Tag: Deputy CM

  • ಹಾಲಿ 3 ಉಪಮುಖ್ಯಮಂತ್ರಿ ಸ್ಥಾನಗಳು ರದ್ದು? – ಬಿಜೆಪಿಯಲ್ಲಿ ನಡೆಯುತ್ತಿದೆ ಗಂಭೀರ ಮಂಥನ

    ಹಾಲಿ 3 ಉಪಮುಖ್ಯಮಂತ್ರಿ ಸ್ಥಾನಗಳು ರದ್ದು? – ಬಿಜೆಪಿಯಲ್ಲಿ ನಡೆಯುತ್ತಿದೆ ಗಂಭೀರ ಮಂಥನ

    ಬೆಂಗಳೂರು: ಸಚಿವ ಸಂಪುಟ ವಿಳಂಬ, ಸಚಿವ ಸ್ಥಾನಗಳಿವೆ ಲಾಬಿಗಳು ನಡೆಯುತ್ತಿರುವ ನಡುವೆಯೇ ಮಹತ್ವದ ಚಿಂತನ-ಮಂಥನ ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿದೆ. ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಸಚಿವ ಸ್ಥಾನಗಳ ಜೊತೆ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನಕ್ಕೂ ಲಾಬಿ ಜೋರಾಗಿದೆ.

    ಒಂದೇ ಸಮುದಾಯದ ಇಬ್ಬರು ಪ್ರಭಾವಿಗಳು ಸಚಿವ ಸ್ಥಾನಕ್ಕಾಗಿ ಜಟಾಪಟಿ ನಡೆಸುತ್ತಿದ್ದಾರೆ. ಒಬ್ಬ ಹಾಲಿ ಉಪಮುಖ್ಯಮಂತ್ರಿಗಳು ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಇದು ಸಿಎಂ ಯಡಿಯೂರಪ್ಪನವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

    ಉಪಮುಖ್ಯಮಂತ್ರಿ ಸ್ಥಾನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ತಲೆಯಲ್ಲಿ ಮತ್ತೊಂದು ಆಲೋಚನೆ ನಡೆಯುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾರಿಗೂ ಉಪಮುಖ್ಯಮಂತ್ರಿ ಸ್ಥಾನ ಕೊಡುವುದು ಬೇಡ. ಜೊತೆಗೆ ಇರುವ ಹಾಲಿ ಮೂರು ಉಪಮುಖ್ಯಮಂತ್ರಿ ಸ್ಥಾನಗಳನ್ನೂ ರದ್ದು ಮಾಡುವುದು. ಈ ಆಲೋಚನೆಗೆ ಈಗಾಗಲೇ ರೆಕ್ಕೆ ಪುಕ್ಕ ಹುಟ್ಟಿಕೊಂಡು ಬಿಜೆಪಿ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆ, ವಿವಾದ ಹುಟ್ಟು ಹಾಕಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ ಸಹ ಆಪ್ತರ ಜೊತೆ ಈ ಬಗ್ಗೆ ಗಹನವಾದ ಚರ್ಚೆಯಲ್ಲಿ ಮುಳುಗಿದ್ದಾರೆ. ಸದ್ಯದಲ್ಲೇ ಹೈಕಮಾಂಡ್ ಜೊತೆಗೂ ಉಪಮುಖ್ಯಮಂತ್ರಿ ಸ್ಥಾನಗಳನ್ನು ರದ್ದು ಮಾಡುವ ವಿಚಾರದ ಕುರಿತು ಯಡಿಯೂರಪ್ಪ ಚರ್ಚೆ ಮಾಡಲಿದ್ದಾರೆ. ಯಡಿಯೂರಪ್ಪನವರ ಈ ನಡೆ ಇದೀಗ ಹಾಲಿ ಉಪ ಮುಖ್ಯಮಂತ್ರಿಗಳಲ್ಲಿ ಆತಂಕ ಹೆಚ್ಚಿಸಿದೆ.

    ಸದ್ಯದ ಸಂಕೀರ್ಣ ಸನ್ನಿವೇಶದಲ್ಲಿ ಮುಖ್ಯಮಂತ್ರಿಗಳು ಬಹಿರಂಗವಾಗಿ ಎಲ್ಲೂ ಉಪಮುಖ್ಯಮಂತ್ರಿ ಸ್ಥಾನಗಳನ್ನು ರದ್ದು ಮಾಡುವ ಪ್ರಸ್ತಾಪದ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಬದಲಾಗಿ ತಮ್ಮ ಆಪ್ತ ಶಾಸಕರ ಮೂಲಕ ಡಿಸಿಎಂ ಹುದ್ದೆಗಳ ರದ್ದು ವಿಷಯವನ್ನು ಚರ್ಚೆಗೆ ತೇಲಿಸಿಬಿಟ್ಟುದ್ದಾರೆ. ಯಡಿಯೂರಪ್ಪ ಅವರ ಆಪ್ತ ಎಂಪಿ ರೇಣುಕಾಚಾರ್ಯ ಈಗಾಗಲೇ ಎರಡು ಸಲ ಬಹಿರಂಗವಾಗಿ ಹಾಲಿ ಉಪಮುಖ್ಯಮಂತ್ರಿ ಸ್ಥಾನಗಳ ರದ್ದು ಮಾಡುವ ಬಗ್ಗೆ ಮಾಧ್ಯಮಗಳಲ್ಲಿ ಮಾತಾಡಿದ್ದಾರೆ.

    ಇವತ್ತು ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಭೇಟಿ ಮಾಡಿದ ರೇಣುಕಾಚಾರ್ಯ ಡಿಸಿಎಂ ಹುದ್ದೆಗಳನ್ನು ರದ್ದು ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಹೊರಬಂದು ಮಾಧ್ಯಮಗಳಿಗೂ ರೇಣುಕಾಚಾರ್ಯ ಅದೇ ಹೇಳಿಕೆಯನ್ನು ಪುನರುಚ್ಚರಿಸಿದ್ದರು. ಮುಖ್ಯಮಂತ್ರಿ ಆಗಿ ಖುದ್ದು ಯಡಿಯೂರಪ್ಪ ಅವರೇ ಸಮರ್ಥರಾಗಿದ್ದಾರೆ. ಎಲ್ಲ ನಿರ್ಧಾರಗಳನ್ನು ಯಡಿಯೂರಪ್ಪ ಅವರೇ ಕೈಗೊಳ್ಳಲು ಸಮರ್ಥರಿದ್ದಾರೆ. ಹಾಗಾಗಿ ಉಪಮುಖ್ಯಮಂತ್ರಿ ಸ್ಥಾನಗಳ ಅಗತ್ಯ, ಅನಿವಾರ್ಯತೆ ಇಲ್ಲ. ಇದರಿಂದ ಅನಗತ್ಯ ಪವರ್ ಸೆಂಟರ್ ಗಳ ಸೃಷ್ಟಿಯಾಗುವುದಲ್ಲದೇ ಗುಂಪುಗಾರಿಕೆಗೂ ಅವಕಾಶ ಮಾಡಿಕೊಟ್ಟಂತಾಗುತ್ತದೆ ಅನ್ನೋದು ಶಾಸಕ ರೇಣುಕಾಚಾರ್ಯ ಅವರ ಅಭಿಪ್ರಾಯ.

    ಅಷ್ಟಕ್ಕೂ ಉಪಮುಖ್ಯಮಂತ್ರಿ ಸ್ಥಾನಗಳ ಸೃಷ್ಟಿಗೆ ಯಡಿಯೂರಪ್ಪ ನವರ ವಿರೋಧ ಮೊದಲಿಂದಲೂ ಇದೆ. ಉಪಮುಖ್ಯಮಂತ್ರಿ ಸ್ಥಾನಗಳನ್ನು ಯಾರಿಗೂ ಕೊಡೋದು ಬೇಡ ಅಂತ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಯಡಿಯೂರಪ್ಪ ಹೈಕಮಾಂಡಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಆಗ ಹೈಕಮಾಂಡ್ ಯಡಿಯೂರಪ್ಪರನ್ನು ಕಂಟ್ರೋಲ್ ಮಾಡಬೇಕೆಂಬ ಉದ್ದೇಶದಿಂದ ಅವರ ಮನವಿ ನಿರಾಕರಿಸಿ ಮೂವರಿಗೆ ಉಪಮುಖ್ಯಮಂತ್ರಿ ಮಾಡಿತ್ತು. ಆದರೆ ಈಗ ಸನ್ನಿವೇಶ ಬದಲಾಗಿದೆ. ಉಪಚುನಾವಣೆ ಬಳಿಕ ಪಕ್ಷದಲ್ಲಿ, ಸರ್ಕಾರದಲ್ಲಿ, ರಾಜ್ಯದಲ್ಲಿ ಯಡಿಯೂರಪ್ಪ ಶಕ್ತಿ, ಸಾಮರ್ಥ್ಯ ವರ್ಚಸ್ಸು ಹೆಚ್ಚಾಗಿದೆ.

    ಈಗ ಯಡಿಯೂರಪ್ಪನವರನ್ನು ಯಾವ ರೀತಿ ನಿಯಂತ್ರಿಸಬೇಕು ಎನ್ನುವ ಹೈಕಮಾಂಡ್ ನಾಯಕರ ಪ್ರಯತ್ನಗಳೂ ಕೈ ಹಿಡಿಯಲ್ಲ. ಹಾಗಾಗಿ ಈಗ ಯಡಿಯೂರಪ್ಪ ಹೈಕಮಾಂಡಿಗೆ ಉಪಮುಖ್ಯಮಂತ್ರಿ ಸ್ಥಾನ ಬೇಡ ಅಂತ ಮತ್ತೊಮ್ಮೆ ಒತ್ತಾಯ ಹಾಕಿದರೆ ಅಷ್ಟು ಸುಲಭಕ್ಕೆ ಅದನ್ನು ಹೈಕಮಾಂಡ್ ನಿರಾಕರಿಸುವ ಪರಿಸ್ಥಿತಿಯಲ್ಲಿ ಇಲ್ಲ. ಆದರೂ ರಾಜ್ಯದ ಮಟ್ಟಿಗೆ ಹೈಕಮಾಂಡ್ ಯಾವಾಗಲೂ ಬಿಜೆಪಿಯಲ್ಲಿ ಸ್ಟ್ರಾಂಗೇ ಆಗಿರುವುದರಿಂದ ಅದರ ನಿರ್ಧಾರ ಏನು ಅನ್ನುವುದು ಯಾರಿಗೂ ಗೊತ್ತಿಲ್ಲ. ಸದ್ಯ ತೂಗುವ ತಕ್ಕಡಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ರದ್ದು ಮಾಡುವ ಪ್ರಸ್ತಾಪ ಇದೆ. ತಕ್ಕಡಿ ಯಾವ ಕಡೆಗೆ ವಾಲುತ್ತದೋ ಕಾದು ನೋಡಬೇಕಿದೆ.

  • ಗುಜರಾತ್ ಉಪಮುಖ್ಯಮಂತ್ರಿ ಪುತ್ರನನ್ನ ವಿಮಾನ ಏರದಂತೆ ತಡೆದ ಅಧಿಕಾರಿಗಳು

    ಗುಜರಾತ್ ಉಪಮುಖ್ಯಮಂತ್ರಿ ಪುತ್ರನನ್ನ ವಿಮಾನ ಏರದಂತೆ ತಡೆದ ಅಧಿಕಾರಿಗಳು

    ಅಹಮದಾಬಾದ್: ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಪುತ್ರನನ್ನ ಕತಾರ್ ಏರ್‍ವೇಸ್ ವಿಮಾನ ಏರದಂತೆ ಅಧಿಕಾರಿಗಳು ತಡೆದ ಘಟನೆ ಸೋಮವಾರದಂದು ನಡೆದಿದೆ.

    ನಿತಿನ್ ಪಟೇಲ್ ಅವರ ಪುತ್ರ ಜೈಮನ್ ಪಟೇಲ್ ತಮ್ಮ ಹೆಂಡತಿ ಮಗಳೊಂದಿಗೆ ಗ್ರೀಸ್‍ಗೆ ಪ್ರವಾಸಕ್ಕೆಂದು ಹೊರಟಿದ್ದರು. ಸೋಮವಾರ ಬೆಳಿಗ್ಗೆ 4 ಗಂಟೆಗೆ ವಿಮಾನ ಹೊರಡಬೇಕಿತ್ತು. ಈ ಹಿನ್ನೆಲೆಯಲ್ಲಿ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿದ್ದ ಜೈಮನ್ ಪಟೇಲ್ ಪಾನಮತ್ತರಾಗಿದ್ದು, ನಡೆಯುವುದಕ್ಕೂ ಕಷ್ಟಪಡುತ್ತಿದ್ರು ಎಂದು ವರದಿಯಾಗಿದೆ.

    ಇಂತಹ ಸ್ಥಿತಿಯಲ್ಲಿದ್ದ ಜೈಮನ್, ವಿಮಾನ ನಿಲ್ದಾಣದಲ್ಲಿ ವೀಲ್‍ಚೇರ್‍ನಲ್ಲಿ ಕುಳಿತೇ ತಪಾಸಣೆ ಮುಗಿಸಿದ್ದಾಗಿ ವಿಮಾನ ನಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ಜೈಮನ್ ಅವರನ್ನ ವಿಮಾನ ಏರದಂತೆ ತಡೆಯಲಾಯ್ತು. ಜೈಮನ್ ಮತ್ತು ಏರ್‍ವೇಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರೋ ನಿತಿನ್ ಪಟೇಲ್, ನನಗೆ ಅವಮಾನ ಮಾಡಲೆಂದು ಈ ರೀತಿ ಮಾಡಿದ್ದಾರೆ. ನನ್ನ ಮಗ, ಸೊಸೆ ಮತ್ತು ಮೊಮ್ಮಗಳು ಪ್ರವಾಸಕ್ಕೆ ಹೋಗುತ್ತಿದ್ರು. ಮಗನ ಆರೋಗ್ಯ ಚೆನ್ನಾಗಿರಲಿಲ್ಲ. ನಂತರ ನನ್ನ ಸೊಸೆ ಮನೆಗೆ ಫೋನ್ ಮಾಡಿ, ಪ್ರವಾಸಕ್ಕೆ ಹೋಗದೆ ಮನೆಗೆ ಹಿಂದಿರುಗಿದ್ರು. ನಮ್ಮ ವಿರೋಧಿಗಳು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.