Tag: Deputy Commissioner office

  • ಬಾಲ್ಯ ವಿವಾಹ ನೋಂದಣಿ ಮಾಡಿಕೊಂಡ ಉಪನೋಂದಣಾಧಿಕಾರಿ!

    ಬಾಲ್ಯ ವಿವಾಹ ನೋಂದಣಿ ಮಾಡಿಕೊಂಡ ಉಪನೋಂದಣಾಧಿಕಾರಿ!

    ಬಳ್ಳಾರಿ: ಬಾಲ್ಯ ವಿವಾಹ ಅಪರಾಧ ಎನ್ನುವುದು ಸಾಮಾನ್ಯ ಜನರಿಗೂ ಗೊತ್ತು. ಆದರೆ ಬಳ್ಳಾರಿಯಲ್ಲಿ ಅಧಿಕಾರಿಯೊಬ್ಬರು 18 ವರ್ಷ ತುಂಬುವುದಕ್ಕೂ ಮುನ್ನವೇ ಇಬ್ಬರು ಬಾಲಕಿಯರ ವಿವಾಹವನ್ನು ನೋಂದಣಿ ಮಾಡಿಕೊಂಡಿದ್ದಾರೆ.

    ಬಳ್ಳಾರಿಯಲ್ಲಿ ವಾಸವಾಗಿರುವ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಯುವತಿ, ಹಾಗೂ ಬಳ್ಳಾರಿಯ ಮತ್ತೊಬ್ಬ ಯುವತಿಗೆ 2018ರ ಜೂನ್‍ನಲ್ಲಿ ವಿವಾಹವಾಗಿದೆ. ಆದರೆ ಈ ಇಬ್ಬರಿಗೂ 18 ವರ್ಷ ಪೂರ್ಣವಾಗುವುದಕ್ಕೂ ಮುನ್ನವೇ ಮದುವೆ ಮಾಡಲಾಗಿದೆ. ಜೊತೆಗೆ ವಿವಾಹವನ್ನು ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:
    ಈ ಎರಡು ಕುಟುಂಬದವರು ಕಟ್ಟಡ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಗುರುತಿನ ಚೀಟಿ ಹೊಂದಿದ್ದು, ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಗುರುತಿನ ಚೀಟಿ ಹೊಂದಿದವರಿಗೆ ಕಾರ್ಮಿಕ ಇಲಾಖೆಯಿಂದ 50 ಸಾವಿರ ರೂ. ವಿವಾಹ ಸಹಾಯ ಧನ ನೀಡಲಾಗುತ್ತಿದೆ. ಸಹಾಯ ಧನ ಪಡೆಯಲು ವಿವಾಹ ನೋಂದಣಿ ಕಡ್ಡಾಯವಾಗಿದ್ದರಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿಯೇ ಕುಟುಂಬಸ್ಥರು ನೋಂದಣಿ ಮಾಡಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಪರಿಶೀಲನೆ ನಡೆಸದೇ ಎಡವಟ್ಟು ಮಾಡಿದ್ದಾರೆ.

    ಸಹಾಯಧನ ಕೋರಿ ಉಪನೋಂದಣಿ ಇಲಾಖೆಯಲ್ಲಿ ವಿವಾಹವನ್ನು ನೋಂದಣಿ ಮಾಡಿಸಿರುವ ಪತ್ರ ಹಾಗೂ ವಿವಿಧ ದಾಖಲೆಗಳನ್ನು ಕುಟುಂಬಸ್ಥರು ಕಾರ್ಮಿಕ ಇಲಾಖೆಗೆ ನೀಡಿದ್ದಾರೆ. ಈ ದಾಖಲೆಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಯುವತಿಯರಿಗೆ 18 ವರ್ಷ ಭರ್ತಿಯಾಗುವ ಮುನ್ನವೇ ವಿವಾಹವಾಗಿದೆ ಎನ್ನುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಇದೀಗ ತಿರಸ್ಕರಿಸಲಾಗಿದೆ.

    ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ದಮನಿತ ಮಹಿಳೆಯರ ಜೀವನ ಮಟ್ಟ ಸುಧಾರಿಸಲು ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಯೋಜನೆಗಳ ಅನುಷ್ಠಾನ ಹಾಗೂ ಮಹಿಳಾ ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಸಭೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಪಂಚಾಯತಿ ಸಿಇಓ ಕೆ.ವಿ.ರಾಜೇಂದ್ರ ಅವರು, ಯಾವ ದಾಖಲೆಗಳನ್ನು ಆಧರಿಸಿ ವಿವಾಹ ನೋಂದಣಿ ಮಾಡಲಾಗಿದೆ ಹಾಗೂ ಜಿಲ್ಲಾ ನೋಂದಣಿ ವೇಳೆ ಅಧಿಕಾರಿಗಳು ತಪ್ಪು ಮಾಡಿದ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv