Tag: Department of Education

  • ಶಿಕ್ಷಣ ಇಲಾಖೆಯಲ್ಲೂ ಸೂಪರ್ ಸಿಎಂ ಕಮಾಲ್

    ಶಿಕ್ಷಣ ಇಲಾಖೆಯಲ್ಲೂ ಸೂಪರ್ ಸಿಎಂ ಕಮಾಲ್

    ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳಾಗಿ ಅಧಿಕಾರಕ್ಕೆ ಬಂದಾಯ್ತು. ಜೆಡಿಎಸ್‍ನಿಂದ ಕುಮಾರಸ್ವಾಮಿ ಸಿಎಂ ಆಗಿದ್ದೂ ಆಯ್ತು. ಆದರೆ ಮೈತ್ರಿ ಸರ್ಕಾರದ ಆಡಳಿತ ಶುರುವಾಗಿನಿಂದ ಈ ತನಕ ಸಿಎಂಗಿಂತಲೂ ಹೆಚ್ಚು ಸುದ್ದಿಯಲ್ಲಿದ್ದು ಸೂಪರ್ ಸಿಎಂ, ಸಚಿವ ಎಚ್.ಡಿ ರೇವಣ್ಣ. ಹೌದು ರಾಜ್ಯ ಸರ್ಕಾರದಲ್ಲಿ ಸಿಎಂ, ಡಿಸಿಎಂ ಹುದ್ದೆ ನಿರ್ವಹಿಸುವವರು ಇದ್ದರೂ ಸರ್ಕಾರಿ ಯೋಜನೆ, ಸಭೆ, ನಿರ್ಧಾರಗಳಲ್ಲಿ ಸಚಿವ ರೇವಣ್ಣ ಮೂಗು ತೂರಿಸುತ್ತಲೇ ಇದ್ದಾರೆ.

    ಲೋಕೋಪಯೋಗಿ ಸಚಿವ ಎಚ್. ಡಿ ರೇವಣ್ಣ ಸರ್ಕಾರದ ಸೂಪರ್ ಸಿಎಂ ಅನ್ನೋದು ಮತ್ತೊಮ್ಮೆ ಜಗಜ್ಜಾಹಿರಾಗಿದೆ. ಶಿಕ್ಷಣ ಇಲಾಖೆಯ ಮೇಲೆ ಹಿಡಿತ ಸಾಧಿಸಲು ಹೊರಟಿರುವ ಮಾನ್ಯ ರೇವಣ್ಣನವರು ಶಿಕ್ಷಣ ಇಲಾಖೆ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಗೆ ಸೇರ್ಪಡೆಗೊಳಿಸಿದ್ದಾರೆ.

    ಈ ಹಿಂದೆ ನೀಡಿದ್ದ 3 ವರ್ಷಗಳ 450 ಕೋಟಿ ವೆಚ್ಚದ 1,043 ಸರ್ಕಾರಿ ಶಾಲೆಗಳ 1,525 ಕೊಠಡಿಗಳು, 388 ಪ್ರೌಢಶಾಲೆಗಳ 878 ಕೊಠಡಿಗಳು, 91 ಕರ್ನಾಟಕ ಪಬ್ಲಿಕ್ ಶಾಲೆಗಳು, ಪದವಿ ಪೂರ್ವ ಕಾಲೇಜುಗಳ 299 ಕೊಠಡಿಗಳ ಮರುನಿರ್ಮಾಣ, 86 ಪ್ರಯೋಗಾಲಯಗಳು, 154 ಶೌಚಾಲಯಗಳ ನಿರ್ಮಾಣದ ಜೊತೆಗೆ ಇಡೀ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ತಂದಿದ್ದಾರೆ. ಈ ಬಗ್ಗೆ ಇದೇ 20 ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಆರ್.ಎಸ್ ನಾಧನ್ ಆದೇಶಿಸಿದ್ದಾರೆ.

    ಈ ಹಿಂದೆ ಶಾಲೆ ಮಟ್ಟದ ಎಸ್‍ಡಿಎಂಸಿ ಸದಸ್ಯರು, ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾದ್ಯಮ ಶಿಕ್ಷಣ ಅಭಿಯಾನ ಹಾಗೂ ಜಿಲ್ಲಾ ಪಂಚಾಯತಿಯ ಬಿಇಆರ್‍ಡಿ ಇಲಾಖೆ ಇಂತಹ ಕಾಮಗಾರಿ ನಿರ್ವಹಿಸುತ್ತಿತ್ತು. ಆದರೆ ಈಗ ಇಡೀ ಶಿಕ್ಷಣ ಇಲಾಖೆಯನ್ನೇ ನಿಷ್ಕ್ರೀಯ ಮಾಡಲು ಸಚಿವ ರೇವಣ್ಣ ನಿಂತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ತಮ್ಮ ಇಲಾಖೆಯ ಕೆಲಸದ ಜೊತೆಗೆ ಇನ್ನಿತರ ಇಲಾಖೆಯಲ್ಲೂ ಮೂಗು ತೂರಿಸುತ್ತಿರುವುದು ಸಿಎಂ ಕುಮಾರಸ್ವಾಮಿಗೆ ಮುಜುಗರ ಉಂಟು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸರ್ಕಾರಿ ಶಾಲೆಯಲ್ಲಿಯೇ ಎಲ್ ಕೆಜಿ ಮಕ್ಕಳಿಗಿಲ್ಲ ಸರ್ಕಾರದ ಬಿಸಿಯೂಟ!

    ಸರ್ಕಾರಿ ಶಾಲೆಯಲ್ಲಿಯೇ ಎಲ್ ಕೆಜಿ ಮಕ್ಕಳಿಗಿಲ್ಲ ಸರ್ಕಾರದ ಬಿಸಿಯೂಟ!

    ಶಿವಮೊಗ್ಗ: ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಎಲ್‍ಕೆಜಿ ಆರಂಭಿಸಿದೆ. ಆದರೆ ಸರ್ಕಾರ ಮಾತ್ರ ಎಲ್‍ಕೆಜಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡದೆ ತಾರತಮ್ಯ ಮಾಡುತ್ತಿದೆ. ಇದು ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಉಂಟೂರು ಕಟ್ಟೆ ಕೈಮರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸ್ಥಿತಿ.

    ಒಂದು ಕಾಲದಲ್ಲಿ 250 ರಿಂದ 300 ಮಕ್ಕಳು ಓದುತ್ತಿದ್ದ ಈ ಶಾಲೆಯಲ್ಲಿ ಈಗ ಕೇವಲ 67 ಮಕ್ಕಳಿದ್ದಾರೆ. ಖಾಸಗಿ ಶಾಲೆಯ ಹಾವಳಿಯಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗತೊಡಗಿದೆ. ಆದರೆ ಶಾಲಾಭಿವೃದ್ಧಿ ಸಮಿತಿ ಒಂದು ಒಳ್ಳೆಯ ಮಾದರಿ ಶಾಲೆಯನ್ನಾಗಿಸಲು ಎಲ್‍ಕೆಜಿ ಆರಂಭಿಸಿದೆ. ಕಳೆದ ವರ್ಷ ಎಲ್‍ಕೆಜಿಗೆ ಸೇರಿದ್ದ 17 ಮಕ್ಕಳು ಈ ವರ್ಷ ಇದೇ ಶಾಲೆಯ ಒಂದನೇ ತರಗತಿ ಸೇರಿರುವುದು ಖುಷಿಯ ವಿಚಾರವಾಗಿದೆ.

    ಶಿಕ್ಷಣ ಇಲಾಖೆ ಎಲ್‍ಕೆಜಿ ಸೇರಿರುವ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ. 1ನೇ ತರಗತಿಯಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಈ ಶಾಲೆಯಲ್ಲಿ ಒಂದನೇ ತರಗತಿಯಿಂದ 7ನೇ ತರಗತಿ ಮಕ್ಕಳು ಬಿಸಿಯೂಟ ಮಾಡುವಾಗ, ಎಲ್‍ಕೆಜಿ ಮಕ್ಕಳಿಗೆ ಊಟ ನೀಡದೇ ತಾರತಮ್ಯ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೇಳಿದ್ರೆ ಬಿಸಿಯೂಟ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.

    ಶಾಲಾಭಿವೃದ್ಧಿ ಸಮಿತಿಯವರು ದಾನಿಗಳಿಂದ ದವಸ-ಧಾನ್ಯ ತಂದು ಕೊಟ್ಟು ಎಲ್‍ಕೆಜಿ ಕಂದಮ್ಮಗಳಿಗೆ ಅಡುಗೆ ಮಾಡಿ ಕೊಡಿ ಎಂದು ಮನವಿ ಮಾಡಲಾಗಿತ್ತು. ಆದ್ರೆ ನಿಯಮಾವಳಿಗಳಲ್ಲಿ ಅವಕಾಶ ಇಲ್ಲವೆಂದು ಶಿಕ್ಷಣ ಇಲಾಖೆಯವರು ಕಠೋರ ನಿಲುವು ತಾಳಿದ್ದಾರೆ. ಮಕ್ಕಳಿಗೆ ಅಡುಗೆ ಮಾಡಿಕೊಡಲು ಅವಕಾಶ ನೀಡದೆ ತೊಂದರೆ ಕೊಡುತ್ತಿದ್ದಾರೆ.

    ತೀರ್ಥಹಳ್ಳಿ ತಾಲೂಕಿನಲ್ಲಿ ಕಳೆದ ಮೂರು ವರ್ಷದಲ್ಲಿ 45 ಸರ್ಕಾರಿ ಪ್ರಾಥಮಿಕ ಶಾಲೆಗಳು ಬಾಗಿಲು ಹಾಕಲಾಗಿದೆ. ಇರುವ ಶಾಲೆಗಳು ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚುವ ಹಂತದಲ್ಲಿವೆ. ಇಂತಹ ಹೊತ್ತಿನಲ್ಲಿ ಶಾಲಾಭಿವೃದ್ಧಿ ಸಮಿತಿ ಮಕ್ಕಳ ದಾಖಲಾತಿಗೆ ನಡೆಸಿದ ಈ ಪ್ರಯತ್ನವನ್ನು ಶಿಕ್ಷಣ ಇಲಾಖೆ ಪ್ರೋತ್ಸಾಹಿಸಬೇಕಿತ್ತು. ಆದರೆ, ನಿಯಮಾವಳಿಗಳ ಹೆಸರಿನಲ್ಲಿ ಹತ್ತು-ಹದಿನೈದು ಮಕ್ಕಳಿಗೆ ಊಟ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸಮಸ್ಯೆ ಪರಿಹರಿಸಿಕೊಳ್ಳಲು ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    https://www.youtube.com/watch?v=Z-N1iCGguh0

  • ಐಎಎಸ್ ಅಧಿಕಾರಿಗಳಾದ ಶಾಲಿನಿ ರಜನೀಶ್, ಶಿಖಾಗೆ ಸಿಎಂ ಬುದ್ಧಿವಾದ

    ಐಎಎಸ್ ಅಧಿಕಾರಿಗಳಾದ ಶಾಲಿನಿ ರಜನೀಶ್, ಶಿಖಾಗೆ ಸಿಎಂ ಬುದ್ಧಿವಾದ

    ಬೆಂಗಳೂರು: ಐಎಎಸ್ ಅಧಿಕಾರಿಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಶಿಖಾ ಅವರಿಗೆ ಸಿಎಂ ಕುಮಾರಸ್ವಾಮಿ ಬುದ್ಧಿವಾದ ಹೇಳಿದ್ದಾರೆ.

    ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡುವ ವಿಚಾರವಾಗಿ ಮಂಗಳವಾರ ಶಿಕ್ಷಣ ಸಚಿವ ಮಹೇಶ್ ಅವರ ಮುಂದೆಯೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲಿ ಈ ವಿಚಾರ ಸುದ್ದಿಯಾದ ಹಿನ್ನೆಲೆಯಲ್ಲಿ ಇಂದು ಸಿಎಂ ಕಚೇರಿಯಲ್ಲಿ ನೂತನ ಕಾಲೇಜು ಪ್ರಾರಂಭ ಕುರಿತು ಸಭೆ ನಡೆಯಿತು. ಈ ಸಭೆಗೆ ಶಾಲಿನಿ ರಜನೀಶ್ ಹಾಗೂ ನಿರ್ದೇಶಕಿ ಶಿಖಾ ಅವರು ಆಗಮಿಸಿದರು. ಸಭೆ ಬಳಿಕ ಇಬ್ಬರಿಗೂ ಸಿಎಂ ಬುದ್ಧಿವಾದ ಹೇಳಿದ್ದಾರೆ ಎಂದು ತಿಳಿದುಬಂದಿದೆ.

    ಮಾಧ್ಯಮಗಳ ಮುಂದೆ ಮುಂದೆ ಹೀಗೆ ಅಸಮಾಧಾನ ತೋರಿಸಿಕೊಳ್ಳಬೇಡಿ. ಏನೇ ಇದ್ದರೂ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ಅಧಿಕಾರಿಗಳು ಹೀಗೆ ಮಾಡಿದರೆ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ. ನಿಯಮದ ಪ್ರಕಾರ ಅಧಿಕಾರಿಗಳು ನಡೆದುಕೊಳ್ಳಿ ಅಂತ ಸೂಚನೆ ನೀಡಿದರು. ಇದನ್ನು ಓದಿ: ಪ್ರಾಥಮಿಕ ಶಿಕ್ಷಣ ಸಚಿವರ ಸಮ್ಮುಖದಲ್ಲೇ ಐಎಎಸ್ ಅಧಿಕಾರಿಗಳ ಕಿತ್ತಾಟ!- ವಿಡಿಯೋ ನೋಡಿ

    ಖಾಸಗಿ ಕಾಲೇಜುಗಳಿಗೆ ನಿಯಮ ಮೀರಿ ಅನುಮತಿ ನೀಡಿರುವ ಶಾಲಿನಿ ರಜನೀಶ್ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ, ನಿಯಮ ಮೀರಿ ಯಾವುದೇ ಕೆಲಸ ಮಾಡಬೇಡಿ. ಪಿಯು ಬೋರ್ಡ್ ನಿರ್ದೇಶಕರು ತಿರಸ್ಕರಿಸಿದ ಕಾಲೇಜುಗಳಿಗೆ ಹೇಗೆ ಅನುಮತಿ ನೀಡಿದ್ರಿ. ಇದು ಸರಿಯಲ್ಲ ಅಂತ ಸಿಎಂ ಶಾಲಿನಿ ರಜನೀಶ್ ಅವರಿಗೆ ಕ್ಲಾಸ್ ತಗೊಂಡಿದ್ದಾರೆ ಎಂದು ತಿಳಿದುಬಂದಿದೆ.

  • ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆ ಮಾಡಿಕೊಂಡ

    ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆ ಮಾಡಿಕೊಂಡ

    ಮಂಡ್ಯ: ಅಪರಿಚಿತ ವ್ಯಕ್ತಿಯೊಬ್ಬ ವಿದ್ಯುತ್ ಕಂಬದ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಉಪ್ಪಿನಕೆರೆ ಗೇಟ್ ಬಳಿ ನಡೆದಿದೆ.

    ಅಪರಿಚಿತ ವ್ಯಕ್ತಿಯನ್ನು ಸುಮಾರು 45 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಮದ್ದೂರು ಕೆಎಂದೊಡ್ಡಿ ರಸ್ತೆಯಲ್ಲಿ ಬರುವ ಉಪ್ಪಿನಕೆರೆ ಗೇಟ್ ಬಳಿ ತಡರಾತ್ರಿ ಲೈಟ್ ಕಂಬ ಹತ್ತಿದ್ದಾನೆ. ನಂತರ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇಂದು ಮುಂಜಾನೆ ಸ್ಥಳೀಯರು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದ ಮದ್ದೂರು ಪೊಲೀಸರು ಮತ್ತು ವಿದ್ಯುತ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಲೈಟ್ ಕಂಬದ ಮೇಲಿಂದ ವ್ಯಕ್ತಿಯ ಮೃತ ದೇಹವನ್ನು ಕೆಳಗೆ ಇಳಿಸಿದ್ದಾರೆ.

    ಈ ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಅಲ್ಲಿಪೂರ ವಾರಿತಾಂಡಾದ ಮಕ್ಕಳಿಗೆ ಕೊನೆಗೂ ಸಿಕ್ತು ಬಿಸಿಯೂಟ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಅಲ್ಲಿಪೂರ ವಾರಿತಾಂಡಾದ ಮಕ್ಕಳಿಗೆ ಕೊನೆಗೂ ಸಿಕ್ತು ಬಿಸಿಯೂಟ

    ಯಾದಗಿರಿ: ಎಲ್ಲಾ ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯಿದೆ. ಆದರೆ ಯಾದಗಿರಿ ತಾಲೂಕಿನ ಅಲ್ಲಿಪೂರ ವಾರಿತಾಂಡದ ಸರ್ಕಾರಿ ಪ್ರಾಥಮೀಕ ಶಾಲೆಯ ಮಕ್ಕಳಿಗೆ ಎರಡು ವರ್ಷಗಳಿಂದ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿರಲಿಲ್ಲ.

    ಈ ಕುರಿತು ಪಬ್ಲಿಕ್ ಟಿವಿ ಜೂನ್ 27ರಂದು ವಿಸ್ತೃತವಾಗಿ ವರದಿ ಮಾಡಿತ್ತು. ಪಬ್ಲಿಕ್ ಟಿವಿಯ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಶಾಲೆಯ ಆವರಣದಲ್ಲಿದ್ದ ಪಾಳು ಬಿದ್ದಿದ್ದ ಬಿಸಿಯೂಟ ಕೊಠಡಿಯನ್ನು ದುರಸ್ತಿಗೊಳಿಸಿ ಅಡುಗೆ ಮಾಡಲು ಬೇಕಾಗುವ ವ್ಯವಸ್ಥೆಯನ್ನು ಮಾಡಿದ್ದಾರೆ.

    ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿರುವ ಕಾರಣ 1 ಕಿ.ಮೀ. ದೂರದಲ್ಲಿರುವ ಸಮನಾಪೂರ ಸರ್ಕಾರಿ ಶಾಲೆಯಿಂದ ಅಡುಗೆ ತರುವ ವ್ಯವಸ್ಥೆ ಸಹ ಸ್ಥಗಿತಗೊಂಡಿತ್ತು. ಇನ್ನು ಪಬ್ಲಿಕ್ ಟಿವಿ ವರದಿಗೆ ಬಿಸಿಯೂಟ ಯೋಜಾನಾ ಅಧಿಕಾರಿಳು ಸ್ಪಂದಿಸಿ ಬಿಸಿಯೂಟ ಯೋಜನೆಯಿಂದ ವಂಚಿತರಾದ ಆ ಶಾಲೆಯ ಮಕ್ಕಳಿಗೆ ಕೇವಲ 48 ಗಂಟೆಗಳಲ್ಲಿ ಬಿಸಿಯೂಟವನ್ನು ಒದಗಿಸಿದ್ದಾರೆ.

    ಒಟ್ಟಾರೆ ಬಿಸಿಯೂಟ ಯೋಜನೆಯಿಂದ ವಂಚಿರಾದ ಮಕ್ಕಳಿಗೆ ಅನ್ನವನ್ನು ನೀಡಿ ಹಸಿವು ನೀಗಿಸುವ ಕೇಲಸವು ಅಕ್ಷರದಾಸೋಹ ಅಧಿಕಾರಿಗಳು ಮಾಡಿದ್ದಾರೆ. ಮಧ್ಯಾಹ್ನದ ಬಿಸಿಯೂಟ ಸವಿದ ಮಕ್ಕಳು, ಶಿಕ್ಷಕರು ಹಾಗೂ ಇಲಾಖೆ ಅಧಿಕಾರಿಗಳು ಪಬ್ಲಿಕ್ ಟಿವಿಗೆ ಅಭಿನಂದನೆಗಳನ್ನು ಸಲ್ಲಿಸಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

     

     

  • ಬಿಸಿ ಊಟ ಸೇವಿಸಿ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

    ಬಿಸಿ ಊಟ ಸೇವಿಸಿ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

    ಗದಗ: ತಾಲೂಕಿನ ಅಂತೂರು ಬೆಂತೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಆತಂಕಕಾರಿ ಘಟನೆ ಶನಿವಾರ ನಡೆದಿದೆ.

    ಉಪ್ಪಿಟ್ಟು ಸೇವಿಸಿದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೆಲವರಿಗೆ ವಾಂತಿಯಾಗಿದ್ದು, ಇನ್ನು ಕೆಲವರಿಗೆ ತಲೆ ಸುತ್ತು ಬಂದಿದೆ ಎಂದು ಹೇಳಲಾಗಿದೆ.

    108 ಅಂಬುಲೆನ್ಸ್ ಮಾಹಿತಿ ನೀಡಿದ್ರೂ ಸರಿಯಾದ ವೇಳೆಗೆ ಬರಲಿಲ್ಲ. ಹೀಗಾಗಿ ಅಸ್ವಸ್ಥಗೊಂಡ ಮಕ್ಕಳಿಗೆ ಶಾಲೆಯ ಆವರಣದಲ್ಲೇ ಚಿಕಿತ್ಸೆ ನೀಡಲಾಗಿದೆ. 15ಕ್ಕೂ ಹೆಚ್ಚು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ವಿಷಯ ಗೊತ್ತಾಗಿ ಬಿಸಿ ಊಟ ತಯಾರಕರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ತಿಳಿಯಲಾಗಿದೆ.

  • SSLCಯಲ್ಲಿ ಫೇಲ್ ಆಗ್ತಾರೆ ಅನ್ನೋ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆಯಿಂದಲೇ ಔಟ್!

    SSLCಯಲ್ಲಿ ಫೇಲ್ ಆಗ್ತಾರೆ ಅನ್ನೋ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆಯಿಂದಲೇ ಔಟ್!

    ಹುಬ್ಬಳ್ಳಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಫೇಲ್ ಆಗ್ತಾರೆ ಎನ್ನುವ ಕಾರಣಕ್ಕೆ ಹಿಂದುಳಿದ ವಿದ್ಯಾರ್ಥಿಗಳನ್ನು ನಗರದ ಶಾಲೆಯೊಂದು ಹೊರಹಾಕಿದೆ.

    ನಗರದ ಕೇಶ್ವಾಪುರ ರಸ್ತೆ ಕಾನ್ವೆಂಟ್ ಹೈ ಸ್ಕೂಲ್ ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದೆ. ಒಂದನೇ ತರಗತಿಯಿಂದ 9ನೇ ತರಗತಿಯ ವರೆಗೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವ 15 ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆ.

    ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳು ಮುಂದಿನ ವರ್ಷ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳುತ್ತಾರೆ. ಫೇಲ್ ಆದ ಮೇಲೆ ಆತ್ಮಹತ್ಯೆ ಮಾಡಿಕೊಂಡು ಶಾಲೆಗೆ ಕೆಟ್ಟ ಹೆಸರು ತರುತ್ತಾರೆ ಎಂಬ ದುರುದ್ದೇಶದಿಂದ ನಮ್ಮ ಮಕ್ಕಳನ್ನು ಶಾಲೆಯಿಂದ ಹೊರಹಾಕಿದ್ದಾರೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ಇನ್ನು ಈ ಮಕ್ಕಳು ಮಾನಸಿಕವಾಗಿ ಅಸಮರ್ಥರು, ಬರೆಯಲು ಮತ್ತು ಓದವ ಸಾಮರ್ಥ್ಯ ಕಡಿಮೆಯಿದೆ. ಇವರಿಗೆ ಹತ್ತನೇ ತರಗತಿಗೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ವಿಶೇಷ ಅನಮತಿ ಬೇಕು ಎಂದು ಶಾಲೆಯ ಹೆಡ್ ಮಿಸ್ ಲೀನಾ ಬೆಂಗಳೂರಿನ ಮಾನಸಿಕ ಪರೀಕ್ಷೆ ಸಂಸ್ಥೆಗೆ ಪತ್ರ ಬರೆದಿದ್ದಾರೆ.

    ಶಾಲೆಯ ಹೆಡ್ ಮಿಸ್ ಲೀನಾ

    ಈ ರೀತಿಯ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸರ್ಕಾರ 10 ನೇ ತರಗತಿ ಪರೀಕ್ಷೆ ಬರೆಯಲು ವಿಶೇಷ ಅನುಮತಿ ನೀಡುತ್ತದೆ. ಹೀಗಾಗಿ ಈ ಮಕ್ಕಳಿಗೆ ನಮ್ಮ ಶಾಲೆಯ ಬೋರ್ಡ್ ನಿಂದ ಪರೀಕ್ಷೆ ಬರೆಯಲು ಅವಕಾಶ ನಿಡೋದಿಲ್ಲ. ಬೇರೆ ಶಾಲೆಯಿಂದ ಅಥವಾ ಓಪನ್ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿ ಎಂದು ಲೀನಾ ಹೇಳಿದ್ದಾರೆ.

    ಮಕ್ಕಳನ್ನು ತಿದ್ದಿ ಬುದ್ಧಿ ಹೇಳಿ ಒಳ್ಳೆಯ ಜ್ಞಾನವಂತರನ್ನಾಗಿ ಮಾಡಬೇಕಾದ ವಿದ್ಯಾ ಸಂಸ್ಥೆ ಮಕ್ಕಳು ಬುದ್ಧಿವಂತರಲ್ಲ ಎನ್ನುವ ಕಾರಣಕ್ಕೆ ಶಾಲೆಯಿಂದಲೇ ಹೊರ ಹಾಕಲು ಹೊರಟಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

  • ಗೋಡೆಯಲ್ಲಿ ಬಿರುಕು, ಬೀಳುವ ಸ್ಥಿತಿಯಲ್ಲಿ ಶಾಲೆ- ಗಂಡಾಂತರದಲ್ಲಿದೆ ಗಡಿನಾಡ ಕನ್ನಡ ಮಕ್ಕಳ ದೇಗುಲ

    ಗೋಡೆಯಲ್ಲಿ ಬಿರುಕು, ಬೀಳುವ ಸ್ಥಿತಿಯಲ್ಲಿ ಶಾಲೆ- ಗಂಡಾಂತರದಲ್ಲಿದೆ ಗಡಿನಾಡ ಕನ್ನಡ ಮಕ್ಕಳ ದೇಗುಲ

    ಬೆಳಗಾವಿ: ಹೆಸರಿಗೆ ಅದು ಸರ್ಕಾರಿ ಶಾಲೆ ಕಟ್ಟಡ. ಆದ್ರೆ ಅದನ್ನ ನೋಡಿದವರಿಗೆ ಮಾತ್ರ ಅದು ಶಾಲೆ ಅಂತ ಅನ್ನಿಸೋದೇ ಇಲ್ಲ. ಮಕ್ಕಳು ಸದಾ ಭಯದಲ್ಲೇ ಕುಳಿತು ಪಾಠ ಕೇಳಬೇಕು. ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರದವಾಡ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ ದುಸ್ಥಿತಿ.

    ಶಿಥಿಲಾವಸ್ಥೆಯಲ್ಲಿರೋ ಗೋಡೆಗಳು, ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಕಟ್ಟಡ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿರುವ ಈ ಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಶಾಲೆಯನ್ನು ದುರಸ್ತಿ ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಡಿರುವ ಮನವಿಗೆ ಲೆಕ್ಕವೇ ಇಲ್ಲ. ಆದ್ರೆ ಯಾವ ಅಧಿಕಾರಿಯೂ ಕನ್ನಡ ಶಾಲೆಯನ್ನು ಉಳಿಸಲು ಮುಂದೆ ಬಂದಿಲ್ಲ.

    ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಪ್ರಾಬಲ್ಯ ಹೆಚ್ಚುತ್ತಿದ್ರೂ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗ್ತಿಲ್ಲ ಅನ್ನೋದೇ ವಿಪರ್ಯಾಸ.

     

  • ಯಾದಗಿರಿ: 2 ತಿಂಗಳಿಂದ ತೊಗರಿಬೇಳೆ ಪೂರೈಕೆ ಸ್ಥಗಿತ- ಸಾಂಬಾರಿಲ್ಲದೆ ಬಿಸಿಯೂಟ ಮಾಡ್ತಿರೋ ಶಾಲಾ ಮಕ್ಕಳು

    ಯಾದಗಿರಿ: 2 ತಿಂಗಳಿಂದ ತೊಗರಿಬೇಳೆ ಪೂರೈಕೆ ಸ್ಥಗಿತ- ಸಾಂಬಾರಿಲ್ಲದೆ ಬಿಸಿಯೂಟ ಮಾಡ್ತಿರೋ ಶಾಲಾ ಮಕ್ಕಳು

    ಯಾದಗಿರಿ: ಸರ್ಕಾರ ವಿದ್ಯಾರ್ಥಿಗಳ ಹಸಿವನ್ನು ತಣಿಸಲು ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಆದರೆ ಯಾದಗಿರಿ ಜಿಲ್ಲೆಯ ಮಕ್ಕಳು ಬಿಸಿಯೂಟಕ್ಕೆ ಬೇಕಾದ ಸಾಂಬಾರ್‍ನಿಂದ ವಂಚಿತರಾಗಿದ್ದಾರೆ. ಸಾಂಬಾರ್ ಇಲ್ಲದೇ ಅನ್ನ ತಿನ್ನುವ ದುಸ್ಥಿತಿ ಜಿಲ್ಲೆಯಲ್ಲಿ ತಲೆದೋರಿದೆ. ಗುತ್ತಿಗೆದಾರರ ಹಾಗೂ ಅಧಿಕಾರಿಗಳ ನಿಷ್ಕಾಳಜಿಗೆ ಎರಡು ತಿಂಗಳಿನಿಂದ ಶಾಲೆಗಳಿಗೆ ತೊಗರಿ ಬೇಳೆ ಪೂರೈಕೆ ಸ್ಥಗಿತಗೊಂಡ ಹಿನ್ನಲೆಯಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗುತ್ತಿಲ್ಲ.

    ಯಾದಗಿರಿಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಗೋದಾಮಿನಲ್ಲಿ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುವಷ್ಟು ತೊಗರಿ ಬೇಳೆ ಸಂಗ್ರಹ ಮಾಡಿದ್ರು. ಆದ್ರೆ ತೊಗರಿ ಬೇಳೆ ವಿದ್ಯಾರ್ಥಿಗಳ ಹಸಿವನ್ನು ತಣಿಸದೇ ಗೋದಾಮಿನಲ್ಲಿಯೇ ಕೊಳೆಯುವಂತಾಗಿದೆ. ಸರ್ಕಾರ ಶಾಲಾ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಹೆಚ್ಚಿಸಲು ಹಾಗೂ ಪೌಷ್ಠಿಕಾಂಶ ಹೆಚ್ಚಿಸಲು ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಬಿಸಿಯೂಟ ಯೋಜನೆಗೆಂದೇ ಸರ್ಕಾರ ಕೋಟ್ಯಾನುಟ್ಟಗಲೇ ಹಣ ಖರ್ಚು ಮಾಡುತ್ತಿದ್ದೆ. ಆದ್ರೆ ಸರ್ಕಾರದ ಯೋಜನೆ ಬಡ ಮಕ್ಕಳಿಗೆ ಮುಟ್ಟದೆ ಗೋದಾಮಿನಲ್ಲಿಯೇ ಕೊಳೆಯುತ್ತಿದೆ.

    ಜಿಲ್ಲೆಯ ಸುರಪುರ, ಶಹಾಪುರ, ಯಾದಗಿರಿ ತಾಲೂಕಿನಲ್ಲಿ 1,404 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳು ತೊಗರಿ ಬೇಳೆ ಪೂರೈಸಲು ಟೆಂಡರ್ ಕರೆದು ಸಂಬಂಧಿಸಿದ ಟೆಂಡರ್ ಗುತ್ತಿಗೆದಾರರು ಶಾಲೆಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗೋದಾಮಿನಲ್ಲಿ ಸಂಗ್ರಹಿಸಿದ್ದ ತೊಗರಿ ಬೇಳೆಯನ್ನು ಶಾಲೆಗೆ ಪೂರೈಸಬೇಕಿತ್ತು. ಆದರೆ ಯಾದಗಿರಿ ಜಿಲ್ಲೆಯಲ್ಲಿ ಕಳೆದ 2 ತಿಂಗಳಿನಿಂದ ತೊಗರಿ ಬೇಳೆ ಪೂರೈಕೆ ಮಾಡಿಲ್ಲ.

    ಜನವರಿ ತಿಂಗಳಲ್ಲಿ ತೊಗರಿ ಬೇಳೆ ಪೂರೈಸಲು ಬೀದರ್‍ನ ಖಾಸಗಿ ಸಂಸ್ಥೆಯವರು ಟೆಂಡರ್ ಪಡೆದಿದ್ದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ತೊಗರಿ ಬೇಳೆಯ ದರ ಅನುಮೋದನೆಯಾದ ಬಗ್ಗೆ ಗುತ್ತಿಗೆದಾರರಿಗೆ ಮಾಹಿತಿ ನೀಡದ ಹಿನ್ನಲೆ ಗುತ್ತಿಗೆದಾರರು ತೊಗರಿ ಬೇಳೆಯನ್ನು ಶಾಲೆಗಳಿಗೆ ಪೂರೈಕೆ ಮಾಡದೆ ಸ್ಥಗಿತಗೊಳಿಸಿದ್ದಾರೆ. ಜನವರಿ ತಿಂಗಳು ಬಿಟ್ಟು ಅಧಿಕಾರಿಗಳು ಫೆಬ್ರವರಿ ತಿಂಗಳಲ್ಲಿ ಶಾಲೆಗಳಿಗೆ ತೊಗರಿ ಬೇಳೆ ಪೂರೈಸಲು ಟೆಂಡರ್ ಕರೆದಿದ್ದಾರೆ. ಕಲಬುರಗಿ ಮೂಲದ ಹನುಮಾನ್ ಟ್ರೇಡರ್ಸ್ ಗುತ್ತಿಗೆ ಪಡೆದಿದ್ದು ದರ ಅನುಮೋದನೆಯಾಗಿದೆ. 1132 ಕ್ವಿಂಟಾಲ್ ತೊಗರಿ ಬೇಳೆಗೆ ಪ್ರತಿ ಕ್ವಿಂಟಾಲ್ಗೆ 5307 ರೂ. ನಂತೆ ಪೂರೈಸಬೇಕೆಂದು ಗುತ್ತಿಗೆ ನೀಡಲಾಗಿದೆ.

    ಇಷ್ಟಾದ್ರೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿಷ್ಕಾಳಜಿಗೆ ಇಬ್ಬರ ನಡುವೆ ಕೂಸು ಬಡವಾಯಿತೆಂಬಂತೆ ವಿದ್ಯಾರ್ಥಿಗಳು ನಲುಗಿ ಹೋಗಿದ್ದಾರೆ. ಜಿಲ್ಲೆಯ ಸುಮಾರು 500ಕ್ಕೂ ಹೆಚ್ಚು ಶಾಲೆಗಳಿಗೆ ತೊಗರಿ ಬೇಳೆ ಪೂರೈಕೆ ಮಾಡಿಲ್ಲ. ಅಕ್ಷರ ದಾಸೋಹ ಅಧಿಕಾರಿಗಳು ತೊಗರಿ ಬೇಳೆ ಪೂರೈಸದ ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆಹಾರ ಇಲಾಖೆ ಅಧಿಕಾರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಬರಿ ಅನ್ನ ತಿನ್ನುವಂತಾಗಿದೆ. ಸ್ವಲ್ಪ ಮಟ್ಟಿಗೆ ತರಕಾರಿ ಹಾಕಿ ಚಿತ್ರಾನ್ನ ಮಾಡಿ ಮಕ್ಕಳಿಗೆ ನೀಡಲಾಗುತ್ತಿದೆ. ಆದ್ರೆ ತರಕಾರಿ ಮಾತ್ರ ಯಾವುದಕ್ಕೂ ಸರಿ ಹೋಗುತ್ತಿಲ್ಲ. ಮಕ್ಕಳಿಗೆ ತೊಗರಿ ಸಾಂಬಾರ್ ಇದ್ರೆ ಊಟ ಮಾಡಲು ಅನುಕೂಲ ಜೊತೆ ಪೌಷ್ಠಿಕತೆ ಸಿಗಲಿದೆ.

    ಕೆಲ ಶಾಲೆ ವಿದ್ಯಾರ್ಥಿಗಳು ಶಾಲೆಯಲ್ಲಿ ನೀಡಿದ ಅನ್ನದ ಜೊತೆ ಮಧ್ಯಾಹ್ನ ದೂರದ ಮನೆಗೆ ಹೋಗಿ ಸಾಂಬಾರ್ ತೆಗೆದುಕೊಂಡು ಬಂದು ಪರಸ್ಪರ ಹಂಚಿಕೊಂಡು ಊಟ ಮಾಡುವಂತಹ ದುಸ್ಥಿತಿ ತಲೆದೊರಿದೆ. ಕಳೆದ ಎರಡು ತಿಂಗಳಿನಿಂದ ತೊಗರಿ ಬೇಳೆ ಪೂರೈಕೆ ನಿಂತಿದ್ರೂ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ಮುಂದಿನ ತಿಂಗಳು ಶೈಕ್ಷಣಿಕ ವರ್ಷ ಮುಕ್ತಾಯ ಆಗಲಿದೆ. ಆದ ಕಾರಣ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ತೊಗರಿ ಬೇಳೆ ಪೂರೈಸುವ ಕೆಲಸ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಬೇಕಿದೆ.