Tag: Department of Education

  • ಶಾಲೆಗಳಲ್ಲಿ ಇನ್ಮುಂದೆ ಕುಡಿಯುವ ನೀರಿಗೆ ಬೆಲ್

    ಶಾಲೆಗಳಲ್ಲಿ ಇನ್ಮುಂದೆ ಕುಡಿಯುವ ನೀರಿಗೆ ಬೆಲ್

    ಬೆಂಗಳೂರು : ನೀರು ಮನುಷ್ಯನಿಗೆ ಅಗತ್ಯವಾದ ವಸ್ತು. ಆಹಾರ ಇಲ್ಲದೆ ಇದ್ದರು ಬದುಕಬಹುದು ಆದ್ರೆ ನೀರು ಇಲ್ಲದೆ ಬದುಕೋದು ಕಷ್ಟ. ಹಾಗೇ ಉತ್ತಮ ಆರೋಗ್ಯಕ್ಕೂ ನೀರು ಅತ್ಯವಶ್ಯಕ. ನೀರಿನ ಅಂಶ ಮನುಷ್ಯನ ದೇಹದಲ್ಲಿ ಹೆಚ್ಚು ಇರಬೇಕು ಅಂತ ವೈದ್ಯರು ಹೇಳೋದು ನೀವು ಕೇಳಿರುತ್ತೀರಾ. ಈಗ ಈ ನೀರಿನ ವಿಷಯ ಮಾತಾಡೋಕು ಕಾರಣ ಇದೆ. ಇನ್ನುಂದೆ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರಿಗಾಗಿ ವಿಶೇಷ ಕುಡಿಯುವ ನೀರಿನ ಬೆಲ್ ಜಾರಿಗೆ ತರಲಾಗಿದೆ.

    ಮಕ್ಕಳ ಉತ್ತಮ ಆರೋಗ್ಯಕ್ಕೆ ನೀರು ಅತ್ಯವಶ್ಯಕ. ಹೀಗಾಗಿ ಸರಿಯಾದ ಸಮಯಕ್ಕೆ ನೀರು ಕುಡಿತ ಬೇಕು ಅಂತ ಶಿಕ್ಷಣ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದೆ. ದಿನಕ್ಕೆ ಎರಡು ಬಾರಿ ಕಡ್ಡಾಯವಾಗಿ ಕುಡಿಯುವ ನೀರಿನ ಬೆಲ್ ಮಾಡಬೇಕು ಅಂತ ಸುತ್ತೋಲೆ ಹೊರಡಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸದಾಗಿ ಆದೇಶ ಹೊರಡಿಸಿದ್ದ ಬೆಳಗ್ಗೆಯ ಅವಧಿಯ 2 ಮತ್ತು 3 ಅವಧಿಯ ಮಧ್ಯದಲ್ಲಿ ಒಂದು ಕುಡಿಯುವ ನೀರಿನ ಬೆಲ್, ಮಧ್ಯಾಹ್ನ 3 ಮತ್ತು 4 ನೇ ಅವಧಿಯ ಮಧ್ಯೆ ಒಂದು ಕುಡಿಯುವ ನೀರಿನ ಬೆಲ್ ಮಾಡಬೇಕು. ಈ ಅವಧಿಯಲ್ಲಿ ಮಕ್ಕಳು ನೀರು ಕುಡಿಯಲು ಶಿಕ್ಷಕರು ಅನುವು ಮಾಡಿಕೊಡಬೇಕು ಅಂತ ಆದೇಶ ಹೊರಡಿಸಿದೆ.

    ಎಲ್ಲಾ ಶಾಲೆಗಳು ಈ ಸೂಚನೆ ಪಾಲನೆ ಮಾಡೋದು ಕಡ್ಡಾಯವಾಗಿದೆ. 10 ನಿಮಿಷ ಕುಡಿಯುವ ನೀರಿಗಾಗಿ ಮೀಸಲಿಡಲು ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. ಮಕ್ಕಳ ಆರೋಗ್ಯ ಕಾಪಾಡಲು ಶಿಕ್ಷಣ ಇಲಾಖೆಯ ಈ ಆದೇಶ ಸಹಾಯ ಆಗೋದು ಗ್ಯಾರೆಂಟಿ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರಾಯಚೂರು ಶಿಕ್ಷಕಿಯ ಕಡ್ಡಾಯ ವರ್ಗಾವಣೆ ರದ್ದು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರಾಯಚೂರು ಶಿಕ್ಷಕಿಯ ಕಡ್ಡಾಯ ವರ್ಗಾವಣೆ ರದ್ದು

    – ಕೊಟ್ಟ ಮಾತು ಉಳಿಸಿಕೊಂಡ ಶಿಕ್ಷಣ ಸಚಿವರು
    – ತಪ್ಪನ್ನ ತಿದ್ದಿಕೊಂಡ ಶಿಕ್ಷಣ ಇಲಾಖೆ

    ರಾಯಚೂರು: ಬುದ್ಧಿಮಾಂದ್ಯ ಮಗಳ ಆರೈಕೆಗಾಗಿ ವರ್ಗಾವಣೆ ರದ್ದು ಕೋರಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದ ರಾಯಚೂರಿನ ಶಿಕ್ಷಕಿ ಶಾಂತಲಕ್ಷ್ಮಿ ಅವರ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಮೂಲಕ ಅವರ ಕಷ್ಟಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ.

    ನಗರದ ಜಹಿರಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಶಾಂತಲಕ್ಷ್ಮಿ ಅವರಿಗೆ ಶಿಕ್ಷಣ ಸಚಿವರ ಭರವಸೆಯಂತೆ ಕಡ್ಡಾಯ ವರ್ಗಾವಣೆ ರದ್ದಾಗಿದ್ದು, ಹಾಲಿ ಸ್ಥಳದಲ್ಲೇ ಮುಂದುವರಿಯುವ ಅವಕಾಶ ಸಿಕ್ಕಿದೆ. ಬುದ್ಧಿಮಾಂದ್ಯ ಮಗಳನ್ನು ಕರೆದುಕೊಂಡು ಅಧಿಕಾರಿಗಳ ಬಳಿ ತನ್ನ ಕಷ್ಟ ಹೇಳಿಕೊಂಡು ಸಾಕಾಗಿದ್ದ ಶಾಂತಲಕ್ಷ್ಮಿ ಕುರಿತು ಪಬ್ಲಿಕ್ ಟಿವಿ ವರದಿಯನ್ನ ಪ್ರಸಾರ ಮಾಡಿತ್ತು. ವರದಿಗೆ ಎಚ್ಚೆತ್ತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ವತಃ ಶಿಕ್ಷಕಿಯ ಜೊತೆ ದೂರವಾಣಿಯಲ್ಲಿ ಮಾತನಾಡಿ ಅವರ ಕಷ್ಟವನ್ನ ಆಲಿಸಿ, ವರ್ಗಾವಣೆ ರದ್ದುಗೊಳಿಸುವ ಬಗ್ಗೆ ಭರವಸೆಯನ್ನ ನೀಡಿದ್ದರು. ಇದನ್ನೂ ಓದಿ: ಬುದ್ಧಿಮಾಂದ್ಯ ಮಗಳ ಆರೈಕೆಗಾಗಿ ಶಿಕ್ಷಕಿ ಪರದಾಟ – ವರ್ಗಾವಣೆ ರದ್ದು ಮಾಡದೆ ಸತಾಯಿಸ್ತಿರುವ ಶಿಕ್ಷಣ ಇಲಾಖೆ

    ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ ಅಪರ ಆಯುಕ್ತ ನಳಿನ್ ಅತುಲ್ ಕೂಡಲೇ ವರ್ಗಾವಣೆ ರದ್ದುಗೊಳಿಸಿ ಹಿಂದಿನ ಸ್ಥಳದಲ್ಲೇ ಶಿಕ್ಷಕಿ ಶಾಂತಲಕ್ಷ್ಮಿ ಅವರನ್ನು ಮುಂದುವರಿಸುವಂತೆ ಆದೇಶಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು ಉಪನಿರ್ದೇಶಕರಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಈ ಮೂಲಕ ನಿಯಮಬಾಹಿರವಾಗಿ ವರ್ಗಾವಣೆಯ ಶಿಕ್ಷೆಗೆ ಗುರಿಯಾಗಿದ್ದ ಶಿಕ್ಷಕಿ ಶಾಂತಲಕ್ಷ್ಮಿ ಅವರಿಗೆ ನ್ಯಾಯ ದೊರಕಿದೆ. ಇದನ್ನೂ ಓದಿ: ಶಿಕ್ಷಕಿಗೆ ಕರೆ ಮಾಡಿ ಕಷ್ಟ ಆಲಿಸಿದ ಸುರೇಶ್

    ಬುದ್ಧಿಮಾಂದ್ಯ ಮಗಳ ಆರೈಕೆ ಹಾಗೂ ವಿಧವೆಯಾಗಿರುವ ಕಾರಣ ನಿಯಮಾನುಸಾರ ಕಡ್ಡಾಯ ವರ್ಗಾವಣೆಯಲ್ಲಿ ಶಿಕ್ಷಕಿ ಹೆಸರು ನಮೂದಿಸಬಾದರಿತ್ತು. ಶಿಕ್ಷಕಿಗೆ ಆದ ಅನಾನೂಕೂಲ ಪರಿಗಣೆನೆಗೆ ತೆಗೆದುಕೊಂಡು ಮೂಲ ಶಾಲೆಯಲ್ಲಿ ಮುಂದುವರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರು ಆದೇಶಿಸಿದ್ದಾರೆ. ತೆರವಾದ ಸ್ಥಳಕ್ಕೆ ಹಾಜರಾದ ಶಿಕ್ಷಕಿ ಶ್ರೀದೇವಿ ಅವರನ್ನ ನಿಮ್ಮ ಹಂತದಲ್ಲೇ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಿ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನಳೀನ್ ಅತುಲ್ ಸೂಚಿಸಿದ್ದಾರೆ.

    ಏನಿದು ವರ್ಗಾವಣೆ ಪ್ರಕರಣ.?
    ಶಿಕ್ಷಕಿ ಶಾಂತಾಲಕ್ಷ್ಮಿ ಅವರನ್ನ ರಾಯಚೂರಿನಿಂದ ಸುಮಾರು 25 ಕಿ.ಮೀ ದೂರದ ಮಟಮಾರಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಪತಿಯನ್ನು ಕಳೆದುಕೊಂಡ ಶಿಕ್ಷಕಿ ವೃತ್ತಿ ಮಾಡುತ್ತಲೇ ಮಾನಸಿಕ ಅಸ್ವಸ್ಥ ಮಗಳನ್ನು ಸಾಕುತ್ತಿದ್ದಾರೆ. ಈಗ ಏಕಾಏಕಿ ವರ್ಗಾವಣೆಯನ್ನ ವಿರೋಧಿಸಿ, ವರ್ಗಾವಣೆ ರದ್ದುಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.

    ಅಲ್ಲದೆ ಕಡ್ಡಾಯ ವರ್ಗಾವಣೆ ಮಾಡಬೇಕಾದರೂ ಒಂದೇ ಜಾಗದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಆದ್ರೆ ಶಾಂತಲಕ್ಷ್ಮಿ 8 ವರ್ಷಗಳಿಂದ ಸೇವೆ ಮಾಡುತ್ತಿದ್ದು, ಎರಡು ವರ್ಷ ಬಾಕಿಯಿರುವಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು.

    ನಗರ ಪ್ರದೇಶದಿಂದ ನಿಯಮ ಉಲ್ಲಂಘಿಸಿ ಗ್ರಾಮೀಣ ಭಾಗಕ್ಕೆ ವರ್ಗಾವಣೆ ಮಾಡಿದ್ದರ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದನ್ನ ಗಮನಿಸಿದ ಶಿಕ್ಷಣ ಸಚಿವ ಕೂಡಲೇ ಸ್ಪಂದಿಸಿ ವರ್ಗಾವಣೆ ರದ್ದುಗೊಳಿಸುವ ಭರವಸೆ ನೀಡಿದ್ದರು.

  • ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ – ಶಿಕ್ಷಕಿಗೆ ಕರೆ ಮಾಡಿ ಕಷ್ಟ ಆಲಿಸಿದ ಸುರೇಶ್ ಕುಮಾರ್

    ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ – ಶಿಕ್ಷಕಿಗೆ ಕರೆ ಮಾಡಿ ಕಷ್ಟ ಆಲಿಸಿದ ಸುರೇಶ್ ಕುಮಾರ್

    ರಾಯಚೂರು: ಬುದ್ಧಿಮಾಂದ್ಯ ಮಗಳ ಆರೈಕೆಗಾಗಿ ವರ್ಗಾವಣೆ ರದ್ದು ಕೋರಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದ ರಾಯಚೂರಿನ ಶಿಕ್ಷಕಿಯ ಅಳಲು ಕೊನೆಗೂ ಸರ್ಕಾರದ ಕಿವಿ ಮುಟ್ಟಿದೆ.

    ಪಬ್ಲಿಕ್ ಟಿವಿ ವರದಿಯನ್ನ ಗಮನಿಸಿ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಕಿ ಶಾಂತಲಕ್ಷ್ಮಿಗೆ ಮೊಬೈಲ್ ಕರೆ ಮಾಡಿ ಕಷ್ಟ ಆಲಿಸಿದ್ದಾರೆ. ಸಮಸ್ಯೆಯ ಕುರಿತು ವಿಚಾರಿಸಿ ಸಂಪೂರ್ಣ ವಿವರವನ್ನು ಮೆಸೇಜ್ ಮೂಲಕ ಕಳುಹಿಸಲು ಹೇಳಿದ್ದು, ಕೋರಿಕೆಯಂತೆ ವರ್ಗಾವಣೆ ರದ್ದುಗೊಳಿಸುವುದಾಗಿ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ. ಸ್ವತಃ ಸಚಿವರೇ ಫೋನ್ ಮಾಡಿ ಭರವಸೆ ನೀಡಿದ್ದು ನನಗೆ ಧೈರ್ಯ ತಂದಿದೆ ಎಂದು ಶಿಕ್ಷಕಿ ಶಾಂತಾಲಕ್ಷ್ಮಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ರಾಯಚೂರು ನಗರದ ಜಹೀರಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಶಾಂತಾಲಕ್ಷ್ಮಿ ಅವರನ್ನು ರಾಯಚೂರಿನಿಂದ ಸುಮಾರು 25 ಕಿ.ಮೀ ದೂರದ ಮಟಮಾರಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಪತಿಯನ್ನು ಕಳೆದುಕೊಂಡು ಶಿಕ್ಷಕಿ ವೃತ್ತಿ ಮಾಡುತ್ತಲೇ ಮಾನಸಿಕ ಅಸ್ವಸ್ಥ ಮಗಳನ್ನು ಸಾಕುತ್ತಿರುವ ಶಿಕ್ಷಕಿ ಶಾಂತಾಲಕ್ಷ್ಮಿ ಏಕಾಏಕಿ ಮಾಡಲಾದ ವರ್ಗಾವಣೆಯನ್ನ ವಿರೋಧಿಸಿ, ವರ್ಗಾವಣೆ ರದ್ದುಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

    ಕಡ್ಡಾಯ ವರ್ಗಾವಣೆ ಮಾಡಬೇಕಾದರೂ ಒಂದೇ ಜಾಗದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಆದರೆ ಶಾಂತಲಕ್ಷ್ಮಿ 8 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಮಾಡುತ್ತಿದ್ದು, ಇನ್ನೂ ಎರಡು ವರ್ಷ ಬಾಕಿಯಿರುವಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ನಗರ ಪ್ರದೇಶದಿಂದ ನಿಯಮ ಉಲ್ಲಂಘಿಸಿ ಗ್ರಾಮೀಣ ಭಾಗಕ್ಕೆ ವರ್ಗಾವಣೆ ಮಾಡಿದ್ದರ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದನ್ನು ಗಮನಿಸಿದ ಶಿಕ್ಷಣ ಸಚಿವರು ಕೂಡಲೇ ಸ್ಪಂದಿಸಿದ್ದು ವರ್ಗಾವಣೆ ರದ್ದುಗೊಳಿಸುವ ಭರವಸೆ ನೀಡಿದ್ದಾರೆ.

  • ಪಠ್ಯ ಪುಸ್ತಕದಿಂದ ಟಿಪ್ಪು ಪಾಠ ಕೈಬಿಡುವಂತೆ ಶಾಸಕ ಅಪ್ಪಚ್ಚು ರಂಜನ್ ಪತ್ರ

    ಪಠ್ಯ ಪುಸ್ತಕದಿಂದ ಟಿಪ್ಪು ಪಾಠ ಕೈಬಿಡುವಂತೆ ಶಾಸಕ ಅಪ್ಪಚ್ಚು ರಂಜನ್ ಪತ್ರ

    ಮಡಿಕೇರಿ: ಪಠ್ಯ ಪುಸ್ತಕದಿಂದ ಟಿಪ್ಪು ಪಾಠವನ್ನು ಕೈಬಿಡುವಂತೆ ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‍ಗೆ ಪತ್ರ ಬರೆದಿರುವ ಅವರು, ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರ ಎಂದು ಪಠ್ಯಪುಸ್ತಕಗಳಲ್ಲಿ ವೈಭವೀಕರಿಸಲಾಗಿದೆ. ಟಿಪ್ಪು ಫ್ರೆಂಚ್‍ರೊಂದಿಗೆ ಕೈ ಜೋಡಿಸಿದ್ದ, ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲು ಫ್ರೆಂಚ್ ಸಹಾಯ ಪಡೆಯುತ್ತಿದ್ದನು. ಅಲ್ಲದೆ ಆತ ಹಿಂದೂ ಮತ್ತು ಕ್ರಿಶ್ಚಿಯನ್ ವಿರೋಧಿಯಾಗಿದ್ದ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಮಂಗಳೂರಿನಲ್ಲಿ 50 ಸಾವಿರಕ್ಕೂ ಅಧಿಕ ಕ್ರೈಸ್ತರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದನು. ಕೊಡಗಿನಲ್ಲಿಯೂ ಹಿಂದೂಗಳನ್ನು ಮತಾಂತರ ಮಾಡಿದ್ದ ಮತ್ತು ಹತ್ಯೆ ಮಾಡಿದ್ದ. ಟಿಪ್ಪು ಒಬ್ಬ ಮತಾಂಧನಾಗಿದ್ದ. ಇಂತಹವನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ವೈಭವೀಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.

    ಈ ಎಲ್ಲ ಕಾರಣಗಳಿಂದ ಪಠ್ಯಪುಸ್ತಕದಿಂದ ಟಿಪ್ಪು ಕುರಿತ ಪಠ್ಯವನ್ನು ಕೈಬಿಡಬೇಕು. ಮುಂದಿನ ದಿನಗಳಲ್ಲಿ ಇತಿಹಾಸ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಸ್ವಾತಂತ್ರ್ಯ ಹೋರಾಟಗಾರರ ಪಠ್ಯ ಸೇರಿಸಬೇಕು ಎಂದು ಪತ್ರದ ಮೂಲಕ ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ.

  • ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ – 9ನೇ ತರಗತಿ ಪರೀಕ್ಷೆಯಲ್ಲಿ ಪ್ರಶ್ನೆ

    ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ – 9ನೇ ತರಗತಿ ಪರೀಕ್ಷೆಯಲ್ಲಿ ಪ್ರಶ್ನೆ

    ಗಾಂಧಿನಗರ: ಶಾಲೆಯ ಪರೀಕ್ಷೆಯಲ್ಲಿ ಮಹಾತ್ಮ ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಯನ್ನು ಕಂಡು ಗುಜರಾತ್ ಶಿಕ್ಷಣಾಧಿಕಾರಿಗಳು ಆಘಾತಕ್ಕೊಳಗಾಗಿದ್ದಾರೆ.

    ಗಾಂಧಿನಗರದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆ ‘ಸುಫಲಾಂ ಶಾಲಾ ವಿಕಾಸ ಸಂಕುಲ’ದ ಅಧೀನದಲ್ಲಿನ ಶಾಲೆಯಲ್ಲಿ ಗುಜರಾತಿ ಭಾಷೆಯ 9ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದೆ. ಇಂಟರ್ನಲ್ ಅಸಿಸ್ಮೆಂಟ್ ಪರೀಕ್ಷೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದ್ದು, ಈ ಪ್ರಶ್ನೆಯನ್ನು ನೋಡಿ ಕೆಲ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ತಬ್ಬಿಬ್ಬಾಗಿ ಹೋಗಿದ್ದಾರೆ.

    12ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷಾ ಪತ್ರಿಕೆಯಲ್ಲಿ ಅನಧಿಕೃತ ಮದ್ಯ ಮಾರಾಟ ಮತ್ತು ಮಾದಕ ವಸ್ತುಗಳ ಸೇವನೆ ಕುರಿತು ಪ್ರಶ್ನೆ ಕೇಳಲಾಗಿದ್ದು, ನಿಮ್ಮ ಪ್ರದೇಶದಲ್ಲಿ ಮದ್ಯ ಮಾರಾಟ ಹೆಚ್ಚಳ ಸಂಬಂಧ ದೂರು ನೀಡುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆಯಿರಿ ಎಂದು ಕೇಳಲಾಗಿದೆ.

    ಖಾಸಗಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳ ಆಂತರಿಕ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪ್ರಶ್ನೆಗಳು ಆಕ್ಷೇಪಾರ್ಹವಾಗಿದ್ದು, ತನಿಖೆ ಪ್ರಾರಂಭಿಸಿದ್ದೇವೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗಾಂಧಿನಗರ ಜಿಲ್ಲೆಯ ಶಿಕ್ಷಣಾಧಿಕಾರಿ ಭರತ್ ವಾಧರ್ ತಿಳಿಸಿದ್ದಾರೆ.

    ಸುಫಲಾಂ ಶಾಲಾ ವಿಕಾಸ ಸಂಕುಲ ಎಂಬುದು ಅನುದಾನಿತ ಶಿಕ್ಷಣ ಸಂಸ್ಥೆಯಾಗಿದ್ದು, ರಾಜ್ಯ ಶಿಕ್ಷಣ ಇಲಾಖೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭರತ್ ಸ್ಪಷ್ಟಪಡಿಸಿದ್ದಾರೆ.

  • 7ನೇ ತರಗತಿ ಪಬ್ಲಿಕ್ ಪರೀಕ್ಷೆ ಮತ್ತೆ ಜಾರಿ – ಫೇಲ್ ಮಾಡಬಾರದೆಂಬ ನಿಯಮಕ್ಕೆ ತಿಲಾಂಜಲಿ

    7ನೇ ತರಗತಿ ಪಬ್ಲಿಕ್ ಪರೀಕ್ಷೆ ಮತ್ತೆ ಜಾರಿ – ಫೇಲ್ ಮಾಡಬಾರದೆಂಬ ನಿಯಮಕ್ಕೆ ತಿಲಾಂಜಲಿ

    – ಶನಿವಾರ ಬ್ಯಾಗ್‍ಲೆಸ್ ಡೇ
    – 50 ವರ್ಷ ದಾಟಿದ ಶಿಕ್ಷಕಿಯರಿಗೆ ಕಡ್ಡಾಯ ವರ್ಗಾವಣೆ ಇಲ್ಲ

    ಬೆಂಗಳೂರು: ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೂ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಬಾರದೆಂಬ ನಿಯಮಕ್ಕೆ ಸರ್ಕಾರ ತಿಲಾಂಜಲಿ ಇಟ್ಟಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಬಹಳ ವರ್ಷಗಳ ಹಿಂದೆ ಇದ್ದ 7ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ಮತ್ತೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.

    ಸರ್ವ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್, ಮಕ್ಕಳನ್ನು 10ನೇ ತರಗತಿವರೆಗೆ ಫೇಲ್ ಮಾಡದೇ ಇದ್ದರೆ ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ಹೊಡೆತ ಬೀಳುತ್ತದೆ. ಹೀಗಾಗಿ ಈ ವರ್ಷದಿಂದಲೇ 7ನೇ ತರಗತಿ ಪಬ್ಲಿಕ್ ಪರೀಕ್ಷೆ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಮಾರ್ಚ್‍ನಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತದೆ. ಎಸ್‍ಎಸ್‍ಎಲ್‍ಸಿ ಬೋರ್ಡ್ ಪ್ರಶ್ನೆ ಪತ್ರಿಕೆ ತಯಾರಿಸಲಿದೆ. ಉತ್ತರ ಪತ್ರಿಕೆಗಳನ್ನು ಆಯಾ ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.

    ಪರೀಕ್ಷೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅನುತ್ತೀರ್ಣರಾದ ಮಕ್ಕಳಿಗೆ ಪೂರಕ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡುತ್ತೇವೆ. ಪ್ರಶ್ನೆ ಪತ್ರಿಕೆ ಮಾದರಿ, ಯಾವ ರೀತಿ ಅಂಕ ಪದ್ಧತಿ ಎಲ್ಲವನ್ನು ರಚನೆಗೆ ಶಿಕ್ಷಣ ತಜ್ಞರ ತಂಡವನ್ನು ರಚನೆ ಮಾಡುತ್ತೇವೆ. ಒಂದು ವೇಳೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ನಡೆಸಲು ಸಾಧ್ಯವಗದಿದ್ದರೆ, ಈ ಬಗ್ಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

    ವರ್ಗಾವಣೆ ನಿಯಮ ತಿದ್ದುಪಡಿ
    ತೀವ್ರ ಗೊಂದಲಕ್ಕೆ ಕಾರಣವಾಗಿದ್ದ ಕಡ್ಡಾಯ ವರ್ಗಾವಣೆ ನಿಯಮಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮವಾಗಿ ಕೆಲ ತಿದ್ದುಪಡಿ ತರಲು ಸರ್ಕಾರ ನಿರ್ಧಾರ ಮಾಡಿದೆ. ಹಿಂದೆ ಇದ್ದ ಕಠಿಣ ನೀತಿಯಿಂದ ಶಿಕ್ಷಕರಿಗೆ ಅನಾನುಕೂಲವಾಗಿತ್ತು. ಹೀಗಾಗಿ ಕಡ್ಡಾಯ ವರ್ಗಾವಣೆ ಎನ್ನುವ ಪದವನ್ನೇ ತೆಗೆದು ಹಾಕಲು ಇಲಾಖೆ ನಿರ್ಧಾರ ಮಾಡಿದೆ. ಇದರಲ್ಲಿದ್ದ ಕಠಿಣ ನಿಯಮಗಳನ್ನು ಸಡಿಲ ಮಾಡಿ ಹೊಸ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಈ ಸುರೇಶ್ ಕುಮಾರ್ ಶಿಕ್ಷಕರಿಗೆ ಅನುಕೂಲವಾಗುವ ವರ್ಗಾವಣೆ ನಿಯಮ ಜಾರಿಗೆ ತರುತ್ತೇವೆ. ಕಡ್ಡಾಯ ವರ್ಗಾವಣೆಯಲ್ಲಿ ಬದಲಾದ ನಿಯಮಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದರು.

    50 ವರ್ಷ ದಾಟಿದ ಶಿಕ್ಷಕಿಯರಿಗೆ ಕಡ್ಡಾಯ ವರ್ಗಾವಣೆ ಇಲ್ಲ, 55 ವರ್ಷ ದಾಟಿದ ಪುರುಷ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ. ಸಿ(ಗ್ರಾಮೀಣ) ವಲಯದಲ್ಲಿ 15 ವರ್ಷ ಒಟ್ಟಿಗೆ ಕೆಲಸ ಮಾಡಿದ್ದರೆ ಅಥವಾ ಆಗಾಗ ಕೆಲಸ ಮಾಡಿದ್ದರೆ ಮತ್ತೆ ಸಿ ವಲಯಕ್ಕೆ ವರ್ಗಾವಣೆ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ವಿವರಿಸಿದರು.

    ಕಡ್ಡಾಯ ವರ್ಗಾವಣೆ ನಿಯಮದ ಶೇ.20ರ ಮಿತಿಯನ್ನು ಶೇ.25ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ತೀವ್ರ ಖಾಯಿಲೆಗೆ ತುತ್ತಾದ ಮಕ್ಕಳ ಶಿಕ್ಷಕರಿಗೆ ಹಾಗೂ ವಿಧವೆ ಶಿಕ್ಷಕಿಯರಿಗೂ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಸುರೇಶ್‍ಕುಮಾರ್ ತಿಳಿಸಿದರು.

    ಶನಿವಾರ ಬ್ಯಾಗ್ ಲೆಸ್ ಡೇ
    ಇನ್ನು ಮುಂದೆ ಪ್ರತಿ ಶನಿವಾರ ಬ್ಯಾಗ್‍ಲೆಸ್ ಡೇ ಮಾಡಲು ನಿರ್ಧರಿಸಲಾಗಿದೆ. ಪಾಠ ಬಿಟ್ಟು ಎನ್‍ಜಿಓ ಸಹಾಯದಿಂದ ಪಠ್ಯೇತರ ಚಟುವಟಿಕೆ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡಿಸಲು ತಿಳಿಸಲಾಗಿದೆ. ಗ್ರಾಮ್ ಎನ್ನುವ ಎನ್‍ಜಿಓ ನವೆಂಬರ್‍ನಲ್ಲಿ ಪ್ರಾತ್ಯಕ್ಷಿಕೆ ತೋರಿಸಲಿದೆ. ಇದನ್ನು ಪರಿಶೀಲಿಸಿದ ನಂತರ ಮುಂದುವರಿಸುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.

    ಶಾಲೆಗಳಲ್ಲಿ ಮಕ್ಕಳ ಸುರಕ್ಷಿತೆ ಬಗ್ಗೆ ಮಹತ್ವದ ನಿರ್ಧಾರ ಮಾಡಿದ್ದೇವೆ. ನಿಮ್ಹಾನ್ಸ್‍ನಿಂದ ಕೆಲ ವರದಿ ಕೂಡ ಬಂದಿತ್ತು. ಪೊಲೀಸ್ ಇಲಾಖೆಯ ಡಿಸಿಪಿ ಮಟ್ಟದಲ್ಲಿ ಬಿಇಓ ಒಳಗೊಂಡ ತಂಡ ರಚನೆಗೆ ನಿರ್ಧಾರ ಮಾಡಲಾಗಿದೆ. ಮಕ್ಕಳ ಸುರಕ್ಷೆ ಬಗ್ಗೆ ಈ ಕಮಿಟಿ ಮಾನಿಟರ್ ಮಾಡುತ್ತದೆ. ಮಕ್ಕಳ ರಕ್ಷಣೆ ನಿಯಮಗಳನ್ನು ಈ ಸಮಿತಿ ಜಾರಿ ಮಾಡಲಿದೆ ಎಂದು ತಿಳಿಸಿದರು.

  • ಹಾವೇರಿಯಲ್ಲಿ ಇನ್ನೂ ವಿತರಣೆಯಾಗಿಲ್ಲ ಮಕ್ಕಳಿಗೆ ಸಮವಸ್ತ್ರ, ಪುಸ್ತಕ

    ಹಾವೇರಿಯಲ್ಲಿ ಇನ್ನೂ ವಿತರಣೆಯಾಗಿಲ್ಲ ಮಕ್ಕಳಿಗೆ ಸಮವಸ್ತ್ರ, ಪುಸ್ತಕ

    ಹಾವೇರಿ: ಶೈಕ್ಷಣಿಕ ವರ್ಷದ ಆರಂಭಕ್ಕೆ ಸರಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಶೂ, ಸಾಕ್ಸ್ ವಿತರಣೆ ಮಾಡಬೇಕು. ಆದರೆ ಇನ್ನೇನು ಕೆಲವೇ ದಿನಗಳು ಕಳೆದರೆ ಅರ್ಧ ಶೈಕ್ಷಣಿಕ ವರ್ಷವೇ ಮುಗಿಯುತ್ತಾ ಬಂದರೂ ಹಾವೇರಿ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ ಆಗಿಲ್ಲ. ಕೆಲವು ಕಡೆಗಳಲ್ಲಿ ಪಠ್ಯ ಪುಸ್ತಕ, ಶೂ, ಸಾಕ್ಸ್ ಗಳೂ ಸಿಕ್ಕಿಲ್ಲ.

    ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್ ಸಿಗದೆ, ಮಕ್ಕಳು ಕಳೆದ ವರ್ಷ ನೀಡಿರುವ ಹರಿದಿರುವ ಬಟ್ಟೆಗಳನ್ನೇ ಹೊಲಿದು ಹಾಕಿಕೊಂಡು ಶಾಲೆಗೆ ಬರುತ್ತಿದ್ದಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಶಾಲೆ ಆರಂಭದಿಂದಲೂ ಸಮವಸ್ತ್ರ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾರೆ. ಇದನ್ನು ಓದಿ: ಬಾಲಕನ ಕೋರ್ಟ್ ಹೋರಾಟದಿಂದಾಗಿ ಮಕ್ಕಳಿಗೆ ಸಿಗುವಂತಾಯ್ತು ಎರಡು ಜೊತೆ ಸಮವಸ್ತ್ರ

    ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು, ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷ ಅರ್ಧ ಕಳೆಯುತ್ತ ಬಂದರೂ ಈವರೆಗೆ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಸೇರಿದಂತೆ ಯಾವುದೇ ಸರಕಾರಿ ಸೌಲಭ್ಯಗಳು ದೊರೆತಿಲ್ಲ.

    ಕಳೆದ ಒಂದು ವಾರದಲ್ಲಿ ಕೆಲವು ಸರ್ಕಾರಿ ಶಾಲಾ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಕೆಲವು ಸಲಕರಣೆಗಳು ವಿತರಣೆ ಆಗಿವೆ. ಮತ್ತೆ ಕೆಲವು ಕಡೆಗಳಲ್ಲಿ ಸಮವಸ್ತ್ರ ಶಾಲೆಗಳಿಗೆ ತಲುಪಿದರೂ ಇನ್ನೂ ಮಕ್ಕಳ ಕೈಸೇರಿಲ್ಲ. ಸಮವಸ್ತ್ರ ವಿತರಣೆಗೆ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಸಕರು ಹಾಗೂ ಅಧಿಕಾರಿಗಳಿಗೆ ಸಮಯ ಸಿಗುತ್ತಿಲ್ಲ. ಅವರನ್ನೇ ಕರೆಸಿ ಸಮವಸ್ತ್ರ ವಿತರಿಸಬೇಕು ಎಂದು ಕೆಲವು ಶಾಲೆಗಳ ನಿಲುವಿನಿಂದಾಗಿ ಇನ್ನೂ ಸಮವಸ್ತ್ರಗಳನ್ನು ವಿತರಿಸಿಲ್ಲ.

    ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕೊರತೆಗೆ ಸರ್ಕಾರದ ನಿರ್ಲಕ್ಷವೂ ಪ್ರಮುಖ ಕಾರಣವಾಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಪದೆ ಪದೇ ಸರಕಾರಿ ಶಾಲೆಗಳ ಉಳಿವು, ಅಭಿವೃದ್ಧಿ ಬಗ್ಗೆ ಮಾತನಾಡುವ ಸರ್ಕಾರ ಮತ್ತು ಜನಪ್ರತಿನಿಧಿಗಳು ಸಮಯಕ್ಕೆ ಸರಿಯಾಗಿ ಸರಕಾರಿ ಶಾಲೆ ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂಬುದು ಪೋಷಕರು ಆಗ್ರಹಿಸಿದ್ದಾರೆ.

  • ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಲಿ ಎಂದು ನಾನೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ – ಭವಾನಿ ರೇವಣ್ಣ

    ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಲಿ ಎಂದು ನಾನೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ – ಭವಾನಿ ರೇವಣ್ಣ

    ಹಾಸನ: ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಮಕ್ಕಳ ಫಲಿತಾಂಶ ಉತ್ತಮವಾಗಲಿ ಎಂದು ನಾನೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ. ಅದಕ್ಕೆ ತಕ್ಕ ಫಲಿತಾಂಶವನ್ನು ಭಗವಂತ ನೀಡಿದ್ದಾನೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಅವರ ಪತ್ನಿ ಮತ್ತು ಜಿಲ್ಲೆಯ ಜಿ.ಪಂ. ಶಿಕ್ಷಣ ಮತ್ತು ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರಲು ಯಾರು ಎಷ್ಟು ಸಭೆ ಮಾಡಿದ್ದಾರೆ ಎನ್ನುವುದು ನಮ್ಮ ಜಿಲ್ಲೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಗೊತ್ತು. ಎಸ್‍ಎಸ್‍ಎಲ್‍ಸಿ ಫಲಿತಾಂಶ ದಲ್ಲಿ ಹಾಸನ ನಂಬರ್ ಒನ್ ಬಂದಿರೋದು ನನಗೆ ಖುಷಿಯಾಗಿದೆ. ಕಳೆದ ವರ್ಷದ ಫಲಿತಾಂಶದಲ್ಲಿ 31ನೇ ಸ್ಥಾನದಲ್ಲಿದ್ದ ನಾವು 7 ಸ್ಥಾನಕ್ಕೆ ಬಂದಿದ್ದೇವು. ಈ ವರ್ಷ ಮೊದಲ ಸ್ಥಾನ ಬಂದಿದ್ದೇವೆ ಇದಕ್ಕೆ ಕೇವಲ ನಮ್ಮ ಕುಟುಂಬ ವರ್ಗ ಮಾತ್ರ ಕಾರಣವಲ್ಲ. ಈ ಫಲಿತಾಂಶ ಬರಲು ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಪ್ರಯತ್ನ ಬಹಳ ದೊಡ್ಡದು ಎಂದು ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಪ್ರಯತ್ನವನ್ನು ಪರೋಕ್ಷವಾಗಿ ಅಲ್ಲಗೆಳೆದರು.

    ಫಲಿತಾಂಶ ಏರಿಕೆಯಲ್ಲಿ ಪತ್ನಿ ಕೊಡುಗೆ ಕೊಂಡಾಡಿದ್ದ ಸಚಿವ ರೇವಣ್ಣ ಅವರನ್ನು ಸಮರ್ಥಿಸಿಕೊಂಡ ಭವಾನಿ ಅವರು, ಇಡೀ ರಾಜ್ಯದಲ್ಲಿ ಪೋಷಕರ ಸಭೆ ಮಾಡಿದ್ದು ನಮ್ಮ ಜಿಲ್ಲೆಯಲ್ಲೇ ಮೊದಲು. ಮಕ್ಕಳ ಫಲಿತಾಂಶ ಉತ್ತಮವಾಗಿ ಬರಲಿ ಎಂದು ನಾನು ಸ್ವತಃ ಹಲವು ಸ್ವಯಂಪ್ರೇರಿತ ಕ್ರಮಗಳನ್ನು ಕೈಗೊಂಡಿದ್ದರಿಂದ ರೇವಣ್ಣನವರು ಹಾಗೆ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.

    ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರವಾಗಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ನಮ್ಮ ಪುತ್ರ ಪ್ರಜ್ವಲ್ ಕನಿಷ್ಟ ಮೂರು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾನೆ. ನಮಗೆ ಗೆಲುವಿನ ಬಗ್ಗೆ ಕುತೂಹಲ ಇಲ್ಲಾ ಲೀಡ್ ಬಗ್ಗೆ ಕುತೂಹಲ ಇದೆ. ಹಾಸನ, ಮಂಡ್ಯ, ತುಮಕೂರು ಮೂರು ಕಡೆ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

    ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

    ಬೆಂಗಳೂರು: ಶಿಕ್ಷಣ ಇಲಾಖೆ ಸ್ಕೂಲ್ ಬ್ಯಾಗ್‍ನ ತೂಕ ಇಳಿಸಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ. ಕೆಜಿ ಗಟ್ಟಲೆ ಸ್ಕೂಲ್ ಬ್ಯಾಗ್ ಹೊರುವುದರಿಂದ ಶಾಲಾ ಮಕ್ಕಳ ದೈಹಿಕ  ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    1-10 ನೇ ತರಗತಿವರಗಿನ ಮಕ್ಕಳ ಬ್ಯಾಗ್ ತೂಕಕ್ಕೆ ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಬ್ಯಾಗ್ ತೂಕವು ಮಗುವಿನ ದೇಹದ ಸರಾಸರಿ ಶೇ.10 ರಷ್ಟು ಮೀರುವಂತೆ ಇಲ್ಲ. 1-2 ತರಗತಿ ಮಕ್ಕಳಿಗೆ ಇನ್ನು ಮುಂದೆ ಹೋಂ ವರ್ಕ್ ಕೊಡುವಂತಿಲ್ಲ ಎಂದು ಹೇಳಿದೆ. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಕಡ್ಡಾಯವಾಗಿ ಆಗಬೇಕು. ಮಕ್ಕಳು ನೀರಿನ ಬಾಟಲ್ ತರುವುದು ತಪ್ಪಿಸಲು ಶಾಲೆಯಲ್ಲೇ ನೀರಿನ ವ್ಯವಸ್ಥೆ ಮಾಡಬೇಕು. ಈ ಎಲ್ಲಾ ಯೋಜನೆಗಳು ರಾಜ್ಯದ ಎಲ್ಲಾ ಶಾಲೆಗಳಲ್ಲೂ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಬೇಕು ಎಂದು ಆದೇಶ ನೀಡಿದೆ.

    ಸ್ಕೂಲ್ ಬ್ಯಾಗ್ ರೂಲ್ಸ್!
    1. ಹೊಸ ಆದೇಶದ ಅನ್ವಯ ಮಕ್ಕಳ ಬ್ಯಾಗ್ ತೂಕವು ಮಗುವಿನ ದೇಹದ ಸರಾಸರಿ 10% ಮೀರುವಂತಿಲ್ಲ.
    2. 1-2 ತರಗತಿಗೆ ಇನ್ನುಂದೆ ಹೋಂ ವರ್ಕ್ ಕೊಡುವಂತಿಲ್ಲ.
    3. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಕಡ್ಡಾಯ.
    4. ಮಕ್ಕಳು ನೀರಿನ ಬಾಟಲ್ ತರುವುದು ತಪ್ಪಿಸಲು ಶಾಲೆಯಲ್ಲೆ ನೀರಿನ ವ್ಯವಸ್ಥೆ ಮಾಡೋದು ಕಡ್ಡಾಯ.
    5. 100 ಹಾಳೆಗಳು ಮೀರದ ಪುಸ್ತಕವನ್ನೇ ಮಕ್ಕಳಿಗೆ ನೀಡಬೇಕು.
    6. ಬ್ಯಾಗ್ ತೂಕದ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವ ಕೆಲಸ ಶಾಲೆಗಳು ಮಾಡಬೇಕು.
    7. ಮುಂಚಿತವಾಗಿಯೇ ಮಕ್ಕಳಿಗೆ ಆಯಾ ದಿನದ ವೇಳಾಪಟ್ಟಿಗೆ ಅನುಗುಣವಾಗಿ ಪುಸ್ತಕಗಳನ್ನು ತರಲು ಸೂಚನೆ ನೀಡುವುದು.
    8. ಮಕ್ಕಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಆದಷ್ಟು ಶಾಲೆಗಳಲ್ಲಿ ಸಂಗ್ರಹ ಮಾಡುವ ವ್ಯವಸ್ಥೆ ಶಾಲೆ ಮಾಡಬೇಕು.

    ಹೊಸ ಆದೇಶದ ಅನ್ವಯ ಮಕ್ಕಳ ಶಾಲಾ ಬ್ಯಾಗ್ ತೂಕ ಹೀಗೆ ಇರಬೇಕು
    1. 2ನೇ ತರಗತಿ – 1.5 ರಿಂದ 2 ಕೆಜಿ.
    2. 3-5ನೇ ತರಗತಿ – 2 ರಿಂದ 3 ಕೆಜಿ
    3. 6-8ನೇ ತರಗತಿ – 3 ರಿಂದ 4 ಕೆಜಿ.
    4. 9-10ನೇ ತರಗತಿ – 4 ರಿಂದ 5 ಕೆಜಿ

    ಶಾಲಾ ಬ್ಯಾಗ್ ರಹಿತ ದಿನದ ಯಾವ ಚಟುವಟಿಕೆಗಳನ್ನು ಮಾಡಬೇಕು?
    1. ಕ್ಷೇತ್ರ ಸಂಚಾರ
    2. ವಾರ್ತಾಪತ್ರಿಕೆಗಳ ಚಟುವಟಿಕೆಗಳು
    3. ಗಣಿತ ವಿನೋದ, ಅಬ್ಯಾಕಸ್
    4. ವಿಜ್ಞಾನ ಪ್ರಯೋಗ ಮತ್ತು ಪ್ರದರ್ಶನಗಳು
    5. ಸಾಮಾನ್ಯ ಜ್ಞಾನ ಶೈಕ್ಷಣಿಕ ಸಂಘದ ಚಟುವಟಿಕೆಗಳು
    6. ಚಿತ್ರಕಲೆ, ಚಿತ್ರಗಳಿಗೆ ಬಣ್ಣ ತುಂಬುವುದು, ಕರಕುಶಲತೆ
    7. ಸಾಮಾಜಿಕ ಉಪಯೋಗಿತ ಉತ್ಪಾದನಾ ಕಾರ್ಯ
    8. ಭಕ್ತಿಗೀತೆಗಳು ಮತ್ತು ದೇಶಭಕ್ತಿಗೀತೆಗಳ ಚಟುವಟಿಕೆ (ಕನ್ನಡ, ಹಿಂದಿ, ಇಂಗ್ಲೀಷ್)
    9. ಚಿತ್ರ ಓದುವಿಕೆ ಮತ್ತು ನಕ್ಷೆ ಓದುವಿಕೆ
    10. ಒಳಾಂಗಣ ಕ್ರೀಡೆಗಳು (ಹಾವು ಮತ್ತು ಏಣಿ, ಕೇರಂ ಬೋರ್ಡ್ ಇತ್ಯಾದಿ)
    11. ಹೊರಾಂಗಣ ಕ್ರೀಡೆಗಳು
    12. ದೃಕ್ ಶ್ರವಣ ಮಾಧ್ಯಮಗಳ ಚಟುವಟಿಕೆಗಳು/ ಶ್ಲೋಕಗಳನ್ನು ಪಠಿಸುವುದು
    13. ನೃತ್ಯ/ ಚರ್ಚಾಸ್ಪರ್ಧೆ/ ನಾಟಕ/ ಏಕಪಾತ್ರಾಭಿನಾಯ/ ಆಶುಭಾಷಣ ಸ್ಪರ್ಧೆಗಳು/ ಧ್ಯಾನ/ ಯೋಗಗಳ ಚಟುವಟಿಕೆ
    14. ಶಾಲಾ ಪರಿಸರಕ್ಕೆ ಅನುಗುಣವಾದ ಶೈಕ್ಷಣಿಕ ಚಟುವಟಿಕೆಗಳು.

  • ಮೊಬೈಲ್ ಸ್ವಿಚ್ ಆಫ್ ಮಾಡಿದ್ರೆ ಶಿಕ್ಷಕರಿಗೆ ಶಿಕ್ಷೆ ಗ್ಯಾರಂಟಿ!

    ಮೊಬೈಲ್ ಸ್ವಿಚ್ ಆಫ್ ಮಾಡಿದ್ರೆ ಶಿಕ್ಷಕರಿಗೆ ಶಿಕ್ಷೆ ಗ್ಯಾರಂಟಿ!

    – ರಾಯಚೂರು ಶಿಕ್ಷಣ ಇಲಾಖೆ ಸಿಬ್ಬಂದಿಗೆ ಖಡಕ್ ಆದೇಶ

    ರಾಯಚೂರು: ಜಿಲ್ಲೆಯ ಶಿಕ್ಷಣ ಇಲಾಖೆ ಸಿಬ್ಬಂದಿ ಯಾರೂ ತಮ್ಮ ಮೊಬೈಲ್‍ಗಳನ್ನು ಸ್ವಿಚ್ ಆಫ್ ಮಾಡುವ ಹಾಗಿಲ್ಲ. ಒಂದು ವೇಳೆ ಸ್ವಿಚ್ ಆಫ್ ಮಾಡಿದ್ರೆ ಶಿಕ್ಷೆ ಖಚಿತ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಖಡಕ್ ಆದೇಶ ಹೊರಡಿಸಿದ್ದಾರೆ.

    ಲೋಕಸಭಾ ಚುನಾವಣೆ ಅಧಿಸೂಚನೆ ಪ್ರಕಟವಾಗಿದ್ದೆ ತಡ ರಾಯಚೂರಿನಲ್ಲಿ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಶಿಕ್ಷಣ ಇಲಾಖೆ ಚುನಾವಣೆಯನ್ನ ಯಶಸ್ವಿಯಾಗಿ ನಿಭಾಯಿಸಬೇಕು ಅಂತ ಕಟ್ಟು ನಿಟ್ಟಿನ ಆದೇಶಗಳನ್ನ ಹೊರಡಿಸಿದೆ.

    ಯಾವುದೇ ಕಾರಣಕ್ಕೂ ಶಿಕ್ಷಣ ಇಲಾಖೆ ಸಿಬ್ಬಂದಿ ಮೊಬೈಲ್ ಸ್ವಿಚ್ ಆಫ್ ಆಗಬಾರದು. ಅನುಮತಿಯಿಲ್ಲದೆ ಯಾವುದೇ ಸಿಬ್ಬಂದಿ ಕೇಂದ್ರಸ್ಥಾನ ಬಿಟ್ಟು ತೆರಳಬಾರದು ಎಂದು ಜಿಲ್ಲೆಯ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಬಿ.ಕೆ.ನಂದನೂರು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ. ಚುನಾವಣಾ ತುರ್ತು ಸಂದರ್ಭದಲ್ಲಿ ಎಲ್ಲರೂ ಲಭ್ಯವಿರಬೇಕು ಇಲ್ಲದಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು ಅಂತ ಎಚ್ಚರಿಸಿದ್ದಾರೆ.

    ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಜನವರಿ 16ರವರೆಗೆ ಮತದಾರರ ಸಂಖ್ಯೆ 18,93,576 ಇದ್ದು ಒಟ್ಟು 1843 ಮತಗಟ್ಟೆ ತೆರೆಯಲಾಗಿದೆ. ಚುನಾವಣಾ ಕಾರ್ಯಕ್ಕೆ ಒಟ್ಟು 8,798 ಸಿಬ್ಬಂದಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ 31 ಚೆಕ್ ಪೋಸ್ಟ್, 7 ಅಂತರರಾಜ್ಯ ಚೆಕ್ ಪೋಸ್ಟ್ ತೆರೆಯಲಾಗಿದೆ ಅಂತ ಜಿಲ್ಲಾಧಿಕಾರಿ ಬಿ.ಶರತ್ ಹೇಳಿದ್ದಾರೆ.

    ಇಷ್ಟು ದಿನ ರಾಜಕೀಯ ವಲಯದಲ್ಲಿದ್ದ ಚುನಾವಣಾ ಬಿಸಿ ಈಗ ಅಧಿಕಾರಿಗಳಲ್ಲೂ ಜೋರಾಗಿದೆ. ಮತದಾನ ಜಾಗೃತಿ ಮೂಡಿಸಲು ಜಿಲ್ಲಾಡಳಿತ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಚುನಾವಣೆ ಯಶಸ್ವಿಯಾಗಿ ನಡೆಸಲು ಸಿಬ್ಬಂದಿಗೆ ನಿರಂತರ ತರಬೇತಿಯನ್ನೂ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv