Tag: Department of Animal Husbandry

  • ಪಶುಸಂಗೋಪನಾ ಇಲಾಖೆಯಲ್ಲಿ ಭ್ರಷ್ಟಾಚಾರ – ಬೀದರ್‌ನಲ್ಲಿ ಫಲಾನುಭವಕ್ಕೆ ಕೊಡ್ಬೇಕು ಲಂಚ

    ಪಶುಸಂಗೋಪನಾ ಇಲಾಖೆಯಲ್ಲಿ ಭ್ರಷ್ಟಾಚಾರ – ಬೀದರ್‌ನಲ್ಲಿ ಫಲಾನುಭವಕ್ಕೆ ಕೊಡ್ಬೇಕು ಲಂಚ

    – ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಹಾಯಕ ನಿರ್ದೇಶಕ

    ಬೀದರ್: ಗಡಿ ಜಿಲ್ಲೆಯ ಪಶುಸಂಗೋಪನಾ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಆದರೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಹೈನುಗಾರಿಕೆಗೆ ಆಯ್ಕೆಯಾದ ಫಲಾನುಭವಿಗಳ ಯೋಜನೆ ಚೆಕ್ ನೀಡಬೇಕು ಅಂದರೆ ಲಂಚ ನೀಡಬೇಕು. ಈ ಪಶು ಅಧಿಕಾರಿ ಫಲಾನುಭವಿಗಳಿಂದ ಲಂಚ ತೆಗೆದುಕೊಳ್ಳುತ್ತಿರುವ ಎಕ್ಸ್ ಕ್ಲೂಸೀವ್ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    2018-19 ಸಾಲಿನ ಹೈನುಗಾರಿಕೆ ಯೋಜನೆಯಲ್ಲಿ ವಿವಿಧ ಭಾಗ್ಯಗಳಿಗೆ ಆಯ್ಕೆಯಾದ ಫಲಾನುಭವಿಗಳಿಗೆ ಚೆಕ್ ನೀಡಲು ಪಶುಇಲಾಖೆ ಸಹಾಯಕ ನಿರ್ದೇಶಕ ಓಂಕಾರ್ ಪಾಟೀಲ್ ಲಂಚ ಪೀಕುತಿದ್ದಾರೆ.

    ಭ್ರಷ್ಟಾಚಾರದ ಸಂಭಾಷಣೆ
    ಸಹಾಯಕ ನಿರ್ದೇಶಕ: ಎಂತ್ತೆಂತ ಮಂದಿ ಕೋಡತ್ತಾವೋ ಯಪ್ಪ…
    ಫಲಾನುಭವಿ: ಇಲ್ಲಾ ರೀ ಸರ್…
    ಸಹಾಯಕ ನಿರ್ದೇಶಕ: ಡೈರೆಕ್ಟ್ ಆಗಿ ಹಾಕೋಟ್ಟಿದ್ದೇನ್ ರೀ.. ನಾನು ಇವನ ಎದುರಿಗೆ ಹೇಳ್ತೀನಿ..
    ಫಲಾನುಭವಿ: ಹ್ಞಾ.. ರೀ..
    ಸಹಾಯಕ ನಿರ್ದೇಶಕ: ಕೇಲಸ ಮಾಡೋದು ಬೇಕಾಗಿಲ್ಲಾ ನೀವು ಇದಕ್ಕಾ…

    ಫಲಾನುಭವಿ: ಮತ್ತ ಏನ್ ಮಾಡಂತ್ತಿರೀ…
    ಫಲಾನುಭವಿ: ಇಗರೀ
    ಸಹಾಯಕ ನಿರ್ದೇಶಕ: ಎರಡು ಚೀಟಿ ಬರಕೋ, ಎಮ್ಮೆ ಖರೀದಿ ಮಾಡೋದು…
    ಫಲಾನುಭವಿ: ಮತ್ತೆ ಯಾಕರೀ, ಮತ್ತೆ ಯಾಕರೀ…
    ಸಹಾಯಕ ನಿರ್ದೇಶಕ: ಆಆಆ… ಎಮ್ಮೆ ಖರೀದಿ ಚೀಟಿ ಮಾಡಲ್ಲಾ, ಪನಾಸ್, ಪನಾಸ್… (50 ಸಾವಿರ)ಸೆಂಬರ್ ರೂಪಾಯಿ ಬಾಂಡ್ ತಗೋ… (ನೂರು ರೂಪಾಯಿ)

    ಪ್ರತಿಯೊಬ್ಬ ಫಲಾನುಭವಿಯಿಂದ 3 ರಿಂದ 5 ಸಾವಿರ ಲಂಚ ಚಾಚಿಕೊಳ್ಳುತ್ತಿದ್ದಾರೆ. ಯಾರು ಲಂಚ ನೀಡುವುದಿಲ್ಲವೋ ಅವರಿಗೆ ಚೆಕ್ ಕೊಡುತ್ತಿಲ್ಲ ಎಂದು ಸ್ಥಳೀಯ ನಿವಾಸಿ ವಿಶಾಲ್ ಹೋನ್ನಾ ದೂರಿದ್ದಾರೆ.

    ಕೆಲ ದಿನಗಳ ಹಿಂದೆ ಬೀದರ್ ಗೆ ಭೇಟಿ ನೀಡಿದ್ದ ಸಚಿವ ಪ್ರಭು ಚವ್ಹಾಣ್, ಇಲಾಖೆಯಲ್ಲಿ ಸ್ವಚ್ಛಭಾರತ್ ಮಾಡುತ್ತೇವೆ ಎಂದು ಗುಡುಗಿದ್ದರು. ಆದರೆ ಇದೀಗ ದೃಶ್ಯ ಸಮೇತ ಸಾಕ್ಷಿ ಸಿಕ್ಕಿದೆ.ಈ ಹಿನ್ನೆಲೆಯಲ್ಲಿ ಸಚಿವರು ಕ್ರಮ ತೆಗೆದುಕೊಳ್ತಾರಾ ಎಂದು ಸ್ಥಳೀಯ ಹೋರಾಟಗಾರರು ಚಾಲೆಂಜ್ ಮಾಡಿದ್ದಾರೆ. ಒಟ್ಟಿನಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರ ಇಲಾಖೆಯಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ಆಗ್ತಿರೋದು ವಿಪರ್ಯಾಸದ ಸಂಗತಿಯಾಗಿದೆ.

  • ಕರ್ತವ್ಯಕ್ಕೆ ಗೈರಾಗಿದ್ದ ‘ಡಿ’ ಗ್ರೂಪ್ ನೌಕರನನ್ನ ಅಮಾನತು ಮಾಡಿದ ಪ್ರಭು ಚೌವ್ಹಾಣ್

    ಕರ್ತವ್ಯಕ್ಕೆ ಗೈರಾಗಿದ್ದ ‘ಡಿ’ ಗ್ರೂಪ್ ನೌಕರನನ್ನ ಅಮಾನತು ಮಾಡಿದ ಪ್ರಭು ಚೌವ್ಹಾಣ್

    ಕಲಬುರಗಿ: ಜಿಲ್ಲೆಯ ಪಶುಸಂಗೋಪನೆ ಇಲಾಖೆಗೆ ಸಚಿವ ಪ್ರಭು ಚೌವ್ಹಾಣ್ ಧಿಡೀರ್ ಭೇಟಿ ನೀಡಿದ್ದು, ಸತತ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದ ‘ಡಿ’ ಗ್ರೂಪ್ ನೌಕರನನ್ನು ಅಮಾನತು ಮಾಡಿದ್ದಾರೆ.

    ‘ಡಿ’ ಗ್ರೂಪ್ ನೌಕರ ಉಪೇಂದ್ರರನ್ನು ಅಮಾನತುಗೊಳಿಸಲಾಗಿದೆ. ಸತತ 2 ತಿಂಗಳಿನಿಂದ ಕರ್ತವ್ಯಕ್ಕೆ ಬರದೆ ಉಪೇಂದ್ರ ಗೈರಾಗಿದ್ದರು. ಕಚೇರಿ ಭೇಟಿ ವೇಳೆ ಈ ವಿಚಾರ ತಿಳಿದ ಸಚಿವರು ಬೇಜವಾಬ್ದಾರಿ ತೋರಿದ ನೌಕರನ ಮೇಲೆ ಗರಂ ಆಗಿ ಅಮಾನತು ಮಾಡಿದ್ದಾರೆ. ಇದೇ ವೇಳೆ ಪಶು ಆಸ್ಪತ್ರೆ ಅವ್ಯವಸ್ಥೆ ಕಂಡು ಉಪನಿರ್ದೇಶಕ ಹನುಮಂತಪ್ಪ ಮೇಲೂ ಸಚಿವರು ಗರಂ ಆಗಿದ್ದು, ಆಸ್ಪತ್ರೆಯಲ್ಲಿನ ಎಕ್ಸ್-ರೇ ಮಷಿನ್, ಪಿಠೋಪಕರಣಗಳು ತುಕ್ಕು ಹಿಡಿದಿರುವುದನ್ನ ಕಂಡು ಎಲ್ಲವನ್ನು 1 ತಿಂಗಳಿನಲ್ಲಿ ಸರಿಪಡಿಸುವಂತೆ ಸೂಚಿಸಿದ್ದಾರೆ.

    ಈ ಹಿಂದೆ ಬೀದರ್‍ನಲ್ಲಿ ಪಶು ವೈದ್ಯಕೀಯ ಕಚೇರಿಗೆ ಪ್ರಭು ಚವ್ಹಾಣ್ ಅವರು ದಿಢೀರ್ ಭೇಟಿ ನೀಡಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲದ ಕಾರಣಕ್ಕೆ ಸಚಿವರನ್ನು ಕಂಡು ಕಂಗಾಲಾಗಿದ್ದರು. ಕಚೇರಿಯಲ್ಲಿ ಸ್ವಚ್ಛತೆ ಕಾಪಾಡದೇ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಾನುವಾರು ಅಭಿವೃದ್ಧಿ ಅಧಿಕಾರಿ ಎನ್. ಗಾಂಧಿ ಹಾಗೂ ‘ಡಿ’ ಗ್ರೂಪ್ ನೌಕರ ಬಾಬು ಗುಟ್ಕಾ ಹಾಗೂ ಮದ್ಯಪಾನ ಸೇವಿಸಿ ಕರ್ತವ್ಯಕ್ಕೆ ಬಂದಿದ್ದರು. ಇವರನ್ನು ಗಮನಿಸಿದ ಸಚಿವರು ಇಬ್ಬರನ್ನು ಅಮಾನತುಗೊಳಿಸುವಂತೆ ಆದೇಶ ನೀಡಿದ್ದರು.

    ಕೆಲಸಕ್ಕೆ ಗೈರಾದ ಅಧಿಕಾರಿಗಳಿಗೂ ಫುಲ್ ಕ್ಲಾಸ್ ತೆಗೆದುಕೊಳ್ಳಲಾಗಿತ್ತು. ಕೆಲಸಕ್ಕೆ ಹಾಜರಾಗದ 6ಕ್ಕೂ ಹೆಚ್ಚು ಅಧಿಕಾರಿಗಳ ಹೆಸರನ್ನು ಪಡೆದು ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದ್ದಾರೆ. ಅಲ್ಲದೆ ಕರ್ತವ್ಯ ಲೋಪ ಮಾಡುವ ಸಿಬ್ಬಂದಿ ಅಥವಾ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

  • ರೇವಣ್ಣ Vs ಮಂಜು – ಇಬ್ಬರ ಪ್ರತಿಷ್ಠೆಯ ಕಣದಲ್ಲಿ ಬೀದಿಗೆ ಬಂದ ಬಡ ಕಾರ್ಮಿಕರು!

    ರೇವಣ್ಣ Vs ಮಂಜು – ಇಬ್ಬರ ಪ್ರತಿಷ್ಠೆಯ ಕಣದಲ್ಲಿ ಬೀದಿಗೆ ಬಂದ ಬಡ ಕಾರ್ಮಿಕರು!

    ಹಾಸನ: ಮಾಜಿ ಪಶುಸಂಗೋಪನಾ ಸಚಿವ ಎ.ಮಂಜು ಹಾಗೂ ಹಾಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರ ರಾಜಕೀಯ ವೈಷಮ್ಯಕ್ಕೆ ಬಡ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆನ್ನುವ ಆರೋಪ ಕೇಳಿಬಂದಿದೆ.

    ಹೌದು, ಜಿಲ್ಲೆಯಲ್ಲಿ ಈ ಹಿಂದೆ ಮಾಜಿ ಪಶುಸಂಗೋಪನಾ ಸಚಿವರಾಗಿದ್ದ ಎ.ಮಂಜುರವರು ನೂರಾರು ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ಇಲಾಖೆಯಲ್ಲಿ ನೇಮಕ ಮಾಡಿಕೊಟ್ಟಿದ್ದರು. ಆದರೆ ಈಗ ರೇವಣ್ಣನವರು ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ, ಕ್ಷುಲ್ಲಕ ವಿಚಾರಕ್ಕೆ ನೂರಕ್ಕು ಹೆಚ್ಚು ಮಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರಂತೆ.

    ಹಾಸನ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ರೀತಿಯ ಗುತ್ತಿಗೆ ಆಧಾರದ ಮೇಲೆ ಪಶುಸಂಗೋಪನಾ ಇಲಾಖೆಯಲ್ಲಿ ನೌಕರರನ್ನು ನೇಮಿಸಿಕೊಳ್ಳಲಾಗಿತ್ತು. ಇವರೆಲ್ಲ ತಾಲೂಕು ಕೇಂದ್ರಗಳು ಮತ್ತು ಗ್ರಾಮೀಣ ಭಾಗದಲ್ಲಿ ಪಶು ಇಲಾಖೆಯ ವಿವಿಧ ಕೆಲಸಗಳನ್ನು ಮಾಡುತ್ತಿದ್ದರು. ಹಾಸನ ಜಿಲ್ಲೆಯಲ್ಲಿಯೂ ಸಹ ಮಾತಾ ಟೆಕ್ನಾಲಿಜಿಸ್ ಎಂಬ ಏಜನ್ಸಿ ಮೂಲಕ 135 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಸರ್ಕಾರ ಬದಲಾಗಿದ್ದರಿಂದ 100ಕ್ಕೂ ಹೆಚ್ಚು ಮಂದಿಯನ್ನು ಕಾರಣ ನೀಡದೆ ಕೆಲಸದಿಂದ ವಜಾ ಗೊಳಿಸಿದ್ದಾರೆ.

    ಈ ಕುರಿತು ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾರ್ಮಿಕರು, ನಾವುಗಳು ಯಾವುದೇ ಪಕ್ಷಗಳಿಗೆ ಸೇರಿದವರಲ್ಲ. ನಮ್ಮ ಹೊಟ್ಟೆಪಾಡಿಗೆ ಗುತ್ತಿಗೆ ಆಧಾರದಲ್ಲಿ ಸೇರಿದ್ದೇವು. ಹಿಂದಿನ ಸಚಿವರ ಅವಧಿಯಲ್ಲಿ ನೇಮಕವಾಗಿರುವ ಕಾರಣಕ್ಕೆ ನಮ್ಮನ್ನು ಕೆಲಸದಿಂದ ವಜಾಮಾಡಿದ್ದಾರೆ. ಈ ಕೆಲಸವನ್ನೆ ನಂಬಿಕೊಂಡಿದ್ದ ನಮಗೆ ಸಂಕಷ್ಟಗಳಲ್ಲಿ ನರಳುವಂತಹ ಪರಿಸ್ಥಿತಿ ಎದುರಾಗಿದೆ. ಕೂಡಲೇ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಾದಿ ಹಿಡಿಯುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಲಿನ ದರ ಏರಿಕೆ ಆಲೋಚನೆ ಸರ್ಕಾರದ ಮುಂದಿಲ್ಲ – ಪಶುಸಂಗೋಪನ ಸಚಿವರ ಸ್ಪಷ್ಟನೆ

    ಹಾಲಿನ ದರ ಏರಿಕೆ ಆಲೋಚನೆ ಸರ್ಕಾರದ ಮುಂದಿಲ್ಲ – ಪಶುಸಂಗೋಪನ ಸಚಿವರ ಸ್ಪಷ್ಟನೆ

    ಬೆಂಗಳೂರು: ರಾಜ್ಯ ಸರ್ಕಾರವು ಹಾಲಿನ ದರ ಹೆಚ್ಚಳ ಮಾಡುವ ಯಾವುದೇ ಚಿಂತನೆಯನ್ನು ನಡೆಸಿಲ್ಲ ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರೈತರಿಗೆ ಸರ್ಕಾರ ನೀಡುತ್ತಿರುವ 5 ರೂ. ಸಹಾಯ ಧನ ಸರಿಯಾದ ಸಮಯಕ್ಕೆ ತಲುಪುತ್ತಿದೆ. ಹಾಲಿನ ದರ ಏರಿಕೆ ಮಾಡುವ ಆಲೋಚನೆ ಸರ್ಕಾರದ ಮುಂದಿಲ್ಲ. ದರ ಹೆಚ್ಚಳ ಹಾಗೂ ಕಡಿಮೆ ಮಾಡುವ ಕುರಿತು ಯಾವುದೇ ಚಿಂತನೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಮೈಕ್ರೋ ಚಿಪ್: ಪಶು ಭಾಗ್ಯ ಯೋಜನೆ ಅಡಿ ನೀಡುವ ಹಸುಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲಾಗುತ್ತಿದೆ. ಹಾಲು ಕರೆಯುವ ಹಸುಗಳಿಗೆ ಮಾತ್ರ ಚಿಪ್ ಆಳವಡಿಕೆ ಕಾರ್ಯ ನಡೆಸಲಾಗುತ್ತಿದೆ. ಚಿಪ್ ಮೂಲಕ ಹಸುವಿನ ಸಂಪೂರ್ಣ ಮಾಹಿತಿ ಟ್ರಾಕ್ ಮಾಡಲಾಗುತ್ತಿದೆ. ಇದರಿಂದ ಹಸುವಿನ ಆರೋಗ್ಯ ಬಗ್ಗೆ ಮಾಹಿತಿ ಪಡೆಯಲು ಸಹಾಯಕವಾಗುತ್ತದೆ. ಚಿಪ್ ಅಳವಡಿಸುವ ಕಾರ್ಯ ಶೇ.60 ರಷ್ಟು ಕಾರ್ಯ ಪೂರ್ಣಗೊಂಡಿದ್ದು, ಇದುವರೆಗೂ 1.8 ಲಕ್ಷ ಹಸುಗಳಿಗೆ ಚಿಪ್ ಆಳವಡಿಕೆ ಮಾಡಲಾಗಿದೆ. ಒಂದು ಚಿಪ್ಪಿನ ಬೆಲೆ 6 ರೂ. 20 ಪೈಸೆ ಎಂದು ವಿವರಿಸಿದರು.

    ರೇವಣ್ಣ ಹಸ್ತಕ್ಷೇಪವಿಲ್ಲ: ಕೆಎಂಎಫ್ ಹೆಚ್ಚಿನ ಅಭಿವೃದ್ಧಿ ಆಗುತ್ತಿಲ್ಲ ಎಂವ ಸಚಿವ ರೇವಣ್ಣ ಹೇಳಿಕೆ ವಿಚಾರವಾಗಿ ಪ್ರಕ್ರಿಯೆ ನೀಡಿದ ಅವರು, ಲೋಕೋಪಯೋಗಿ ಇಲಾಖೆ ಸಚಿವ ರೇವಣ್ಣ ಅವರು ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಆದರೆ ಕೆಎಂಎಫ್ ಅಭಿವೃದ್ಧಿಗೆ ರೇವಣ್ಣ ಅವರ ಕೊಡುಗೆ ಅಪಾರ. ಯಾರೇ ಆದ್ರು ಕಟ್ಟಿದ ಸಂಸ್ಥೆಗೆ ಸಮಸ್ಯೆ ಮಾಡಿದರೆ ಎಲ್ಲರಿಗೂ ನೋವಾಗುತ್ತೆ. ಆ ವೇಳೆ ಹೇಳಿಕೆ ನೀಡಿರಬಹುದು ಅಷ್ಟೇ ಎಂದರು.

    ಇದೇ ವೇಳೆ ಟಿಪ್ಪು ಕಾರ್ಯಕ್ರಮಕ್ಕೆ ಆಗಮಿಸದ ಕುರಿತು ಸ್ಪಷ್ಟನೆ ನೀಡಿದ ನಾಡಗೌಡ ಅವರು, ಟಿಪ್ಪು ಜಯಂತಿಗೆ ಕಾರ್ಯಕ್ರಮಕ್ಕೆ ಆಗಮಿಸಲು ನಾನು ಟಿಕೆಟ್ ಬುಕ್ ಮಾಡಿದ್ದೆ, ಆದರೆ ಸಚಿವ ರೇವಣ್ಣ ನಾನು ಹೋಗುತ್ತೆನೆ ಎಂದು ಹೇಳಿದ್ದರು. ಅದ್ದರಿಂದ ನಾನು ಆಗಮಿಸಲಿಲ್ಲ ಎಂದರು.

    ರಾಜ್ಯದಿಂದ ತೆಲಂಗಾಣ ಹಾಗೂ ಆಂಧ್ರಪ್ರದೇಶಕ್ಕೆ ಸರಬರಾಜು ಆಗುತ್ತಿದ್ದ ಮೇವು ತಡೆಯಲು ಆದೇಶ ಮಾಡಲಾಗಿದೆ. ಬೇಸಿಗೆ ವೇಳೆ ಮೇವಿನ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ದೊರೆಯುವ ಮೇವನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಲಾಗುವುದು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚುನಾವಣಾ ಎಫೆಕ್ಟ್, ಅಧಿಕಾರಿಗಳ ನಿರ್ಲಕ್ಷ್ಯ- ರಾಜ್ಯಕ್ಕೆ ಹಾಲು ನೀಡುವ ರೈತರಲ್ಲಿ ಕಣ್ಣೀರು!

    ಚುನಾವಣಾ ಎಫೆಕ್ಟ್, ಅಧಿಕಾರಿಗಳ ನಿರ್ಲಕ್ಷ್ಯ- ರಾಜ್ಯಕ್ಕೆ ಹಾಲು ನೀಡುವ ರೈತರಲ್ಲಿ ಕಣ್ಣೀರು!

    ಚಿಕ್ಕಬಳ್ಳಾಪುರ: ಹೈನೋದ್ಯಮವೇ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯ ರೈತರ ಪ್ರಮುಖ ಜೀವನಾಧಾರ. ಜಿಲ್ಲೆಯಲ್ಲಿ ನೀರಿಗೆ ಬರ ಇದ್ದರೂ ಹಾಲಿಗೆ ಮಾತ್ರ ಎಂದೂ ಬರ ಇಲ್ಲ. ಹಾಲಿನ ಹೊಳೆಯನ್ನೇ ಹರಿಸುವ ರೈತರಿಗೆ ಮಿಶ್ರ ತಳಿ ಸೀಮೆ ಹಸುಗಳೇ ಬದುಕಿನ ಆಧಾರಕ್ಕೆ ಆರ್ಥಿಕ ಮೂಲ. ಆದರೆ ಈಗ ಕ್ಷೀರಸಾಗರದ ಮೂಲ ಚಿಕ್ಕಬಳ್ಳಾಪುರ ಜಿಲ್ಲೆಯ ಹೈನು ಗಾರಿಕೆಯ ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ.

    ಹೌದು. ಜಿಲ್ಲೆಯಾದ್ಯಂತ ಮಹಾಮಾರಿ ಕಾಲುಬಾಯಿ ಜ್ವರಕ್ಕೆ ನೂರಾರು ಜಾನುವಾರುಗಳ ಮರಣ ಮೃದಂಗ ಮುಂದುವರೆದಿದೆ. ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ಎಂಬವರಿಗೆ ಸೇರಿದ ಸುಮಾರು 80 ಸಾವಿರ ರೂ. ಮೌಲ್ಯದ ಹಸು ಕಾಲುಬಾಯಿಜ್ವರಕ್ಕೆ ಬಲಿಯಾಗಿದೆ. ಅಲ್ಲದೇ ಉಳಿದ ಮೂರು ಹಸುಗಳು ಕೂಡ ಕಾಲು ಬಾಯಿ ಜ್ವರಕ್ಕೆ ತುತ್ತಾಗಿ ಸಾವು ಬದುಕಿನ ನಡುವೆ ನರಳಾಡುತ್ತಿವೆ. ಅಂದ ಹಾಗೆ ಕಳೆದ 15 ದಿನಗಳಿಂದ ತಿಪ್ಪೇನಹಳ್ಳಿ ಗ್ರಾಮವೊಂದರಲ್ಲಿ 15ಕ್ಕೂ ಹೆಚ್ಚು ಸೀಮೆ ಹಸುಗಳು ಈ ಕಾಲುಬಾಯಿಜ್ವರಕ್ಕೆ ಬಲಿಯಾಗಿವೆ.

    ಏನಿದು ಕಾಲುಬಾಯಿ ಜ್ವರ..?
    ಇಂಗ್ಲಿಷ್ ನಲ್ಲಿ ಫೂಟ್ ಅಂಡ್ ಮೌತ್ ಡಿಸೀಸ್ ಎನ್ನವ ಈ ಕಾಯಿಲೆ ಸಾಂಕ್ರಾಮಿಕವಾಗಿ ಹರಡುವ ವರ್ಗಕ್ಕೆ ಸೇರಿದೆ. ಗಾಳಿಯಿಂದ ಹರಡುವ ಈ ಕಾಯಿಲೆ ಒಮ್ಮೆ ಕಾಣಿಸಿಕೊಂಡರೆ ನಿಯಂತ್ರಣಕ್ಕೆ ತುರುವುದ ಬಹುಕಷ್ಟದ ಕೆಲಸ. ನಿಯಂತ್ರಣಕ್ಕೆ ತರುವ ವೇಳೆಗೆ ಸಾಂಕ್ರಾಮಿಕ ರೋಗಕ್ಕೆ ನೂರಾರು ಹಸುಗಳು ಬಲಿಯಾಗಿರುತ್ತದೆ. ಗಾಳಿಯ ಮೂಲಕ ಅತಿ ವೇಗವಾಗಿ ಹರಡುವುದರಿಂದ ಅಕ್ಕ-ಪಕ್ಕದ ರಾಸುಗಳಿಗೆ ಬಹುಬೇಗ ಈ ಸೋಂಕು ತಗುಲುತ್ತದೆ.

    ಸಾಮಾನ್ಯವಾಗಿ ಗೊರಸು ಇರುವಂತಹ ರಾಸುಗಳಿಗೆ ತಗುಲುವ ಈ ಸೋಂಕು, ಜಾನುವಾರುಗಳ ಕಾಲು, ಬಾಯಿ, ನಾಲಿಗೆ ಕೆಚ್ಚಲು ಸೇರಿದಂತೆ ದೇಹದ ಬಹುತೇಕ ಅಂಗಾಂಗಗಳ ಮೇಲೆ ಗಾಯಗಳಿಗೆ ಕಾರಣವಾಗುತ್ತವೆ. ಬಾಯಿ ಹುಣ್ಣಾಗಿ ಕನಿಷ್ಠ ಮೇವು ಕೂಡ ತಿನ್ನಲಾಗದಂತಹ ದುಸ್ಥಿತಿಗೆ ತಲುಪುವುತ್ತವೆ. ಅಲ್ಲದೇ ಗಾಯಗೊಂಡ ಜಾಗದಲ್ಲಿ ಹುಣ್ಣು ಹೆಚ್ಚಾಗಿ ನಿಶ್ಯಕ್ತಿಯಿಂದ ಬಾಯಿಯಲ್ಲಿ ಜೊಲ್ಲು ಸುರಿಸುತ್ತಾ ಕೊನೆಗೆ ಸಾವನ್ನಪ್ಪುತ್ತವೆ. ಕಳೆದ 2013-14 ರಲ್ಲೂ ಕೂಡ ಜಿಲ್ಲೆಯಲ್ಲಿ ನೂರಾರು ಹಸುಗಳು ಸಾವನ್ನಪ್ಪಿದ್ದವು. ಮಳಮಾಚನಹಳ್ಳಿ ಗ್ರಾಮವೊಂದರಲ್ಲೇ 45 ಹಸುಗಳು ಸಾವನ್ನಪ್ಪಿದ್ದವು.

    ಚುನಾವಣಾ ಸೈಡ್ ಎಫೆಕ್ಟ್.!
    ಈ ಬಾರಿ ಇದೆಕ್ಕೆಲ್ಲಾ ಪ್ರಮುಖ ಕಾರಣ, ಚುನಾವಣಾ ಸೈಡ್ ಎಫೆಕ್ಟ್. ಅಂದ ಹಾಗೆ ಪ್ರತಿ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಜಿಲ್ಲೆಯ ಎಲ್ಲಾ ಜಾನುವಾರಗಳಿಗೆ ಮುಂಜಾಗ್ರತಾ ಕ್ರಮವಾಗಿ ಕಾಲುಬಾಯಿಜ್ವರ ನಿಯಂತ್ರಣ ಲಸಿಕೆ ಹಾಕಲಾಗುತ್ತದೆ. ಆದರೆ ಈ ಬಾರಿ ಚುನಾವಣಾ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಲಸಿಕೆಯನ್ನ ಹಾಕಿಲ್ಲ ಎನ್ನಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿಜ್ವರ ವ್ಯಾಪಕವಾಗಿ ಹರಡಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಕಾಲುಬಾಯಿ ಜ್ವರ ಸಾಕಷ್ಟು ಉಲ್ಭಣಗೊಂಡಿದ್ದು, ನೂರಾರು ರಾಸುಗಳು ಬಲಿಯಾಗಿವೆ. ಇನ್ನೂ ಗಾಳಿಯಲ್ಲಿ ಹರಡುವ ಈ ಖಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಇದುವರೆಗೂ ಇಲಾಖೆಯ ಅಧಿಕಾರಿಗಳು ಲಸಿಕೆ ಹಾಕಲು ಮುಂದಾಗಿಲ್ಲ.

    ಸಂಕಷ್ಟದಲ್ಲಿ ರೈತ:
    ಹೈನುಗಾರಿಕೆಯೇ ಜೀವನಾಧಾರ, ಹಸುಗಳಿಂದಲೇ ಉತ್ಪಾದನೆಯಾಗುವ ಹಾಲಿನಿಂದ ಬರುವ ಆದಾಯವೇ ಜಿಲ್ಲೆಯ ಬಹುತೇಕ ಕುಟುಂಬಗಳ ಸಂಸಾರದ ನೌಕೆಗೆ ಆರ್ಥಿಕ ಮೂಲ. ಒಂದು ಸೀಮೆಹಸುವಿಗೆ 60 ಸಾವಿರದಿಂದ ರೂ. ನಿಂದ 1 ಲಕ್ಷ ರೂ. ಕೊಟ್ಟು ಖರೀದಿ ಮಾಡಲಾಗುತ್ತದೆ. ಆದರೆ ಪ್ರತಿ ವರ್ಷವೂ ಬಿಟ್ಟು ಬಿಡದೆ ಕಾಣಿಸಿಕೊಳ್ಳುತ್ತಿರುವ ಈ ಕಾಲು ಬಾಯಿ ಜ್ವರದಿಂದ ಪ್ರತಿ ವರ್ಷವೂ ನೂರಾರು ಸೀಮೆ ಹಸುಗಳು ಬಲಿಯಾಗುತ್ತಿವೆ.

    ಒಂದೆಡೆ ಪ್ರೀತಿಯಿಂದ ಸಾಕಿದ ಹಸು ಕಳೆದುಕೊಂಡ ದುಃಖ, ಮತ್ತೊಂದೆಡೆ ಕುಟುಂಬದ ಆರ್ಥಿಕ ಮೂಲವನ್ನೇ ಕಳೆದುಕೊಂಡಿರುವ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆರ್ಥಿಕ ನಷ್ಟದಿಂದ ಹಸುಗಳನ್ನ ಸಾಕುವ ಮನೆಯ ಮಹಿಳೆಯರ ಹಾಗೂ ರೈತರ ಕಣ್ಣಲ್ಲಿ ನೀರು ತರಿಸುವಂತೆ ಮಾಡಿದೆ. ಅಲ್ಲದೇ ಜ್ವರದಿಂದ ಸಾವನ್ನಪ್ಪಿದ ಹಸುವನ್ನು ಹಾಗೇ ಬಿಸಾಡುವ ಹಾಗಿಲ್ಲ, ಜೆಸಿಬಿ ಮೂಲಕ ದೊಡ್ಡ ದೊಡ್ಡ ಗುಂಡಿಗಳನ್ನು ಮಾಡಿ ಮಣ್ಣಲ್ಲಿ ಹೂತು ಹಾಕಬೇಕು. ಇಲ್ಲವಾದಲ್ಲಿ ಕಾಯಿಲೆ ಹರಡುವ ವೇಗ ಮತ್ತೆ ಹೆಚ್ಚಾಳವಾಗುತ್ತದೆ. ಸಂಕಷ್ಟದಲ್ಲಿರುವ ರೈತ ಜೆಸಿಬಿಗೆ ಹಣ ಹೊಂದಿಸುವುದು ಕಷ್ಟ ಸಾಧ್ಯವಾಗುತ್ತದೆ. ಇನ್ನೂ ರೋಗ ಪೀಡಿತ ಹಸುವಿನ ಹಾಲನ್ನ ಸಹ ಹಾಲು ಉತ್ಪಾದಕರ ಸಂಘಗಳು ಖರೀದಿಸುವುದಿಲ್ಲ. ಇಷ್ಟೆಲ್ಲಾ ನೋವುನುಂಗಿಕೊಳ್ಳುವ ರೈತರು ಅಧಿಕಾರಿ ವರ್ಗ, ಸರ್ಕಾರಕ್ಕೆ ಹಿಡಿಶಾಪ ಹಾಕಿ ದೇವರ ಮೊರೆ ಹೋಗುತ್ತಿದ್ದಾರೆ.

    ದೇವರ ಮೊರೆ.!
    ಪ್ರತಿ ವರ್ಷವೂ ಬರುವ ಈ ಕಾಲು ಬಾಯಿ ಜ್ವರವನ್ನು ಹಳ್ಳಿಯ ಜನ ಗಾಳಿಯಮ್ಮ ಅಂತಲೇ ಕರೆಯುತ್ತಾರೆ. ದೇವರ ವಕ್ರದೃಷ್ಠಿ ನಮ್ಮ ಊರಿನ ಮೇಲೆ ಬಿದ್ದಿದೆ. ಹಾಗಾಗಿಯೇ ಗ್ರಾಮದ ಜಾನುವಾರುಗಳು ಸಾವನ್ನಪ್ಪುತ್ತಿವೆ ಎಂಬ ತಪ್ಪು ಕಲ್ಪನೆ ಹಾಗೂ ಮೂಢನಂಬಿಕೆ ಜನರಲ್ಲಿದೆ. ಹೀಗಾಗಿ ಗಾಳಿಯಮ್ಮ ಬಂದಿದೆ ಅಂತ ಪ್ರತಿ ಗ್ರಾಮದಲ್ಲೂ ಈ ಕಾಯಿಲೆ ಕಾಣಿಸಿಕೊಂಡಾಗ ಗ್ರಾಮದೇವತೆಗಳ ಮೆರವಣಿಗೆ ಮಾಡಿ ಜಾನುವಾರುಗಳನ್ನ ಉಳಿಸಿಕೊಡುವಂತೆ ದೇವರಲ್ಲಿ ಬೇಡಿಕೊಳ್ಳುವುದು ಸಾಮಾನ್ಯವಾಗಿದೆ.

    ಕಳಪೆ ಗುಣಮಟ್ಟದ ಲಸಿಕೆ ಕಾರಣ?
    ಹೌದು, ಅಂದ ಹಾಗೇ ರಾಜ್ಯದಲ್ಲಿ ಈಗಾಗಲೇ ಕಳೆದ 7 ವರ್ಷಗಳಿಂದ ಅಂದರೆ ವರ್ಷಕ್ಕೆ ಎರಡು ಬಾರಿಯಂತೆ 14 ನೇ ಸುತ್ತಿನ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಹಾಕಲಾಗುತ್ತಿದೆ. ಈ ಮೊದಲು ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿಯ ಅತ್ಯುನ್ನತ ಗುಣಮಟ್ಟದ ಲಸಿಕೆಯನ್ನು ಸರ್ಕಾರ ಖರೀದ ಮಾಡಿ ಲಸಿಕೆ ಹಾಕಲಾಗುತ್ತಿತ್ತು. ಆದರೆ ಕಳೆದ 3 ವರ್ಷಗಳ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಾಲೂರು ಬಳಿಯ ಬಯೋವೆಟ್ ಎಂಬ ಖಾಸಗಿ ಸಂಸ್ಥೆಯ ಲಸಿಕೆಯನ್ನ ಖರೀದಿ ಮಾಡಿ ಹಾಕಲಾಗುತ್ತಿದೆ. ಆದರೆ ಈ ಬಯೋವೆಟ್ ಲಸಿಕೆಯನ್ನು ಉತ್ತರಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ತಿರಸ್ಕರಸಿ, ಸಂಸ್ಥೆಯನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದೆ ಎನ್ನಲಾಗಿದೆ. ಇಂತಹ ಸಂಸ್ಥೆಯ ಕಳಪೆ ಗುಣಮಟ್ಟದ ಲಸಿಕೆ ಹಾಕುತ್ತಿರುವುದರಿಂದ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಸಾಧ್ಯವಾಗದಿರುವುದು ಕಾರಣ ಎಂಬುದು ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ರ ಆರೋಪವಾಗಿದೆ.

    ರೋಗ ನಿಯಂತ್ರಣ ಕ್ರಮಗಳು: ಸಮಯಕ್ಕೆ ತಕ್ಕಂತೆ ಕಾಲು ಬಾಯಿ ಜ್ವರ ನಿಯಂತ್ರಕ ಲಸಿಕೆ ಹಾಕಿಸುವುದು. ರೋಗ ಪೀಡಿತ ಹಸುಗಳಿಂದ ರೋಗ ಮುಕ್ತ ಹಸುಗಳನ್ನ ದೂರ ಇಡುವುದು. ರೋಗ ಹರಡದಂತೆ ಸತ್ತ ಹಸುಗಳನ್ನ ಮಣ್ಣಲ್ಲಿ ಹೂತು ಹಾಕುವುದು ಹಾಗೂ ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ಕಾಲುಬಾಯಿ ಜ್ವರವನ್ನು ನಿಯಂತ್ರಣಕ್ಕೆ ತರಬಹುದು.

    – ಮುದ್ದುಕೃಷ್ಣ