Tag: Deputy Chief Minister posT

  • ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, ಯಾರನ್ನು ಬೇಕಾದರೂ ಡಿಸಿಎಂ ಮಾಡಲಿ: ಎಚ್.ವಿಶ್ವನಾಥ್

    ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, ಯಾರನ್ನು ಬೇಕಾದರೂ ಡಿಸಿಎಂ ಮಾಡಲಿ: ಎಚ್.ವಿಶ್ವನಾಥ್

    ಬೆಂಗಳೂರು: ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, ಯಾರನ್ನು ಬೇಕಾದರೂ ಉಪಮುಖ್ಯಮಂತ್ರಿಗಳನ್ನಾಗಿ ಮಾಡಲಿ. ಹತ್ತು ಜನ ಡಿಸಿಎಂ ಮಾಡಿದರೂ ತೊಂದರೆ ಇಲ್ಲ. ಡಿಸಿಎಂ ಹುದ್ದೆ ಸಂವಿಧಾನಿಕ ಹುದ್ದೆಯೇ ಅಲ್ಲ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

    ಮತ್ತೆ ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುತ್ತಿರುವ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಸಚಿವ ಸ್ಥಾನ, ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಉಪ ಮುಖ್ಯಮಂತ್ರಿ ಸ್ಥಾನ ಸಂವಿಧಾನಾತ್ಮಕ ಹುದ್ದೆಯೇ ಅಲ್ಲ. ಎಷ್ಟು ಜನರಿಗೆ ಬೇಕಾದರೂ ಡಿಸಿಎಂ ಹುದ್ದೆ ಕೊಡಬಹುದು. ಅನರ್ಹ ಶಾಸಕರು ಇರಲಿ ಎಂದು ಹತ್ತು ಜನರನ್ನು ಬೇಕಾದರೂ ಡಿಸಿಎಂ ಮಾಡಬಹುದು ತಪ್ಪೇನೂ ಇಲ್ಲ. ಆದರೆ, ನಾನು ಮಾತ್ರ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದು ತಿಳಿಸಿದರು.

    ಸೆ.11ರಂದು ಸುಪ್ರೀಂ ಕೋರ್ಟ್‍ನಲ್ಲಿ ಅನರ್ಹತೆಯ ಪ್ರಕರಣ ವಿಚಾರಣೆಗೆ ಬರಲಿದೆ. ಏನಾಗುತ್ತದೆಯೋ ಕಾದು ನೋಡೋಣ. ಆದರೆ, ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಮತ್ತೆ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮೊದಲೇ ಘೋಷಿಸಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ನನ್ನ ಮಗ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾನೆ. ಟಿಕೆಟ್ ನೀಡಿದರೆ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾನೆ ಎಂದು ಎಂದು ಇಂಗಿತ ವ್ಯಕ್ತಪಡಿಸಿದರು.

    ಜೆಡಿಎಸ್‍ನಲ್ಲಿ ಕುಮಾರಸ್ವಾಮಿಯವರ ಅಸಮಾಧಾನ, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯನವರ ಅಸಮಾಧಾನ, ಇಬ್ಬರ ಬಗ್ಗೆ ಮಾಧ್ಯಮದವರ ಅಸಮಾಧಾನ. ಅದರಿಂದಲೇ ಮೈತ್ರಿ ಸರ್ಕಾರ ಪತನವಾಯಿತು. ಈಗಲೂ ಜೆಡಿಎಸ್‍ನಲ್ಲಿ ಹಲವರಿಗೆ ಅಸಮಾಧಾನ ಇರಬಹುದು ಎಂದು ಮೈತ್ರಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

  • ವಾಲ್ಮೀಕಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಬೇಕೇ ಬೇಕು: ರಾಜನಹಳ್ಳಿ ಶ್ರೀ ಆಗ್ರಹ

    ವಾಲ್ಮೀಕಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಬೇಕೇ ಬೇಕು: ರಾಜನಹಳ್ಳಿ ಶ್ರೀ ಆಗ್ರಹ

    ದಾವಣಗೆರೆ: ಬೇರೆ ಸಮುದಾಯಕ್ಕೆ ಸಿಕ್ಕ ಸ್ಥಾನಮಾನ ನಮಗೆ ಸಿಕ್ಕಿಲ್ಲ. ವಾಲ್ಮೀಕಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಪ್ರಸನ್ನಾನಂದ ಪುರಿ ರಾಜನಹಳ್ಳಿ ವಾಲ್ಮೀಕಿ ಶ್ರೀ ಆಗ್ರಹಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಬೇರೆ ಸಮುದಾಯಕ್ಕೆ ಸಿಕ್ಕ ಸ್ಥಾನಮಾನ ನಮಗೆ ಸಿಕ್ಕಿಲ್ಲ. ಬಿಜೆಪಿಯಲ್ಲಿ ವಾಲ್ಮೀಕಿ ಸಮುದಾಯದ 9 ಮಂದಿ ಶಾಸಕರಿದ್ದಾರೆ. ಹೀಗಾಗಿ ಮೂರು ಮಂದಿಯನ್ನಾದರೂ ಸಚಿವರಾಗಿ ಮಾಡಬೇಕು. ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ನಮ್ಮ ಸಮುದಾಯದ ಯಾರಿಗಾದರೂ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಒಂದು ವೇಳೆ ಬಿಜೆಪಿ ಹೈಕಮಾಂಡ್ ನಮ್ಮ ಆಗ್ರಹಕ್ಕೆ ಬೆಲೆ ಕೊಟ್ಟು, ಸಚಿವ ಸ್ಥಾನ ನೀಡದಿದ್ದರೆ ಉಪಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಈಗಾಗಲೇ ಆಗಸ್ಟ್ 23ರಂದು ನಾವು ಪತ್ರಿಕಾಗೋಷ್ಠಿ ನಡೆಸಿದ್ದೇವೆ. ಕರ್ನಾಟಕದಲ್ಲಿ 4ನೇ ಅತೀ ದೊಡ್ಡ ಜನಾಂಗವಾಗಿರುವ ವಾಲ್ಮೀಕಿ ಜನಾಂಗಕ್ಕೆ ರಾಜಕೀಯ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದೆವು. ಈ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಒತ್ತಾಯಿಸಿದ್ದೇವೆ. ಈ ಪಕ್ಷಕ್ಕೆ, ಸಮುದಾಯಕ್ಕಾಗಿ ಯಾರು ದುಡಿದಿಲ್ಲವೋ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ನಮ್ಮ ಸಮುದಾಯಕ್ಕಾಗಿ ಶ್ರಮಿಸಿದವರಿಗೆ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ಸಿಗುತ್ತೆ ಎಂಬ ಭರವಸೆಯಲ್ಲಿ ಶೇ.70 ಮಂದಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಸಚಿವ ಸಂಪುಟ ಪುನರಾಚನೆ ಆದಾಗಲಾದರೂ ನಮ್ಮ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಸಿಎಂ ಅವರಿಗೆ ಒತ್ತಾಯಿಸುತ್ತಿದ್ದೇವೆ ಎಂದು ಶ್ರೀಗಳು ಹೇಳಿದರು.

    ಹಿರಿಯ ನಾಯಕನನ್ನು ಗುರುತಿಸಿ ಅದರ ಪ್ರಕಾರ ಬಿಜೆಪಿ ಸಚಿವ ಸ್ಥಾನ ಕೊಡಲಿ, ಅದು ಪಕ್ಷದ ನಿರ್ಧಾರ ಎಂದರು. ಬಳಿಕ ಹಿಂದಿನ ಸರ್ಕಾರದಲ್ಲಿ ನಾನು ವಾಲ್ಮೀಕಿ ಸಮುದಾಯಕ್ಕೆ ಇರುವ ಮೀಸಲಾತಿಯನ್ನು ಹೆಚ್ಚು ಮಾಡಿ ಎಂದು ಆಗ್ರಹಿಸಿದ್ದೆವು. ಅದಕ್ಕೆ ಸರ್ಕಾರ ಸ್ಪಂದಿಸಿ, ಈಗಾಗಲೇ ಏಕ ಸದಸ್ಯ ಆಯೋಗವನ್ನು ರಚಿಸಿದೆ. ನಾವು ಎರಡು ತಿಂಗಳ ಗಡುವು ನೀಡಿದ್ದೇವು. ಅದು ಮುಗಿಯುತ್ತಾ ಬಂದಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸದಿದ್ದರೆ ನಾವು ಮತ್ತೆ ಹೋರಾಟ ಮಾಡುತ್ತೇವೆ ಸಂವಿಧಾನಾತ್ಮಕವಾಗಿ ನ್ಯಾಯ ಪಡೆಯಲು ಮುಂದಾಗುತ್ತೇವೆ ಎಂದು ತಿಳಿಸಿದರು.

    ನಾವು ನೋಡುತ್ತಿದ್ದೇವೆ, ಆಡಳಿತಕ್ಕೆ ಬಂದಿರುವ ಬಹುತೇಕ ಸರ್ಕಾರಗಳು ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿವೆ. ಮತ್ತೆ ನಮ್ಮ ಕಿವಿ ಮೇಲೆ ಹೂವು ಇಡಲು ಬಂದರೆ ನಾವು ಕೇಳಲ್ಲ. ಹೋರಾಟದ ಮೂಲಕ ಪ್ರಾಮಾಣಿಕವಾಗಿ ನಮ್ಮ ಹಕ್ಕನ್ನು ಪಡೆದುಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಯಾವ ಸಮುದಾಯದವರು ಹೆಚ್ಚಾಗಿ ಇರುತ್ತಾರೋ ಅವರಿಗೆ ಹೆಚ್ಚಿನ ಮಂತ್ರಿ ಸ್ಥಾನ ಸಿಗುತ್ತೆ. ಬಸವಣ್ಣ ಅವರ ಸಿದ್ದಾಂತ ಬರೀ ಬಾಯಿಯಲ್ಲಿ ಮಾತ್ರ. ಸಾಮಾಜಿಕ ನ್ಯಾಯ ಎಲ್ಲಿದೆ? ನಾನು ಕೇವಲ ನಮ್ಮ ಸಮುದಾಯಕ್ಕೆ ಮಾತ್ರವಲ್ಲಿ ಎಲ್ಲಾ ಸಮುದಾಯದ ವತಿಯಿಂದ ಕೇಳುತ್ತಿದ್ದೇವೆ. ಎಲ್ಲಾ ಸಮುದಾಯದಲ್ಲಿ ಅವಕಾಶ ವಂಚಿತ ನಾಯಕರಿದ್ದಾರೆ ಅವರಿಗೂ ರಾಜಕೀಯ ಸ್ಥಾನಮಾನ ಸಿಗಬೇಕು. ಎಲ್ಲರಿಗೂ ಸರಿಯಾಗಿ ನ್ಯಾಯ ಸಿಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.