲಸ ಮಾಡಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಘಟನೆ ಸಾಗರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ನಾಶವಾದ ಬೆಳೆಯ ಮೇಲೆ ಬಿದ್ದು ರೈತನ ಗೋಳಾಟ

    ನಾಶವಾದ ಬೆಳೆಯ ಮೇಲೆ ಬಿದ್ದು ರೈತನ ಗೋಳಾಟ

    ಮಂಡ್ಯ: ಜಿಲ್ಲೆಯಲ್ಲಿ ಆನೆಗಳ ದಾಳಿ ಮುಂದುವರಿದಿದ್ದು, ರೈತನೊಬ್ಬನ ಬಾಳೆ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಇದರಿಂದ ರೈತ ನಾಶವಾದ ಬೆಳೆಯ ಮೇಲೆ ಬಿದ್ದು ಒದ್ದಾಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಂಚನಹಳ್ಳಿ ಗ್ರಾಮದ ನಿವಾಸಿ ರಾಜು ಎಂಬವರ ಬಾಳೆ ಬೆಳೆ ನಾಶವಾಗಿದೆ. ಈ ಘಟನೆ ಬುಧವಾರ ರಾತ್ರಿ ನಡೆದಿದ್ದು, ರೈತ ರಾಜು ಸುಮಾರು ಒಂದುವರೆ ಎಕರೆಯಲ್ಲಿ ಬಾಳೆಯನ್ನು ಬೆಳೆದಿದ್ದರು. ಬಾಳೆ ಹಾಕಿ ಸುಮಾರು 10 ತಿಂಗಳಾಗಿದ್ದು, ಇನ್ನೂ ಎರಡು ತಿಂಗಳಿನಲ್ಲಿ ಬಾಳೆಯನ್ನು ಕಟಾವ್ ಮಾಡಬೇಕಿತ್ತು.

    ಬುಧವಾರ ರಾತ್ರಿ ಏಕಾಏಕಿ ಆನೆಗಳ ದಂಡು ಬಾಳೆ ತೋಟಕ್ಕೆ ನುಗ್ಗಿ ಎಲ್ಲವನ್ನು ನಾಶ ಮಾಡಿವೆ. ಸುಮಾರು 3 ಲಕ್ಷ ರೂ. ಬೆಳೆ ನಾಶವಾಗಿದೆ. ಮುಂಜಾನೆ ರಾಜು ಎಂದಿನಂತೆ ತೋಟಕ್ಕೆ ಬಂದಾಗ ಬಾಳೆ ನಾಶವಾಗಿರುವುದನ್ನು ನೋಡಿ ಆಘಾತವಾಗಿ ನಾಶವಾಗಿದ್ದ ಬಾಳೆ ಬೆಳೆಯ ಮೇಲೆ ಬಿದ್ದು, ಗೋಳಾಡಿದ್ದಾರೆ. ಮಕ್ಕಳು ರೀತಿ ಚೆನ್ನಾಗಿ ಪೋಷಣೆ ಮಾಡಿದ್ದೆ. ಈ ಆನೆಗಳ ದಾಳಿಯಿಂದ ಎಲ್ಲ ನಾಶವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

    ಆನೆಗಳ ದಾಳಿಯಿಂದ ರೈತರು ಕಂಗಾಲಾಗಿದ್ದು, ತಾಲೂಕು ಆಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಸತ್ತಂತಿರುವ ಅರಣ್ಯ ಇಲಾಖೆಯಿಂದ ಈ ರೀತಿ ಆಗಿದೆ. ಹೀಗಾಗಿ ಸೂಕ್ತ ಪರಿಹಾರ ನೀಡಬೇಕೆಂದು ರೈತ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೊಂದು ಬೆಂಕಿ ದುರಂತ

    ಮತ್ತೊಂದು ಬೆಂಕಿ ದುರಂತ

    ಚಿಕ್ಕಮಗಳೂರು: ಕಳೆದ ಆರು ದಿನಗಳಿಂದ ಬಂಡಿಪುರ ಅರಣ್ಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಸಾವಿರಾರು ಎಕರೆ ಅರಣ್ಯ ನಾಶವಾಗಿದೆ. ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಬೆಂಕಿ ದುರಂತ ನಡೆದಿದೆ.

    ತಡರಾತ್ರಿ ಕೊಪ್ಪ ತಾಲೂಕಿನ ಗುಂಡಿಕ್ಕಿ ಅರಣ್ಯ ಹೊತ್ತಿ ಉರಿದಿದ್ದು, ಸುಟ್ಟು ಕರಕಲಾಗಿದೆ. ನೂರಾರು ಎಕರೆ ಸಸ್ಯ ಸಂಪತ್ತು ಬೆಂಕಿಗಾಹುತಿಯಾಗಿದ್ದು, ಗಾಳಿ ಹೆಚ್ಚಾದಂತೆ ಬೆಂಕಿಯ ತೀವ್ರತೆಯು ಹೆಚ್ಚಾದ ಕಾರಣ ಬೆಂಕಿ ನಂದಿಸುವ ಕಾರ್ಯಾಚರಣೆಗೆ ತೊಡಕಾಗಿದೆ. ಸೋಮವಾರ ಮಧ್ಯಾಹ್ನ ಗುಂಡಿಕ್ಕಿ ಅರಣ್ಯಕ್ಕೆ ಬೆಂಕಿ ಬಿದ್ದಿತ್ತು. ಇದನ್ನೂ ಓದಿ: ಬಂಡೀಪುರ ಬೆಂಕಿ ನಂದಿಸುವ ಕಾರ್ಯ ಶುರು – ಕರಡಿಹಳ್ಳಿ, ಚಮ್ಮನಹಳ್ಳಿಯಲ್ಲಿದೆ ಕಾಪ್ಟರ್

    ಅಗ್ನಿಶಾಮಕ ವಾಹನಗಳು ನಿಂತಲ್ಲೇ ನಿಂತಿವೆ. ಅರಣ್ಯ ಹೊತ್ತಿ ಉರಿಯುತ್ತಿರುವ ಘಟನೆಯಿಂದ ಹೇರೂರು ಮತ್ತು ಗುಂಡಿಕ್ಕಿ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಇತ್ತ ಗೋಪಾಲಸ್ವಾಮಿ ಬೆಟ್ಟದ ಚಿಮ್ಮನಹಳ್ಳ ಬಳಿ ಸೇನಾ ಹೆಲಿಕಾಪ್ಟರ್ ನಿಂದ ಕಾರ್ಯಚರಣೆ ಆರಂಭವಾಗಿದೆ.

    ಹೆಲಿಕಾಪ್ಟರ್ ಮದ್ದೂರು ಕೆರೆಯಿಂದ ನೀರು ತುಂಬಿಸಿಕೊಂಡು ಬಂದು ಅರಣ್ಯದಲ್ಲಿ ಬೆಂಕಿ ಕಂಡ ಸ್ಥಳದಲ್ಲಿ ಮೇಲಿನಿಂದ ನೀರನ್ನು ಹಾಕುತ್ತಿದೆ. ಎರಡು ಇಂಡಿಯನ್ ಏರ್ ಪೋರ್ಸ್ ಹೆಲಿಕಾಪ್ಟರ್ ನಿಂದ ಬೆಂಕಿ ನಂದಿಸುವ ಕಾರ್ಯಚರಣೆ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಂಪಿಯಲ್ಲಿ ಸ್ಮಾರಕ ಧ್ವಂಸ – ವಿಜಯನಗರ, ಮೈಸೂರು ಮಹಾರಾಜರಿಂದ ಪ್ರತಿಭಟನೆ

    ಹಂಪಿಯಲ್ಲಿ ಸ್ಮಾರಕ ಧ್ವಂಸ – ವಿಜಯನಗರ, ಮೈಸೂರು ಮಹಾರಾಜರಿಂದ ಪ್ರತಿಭಟನೆ

    ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಹಂಪಿಯಲ್ಲಿಂದು ವಿಜಯನಗರ ಹಾಗೂ ಮೈಸೂರು ಮಹಾರಾಜರು ಪ್ರತಿಭಟನೆ ನಡೆಸಿದ್ದಾರೆ.

    ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಮೈಸೂರಿನ ಯುವರಾಜ ಯದುವೀರ್ ಹಾಗೂ ವಿಜಯನಗರದ ಕೃಷ್ಣದೇವರಾಜರು ಪ್ರತಿಭಟನೆಯಲ್ಲಿ ಭಾಗವಹಿಸಿ ಸ್ಮಾರಕ ಧ್ವಂಸಗೊಳಿಸಿರುವುದನ್ನು ಖಂಡಿಸಿದ್ದಾರೆ. ಕಮಲಾಪುರದ ಪುರಾತತ್ವ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮಹಾರಾಜರು ಹಾಗೂ ನೂರಾರು ಸ್ಥಳೀಯರು, ಹಂಪಿಯಲ್ಲಿ ಸ್ಮಾರಕಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

    ಈ ವೇಳೆ ಮಾತನಾಡಿದ ಮೈಸೂರಿನ ಯುವರಾಜ ಯದುವೀರ್ ಅವರು ಹಂಪಿಯನ್ನು ಉಳಿಸುವ ಕೆಲಸವನ್ನು ನಾವೆಲ್ಲ ಮಾಡಬೇಕಾಗಿದೆ. ಪುರಾತತ್ವ ಇಲಾಖೆ ಈ ಬಗ್ಗೆ ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕು, ನಮ್ಮ ಮೈಸೂರಿನಲ್ಲಿಯೂ ಸ್ಮಾರಕಗಳಿಗೆ ಧಕ್ಕೆಯಾಗುತ್ತಿವೆ. ಸ್ಮಾರಕಗಳನ್ನು ಉಳಿಸಲು ಜನರ ಸಹಭಾಗಿತ್ವ ಪ್ರಮುಖವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕಿಡಿಗೇಡಿಗಳ ಅಟ್ಟಹಾಸ – ಹಂಪಿಯ ಐತಿಹಾಸಿಕ ಸ್ಮಾರಕಗಳನ್ನ ಕೆಡವಿದ ವಿಡಿಯೋ ವೈರಲ್..!

    ಯದುವೀರ್ ಅವರು ಭಾನುವಾರ ಐತಿಹಾಸಿಕ ಹಂಪಿಗೆ ಭೇಟಿ ನೀಡಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದರು. ಕಮಲಾಪುರ ಹಾಗೂ ತಳವಾರಘಟ್ಟ ರಸ್ತೆ ಮೂಲಕ ಆಗಮಿಸಿದ ಯದುವೀರ್ ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ವಿಠಲ ಬಜಾರ್, ಪುಷ್ಕರಣಿ, ಪ್ರಸಿದ್ಧ ವಿಜಯವಿಠಲ ದೇವಸ್ಥಾನದಲ್ಲಿ ಕಲ್ಲಿನ ರಥ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಒಡೆಯರ್ ನೋಡಿ ಪ್ರವಾಸಿಗರು ಅವರ ಜೊತೆ ಫೋಟೋ, ಸೆಲ್ಫಿ ತಗೆದುಕೊಂಡಿದ್ದಾರೆ. ಇದನ್ನೂ ಓದಿ: ಕಿಡಿಗೇಡಿಗಳಿಂದ ಸ್ಮಾರಕ ಧ್ವಂಸ – ಎಸ್‍ಪಿಯಿಂದ ಸ್ಥಳ ಪರಿಶೀಲನೆ

    ಇದಾದ ಬಳಿಕ ಯದುವೀರ್ ಅವರು ಸಂಗೀತ ಮಂಟಪಕ್ಕೆ ತೆರಳಿ, ಸಪ್ತಸ್ವರ ಕಂಬಗಳಿಂದ ನಾದ ಆಲಿಸಿ ಖುಷಿಪಟ್ಟರು. ನಂತರ ತುಂಗಭದ್ರಾ ನದಿ ತೀರದಲ್ಲಿರುವ ಪುರಂದರ ಮಂಟಪ ವೀಕ್ಷಣೆ ಮಾಡಿದ್ದಾರೆ. ಯದುವೀರ್ ಅವರ ಜೊತೆ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಸಿ.ಎಸ್.ವಾಸುದೇವನ್ ಮತ್ತಿತರರು ಇದ್ದರು. ಯದುವೀರ್ ಅವರು ಹಂಪಿಗೆ ಆಗಾಗ ಭೇಟಿ ನೀಡುತ್ತಾರೆ. ಈ ಬಾರಿಯೂ ಹಂಪಿ ಪ್ರಸಿದ್ಧ ಸ್ಮಾರಕ ಸೇರಿದಂತೆ ಪ್ರಕೃತಿ ಸೊಬಗನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv