Tag: Department of Fisheries

  • ರಣಬಿಸಿಲಿಗೆ ಮೀನುಗಳ ಮಾರಣಹೋಮ; ಲಕ್ಷಾಂತರ ರೂ. ನಷ್ಟ – ರೈತನ ಕಣ್ಣೀರು

    ರಣಬಿಸಿಲಿಗೆ ಮೀನುಗಳ ಮಾರಣಹೋಮ; ಲಕ್ಷಾಂತರ ರೂ. ನಷ್ಟ – ರೈತನ ಕಣ್ಣೀರು

    ವಿಜಯಪುರ: ಜಿಲ್ಲೆಯಲ್ಲಿ (Vijayapur) 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ಜನ, ಜಾನುವಾರುಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಜಿಲ್ಲೆಯ ಮಧಬಾವಿ ತಾಂಡಾದಲ್ಲಿ ರಣಬಿಸಿಲಿಗೆ ಇಂಜಿನಿಯರ್ ಒಬ್ಬರು ಸಾಕಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂ.ಗಳ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ.

    ಬೆಂಗಳೂರಿನ (Bengaluru) ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ವಿಜಯಕುಮಾರ್ ಎಂಬವರು ತಾಂಡದಲ್ಲಿ ಮೀನು ಸಾಕಣೆ ಮಾಡಿದ್ದರು. ಸುಮಾರು 20 ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿ 17 ಸಾವಿರ ಸ್ನೇಕ್ ಹೆಡ್ ಮುರೆಲ್ ತಳಿಯ ಮೀನನ್ನು (Snakehead murrel Fish) ಸಾಕಿದ್ದರು. ಇನ್ನೇನೂ ಎರಡು ದಿನಗಳಲ್ಲಿ ಮೀನುಗಳು 30-40 ಲಕ್ಷ ರೂ.ಗಳಿಗೆ ಹೈದ್ರಾಬಾದ್‍ಗೆ ಮಾರಾಟ ಆಗಬೇಕಿತ್ತು. ಅಷ್ಟರಲ್ಲಿ ಮೀನುಗಳ ಮಾರಣ ಹೋಮವೇ ನಡೆದಿದೆ.

    ಈ ಮೀನುಗಳಿಗೆ ಪ್ರತಿ ತಿಂಗಳು 2 ಲಕ್ಷ ರೂ.ಗಳಷ್ಟು ಆಹಾರ ಹಾಕಿ ಬೆಳೆಸಲಾಗಿತ್ತು. ಮಾರುಕಟ್ಟೆಯಲ್ಲಿ ಕೆಜಿಗೆ 700 ರಿಂದ 800 ರೂ. ಬೆಲೆ ಬಾಳುವ ಮೀನುಗಳು ಇನ್ನೇನು ಕೊನೆಯ ಕ್ಷಣದಲ್ಲಿ ಸಾವನ್ನಪ್ಪಿವೆ ಎಂದು ರೈತ (Farmer) ವಿಜಯಕುಮಾರ್ ಹಾಗೂ ಮಿತ್ರರು ಕಣ್ಣಿರು ಹಾಕುತ್ತಿದ್ದಾರೆ.

    ಕಳೆದ ವರ್ಷ ಮೀನು ಕೃಷಿ ಮಾಡಿ ವಿಜಯಕುಮಾರ್ ಯಶಸ್ವಿಯಾಗಿದ್ದರು. ಈ ಹಿನ್ನೆಲೆ ಮೀನುಗಾರಿಕೆ ಇಲಾಖೆಯಿಂದ  (Department of Fisheries) ಅವರಿಗೆ ಸನ್ಮಾನಿಸಲಾಗಿತ್ತು. ಈ ಬಾರಿಯೂ ಒಳ್ಳೆಯ ಇಳುವರಿ ಬಂದಿತ್ತು. ಆದರೆ ಬಿಸಿಲಿನ ತಾಪಕ್ಕೆ ಮೀನುಗಳು ಸಾವನ್ನಪ್ಪಿದ್ದು, ಸರ್ಕಾರದ ಸಹಾಯಕ್ಕೆ ಅವರು ಕೈಚಾಚಿದ್ದಾರೆ.

    ಪ್ರತಿನಿತ್ಯ ವಿಜಯಪುರದಲ್ಲಿ ಉಷ್ಣಾಂಶ ದಾಖಲೆ ಪ್ರಮಾಣದಲ್ಲಿ ಏರುತ್ತಿದ್ದು, 40 ರಿಂದ 44 ಡಿಗ್ರಿ ವರೆಗೂ ತಾಪಮಾನ ದಾಖಲಾಗಿತ್ತಿದೆ. ಇದರಿಂದ ಜಿಲ್ಲೆಯ ಜನರ ನಿದ್ದೆ ಹದೆಗೆಟ್ಟು ಹೋಗಿದೆ. ಜನರ ಆರೋಗ್ಯದ ಮೇಲೂ ನಾನಾ ದುಷ್ಪರಿಣಾಮಗಳು ಬೀರುತ್ತಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

  • ಜಿಲ್ಲೆಗೊಂದು ಹೋಟೆಲ್ ತೆರೆದು ಕಡಿಮೆ ದರದಲ್ಲಿ ಮೀನೂಟಕ್ಕೆ ಚಿಂತನೆ

    ಜಿಲ್ಲೆಗೊಂದು ಹೋಟೆಲ್ ತೆರೆದು ಕಡಿಮೆ ದರದಲ್ಲಿ ಮೀನೂಟಕ್ಕೆ ಚಿಂತನೆ

    – 100 ರೂ. ಗೆ ಎಲ್ಲಾ ರೀತಿಯ ಮೀನಿನ ಊಟ

    ಬೆಂಗಳೂರು: ಮೀನುಗಾರಿಕಾ ಸಚಿವರು ಹೊಸ ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದ್ದು, ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೆಲ್ ಆರಂಭಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಿಂತನೆ ನಡೆಸಿದ್ದಾರೆ.

    ಜಿಲ್ಲೆ ಹಾಗೂ ತಾಲೂಕಿಗೊಂದು ಹೋಟೆಲ್ ತೆರೆದು ಕಡಿಮೆ ದರದಲ್ಲಿ ಉತ್ತಮ ಮೀನೂಟ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಮೂಲಕ ಬಡವರಿಗೆ, ಮಧ್ಯಮ ವರ್ಗಕ್ಕೆ ಉತ್ತಮ ಊಟ ನೀಡುವ ಯೋಜನೆ ಜಾರಿಗೆ ತರಲು ತೀರ್ಮಾನ ಮಾಡಲಾಗಿದೆ.

    ಕನಿಷ್ಠ 100 ರೂಪಾಯಿಗೆ ಎಲ್ಲಾ ರೀತಿಯ ಮೀನಿನ ಊಟ ನೀಡುವ ಯೋಜನೆ ಇದಾಗಿದ್ದು, ಸಾಮಾನ್ಯ ಹೋಟೆಲ್ ಗಿಂತ ಕಡಿಮೆ ದರದಲ್ಲಿ ಮೀನಿನ ಊಟ ಯೋಜನೆ ಜಾರಿಗೆ ತರಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಯಾರಿ ನಡೆಸಿದ್ದಾರೆ. ಈ ಬಗ್ಗೆ ಸಚಿವರು ಈಗಾಗಲೇ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. ಅಲ್ಲದೆ ಸದ್ಯದಲ್ಲೇ ಸರ್ಕಾರದ ಗಮನಕ್ಕೂ ತಂದು ಯೋಜನೆ ಜಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿರ್ಧರಿಸಿದ್ದಾರೆ.

    ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಮತ್ಸ್ಯದರ್ಶಿನಿ ಹೋಟೆಲ್ ಆರಂಭಿಸಲಾಗುತ್ತಿದ್ದು, ಸದ್ಯ ಆರಂಭಿಕವಾಗಿ ಪ್ರತಿ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೆಲ್ ತೆರೆಯಲಾಗುತ್ತಿದೆ. ಇದರ ಪ್ರಸ್ತಾವನೆಯನ್ನು ತಯಾರಿಸಿ ಮೀನುಗಾರಿಕೆ ಇಲಾಖೆ ಈಗಾಗಲೇ ಆರ್ಥಿಕ ಇಲಾಖೆಗೂ ಕಳುಹಿಸಿದೆ. ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕ ಕೂಡಲೇ ಮತ್ಸ್ಯದರ್ಶಿನಿ ಹೋಟೆಲ್ ಆರಂಭವಾಗುತ್ತದೆ.

    ಸದ್ಯ 100 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೆಲ್ ಆರಂಭಿಸಲಾಗುತ್ತಿದೆ. ಕೆಎಫ್ ಡಿಸಿ ಮಳಿಗೆಗಳ ಮೂಲಕವೇ ಮತ್ಸ್ಯದರ್ಶಿನಿ ಹೋಟೆಲ್ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಆ ಮೂಲಕ ಇಡೀ ರಾಜ್ಯದಲ್ಲಿ ಕೆಎಫ್‍ಡಿಸಿ ಮತ್ಸ್ಯದರ್ಶಿನಿಗಳನ್ನು ಒಂದು ಬ್ರಾಂಡ್ ಮಾಡಲು ಮೀನುಗಾರಿಕಾ ಇಲಾಖೆ ನಿರ್ಧಾರ ಮಾಡಿದೆ.

    ಸದ್ಯ ಈ ಇಲಾಖೆಯಡಿ ಬೆರಳೆಣಿಕೆಯಷ್ಟು ಮಾತ್ರ ಮತ್ಸ್ಯದರ್ಶಿನಿ ಹೋಟೆಲ್ ಗಳು ನಡೆಯುತ್ತಿವೆ. ಹೊರಗಿನ ಹೋಟೆಲ್ ಗಳಲ್ಲಿ ಒಂದು ಮೀನೂಟಕ್ಕೆ 400 ರೂ ಯಿಂದ 600 ರೂ ಕೊಡಬೇಕು. ಕೆಲವು ವಿಶೇಷ ಮೀನುಗಳು ಸೇರಿದರೆ ಊಟದ ದರ 1000 ರೂ. ಆಗಲಿದೆ. ಹೀಗಾಗಿ ಸರ್ಕಾರ ರಿಯಾಯ್ತಿ ದರದಲ್ಲಿ ರಾಜ್ಯದ ಜನರಿಗೆ ಮೀನೂಟ ಬಡಿಸಲು ನಿರ್ಧಾರ ಮಾಡಿದೆ.

  • ಪರಿಸರಕ್ಕೆ, ಮನುಷ್ಯನ ಆರೋಗ್ಯಕ್ಕೂ ಮಾರಕವಾದ ಕ್ಯಾಟ್‍ಫಿಶ್‍ನ ಅಕ್ರಮ ಸಾಗಾಣೆ

    ಪರಿಸರಕ್ಕೆ, ಮನುಷ್ಯನ ಆರೋಗ್ಯಕ್ಕೂ ಮಾರಕವಾದ ಕ್ಯಾಟ್‍ಫಿಶ್‍ನ ಅಕ್ರಮ ಸಾಗಾಣೆ

    ಕೋಲಾರ: ಮನುಷ್ಯ ಸೇರಿದಂತೆ ಪ್ರಾಣಿಗಳ ಮೂಳೆಯನ್ನು ಬಿಡದೆ ತಿಂದು ಹಾಕಬಲ್ಲ, ಪರಿಸರಕ್ಕೆ ಹಾಗೂ ಮನುಷ್ಯನ ಆರೋಗ್ಯಕ್ಕೂ ಮಾರಕವಾದ ಅಕ್ರಮವಾಗಿ ಕ್ಯಾಟ್‍ಫಿಶ್‍ನ್ನು ಕೋಲಾರದಲ್ಲಿ ಎಗ್ಗಿಲ್ಲದೆ ಸಾಗಾಣೆ ಮಾಡಲಾಗುತ್ತಿದೆ.

    ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ನಾರಾಯಣಸ್ವಾಮಿ ಗ್ರಾಮದ ಬಳಿ ಬೃಹತ್ ಮಟ್ಟದಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡಲಾಗುತ್ತಿದೆ. ಆದರು ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಅಥವಾ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಾಗಲಿ ತಲೆ ಕೆಡಿಸಿಕೊಂಡಿಲ್ಲ.

    ಈ ಕ್ಯಾಟ್ ಫಿಶ್ ಸಾಕಾಣಿಕೆ ಅಡ್ಡೆ ಗ್ರಾಮದ ಹೊರ ವಲಯದಲ್ಲಿ ತೋಟಗಳ ಮಧ್ಯೆ ನಡೆಯುತ್ತಿದ್ದು, ಕೆಲ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಕ್ಯಾಟ್ ಫಿಶ್‍ಗೆ ಹಾಕಲಾಗುವ ಆಹಾರ ಕೊಳೆತ ಕುರಿ, ಕೋಳಿ, ಹಂದಿ, ಮಾಂಸವನ್ನು ತಂದು ಹಾಕಲಾಗುತ್ತಿದೆ. ಇದರಿಂದ ಸುತ್ತಮುತ್ತಲ ಪರಿಸರ ಹಾಳಾಗುತ್ತಿರುವುದಲ್ಲದೆ ನಾಯಿ, ಹದ್ದುಗಳು ಈ ತ್ಯಾಜ್ಯಕ್ಕಾಗಿ ಇಲ್ಲಿಯೇ ಬೀಡು ಬಿಟ್ಟಿವೆ.

    ಈ ತ್ಯಾಜ್ಯವನ್ನ ತಿಂದು ರುಚಿ ಕಂಡಿರುವ ನಾಯಿಗಳು ಮಕ್ಕಳ ಮೇಲೆ ಎರಗುವ ಆತಂಕ ಕೂಡ ಈ ಭಾಗದಲ್ಲಿದೆ. ಹಾಗಾಗಿ ಸಂಬಂಧ ಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv