ಕೊಪ್ಪಳ: ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದ ಕೊರೊನಾ ಸೋಂಕಿತ ಮಹಿಳೆಯೊಬ್ಬಳು ಒಂದು ಕಿಲೋ ಮೀಟರ್ ನಡೆದುಕೊಂಡು ಬಂದು ಕೋವಿಡ್ ಆಸ್ಪತ್ರೆಗೆ ದಾಖಲಾದ ಘಟನೆ ಬೆಳಕಿಗೆ ಬಂದಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಈ ಘಟನೆ ನಡೆದಿದ್ದು, ಕಳೆದ ರಾತ್ರಿ ಮಹಿಳೆಯಲ್ಲಿ ಕೊರೊನಾ ದೃಢ ಪಡುತ್ತಿದಂತೆ ಆರೋಗ್ಯ ಇಲಾಖೆ ಅಂಬುಲೆನ್ಸ್ ಕಳುಹಿಸಿಕೊಡದಿದ್ದಾಗ ತನ್ನ ಪತಿಯೊಂದಿಗೆ ಒಂದು ಕಿಲೋ ಮೀಟರ್ ನಡೆದುಕೊಂಡು ಬಂದು ಕೋವಿಡ್ ಆಸ್ಪತ್ರೆಗೆ ಸೇರಿದ್ದಾಳೆ. ಅಂಬುಲೆನ್ಸ್ ಕಳಿಸಿ ಎಂದು ಕೇಳಿಕೊಂಡರೂ ಸಹ ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ.
ಇದರಿಂದ ಯಾವ ಆಟೋ ಆಸರೆ ಪಡೆಯದೆ, ನನ್ನಿಂದ ಇನ್ನೊಬ್ಬರಿಗೆ ಸೋಂಕು ತಗುಲಬಹುದು ಎಂದು ಅರಿತ ಮಹಿಳೆ ತನ್ನ ಪತಿಯೊಂದಿಗೆ ನಡೆದುಕೊಂಡೆ ಆಸ್ಪತ್ರೆ ಸೇರಿದ್ದಾಳೆ. ಗಂಗಾವತಿ ನಗರದ ಮುರಾರಿ ನಗರ ನಿವಾಸಿಯಾಗಿರುವ ಮಹಿಳೆ ಕಳೆದ 15 ದಿನಗಳ ಹಿಂದೆ ಬೆಂಗಳೂರಿನಿಂದ ಗಂಗಾವತಿಗೆ ಆಗಮಿಸಿದ್ದರು. ರೋಗ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಂಟಲು ದ್ರವದ ಟೆಸ್ಟ್ ಮಾಡಿಸಲಾಗಿತ್ತು.
ಕಳೆದ ರಾತ್ರಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಹಿಳೆ ಅಂಬುಲೆನ್ಸ್ ಆಸರೆಯಿಲ್ಲದೆ ಕೋವಿಡ್ ಆಸ್ಪತ್ರೆ ಸೇರಿದ್ದಾಳೆ. ಅಂಬುಲೆನ್ಸ್ ಕಳೆಸಿ ಕೊಡದ ಆರೋಗ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
– ಆರ್.ಎಲ್.ಜಾಲಪ್ಪ ಆಸ್ಪತ್ರೆಯ 6 ವೈದ್ಯರು, 3 ಸಿಬ್ಬಂದಿಗೆ ಕೊರೊನಾ
ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕೊರೊನಾ ವಾರಿಯರ್ಸ್ ವೇಲೆ ಕುಳಿತು ಸವಾರಿ ಮಾಡುತ್ತಿರುವ ಕೊರೊನಾ ಮಹಾಮಾರಿ ಇಂದು ಕೂಡಾ ಅರ್ಭಟಿಸಿದ್ದು, ಪೊಲೀಸ್ ಪೇದೆ, ಅರೋಗ್ಯ ಕಾರ್ಯಕರ್ತೆ ಸೇರಿ 6 ಮಂದಿಗೆ ಸೋಂಕು ದೃಢವಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಮತ್ತೊಂದು ಪೊಲೀಸ್ ಠಾಣೆ ಸೀಲ್ ಡೌನ್ ಆಗುವ ಮೂಲಕ ಆತಂಕ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ವಿರುದ್ಧ ವಿರುದ್ದ ಹೋರಾಡುವ ವಾರಿಯರ್ಸ್ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಿದ್ದು, ಇಂದು ಕೂಡಾ 57 ವರ್ಷದ ಪೊಲೀಸ್ ಪೇದೆಗೆ ಪಾಸಿಟಿವ್ ಬಂದಿದೆ. ನಗರದ ಟ್ರಾಫಿಕ್ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಅಲ್ಲದೇ ಪೇದೆಯೊಂದಿಗೆ ಸಂಪರ್ಕದಲ್ಲಿದ್ದ ಒಟ್ಟು 18 ಜನ ಪೊಲೀಸ್ ಸಿಬ್ಬಂದಿ, ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಿ, ಎಲ್ಲರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದೆ. ನಗರದ ಹೃದಯ ಭಾಗದಲ್ಲಿರುವ ಪೊಲೀಸ್ ಠಾಣೆಯ ಪೇದೆಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಇದು ಪೊಲೀಸ್ ಪೇದೆಯ ಕಥೆಯಾದರೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವ ಇಬ್ಬರು ಸ್ಟಾಫ್ ನರ್ಸ್‍ಗಳಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ. ಆಸ್ಪತ್ರೆಯ ಸಿಬ್ಬದಿಯಲ್ಲಿ ಆತಂಕ ಮನೆ ಮಾಡಿದೆ. ಇತ್ತ ಕೋಲಾರದ ಆರ್.ಎಲ್.ಜಾಲಪ್ಪ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸುಮಾರು ಆರು ಜನ ವೈದ್ಯರು ಮತ್ತು ಮೂವರು ಜನ ಸಿಬ್ಬಂದಿಗಳಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು ಕೂಡಾ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕೋಲಾರದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದ್ದು ಕೋಲಾರ ಜಿಲ್ಲಾ ಕೇಂದ್ರ ಸೇರಿದಂತೆ ಹಲವೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ 13 ಬಡವಾಣೆಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ಮತ್ತಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗುವ ಲಕ್ಷಣಗಳಿಂದ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಆತಂಕದಲ್ಲಿದೆ.
ಬಳ್ಳಾರಿ: ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿಯೇ ಆರೋಗ್ಯ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯ ತೋರಿದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ.
ಬಳ್ಳಾರಿಯ ರೂಪನಗುಡಿ ನಿವಾಸಿ ಸುಂಕ್ಲಪ್ಪಾ ಮಂಗಳವಾರ ಬೆಳಗ್ಗೆ ಅನಾರೋಗ್ಯದಿಂದ ಸಾವಿಗೀಡಾಗಿದ್ದರು. ಆದರೆ ಸುಂಕ್ಲಪ್ಪಾ ಅವರ ಮನೆಯ ಎದುರಿಗೆ ವಾಸವಿದ್ದ ದಂಪತಿಗೆ ಕರೋನಾ ಪಾಸಿಟಿವ್ ಬಂದಿತ್ತು. ಜಿಂದಾಲ್ ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಳಗ್ಗೆ ಅವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇದಾದ ಬಳಿಕ ಸುಂಕ್ಲಪ್ಪಾ ಟಿಬಿ ಖಾಯಿಲೆಯಿಂದ ಬಳಲುತ್ತಿದ್ದ ಕಾರಣ ನಿಧನರಾಗಿದ್ದಾರೆ.
ಸುಂಕ್ಲಪ್ಪಾ ಕುಟುಂಬ ಸದಸ್ಯರು ಮೃತದೇಹವನ್ನು ನಡು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದಾರೆ. ಅವರಿಗೂ ಕೂಡಾ ಕೊರೊನಾ ಸೋಂಕು ಇದೆ ಎನ್ನುವ ಅನುಮಾನದಿಂದ ಮನೆಯವರು ಯಾರು ಹತ್ತಿರ ಸುಳಿದಿಲ್ಲ. ಬೆಳಗ್ಗೆ 4 ಗಂಟೆಗೆ ಮೃತಪಟ್ಟರು ರಾತ್ರಿ ಕಳೆದರೂ ಯಾರು ಮೃತ ಶವವನ್ನು ತೆಗೆದುಕೊಂಡು ಹೋಗಲಿಲ್ಲ. ಇನ್ನು ಬೆಳಗ್ಗೆಯಿಂದ ಆರೋಗ್ಯ ಇಲಾಖೆಯ ಹೆಲ್ಪ್ ಲೈನ್ ಗೆ ಕರೆ ಮಾಡಿ ಮಾಹಿತಿ ನೀಡಿದರೂ ಸಿಬ್ಬಂದಿ ಸಹ ಹತ್ತಿರ ಸುಳಿದಿಲ್ಲ.
ಕೊನೆಗೆ ಶವವನ್ನು ಸ್ಥಳೀಯ ಯುವಕರ ಸಹಾಯದಿಂದ ತಡ ರಾತ್ರಿ ಅಂತ್ಯಸಂಸ್ಕಾರ ಮಾಡಲಾಗಿದೆ. ಆದ್ರೆ ಈಗ ಮೃತ ವ್ಯಕ್ತಿಯ ಶವ ಸಂಸ್ಕಾರ ಮಾಡಿದ ಜನರಲ್ಲಿ ಆತಂಕ ಮನೆ ಮಾಡಿದೆ. ಕಾರಣ ಆ ಮೃತ ವ್ಯಕ್ತಿಯನ್ನು ಕೋವಿಡ್ ಪರೀಕ್ಷೆ ಮಾಡದೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಹೀಗಾಗಿ ಆ ಮೃತ ವ್ಯಕ್ತಿಗೆ ಸೋಂಕು ಇದೆಯಾ ಇಲ್ವಾ ಎನ್ನುವುದು ಈವರೆಗೂ ತಿಳಿದು ಬಂದಿಲ್ಲಾ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತನ್ನ ಕಬಂಧಬಾಹುಗಳನ್ನು ವಿಸ್ತರಗೊಳಿಸುತ್ತಿದ್ದು, ಇಂದು ದಾಖಲೆಯ 515 ಹೊಸ ಕೊರೊನಾ ಪಾಸಿಟವ್ ಪ್ರರಕರಣಗಳು ವರದಿಯಾಗಿದೆ. ಅದರಲ್ಲೂ ಕಳೆದ 3 ದಿನಗಳಿಂದ ಭಾರೀ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದ ಉಡುಪಿಯಲ್ಲಿ ಇಂದು ಕೂಡ 204 ಹೊಸ ಪ್ರಕರಣಗಳು ದೃಢವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 4835ಕ್ಕೇರಿದೆ.
ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ವರದಿಯಲ್ಲಿ ಕಲಬುರಗಿ 42, ಬೆಂಗಳೂರು ನಗರ 10, ಯಾದಗಿರಿ 74, ಮಂಡ್ಯ 13, ಬೆಳಗಾವಿ 36, ಬೀದರ್ 39, ಹಾಸನ 03, ವಿಜಯಪುರ 53, ಚಿಕ್ಕಬಳ್ಳಾಪುರ 3, ದಕ್ಷಿಣ ಕನ್ನಡ 8, ಉತ್ತರ ಕನ್ನಡ 7, ಧಾರವಾಡ 3, ಬೆಂಗಳೂರು ಗ್ರಾಮಾಂತರ 12, ಹಾವೇರಿ 2, ರಾಮನಗರ 2, ಕೋಲಾರ, ಬಳ್ಳಾರಿ, ಬಾಗಲಕೋಟೆ, ದಾವಣಗೆರೆಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.
ಕೊರೊನಾ ಮಹಾಮಾರಿಯಿಂದ ಚೇತರಿಸಿಕೊಂಡಿರುವ 83 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಗುಣಮುಖರಾಗಿರುವವರ ಸಂಖ್ಯೆ 1,688ಕ್ಕೇರಿದೆ. ರಾಜ್ಯದಲ್ಲಿ ಸದ್ಯ 3,088 ಪ್ರಕರಣಗಳು ಸಕ್ರಿಯಾಗಿವೆ. ಇಂದು ಪತ್ತೆಯಾದ ಪಾಸಿಟಿವ್ ಪ್ರಕರಣ ಪೈಕಿ 482 ಪ್ರಕರಣಗಳು ಅಂತರರಾಜ್ಯ ಹಾಗೂ 1 ಅಂತರರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದೆ. ರಾಜ್ಯದ ವಿವಿಧ ಆಸ್ಪತ್ರೆಯ ತುರ್ತು ನಿಗಾ ಘಟಕಗಳಲ್ಲಿ 13 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪರೀಕ್ಷೆ ಮಾಡಿದ 13,627 ಮಾದರಿಗಳಲ್ಲಿ 12,797 ನೆಗೆಟಿವ್ ಬಂದಿದ್ದು, 36,787 ಮಂದಿ ಕಾರಂಟೈನ್‍ನಲ್ಲಿದ್ದಾರೆ. ರಾಜ್ಯದಲ್ಲಿ ಇದುವರೆಗೂ 3,60,720 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಒಟ್ಟು 3,49,951 ಮಾದರಿಗಳು ನೆಗೆಟಿವ್ ಬಂದಿದೆ. 4,835 ಪಾಟಿಸಿಟಿವ್ ವರದಿಗಳು ದೃಢವಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂದು 64 ಮಾದರಿಗಳನ್ನು ತಪಾಸಣೆ ಮಾಡಲಾಗಿದೆ. ಒಟ್ಟಾರೆ ಈವರೆಗೆ ಏರ್ ಪೋರ್ಟ್‍ನಲ್ಲಿ 14,6731 ತಪಾಸಣೆ ಮಾಡಿದ್ದಾರೆ.
– ಉಡುಪಿಯಲ್ಲಿ ಅತಿ ಹೆಚ್ಚು 92 ಪ್ರಕರಣ – ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4320ಕ್ಕೇರಿಕೆ
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸ 257 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಇಂದಿನ ವರದಿಯ ಅನ್ವಯ ಉಡುಪಿಯಲ್ಲಿ ಅತಿ ಹೆಚ್ಚು 92 ಪ್ರಕರಣಗಳು ಪತ್ತೆಯಾಗಿದ್ದು, ರಾಯಚೂರಿನಲ್ಲಿ 88 ಪ್ರಕರಣಗಳು ದೃಢವಾಗಿದೆ. ಬೆಂಗಳೂರಿನಲ್ಲಿ 9, ಮಂಡ್ಯ, ಹಾಸನದಲ್ಲಿ ತಲಾ 15, ದಕ್ಷಿಣ ಕನ್ನಡದಲ್ಲಿ 04, ಬೆಳಗಾವಿ 12, ದಾವಣಗೆರೆ 13, ಚಿಕ್ಕಬಳ್ಳಾಪುರ ಮತ್ತು ಗದಗ ಜಿಲ್ಲೆಯಲ್ಲಿ ತಲಾ 2, ವಿಜಯಪುರ, ಬಳ್ಳಾರಿ, ಹಾವೇರಿ, ಮೈಸೂರು, ತುಮಕೂರಿನಲ್ಲಿ ತಲಾ ಒಂದು ಕೋವಿಡ್-19 ಪ್ರಕರಣ ದಾಖಲಾಗಿದೆ. ಇದರಲ್ಲಿ 155 ಪಾಸಿಟಿವ್ ಪ್ರಕರಣಗಳು ಅಂತರರಾಜ್ಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದೆ.
ಇಂದು ರಾಜ್ಯದಲ್ಲಿ 106 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ ಕೊರೊನಾದಿಂದ ಚೇತರಿಸಿಕೊಂಡಿರುವವರ ಸಂಖ್ಯೆ 1610ಕ್ಕೇರಿದೆ. ನಿನ್ನೆ ಸಂಜೆ ಗದಗ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದ ಕೊರೊನಾ ಪಾಸಿಟವ್ ಪ್ರಕರಣ ಸೇರಿ 4 ಜನ ಇಂದು ಸಾವನ್ನಪಿದ್ದಾರೆ. ಇದರೊಂದಿಗೆ ಕೊರೊನಾದಿಂದ ಮೃತರಾದವರ ಸಂಖ್ಯೆ ರಾಜ್ಯದಲ್ಲಿ 57ಕ್ಕೇರಿದೆ. ಕೊರೊನಾ ಅಲ್ಲದ ಪ್ರಕರಣದಲ್ಲಿ ಇಂದು ಇಬ್ಬರು ಮೃತ ಪಟ್ಟಿದ್ದಾರೆ. 13 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗದಗ ಜಿಲ್ಲೆಯಲ್ಲಿ ರೋಗಿ ಸಂಖ್ಯೆ 4082, 44 ವರ್ಷದ ಪುರುಷ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಕೊರೊನಾಗೆ 2ನೇ ಬಲಿಯಾಗಿದೆ. ಮೃತ ವ್ಯಕ್ತಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧುಮೇಹ ಮತ್ತು ಮೂತ್ರಕೋಶ ತೊಂದರೆಯಿಂದ ಬಳಲುತ್ತಿದ್ದ ಅವರು ಮೇ 27 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಜ್ವರ, ಉಸಿರಾಟ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿ ಜೂನ್ 1 ರಂದು ಕಿಮ್ಸ್ ಗೆ ದಾಖಲಿಸಲಾಗಿತ್ತು. ದಾವಣೆಗೆರೆಯ ರೋಗಿ ಸಂಖ್ಯೆ 4093, 83 ವರ್ಷದ ವೃದ್ಧೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಇವರು ರೋಗಿ-2560ರ ಸಂಪರ್ಕಕ್ಕೆ ಬಂದಿದ್ದರು. ಎದೆ ನೋವಿನಿಂದ ಬಳಲುತ್ತಿದ್ದ ಇವರನ್ನು ಮೇ 31 ರಂದು ದಾವಣಗೆರೆಗೆ ಆಸ್ಪತ್ರೆ ದಾಖಲಿಸಲಾಗಿತ್ತು.
ಬೆಂಗಳೂರು ನಗರದ 65 ವರ್ಷದ ಮಹಿಳೆ ಸಾವನ್ನಪ್ಪಿದ್ದು, ತೀವ್ರ ಜ್ವರ, ನೆಗಡಿಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ಚಿಕಿತ್ಸೆ ಫಲಿಸದೆ ನಿನ್ನೆ ಸಾವನ್ನಪ್ಪಿದ್ದರು. ಮತ್ತೊಂದು ಪ್ರಕರಣದಲ್ಲಿ 60 ವರ್ಷದ ಮಹಿಳೆ ನಿನ್ನೆ ಜ್ವರ ಮತ್ತು ವಾಂತಿ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ರಾಗಿಗುಡ್ಡದಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಂದೇ ರೈಲಿನಲ್ಲಿ ಆಗಮಿಸಿದ್ದ ಅಮ್ಮ, ಮಗ, ಮಗಳು ಮತ್ತು ತಂಗಿ ಕ್ವಾರಂಟೈನಲ್ಲಿದ್ದರು. ಆದರೆ ಕೊರೊನಾ ವರದಿ ಬರುವ ಮುನ್ನವೇ ಇವರು ಮನೆಗೆ ಹಿಂದಿರುಗಿದ್ದು, ಆ ಬಳಿಕ ನಾಲ್ಕು ಜನ ಬೆಂಗಳೂರಿನ ನಾಲ್ಕು ಏರಿಯಾಗಳಲ್ಲಿ ವಾಸಿಸುತ್ತಿದ್ದರು. ಮಗಳು ಟ್ಯಾನರಿ ರೋಡ್ ಗಂಡನ ಮನೆಗೆ ತೆರಳಿದ್ದು, ಅಮ್ಮ, ಮಗ ರಾಗಿ ಗುಡ್ಡದ ಮನೆಗೆ ಹಾಗೂ ತಂಗಿ ಪುಟ್ಟೇನಹಳ್ಳಿಯ ಮನೆಗೆ ತೆರಳಿದ್ದರು. ಉಳಿದಂತೆ ಕಲಾಸಿಪಾಳ್ಯದಲ್ಲಿ ಕೊರೊನಾ ಪ್ರಕರಣ ವರದಿಯಾಗಿದ್ದು, 42 ವರ್ಷದ ವ್ಯಕ್ತಿಗೆ ಪಾಸಿಟಿವ್ ವರದಿ ಬಂದಿದೆ. ಅಪೆಂಡಿಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಸರ್ಜರಿಗೆ ಎಂದು ಆಸ್ಪತ್ರೆಗೆ ತೆರಳಿದ್ದರು. ಆದರೆ ಸರ್ಜರಿಗೂ ಮುನ್ನ ನಡೆಸಿದ ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ. ಸದ್ಯ ಸೋಂಕಿತನ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯಾಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಉಸಿರಾಟದ ಸಮಸ್ಯೆ ಹೊಂದಿದ್ದ 50 ವರ್ಷದ ವ್ಯಕ್ತಿಗೆ ಪಾಸಿಟಿವ್ ವರದಿ ಬಂದಿದೆ. ಹೊರಮಾವುನಲ್ಲಿ ಒಬ್ಬ ವ್ಯಕ್ತಿಗೆ ಪಾಸಿಟಿವ್ ಬಂದಿದ್ದು, ಗದಗ ಪ್ರಯಾಣದ ಹಿನ್ನೆಲೆ ಹೊಂದಿದ್ದರು.
ಬೆಂಗಳೂರು: ಲಾಕ್‍ಡೌನ್ 5.Oನಲ್ಲಿ ಅಂತಾರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶವನ್ನು ನೀಡಿದೆ. ಒಂದು ವೇಳೆ ಅಗತ್ಯವಿದ್ದಲ್ಲಿ ರಾಜ್ಯಗಳು ಅಂತಾರಾಜ್ಯ ಪ್ರಯಾಣಿಕರ ಮೇಲೆ ನಿರ್ಬಂಧ ಹೇರುವ ಅವಕಾಶವನ್ನು ಕೇಂದ್ರ ನೀಡಿತ್ತು. ಇದೀಗ ಕರ್ನಾಟಕ ಹೊರ ರಾಜ್ಯದಿಂದ ಬರೋರು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ಹೊರಡಿಸಿದೆ.
1. ಸೇವಾ ಸಿಂಧುವಿನಲ್ಲಿ ನೋಂದಣಿ:
* ಕರ್ನಾಟಕ ಪ್ರವೆಶಿಸುವ ಮುನ್ನ ಪ್ರಯಾಣಿಯಕರು ಸೇವಾ ಸಿಂಧು ಪೋಟರ್ಲ್ ನಲ್ಲಿ ತಮ್ಮ ಪ್ರಾಥಮಿಕ ಮಾಹಿತಿಯನ್ನು ದಾಖಲಿಸಿರಬೇಕು. ಈ ಹಿಂದೆ ಇದ್ದಂತೆ ಸೇವಾ ಸಿಂಧೂವಿನಡಿ ನೋಂದಣಿ ಇ ಪಾಸ್ ಪಡೆಯುವ ಅಗತ್ಯವಿಲ್ಲ.
* ಬ್ಯುಸಿನೆಸ್ ಟ್ರಿಪ್ ಆಗಿದ್ದರೆ ವೈಯಕ್ತಿಯ ಮಾಹಿತಿ ಜೊತೆಗೆ ರಾಜ್ಯದಲ್ಲಿ ಭೇಟಿ ಮಾಡುತ್ತಿರುವವರ ಮಾಹಿತಿಯನ್ನು ಒದಗಿಸಬೇಕು.
* ದೀರ್ಘ ಪ್ರಯಾಣ ಮಾಡುತ್ತಿರುವವರು ರಾಜ್ಯ ಪ್ರವೇಶಿಸುವಾಗ ಮಾಹಿತಿ ನೀಡಬೇಕು.
2. ಗಡಿ ಚೆಕ್‍ಪೋಸ್, ಬಸ್ ನಿಲ್ದಾಣ, ಏರ್ ಪೋರ್ಟ್ ಗಳಲ್ಲಿ ಸ್ಕ್ರೀನಿಂಗ್. ನಿಯಮಗಳಿಗುನುವಾಗಿ ಕೈ ಮೇಲೆ ಸೀಲ್, 14 ದಿನಗಳ ಕ್ವಾರಂಟೈನ್‍ಗೆ ಒಳಪಡಿಸೋದು.
3. ಕ್ವಾರಂಟೈನ್ ನಿಯಮಗಳು: ಎ. ಮಹಾರಾಷ್ಟ್ರದಿಂದ ಬರೋರಿಗೆ ಪ್ರತ್ಯೇಕ ನಿಯಮಗಳು
ಮೊದಲ ಏಳು ದಿನ ಸಾಂಸ್ಥಿಕ ಕ್ವಾರಂಟೈನ್. ನಂತ್ರ ಏಳು ದಿನ ಹೋಮ್ ಕ್ವಾರಂಟೈನ್. ಬಂದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡದ್ರೆ ನಿಗದಿತ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುವುದು. ರಿಪೋರ್ಟ್ ನೆಗೆಟಿವ್ ಬಂದ್ರೆ ಯಾವುದೇ ಪರೀಕ್ಷೆಯ ಅವಶ್ಯಕತೆ ಇಲ್ಲ.
* ಮಹಾರಾಷ್ಟ್ರದಿಂದ ಆಗಮಿಸುವ ಪ್ರತಿಯೊಬ್ಬರಿಗೂ ಏಳು ಸಾಂಸ್ಥಿಕ ಕ್ವಾರಂಟೈನ್ ಬಳಿಕ, ಏಳು ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯ. ಇನ್ನು ತುರ್ತು ಪ್ರಯಾಣದ ಹಿನ್ನೆಲೆ ಆಗಮಿಸಿದವರನ್ನು ಒಬ್ಬರ ನಿಗಾದಲ್ಲಿ 14 ದಿನಗಳ ಹೋಮ್ ಕ್ವಾರಂಟೈನ್ ಮಾಡಲಾಗುತ್ತದೆ. (ಕುಟುಂಬದಲ್ಲಿ ಸಾವು, ಗರ್ಭಿಣಿ, 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ಹಿರಿಯರು, ವೈದ್ಯಕೀಯ ಚಿಕಿತ್ಸೆ)
* ವ್ಯವಹಾರದ ಹಿನ್ನೆಲೆ ಮಹಾರಾಷ್ಟ್ರದಿಂದ ಆಗಮಿಸುವ ವ್ಯಕ್ತಿ ಕಡ್ಡಾಯವಾಗಿ ಏಳು ದಿನಗಳೊಗೆ ಹಿಂದಿರುಗ ಟಿಕೆಟ್ ಕಾಯ್ದಿರಿಸಿಕೊಂಡಿರಬೇಕು. ಕರ್ನಾಟಕದಲ್ಲಿ ಭೇಟಿಯಾಗುವ ವ್ಯಕ್ತಿಯ ವಿಳಾಸ ನೀಡಬೇಕು. ಎರಡು ದಿನಗಳ ಮುಂಚಿನ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿದ್ದರೆ ಕ್ವಾರಂಟೈನ್ ನಿಂದ ವಿನಾಯ್ತಿ. ಕೋವಿಡ್ ರಿಪೋರ್ಟ್ ಇಲ್ಲದೇ ಬಂದವರಿಗೆ ಎರಡು ದಿನ ಕ್ವಾರಂಟೈನ್ ಮಾಡಿ ಕಡ್ಡಾಯವಾಗಿ ಅವರ ಖರ್ಚಿನಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು. ವ್ಯವಹಾರ ಸಂಬಂಧ ಬಂದವರಿಗೆ ಕೈ ಮೇಲೆ ಹಾಕುವ ಸೀಲ್ ನಿಂದ ವಿನಾಯ್ತಿ.
— Karnataka Health Department (@DHFWKA) May 31, 2020
ಮಹಾರಾಷ್ಟ್ರದಿಂದ ಬರೋ ಪ್ರಯಾಣಿಕರು ಎರಡು ದಿನದ ಮೊದಲಿನ ಐಸಿಎಂಆರ್ ನಿಂದ ಅನುಮತಿ ಪಡೆದ ಲ್ಯಾಬ್ ಗಳಿಂದಲೇ ಕೋವಿಡ್-19 ನೆಗೆಟಿವ್ ರಿಪೋರ್ಟ್ ತಂದವರಿಗೆ ಕ್ವಾರಂಟೈನ್ ನಿಂದ ವಿನಾಯ್ತಿ.
* ಇತರೆ ರಾಜ್ಯಗಳ ಪ್ರಯಾಣಿಕರಿಗೆ
ಬೇರೆ ರಾಜ್ಯಗಳಿಂದ ಬರೋ ಪ್ರಯಾಣಿಕರಿಗೆ ಕಡ್ಡಾಯ 14 ದಿನ ಹೋಮ್ ಕ್ವಾರಂಟೈನ್. ಈ ವೇಳೆ ಸೋಂಕಿನ ಲಕ್ಷಣಗಳು ಐಸೋಲೇಷನ್ ಶಿಫ್ಟ್ ಮಾಡಲಾಗುವುದು. ಕುಟುಂಬದಲ್ಲಿ ಹೆಚ್ಚಿನ ಸದಸ್ಯರು ಅಥವಾ ಮನೆ ಚಿಕ್ಕದಾಗಿದ್ದರೆ ಅಥವಾ ಸ್ಲಂ ಪ್ರದೇಶಗಳಾಗಿದ್ದರೆ ಹೋಮ್ ಕ್ವಾರಂಟೈನ್ ಗೆ ಅನುಮತಿ ನೀಡಲ್ಲ.
— Karnataka Health Department (@DHFWKA) May 31, 2020
ವ್ಯವಹಾರ ಹಿನ್ನೆಲೆ ಬರುವವರು ಏಳು ದಿನಗಳ ಮುಂಚಿನ ಕೊರೊನಾ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು. ಹಾಗೆಯೇ ಆಗಮಿಸಿದ ದಿನದಿಂದ ಏಳು ದಿನಗಳೊಗೆ ರಿಟರ್ನ್ ಟಿಕೆಟ್ ಬುಕ್ ಮಾಡಿರಬೇಕು. ರಸ್ತೆ ಮಾರ್ಗವಾಗಿ ಬರೋರು ಮೂಲ ವಿಳಾಸ ನೀಡಬೇಕು.
4. ಕಡ್ಡಾಯ ಹೋಮ್ ಕ್ವಾರಂಟೈನ್ > ಗ್ರಾಮೀಣ ಭಾಗಗಳಲ್ಲಿ
* ಮನೆಯ ಬಾಗಿಲಿಗೆ ಹೋಮ್ ಕ್ವಾರಂಟೈನ್ ಪೋಸ್ಟರ್ ಅಂಟಿಸಲಾಗುವುದು.
* ಹೋಮ್ ಕ್ವಾರಂಟೈನ್ ಮನೆಯ ನೆರೆಯ ಇಬ್ಬರಿಗೆ ಮಾಹಿತಿ ನೀಡುವುದು.
* ಗ್ರಾಮ ಪಂಚಾಯ್ತಿ ಟಾಸ್ಕ್ ಫೋರ್ಸ್ ಸಿಬ್ಬಂದಿ ಕ್ವಾರಂಟೈನ್ ಗೆ ಒಳಗಾದವರ ಮೇಲೆ ನಿಗಾ ಇರಿಸತಕ್ಕದ್ದು.
* ಗ್ರಾಮದಲ್ಲಿ ಮೂವರನ್ನು ನೇಮಿಸುವುದು.
* ಒಂದು ವೇಳೆ ಕ್ವಾರಂಟೈನ್ ನಿಯಮ ಉಲ್ಲಂಘಿಸದಲ್ಲಿ ಎಫ್‍ಐಆರ್ ದಾಖಲು.
* ಕ್ವಾರಂಟೈನ್ ವಾಚ್ ಆ್ಯಪ್ ಬಳಕೆ.
— Karnataka Health Department (@DHFWKA) May 28, 2020
> ಬಿಬಿಎಂಪಿ ಮತ್ತು ಇನ್ನಿತರ ನಗರ ಪ್ರದೇಶಗಳಲ್ಲಿ
* ಮನೆಯ ಬಾಗಿಲಿಗೆ ಹೋಮ್ ಕ್ವಾರಂಟೈನ್ ಪೋಸ್ಟರ್ ಅಂಟಿಸಲಾಗುವುದು.
* ಹೋಮ್ ಕ್ವಾರಂಟೈನ್ ಮನೆಯ ನೆರೆಯ ಇಬ್ಬರಿಗೆ/ಅಪಾರ್ಟ್ ಮೆಂಟ್ ಸಿಬ್ಬಂದಿ / ಮನೆಯ ಮಾಲೀಕರಿಗೆ ಮಾಹಿತಿ ನೀಡುವುದು.
* ವಾರ್ಡ್ ಮಟ್ಟದ ಅಧಿಕಾರಿಗಳಿಂದ ಪರಿಶೀಲನೆ
* ಬೂತ್ ಮಟ್ಟದಲ್ಲಿ ಕ್ವಾರಂಟೈನ್ ಮೇಲೆ ನಿಗಾ ಇರಿಸಲು ಮೂವರನ್ನು ನೇಮಿಸುವುದು.
* ಒಂದು ವೇಳೆ ಕ್ವಾರಂಟೈನ್ ನಿಯಮ ಉಲ್ಲಂಘಿಸದಲ್ಲಿ ಎಫ್‍ಐಆರ್ ದಾಖಲು.
* ಕ್ವಾರಂಟೈನ್ ವಾಚ್ ಆ್ಯಪ್ ಬಳಕೆ.
ಕೋಲಾರ: ವಿಶ್ವದಾದ್ಯಂತ ಕೊರೊನಾ ಮಹಾಮಾರಿ ಜನರನ್ನು ಕಾಡುತ್ತಾ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಆದರೆ ಜಿಲ್ಲೆಯ ಸೋಂಕಿತರಲ್ಲಿ ಕೊರೊನಾ ಲಕ್ಷಣಗಳೇ ಇಲ್ಲದಿರುವುದು ಆರೋಗ್ಯ ಇಲಾಖೆಗೆ ಹೊಸ ತಲೆ ನೋವಾಗಿ ಪರಿಣಮಿಸಿದೆ.
ವಿಶ್ವದೆಲ್ಲೆಡೆ ಕೊರೊನಾ ಸೋಂಕಿತರು ಹಲವು ರೋಗ ಲಕ್ಷಣಗಳಿಂದ ನರಳುತ್ತಿದ್ದರೆ ಜಿಲ್ಲೆಯಲ್ಲಿ ಸದ್ಯ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರು ವಿಭಿನ್ನವಾಗಿ ಕಂಡು ಬಂದಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಒಟ್ಟು 18 ಮಂದಿ ಕೊರೊನಾ ಸೋಂಕಿತರಿದ್ದು, ಯಾರೊಬ್ಬರಲ್ಲೂ ಕೂಡಾ ಸಣ್ಣ ಪ್ರಮಾಣದಲ್ಲೂ ಕೊರೊನಾ ಸೋಂಕಿನ ಗುಣಲಕ್ಷಣಗಳೂ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಪತ್ತೆಯಾಗಿರುವ ರೋಗಿಗಳ ಸಂಖ್ಯೆ, 907, 1812, 2147 ಸೋಂಕಿತರಲ್ಲೂ ಕೂಡಾ ಈವರೆಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಅವರಿಗೆ ಕನಿಷ್ಠ ಉಸಿರಾಟದ ತೊಂದರೆ ಕೆಮ್ಮು, ನೆಗಡಿಯಂತ ಲಕ್ಷಣಗಳೂ ಕೂಡಾ ಕಂಡು ಬಂದಿಲ್ಲ.
ಸದ್ಯ ಆರೋಗ್ಯ ಇಲಾಖೆಗೆ ತಲೆನೋವಾಗಿರುವ ಅಂಶ ಎಂದರೆ ಸೋಂಕಿತರಲ್ಲೂ ರೋಗ ಲಕ್ಷಣ ಇಲ್ಲ. ಅವರ ಪ್ರಾಥಮಿಕ ಸಂಪರ್ಕ ಹೊಂದಿರುವವರಲ್ಲೂ ರೋಗ ಲಕ್ಷಣಗಳಿಲ್ಲ ಪರಿಣಾಮ ಸೋಂಕಿತರನ್ನು ಪತ್ತೆ ಮಾಡುವುದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಜಿಲ್ಲೆಯ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳ ಮೂಲಕ ರ್‍ಯಾಂಡಮ್ ಟೆಸ್ಟ್ ಗಳನ್ನು ಮಾಡುವ ಮೂಲಕ ಕೊರೊನಾ ಸೋಂಕನ್ನು ಪತ್ತೆ ಮಾಡುವ ಕೆಲಸ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಎಪಿಎಂಸಿ ಮಾರುಕಟ್ಟೆಗಳಿಂದ ಹೊರ ರಾಜ್ಯಗಳಿಗೆ ಹೋಗಿ ಬರುತ್ತಿದ್ದ ಚಾಲಕರಿಗೆ ಹೆಚ್ಚಾಗಿ ಸೋಂಕು ಕಾಣಿಸಿದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಹೋಗಿ ಬರುವ ವ್ಯಕ್ತಿಗಳ ಪ್ರರಕಣಗಳನ್ನು ಹೈರಿಸ್ಕ್ ಕೇಸ್ ಎಂದು ಪರಿಗಣಿಸಲಾಗುತ್ತಿದೆ. ಹೊರ ರಾಜ್ಯಕ್ಕೆ ಹೋಗಿ ಬರುವ ಚಾಲಕರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.
ಮಾಹಿತಿ ನೀಡದೆ ಹೊರ ರಾಜ್ಯಗಳಿಗೆ ಭೇಟಿ ನೀಡಿದ್ದ ಚಾಲಕರನ್ನು ಪತ್ತೆ ಮಾಡಲು ಪೊಲೀಸ್ ಇಲಾಖೆ ಸಹಾಯವನ್ನು ಪಡೆಯಲಾಗುತ್ತಿದೆ. ಹೊರ ರಾಜ್ಯಗಳಿಗೆ ಹೋಗಿ ಬಂದಿರುವ ಚಾಲಕರ ಮೊಬೈಲ್ ಟವರ್ ಲೊಕೇಶ್‍ನ ಟ್ರೇಸ್ ಮಾಡುವ ಮೂಲಕ ಅಂತ ಚಾಲಕರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಕಾರಣ ಸೋಂಕಿತರಲ್ಲಿ ರೋಗ ಲಕ್ಷಣ ಕಾಣಿಸದಿದ್ದರೂ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರಲ್ಲಿ ರೋಗ ಹರಡುತ್ತಿದೆ. ಉದಾಹರಣೆ ರೋಗಿ ಸಂಖ್ಯೆ 1587, ರೋಗಿ ಸಂಖ್ಯೆ 1946, ರೋಗಿ ಸಂಖ್ಯೆ 1128 ಚಾಲಕರಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿತ್ತು. ನಂತರ ಅವರ ಪತ್ನಿ ಮತ್ತು ಮಕ್ಕಳ ಕೊರೊನಾ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ. ಈಗಾಗಿ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೋಂಕಿತರನ್ನು ಪತ್ತೆ ಮಾಡುವ ಸವಾಲಿನ ಕೆಲಸ ಎದುರಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಲಕ್ಷಣಗಳು ಕಂಡುಬರದಿರವುದು ಬಹು ದೊಡ್ಡ ಅಘಾತ ನೀಡುವ ಸಾಧ್ಯತೆ ಇದೆ.
ಬೆಂಗಳೂರು: ಕೊರೊನಾ ಲಾಕ್‍ಡೌನ್ ಕಾರಣದಿಂದ ಸ್ಥಗಿತಗೊಂಡಿದ್ದ ಬಿಎಂಟಿಸಿ ಸೇವೆಯನ್ನು ನಾಳೆಯಿಂದ ಮತ್ತೆ ಆರಂಭ ಮಾಡುವುದಾಗಿ ಬಿಎಂಟಿಸಿ ಎಂಡಿ ಶಿಖಾ ಅವರು ಹೇಳಿದ್ದಾರೆ. ಸರ್ಕಾರದ ಸೂಚನೆ ಮೇರೆಗೆ ಬಸ್ ಆಪರೇಷನ್ ಆರಂಭಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.
ಬಸ್ ಸೇವೆ ಆರಂಭದ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಎಂಎಚ್‍ಎ ಸೂಚನೆ ಮೇರೆಗೆ ಸರ್ಕಾರ ಕೆಲ ನಿರ್ದೇಶನಗಳನ್ನು ನೀಡಿ ಬಸ್ ಸೇವೆ ಆರಂಭಿಸಲು ಸೂಚನೆ ನೀಡಿದ್ದಾರೆ. ಇದರ ಅನ್ವಯ ನಗರದಲ್ಲಿ ಗ್ರೇಡೆಡ್ ಮ್ಯಾನರ್ ನಲ್ಲಿ, ಹೆಚ್ಚು ದಟ್ಟಣೆ ಇರುವ ಪ್ರದೇಶದಲ್ಲಿ ಬಸ್ ಸೇವೆ ಮೊದಲು ಆರಂಭ ಮಾಡುತ್ತೇವೆ. ಆದರೆ ಕಂಟೈನ್ಮೆಂಟ್ ಝೋನ್ ಗಳಲ್ಲಿ ಬ್ಯಾನ್ ಮಾಡಿರುವುದರಿಂದ ಆ ಮಾರ್ಗಗಳಲ್ಲಿ ಬಸ್ ಸೇವೆ ಲಭ್ಯ ಇರುವುದಿಲ್ಲ. ಕಂಟೈನ್ಮೆಂಟ್ ಝೋನ್‍ಗಳ ಮಾಹಿತಿಯನ್ನು ಬಿಬಿಎಂಪಿ ನೀಡಿದೆ ಎಂದು ವಿವರಿಸಿದರು.
ಮಾಸ್ಕ್ ಕಡ್ಡಾಯ: ನಗರದ ಪ್ರಮುಖ ಏರಿಯಾಗಳಲ್ಲಿ ಎಲ್ಲೆಲ್ಲಿ ಹೆಚ್ಚು ಟ್ರಾಫಿಕ್ ಇರುತ್ತೆ ಆ ಮಾರ್ಗಗಳಲ್ಲಿ ಹೆಚ್ಚಿನ ಬಸ್ ಸೇವೆ ಲಭ್ಯವಿರುತ್ತದೆ. ನಾಳೆ ಮೊದಲ ದಿನ ಸುಮಾರು 1,500 ಬಸ್‍ಗಳು ರಸ್ತೆಗಳಿಯಾಲಿದೆ. ಈಗಾಗಲೇ ತುರ್ತು ಸೇವೆಗೆ 700 ಬಸ್‍ಗಳು ನೀಡಿದ್ದೇವೆ. ಆದರೆ ಸರ್ಕಾರದ ಆದೇಶದಂತೆ ಬಸ್‍ಗೆ ಬರುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬಸ್ ಹತ್ತುವವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಜೊತೆಗೆ ಬಿಎಂಟಿಸಿ ಸಿಬ್ಬಂದಿಗಳಿಗೂ ಮಾಸ್ಕ್ ಧರಿಸುವಂತೆ ಸೂಚನೆ ನೀಡಲು ಆದೇಶಿಸಿದ್ದೇವೆ ಎಂದರು.
ನಿಂತು ಪ್ರಯಾಣಿಸಲು ಅವಕಾಶವಿಲ್ಲ: ಬಿಬಿಎಂಪಿ ಆಯುಕ್ತರು ಸೂಚಿಸಿದ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಬಸ್ ಸಂಚಾರವಿಲ್ಲ. ಆದರೆ ಯಾವುದೇ ಕಾರಣಕ್ಕೂ ಜನರು ಆತಂಕ ಪಡುವ ಅಗತ್ಯವಿಲ್ಲ. ಬಸ್‍ಗಳಲ್ಲಿ ನಿಂತು ಪ್ರಯಾನಿಸಲು ಅವಕಾಶವಿಲ್ಲ. ಬಸ್‍ಗಳಲ್ಲಿ ಎಷ್ಟು ಆಸನ ವ್ಯವಸ್ಥೆ ಇದೆ ಅಷ್ಟು ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಒಂದೊಮ್ಮೆ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಣಿಕರಿದ್ದರೆ ನಮ್ಮ ಸಿಬ್ಬಂದಿ ತಕ್ಷಣ ಡಿಪೋಗೆ ಮಾಹಿತಿ ನೀಡುತ್ತಾರೆ. ಕೂಡಲೇ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುತ್ತೇವೆ. ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುವುದು ಎಂದರೇ ಯಾವುದೇ ಕಾರಣಕ್ಕೂ ಬಸ್ ನಿಲ್ದಾಣ, ಬಸ್‍ಗಳಲ್ಲಿ ಗುಂಪು ಸೇರಬೇಡಿ. ಮೊದಲ ಬಸ್ ತುಂಬಿದ್ದರೆ ಬಹುಬೇಗ ಮತ್ತೊಂದು ಬಸ್ ವ್ಯವಸ್ಥೆ ಮಾಡುತ್ತೇವೆ.
ಸಿಬ್ಬಂದಿಗೆ ಜಾಗೃತಿ: ಬಿಎಂಟಿಸಿ ಸಿಬ್ಬಂದಿ ಕೂಡ ಆತಂಕ ಪಡುವ ಅಗತ್ಯವಿಲ್ಲ. ಸಿಬ್ಬಂದಿಗೆ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಅಲ್ಲದೇ ಅವರಿಗೆ ಅಗತ್ಯವಿರೋ ಮಾಸ್ಕ್, ಸ್ಯಾನಿಟೈಸರ್ ಗಳನ್ನು ನೀಡಿದ್ದೇವೆ. ಬಸ್‍ಗಳನ್ನು ಕೂಡ ಪ್ರತಿದಿನ ನಾವು ಸ್ವಚ್ಛ ಮಾಡುತ್ತೇವೆ. ಬಸ್ ಹೊಸ ಭಾಗದಲ್ಲಿ ನೀರಿನಲ್ಲಿ ತೊಳೆದರೆ, ಬಸ್ ಒಳಗಡೆ ಸ್ಯಾನಿಟೈಸ್ ಮಾಡುತ್ತೇವೆ. ಈ ಬಗ್ಗೆ ಸರ್ಕಾರ ನೀಡಿರುವ ಸೂಚನೆಗಳನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು: ಹೊಂಗಸಂದ್ರದಲ್ಲಿ ಬಿಹಾರಿ ಕೂಲಿ ಕಾರ್ಮಿಕನಿಂದ 29 ಪ್ರಕರಣಗಳು ಪತ್ತೆಯಾಗಿತ್ತು. ಕೆಲ ದಿನಗಳ ನಂತರ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಹೊಂಗಸಂದ್ರ ಸಹಜ ಸ್ಥಿತಿಯತ್ತ ಸಾಗುತ್ತಿದೆ ಎನ್ನುವಷ್ಟರಲ್ಲೇ ಬಿಹಾರಿ ಕೂಲಿ ಕಾರ್ಮಿಕನ ಸಂಬಂಧ ಕ್ವಾರಂಟೈನ್ ಮಾಡಿದ್ದವರಲ್ಲಿ ಬರೋಬ್ಬರಿ ಐದು ಜನರಿಗೆ ಸೊಂಕು ಪತ್ತೆಯಾಗಿದೆ. ಇದರಿಂದ ಮತ್ತೆ ಹೊಂಗಸಂದ್ರದಲ್ಲಿ ಭೀತಿ ಎದುರಾಗಿದೆ.
ಬಿಹಾರಿ ಕೂಲಿ ಕಾರ್ಮಿಕನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 184 ಜನರನ್ನ ಹೋಟೆಲ್ ಕ್ವಾರಂಟೈನ್ ಮಾಡಲಾಗಿತ್ತು. ಇವರನ್ನು 14 ದಿನಗಳು ಕ್ವಾರಂಟೈನ್ ಮುಗಿದ ನಂತರ ಮತ್ತೆ ಟೆಸ್ಟ್ ಗೆ ಒಳಪಡಿಸಿದ್ದಾರೆ. 2ನೇ ಟೆಸ್ಟ್‌ನಲ್ಲಿ ಬರೋಬ್ಬರಿ 5 ಜನರಿಗೆ ಪಾಸಿಟಿವ್ ಬಂದಿದೆ. ಸೋಂಕು ಪತ್ತೆಯಾದ ಐದು ಜನರಲ್ಲಿ ಒಬ್ಬರು ಅಲ್ಲಿನ ಸ್ಥಳೀಯರು, ಮೂವರು ಕೂಲಿ ಕಾರ್ಮಿಕರು ಮತ್ತು ಒಬ್ಬರು ಕನ್ನಡಿಗರಿದ್ದಾರೆ.
ಹೋಟೆಲ್ ಕ್ವಾರಂಟೈನ್ ನಲ್ಲಿ ಇದ್ದುದ್ದರಿಂದ ಇವರು ಎಲ್ಲಿಗೂ ಪ್ರಯಾಣ ಬೆಳೆಸಿಲ್ಲ. ಅಲ್ಲಿನ ಶೆಡ್‍ನಲ್ಲಿದ್ದವರು ಎನ್ನಲಾಗುತ್ತಿದೆ. ಈಗ ಈ ಐದು ಜನರ ಬಗ್ಗೆ ಆರೋಗ್ಯ ಇಲಾಖೆ ಪತ್ತೆ ಹಚ್ಚುತ್ತಿದ್ದು, ಮತ್ತಷ್ಟು ಜನರನ್ನ ಟೆಸ್ಟ್ ಗೆ ಒಳಪಡಿಸುವ ಸಾಧ್ಯತೆ ಇದೆ. ಕ್ವಾರಂಟೈನ್‍ನಲ್ಲಿದ್ದ ಐದು ಜನರಿಗೆ ಪಾಸಿಟಿವ್ ಬಂದಿರುವುದು ಆರೋಗ್ಯ ಇಲಾಖೆ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಹಾವೇರಿ: ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆ ಊಟ, ಕುಡಿಯುವ ನೀಡಿನ ಸೌಲಭ್ಯ ಸಿಗದೆ ಪರದಾಡುತ್ತಿರುವ ಘಟನೆ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದಿದೆ.
ಸವಣೂರು ಪಟ್ಟಣದ ಕೊರೊನಾ ಸೋಂಕಿತ ರೋಗಿ ಸಂಖ್ಯೆ ಪಿ-639 ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕಾರಣ ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಆಶಾ ಕಾರ್ಯಕರ್ತೆ ಅವರನ್ನು ಒಳಗೊಂಡಂತೆ ಮೂವರನ್ನು ಜಿಲ್ಲಾಡಳಿತ ನಿನ್ನೆಯಿಂದ ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ಕ್ವಾರಂಟೈನ್ ಮಾಡಿದೆ.
ಕೊರೊನಾ ವಾರಿಯರ್ಸ್ ಕ್ವಾರಂಟೈನ್ ಮಾಡಿದ ಬಳಿಕ ಜಿಲ್ಲಾಡಳಿತ ಹಾಗೂ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ಈವರೆಗೂ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಇಂದು ಸಂಜೆ 4 ಗಂಟೆಯಾದರೂ ಇದುವರೆಗೂ ಕ್ವಾರಂಟೈನ್‍ನಲ್ಲಿರೋ ಮೂವರಿಗೆ ಊಟ ವ್ಯವಸ್ಥೆಯನ್ನೇ ಮಾಡಿಲ್ಲ. ಹೀಗಾಗಿ ಕುಡಿಯಲು ನೀರು, ತಿನ್ನಲು ಊಟ ಸಿಗದೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆ ಪರದಾಡುತ್ತಿದ್ದಾರೆ.
ನಮ್ಮನ್ನು ಕ್ವಾರಂಟೈನ್ ಮಾಡಿದ್ದು ಬಿಟ್ಟರೆ ಇದುವರೆಗೂ ನಮಗೆ ಯಾವುದೇ ಕನಿಷ್ಠ ಸೌಲಭ್ಯಗಳನ್ನು ನೀಡಿಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.