Tag: Department of Public Works

  • ಗೋ ಹತ್ಯೆ ನಿಷೇಧ ಬಗ್ಗೆ ಸರ್ಕಾರದಿಂದ ಸಮೀಕ್ಷೆ: ಸತೀಶ್ ಜಾರಕಿಹೊಳಿ

    ಗೋ ಹತ್ಯೆ ನಿಷೇಧ ಬಗ್ಗೆ ಸರ್ಕಾರದಿಂದ ಸಮೀಕ್ಷೆ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಗೋ ಹತ್ಯೆ ನಿಷೇಧ ಕಾಯ್ದೆ (Cow Slaughter Prohibition Act) ಬಗ್ಗೆ ಸರ್ಕಾರದಿಂದ ಸಮೀಕ್ಷೆ ನಡೆಸುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

    ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರದ ಕುರಿತು ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ (Nippani) ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೆ-ಮನೆಗಳಿಗೆ ತೆರಳಿ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ಕುರಿತು ಸಂದರ್ಶನ ನಡೆಸುತ್ತೇವೆ. ಮನೆ ಮನೆಗೆ ಹೋಗಿ ಈ ಕಾಯ್ದೆ ಬೇಕೋ ಬೇಡವೋ ಎಂದು ಜನರನ್ನು ಕೇಳುತ್ತೇವೆ. ಬಹುಮತದ ಆಧಾರದ ಮೇಲೆ ಗೋಹತ್ಯೆ ಕಾಯ್ದೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರಿಷ್ಕರಣೆ ಇಲ್ಲ- ಶಿಕ್ಷಣ ಇಲಾಖೆಗೆ ಸಿಎಂ ಮೌಖಿಕ ಸೂಚನೆ

    ಒರಿಜಿನಲ್ ಪಠ್ಯಪುಸ್ತಕವನ್ನು ಕಳೆದ ಬಾರಿ ಬಿಜೆಪಿ ತಿರುಚಿದೆ. ಬಸವೇಶ್ವರ, ಅಂಬೇಡ್ಕರ್ ಸೇರಿದಂತೆ ಬಹಳಷ್ಟು ಇತಿಹಾಸ ತಿರುಚಲಾಗಿದೆ. ಪಠ್ಯ ಪುಸ್ತಕ ಬದಲಾವಣೆ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಪ್ರಣಾಳಿಕೆ ಪ್ರಕಾರ ಪಠ್ಯ ಪುಸ್ತಕ ಬದಲಾವಣೆ ಮಾಡೇ ಮಾಡುತ್ತೇವೆ. ನುರಿತ ತಜ್ಞರ ಸಮಿತಿ ರಚಿಸಿ ಪಠ್ಯ ಬದಲಾವಣೆ ಮಾಡುತ್ತೇವೆ. ಕಳೆದ ಬಾರಿ ನಡೆದ ಲೋಕೋಪಯೋಗಿ ಇಲಾಖೆ ಅಕ್ರಮದ ಬಗ್ಗೆ ಸಮಯ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.  ಇದನ್ನೂ ಓದಿ: ಸೋಮಣ್ಣಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಫಿಕ್ಸ್?- ಸಂಚಲನ ಮೂಡಿಸಿದ ಸಂಸದ ಬಸವರಾಜು ಹೇಳಿಕೆ

  • ಸುವರ್ಣಸೌಧದ ಎದುರು ಶಾವಿಗೆ ಒಣಹಾಕಿದ ಪ್ರಕರಣ – ಗುತ್ತಿಗೆದಾರನಿಗೆ ನೋಟಿಸ್

    ಸುವರ್ಣಸೌಧದ ಎದುರು ಶಾವಿಗೆ ಒಣಹಾಕಿದ ಪ್ರಕರಣ – ಗುತ್ತಿಗೆದಾರನಿಗೆ ನೋಟಿಸ್

    ಬೆಳಗಾವಿ: ಸುವರ್ಣಸೌಧದ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ‘ಶಾವಿಗೆ’ ಒಣಗಿಸಿದ್ದ ಪ್ರಕರಣದ ವಿಚಾರವಾಗಿ ಗುತ್ತಿಗೆದಾರನಿಗೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.

    ಸುವರ್ಣಸೌಧದ ಸ್ವಚ್ಛತಾ ಕಾರ್ಯ ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದೆ. ಗುತ್ತಿಗೆದಾರರು ಕೊಂಡಸಕೊಪ್ಪ ಗ್ರಾಮದ ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಅಚಾತುರ್ಯದಿಂದ ಘಟನೆ ನಡೆದಿದೆ ಎಂದು ಸಮಜಾಯಿಷಿ, ಘಟನೆ ಮರುಕಳಿಸಿದಂತೆ ಎಲ್ಲಾ ಗುತ್ತಿಗೆದಾರರಿಗೆ ಲೋಕೋಪಯೋಗಿ ಇಲಾಖೆ ನೋಟಿಸ್ ನೀಡಿದೆ. ಇದನ್ನೂ ಓದಿ: ಪಠ್ಯದಲ್ಲಿರುವ ತಮ್ಮ ಕವಿತೆ ವಾಪಸ್ ಪಡೆದ ಮತ್ತೊಬ್ಬ ಸಾಹಿತಿ

    ಮಹಿಳೆಯು ದಿನಗೂಲಿ ಆಧಾರದ ಮೇಲೆ ಸುವರ್ಣಸೌಧದ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. ಸುವರ್ಣ ಸೌಧ ಉಪವಿಭಾಗದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಯಿಂದ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿದ ಬಗ್ಗೆ ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಮುಕ್ತಾಯ

  • ಮಧ್ಯರಾತ್ರಿಯೂ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ – ಅನುಮಾನ ಮೂಡಿಸಿದ ನೈಟ್ ಡ್ಯೂಟಿ

    ಮಧ್ಯರಾತ್ರಿಯೂ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ – ಅನುಮಾನ ಮೂಡಿಸಿದ ನೈಟ್ ಡ್ಯೂಟಿ

    ರಾಯಚೂರು: ಜಿಲ್ಲೆಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ರಾತ್ರಿ ಕೆಲಸ ಜೋರಾಗಿ ನಡೆದಿದೆ. ಮಧ್ಯರಾತ್ರಿಯೂ ಕಚೇರಿಯಲ್ಲಿ ಕುಳಿತು ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ವರ್ಷದ ಅಂತ್ಯದ ಹಿನ್ನೆಲೆ ಮಾರ್ಚ್ ತಿಂಗಳು ರಾತ್ರಿಯಿಡೀ ಕೆಲಸ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಮಧ್ಯರಾತ್ರಿ ಬಿಲ್ ಬರೆಯುವುದರಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿರತರಾಗಿರುವುದರಿಂದ ಸಾರ್ವಜನಿಕರಲ್ಲಿ ಗೋಲ್ಮಾಲ್ ಶಂಕೆ ಹುಟ್ಟಿದೆ. ವಾರ್ಷಿಕ ಅಂತ್ಯದ ಮಾರ್ಚ್ ತಿಂಗಳಲ್ಲಿ ಮಾತ್ರ ಹಗಲು ರಾತ್ರಿ ಇಲಾಖೆಯವರು ಕೆಲಸ ಮಾಡುತ್ತಾರೆ. ಹಗಲಿಗಿಂತ ರಾತ್ರಿಯೇ ಹೆಚ್ಚು ಕೆಲಸ ಮಾಡುವ ಸಿಬ್ಬಂದಿ ಹಾಗೂ ಅಧಿಕಾರಿಗಳು ಇನ್ನುಳಿದ ದಿನಗಳಲ್ಲಿ ಕೈಗೆ ಸಿಗುವುದಿಲ್ಲ. ಇದನ್ನೂ ಓದಿ: ತಾಯಿ ಮಲಗಿದ್ದಾಳೆ ಎಂದು 4 ದಿನ ಶವದೊಂದಿಗೆ ಕಾಲ ಕಳೆದ ಬಾಲಕ..!

    ರಾತ್ರಿ 12ರ ವರೆಗೂ ಕಚೇರಿಯಲ್ಲೇ ಕುಳಿತ ಸಿಬ್ಬಂದಿ ಮಾಧ್ಯಮಗಳ ಕ್ಯಾಮೆರಾ ಕಂಡ ತಕ್ಷಣ ಮನೆಗೆ ಹೊರಟು ಹೋದ ಘಟನೆ ನಡೆದಿದೆ. ಕಚೇರಿ ಸಮಯದಲ್ಲಿ ಕೆಲಸ ಮಾಡಬೇಕಾದ ಸಿಬ್ಬಂದಿ ಮಧ್ಯರಾತ್ರಿವರೆಗೆ ಕಚೇರಿಯಲ್ಲಿ ಏನು ಮಾಡುತ್ತಾರೆ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಮಾಜಿ ರಾಷ್ಟ್ರಪತಿ ಮೊಮ್ಮಗನ ಮದುವೆ ಮಾಡಿದ ಮಹಿಳಾ ಖಾಜಿ

     

  • ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ – ಕಣ್ಮುಚ್ಚಿ ಕುಳಿತಿದ್ಯಾ ಲೋಕೋಪಯೋಗಿ ಇಲಾಖೆ..?

    ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ – ಕಣ್ಮುಚ್ಚಿ ಕುಳಿತಿದ್ಯಾ ಲೋಕೋಪಯೋಗಿ ಇಲಾಖೆ..?

    ವಿಜಯಪುರ: ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ ನಡೆದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ನಡೆದಿದೆ.

    ಕಳೆದ ರಾತ್ರಿ ಕ್ಲಾಸ್ 1 ಗುತ್ತಿಗೆದಾರನೊಬ್ಬ ಮುಳವಾಡ ಪ್ರವಾಸಿ ಮಂದಿರದಲ್ಲಿ ಪೆಂಡಾಲ್ ಹಾಕಿಸಿ ಭರ್ಜರಿಯಾಗಿ ಗುಂಡು ತುಂಡು ಪಾರ್ಟಿ ನಡೆಸಿದ್ದಾನೆ. ಈ ಪಾರ್ಟಿಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ ಎಣ್ಣೆ, ಮಾಂಸದೂಟ ಎಲ್ಲವೂ ರಾಜಾರೋಷವಾಗಿ ನಡೆದಿದೆ.

    ಪ್ರವಾಸಿ ಮಂದಿರದಲ್ಲೇ ಅಡುಗೆ ಮಾಡಲಾಗಿದ್ದು, ಉಳ್ಳವರು ಇಲ್ಲಿ ಏನು ಮಾಡಿದರೂ ಹೇಳೋರಿಲ್ಲ, ಕೇಳೋರಿಲ್ಲದಂತಾಗಿದೆ. ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218ರ ಪಕ್ಕದಲ್ಲಿರುವ ಐಬಿಯಲ್ಲೇ ಇಷ್ಟೊಂದು ರಾಜಾರೋಷವಾಗಿ ದರ್ಬಾರ್ ನಡೆಸಿದರೂ ಸರ್ಕಾರಿ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

    ಪ್ರಥಮ ದರ್ಜೆಯ ಗುತ್ತಿಗೆದಾರನಿಗೆ ಐಬಿಯನ್ನೇ ಅಧಿಕಾರಿಗಳು ಬರೆದು ಕೊಟ್ರಾ..? ಸರ್ಕಾರಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ ಲೋಕೋಪಯೋಗಿ ಇಲಾಖೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

  • ಹಾಸನದಲ್ಲಿ ಸರ್ಕಾರದ ಹಣ ಪೋಲು – 150 ವರ್ಷದ ಹಿಂದಿನ ಕಟ್ಟಡದಲ್ಲಿದೆ ನ್ಯಾಯಾಲಯ

    ಹಾಸನದಲ್ಲಿ ಸರ್ಕಾರದ ಹಣ ಪೋಲು – 150 ವರ್ಷದ ಹಿಂದಿನ ಕಟ್ಟಡದಲ್ಲಿದೆ ನ್ಯಾಯಾಲಯ

    ಹಾಸನ: ನಗರದಲ್ಲಿ ಬೃಹತ್ ಹಾಗು ಸುಸಜ್ಜಿತ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗಿದೆ. ಆದರೆ ಈ ಕಟ್ಟಡಕ್ಕೆ ಇನ್ನೂ ಉದ್ಘಾಟನಾ ಭಾಗ್ಯ ಸಿಗದ ಕಾರಣ 150 ವರ್ಷದ ಹಳೆಯ ಕಟ್ಟಡದಲ್ಲಿ ಈಗಲೂ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ.

    ಸರ್ಕಾರ ಹಣ ಪೋಲು ಮಾಡುವುದು ಎಂದರೆ ಇದೇ ಇರಬೇಕು. ಯಾಕೆಂದರೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣ ಮಾಡಿ ವರ್ಷಗಳೇ ಕಳೆದರೂ ಸಹ ಇನ್ನೂ ಇದಕ್ಕೆ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಇದು ಜಿಲ್ಲೆಯ ವಕೀಲರ ಆಕ್ರೋಶಕ್ಕೆ ಕಾರಣವಾಗಿದೆ.

    ಮತ್ತೊಂದೆಡೆ ಪುರಾತನ ಕಾಲದ ಅಂದಾಜು 150 ವರ್ಷ ಹಳೆಯ ಬ್ರಿಟಿಷರ ಕಾಲದ ಕಟ್ಟಡದಲ್ಲಿ ಈಗಲೂ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ. ಸ್ವತಃ ಲೋಕೋಪಯೋಗಿ ಇಲಾಖೆಯೆ ಈ ಕಟ್ಟಡ ಅಪಾಯದಲ್ಲಿದೆ ಎನ್ನುವ ಬೋರ್ಡ್ ಹಾಕಿದ್ದರೂ ಕೂಡ ಅಲ್ಲಿಯೇ ಕಾರ್ಯನಿರ್ವಹಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

    ಒಂದೆಡೆ ಸುಸಜ್ಜಿತವಾದ ನ್ಯಾಯಾಲಯದ ಕಟ್ಟಡವನ್ನು ಕಟ್ಟಿರುವ ಲೋಕೋಪಯೋಗಿ ಇಲಾಖೆ ಅದನ್ನು ನ್ಯಾಯಾಂಗ ಇಲಾಖೆಗೆ ಕೊಟ್ಟಿಲ್ಲ. ಮತ್ತೊಂದು ಕಡೆ ಅದೇ ಲೋಕೋಪಯೋಗಿ ಇಲಾಖೆ ಈ ಕಟ್ಟಡ ಅಪಾಯದಲ್ಲಿದೆ ಇಲ್ಲಿ ಇರಬೇಡಿ ಎಂದು ಎಚ್ಚರಿಕೆಯ ಫಲಕ ಹಾಕಿದೆ. ಇದು ಹೀಗೆ ಆದರೆ ನಾವು ಪ್ರತಿಭಟನೆಯ ಹಾದಿ ಹಿಡಿಬೇಕಾಗುತ್ತದೆ ಎಂದು ವಕೀಲರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ನಾನು ಯಾವುದೇ ತಪ್ಪು ಮಾಡಿಲ್ಲ – ರೆಬೆಲ್ ಶಾಸಕರ ಆರೋಪಕ್ಕೆ ರೇವಣ್ಣ ಉತ್ತರ

    ನಾನು ಯಾವುದೇ ತಪ್ಪು ಮಾಡಿಲ್ಲ – ರೆಬೆಲ್ ಶಾಸಕರ ಆರೋಪಕ್ಕೆ ರೇವಣ್ಣ ಉತ್ತರ

    ಬೆಂಗಳೂರು: ಮೈತ್ರಿ ಸರ್ಕಾರ ಆಡಳಿತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ವಿರುದ್ಧ ಮಾಡಿದ್ದ ಆರೋಪಗಳಿಗೆ ಲೋಕೋಪಯೋಗಿ ಸಚಿವ ರೇವಣ್ಣ ಅವರು ಉತ್ತರ ನೀಡಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ. ಬಡ ಮಕ್ಕಳ ಅನುಕೂಲತೆಗೆ 1 ಸಾವಿರ ಕನ್ನಡ ಶಾಲೆಗಳನ್ನು ಆರಂಭ ಮಾಡಿ ಎಂದು ಮನವಿ ಮಾಡಿದ್ದೆ ಇದೇ ನನ್ನ ತಪ್ಪಾ ಎಂದು ಕೇಳಿದ್ದಾರ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಇಲಾಖೆಗೆ ಸಂಬಂಧಪಟ್ಟ ಬೆಂಗಳೂರು ರಸ್ತೆಯ ಅಭಿವೃದ್ಧಿ ವಿಚಾರದಲ್ಲಷ್ಟೇ ನಾನು ಕೆಲಸ ಮಾಡಿದ್ದೇನೆ. ಬೇರೆ ಯಾವುದೇ ಇಲಾಖೆಯಲ್ಲೂ ಕೂಡ ನಾನು ಮಧ್ಯಪ್ರವೇಶ ಮಾಡಿಲ್ಲ. ನನ್ನ ಇಲಾಖೆಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದು, ಅದು ಬಿಟ್ಟು ಬೇರೆಯವರ ವಿಚಾರದಲ್ಲಿ ನಾನೇನು ಮಾಡಿಲ್ಲ. ನಾನು ಮಾಡಿದ ತಪ್ಪು ಅಂದರೆ ಕನ್ನಡ ಶಾಲೆ ಬೇಕು ಎಂದು ಹೇಳಿ ಬಡ ಮಕ್ಕಳಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ 1 ಸಾವಿರ ಕನ್ನಡ ಶಾಲೆಗಳನ್ನು ಆರಂಭಿಸಲು ಮನವಿ ಮಾಡಿದ್ದೆ ಎಂದು ಸ್ಪಷ್ಟನೆ ನೀಡಿದರು.

    ಮುಜರಾಯಿ ಇಲಾಖೆಗೆ ಸೇರಿದ ಸ್ಥಳ ತಿರುಪತಿಯಲ್ಲಿ ಇದ್ದು, ಆದರ ಅಭಿವೃದ್ಧಿ ನಮ್ಮ ಇಲಾಖೆಯಿಂದಲೇ ನಡೆಯುತ್ತಿದೆ. ವಿವಿಧ ರಸ್ತೆಗಳ ಕೆಲಸಗಳನ್ನು ಮಾಡುತ್ತಿದ್ದೇವೆ. ಇದರಲ್ಲಿ ಪ್ರಮುಖವಾಗಿ ಮಹಾದೇಶ್ವರ ದೇವಸ್ಥಾನಕ್ಕೆ ಮೆಟ್ಟಿಲು, ದಸರಾಗೆ ಅನುಕೂಲವಾಗುವಂತೆ ರಸ್ತೆ, ತಲಕಾಡು ರಸ್ತೆ ಅಭಿವೃದ್ಧಿ ಕೆಲಸಗಳು ಸೇರಿದೆ. ನಾನು ಜೀವನದಲ್ಲಿ ತಪ್ಪು ಮಾಡಿದರೆ ಮಹಾ ಲಕ್ಷ್ಮಿ ದೇವಿ ನೋಡಿಕೊಳ್ಳಲಿ ಎಂದರು.

    ಬೆಂಗಳೂರು ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಇಲಾಖೆಗೆ ಸಂಬಂಧಿಸಿದ ಕೆಲಸವನಷ್ಟೇ ಮಾಡಿದ್ದೇನೆ. ಅದು ಬಿಟ್ಟು ಬೇರೆಯವರ ಇಲಾಖೆಯ ವಿಚಾರದಲ್ಲಿ ನಾನೇನು ಮಾಡಿಲ್ಲ. ಔಟರ್ ರಿಂಗ್ ರೋಡ್ ಕೆಲಸಕ್ಕೆ ಹಣವನ್ನು ಬಿಡುಗಡೆ ಮಾಡಿದ್ದು, ಈ ಹಿಂದೆ ನಾನು ಲೋಕೋಪಯೋಗಿ ಸಚಿವರಾಗಿದ್ದ ವೇಳೆ ಆರಂಭ ಮಾಡಿ ಪೂರ್ಣ ಮಾಡದ ಕೆಲಸಗಳನ್ನು ಪೂರ್ಣ ಮಾಡಲು ಹಣ ಬಿಡುಗಡೆ ಮಾಡಿದ್ದೇನೆ. ಅಭಿವೃದ್ಧಿ ಸಂಬಂಧ ಶಾಸಕರ ಜೊತೆ ಸಭೆ ಕರೆಯಲಾಗಿತ್ತು, ಸಿಎಂ ನೇತೃತ್ವದಲ್ಲಿಯೇ ನಡೆದ ಸಭೆಯಲ್ಲಿ ಈ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದೆ. ಆದರೆ ನನ್ನ ಮೇಲೆ ಆರೋಪ ಮಾಡಲಾಗಿದೆ. ನಾವು ಶಾಸಕರ ಮನಸ್ಸಿಗೆ ನೋವುಂಟು ಮಾಡಿಲ್ಲ, ಒಂದೊಮ್ಮೆ ತಿಳಿಯದೆ ಮಾಡಿದ್ದರೆ ಕ್ಷಮೆಯಾಚನೆ ಮಾಡಲಿದ್ದೇವೆ ಎಂದರು.

    ನನ್ನ ಕ್ಷೇತ್ರದಲ್ಲಿ ನಡೆಯಬೇಕಾದ ವರ್ಗಾವಣೆಗಳ ಸಂಬಂಧ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದು, ಇದುವರೆಗೂ ಬೇರೆ ಯಾವುದೇ ಇಲಾಖೆಯಲ್ಲೂ ವರ್ಗಾವಣೆ ಮಾಡಲು ಕೈ ಹಾಕಿಲ್ಲ. ನಾನು ಯಾವುದೇ ಇಲಾಖೆಯಲ್ಲಿ ಮಧ್ಯ ಪ್ರವೇಶ ಮಾಡಿಲ್ಲ, ಶಾಸಕರ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ ಎಂದರು.

    ಮಾಧ್ಯಮಗಳು ನನ್ನನ್ನು ‘ಸೂಪರ್ ಸಿಎಂ’ ಎಂದು ಕರೆಯುತ್ತಾರೆ. ಅದನ್ನು ನಿಮ್ಮ ಆಶೀರ್ವಾದ ಎಂದು ಹೇಳಿ ಸುಮ್ಮನೆ ಆಗಿದ್ದೇನೆ. ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದ್ದು, ಒಬ್ಬರನ್ನು ಕರೆತಂದು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದೆ. ಆ ರಾಜ್ಯಸಭಾ ಸದಸ್ಯನನ್ನು ದೇವಿ ನೋಡಿಕೊಳ್ಳುತ್ತಾರೆ. ತಾಯಿ ಸನ್ನಿಧಿಯಲ್ಲಿ ಏನು ನಡೆದಿದೆ ಎಂದು ಗೊತ್ತು ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದರು.

    ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆಗೂ ನನಗೂ ಸಂಬಂಧವಿಲ್ಲ. ನಾಳೆ ಏನಾಗುತ್ತೆ ಎಂಬುವುದನ್ನು ಕಾದು ನೋಡೋಣ. ಈ ವಿಚಾರಗಳನ್ನು ಸಿಎಂ ಅವರು ನೋಡಿಕೊಳ್ಳುತ್ತಾರೆ. ನನಗೆ ನನ್ನ ಇಲಾಖೆಯದ್ದೇ ಜಾಸ್ತಿ ಕೆಲಸ ಆಗಿದ್ದು, ನೀಡಿರುವ ಪಿಡಬ್ಲೂಡಿ ಇಲಾಖೆ ನೋಡೋಕೊಳ್ಳವ ಕೆಲಸ ಮಾಡುತ್ತೇನೆ ಎಂದರು. ಅಲ್ಲದೇ ಸಿಎಂ, ರೇವಣ್ಣ ಅಸಮಾಧಾನ ಹೊಂದಿದ್ದಾರೆ ಎಂದು ಕೊಂಡರೆ ಅದು ನಿಮ್ಮ ತಪ್ಪು ಅಷ್ಟೇ. ದೇವೇಗೌಡರು ಇರುವವರೆಗೂ ಇದು ಆಗಲ್ಲ. ನನಗೆ ಸಿಎಂ, ಡಿಸಿಎಂ ಪೋಸ್ಟ್ ಮೇಲೆ ಕಣ್ಣಿಲ್ಲ ಎಂದರು.

  • 500 ಕೋಟಿ ಲಂಚ – ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು

    500 ಕೋಟಿ ಲಂಚ – ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು

    – ಆಡಳಿತಾತ್ಮಕ ನಿರ್ಧಾರ ಕೈಗೊಳ್ಳದಂತೆ ವಿ.ಆರ್.ವಾಲಾ ಆದೇಶ

    ಬೆಂಗಳೂರು: ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿದ್ದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ರೈತ ಮೋರ್ಚಾ ಸಂಘಟನೆಯ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

    ಲೋಕೋಪಯೋಗಿ ಇಲಾಖೆಯಲ್ಲಿ ಸೋಮವಾರ ಸುಮಾರು 800 ಜನ ಎಂಜಿನಿಯರ್ ಗಳಿಗೆ ಬಡ್ತಿ ಹಾಗೂ ವರ್ಗಾವಣೆ ಮಾಡಿದ್ದು, ಇದಕ್ಕಾಗಿ 500 ಕೋಟಿ ರೂ. ಹಣ ಪಡೆದಿದ್ದಾರೆ. ಎಸ್‍ಸಿ, ಎಸ್‍ಟಿ ಮತ್ತು ಓಬಿಸಿ ಸಮುದಾಯದ ಎಂಜಿನಿಯರ್ ಗಳು ವರ್ಗಾವಣೆ ಮಾಡಿಸಿಕೊಳ್ಳಲು ಒಂದು ವರ್ಷದಿಂದ ಕಾಯುತ್ತಿದ್ದರು. ಇಂತಹ ಸಮಯದಲ್ಲಿ ಹಣ ಪಡೆದು ಏಕಾಏಕಿ ಮನಬಂದಂತೆ ಎಂಜಿನಿಯರ್‍ಗಳನ್ನು ವರ್ಗಾವಣೆ ಮಾಡಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ, ಸರ್ಕಾರ ಮಾಡಿರುವ ವರ್ಗಾವಣೆಯನ್ನು ಹಿಂಪಡೆಯಬೇಕು ಎಂದು ರಾಜ್ಯಪಾಲರಿಗೆ ಲಿಂಗಮೂರ್ತಿ ದೂರು ನೀಡಿದ್ದಾರೆ.

    ರಾಜ್ಯಪಾಲರ ಚಾಟಿ: ಸಮ್ಮಿಶ್ರ ಸರ್ಕಾರ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು. ಸರ್ಕಾರ ಅಲ್ಪ ಮತಕ್ಕೆ ಕುಸಿದ ಪರಿಣಾಮ ಕ್ಯಾಬಿನೆಟ್ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಸರ್ಕಾರ ಪತನದ ಮುನ್ಸೂಚನೆ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ಕಡತಗಳಿಗೆ ಸಹಿ ಮತ್ತು ಅಧಿಕಾರಿಗಳಿಗೆ ಭಡ್ತಿ ನೀಡಲಾಗುತ್ತಿದೆ ಎಂದು ಈ ಹಿಂದೆ ಬಿಜೆಪಿ ಸಹ ಬಿಜೆಪಿ ಆರೋಪಿಸಿತ್ತು. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲರು ಈ ಸೂಚನೆ ಹೊರಡಿಸಿದ್ದಾರೆ.

    ಏನಿದು ಪ್ರಕರಣ?
    ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಸಚಿವ ಹೆಚ್.ಡಿ.ರೇವಣ್ಣ ಇಲಾಖೆಯಲ್ಲಿ ಬುಧವಾರ ಒಂದೇ ದಿನದಲ್ಲಿ 800 ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಲಾಗಿತ್ತು.

    ಸೋಮವಾರ ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ, ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದರು. ಮೈತ್ರಿ ಉಳಿಸಿಕೊಳ್ಳಲು ಎರಡೂ ಪಕ್ಷದ ಮುಖಂಡರು ಓಡಾಡುತ್ತಿದ್ದರೆ, ರೇವಣ್ಣ ಅವರು ಮಾತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿತ್ತು.

    ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಅಧಿಕಾರಿಗಳಿಗೆ ಬಡ್ತಿ ನೀಡಿರುವುದರ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿತ್ತು.

    ಈ ಹಿಂದೆ ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದರು. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದ್ದವು.

  • ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ಬರೋಬ್ಬರಿ ಒಂದೇ ದಿನ 800 ಅಧಿಕಾರಿಗಳಿಗೆ ಬಡ್ತಿ

    ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ಬರೋಬ್ಬರಿ ಒಂದೇ ದಿನ 800 ಅಧಿಕಾರಿಗಳಿಗೆ ಬಡ್ತಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಕೌಂಟ್‍ಡೌನ್ ಆರಂಭವಾಗಿದ್ದರೆ, ಇತ್ತ ಮೈತ್ರಿಯ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಸಚಿವ ಹೆಚ್.ಡಿ.ರೇವಣ್ಣರ ಇಲಾಖೆಯಲ್ಲಿ ಒಂದೇ ದಿನದಲ್ಲಿ 800 ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ. ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಎಂಜಿನಿಯರ್ ಗಳನ್ನು ವರ್ಗಾವಣೆಯ ಆದೇಶಕ್ಕೆ ರೇವಣ್ಣ ಸಹಿ ಹಾಕಿದ್ದಾರೆ.

    ಸೋಮವಾರ ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ, ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದಾರೆ. ಮೈತ್ರಿ ಉಳಿಸಿಕೊಳ್ಳಲು ಎರಡೂ ಪಕ್ಷದ ಮುಖಂಡರು ಓಡಾಡುತ್ತಿದ್ದರೆ, ರೇವಣ್ಣ ಅವರು ಮಾತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಎಂದು ಅಧಿಕಾರಿಗಳಿಗೆ ಬಡ್ತಿ ನೀಡಿರುವ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದಾರೆ. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದೆ.

    ಬಡ್ತಿ ಪಡೆದ ಅಧಿಕಾರಿಗಳ ವಿವರ ಹೀಗಿದೆ
    ಎಇ ಹುದ್ದೆಯಿಂದ ಎಇಇ ಹುದ್ದೆ-100
    ಜೆಇ ಹುದ್ದೆಯಿಂದ ಎಇಇ(2)-200
    ಎಇಇ ಹುದ್ದೆಯಿಂದ ಇಇ – 400
    ಇಇ ಹುದ್ದೆಯಿಂದ ಎಸ್‍ಇ-126

  • ಲೋಕೋಪಯೋಗಿ ಸಚಿವರ ಕೆಲಸಕ್ಕೆ ಪತ್ನಿ ಭವಾನಿ ರೇವಣ್ಣ ಫುಲ್‌ ಮಾರ್ಕ್ಸ್‌

    ಲೋಕೋಪಯೋಗಿ ಸಚಿವರ ಕೆಲಸಕ್ಕೆ ಪತ್ನಿ ಭವಾನಿ ರೇವಣ್ಣ ಫುಲ್‌ ಮಾರ್ಕ್ಸ್‌

    – ರಾಜ್ಯವೇ ಒಂದು ಕಣ್ಣಾದ್ರೆ, ಹಾಸನವೇ ಒಂದು ಕಣ್ಣಿನಂತೆ!

    ಹಾಸನ: ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಅವರು ಇಲಾಖೆಯಲ್ಲಿ ಬಿಡುವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದು, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂದು ಹಾಸನ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಆಗಿರುವ ಭವಾನಿ ರೇವಣ್ಣ ಅವರು ಹೇಳಿದ್ದಾರೆ.

    ಜಿಲ್ಲೆಯ ಚಿಕ್ಕಹೊನ್ನೇನಹಳ್ಳಿಯಲ್ಲಿ ಗ್ರಾಮದ ಟ್ರಸ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪತಿ ರೇವಣ್ಣ ಅವರು ಯಾವಾಗ್ಲು ದೊಡ್ಡ ಕೆಲಸದ ಬಗ್ಗೆಯೇ ಯೋಚನೆ ಮಾಡುತ್ತಾರೆ. ಜನರು ಸಣ್ಣ ಪುಟ್ಟ ಕೆಲಸ ಕೇಳಿದರೆ ಕೂಡ ಮಾಡಿಸೋಣ ಎಂದು ಯಾವುದನ್ನೂ ಕೈಬಿಡದೆ ಮಾಡುತ್ತಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದು, ಅದಕ್ಕೆ ತಕ್ಕಂತೆ ಸಾಕಷ್ಟು ಅನುದಾನ ತಂದು ಕೆಲಸ ಮಾಡುತ್ತಿದ್ದಾರೆ ಎಂದು ಹಾಡಿ ಹೊಗಳಿದರು.

    ರೇವಣ್ಣ ಅವರ ಬಳಿ ಆಗುವುದಿಲ್ಲ ಎಂಬ ಪದವೇ ಇಲ್ಲ. ಅವರು ಹಾಸನದಿಂದ ಚನ್ನರಾಯಪಟ್ಟಣ ಕ್ರಾಸ್ ಮಾಡಿ ತೆರಳಿದ್ದಾರೆ ಎಂದರೆ ಯಾವುದೋ ಫೈಲ್ ಹಿಡಿದು ಬೆಂಗಳೂರಿಗೆ ಹೊರಟಿದ್ದಾರೆ ಎಂದರ್ಥ. ಆ ಕಡೆಯಿಂದ ನೆಲಮಂಗಲ ಬಿಟ್ಟು ಬಂದಿದ್ದರೆ ಅಂದರೆ ಆ ಕೆಲಸ ಮಾಡಿಸಿಕೊಂಡು ವಾಪಸ್ ಬರುತ್ತಿದ್ದಾರೆ ಎಂದರ್ಥ ಎಂದು ಯೋಚನೆ ಮಾಡುತ್ತೇವೆ. ಒಂದೊಮ್ಮೆ ಅವರು ಬೆಂಗಳೂರಿನಲ್ಲೇ ಉಳಿದರೆ ಹೋದ ಕೆಲಸಕ್ಕೆ ಸಂಬಂಧ ಪಟ್ಟ ಸಚಿವರೋ ಅಥವಾ ಅಧಿಕಾರಿಯೋ ಸಿಕ್ಕಿಲ್ಲ ಎಂದರ್ಥ ಎಂದು ತಿಳಿಸಿದರು.

    ರಾಜ್ಯವೇ ಅವರಿಗೆ ಒಂದು ಕಣ್ಣಾದ್ರೆ, ಹಾಸನವೇ ಒಂದು ಕಣ್ಣಿನಂತೆ ಎಂದು ಜನ ಹೇಳುತ್ತಾರೆ. ಆದರಂತೆ ಅವರು ಹೆಚ್ಚಿನ ಅನುದಾನ ತಂದು ಕೆಲಸ ಮಾಡಿಸುತ್ತಾರೆ. ಅವರಿಗೆ ನಮ್ಮ ಕುಟುಂಬದ ಸಂಪೂರ್ಣ ಬೆಂಬಲ ಇದ್ದು, ಕೆಲಸ ಮಾಡುವುದಲ್ಲಿ ರೇವಣ್ಣರವರು ಯಾವತ್ತೂ ಮೊದಲ ಸ್ಥಾನಕ್ಕೆ ಬರುತ್ತಾರೆ ಎಂದು ಪತಿ ಕೆಲಸದ ಬಗ್ಗೆ ಪತ್ನಿ ಭವಾನಿ ರೇವಣ್ಣ ಅವರು ಫುಲ್ ಮಾರ್ಕ್ಸ್‌ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕೋಪಯೋಗಿ ಇಲಾಖೆಯಿಂದ ಕಬ್ಬನ್ ಪಾರ್ಕ್ ಗೆ ಸ್ಕೆಚ್..!

    ಲೋಕೋಪಯೋಗಿ ಇಲಾಖೆಯಿಂದ ಕಬ್ಬನ್ ಪಾರ್ಕ್ ಗೆ ಸ್ಕೆಚ್..!

    ಬೆಂಗಳೂರು: ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಹೋಟೆಲ್ ನಿರ್ಮಾಣಕ್ಕೆ ಅನುಮತಿ ನೀಡುವ ಮೂಲಕ ಪಾರ್ಕ್‍ಗೆ ಲೋಕೋಪಯೋಗಿ ಇಲಾಖೆ ಸ್ಕೆಚ್ ಹಾಕಿರುವುದು ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಹೆಚ್ಚು ಬಿಲ್ಡಿಂಗ್  ಗಳ ನಿರ್ಮಾಣ ನಿಷಿದ್ಧವಾಗಿದೆ. ಆದರೂ, ಅಕ್ರಮ ಕಟ್ಟಡ, ಹೋಟೆಲ್‍ಗಳ ನಿರ್ಮಾಣಕ್ಕೆ ಇಲಾಖೆ ಅನುಮತಿ ನೀಡಿದೆ. ಇದ್ರಿಂದ ಕಬ್ಬನ್ ಪಾರ್ಕ್ ಗೆ ತೊಂದರೆಯಾಗ್ತಿದೆ ಎಂದು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ನಿಂದ ಲೋಕೋಪಯೋಗಿ ಇಲಾಖೆ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.

    ಬೆಂಗಳೂರಿನಲ್ಲಿ ಇದೀಗ ಉಳಿದಿರುವ ಪ್ರಮುಖ ಉದ್ಯಾನವನಗಳೆಂದರೆ ಲಾಲ್ ಬಗ್ ಮತ್ತು ಕಬ್ಬನ್ ಪಾರ್ಕ್. ಇತ್ತೀಚೆಗೆ ಕಬ್ಬನ್ ಪಾರ್ಕ್ ನಲ್ಲಿ ಕೆಲವೊಂದು ಸರ್ಕಾರಿ ಕಟ್ಟಡಗಳು ಹಾಗೂ ಅಂಗಡಿಗಳು ತಲೆ ಎತ್ತುತ್ತಿವೆ. ಅದರಲ್ಲೂ ಕೂಡ ಲೋಕೋಪಯೋಗಿ ಸಚಿವರಾಗಿರುವ ಎಚ್ ಡಿ ರೇವಣ್ಣ ಅವರು ಅಧಿಕಾರಿ ಸ್ವೀಕರಿಸಿದ ನಂತರ ಇನ್ನೂ ಹೆಚ್ಚಾಗಿದೆ ಅಂತ ಪರಿಸರವಾದಿ ಸಾಯಿದತ್ತ ಆರೋಪಿಸಿದ್ದಾರೆ.

    ನಗರದ ಹೃದಯಭಾಗದಲ್ಲಿರುವಂತದ್ದು ಕಬ್ಬನ್ ಪಾರ್ಕ್ ಒಂದೇ. ಹೀಗಾಗಿ ಇದೀಗ ಸರ್ಕಾರವೇ ಈ ಒಂದು ಉದ್ಯಾನವನವನ್ನು ನಾಶ ಮಾಡಲು ಹೊರಟಿರುವುದು ನಿಜಕ್ಕೂ ದುರದೃಷ್ಟಕರವಾಗಿದೆ. ಇನ್ನು ಮುಂದಾದರೂ ಕೂಡ ಕಬ್ಬನ್ ಪಾರ್ಕ್ ನಲ್ಲಿ ಯಾವುದೇ ರೀತಿಯ ಕಟ್ಟಡಗಳು ಆಗದೇ ಇರುವಂತೆ ನೋಡಿಕೊಳ್ಳಬೇಕು. ಇತ್ತೀಚೆಗೆ ನಗರದ ವಾತಾವರಣ ಕೂಡ ಹದಗೆಡುತ್ತಿದ್ದು, ಈ ಒಂದು ಉದ್ಯಾನವನವನ್ನು ಸಂರಕ್ಷಿಸುವ ಕಾರ್ಯ ಮಾಡಬೇಕು ಅಂತ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv