Tag: Department of Railways

  • ಬಿಎಸ್‍ಎನ್‍ಎಲ್ ಬಳಿಕ ರೈಲ್ವೇಯಿಂದ ಚೀನಾ ಕಂಪನಿಗೆ ನೀಡಲಾಗಿದ್ದ ಯೋಜನೆ ರದ್ದು

    ಬಿಎಸ್‍ಎನ್‍ಎಲ್ ಬಳಿಕ ರೈಲ್ವೇಯಿಂದ ಚೀನಾ ಕಂಪನಿಗೆ ನೀಡಲಾಗಿದ್ದ ಯೋಜನೆ ರದ್ದು

    – 412 ಕಿಮೀ ಉದ್ದದ ಯೋಜನೆ
    – 471 ಕೋಟಿ ರೂ. ಒಪ್ಪಂದ

    ನವದೆಹಲಿ: ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ದೇಶದಲ್ಲಿ ದೊಡ್ಡ ಮಟ್ಟದ ಅಭಿಯಾನ ಆರಂಭಗೊಂಡಿದೆ. ಇದಕ್ಕೆ ಮುನ್ನುಡಿ ಎಂಬಂತೆ ಬಿಎಸ್‍ಎನ್‍ಎಲ್‍ನ 4ಜಿ ಅಪ್‍ಗ್ರಡೇಷನ್‍ಗೆ ಚೀನಾದ ಯಾವುದೇ ಉಪಕರಣ ಬಳಸದಂತೆ ಸರ್ಕಾರ ಸೂಚಿಸಿದೆ. ಇದರ ಬೆನ್ನಲ್ಲೇ ಚೀನಾದ ಬೀಜಿಂಗ್ ಮೂಲಕದ ಕಂಪನಿಗೆ ನೀಡಲಾಗಿದ್ದ ರೈಲ್ವೆ ಯೋಜನೆಯ ಒಪ್ಪಂದವನ್ನು ರದ್ದು ಮಾಡಿಕೊಂಡಿದೆ.

    ಉತ್ತರ ಪ್ರದೇಶದ ಕಾನ್ಪುರ – ದೀನ ದಯಾಳ್ ಉಪಾಧ್ಯಾಯ ವಿಭಾಗದ ನಡುವಿನ ರೈಲ್ವೇ ಸಿಗ್ನಲಿಂಗ್ ಮತ್ತು ದೂರ ಸಂಪರ್ಕ ಕಾರ್ಯ ನಿರ್ಮಾಣಕ್ಕೆ ಬೀಜಿಂಗ್ ಮೂಲದ ಕಂಪನಿಗೆ 2016ರಲ್ಲಿ ಒಪ್ಪಂದ ನೀಡಲಾಗಿತ್ತು. ಸುಮಾರು 471 ಕೋಟಿ ರೂ. ಮೌಲ್ಯದ, 412 ಕಿಮೀ ಉದ್ದದ ಯೋಜನೆಯನ್ನು ವಿಳಂಬ ಮಾಡಿದ್ದಕ್ಕೆ ಒಪ್ಪಂದವನ್ನು ರದ್ದು ಮಾಡಲಾಗಿದೆ. ಇದನ್ನು ಓದಿ: ಕೇಂದ್ರ ಸರ್ಕಾರದಿಂದಲೇ ಚೀನಾ ವಸ್ತುಗಳ ಬಹಿಷ್ಕಾರ ಶುರು

    2016ರಲ್ಲಿ ಗುತ್ತಿಗೆ ಪಡೆದಿದ್ದ ಸಂಸ್ಥೆ ಇದುವರೆಗೂ ಯೋಜನೆಯಲ್ಲಿ ಶೇ.20 ರಷ್ಟು ಕೆಲಸವನ್ನು ಮಾತ್ರ ನಡೆಸಿದೆ. ಯೋಜನೆಯ ಪ್ರತಿ ಹಂತದಲ್ಲಿ ನಿರಂತರವಾಗಿ ಮಾತುಕತೆ ನಡೆಸಿದರೂ ಕೂಡ ಯೋಜನೆಯಲ್ಲಿ ಯಾವುದೇ ಪ್ರಗತಿ ಕಾಣಿಸಿಲ್ಲ. ಒಪ್ಪಂದ ಅನ್ವಯ ಯೋಜನೆಗೆ ಸಂಬಂಧಿಸಿದ ಕೆಲ ತಾಂತ್ರಿಕ ದಾಖಲೆಗಳನ್ನು ನೀಡಲು ಚೀನಾ ಕಂಪನಿ ಹಿಂಜರಿಯುತ್ತಿದೆ. ಅಲ್ಲದೇ ಯೋಜನೆಯ ಸ್ಥಳದಲ್ಲಿ ಎಂಜಿನಿಯರ್ ಹಾಗೂ ಅಗತ್ಯ ಸಿಬ್ಬಂದಿಯನ್ನು ಪೂರೈಸಲು ಕಂಪನಿಗೆ ಸಾಧ್ಯವಿಲ್ಲ ಎಂದು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೋರೇಷನ್ ಆಫ್ ಇಂಡಿಯಾ (ಡಿಎಫ್‍ಸಿಸಿಐಎಲ್) ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.

    ಈ ಯೋಜನೆ ಪೂರ್ಣಗೊಳಿಸಲು ಹಲವಾರು ಆಯ್ಕೆಗಳಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಅವುಗಳನ್ನು ನಾವು ಎದುರಿಸಲು ಹಿಂಜರಿಯುವುದಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

    ಇತ್ತ ಭಾರತದ ಎಲ್ಲಾ ವ್ಯಾಪಾರಿಗಳು ಚೀನಾ ಉತ್ಪನ್ನಗಳ ವಿರುದ್ಧ ಇದ್ದು, ಸುಮಾರು 70 ದಶಲಕ್ಷ ಸ್ಥಳೀಯ ವ್ಯಾಪಾರಿಗಳ ಬೆಂಬಲ ಪಡೆದಿರುವ ಅಖಿಲ ಭಾರತ ವ್ಯಾಪಾರಿ ಒಕ್ಕೂಟ (ಸಿಎಐಟಿ) ಕೂಡ ಚೀನಾ ಸರಕುಗಳ ಬಹಿಷ್ಕಾರದ ರಾಷ್ಟ್ರೀಯ ಆಂದೋಲವನ್ನು ನಡೆಸಲು ನಿರ್ಧರಿಸಿದೆ ಎಂದು ಸಿಎಐಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.

    ಲಡಾಖ್ ಪ್ರದೇಶದಲ್ಲಿ ಭಾರತ, ಚೀನಾ ಸೈನಿಕರು ಮುಖಾಮುಖಿಯಲ್ಲಿ 20 ಭಾರತೀಯ ಯೋಧಕರು ಸಾವನ್ನಪ್ಪಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಭಾರತ ಕುತಂತ್ರಿ ಚೀನಾವನ್ನು ಎದುರಿಸಲಿ ಆರ್ಥಿಕ ಕ್ರಮಗಳನ್ನು ಕೈಗೊಳ್ಳುತ್ತಿದ ಎಂಬ ವರದಿಯ ಬೆನ್ನಲ್ಲೇ ಮಹತ್ವದ ಯೋಜನೆಯ ಒಪ್ಪಂದವನ್ನು ರದ್ದು ಮಾಡಲಾಗಿದೆ. ಇತ್ತ ದೇಶೀಯ ಉದ್ಯಮವನ್ನು ಹಾನಿಗೊಳಿಸುತ್ತಿರುವ ಚೀನಾ ಸರಕುಗಳ ಆಮದು ವಿರುದ್ಧ ಹಣಕಾಸು ಮತ್ತು ವಾಣಿಜ್ಯ ಸಚಿವಾಲಯಗಳು ಈಗಾಗಲೇ ಕ್ರಮಕೈಗೊಳ್ಳುತ್ತಿದೆ.

  • ರೈಲ್ವೇ ಸಂಪರ್ಕವಿಲ್ಲದ ಕೊಡಗಿಗೆ ಮಿನಿ ವಿಮಾನ ನಿಲ್ದಾಣ

    ರೈಲ್ವೇ ಸಂಪರ್ಕವಿಲ್ಲದ ಕೊಡಗಿಗೆ ಮಿನಿ ವಿಮಾನ ನಿಲ್ದಾಣ

    – ಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾದಿಂದ ತಾತ್ವಿಕ ಒಪ್ಪಿಗೆ

    ಮಡಿಕೇರಿ: ಇಂದಿಗೂ ರೈಲ್ವೇ ಸಂಪರ್ಕವಿಲ್ಲದ ರಾಜ್ಯದ ಏಕೈಕ ಜಿಲ್ಲೆ ಕೊಡಗಿನಲ್ಲಿ ಮಿನಿ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಇದರೊಂದಿಗೆ ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆ ಕೊನೆಗೂ ಈಡೇರುವ ಸಮಯ ಬಂದಿದೆ.

    ಜಿಲ್ಲೆಯ ಪ್ರಮುಖ ಆರ್ಥಿಕ ಮೂಲ ಪ್ರವಾಸೋದ್ಯಮ, ಕಾಫಿ ಹಾಗೂ ಕಾಳುಮೆಣಸು ಬೆಳೆ. ಈ ಎರಡರ ಅಭಿವೃದ್ಧಿಗೆ ಸಾರಿಗೆ ಬಹುಮುಖ್ಯ. ಹಲವು ವರ್ಷಗಳಿಂದಲೂ ಜಿಲ್ಲೆಗೆ ರೈಲ್ವೇ ಸಂಪರ್ಕ ಕಲ್ಪಿಸುವುದಕ್ಕೆ ಶತಪ್ರಯತ್ನ ನಡೆಯುತ್ತಲೇ ಇದೆ. ಜೊತೆಗೆ ವಿಮಾನ ನಿಲ್ದಾಣಕ್ಕೂ ಕಳೆದ ಹತ್ತು ವರ್ಷಗಳಿಂದಲೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಪ್ರಯತ್ನ ನಡೆಸುತ್ತಿದ್ದರೂ ಸಾಧ್ಯವಾಗಿರಲಿಲ್ಲ.

    ಒಂದೆಡೆ ರೈಲ್ವೇ ಸಂಪರ್ಕಕ್ಕೆ ಒಪ್ಪಿಗೆ ದೊರೆಯುತ್ತಿದ್ದರೆ, ಮತ್ತೊಂದೆಡೆ ಮಿನಿ ವಿಮಾನ ನಿಲ್ದಾಣಕ್ಕೂ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆಯಲ್ಲಿರುವ ಕೃಷಿ ಇಲಾಖೆಯ ಕೃಷಿ ಫಾರಂ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಈ ಜಾಗದಲ್ಲಿ ವಿಮಾನ ನಿಲ್ದಾಣ ಸಾಧ್ಯವಿದೆ ಎಂಬುವುದನ್ನು ಒಪ್ಪಿಕೊಂಡಿದ್ದಾರೆ.

    ಈ ಹಿಂದೆಯೂ ವಿಮಾನ ನಿಲ್ದಾನಕ್ಕೆ ಮಾದಾಪುರ, ಹೆಬ್ಬಾಲೆ ಸೇರಿದಂತೆ ವಿವಿಧ ಸ್ಥಳಗಳನ್ನು ತೋರಿಸಲಾಗಿತ್ತು. ಆದರೆ ಆ ಸ್ಥಳಗಳು ಸೂಕ್ತವಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳಿಂದ ಒಪ್ಪಿಗೆ ದೊರೆತಿರಲಿಲ್ಲ. ಇದೀಗ ಕೂಡಿಗೆಯಲ್ಲಿರುವ 65 ಎಕರೆ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಿಸಲು ಸಾಧ್ಯವಿದೆ. ರನ್ ವೇ ನಿರ್ಮಾಣ ಮಾಡಲು ಬೇಕಾಗಿರುವ 900 ಮೀಟರ್ ಜಾಗವೂ ಇಲ್ಲಿ ಸೂಕ್ತವಾಗಿದೆ ಎಂದು ಏರ್‌ಪೋರ್ಟ್‌ ಆಫ್ ಅಥಾರಿಟಿ ಅಧಿಕಾರಿಗಳು ವರದಿ ನೀಡಿದ್ದಾರೆ. ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಪ್ಪಿಗೆ ದೊರೆಯುತ್ತಿರುವುದು ಜನರಿಗೆ ಸಂತಸ ತಂದಿದೆ. ಜೊತೆಗೆ ಇದರಿಂದ ಜಿಲ್ಲೆ ಆರ್ಥಿಕ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂಬುವುದು ಸ್ಥಳೀಯರ ಅಭಿಪ್ರಾಯವಾಗಿದೆ.

  • ನಾನು ಅವನಲ್ಲ, ಅವಳು – ರೈಲ್ವೇ ಅಧಿಕಾರಿಗಳಲ್ಲಿ ಭಿನ್ನ ಮನವಿ

    ನಾನು ಅವನಲ್ಲ, ಅವಳು – ರೈಲ್ವೇ ಅಧಿಕಾರಿಗಳಲ್ಲಿ ಭಿನ್ನ ಮನವಿ

    ಲಕ್ನೋ: ತನ್ನ ದಾಖಲೆಗಳಲ್ಲಿ ಲಿಂಗ ಬದಲಾವಣೆ ಮಾಡುವಂತೆ ರೈಲ್ವೇ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿರುವ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

    35 ವರ್ಷದ ರಾಜೇಶ್ ಪಾಂಡೆ ಎಂಬಾತ ಈ ಮನವಿ ಸಲ್ಲಿಸಿದ್ದಾರೆ. ರೈಲ್ವೇ ಉದ್ಯೋಗಿಯಾಗಿದ್ದ ರಾಜೇಶ್ ತಂದೆ 2003ರಲ್ಲಿ ಸಾವನ್ನಪ್ಪಿದ ಪರಿಣಾಮ ಅನುಕಂಪ ಆಧಾರದಲ್ಲಿ ಈತನಿಗೆ ರೈಲ್ವೇ ಉದ್ಯೋಗ ನೀಡಲಾಗಿತ್ತು.

    ರಾಜೇಶ್ ಪಾಂಡೆಗೆ ನಾಲ್ವರು ಸಹೋದರಿಯರು ಇದ್ದು ಇಡೀ ಕುಟುಂಬಕ್ಕೆ ರಾಜೇಶ್ ಒಬ್ಬರೇ ಗಂಡು ಮಗನಾಗಿದ್ದರು. ಆದರೆ ಚಿಕ್ಕದಿನಿಂದಲೂ ಹೆಣ್ಣಿನಂತೆ ಇರಲು ಬಯಸಿದ್ದ ರಾಜೇಶ್, 2017 ರಲ್ಲಿ ಲಿಂಗ ಪರಿವರ್ತನೆಗೆ ಒಳಗಾಗಿ ಸಾನಿಯಾ ಪಾಂಡೆ ಎಂದು ಹೆಸರು ಬದಲಿಸಿಕೊಂಡಿದ್ದರು. ಆದರೆ ರೈಲ್ವೇ ದಾಖಲೆಗಳಲ್ಲಿ ಮಾತ್ರ ಪುರುಷನಾಗಿಯೇ ಇತ್ತು. ಸದ್ಯ ಈಶಾನ್ಯ ರೈಲ್ವೇ ಅಧಿಕಾರಿಗಳಿಗೆ ತನ್ನ ದಾಖಲೆಗಳಲ್ಲಿ ತನ್ನ ಲಿಂಗ ಬದಲಾವಣೆ ಮಾಡುವಂತೆ ರಾಜೇಶ್ ಅಲಿಯಾಸ್ ಸಾನಿಯಾ ಪಾಂಡೆ ಮನವಿ ಮಾಡಿದ್ದಾರೆ.

    ಇತ್ತ ರಾಜೇಶ್ ಲಿಂಗ ಪರಿವರ್ತನೆ ಮಾಡಿಕೊಳ್ಳುವ ಮುನ್ನವೇ ಮದುವೆ ಕೂಡ ಆಗಿದ್ದು, ವಿಷಯ ತಿಳಿದ ಪತ್ನಿ ವಿಚ್ಛೇದನವನ್ನು ನೀಡಿದ್ದಾರೆ. ಇತ್ತ ಲಿಂಗ ಪರಿರ್ತನೆ ಆದ ಬಳಿಕ ತಾನು ಮಹಿಳೆಯಾಗಿ ಸಂತೋಷದಿಂದಲೇ ಜೀವನ ನಡೆಸುತ್ತಿದ್ದಾಗಿ ರಾಜೇಶ್ ಅಭಿಪ್ರಾಯ ಪಟ್ಟಿದ್ದಾರೆ.

  • ಮೋದಿ 2 ಸರ್ಕಾರದ ಬಜೆಟ್ – ದೇಶದ ಜನತೆಗೆ ಸಿಹಿಯೋ? ಕಹಿಯೋ?

    ಮೋದಿ 2 ಸರ್ಕಾರದ ಬಜೆಟ್ – ದೇಶದ ಜನತೆಗೆ ಸಿಹಿಯೋ? ಕಹಿಯೋ?

    ಬೆಂಗಳೂರು: ಪ್ರಚಂಡ ಬಹುಮತದೊಂದಿಗೆ ಎರಡನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಬಜೆಟ್ ಶುಕ್ರವಾರ ಮಂಡನೆಯಾಗುತ್ತಿದೆ. ಆರ್ಥಿಕ ಸಚಿವೆಯಾಗಿ ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು, ವಿತ್ತೀಯ ಕೊರತೆ ನೀಗಿಸಿ, ಆರ್ಥಿಕ ಸಂಪನ್ಮೂಲದ ಕ್ರೋಢೀಕರಣ, ಉದ್ಯೋಗ ಸೃಷ್ಟಿಯೇ ಬಜೆಟ್ ಸವಾಲಾಗಿದೆ.

    ಈ ಬಾರಿಯ ಬಜೆಟ್ ಮೇಲೆ ಶತಕೋಟಿ ಭಾರತೀಯರ ನಿರೀಕ್ಷೆ ಹೆಚ್ಚಿದ್ದು, ಅದರಲ್ಲೂ, ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿರು ಕಾರಣ ಮಧ್ಯಮ ವರ್ಗ ಹಾಗೂ ಮಹಿಳೆಯರ ನಿರೀಕ್ಷೆ ಜಾಸ್ತಿ ಇದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡನೆ ಆಗಲಿದೆ.

    ಬಜೆಟ್ ಏನೆಲ್ಲಾ ಇರಲಿದೆ?
    ನಿರ್ಮಲಾ ಸೀತಾರಾಮನ್ ಅವರ ಬಜೆಟ್‍ನಲ್ಲಿ ಬಹಳಷ್ಟು ನಿರೀಕ್ಷೆಗಳಿದ್ದು, ಪ್ರಮುಖವಾಗಿ ಬಿಜೆಪಿ ಪ್ರಣಾಳಿಕೆ ‘ಸಂಕಲ್ಪ ಪತ್ರ’ದ ಈಡೇರಿಕೆಗೆ ಆದ್ಯತೆ ನೀಡುತ್ತಾರೆ ಎನ್ನಲಾಗಿದೆ. ರಾಷ್ಟ್ರೀಯ ಭದ್ರತೆಗಾಗಿ ಸೇನಾಪಡೆಗಳ ಆಧುನೀಕರಣ, ಬಲವರ್ಧನೆಗೆ ಹೆಚ್ಚಿನ ಆದ್ಯತೆ ಇದೆ. 45 ವರ್ಷಗಳಲ್ಲೇ ಹೆಚ್ಚಾಗಿರುವ ನಿರುದ್ಯೋಗ, ಬಡತನಕ್ಕೆ ಪರಿಹಾರ ಹಾಗೂ ರೈತರ ಆದಾಯ ದ್ವಿಗುಣಗೊಳಿಸಲು ಅನುದಾನ ಘೋಷಣೆ ಆಗುವ ನಿರೀಕ್ಷೆ ಇದೆ.

    ರೈತರಿಗೆ ನೆರವು ನೀಡಲು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲದೊಂದಿಗೆ ಸುಸ್ಥಿರ ನೀರಾವರಿ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತಂದು ಕ್ಷೇತ್ರಕ್ಕೆ ನೀಡುತ್ತಿದ್ದ, ಅನುದಾನದಲ್ಲಿ ಗಣನೀಯ ಹೆಚ್ಚಳವಾಗುವ ನಿರೀಕ್ಷೆ ಇದೆ. ಮೋದಿ ಸರ್ಕಾರದ ಬಹು ನಿರೀಕ್ಷಿತ ಆಯುಷ್ಮಾನ್ ಭಾರತ್ ಯೋಜನೆಗೆ ಹೆಚ್ಚಿನ ಒತ್ತು ನೀಡಿ ಆಶಾ ಕಾರ್ಯಕರ್ತೆಯರಿಗೂ ಹೆಚ್ಚಿನ ಸೌಲಭ್ಯ ನೀಡುವ ಅವಕಾಶವಿದೆ. ಗ್ರಾಮೀಣ ಭಾಗದಲ್ಲಿ ಖಾಸಗಿ ಮತ್ತು ಸರ್ಕಾರದಿಂದ ಹೆಚ್ಚು ಹೂಡಿಕೆಗೆ ಅವಕಾಶ, ಡಿಜಿಟಲ್ ಬ್ಯಾಂಕಿಂಗ್‍ಗೆ ಮತ್ತಷ್ಟು ಒತ್ತು, ನವೋದ್ಯಮಗಳಿಗೆ ಇನ್ನಷ್ಟು ತೆರಿಗೆ ವಿನಾಯ್ತಿ, ಪ್ರೋತ್ಸಾಹ, ಬಂಡವಾಳ ಹೂಡಿಕೆ ಹಾಗೂ ಆದಾಯ ತೆರಿಗೆ ವಿನಾಯ್ತಿ ಮಿತಿ 2.5 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ.

    ಕನ್ನಡಿಗರ ಬೇಡಿಕೆಗಳೇನು?
    ತಮಿಳುನಾಡಿನಲ್ಲಿ ಹುಟ್ಟಿ, ಆಂಧ್ರ ಪ್ರದೇಶದ ಸೊಸೆಯಾಗಿ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಬಗ್ಗೆ ದಕ್ಷಿಣ ಭಾರತೀಯರು ಭಾರೀ ನಿರೀಕ್ಷೆ ಇಟ್ಟಿದ್ದಾರೆ. ಅದರಲ್ಲೂ, ಕರ್ನಾಟಕದ್ದು ನಿರೀಕ್ಷೆಯೂ ದೊಡ್ಡದಿದೆ. ರಾಜ್ಯದ ರೈತರು ಗುಳೆ ಹೋಗುವುದನ್ನು ತಪ್ಪಿಸಲು ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಎಂದು ಕನ್ನಡಿಗರ ಪ್ರಮುಖ ಬೇಡಿಕೆ ಆಗಿದೆ. ಅಲ್ಲದೇ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಬಜೆಟ್‍ನಲ್ಲಿ ಸಮಗ್ರ ನೀತಿ, ಬರಕ್ಕೆ ತುತ್ತಾಗುತ್ತಿರುವ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕೊಯ್ಲು ಯೋಜನೆ ಸೇರಿದಂತೆ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಯೋಜನೆ ಹಾಗೂ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಒತ್ತು ನೀಡುವ ನಿರೀಕ್ಷೆ ಇದೆ.

    ಚಿಕ್ಕಮಗಳೂರು-ಶಿವಮೊಗ್ಗದ ಆರ್ಥಿಕ ಬೆನ್ನೆಲುಬಾದ ಕಾಫಿ-ಅಡಕೆ ಬೆಳೆಗೆ ಪೂರಕ ಯೋಜನೆ ರೂಪಿಸುವುದು, ಕಾಳುಮೆಣಸು ಬೆಳೆಯುವ ಪ್ರದೇಶಗಳಿಗೆ ಪೂರಕವಾಗುವಂತೆ ಪೆಪ್ಪರ್ ಪಾರ್ಕ್ ಸ್ಥಾಪನೆ. ಜವಳಿ ಕ್ಷೇತ್ರಗಳ ಉತ್ತೇಜನಕ್ಕೆ ಪ್ರದೇಶವಾರು ಜವಳಿ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಳ್ಳುವುದು. ತುಮಕೂರಿನ ತಿಪಟೂರಿನಲ್ಲಿ ಜಾಗತಿಕ ಮಟ್ಟದ `ಕೊಬ್ಬರಿ ಸಂಶೋಧನಾ ಕೇಂದ್ರ’ ಸ್ಥಾಪನೆ ಹಾಗೂ ತುಮಕೂರು ಇಂಡಸ್ಟ್ರಿಯಲ್ ಸ್ಮಾರ್ಟ್ ಸಿಟಿ, ಮುಂಬೈ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ ಸೇರಿದಂತೆ ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ರೇಷ್ಮೆ ಉತ್ಪಾದನೆಗೆ ಉತ್ತೇಜನ ನೀಡುವುದು ಪ್ರಮುಖ ಬೇಡಿಕೆಗಳಿವೆ.

    ಕೇಂದ್ರ ರೈಲ್ವೆ ಬಜೆಟ್ ಮೇಲೂ ಹೆಚ್ಚಿನ ನಿರೀಕ್ಷೆ ಇದ್ದು, ರೈಲ್ವೆಯಲ್ಲಿ ರಾಜ್ಯದ ಬೇಡಿಕೆಗಳೆಂದರೆ, ಹೊಸ ಮಾರ್ಗ, ಜೋಡಿ ಮಾರ್ಗ, ವಿದ್ಯುದ್ದೀಕರಣ, ಹೊಸ ರೈಲು, ಬೆಂಗಳೂರು ಉಪನಗರ ರೈಲು ಯೋಜನೆ, ನಿಲ್ದಾಣಗಳ ಅಭಿವೃದ್ಧಿಯ ಅಗತ್ಯವಿದೆ. ರಾಯದುರ್ಗ- ತುಮಕೂರು, ಬಾಗಲಕೋಟೆ-ಕುಡಚಿ, ಗದಗ- ವಾಡಿ ಕಾಮಗಾರಿ ಹಾಗೂ ಮುನಿರಾಬಾದ್- ರಾಯಚೂರು ರೈಲ್ವೆ ಮಾರ್ಗಗಳ ಕಾಮಗಾರಿ, ಧಾರವಾಡದಿಂದ ಕಿತ್ತೂರು ಮಾರ್ಗವಾಗಿ ಬೆಳಗಾವಿಗೆ ನೇರ ಸಂಪರ್ಕ ಕಲ್ಪಿಸುವ ಯೋಜನೆ ಪ್ರಮುಖ ಬೇಡಿಕೆಗಳಾಗಿವೆ. ಅಲ್ಲದೇ ಹುಬ್ಬಳ್ಳಿಯಿಂದ ಹೈ-ಕರ್ನಾಟಕದ ಮೂಲಕ ದೆಹಲಿಗೆ ರಾಜಧಾನಿ ಎಕ್ಸ್‍ಪ್ರೆಸ್ ರೈಲು ಹಾಗೂ ಹುಬ್ಬಳ್ಳಿಯಿಂದ ಮಂಗಳೂರಿಗೆ ನೇರ ರೈಲು ಸಂಪರ್ಕ ಬೇಡಿಕೆಯೂ ಇದೆ.