Tag: Department of Health

  • ಲಾಕ್‍ಡೌನ್ ಸಡಿಲಿಕೆ – 24 ಗಂಟೆಯಲ್ಲಿ 195 ಮಂದಿ ಕೊರೊನಾಗೆ ಬಲಿ

    ಲಾಕ್‍ಡೌನ್ ಸಡಿಲಿಕೆ – 24 ಗಂಟೆಯಲ್ಲಿ 195 ಮಂದಿ ಕೊರೊನಾಗೆ ಬಲಿ

    ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಲಾಕ್‍ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಕಳೆದ 24 ಗಂಟೆಯಲ್ಲಿ 3,900 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.

    ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊರೊನಾ ಲಾಕ್‍ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಸಾವುಗಳ ಸಂಖ್ಯೆಯಲ್ಲಿ ಮತ್ತು ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿದೆ. ಒಂದೇ ದಿನದಲ್ಲಿ ಬರೋಬ್ಬರಿಗೆ 195 ಮಂದಿ ಕೊರೊನಾಗೆ ಬಲಿಯಾಗಿದ್ದು, 3,900 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ.

    ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಒಟ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ 46,433ಕ್ಕೆ ಏರಿದೆ. ಒಟ್ಟು ಪ್ರಕರಣಗಳಲ್ಲಿ 32,134 ಸಕ್ರಿಯ ಪ್ರಕರಣಗಳಿದ್ದು, 12,727 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 1568 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.

  • ಆರೋಗ್ಯಾಧಿಕಾರಿ, ಸಿಬ್ಬಂದಿಗೆ ಸಹಕರಿಸುವಂತೆ ಮನೆ ಮನೆಗೂ ತೆರೆಳಿ ಖಾದರ್ ಮನವಿ

    ಆರೋಗ್ಯಾಧಿಕಾರಿ, ಸಿಬ್ಬಂದಿಗೆ ಸಹಕರಿಸುವಂತೆ ಮನೆ ಮನೆಗೂ ತೆರೆಳಿ ಖಾದರ್ ಮನವಿ

    – ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಮಸೀದಿ ಮೈಕ್‍ನಲ್ಲಿ ಮನವಿ

    ಮಂಗಳೂರು: ಕೊರೊನಾ ಸೋಂಕು ತಪಾಸಣೆ ಮಾಡಿಸಿಕೊಳ್ಳಿ, ಆರೋಗ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸಹಕರಿಸಿ ಎಂದು ಇಂದು ಮಾಜಿ ಸಚಿವ ಯು.ಟಿ ಖಾದರ್ ಮನೆ ಮನೆಗೂ ತೆರೆಳಿ ಮನವಿ ಮಾಡಿಕೊಂಡಿದ್ದಾರೆ.

    ವಾರದ ಹಿಂದೆ ಮಂಗಳೂರಿನ ಹೊರ ವಲಯದ ತೊಕ್ಕೊಟ್ಟು ಮೂಲದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಸ್ಥಳೀಯ ನಾಗರಿಕರು ಇಲ್ಲಿನ ಚೆಂಬುಗುಡ್ಡೆ ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ಒಳಪಡುವಂತೆ ಖಾದರ್ ಮಸೀದಿ ಮೈಕ್‍ನಲ್ಲಿ ಇಂದು ಮನವಿ ಮಾಡಿದರು.

    ಸೋಂಕು ದೃಢಪಟ್ಟ ತೊಕ್ಕೊಟ್ಟು ಮೂಲದ ವ್ಯಕ್ತಿ ಚೆಂಬುಗುಡ್ಡೆ ಮಸೀದಿಗೆ ಹಲವು ಬಾರಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದರು. ಈ ಹಿನ್ನೆಲೆ ಆರೋಗ್ಯ ಇಲಾಖೆ ತಂಡ ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ನಡೆಸುತ್ತಿದ್ದು, ಖಾದರ್ ಕೂಡ ಸ್ವತಃ ತಪಾಸಣೆಗೆ ಒಳಗಾಗಿ ಇತರೆ ಮುಸ್ಲಿಂ ಬಾಂಧವರು ಮತ್ತು ನಾಗರಿಕರು ಮಸೀದಿ ಆವರಣದಲ್ಲಿ ಆರೋಗ್ಯ ತಪಾಸಣೆಗೆ ಮಾಡಿಸಿ ಎಂದು ಕೋರಿಕೊಂಡರು.

    ಹಾಗೆಯೇ ಆರೋಗ್ಯ ಇಲಾಖೆಯ ವೈದರು, ಸಿಬ್ಬಂದಿ ತಂಡದ ಜೊತೆ ಸಹಕರಿಸಿ ಅಂತ ಮಸೀದಿ ಮೈಕ್ ನಲ್ಲಿ ಮನವಿ ಮಾಡಿಕೊಂಡರು. ಮಾಜಿ ಸಚಿವರ ಮನವಿ ಹಿನ್ನೆಲೆ ಸ್ವಯಂ ಪ್ರೇರಿತವಾಗಿ ಆಗಮಿಸಿದ ನಾಗರಿಕರು ಆರೋಗ್ಯ ತಪಾಸಣೆಗೆ ಮಾಡಿಸಿಕೊಂಡರು.

  • ಮಾಹಾಮಾರಿ ಕೊರೊನಾಗೆ 23 ದಿನದ ಕಂದಮ್ಮ ಬಲಿ

    ಮಾಹಾಮಾರಿ ಕೊರೊನಾಗೆ 23 ದಿನದ ಕಂದಮ್ಮ ಬಲಿ

    ಮನಿಲಾ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 23 ದಿನದ ಹಸುಗೂಸು ಸಾವನ್ನಪ್ಪಿರುವ ಪ್ರಕರಣ ಫಿಲಿಪ್ಪೀನ್ಸ್ ನ ದಕ್ಷಿಣ ಮನಿಲಾದಲ್ಲಿ ವರದಿಯಾಗಿದೆ.

    ದಕ್ಷಿಣ ಮನಿಲಾದ 70 ಕಿಮೀ ದೂರದಲ್ಲಿರುವ ಲಿಪಾ ಪಟ್ಟಣದಲ್ಲಿ ಏಪ್ರಿಲ್ 5 ರಂದು 23 ದಿನದ ಮಗು ಸಾವನ್ನಪ್ಪಿತ್ತು. ಆದರೆ ಮಗು ಸಾವನ್ನಪ್ಪಲು ಕಾರಣವೇನು ಎಂಬುದು ತಿಳಿದು ಬಂದಿರಲಿಲ್ಲ. ಗುರುವಾರ ಮಗುವಿನ ವೈದ್ಯಕೀಯ ಪರೀಕ್ಷಾ ವರದಿ ಬಂದಿದ್ದು, ಮಗುವಿಗೆ ಕೊರೊನಾ ಸೋಂಕು ತಗುಲಿತ್ತು ಎಂಬುದು ಬೆಳಕಿಗೆ ಬಂದಿದೆ.

    ಈ ಹಿಂದೆ ಬುಧವಾರ ಬ್ರೆಜಿಲ್‍ನಲ್ಲಿ ಅವಧಿ ಪೂರ್ವವಾಗಿ ಹುಟ್ಟಿದ್ದ 4 ದಿನದ ಶಿಶು ಸಾವನ್ನಪ್ಪಿರುವುದು ವರದಿಯಾಗಿತ್ತು. ಶ್ವಾಸಕೋಶ ವೈಫಲ್ಯದಿಂದ ಮಗು ಮೃತಪಟ್ಟಿತ್ತು. ಈ ಪ್ರಕರಣ ವರದಿಯಾದ ಒಂದು ದಿನದ ಬಳಿಕ ಅಂದರೆ ಗುರುವಾರ ಬೊಲಿವಿಯಾದಲ್ಲಿ ಐಸಿಯುನಲ್ಲಿ ಇರಿಸಿದ್ದ 5 ತಿಂಗಳ ಮಗು ಕೊರೊನಾದಿಂದ ಮೃತಪಟ್ಟಿತ್ತು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಫಿಲಿಪ್ಪೀನ್ಸ್ ನ ಆರೋಗ್ಯ ಇಲಾಖೆ ಗುರುವಾರ ಪ್ರಕಟ ಮಾಡಿದ್ದ ದೈನಂದಿನ ಬುಲೆಟಿನ್‍ನಲ್ಲಿ ಲಿಪಾದಲ್ಲಿ ಮೃತಪಟ್ಟ ಮಗುವಿನ ಬಗ್ಗೆ ಉಲ್ಲೇಖಿಸಿದೆ. ಗುರುವಾರ ರಾತ್ರಿವರೆಗೆ ಫಿಲಿಪ್ಪೀನ್ಸ್ ನಲ್ಲಿ 4,076 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 203 ಮಂದಿ ಸಾವನ್ನಪ್ಪಿದ್ದು, 124 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದ ಅತೀ ದೊಡ್ಡ ಲುಜಾನ್ ದ್ವೀಪವನ್ನು ಮಾರ್ಚ್ 17ರಿಂದ ಏಪ್ರಿಲ್ 12ರವರೆಗೆ ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ.

  • ದೇಶಕ್ಕೆ ಮುಂದಿನ ಒಂದು ವಾರ ನಿರ್ಣಾಯಕ- ಹತ್ತು ಸಾವಿರಕ್ಕೇರಬಹುದು ಸೋಂಕಿತರ ಸಂಖ್ಯೆ

    ದೇಶಕ್ಕೆ ಮುಂದಿನ ಒಂದು ವಾರ ನಿರ್ಣಾಯಕ- ಹತ್ತು ಸಾವಿರಕ್ಕೇರಬಹುದು ಸೋಂಕಿತರ ಸಂಖ್ಯೆ

    -ಆರೋಗ್ಯ ಇಲಾಖೆಯಿಂದ ಮೇಕ್ ಆರ್ ಬ್ರೇಕ್ ವೀಕ್ ಅಭಿಯಾನ

    ನವದೆಹಲಿ: ಜನತಾ ಕರ್ಫ್ಯೂ  ಆಯ್ತು. ಭಾರತ ಲಾಕ್ ಡೌನ್ ಆಗಿ ಹದಿನಾರು ದಿನ ಕಳೆದು ಹೋಯ್ತು. ಆದರೆ ಅಂದುಕೊಂಡ ಹಾಗೇ ಮಾತ್ರ ಏನು ಆಗ್ತಿಲ್ಲ. ದಿನದಿಂದ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಆದರೆ ಇದಕ್ಕೆಲ್ಲ ಒಂದು ಅಂತ್ಯ ಹಾಡಲು ನಿರ್ಧರಿಸುವ ಕೇಂದ್ರ ಆರೋಗ್ಯ ಹೊಸ ಅಭಿಯಾನವೊಂದನ್ನ ಆರಂಭಿಸಿದೆ.

    ನೋಡ ನೋಡುತ್ತಿದ್ದಂತೆ ಕೊರೊನಾ ಅನ್ನೊ ಹೆಮ್ಮಾರಿ ಇಮ್ಮಡಿಯಾಗುತ್ತಿದೆ. ಹಳ್ಳಿಯಿಂದ ದಿಲ್ಲಿವರೆಗೂ ತನ್ನ ವಿಶಾಲ ಬಾಹುಗಳನ್ನು ವಿಸ್ತರಿಸಲು ಸಿದ್ಧವಾಗಿದೆ. ಈ ಮಾರಿಯ ಹೆಡೆಮುರಿ ಕಟ್ಟಲು ಕೇಂದ್ರ ಸರ್ಕಾರ ಎಷ್ಟೇ ಕಠಿಣ ಕ್ರಮಗಳನ್ನು ತೆಗೆದುಕೊಂಡರೂ ಪೂರ್ಣ ಪ್ರಮಾಣದಲ್ಲಿ ವರ್ಕೌಟ್ ಆಗುತ್ತಿಲ್ಲ. ಈ ಹಿನ್ನೆಲೆ ದೇಶದಲ್ಲಿ ಆರೋಗ್ಯ ಇಲಾಖೆ ಹೊಸದೊಂದು ಅಭಿಯಾನ ಆರಂಭಿಸಲು ಸಿದ್ಧವಾಗಿದೆ. ಇಂದಿನಿಂದ ಮೇಕ್ ಆರ್ ಬ್ರೇಕ್ ವೀಕ್ ಅನ್ನೋ ಹೆಸರಿನಲ್ಲಿ ಅಭಿಯಾನ ಶುರು ಮಾಡಲಿದೆ.

    ಏನಿದು ಮೇಕ್ ಆರ್ ಬ್ರೇಕ್ ವೀಕ್?
    * ಮೇಕ್ ಆರ್ ಬ್ರೇಕ್ ವೀಕ್ ದಕ್ಷಿಣ ಕೋರಿಯಾದಲ್ಲಿ ಪ್ರಯೋಗಿಸಲಾದ ತಂತ್ರ.
    * ಇದನ್ನು ಅಮೆರಿಕಾದಲ್ಲೂ ಪ್ರಯೋಗ ಮಾಡಲಾಗಿದೆ.
    * ಮೇಕ್ ಆರ್ ಬ್ರೇಕ್ ವೀಕ್ ಹೆಸರಿನಲ್ಲಿ ದೇಶದಲ್ಲಿ ಕೊರೊನಾ ಟೆಸ್ಟಿಂಗ್ ಗಳ ಪ್ರಮಾಣ ಏರಿಕೆ ಮಾಡುವುದು.
    * ಮುಂದಿನ ಒಂದು ವಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಟ್ ಸ್ಪಾಟ್ ನಗರಗಳಲ್ಲಿ ಪರೀಕ್ಷೆಗಳನ್ನು ಹೆಚ್ಚು ಮಾಡುವುದು.
    * ಶಂಕಿತರು ಮತ್ತು ಸೋಂಕಿತನ್ನು ಗುರುತಿಸಿ ಚಿಕಿತ್ಸೆ ನೀಡುವುದು ಅಲ್ಲದೇ ಸಂಬಂಧಿಸಿದ ಅನುಮಾಸ್ಪದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡುವುದು.
    * ಲಾಕ್ ಡೌನ್ ಮುಂದುವರಿಸಬೇಕಾ ಅಥವಾ ತೆರವು ಮಾಡಬೇಕಾ ಎನ್ನುವುದನ್ನು ಮೇಕ್ ಆರ್ ಬ್ರೇಕ್ ವೀಕ್ ನಿರ್ಧರಿಸಲಿದೆ.

    ಇತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಆರೋಗ್ಯ ಇಲಾಖೆ ಈ ವಾರ ಹದ್ದಿನ ಕಣ್ಣಿನಲ್ಲಿ ಸೋಂಕಿತನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ. ಭಾರತದಲ್ಲಿ ಮೊದಲ 2.500 ಪ್ರಕರಣಗಳ ಪತ್ತೆಗೆ ಒಂಭತ್ತು ವಾರಗಳ ಸಮಯ ತೆಗೆದುಕೊಂಡಿತ್ತು. 2500 ರಿಂದ 5000 ಸೋಂಕಿತರ ಪ್ರಮಾಣ ಒಂದೇ ವಾರದಲ್ಲಿ ಏರಿಕೆ ಆಗಿದೆ. ಆರು ದಿನದಲ್ಲಿ 2.500ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ಈ ವಾರದಲ್ಲಿ 5000 ದಿಂದ 10000 ಸಾವಿರಕ್ಕೆ ದುಪ್ಪಟ್ಟು ಆಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

    ಈ ನಡುವೆ ನಿಜಾಮುದ್ದೀನ್ ಮರ್ಕಜ್ ನಿಂದ ವಾಪಸ್ ಆಗಿರುವ ಕೆಲ ವ್ಯಕ್ತಿಗಳು ಇನ್ನು ಪತ್ತೆಯಾಗಿಲ್ಲ ಎಲ್ಲಿ ಹೇಗೆ ಯಾರಲ್ಲಿ ಸೋಂಕಿದೆ ಎನ್ನುವುದು ಗೊತ್ತಿಲ್ಲ. ಹೀಗಾಗಿ ಕೊರಿನಾ ಹಾಟ್ ಸ್ಪಾಟ್ ಅಂತಾ ಗುರುತಿಸಿಕೊಂಡ ನಗರಗಳನ್ನು ಆಯ್ಕೆ ಮಾಡಿಕೊಂಡು ಮೇಕ್ ಆರ್ ಬ್ರೇಕ್ ವೀಕ್ ಹೆಸರಿನಲ್ಲಿ ಹೆಚ್ಚು ಟೆಸ್ಟಿಂಗ್ ಮಾಡುವ ಮೂಲಕ ಕೊರೊನಾ ಸೋಂಕಿಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ.

  • ಕೊರೊನಾ ಶಂಕೆ – ಬ್ರೆಜಿಲ್‍ನಿಂದ ಬಂದ ವೃದ್ಧ ದಂಪತಿ ಆಸ್ಪತ್ರೆಗೆ ಶಿಫ್ಟ್

    ಕೊರೊನಾ ಶಂಕೆ – ಬ್ರೆಜಿಲ್‍ನಿಂದ ಬಂದ ವೃದ್ಧ ದಂಪತಿ ಆಸ್ಪತ್ರೆಗೆ ಶಿಫ್ಟ್

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕೆ ಹಿನ್ನೆಲೆ ಬೆಂಗಳೂರಿನ ಜಯನಗರದ ವೃದ್ಧ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಿದ್ದ ವೃದ್ಧ ದಂಪತಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ಹಿನ್ನೆಲೆ ಸ್ಥಳೀಯರಿಂದ ಮಾಹಿತಿ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ ವೃದ್ಧ ದಂಪತಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ದಂಪತಿ ವಾಸವಿದ್ದ ಮನೆಗೆ ಕೆಮಿಕಲ್ ಸ್ಪ್ರೇ ಸಿಂಪಡನೆ ಮಾಡಿಸಲಾಗಿದೆ. ಮನೆಗೆ ಸೋಡಿಯಂ ಹೈಪೋಕ್ಲೋರೈಡ್ ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಿತ ಕೆಮಿಕಲ್ ಸ್ಪ್ರೇ ಮಾಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

    ಬ್ರೆಜಿಲ್ ದೇಶದಿಂದ ಮಾರ್ಚ್ 13ರಂದು ಬೆಂಗಳೂರಿಗೆ ವೃದ್ಧ ದಂಪತಿ ವಾಪಸ್ಸಾಗಿದ್ದರು. ಬಳಿಕ ಜಯನಗರ ಠಾಣಾ ವ್ಯಾಪ್ತಿಯ ತಮ್ಮ ಮನೆಯೊಂದರಲ್ಲಿ ವಾಸವಿದ್ದರು. ಸದ್ಯ ದಂಪತಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

  • ಕಾಟಾಚಾರಕ್ಕೆ ಥರ್ಮಲ್ ಸ್ಕ್ರೀನಿಂಗ್ – ತಪಾಸಣೆ ಮಾಡುವ ಸಿಬ್ಬಂದಿಗೆ ಇಲ್ಲ ಮಾಸ್ಕ್

    ಕಾಟಾಚಾರಕ್ಕೆ ಥರ್ಮಲ್ ಸ್ಕ್ರೀನಿಂಗ್ – ತಪಾಸಣೆ ಮಾಡುವ ಸಿಬ್ಬಂದಿಗೆ ಇಲ್ಲ ಮಾಸ್ಕ್

    – ಕ್ಯಾಮೆರಾ ಕಂಡು ತಪಾಸಣೆಗೆ ಮುಂದಾದ ಆರೋಗ್ಯ ಇಲಾಖೆ ಸಿಬ್ಬಂದಿ

    ಮಡಿಕೇರಿ: ಕೊರೊನಾ ವೈರಸ್ ಹೆಸರು ಕೇಳಿದೆ ಜನರ ಎದೆ ನಡುಗಲಾರಂಭಿಸುತ್ತೆ. ಈಗಾಗಲೇ ರಾಜ್ಯದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಹಿನ್ನೆಲೆ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಸಾರ್ವಜನಿಕರಿಗೆ ವೈರಸ್ ತಗುಲಿದೆಯೋ ಇಲ್ಲವೋ ಎಂದು ಥರ್ಮಲ್ ಪರಿಶೀಲನೆ ಮಾಡುವ ಸಿಬ್ಬಂದಿಗೆ ಸುರಕ್ಷತೆ ಇಲ್ಲ.

    ಕರ್ನಾಟಕ ಕೇರಳ ಗಡಿಭಾಗವಾದ ಕೊಡಗಿನ ವಿರಾಜಪೇಟೆ ತಾಲೂಕಿನ ಪೆರಂಬಾಡಿಯಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇದೆ. ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ ಇಲ್ಲಿ ನಾಮಕಾವಸ್ಥೆಗೆ ಇರುವ ಹಾಗೆ ಇದ್ದಾರೆ. ಪೆರಂಬಾಡಿ ಚೆಕ್ ಪೋಸ್ಟ್ ಆದರೂ ಕೂಡ ಒಂದೇ ಒಂದು ವಾಹನ ನಿಂತಿಲ್ಲ. ಯಾವಾಗ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ಗೆ ಇಳಿಯಿತೋ ಪೊಲೀಸರು ವಾಹನ ನಿಲ್ಲಿಸಿದರು, ಆಶಾ ಕಾರ್ಯಕರ್ತೆಯರು ಕೇರಳದಿಂದ ಬರುವವರನ್ನು ಸ್ಕ್ರೀನಿಂಗ್ ಮಾಡೋದಕ್ಕೆ ಮುಂದಾದರು. ಆದರೆ ತಪಾಸಣೆ ಮಾಡುವ ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆ ಸಿಬ್ಬಂದಿ ಮುಖಕ್ಕೆ ಮಾಸ್ಕ್ ಹಾಕದೇ ಕಾರ್ಯನಿರ್ವಹಿಸುತ್ತಿದ್ದಾರೆ.

    ಈಗಾಗಲೇ ಕೇರಳದಲ್ಲಿ 27 ಜನರಿಗೆ ಕೊರೊನಾ ಸೋಂಕು ತಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ ಗಡಿಭಾಗದಲ್ಲಿ ತಪಾಸಣೆ ಮಾಡುವವರಿಗೆ ಯಾವುದೇ ಅಗತ್ಯ ಸಲಕರಣೆಗಳು ಇಲ್ಲದೇ ಮಾಸ್ಕ್ ಧರಿಸದೇ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನಾದರೂ ಗಡಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡಬೇಕಿದೆ. ಅಲ್ಲದೇ ಜಿಲ್ಲಾಡಳಿತ ಇತ್ತ ಕಡೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಾಹಿಸಿದ್ದಾರೆ.

    ಇಂದು ಕೊಡಗಿನಲ್ಲಿ ಮೊದಲ ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ. ಈ ವ್ಯಕ್ತಿಯು ಸೌದಿ ಅರೇಬಿಯಾ ಪ್ರವಾಸದಿಂದ ಹಿಂದಿರುಗಿದ್ದರು. ಇವರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಿಗಾವಹಿಸಲಾಗಿದೆ. ಇದು ಕರ್ನಾಟಕದ 15ನೇ ಕೊರೊನಾ ಸೋಂಕಿತ ಪ್ರಕರಣವಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

    ಏನಿದು ಥರ್ಮಲ್ ಸ್ಕ್ಯಾನರ್?
    ಥರ್ಮಲ್ ಸ್ಕ್ಯಾನರ್ ಮನುಷ್ಯನ ದೇಹದ ತಾಪಮಾನವನ್ನು ಅಳೆಯುವ ಸಾಧನ. ಮನುಷ್ಯನ ದೇಹದ ತಾಪಮಾನ ತುಸು ಹೆಚ್ಚುಕಡಿಮೆ 98.6 ಡಿಗ್ರಿ ಫ್ಯಾರನ್‍ಹೀಟ್ ಅಥವಾ 37 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಥರ್ಮಲ್ ಸ್ಕ್ಯಾನರ್ ನಿಂದ ತಪಾಸಣೆಗೆ ಒಳಪಟ್ಟ ವ್ಯಕ್ತಿಯ ದೇಹದ ತಾಪಮಾನ 98.6 ಡಿಗ್ರಿ ಫ್ಯಾರನ್‍ಹೀಟ್‍ಗಿಂತ ಅಧಿಕವಾಗಿದ್ದರೆ ಅವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತದೆ.

    ಥರ್ಮಲ್ ಸ್ಕ್ಯಾನರ್ ಯಾಕೆ?
    ಕೊರೊನಾ ವೈರಸ್ ಇರುವವರಿಗೆ ಜ್ವರ, ಕೆಮ್ಮು ಪ್ರಮುಖ ಲಕ್ಷಣಗಳಾಗಿವೆ. ಇಂತಹ ಸಂದರ್ಭದಲ್ಲಿ ಹಲವರು ತಮಗೆ ಜ್ವರ ಇರುವ ಕುರಿತು ಮಾಹಿತಿ ಕೊಡಲು ಹಿಂಜರಿಯುತ್ತಾರೆ. ಇದಲ್ಲದೇ ಈಗಿರುವ ಹಳೆಯ ತಂತ್ರಜ್ಞಾನ ಬಳಸಿ ಸಾವಿರಾರು ಜನರನ್ನು ಪರೀಕ್ಷೆ ಮಾಡಲು ವೈದ್ಯರಿಗೆ ಕಷ್ಟಸಾಧ್ಯ. ಹೀಗಾಗಿ ತಕ್ಷಣ ಪರೀಕ್ಷಿಸಲು ಜ್ವರದ ತೀವ್ರತೆ ತಿಳಿದುಕೊಳ್ಳಲು ಥರ್ಮಲ್ ಸ್ಕ್ಯಾನರ್ ತಕ್ಷಣದಲ್ಲಿ ಉಪಯೋಗಕ್ಕೆ ಬರುತ್ತದೆ. ಈ ಕಾರಣದಿಂದ ಇದರ ಬಳಕೆ ವೈದ್ಯರಿಗೆ ರೋಗಿಯ ದೇಹಸ್ಥಿತಿ ಅರಿಯಲು ಸಹಕಾರಿಯಾಗುತ್ತದೆ.

  • ಮಾಸ್ಕ್ ಧರಿಸಿ ಕೊರೊನಾ ಜಾಗೃತಿ ಮೂಡಿಸಿದ ನೂತನ ವಧು-ವರರು

    ಮಾಸ್ಕ್ ಧರಿಸಿ ಕೊರೊನಾ ಜಾಗೃತಿ ಮೂಡಿಸಿದ ನೂತನ ವಧು-ವರರು

    ಚಿಕ್ಕೋಡಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಮದುವೆ ಸಮಾರಂಭದಲ್ಲಿ ಕೊರೊನಾ ಜಾಗೃತಿ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಆಯೋಜಿಸಲಾಗಿತ್ತು.

    ಯಕ್ಸಂಬಾ ಪಟ್ಟಣದಲ್ಲಿ ಚವ್ಹಾಣ, ಕಮತೆ ಕುಟುಂಬದ ಮದುವೆ ಸಮಾರಂಭದಲ್ಲಿ ಕೊರೊನಾ ರೋಗದ ಕುರಿತು ಮದುವೆಗೆ ಬಂದಿದ್ದ ಜನರಿಗೆ ವಿಶೇಷ ಜಾಗೃತಿ ನೀಡಲಾಯಿತು. ಶೇಖರ-ಪ್ರೀತಿ, ಮಲ್ಲಪ್ಪ-ದೀಪಾಲಿ ಜೋಡಿಗಳ ಮದುವೆ ಸಮಾರಂಭದಲ್ಲಿ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಯಿತು.

    ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಮಾರಂಭದಲ್ಲಿ ವಧು-ವರರು ಭಾಗಿಯಾಗಿದ್ದು ವಿಶೇಷವಾಗಿತ್ತು. ಮಾಸ್ಕ್ ಧರಿಸುವುದರಿಂದ ಕೊರೊನಾ ರೋಗ ಹರಡುವುದಿಲ್ಲ ಹಾಗೂ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಮುಖವನ್ನು ಕೈಗಳಿಂದ ಜಾಸ್ತಿ ಮುಟ್ಟಿಕೊಳ್ಳಬಾರದು ಎನ್ನುವ ಸಂದೇಶವನ್ನು ಜನರಿಗೆ ಮದುವೆ ಸಮಾರಂಭದಲ್ಲಿ ಆರೋಗ್ಯ ಇಲಾಖೆಯಿಂದ ನೀಡಲಾಯಿತು.

  • ಕೊರೊನಾ ಸಾವಿನ ಬಗ್ಗೆ ಗೊಂದಲ- ಶ್ರೀರಾಮುಲು ಸ್ಪಷ್ಟನೆ

    ಕೊರೊನಾ ಸಾವಿನ ಬಗ್ಗೆ ಗೊಂದಲ- ಶ್ರೀರಾಮುಲು ಸ್ಪಷ್ಟನೆ

    ಬೆಂಗಳೂರು: ಕಲಬುರಗಿಯಲ್ಲಿ ಸಾವನ್ನಪ್ಪಿರುವ ಮಹಮದ್ ಹುಸೇನ್ ಸಿದ್ದಿಕಿ ಕೊರೊನಾ ಶಂಕಿತರು. ಅವರ ಸಾವಿನ ಬಗ್ಗೆ ಇನ್ನು ದೃಢಪಟ್ಟಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ಕಲಬುರಗಿಯಲ್ಲಿ ನಿಧನರಾದ ಶ್ರೀ ಮಹಮದ್ ಹುಸೇನ್ ಸಿದ್ದಿಕಿ, ಕೊವಿಡ್ 19 ಶಂಕಿತರೇ ಹೊರತು ದೃಢಪಟ್ಟಿಲ್ಲ. ನಾಗರಿಕರ ಹಿತದೃಷ್ಟಿಯಿಂದ, ಮೃತರ ಅಂತ್ಯಸಂಸ್ಕಾರಕ್ಕಾಗಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾ ಆರೋಗ್ಯ ಇಲಾಖೆಯು ಕೈಗೊಂಡಿದೆ. ಇದರಲ್ಲಿ ಯಾವುದೇ ಅನಗತ್ಯ ಗೊಂದಲ, ಭಯ ಸೃಷ್ಟಿಸುವುದು ಬೇಡ ಎಂದು ತಿಳಿಸಿದ್ದಾರೆ.

    ಯಾರು ಈ ಮಹಮದ್ ಹುಸೇನ್ ಸಿದ್ದಿಕಿ?
    ಫೆಬ್ರವರಿ 29ರಂದು ಸೌದಿ ಅರೇಬಿಯಾದಿಂದ ವೃದ್ಧ ಮೊಹ್ಮದ್ ಹುಸೇನ್ ಸಿದ್ದಿಕಿ, ಹೈದರಾಬಾದ್ ಮಾರ್ಗವಾಗಿ ಕಲಬುರಗಿ ನಗರಕ್ಕೆ ಬಂದಿದ್ದರು. ಮಾರ್ಚ್ 5ರಂದು ಸಿದ್ಧಿಕಿ ಅವರಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿಶೇಷ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಸಿದ್ದಿಕಿ ಅವರ ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್‍ಗೆ ಕಳಿಸಲಾಗಿತ್ತು. ಆದರೆ ವರದಿಗೂ ಮುನ್ನವೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಸಿದ್ದಿಕಿಯವರನ್ನು ಹೈದರಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು.

    ಅನುಮಾನಗಳಿಗೆ ಕಾರಣವಾಯ್ತು ಪತ್ರ: ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಹೊರಡಿಸಿರುವ ಜ್ಞಾಪನಾ ಪತ್ರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಹಮದ್ ಹುಸೇನ್ ಸಿದ್ದಿಕಿ (76) ಕೊವಿಡ್-19 (ಕೊರೊನಾ ವೈರಸ್)ನಿಂದ ಮರಣ ಹೊಂದಿರುವ ಪ್ರಯುಕ್ತ ಅಂತ್ಯಕ್ರಿಯೆ ಪ್ರಕ್ರಿಯೆ ಮುಗಿಯವರೆಗೂ ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ| ಶರಣಬಸಪ್ಪ ಕ್ಯಾತನಾಳ ಹಾಗೂ ಅವರ ತಂಡ ಉಸ್ತುವಾರಿ ವಹಿಸಿಕೊಂಡು ಎಲ್ಲ ತರಹದ ಮುಂಜಾಗ್ರತೆ ಹಾಗೂ ನಿಯಂತ್ರಣ ಕೈಗೊಂಡು ವರದಿ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ಕಲಬುರಗಿ ಮತ್ತು ಹೈದರಾಬಾದ್ ಆಸ್ಪತ್ರೆಗಳಲ್ಲಿ ಯಾವ ರೀತಿಯ ಚಿಕಿತ್ಸೆ ನೀಡಲಾಗಿತ್ತು ಎಂಬುದರ ಬಗ್ಗೆ ಮಾಹಿತಿಗಳು ಅಸ್ಪಷ್ಟವಾಗಿವೆ. ಸಿದ್ದಿಕಿಯವರ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಲು ಆರೋಗ್ಯಾಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರಿನ ಪ್ರಯೋಗಾಲಯದ ಮೆಡಿಕಲ್ ರಿಪೋರ್ಟ್ ಗಾಗಿ ಕಾಯುತ್ತಿದ್ದೇವೆ ಎಂಬ ಮಾತುಗಳು ಆರೋಗ್ಯ ಇಲಾಖೆಯಲ್ಲಿ ಕೇಳಿ ಬರುತ್ತಿವೆ. ಪ್ರಯೋಗಾಲಯದ ವರದಿಗೂ ಮುನ್ನವೇ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಜ್ಞಾಪನಾ ಪತ್ರ ಚರ್ಚೆಗೆ ಗ್ರಾಸವಾಗಿದೆ.

  • ಹಂಪಿ ಮೇಲೆ ಕೊರೊನಾ ಕರಿ ನೆರಳು- ವಿದೇಶಿ ಪ್ರವಾಸಿಗರ ಸಂಖ್ಯೆ ದಿಢೀರ್ ಕುಸಿತ

    ಹಂಪಿ ಮೇಲೆ ಕೊರೊನಾ ಕರಿ ನೆರಳು- ವಿದೇಶಿ ಪ್ರವಾಸಿಗರ ಸಂಖ್ಯೆ ದಿಢೀರ್ ಕುಸಿತ

    ಬಳ್ಳಾರಿ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಹಂಪಿಯ ಮೇಲೆ ಕೊರೊನಾ ಕರಿನೆರಳು ಬಿದಿದ್ದು, ಹಂಪಿಗೆ ಬರುವ ವಿದೇಶಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ ಆಗಿದೆ.

    ಪ್ರತಿನಿತ್ಯ ನೂರಾರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್ ಕುಸಿತ ಕಂಡಿದೆ. ಇನ್ನು ಮಾರ್ಚ್ ತಿಂಗಳಲ್ಲಿ ವಿದೇಶಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಹಂಪಿಯಲ್ಲಿ ಈಗ ಬೆರಳೆಣಿಕೆ ಪ್ರವಾಸಿಗರು ಮಾತ್ರ ಕಾಣಿಸುತ್ತಿದ್ದಾರೆ.

    ಅಲ್ಲದೆ ಪ್ರತಿ ವರ್ಷ ಹೋಳಿ ಸಂದರ್ಭದಲ್ಲಿ ವಿದೇಶಿ ಪ್ರವಾಸಿಗರ ದಂಡು ಹಂಪಿಗೆ ಬಂದು ಬೀಡು ಬಿಡುತ್ತಿತ್ತು. ಬಣ್ಣ ಎರಚಾಡಿ ಮೋಜು ಮಸ್ತಿ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಟೂರಿಸ್ಟ್ ಗೈಡ್‍ಗಳು ಹೇಳುವ ಪ್ರಕಾರ ನಿತ್ಯ 500-1000 ವಿದೇಶಿ ಪ್ರವಾಸಿಗರು ಬರುತ್ತಿದ್ದರು. ಆದರೆ ಈಗ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಆಗಿದೆ. ಹೀಗಾಗಿ ಇಲ್ಲಿನ ಗೈಡ್‍ಗಳು ಕೆಲಸ ಇಲ್ಲದೆ ಕುಳಿತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಅಲ್ಲದೆ ಆರೋಗ್ಯ ಇಲಾಖೆ ಸಹ ಹಂಪಿಯಲ್ಲಿ ಎಚ್ಚರಿಕೆ ವಹಿಸಿದ್ದು, ಹಂಪಿಗೆ ಬಂದಿರುವ ಪ್ರತಿ ಪ್ರವಾಸಿಗರನ್ನು ಪರೀಕ್ಷೆ ಮಾಡುತಿದ್ದಾರೆ. ಪ್ರತಿ ವಿದೇಶಿ ಪ್ರಜೆಗಳು ಎನ್ 90 ಮಾಸ್ಕ್ ಧರಿಸಲು ಸೂಚನೆ ನೀಡುತಿದ್ದಾರೆ.

  • ಬೀ ಕೇರ್ ಫುಲ್: ಕೊರೊನಾ ಲಕ್ಷಣ ಏನು? ಹೇಗೆ ಹರಡುತ್ತದೆ? ಮುಂಜಾಗೃತ ಕ್ರಮ ಏನು?

    ಬೀ ಕೇರ್ ಫುಲ್: ಕೊರೊನಾ ಲಕ್ಷಣ ಏನು? ಹೇಗೆ ಹರಡುತ್ತದೆ? ಮುಂಜಾಗೃತ ಕ್ರಮ ಏನು?

    ಬೆಂಗಳೂರು: ಕೊರೊನಾ ವೈರಸ್‍ಗೆ ಇಡೀ ಪ್ರಪಂಚವೇ ತಲ್ಲಣಗೊಂಡಿದ್ದು, ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಇನ್ನೂ ಆತಂಕದ ಸಂಗತಿ ಎಂಬಂತೆ ಸಿಲಿಕಾನ್ ಸಿಟಿಯ ಪ್ರತಿಷ್ಟಿತ ಕಂಪನಿಯಲ್ಲಿ ಎರಡು ದಿನ ಕಾರ್ಯ ನಿರ್ವಹಿಸಿದ್ದ ವ್ಯಕ್ತಿಯ ದೇಹದಲ್ಲೂ ವೈರಸ್ ಇರುವುದು ಪತ್ತೆಯಾಗಿದೆ. ಹೀಗಾಗಿ ಆತಂಕ ಹೆಚ್ಚಾಗಿದೆ. ಆದರೆ ಭಯ ಬೇಡ ವೈರಸ್ ಹೇಗೆ ಹರಡುತ್ತದೆ, ಲಕ್ಷಣಗಳೇನು, ತಡೆಯಲು ಮುಂಜಾಗೃತಾ ಕ್ರಮಗಳು ಇಲ್ಲಿವೆ.

    ಈ ವೈರಸ್ ಪ್ರಾಣಿಗಳು ಹಾಗೂ ಮನುಷ್ಯರಲ್ಲಿ ಕಾಣಿಸಿಕೊಂಡು ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆಯುಂಟು ಮಾಡುತ್ತದೆ. ಈ ವೈರಸ್ ಮೊದಲ ಬಾರಿಗೆ ಚೀನಾದ ವುಹಾನ್‍ನಲ್ಲಿ ಪತ್ತೆಯಾಗಿದೆ.

    ಹೇಗೆ ಹರಡುತ್ತದೆ?
    – ಸೋಂಕಿತ ವ್ಯಕ್ತಿ ಸೀನಿದಾಗ ಮತ್ತು ಕೆಮ್ಮಿದಾಗ
    – ಸೋಂಕಿತ ವ್ಯಕ್ತಿಯ ಹಸ್ತಲಾಘವ ಮತ್ತು ಮುಟ್ಟಿದಾಗ
    – ವ್ಯಕ್ತಿ ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ
    – ಸ್ವಚ್ಛಗೊಳಿಸದ, ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ

    ರೋಗದ ಲಕ್ಷಣಗಳು
    – ಜ್ವರ, ತಲೆ ನೋವು
    – ನೆಗಡಿ, ಕೆಮ್ಮು
    – ಉಸಿರಾಟದ ತೊಂದರೆ
    – ನ್ಯುಮೋನಿಯಾ ಬೇಧಿ

    ಮುಂಜಾಗೃತಾ ಕ್ರಮಗಳೇನು?
    – ಸೋಂಕು ಪೀಡಿತರ ಸಂಪರ್ಕದಿಂದ ದೂರ ಇರುವುದು.
    – ಶಂಕಿತ ರೋಗಿ ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು.
    – ಟ್ರಿಪಲ್ ಲೇಯರ್ ಮಾಸ್ಕ್ ಬಳಸುವುದು.
    – ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು.
    – ಸಾಬೂನಿಂದ ಆಗಾಗ ಕೈ ತೊಳೆಯುವುದು.
    – ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್, ಕೈ ವಸ್ತ್ರ ಬಳಸುವುದು.
    – ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದು.
    – ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು.
    – ಮಾಂಸ, ಮೊಟ್ಟೆ, ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸುವುದು.
    – ಅಸುರಕ್ಷಿತ ಕಾಡು ಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬೇಡಿ.

    ಚಿಕಿತ್ಸೆ ಹೇಗೆ?
    – ಈ ರೋಗಕ್ಕೆ ಯಾವುದೇ ನಿಖರ ಚಿಕಿತ್ಸೆ ಇಲ್ಲ.
    – ಆರಂಭಿಕ ಹಂತದಲ್ಲಿ ಕಡುಬಂದರೆ ಚಿಕಿತ್ಸೆ ನೀಡಬಹುದು
    – ರೋಗದ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ.
    – ಯಾವುದೇ ಲಸಿಕೆ ಇಲ್ಲ.