Tag: Deputy Commissioner

  • ಗಾಳಿ ಸಹಿತ ಭಾರೀ ಮಳೆ- ಧರೆಗುರುಳಿತು ಕೊಡಗಿನ ಡಿಸಿ ಮನೆ ಮುಂದಿದ್ದ ಮರಗಳು!

    ಗಾಳಿ ಸಹಿತ ಭಾರೀ ಮಳೆ- ಧರೆಗುರುಳಿತು ಕೊಡಗಿನ ಡಿಸಿ ಮನೆ ಮುಂದಿದ್ದ ಮರಗಳು!

    ಮಡಿಕೇರಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದು, ಮಳೆಯ ಅವಾಂತರದ ಬಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಬಂಗಲೆಗೂ ತಟ್ಟಿದೆ.

    ಶನಿವಾರ ಗಾಳಿ ಸಹಿತ ಸುರಿದ ಭಾರೀ ಮಳೆಯಿಂದಾಗಿ ಡಿಸಿ ಬಂಗಲೆಯ ಮುಂದಿದ್ದ ನಾಲ್ಕು ಮರಗಳು ಉರುಳಿ ಬಿದ್ದಿವೆ. ಡಿಸಿ ಮನೆಯ ಕಾವಲು ಸಿಬ್ಬಂದಿಯ ಮನೆ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

    ಮಾಹಿತಿ ದೊರೆತ ಬಳಿಕ ಇಂದು ಬೆಳಗ್ಗೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಮರ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

  • ಸ್ಟ್ರಾಂಗ್ ರೂಂನಲ್ಲಿರಬೇಕಿದ್ದ ವಿವಿಪ್ಯಾಟ್ ಬಾಕ್ಸ್ ಗಳು ರಸ್ತೆಬದಿಯ ಶೆಡ್‍ನಲ್ಲಿ ಪತ್ತೆ – ಚುನಾವಣಾ ಅಕ್ರಮ ಶಂಕೆ!

    ಸ್ಟ್ರಾಂಗ್ ರೂಂನಲ್ಲಿರಬೇಕಿದ್ದ ವಿವಿಪ್ಯಾಟ್ ಬಾಕ್ಸ್ ಗಳು ರಸ್ತೆಬದಿಯ ಶೆಡ್‍ನಲ್ಲಿ ಪತ್ತೆ – ಚುನಾವಣಾ ಅಕ್ರಮ ಶಂಕೆ!

    ವಿಜಯಪುರ: ಚುನಾವಣೆಯಲ್ಲಿ ಬಳಕೆ ಮಾಡಿದ್ದಾರೆ ಎನ್ನಲಾಗಿದ್ದ ವಿವಿ ಪ್ಯಾಟ್ ದೃಡೀಕರಣ ಬಾಕ್ಸ್ ಗಳು ಹೆದ್ದಾರಿ ಪಕ್ಕದ ಶೆಡ್‍ನಲ್ಲಿ ಪತ್ತೆಯಾಗಿದ್ದು, ಚುನಾವಣೆಯ ಅಕ್ರಮ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಬಳಿ ರಸ್ತೆ ಕಾಮಗಾರಿ ನಡೆಸುವ ಕಾರ್ಮಿಕರು ವಾಸಿಸುವ ಶೆಡ್ ನಲ್ಲಿ ವಿವಿ ಪ್ಯಾಟ್ ಖಾಲಿ ಬಾಕ್ಸ್ ಗಳು ಪತ್ತೆಯಾಗಿವೆ. ಇದರಲ್ಲಿ ಕಾರ್ಮಿಕರು ಆಹಾರ ಪದಾರ್ಥ, ಬಟ್ಟೆಗಳನ್ನು ಸಂಗ್ರಹಿಸಿದ್ದಾರೆ.

    ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಇವುಗಳನ್ನು ಪತ್ತೆ ಮಾಡಿದ್ದು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿದ್ದಾರೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

    ಚುನಾವಣೆಯ ಬಳಿಕ 45 ದಿನಗಳವರೆಗೂ ವಿವಿ ಪ್ಯಾಟ್ ಬಾಕ್ಸ್ ಗಳನ್ನು ಸ್ಟ್ರಾಂಗ್ ರೂಂ ನಲ್ಲಿ ರಕ್ಷಿಸಬೇಕು ಎಂಬ ನಿಯಮವಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು ಶೆಡ್ ನಲ್ಲಿ ಪತ್ತೆಯಾಗಿರುವ ಬಾಕ್ಸ್ ಗಳು ಚುನಾವಣೆಗೂ ಮುನ್ನ ಶಿಕ್ಷಕರಿಗೆ ತರಬೇತಿ ನೀಡುವ ವೇಳೆ ಬಳಕೆ ಮಾಡಿದ್ದ ಬಾಕ್ಸ್ ಎಂದು ಸ್ಪಷ್ಟನೆ ನೀಡಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

    ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಶಿವಾನಂದ್ ಪಾಟೀಲ್ ಅವರು ಜಯಗಳಿಸಿದ್ದರು. ಅಲ್ಲದೇ ಕಾರ್ಮಿಕರು ನಿರ್ಮಿಸಿರುವ ಶೆಡ್ ಗಳು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಸೇರಿದೆ ಎನ್ನಲಾಗಿದ್ದು, ಇದರಿಂದ ಜೆಡಿಎಸ್ ಕಾರ್ಯಕರ್ತರು ಅಕ್ರಮದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

  • ಸಚಿವ ಎ.ಮಂಜು ವಿರುದ್ಧ ಡಿಸಿ ರೋಹಿಣಿ ಸೆಡ್ಡು – ಹಾಸನದ ಮಂತ್ರಿಗಳ ಕಚೇರಿಗೆ ಬೀಗ

    ಸಚಿವ ಎ.ಮಂಜು ವಿರುದ್ಧ ಡಿಸಿ ರೋಹಿಣಿ ಸೆಡ್ಡು – ಹಾಸನದ ಮಂತ್ರಿಗಳ ಕಚೇರಿಗೆ ಬೀಗ

    ಹಾಸನ: ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಯಲ್ಲಿ ಇದ್ದರು, ಹಾಸನ ಮಂತ್ರಿಗಳ ಕಚೇರಿಯ ಮುಂಬಾಗಿಲಿಗೆ ಬೀಗ ಹಾಕಿ ಒಳಗೆ ಸಿಬ್ಬಂದಿ  ಕಾರ್ಯನಿರ್ವಹಿಸುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ರೋಹಿಣಿ ಅವರು ಸಚಿವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

    ಸಚಿವ ಎ.ಮಂಜು ಕಚೇರಿಯಲ್ಲಿ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ಕುರಿತು ಮಾಹಿತಿ ಪಡೆದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದ್ದರು, ಆದರೆ ಈ ವೇಳೆ ಎಷ್ಟೇ ಪ್ರಯತ್ನ ಮಾಡಿದರು ಸಿಬ್ಬಂದಿ ಕಚೇರಿ ಬಾಗಿಲು ತೆರೆಯದ ಕಾರಣ ಜಿಲ್ಲಾಧಿಕಾರಿಗಳು ಕಚೇರಿಯನ್ನು ವಶಕ್ಕೆ ಪಡೆಯಲು ಆದೇಶ ನೀಡಿದ್ದಾರೆ.

    ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಡಿಸಿ ಕಚೇರಿ ಸಿಬ್ಬಂದಿ ಮತ್ತೊಂದು ಬೀಗ ಜಡಿದಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರು ಕಚೇರಿಯಲ್ಲಿ ಮೂವರು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಅವರನ್ನು ಪರಿಶೀಲನೆ ನಡೆಸಿದ ಬಳಿಕ ಹೊರಕಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ನೀತಿ ಸಂಹಿತೆ ಜಾರಿ ಬಳಿಕ ಸರ್ಕಾರಿ ಕಟ್ಟಡ ದುರ್ಬಳಕೆ ಆರೋಪ ಇದಾಗಿದ್ದು, ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ಚುನಾಣಾಧಿಕಾರಿಯಿಂದ ನೋಟಿಸ್ ಜಾರಿಯಾಗಿದೆ. ಚುನಾವಣಾ ಸಿಬ್ಬಂದಿ ಸ್ಥಳಪರಿಶಿಲನೆ ವೇಳೆ ಹೊರಗಿನಿಂದ ಬೀಗಹಾಕಿ ಒಳಗೆ ಕೆಲಸಮಾಡಲಾಗುತ್ತಿತ್ತು ಎಂಬ ಬಗ್ಗೆ ಉಲ್ಲೇಖಿಸಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ನೀತಿ ಸಂಹಿತೆ ಜಾರಿಯಾದ ಬಳಿಕವೂ ಸರ್ಕಾರಿ ಕಟ್ಟಡವನ್ನ ರಾಜಕೀಯ ವ್ಯಕ್ತಿಗಳಿಗೆ ಬಿಟ್ಟು ಕೊಟ್ಟ ಕುರಿತು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಏಪ್ರಿಲ್ 2 ರೊಳಗೆ ಉತ್ತರ ನೀಡಲು ಸೂಚನೆ ನೀಡಲಾಗಿದೆ.

     

  • ಸೋಶಿಯಲ್ ಮೀಡಿಯಾಗಳ ಮೇಲೆ ಜಿಲ್ಲಾಧಿಕಾರಿಗಳು ಕಣ್ಣಿಟ್ಟಿದ್ದಾರೆ ಜೋಕೆ!

    ಸೋಶಿಯಲ್ ಮೀಡಿಯಾಗಳ ಮೇಲೆ ಜಿಲ್ಲಾಧಿಕಾರಿಗಳು ಕಣ್ಣಿಟ್ಟಿದ್ದಾರೆ ಜೋಕೆ!

    ಉಡುಪಿ: 2018 ರ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದಂತೆ ಚುನಾವಣಾ ಆಯೋಗ ನಿಯಮಗಳನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಲು ಆರಂಭಿಸಿದೆ. ಇದರ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪ್ರಚಾರ ಮಾಡಿದ್ರೂ ಆಯಾಯ ಜಿಲ್ಲಾಧಿಕಾರಿಗಳು ಕಣ್ಣಿಟ್ಟಿದ್ದಾರೆ.

    ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಅವರು, ಸಾಮಾಜಿಕ ಜಾಲತಾಣದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಕ್ಕೆ ಕಡಿವಾಣ ಹಾಕಲು ವಿಶೇಷ ನಿಗಾ ತಂಡ ರಚನೆ ಮಾಡಲಾಗುವುದು. ಅಲ್ಲದೇ ಯಾವುದೇ ಅಭ್ಯರ್ಥಿ ಪರ ವಿರುದ್ಧ ಹೆಚ್ಚು ಪ್ರಚಾರ ಮಾಡಿದರೆ ಅದನ್ನೂ ಅಭ್ಯರ್ಥಿ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.

    ಇದೆ ವೇಳೆ ಕೋಮು ಭಾವನೆ ಪ್ರಚೋದಿಸುವ ಚಟುವಟಿಕೆ ಮೇಲೂ ನಿಗಾ ಇಡಲಿದ್ದು, ಪ್ರಚಾರ ತಾರಕಕ್ಕೆ ಏರಿ ಕೋಮು ಭಾವನೆಗಳು ಕೆಡದಂತೆ ಎಲ್ಲಾ ಪಕ್ಷ ಮತ್ತು ಅಭ್ಯರ್ಥಿಗಳು ಎಚ್ಚರಿಸಬೇಕು ಎಂದು ಹೇಳಿದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಬೂತ್ ರಚನೆ ಮಾಡಿ ಮಹಿಳಾ ಸಿಬ್ಬಂದಿಗಳನ್ನು ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು.

  • ರೋಹಿಣಿ ಸಿಂಧೂರಿ ವರ್ಗಾವಣೆಗೆ ಚುನಾವಣಾ ಆಯೋಗ ಬ್ರೇಕ್

    ರೋಹಿಣಿ ಸಿಂಧೂರಿ ವರ್ಗಾವಣೆಗೆ ಚುನಾವಣಾ ಆಯೋಗ ಬ್ರೇಕ್

    ಬೆಂಗಳೂರು: ರಾಜ್ಯ ಸರ್ಕಾರ ಸೋಮವಾರ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ 7 ಮಂದಿ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿ ಹೊರಡಿಸಿದ್ದ ಆದೇಶಕ್ಕೆ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ.

    ಚುನಾವಣಾ ಪ್ರಕ್ರಿಯೆ ಮುಗಿಯುವರೆಗೂ ಯಾವುದೇ ಅಧಿಕಾರಿಗಳನ್ನು ವರ್ಗಾಯಿಸುವಂತಿಲ್ಲ ಎಂದು ಜನವರಿ 17 ರಂದು ರಾಜ್ಯಸರ್ಕಾರಕ್ಕೆ ಚುನಾವಣಾ ಆಯೋಗ ಪತ್ರ ಬರೆದಿತ್ತು. ಅದರೆ ಸರ್ಕಾರ ಸೋಮವಾರ 7 ಜಿಲ್ಲೆಗಳ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಆದೇಶಿದೆ. ಈ ಸಂಬಂಧ ಮಂಗಳವಾರ ವರ್ಗಾವಣೆ ಆದೇಶ ಹೊರಡಿಸಿದ್ದು ಯಾಕೆ ಎಂದು ಪ್ರಶ್ನಿಸಿ ವಿವರಣೆ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ. ಇದನ್ನೂ ಓದಿ: ರಾಜಕೀಯದಿಂದ ದೂರ ಉಳಿದು ಉತ್ತಮ ಆಡಳಿತ ನೀಡುವುದಷ್ಟೇ ನನ್ನ ಗುರಿ: ಹಾಸನ ಡಿಸಿ ರೋಹಿಣಿ ಸಿಂಧೂರಿ

    ಆಯೋಗದ ಪತ್ರದಲ್ಲಿ ಏನಿದೆ?
    ಫೆಬ್ರವರಿ 28ಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಮತದಾರ ಪಟ್ಟಿ ಪರಿಷ್ಕರಣೆ ಮುಗಿಯುವವರೆಗೆ ವರ್ಗಾವಣೆ ಬೇಡ. ವರ್ಗಾವಣೆ ಆದೇಶ ಜಾರಿಯನ್ನು ಕೂಡಲೇ ನಿಲ್ಲಿಸಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವವರನ್ನ ಅದೇ ಸ್ಥಾನದಲ್ಲಿ ಮುಂದುವರಿಸಬೇಕು. ವರ್ಗಾವಣೆ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರಬೇಕು. ವರ್ಗಾಯಿತ ಜಿಲ್ಲೆಗಳಿಗೆ ತೆರಳದಂತೆ 7 ಜಿಲ್ಲಾಧಿಕಾರಿಗಳಿಗೂ ಆಯೋಗ ಸೂಚನೆ ನೀಡಿದೆ. ಇದನ್ನೂ ಓದಿ: ಹಣ ಹೊಡೆಯಲು ಬಿಟ್ಟಿಲ್ಲ ಅಂತ ಹೆಣ್ಮಗಳ ವರ್ಗ, ಸಿಎಂ ಜೊತೆ ವೇದಿಕೆ ಏರಲ್ಲ- ಸರ್ಕಾರಕ್ಕೆ ಥೂ ಎಂದು ಉಗಿದ ಹೆಚ್‍ಡಿಡಿ

     

  • ಕೈ ನಾಯಕರ ದೂರಿನ ಬೆನ್ನಲ್ಲೇ ಹಾಸನ ಡಿಸಿ ರೋಹಿಣಿ ಸಿಂಧೂರಿ ಎತ್ತಂಗಡಿ

    ಕೈ ನಾಯಕರ ದೂರಿನ ಬೆನ್ನಲ್ಲೇ ಹಾಸನ ಡಿಸಿ ರೋಹಿಣಿ ಸಿಂಧೂರಿ ಎತ್ತಂಗಡಿ

    ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಎತ್ತಂಗಡಿ ಮಾಡಲಾಗಿದೆ.

    ರೋಹಿಣಿ ಸಿಂಧೂರಿ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ(ಕೆಎಸ್‍ಐಐಡಿಸಿ) ಆಡಳಿತ ನಿರ್ದೇಶಕಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ರೋಹಿಣಿ ಅವರ ಜಾಗಕ್ಕೆ ಹಾವೇರಿ ಜಿಲ್ಲಾಧಿಕಾರಿಯಾಗಿದ್ದ ಎಂ.ವಿ. ವೆಂಕಟೇಶ್ ಅವರನ್ನು ನೇಮಿಸಲಾಗಿದೆ.

    ಕೈ ನಾಯಕರಿಂದ ದೂರು:
    ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹಾಸನ ಭೇಟಿ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್‍ನ ಕೆಲ ನಾಯಕರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ಆಗ್ರಹಿಸಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಜನವರಿ 4ರಂದು ಹಾಸನದ ಮೂರು ಕಡೆ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ ಸಿಎಂ ಅಂದು ರಾತ್ರಿ ನಗರದ ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಸಿಎಂ ರನ್ನು ಭೇಟಿ ಮಾಡಿದ ಹಲವು ನಾಯಕರು, ಜಿಲ್ಲಾಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದರು. ಜೊತೆಗೆ ಉಸ್ತುವಾರಿ ಸಚಿವರಾದ ಎ. ಮಂಜು, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಸೇರಿದಂತೆ ಹಲವು ನಾಯಕರು ರೋಹಿಣಿ ಅವರ ವರ್ಗಾವಣೆಗೆ ಆಗ್ರಹಿಸಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು.

    ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕರು, ನಾವು ವರ್ಗಾವಣೆಗೆ ಆಗ್ರಹಿಸಿಲ್ಲ. ಬದಲಾಗಿ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅದನ್ನು ಸರಿಮಾಡುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿರುವುದು ನಿಜ ಎಂದು ಹೇಳಿದ್ದರು. ಡಿಸಿ ಪರ ಬ್ಯಾಟಿಂಗ್ ಮಾಡಿದ್ದ ಜಿಲ್ಲೆಯ ಜೆಡಿಎಸ್ ನಾಯಕರು, ಮಸ್ತಕಾಭಿಷೇಕ ಕಾಮಗಾರಿಗಳಲ್ಲಿ ಹಣ ಗುಳುಂ ಮಾಡಲು ಅವಕಾಶ ನೀಡುತ್ತಿಲ್ಲ. ಅದಕ್ಕಾಗಿ ರೋಹಿಣಿ ಅವರ ವರ್ಗಾವಣೆಗೆ ಆಗ್ರಹಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರ್ಯಕ್ಕೆ ಸಿಎಂ ಅಭಿನಂದನೆ

    ಯಾರು ರೋಹಿಣಿ ಸಿಂಧೂರಿ?:
    ಈ ಹಿಂದೆ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಎಂ-ಆಸ್ತಿ ಅಪ್ಲಿಕೇಷನ್ ತಂದಿದ್ದರು. ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಪಣ ತೊಟ್ಟಿದ್ದ ರೋಹಿಣಿ ಸಿಂಧೂರಿ ಅವರು ಹಳ್ಳಿ ಹಳ್ಳಿಗೆ ಹೋಗಿ, ಬಯಲು ಶೌಚಕ್ಕೆ ಹೋಗುವವರಿಗೆ ಶೌಚಾಲಯ ಬಳಸುವಂತೆ ತಿಳುವಳಿಕೆ ಹೇಳುವ ಮೂಲಕ ವಿಶೇಷ ಅಭಿಯಾನ ಮಾಡುತ್ತಿದ್ದರು.

    ನಿರ್ಮಲ್ ಭಾರತ್ ಯೋಜನೆಯಡಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಶೌಚಾಲಯ ನಿರ್ಮಾಣ ಗುರಿ ಸಾಧಿಸಿದ್ದ ಇವರ ಅಧಿಕಾರ ಅವಧಿಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಮಂಡ್ಯ ಜಿಲ್ಲೆ ಭಾರತದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಸಿಇಓ ಅವರ ಕಾರ್ಯ ವೈಖರಿಯನ್ನು ನೋಡಿ ಮಂಡ್ಯದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದರು.

    2015ರ ಸೆಪ್ಟೆಂಬರ್ ನಲ್ಲಿ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಿ ವರ್ಗಮಾಡಿತ್ತು. ಈಗ ಅಲ್ಲಿಂದ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಬಂದಿದ್ದರು. ಕಳೆದ 2017ರ ಜುಲೈ 14ರಿಂದ ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ಅಲ್ಪಾವಧಿಯಲ್ಲಿ ದಕ್ಷ ಆಡಳಿತಾಧಿಕಾರಿ ಎಂದು ಹೆಸರು ಪಡೆದುಕೊಂಡಿದ್ದರು. ತಮ್ಮ ಕೆಲಸದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಪ್ರಶಸ್ತಿಯನ್ನು ಪಡೆದಿದ್ದರು. ಶ್ರವಣಬೆಳಗೋಳ ಮಹಾಮಸ್ತಕಾಭಿಷೇಕ ಸೇರಿದಂತೆ ಹಾಸನದ ಹಲವು ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕ್ರಿಯಾಶೀಲರಾಗಿದ್ದರು.

    https://www.youtube.com/watch?v=RIlr3y8t7ow

    https://www.youtube.com/watch?v=c6PoH0rh1XE

    https://www.youtube.com/watch?v=I0pUTEiRfSo

  • ಶಾಸಕರ ಮುಸುಕಿನ ಗುದ್ದಾಟದಿಂದ ಅಧಿಕಾರಿಗಳಿಲ್ಲದೆ ಅನಾಥವಾದ ಚಿಕ್ಕಬಳ್ಳಾಪುರ ಜಿಲ್ಲೆ

    ಶಾಸಕರ ಮುಸುಕಿನ ಗುದ್ದಾಟದಿಂದ ಅಧಿಕಾರಿಗಳಿಲ್ಲದೆ ಅನಾಥವಾದ ಚಿಕ್ಕಬಳ್ಳಾಪುರ ಜಿಲ್ಲೆ

    ಚಿಕ್ಕಬಳ್ಳಾಪುರ: ಸಿಎಂ ಸಿದ್ಧರಾಮಯ್ಯ ಅವರ ಆಪ್ತ ಶಾಸಕರ ಮುಸುಕಿನ ಗುದ್ದಾಟದಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಅಧಿಕಾರಿಗಳಿಲ್ಲದೆ ಅನಾಥವಾಗಿದೆ.

    ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ಆಡಳಿತ ನಡೆಸಬೇಕಾದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೂ ಇಲ್ಲಿಲ್ಲ. ಸಿಇಓ ವರ್ಗಾವಣೆ ಆಗಿ 4 ತಿಂಗಳುಗಳೇ ಕಳೆದಿದೆ. ಮತ್ತೊಂದೆಡೆ ತರಬೇತಿಗೆಂದು ಹೋಗಿ ತಿಂಗಳಾದರೂ ಜಿಲ್ಲಾಧಿಕಾರಿಯ ಸುಳಿವಿಲ್ಲ. ಇದರ ಜೊತೆಗೆ ಜಿಲ್ಲೆಯ ಹಲವು ಇಲಾಖೆಗಳಲ್ಲೂ ಅಧಿಕಾರಿಗಳಿಲ್ಲದೆ ಕೆಲಸಗಳು ಬಾಕಿ ಉಳಿದಿವೆ.

    ಚಿಕ್ಕಬಳ್ಳಾಪುರ ಶಾಸಕ ಡಾ. ಕೆ.ಸುಧಾಕರ್ ಹಾಗೂ ಗೌರಿಬಿದನೂರು ಶಾಸಕ ಎನ್.ಹೆಚ್ ಶಿವಶಂಕರ ರೆಡ್ಡಿ ವೈಮನಸ್ಸಿನಿಂದಾಗಿ ಅಧಿಕಾರಿಗಳು ಇತ್ತ ಕಡೆ ತಲೆ ಹಾಕುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇವರು ಹೇಳಿದ್ದು ಮಾಡಿದರೆ ಅವರಿಗೆ ಕೋಪ. ಅವರು ಹೇಳಿದ್ದು ಮಾಡಿದರೆ ಇವರಿಗೆ ಕೋಪ. ಇಬ್ಬರ ಸಹವಾಸವೇ ಬೇಡ ಎಂದು ಅಧಿಕಾರಿಗಳು ಚಿಕ್ಕಬಳ್ಳಾಪುರದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

  • ಉಡುಪಿ ಡಿಸಿ ಕೊಲೆ ಯತ್ನ: ಇಂದು ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರಿ ನೌಕರರಿಂದ ಪ್ರತಿಭಟನೆ

    ಉಡುಪಿ ಡಿಸಿ ಕೊಲೆ ಯತ್ನ: ಇಂದು ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರಿ ನೌಕರರಿಂದ ಪ್ರತಿಭಟನೆ

    ಉಡುಪಿ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸಿ ಶಿಲ್ಪಾ ನಾಗ್, ಅಂಪಾರು ಗ್ರಾಮದ ವಿಎ ಕಾಂತರಾಜ್, ಡಿಸಿ ಗನ್ ಮ್ಯಾನ್ ಸೇರಿದಂತೆ 7 ಮಂದಿ ಮೇಲೆ ಮರಳು ದಂಧೆಕೋರರು ಕೊಲೆಗೆ ಯತ್ನ ನಡೆಸಿ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯ ಕಂದಾಯ ಇಲಾಖೆಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

    ಕೊಲೆ ಯತ್ನ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ತನಿಖೆಯಾಗಬೇಕು. ಕೂಡಲೇ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಎಸ್‍ಪಿ ಕೆ.ಟಿ.ಬಾಲಕೃಷ್ಣ ಅವರಲ್ಲಿ ಕಂದಾಯ ಸಿಬ್ಬಂದಿ ಒತ್ತಾಯಿಸಿದ್ದಾರೆ.

    ಉಡುಪಿಯ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಮೀಪದ ಪ್ರತಿಭಟನಾ ಕಟ್ಟೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಪ್ರತಿಭಟಿಸಿದ್ದಾರೆ. ಇಂದು ಕಂದಾಯ ಇಲಾಖೆಯ ಯಾವುದೇ ವಿಭಾಗಗಳಲ್ಲಿ ಸಾರ್ವಜನಿಕರ ಕೆಲಸ ಆಗುವುದಿಲ್ಲ. ಯಾವುದೇ ಫೈಲ್‍ಗಳು ಮೂವ್ ಆಗುವುದಿಲ್ಲ.

    ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ಒಂದೇ ದಿನ ತಮ್ಮ ಹಕ್ಕಿನ ರಜೆ ತೆಗೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಆರು ತಾಲೂಕಿನ ಎಲ್ಲಾ ಆಫೀಸರ್‍ಗಳು- ಕಚೇರಿಗಳ ಸಾವಿರಾರು ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಮೇಲಾಧಿಕಾರಿಗಳಿಗೆ ಬೆಂಬಲ ನೀಡಿದ್ದಾರೆ.

    ತಪ್ಪಿತಸ್ಥರೆಲ್ಲರ ಬಂಧನವಾಗಬೇಕು, ಮರಳು ಮಾಫಿಯಾದ ಹಿಂದಿರುವ ಶಕ್ತಿಗಳಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ರೂಪುರೇಷೆ ಬದಲಾಯಿಸಿ- ಉಗ್ರ ಹೋರಾಟಕ್ಕೆ ಇಳಿಯಲು ಸರ್ಕಾರಿ ನೌಕರರ ಸಂಘ ನಿರ್ಧಾರ ಮಾಡಿದೆ.