Tag: Dentistry

  • ಪಿಜಿ ದಂತವೈದ್ಯ ಸೀಟು ಹಂಚಿಕೆ – ಆ.3ರಿಂದ 2ನೇ ಸುತ್ತಿನ ಸೀಟು ಹಂಚಿಕೆ: ಕೆಇಎ

    ಪಿಜಿ ದಂತವೈದ್ಯ ಸೀಟು ಹಂಚಿಕೆ – ಆ.3ರಿಂದ 2ನೇ ಸುತ್ತಿನ ಸೀಟು ಹಂಚಿಕೆ: ಕೆಇಎ

    ಬೆಂಗಳೂರು: ಸ್ನಾತಕೋತ್ತರ ದಂತವೈದ್ಯಕೀಯ (ಪಿಜಿಇಟಿ- ಎಂಡಿಎಸ್-24) ಕೋರ್ಸ್‌ನ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆ.3 ರಿಂದ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

    ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಛಾಯ್ಸ್-2 ಆಯ್ಕೆ ಮಾಡಿ, ಶುಲ್ಕ ಪಾವತಿಸಿರುವವರು, ಛಾಯ್ಸ್-3 ಅನ್ನು ಆಯ್ಕೆ ಮಾಡಿರುವವರು ಹಾಗೂ ಯಾವುದೇ ಸೀಟು ಹಂಚಿಕೆಯಾಗದೇ ಇರುವವರು ಆ.3ರಿಂದ ಕೆಇಎ ಕಚೇರಿಯಲ್ಲಿ ತಮ್ಮ ಎಲ್ಲ ಮೂಲ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ದಾಖಲೆ ಸಲ್ಲಿಸದಿದ್ದರೆ ಅಂತಹವರಿಗೆ ಸೀಟು ಹಂಚಿಕೆ ಮಾಡಲಾಗುವುದಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮುಡಾ ಸೈಟ್ ಹಗರಣ ಕೇಸ್; ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ನೋಟಿಸ್

    ಎರಡನೇ ಸುತ್ತಿನ ಸೀಟು ಹಂಚಿಕೆಗೆ ಆ.3 ರಂದು ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಲಾಗುತ್ತದೆ. ಆ.4ರಿಂದ 6ರವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಸಮಯ ನೀಡಲಾಗುತ್ತದೆ. ಆ.7ರಂದು ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಹಾಗೂ ಆ.8ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ನಂತರ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಲು ಹಾಗೂ ಕಾಲೇಜಿಗೆ ವರದಿ ಮಾಡಿಕೊಳ್ಳಲು ಆ.13 ಕೊನೆ ದಿನ ಎಂದು ಅವರು ವಿವರಿಸಿದ್ದಾರೆ.

  • ಆಸ್ಪತ್ರೆ ಸಿಗದೇ 7 ಕಿ.ಮೀ ನಡಿಗೆ – ಕೊನೆಗೆ ಡೆಂಟಲ್ ಆಸ್ಪತ್ರೆಯಲ್ಲಿ ಹೆರಿಗೆ

    ಆಸ್ಪತ್ರೆ ಸಿಗದೇ 7 ಕಿ.ಮೀ ನಡಿಗೆ – ಕೊನೆಗೆ ಡೆಂಟಲ್ ಆಸ್ಪತ್ರೆಯಲ್ಲಿ ಹೆರಿಗೆ

    – ಡೆಂಟಲ್ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿದ ದಂತವೈದ್ಯೆ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ವೇಳೆ ಏಳು ಕಿ.ಮೀ ನಡೆದುಕೊಂಡು ಬಂದು ಕೊನೆಗೆ ಎಲ್ಲೂ ಆಸ್ಪತ್ರೆ ಸಿಗದೆ ಡೆಂಟಲ್ ಆಸ್ಪತ್ರೆಯಲ್ಲೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಬೆಂಗಳೂರಿನ ದೊಡ್ಡ ಬೊಮ್ಮಸಂದ್ರದಲ್ಲಿ ನಡೆದಿದೆ.

    ಕೊರೊನಾ ಲಾಕ್‍ಡೌನ್‍ನಿಂದ ದೇಶವೇ ಸ್ತಬ್ಧವಾಗಿದೆ. ಈ ವೇಳೆ ಲೊಟ್ಟೆಗೊಲ್ಲಹಳ್ಳಿಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಸ್ಪತ್ರೆಗೆ ಹೋಗಲು ಯಾವುದೇ ವಾಹನ ಕೂಡ ಸಿಕ್ಕಿಲ್ಲ. ಆಕೆ ಆಸ್ಪತ್ರೆ ಸಿಗುತ್ತದೆ ಎಂಬ ನಂಬಿಕೆ ಮೇಲೆ ಲೊಟ್ಟೆಗೊಲ್ಲಹಳ್ಳಿಯಿಂದ ದೊಡ್ಡ ಬೊಮ್ಮಸಂದ್ರದವರೆಗೂ ಸುಮಾರು ಏಳು ಕಿ.ಲೋ ಮೀಟರ್ ಹೆರಿಗೆ ನೋವಿನ ನಡುವೆಯೂ ನಡೆದುಕೊಂಡು ಬಂದಿದ್ದಾರೆ.

    ಹೀಗೆ ತನ್ನ ಗಂಡನ ಜೊತೆ ನಡೆದುಕೊಂಡು ಬಂದ ಮಹಿಳೆಗೆ ಲಾಕ್‍ಡೌನ್ ಇರುವುದರಿಂದ ಯಾವುದೇ ಆಸ್ಪತ್ರೆ ಸಿಕ್ಕಿಲ್ಲ. ಜೊತೆಗೆ ಮುಂದೆ ಹೋಗಲು ಯಾವುದೇ ವಾಹನ ಕೂಡ ಸಿಕ್ಕಿಲ್ಲ. ಈ ನಡುವೆ ಆಕೆಗೆ ಹೆರಿಗೆ ನೋವು ಜಾಸ್ತಿಯಾಗಿದೆ. ಹೀಗಾಗಿ ಆಕೆಯ ಗಂಡ ಅಲ್ಲಿಯೇ ಇದ್ದ ದೊಡ್ಡ ಬೊಮ್ಮಸಂದ್ರದ ಡೆಂಟಲ್ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ದಂತವೈದ್ಯರು ಡೆಂಟಲ್ ಆಸ್ಪತ್ರೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ಹೆರಿಗೆ ಮಾಡಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಹೆರಿಗೆ ಮಾಡಿಸಿದ ದಂತವೈದ್ಯೆ ಡಾ. ರಮ್ಯಾ, ಆಕೆ ಹೆರಿಗೆ ನೋವಿನ ನಡುವೆಯೂ ಆಸ್ಪತ್ರೆ ಸಿಗುತ್ತೆ ಎಂಬ ನಂಬಿಕೆ ಮೇಲೆ ಸುಮಾರು 7 ಕಿ.ಮೀ ನಡೆದುಕೊಂಡು ಬಂದಿದ್ದಾರೆ. ಆದರೆ ಅವರಿಗೆ ಯಾವುದೇ ಆಸ್ಪತ್ರೆ ಸಿಕ್ಕಿರಲಿಲ್ಲ. ನಂತರ ನಮ್ಮ ಆಸ್ಪತ್ರೆಗೆ ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹೆರಿಗೆಯ ನಂತರ ಬ್ಲೀಡಿಂಗ್ ಜಾಸ್ತಿ ಇತ್ತು ಜೊತೆಗೆ ಮಗು ಯಾವುದೇ ಪ್ರತಿಕ್ರಿಯೆ ನೀಡಿಲಿಲ್ಲ. ಆದರೆ ನಂತರ ಮಗು ಪ್ರತಿಕ್ರಿಯೆ ನೀಡಿತು. ಬಳಿಕ ಅವರನ್ನು ಅಂಬುಲೆನ್ಸ್ ನಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು ಎಂದು ಹೇಳಿದ್ದಾರೆ.

    ಲಾಕ್‍ಡೌನ್ ರೀತಿಯ ತುರ್ತುಪರಿಸ್ಥಿತಿಯ ಸಮಯದಲ್ಲಿ ದಂತವೈದ್ಯೆ ಯಾದರೂ ಹೆರಿಗೆ ಮಾಡಿಸಿದ ವೈದ್ಯೆ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಮಗು ಮತ್ತು ವೈದ್ಯೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ತುಂಬ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮಗೆ ಧನ್ಯವಾದ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.