Tag: Department of Women and Child Welfare

  • 600 ಕೋಟಿ ರೂ. ಭ್ರಷ್ಟಾಚಾರ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

    600 ಕೋಟಿ ರೂ. ಭ್ರಷ್ಟಾಚಾರ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ (Department of Women and Child Welfare) 600 ಕೋಟಿ ರೂ.ಗಿಂತಲೂ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ನಟರಾಜ್ ಶರ್ಮಾ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ (Lakshmi Hebbalkar) ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ ನಡೆದಿದೆ. ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ (Nutritious Food) ಸರಬರಾಜಿನಲ್ಲಿ ಅವ್ಯವಹಾರ ನಡೆದಿದೆ. ಅನರ್ಹಗೊಂಡಿರೋ ಸಹಕಾರ ಸಂಸ್ಥೆಗಳಿಂದ ಅಂಗನವಾಡಿಗಳಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡುವ ಟೆಂಡರ್ ನೀಡಿದ್ದಾರೆ. ಬ್ಲಾಕ್ ಲೀಸ್ಟ್ ನಲ್ಲಿರುವ ಕ್ರಿಸ್ಟಿ ಫ್ರೈಡ್ ಗ್ರಾಮ್ ಕಂಪನಿ ಜೊತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಇಲಾಖೆ ಅಧಿಕಾರಿಗಳು ಶಾಮೀಲಾಗಿ ಈ ಟೆಂಡರ್ ನೀಡಿದ್ದಾರೆ ಎಂದು ವಕೀಲರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

    ಗುತ್ತಿಗೆದಾರರಿಂದ ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಗುಣಮಟ್ಟ ಇರುವುದಿಲ್ಲ. ಹೀಗಾಗಿ ಸ್ಥಳೀಯ ಸೇವಾ ಸಂಘಸಂಸ್ಥೆಗಳಿಂದಲೇ ಆಹಾರ ಪೂರೈಕೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದ್ರೆ ಸಚಿವರು ಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ. ಬ್ಲಾಕ್‌ ಲಿಸ್ಟ್‌ನಲ್ಲಿರುವ ಕಂಪನಿಗೆ ಆಹಾರ ಪೂರೈಕೆ ಮಾಡಲು ಟೆಂಡರ್ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ದು ಜಿನ್ನಾ ಮಾನಸಿಕತೆ, ಜಮೀರ್ ಅಹ್ಮದ್ ಹೇಳಿದ್ದು ಸುಳ್ಳಲ್ಲ: ಸಿ.ಟಿ ರವಿ ತಿರುಗೇಟು

    ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನಕಾರ್ಯದರ್ಶಿ ಜೆ.ಸಿ ಪ್ರಕಾಶ್ ಹಾಗೂ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಅಕ್ರಮವಾಗಿ ಟೆಂಡರ್ ನೀಡುವ ಮೂಲಕ ಕಂಪನಿಗಳಿಂದ ಲಕ್ಷ್ಮಿ ಹೆಬ್ಬಾಳ್ಕರ್ 10% ಕಮಿಷನ್ ಸಹ ಪಡೆದಿದ್ದಾರೆ ಎಂಬುದಾಗಿಯೂ ದೂರಿನಲ್ಲಿ ತಿಳಿಸಿದ್ದಾರೆ.

    ಈ ಸಂಬಂಧ `ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿರುವ ವಕೀಲರು, ಟೆಂಡರ್ ಪಡೆಯಲು ನೀಡಿರುವ ವಿಳಾಸದ ಕಂಪನಿಯೇ ಬೆಂಗಳೂರಿನಲ್ಲಿ ಇಲ್ಲ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ವಿಚಾರವಾಗಿ ಸ್ಥಳಿಯ ಸಂಸ್ಥೆಗಳಿಗೆ ಟೆಂಡರ್ ನೀಡಬೇಕು ಎಂದು ಕೋರ್ಟ್ ಹೇಳಿದೆ. ಈ ನಿಯಮ ಕೂಡ ಉಲ್ಲಂಘನೆಯಾಗಿದೆ. 2011ರಲ್ಲಿ ಕ್ರಿಸ್ಟಿಫ್ರೈಡ್ ಕಂಪನಿಯಿಂದ ಅಂಗನವಾಡಿಗಳಿಗೆ ಆಹಾರ ಪೂರೈಕೆ ಮಾಡಲಾಗುತ್ತಿತ್ತು. ಆದ್ರೆ ಗುಣಮಟ್ಟ ಕಡಿಮೆಯಿದ್ದ ಕಾರಣ ಈ ಕಂಪನಿಯನ್ನು ಬ್ಲಾಕ್ ಲಿಸ್ಸ್‌ಗೆ ಸೇರಿಸಲಾಯಿತು. ಆದರೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕ್ರಿಸ್ಟಿ ಪ್ರೈಡ್ ಕಂಪನಿಗಳ ಅಂಡರ್ ನಲ್ಲಿ ಬರುವ ಮೂರು ಕಂಪನಿಗಳಿಗೆ ಟೆಂಡರ್ ನೀಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾಸಕಾಂಗ ಸಭೆಗೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ- ಸಭೆ ಬಹಿಷ್ಕರಿಸಿದ ಇಬ್ಬರು ಶಾಸಕರು

    ಟೆಂಡರ್ ನೀಡಿರುವ ಮೂರು ಕಂಪನಿಗಳು BISಗಳನ್ನ ಹೊಂದಿದ್ದರೂ ಸರಿಯಾದ ತಾಂತ್ರಿಕ ವ್ಯವಸ್ಥೆ, ಲ್ಯಾಬ್ ಇಲ್ಲ. ಕಂಪನಿಗಳು ನೀಡಿರುವ ವಿಳಾಸ ಚೆಕ್ ಮಾಡಿದಾಗ ಅಲ್ಲಿ ಯಾವುದೇ ತಾಂತ್ರಿಕ ತಂಡ ಇಲ್ಲ. ಬೆಂಗಳೂರು ವಿಳಾಸದಲ್ಲಿ ಪರಿಶೀಲನೆ ಮಾಡಿದ್ರೆ ಆ ಹೆಸರಿನ ಕಂಪನಿಯೇ ಇಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ 10% ಕಮಿಷನ್ ನೀಡಿ ಆರ್ಡರ್ ಪಡೆಯಲಾಗಿದೆ ಎಂಬ ಮಾಹಿತಿ ಇದೆ. ಕಂಪನಿಗಳ ಜೊತೆ ಡಿಸೆಂಬರ್ 12 , 2022 ರಲ್ಲಿ ಅಗ್ರಿಮೆಂಟ್ ಆಗಿದೆ. 2023ರ ಅಕ್ಟೋಬರ್ 21ರಂದು ಆಹಾರ ಪೂರೈಕೆಗೆ ಆರ್ಡರ್ ನೀಡಲಾಗಿದೆ. ಕಮಿಷನ್‌ ಪಡೆದು ತಿಂಗಳಿಗೆ 150-200 ಕೋಟಿ ಮೌಲ್ಯದ ಆರ್ಡರ್ ನೀಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

  • ಲಾಕ್‍ಡೌನ್ ವೇಳೆ ಚಾಮರಾಜನಗರದಲ್ಲಿ 33 ಬಾಲ್ಯ ವಿವಾಹ ತಡೆ

    ಲಾಕ್‍ಡೌನ್ ವೇಳೆ ಚಾಮರಾಜನಗರದಲ್ಲಿ 33 ಬಾಲ್ಯ ವಿವಾಹ ತಡೆ

    – ಸದ್ದಿಲ್ಲದೆ 80ಕ್ಕೂ ಅಧಿಕ ವಿವಾಹಗಳು ನಡೆದಿರುವ ಶಂಕೆ

    ಚಾಮರಾಜನಗರ: ಎಷ್ಟೇ ಅರಿವು ಮೂಡಿಸಿದರೂ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಲ್ಲುತ್ತಿಲ್ಲ. ಪೋಷಕರು ಕದ್ದುಮುಚ್ಚಿ ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ವಿವಾಹ ಮಾಡುತ್ತಿದ್ದಾರೆ. ಅದರಲ್ಲೂ ಈ ವರ್ಷ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲೇ ಹೆಚ್ಚಿನ ಬಾಲ್ಯವಿವಾಹಗಳು ನಡೆದಿರುವುದು ಬೆಳಕಿಗೆ ಬಂದಿದೆ.

    ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅನಕ್ಷರತೆ, ಅರಿವಿನ ಕೊರತೆ, ಮಕ್ಕಳು ದಾರಿ ತಪ್ಪುವ ಭಯದಿಂದಾಗಿ ಪೋಷಕರು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ವಿವಾಹ ಮಾಡುತ್ತಿದ್ದಾರೆ. ಕಳೆದ ಸಾಲಿನಲ್ಲಿ 2019ರ ಏಪ್ರಿಲ್ ನಿಂದ 2020ರ ಮಾರ್ಚ್ ವರೆಗಿನ ಅವಧಿಯಲ್ಲಿ 22 ಬಾಲ್ಯ ವಿವಾಹ ತಡೆಗಟ್ಟಲಾಗಿತ್ತು. ಆದರೆ ಈ ವರ್ಷ ಕೇವಲ ಐದು ತಿಂಗಳ ಅವಧಿಯಲ್ಲಿ 33 ಬಾಲ್ಯ ವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ. ಲಾಕ್‍ಡೌನ್ ಸಂದರ್ಭವನ್ನೇ ಬಳಸಿಕೊಂಡು ಕೆಲ ಪೋಷಕರು ತಮ್ಮ ಮಕ್ಕಳಿಗೆ ಕದ್ದುಮುಚ್ಚಿ ಬಾಲ್ಯ ವಿವಾಹ ಮಾಡಲು ಮುಂದಾಗಿರುವುದು ಕಂಡು ಬಂದಿದೆ.

    ಕಳೆದ ಸಾಲಿನಲ್ಲಿ ಮೂರು ಎಫ್‍ಐಆರ್ ದಾಖಲಿಸಲಾಗಿದೆ. ಈ ಸಾಲಿನಲ್ಲಿ ಈ ವರೆಗೆ ಒಂದು ಎಫ್‍ಐಆರ್ ದಾಖಲಿಸಲಾಗಿದೆ. ಆದರೆ ಬೆಳಕಿಗೆ ಬಾರದೆ 80ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ನಡೆದು ಹೋಗಿರುವ ಶಂಕೆ ಇದೆ. ಹೀಗೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಮದುವೆ ಮಾಡುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಪ್ರಾಪ್ತ ವಯಸ್ಸಿಗೆ ಹೆಣ್ಣು ಮಕ್ಕಳು ಗರ್ಭಿಣಿಯಾಗುವುದರಿಂದ ಹುಟ್ಟುವ ಮಗು ಸಹ ಆನಾರೋಗ್ಯಕ್ಕೀಡಾಗುವ ಹಾಗೂ ತಾಯಿ ನಾನಾ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಷ್ಟೇ ಅರಿವು ಮೂಡಿಸಿದರೂ ಜನ ಮಾತ್ರ ಕ್ಯಾರೆ ಎನ್ನುತ್ತಿಲಲ್ಲ.

    ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ಅರಿವು ಮೂಡಿಸುತ್ತಿವೆ. ಆದರೆ ಇದ್ಯಾವುದನ್ನೂ ಜನ ಕೇಳುತ್ತಿಲ್ಲ. ಹಿಂದುಳಿದ ಸಮುದಾಯಗಳಲ್ಲಿ ಹೆಚ್ಚಿನ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬರುತ್ತಿದೆ.

  • ಗಮನಕ್ಕೆ ತರದೇ ಸಿಬ್ಬಂದಿಗೆ ಪದೋನ್ನತಿ ಆದೇಶ – ನಿರ್ದೇಶಕರ ನಡೆಗೆ ಸಚಿವೆ ಶಶಿಕಲಾ ಜೊಲ್ಲೆ ಗರಂ

    ಗಮನಕ್ಕೆ ತರದೇ ಸಿಬ್ಬಂದಿಗೆ ಪದೋನ್ನತಿ ಆದೇಶ – ನಿರ್ದೇಶಕರ ನಡೆಗೆ ಸಚಿವೆ ಶಶಿಕಲಾ ಜೊಲ್ಲೆ ಗರಂ

    ಬೆಂಗಳೂರು: ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಗೆ ಶಶಿಕಲಾ ಜೊಲ್ಲೆಯವರು ಸಚಿವೆಯಾಗಿದ್ದರೂ ಅವರ ಅರಿವಿಗೆ ಬಾರದೇ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಾ ಎಂಬ ಪ್ರಶ್ನೆಯೊಂದು ಉದ್ಭವಿಸಿದೆ. ಗಮನಕ್ಕೆ ತರದೇ ಸಿಬ್ಬಂದಿಗೆ ಪದನ್ನೋತಿ ಆದೇಶ ನೀಡಿರುವ ಇಲಾಖೆಯ ನಿರ್ದೇಶಕರ ನಡೆಗೆ ಸಚಿವ ಶಶಿಕಲಾ ಜೊಲ್ಲೆ ಗರಂ ಆಗಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆಯವರ ಗಮನಕ್ಕೆ ತರದೇ ಕೆಲವರನ್ನು ಮೇಲ್ವಿಚಾರಕರ ಹುದ್ದೆಯಿಂದ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಪದೋನ್ನತಿ ನೀಡಿ, ಸ್ಥಳ ನಿಯುಕ್ತಿ ಮಾಡಿ ಆದೇಶ ನೀಡಲಾಗಿದೆ. ಇಲಾಖೆ ನಿರ್ದೇಶಕರಾದ ಕೆ.ಎ.ದಯಾನಂದ್ ಈ ಆದೇಶ ಹೊರಡಿಸುವ ಮೂಲಕ ಸಚಿವೆ ಶಶಿಕಲಾ ಜೊಲ್ಲೆ ಅವರ ಸಿಟ್ಟಿಗೆ ಗುರಿಯಾಗಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಈ ಕುರಿತು ಸಚಿವೆ ಶಶಿಕಲಾ ಜೊಲ್ಲೆಯವರು ಇಂದು ಪತ್ರ ಬರೆದು ಖಡಕ್ ಸೂಚನೆ ಕೊಟ್ಟಿದ್ದಾರೆ. ಈ ಕೂಡಲೇ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಪದೋನ್ನತಿ ಕೊಟ್ಟು ನಿರ್ದೇಶಕರು ಹೊರಡಿಸಿರುವ ಆದೇಶಕ್ಕೆ ತಡೆ ಕೊಡಬೇಕು. ಅಲ್ಲದೇ ಆದೇಶಕ್ಕೆ ತಡೆ ಕೊಟ್ಟು ಕಡತವನ್ನು ತಮ್ಮ ಅನುಮೋದನೆಗೆ ಕಳಿಸಿಕೊಡಬೇಕೆಂದು ನಿರ್ದೇಶಕರಿಗೆ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದ್ದಾರೆ.

    ಇನ್ಮುಂದೆ ಇಲಾಖೆಯ ಯಾವುದೇ ಅಧಿಕಾರಿ/ಸಿಬ್ಬಂದಿ ವರ್ಗಾವಣೆ/ಸ್ಥಳ ನಿಯುಕ್ತಿ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ತಮ್ಮ ಅನುಮೋದನೆ ಪಡೆದೇ ಮುಂದಿನ ಕ್ರಮ ಕೈಗೊಳ್ಳಬೇಕೆಂದೂ ಸಚಿವೆ ಶಶಿಕಲಾ ಜೊಲ್ಲೆ ಇಲಾಖೆ ನಿರ್ದೇಶಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿಂದೆಯೇ ಈ ರೀತಿಯ ಸೂಚನೆ ಕೊಟ್ಟಿದ್ದರೂ ಇಲಾಖೆ ನಿರ್ದೇಶಕರು ಸಚಿವರ ನಿರ್ದೇಶನ ಉಲ್ಲಂಘಿಸಿ ಕೆಲವರಿಗೆ ಪದೋನ್ನತಿ ಕೊಟ್ಟಿರುವುದಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಪತ್ರದಲ್ಲಿ ಇಲಾಖೆ ನಿರ್ದೇಶಕರ ವಿರುದ್ಧ ಕಿಡಿ ಕಾರಿದ್ದಾರೆ.