Tag: Department of Health

  • ಎನ್‍ಸಿಡಿ ಕ್ಲಿನಿಕ್‍ಗಳ ಪ್ರಾರಂಭಕ್ಕೆ ಮುಂದಾದ ಆರೋಗ್ಯ ಇಲಾಖೆ

    ಎನ್‍ಸಿಡಿ ಕ್ಲಿನಿಕ್‍ಗಳ ಪ್ರಾರಂಭಕ್ಕೆ ಮುಂದಾದ ಆರೋಗ್ಯ ಇಲಾಖೆ

    – ಶೀಘ್ರವೇ 100 ಎನ್‍ಸಿಡಿ ಕ್ಲಿನಿಕ್‍ಗಳ ಪ್ರಾರಂಭ

    ಬೆಂಗಳೂರು: ಬದಲಾದ ಜೀವನಶೈಲಿ, ಮಾಲಿನ್ಯ, ಆಹಾರ ಕ್ರಮ ಸೇರಿದಂತೆ ವಿವಿಧ ಕಾರಣಗಳಿಂದ ಸಾಂಕ್ರಾಮಿಕವಲ್ಲದ ರೋಗಗಳಿಗೆ ಒಳಪಡುವವರ ಸಂಖ್ಯೆ ಒಂದೇ ಸಮನೆ ಹೆಚ್ಚಳವಾಗುತ್ತಿದೆ. ಹಾಗಾಗಿ ರಾಜ್ಯದಲ್ಲಿ ಹೊಸದಾಗಿ 100 ಎನ್‍ಸಿಡಿ (ಸಾಂಕ್ರಾಮಿಕವಲ್ಲದ ರೋಗಗಳಿಗೆ ಚಿಕಿತ್ಸೆ) ಕ್ಲಿನಿಕ್‍ಗಳನ್ನು ಪ್ರಾರಂಭಿಸಲಾಗುತ್ತಿದೆ.

    ಸಾಮಾನ್ಯ ಕ್ಲಿನಿಕ್‍ಗಳಿಗಿಂತ ವಿಶಿಷ್ಟವಾಗಿರುವ ಎನ್‍ಸಿಡಿ ಕ್ಲಿನಿಕ್‍ನಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ರಾಜ್ಯದಲ್ಲಿ 2010 ಮತ್ತು 11ನೇ ಸಾಲಿನಲ್ಲಿ ಕೋಲಾರ ಮತ್ತು ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಎನ್‍ಸಿಡಿ ಕ್ಲಿನಿಕ್‍ಗಳನ್ನು ಪ್ರಾರಂಭಿಸಲಾಯಿತು. ಹಂತ ಹಂತವಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸಲು ಮುಂದಾಗುತ್ತಿದೆ.

    ತಾಲೂಕುಗಳಲ್ಲಿಯೂ 200ಕ್ಕೂ ಅಧಿಕ ಎನ್‍ಸಿಡಿ ಕ್ಲಿನಿಕ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಾರಂಭಿಕ ಹಂತದಲ್ಲಿಯೇ ರೋಗ ಪತ್ತೆಗೆ ಸಹಕಾರಿಯಾಗಿದೆ. ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್, ಹೃದಯ ಕಾಯಿಲೆಗಳಿಗೆ ಪ್ರತಿ ವರ್ಷ ಲಕ್ಷಾಂತರ ಮಂದಿ ಈ ಕೇಂದ್ರಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದ ಎಲ್ಲ ತಾಲೂಕಿನಲ್ಲಿಯೂ ಈ ಸೇವೆಯನ್ನು ವಿಸ್ತರಿಸಿ, ಗ್ರಾಮೀಣ ಮಟ್ಟಕ್ಕೆ ಕೊಂಡೊಯ್ಯಲು ಆರೋಗ್ಯ ಇಲಾಖೆ ಮುಂದಾಗಿದೆ.

    ಕಳೆದ ವರ್ಷ 31.33 ಲಕ್ಷ ಮಂದಿ ಎನ್‍ಸಿಡಿ ಕ್ಲಿನಿಕ್‍ಗಳಿಗೆ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 18 ಲಕ್ಷದಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. 3,944 ಮಂದಿಗೆ ತೃತೀಯ ಹಂತದ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ.

    ಮರಣ ತಡೆಗೆ ಸಹಾಯಕ: 20ನೇ ಶತಾಮಾನದಲ್ಲಿ ಸಾಂಕ್ರಾಮಿಕ ರೋಗ ತಾಂಡವವಾಡಿದರೆ, 21ನೇ ಶತಮಾನದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ, ಚಿಕಿತ್ಸೆ ನೀಡಿದಲ್ಲಿ ರೋಗದಿಂದ ಸಾಯುವವರ ಸಂಖ್ಯೆ ತಡೆಯಲು ಸಾಧ್ಯ. ಆದ್ದರಿಂದ ರಾಜ್ಯದ ಎಲ್ಲೆಡೆ ಕೇಂದ್ರಗಳನ್ನು ಆರಂಭಿಸುವುದು ನಮ್ಮ ಉದ್ದೇಶ. ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪನಿರ್ದೇಶಕ ಡಾ. ರಂಗಸ್ವಾಮಿ ಮಾಹಿತಿ ನೀಡಿದರು.

    ಜಾಗೃತಿ ಕೊರತೆಯಿಂದಾಗಿ ಬಹುತೇಕರು ಅಂತಿಮ ಹಂತದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಬದುಕುಳಿಯುವ ಅವಕಾಶಗಳು ಕಡಿಮೆ ಇರುತ್ತದೆ. ಕ್ಯಾನ್ಸರ್ ನಂತಹ ಕಾಯಿಲೆಗಳ ಲಕ್ಷಣವನ್ನು ಆರಂಭಿಕ ಹಂತದಲ್ಲಿಯೇ ಮನಗಂಡು ಅಥವಾ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ರಂಗಸ್ವಾಮಿ ಹೇಳಿದರು.

    ಪ್ರತಿ ಕೇಂದ್ರದಲ್ಲಿಯೂ ಮೂವರು ತಜ್ಞ ವೈದ್ಯರು, ದಾದಿಯರು ಸೇರಿ 10 ಮಂದಿ ಸಿಬ್ಬಂದಿ ಇರಬೇಕು. ಆದರೆ ಬಹುತೇಕ ಕೇಂದ್ರಗಳಲ್ಲಿ ವೈದ್ಯರ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ಕ್ಲಿನಿಕ್‍ಗಳಿಗೆ ಬರುವರಿಗೆ ಸೇವೆ ವಿಳಂಬವಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.

  • ಕೊರೊನಾ ವೈರಸ್‍ಗೆ ಹೋಮಿಯೋಪತಿ ಔಷಧಿ ಇಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

    ಕೊರೊನಾ ವೈರಸ್‍ಗೆ ಹೋಮಿಯೋಪತಿ ಔಷಧಿ ಇಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

    -ವದಂತಿಗೆ ತೆರೆ ಎಳೆದ ಆರೋಗ್ಯ ಇಲಾಖೆ

    ಬೆಂಗಳೂರು: ಕೊರೊನಾ ವೈರಸ್‍ಗೆ ಯಾವುದೇ ಹೊಮೀಯೋಪತಿ ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

    ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ಸ್ಪಷ್ಟಪಡಿಸಿದ್ದು, ಇತ್ತೀಚೆಗೆ ಮಾರುಕಟ್ಟೆಯಲ್ಲಿ Arssenicmm albhm 30 CH ಎಂಬ ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಮಾರಾಟಗಾರರು ಸುದ್ದಿಯನ್ನು ಹಬ್ಬಿಸುತ್ತಿದ್ದರು. ಆದರೆ ಇದು ಸುಳ್ಳು ವದಂತಿ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದನ್ನು ಓದಿ: ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?

    ಭಾರತ ಸರ್ಕಾರ ಇದಕ್ಕೆ ಯಾವುದೇ ಮಾರ್ಗ ಸೂಚಿಗಳನ್ನು ಸೂಚಿಸಿಲ್ಲ. ಕೆಲವು ಕಂಪನಿಗಳು ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದೆಲ್ಲಾ ಸುಳ್ಳು ನಂಬಬೇಡಿ ಎಂದು ಆರೋಗ್ಯ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇದನ್ನು ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೋನಾ?

    ಚೀನಾದಲ್ಲಿ ಜನವರಿ 5 ರಂದು ಕೊರೊನಾ ಪತ್ತೆಯಾಗಿದ್ದು, ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಲಾಗಿದೆ. ತೀವ್ರ ಜ್ವರ, ಎದೆನೋವು, ನೆಗಡಿ, ಕೆಮ್ಮು ಮತ್ತು ತೀವ್ರ ಉಸಿರಾಟ, ನ್ಯೂಮೋನಿಯಾ ಈ ರೀತಿ ರೋಗದ ಲಕ್ಷಣಗಳು ಕಂಡು ಬರುತ್ತವೆ. ಆಗಾಗಿ ನಿರ್ದಿಷ್ಟ ಔಷಧಿಯನ್ನು ಕಂಡು ಹಿಡಿದಿಲ್ಲ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

  • ಚೀನಾದಿಂದ ವಿದ್ಯಾರ್ಥಿನಿ ವಾಪಸ್ – ಮಂಡ್ಯದಲ್ಲಿ ಅಲರ್ಟ್

    ಚೀನಾದಿಂದ ವಿದ್ಯಾರ್ಥಿನಿ ವಾಪಸ್ – ಮಂಡ್ಯದಲ್ಲಿ ಅಲರ್ಟ್

    ಮಂಡ್ಯ: ಕೊರೋನಾ ವೈರಸ್ ಹಿನ್ನೆಲೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲೂ ಸಹ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಡ್ಯ ಮೂಲದ ಯುವತಿ ತವರಿಗೆ ಬಂದಿದ್ದು, ಜಿಲ್ಲೆಯಾದ್ಯಂತ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಕಳೆದ ಐದು ದಿನದ ಹಿಂದೆ ಚೀನಾದಿಂದ ಬಂದಿರುವ ಯುವತಿಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಯುವತಿಯ ರಕ್ತ ಕಣದಲ್ಲಿ ಕೊರೋನಾ ವೈರಸ್ ಬಂದಿರುವ ಯಾವುದೇ ಲಕ್ಷಣಗಳು ಗೋಚರವಾಗಿಲ್ಲ. ಈ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.

    ಜೊತೆಗೆ ಯುವತಿಗೆ ಮನೆಯಿಂದ 15 ದಿನಗಳ ಕಾಲ ಹೊರಗಡೆ ಬಾರದಂತೆ ವೈದ್ಯರು ಸೂಚನೆ ನೀಡಿದ್ದಾರೆ. ಚೀನಾದಲ್ಲಿ ಕೊರೋನಾ ವೈರಸ್ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐದು ದಿನಗಳ ಹಿಂದೆ ವಿದ್ಯಾರ್ಥಿನಿ ಮಂಡ್ಯಕ್ಕೆ ಮರಳಿದ್ದಾಳೆ.

    ಕೊರೋನಾ ವೈರಸ್ ಹಿನ್ನೆಲೆ ಮಂಡ್ಯ ಜಿಲ್ಲೆಯಾದ್ಯಾಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಫುಲ್ ಅಲರ್ಟ್ ಆಗಿದೆ. ಈಗಾಗಲೇ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಒಂದು ವಾರ್ಡ್ ತೆರದು ಅಲ್ಲಿ ಐದು ಹಾಸಿಗೆಗಳನ್ನು ಸಹ ಮೀಸಲಿಡಲಾಗಿದೆ. ಅಲ್ಲದೇ ಜನರಲ್ಲಿ ಈ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಬಿ. ಮಂಜೇಗೌಡ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಹುಷಾರಪ್ಪೋ ಹುಷಾರು – ಇದು ‘ಆಪರೇಷನ್ ಡರ್ಟಿ ಸ್ಟಿಚ್’ ಕಥೆ

    ಹುಷಾರಪ್ಪೋ ಹುಷಾರು – ಇದು ‘ಆಪರೇಷನ್ ಡರ್ಟಿ ಸ್ಟಿಚ್’ ಕಥೆ

    – ಶಸ್ತ್ರ ಚಿಕಿತ್ಸೆಗೆ ಬಳಸುವ ದಾರ ತಯಾರಿಸುವ ಫ್ಯಾಕ್ಟರಿಯ ನೈಜ ಚಿತ್ರಣ
    – ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ದಂಧೆ ಬಯಲು

    ಬೆಂಗಳೂರು: ಸಿಲಿಕಾನ್ ಸಿಟಿಯ ಅಂದ್ರಳ್ಳಿಯಲ್ಲಿ ನಡೆಯುತ್ತಿರುವ ಆಪರೇಷನ್‍ಗೆ ಬಳಸೋ ದಾರದ ಭಯಾನಕ ದಂಧೆ ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ಅಂದ್ರಳ್ಳಿಯ ಕಾಡು ದಾರಿ ರೀತಿ ಕಾಣುವ ಮಾರ್ಗದಲ್ಲಿ ಒಂದು ಫ್ಯಾಕ್ಟರಿ ಇದೆ. ಈ ಫ್ಯಾಕ್ಟರಿಯಲ್ಲಿ ಆಪರೇಷನ್‍ಗೆ ಬಳಸುವ ದಾರವನ್ನು ತಯಾರಿಸಲಾಗುತ್ತದೆ. ಇದರ ಕರಾಳ ಮುಖವನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸಿ ಬಟಾಬಯಲು ಮಾಡಿದೆ.

    ಈ ಫ್ಯಾಕ್ಟರಿ ಹತ್ತಿರ ಹೋದರೆ ಸತ್ತ ಹೆಣದ ವಾಸನೆ ಮೂಗಿಗೆ ಅಪ್ಪಳಿಸುತ್ತೆ. ಕೇವಲ 30-40 ಸೈಟಲ್ಲಿ ಕಟ್ಟಿಕೊಂಡಿರುವ ಈ ಗೋಡನ್ ಒಳಗೆ ಹೋದರೆ ಕಾಣಸಿಗೋದು ಉತ್ತರ ಭಾರತದ ಕೆಲಸಗಾರರು, ಕೊಳಕು ಕೊಳಕಾದ ನೀಲಿ ಬಣ್ಣದ ಡ್ರಂಗಳು. ಇವೆಲ್ಲದರ ನಡುವೆಯೇ ಇಲ್ಲಿರುವ ಕೆಲಸಗಾರರು ದಾರಗಳ ಗೊಂಚಲಲ್ಲಿ ಒಂದೊಂದೆ ದಾರವನ್ನ ಎಳೆದು ಹಾಕುತ್ತಿದ್ದರು. ಈ ದಾರಗಳು ವೈದ್ಯರು ಆಪರೇಷನ್ ಮಾಡುವಾಗ ಹೊಲಿಗೆ ಹಾಕಲು ಬಳಸುವ ದಾರಗಳಿದ್ದು, ಇದು ತಯಾರಾಗುವ ಪರಿ ನಿಜಕ್ಕೂ ಭಯಾನಕವಾಗಿದೆ.

    ಕೊಳಕು ಫ್ಯಾಕ್ಟರಿಯಲ್ಲಿ ದಾರಗಳನ್ನು ಕುರಿ, ಮೇಕೆಗಳ ಕರುಳಿನಿಂದ ತಯಾರಿಸಲಾಗುತ್ತಿದೆ. ಕರುಳಿನಿಂದ ತಯಾರಾದ ದಾರವನ್ನೇ ವೈದರು ಹಿಂದಿನಿಂದಲೂ ರೋಗಿಗೆ ಆಪರೇಷನ್ ಮಾಡಿದ ಬಳಿಕ ಹೊಲಿಗೆ ಹಾಕಲು ಬಳಸುತ್ತಾ ಬಂದಿದ್ದಾರೆ. ಆದರೆ ಇದನ್ನು ತಯಾರು ಮಾಡುವ ಕೆಲಸ ಪ್ರಮಾಣೀಕೃತ ಫಾರ್ಮಾಸಿಗಳು ಮಾತ್ರ ಮಾಡಬೇಕು. ಆದರೆ ಬೆಂಗಳೂರಿನ ಅಂದ್ರಳ್ಳಿಯ ತಯಾರಾಗುತ್ತಿರುವ ಆಪರೇಷನ್ ದಾರದ ಫ್ಯಾಕ್ಟರಿಗೆ ಯಾವುದೇ ಪರವಾನಿಗೆ ಇಲ್ಲ.

    ಈ ದಾರಗಳನ್ನು ತಯಾರಿಸುವ ಗೋಡಾನ್ ಒಳಗೆ ಹೋದರೆ ಕೆಲಸಗಾರರು ಕರುಳನ್ನ ಕೈಗಳಲ್ಲಿ ತೊಳೆದು, ಒಂದೊಂದೆ ಏಳೆಯನ್ನ ಬಿಡಿಸುತ್ತಿರುವುದು ಪಬ್ಲಿಕ್ ಟಿವಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಆಪರೇಷನ್ ದಾರಗಳನ್ನು ತಯಾರಿಸುವಾಗ ಇಲ್ಲಿನ ಕೆಲಸಗಾರರು ಸ್ವಚ್ಛತೆ ಮಾಡಲು ಒಂದು ಗ್ಲೌಸ್ ಕೂಡ ಹಾಕಿಕೊಳ್ಳುವುದಿಲ್ಲ. ಅಲ್ಲದೆ ಕೆಲಸಗಾರರನ್ನು ಮಾತನಾಡಿಸಿದಾಗ ಅವರ ಮುಖದಲ್ಲಿನ ಗಾಬರಿಯೇ ಅವರು ಮಾಡುವ ದಂಧೆ ಏನು ಎನ್ನುವುದನ್ನು ಸಾರಿ ಹೇಳುವಂತಿತ್ತು.

    ನಮ್ಮ ಪ್ರತಿನಿಧಿ ಕೆಲಸಗಾರೊಬ್ಬರನ್ನು ಪ್ರಶ್ನಿಸಿದಾಗ, ನಾನು ಇಲ್ಲಿ ಕೆಲಸ ಮಾಡ್ತೀನಿ ಓನರ್ ಬಗ್ಗೆ ಗೊತ್ತಿಲ್ಲ ಎಂದರು. ಬಳಿಕ ಇದು ಆಪರೇಷನ್ ಗೆ ಬಳಸುವ ದಾರವೇ ಎಂದು ಕೇಳಿದಾಗ ಮೊದಲು ಹೌದು ಎಂದ ಕೆಲಸ ಮಾಡುತ್ತಿದ್ದ ಮಹಿಳೆ ಬಳಿಕ ಇದು ಆಪರೇಷನ್ ದಾರವಲ್ಲ, ಇದು ಬ್ಯಾಡ್ಮಿಂಟನ್ ನೆಟ್‍ಗೆ ಬಳಸುವ ದಾರ ಎಂದು ವರಸೆ ಬದಲಿಸಿದರು. ಇದು ಕುರಿ ಕರುಳಿನಿಂದ ತಯಾರಾಗುತ್ತೆ. ಪೂರ್ತಿ ಇಲ್ಲೇ ತಯಾರಾಗುವುದಿಲ್ಲ. ನಾವು ದಾರಗಳನ್ನು ಮಾಡಿ ಬೇರೆಯವರಿಗೆ ಕಳುಹಿಸುತ್ತೇವೆ. ಅವರು ಕೆಲಸ ಪೂರ್ತಿ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

    ಆದರೆ ಇಲ್ಲಿ ಕೆಲಸ ಮಾಡುವ ಇತರೇ ಕೆಲಸಗಾರರು ಇದು ಆಪರೇಷನ್ ದಾರ ಅಂತ ನಿಜ ಬಾಯಿಬಿಟ್ಟಿದ್ದಾರೆ. ಆದರೆ ಮಹಿಳೆ ಮಾತ್ರ ಬ್ಯಾಡ್ಮಿಂಟನ್ ನೆಟ್‍ಗೆ ಬಳಸುವ ದಾರ ಎಂದಿದ್ದಾಳೆ. ಮಹಿಳೆ ಇಲ್ಲಿ ಮಾಡೋ ದಂಧೆಯನ್ನ ಮುಚ್ಚಿಕೊಳ್ಳೊಕೆ ಸರ್ಕಸ್ ಮಾಡಿದ್ದಾಳೆ. ಆದರೆ ಈ ಗೋಡನ್‍ಗೆ ನೀರು ಸರಬರಾಜು ಮಾಡುತ್ತಿದ್ದ ವ್ಯಕ್ತಿ ಪಬ್ಲಿಕ್ ಟಿವಿಗೆ ಇಲ್ಲಿನ ದಂಧೆಯ ಬಗ್ಗೆ ವಿವರಿಸಿದರು.

    ನಾನು ಇಲ್ಲಿಗೆ ನೀರು ಸರಬರಾಜು ಮಾಡುತ್ತೇನೆ. ಮೇಕೆ, ಕುರಿ ಕರುಳುಗಳನ್ನು ತಂದು ಆಪರೇಷನ್ ದಾರ ತಯಾರು ಮಾಡುತ್ತಾರೆ. ಇಲ್ಲಿ 15 ರಿಂದ 20 ಜನ ಕೆಲಸ ಮಾಡ್ತಾರೆ. ಕರುಳು ತೊಳೆದ ನೀರನ್ನು ಈ ಹಿಂದೆ ಚರಂಡಿಗೆ ಬಿಡುತ್ತಿದ್ದರು. ಆದ್ದರಿಂದ ಜಿಕೆಡಬ್ಲ್ಯು ಲೇಔಟ್‍ನಲ್ಲಿದ್ದ ಫ್ಯಾಕ್ಟರಿಯನ್ನು ಸ್ಥಳೀಯರು ಗಲಾಟೆ ಮಾಡಿ ಕ್ಲೋಸ್ ಮಾಡಿಸಿದರು. ಮೊದಲು ಈ ದಾರವನ್ನು ಸ್ಯಾಂಟ್ ಫ್ರಾನಿಕ್ ಅನ್ನೊ ಕಂಪನಿ ತಯಾರಿಸುತಿತ್ತು. ಈಗ ಇದು ಯಾವುದು ಎನ್ನುವ ಬಗ್ಗೆ ಗೊತ್ತಿಲ್ಲ. ಇಲ್ಲಿಗೆ ನೀರು ಸರಬರಾಜು ಮಾಡೋವಾಗಲೇ ಇದು ಅಕ್ರಮ ವ್ಯವಹಾರ ಅಂತ ಅನಿಸುತ್ತಿತ್ತು. ಹಾಗೆಯೇ ಇಲ್ಲಿ ಮಹಿಳೆಯರು ಜಾಸ್ತಿ ಕೆಲಸ ಮಾಡುತ್ತಾರೆ ಎಂದು ವ್ಯಕ್ತಿ ದಂಧೆಯ ಬಗ್ಗೆ ಮಾಹಿತಿ ನೀಡಿದರು.

    ಈ ರೀತಿ ಯಾವುದೇ ಭಯವಿಲ್ಲದೆ ಆಪರೇಷನ್ ದಾರದ ದಂಧೆ ನಡೆಸುತ್ತಿದ್ದಾರೆ. ಆದರೆ ಈ ಬಗ್ಗೆ ಆರೋಗ್ಯ ಇಲಾಖೆಗೆ, ಮಾಲಿನ್ಯ ನಿಯಂತ್ರಣ ಮಂಡಳಿಗೂ ಮಾಹಿತಿ ಇಲ್ಲವೇ? ಅಥವಾ ಎಲ್ಲಾ ಗೊತ್ತಿದ್ದು ಸುಮ್ಮನಿದ್ದಾರಾ ಎನ್ನುವ ಅನುಮಾನಗಳು ಹುಟ್ಟುಕೊಂಡಿದೆ. ಯಾವುದೇ ಅನುಮತಿಯಿಲ್ಲದೆ ತಮಗಿಷ್ಟ ಬಂದ ಹಾಗೆ ಈ ದಂಧೆಯನ್ನ ನಡೆಸಲಾಗುತ್ತಿದೆ. ಯಾವುದೇ ಬೋರ್ಡ್ ಹಾಕದೇ, ಅನುಮತಿ ಪಡೆಯದೆ ಸಾವು ಬದುಕಿನ ಮಧ್ಯೆ ಹೋರಾಡುವ ಜೀವಗಳಿಗೆ ಕುತ್ತು ತರೋ ರೀತಿಯಲ್ಲಿದೆ ಈ ದಂಧೆ. ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ಈ ದಂಧೆಗೆ ಮೊದಲು ಬ್ರೇಕ್ ಹಾಕಿ, ಅಕ್ರಮದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ.

  • ಜ.19ಕ್ಕೆ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ- ಮಿಸ್ ಮಾಡದೆ ಲಸಿಕೆ ಹಾಕಿಸಿ

    ಜ.19ಕ್ಕೆ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ- ಮಿಸ್ ಮಾಡದೆ ಲಸಿಕೆ ಹಾಕಿಸಿ

    ಬೆಂಗಳೂರು: ಮಕ್ಕಳ ಜೀವ ಸಂಜೀವಿನಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ಸರ್ಕಾರ ಚಾಲನೆ ನೀಡಲಾಗಿದೆ. ಮೊದಲ ಹಂತದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಜನವರಿ 19 ರಂದು ರಾಜ್ಯಾದ್ಯಂತ ನಡೆಯಲಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ಶ್ರೀರಾಮುಲು ಪಲ್ಸ್ ಪೋಲಿಯೋ 0-5 ವರ್ಷದ ಎಲ್ಲಾ ಮಕ್ಕಳಿಗೂ ಹಾಕಿಸಿ. ಯಾವುದೇ ಗಾಳಿ ಸುದ್ದಿಗೆ ಕಿವಿ ಕೊಡಬೇಡಿ ಎಂದು ಮನವಿ ಮಾಡಿದರು.

    ಈ ಬಾರಿ ಸುಮಾರು 64,65,561 ಮಕ್ಕಳು ಲಸಿಕೆ ಹಾಕಿಸಿಕೊಳ್ಳಲಿದ್ದಾರೆ. ಲಸಿಕೆ ಹಾಕಲು 33,021 ಬೂತ್ ಗಳು, 46,620 ತಂಡಗಳು, 1,09,554 ಕಾರ್ಯಕರ್ತರನ್ನು ನಿಯೋಜನೆ ಮಾಡಲಾಗಿದೆ. 7,105 ಮೇಲ್ವಿಚಾರಕರು, 977 ಸಂಚಾರಿ ತಂಡಗಳು, 2,111 ಟ್ರಾನ್ಸಿಟ್ ತಂಡಗಳನ್ನು ರಚನೆ ಮಾಡಲಾಗಿದೆ. ರಾಜಾದ್ಯಂತ ಬೆಳಗ್ಗೆ 8 ರಿಂದ ಸಂಜೆ 5 ವರೆಗೆ ಲಸಿಕೆ ಹಾಕಲಾಗುತ್ತೆ. ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಲಸಿಕೆ ಹಾಕಲಿದ್ದಾರೆ.

    ಬೀದರ್, ಕಲಬುರ್ಗಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ ವಿಜಯಪುರ, ಗದಗದಲ್ಲಿ ಹೆಚ್ಚು ಕೇಂದ್ರಗಳನ್ನು ರಚನೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ 104ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಸ್ಲಮ್, ಗುಡ್ಡಗಾಡು ಪ್ರದೇಶ ಮತ್ತು ಬುಡಕಟ್ಟು ಪ್ರದೇಶದಲ್ಲೂ ಈ ಬಾರಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಕ್ರಮವಹಿಸಲಾಗಿದೆ.

    ಇದೇ ಮೊದಲ ಬಾರಿಗೆ ಲಸಿಕೆ ಹಾಕಿಸಲು ಮೊಬೈಲ್ ಆಪ್ ಜಾರಿಗೆ ತಂದಿದ್ದಾರೆ. “Nearby vaccination center Karnataka” ಆಪ್ ಡೌನ್ ಲೋಡ್ ಮಾಡಿಕೊಂಡು ಹತ್ತಿರದ ಲಸಿಕೆ ಕೇಂದ್ರದ ಮಾಹಿತಿ ಪಡೆದು ಮಕ್ಕಳಿಗೆ ಲಸಿಕೆ ಹಾಕಿಸಬಹುದಾಗಿದೆ.

  • ಆರೋಗ್ಯ ಇಲಾಖೆ ನಿರ್ಲಕ್ಷ್ಯ – ಗ್ರಾಮದ ಎಲ್ಲರಿಗೂ ಸಾಮೂಹಿಕ ಜ್ವರ

    ಆರೋಗ್ಯ ಇಲಾಖೆ ನಿರ್ಲಕ್ಷ್ಯ – ಗ್ರಾಮದ ಎಲ್ಲರಿಗೂ ಸಾಮೂಹಿಕ ಜ್ವರ

    ಚಾಮರಾಜನಗರ: ಸಮರ್ಪಕ ಚಿಕಿತ್ಸೆ ದೊರೆಯದೆ ಚಾಮರಾಜನಗರ ಜಿಲ್ಲೆಯ ಕಾಡಂಚಿನ ಉಯಿಲನತ್ತ ಗ್ರಾಮಸ್ಥರು ಸಾಮೂಹಿಕವಾಗಿ ಜ್ವರ, ಮೈ-ಕೈನೋವು, ಮೂಳೆನೋವು ಮತ್ತು ಸಂದುನೋವಿನಿಂದ ಬಳಲುತ್ತಿದ್ದಾರೆ.

    ಹನೂರು ತಾಲೂಕು ಉಯಿಲನತ್ತ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳಿದ್ದು ಪ್ರತಿ ಕುಟುಂಬದಲ್ಲೂ ಒಬ್ಬರಲ್ಲ ಒಬ್ಬರು ಜ್ವರ, ಮೈ-ಕೈನೋವು, ಮೂಳೆ ನೋವು, ಸಂದುನೋವಿನಿಂದ ಬಳಲುತ್ತಿದ್ದಾರೆ. ಇವರಿಗೆ ಕೇವಲ ಮಾತ್ರೆ ನೀಡಿ ಮತ್ತೆ ಯಾವುದೇ ಚಿಕಿತ್ಸೆ ನೀಡದೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ.

    ತೀವ್ರ ಜ್ವರ ಹಾಗು ಸಂದುನೋವಿನಿಂದ ಬಳಲುತ್ತಿರುವುದರಿಂದ ಪಕ್ಕದ ಊರುಗಳಿಗೆ ತೆರಳಿ ಚಿಕಿತ್ಸೆ ಪಡೆಯುಲು ಸಾಧ್ಯವಾಗದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲೇ ಒಂದು ಕ್ಯಾಂಪ್ ಮಾಡಿ ಸಮಪರ್ಕ ಚಿಕಿತ್ಸೆ ನೀಡಬೇಕು ಇಲ್ಲವೆ ತಾಲೂಕು ಆಸ್ಪತ್ರೆ ಹಾಗು ಜಿಲ್ಲಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಪಲ್ಸ್ ಪೋಲಿಯೋ ವದಂತಿ ಸುಳ್ಳು: ಆರೋಗ್ಯ ಇಲಾಖೆ ಸ್ಪಷ್ಟನೆ

    ಪಲ್ಸ್ ಪೋಲಿಯೋ ವದಂತಿ ಸುಳ್ಳು: ಆರೋಗ್ಯ ಇಲಾಖೆ ಸ್ಪಷ್ಟನೆ

    ಬೆಂಗಳೂರು: ಪಲ್ಸ್ ಪೋಲಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿ ಸುಳ್ಳು ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

    ಈ ಸಂಬಂಧ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಸುಳ್ಳು ಸುದ್ದಿಗೆ ಕಿವಿಗೊಡದಂತೆ ಸಾರ್ಜಜನಿಕರಿಗೆ ಮನವಿ ಮಾಡಿಕೊಂಡಿದೆ. ಪೋಷಕರು ಯಾವುದೇ ಆತಂಕವಿಲ್ಲದೇ ಮಕ್ಕಳಿಗೆ ಲಸಿಕೆ ಹಾಕಿಸಬಹುದು ಎಂದು ತಿಳಿಸಲಾಗಿದೆ.

    ಪೋಲಿಯೋ ಹನಿ ಬಗ್ಗೆ ಸೆಪ್ಟೆಂಬರ್ 20ರಂದು ಸಾಮಾಜಿಕ ಜಾಲತಾಣ ವಾಟ್ಸಪ್‍ನಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು. “ದಯಮಾಡಿ ಬೇಗ ಶೇರ್ ಮಾಡಿ, ನಾಳೆ 5 ವರ್ಷದ ಒಳಗೆ ಇರುವ ಮಕ್ಕಳಿಗೆ ಪೋಲಿಯೋ ಹಾಕಿಸ ಬೇಡಿ ಅದರಲ್ಲಿ ವೈರಸ್ ಬೆರೆಸಿರುತ್ತದೆ. ಪೋಲಿಯೋ ತಯಾರು ಮಾಡಿದ ಆ ಕಂಪನಿ ಯಜಮಾನರನ್ನು ಅರೆಸ್ಟ್ ಮಾಡಿದ್ದಾರೆ. ದಯಮಾಡಿ ಎಲ್ಲರಿಗೂ ತುರ್ತು ಶೇರ್ ಮಾಡಿ ಸತ್ಯ, ಸತ್ಯ” ಎಂಬ ಸುಳ್ಳು ಸಂದೇಶ ವಾಟ್ಸಪ್‍ನಲ್ಲಿ ಹರಿದಾಡುತ್ತಿತ್ತು. ಈ ರೀತಿಯ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

    ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, 2014ರಲ್ಲಿ ಭಾರತವು ವಿಶ್ವಸಂಸ್ಥೆಯಿಂದ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಬಿರುದು ಪಡೆದುಕೊಂಡಿದೆ. ಈ ಕುರಿತು ಸುಳ್ಳು ವದಂತಿ ಹೊರಡಿಸಬಾರದು ಎಂಬ ನಿದರ್ಶನ ನೀಡಲಾಗಿದೆ. ಆದರೂ ಅಪಪ್ರಚಾರ ನಡೆಯುತ್ತಿದೆ. ಪೋಷಕರು ಯಾವುದೇ ಆತಂಕವಿಲ್ಲದೇ ಲಸಿಕೆ ಹಾಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

    ಈ ಸಂಬಂಧ ಮಾಹಿತಿಯನ್ನು ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಜೊತೆಗೆ ಅಂಗನವಾಡಿ ಫಲಾನುಭವಿಗಳಿಗೆ ಹಾಗೂ ಪೋಷಕರಿಗೆ ತಿಳಿಸಲು ಸೂಕ್ತ ಕ್ರಮವಹಿಸುವಂತೆ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ, ಮೇಲ್ವಿಚಾರಕಿಯರಿಗೆ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸೂಚಿಸಲು ಕೋರಿ ಸುತ್ತೋಲೆ ಹೊರಡಿಸಲಾಗಿದೆ.

  • ಬೆಂಗಳೂರಿನಲ್ಲಿ ಹೆಚ್1ಎನ್1 ಮಹಾಮಾರಿ ಅಬ್ಬರ-ರಾಜ್ಯಾದ್ಯಂತ ಹೈ ಅಲರ್ಟ್

    ಬೆಂಗಳೂರಿನಲ್ಲಿ ಹೆಚ್1ಎನ್1 ಮಹಾಮಾರಿ ಅಬ್ಬರ-ರಾಜ್ಯಾದ್ಯಂತ ಹೈ ಅಲರ್ಟ್

    ಬೆಂಗಳೂರು: ನಗರದಲ್ಲಿ ಹೆಚ್1 ಎನ್1 ಪ್ರಕರಣಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ. ಮಹಾಮಳೆಯ ಬೆನ್ನೆಲ್ಲೆ ಸಾಂಕ್ರಾಮಿಕ ರೋಗದ ಪ್ರಕರಣಗಳು ಕಳೆದ ಒಂದು ವಾರದಿಂದ ಹೆಚ್ಚಾಗುತ್ತಿವೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಆರೋಗ್ಯಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ನಗರದಲ್ಲಿಯೇ ಇದೂವರೆಗೂ 46 ಹೆಚ್1 ಎನ್1 ಪ್ರಕರಣಗಳು ದಾಖಲಾಗಿವೆ. ಮಹದೇವಪುರ, ಮಾರತಹಳ್ಳಿ, ಕಾಡುಗೋಡಿ ಸೇರಿದಂತೆ ಕೇರಳಕ್ಕೆ ಹೋಗಿ ಬಂದವರಲ್ಲಿ ಹೆಚ್ಚಾಗಿ ಹೆಚ್1 ಎನ್1 ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಖಾಸಗಿ ಹಾಗೂ ಸರ್ಕಾರಿ ಅಸ್ಪತ್ರೆಗಳಿಗೆ ಮುಂಜಾಗೃತೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಬಗ್ಗೆ ದಿನನಿತ್ಯದ ವರದಿ ಸಲ್ಲಿಸುವಿಕೆ, ಔಷಧಗಳ ಸಂಗ್ರಹಣೆ ಮಾಡಿಕೊಳ್ಳುವಂತೆ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

    ಕೇರಳದತ್ತ ಪ್ರಯಾಣಿಸುವವರು ಮುಂಜಾಗ್ರತ ಕ್ರಮಕೈಗೊಳ್ಳಬೇಕು. ಕೇರಳದಲ್ಲಿ ಉಂಟಾದ ಜಲಪ್ರಳಯದ ಬಳಿಕ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಹಾಗಾಗಿ ಕೇರಳ ಪ್ರವಾಸಕೈಗೊಳ್ಳುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ. ಹೆಚ್1 ಎನ್1 46, ಡೆಂಗ್ಯೂ 20 ಮತ್ತು ಚಿಕುನುಗುನ್ಯಾ 23 ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv