Tag: Department of Education

  • ಹಿಂದಿ ಭಾಷೆ ಬರುವ ಶಾಲಾ, ಕಾಲೇಜು ಮಕ್ಕಳಿಗಷ್ಟೇ ಪ್ರವಾಸ ಭಾಗ್ಯ- ಶಿಕ್ಷಣ ಇಲಾಖೆ ಆದೇಶ

    ಹಿಂದಿ ಭಾಷೆ ಬರುವ ಶಾಲಾ, ಕಾಲೇಜು ಮಕ್ಕಳಿಗಷ್ಟೇ ಪ್ರವಾಸ ಭಾಗ್ಯ- ಶಿಕ್ಷಣ ಇಲಾಖೆ ಆದೇಶ

    ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ `ಒಂದು ಭಾರತ ಶ್ರೇಷ್ಟ ಭಾರತ’ ಕಾರ್ಯಕ್ರಮದ ಅಡಿಯಲ್ಲಿ ಪ್ರೌಢ ಶಾಲೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಕರೆದೊಯ್ಯುವ ಯೋಜನೆ ರೂಪಿಸಲಾಗಿದೆ.

    ಆದ್ರೆ ಶಿಕ್ಷಣ ಇಲಾಖೆ ಹಿಂದಿ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಆದ್ಯತೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಮತ್ತೆ ವಿವಾದಕ್ಕೆ ಕಾರಣವಾಗಿದೆ, ಕನ್ನಡ ಪರ ಸಂಘಟನೆಗಳೂ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರ ಈ ಸೂಚನೆ ವಿಧಿಸದೇ ಇದ್ರೂ ಶಿಕ್ಷಣ ಇಲಾಖೆ ಈ ನಿರ್ಧಾರಕ್ಕೆ ಮುಂದಾಗಿರುವುದು ಇದೀಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಶರದ್ ಪವಾರ್ 

     

    ಈ ಸಂಬಂಧ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ, ಶಿಕ್ಷಣ ಇಲಾಖೆಯ ಹಿಂದಿ ಹೇರಿಕೆ ನೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 4 ದಿನ, 80 ಅಡಿ ಕೊಳವೆ ಬಾವಿಯಲ್ಲೇ ಸಿಲುಕಿದ್ದ ಹುಡುಗ – 104 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

    ಹಿಂದಿ ಭಾಷೆ ಬಂದವರಿಗಷ್ಟೇ ಅವಕಾಶ ಕೊಟ್ಟರೆ, ಕನ್ನಡ ವಿದ್ಯಾರ್ಥಿಗಳಿಗೆ ವಂಚಿಸಿದಂತಾಗುತ್ತದೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಸಾರ್ವಭೌಮ ಭಾಷೆ. ಹಿಂದಿ ಭಾಷೆ ತಿಳಿಯದ ಕನ್ನಡದ ವಿದ್ಯಾರ್ಥಿಗಳಿಗೂ ಪ್ರವಾಸದ ಅವಕಾಶ ಕೊಡಬೇಕು. ಭಾಷೆಯಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭೇದ ಭಾವ ಬಿತ್ತುವ ಶಿಕ್ಷಣ ಇಲಾಖೆ ಕ್ರಮ ಸರಿಯಲ್ಲ. ಕೂಡಲೇ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಇದು ಸರ್ಕಾರದ ಆದೇಶವಲ್ಲ. ರಾಜ್ಯ ಸರ್ಕಾರ ಇಂತಹ ಯಾವುದೇ ಆದೇಶ ಹೊರಡಿಸಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನ ಯಾರಿಗೂ ಸೂಚನೆ ನೀಡಿಲ್ಲ. ಇದು ಡಿಡಿಪಿಯು ಮಾಡಿರೋ ಲೋಪ. ಸರ್ಕಾರ ಯಾವುದೇ ಇಂತಹ ಆದೇಶ ಹೊರಡಿಸಲು ಸೂಚಿಸಿಲ್ಲ. ಇಂತಹ ಹೇಳಿಕೆ ಬಿಡುಗಡೆ ಮಾಡಿರೋ ಡಿಡಿಪಿಐ ವಿರುದ್ದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸದ್ಯ ರಾಜ್ಯದಲ್ಲಿ ಪಠ್ಯಪುಸ್ತಕ ವಿವಾದ ಈಗಷ್ಟೇ ತಣ್ಣಗಾಗುತ್ತಿದೆ. ಸಚಿವರು ಯಾವುದೇ ಲೋಪವಿದ್ದರೂ ತಿಳಿಸಿ ನಾವು ಸರಿಪಡಿಸುತ್ತೇವೆ ಎಂದ ಬಳಿಕ ವಿವಾದ ತಣ್ಣಗಾಗಿದೆ. ಈ ಬೆನ್ನಲ್ಲೇ ಮತ್ತೊಂದು ವಿವಾದ ಹುಟ್ಟಿಕೊಂಡಿರುವುದು ರಾಜ್ಯದ ಜನರ ನಿದ್ದೆಗೆಡಿಸಿದೆ.

    Live Tv

  • 6 ರಿಂದ 8ನೇ ತರಗತಿ ಆರಂಭಕ್ಕೆ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಇಲಾಖೆ

    6 ರಿಂದ 8ನೇ ತರಗತಿ ಆರಂಭಕ್ಕೆ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಇಲಾಖೆ

    ಬೆಂಗಳೂರು: 6ರಿಂದ 8ನೇ ತರಗತಿ ಆರಂಭವಾಗುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆ ಆಗುತ್ತಿರುವ ಬೆನ್ನಲ್ಲೇ, ಸೆಪ್ಟೆಂಬರ್ 6ನೇ ತಾರೀಖಿನಿಂದ 6 ರಿಂದ 8ನೇ ತರಗತಿ ಶುರು ಮಾಡಲು ಸರ್ಕಾರ ನಿರ್ಧರಿಸಿದೆ.

    ಭೌತಿಕವಾಗಿ ತರಗತಿಗಳನ್ನು ನಡೆಸಲು ಶಾಲಾ ಹಂತದಲ್ಲಿ ಕೊಠಡಿಗಳ ಲಭ್ಯತೆ, ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಂಖ್ಯೆಯನ್ನು ಆಧರಿಸಿ ಆರಂಭಿಸುವಂತೆ ಆದೇಶಿಸಲಾಗಿದೆ. 6 ರಿಂದ 8ನೇ ತರಗತಿಗಳು ವಿದ್ಯಾರ್ಥಿಗಳನ್ನು 15 ರಿಂದ 20 ಸಂಖ್ಯೆಯ ವಿದ್ಯಾರ್ಥಿಗಳ ತಂಡಗಳನ್ನಾಗಿ ಮಾಡಿಕೊಂಡು ಭೌತಿಕ ತರಗತಿಗಳನ್ನು ನಡೆಸಲು ತಿಳಿಸಿದೆ. 6 ರಿಂದ 7 ನೇ ತರಗತಿಯನ್ನ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ, 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 2ರಿಂದ 4:30 ಗಂಟೆ ತನಕ ಎರಡನೇ ಪಾಳಿಯಲ್ಲಿ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ.

    15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು. ಕೇರಳ ಗಡಿಭಾಗಕ್ಕೆ ಹೊಂದಿಕೊಂಡಿರುವ ತಾಲೂಕು ಹಾಗೂ ವಲಯ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಶಾಲೆ ಪ್ರಾರಂಭ ಮಾಡಬೇಕು. ಇದಕ್ಕಾಗಿ ಸಲಹಾತ್ಮಕ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದೆ. ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿ 2 ರಿಂದ 7ನೇ ಕ್ಲಾಸ್ ಮಕ್ಕಳಿಗೆ ಪರೀಕ್ಷೆ ನಡೆಸಿದ ಖಾಸಗಿ ಶಾಲೆ

  • ಭಿಕ್ಷೆ ಬೇಡುತ್ತಿದ್ದ ಕೈಗಳಿಗೆ ಪುಸ್ತಕ ನೀಡಿದ ಶಿಕ್ಷಣ ಇಲಾಖೆ

    ಭಿಕ್ಷೆ ಬೇಡುತ್ತಿದ್ದ ಕೈಗಳಿಗೆ ಪುಸ್ತಕ ನೀಡಿದ ಶಿಕ್ಷಣ ಇಲಾಖೆ

    ಕಾರವಾರ: ಕೊರೊನಾ ಲಾಕ್‍ಡೌನ್‍ನಿಂದಾಗಿ ಹಲವರ ಬದುಕು ಮೂರಾಬಟ್ಟೆಯಾಗಿದೆ. ಬಡವರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಶಾಲೆಯೂ ಬಂದ್ ಆಗಿದ್ದರಿಂದ ಒಂದು ಹೊತ್ತಿನ ಊಟಕ್ಕಾಗಿ ಮಕ್ಕಳನ್ನು ಭಿಕ್ಷಾಟನೆಗೆ ಬಿಟ್ಟ ಘಟನೆಗಳೂ ನಡೆದಿವೆ. ಇಂತಹ ಸನ್ನಿವೇಶದಲ್ಲಿ ಇದೀಗ ಇಂತಹ ಮಕ್ಕಳನ್ನು ರಕ್ಷಿಸಿ ಜುಲೈ 1ರ ಶೈಕ್ಷಣಿಕ ವರ್ಷದ ಪ್ರಾರಂಭದ ದಿನವಾದ ಇಂದು ಕಾರವಾರದಲ್ಲಿ ಭಿಕ್ಷೆ ಬೇಡುತಿದ್ದ ಕೈಗಳಿಗೆ ಶಿಕ್ಷಣ ಇಲಾಖೆ ಪುಸ್ತಕ ನೀಡಿದೆ.

    ಆರು ತಿಂಗಳ ಹಿಂದೆ ಭಿಕ್ಷೆ ಬೇಡುತ್ತಿದ್ದ 6 ಮಕ್ಕಳನ್ನು ಕಾರವಾರದ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದರು. ಇವರನ್ನು ಶಾಲೆಗೆ ದಾಖಲಿಸುವ ಮೂಲಕ ಶೈಕ್ಷಣಿಕ ವರ್ಷಾರಂಭ ವನ್ನು ವೈಶಿಷ್ಟವಾಗಿ ಪ್ರಾರಂಭಿಸಿದರು. ಇಂದು ಬಾಲಕಿಯರ ಬಾಲಮಂದಿರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮಕ್ಕಳಿಗೆ ಶಾಲೆಗೆ ಪ್ರವೇಶ ನೀಡಲಾಯಿತು. ನಗರದ ಶಾಸಕರ ಮಾದರಿ ಶಾಲೆಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರವೇಶ ಪ್ರಕ್ರೀಯೆ ನಡೆಸಿ ಮಕ್ಕಳಿಗೆ ಪಠ್ಯಪುಸ್ತಕ ನೀಡಿದರು.

    ಆರು ತಿಂಗಳ ಹಿಂದೆ ಮೂರು ಕುಟುಂಬದ ಆರು ಜನ ಮಕ್ಕಳು ಶಿರಸಿಯ ಗಣೇಶ ನಗರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ಆಗ ಕಾರವಾರದ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಅವರನ್ನು ರಕ್ಷಿಸಿ ಕಾರವಾರ ಬಾಲಕಿಯರ ಬಾಲಮಂದಿರಕ್ಕೆ ಸೇರ್ಪಡೆಗೊಳಿಸಿದ್ದರು. ಈ ಹಿಂದೆ ಕೂಡ ಅವರು ಇದೇ ವೃತ್ತಿ ಮಾಡುತ್ತಿದ್ದಾಗ ಪಾಲಕರಿಗೆ ತಿಳುವಳಿಕೆ ಹೇಳಿ ಎಚ್ಚರಿಸಲಾಗಿತ್ತು. ಮತ್ತೆ ಮಕ್ಕಳು ಮನೆ ಬಿಟ್ಟು ಅದೇ ಕೆಲಸ ಮುಂದುವರಿಸಿದ್ದರಿಂದ ಅವರಿಗೆ ರಕ್ಷಣೆ ನೀಡಲಾಗಿತ್ತು.

    ಬಾಲಮಂದಿರದಲ್ಲಿ ನಡೆದ ದಾಖಲಾತಿ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ, ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ, ಬಿಆರ್ ಸಿ ಸುರೇಶ್ ಗಾಂವಕರ್, ದೈಹಿಕ ಪರಿವೀಕ್ಷಕ ಗಂಗಾಧರ.ಟಿ.ತೋರ್ಕೆ, ಬಾಲಮಂದಿರ ಸುಪರ್ ವೈಸರ್ ಮಾಲತಿ ನಾಯ್ಕ, ಶಾಸಕರ ಮಾದರಿ ಶಾಲಾ ಮುಖ್ಯ ಶಿಕ್ಷಕಿ ಮಾಲಿನಿ ನಾಯ್ಕ ಉಪಸ್ಥಿತರಿದ್ದರು.

  • SSLC ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

    SSLC ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

    ಬೆಂಗಳೂರು: ಜುಲೈನಲ್ಲಿ ನಡೆಸಲು ಉದ್ದೇಶಿಸಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಂಬಂಧ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಎಸ್‍ಎಸ್‍ಎಲ್‍ಸಿ ಬೋರ್ಡ್ ಬಿಡುಗಡೆ ಮಾಡಿದೆ.

    ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಪರೀಕ್ಷಾ ವಿಧಾನವನ್ನ ಶಿಕ್ಷಣ ಇಲಾಖೆ ಬದಲಾವಣೆ ಮಾಡಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲು, ಪ್ರಶ್ನೆ ಪತ್ರಿಕೆ ವಿಧಾನ ತಿಳಿಯಲು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಎಸ್‍ಎಸ್‍ಎಲ್‍ಸಿ ಬೋರ್ಡ್ ಬಿಡುಗಡೆ ಮಾಡಿದೆ.

    ಮೊದಲ ಹಂತದಲ್ಲಿ ಸಮಾಜ, ವಿಜ್ಞಾನ, ಗಣಿತ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನ ರಿಲೀಸ್ ಮಾಡಲಾಗಿದೆ. ಬಹು ಆಯ್ಕೆ ಪ್ರಶ್ನೆ ಮಾದರಿಯಲ್ಲಿ ಪರೀಕ್ಷೆ ನಡೆಯಲಿದ್ದು, ಪ್ರತಿ ವಿಷಯಗಳಿಗೆ 40 ಅಂಕಗಳಿರುವಂತೆ 3 ಮಾದರಿ ಪ್ರಶ್ನೆ ಪತ್ರಿಕೆ ಇಲಾಖೆ ಬಿಡುಗಡೆ ಮಾಡಿದೆ. ಮಾದರಿ ಪ್ರಶ್ನೆ ಪತ್ರಿಕೆ ಜೊತೆಗೆ ವಿದ್ಯಾರ್ಥಿಗಳು ಉತ್ತರ ನೀಡುವ ಓಎಂಆರ್ ಪತ್ರಿಕೆಯನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಿಡುಗಡೆ ಮಾಡಲಾಗಿದೆ.

    ಎಸ್‍ಎಸ್‍ಎಲ್‍ಸಿ ಬೋರ್ಡ್ ವೆಬ್ ಸೈಟ್ ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳು ಲಭ್ಯ ಇದ್ದು ವಿದ್ಯಾರ್ಥಿಗಳು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಮೊದಲ ಹಂತದಲ್ಲಿ ಕೋರ್ ಸಬ್ಜೆಕ್ಟ್ ವಿಷಯ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಲಾಗಿದ್ದು, ನಾಳೆ ಭಾಷಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆ ಎಸ್‍ಎಸ್‍ಎಲ್‍ಸಿ ಬೋರ್ಡ್ ರಿಲೀಸ್ ಮಾಡಲಿದೆ.

  • ಲಾಕ್‍ಡೌನ್ ಪೂರ್ಣಗೊಂಡ ತಕ್ಷಣ ಶಿಕ್ಷಕರ ಹಾಜರಿಗೆ ಸೂಚನೆ: ಸುರೇಶ್ ಕುಮಾರ್

    ಲಾಕ್‍ಡೌನ್ ಪೂರ್ಣಗೊಂಡ ತಕ್ಷಣ ಶಿಕ್ಷಕರ ಹಾಜರಿಗೆ ಸೂಚನೆ: ಸುರೇಶ್ ಕುಮಾರ್

    ಬೆಂಗಳೂರು : ಶಾಲಾರಂಭದ ಕುರಿತು ಈಗಾಗಲೇ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಾಗಿದೆಯಾದರೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಲಾಕ್‍ಡೌನ್ ಜಾರಿಯಲ್ಲಿದ್ದು, ಶಿಕ್ಷಕರ ಚಲನವಲನಕ್ಕೆ ತೊಂದರೆಯಾಗಿರುವುದರಿಂದ ಶಿಕ್ಷಕರು ಲಾಕ್‍ಡೌನ್ ತೆರವಾದ ದಿನದಿಂದಲೇ ಶಾಲೆಗಳಿಗೆ ಭೌತಿಕವಾಗಿ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಸೋಮವಾರ ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಂಗಳವಾರದಿಂದ ಶಾಲೆಗಳಿಗೆ ಶಿಕ್ಷಕರು ಹಾಜರಾಗಿ ಮಕ್ಕಳ ನೋಂದಣಿ ಪ್ರಾರಂಭಿಸಬೇಕಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಶಿಕ್ಷಕರ ಚಲನವಲನಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಪೂರ್ಣಗೊಂಡ ನಂತರ ಶಿಕ್ಷಕರು ಶಾಲೆಗಳಿಗೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

    ಮೊದಲ ಪಿಯು ಮೌಲ್ಯಾಂಕನ ಅವಧಿ ವಿಸ್ತರಣೆ
    ಹಲವು ಉಪನ್ಯಾಸಕ ಸಂಘಟನೆಗಳ ಕೋರಿಕೆಯ ಮೇರೆಗೆ ಮೊದಲ ಪಿ.ಯು.ಸಿ. ಮೌಲ್ಯಾಂಕನ ಪ್ರಕ್ರಿಯೆಯನ್ನು ಎಲ್ಲ ಜಿಲ್ಲೆಗಳ ಲಾಕ್‍ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ಸಮಯ ವಿಸ್ತರಿಸಿ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಸಹ ಸಚಿವರು ಹೇಳಿದ್ದಾರೆ. ಈ ಕುರಿತಂತೆ ಪದವಿಪೂರ್ವ ಶಿಕ್ಷಕರಿಗೆ ಸೂಚನೆ ನೀಡಲಾಗಿದ್ದು, ಸದ್ಯದಲ್ಲಿಯೇ ಅವರು ಕ್ರಮ ಜರುಗಿಸಲಿದ್ದಾರೆ ಎಂದು ಅವರು ಹೇಳಿದರು.

    ಚೈಲ್ಡ್ ಪ್ರೊಫೈಲ್ ನಿಯಮಿತ ದಾಖಲೆ:
    ಈ ಬಾರಿ ನಿಗದಿತ ಅವಧಿಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಹೆಚ್ಚು ಸಮರ್ಥವಾಗಿ ಜಾರಿಯಲ್ಲಿಡುವ ಅವಶ್ಯಕತೆ ಇದೆ. ಪ್ರತಿ ಸೂಚಿತ ಅವಧಿಗೆ ವಿದ್ಯಾರ್ಥಿಗಳ ಚೈಲ್ಡ್ ಪ್ರೊಫೈಲ್ ಗಳನ್ನು ನಿಯಮಿತವಾಗಿ ದಾಖಲಿಸುವ, ಕಲಿಕಾ ಸಾಮಥ್ರ್ಯಗಳನ್ನು ಅಳೆಯುವ ಮಾನದಂಡಗಳಾಗಿ ರೂಪಿಸುವ ಸದೃಢ ವ್ಯವಸ್ಥೆಯನ್ನು ಜಾರಿಯಲ್ಲಿಡುವ ವ್ಯವಸ್ಥೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಅತ್ಯವಶ್ಯಕವಾಗಿದ್ದು, ಇಂಥಹ ಸಂದರ್ಭದಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಮಂಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ
    ಈ ಬಾರಿಯ ಎರಡು ದಿನಗಳ ಎಸ್.ಎಸ್.ಎಲ್.ಸಿ. ಪರೀಕ್ಷೆ ನಿರ್ವಹಣೆ ಕುರಿತಂತೆ ಜೂ. 28 ರಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಿಡಿಯೋ ಸಂವಾದ ಸಭೆ ನಡೆಯಲಿದ್ದು, ಸಭೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಇಲಾಖೆಯ ಆಯುಕ್ತರನ್ನು ಸುರಕ್ಷತಾ ವಾತಾವರಣದಲ್ಲಿ ಪರೀಕ್ಷೆ ನಡೆಸುವ ಕ್ರಮಗಳ ಕುರಿತು ವಿಸ್ತ್ರತ ಚರ್ಚೆ ನಡೆಸಿ ಮಾರ್ಗದರ್ಶನ ನೀಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕೊಠಡಿ ಮೇಲ್ವಿಚಾರಕ ಶಿಕ್ಷಕರಿಗೆ ಕೋವಿಡ್ ಲಸಿಕೆ
    ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕೊಠಡಿ ಮೇಲ್ವಿಚಾರಕರುಗಳಿಗೆ ಕೋವಿಡ್ – 19ರ ಲಸಿಕೆಯನ್ನು ನೀಡುವ ಪ್ರಕ್ರಿಯೆಯನ್ನು ಪರೀಕ್ಷೆಗೆ ಮುನ್ನ ಪೂರ್ಣಗೊಳಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ವಹಿಸಬೇಕೆಂದೂ ಸೂಚಿಸಲಾಗಿದೆ ಎಂದೂ ಸಚಿವರು ಹೇಳಿದರು.

    ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟ
    ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯ ಕುರಿತಂತೆ ನಿಯಮಗಳ ಆಕ್ಷೇಪಣಾ ಸಲ್ಲಿಕೆ ಅವಧಿ ಪೂರ್ಣಗೊಳ್ಳುತಿರುವ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರದ ಅಧಿಸೂಚನೆಯನ್ನು ಹೊರಡಿಸಿ ಸಾಧ್ಯವಾದಷ್ಟು ಶೀಘ್ರವೇ ವರ್ಗಾವಣಾ ಪ್ರಕ್ರಿಯೆ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಯಾವುದೇ ಅಡೆತಡೆಗಳು ಬಾರದ ರೀತಿಯಲ್ಲಿ ತಂತ್ರಜ್ಞಾನಾಧಾರಿತ ವರ್ಗಾವಣಾ ಪ್ರಕ್ರಿಯೆ ನಡೆಸಬೇಕೆಂದು ಸೂಚಿಸಲಾಗಿದೆಯೆಂದರು.

    ಪ್ಯಾಕೇಜ್ ಪರಿಹಾರ ನೇರ ಶಿಕ್ಷಕರ ಖಾತೆಗೆ
    ಖಾಸಗಿ ಖಾಸಗಿ ಶಾಲಾ ಶಿಕ್ಷಕರಿಗೆ ಮುಖ್ಯಮಂತ್ರಿಗಳು ಘೋಷಿಸಿರುವ ಪ್ಯಾಕೇಜ್ ಪರಿಹಾರವನ್ನು ಕ್ಲಪ್ತ ಸಮಯದಲ್ಲಿ ಫಲಾನುಭವಿಗಳಿಗೆ ನೇರವಾಗಿ ವಿತರಿಸುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸಬೇಕೆಂದೂ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಿಕ್ಷಕರ, ಶಿಕ್ಷಕೇತರರ ಹಾಗೂ ಅತಿಥಿ ಶಿಕ್ಷಕರ ಬ್ಯಾಂಕ್‍ಖಾತೆಗಳ ವಿವರಗಳನ್ನು ಶೀಘ್ರ ಸಂಗ್ರಹಿಸಿ ಅನುದಾನವನ್ನು ನೇರ ಶಿಕ್ಷಕರ ಖಾತೆಗಳಿಗೆ ವರ್ಗಾಯಿಸಬೇಕು. ಅತ್ಯಂತ ಸಮರ್ಪಕವಾಗಿ ಈ ಪ್ರಕ್ರಿಯೆ ನಿರ್ವಹಣೆಯಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿಎಸ್.ಆರ್.ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್, ಪದವಿಪೂರ್ವ ಶಿಕ್ಷಣ ನಿರ್ದೇಶಕಿ ಸ್ನೇಹಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಕೊರೊನಾ ಆತಂಕದ ಮಧ್ಯೆ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ- 10 ದಿನ ದಸರಾ ರಜೆ

    ಕೊರೊನಾ ಆತಂಕದ ಮಧ್ಯೆ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ- 10 ದಿನ ದಸರಾ ರಜೆ

    ಬೆಂಗಳೂರು: ಕೊರೊನಾ 3ನೇ ಅಲೆ ಆತಂಕದ ಮಧ್ಯೆ ಶಿಕ್ಷಣ ಇಲಾಖೆ 2021-22ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಇಡೀ ವರ್ಷದ ವೇಳಾಪಟ್ಟಿ ಪ್ರಕಟವಾಗಿದ್ದು, ಈ ವರ್ಷ ಜುಲೈ 1 ರಿಂದ ಮುಂದಿನ ವರ್ಷ ಅಂದ್ರೆ 2022ರ ಏಪ್ರಿಲ್ 30ವರೆಗೆ ಶಾಲೆಗಳು ನಡೆಯಲಿದೆ.

    2021-22 ನೇ ಸಾಲಿನಲ್ಲಿ ಸುಮಾರು 223 ದಿನಗಳು ಬೋಧನೆ ಲಭ್ಯವಾಗಲಿವೆ. ಈ ವರ್ಷ 10 ದಿನ ದಸರಾ ರಜೆ, 27 ದಿನ ಬೇಸಿಗೆ ರಜೆ ವಿದ್ಯಾರ್ಥಿಗಳಿಗೆ ಸಿಗಲಿದೆ. ದಾಖಲಾತಿ ಪ್ರಕ್ರಿಯೆ ಜೂನ್ 15 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 30ರ ಒಳಗೆ ದಾಖಲಾತಿ ಪ್ರಕ್ರಿಯೆ ಮುಗಿಸಲು ಇಲಾಖೆ ಸೂಚನೆ ನೀಡಿದೆ.

    ಶಿಕ್ಷಣ ಇಲಾಖೆ ನೀಡಿರುವ ವೇಳಾಪಟ್ಟಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯ ಆಗಲಿದೆ. ವೇಳಾಪಟ್ಟಿ ತಾತ್ಕಾಲಿಕವಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ವೇಳಾಪಟ್ಟಿ ಬದಲಾವಣೆ ಆಗುವ ಸಾಧ್ಯತೆ ಇದೆ. ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಸರ್ಕಾರ ನಿಗದಿಪಡಿಸಿದ ವಿವಿಧ ಜಯಂತಿಗಳನ್ನು ಆಚರಣೆ ಮಾಡಲು ಸೂಚನೆ ನೀಡಲಾಗಿದೆ. ಕ್ರಿಸ್‍ಮಸ್ ರಜೆಯನ್ನು ನೀಡಿ ವಿದ್ಯಾರ್ಥಿಗಳಿಗೆ ಬೋಧನಾ ಕಲಿಕೆಗೆ ಸಮಸ್ಯೆ ಆಗದಂತೆ ವೇಳಾಪಟ್ಟಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

    ವೇಳಾಪಟ್ಟಿ
    – ಜುಲೈ 1 ರಿಂದ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು ಪ್ರಾರಂಭ ಆಗಲಿವೆ.
    – ಜೂನ್ 15 ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭ ಆಗಲಿದ್ದು, ಆಗಸ್ಟ್ 30 ಒಳಗೆ ದಾಖಲಾತಿ ಪ್ರಕ್ರಿಯೆ ಮುಕ್ತಾಯ ಮಾಡಬೇಕು.
    – ಶಾಲೆಗಳ ಮೊದಲ ಅವಧಿ – ಜುಲೈ 1 ರಿಂದ ಅಕ್ಟೋಬರ್ 9 ನಡೆಯಲಿದೆ.
    – ಎರಡನೇ ಅವಧಿ – ಅಕ್ಟೋಬರ್ 21 ರಿಂದ ಏಪ್ರಿಲ್ 30, 2022ರವರೆಗೆ ನಡೆಯಲಿದೆ.
    – ದಸರಾ ರಜೆ- ಅಕ್ಟೋಬರ್ 10 ರಿಂದ ಅಕ್ಟೋಬರ್ 20 ನಿಗಧಿ ಮಾಡಲಾಗಿದೆ.
    – ಬೇಸಿಗೆ ರಜೆ – 2022 ಮೇ 1 ರಿಂದ ಮೇ 28ವರೆಗೆ ನಿಗಧಿ ಮಾಡಲಾಗಿದೆ.

  • ಶುಲ್ಕ ಕಟ್ಟದ್ದಕ್ಕೆ ವಿದ್ಯಾರ್ಥಿಯ ಪೋಷಕರ ಮೇಲೆ ಹಲ್ಲೆ – ಆರೋಪಿ ಬಂಧನ

    ಶುಲ್ಕ ಕಟ್ಟದ್ದಕ್ಕೆ ವಿದ್ಯಾರ್ಥಿಯ ಪೋಷಕರ ಮೇಲೆ ಹಲ್ಲೆ – ಆರೋಪಿ ಬಂಧನ

    ರಾಯಚೂರು: ಶಾಲಾ ಶುಲ್ಕ ಕಟ್ಟದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪೋಷಕರ ಮೇಲೆ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥೆಯ ಪತಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ.

    ಇಲ್ಲಿನ ಪಿಡಬ್ಲ್ಯೂಡಿ ಕ್ಯಾಂಪ್‍ನ ಮಾಂಟೆಸ್ಸರಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಶಾಲಾ ಶುಲ್ಕ ಸಂಪೂರ್ಣವಾಗಿ ಕಟ್ಟದ ಹಿನ್ನೆಲೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಯ ಫೋಷಕರ ಮೇಲೆ ಗೂಂಡಾಗಿರಿ ಮಾಡಿದ್ದಾರೆ.

    ವಿದ್ಯಾರ್ಥಿಯ ತಾಯಿ ನಾಗವಿದ್ಯಾ ಮೇಲೆ ಸತೀಶ್ ಕುಮಾರ್ ಎಂಬ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಬಾಕಿ 45 ಸಾವಿರ ಶುಲ್ಕ ಕಟ್ಟಲು ಹಿಂದೇಟು ಹಾಕಿದ್ದ ಪೋಷಕರು 20 ಸಾವಿರ ರೂಪಾಯಿ ಕಟ್ಟಲು ಮುಂದಾಗಿದ್ದರು. ಆದರೆ ಶಾಲಾ ಆಡಳಿತ ಮಂಡಳಿ ಎಂಟು ಹಾಗೂ ಒಂಭತ್ತನೆ ತರಗತಿಯ ಶುಲ್ಕ ಬಾಕಿ ಉಳಿಸಿಕೊಂಡಿದ್ದೀರಾ 10ನೇ ತರಗತಿಗೆ ಪ್ರವೇಶ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಬಾಕಿ 45 ಸಾವಿರ ರೂ. ಹಾಗೂ ಹತ್ತನೆ ತರಗತಿಯ 55 ಸಾವಿರ ರೂ. ಹಣ ಕಟ್ಟಲು ಆಗದೇ ಪೋಷಕರು ಶುಲ್ಕ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದರು.

    ಇದಕ್ಕೆ ಒಪ್ಪದೆ ಇರುವ ಪೋಷಕರು ಶುಲ್ಕ ಕಟ್ಟದೆ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿಯವರೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ ಪೊಲೀಸ್ ಠಾಣೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ವಿದ್ಯಾರ್ಥಿ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿರುವುದಲ್ಲದೆ ಜೀವಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿ ಪೋಷಕರು ಆರೋಪಿಸಿದ್ದಾರೆ. ಶಾಲಾ ಮುಖ್ಯಸ್ಥೆ ಜ್ಯೋತಿ ಹಾಗೂ ಅವರ ಪತಿ ಸತೀಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ತಾಯಿ ಮೇಲೆ ಹಲ್ಲೆ ಮಾಡಿದ ಸತೀಶ್ ಕುಮಾರ್‍ನನ್ನ ಪೊಲೀಸರು ಬಂಧಿಸಿದ್ದಾರೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇಂದಿನಿಂದ 9, ಪ್ರಥಮ ಪಿಯು ತರಗತಿಗಳು ಆರಂಭ – ಫುಲ್ ಡೇ ಕ್ಲಾಸ್

    ಇಂದಿನಿಂದ 9, ಪ್ರಥಮ ಪಿಯು ತರಗತಿಗಳು ಆರಂಭ – ಫುಲ್ ಡೇ ಕ್ಲಾಸ್

    ಬೆಂಗಳೂರು: ಇಂದಿನಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ತರಗತಿಗಳು ಆರಂಭಗೊಳ್ಳಲಿವೆ. ಇಷ್ಟು ದಿನ ಅರ್ಧ ದಿನ ನಡೆಯುತ್ತಿದ್ದ ತರಗತಿಗಳು ಇಂದಿನಿಂದ ಫುಲ್ ಡೇ ಕ್ಲಾಸ್ ಸ್ಟಾರ್ಟ್ ಆಗಲಿವೆ. 9 ರಿಂದ 11 ನೇ ತರಗತಿ ಪ್ರಾರಂಭದ ಜೊತೆ 10 ಮತ್ತು 12 ನೇ ತರಗತಿಗಳಿಗೆ ಇಡೀ ದಿನ ಕ್ಲಾಸ್ ಆರಂಭಗೊಳ್ಳಲಿವೆ.

    9 ರಿಂದ 12 ನೇ ತರಗತಿ ಜೊತೆಗೆ 6-8 ನೇ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮವೂ ಮುಂದುವರಿಯಲಿದೆ. ದಿನ ಬಿಟ್ಟು ದಿನ ವಿದ್ಯಾಗಮ ತರಗತಿಗಳ ನಡೆಯಲಿವೆ. ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಪ್ರಾರಂಭದಂತೆ ಕೊರೊನಾ ಮುಂಜಾಗ್ರತಾ ಕ್ರಮದಲ್ಲಿ ತರಗತಿಗಳ ಪ್ರಾರಂಭಕ್ಕೆ ನಿಯಮ ಅನ್ವಯವಾಗಲಿವೆ. ಶಾಲಾ-ಕಾಲೇಜು ಪ್ರಾರಂಭಕ್ಕೆ ಪ್ರತಿ ಜಿಲ್ಲಾ, ತಾಲೂಕು, ಕ್ಲಸ್ಟರ್ ಹಂತದಲ್ಲಿ ಮುಂಜಾಗ್ರತಾ ಕ್ರಮದ ಬ್ಲೂ ಪ್ರಿಂಟ್ ಸಿದ್ಧಗೊಂಡಿದೆ.

    ಕಡ್ಡಾಯವಾಗಿ ಶಾಲೆಗಳು ಕಾಲೇಜುಗಳು ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು. ಜಿಲ್ಲಾಧಿಕಾರಿಗಳು, ಸಿಇಓ, ಡಿಡಿಪಿಐ, ಡಿಡಿಪಿಯು, ಬಿಇಓಗಳ ನೇತೃತ್ವದಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆಯ ಮಾನಿಟರಿಂಗ್ ಮಾಡಲಾಗುತ್ತದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಾರ್ಗಸೂಚಿ ಪಾಲನೆಗೆ ಅಗತ್ಯ ಕ್ರಮವಹಿಸಬೇಕು. ಮಾರ್ಗಸೂಚಿ ಪಾಲಿಸುವಂತೆ ಶಿಕ್ಷಣ ಇಲಾಖೆಯಿಂದ ಪ್ರತಿ ಶಾಲಾ-ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

    ಮಾರ್ಗಸೂಚಿಗಳು:

    * ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಅಲ್ಲ. ಈ ವರ್ಷ ಮಾತ್ರ 75% ಹಾಜರಾತಿ ಕಡ್ಡಾಯ ಅನ್ನೋ ನಿಯಮ ವಿದ್ಯಾರ್ಥಿಗಳಿಗೆ ಅನ್ವಯ ಇಲ್ಲ.
    * ಶಾಲೆಗೆ ಆಗಮಿಸೋ ಪ್ರತಿ ವಿದ್ಯಾರ್ಥಿಯೂ ಪೋಷಕರಿಂದ ಕಡ್ಡಾಯವಾಗಿ ಒಪ್ಪಿಗೆ ಪ್ರಮಾಣ ಪತ್ರ ತರಬೇಕು. ವಿದ್ಯಾರ್ಥಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ ಅಂತ ಪ್ರಮಾಣ ಪತ್ರವನ್ನು ಪೋಷಕರು ನೀಡಬೇಕು. ಶಾಲೆಗೆ ಬರಲು ಇಷ್ಟವಿಲ್ಲದ ವಿದ್ಯಾರ್ಥಿ ಈಗಿರುವಂತೆ ಆನ್ ಲೈನ್ ಅಥವಾ ಇನ್ನಿತರ ಪರ್ಯಾಯ ಮಾರ್ಗದ ಮೂಲಕ ಪಠ್ಯ ಕಲಿಯಬಹುದು.
    * ವಿದ್ಯಾರ್ಥಿಗಳಿಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ಮಾಡಲು ಕ್ರಮವಹಿಸಬೇಕು. ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

    * ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆ ಈಗಲೂ ಪ್ರಾರಂಭವಿಲ್ಲ. ವಿದ್ಯಾರ್ಥಿಗಳೇ ಮನೆಯಿಂದ ಮಧ್ಯಾಹ್ನದ ಊಟ ತರಬೇಕು. ಸಾಮೂಹಿಕ ಪ್ರಾರ್ಥನೆ, ಗುಂಪು ಕ್ರೀಡಾ ಚಟುವಟಿಕೆಗಳಿಗೆ ನಿರ್ಬಂಧ. ತರಗತಿಗಳು ಮುಗಿದ ಕೂಡಲೇ ಶಾಲಾ ಕೊಠಿಗಳು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲು ಕ್ರಮವಹಿಸಬೇಕು. ಶಾಲಾ ಶೌಚಾಲಯ ಶುಚಿತ್ವ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶಾಲಾ ಆವರಣದಲ್ಲಿ ತಿಂಡಿ ಅಂಗಡಿಗಳಿಗೆ ನಿರ್ಬಂಧ.

    * ಪ್ರತಿ ಕೊಠಡಿಗೆ ಕೇವಲ 15-20 ವಿದ್ಯಾರ್ಥಿಗಳು ಮಾತ್ರ ಕೂರಿಸಲು ಕ್ರಮವಹಿಸಬೇಕು. ಪ್ರತಿ ಬೆಂಚ್ ಗೆ ಇಬ್ಬರು ವಿದ್ಯಾರ್ಥಿಗಳು ಕೂರಿಸಬೇಕು. ಶಾಲೆ ಒಳಗೆ ಮತ್ತು ಹೊರಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮವಹಿಸಬೇಕು. ವಿದ್ಯಾರ್ಥಿಗಳಿಗೆ ನಿತ್ಯ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.

    * ಪ್ರತಿ ಶಾಲಾ-ಕಾಲೇಜುನಲ್ಲಿ ಐಸೋಲೇಷನ್ ಕೊಠಡಿ ಪ್ರಾರಂಭಿಸಿ ಆರೋಗ್ಯ ವ್ಯತ್ಯಾಸ ಇರೋರಿಗೆ ಅಲ್ಲಿ ಕೂರಲು ವ್ಯವಸ್ಥೆ ಮಾಡಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಇರೋ ವಿದ್ಯಾರ್ಥಿಗಳು ಶಾಲೆಗೆ ಆಗಮಿಸದಂತೆ ಕ್ರಮವಹಿಸಬೇಕು. ಶಾಲಾ-ಕಾಲೇಜು ಹಂತದಲ್ಲಿ ಪೋಷಕರು, ಎಸ್ಡಿಎಂಸಿ ಸದಸ್ಯರು, ಶಾಲೆ ಶಿಕ್ಷಕರು ಒಳಗೊಂಡ ಸಮಿತಿ ರಚಿಸಿಕೊಂಡು ಕೊರೊನಾ ಮಾರ್ಗಸೂಚಿ ಪಾಲನೆಗೆ ಅಗತ್ಯ ಕ್ರಮವಹಿಸಬೇಕು.

  • ಕಲಿಕಾರಹಿತ ವರ್ಷವೆಂದು ಘೋಷಣೆಯಾಗಿಲ್ಲ, ಇಲಾಖೆಯಲ್ಲಿ ಈ ಪರಿಕಲ್ಪನೆಯೇ ಇಲ್ಲ: ಸುರೇಶ್ ಕುಮಾರ್

    ಕಲಿಕಾರಹಿತ ವರ್ಷವೆಂದು ಘೋಷಣೆಯಾಗಿಲ್ಲ, ಇಲಾಖೆಯಲ್ಲಿ ಈ ಪರಿಕಲ್ಪನೆಯೇ ಇಲ್ಲ: ಸುರೇಶ್ ಕುಮಾರ್

    – ಮಕ್ಕಳು ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಓದುವುದು ಸರಿಯಲ್ಲ

    ಬೆಂಗಳೂರು: ಕಲಿಕಾ ರಹಿತ ವರ್ಷ(zero academic year)ದ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ, ಇಲಾಖೆಯಲ್ಲಿ ಈ ಪರಿಕಲ್ಪನೆಯೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಯಾವುದೇ ತರಗತಿಯ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಶಿಕ್ಷಣ ಇಲಾಖೆಯು ಪರ್ಯಾಯ ಬೋಧನಾ ಕ್ರಮಗಳನ್ನು ಚಾಲನೆಯಲ್ಲಿಟ್ಟಿದೆ. ಇಂದಿನಿಂದ ಚಂದನ ವಾಹಿನಿಯಲ್ಲಿ ಪ್ರಾರಂಭವಾಗಿರುವ ಐದರಿಂದ ಏಳನೇ ತರಗತಿಯ ಬೋಧನಾ ತರಗತಿಗಳು ಈ ಪ್ರಯತ್ನದ ಭಾಗವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಎಲ್ಲ ತರಗತಿಗಳ ಮಕ್ಕಳಿಗೆ ಪಠ್ಯ ಪುಸ್ತಕಗಳು ಪೂರೈಕೆಯಾಗಿವೆ. ಶಾಲೆಗಳಲ್ಲಿ ಶಿಕ್ಷಕರು ಹಾಜರಾಗುವ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಪರಾಮರ್ಶಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಖಚಿತ ಜವಾಬ್ದಾರಿಯನ್ನು ನಿರ್ವಹಿಸಿ, ಎಲ್ಲ ತರಗತಿಗಳ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸಲಿದ್ದಾರೆ. ಖಾಸಗಿ ಶಾಲೆಗಳು ಅನುಸರಿಸುತ್ತಿರುವ ಪರ್ಯಾಯ ಕ್ರಮಗಳೂ ಸಹ ವಿದ್ಯಾರ್ಥಿಗಳ ಕಲಿಕೆಯನ್ನು ಪ್ರೇರೇಪಿಸುವಂತಹವೇ ಆಗಿದೆ. ಯಾವ ವಿದ್ಯಾರ್ಥಿಯೂ ಕಲಿಕೆಯ ಅವಕಾಶದಿಂದ ವಂಚನೆಗೊಳಗಾಗಿಲ್ಲ. ಹೀಗಾಗಿ ಈ ವರ್ಷವನ್ನು ಕಲಿಕಾರಹಿತ ವರ್ಷ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಶಾಲಾ ವಾತಾವರಣದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಮುಕ್ತ ಮನಸ್ಸನ್ನು ಹೊಂದಿದೆ ಎಂದೂ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ತಮ್ಮ ಫೇಸ್ಬುಕ್ ಖಾತೆ ಮೂಲಕ ಸಹ ಸ್ಪಷ್ಟಪಡಿಸಿದ್ದಾರೆ.

    ಫೇಸ್ಬುಕ್‍ನಲ್ಲಿ ಪೋಸ್ಟ್ ನಲ್ಲಿ ಏನಿದೆ?
    ಶೈಕ್ಷಣಿಕ ಶೂನ್ಯ ಕಲಿಕಾ ವರ್ಷ ಅಥವಾ zero academic year ಎಂಬ ಪದ ಇತ್ತೀಚೆಗೆ ಹುಟ್ಟಿದೆ. ಈ ಕುರಿತು ಅನಗತ್ಯ ಗೊಂದಲ ಉಂಟಾಗುತ್ತಿದೆ. ಶೂನ್ಯ ಕಲಿಕಾ ವರ್ಷ ಎಂಬ ಕಲ್ಪನೆ ಸಹ ಶಿಕ್ಷಣ ಇಲಾಖೆಯಲ್ಲಿ ಇಲ್ಲ. ನಾನು ಇಂದು ಈ ಕುರಿತು ಬಹಳ ಸ್ಪಷ್ಟವಾಗಿ ತಿಳಿಸಿದ್ದೇನೆ.

    ಈಗಾಗಲೇ ಒಂದನೇ ತರಗತಿಯಿಂದ ಏಳನೇ ತರಗತಿವರೆಗೂ ನಾವು ವಿವಿಧ ರೀತಿಯಲ್ಲಿ ಮಕ್ಕಳಿಗೆ ಪಾಠ ಕಲಿಸಿದ್ದೇವೆ. ಕೆಲವು ಶಾಲೆಗಳು ಆನ್‍ಲೈನ್ ಮೂಲಕ ಶಿಕ್ಷಣ ನೀಡಿವೆ. ಇನ್ನುಳಿದ ಶಾಲೆಗಳಲ್ಲಿ ದೂರದರ್ಶನ ಚಂದನ ವಾಹಿನಿ ಮೂಲಕ ಹಾಗೂ ಆಯಾ ಶಾಲೆಗಳ ಶಿಕ್ಷಕರು ಸುಮಾರು ಮೂರೂವರೆ ತಿಂಗಳ ಕಾಲ ನಡೆಸಿದ ವಿದ್ಯಾಗಮ ಕಾರ್ಯಕ್ರಮದ ಮೂಲಕ ಈ ತರಗತಿಯ ಮಕ್ಕಳಿಗೆ ಪಾಠವನ್ನು ಹೇಳಿಕೊಡಲಾಗುತ್ತಿದೆ.

    ಶೈಕ್ಷಣಿಕ #ಶೂನ್ಯ_ಕಲಿಕಾ_ವರ್ಷ ಅಥವಾ #zero_academic_year ಎಂಬ ಪದ ಇತ್ತೀಚೆಗೆ ಹುಟ್ಟಿದೆ. ಮತ್ತು ಈ ಕುರಿತು ಅನಗತ್ಯ ಗೊಂದಲ…

    Posted by Suresh Kumar S on Monday, November 23, 2020

    ಇಂದಿನಿಂದ 5,6 ಮತ್ತು 7ನೇ ತರಗತಿಗಳಿಗೆ ಪ್ರತಿದಿನ ಚಂದನ ವಾಹಿನಿಯ ‘ಸಂವೇದ’ ಕಾರ್ಯಕ್ರಮದ ಮೂಲಕ ನಿಗದಿತ ವೇಳೆಯಲ್ಲಿ ಪಾಠ ಪ್ರಾರಂಭವಾಗಿದೆ. ರಾಜ್ಯದ ಎಲ್ಲ ಮಕ್ಕಳಿಗೂ ಪಠ್ಯ ಪುಸ್ತಕಗಳನ್ನು ಜೂನ್-ಜುಲೈ ತಿಂಗಳಲ್ಲೇ ತಲುಪಿಸಲಾಗಿದೆ. ಇಷ್ಟೆಲ್ಲ ಆದ ನಂತರವೂ ತಮ್ಮದಲ್ಲದ ತಪ್ಪಿಗೆ ಮಕ್ಕಳು ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಓದಬೇಕು ಎನ್ನುವುದು ಸರಿಯಲ್ಲ. ಹಿಂದಿನ ವರ್ಷ ಸಹ ಒಂದನೇ ತರಗತಿಯಿಂದ 9ರವರೆಗೂ ಪರೀಕ್ಷೆ ಇಲ್ಲದೆ ಎಲ್ಲ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗಿತ್ತು. ಯಾವುದೇ ಕಾರಣಕ್ಕೂ ಯಾವುದೇ ಶಾಲೆಯಲ್ಲಿ ಯಾವುದೇ ತರಗತಿಗಳಿಗೆ ಶೂನ್ಯ ವರ್ಷ ಎಂಬುದು ಇಲ್ಲ, ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ.

  • ಆನ್‍ಲೈನ್ ಕ್ಲಾಸ್‍ಗಳಿಗೆ ಸರ್ಕಾರದ ಮಾರ್ಗಸೂಚಿ- ಸೋಮವಾರ ಅಧಿಕೃತ ಘೋಷಣೆ ಸಾಧ್ಯತೆ

    ಆನ್‍ಲೈನ್ ಕ್ಲಾಸ್‍ಗಳಿಗೆ ಸರ್ಕಾರದ ಮಾರ್ಗಸೂಚಿ- ಸೋಮವಾರ ಅಧಿಕೃತ ಘೋಷಣೆ ಸಾಧ್ಯತೆ

    ಬೆಂಗಳೂರು: ಆನ್‍ಲೈನ್ ತರಗತಿಗಳಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದ್ದು, ಕೆಲ ಮಾರ್ಗಸೂಚಿಗಳನ್ನು ಸಿದ್ಧಪಡಿಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕೆಲ ಶಾಲೆಗಳು ಮನಸೋಯಿಚ್ಛೆ ಆನ್‍ಲೈನ್ ತರಗತಿಗಳನ್ನ ನಡೆಸುತ್ತಿರುವ ಬಗ್ಗೆ ದೂರುಗಳ ಕೇಳಿ ಬಂದಿದ್ದವು. ಈ ಹಿನ್ನೆಲೆ ಕೊನೆಗೂ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಆನ್‍ಲೈನ್ ಕ್ಲಾಸ್ ಗಳಿಗಾಗಿ ಮಾರ್ಗಸೂಚಿ ಸಿದ್ಧಪಡಿಸಿದೆ ಎಂದು ತಿಳಿದು ಬಂದಿದೆ.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ಮೇರೆಗೆ ಮಾರ್ಗಸೂಚಿ ಸಿದ್ಧಪಡಿಸಲಾಗಿದ್ದು, ಸೋಮವಾರ ಅಧಿಕೃತ ಘೋಷಣೆಯಾಗುವ ಸಾಧ್ಯತೆಗಳಿವೆ. ಸರ್ಕಾರ ನೀಡುವ ಎಲ್ಲ ಮಾರ್ಗಸೂಚಿಗಳನ್ನ ಖಾಸಗಿ ಶಾಲೆಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂಬ ಎಚ್ಚರಿಕೆ ನೀಡಲು ಸುರೇಶ್ ಕುಮಾರ್ ಮುಂದಾಗಿದ್ದಾರೆ.

    ಮಾರ್ಗಸೂಚಿಯಲ್ಲಿ ಏನಿರಬಹುದು?
    * ಆನ್‍ಲೈನ್ ತರಗತಿ ಕಡ್ಡಾಯವಾಗಿ ಪಡೆಯಬೇಕು ಅಂತ ವಿದ್ಯಾರ್ಥಿಗಳು, ಪೋಷಕರಿಗೆ ಒತ್ತಾಯ ಮಾಡುವ ಹಾಗಿಲ್ಲ. ಆನ್‍ಲೈನ್ ತರಗತಿಗೆ ಹೆಚ್ಚುವರಿ ಶುಲ್ಕ ಪಡೆಯವಂತಿಲ್ಲ. ಯಾವುದೇ ವಿದ್ಯಾರ್ಥಿಗಳಿಗೆ ದಿನಪೂರ್ತಿ ಅಥವಾ ಗಂಟೆಗಟ್ಟಲೆ ಆನ್‍ಲೈನ್ ತರಗತಿ ನಡೆಸುವಂತೆ ಇಲ್ಲ.
    * ಪೂರ್ವ ಪ್ರಾಥಮಿಕದಿಂದ 2 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ಅವಧಿ 30 ನಿಮಿಷ ಮೀರದಂತೆ ವಾರದಲ್ಲಿ 2 ಅಥವಾ 3 ದಿನಗಳು ಮಾತ್ರ ಆನ್‍ಲೈನ್ ತರಗತಿ ನೀಡಬೇಕು. ದಿನ ಬಿಟ್ಟು ದಿನ ಆನ್‍ಲೈನ್ ತರಗತಿ ನೀಡುವ ಬಗ್ಗೆ ಕ್ರಮವಹಿಸಬೇಕು. ಉಳಿದ ದಿನಗಳು ವಿದ್ಯಾರ್ಥಿಗಳಿಗೆ ಬಿಡುವು ಕೊಡುವುದು ಕಡ್ಡಾಯ.

    * ಪೂರ್ವ ಪ್ರಾಥಮಿಕ ತರಗತಿಗಳಿಗೆ ಆನ್‍ಲೈನ್ ತರಗತಿ ನಡೆಸಲು ಪೋಷಕರು ವಿದ್ಯಾರ್ಥಿ ಜೊತೆ ಇರೋದು ಕಡ್ಡಾಯ. ನೇರ ಪ್ರಸಾದರ ತರಗತಿಗಿಂತ ಪೂರ್ವ ಮುದ್ರಿತ ವಿಡಿಯೋ ತರಗತಿಗಳಿಗೆ ಒತ್ತು ನೀಡಬೇಕು.

    * 3 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಕ್ಕೆ ಗರಿಷ್ಠ 4 ಅವಧಿಯಲ್ಲಿ ಮಾತ್ರ ಆನ್‍ಲೈನ್ ತರಗತಿ ನೀಡಬೇಕು. ಪ್ರತಿ ಅವಧಿಗೆ ಗರಿಷ್ಠ ಸಮಯ 30-45 ನಿಮಿಷ ಮೀರದಂತೆ ಆನ್ ಲೈನ್ ತರಗತಿ ಮಾಡಬೇಕು. ಕಡ್ಡಾಯವಾಗಿ ಬೆಳಗ್ಗೆ ಎರಡು ಅವಧಿ ಮಧ್ಯಾಹ್ನದ ನಂತರ ಎರಡು ಅವಧಿಯಲ್ಲಿ ಆನ್‍ಲೈನ್ ಕ್ಲಾಸ್ ನಡೆಸಬೇಕು. ಪ್ರತಿ ಅವಧಿಯ ಕ್ಲಾಸ್ ಮುಗಿದ ನಂತರ ಕನಿಷ್ಠ 30-45 ನಿಮಿಷ ವಿದ್ಯಾರ್ಥಿಗೆ ಬಿಡುವಿನ ಸಮಯ ನೀಡಬೇಕು. 3 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಗರಿಷ್ಠ 4-5 ದಿನಗಳು ಮಾತ್ರ ಆನ್‍ಲೈನ್ ತರಗತಿ ನಡೆಸಬೇಕು. ಉಳಿದ ಎರಡು-ಮೂರು ದಿನಗಳು ವಿದ್ಯಾರ್ಥಿಗಳಿಗೆ ಬಿಡುವು ಕೊಡಬೇಕು.

    * ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡದ ಶಾಲೆ ವಿರುದ್ಧ ಪೋಷಕರು ದೂರು ನೀಡಬಹುದು. ಪೋಷಕರು ದೂರು ನೀಡಲು ಸಹಾಯವಾಣಿ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡದೇ ಇದ್ದರೆ ಅಂತಹ ಶಾಲೆಗಳ ವಿರುದ್ಧ ಪೋಷಕರು ಸಹಾಯವಾಣಿಗೆ ದೂರು ನೀಡಬಹುದು.