Tag: Department of Health

  • ಇಂದು 8,852 ಕೊರೊನಾ ಪ್ರಕರಣ ಪತ್ತೆ- 106 ಜನ ಸಾವು

    ಇಂದು 8,852 ಕೊರೊನಾ ಪ್ರಕರಣ ಪತ್ತೆ- 106 ಜನ ಸಾವು

    – ಒಟ್ಟು ಸೋಂಕಿತರ ಸಂಖ್ಯೆ 3,35,928ಕ್ಕೆ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಓಟ ಮುಂದುವರಿದಿದ್ದು, ಇಂದು 8,852 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 106 ಜನ ಇಂದು ಕೊರೊನಾಗೆ ಬಲಿಯಾಗಿದ್ದಾರೆ.

    ಇಂದು 8,852 ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,35,928ಕ್ಕೆ ಏರಿಕೆಯಾಗಿದೆ. ಇಂದು 106 ಜನ ಕೊರೊನಾದಿಂದ ಸಾವನ್ನಪ್ಪಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 5,589ಕ್ಕೆ ಏರಿಕೆಯಾಗಿದೆ. ಇನ್ನೂ 730 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇನ್ನೂ 88,091 ಸಕ್ರಿಯ ಪ್ರಕರಣಗಳಿವೆ. ಇಂದು 7,101 ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಡಿಸ್ಚಾರ್ಜ್ 2,42,229 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

    ಬೆಂಗಳೂರಿನಲ್ಲಿ ಇಂದು 2,821 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,27,263ಕ್ಕೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು 2,406 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವರೆಗೆ ಒಟ್ಟು 87,621 ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ಒಟ್ಟು 37,703 ಸಕ್ರಿಯ ಪ್ರಕರಣಗಳಿವೆ. ಇಂದು ಬೆಂಗಳೂರಿನಲ್ಲಿ 27 ಜನ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ಈ ವರೆಗೆ ಒಟ್ಟು 1,938 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 132, ಬಳ್ಳಾರಿ 428, ಬೆಳಗಾವಿ 357, ಬೆಂಗಳೂರು ಗ್ರಾಮೀಣ 55, ಬೆಂಗಳೂರು ನಗರ 2,821, ಬೀದರ್ 73, ಚಾಮರಾಜನಗರ 54, ಚಿಕ್ಕಬಳ್ಳಾಪುರ 127, ಚಿಕ್ಕಮಗಳೂರು 207, ಚಿತ್ರದುರ್ಗ 95, ದಕ್ಷಿಣ ಕನ್ನಡ 334, ದಾವಣಗೆರೆ 373, ಧಾರವಾಡ 300, ಗದಗ 196, ಹಾಸನ 268, ಹಾವೇರಿ 105, ಕಲಬುರಗಿ 199, ಕೊಡಗು 65, ಕೋಲಾರ 82, ಕೊಪ್ಪಳ 240, ಮಂಡ್ಯ 179, ಮೈಸೂರು 734, ರಾಯಚೂರು 147, ರಾಮನಗರ 114, ಶಿವಮೊಗ್ಗ 292, ತುಮಕೂರು 314, ಉಡುಪಿ 254, ಉತ್ತರ ಕನ್ನಡ 113, ವಿಜಯಪುರ 127 ಮತ್ತು ಯಾದಗಿರಿಯಲ್ಲಿ 67 ಪ್ರಕರಣಗಳು ವರದಿಯಾಗಿವೆ.

  • ಮೊದಲ ಬಾರಿಗೆ 9 ಸಾವಿರದ ಗಡಿ ದಾಟಿದ ಕೊರೊನಾ- ಇಂದು 9,386 ಪ್ರಕರಣಗಳು ಪತ್ತೆ

    ಮೊದಲ ಬಾರಿಗೆ 9 ಸಾವಿರದ ಗಡಿ ದಾಟಿದ ಕೊರೊನಾ- ಇಂದು 9,386 ಪ್ರಕರಣಗಳು ಪತ್ತೆ

    – ಒಟ್ಟು ಸೋಂಕಿತರ ಸಂಖ್ಯೆ 3,09,793ಕ್ಕೆ ಏರಿಕೆ

    ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಸ್ಫೋಟವಾಗಿದ್ದು, ಪ್ರಪ್ರಥಮ ಬಾರಿಗೆ ಕೇವಲ 24 ಗಂಟೆಗಳಲ್ಲಿ 9,386 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,09,793ಕ್ಕೆ ಏರಿಕೆಯಾಗಿದೆ.

    ಸಕ್ರಿಯ ಪ್ರಕರಣಗಳ ಸಂಖ್ಯೆ 84,987ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಇಂದು 141 ಜನ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 5,232ಕ್ಕೆ ಏರಿಕೆಯಾಗಿದೆ. 747 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7,866 ಜನ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈ ವರೆಗೆ ಒಟ್ಟು 2,19,554 ಜನ ಬಿಡುಗಡೆಯಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ.70.87ರಷ್ಟಿದೆ. ಇಂದು 68,187 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವರೆಗೆ ಒಟ್ಟು 26,48,808 ಜನರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ.

    ರಾಜ್ಯದಲ್ಲಿ 141 ಜನರ ಪೈಕಿ ಬೆಂಗಳೂರಿನಲ್ಲೇ 59 ಜನ ಕೊರೊನಾಗೆ ಬಲಿಯಾಗಿದ್ದಾರೆ. ಸಿಲಿಕಾನ್‍ಸಿಟಿಯಲ್ಲಿ ಇಂದು 3,357 ಪ್ರಕರಣಗಳು ಪತ್ತೆಯಾಗಿದ್ದು, 35,989 ಸಕ್ರಿಯ ಪ್ರಕರಣಗಳಿವೆ. 3,362 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

    ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ, ಬಾಗಲಕೋಟೆ 121, ಬಳ್ಳಾರಿ 550, ಬೆಳಗಾವಿ 318, ಬೆಂಗಳೂರು ಗ್ರಾಮಾಂತರ 59, ಬೆಂಗಳೂರು ನಗರ 3,357, ಬೀದರ್ 76, ಚಾಮರಾಜನಗರ 36, ಚಿಕ್ಕಬಳ್ಳಾಪುರ 101, ಚಿಕ್ಕಮಗಳೂರು 229, ಚಿತ್ರದುರ್ಗ 61, ದಕ್ಷಿಣ ಕನ್ನಡ 297, ದಾವಣಗೆರೆ 391, ಧಾರವಾಡ 234, ಗದಗ 110, ಹಾಸನ 334, ಹಾವೇರಿ 117, ಕಲಬುರಗಿ 232, ಕೊಡಗು 25, ಕೋಲಾರ 108, ಕೊಪ್ಪಳ 155, ಮಂಡ್ಯ 197, ಮೈಸೂರು 895, ರಾಯಚೂರು 239, ರಾಮನಗರ 105, ಶಿವಮೊಗ್ಗ 306, ತುಮಕೂರು 127, ಉಡುಪಿ 209, ಉತ್ತರ ಕನ್ನಡ 164, ವಿಜಯಪುರ 121 ಮತ್ತು ಯಾದಗಿರಿಯಲ್ಲಿ 112 ಮಂದಿಗೆ ಸೋಂಕು ತಗುಲಿದೆ.

  • ಇನ್ನು ಮುಂದೆ ನೀವೇ ಕೊರೊನಾ ಟೆಸ್ಟ್ ವರದಿ ಚೆಕ್ ಮಾಡಬಹುದು

    ಇನ್ನು ಮುಂದೆ ನೀವೇ ಕೊರೊನಾ ಟೆಸ್ಟ್ ವರದಿ ಚೆಕ್ ಮಾಡಬಹುದು

    ಬೆಂಗಳೂರು: ಇನ್ನು ಮುಂದೆ ಕೊರೊನಾ ಪರೀಕ್ಷೆ ಮಾಡಿದ ಬಳಿಕ ಫಲಿತಾಂಶಕ್ಕಾಗಿ ಆರೋಗ್ಯ ಇಲಾಖೆಯ ಮಾಹಿತಿಗಾಗಿ ಕಾಯುವ ಅಗತ್ಯವಿಲ್ಲ. ನೀವೇ ಮನೆಯಲ್ಲಿ ಕುಳಿತುಕೊಂಡು ಪರೀಕ್ಷಾ ವರದಿಯನ್ನು ಚೆಕ್ ಮಾಡಬಹುದು.

    ಎಸ್.ಆರ್.ಎಫ್ ಐಡಿಯಿಂದ ತಮ್ಮ ಮೊಬೈಲ್‍ನಲ್ಲೇ ಕೊರೊನಾ ವರದಿ ಪಡೆಯುವ ವ್ಯವಸ್ಥೆಯಲ್ಲಿ ಆರೋಗ್ಯ ಇಲಾಖೆ ಮಾಡಿದೆ.

    ಈ ಮುಂಚೆ ಕೊರೊನಾ ಪರೀಕ್ಷೆ ನಡೆದ ನಂತರ ವರದಿಗಾಗಿ ಅಧಿಕಾರಿಗಳ ಫೋನ್ ಕರೆಗೆ ಕಾಯಬೇಕಿತ್ತು ಅಥವಾ ಆರೋಗ್ಯ ಇಲಾಖೆ ಕಳುಹಿಸುವ ಸಂದೇಶವನ್ನು ನಿರೀಕ್ಷಿಸಬೇಕಿತ್ತು. ಆದರೆ ಈಗ ಪರೀಕ್ಷೆ ವೇಳೆ ನೀಡಿದ ಮೊಬೈಲ್ ನಂಬರ್ ಗೆ ಬರುವ ಎಸ್.ಆರ್.ಎಫ್ ಐಡಿಯನ್ನು ಆರೋಗ್ಯ ಇಲಾಖೆ ನೀಡಿದ ಪೋರ್ಟಲ್‍ಗೆ ಹೋಗಿ ನಮೂದಿಸಿದರೆ ಕ್ಷಣಾರ್ಧದಲ್ಲಿ ರಿಸಲ್ಟ್ ಗೊತ್ತಾಗುತ್ತೆ.

    https://www.covidwar.karnataka.gov.in/service1 ಈ ವೆಬ್‍ಸೈಟಿಗೆ ಹೋಗಿ ಅಲ್ಲಿ ನಿಮ್ಮ ಮೊಬೈಲ್‍ಗೆ ಬಂದಿರುವ ಎಸ್.ಆರ್.ಎಫ್ ಐಡಿ ಕೊಟ್ಟರೆ ನಿಮ್ಮ ಕೊರೊನಾ ವರದಿಯನ್ನು ನೀವು ನಿಮ್ಮ ಮೊಬೈಲ್‍ನಲ್ಲೇ ನೋಡಬಹುದು. ರಿಸಲ್ಟ್ ಪಾಸಿಟಿವ್ ಬಂದರೂ ಆತಂಕ ಪಡದೇ ಮನೆಯಲ್ಲೇ ಐಸೊಲೇಶನ್ ಆಗಬೇಕು. ನಂತರ ಆರೋಗ್ಯಾಧಿಕಾರಿಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

  • ರ‍್ಯಾಪಿಡ್ ಟೆಸ್ಟ್ ನೆಗೆಟಿವ್, ಸ್ವ್ಯಾಬ್ ಟೆಸ್ಟ್ ಪಾಸಿಟಿವ್ – 60ಕ್ಕೂ ಹೆಚ್ಚು ಮಂದಿ ಹೋಂ ಕ್ವಾರಂಟೈನ್

    ರ‍್ಯಾಪಿಡ್ ಟೆಸ್ಟ್ ನೆಗೆಟಿವ್, ಸ್ವ್ಯಾಬ್ ಟೆಸ್ಟ್ ಪಾಸಿಟಿವ್ – 60ಕ್ಕೂ ಹೆಚ್ಚು ಮಂದಿ ಹೋಂ ಕ್ವಾರಂಟೈನ್

    – ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಿ ಎಡವಟ್ಟು ಮಾಡಿದ ಆರೋಗ್ಯ ಇಲಾಖೆ

    ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ವರದಿ ಬರುವ ಮುನ್ನವೆ ಮೃತಪಟ್ಟ ವ್ಯಕ್ತಿಯ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿ ಆರೋಗ್ಯ ಇಲಾಖೆ ಎಡವಟ್ಟು ಮಾಡಿದೆ.

    ಮೃತ ವ್ಯಕ್ತಿಯ ಶವ ಪಡೆದ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿ ಮೇಲೆ ಮೃತವ್ಯಕ್ತಿಗೆ ಕೊರೊನಾ ಪಾಸಿಟಿವ್ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ 60ಕ್ಕೂ ಹೆಚ್ಚು ಮಂದಿಯಲ್ಲಿ ಆತಂಕ ಶುರುವಾಗಿದೆ. ಯಳಂದೂರು ಬಳೇಪೇಟೆ ವರ್ಷದ ವೃದ್ಧರೊಬ್ಬರಿಗೆ ಗ್ಯಾಂಗ್ರಿನ್ ಆಗಿತ್ತು. ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಲು ಬಂದಾಗ ಅವರಿಗೆ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗಿತ್ತು. ವರದಿ ನೆಗೆಟಿವ್ ಬಂದಿತ್ತು. ನಂತರ ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು.

    ಆದರೆ ಅವರಿಗೆ ಕೋವಿಡ್-19 ಲಕ್ಷಣಗಳು ಕಂಡು ಬಂದಿದ್ದರಿಂದ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುಂಚಯೇ ಅವರು ಮೃತಪಟ್ಟಿದ್ದರು. ಈ ವೇಳೆ ಎಡವಟ್ಟು ಮಾಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ವರದಿ ಬರುವವರೆಗೂ ಕಾಯದೆ ಮೃತ ವ್ಯಕ್ತಿಯ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಶವವನ್ನು ಯಳಂದೂರಿಗೆ ತೆಗೆದುಕೊಂಡು ಹೋದ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇದೇ ವೇಳೆ ವರದಿ ಬಂದಿದ್ದು ಮೃತವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ.

    ಈ ವಿಷಯ ತಿಳಿಯುವುದರೊಳಗೆ ಅಂತ್ಯಕ್ರಿಯೆ ಪೂರ್ಣ ಗೊಂಡಿತ್ತು. ಕೊರೊನಾ ಪಾಸಿಟಿವ್ ಸುದ್ದಿ ಕೇಳಿ ಮೃತನ ಕುಟುಂಬಸ್ಥರಲ್ಲಿ ಹಾಗೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರಲ್ಲಿ ಆತಂಕ ಶುರುವಾಗಿದೆ. ಇದೀಗ ಆರೋಗ್ಯ ಇಲಾಖೆ ಯಳಂದೂರಿನ ಬಳೇಪೇಟೆ ಪ್ರದೇಶಕ್ಕೆ ಸೋಂಕುನಿವಾರಕ ದ್ರಾವಣ ಸಿಂಪಡಿಸಿ ಸೀಲ್‍ಡೌನ್ ಮಾಡಿದ್ದಾರೆ. ಜೊತೆಗೆ ಇಲ್ಲಿನ ನಿವಾಸಿಗಳ ಕೊರೊನಾ ಟೆಸ್ಟ್ ಗೆ ಮುಂದಾಗಿದೆ.

  • ವಾಕಿಂಗ್‍ಗೆ ತೆರಳಿದ್ದ ವ್ಯಕ್ತಿ ಪಾರ್ಕ್‍ನಲ್ಲಿ ಸಾವು

    ವಾಕಿಂಗ್‍ಗೆ ತೆರಳಿದ್ದ ವ್ಯಕ್ತಿ ಪಾರ್ಕ್‍ನಲ್ಲಿ ಸಾವು

    – ಬಿಬಿಎಂಪಿಗೆ ಸವಾಲಾದ ಸಾವಿನ ಪ್ರಕರಣ

    ಬೆಂಗಳೂರು: ನಗರದಲ್ಲಿ ಬೆಳ್ಳಂ ಬೆಳಗ್ಗೆ ವಾಕಿಂಗ್ ಬಂದಿದ್ದ ವ್ಯಕ್ತಿ, ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಆರ್.ಟಿ ನಗರದಲ್ಲಿ ನಡೆದಿದೆ.

    ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿರುವುದು ಬಿಬಿಎಂಪಿಗೆ ಬಹುದೊಡ್ಡ ಸವಾಲಾಗಿದೆ. ಇದರ ನಡುವೆ ಏಕಾಏಕಿ ವರದಿಯಾಗುತ್ತಿರುವ ಸಾವಿನ ಪ್ರಕರಣಗಳು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿ ಬದಲಾಗುತ್ತಿವೆ.

    ಸದ್ಯ ನಗರದ ಆರ್.ಟಿ ನಗರದ ಪಾರ್ಕಿನಲ್ಲಿ ವ್ಯಕ್ತಿ ಸಾವನ್ನಪ್ಪಿದ್ದು, ಮೃತ ವ್ಯಕ್ತಿ ಯಾರು ಎಂಬ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಆದರೆ ಪಾರ್ಕಿನಲ್ಲಿ ವ್ಯಕ್ತಿ ಹೇಗೆ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೊರೊನಾ ಭಯದ ಕಾರಣ ಸಾರ್ವಜನಿಕರು ವ್ಯಕ್ತಿ ಕುಸಿದು ಬಿದ್ದರೂ ಯಾರು ವ್ಯಕ್ತಿಯ ಬಳಿ ತೆರಳಿ ಸಹಾಯ ಮಾಡಲು ಮುಂದಾಗಿಲ್ಲ ಎನ್ನಲಾಗಿದೆ. ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೃತದೇಹವನ್ನು ಕೊಂಡೊಯ್ದಿದ್ದಾರೆ. ಸದ್ಯ ಮೃತ ದೇಹದ ಕೊರೊನಾ ಪರೀಕ್ಷೆ ನಡೆದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

    ನಗರದಲ್ಲಿ ಏಕಾಏಕಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾತ್ತಿದ್ದು, ಹಲವು ಪ್ರಕರಣಗಳಲ್ಲಿ ಮೃತಪಟ್ಟ ಬಳಿಕ ಕೊರೊನಾ ಪಾಸಿಟಿವ್ ಇರುವುದು ದೃಢಪಡುತ್ತಿವೆ. ಅಲ್ಲದೇ ಮೃತರ ಮನೆಯವರಿಗೂ ಪಾಸಿಟಿವ್ ಪತ್ತೆ ಆಗುತ್ತಿದೆ. ಸದ್ಯ ಇಂತಹ ಸಾವಿನ ಪ್ರಕರಣಗಳು ಬಿಬಿಎಂಪಿ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸುತ್ತಿದೆ.

  • ಆರೋಗ್ಯ ಇಲಾಖೆ ಎಡವಟ್ಟು – ಮಹಿಳೆಯ ತಿಥಿ ದಿನ ಬಂತು ಕೊರೊನಾ ವರದಿ

    ಆರೋಗ್ಯ ಇಲಾಖೆ ಎಡವಟ್ಟು – ಮಹಿಳೆಯ ತಿಥಿ ದಿನ ಬಂತು ಕೊರೊನಾ ವರದಿ

    – ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದವರಿಗಾಗಿ ಹುಡುಕಾಟ

    ಕೋಲಾರ: ಮಧುಮೇಹಕ್ಕೆ ಆಸ್ಪತ್ರೆಗೆ ದಾಖಲಾದ ಮಹಿಳೆ ಶಂಕಿತ ಕೊರೊನಾ ರೋಗದಿಂದ ಮೃತಪಟ್ಟಿದ್ದಾಳೆ. ವಿಶೇಷತೆ ಎಂದರೆ ಪರೀಕ್ಷಾ ವರದಿ ಆಕೆಯ 11ನೇ ದಿನದ ತಿಥಿ ಕಾರ್ಯದ ದಿನ ಬಂದಿದೆ. ಮತ್ತೊಬ್ಬರ ವರದಿ 13 ದಿನದ ಬಳಿಕ ಬಂದಿದ್ದು ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ತಗುಲಿರುವ ಆತಂಕ ಎದುರಾಗಿದೆ.

    ಕಳೆದ ಹನ್ನೊಂದು ದಿನಗಳ ಹಿಂದೆ ಅಂದರೆ ಜುಲೈ 14ರಂದು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಕೋಲಾರದ ಗಾಂಧಿನಗರದ 50 ವರ್ಷದ ಮಹಿಳೆಯೊಬ್ಬಳು ಮಧುಮೇಹದಿಂದ ಮೃತಪಟ್ಟಿದ್ದರು. ಈ ವೇಳೆ ಮೃತರಿಗೆ ಕೋವಿಡ್ ಪರೀಕ್ಷೆಗೆ ಗಂಟಲು ದ್ರವ ನೀಡಲಾಗಿತ್ತು. ಆದರೆ ವರದಿ ಇಂದು ಅಂದರೆ ಹನ್ನೊಂದು ದಿನಗಳ ನಂತರ ಅವರ ತಿಥಿ ಕಾರ್ಯದ ದಿನ ಬಂದಿದೆ. ಪರಿಣಾಮ ಮೃತಳ ಪ್ರಾಥಮಿಕ ಸಂಪರ್ಕಿತರನ್ನು ಹಾಗೂ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದವರನ್ನು ಹುಡುಕಾಟ ಮಾಡಲಾಗುತ್ತಿದೆ.

    ಕೋಲಾರ ನಗರದ ಕಾರಂಜಿ ಕಟ್ಟೆ ಬಡಾವಣೆಯ ವ್ಯಕ್ತಿಯೊಬ್ಬರು ಇದೆ ತಿಂಗಳ 13ರಂದು ಕೊರೊನಾ ತಪಾಸಣೆಗೊಳಗಾಗಿದ್ದರು. ಈ ವ್ಯಕ್ತಿಯ ವರದಿ ಇಂದು ಬಂದಿದ್ದು ಸೋಂಕು ಇರುವುದು ದೃಢಪಟ್ಟಿದೆ. ಸಕ್ರಿಯ ಸೋಂಕಿತರ ಸಂಖ್ಯೆ 453ಕ್ಕೆ ಏರಿಕೆಯಾಗಿದ್ದು, ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಸದ ಮುನಿಸ್ವಾಮಿ, ಜಿಲ್ಲಾಧಿಕಾರಿ ದಿಢೀರ್ ಎಂದು ಇಂದು ಏಕಾಏಕಿ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದ್ದರು.

    ವರದಿ ತಡವಾಗುತ್ತಿರುವುದರಿಂದಲೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತೀರ್ಮಾನಿಸಿ, ಇನ್ನೊಂದು ವಾರದೊಳಗೆ ಆರು ಕೋವಿಡ್ ಟೆಸ್ಟ್ ಮಿಷನ್‍ಗಳನ್ನು ಖರೀದಿ ಮಾಡಲು ಪ್ರಸ್ತಾವನೆ ಸಿದ್ಧಪಡಿಸಿ ಪ್ರತಿ ತಾಲೂಕಿಗೊಂದರಂತೆ ಪ್ರಯೋಗಾಲಯ ಮಾಡಲು ತೀರ್ಮಾನ ಮಾಡಲಾಗಿದೆ. ಜೊತೆಗೆ ಸಂಸದ ಮುನಿಸ್ವಾಮಿ ಕೂಡಾ ತಾವೇ ಪಿಪಿಇ ಕಿಟ್ ಹಾಕಿಕೊಂಡು ಕೋವಿಡ್ ಆಸ್ಪತ್ರೆಯೊಳಗೆ ಭೇಟಿ ನೀಡಿ ಸೋಂಕಿತರ ಸಮಸ್ಯೆಗಳನ್ನು ಆಲಿದರು.

  • ಸೋಂಕಿನಿಂದ ಗುಣಮುಖವಾದ 7 ದಿನದ ನಂತರ ಪೇದೆ ಸಾವು

    ಸೋಂಕಿನಿಂದ ಗುಣಮುಖವಾದ 7 ದಿನದ ನಂತರ ಪೇದೆ ಸಾವು

    – ಆರೋಗ್ಯ ಇಲಾಖೆಗೆ ತಲೆನೋವಾದ ಪೇದೆ ಪ್ರಕರಣ

    ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದ ಮುಖ್ಯ ಪೇದೆಯ ಸಾವು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವು ತಂದಿದೆ.

    ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆ ಮುಖ್ಯ ಪೇದೆ ಗೌರಿಹಳ್ಳಿ ರವಿ (44) ಇಂದು ಮುಂಜಾನೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಆದರೆ ರವಿ ಅವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ಕಂಡ ಬಂದ ಹಿನ್ನೆಲೆಯಲ್ಲಿ ಬಳ್ಳಾರಿಯ ಕೋವಿಡ್ ಸೆಂಟರ್ ನಲ್ಲಿ 14 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅವರನ್ನು ಇದೇ ತಿಂಗಳು 17ರಂದು ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

    ಇದಾದ ಬಳಿಕ ಮನೆಯಲ್ಲಿ ಇದ್ದ ರವಿ ಹೋಂ ಕ್ವಾರೆಂಟೈನ್ ಆಗಿದ್ದರು. ಅಲ್ಲದೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಅವರನ್ನು ಮತ್ತೆ ಪರೀಕ್ಷೆ ಮಾಡಿದಾಗಲೂ ಕೊರೊನಾ ಸೋಂಕು ಇರಲಿಲ್ಲ. ಹೀಗಾಗಿ ಅವರನ್ನು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದ 7 ದಿನಗಳ ಬಳಿಕ ಮತ್ತೆ ರವಿ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಮೃತಪಟ್ಟಿದ್ದಾರೆ. ಹೀಗಾಗಿ ಈ ಸಾವು ಅರೋಗ್ಯ ಇಲಾಖೆಗೆ ಸವಾಲಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡು ಗುಣಮುಖ ಆದ ಬಳಿಕವೂ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ.

     

    ಈಗ ಆರೋಗ್ಯದ ಇಲಾಖೆ ರವಿ ಶವದ ಸ್ವಾಬ್ ಟೆಸ್ಟ್ ಕಲೆಕ್ಟ್ ಮಾಡಿದ್ದು, ಮತ್ತೊಂದು ಬಾರಿ ಕೋವಿಡ್ ಪರೀಕ್ಷೆ ಮಾಡಲು ಮುಂದಾಗಿದೆ.

  • ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ

    ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ

    ಬೆಂಗಳೂರು: ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಿಬಿಎಂಪಿ ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದೆ. 198 ವಾರ್ಡ್ ಗಳಲ್ಲಿ ವಾರ್ಡ್ ಕಮಿಟಿ ಜೊತೆ ಬೂತ್ ಮಟ್ಟದ ಟಾಸ್ಕ್ ಫೊರ್ಸ್ ರಚನೆ ಮಾಡಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲು ಮುಂದಾಗಿದೆ.

    ಪ್ರತಿ ವಾರ್ಡ್ ನಲ್ಲಿ 50-70 ಬೂತ್ ಸಮಿತಿ ರಚನೆ, 50 ರಿಂದ 1 ಲಕ್ಷದ ಜನ ಸಂಖ್ಯೆ ಆಧಾರದಲ್ಲಿ ಕಮಿಟಿ ರಚನೆ ಮಾಡಲಾಗಿದೆ. 1,500 ಜನರು ಮತ್ತು 400 ಮನೆಗಳ ಒಳಗೊಂಡ ಕಮಿಟಿ ಇದಾಗಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ಕಮಿಟಿ ರಚನೆಯಾಗಿದೆ. ಬೂತ್ ಮಟ್ಟದ ಕಮಿಟಿಯಲ್ಲಿ 4 ಜನ ಸಿ-ರ್ಯಾಂಕ್ ಅಧಿಕಾರಿಗಳು ಮತ್ತು 10 ಜನ ಸ್ವಯಂ ಸೇವಕರು ಕೆಲಸ ಮಾಡಲಿದ್ದಾರೆ.

    ಬೂತ್ ಕಮಿಟಿ ಹೇಗೆ ಕಾರ್ಯ ನಿರ್ವಹಿಸುತ್ತೆ?
    * ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು.
    * ಲಕ್ಷಣಗಳಿಲ್ಲದ ರೋಗಿಗಳ ಚಿಕಿತ್ಸೆಗೆ ಅಗತ್ಯ ಸಹಾಯ, ಮಾರ್ಗದರ್ಶನ ನೀಡುವುದು.
    * ಆರೋಗ್ಯ ಸಮಸ್ಯೆ ಇರೋರ ಮಾಹಿತಿ ಸಂಗ್ರಹಿಸಿ ವಾರ್ಡ್ ಕಮಿಟಿಗೆ ನೀಡುವುದು.
    * ಬೂತ್ ಮಟ್ಟದ ಸಮಿತಿ ಜೊತೆ ಸರ್ವೆ ಕಾರ್ಯಕ್ಕೆ ಸಹಕಾರ ನೀಡುವುದು.
    * ಕೊರೊನಾ ಬಗ್ಗೆ ಹರಡುವ ಗಾಳಿ ಸುದ್ದಿ ಬಗ್ಗೆ ಜಾಗೃತಿ ಮೂಡಿಸುವುದು.
    * ಮಾಸ್ಕ್, ಸ್ವಚ್ಚತೆ, ಸಾಮಾಜಿಕ ಅಂತರಗಳ ಬಗ್ಗೆ ಜಾಗೃತಿ ಮೂಡಿಸುವುದು.


    * ಹೋಂ ಕ್ವಾರಂಟೈನ್ ನಿಯಮ ಪಾಲನೆ ಮಾಡುತ್ತಿದ್ದರಾ ಎಂಬ ಮಾಹಿತಿ ವಾರ್ಡ್ ಕಮಿಟಿಗೆ ನೀಡುವುದು.
    * ಪ್ರಾಥಮಿಕ ಸಂಪರ್ಕ, ದ್ವೀತಿಯ ಸಂಪರ್ಕಗಳನ್ನ ಪತ್ತೆ ಮಾಡಿ ಅವರ ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು.
    * ಪ್ರಾಥಮಿಕ ಆರೋಗ್ಯ ಕೇಂದ್ರ, ಕೋವಿಡ್ ಕೇರ್ ಸೆಂಟರ್, ಫೀವರ್ ಕ್ಲಿನಿಕ್‍ಗಳಿಗೆ ಸಹಕಾರ ನೀಡುವುದು.
    * ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳ ಸಹಕಾರದ ಮೂಲಕ ವಾರ್ಡ್ ಕಮಿಟಿಗೆ ಸಹಕಾರ ನೀಡುವುದು.
    * ಸಾರಿ, ಐಎಲ್‍ಐ ಕೇಸ್, ಗರ್ಭೀಣಿರು, ಮಧುಮೇಹ, ಬಿಪಿ ಇನ್ನಿತರ ಸಮಸ್ಯೆ ಇರುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ವಾರ್ಡ್ ಮಟ್ಟದ ಕಮಿಟಿಗೆ ಮಾಹಿತಿ ನೀಡುವುದು.

    ವಾರ್ಡ್ ಕಮಿಟಿ ಕೆಲಸಗಳೇನು?
    10 ಜನರನ್ನು ಒಳಗೊಂಡ ವಾರ್ಡ್ ಮಟ್ಟದ ಕಮಿಟಿಯು ರಚನೆ ಮಾಡಲಾಗಿದ್ದು, ಈ ಸಮಿತಿ ವಾರದಲ್ಲಿ ಕಡ್ಡಾಯವಾಗಿ ಒಂದು ದಿನ ಸಭೆ ಮಾಡಿ ಪರಿಸ್ಥಿತಿ ಅವಲೋಕನ ಮಾಡಬೇಕು. ಬೂತ್ ಮಟ್ಟದ ಕಮಿಟಿ ಕಾರ್ಯದ ಬಗ್ಗೆ ಮಾಹಿತಿ ಸಂಗ್ರಹ ಮಾಡುವುದು. ಕೊರೊನಾ ಸೋಂಕಿತರ ಮಾಹಿತಿ ಸಂಗ್ರಹ ಮಾಡುವುದು. ಸೋಂಕಿತರ ಪ್ರಾಥಮಿಕ ಸಂಪರ್ಕ, ದ್ವಿತೀಯ ಸಂಪರ್ಕ ಮಾನಿಟರ್ ಮಾಡುವುದು. ಬೂತ್ ಮಟ್ಟದ ವರದಿ, ವಾರ್ಟ್ ಮಟ್ಟದ ವರದಿಯನ್ನು ಜಂಟಿ ಆಯುಕ್ತರಿಗೆ ಕಳುಹಿಸಿ ವರದಿ ಆಧಾರದಲ್ಲಿ ಮುಂದಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು.

    ಬೂತ್ ಮಟ್ಟದಲ್ಲಿ ಸ್ವಯಂ ಸೇವಕರನ್ನು ನೇಮಕ ಮಾಡಿ ತುರ್ತು ಸೇವಾ ಕೆಲಸಕ್ಕೆ ಅವರನ್ನು ಬಳಸಿಕೊಳ್ಳೋದು. 60 ವರ್ಷ ಮೇಲ್ಪಟ್ಟವರು, ಮಕ್ಕಳು, ಬಿಪಿ, ಶುಗರ್, ಗರ್ಭಿಣಿಯರು ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ತುತ್ತಾಗಿರುವವರ ಸಂಪೂರ್ಣ ಮಾಹಿತಿ ಕಲೆ ಹಾಕಿ ವರದಿ ನೀಡುವುದು. ಕ್ವಾರಂಟೈನ್ ಇರುವ, ಐಸೋಲೇಶನ್ ನಲ್ಲಿರುವವರಿಗೆ ಅಗತ್ಯ ಮಾರ್ಗಸೂಚಿ ನೀಡಿ, ಬೂತ್ ಕಮಿಟಿ ಜೊತೆ ಅವರನ್ನು ಮೇಲ್ವಿಚಾರಣೆ ಮಾಡುವುದು.

    ಕ್ವಾರಂಟೈನ್ ಇರುವವರ ಮನೆಯ ಶುಚಿತ್ವ, ಸುತ್ತಮುತ್ತಲಿನ ಪ್ರದೇಶದ ಶುಚಿತ್ವಕ್ಕೆ ಅಗತ್ಯ ಕ್ರಮವಹಿಸುವುದು. ಆರೋಗ್ಯದಲ್ಲಿ ವ್ಯತ್ಯಾಸ ಇರುವವರನ್ನು ಹತ್ತಿರದ ಫೀವರ್ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಟೆಸ್ಟ್ ಮಾಡಿಸುವುದು. ವರದಿ ಬರೋವರೆಗೆ ಅವರನ್ನು ಐಸೋಲೇಶನ್‍ನಲ್ಲಿ ಇರಿಸಲು ಅಗತ್ಯ ಕ್ರಮವಹಿಸುವುದು. ಪರೀಕ್ಷೆ ನಂತರ ಪಾಸಿಟಿವ್ ಬಂದರೆ ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆ ದಾಖಲಿಸುವ ನಿಟ್ಟಿನಲ್ಲಿ ಕ್ರಮವಹಿಸುವುದು.

  • ಸ್ವ್ಯಾಬ್ ಟೆಸ್ಟ್ ಕೊಟ್ಟವರಿಗೆ ಕ್ವಾರಂಟೈನ್ ಕಡ್ಡಾಯ- ಸರ್ಕಾರದ ಹೊಸ ಆದೇಶ

    ಸ್ವ್ಯಾಬ್ ಟೆಸ್ಟ್ ಕೊಟ್ಟವರಿಗೆ ಕ್ವಾರಂಟೈನ್ ಕಡ್ಡಾಯ- ಸರ್ಕಾರದ ಹೊಸ ಆದೇಶ

    ಬೆಂಗಳೂರು: ಕೊರೊನಾ ಸೋಂಕಿನ ಶಂಕೆ ಕಾರಣದಿಂದ ಗಂಟಲು ದ್ರವ ಪರೀಕ್ಷೆಯನ್ನು ಪರೀಕ್ಷೆಗೆ ಕೊಟ್ಟ ವ್ಯಕ್ತಿ ಐಸೋಲೇಷನ್ ಅಥವಾ ಮನೆಯಲ್ಲೇ ಕ್ವಾರಂಟೈನಲ್ಲಿರಬೇಕು ಎಂದು ಆರೋಗ್ಯ ಇಲಾಖೆ ಹೊಸ ಆದೇಶವನ್ನು ನೀಡಿದೆ.

    ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹೊಸ ಆದೇಶ ನೀಡಿದೆ. ಕೋವಿಡ್-19 ಪರೀಕ್ಷೆಯ ವರದಿ ಬರುವವರೆಗೂ ಹೋಂ ಐಶೋಲೇಷನ್‍ನಲ್ಲಿರುವುದು ಕಡ್ಡಾಯ ಮಾಡಲಾಗಿದೆ. ನಿಯಮಗಳನ್ನು ಮೀರಿ ಸ್ವ್ಯಾಬ್ ಟೆಸ್ಟ್ ಕೊಟ್ಟವರು ಸಾರ್ವಜನಿಕವಾಗಿ ಓಡಾಡುವುದು, ಕಚೇರಿಗೆ ಹೋಗುವುದು, ಅನಗತ್ಯವಾಗಿ ತಿರುಗಾಡುವುದು ಕಂಡು ಬಂದರೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

    ಶಂಕಿತ ವ್ಯಕ್ತಿಗಳನ್ನು ಗುರುತಿಸಿ ಅಧಿಕಾರಿಗಳೇ ಸಾಕಷ್ಟು ಮಂದಿಯ ಸ್ವ್ಯಾಬ್ ಟೆಸ್ಟ್ ಮಾಡಿಸಿರುತ್ತಾರೆ. ಆದರೆ ಆ ಬಳಿಕ ವ್ಯಕ್ತಿಯನ್ನು ಯಾವುದೇ ಸೂಚನೆ ನೀಡದೆ ಮನೆಗೆ ಕಳುಹಿಸಿದ್ದ ಸಾಕಷ್ಟು ಪ್ರಕರಣಗಳು ವರದಿಯಾಗಿದ್ದವು. ಸ್ವ್ಯಾಬ್ ಟೆಸ್ಟ್ ಕೊಟ್ಟ ವ್ಯಕ್ತಿ ಮನೆಗೆ ಬಂದ ಬಳಿಕ ಹಲವು ಸ್ಥಳಗಳಿಗೆ ಭೇಟಿ ನೀಡುತ್ತಿದ್ದ. ಅಲ್ಲದೇ ಸಮಾರಂಭಗಳಲ್ಲೂ ಭಾಗಿಯಾಗುತ್ತಿದ್ದ. ಪರಿಣಾಮ ಇಲಾಖೆ ಹೊಸ ಆದೇಶವನ್ನು ಹೊರಡಿಸಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳುವಾಗಿ ತಿಳಿಸಿದೆ.

  • ಜಿಲ್ಲಾಡಳಿತಕ್ಕೆ ತಪ್ಪು ವಿಳಾಸ ನೀಡಿ ಸೋಂಕಿತೆ ಎಸ್ಕೇಪ್

    ಜಿಲ್ಲಾಡಳಿತಕ್ಕೆ ತಪ್ಪು ವಿಳಾಸ ನೀಡಿ ಸೋಂಕಿತೆ ಎಸ್ಕೇಪ್

    ಗದಗ: ಶನಿವಾರ ಜಿಲ್ಲೆಯಲ್ಲಿ 40 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಬಗ್ಗೆ ಹೆಲ್ತ್ ಬುಲೆಟಿನ್‍ನಲ್ಲಿ ವರದಿ ಬಂದಿದೆ.

    ಈ 40 ಸೋಂಕಿತರ ಪೈಕಿ 39 ಜನ ಸೋಂಕಿತರು ಮಾತ್ರ ಗದಗ ಜಿಮ್ಸ್ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಓರ್ವ ಮಹಿಳೆ ಆರೋಗ್ಯ ಇಲಾಖೆಗೆ ತಪ್ಪು ವಿಳಾಸ ನೀಡಿ ಯಾಮಾರಿಸಿದ್ದಾಳೆ. ಶನಿವಾರ ಸೋಂಕು ದೃಢಪಟ್ಟ ನಂತರ ಮಹಿಳೆ ಕೊಟ್ಟ ವಿಳಾಸ ಹಿಡಿದು ಹೊರಟ ಆರೋಗ್ಯ ಇಲಾಖೆಗೆ ಶಾಕ್ ಆಗಿದೆ.

    ಯಾಕೆಂದರೆ ಮಹಿಳೆ ಕೊಟ್ಟ ವಿಳಾಸದಲ್ಲಿ ಆ ಮಹಿಳೆ ಇಲ್ಲ. ತಪ್ಪು ಫೋನ್ ನಂಬರ್ ಜೊತೆ ತಪ್ಪು ವಿಳಾಸ ಕೊಟ್ಟು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾಳೆ. ಕೊರೊನಾ ಪಾಸಿಟಿವ್ ದೃಢವಾಗಿ 24ಗಂಟೆ ಕಳೆದರೂ ಸೋಂಕಿತ ಮಹಿಳೆ ಇನ್ನುವರೆಗೂ ಪತ್ತೆಯಾಗಿಲ್ಲ. ಇದರಿಂದ ಈಗ ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಸೋಂಕಿತ ಮಹಿಳೆಯನ್ನು ಹುಡುಕಲು ಆರೋಗ್ಯ ಮತ್ತು ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿವೆ.