Tag: Department of Social Welfare

  • ಬರ್ತ್‌ಡೇಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಹೋಟೆಲ್‌ಗೆ ಕರೆದೊಯ್ದು ಮೋಜು, ಮಸ್ತಿ – ವಾರ್ಡನ್, ಅಡುಗೆ ಕೆಲಸದಾಕೆಗೆ ನೋಟಿಸ್

    ಬರ್ತ್‌ಡೇಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಹೋಟೆಲ್‌ಗೆ ಕರೆದೊಯ್ದು ಮೋಜು, ಮಸ್ತಿ – ವಾರ್ಡನ್, ಅಡುಗೆ ಕೆಲಸದಾಕೆಗೆ ನೋಟಿಸ್

    ವಿಜಯಪುರ: ಬರ್ತ್‌ಡೇಗಾಗಿ ಹಾಸ್ಟೆಲ್‌ನ ವಾರ್ಡನ್ ಹಾಗೂ ಅಡುಗೆ ಕೆಲಸದಾಕೆ ಅಲ್ಲಿನ ವಿದ್ಯಾರ್ಥಿನಿಯರನ್ನು ಹೋಟೆಲ್‌ಗೆ ಕರೆದೊಯ್ದು ಪಾರ್ಟಿ ಮಾಡಿಸಿದ್ದರು. ಇದರ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ (Department of Social Welfare) ಉಪನಿರ್ದೇಶಕರು ಎಚ್ಚೆತ್ತುಕೊಂಡು ಇಬ್ಬರಿಗೂ ನೋಟಿಸ್ ನೀಡಿದ್ದಾರೆ.

    ಬಡ ಪೋಷಕರು ಎಲ್ಲರಂತೆ ನಮ್ಮ ಮಕ್ಕಳು ವಿದ್ಯಾವಂತರಾಗಬೇಕು ಅಂತಾ ಕನಸು ಕಂಡಿರುತ್ತಾರೆ. ಆದ್ರ‍್ರೆ ದೊಡ್ಡ ನಗರಗಳಲ್ಲಿ ಶಾಲೆ, ಕಾಲೇಜುಗಳಿಗೆ ಫೀ ಕಟ್ಟಿ, ವಸತಿ ಸೌಲಭ್ಯ ಒದಗಿಸಲು ಸಾಧ್ಯವಾಗದೆ ಪರದಾಡುತ್ತಾರೆ. ಇಂತಹ ಬಡ ಪಾಲಕರ ಅನುಕೂಲಕ್ಕಾಗಿಯೇ ಸರ್ಕಾರ ವಸತಿ ನಿಲಯಗಳನ್ನು ನಿರ್ಮಿಸಿರುತ್ತದೆ. ಆದರೆ ಈ ವಸತಿ ಶಾಲೆಯ ಸಿಬ್ಬಂದಿ ಅಲ್ಲಿನ ನಿಯಮಗಳನ್ನು ಗಾಳಿಗೆ ತೂರಿ, ಬಡ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುವಂತಹ ಕೆಲಸ ಮಾಡುತ್ತಿದ್ದಾರೆ.ಇದನ್ನೂ ಓದಿ: ನಾಳೆಯಿಂದ 2 ದಿನ `ವಿದ್ಯಾಮಂದಿರʼ – ನಿಮ್ಮ PG ಶಿಕ್ಷಣ ಕನಸು ನನಸಾಗಿಸಲು ಬನ್ನಿ

    ವಿಜಯಪುರ ನಗರದ ರಾಜಕುಮಾರ್ ಲೇಔಟ್‌ನಲ್ಲಿರುವ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಈ ಹಾಸ್ಟೆಲ್ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿದೆ. ಈ ವಸತಿ ನಿಲಯದ ವಾರ್ಡನ್ ಶಕುಂತಲಾ ರಜಪೂತ್, ಯಾವುದೇ ಅನುಮತಿ ಪಡೆಯದೇ ಅಲ್ಲಿನ ವಿದ್ಯಾರ್ಥಿನಿಯರನ್ನು ಹುಟ್ಟುಹಬ್ಬದ ಪಾರ್ಟಿಗೆ ಕೊಂಡೊಯ್ದಿದ್ದಾರೆ.

    ಕಳೆದ ಶನಿವಾರ ಈ ವಸತಿ ನಿಲಯದ ಅಡುಗೆಕೆಲಸದಾಕೆ ರಿಜ್ವಾನ್ ಮುಲ್ಲಾಳ ಹುಟ್ಟುಹಬ್ಬ ಇತ್ತು. ಹೀಗಾಗಿ ಬರ್ತ್‌ಡೇ ಆಚರಣೆಗೆಂದು ರಾತ್ರಿ 7 ಗಂಟೆಗೆ ಹೋಟಲ್‌ವೊಂದಕ್ಕೆ ವಿದ್ಯಾರ್ಥಿನಿಯರನ್ನ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ಮೋಜು ಮಸ್ತಿ ಮಾಡಿ, ಕುಣಿದು ಕುಪ್ಪಳಿಸಿ ಪಾರ್ಟಿ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ಮೂಲಕ ವಸತಿ ನಿಲಯದ ವಾರ್ಡನ್ ಹಾಗೂ ಅಡುಗೆ ಕೆಲಸದಾಕೆ ಹಾಸ್ಟೆಲ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಹಾಸ್ಟೆಲ್‌ನಿಂದ ಹೊರಗೆ ಹೋಗಿದ್ದಾಗ ಯಾವುದಾದ್ರೂ ಅವಘಡ ಸಂಭವಿಸಿದ್ದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸ್ತಿದ್ದಾರೆ.

    ಇನ್ನೂ ಈ ಅಡುಗೆ ಕೆಲಸದಾಕೆ ಈ ಹಿಂದೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ವಸತಿ ನಿಲಯದಲ್ಲೂ ಇದೆ ರೀತಿ ಹುಟ್ಟುಹಬ್ಬ ಆಚರಿಸಿ ಅಮಾನತು ಆಗಿದ್ದಳಂತೆ. ಇದೀಗ ಮತ್ತೆ ಅಂತಹದೇ ತಪ್ಪು ಮಾಡಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಮಾಹಿತಿ ತಿಳಿದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಎಚ್ಚೆತ್ತುಕೊಂಡಿದ್ದು, ವಾರ್ಡನ್ ಹಾಗೂ ಅಡುಗೆ ಕೆಲಸದಾಕೆಗೆ ನೋಟಿಸ್ ನೀಡಿದ್ದಾರೆ. 3 ದಿನದಲ್ಲಿ ನೋಟಿಸ್‌ಗೆ ಉತ್ತರಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಮಹೇಶ್‌ ಶೆಟ್ಟಿ ತಿಮರೋಡಿ, ಮಟ್ಟಣ್ಣನವರ್, ಪುನೀತ್‌ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌ ದಾಖಲು

  • ವಿದ್ಯಾರ್ಥಿಗಳಿಂದ ಮಲಗುಂಡಿ ಸ್ವಚ್ಛ ಪ್ರಕರಣ – ಐವರ ಬಂಧನ, ವಾರ್ಡನ್‌ಗೆ ಜಾಮೀನು

    ವಿದ್ಯಾರ್ಥಿಗಳಿಂದ ಮಲಗುಂಡಿ ಸ್ವಚ್ಛ ಪ್ರಕರಣ – ಐವರ ಬಂಧನ, ವಾರ್ಡನ್‌ಗೆ ಜಾಮೀನು

    ಕೋಲಾರ: ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ (Toilet Clean) ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ (Siddaramaiah) ಸೂಚನೆಯಂತೆ 5 ಜನ ಆರೋಪಿಗಳನ್ನು ಮಾಸ್ತಿ ಪೊಲೀಸರು ಬಂಧಿಸಿದ್ದಾರೆ.

    ಕೋಲಾರ (Kolar) ಜಿಲ್ಲೆಯ ಮಾಲೂರು ತಾಲೂಕು ಯಲವಳ್ಳಿ ಬಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಇದೇ ತಿಂಗಳ 17ರಂದು ಮಲಗುಂಡಿ ಸ್ವಚ್ಛಗೊಳಿಸಿ, ಮಕ್ಕಳ ಮೇಲೆ ದೌರ್ಜನ್ಯವೆಸಗಲಾಗಿತ್ತು. ಈ ಘಟನೆ ಬೆಳಕಿಗೆ ಬಂದ ಬಳಿಕ ಎಚ್ಚೆತ್ತ ಅಧಿಕಾರಿಗಳು ಎಲ್ಲಾ ಶಿಕ್ಷಕರು, ಸಿಬ್ಬಂದಿಯನ್ನು ವರ್ಗಾವಣೆ ಮಾಡಿ, 5 ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಇದನ್ನೂ ಓದಿ: ಮಹಿಳೆಯರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಲೂಟಿ- ಆರೋಪಿ ಅಂದರ್

    ಈ ಹಿಂದೆ ಪ್ರಾಂಶುಪಾಲೆ ಭಾರತಮ್ಮ, ಚಿತ್ರಕಲಾ ಶಿಕ್ಷಕ ಮುನಿಯಪ್ಪ, ಸಹ ಶಿಕ್ಷಕ ಅಭಿಷೇಕ್‌ನನ್ನು ಬಂಧಿಸಲಾಗಿತ್ತು. ಇಂದು ವಸತಿ ಶಾಲೆಯ ವಾರ್ಡನ್ ಮಂಜುನಾಥ್ ಹಾಗೂ ಡಿ ಗ್ರೂಪ್ ಸಿಬ್ಬಂದಿ ಕಲಾವತಿ ಎಂಬವರನ್ನು ಬಂಧಿಸಲಾಗಿದೆ. ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ ಹಿನ್ನೆಲೆ 5 ಜನರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಹಾಗೂ ಸಹಾಯಕ ನಿರ್ದೇಶಕ ಶಿವಕುಮಾರ್ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನೂ ಓದಿ: ವ್ಯಕ್ತಿಗೆ ಇರಿದಿದ್ದ ಚಾಕುವಿನಿಂದ್ಲೇ ಪೊಲೀಸರ ಮೇಲೆ ಹಲ್ಲೆಗೆ ಯತ್ನ- ರೌಡಿಶೀಟರ್ ಕಾಲಿಗೆ ಗುಂಡೇಟು

    ಪೋಕ್ಸೊ, ಜಾತಿ ನಿಂದನೆ ಹಾಗು ಮಲ ಗುಂಡಿಗೆ ವಿದ್ಯಾರ್ಥಿಗಳನ್ನು ಇಳಿಸಿ ಸ್ವಚ್ಛಗೊಳಿಸಿದ ಹಿನ್ನೆಲೆ ಮೂರು ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಅದರಂತೆ 5 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಸದ್ಯ ವಾರ್ಡನ್ (Wraden) ಮಂಜುನಾಥ್ ನ್ಯಾಯಾಲಯದಿಂದ ಜಾಮೀನು ಪಡೆದಿದ್ದು, ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಯಾಣಿಸ್ತಿದ್ದ ಕಾರು ಅಪಘಾತ

  • ಶ್ರೀರಾಮಚಂದ್ರನಿಗೂ ಟೀಕೆಗಳು ತಪ್ಪಲಿಲ್ಲ: ಬೊಮ್ಮಾಯಿ

    ಶ್ರೀರಾಮಚಂದ್ರನಿಗೂ ಟೀಕೆಗಳು ತಪ್ಪಲಿಲ್ಲ: ಬೊಮ್ಮಾಯಿ

    ಬೆಂಗಳೂರು: ಟೀಕೆ ಟಿಪ್ಪಣಿಗಳು ಬಂದರೂ ಕರ್ತವ್ಯದಿಂದ ವಿಮುಖರಾಗಬಾರದು. ಕರ್ತವ್ಯದಲ್ಲಿ ತಲ್ಲೀನರಾದವರಿಗೆ ಯಾವುದೂ ಬಾಧಕವಾಗುವುದಿಲ್ಲ. ಶ್ರೀರಾಮಚಂದ್ರನಿಗೂ ಟೀಕೆಗಳು ತಪ್ಪಲಿಲ್ಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಸಮಾಜ ಕಲ್ಯಾಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಮಿತ್ರ ಸಹಾಯ ವಾಣಿ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸಂದೇಶ ರವಾನೆ ಮಾಡಿದರು.

    ಕರ್ತವ್ಯ ಮಾಡದೆ ಗತಿಸಿ ಹೋದ ಕಾಲ ಮರಳಿ ಬರುವುದಿಲ್ಲ. ಅದರ ಬಗ್ಗೆ ಮಾತನಾಡುವುದರಿಂದ ಪ್ರಯೋಜನವಿಲ್ಲ. ಪ್ರಸ್ತುತವಾಗಿರುವ ನಮ್ಮ ಗುರಿ ಸಾಧನೆಯ ಛಲ ಮುಖ್ಯ. ವರ್ತಮಾನದಲ್ಲಿ ಮಾಡುವ ಕೆಲಸ ಭವಿಷ್ಯ ನಿರ್ಮಿಸುತ್ತದೆ. ಸಮಯಕ್ಕೆ ತಕ್ಕ ಹಾಗೆ ಕಾರ್ಯಕ್ರಮಗಳನ್ನು ಮುಟ್ಟಿಸಬೇಕು. ಸರಿಯಾದ ಮಾರ್ಗಸೂಚಿಗಳು ಇಲ್ಲದೆ ಕೆಲವು ಕಾರ್ಯಕ್ರಮಗಳು ಮುಟ್ಟುವುದಿಲ್ಲ ಎಂದರು.

    ದೀನ ದಲಿತರಿಗೆ ನೆರವು: ದೀನದಲಿತರ ಶ್ರೇಯೋಭಿವೃದ್ಧಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಣ್ಣೀರನ್ನು ಒರೆಸುವುದು ನನಗೆ ಮುಖ್ಯ. ಅವರು ಸ್ವಾಭಿಮಾನದ ಬದುಕು ನಡೆಸುವುದು ಬಹಳ ಮುಖ್ಯ. ಇದರಲ್ಲಿ ಯಾವುದೇ ರೀತಿಯ ರಾಜಿಯೂ ಇಲ್ಲ ಹಾಗೂ ಮುಲಾಜೂ ಇಲ್ಲ ಎಂದು ಎಚ್ಚರಿಕೆ ನೀಡಿದರು.

    ರಾಜ್ಯದಲ್ಲಿ ಕಾನೂನುಗಳಿವೆ, ಆ ಪ್ರಕಾರ ನಡೆದುಕೊಳ್ಳಲು ಏನು ತೊಂದರೆ? ನೀವು ಸರಿಯಾಗಿ ಕೆಲಸ ಮಾಡಿದರೆ ಇಡೀ ಕರ್ನಾಟಕದ ದೀನದಲಿತರು ಸಂತೋಷ ಪಡುತ್ತಾರೆ. ಅವರ ಆಕಾಂಕ್ಷೆಗಳಿಗೆ ರೆಕ್ಕೆಪುಕ್ಕ ಬರುತ್ತವೆ. ಆ ಸಂಕಲ್ಪವನ್ನು ತೊಡಬೇಕು. ನೀವು ಕೇವಲ ನಿಮ್ಮ ಕೆಲಸ ಮಾಡುವುದಷ್ಟೇ ಅಲ್ಲ, ಅಧಿಕಾರವನ್ನು ಜನರ ಪರವಾಗಿ ಬಳಕೆ ಮಾಡುವ ಕರ್ತವ್ಯ ನಿಮ್ಮದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಲು ಸಾಮಥ್ರ್ಯ ಮತ್ತು ಬದ್ಧತೆ ಅಗತ್ಯ. ಜನ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಬೇಕು ಹಾಗೂ ಅವನ ಜೀವನದ ಗುಣಮಟ್ಟವನ್ನು ಹೆಚ್ಚಿಸಬೇಕು ಎನ್ನುವ ಕಲ್ಪನೆ ಸಾಕಾರಗೊಳ್ಳುವ ಮೊದಲು ಇಲಾಖೆಗೆ ಸಾಮಥ್ರ್ಯ ಇರಬೇಕು. ಅದರ ಜೊತೆಗೆ ಬದ್ಧತೆ ಇರಬೇಕು ಎಂದು ತಿಳಿಸಿದರು.

    ಬದಲಾವಣೆಯ ಪರ್ವ: ಆಡಳಿತದ ವ್ಯಾಖ್ಯಾನ ಬದಲಾಗಿದೆ. ಪ್ರಜಾಪ್ರಭುತ್ವದ ಆಕಾಂಕ್ಷೆಗಳು ಬದಲಾಗಿವೆ. ಬದಲಾವಣೆಯ ಈ ಪರ್ವ ಕಾಲದಲ್ಲಿ ನಾವೂ ಕೂಡ ಬದಲಾವಣೆಗೆ ಹೊಂದಿಕೊಂಡರೆ ಮಾತ್ರ ಪ್ರಸ್ತುತವಾಗುತ್ತೇವೆ. ಪ್ರಸ್ತುತವಾಗುವುದರ ಜೊತೆಗೆ ನಮ್ಮನ್ನು ನಂಬಿದ ಜನರಿಗೆ ನ್ಯಾಯವನ್ನು ಕೊಡಲು ಸಾಧ್ಯ. ಇದನ್ನು ನಾವು ಮಾಡದಿದ್ದರೆ, ಎಲ್ಲವೂ ಇದ್ದು ಇಲ್ಲದಂತಾಗುತ್ತದೆ. ಸರ್ಕಾರ ಪ್ರತಿವರ್ಷ ಅನುದಾನವನ್ನು ಕೊಡುತ್ತಿರುತ್ತದೆ. ಅದರ ಸದುಪಯೋಗವಾಗವು ಸರಿಯಾದ ಸಮಯದಲ್ಲಿ ಆಗಬೇಕು. ಆಗ ಮಾತ್ರ ಕಾರ್ಯಕ್ರಮದ ಉದ್ದೇಶ ಈಡೇರುತ್ತದೆ ಎಂದರು.

    ಕಷ್ಟದಲ್ಲಿರುವವರಿಗೆ, ಬಡವರಿಗೆ, ಅವಮಾನಕ್ಕೆ ಒಳಗಾದವರಿಗೆ, ತುಳಿತಕ್ಕೆ ಒಳಗಾದವರಿಗೆ ಕೈ ಹಿಡಿದು ಮೇಲೆತ್ತುವ ಸೌಭಾಗ್ಯ ಒದಗಿದೆ. ಇದನ್ನು ನಾನು ಪ್ರಾಮಾಣಿಕವಾಗಿ ಮಾಡಬೇಕು ಎನ್ನುವ ಬದ್ಧತೆ ಬಂದರೆ ಈ ಸಮಾಜ ಖಂಡಿತ ಉದ್ಧಾರವಾಗುತ್ತದೆ. ನೀವು ನಿಮ್ಮ ಕರ್ತವ್ಯ, ಸರ್ಕಾರದ ಧ್ಯೇಯೋದ್ದೇಶಗಳು ಹಾಗೂ ಕಟ್ಟ ಕಡೆಯ ಮನುಷ್ಯನ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

    ಅಸಡ್ಡೆ ಒಪ್ಪಲು ಸಾಧ್ಯವಿಲ್ಲ: ವಿಳಂಬ ಧೋರಣೆ, ಅಸಡ್ಡೆ ಅಸಹಕಾರವನ್ನು ಎಂದೂ ಒಪ್ಪಲು ಸಾಧ್ಯವಿಲ್ಲ. ಅನುದಾನ ಒದಗಿಸಿದರೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತದೆ. ನಮ್ಮ ಸರ್ಕಾರ ವಿಳಂಬ ಧೋರಣೆ, ಅಸಡ್ಡೆ, ಅಸಹಕಾರವನ್ನು ಎಂದೂ ಒಪ್ಪಲು ಸಾಧ್ಯವಿಲ್ಲ ಎಂದು ವಾರ್ನಿಂಗ್ ನೀಡಿದರು.

    ದಾಖಲೆಗಳ ಸರಳೀಕರಣವಾಗಬೇಕು. ಇಲಾಖೆಗಳ ಸಮನ್ವಯ, ನೌಕರರಲ್ಲಿ ತಾಳಮೇಳ ಇವೆಲ್ಲವುಗಳ ಆಮೂಲಾಗ್ರ ಬದಲಾವಣೆಯ ಅವಶ್ಯಕತೆ ಇದೆ. ಅತ್ಯಂತ ಸರಳವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಬದಲಾವಣೆ ಕಾಲ ಪ್ರಾರಂಭವಾಗಿದೆ, ಸಬೂಬುಗಳ ಕಾಲ ಮುಗಿದಿದೆ: ಬೊಮ್ಮಾಯಿ

    ಸ್ವಾತಂತ್ರ್ಯ ಬಂದ ಮೇಲೆ 75 ವರ್ಷಗಳಾಗಿವೆ. ಸರ್ಕಾರದ ಸಹಾಯವಿಲ್ಲದೆ ಅವರು ಏನೂ ಮಾಡಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ಅವರಿಗೆ ನ್ಯಾಯ ಸಿಕ್ಕಿರುವುದಿಲ್ಲ. ಸರ್ಕಾರವೇ ನ್ಯಾಯ ಕೊಡಬೇಕು. ನ್ಯಾಯ ಕೊಡುವುದಷ್ಟೇ ಅಲ್ಲ ಈ ಸಂದೇಶವನ್ನು ಕೊಡಬೇಕು. ನಮ್ಮ ಸರ್ಕಾರ ವಿಳಂಬ ಧೋರಣೆ, ಅಸಡ್ಡೆ ಅಸಹಕಾರವನ್ನು ಎಂದೂ ಒಪ್ಪಲು ಸಾಧ್ಯವಿಲ್ಲ ಎಂದರು.

    ಈ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರಾಗಿ ಕೆಲಸ ಮಾಡುವುದು ಸುಲಭವಲ್ಲ. ಬಹಳಷ್ಟು ಬಾರಿ ಕ್ಲಿಷ್ಟಕರ ಸಂದರ್ಭಗಳು ಬರುತ್ತವೆ. ಸ್ಪಷ್ಟವಾದ ವಿಚಾರಗಳಿಲ್ಲದ ನಾಯಕತ್ವದಿಂದ ಈ ಸಂದರ್ಭಗಳು ಬರುತ್ತವೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ನಾಯಕತ್ವವಾಗಲಿ, ವ್ಯವಸ್ಥೆಯಾಗಲಿ ಉದ್ಧಾರ ಮಾಡಲು ಸಾಧ್ಯವಿಲ್ಲ. ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಅನುಮಾನ, ಅವಕಾಶವಿಲ್ಲ. ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗುವುದು. ಅದರಂತೆ ಕೆಲಸ ಮಾಡಬೇಕು. ನಿಮ್ಮನ್ನು ಸಂಪೂರ್ಣವಾಗಿ ಸಂರಕ್ಷಿಸುವುದು ನಮ್ಮ ಕೆಲಸ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಪ್ರಚಾರದ ಹುಚ್ಚು: ಸುನಿಲ್ ಕುಮಾರ್ ತಿರುಗೇಟು

    ಜನ ಹತಾಶರಾಗಬಾರದು. ಅವರು ಬಂದಾಗ ಸ್ವಲ್ಪ ಕೋಪದಲ್ಲಿ ಮಾತನಾಡುತ್ತಾರೆ. ನಾವು ಸಮಸ್ಯೆಗಳನ್ನು ಚರ್ಚೆ ಮಾಡುತ್ತೇವೆ. ಸಮುದಾಯಗಳು ಸಮಸ್ಯೆಗಳೊಂದಿಗೆ ಬದುಕುತ್ತಾರೆ. ಸಮಸ್ಯೆಯನ್ನು ಚರ್ಚೆ ಮಾಡುವುದಕ್ಕೂ ಶ್ರಮಪಟ್ಟು ಕೆಲಸ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ ಎಂದು ಹೇಳಿದರು.

  • ಬದಲಾವಣೆ ಕಾಲ ಪ್ರಾರಂಭವಾಗಿದೆ, ಸಬೂಬುಗಳ ಕಾಲ ಮುಗಿದಿದೆ: ಬೊಮ್ಮಾಯಿ

    ಬದಲಾವಣೆ ಕಾಲ ಪ್ರಾರಂಭವಾಗಿದೆ, ಸಬೂಬುಗಳ ಕಾಲ ಮುಗಿದಿದೆ: ಬೊಮ್ಮಾಯಿ

    ಬೆಂಗಳೂರು: ಜನ ಕಲ್ಯಾಣಕ್ಕಾಗಿ ವಿವಿಧ ನಿಗಮಗಳಿಗೆ ನೀಡಲಾಗಿರುವ ಅನುದಾನ ನೇರವಾಗಿ ಫಲಾನುಭವಿಗಳಿಗೆ ಮುಟ್ಟಬೇಕೆನ್ನುವ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿದ್ದು, ಇದನ್ನು ನಾನೇ ಸ್ವತ: ಮೇಲ್ವಿಚಾರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಲ್ಯಾಣ ಮಿತ್ರ ಸಹಾಯವಾಣಿ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ಕೊಟ್ಟರು. ಇದನ್ನೂ ಓದಿ:  ಪಿಎಸ್‍ಐ ಅಕ್ರಮ – ಕೈ ನಾಯಕರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ: ಅಶ್ವಥ್ ನಾರಾಯಣ

    ಬದಲಾವಣೆಯ ಕಾಲ ಪ್ರಾರಂಭವಾಗಿದ್ದು, ಸಬೂಬುಗಳ ಕಾಲ ಮುಗಿದಿದೆ. ಶಿಕ್ಷಣ, ಆದಾಯ ಹೆಚ್ಚಳ, ಸ್ವಾಭಿಮಾನಿ ಬದುಕಿಗೆ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಸರ್ಕಾರ ಮಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಪಾದರಸದಂತೆ ಕೆಲಸ ಮಾಡಬೇಕು. ಕೇವಲ ಘೋಷಣೆಯಲ್ಲ, ಕ್ರಿಯೆಯಿಂದ ಈ ವರ್ಗದ ಅಭಿವೃದ್ಧಿ ಸಾಧ್ಯ ಇದು. ಫಲಾನುಭವಿಗಳಿಗೆ ಮೀಸಲಿಟ್ಟಿರುವ ಹಣ ಅವರಿಗೆ ಯಾವುದೇ ತೊಡಕುಗಳಿಲ್ಲದೇ ತಲುಪಬೇಕು ಎಂದು ತಿಳಿಸಿದರು.

    ಆರ್ಥಿಕತೆ ಎಂದರೆ ಜನರ ದುಡಿಮೆ. ದುಡಿಮೆ ಹೆಚ್ಚಿದಂತೆ ಆರ್ಥಿಕತೆ ಹೆಚ್ಚುತ್ತದೆ. ತಳಹಂತದ ಕಾರ್ಮಿಕರು ದೇಶದ ಆರ್ಥಿಕತೆಯನ್ನು ಬೆಳೆಸುತ್ತಿದ್ದಾರೆ. ಕಾರ್ಮಿಕರು, ರೈತರು, ಶ್ರಮಿಕರು ಆರ್ಥಿಕತೆಯ ಪ್ರಮುಖ ಸ್ತಂಭಗಳಾಗಿದ್ದಾರೆ. ಅವರು ಜೀವನೋಪಾಯದ ಜೊತೆಗೆ ಆರ್ಥಿಕತೆಗೆ ದುಡಿಯುವಂತಾಗಬೇಕು. ಎಸ್‍ಸಿಎಸ್‍ಟಿ, ಹಿಂದುಳಿದ ವರ್ಗಗಳು ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗಿದೆ. 100 ಹಾಸ್ಟೆಲ್‍ಗಳು, ರಾಜ್ಯದ ಶೈಕ್ಷಣಿಕ ಕೇಂದ್ರಗಳಲ್ಲಿ 1,000 ಕೊಠಡಿಗಳ ವಿದ್ಯಾರ್ಥಿನಿಲಯಗಳ ಕ್ಲಸ್ಟರ್ ನಿರ್ಮಾಣ, ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು. ರಾಜ್ಯದ ಒಟ್ಟು ಸಾಕ್ಷರತೆ ಶೇ.75 ರಷ್ಟಿದ್ದು, ಅದರಲ್ಲಿ ಎಸ್‍ಸಿಎಸ್‍ಟಿ ಜನಾಂಗದವರು ಶೇ.65ರಷ್ಟು ಇದ್ದಾರೆ. ಇದನ್ನು ಸುಧಾರಿಸಬೇಕು ಎಂದರು. ಇದನ್ನೂ ಓದಿ: ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು: ಡಿ.ಕೆ.ಶಿವಕುಮಾರ್

    ಎಸ್‍ಸಿಎಸ್‍ಟಿ ಜನರ ಅಭಿವೃದ್ಧಿಗೆ 5 ವರ್ಷದ ಯೋಜನೆ: ಎಸ್‍ಸಿಎಸ್‍ಟಿ ಜನರ ಅಭಿವೃದ್ಧಿಗೆ 5 ವರ್ಷದ ಯೋಜನೆ ರೂಪಿಸಬೇಕು. ಆರ್ಥಿಕ ನೆರವು ಒದಗಿಸಲು ಅ್ಯಂಕರ್ ಬ್ಯಾಂಕ್ ವ್ಯವಸ್ಥೆ ಮಾಡಲಾಗುತ್ತಿದೆ. ಎಸ್‍ಸಿಎಸ್‍ಪಿ-ಟಿಎಸ್‍ಪಿ ಯೋಜನೆಗಳಿಗೆ 28 ಸಾವಿರ ನೀಡಲಾಗಿದೆ. 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಜಮೀನು ಖರೀದಿಗೆ 20 ಲಕ್ಷ ರೂ. ಎಸ್‍ಸಿಎಸ್‍ಟಿ ಯುವಕರಿಗೆ ಸ್ವಯಂ ಉದ್ಯೋಗದ ವ್ಯವಸ್ಥೆ, ಮನೆ ನಿರ್ಮಾಣಕ್ಕೆ 2 ಲಕ್ಷ ರೂ. ಈ ಎಲ್ಲ ಯೋಜನೆಗಳು ಜನರಿಗೆ ತಲುಪಿಸಲು ಅಧಿಕಾರಿಗಳ ಸಹಕಾರ ಅವಶ್ಯಕ. ಇಂದು ಉದ್ಘಾಟನೆಗೊಂಡಿರುವ ಸಹಾಯವಾಣಿ ಒಳ್ಳೆಯ ಕೆಲಸವಾಗಿದೆ. ದೂರದಿಂದ ಕರೆಮಾಡಿದವರಿಗೆ ಸಹಾಯ ಮಾಡುವ ಉತ್ತಮ ವ್ಯವಸ್ಥೆಯಾಗಬೇಕು. ಇಲಾಖೆಯ ಅಧಿಕಾರಿಗಳು ಬದಲಾವಣೆಯ ಹರಿಕಾರರಾಗಬೇಕು ಎಂದು ಹೇಳಿದರು.

  • ವಲಸೆ ಕಾರ್ಮಿಕರನ್ನು ಸ್ವ-ಸ್ಥಳಕ್ಕೆ ತಲುಪಿಸಿದ ಸಾರಿಗೆ ಸಿಬ್ಬಂದಿಗೆ ಹೂ ಮಳೆ ಸ್ವಾಗತ

    ವಲಸೆ ಕಾರ್ಮಿಕರನ್ನು ಸ್ವ-ಸ್ಥಳಕ್ಕೆ ತಲುಪಿಸಿದ ಸಾರಿಗೆ ಸಿಬ್ಬಂದಿಗೆ ಹೂ ಮಳೆ ಸ್ವಾಗತ

    ಹುಬ್ಬಳ್ಳಿ: ಲಾಕ್‍ಡೌನ್‍ನಿಂದಾಗಿ ಪರ ಊರುಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರ ಸ್ವ-ಸ್ಥಳಗಳಿಗೆ ತಲುಪಿಸಲು ಶ್ರಮ ವಹಿಸಿದ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು ಇತರೆ ಸಿಬ್ಬಂದಿಗೆ ಹೂ ಮಳೆಗರೆದು ಅಭಿನಂದನೆ ಸಲ್ಲಿಸಲಾಯಿತು. ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಹಾಗೂ ಬಿ.ಆರ್.ಟಿ.ಎಸ್. ವ್ಯವಸ್ಥಾಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಆಗಮಿಸಿ ಹುಬ್ಬಳ್ಳಿ ವಿಭಾಗದ ಚಾಲಕರು ಹಾಗೂ ನಿರ್ವಾಹಕರುಗಳ ಸಾರ್ಥಕ ಕಾರ್ಯಕ್ಕೆ ಮನದುಂಬಿ ಹರಿಸಿದರು.

    ಕಳೆದ ಮೂರು ದಿನಗಳಿಂದ ಸರ್ಕಾರದ ನಿರ್ದೇಶನದಂತೆ ವಲಸೆ ಕಾರ್ಮಿಕರನ್ನು ಜಿಲ್ಲೆಗೆ ಬರಮಾಡಿಕೊಳ್ಳುವ ಹಾಗೂ ಜಿಲ್ಲೆಯಿಂದ ತೆರಳಲು ಅವಕಾಶ ಮಾಡಿಕೊಡಲಾಗಿದೆ. ಸಾರಿಗೆ ಹಾಗೂ ವೈದ್ಯಕೀಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಹಗಲು ರಾತ್ರಿ ಈ ಕರ್ತವ್ಯದಲ್ಲಿ ನಿರ್ವಹಿಸಿದ್ದಾರೆ. ಇವರುಗಳಿಗೆ ಕೃತಜ್ಞನೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

    ಬಳಿಕ ಮಾತನಾಡಿದ ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಹಾಗೂ ಬಿ.ಆರ್.ಟಿ.ಎಸ್. ವ್ಯವಸ್ಥಾಕ ನಿರ್ದೇಶಕರಾದ ರಾಜೇಂದ್ರ ಚೋಳನ್, ಬೆಂಗಳೂರಿನಿಂದ 148 ಬಸ್‍ಗಳಲ್ಲಿ ವಲಸೆ ಕಾರ್ಮಿಕರನ್ನು ಆಗಮಿಸಿದ್ದಾರೆ. 200 ಬಸ್‍ಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಿಗೆ 14 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ವ್ಯಾಪ್ತಿಯ 8 ಜಿಲ್ಲೆಗಳಿಂದ ಕಳುಹಿಸಿಕೊಡಲಾಗಿದೆ. ಅಲ್ಲದೆ ಇತರೆ ರಾಜ್ಯಗಳಿಗೂ ವಲಸೆ ಕಾರ್ಮಿಕರನ್ನು ಸಂಸ್ಥೆಯ ಬಸ್‍ಗಳಲ್ಲಿ ಕಳುಹಿಸಲಾಗಿದೆ. ಈ ಕಾರ್ಯದಲ್ಲಿ ಸಂಸ್ಥೆಯ ಚಾಲಕ ನಿರ್ವಾಹಕ ಹಾಗೂ ವೈದ್ಯಕೀಯ ಸಿಬ್ಬಂದಿ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಇವರಿಗೆ ಸಾವಿರ ರೂಪಾಯಿಗಳ ಗೌರವಧನ ನೀಡಿ ಅಭಿನಂದಿಸಲಾಗಿದೆ. ಸಂಸ್ಥೆಯ ಇತರೆ ಜಿಲ್ಲಾ ಘಟಕಗಳಲ್ಲೂ 1,500ಕ್ಕೂ ಹೆಚ್ಚು ಚಾಲಕ ನಿರ್ವಾಹಕರಿಗೆ ಅಭಿನಂದನೆ ಸಲ್ಲಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

    240 ಕೋಟಿ ರೂಪಾಯಿಗಳ ನಷ್ಟ: ಪ್ರತಿದಿನ ಸಂಸ್ಥೆಯಲ್ಲಿ ಬಸ್‍ಗಳು 5 ಸಾವಿರ ವೇಳಾಪಟ್ಟಿಗಳಲ್ಲಿ 16 ಲಕ್ಷ ಕಿ.ಮೀ. ಸಂಚಾರ ಮಾಡುತ್ತಿದ್ದವು. ಇದರಿಂದ 6 ಕೋಟಿ ಸಾರಿಗೆ ಆದಾಯ ಬರುತ್ತಿತ್ತು. ಕಳೆದ 40 ದಿನಗಳ ಲಾಕ್‍ಡೌನ್ ನಿಂದಾಗಿ ಸುಮಾರು 240 ಕೋಟಿ ರೂ. ನಷ್ಟ ಸಂಸ್ಥೆಗೆ ಉಂಟಾಗಿದೆ. ಬಿ.ಆರ್.ಟಿ.ಎಸ್ ನಗರ ಸಾರಿಗೆಯಿಂದ ಪ್ರತಿದಿನ 15 ಲಕ್ಷ, ತಿಂಗಳಿಗೆ 5 ಕೋಟಿ ಆದಾಯ ಬರುತ್ತಿತ್ತು. ಇದರಲ್ಲೂ ಕೂಡ ನಷ್ಟ ಉಂಟಾಗಿದೆ. ಸಾರಿಗೆ ಮಂತ್ರಿಗಳು ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ನೌಕರರ ಪೂರ್ಣ ಪ್ರಮಾಣ ವೇತನ ನೀಡಲು ಆದೇಶ ನೀಡಿದ್ದಾರೆ.

    ಮೇ 17 ನಂತರ ಸಾಮಾಜಿಕ ಅಂತರದೊಂದಿಗೆ ಬಸ್‍ಗಳನ್ನು ಓಡಿಸಲು ಚಿಂತನೆ ನಡೆಸಲಾಗಿದೆ. ಪ್ರತಿ ಬಸ್ ತನ್ನ ಪೂರ್ಣ ಪ್ರಮಾಣ ಪ್ರಯಾಣಿಕರೊಂದಿಗೆ ಸಂಚರಿಸಿದರೆ ಪ್ರತಿ ಕಿ.ಮೀ. 36 ರೂಪಾಯಿ ವೆಚ್ಚ ಬರುತ್ತದೆ. ಸಾಮಾಜಿಕ ಅಂತರದಡಿ ಪ್ರಯಾಣಿಕರ ಪ್ರಮಾಣವನ್ನು ಶೇ.50 ನಿಗದಿಪಡಿಸಿದೆ ವೆಚ್ಚ 80 ರೂಪಾಯಿಗಳಾಗುತ್ತಿದೆ. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ. ಸದ್ಯ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಲಾಗುತ್ತಿದ್ದು ಬಸ್ ದರ ಏರಿಸಿಲ್ಲ ಎಂದು ಹೇಳಿದರು.

    ಈ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಹೆಚ್ .ಆರ್.ರಾಮನ ಗೌಡರ್, ಹುಬ್ಬಳ್ಳಿ ನಗರ ತಹಶೀಲದಾರರಾದ ಶಶಿಧರ ಮಾಢ್ಯಾಳ, ಡಿ.ಟಿ.ಓ. ಅಶೋಕ್ ಪಾಟೀಲ್ ಸೇರಿದಂತೆ ಇತರೆ ಅಧಿಕಾರಿಗಳು ಚಾಲಕರು, ನಿರ್ವಾಹಕರು, ವೈದ್ಯಾಧಿಕಾರಿಗಳು ಉಪಸ್ಥಿತಿದ್ದರು.