Tag: Department of Education

  • ಕೋವಿಡ್ ಭಯ, ಆರ್ಥಿಕ ಸಂಕಷ್ಟ- ಚಾಮರಾಜನಗರ ಜಿಲ್ಲೆಯಲ್ಲಿ ದಾಖಲಾಗಿಲ್ಲ 4,605 ವಿದ್ಯಾರ್ಥಿಗಳು

    ಕೋವಿಡ್ ಭಯ, ಆರ್ಥಿಕ ಸಂಕಷ್ಟ- ಚಾಮರಾಜನಗರ ಜಿಲ್ಲೆಯಲ್ಲಿ ದಾಖಲಾಗಿಲ್ಲ 4,605 ವಿದ್ಯಾರ್ಥಿಗಳು

    ಚಾಮರಾಜನಗರ: ಕೊರೊನಾ ಭೀತಿಯಿಂದಾಗಿ ರಾಜ್ಯದಲ್ಲಿ ಶಾಲೆಗಳನ್ನು ಯಾವಾಗ? ಹೇಗೆ ಆರಂಭಿಸಬೇಕು ಎಂಬ ಗೊಂದಲ ಮುಂದುವರಿದಿದೆ. ಈ ನಡುವೆ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಳೆದ ಬಾರಿಗಿಂತ ಈ ವರ್ಷ ದಾಖಲಾತಿ ಪ್ರಮಾಣ ಕುಸಿದಿದೆ. ಚಾಮರಾಜನಗರ ಜಿಲ್ಲೆಯೊಂದರಲ್ಲೇ ಈ ಬಾರಿ 4,605 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.

    ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ಪರಿಣಾಮ ಶಾಲಾ ದಾಖಲಾತಿಯ ಮೇಲು ಬೀರಿದೆ. ಶಾಲೆಗಳನ್ನು ಯಾವಾಗ ಹೇಗೆ ಆರಂಭಿಸಬೇಕು ಎಂಬ ಗೊಂದಲದಲ್ಲೇ ಮುಳುಗಿರುವ ಸರ್ಕಾರ, ಸೆಪ್ಟೆಂಬರ್ 30ರೊಳಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಮುಗಿಸಬೇಕು ಎಂದು ಆದೇಶ ಹೊರಡಿಸಿತ್ತು. ನಂತರ ಈ ದಿನಾಂಕವನ್ನು ಅಕ್ಟೋಬರ್ 16 ರವರೆಗೂ ವಿಸ್ತರಿಸಿತ್ತು. ಇದೀಗ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಳೆದ ಬಾರಿಗಿಂತ ಈ ಬಾರಿ ದಾಖಲಾತಿ ಪ್ರಮಾಣ ಕುಸಿದಿದೆ.

    ಚಾಮರಾಜನಗರ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ 1,26,994 ಮಕ್ಕಳು ದಾಖಲಾಗಿದ್ದರು. ಆದರೆ ಈ ಬಾರಿ ಅಂದರೆ 2020-21ನೇ ಸಾಲಿಗೆ 1,22,389 ಮಕ್ಕಳು ದಾಖಲಾಗಿದ್ದು, ಈ ಬಾರಿ 4,605 ಮಕ್ಕಳು ಶಾಲೆಗಳಿಗೆ ಪ್ರವೇಶ ಪಡೆದಿಲ್ಲ. ಅಂಕಿ ಅಂಶಗಳ ಪ್ರಕಾರ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾತಿ ಕುಸಿದಿರುವುದು ಕಂಡು ಬಂದಿದೆ.

    ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಕೊರೊನಾ ಸೋಂಕು ತಗುಲಬಹುದೆಂಬ ಭೀತಿ ಪೋಷಕರನ್ನು ಕಾಡುತ್ತಿದೆ. ಇನ್ನೊಂದೆಡೆ ಲಾಕ್‍ಡೌನ್ ಪರಿಣಾಮ ಆರ್ಥಿಕ ಸಂಕಷ್ಟವೂ ಎದುರಾಗಿರುವುದರಿಂದ ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸಲು ಪೋಷಕರು ಹಿಂದೇಟು ಹಾಕಿದ್ದಾರೆ. ಒಂದು ವರ್ಷ ಹೋದರು ಪರವಾಗಿಲ್ಲ ಮುಂದಿನ ವರ್ಷ ಶಾಲೆಗೆ ಸೇರಿಸೋಣ ಎಂಬ ತೀರ್ಮಾನಕ್ಕೂ ಕೆಲವು ಪೋಷಕರು ಬಂದಿದ್ದಾರೆ. ಅಲ್ಲದೆ ಕಳೆದ ವರ್ಷದಂತೆ ಈ ವರ್ಷವೂ ತಮ್ಮ ಮಕ್ಕಳನ್ನು ಮುಂದಿನ ತರಗತಿಗೆ ಪಾಸ್ ಮಾಡುತ್ತಾರೆ. ಶುಲ್ಕಕಟ್ಟಿ ದಾಖಲು ಮಾಡುವುದು ವ್ಯರ್ಥ ಎಂಬ ಭಾವನೆಯೂ ಕೆಲ ಪೋಷಕರಲ್ಲಿದೆ. ಹೀಗೆ ನಾನಾ ಕಾರಣಗಳಿಂದ ಶಾಲೆಗಳಲ್ಲಿ ದಾಖಲಾತಿ ಕುಸಿದಿದೆ.

    ಶಾಲಾ ದಾಖಲಾತಿ ಕುಸಿತದ ನಡುವೆಯು ಈ ವರ್ಷ ಸರ್ಕಾರಿ ಶಾಲೆಗಳ ಪ್ರವೇಶಾತಿ ಹೆಚ್ಚಳವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 769ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಪಡೆದಿದ್ದಾರೆ. ಒಟ್ಟಾರೆ ಕೋವಿಡ್-19 ನಾನಾ ಆವಾಂತರಗಳನ್ನು ಸೃಷ್ಟಿಸುತ್ತಿದ್ದು ಶೈಕ್ಷಣಿಕ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ.

  • ಮಾನ್ಯ ಮುಖ್ಯಮಂತ್ರಿಗಳೇ, ಶಿಕ್ಷಣ ಸಚಿವರೇ ಕಣ್ತೆರೆಯಿರಿ: ಸಿದ್ದರಾಮಯ್ಯ

    ಮಾನ್ಯ ಮುಖ್ಯಮಂತ್ರಿಗಳೇ, ಶಿಕ್ಷಣ ಸಚಿವರೇ ಕಣ್ತೆರೆಯಿರಿ: ಸಿದ್ದರಾಮಯ್ಯ

    ಬೆಂಗಳೂರು: ಪಿಯು ಉಪನ್ಯಾಸಕರ ನೇಮಕ ವಿಚಾರವಾಗಿ ಕೌನ್ಸಿಲಿಂಗ್ ಮುಗಿದಿದ್ದರು ಆದೇಶ ಕಾಪಿ ನೀಡದ ಹಿನ್ನೆಲೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿ ಎದುರು ಅರ್ಹ ಅಭ್ಯರ್ಥಿಗಳು ಇಂದು ಪ್ರತಿಭಟನೆ ನಡೆಸಿದರು. ಅಭ್ಯರ್ಥಿಗಳ ಪರ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಹಾಗೂ ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಶಿಕ್ಷಣ ಇಲಾಖೆಯ ವಿಳಂಬ ನೀತಿಯನ್ನ ಪ್ರಶ್ನಿಸಿ ಟ್ವೀಟ್ ಮಾಡಿರುವ ಮಾಜಿ ಸಿಎಂ, ಮಾನ್ಯ ಮುಖ್ಯಮಂತ್ರಿಗಳೇ, ಶಿಕ್ಷಣ ಸಚಿವರೇ ಕಣ್ತೆರೆಯಿರಿ. ಪಿಯುಸಿ ನೇಮಕಾತಿ ಪ್ರಕ್ರಿಯೆ ಮುಗಿದ ಮೇಲೆಯೂ ನೇಮಕಾತಿ ಪತ್ರ ದೊರೆಯದೇ ಈ ದಿನ ಮಳೆಯಲ್ಲಿಯೇ ಪಿಯುಸಿ ಮಂಡಳಿ ಎದುರು ಕೂತಿದ್ದಾರೆ. ಈಗಲಾದರೂ ಸಹ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿ ಅವರ ಆತಂಕವನ್ನ ದೂರ ಮಾಡಿ ಎಂದು ಹೇಳಿದ್ದಾರೆ.

    2015ರಲ್ಲಿ ಕರೆದಿದ್ದ ನೇಮಕಾತಿ ಪ್ರಕ್ರಿಯೆ ಅನ್ವಯ 2018 ರಲ್ಲಿ ಪರೀಕ್ಷೆ ನಡೆದಿತ್ತು. ಇದರಲ್ಲಿ 1,200 ಅಭ್ಯರ್ಥಿಗಳಿಗೆ ಈಗಾಗಲೇ ಕೌನ್ಸಿಲಿಂಗ್ ಮುಗಿದಿದೆ. ಆದರೂ ಆದೇಶ ಕಾಪಿ ನೀಡದೆ ಶಿಕ್ಷಣ ಇಲಾಖೆ ಸತಾಯಿಸುತ್ತಿದೆ. ಇಲಾಖೆ ವಿಳಂಬ ಧೋರಣೆ ವಿರೋಧಿ ಮಲ್ಲೇಶ್ವರಂನಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದ್ದರು.

    ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಸವರಾಜ್ ಹೊರಟ್ಟಿ, ಹೋರಾಟಕ್ಕೆ ಬೆಂಬಲ ಸೂಚಿಸಿ, ಈ ಮಕ್ಕಳಿಗೆ ಅನ್ಯಾಯ ಆಗಲು ಬಿಡಿಲ್ಲ. ನಾನು ಶಿಕ್ಷಣ ಸಚಿವನಾಗಿದ್ದೆ ಸರ್ಕಾರದೊಂದಿಗೆ ಮಾತಾನಾಡಿ ಆದೇಶ ಪತ್ರ ನೀಡುವಂತೆ ತಿಳಿಸುತ್ತೇನೆ. ಈಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಸರ್ಕಾರದ ಬಗ್ಗೆ ಈ ವೇಳೆ ಮಾತನಾಡುವುದಿಲ್ಲ. ಮಕ್ಕಳಿಗೆ ಅನ್ಯಾಯ ಆಗೋದಕ್ಕೆ ಬಿಡಲ್ಲ ಎಂದು ಹೇಳಿದರು.

  • ನಾಳೆ ರಾಜ್ಯಾದ್ಯಂತ ಟಿಇಟಿ ಪರೀಕ್ಷೆ- ಸೋಂಕಿತರಿಗೆ ಪ್ರತ್ಯೇಕ ಕೇಂದ್ರ

    ನಾಳೆ ರಾಜ್ಯಾದ್ಯಂತ ಟಿಇಟಿ ಪರೀಕ್ಷೆ- ಸೋಂಕಿತರಿಗೆ ಪ್ರತ್ಯೇಕ ಕೇಂದ್ರ

    ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ಟಿಇಟಿ ಪರೀಕ್ಷೆ ನಡೆಯುತ್ತಿದ್ದು, ಕೊರೊನಾ ನಿಯಮಗಳನ್ವಯ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

    ಪರೀಕ್ಷೆ ನಡೆಸುವ ಕುರಿತು ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಬಹುತೇಕ ಪಿಯುಸಿ, ಎಸ್‍ಎಸ್‍ಎಲ್‍ಸಿ ಮಾರ್ಗಸೂಚಿಗಳು ಅನ್ವಯವಾಗಲಿವೆ. ಒಟ್ಟು 2.44 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ರಾಜ್ಯದ 886 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಎಲ್ಲ ಕೇಂದ್ರಗಳಲ್ಲಿಯೂ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕೊರೊನಾ ನಿಯಮದಂತೆ ಪರೀಕ್ಷೆ ನಡೆಸಲಾಗುತ್ತಿದೆ.

    ಕೊರೊನಾ ಹಿನ್ನೆಲೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಬಹುತೇಕ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯ ನಿಯಮಗಳನ್ನೇ ಅಳವಡಿಸಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿದೆ.

  • ಸೆಪ್ಟೆಂಬರ್ ಅಂತ್ಯದವರೆಗೆ ಶಾಲಾ-ಕಾಲೇಜು ಪ್ರಾರಂಭ ಇಲ್ಲ: ಶಿಕ್ಷಣ ಇಲಾಖೆ

    ಸೆಪ್ಟೆಂಬರ್ ಅಂತ್ಯದವರೆಗೆ ಶಾಲಾ-ಕಾಲೇಜು ಪ್ರಾರಂಭ ಇಲ್ಲ: ಶಿಕ್ಷಣ ಇಲಾಖೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಶಾಲಾ-ಕಾಲೇಜುಗಳನ್ನು ತೆರೆಯದಿರಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ತಿಂಗಳಾಂತ್ಯದವರೆಗೆ ಯಥಾ ಸ್ಥಿತಿ ಮುಂದುವರಿಸಲು ಇಲಾಖೆ ತಿಳಿಸಿದೆ.

    ಸೆಪ್ಟೆಂಬರ್ ಅಂತ್ಯದವರೆಗೆ ಶಾಲಾ-ಕಾಲೇಜು ಪ್ರಾರಂಭ ಮಾಡದಿರುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದೆ. ತಿಂಗಳಾಂತ್ಯದವರೆಗೂ ಶಾಲಾ-ಕಾಲೇಜು ಆರಂಭಿಸದಂತೆ ಸರ್ಕಾರ ಸೂಚಿಸಿದೆ.

    ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೆ.21 ರಿಂದ 9-12ನೇ ತರಗತಿವರೆಗೆ ತರಗತಿ ಆರಂಭಕ್ಕೆ ಕೇಂದ್ರ ಸರ್ಕಾರ ಅವಕಾಶ ಕೊಟ್ಟಿದೆ. ಆದರೆ ರಾಜ್ಯದಲ್ಲಿ ಪ್ರತಿನಿತ್ಯ ಸರಾಸರಿ 9 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಸರ್ಕಾರ ಶಾಲಾ-ಕಾಲೇಜು ಆರಂಭಿಸುವ ಕುರಿತು ಒಲವು ತೋರಿಲ್ಲ.

    ರಾಜ್ಯದಲ್ಲಿ ಇಂದು 8,364 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,11,346ಕ್ಕೆ ಏರಿಕೆಯಾಗಿದೆ. 114 ಮಂದಿ ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 7,922 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ 10,815 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 5,11,346 ಸೋಂಕಿತರ ಪೈಕಿ 98,564 ಸಕ್ರಿಯ ಪ್ರಕರಣಗಳಿವೆ. ಒಟ್ಟು 4,04,841 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಿದ್ದಾರೆ. ಒಟ್ಟು 822 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • 8 ವಿದ್ಯಾರ್ಥಿಗಳಿಗೆ 4 ಶಿಕ್ಷಕರು – ಮುಚ್ಚುವ ಹಂತದಲ್ಲಿದೆ ಬಿಎಸ್‍ವೈ ಓದಿದ ಸರ್ಕಾರಿ ಶಾಲೆ

    8 ವಿದ್ಯಾರ್ಥಿಗಳಿಗೆ 4 ಶಿಕ್ಷಕರು – ಮುಚ್ಚುವ ಹಂತದಲ್ಲಿದೆ ಬಿಎಸ್‍ವೈ ಓದಿದ ಸರ್ಕಾರಿ ಶಾಲೆ

    ಮಂಡ್ಯ: ಆ ಶಾಲೆ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಇಡೀ ಜಿಲ್ಲೆಗೆ ಅತೀ ಹೆಚ್ಚು ವಿದ್ಯಾರ್ಥಿಗಳು ಇದ್ದ ಶಾಲೆ. ಆ ಶಾಲೆಯಲ್ಲಿ ಸಿಎಂ ಯಡಿಯೂರಪ್ಪನವರು ಸಹ ವ್ಯಾಸಂಗ ಮಾಡಿದ್ದರು. ಸದ್ಯ ಈ ಶಾಲೆಯಲ್ಲಿ ಇರುವುದು 8 ವಿದ್ಯಾರ್ಥಿಗಳು, ಅವರಿಗೆ 4 ಮಂದಿ ಶಿಕ್ಷಕರಿದ್ದಾರೆ.

    ಮಂಡ್ಯ ನಗರದ ಆನೆಕೆರೆ ಬೀದಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ವ್ಯಾಸಂಗ ಮಾಡಿದ್ದಾರೆ. ಇಲ್ಲಿ ಬಿ.ಎಸ್.ಯಡಿಯೂರಪ್ಪ ಅವರು 1954-55ರಲ್ಲಿ ಮೂರನೇ ತರಗತಿ ದಾಖಲಾಗಿ ವ್ಯಾಸಂಗ ಮಾಡಿದ್ದಾರೆ. ಸದ್ಯ ಈ ಶಾಲೆ ಮುಚ್ಚುವ ಹಂತಕ್ಕೆ ಬಂದು ತಲುಪಿದೆ.

    ಅಂದು ಬಿಎಸ್‍ವೈ ಓದಿದ್ದ ಈ ಶಾಲೆ ಇಂದು ದುಸ್ಥಿತಿಗೆ ತಲುಪಿದೆ. ಒಂದು ಕಡೆ ಕಟ್ಟಡ ಸರಿಯಾದ ನಿರ್ವಹಣೆ ಇಲ್ಲದೆ ಶಾಲೆ ಶಿಥಿಲವಾಗಿದ್ದರೆ, ಮತ್ತೊಂದು ಕಡೆ ಶಾಲೆಗೆ ಓದಲು ಮಕ್ಕಳಿಲ್ಲದ ಪರಿಸ್ಥಿತಿ ಎದುರಾಗಿದೆ. ಸದ್ಯ ಈ ಶಾಲೆಯಲ್ಲಿ ಕೇವಲ 8 ಜನ ಮಕ್ಕಳಿದ್ದು, 4 ಜನ ಶಿಕ್ಷಕರಿದ್ದಾರೆ. ಈ ಹಿಂದೆ 800 ರಿಂದ 900 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದರು. ಆದರೆ ಇದೀಗ ಬೆರಳೆಣಿಕೆಯಷ್ಟು ಮಕ್ಕಳು ಓದುತ್ತಿದ್ದಾರೆ.

    ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏಕೆ ಕಡಿಮೆಯಾಗಿದೆ ಎಂದು ಕೇಳಿದರೆ, ಸದ್ಯ ಈ ಶಾಲೆ ಇರುವ ಪ್ರದೇಶ ವಾಣಿಜ್ಯ ವಹಿವಾಟು ನಡೆಯುವ ಕೇಂದ್ರವಾಗಿದೆ. ಹೀಗಾಗಿ ಇಲ್ಲಿಗೆ ಮಕ್ಕಳು ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಶಾಲೆಗೆ ಹೆಚ್ಚು ಮಕ್ಕಳು ಬರುವಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ.

    ಶಾಲೆಯ ಅಭಿವೃದ್ಧಿಯ ಬಗ್ಗೆ ಕೇಳಿದರೆ, ಹೀಗಾಗಲೇ ನಾವು 6 ಲಕ್ಷ ರೂಪಾಯಿಯನ್ನು ಶಾಲೆಯ ಅಭಿವೃದ್ಧಿಗೆ ನೀಡಿದ್ದು, ನಿರ್ಮಿತಿ ಕೇಂದ್ರದ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಶಾಲೆಯ ಕಟ್ಟಡವನ್ನು ದುರಸ್ಥಿಗೊಳಿಸಿ, ಹೆಚ್ಚು ಮಕ್ಕಳು ಈ ಶಾಲೆ ಕಡೆ ಬರುವಂತಹ ವಾತಾವರಣವನ್ನು ಸೃಷ್ಟಿ ಮಾಡುತ್ತೇವೆ ಎನ್ನುತ್ತಾರೆ. ಸಿಎಂ ಯಡಿಯೂರಪ್ಪ ನವರು ಓದಿದ ಈ ಶಾಲೆ ಶತಮಾನದ ಶಾಲೆಯಾಗಿದೆ. ಆದರೆ ಶತಮಾನದಲ್ಲಿ ಇದ್ದ ಘನತೆ ಮಾತ್ರ ಈಗ ಶಾಲೆಗೆ ಇಲ್ಲ.

  • ಸೆಪ್ಟೆಂಬರ್‌ನಲ್ಲಿ  ಶುರುವಾಗುತ್ತಾ ಶಾಲೆ? ಈ ಬಾರಿಯ ಶೈಕ್ಷಣಿಕ ವರ್ಷಕ್ಕೆ ಸರ್ಕಾರದ ಪ್ಲಾನ್ ಏನು?

    ಸೆಪ್ಟೆಂಬರ್‌ನಲ್ಲಿ ಶುರುವಾಗುತ್ತಾ ಶಾಲೆ? ಈ ಬಾರಿಯ ಶೈಕ್ಷಣಿಕ ವರ್ಷಕ್ಕೆ ಸರ್ಕಾರದ ಪ್ಲಾನ್ ಏನು?

    – ಶನಿವಾರ ಫುಲ್ ಡೇ ನಡೆಯುತ್ತಾ ಕ್ಲಾಸ್

    ಬೆಂಗಳೂರು: ಕೊರೊನಾ ಸೋಂಕಿನ ಜೊತೆ ಜೊತೆಗೆ ಬದುಕುವ ಸಿದ್ಧತೆಗಳ ನಡುವೆಯೇ ಅನ್‍ಲಾಕ್ 4.0 ನಲ್ಲಿ ಶಾಲೆ-ಕಾಲೇಜು ಓಪನ್ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ. ದೇಶದಲ್ಲಿ ಮೂರನೇ ಹಂತದ ಅನ್‍ಲಾಕ್ ನಿಯಮಗಳ ಅಂತ್ಯದಲ್ಲಿದ್ದು, ಸೆಪ್ಟೆಂಬರ್ 1 ರಿಂದ 4ನೇ ಹಂತದ ಅನ್‍ಲಾಕ್ ಮಾರ್ಗಸೂಚಿಗಳು ಜಾರಿಯಾಗಲಿದೆ. ಕೇಂದ್ರ ಸರ್ಕಾರ ಈ ಬಾರಿ ಯಾವುದಕ್ಕೆಲ್ಲ ವಿನಾಯಿತಿ ನೀಡಲಿದೆ ಎಂಬ ಲೆಕ್ಕಾಚಾರವೂ ಆರಂಭವಾಗಿದೆ. ಇದರ ನಡುವೆಯೇ ಶಾಲೆ ಆರಂಭಿಸಲು ಶೈಕ್ಷಣಿಕ ವರ್ಷದ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ.

    ಅನ್‍ಲಾಕ್ 4.0ನಲ್ಲಿ ಹಂತ ಹಂತವಾಗಿ ಶಾಲೆ ಕಾಲೇಜು ತೆರೆಯುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 1 ರಿಂದ ಪದವಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ಆರಂಭವಾಗಲಿದೆ. ಅಕ್ಟೋಬರ್ 1 ರಿಂದ ಪದವಿ ಕಾಲೇಜುಗಳು ಓಪನ್ ಆಗಲಿದೆ. ಇದರಂತೆ ಪದವಿ, ಪಿಯು, ಹೈಸ್ಕೂಲ್ ಬಳಿಕ ಪ್ರಾಥಮಿಕ ಶಾಲೆ ತೆರೆಯುವ ಚಿಂತನೆ ಮಾಡಲಾಗಿದೆ.

    ಸಾಮಾನ್ಯ ವರ್ಷಗಳಲ್ಲಿ ಈ ವೇಳೆಗೆ ಶಾಲೆಗಳು ವರ್ಷದ ಅರ್ಧ ಅವಧಿಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಈ ಬಾರಿ ಕಡಿಮೆ ಅವಧಿಯ ಶೈಕ್ಷಣಿಕ ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಹೊಸ ಯೋಜನೆಯನ್ನು ಸಿದ್ಧಪಡಿಸಿದೆ. ಈಗಾಗಲೇ 4-5 ತಿಂಗಳು ಶಾಲೆ ಆರಂಭ ತಡವಾಗಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಪಠ್ಯ ಬೋಧನೆ ಅಸಾಧ್ಯವಾಗಿದ್ದು, ಒಟ್ಟಾರೆ ಪಠ್ಯದಲ್ಲಿ ಶೇ.30ರಷ್ಟು ಕಡಿತ ಮಾಡಿ ಮಕ್ಕಳಿಗೆ ಅತ್ಯಗತ್ಯವಾದ ಪಠ್ಯ ಮಾತ್ರ ಉಳಿಸಿಕೊಳ್ಳಲು ಚಿಂತನೆ ಮಾಡಲಾಗಿದೆ. ಪಠ್ಯ ಕಡಿತ ಸಮಿತಿ ವರದಿ ಬಳಿಕ ಅಂತಿಮ ರೂಪುರೇಷೆ ಲಭಿಸಲಿದೆ.

    ಉಳಿದಂತೆ ಶೈಕ್ಷಣಿಕ ವರ್ಷದ ಅವಧಿ ಕಡಿಯಾದ ಹಿನ್ನೆಲೆಯಲ್ಲಿ ಕಳೆದು ಹೋದ ಅವಧಿ ಸರಿದೂಗಿಸಲು ಶನಿವಾರ ಫುಲ್ ಕ್ಲಾಸ್ ಮಾಡುವ ಚಿಂತನೆ ಇದೆ. ಈ ಹೆಚ್ಚುವರಿ ಅವಧಿಯಲ್ಲಿ ನಿಗದಿತ ಪಠ್ಯ ಮುಗಿಸುವ ಯೋಜನೆ ಮಾಡಲಾಗಿದೆ. ಇದರೊಂದಿಗೆ ಅನೇಕ ಮಹಾ ಪುರುಷರ ಜಯಂತಿಗೆ ನೀಡಲಾಗುವ ರಜೆ ರದ್ದು ಮಾಡಿ ಈ ಸಮಯವನ್ನು ಬೋಧನೆಗೆ ಬಳಸುವ ಪ್ಲಾನ್ ಮಾಡಲಾಗಿದೆ.

    ಶಾಲೆಗಳು ನಿಗದಿಯಂತೆ ನಡೆದಿದ್ದರೆ ಅನೇಕ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಈ ಎಲ್ಲಾ ಪರೀಕ್ಷೆ ಬದಲು ಮಿತವಾದ ಪರೀಕ್ಷೆ ನಡೆಸಲು ಚಿಂತಿಸಲಾಗಿದೆ. ಕಿರುಪರೀಕ್ಷೆ, ಮಧ್ಯ ವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಕೈಬಿಟ್ಟು ಮಿತವಾದ ಪರೀಕ್ಷಾ ಪದ್ಧತಿ ಆಳವಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಶಿಕ್ಷಣ ಇಲಾಖೆ ಮೂಲಗಳಿಂದ ಮಾಹಿತಿ ಲಭಿಸಿದೆ.

  • ಪಠ್ಯ ಕಡಿತ ಅಂತಿಮವಾಗಿಲ್ಲ, ಗೊಂದಲ ಬೇಡ: ಸುರೇಶ್ ಕುಮಾರ್

    ಪಠ್ಯ ಕಡಿತ ಅಂತಿಮವಾಗಿಲ್ಲ, ಗೊಂದಲ ಬೇಡ: ಸುರೇಶ್ ಕುಮಾರ್

    ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಒಂದರಿಂದ ಹತ್ತನೇ ತರಗತಿ ವರೆಗೆ ಎಲ್ಲ ವಿಷಯಗಳ ವೈಜ್ಞಾನಿಕ ಪಠ್ಯ ಕಡಿತಕ್ಕೆ ಮುಂದಾಗಿದ್ದು, ಇನ್ನೂ ಶೈಕ್ಷಣಿಕ ವರ್ಷದ ಅವಧಿ ನಿಗದಿಯಾಗದ ಹಿನ್ನೆಲೆಯಲ್ಲಿ ಪಠ್ಯಾಂಶಗಳನ್ನು ಅಂತಿಮಗೊಳಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗದಿರುವುದರಿಂದ ನಮಗೆ ಎಷ್ಟು ದಿನಗಳು ದೊರೆಯುತ್ತವೆಂಬುದು ಇನ್ನೂ ಅಸ್ಪಷ್ಟವಾಗಿದೆ. ಹೀಗಾಗಿ ಪಠ್ಯಕ್ರಮವನ್ನು ಅಂತಿಮಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಲಭ್ಯ ಅವಧಿಯ ಆಧಾರದ ಮೇಲೆ ಮಾಡಲಾಗುವ ಪಠ್ಯ ಕಡಿತವು ವೈಜ್ಞಾನಿಕವಾಗಿರಲಿದ್ದು, ಯಾವುದೇ ಪಠ್ಯವನ್ನು ಅನಗತ್ಯವಾಗಿ ಕಡಿತ ಮಾಡುವುದಿಲ್ಲ. ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಸರ್ಕಾರದಿಂದ ಪಠ್ಯ ಪುಸ್ತಕಗಳ ಕೇಸರೀಕರಣ: ಸಿದ್ದರಾಮಯ್ಯ

    ಈ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಾಗಬಹುದಾದ ಬೋಧನಾ ಅವಧಿ, ಸಮೂಹ ಮಾಧ್ಯಮಗಳು ಅಥವಾ ತಂತ್ರಜ್ಞಾನಾಧಾರಿತ ಬೋಧನೆಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬಹುದಾದ ಪಠ್ಯಗಳನ್ನು ಗುರುತಿಸಿ ಇಲಾಖೆಯ ತಂತ್ರಜ್ಞಾನಾಧಾರಿತ ಕಲಿಕಾ ನೀತಿಗನುಗುಣವಾಗಿ ಪಠ್ಯ ಬೋಧನೆಯ ಮಾದರಿಗಳನ್ನು ರಚನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಎಲ್ಲ ಕ್ರಮಗಳು ಅಂತಿಮಗೊಳ್ಳುವ ಪೂರ್ವದಲ್ಲಿಯೇ ಅಚಾತುರ್ಯದಿಂದ ಇಲಾಖೆಯ ಜಾಲತಾಣದಲ್ಲಿ ಅನುಮೋದಿತವಾಗದ ಪಠ್ಯಾಂಶಗಳನ್ನು ಪ್ರಕಟಿಸಲಾಗಿದೆ. ಇದನ್ನು ಕೂಡಲೇ ಹಿಂಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇತಿಹಾಸಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ, ದಾಖಲೆಯ, ಸಂಗತಿಯ ಐತಿಹ್ಯವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆಯೇ ಹೊರತು ಕೆಡವುವ ಕೆಲಸ ಮಾಡುವುದಿಲ್ಲ. ಅನವಶ್ಯಕ ರಾಜಕೀಯ ಗೊಂದಲಗಳಿಗೆ ಅವಕಾಶ ಕಲ್ಪಿಸಬೇಕಿಲ್ಲ ಎಂದು ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.

  • ಇತಿಹಾಸ ಸೃಷ್ಟಿಸಿ ದೇಶಕ್ಕೆ ಮಾದರಿಯಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಸುರೇಶ್ ಕುಮಾರ್

    ಇತಿಹಾಸ ಸೃಷ್ಟಿಸಿ ದೇಶಕ್ಕೆ ಮಾದರಿಯಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಸುರೇಶ್ ಕುಮಾರ್

    ಬೆಂಗಳೂರು: ಜೂನ್ 25ರಿಂದ ಜುಲೈ 3ರವರೆಗೆ ನಡೆದ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ವಿದ್ಯಾರ್ಥಿಗಳು, ಪೋಷಕರು, ವಿವಿಧ ಇಲಾಖೆಗಳು ಮತ್ತು ಜಿಲ್ಲಾಡಳಿತಗಳ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಆರನೇ ದಿನದ ಪರೀಕ್ಷೆಯ ನಂತರ ಶುಕ್ರವಾರ ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆರು ದಿನಗಳ ಅವಧಿಯ ಪರೀಕ್ಷೆಗಳಲ್ಲಿ ಪ್ರತಿದಿನ ಸರಾಸರಿ 7.5 ಲಕ್ಷ ವಿದ್ಯಾಥಿಗಳು ಯಾವುದೇ ಸಮಸ್ಯೆಯಿಲ್ಲದ ರೀತಿಯಲ್ಲಿ ಪರೀಕ್ಷೆಗಳನ್ನು ಧೈರ್ಯವಾಗಿ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಎದುರಿಸಿದ್ದಾರೆ ಎಂದು ಹೇಳಿದರು.

    ಈಗಾಗಲೇ ಹೇಳಿದಂತೆ ನಮಗೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ನಡೆಸುವುದು ಬಹುದೊಡ್ಡ ಸವಾಲಾಗಿತ್ತು. ಅದು ನಮ್ಮ ಪ್ರತಿಷ್ಠೆಯ ಪ್ರಶ್ನೆಯಾಗದೇ ವಿದ್ಯಾರ್ಥಿಗಳ ಹಿತ ಹಾಗೂ ಸುರಕ್ಷತೆಯೇ ಮುಖ್ಯವಾಗಿತ್ತು. ಆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಾವು ಸರ್ಕಾರದ ಪ್ರಯತ್ನವಾಗಿ ಬಹು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಇದು ನನಗೆ ನಿಜಕ್ಕೂ ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದು ಅವರು ಹೇಳಿದರು.

    ಕರ್ನಾಟಕ ಸರ್ಕಾರ ಈ ಪರೀಕ್ಷೆಗಳನ್ನು ನಡೆಸುವ ಮೂಲಕ ಒಂದು ಇತಿಹಾಸವನ್ನು ಸೃಷ್ಟಿಸಿದೆ. ನ್ಯಾಯಾಲಯಗಳಲ್ಲಿ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು. ಆಗಲೇ ನಾನು ರಾಜ್ಯಾದ್ಯಂತ ಕೋವಿಡ್ ಸಮಯವೆಂದೂ ಲೆಕ್ಕಿಸದೇ ಸಂಚರಿಸಲು ಶುರು ಮಾಡಿದೆ. ನಾನು ಭೇಟಿ ಮಾಡಿದ ಅಸಂಖ್ಯ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕೆ ಪರೀಕ್ಷೆ ಬೇಕು ಎಂದು ನನ್ನನ್ನು ಆಗ್ರಹಿಸಿದರು. ನಮ್ಮ ಜಿಲ್ಲೆಗಳ ಅಧಿಕಾರಿಗಳು ಎಂತಹ ಸಂದರ್ಭದಲ್ಲಿಯೂ ತಾವು ದೃತಿಗೆಡದೇ ಈ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಆತ್ಮವಿಶ್ವಾಸವನ್ನು ತೋರಿದರು. ಪುನಃ ನಾನು ಬೆಂಗಳೂರಿಗೆ ವಾಪಾಸು ಬಂದು ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡುವ ನಿಟ್ಟಿನಲ್ಲಿ ಭರವಸೆಯ ಉತ್ತರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ನಮ್ಮ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದೆ ಎಂದು ಸುರೇಶ್ ಕುಮಾರ್ ಪರೀಕ್ಷೆಗೆ ಸಂಬಂಧಿಸಿದ ವಿವಿಧ ಮಜಲುಗಳನ್ನು ವಿವರಿಸಿದರು.

    ಆರೋಗ್ಯ ಇಲಾಖೆ ಕಟ್ಟುನಿಟ್ಟಾದ ಮಾರ್ಗದರ್ಶಿ ಸೂತ್ರಗಳನ್ನು ನಮಗಾಗಿ ರಚಿಸಿಕೊಟ್ಟಿತು. ಆ ಮಾರ್ಗದರ್ಶಿ ಸೂತ್ರಗಳ ಮೇಲೆ ನ್ಯಾಯಾಲಯವು ಭರವಸೆಯನ್ನಿಟ್ಟು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿ ಪರೀಕ್ಷೆಗಳನ್ನು ನಡೆಸಲು ಅವಕಾಶ ಕೊಟ್ಟಿತು. ಅದೇ ರೀತಿ ಮುಂದಿನ ದಿನಗಳಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲೂ ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಯಿತು. ಅಲ್ಲಿಯೂ ಸಹ ಸೂಕ್ತ ಆಕ್ಷೇಪಣಾ ಹೇಳಿಕೆಗಳನ್ನು ಸಲ್ಲಿಸಿದ ಬಳಿಕ ಸರ್ವೋಚ್ಛ ನ್ಯಾಯಾಲಯ ಪರೀಕ್ಷೆಗಳನ್ನು ನಡೆಸಲು ತನ್ನ ಹಸಿರು ನಿಶಾನೆ ತೋರಿಸಿತು ಎಂದು ಅವರು ಹೇಳಿದರು.

    ನಂತರ ನಮ್ಮಲ್ಲಿ ಘಟಿಸಿದ್ದು ಇತಿಹಾಸ. ಪ್ರತಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯುವ ಸುರಕ್ಷಿತ ವಾತಾವರಣವನ್ನು ನಾವು ಕಲ್ಪಿಸಬೇಕಾಗಿತ್ತು. ಪ್ರತಿ ಪೋಷಕರಿಗೆ ತಮ್ಮ ಮಗು ತಮ್ಮ ಮನೆಯಲ್ಲಿನ ಸುರಕ್ಷಿತ ವಾತಾವರಣದಷ್ಟೇ ಪರೀಕ್ಷಾ ಕೊಠಡಿ ಸುರಕ್ಷಿತವಾಗಿರುತ್ತದೆ ಎಂಬ ಭರವಸೆ ನೀಡಬೇಕಾಗಿತ್ತು. ನಮ್ಮ ಅಧಿಕಾರಿಗಳು ಪ್ರತಿ ಸೂಕ್ಷ್ಮ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಒಬ್ಬ ವಿದ್ಯಾರ್ಥಿಗೆ ತೊಂದರೆಯಾಗದ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಿತ್ತು. ನನ್ನ ಭರವಸೆಯನ್ನು ಅವರಾರು ಹುಸಿಗೊಳಿಸಲಿಲ್ಲ ಎಂದು ಸಚಿವರು ತಿಳಿಸಿದರು.

    ಪ್ರತಿ ಪರೀಕ್ಷೆಗೆ ಸರಾಸರಿ ಶೇ. 98 ವಿದ್ಯಾರ್ಥಿಗಳು ಹಾಜರಾಗಿ ವ್ಯವಸ್ಥೆಯ ಮೇಲಿನ ಭರವಸೆಯನ್ನು ತೋರಿದ್ದಾರೆ. ನೆರೆ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ, ಮಹಾರಾಷ್ಟ್ರಗಳು ಸೇರಿದಂತೆ ಬಹುಪಾಲು ರಾಜ್ಯ ಸರ್ಕಾರಗಳು ತಮ್ಮ ಮಂಡಳಿಗಳ ಪರೀಕ್ಷೆಗಳನ್ನು ಮಾಡದೇ ಹಿಂದೆ ಸರಿದವು. ನಾಡಿನ ಮಕ್ಕಳ ಹಿತ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರ ಇಚ್ಛೆಯಂತೆ ನಾವು ಪರೀಕ್ಷೆಗಳನ್ನು ನಡೆಸಿದ್ದೇವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕೋವಿಡ್ ಕಾರಣಕ್ಕೆ ನಾವು ದೂರದರ್ಶನದ ಚಂದನ ವಾಹಿನಿಯಲ್ಲಿ ನಡೆಸಿದ ಪುನರ್‌ಮನನ ಕಾರ್ಯಕ್ರಮಗಳು ಆ ವಾಹಿನಿಯ ಸಾರ್ವಕಾಲೀಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದವು. ಲಕ್ಷಾಂತರ ವಿದ್ಯಾರ್ಥಿಗಳು ಆ ಪ್ರಯತ್ನದ ಫಲವನ್ನು ಪಡೆದವು. ಅದೇ ರೀತಿ ಆಕಾಶವಾಣಿಯಲ್ಲಿ ಪರೀಕ್ಷಾ ಪೂರ್ವ ಸಿದ್ಧತಾ ತರಗತಿಗಳು ಬಿತ್ತರಗೊಂಡವು. ನಮ್ಮ ಮಕ್ಕಳವಾಣಿ ಯೂ-ಟ್ಯೂಬ್ ಚಾನೆಲ್‍ನಲ್ಲೂ ಸಹ ಪುನರ್‌ಮನನ ತರಗತಿಗಳು ಬಿತ್ತರಗೊಂಡು ಜನಪ್ರಿಯತೆ ಗಳಿಸಿದವು ಎಂದು ಅವರು ತಿಳಿಸಿದರು.

    ಆರೋಗ್ಯ ಇಲಾಖೆ ನಿಗದಿಪಡಿಸಿದ ಮಾರ್ಗದರ್ಶಿ ಸೂತ್ರಗಳನ್ನು ಯಾವುದೇ ಒಂದು ಸಣ್ಣ ಲೋಪವಾಗದಂತೆ ಅಳವಡಿಸಿಕೊಂಡು ನಾವು  ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಕೋವಿಡ್ ಸೋಂಕಿತ 33 ವಿದ್ಯಾರ್ಥಿಗಳಿಗೆ ಪೂರ್ವಭಾವಿಯಾಗಿ ಪರೀಕ್ಷೆಯನ್ನು ನಿರಾಕರಿಸಿ ಅವರಿಗೆ ಮುಂದಿನ ಪೂರಕ ಪರೀಕ್ಷೆಗಳಲ್ಲಿ ಅವಕಾಶಗಳನ್ನು ಕಲ್ಪಿಸುವವರಿದ್ದೇವೆ ಎಂದು ತಿಳಿಸಿದರು.

    ಕೃತಜ್ಞತೆ:
    ಬಹು ವಿಶೇಷವೆಂದರೆ ಸುಮಾರು 7.5 ಲಕ್ಷ ವಿದ್ಯಾರ್ಥಿಗಳು ಪ್ರತಿದಿನ ಪರೀಕ್ಷೆಗಳನ್ನು ಬರೆದಿದ್ದಾರೆ. ಪರೀಕ್ಷೆಯ ಯಶಸ್ಸಿಗೆ ಸಹಕರಿಸಿ ಸಲಹೆ ಸೂಚನೆ ನೀಡಿ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಸಂಪುಟದ ಸಹೋದ್ಯೋಗಿಗಳು, ರಾಜ್ಯದ ವಿಧಾನಸಭೆ, ವಿಧಾನಪರಿಷತ್‍ನ ಎಲ್ಲ ಸದಸ್ಯರು, ವಿರೋಧ ಪಕ್ಷಕದ ನಾಯಕರು, ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಜಿಲ್ಲೆಗಳ ಡಿಸಿ, ಎಸ್‌ಪಿ, ಸಿಇಒ, ಡಿಎಚ್‍ಒ, ಖಜಾನಾಧಿಕಾರಿಗಳು ಹಾಗೆಯೇ ಆಯಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಪ್ರತ್ಯಕ್ಷ ಹಾಗೂ ಪರೀಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಚಿವ ಸುರೇಶ್ ಕುಮಾರ್ ಕೃತಜ್ಞತೆಗಳನ್ನು ಸಲ್ಲಿಸಿದರು.

    ಎಸ್‍ಒಪಿ ಕಟ್ಟುನಿಟ್ಟಿನ ಪಾಲನೆ:
    ಎಸ್‍ಒಪಿ ಪ್ರಕಾರ ಕೋವಿಡ್ ಸೋಂಕು ಇರುವ ಮನೆಗಳ ಮಕ್ಕಳಿಗೆ ಪರೀಕ್ಷೆಗೆ ಅವಕಾಶವಿರಲಿಲ್ಲ. ಅದರಂತೆ ಕೊನೆಯ ದಿನವಾದ ಇಂದು ರಾಜ್ಯದ ಹಿರಿಯ ಅಧಿಕಾರಿಯೊಬ್ಬರ ಮನೆಯಲ್ಲಿ ಒಬ್ಬರಿಗೆ ಸೋಂಕು ತಗಲಿದ್ದರಿಂದ ಇಂದು ಅವರ ಮನೆಯ ವಿದ್ಯಾರ್ಥಿಗೆ ಪರೀಕ್ಷೆ ನಿರಾಕರಿಸಲಾಯಿತು. ಈ ವಿಚಾರದಲ್ಲಿ ಕಳೆದ ಆರು ದಿನಗಳಲ್ಲಿಯೂ ಯಾವುದೇ ರೀತಿಯ ವ್ಯತ್ಯಯವಾಗದಂತೆ ನ್ಯಾಯಾಲಯಕ್ಕೆ ನೀಡಿದ ವಾಗ್ದಾನದಂತೆ ಕಟ್ಟುನಿಟ್ಟಾಗಿ ನಡೆದುಕೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಎಂತಹ ಸಂಕಷ್ಟದ ಸಂದರ್ಭವನ್ನೂ ಸುಲಭವಾಗಿ ದಾಟಬಹುದು ಮತ್ತು ಏನನ್ನಾದರೂ ಸಾಧಿಸಬಹುದೆನ್ನುವುದಕ್ಕೆ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾದರಿಯಾಗಿ ನಿಂತಿದೆ ಎಂದು ಅವರು ಹೇಳಿದರು.

    ಪರೀಕ್ಷೆ ಆರಂಭವಾದ ಮೇಲೆ ತಾವು ಹಲವಾರು ಜಿಲ್ಲೆಗಳ 80ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಸಹ ನ್ಯಾಯಾಲಯಕ್ಕೆ ನೀಡಿದ ಎಸ್‍ಒಪಿಯನ್ನು ಯಾವುದೇ ಕಾರಣಕ್ಕೂ ಉಲ್ಲಂಘನೆಯಾಗಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ಮತ್ತು ಹೊರಗೂ ಸಹ ಸಾಮಾಜಿಕ ಅಂತರವನ್ನು ಕಾಪಾಡಿ ಅತ್ಯಂತ ಸುರಕ್ಷಿತ ವಾತಾವರಣವನ್ನು ಕಾಯ್ದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

    ಈ ಪರೀಕ್ಷೆಯ ಯಶಸ್ಸು ಈ ಸಂದರ್ಭದಲ್ಲೂ ಧೈರ್ಯವಾಗಿ ಬಂದು ಪರೀಕ್ಷೆ ಬರೆದ ಮಕ್ಕಳು ಮತ್ತು ನಮ್ಮ ಮೇಲೆ ಭರವಸೆ ಇಟ್ಟು ಮಕ್ಕಳನ್ನು ಆಶೀರ್ವದಿಸಿ ಕಳಿಸಿದ ಪೋಷಕರಿಗೆ ಸಲ್ಲಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಡಾಕ್ಯೂಮೆಂಟರಿ ಪ್ರದರ್ಶನ:
    ಪತ್ರಿಕಾಗೋಷ್ಠಿಗೂ ಮೊದಲು ಪರೀಕ್ಷೆಯ ಕುರಿತಂತೆ ತಯಾರಿಸಲಾದ ವಿವಿಧ ಘಟನಾವಳಿಗಳ ಡಾಕ್ಯೂಮೆಂಟರಿಯನ್ನು ಪ್ರಸ್ತುತ ಪಡಿಸಲಾಯಿತು. ಈ ಪರೀಕ್ಷೆಗೆ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶ್ಲಾಘನೆ ವ್ಯಕ್ತಪಡಿಸಿದರು. ಹಲವಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳು ಹಾಗೂ ತಾವು ಖುಷಿಯಿಂದ ಪರೀಕ್ಷೆಯಲ್ಲಿ ಪಾಲ್ಗೊಂಡ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

    ಡಾಕ್ಯೂಮೆಂಟರಿಯಲ್ಲಿ ಸಿಎಂ ಬಿಎಸ್ ವೈ ಅವರು ವ್ಯಕ್ತಪಡಿಸಿದ ಅಭಿಪ್ರಾಯ ಇಂತಿದೆ:
    ಇಡೀ ದೇಶ ಹಿಂದಿರುಗಿ ನೋಡುವ ರೀತಿಯಲ್ಲಿ ಶಿಕ್ಷಣ ಇಲಾಖೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ನಡೆಸಿ ಸೈ ಎನಿಸಿಕೊಂಡಿದೆ. ಅತ್ಯಂತ ಸೂಕ್ಷ್ಮವಾದ ಸಾಮಾಜಿಕ ಸಂದರ್ಭದಲ್ಲಿ ಯಾವುದೇ ಸಣ್ಣ ಸಮಸ್ಯೆಗೂ ಅವಕಾಶ ನೀಡದೇ 8.5 ಲಕ್ಷ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಹಾಗೂ 6.5 ಲಕ್ಷ ಪಿಯುಸಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆಯನ್ನು ಬರೆಯುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ. ದೇಶದ ಇತಿಹಾಸ ಪುಟಗಳಲ್ಲಿ ಸೇರಿ ಹೋಗುವ ಇಂತಹುದೊಂದು ಕ್ರಾಂತಿಕಾರಕ ಕೆಲಸವನ್ನು ನಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂತ್ರಿ ಎಸ್. ಸುರೇಶ್ ಕುಮಾರ್ ಮಾಡಿ ತಮ್ಮ ವೈಯಕ್ತಿಕ ದಕ್ಷತೆ ತೋರಿಸಿದ್ದಾರೆ. ರಾಜ್ಯಾದ್ಯಂತ ಓಡಾಡಿ ಮಕ್ಕಳನ್ನು, ಪೋಷಕರನ್ನು ಅವರು ಹುರಿದುಂಬಿಸಿದ್ದಾರೆ. ಅಧಿಕಾರಿಗಳು ಜಾಗರೂಕವಾಗಿ ಕೆಲಸ ಮಾಡಲು ಪ್ರೇರೇಪಿಸಿದ್ದಾರೆ. ಸುರೇಶ್ ಕುಮಾರ್ ಅವರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.

    ಇಂದಿನ ಪರೀಕ್ಷೆಯ ಅಂಕಿ-ಅಂಶಗಳು ಈ ಕೆಳಕಂಡಂತಿದೆ: 
    ಏಳನೇ ದಿನವಾದ ಶುಕ್ರವಾರ ನಡೆದ ತೃತೀಯ ಭಾಷಾ ಪರೀಕ್ಷೆಗೆ ನೊಂದಾಯಿತ 7,76,251 ವಿದ್ಯಾರ್ಥಿಗಳ ಪೈಕಿ 7,61,506 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 98.10ರಷ್ಟು ಇಂದು ಹಾಜರಾತಿ ಇದೆ. 14,745 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. (ಕಳೆದ 2018-19ನೇ ಸಾಲಿಗೆ 7,72,071 ವಿದ್ಯಾರ್ಥಿಗಳ ಪೈಕಿ 7,62,538 ವಿದ್ಯಾರ್ಥಿಗಳು ಹಾಜರಾಗಿದ್ದು, 9533 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.76 ಹಾಜರಾತಿ ಇತ್ತು.)

    ಮೊದಲ ಬಾರಿಗೆ 7,43,477 ಶಾಲಾ ವಿದ್ಯಾರ್ಥಿಗಳು ಹಾಗೂ 20,857 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್‍ಮೆಂಟ್ ಪ್ರದೇಶಗಳ 3911 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 863 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಯಾವುದೇ ವಿದ್ಯಾರ್ಥಿಗಳು ಇರುವುದಿಲ್ಲ. ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1446 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 639 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 41 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 590 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12,535 ವಿದ್ಯಾರ್ಥಿಗಳು ಹಾಜರಾಗಿದ್ದರೆ, 109 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

    ಹೋಂ ಕ್ವಾರಂಟೈನಲ್ಲಿರುವ ಹಾಗೂ ಕೋವಿಡ್ ಪಾಸಿಟೀವ್ ಎಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯ್ತಿ ನೀಡಲಾಗಿದೆ. ಈ ಎಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ 3,212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ.

    ಪರೀಕ್ಷಾ ಕೇಂದ್ರಗಳಿಗೆ ಭೇಟಿ:
    ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಆನೇಕಲ್, ಅತ್ತಿಬೆಲೆ, ದೊಮ್ಮಸಂದ್ರ, ಚಂದಾಪುರ, ಜಿಗಣಿ, ಹೆಬ್ಬಗೋಡಿ 12 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಎಲ್ಲ ವ್ಯವಸ್ಥೆಗಳನ್ನು ಗಮನಿಸಿದ್ದೇನೆ. ಎಲ್ಲ ಕಡೆ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳು ನೆಮ್ಮದಿ ಮತ್ತು ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತಿದ್ದುದು ಕಂಡುಬಂತು.

    ಕೆಲ ಪ್ರಮುಖ ಸಂಗತಿಗಳು:
    1. ಗದಗದಲ್ಲಿ ಮಕ್ಕಳನ್ನು ಮನೆಗಳಿಂದ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಕರೆತರುತ್ತಿದ್ದ ಆಟೋ ಚಾಲಕರನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

    2. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾರ್ಗ ಮಧ್ಯೆ ಮರ ಬಿದ್ದು, ಸಂಚಾರಕ್ಕೆ ವ್ಯತ್ಯಯವಾಗಿತ್ತು. ಸುದ್ದಿ ತಿಳಿದ ಸಾಗರ ಬಿಇಒ ಮಕ್ಕಳನ್ನು ಕರೆತರಲು ತಕ್ಷಣವೇ ಸಾರಿಗೆ ವ್ಯವಸ್ಥೆ ಮಾಡಿದರು. ಹಾಗೆಯೇ ಆ ಮಾರ್ಗದ ಪರೀಕ್ಷಾ ಕೇಂದ್ರಗಳಿಗೆ ತಮ್ಮದೇ ವಾಹನದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಕಾಲದಲ್ಲಿ ತಲುಪಿಸಿದರು.

    ಒಟ್ಟಾರೆಯಾಗಿ ಇಂದು 2,879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಸ್ವಯಂ ಸೇವಕರು ಅತ್ಯಂತ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರು ವ್ಯವಸ್ಥೆ ಮೇಲೆ ಇಟ್ಟ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ ಎಂದ ಸಚಿವರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

     

  • ಕೊರೊನಾ ಮಧ್ಯೆ ನಾಳೆಯಿಂದ SSLC ಪರೀಕ್ಷೆ- ರಾಜ್ಯ ಸರ್ಕಾರದ ಕ್ರಮಗಳೇನು?

    ಕೊರೊನಾ ಮಧ್ಯೆ ನಾಳೆಯಿಂದ SSLC ಪರೀಕ್ಷೆ- ರಾಜ್ಯ ಸರ್ಕಾರದ ಕ್ರಮಗಳೇನು?

    – ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳ ಸಿದ್ಧತೆ

    ಬೆಂಗಳೂರು: ಕೊರೊನಾ ಭಯದ ಮಧ್ಯೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆತಂಕ ಶುರುವಾಗಿದೆ. ಯಾವುದೇ ಕಾರಣಕ್ಕೂ ಪರೀಕ್ಷೆ ಮುಂದೂಡಿಕೆ ಸಾಧ್ಯವಿಲ್ಲ ಅಂತ ಶಿಕ್ಷಣ ಇಲಾಖೆ ಹೇಳಿದೆ. ಜೊತೆಗೆ ಸಿದ್ಧತೆ ಕೂಡ ನಡೆಸಿದೆ.

    ರಾಜ್ಯದಲ್ಲಿ ಕೊರೊನಾ ಹೆಮ್ಮಾರಿ ಆರ್ಭಟದ ನಡುವೆಯೂ ನಿಗದಿಯಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಿಯೇ ತೀರಲು ಶಿಕ್ಷಣ ಇಲಾಖೆ ಪಣ ತೊಟ್ಟಿದೆ. ನಾಳೆಯಿಂದ ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಲಿದೆ. ಕೊರೊನಾ ಆತಂಕದ ನಡುವೆಯೇ 8.5 ಲಕ್ಷ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ 3 ಸಾವಿರ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.

    ಜೊತೆಗೆ ಪ್ರತಿ ದಿನ ಪರೀಕ್ಷೆ ಮುಗಿದ ಬಳಿಕ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲು ಖಡಕ್ ಆಗಿ ಸೂಚಿಸಲಾಗಿದೆ. 3,209 ಪರೀಕ್ಷಾ ಕೇಂದ್ರಗಳಲ್ಲಿ 5,755 ಆರೋಗ್ಯ ತಪಾಸಣೆ ಕೇಂದ್ರಗಳನ್ನ ತೆರೆಯಲಾಗಿದೆ. ಇಂದು ಮಲ್ಲೇಶ್ವರಂನ 13ನೇ ಕ್ರಾಸ್‍ನಲ್ಲಿರುವ ಸರ್ಕಾರಿ ಸ್ಕೂಲ್‍ನಲ್ಲಿ ಪರೀಕ್ಷಾ ಸಿದ್ಧತೆಯ ಅಣುಕು ಪ್ರದರ್ಶನವನ್ನು ಶಿಕ್ಷಣ ಇಲಾಖೆ ಏರ್ಪಡಿಸಿದೆ.

    ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಂದೂಡಿಕೆ ಇಲ್ಲ
    ಯಾವುದೇ ಕಾರಣಕ್ಕೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಂದೂಡಿಕೆ ಇಲ್ಲ ಅಂತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸರ್ಕಾರದ ಎಕ್ಸ್ ಪರ್ಟ್ ಕಮೀಟಿ ಸದಸ್ಯ ವೈದ್ಯರ ಜೊತೆ ಈ ಎಲ್ಲಾ ಆತಂಕಗಳ ಬಗ್ಗೆ ಚರ್ಚಿಸಲಾಗಿದೆ. ಅವರ ಮಾರ್ಗದರ್ಶನ ಮೇಲೆ ಎಲ್ಲಾ ಸುರಕ್ಷಿತಾ ಕ್ರಮಗಳೊಂದಿಗೆ ಪರೀಕ್ಷಾ ಸಿದ್ಧತೆ ನಡೆದಿದ್ದು, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಅಂತ ಹೇಳಿದ್ದಾರೆ.

    ರಾಜ್ಯ ಸರ್ಕಾರದ ಕ್ರಮಗಳೇನು?
    * ಪ್ರತಿ ವಿದ್ಯಾರ್ಥಿಗೆ 2 ಮಾಸ್ಕ್ ಕೊಡಲಾಗುವುದು
    * ಪರೀಕ್ಷಾ ಕೇಂದ್ರದಲ್ಲಿ ಪ್ರತಿನಿತ್ಯ ಥರ್ಮಲ್ ಸ್ಕ್ಯಾನಿಂಗ್
    * ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ
    * ಪರೀಕ್ಷೆ ಮುಗಿದ ಬಳಿಕ ಪ್ರತಿ ಕೊಠಡಿ ಸ್ಯಾನಿಟೈಸ್
    * ಶೌಚಾಲಯ ಶುಚಿತ್ವ ಕಾಪಾಡಲು ಅಗತ್ಯ ಕ್ರಮ
    * ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಸಿಬ್ಬಂದಿ ನೇಮಕ
    * 1 ಕೊಠಡಿಯಲ್ಲಿ 18 ವಿದ್ಯಾರ್ಥಿಗಳನ್ನು ಕೂರಿಸುವ ವ್ಯವಸ್ಥೆ
    * ಪ್ರತಿ ವಿದ್ಯಾರ್ಥಿ ನಡುವೆ ಮೂರೂವರೆ ಅಡಿ ಅಂತರ
    * ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಡೆಸ್ಕ್ ಗಳ ವ್ಯವಸ್ಥೆ
    * ಅನ್ಯ ಆರೋಗ್ಯ ಸಮಸ್ಯೆ ಇದ್ದರೆ ಪ್ರತ್ಯೇಕ ಕೊಠಡಿ ವ್ಯವಸ್ಥೆ
    * ಕಂಟೈನ್ಮೆಂಟ್ ಝೋನ್‍ನಲ್ಲಿ ಪರೀಕ್ಷಾ ಕೇಂದ್ರ ರದ್ದು
    * ಇಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ
    * ರೆಗ್ಯುಲರ್ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯಲು ಅವಕಾಶ

    ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ತಜ್ಞರು ಕೆಲವೊಂದು ಸಲಹೆಗಳನ್ನ ನೀಡಿದ್ದಾರೆ.
    * ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಅಂತರ ಪಾಲಿಸಬೇಕು
    * ಸ್ನೇಹಿತರ ಜೊತೆ ಗುಂಪು ಚರ್ಚೆಯಲ್ಲಿ ತೊಡಗಿಸಿಕೊಳ್ಳಬೇಡಿ
    * ಮಾಸ್ಕ್ ಧರಿಸಿಯೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು
    * ಮಾಸ್ಕ್ ಕಿರಿಕಿರಿಯಾದ್ರೆ ಆಗಾಗ ತೆಗೆದು ಸುಧಾರಿಸಿಕೊಳ್ಳಿ
    * ಪರೀಕ್ಷಾ ಕೇಂದ್ರಕ್ಕೆ ಬೇಗ ಬಂದು ಆರೋಗ್ಯ ತಪಾಸಣೆ ಮಾಡಿಸಿ
    * ವಿದ್ಯಾರ್ಥಿಗಳು ತಮ್ಮ ಮನೆಯಿಂದಲೇ ನೀರು ತೆಗೆದುಕೊಂಡು ಬನ್ನಿ
    * ಸಾಧ್ಯವಾದರೆ ಕೈಗಳಿಗೆ ಆಗಾಗ ಸ್ಯಾನಿಟೈಸರ್ ಹಾಕಿಕೊಳ್ಳಿ
    * ಪರೀಕ್ಷಾ ಕೇಂದ್ರದ ಬಳಿ ಹೊರಗಿನ ಪದಾರ್ಥ ತಿನ್ನಬೇಡಿ
    * ಪರೀಕ್ಷೆ ಮುಗಿದ ಬಳಿಕವೂ ಸಾಮಾಜಿಕ ಅಂತರ ಪಾಲಿಸಿ
    * ಪರೀಕ್ಷೆ ಕೇಂದ್ರಕ್ಕೆ ಬರುವಾಗ ಸಾರಿಗೆ ವ್ಯವಸ್ಥೆ ಬಗ್ಗೆ ಗಮನವಿರಲಿ
    * ಒಂದು ವೇಳೆ ಮನೆಯಲ್ಲಿ ಕ್ವಾರಂಟೈನಿಗಳಿದ್ದರೆ ಮಾಹಿತಿ ನೀಡಿ
    * ಪರೀಕ್ಷೆ ಬರೆಯದ ಪರಿಸ್ಥಿತಿ ಇದ್ದರೆ ಚಿಂತೆ ಬೇಡ
    * ಪೂರಕ ಪರೀಕ್ಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ
    * ಪರೀಕ್ಷಾ ಕೇಂದ್ರದಲ್ಲಿ ಅವ್ಯವಸ್ಥೆ ಇದ್ದರೆ ಮಾಹಿತಿ ನೀಡಿ

    ವಿಜಯಪುರದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಗೆ ಸೋಂಕು
    ಇದರ ಮಧ್ಯೆ ವಿಜಯಪುರ ಜಿಲ್ಲೆಯ ಖ್ವಾಜಾ ನಗರದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ಧೃಡವಾಗಿದೆ. ಈ ಹಿನ್ನೆಲೆ ಸೋಂಕಿತ ವಿದ್ಯಾರ್ಥಿನಿಗೆ ನಾಳೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಅವಕಾಶಕ್ಕೆ ನಿರಾಕರಿಸಲಾಗಿದೆ. ಮುಂದಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಪ್ರಥಮ ಪರೀಕ್ಷೆ ಎಂದು ಪರಿಗಣಿಸಿ ಯುವತಿಗೆ ಅವಕಾಶ ನೀಡಲಾಗುವುದು ಅಂತ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಹೇಳಿದ್ದಾರೆ.

  • ನನ್ನ ತಾಯಿ ಶಿಕ್ಷಕಿ, ಶಿಕ್ಷಣ ಇಲಾಖೆಯ ಋಣ ತೀರಿಸಲು ನಾ ಬಂದಿರುವೆ: ಸುರೇಶ್ ಕುಮಾರ್

    ನನ್ನ ತಾಯಿ ಶಿಕ್ಷಕಿ, ಶಿಕ್ಷಣ ಇಲಾಖೆಯ ಋಣ ತೀರಿಸಲು ನಾ ಬಂದಿರುವೆ: ಸುರೇಶ್ ಕುಮಾರ್

    – ಖಾಸಗಿ ಶಾಲೆಗಳ ಲಾಬಿಗೆ ನಾನು ಬಗ್ಗುವುದಿಲ್ಲ

    ಬಳ್ಳಾರಿ: ನನ್ನ ತಾಯಿಯ ಋಣ ತೀರಸಬೇಕಿದೆ. ಯಾಕೆಂದರೆ ಆಕೆ ಶಿಕ್ಷಕಿಯಾಗಿದ್ದಳು. ಆಕೆಯ ಋಣಭಾರದಿಂದ ಇಲ್ಲಿ ಕುಳಿತ್ತಿದ್ದೇನೆ. ಹೀಗಾಗಿ ಖಾಸಗಿ ಶಾಲೆಗಳ ಲಾಬಿಗೆ ಬಗ್ಗುವಂತಹ ಮನಸ್ಥಿತಿ ಇದೂವರೆಗೂ ನನಗೆ ಬಂದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿಂದು ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪೂರ್ವ ಸಿದ್ಧತೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಶಿಕ್ಷಣ ಇಲಾಖೆ ರಾಜ್ಯ ಸರ್ಕಾರ ಕೊಟ್ಟಿರುವುದು ಋಣವನ್ನು ತೀರಿಸೋಕೆ ಒಂದು ಅವಕಾಶ. ಯಾಕೆಂದರೆ ನನ್ನ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದು, ಆಕೆಯ ಋಣದಿಂದಲೇ ನಾನು ಇಲ್ಲಿ ಕುಳಿತುಕೊಳ್ಳುವ ಅರ್ಹತೆ ಹೊಂದಿರುವೆ ಎಂದರು.

    ನನಗೆ ಖಾಸಗಿ ಶಾಲೆಗಳ ಲಾಬಿಯಾಗಲಿ, ಶೂ ಲಾಬಿಯಾಗಲಿ, ಬುಕ್ ಲಾಬಿಯಾಗಲಿ ಹಾಗೂ ಬ್ಯಾಗ್ ಲಾಬಿಯಾಗಲೀ ಇನ್ನೂ ಯಾವುದೇ ಲಾಬಿಗೆ ಬಗ್ಗುವಂತಹ ಮನಸ್ಥಿತಿ ದೇವರ ದಯೆಯಿಂದ ಬಂದಿಲ್ಲ. ಈ ಲಾಕ್‍ಡೌನ್ ನಿಂದಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಂದೂಡಲಾಯಿತು. ಕೇಂದ್ರ ಗೃಹ ಸಚಿವಾಲಯ ಸಮ್ಮತಿ ನೀಡಿದ ಹಿನ್ನೆಲೆಯಲ್ಲಿ ಇದೀಗ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು.

    ಹೈಕೋರ್ಟಿನಲ್ಲಿ ಪಿಐಎಲ್ ಸಹ ಇತ್ಯರ್ಥ ಆಗಿದೆ. ಹೈಕೋರ್ಟಿಗೂ ಸಹ ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ಪರೀಕ್ಷೆಯಲ್ಲಿ ಮಕ್ಕಳ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ ನೀಡಲಾಗುತ್ತೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆಸಲು ನಿರ್ಧರಿಸಲಾಗಿದೆ. ಎರಡು ಡೆಸ್ಕ್‍ಗಳ ನಡುವೆ 3 ಅಡಿ ಅಂತರ ಕಾಯ್ದುಕೊಳ್ಳಲಾಗುವುದು. ಪ್ರತಿ ಮಗು ಮಾಸ್ಕ್ ಹಾಕಿಕೊಂಡು ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಲು ಈಗಾಗಲೇ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಪ್ರತಿ ಕೊಠಡಿಯಲ್ಲಿ 18-24 ಮಕ್ಕಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮಗುವಿಗೆ, ಪ್ರತಿ ದಿನ ಆರೋಗ್ಯ ತಪಾಸಣೆ ಮಾಡಲಾಗುವುದು. ಜ್ವರ, ಕೆಮ್ಮು-ನೆಗಡಿ ಇದ್ದ ಮಕ್ಕಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗುವುದು. ಪ್ರತಿ ಮಗುವಿಗೆ ಸ್ಯಾನಿಟೈಜರ್ ಮಾಡುವುದು ಕಡ್ಡಾಯ. ಮಗು ಕೊಠಡಿ ಪ್ರವೇಶ ಮಾಡುವಾಗಲೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳ ಲಾಗುವುದು. ಮಕ್ಕಳ ಜೊತೆಯಲ್ಲಿ ಪಾಲಕರು ಗುಂಪುಗುಂಪಾಗಿ ಬರದಂತೆ ಮನವಿ ಮಾಡಿದ್ದಾರೆ.