Tag: Department of Agriculture

  • ಮಾವಿಗೆ ಬಿಸಿಲಿನ ಶಾಪ – ಬರೋಬ್ಬರಿ 400 ಕೋಟಿ ಮೌಲ್ಯದ ಮಾವು ನಷ್ಟ

    ಮಾವಿಗೆ ಬಿಸಿಲಿನ ಶಾಪ – ಬರೋಬ್ಬರಿ 400 ಕೋಟಿ ಮೌಲ್ಯದ ಮಾವು ನಷ್ಟ

    ರಾಮನಗರ: ಭೀಕರ ಬರಗಾಲದಿಂದ ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವು (Mangoes) ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 400ಕೋಟಿ ರೂ. ಮೌಲ್ಯದ ಬೆಳೆ ನಾಶವಾಗಿದೆ. ಇತ್ತ ಹಾಕಿದ ಬಂಡವಾಳವೂ ಇಲ್ಲದೇ, ಹತ್ತಾರು ವರ್ಷಗಳಿಂದ ಬೆಳೆದಿದ್ದ ಮರಗಳೂ ಉಳಿಯದೇ ರೈತರ ಬದುಕು ಶೋಚನೀಯ ಸ್ಥಿತಿಗೆ ತಲುಪಿದೆ.

    ರೇಷ್ಮೆನಗರಿ ಎಂದು ಬಿರುದು ಪಡೆದ ರಾಮನಗರ (Ramanagar) ಹಣ್ಣಿನ ರಾಜ ಮಾವು ಬೆಳೆಯುವಲ್ಲೂ ಹೆಸರು ಮಾಡಿದೆ. ರಾಜ್ಯದಲ್ಲಿ ಮಾವಿನ ಸೀಸನ್ ಶುರುವಾಗೋದು ಇಲ್ಲಿಂದಲೇ. ಅತ್ಯಂತ ಉತ್ಕೃಷ್ಟ ಹಾಗೂ ವಿವಿಧ ತಳಿಯ ಮಾವನ್ನು ವಿದೇಶಕ್ಕೆ ರಫ್ತು ಮಾಡುವ ಇತಿಹಾಸ ಈ ಜಿಲ್ಲೆಗಿದೆ. ಈ ಬಾರಿ ಮಾವು ಬೆಳೆಯ ಇತಿಹಾಸದಲ್ಲೇ ಕಂಡು ಕೇಳರಿಯದ ಬರದಿಂದ ಮಾವು ಬೆಳೆ ನೆಲಕಚ್ಚಿದೆ. ಇದನ್ನೂ ಓದಿ: ಇಂಡಿಯಾ ಒಕ್ಕೂಟ ಗೆದ್ದರೇ ಮರುದಿನವೇ ಜೈಲಿನಿಂದ ಹೊರಬರುವೆ: ಕೇಜ್ರಿವಾಲ್

    ಸೀಸನ್‍ನಲ್ಲಿ ಸುಮಾರು 2 ಲಕ್ಷದ 50 ಸಾವಿರ ಮೆಟ್ರಿಕ್ ಟನ್ ಮಾವು ಉತ್ಪಾದನೆ ಆಗುತ್ತಿದ್ದ ಮಾವು ಈ ಬಾರಿ ಕೆಲವೇ ಕೆಲವು ಟನ್‍ಗಳಿಗೆ ಮಾತ್ರ ಸೀಮಿತವಾಗಿದೆ. ಮಾವು ಬೆಳೆದ ರೈತರ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ತಾಪಮಾನ ಏರಿಕೆಯಿಂದಾಗಿ ಮರದಲ್ಲಿ ಕಾಯಿಗಟ್ಟ ಬೇಕಿದ್ದ ಹೂಗಳು, ಸಣ್ಣ ಕಾಯಿಗಳು ಬಿಸಿಲಿನ ಝಳಕ್ಕೆ ಉದುರಿ ಹೋಗುತ್ತಿವೆ. ಜೊತೆಗೆ ಕೀಟಗಳ ಸಮಸ್ಯೆ ಸಹ ಮಾವಿಗೆ ಆವರಿಸಿದೆ.

    ಜಿಲ್ಲೆಯಲ್ಲಿ ಒಟ್ಟು 30 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ಮಾವು ಬೆಳೆಯಲಾಗುತ್ತಿದೆ. ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿನ ತೀವ್ರ ತಾಪಮಾನದಿಂದ ಹೂಗಳೆಲ್ಲ ಉದುರಿ 90% ಇಳುವರಿ ಕುಸಿದಿದ್ದು 10% ರಷ್ಟು ಮಾತ್ರ ಇಳುವರಿಯಾಗಿದೆ. ಅದೂ ಕೂಡಾ ಬಿಸಿಲಿಗೆ ಒಣಗಿ ಗುಣಮಟ್ಟ ಕಳೆದುಕೊಂಡಿದ್ದು, ಮಾರುಕಟ್ಟೆಯಲ್ಲೂ ಕೊಂಡುಕೊಳ್ಳುವವರಿಲ್ಲದೇ ಬೇಡಿಕೆ ಕುಸಿತ ಕಂಡಿದೆ. ಈ ಬಗ್ಗೆ ಸಮೀಕ್ಷೆ ಮಾಡಿರುವ ಜಿಲ್ಲಾಡಳಿತ 400ಕೋಟಿ ರೂ. ಮೌಲ್ಯದ ಮಾವು ಬೆಳೆ ನಾಶ ಆಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

    ಇನ್ನೂ ಮಾವು ಬೆಳೆಗೆ ವಿಮೆ ನೀಡಲು ವಿಮಾ ಕಂಪನಿಗಳು ಹಿಂದೇಟು ಹಾಕಿವೆ. ಉಷ್ಣಾಂಶದಿಂದ ಬೆಳೆ ನಾಶವಾಗಿರೋದಕ್ಕೆ ವಿಮೆ ಅನ್ವಯವಾಗುವುದಿಲ್ಲ ಎಂದು ಹೇಳುತ್ತಿರುವುದು ಮಾವು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಂತ್ರಸ್ತೆಯ ಅಪಹರಣ ಕೇಸ್- ಹೆಚ್‌ಡಿ ರೇವಣ್ಣಗೆ ಜಾಮೀನು ಮಂಜೂರು

  • ಈ ಬಾರಿಯ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ: ಬಿ.ಸಿ.ಪಾಟೀಲ್

    ಈ ಬಾರಿಯ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ: ಬಿ.ಸಿ.ಪಾಟೀಲ್

    ಬೆಂಗಳೂರು: ಈ ಬಾರಿಯ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.

    ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷದಿಂದ ಕೈಗೊಂಡಿರುವ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ದೇಶದ್ಯಾಂತ ಗಮನ ಸೆಳೆದಿದ್ದು, ಕೇಂದ್ರದಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೊಬೈಲ್ ಬೆಳೆ ಸಮೀಕ್ಷೆ ಈ ಬಾರಿಯೂ ಕೂಡ ಯಶಸ್ವಿಯಾಗಬೇಕೆಂದು ಕೇಳಿಕೊಂಡಿದ್ದಾರೆ.ಇದನ್ನೂ ಓದಿ:ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಟೀಲ್

    ಕಳೆದ ವರ್ಷ ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಕ್ಷಿಪ್ರ ಗತಿಯಲ್ಲಿ ಇತರೆ ಇಲಾಖೆಗಳ ಸಹಯೋಗದಲ್ಲಿ ಕೈಗೊಂಡು ಯಶಸ್ವಿಯೂ ಆಗಿದೆ. ಇತರೆ ರಾಜ್ಯಗಳಿಗೆ ಕರ್ನಾಟಕ ಕೃಷಿ ಇಲಾಖೆಯ ಈ ಸಾಧನೆ ಮಾದರಿಯೂ ಆಗಿದೆ. ಕೇಂದ್ರದಿಂದ ಅಗ್ರಿ ಟ್ರೆಂಡ್ ಸೆಟ್ಟರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂತಹ ಸಾಧನೆ ಇನ್ನು ಮುಂದೆಯೂ ಆಗಬೇಕು. ರೈತ ತಾನೇ ತನ್ನ ಬೆಳೆಗೆ ಪ್ರಮಾಣ ಪತ್ರ ನೀಡುವಂತಹ ಜಮೀನಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಹನೆಂದು ಹೇಳಿಕೊಳ್ಳುವಂತಹ ಮೊಬೈಲ್ ಬೆಳೆ ಸಮೀಕ್ಷೆ ನಿರಂತರ ನಡೆಯಬೇಕು. ಕಳೆದ ಬಾರಿಯಂತೆ ಎಲ್ಲಾ ಕೃಷಿ ಅಧಿಕಾರಿಗಳು ಈ ಪ್ರಕ್ರಿಯೆ ಯಶಸ್ಸಿಗೆ ಮತ್ತೆ ಚುರುಕಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

    2021-22ನೇ ಸಾಲಿನಲ್ಲಿ ಪೂರ್ವ ಮುಂಗಾರಿನಲ್ಲಿ 2.94 ಲಕ್ಷ ತಾಕುಗಳನ್ನು ರೈತರೇ ಸ್ವತಃ ರೈತರ ಆ್ಯಪ್‍ನಲ್ಲಿ ಹಾಗೂ 44.77 ಲಕ್ಷ ತಾಕುಗಳನ್ನು ಖಾಸಗಿ ನಿವಾಸಿಗಳ ಆ್ಯಪ್‍ನಲ್ಲಿ ಬೆಳೆ ಮಾಹಿತಿಯನ್ನು ದಾಖಲು ಮಾಡಲಾಗಿರುತ್ತದೆ. 2021-22ನೇ ಸಾಲಿನಲ್ಲಿ ಮುಂಗಾರಿನಲ್ಲಿ 6.18 ಲಕ್ಷ ತಾಕುಗಳನ್ನು ರೈತರೇ ಸ್ವತಃ ರೈತರ ಆ್ಯಪ್‍ನಲ್ಲಿ ಹಾಗೂ 0.66 ಲಕ್ಷ ತಾಕುಗಳನ್ನು ಖಾಸಗಿ ನಿವಾಸಿಗಳ ಆ್ಯಪ್‍ನಲ್ಲಿ ಆಗಸ್ಟ್.30 ರವರೆಗೆ ಅಪೆÇ್ಲೀಡ್ ಮಾಡಲಾಗಿದ್ದು, ಬೆಳೆ ಸಮೀಕ್ಷೆಯು ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಕೇರಳದ 32 ಮಂದಿಗೆ ಸೋಂಕು, ಕೋಲಾರದ ನರ್ಸಿಂಗ್ ಕಾಲೇಜು ವಿರುದ್ಧ ಕಠಿಣ ಕ್ರಮ: ಸುಧಾಕರ್

    ಪ್ರತಿ ವರ್ಷದಂತೆ ಈ ವರ್ಷವೂ ಸಹ ಮುಂಗಾರು ಹಂಗಾಮಿನಲ್ಲಿ ಸುಮಾರು 2.09 ಕೋಟಿ ತಾಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಿದ್ದು, ರೈತರಿಂದಲೇ ಅವರ ಜಮೀನಿನ ಬೆಳೆ ಮಾಹಿತಿಯನ್ನು ಆ್ಯಪ್ ಮೂಲಕ ಅಪೆÇ್ಲೀಡ್ ಮಾಡಿಸುವ ಉದ್ದೇಶವನ್ನು ಹೊಂದಿದ್ದೇವೆ. ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ರೈತರೇ ಸ್ವತಃ ಬೆಳೆ ಸಮೀಕ್ಷೆ ಮಾಹಿತಿಯನ್ನು ದಾಖಲಿಸಬೇಕೆಂದು ರೈತರಲ್ಲಿ ಮನವಿ ಮಾಡಿದ್ದಾರೆ.ಇದನ್ನೂ ಓದಿ:ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಟೀಲ್

    ವಿಕಾಸಸೌಧದ ಕಚೇರಿಯಲ್ಲಿ ಕೃಷಿ ಇಲಾಖಾಧಿಕಾರಿಗಳೊಂದಿಗೆ 2021-22 ನೇ ಸಾಲಿನ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಪ್ರಗತಿ ಕುರಿತು ಬಿ.ಸಿ.ಪಾಟೀಲ್ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕೃಷಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ, ಆಯುಕ್ತ ಬ್ರಿಜೆಶ್ ಕುಮಾರ್ ದೀಕ್ಷಿತ್, ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.

  • ನಕಲಿ ರಸಗೊಬ್ಬರ ದಾಸ್ತಾನು ಪತ್ತೆಹಚ್ಚಿದ ರೈತರು

    ನಕಲಿ ರಸಗೊಬ್ಬರ ದಾಸ್ತಾನು ಪತ್ತೆಹಚ್ಚಿದ ರೈತರು

    ವಿಜಯಪುರ: ಅಕ್ರಮ ರಸಗೊಬ್ಬರ ತಯಾರಿಕಾ ಜಾಲವನ್ನು ರೈತರೇ ಬೇಧಿಸಿದ್ದಾರೆ. ಜಿಲ್ಲೆಯ ಇಂಡಿ ತಾಲೂಕಿನ ಇಂಗಳಗಿ ಗ್ರಾಮದ ಹೊರ ಭಾಗದಲ್ಲಿ ಅಕ್ರಮ ದಾಸ್ತಾನು ಪತ್ತೆಯಾಗಿದೆ.

    ಜಮ್ಮು ಭಾಗವಾನ್ ಅವರಿಗೆ ಸೇರಿದ ತೋಟದ ಮನೆಯಲ್ಲಿ ಅಕ್ರಮವಾಗಿ ಇಟ್ಟಿದ್ದ ರಸಗೊಬ್ಬರಗಳ ಮೂಟೆಗಳನ್ನು ರೈತರು ಪತ್ತೆಹಚ್ಚಿದ್ದಾರೆ. ನಂತರ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅಧಿಕಾರಿಗಳೊಂದಿಗೆ ದಾಳಿ ಮಾಡಿದ್ದಾರೆ.

    ದಾಳಿ ವೇಳೆ ತೋಟದ ಮನೆಯಲ್ಲಿ ಯಾರೂ ಕಂಡು ಬಂದಿಲ್ಲ. ನಂತರ ಅಧಿಕಾರಿಗಳು ರಸಗೊಬ್ಬರ ತಯಾರಿಕೆ, ಸಾಗಾಟ ಹಾಗೂ ಮಾರಾಟ ಮಾಡಿದ್ದರ ಬaಗ್ಗೆ ತನಿಖೆ ನಡೆಸಿದ್ದಾರೆ.ನಕಲಿ ರಸಗೊಬ್ಬರ ಸಂಗ್ರಹಿಸಿದ ಮನೆಗೆ ಪೊಲೀಸ್ ಕಾವಲು ಇರಿಸಿ, ನಕಲಿ ರಸಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೃಷಿ ಜಂಟಿ ನಿರ್ದೇಶಕ ರಾಜಶೇಖರ್ ವಿಲಿಯಮ್ಸ್ ಹಾಗೂ ಇತರ ಸಿಬ್ಬಂದಿಯಿಂದ ಪರಿಶೀಲನೆ ನಡೆಸಲಾಗಿದ್ದು, ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ.

  • ರಾಯಭಾರಿಯಾಗಿ ದರ್ಶನ್ ನೇಮಕ – ಕೃಷಿ ಇಲಾಖೆಯಿಂದ ಅಧಿಕೃತ ಆದೇಶ

    ರಾಯಭಾರಿಯಾಗಿ ದರ್ಶನ್ ನೇಮಕ – ಕೃಷಿ ಇಲಾಖೆಯಿಂದ ಅಧಿಕೃತ ಆದೇಶ

    ಬೆಂಗಳೂರು: ರಾಜ್ಯ ಕೃಷಿ ಇಲಾಖೆಯ ರಾಯಭಾರಿಯಾಗಿ ನಟ ದರ್ಶನ್ ನೇಮಕದ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

    ಜನವರಿ 25ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜ್ಯ ಸರ್ಕಾರದರ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕವಾಗಿದ್ದಾರೆ ಎಂದು ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದರು. ಎರಡು ವರ್ಷಗಳ ಹಿಂದೆ ಅರಣ್ಯ ಇಲಾಖೆಯ ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಿಸುವ ಸಂದೇಶ ಸಾರುವ ರಾಯಭಾರಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು. ಕಾಡಿದ್ದರೆ ನಾಡು ವನವಿದ್ದರೆ ಜೀವನ ಎಂದು ಸಾರಿದ್ದರು. ಇದೀಗ ನೇಗಿಲಯೋಗಿ ಪರ ನಿಂತು ಪ್ರೋತ್ಸಾಹ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ.

    ಕೃಷಿ ಇಲಾಖೆಯ ಕಾರ್ಯಕ್ರಮಗಳ ಪ್ರಚಾರ ಮತ್ತು ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ. ದರ್ಶನ್ ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ.

  • ಕೃಷಿ ಇಲಾಖೆಯ ರಾಯಭಾರಿಯಾಗಿ ದರ್ಶನ್ ನೇಮಕ

    ಕೃಷಿ ಇಲಾಖೆಯ ರಾಯಭಾರಿಯಾಗಿ ದರ್ಶನ್ ನೇಮಕ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜ್ಯ ಸರ್ಕಾರದರ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕವಾಗಿದ್ದಾರೆ ಎಂದು ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.

    ಯಾವುದೇ ಗೌರವ ಧನ, ಸಂಭಾವನೆ ಪಡೆಯದೆ ಚಾಲೆಂಜಿಂಗ್ ಸ್ಟಾರ್ ರೈತರ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಡಿ ಫ್ಯಾನ್ಸ್ ಅಭಿಮಾನಿಗಳಲ್ಲಿ ಈ ವಿಚಾರ ತಿಳಿದು ಸಂತಸ ಮನೆಮಾಡಿದೆ.

    ಎರಡು ವರ್ಷಗಳ ಹಿಂದೆ ಅರಣ್ಯ ಇಲಾಖೆಯ ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಿಸುವ ಸಂದೇಶ ಸಾರುವ ರಾಯಭಾರಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು. ಕಾಡಿದ್ದರೆ ನಾಡು ವನವಿದ್ದರೆ ಜೀವನ ಎಂದು ಸಾರಿದ್ದರು. ಇದೀಗ ನೇಗಿಲಯೋಗಿ ಪರ ನಿಂತು ಪ್ರೋತ್ಸಾಹ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ.

    ಸಿನಿಮಾಗಳಿಂದ ಮಾತ್ರವಲ್ಲದೆ ಹಲವು ಒಳ್ಳೆ ಕಾರ್ಯಗಳಿಂದ ದರ್ಶನ್ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅನ್ನದಾತನ ರಾಯಭಾರಿಯಾಗಿ ನಿಂತಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು, ನೆಟ್ಟಿಗರು ಮೆಚ್ಚಿ ಉತ್ತಮ ಪ್ರಶಂಸೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.

    ರಾಜ್ಯದ ಕೃಷಿ ಇಲಾಖೆಯಲ್ಲಿ ಹಲವಾರು ಮಹತ್ತರ ಬದಲಾವಣೆ ಹಾಗೂ ನಾಡಿನ ಯುವ ಜನತೆಗೆ “ವೀಕೆಂಡ್ ಅಗ್ರಿಕಲ್ಚರ್ ಸಂಸ್ಕøತಿ” ಪರಿಚಯಿಸುವ ನಮ್ಮ ಪ್ರಯತ್ನಕ್ಕೆ ಮುಕ್ತ ಮನಸ್ಸಿನಿಂದ ಕೈ ಜೋಡಿಸಿರುವ ದರ್ಶನ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಚಿತ್ರರಂಗದ ವೃತ್ತಿ ಬದುಕಿನ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವ ದರ್ಶನ್ ಅವರು ನಾಡಿನ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ. ಅಲ್ಲದೇ, ಅವರ ಪರಿಸರ ಪ್ರಜ್ಞೆ, ಪ್ರಾಣಿ ಸಂರಕ್ಷಣೆ ಹಾಗೂ ಕೃಷಿ ಚಟುವಟಿಕೆಗಳೆಡಗಿನ ಒಲವು ಇಂದಿನ ಯುವ ಕೃಷಿಕರಿಗೆ ಮಾದರಿಯಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.

  • ಹುಟ್ಟಹಬ್ಬದಂದೇ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆ ಮಾಡಿದ್ರು ಬಿ.ಸಿ ಪಾಟೀಲ್!

    ಹುಟ್ಟಹಬ್ಬದಂದೇ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆ ಮಾಡಿದ್ರು ಬಿ.ಸಿ ಪಾಟೀಲ್!

    ಮಂಡ್ಯ: ಗ್ರಾಮ ವಾಸ್ತವ್ಯ ಮಾದರಿಯಲ್ಲಿ ರೈತರೊಂದಿಗೆ ವಾಸ್ತವ್ಯ ಮಾಡಲು ಕೃಷಿ ಸಚಿವ ಬಿಸಿ ಪಾಟೀಲ್ ರೈತರೊಂದಿಗೆ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮವನ್ನು ಆರಂಭಿಸಿದ್ದು, ಮಂಡ್ಯದಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆಗೆ ಚಾಲನೆ ನೀಡಿದರು. ತಮ್ಮ ಹುಟ್ಟಹಬ್ಬದ ದಿನದಂದೇ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

    ಕೆ.ಆರ್. ಪೇಟೆ ತಾಲೂಕಿನ ಮಡುವಿನಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದರು. ನಾನು ವಾಸ್ತವತೆಯನ್ನು ಅರಿಯುತ್ತಿದ್ದೇನೆ. ನಾನು ಅವರನ್ನು ಕಾಪಿ ಮಾಡುತ್ತಿಲ್ಲ. ಅವರು ಗ್ರಾಮದಲ್ಲಿ ಇದ್ದು ಮಲಗಿ ಹೋಗುತ್ತಿದ್ದರು. ನಾನು ಬೆಳಗ್ಗಿಯಿಂದ ರಾತ್ರಿವರೆಗೂ ಇದ್ದು ವಾಸ್ತವತೆ ಅರಿಯುತ್ತಿದ್ದೇನೆ. ಪ್ರತಿ ಜಿಲ್ಲೆಗೂ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸುತ್ತೇವೆ. ನಾವು ಮಾಡುವ ಕಾರ್ಯಕ್ರಮದಿಂದ ರೈತರ ಸಮಸ್ಯೆ ತಿಳಿಯುತ್ತದೆ. ತಿಂಗಳಿಗೆ ಮೂರು ದಿನ ಈ ಕಾರ್ಯಕ್ರಮ ಮಾಡುತ್ತೇನೆ. ಎಲ್ಲಾ ಜಿಲ್ಲೆ ಸುತ್ತಿದ ಬಳಿಕ ಸಿಎಂಗೆ ವರದಿ ನೀಡುತ್ತೇನೆ. ರೈತರ ಸಂಕಷ್ಟಗಳನ್ನು ಹೇಗೆ ನಿವಾರಿಸಬಹುದು ಎಂದು ಯೋಚನೆ ಮಾಡುತ್ತೇವೆ. ನಾನು ರೈತನ ಮಗನಾಗಿದ್ದು, ಮೊದಲೆಲ್ಲಾ ನಾನು ಎಲ್ಲಾ ಕೆಲಸವನ್ನು ಮಾಡಿದ್ದೇನೆ. ಪೊಲೀಸ್ ಇಲಾಖೆಗೆ, ಸಿನಿಮಾಗೆ ಬಂದ ಮೇಲೆ ಅನುಭವ ಕಡಿಮೆಯಾಗಿದೆ. ಹೀಗಾಗಿ ಮೈ ಸ್ವಲ್ಪ ಬಗ್ಗುತ್ತಿಲ್ಲ. ಈಗ ಮತ್ತೆ ಮೈ ಬಗ್ಗಿಸಿದ್ರೆ ರೈತರ ರೀತಿ ಕೆಲಸ ಮಾಡುತ್ತೇವೆ ಎಂದರು.

    ಜಿಲ್ಲೆಯ ಮಡುವಿನಕೋಡಿ ಗ್ರಾಮದ ಹೊರಹೊಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಬಿಸಿ ಪಾಟೀಲ್ ಕಬ್ಬು ತರಗು ನಿವರ್ಹಣೆ ಬಗ್ಗೆ ಪ್ರಾತ್ಯಕ್ಷಿಕೆಯನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆ ಚಾಲನೆ ನೀಡಿದರು. ಅಲ್ಲದೇ ಮಾಯಿಗೌಡ ಅವರ ಜಮೀನಿನಲ್ಲಿ ರೈತ ಮಹಿಳೆಯರೊಂದಿಗೆ ರಾಗಿ ನಾಟಿ ಮಾಡಿದರು. ಜೈ ಕಿಸಾನ್ ಘೋಷಣೆ ಕೂಗೂತ್ತ ಸಚಿವರು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.

    ಬಳಿಕ ಕೆಆರ್ ಪೇಟೆ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿರುವ ಲಕ್ಷ್ಮೀ ದೇವಮ್ಮ ಅವರ ಸಮಗ್ರ ಕೃಷಿ ತೋಟಕ್ಕೆ ಭೇಟಿ ಕೊಟ್ಟ ಸಚಿವರು, ಭತ್ತದ ಗದ್ದೆ ವೀಕ್ಷಿಣೆ ಮಾಡಿ ಗೊಬ್ಬರವನ್ನು ಚೆಲ್ಲುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಸು ಮತ್ತು ಕುರಿಗಳ ಮೇವಿಗಾಗಿ ಹಲ್ಲು ಕಟಾವು ಮಾಡಿದರು. ಬಿಸಿ ಪಾಟೀಲ್ ಅವರಿಗೆ ಸಚಿವ ನಾರಾಯಣಗೌಡ ಸಾಥ್ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ತೋಟಗಾರಿಕಾ ಸಚಿವರಾದ ನಾರಾಯಣಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವರಿಗೆ, ಕಾರ್ಯಕರ್ತರು ಶುಭಾಶಯ ಕೋರಿದರು.

    ರೈತರಿಗೆ ಆತ್ಮಸ್ಥೆರ್ಯ ತುಂಬುವ, ಸಮಗ್ರ ಕೃಷಿ ಮತ್ತು ಉತ್ಪಾದನಾ ವೆಚ್ಚ ಹಾಗೂ ರೈತರ ಆತ್ಮಹತ್ಯೆ ಕಾರಣ ಏನು ಎಂಬುದನ್ನು ತಿಳಿಯುವುದು. ಮಾದರಿ ರೈತರನ್ನು ಭೇಟಿ ಮಾಡಿ ಅವರ ಅನುಭವ ಬೇರೆ ರೈತರಿಗೆ ಮಾದರಿಯಾಗುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿ ತಿಂಗಳು 2 ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 7 ರಿಂದ ದಿನಪೂರ್ತಿ ರೈತರೊಂದಿಗೆ ಇದ್ದು, ಸಮಗ್ರ ಮಾಹಿತಿ ಸಂಗ್ರಹಿಸಿ ಕೃಷಿ ಇಲಾಖೆಯಲ್ಲಿ ಹೊಸ ಬದಲಾವಣೆ ಮಾಡಲು ಸಚಿವರು ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.

  • ಕೃಷಿ ಇಲಾಖೆ ಮೂವರು ನೌಕರರು ಕೊರೊನಾಗೆ ಬಲಿ

    ಕೃಷಿ ಇಲಾಖೆ ಮೂವರು ನೌಕರರು ಕೊರೊನಾಗೆ ಬಲಿ

    ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಸರ್ಕಾರಿ ಕಚೇರಿಗಳಿಗೂ ಮಹಾಮಾರಿ ಕೊರೊನಾ ಕಾಟ ಹೆಚ್ಚಾಗಿದ್ದು, ಕೃಷಿ ಇಲಾಖೆಯ ಮೂರು ಮಂದಿ ನೌಕರರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

    ಕಳೆದ ಎರಡು ದಿನಗಳಲ್ಲಿ ಕೃಷಿ ಇಲಾಖೆ ಮೂರು ಮಂದಿ ನೌಕರರು ಸಾವನ್ನಪ್ಪಿದ್ದು, ಜಿಲ್ಲಾ ಪೊಲೀಸ್ ಇಲಾಖೆಯಲ್ಲೂ ಕೂಡ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಧಿಕೃತ ಮಾಹಿತಿ ನೀಡಿದ್ದಾರೆ.

    ಜಿಲ್ಲಾ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ಸೇರಿ ಮೂವರು ಸಾವ್ನಪ್ಪಿದ್ದಾರೆ. ಮಹಾಮಾರಿ ಕೋವಿಡ್ ಸೋಂಕಿನಿಂದ ಸಹಾಯಕ ನಿರ್ದೇಶಕ ಹಾಗೂ ಇಬ್ಬರು ಎಫ್‍ಡಿಎ ನೌಕರರು ಬಳಲುತ್ತಿದ್ದರು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆಂದು ಡಿಸಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

  • ಬೀದರಿಗೆ ಮಿಡತೆ ಸೈನ್ಯ ದಾಳಿ ಸಾಧ್ಯತೆ – ಸಕಲ ಸಿದ್ಧತೆ ಮಾಡ್ಕೊಂಡ ಕೃಷಿ ಇಲಾಖೆ

    ಬೀದರಿಗೆ ಮಿಡತೆ ಸೈನ್ಯ ದಾಳಿ ಸಾಧ್ಯತೆ – ಸಕಲ ಸಿದ್ಧತೆ ಮಾಡ್ಕೊಂಡ ಕೃಷಿ ಇಲಾಖೆ

    ಬೀದರ್: ಪಾಕಿಸ್ತಾನದ ಮೂಲಕ ದೇಶದ ನಾನಾ ರಾಜ್ಯಗಳಿಗೆ ದಾಳಿ ಮಾಡಿರುವ ಮಿಡತೆ ಸೇನೆಗೆ ದೇಶದ ರೈತರು ಆತಂಕಗೊಂಡಿದ್ದಾರೆ. ಈ ಮಿಡತೆ ದಂಡು ಕರ್ನಾಟಕದ ಗಡಿ ಜಿಲ್ಲೆ ಬೀದರಿಗೂ ದಾಳಿ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಉತ್ತರ ಭಾರತ, ಮಹಾರಾಷ್ಟ್ರ ಆಯ್ತು, ಈಗ ಕರ್ನಾಟಕಕ್ಕೂ ಮಿಡತೆ ಆತಂಕ

    ಮಿಡತೆ ಸೈನ್ಯ 500 ಕಿಲೋಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ನಾಗಪುರದಲ್ಲಿ ದಾಳಿ ಮಾಡಿವೆ. ಈ ಹಿನ್ನೆಲೆಯಲ್ಲಿ ಈ ಮಿಡತೆ ಸೈನ್ಯ ಗಡಿ ಜಿಲ್ಲೆ ಬೀದರಿಗೆ ದಾಳಿ ಮಾಡುವ ಸಾಧ್ಯತೆಯಿಂದಾಗಿ ಮಿಡತೆ ದಾಳಿ ಎದುರಿಸಲು ಬೀದರ್ ಕೃಷಿ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಪ್ರಮುಖವಾಗಿ ಜಿಲ್ಲೆಯ ಗಡಿ ಭಾಗದ ತಾಲೂಕುಗಳಾದ ಬಸವಕಲ್ಯಾಣ, ಭಾಲ್ಕಿ ಹಾಗೂ ಔರಾದ್‍ನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಮಟೆ ಹಾಗೂ ಬಿತ್ತಿ ಪತ್ರ ಹಂಚಲು ಕೃಷಿ ಇಲಾಖೆ ನಿರ್ಧಾರ ಮಾಡಿದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೃಷಿ ಜಂಟಿ ನಿರ್ದೇಶಕರು ಈಗಾಗಲೇ ಸೂಚನೆ ನೀಡಿದ್ದಾರೆ. ಸೊಲ್ಲಾಪುರ ಕಡೆಯಿಂದ ಬೀದರಿಗೆ ಮಿಡತೆಗಳು ದಂಡು ಎರಡು ದಿನಗಳಲ್ಲಿ ಎಂಟ್ರಿಯಾಗುವ ಸಾಧ್ಯತೆ ಇದೆ.

    ಒಟ್ಟು 4 ಲಕ್ಷ ಎಕರೆ ಕೃಷಿ ಭೂಮಿ ಇದೆ. ಇದರಲ್ಲಿ ಕಬ್ಬು, ತರಕಾರಿ ಹಾಗೂ ಹಣ್ಣುಗಳನ್ನು 30 ಸಾವಿರ ಎಕರೆಯಲ್ಲಿ ರೈತರು ಬೆಳೆದಿದ್ದಾರೆ. ಒಂದು ವೇಳೆ ಮಿಡತೆ ದಾಳಿ ಮಾಡಿದರೆ ಎಲ್ಲಾ ರೀತಿ ಕ್ರಿಮಿನಾಶಕಗಳನ್ನ ರೈತ ಸಂಪರ್ಕ ಕೇಂದ್ರದಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ರೈತರಿಗೆ ಒದಗಿಸುತ್ತೇವೆ ಎಂದು ಜಂಟಿ ಕೃಷಿ ನಿರ್ದೇಶಕರಾದ ವಿದ್ಯಾನಂದ ಮಾಹಿತಿ ನೀಡಿದ್ದಾರೆ.

    ಒಂದು ವೇಳೆ ಗಾಳಿ ದಿಕ್ಕು ಬದಲಾದರೆ ಮಧ್ಯಪ್ರದೇಶದ ಕಡೆ ಹೋಗುತ್ತವೆ ಎಂದು ಕೃಷಿ ಅಧಿಕಾರಿಗಳು ಲೆಕ್ಕಾಚಾರ ಹಾಕಿದ್ದು, ಜಿಲ್ಲೆಯ ರೈತರು ಈ ಕಡೆ ಮಿಡತೆ ದಂಡು ಸುಳಿಯದಿರಲಿ ಎನ್ನುತ್ತಿದ್ದಾರೆ.

  • ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಕೊಪ್ಪಳದ ಗ್ರಾಮಸ್ಥರ ಕೈ ಹಿಡಿದ ನರೇಗಾ ಯೋಜನೆ

    ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಕೊಪ್ಪಳದ ಗ್ರಾಮಸ್ಥರ ಕೈ ಹಿಡಿದ ನರೇಗಾ ಯೋಜನೆ

    ಕೊಪ್ಪಳ: ಕೊರೊನಾ ಲಾಕ್‍ಡೌನ್ ಜಾರಿಯಲ್ಲಿರುವ ಸಂಕಷ್ಟದ ಸ್ಥಿತಿಯಲ್ಲಿ ಗ್ರಾಮೀಣ ಭಾಗದ ಕೂಲಿಕಾರರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮತ್ತು ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಕೂಲಿ ಆಧಾರಿತ ಕಾಮಗಾರಿಗಳನ್ನು ಗುರುತಿಸಿಸಲಾಗಿದೆ. ಅಲ್ಲದೇ ಕೋವಿಡ್-19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೂಲಿಕಾರರಿಗೆ ಕೆಲಸವನ್ನು ನೀಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

    ಕೊಪ್ಪಳ ತಾಲೂಕಿನ ಇರಕಲ್ಲಗಡಾ, ಹುಲಿಗಿ, ಅಳವಂಡಿ, ಬೆಟಗೇರಿ, ಹಲಗೇರಿ, ಬಿಸರಳ್ಳಿ, ಗುಳದಳ್ಳಿ, ಕಲ್ತಾವರಗೇರಾ, ಚಿಕ್ಕಬೊಮ್ಮನಾಳ, ಹಿರೇಬೊಮ್ಮನಾಳ, ಗೊಂಡಬಾಳ, ಕುಷ್ಟಗಿ ತಾಲೂಕಿನ ಶಿರಗುಂಪಿ, ಬಿಜಕಲ್, ಹೂಲಗೇರಾ, ಚಳಗೇರಾ, ಹಿರೇಬನ್ನಿಗೊಳ, ತಳುವಗೇರಾ, ಹನುಮನಾಳ, ಬೆನಕನಾಳ, ಮಾಲಗಿತ್ತಿ, ನಿಲೋಗಲ್, ಜುಮಲಾಪುರ, ಕಿಲ್ಲಾರಹಟ್ಟಿ, ಮೆಣೇಧಾಳ, ಯಲಬುರ್ಗಾ ತಾಲೂಕಿನ ಮುಧೋಳ, ಬಂಡಿ, ತುಮ್ಮರಗುದ್ದಿ, ಬಳೂಟಗಿ, ಬೇವೂರು, ಗೆದಗೇರಿ, ಹಿರೇವಂಕಲಕುಂಟಾ, ಚಿಕ್ಕೊಪ್ಪಾ, ಗಂಗಾವತಿ ತಾಲೂಕಿನ ಮುಸಲಾಪುರ, ಹುಲಿಹೈದರ, ಬಸರಿಹಾಳ, ಗೌರಿಪುರ, ಚಿಕ್ಕಮಾದಿನಾಳ, ಸುಳೇಕಲ್, ಆಗೋಲಿ, ನವಲಿ ಗ್ರಾಮ ಪಂಚಾಯ್ತಿಗಳಲ್ಲಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಅಭಿವೃದ್ಧಿ ಇನ್ನೂ ಮುಂತಾದ ಕೂಲಿ ಆಧಾರಿತ ಕಾಮಗಾರಿಗಳಲ್ಲಿ ಕೆಲಸ ಒದಗಿಸಿ ಸಕಾಲದಲ್ಲಿ ಕೂಲಿ ಹಣ ಪಾವತಿಗೆ ಕ್ರಮವಹಿಸಲಾಗಿದೆ. ಸರ್ಕಾರದ ಆದೇಶದಂತೆ 5 ಜನರಿಗಿಂತ ಹೆಚ್ಚು ಕೂಲಿಕಾರರು ಕೆಲಸ ನಿರ್ವಹಿಸದಂತೆ ನಿಗಾವಹಿಸಿ ಮತ್ತು ಪರಸ್ಪರ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವಂತೆ ನಿಗಾವಹಿಸಲಾಗುತ್ತಿದೆ.

    ಕೃಷಿಗೆ ಪೂರಕ ನರೇಗಾ ಯೋಜನೆ :
    ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಮುಂಗಾರು ಹಂಗಾಮಿಗೆ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ನೀರಾವರಿ ಇಲ್ಲದ ಪ್ರದೇಶಗಳಲ್ಲಿ ಕೃಷಿ ಇಲಾಖೆಯಿಂದ ಕ್ಷೇತ್ರ ಬದು ಮತ್ತು ಕಂದಕ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನೀಡಲಾಗಿದೆ.

    ನೀರಾವರಿ ಇರುವ ಪ್ರದೇಶಗಳಲ್ಲಿ ರೈತರು ತಮ್ಮ ತಮ್ಮ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಕಾಮಗಾರಿಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಹೆಚ್ಚಿಸಿಕೊಳ್ಳಲು ಮತ್ತು ಕೃಷಿ ಚಟುವಟಿಕೆಗಳಿಗೆ ಪ್ರಯೋಜನಕಾರಿಯಾಗಿವೆ.

    ಸಂಕಷ್ಟದ ಜನತೆಗೆ ಪರಿಹಾರವಾದ ನರೇಗಾ:
    ಕೊರೊನಾ ಸಂಕಷ್ಟದಿಂದ ಎಲ್ಲಾ ಕಡೆ ಉದ್ಯೋಗಗಳು ಸ್ಥಗಿತಗೊಂಡಿವೆ. ಉದ್ಯೋಗಕ್ಕೆಂದು ಮಹಾನಗರಗಳಿಗೆ ವಲಸೆ ಹೋದ ಅನೇಕ ಕೂಲಿಕಾರರು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಉದ್ಯೋಗವಿಲ್ಲದೆ ಕುಳಿತುಕೊಂಡಿದ್ದ ಗ್ರಾಮಸ್ಥರಿಗೆ, ಕೃಷಿ ಕಾರ್ಮಿಕರಿಗೆ, ರೈತರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಿಂದ ಸ್ವಗ್ರಾಮಗಳಲ್ಲಿ ಉದ್ಯೋಗವನ್ನು ಒದಗಿಸಲಾಗಿದೆ. ಇದರಿಂದ ಜನರು ಆರ್ಥಿಕವಾಗಿ ಕೊಂಚ ಗಟ್ಟಿಯಾಗಿದ್ದಾರೆ. ನರೇಗಾ ಯೋಜನೆಯಡಿ ಒಂದು ದಿನಕ್ಕೆ ಪ್ರಸ್ತುತ 275 ರೂಪಾಯಿಗಳನ್ನು ನೀಡಲಾಗುತ್ತಿದೆ. ಕೆಲಸಕ್ಕೆ ಬರುವರರು ತಮ್ಮದೇ ಗುದ್ದಲಿ, ಸಲಕೆ ತಂದರೆ ಹೆಚ್ಚುವರಿಯಾಗಿ 10 ರೂಪಾಯಿ ಸೇರಿ ಒಟ್ಟು 285 ರೂಪಾಯಿಗಳನ್ನು ನೀಡಲಾಗುತ್ತದೆ.

    ಈಗಾಗಲೇ ಜಿಲ್ಲೆಯಲ್ಲಿ 52,655 ಮಾನವ ದಿನಗಳನ್ನು ಸೃಜಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವ ಗುರಿಯನ್ನು ಹೊಂದಲಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿನ ಗ್ರಾಮೀಣ ಕೂಲಿಕಾರರು ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದು, ಅವರು ಜಾಬ್‍ಕಾರ್ಡ ಕೇಳಿದಲ್ಲಿ ತುರ್ತಾಗಿ ಜಾಬ್‍ಕಾರ್ಡ ಒದಗಿಸಿ ಕೆಲಸ ನೀಡಲಾಗಿದೆ. ಪ್ರತಿ ದಿನ ಕೂಲಿಕಾರರು ಸ್ಥಳದಲ್ಲಿ ಕೆಲಸ ಪ್ರಾರಂಭಿಸುವ ಮುನ್ನ ಕೋವಿಡ್-19ರ ಕುರಿತು ಅರಿವು ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ಕೈತೊಳೆಯಲು ನೀರು ಹಾಗೂ ಸಾಬೂನು, ನೆರಳಿನ ವ್ಯವಸ್ಥೆ, ಮಕ್ಕಳ ಪಾಲನೆಗೆ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಸೌಲಭ್ಯ, ಸ್ಯಾನಿಟೈಜರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

    ತಾಂತ್ರಿಕ ಸಹಾಯಕರು, ಬೇರ್ ಫುಟ್ ಟೆಕ್ನಿಷಿಯನ್, ಕಾಯಕ ಬಂಧುಗಳನ್ನು ನೇಮಿಸಿ ಕೂಲಿಕಾರರಲ್ಲಿ ನೆಗಡಿ, ಕೆಮ್ಮು, ಜ್ವರ ಇತ್ಯಾದಿ ಅನಾರೋಗ್ಯ ಕಂಡುಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಪರೀಕ್ಷೆಗೆ ಹಾಗೂ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳಲು ಸೂಚಿಸಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ಗ್ರಾಮೀಣ ಭಾಗದ ಕೂಲಿಕಾರರು ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದ್ದು, ಸ್ವಪ್ರೇರಿತರಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.