Tag: Deputy Commissioner

  • ಜಿಲ್ಲಾಧಿಕಾರಿ ಸಭೆಗೆ ಗೈರಾದ ತಾಲೂಕು ವೈದ್ಯಾಧಿಕಾರಿಗಳು ಅಮಾನತು

    ಜಿಲ್ಲಾಧಿಕಾರಿ ಸಭೆಗೆ ಗೈರಾದ ತಾಲೂಕು ವೈದ್ಯಾಧಿಕಾರಿಗಳು ಅಮಾನತು

    ರಾಯಚೂರು: ಜಿಲ್ಲೆಯಲ್ಲಿನ ಗರ್ಭಿಣಿ ತಾಯಿ ಹಾಗು ಶಿಶು ಮರಣ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆಗೆ ಗೈರಾದ ಇಬ್ಬರು ತಾಲೂಕು ವೈದ್ಯಾಧಿಕಾರಿಗಳು ಅಮಾನತ್ತಾಗಿದ್ದಾರೆ.

    ದೇವದುರ್ಗ ತಾಲೂಕು ವೈದ್ಯಾಧಿಕಾರಿ ಡಾ.ಬನದೇಶ್, ಸಿಂಧನೂರು ತಾಲೂಕು ವೈದ್ಯಾಧಿಕಾರಿ ಅಯ್ಯನಗೌಡ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣಗೆ ಅಮಾನತ್ತು ಆದೇಶ ಹೊರಡಿಸುವಂತೆ ಸೂಚಿಸಿದ್ದಾರೆ. ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಗೆ ಸಿಂಧನೂರು ಹಾಗೂ ದೇವದುರ್ಗ ಟಿಎಚ್‍ಓಗಳು ಗೈರು ಹಾಜರಾಗಿದ್ದರು. ಇದನ್ನೂ ಓದಿ: ತನ್ನ ಕಥೆಯನ್ನು ಪಠ್ಯದಿಂದ ಕೈ ಬಿಡಿ: ದೇವನೂರು ಮಹಾದೇವ 

    ತಾಯಿ ಶಿಶು ಮರಣ ಆಡಿಟ್ ಕಮಿಟಿಯಲ್ಲಿ ಕಳೆದ ಒಂದು ವರ್ಷದ ಮರಣಗಳ ಬಗ್ಗೆ ಆಡಿಟ್ ಮಾಡಬೇಕಿತ್ತು. ಆದರೆ ಅಧಿಕಾರಿಗಳ ಗೈರು ಹಾಜರಿಯಿಂದ ಕೈಗೆತ್ತಿಕೊಂಡ 16 ಪ್ರಕರಣಗಳಲ್ಲಿ ಕೇವಲ 5 ಪ್ರಕರಣಗಳ ಬಗ್ಗೆ ಮಾತ್ರ ಚರ್ಚೆ ಮಾಡಲಾಯಿತು. ಮೆಟರನಿಟಿ ಸಾವುಗಳನ್ನು ತಡೆಯುವ ನಿಟ್ಟಿನಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಪ್ರಮುಖ ಸಭೆಗೆ ಗೈರಾಗಿದ್ದಕ್ಕೆ ಜಿಲ್ಲಾಧಿಕಾರಿಗಳು ಗರಂ ಆಗಿದ್ದು, ಅಮಾನತ್ತು ಆದೇಶ ಹೊರಡಿಸಿದ್ದಾರೆ.

    ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಪರಿಶೀಲನಾ ವರದಿ ನೀಡುವಂತೆ ಲಿಂಗಸುಗೂರು ಹಾಗೂ ರಾಯಚೂರು ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಮುಂದೆಯೂ ಪ್ರಮುಖ ಸಭೆಗಳಿಗೆ ಗೈರಾದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ

  • ಜನರ ಸಮಸ್ಯೆ ಕೇಳಲು ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ- ಡಿಸಿ ಪರ ಪ್ರತಾಪ್ ಸಿಂಹ ಬ್ಯಾಟಿಂಗ್

    ಜನರ ಸಮಸ್ಯೆ ಕೇಳಲು ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ- ಡಿಸಿ ಪರ ಪ್ರತಾಪ್ ಸಿಂಹ ಬ್ಯಾಟಿಂಗ್

    – ಜಿಲ್ಲಾಧಿಕಾರಿಗಳ ಕ್ರಮವನ್ನು ಬೆಂಬಲಿಸಬೇಕು

    ಮೈಸೂರು: ಜನರ ಸಮಸ್ಯೆಗಳನ್ನು ಕೇಳಲು ಯಾವ ದೊಣ್ಣೆ ನಾಯಕನ ಅಪ್ಪನೆಯೂ ಬೇಕಿಲ್ಲ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

    ಜಿಲ್ಲಾಧಿಕಾರಿ ಹಾಗೂ ಶಾಸಕರ ನಡುವಿನ ಜಟಾಪಟಿ ಕುರಿತು ಮಾತನಾಡಿದ ಅವರು, ಕ್ಷೇತ್ರದ ಜನರ ಸಮಸ್ಯೆ ಕೇಳಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಯಾವ ಕ್ಷೇತ್ರವನ್ನೂ ಜನರು ಶಾಸಕ ಹಾಗೂ ಎಂಪಿಗೆ ಬರೆದುಕೊಟ್ಟಿರುವುದಿಲ್ಲ. ಶಾಸಕರು, ಸಂಸದರು ಎಂಬುದು ಜನರ ಕೆಲಸ ಮಾಡಲು ಇರುವ ಹುದ್ದೆ ಅಷ್ಟೇ. ಜಿಲ್ಲಾಧಿಕಾರಿ ಜನರ ಬಳಿಗೆ ಹೋಗಿ ಅವರ ಸಮಸ್ಯೆ ಕೇಳುತ್ತಿದ್ದಾರೆ. ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದ್ದಾರೆ.

    ಗ್ರಾಮ ಪಂಚಾಯತಿ ಚುನಾವಣೆ ಮುಗಿದ ಮೇಲೆ ನಾನೂ ಜನರ ಬಳಿ ಹೋಗುತ್ತೇನೆ. ಯಾರು ತಡೆಯುತ್ತಾರೆ ನೋಡೋಣ. ನಾಲ್ಕು ಜನ ಶಾಸಕರು ಒಟ್ಟಾಗಿ ಜಿಲ್ಲಾಧಿಕಾರಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಹೆದರಿಸುತ್ತಿದ್ದೀರಾ? ನೀವೂ ಹೆದರಿಸಿದರೆ ನಾವು ಹೆದರಬೇಕಾ? ನೀವೇ ಜನರ ಸಮಸ್ಯೆ ಬಗೆಹರಿಸಿದ್ದರೆ ಜನರು ಜಿಲ್ಲಾಧಿಕಾರಿ ಬಳಿ ಯಾಕೆ ಕಷ್ಟ ಹೇಳಿಕೊಳ್ಳುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

    ನೀವು ಮಾಡಲು ಆಗದ ಕೆಲಸವನ್ನು ಜಿಲ್ಲಾಧಿಕಾರಿ ಮಾಡುತ್ತಿದ್ದಾರೆ, ಮಾಡಲು ಬಿಡಿ. ಮೊದಲು ಶಾಸಕರ ಹಕ್ಕು ಚ್ಯುತಿ ಕುರಿತು ಪುಸ್ತಕ ಓದಿಕೊಳ್ಳಿ. ಮೂರ್ನಾಲ್ಕು ಬಾರಿ ಶಾಸಕರು ಆದವರು ನೀವು. ಯಾವುದು ಹಕ್ಕು ಚ್ಯುತಿ ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ಖಾರವಾಗಿ ಶಾಸಕರನ್ನು ಪ್ರಶ್ನಿಸಿದ್ದಾರೆ.

    ಜನರ ಸಮಸ್ಯೆ ಕೇಳುವ ಸಭೆಯಲ್ಲಿ ನಿಮ್ಮನ್ನು ಗದ್ದುಗೆ ಮೇಲೆ ಕೂರಿಸದಿದ್ದರೆ ಅದು ಹಕ್ಕು ಚ್ಯುತಿಯಾ? ಡಿಸಿಗಳು ಜನರ ಬಳಿ ಹೋಗಿ ಕೆಲಸ ಮಾಡಬೇಕು. ಆ ಕೆಲಸವನ್ನು ಅವರು ಮಾಡುತ್ತಿದ್ದಾರೆ’ ಅವರಿಗೆ ಜನರ ಕೆಲಸ ಮಾಡಲು ಬಿಡಿ ಎಂದು ಹೇಳಿದ್ದಾರೆ.

  • ಹಾಸನ ಜಿಲ್ಲಾಧಿಕಾರಿ ವರ್ಗಾವಣೆ

    ಹಾಸನ ಜಿಲ್ಲಾಧಿಕಾರಿ ವರ್ಗಾವಣೆ

    ಹಾಸನ: ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ವರ್ಗಾವಣೆ ಮಾಡಲಾಗಿದೆ.

    ಹಾಸನ ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅಕ್ರಂ ಪಾಷಾ ಅವರು ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಂ ಪಾಷಾ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಆಗ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಹಾನಸ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿತ್ತು. ಈ ಹಿಂದೆ ಬೆಂಗಳೂರು ಪ್ರವಾಸೋದ್ಯಮ ಇಲಾಖೆಯಲ್ಲಿ ನಿರ್ದೇಶಕರಾಗಿ ಪ್ರಿಯಾಂಕಾ ಮೇರಿ ಕಾರ್ಯನಿರ್ವಹಿಸಿದ್ದರು.

    ಇದೀಗ ಮತ್ತೊಮ್ಮೆ ಹಾಸನ ಜಿಲ್ಲಾಧಿಕಾರಿಯಾಗಿ ಅಕ್ರಂಪಾಷಾ ಬಂದಿದ್ದಾರೆ. ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಚುನಾವಣಾ ಮಾರ್ಗಸೂಚಿ ಪಾಲಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿತ್ತು. ರೋಹಿಣಿ ಸಿಂಧೂರಿ ಅವರವನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಬಳಿಕ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯಿಂದ ತೆರವಾಗಿದ್ದ ಜಿಲ್ಲಾಧಿಕಾರಿ ಸ್ಥಾನಕ್ಕೆ ಅಕ್ರಂ ಪಾಷಾ ಅವರನ್ನು ನೇಮಿಸಲಾಗಿತ್ತು.

    ಅಕ್ರಂಪಾಷಾ ಅವರು ಫೆಬ್ರವರಿ 22 ರಂದು ಹಾಸನಕ್ಕೆ ವರ್ಗಗೊಂಡು ಆಗಮಿಸಿದ್ದರು. ಆದರೆ ಒಂದು ತಿಂಗಳ ಅವಧಿಯಲ್ಲೇ ಪಾಷಾರನ್ನು ಕೂಡ ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು.

    ವರ್ಗಾವಣೆಗೆ ಕಾರಣವೇನು?
    ಬಿಜೆಪಿ ಶಾಸಕ ಪ್ರೀತಂಗೌಡ ಚುನಾವಣಾ ಆಯೋಗಕ್ಕೆ ದೂರು ನೀಡಿ ಡಿಸಿ ಅವರನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು. ಈ ದೂರನ್ನು ಆಯೋಗ ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿತ್ತು.

  • ಸರ್ಕಾರಿ ಅಂಗನವಾಡಿಗೆ ಮಗಳನ್ನ ಸೇರಿಸಿದ ಐಎಎಸ್ ಅಧಿಕಾರಿ

    ಸರ್ಕಾರಿ ಅಂಗನವಾಡಿಗೆ ಮಗಳನ್ನ ಸೇರಿಸಿದ ಐಎಎಸ್ ಅಧಿಕಾರಿ

    ಭೋಪಾಲ್: ಸರ್ಕಾರಿ ಸೇವೆಯಲ್ಲಿರುವ ಹಲವು ಅಧಿಕಾರಿಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದು ನಿಮಗೆ ಗೊತ್ತೇ ಇದೆ. ಆದರೆ ಮಧ್ಯಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಮಗಳನ್ನ ಸರ್ಕಾರಿ ಅಂಗನವಾಡಿಗೆ ಸೇರಿಸುವ ಮೂಲಕ ಮಾದರಿಯಾಗಿದ್ದಾರೆ.

    ಐಎಎಸ್ ಅಧಿಕಾರಿ ಪಂಕಜ್ ಜೈನ್ ಅವರು ತಮ್ಮ ಮಗಳನ್ನ ಸರ್ಕಾರಿ ಅಂಗನವಾಡಿಗೆ ಸೇರಿಸಿದ್ದಾರೆ. ಇವರು ಮಧ್ಯಪ್ರದೇಶದ ಕಟ್ನಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಖಾಸಗಿ ಶಾಲೆಗಿಂತ ಸರ್ಕಾರಿ ಅಂಗನವಾಡಿಗಳು ಉತ್ತಮವಾಗಿವೆ ಎಂದು ಹೇಳಿ ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿ ಶಾಲೆಗೆ ಸೇರಿಸಿ ಇತರರಿಗೆ ಮಾದರಿಯಾಗಿದ್ದಾರೆ.

    ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಅಂಗನವಾಡಿ ಮತ್ತು ಶಾಲೆಗೆ ಕಳುಹಿಸುವುದರಿಂದ ಅಲ್ಲಿನ ವಾತಾವರಣ ತಿಳಿಯುತ್ತದೆ. ಜೊತೆಗೆ ಅಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ನಮಗೆ ಬೇಗ ತಿಳಿಯುತ್ತದೆ. ಇದರಿಂದ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಬಹುದು. ನಮ್ಮ ಕೆಲಸವನ್ನು ನೋಡಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗೆ ಸೇರಿಸುತ್ತಾರೆ ಎಂದು ಡಿಸಿ ಪಂಕಜ್‍ಜೈನ್ ತಿಳಿಸಿದ್ದಾರೆ.

    ಈ ಬಗ್ಗೆ ತಿಳಿದು ಮಧ್ಯ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ಪಂಕಜ್‍ಜೈನ್ ಅವರಿಗೆ ಪತ್ರವೊಂದನ್ನ ಬರೆದು ಶುಭಾಶಯ ತಿಳಿಸಿದ್ದಾರೆ. ಇದೀಗ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸಾರ್ವಜನಿಕ ಅಧಿಕಾರಿ ಸಮಾಜಕ್ಕೆ ಮಾದರಿಯಾಗಬೇಕು. ನಿಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ಸೇರಿಸುವ ಮೂಲಕ ಇದನ್ನ ನೀವು ತೋರಿಸಿಕೊಟ್ಟಿದ್ದೀರಿ. ಇದನ್ನು ನೋಡಿ ಇತರ ಸರ್ಕಾರಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಇದರಿಂದ ಸರ್ಕಾರಿ ಯೋಜನೆಗಳು ಸರಿಯಾದ ಸಮಯಕ್ಕೆ ಚಾಲನೆ ಆಗುತ್ತವೆ. ಹೀಗೆ ನಿಮ್ಮ ಕರ್ತವ್ಯನಿಷ್ಠೆಯನ್ನು ಇದೇ ರೀತಿ ಮುಂದುವರಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  • ಲೋಕಸಭಾ ಚುನಾವಣೆ ಮತಎಣಿಕೆ – ಮದ್ಯ ಮಾರಾಟಕ್ಕೆ ಬ್ರೇಕ್

    ಲೋಕಸಭಾ ಚುನಾವಣೆ ಮತಎಣಿಕೆ – ಮದ್ಯ ಮಾರಾಟಕ್ಕೆ ಬ್ರೇಕ್

    ಮಂಡ್ಯ: ಲೋಕಸಭಾ ಚುನಾವಣೆಯ ಮತಎಣಿಕೆ ಕಾರ್ಯ ಮೇ 23 ರಂದು ನಡೆಯುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಜಿಲ್ಲಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

    ಜಿಲ್ಲಾಧಿಕಾರಿ ಡಾ. ಪಿಸಿ ಜಾಫರ್ ಕರ್ನಾಟಕ ಪ್ರಜಾಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 135 ಸಿರ ರೀತ್ಯಾ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮ 1967ರ ನಿಯಮ 10 (ಬಿ) ಅನ್ವಯ ಆದೇಶ ನೀಡಿದ್ದು, ಮೇ 22ರ ಮಧ್ಯ ರಾತ್ರಿಯಿಂದ 23ರ ವರೆಗೆ ಮದ್ಯ ಮಾರಾಟ ನಿಷೇಧಿಸಿದ್ದಾರೆ. ಮಂಡ್ಯ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯದ ಅಂಗಡಿ, ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್‍ಗಳಲ್ಲಿ ಮದ್ಯ ಮಾರಾಟ ಮತ್ತು ಸಾಗಾಣಿಕೆಗೆ ನಿಷೇಧ ಮಾಡಲಾಗಿದೆ.

    ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ಮತ ಎಣಿಕೆ ದಿನದಂದು ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಎಸ್‍ಪಿ ಹಾಗೂ ಪೊಲೀಸ್ ಮಹಾನಿರ್ದೇಶಕರೊಂದಿಗೆ ಸಭೆ ನಡೆಸಿದ್ದರು. ಕ್ಷೇತ್ರದಲ್ಲಿ ಭದ್ರತೆ ನೀಡಲು ಹೆಚ್ಚಿನ ಪೊಲೀಸರ ನಿಯೋಜನೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಮೇ 23 ಮತ್ತು 24 ರಂದು ಯಾವುದೇ ಮೆರವಣಿಗೆಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

  • ಶ್ರೀರಾಮುಲು ವಿರುದ್ಧ ದೂರು ದಾಖಲು

    ಶ್ರೀರಾಮುಲು ವಿರುದ್ಧ ದೂರು ದಾಖಲು

    ಧಾರವಾಡ: ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಮತ್ತು ಕುಂದಗೋಳ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ವಿರುದ್ಧ ಕಾಂಗ್ರೆಸ್ ಮುಖಂಡರು ದೂರು ದಾಖಲಿಸಿದ್ದಾರೆ.

    ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಧಾರವಾಡ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಶ್ರೀರಾಮುಲು ಶಿವಳ್ಳಿ ನಿಧನಕ್ಕೆ ಮೈತ್ರಿ ಸರ್ಕಾರವೇ ಕಾರಣ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪ್ರಜಾಪ್ರತಿನಿಧಿ ಕಾಯ್ದೆಯ ಅಡಿ ಹಾಗೂ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

    ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಡಿಸಿ ದೀಪಾ ಚೋಳನ್ ಅವರಿಗೆ ಛಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಬಿಡ್ನಾಳ ಹೆಸರಿನಲ್ಲಿ ದೂರು ಸಲ್ಲಿಸಲಾಗಿದೆ. ದೂರು ನೀಡುವ ವೇಳೆ ಸಂಸದ ವಿ.ಎಸ್. ಉಗ್ರಪ್ಪ ಮತ್ತು ಇತರರು ಭಾಗಿಯಾಗಿದ್ದರು. ದೂರಿನ ಜೊತೆಗೆ ಕೈ ಮುಂಖಡರು ಶ್ರೀರಾಮುಲು ಹೇಳಿಕೆಯ ಪೆನ್‍ಡ್ರೈವ್ ಸಹ ನೀಡಿದ್ದಾರೆ.

    ಶ್ರೀರಾಮುಲು ವಿರುದ್ಧ ಡಿಸಿಗೆ ದೂರು ಸಲ್ಲಿಸಿದ ಬಳಿಕ ಮಾತನಾಡಿದ ಉಗ್ರಪ್ಪ, ಕಾಂಗ್ರೆಸ್ ನಿಯೋಗದಿಂದ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದೇವೆ. ದೂರಿನ ಜೊತೆಗೆ ಡಿಸಿಗೆ ರಾಮುಲು ಆಡಿದ ಮಾತಿನ ಪೆನ್‍ಡ್ರೈವ್ ಕೂಡ ಕೊಟ್ಟಿದ್ದೇವೆ. ರಾಮುಲು ಹೇಳಿಕೆಯಲ್ಲಿ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರದ ಕಿರುಕುಳ ಕಾರಣ ಎಂದಿರುವುದು ಸ್ಪಷ್ಟವಾಗಿದೆ. ಕಿರುಕುಳ ನೀಡಿ ಮೃತಪಟ್ಟಿರುವುದು ಗೊತ್ತಿದ್ದರೆ ಸುಮ್ಮನೆ ಯಾಕೆ ಇದ್ದರು. ಕೃತ್ಯದ ಮಾಹಿತಿ ಗೊತ್ತಿದ್ದು ಮುಚ್ಚಿಡುವ ಕಾರ್ಯ ಮಾಡಿದರೆ ಅದು ಕೂಡ ಒಂದು ಅಪರಾಧ. ಅದನ್ನು ಕೂಡ ನಾವು ದೂರಿನಲ್ಲಿ ಪ್ರಸ್ತಾಪ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಶ್ರೀರಾಮುಲು, ಕುಂದಗೋಳ ಅಭ್ಯರ್ಥಿ ಚಿಕ್ಕನಗೌಡರ ಹಾಗೂ ಬಿಜೆಪಿ ಕೂಡ ಇದಕ್ಕೆ ಹೊಣೆಗಾರರಾಗಿದ್ದಾರೆ. ರಾಮುಲು ರಾಜಕೀಯ ಮತಕ್ಕಾಗಿ ಸಾವನ್ನು ಬಳಸಿಕೊಳ್ಳುವ ಸಣ್ಣತನ ತೋರಿದ್ದಾರೆ. ನಾನು ರಾಮುಲು ಕ್ಷಮೆಯಾಚಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ನನ್ನ ಹೇಳಿಕೆಯನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ರಾಮುಲು ನನ್ನ ಕ್ಷೇತ್ರದ ಮತದಾರ, ಹೀಗಾಗಿ ಅವರ ಹೇಳಿಕೆಗೆ ನಾನು ಕ್ಷಮೆ ಕೇಳುವೆ. ಚುನಾವಣಾ ಆಯೋಗ ಅವರ ಮೇಲೆ ಕೇಸ್ ದಾಖಲಿಸಬೇಕು. ಬಿಎಸ್‍ವೈ, ಅಮಿತ್ ಶಾ ತಮ್ಮ ನಾಯಕರ ಮಾತಿನ ಬಗ್ಗೆ ಅರಿತುಕೊಳ್ಳಬೇಕು ಈ ಹೇಳಿಕೆಗೆ ಪಕ್ಷವಾದರೂ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

  • ಡೆಪ್ಯೂಟಿ ಕಮಿಶನರ್ ಆಗಿ ನೇಮಕ – ತಂದೆಗೆ ಮಗಳಿಂದ ಖಡಕ್ ಆದೇಶ

    ಡೆಪ್ಯೂಟಿ ಕಮಿಶನರ್ ಆಗಿ ನೇಮಕ – ತಂದೆಗೆ ಮಗಳಿಂದ ಖಡಕ್ ಆದೇಶ

    ಕೋಲ್ಕತ್ತಾ: ಮಂಗಳವಾರ ಐಎಸ್‍ಸಿ ಪಠ್ಯದ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ದೇಶಕ್ಕೆ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿನಿ ಒಂದು ದಿನದ ಮಟ್ಟಕ್ಕೆ ಡೆಪ್ಯೂಟಿ ಕಮಿಶನರ್ ಆಗಿ ತನ್ನ ತಂದೆಗೆ ಆರ್ಡರ್ ಮಾಡಿದ್ದಾಳೆ.

    ರಿಚ್ಚ ಸಿಂಗ್ ಜಿ.ಡಿ ಬಿರ್ಲಾ ಸೆಂಟರ್‍ನಲ್ಲಿ ಓದುತ್ತಿದ್ದು, 12ನೇ ತರಗತಿ ಪರೀಕ್ಷೆಯಲ್ಲಿ ಶೇ. 99.25 ಅಂಕಗಳನ್ನು ಪಡೆದಿದ್ದಾಳೆ. ರಿಚ್ಚ ಶೇ. 99.25 ಅಂಕಗಳನ್ನು ಪಡೆಯುವ ಮೂಲಕ ದೇಶಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ. ರಿಚ್ಚ ಸಾಧನೆಯನ್ನು ಗೌರವಿಸಲು ಕೋಲ್ಕತ್ತಾ ಪೊಲೀಸರು ಆಕೆಯನ್ನು ಒಂದು ದಿನದ ಮಟ್ಟಿಗೆ ಡೆಪ್ಯೂಟಿ ಕಮಿಶನರ್ ಹುದ್ದೆಯನ್ನು ನೀಡಿ ಪುರಸ್ಕರಿಸಿದ್ದರು.

    ರಿಚ್ಚ ಸಿಂಗ್ ಸಾಧನೆಯನ್ನು ಪ್ರೋತ್ಸಾಹಿಸಲು ಕೋಲ್ಕತ್ತಾ ಪೊಲೀಸರು ಆಕೆಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಡೆಪ್ಯೂಟಿ ಕಮಿಷನರ್ ಆಗಿ ನೇಮಿಸಿದ್ದರು. ಇದೇ ವಿಭಾಗದಲ್ಲಿ ರಿಚ್ಚ, ತಂದೆ ರಾಜೇಶ್ ಸಿಂಗ್ ಅವರು ಹೆಚ್ಚುವರಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

    ರಿಚ್ಚ ಡೆಪ್ಯೂಟಿ ಕಮಿಶನರ್ ಆಗಿ ಕುರ್ಚಿಯಲ್ಲಿ ಕುಳಿತ್ತಿದ್ದ ವೇಳೆ ಅಲ್ಲಿದ್ದ ಪೊಲೀಸರು ನಿನ್ನ ತಂದೆಗೆ ಏನು ಆದೇಶ ನೀಡಬೇಕು ಎಂದುಕೊಂಡಿದ್ದೀಯಾ ಎಂದು ಕೇಳಿದ್ದಾರೆ. ಅದಕ್ಕೆ ರಿಚ್ಚ ನನ್ನ ತಂದೆ ಬೇಗನೆ ಮನೆಗೆ ಮರಳಬೇಕು ಎಂದು ಆದೇಶಿಸುತ್ತೇನೆ ಎಂದು ಹೇಳಿದ್ದಾಳೆ.

    ಪೊಲೀಸ್ ಅಧಿಕಾರಿಗಳು 12ನೇ ತರಗತಿ ನಂತರ ಏನು ಓದಲು ಇಷ್ಟಪಡುತ್ತೀಯಾ ಎಂದು ಕೇಳಿದ್ದಾರೆ. ಆಗ ಅವಳು ಮುಂದೆ ಇತಿಹಾಸ ಅಥವಾ ಸಮಾಜಶಾಸ್ತ್ರ ಓದಬೇಕೆಂದು ಬಯಸುತ್ತೇನೆ. ಅಲ್ಲದೆ ಯುಪಿಎಸ್‍ಸಿ ಪರೀಕ್ಷೆ ಕೂಡ ಬರೆಯುವ ಕನಸು ಇದೆ ಎಂದು ಉತ್ತರಿಸಿದ್ದಾಳೆ.

    ಮಗಳು ಡೆಪ್ಯೂಟಿ ಕಮಿಶನರ್ ಸ್ಥಾನದಲ್ಲಿ ಕುಳಿತ್ತಿದ್ದನ್ನು ನೋಡಿದ ತಂದೆ ರಾಜೇಶ್ ಭಾವುಕರಾಗಿ,”ನನ್ನ ಖುಷಿಯನ್ನು ಹೇಗೆ ಹೇಳಬೇಕು ಎಂಬುದು ನನಗೆ ಗೊತ್ತಾಗುತ್ತಿಲ್ಲ. ಈ ದಿನ ನನ್ನ ಮಗಳು ನನಗೆ ಬಾಸ್ ಆಗಿದ್ದಾಳೆ. ಬೇಗ ಮನೆಗೆ ಬರಬೇಕು ಎಂದು ಆದೇಶಿಸಿದ್ದಾಳೆ. ನಾನು ಆಕೆಯ ಆದೇಶವನ್ನು ಪಾಲಿಸುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

  • ಒಂದು ಪಕ್ಷದ ಏಜೆಂಟರಂತೆ ಹಾಸನ ಡಿಸಿ ವರ್ತನೆ – ಕೂಡಲೇ ವರ್ಗಾವಣೆ ಆಗ್ರಹಿಸಿದ ಸಚಿವ ರೇವಣ್ಣ

    ಒಂದು ಪಕ್ಷದ ಏಜೆಂಟರಂತೆ ಹಾಸನ ಡಿಸಿ ವರ್ತನೆ – ಕೂಡಲೇ ವರ್ಗಾವಣೆ ಆಗ್ರಹಿಸಿದ ಸಚಿವ ರೇವಣ್ಣ

    ಹಾಸನ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ಈ ಕೂಡಲೇ ವರ್ಗಾವಣೆ ಮಾಡಿ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಮುಕ್ತವಾಗಿ ನಡೆದಿದೆ ಎಂದು ಹೇಳಿರುವ ಜಿಲ್ಲಾಧಿಕಾರಿಗಳೇ, 10 ದಿನಗಳ ಬಳಿಕ ಚುನಾವಣಾ ಅಕ್ರಮ ನಡೆದಿದೆ ಎನ್ನುವುದರ ಬಗ್ಗೆ ಏಕೆ ದೂರು ಪಡೆದುಕೊಂಡರು. ಈ ಬಗ್ಗೆ ತನಿಖೆ ಆಗಬೇಕು, ಅಲ್ಲದೇ ಕೂಡಲೇ ಅವರನ್ನು ವರ್ಗಾವಣೆ ಮಾಡಿ ಬೇಕು. ಅವರು ವರ್ಗಾವಣೆ ಆಗಿ ಬಂದ ಬಳಿಕ ನಡೆದ ಎಲ್ಲಾ ಬೆಳವಣಿಗೆಗಳ ಬಗ್ಗೆ ಮುಕ್ತ ತನಿಖೆ ನಡೆಸಬೇಕಿದೆ. ಈ ಕುರಿತು ಶೀಘ್ರವಾಗಿ ಆಯೋಗಕ್ಕೆ ಲಿಖಿತ ಮನವಿ ನೀಡಲಾಗುವುದು ಎಂದರು.

    ಹೊಳೆನರಸೀಪುರ ತಾಲೂಕಿನ ಪಡವಲಹಿಪ್ಪೆಯ ಮತಗಟ್ಟೆ ಯಲ್ಲಿ ಅಕ್ರಮ ಮತದಾನ ಮಾಡಿದ್ದಾರೆ ಎನ್ನುವ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಒಂದು ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಅಕ್ರಮ ಮತದಾನದ ಕುರಿತು ತನಿಖೆ ನಡೆಸಬೇಕಾದರೆ ಮತಗಟ್ಟೆಯಲ್ಲಿ ಅಳವಡಿಸುವ ಸಿಸಿಟಿವಿ ಪರಿಶೀಲನೆ ನಡೆಸಲಿ. ಈ ಬಗ್ಗೆ ಯಾವ ಯುವಕ ಮತದಾನ ಮಾಡಿದ್ದಾನೆ ಎನ್ನುವುದು ತಿಳಿಯುತ್ತದೆ. ಅಲ್ಲದೇ ತನಿಖೆ ವೇಳೆ ಏಕೆ ನಮ್ಮ ಬೂತ್ ಏಜೆಂಟ್ ವಿಚಾರಣೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

    ಯಾವುದೇ ದಾಖಲೆಗಳನ್ನು ಸೃಷ್ಟಿಸುವ ಸನ್ನಿವೇಶ ಇದ್ದು, ಮುಕ್ತವಾಗಿ ಮತ ಎಣಿಕೆ ಮಾಡಿಸುವ ಕುರಿತು ನಮಗೆ ನಂಬಿಕೆ ಇಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಹೇಳಿದರು. ಅಲ್ಲದೇ ಜಿಲ್ಲಾಧಿಕಾರಿಗಳ ವರ್ಗಾವಣೆ 10 ದಿನ ಮುನ್ನವೇ ಇವರೇ ಜಿಲ್ಲಾಧಿಕಾರಿಗಳು ಎಂದು ಹೇಳಲಾಗುತ್ತಿತ್ತು. ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಡಿಸಿ ಅವರು ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಭೇಟಿ ಮಾಡಿದ್ದರು. ಅವರಿಂದ ನಿರ್ದೇಶನ ಪಡೆದು ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

    ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮನೆಯಲ್ಲಿ ಹಾಲಿ ಜಿಲ್ಲಾಧಿಕಾರಿ ಮನೆಯಲ್ಲಿ ಯಾಕೆ ಇದ್ದರು ಎಂದು ಪ್ರಶ್ನಿಸಿದ ಸಚಿವರು, ಈ ಕುರಿತು ತನಿಖೆ ಮಾಡಬೇಕೆಂದು ಆಯೋಗಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

  • ಸ್ಕಾರ್ಫ್ ಹಾಕಿದ್ರೆ ಪ್ರವೇಶ ಇಲ್ಲ – ಮಂಗ್ಳೂರು ಕಾಲೇಜಿನಲ್ಲಿ ಮತ್ತೆ ವಿವಾದ

    ಸ್ಕಾರ್ಫ್ ಹಾಕಿದ್ರೆ ಪ್ರವೇಶ ಇಲ್ಲ – ಮಂಗ್ಳೂರು ಕಾಲೇಜಿನಲ್ಲಿ ಮತ್ತೆ ವಿವಾದ

    ಮಂಗಳೂರು: ದಕ್ಷಿಣ ಜಿಲ್ಲೆಯಲ್ಲಿ ಮತ್ತೆ ಸ್ಕಾರ್ಫ್ ವಿವಾದ ಕೇಳಿ ಬಂದಿದೆ. ಮಂಗಳೂರು ನಗರದ ಸಂತ ಆಗ್ನೆಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಮುಖಕ್ಕೆ ಸ್ಕಾರ್ಫ್ ಹಾಕುತ್ತಾಳೆಂದು ದ್ವಿತೀಯ ಪಿಯುಸಿಗೆ ಪ್ರವೇಶ ನಿರಾಕರಿಸಿದ್ದು, ವಿವಾದಕ್ಕೆ ಕಾರಣವಾಗಿದೆ.

    ಕಾಲೇಜಿನ ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿನಿ ಫಾತಿಮಾ ಫಾಜಿಲಾ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಫಾತಿಮಾ ಕಳೆದ ಒಂದು ವರ್ಷದಿಂದ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ದ್ವಿತೀಯ ಪಿಯುಸಿಗೆ ಅಡ್ಮಿಶನ್ ಮಾಡುವಾಗ ಪ್ರಿನ್ಸಿಪಾಲರು ಪ್ರವೇಶ ನಿರಾಕರಿಸಿದ್ದಾರೆ.

    ಕಾಲೇಜಿನಲ್ಲಿ ಯೂನಿಫಾರ್ಮ್ ಇದ್ದು, ಮುಖಕ್ಕೆ ಸ್ಕಾರ್ಫ್ ಹಾಕಿ ತರಗತಿಗೆ ಬರುವಂತಿಲ್ಲ ಎಂಬ ನಿಯಮ ಇದೆ. ಈ ವಿಚಾರ ಕಳೆದ ವರ್ಷವೂ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಬಹುತೇಕ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ನಿಯಮ ಪಾಲನೆ ಮಾಡಿದ್ದರು.

    ವಿದ್ಯಾರ್ಥಿನಿಯರು ನಿಯಮ ಪಾಲನೆ ಮಾಡಿದ್ದರೂ ಫಾತಿಮಾ ಮಾತ್ರ ಮುಖ ಹೊರತುಪಡಿಸಿ ಸ್ಕಾರ್ಫ್ ಹಾಕಿಯೇ ತರಗತಿಗೆ ಬಂದಿದ್ದಳು. ಇದೀಗ ತನ್ನ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯೆಂದು ಫಾತಿಮಾ, ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾಳೆ.

  • ಚುನಾವಣಾ ಎಫೆಕ್ಟ್: 48 ಗಂಟೆಗಳಲ್ಲಿ 3ನೇ ಡಿಸಿಯನ್ನು ಕಂಡ ಬೆಳಗಾವಿ

    ಚುನಾವಣಾ ಎಫೆಕ್ಟ್: 48 ಗಂಟೆಗಳಲ್ಲಿ 3ನೇ ಡಿಸಿಯನ್ನು ಕಂಡ ಬೆಳಗಾವಿ

    ಬೆಳಗಾವಿ: ಕಳೆದ 48 ಗಂಟೆಗಳಲ್ಲಿ ಬೆಳಗಾವಿಯಲ್ಲಿ ಇಬ್ಬರು ಜಿಲ್ಲಾಧಿಕಾರಿ ವರ್ಗಾವಣೆಗೊಂಡು ಮೂರನೇ ಡಿಸಿ ನೇಮಕ ಮಾಡಿ ಆದೇಶ ನೀಡಲಾಗಿದೆ.

    ಮೊದಲು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್ ಬಿ ಬೊಮ್ಮನಹಳ್ಳಿ ಬದಲಾಗಿ ಅವರ ಜಾಗಕ್ಕೆ ಉಜ್ವಲ ಕುಮಾರ್ ಘೋಷ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಕೆಲ ಗಂಟೆಗಳ ಹಿಂದೆ ಮತ್ತೊಂದು ಆದೇಶ ಹೊರಡಿಸಿ ಆರ್ ವಿಶಾಲ್ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ ನೇಮಿಸಿದೆ.

     

    ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಮತ್ತು ಪುನರ್ವಸತಿ ಕಮಿಷನರ್ ಆಗಿ ಉಜ್ವಲ್ ಕುಮಾರ್ ಘೋಷ್ ಅವರು ಕಾರ್ಯನಿರ್ವಹಿಸುತ್ತಿದ್ದರು. ಜಿಲ್ಲಾಧಿಕಾರಿಗಳ ಈ ಬದಲಾವಣೆಗೆ ಚುನಾವಣೆಯೇ ಕಾರಣ ಎಂಬ ಮಾತು ಕೇಳಿ ಬಂದಿದೆ.

    ಇತ್ತ ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಎರಡು ದಿನಗಳ ಹಿಂದೆಯಷ್ಟೇ ವರ್ಗಾವಣೆ ಮಾಡಲಾಗಿದ್ದು, ಹಾಸನದ ನೂತನ ಡಿಸಿಯಾಗಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧಿಕಾರ ಸ್ವೀಕಾರ ಮಾಡಿದ್ದರು. ಈ ಹಿಂದೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಂಪಾಷಾ ಅವರು ಫೆಬ್ರವರಿ 22 ರಂದು ಹಾಸನಕ್ಕೆ ವರ್ಗಗೊಂಡು ಆಗಮಿಸಿದ್ದರು. ಒಂದು ತಿಂಗಳ ಅವಧಿಯಲ್ಲೇ ಪಾಷಾರನ್ನು ಕೂಡ ವರ್ಗಾವಣೆ ಮಾಡಲಾಗಿತ್ತು. ರೋಹಿಣಿ ಅವರ ಸ್ಥಾನಕ್ಕೆ ಪಾಷಾ ಅವರು ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಂದೇ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಮಿಷನರ್ ಆಗಿದ್ದ ಎಂ. ಕನಗವಳ್ಳಿ ಅವರನ್ನು ವಿಜಯಪುರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.