Tag: Denmark

  • ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್‌ ಪ್ರತಿಗಳನ್ನು ಸುಡುವಂತಿಲ್ಲ – ಮಸೂದೆಗೆ ಡೆನ್ಮಾರ್ಕ್‌ ಸಂಸತ್‌ ಅನುಮೋದನೆ

    ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್‌ ಪ್ರತಿಗಳನ್ನು ಸುಡುವಂತಿಲ್ಲ – ಮಸೂದೆಗೆ ಡೆನ್ಮಾರ್ಕ್‌ ಸಂಸತ್‌ ಅನುಮೋದನೆ

    ಕೋಪನ್ ಹ್ಯಾಗನ್: ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್ (Quran) ಪ್ರತಿಗಳನ್ನು ಸುಡುವುದನ್ನು ತಡೆಯುವ ಮಸೂದೆಗೆ ಡೆನ್ಮಾರ್ಕ್ (Denmark) ಸಂಸತ್‌ ಗುರುವಾರ ಅನುಮೋದನೆ ನೀಡಿದೆ.

    ಇಸ್ಲಾಂ ಧರ್ಮದ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಮೇಲೆ ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ಡ್ಯಾನಿಶ್ ಭದ್ರತಾ ವ್ಯವಸ್ಥೆಯಲ್ಲಿ ಆತಂಕ ಎದುರಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್ ಪ್ರತಿಗಳನ್ನು ಸುಡುವುದನ್ನು ಕಾನೂನುಬಾಹಿರಗೊಳಿಸುವ ಮಸೂದೆಯನ್ನು ಡೆನ್ಮಾರ್ಕ್ ಸಂಸತ್ತು ಗುರುವಾರ ಅಂಗೀಕರಿಸಿತು. ಇದನ್ನೂ ಓದಿ: ಪಾಕಿಸ್ತಾನದ ಮೃಗಾಲಯದಲ್ಲಿ ಹುಲಿಗೆ ಆಹಾರವಾದ ಪ್ರವಾಸಿಗ!

    ಡೆನ್ಮಾರ್ಕ್ ಮತ್ತು ಸ್ವೀಡನ್ ಈ ವರ್ಷ ಸಾರ್ವಜನಿಕ ಪ್ರತಿಭಟನೆಗಳ ಪರಿಣಾಮ ಎದುರಿಸಿದವು. ಅಲ್ಲಿ ಇಸ್ಲಾಂ ವಿರೋಧಿ ಕಾರ್ಯಕರ್ತರು ಕುರಾನ್‌ನ ಪ್ರತಿಗಳನ್ನು ಸುಟ್ಟುಹಾಕಿದರು. ಇದರಿಂದ ಮುಸ್ಲಿಮರೊಂದಿಗೆ ಉದ್ವಿಗ್ನತೆ ಉಂಟಾಯಿತು. ಇಂತಹ ನಡವಳಿಕೆಗಳಿಗೆ ಕಡಿವಾಣ ಬೀಳಬೇಕು ಎಂದು ಪ್ರಬಲವಾಗಿ ಒತ್ತಾಯಿಸಲಾಯಿತು.

    ಕುರಾನ್‌ ಪ್ರತಿಗಳನ್ನು ಸುಡುವುದು, ಧರ್ಮವನ್ನು ಟೀಕಿಸುವುದು ಸರಿಯಲ್ಲ. ಇಂತಹ ನಡವಳಿಕೆಗಳು ಈ ನೆಲದ ಉದಾರವಾದಿ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಸ್ವೀಡನ್‌ ಮತ್ತು ಡೆನ್ಮಾರ್ಕ್‌ನ ದೇಶೀಯ ವಿಮರ್ಶಕರು ವಾದಿಸಿದ್ದಾರೆ. ಇದನ್ನೂ ಓದಿ: ಚೀನಾಗೆ ಬಿಗ್‌ ಶಾಕ್‌ – ಮಹತ್ವಾಕಾಂಕ್ಷೆಯ BRI ಯೋಜನೆಯಿಂದ ಹೊರಬಂದ ಇಟಲಿ

    ಈ ಹೊಸ ನಿಯಮಗಳು ವಾಕ್ ಸ್ವಾತಂತ್ರ್ಯದ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರುತ್ತದೆ. ಇತರ ರೀತಿಯಲ್ಲಿ ಧರ್ಮವನ್ನು ಟೀಕಿಸುವುದು ಕಾನೂನುಬದ್ಧವಾಗಿ ಉಳಿಯುತ್ತದೆ ಎಂದು ಡೆನ್ಮಾರ್ಕ್‌ನ ಕೇಂದ್ರೀಯ ಸಮ್ಮಿಶ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

  • ಉಕ್ರೇನ್ ಕದನ ವಿರಾಮಕ್ಕೆ ಪ್ರಧಾನಿ ಮೋದಿ ಕರೆ

    ಉಕ್ರೇನ್ ಕದನ ವಿರಾಮಕ್ಕೆ ಪ್ರಧಾನಿ ಮೋದಿ ಕರೆ

    ಕೋಪನ್‌ಹೇಗನ್: ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ತಟಸ್ಥ ನಿಲುವು ತಾಳಿದ್ದ ಪ್ರಧಾನಿ ನರೇಂದ್ರ ಮೋದಿ, ಉಕ್ರೇನ್‌ನಲ್ಲಿ ನಡೆಯುತ್ತಿರುವ ನಾಗರಿಕರ ಹತ್ಯೆಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದು, ಉಭಯ ರಾಷ್ಟ್ರಗಳು ಬಿಕ್ಕಟ್ಟು ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

    narendra modi Denmark (1)

    ಉಕ್ರೇನ್‌ನಲ್ಲಿ ತಕ್ಷಣ ಕದನ ವಿರಾಮ ಘೋಷಿಸಿ ಉಭಯ ದೇಶಗಳು ಮಾತುಕತೆಯ ಮೂಲಕ ಬಿಕ್ಕಟ್ಟು ಪರಿಹರಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಇದೇ ವೇಳೆ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟುಗಳ ಬಗ್ಗೆ ಚರ್ಚೆ ನಡೆಸಿ, ವಿಶ್ವಸಂಸ್ಥೆಯ ಚಾರ್ಟರ್‌ನಲ್ಲಿ ತಿಳಿಸಿದಂತೆ ಮಾತುಕತೆಯ ಬಿಕ್ಕಟ್ಟನ್ನು ಪರಿಹರಿಸಲು ಉಭಯ ದೇಶಗಳು ಮುಂದಾಗಬೇಕು ಎಂದು ಕರೆ ನೀಡಿದರು.

    ಯುದ್ಧದಲ್ಲಿ ಯಾರೂ ಗೆದ್ದಿಲ್ಲ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಯಾವುದೂ ಗೆದ್ದಿಲ್ಲ. ಯುದ್ಧವನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಉಕ್ರೇನ್ ಸಂಘರ್ಷದಿಂದಾಗಿ ತೈಲ ಬೆಲೆಗಳು ಗಗನಕ್ಕೇರುತ್ತಿವೆ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಆಹಾರ ಧಾನ್ಯಗಳು ಮತ್ತು ರಸಗೊಬ್ಬರಗಳ ಕೊರತೆಯಿದೆ. ಇದು ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳ ಬೆಳವಣಿಗೆಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಗಂಭೀರ ವಿಚಾರವಾಗಿದೆ ಎಂದು ಆತಂಕಪಟ್ಟಿದ್ದರು.

  • ಡೆನ್ಮಾರ್ಕ್‍ಗೆ ಮೋದಿ ಭೇಟಿ- ಉಭಯ ರಾಷ್ಟ್ರಗಳ ಸಂಬಂಧ ಚರ್ಚೆ

    ಡೆನ್ಮಾರ್ಕ್‍ಗೆ ಮೋದಿ ಭೇಟಿ- ಉಭಯ ರಾಷ್ಟ್ರಗಳ ಸಂಬಂಧ ಚರ್ಚೆ

    ಕೋಪನ್ ಹ್ಯಾಗನ್: ಭಾರತ ಮತ್ತು ಯುರೋಪಿಯನ್ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಶೀಘ್ರವೇ ಮುಕ್ತಾಯಗೊಳ್ಳುವ ಭರವಸೆಯನ್ನು ಭಾರತ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

    ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2023ರ ಅಂತ್ಯದ ವೇಳೆಗೆ ಅಥವಾ 2024ರ ಪ್ರಾರಂಭದಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ನಡೆಸಲು ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಸಜ್ಜಾಗಿದೆ ಎಂದು ತಿಳಿಸಿದರು.

    ಭಾರತವು 2007ರಲ್ಲಿ ಯುರೋಪಿಯನ್‍ನೊಂದಿಗೆ ಮುಕ್ತ ವ್ಯಾಪಾರಕ್ಕಾಗಿ ಮಾತುಕತೆಗಳನ್ನು ಪ್ರಾರಂಭಿಸಿತ್ತು. ಆದರೆ ಎರಡೂ ಕಡೆಯವರು ಒಪ್ಪಂದಕ್ಕೆ ಬರಲು ವಿಫಲವಾದ ಕಾರಣ 2013ರಲ್ಲಿ ಮಾತುಕತೆಗಳು ಸ್ಥಗಿತಗೊಂಡವು. ನಂತರ ಕಳೆದ ವರ್ಷ ಮಾತುಕತೆ ಪುನಾರಂಭವಾಯಿತು. ಯುರೋಪ್ ಭಾರತದಲ್ಲಿನ ಅತಿ ದೊಡ್ಡ ಹೂಡಿಕೆದಾರರಲ್ಲಿ ಒಂದಾಗಿದೆ.

    ಮೋದಿ ಮತ್ತು ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರು ಎರಡೂ ರಾಷ್ಟ್ರಗಳ ನಡುವಿನ ಹಸಿರು ಕಾರ್ಯತಂತ್ರದ ಸಹಭಾಗಿತ್ವದ ಪ್ರಗತಿಯನ್ನು ಪರಿಶೀಲಿಸಲು ನಿಯೋಗ ಮಟ್ಟದ ಮಾತುಕತೆ ನಡೆಸಿದರು.

    ಭಾರತ-ಯುರೋಪಿಯನ್ ಸಂಬಂಧಗಳು, ಇಂಡೋ-ಪೆಸಿಫಿಕ್ ಮತ್ತು ಉಕ್ರೇನ್ ಸೇರಿದಂತೆ ಹಲವು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಲಾಯಿತು. ಇದನ್ನೂ ಓದಿ: ಅಮಿತ್ ಶಾ ಐರನ್ ಮ್ಯಾನ್, ಹಿಡಿದ ಕೆಲಸ ಬಿಡೋದಿಲ್ಲ: ಅನುರಾಗ್ ಠಾಕೂರ್

    200ಕ್ಕೂ ಹೆಚ್ಚು ಡ್ಯಾನಿಶ್ ಕಂಪನಿಗಳು ಭಾರತದಲ್ಲಿ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿವೆ. ಈ ಕಂಪನಿಗಳು ಭಾರತದಲ್ಲಿ ವ್ಯಾಪಾರ ಮತ್ತು ಆರ್ಥಿಕ ಸುಧಾರಣೆಗಳನ್ನು ಸುಲಭಗೊಳಿಸುವುದರಿಂದ ಲಾಭ ಪಡೆಯುತ್ತಿವೆ ಎಂದರು. ಇದನ್ನೂ ಓದಿ: ಎಂಟಿಬಿಗೆ ಇದೀಗ ಅವರ ತಪ್ಪು ಗೊತ್ತಾಗಿದೆ: ಪರಮೇಶ್ವರ್

  • ‘ಒ’ ರಕ್ತದ ಗುಂಪಿನವರಿಗೆ ಕೊರೊನಾ ಸಾಧ್ಯತೆ ಕಡಿಮೆ – ರಿಸ್ಕ್‌ ಜಾಸ್ತಿ ಯಾರಿಗೆ?

    ‘ಒ’ ರಕ್ತದ ಗುಂಪಿನವರಿಗೆ ಕೊರೊನಾ ಸಾಧ್ಯತೆ ಕಡಿಮೆ – ರಿಸ್ಕ್‌ ಜಾಸ್ತಿ ಯಾರಿಗೆ?

    – ಡೆನ್ಮಾರ್ಕ್‌ ಮತ್ತು ಕೆನಡಾದ ಅಧ್ಯಯನ ವರದಿ
    – ಎ, ಬಿ, ಎಬಿ ರಕ್ತದ ಗುಂಪಿನವರಿಗೆ ಬೇಗ ಸೋಂಕು

    ನವದೆಹಲಿ: ಕೋವಿಡ್‌ 19 ‘ಒ’ ರಕ್ತದ ಗುಂಪಿನವರಿಗೆ ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ಹೇಳಿದೆ.

    ಡೆನ್ಮಾರ್ಕ್‌ ಮತ್ತು ಕೆನಡಾದ ಸಂಶೋಧಕರು ರೋಗಿಗಳ ರಕ್ತದ ಗುಂಪುಗಳನ್ನು ಅಧ್ಯಯನ ಮಾಡಿ ಯಾವ ರಕ್ತದ ಗುಂಪು ಹೊಂದಿದವರಿಗೆ ಬೇಗ ಕೊರೊನಾ ಬರುತ್ತದೆ ಎಂಬ ವರದಿಯನ್ನು ಪ್ರಕಟಿಸಿದ್ದಾರೆ.

    ಎ, ಬಿ, ಎಬಿ ರಕ್ತದ ಗುಂಪಿನವರಿಗೆ ಕೊರೊನಾ ಬೇಗ ಬರುತ್ತದೆ ಎಂದು ಡೆನ್ಮಾರ್ಕ್‌ ಅಧ್ಯಯನ ತಿಳಿಸಿದೆ. ಈ ರಕ್ತವನ್ನು ಹೊಂದಿರುವ ರೋಗಿಗಳ ಮೇಲೆ ಯಾಕೆ ಬೇಗ ಸೋಂಕು ಬರುತ್ತದೆ ಎಂಬುದರ ಬಗ್ಗೆ ವರದಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಫೆ. 27ರಿಂದ ಜುಲೈ 30 ರವರೆಗೆ 8,41,327 ರೋಗಿಗಳಳ ಮೇಲೆ ಅಧ್ಯಯನ ನಡೆಸಿ ಈ ವರದಿಯನ್ನು ಡೆನ್ಮಾರ್ಕ್‌ ಸಂಶೋಧಕರು ತಯಾರಿಸಿದ್ದಾರೆ.

    ಜಗತ್ತಿನಲ್ಲಿ ‘ಒ’ ರಕ್ತದ ಗುಂಪಿನವರು ಹೆಚ್ಚು ಜನರಿದ್ದಾರೆ. ಬೇರೆ ರಕ್ತದ ಗುಂಪಿನವರಿಗೆ ಹೋಲಿಸಿದರೆ ಇವರಿಗೆ ಕೊರೊನಾ ಬರುವ ಸಾಧ್ಯತೆ ಕಡಿಮೆ. ಒಂದು ವೇಳೆ ತಗಲಿದರೂ ಗಂಭೀರ ಸ್ವರೂಪಕ್ಕೆ ಹೋಗುವ ಸಾಧ್ಯತೆ ಕಡಿಮೆ ಎಂದು ವರದಿ ತಿಳಿಸಿದೆ.

    ಕೆನಡಾ ಅಧ್ಯಯನದ ಪ್ರಕಾರ ಎ ಮತ್ತು ಎಬಿ ರಕ್ತದ ಗುಂಪಿನವರಿಗೆ ಕೊರೊನಾ ಬರುವ ಸಾಧ್ಯತೆ ಹೆಚ್ಚು ಮತ್ತು ಅಪಾಯವೂ ಹೆಚ್ಚು ಎಂದು ಹೇಳಿದೆ. ‘ಒ’ ರಕ್ತದ ಗುಂಪಿನವರಿಗೆ ಹೋಲಿಸಿದರೆ ಈ ರಕ್ತದ ಗುಂಪಿನವರು ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದೆ.

    ಈ ಹಿಂದೆ ನಡೆದ ಅಧ್ಯಯನದಲ್ಲಿ ಎ ರಕ್ತದ ಗುಂಪು ಹೊಂದಿರುವ ಮಂದಿಗೆ ಹೃದಯ ಮತ್ತು ಗ್ಯಾಸ್ಟ್ರೀಕ್‌ ಕ್ಯಾನ್ಸರ್‌ ಕಡಿಮೆ ಎಂದು ಹೇಳಿದ್ದವು.

    ‘ಒ’ ಗುಂಪಿನವರಿಗೆ ಅಪಾಯ ಕಡಿಮೆ ‘ಎ’ ರಕ್ತದ ಗುಂಪಿನವರಿಗೆ ಬೇಗ ಕೊರೊನಾ ವೈರಸ್‌ ಬರುತ್ತದೆ ಎಂದು ಈ ಹಿಂದೆ ಚೀನಾದ ಅಧ್ಯಯನ ತಿಳಿಸಿತ್ತು. ಈ ಅಧ್ಯಯನಕ್ಕೆ ಪೂರಕ ಎಂಬಂತೆ ಈಗ ಡೆನ್ಮಾರ್ಕ್‌ ಮತ್ತು ಕೆನಡಾದ ಅಧ್ಯಯನ ಸಹ ಪ್ರಕಟವಾಗಿದೆ. ಇದನ್ನೂ ಓದಿ: ಯಾವ ರಕ್ತದ ಗುಂಪಿನವರಿಗೆ ಕೊರೊನಾ ಬೇಗ ಬರುತ್ತದೆ? – ಚೀನಾ ಅಧ್ಯಯನ ವರದಿ ಬಹಿರಂಗ

    ‘ಒ’ ಗುಂಪಿನ ರಕ್ತವನ್ನು ಹೊಂದಿರುವವರು ಸಾರ್ವತ್ರಿಕ ದಾನಿಗಳೆಂದು ಗುರುತಿಸಿಕೊಂಡಿದ್ದಾರೆ. ಇವರು ಯಾರಿಗೆ ಬೇಕಾದರೂ ರಕ್ತವನ್ನು ದಾನ ಮಾಡಬಹುದು. ಆದರೆ ಈ ಗುಂಪಿನವರು ‘ಒ’ ನೆಗೆಟಿವ್‌ ಹೊಂದಿರುವ ವ್ಯಕ್ತಿಗಳಿಂದ ಮಾತ್ರ ರಕ್ತವನ್ನು ಪಡೆಯಬೇಕು.

    ಕೊರೊನಾ ವೈರಸ್‌ ಮೂಗಿನ ಮೂಲಕ ಶ್ವಾಸಕೋಶವನ್ನು ಪ್ರವೇಶಿಸಿ ಬಳಿಕ ರಕ್ತದಲ್ಲಿ ಸೇರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಬಹಳ ಬೇಗ ವೈರಸ್‌ ತಗುಲುತ್ತದೆ.

    ‘ಒ’ ರಕ್ತದ ಗುಂಪಿನವರಿಗೆ ಸೋಂಕು ಬರುವುದೇ ಇಲ್ಲ ಎಂದು ಎಲ್ಲೂ ಅಧ್ಯಯನ ಹೇಳಿಲ್ಲ. ಅಷ್ಟೇ ಅಲ್ಲದೇ ಈ ಅಧ್ಯಯನಗಳು ಭಾರತದಲ್ಲಿ ನಡೆದಿಲ್ಲ. ಕೊರೊನಾ ವೈರಸ್‌ ಒಂದೊಂದು ದೇಶದಲ್ಲಿ ಒಂದೊಂದು ರೀತಿ ವರ್ತಿಸುವ ಕಾರಣ ಪ್ರತಿಯೊಬ್ಬರು ಜಾಗೃತಿ ವಹಿಸುವುದು ಬಹಳ ಮುಖ್ಯ.

  • ಕೊರೊನಾಗೆ ಬೆಚ್ಚಿದ ಯುರೋಪ್ – ಇಟಲಿ ಬಳಿಕ ಈಗ ಡೆನ್ಮಾರ್ಕ್ ಲಾಕ್

    ಕೊರೊನಾಗೆ ಬೆಚ್ಚಿದ ಯುರೋಪ್ – ಇಟಲಿ ಬಳಿಕ ಈಗ ಡೆನ್ಮಾರ್ಕ್ ಲಾಕ್

    – ಶಾಲಾ, ಕಾಲೇಜುಗಳು ಬಂದ್, ಒಂದೇ ವಾರದಲ್ಲಿ 442 ಕೇಸ್ ದಾಖಲು
    – ಯುರೋಪ್ ದೇಶಗಳ ಪ್ರವಾಸಿಗರ ಭೇಟಿಗೆ ಟ್ರಂಪ್ ನಿರ್ಬಂಧ
    – ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಡಬ್ಲ್ಯೂಎಚ್‍ಒ
    – ಇಟಲಿಯಲ್ಲಿ ಆಹಾರ, ಮೆಡಿಕಲ್ ಶಾಪ್ ತೆರೆಯಲು ಮಾತ್ರ ಅನುಮತಿ

    ಕೋಪನ್ ಹೇಗನ್/ ಜಿನೀವಾ/ ವಾಷಿಂಗ್ಟನ್: ಇಟಲಿ ಬಳಿಕ ಯುರೋಪ್ ಖಂಡದ ಡೆನ್ಮಾರ್ಕ್ ಈಗ ಭಾಗಶ: ಲಾಕ್ ಆಗಿದೆ. ಈ ವಾರದಲ್ಲಿ 442 ಪ್ರಕರಣಗಳು ದಾಖಲಾಗುತ್ತಿದ್ದಂತೆ ಡೆನ್ಮಾರ್ಕ್ ಸರ್ಕಾರ 2 ವಾರಗಳ ಕಾಲ ಎಲ್ಲ ಶಾಲೆ, ವಿಶ್ವವಿದ್ಯಾಲಯಗಳನ್ನು ಮುಚ್ಚುವಂತೆ ಆದೇಶಿಸಿದೆ.

    ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು 100ಕ್ಕೂ ಹೆಚ್ಚು ಜನ ಭಾಗವಹಿಸುವ ಸಾರ್ವಜನಿಕ ಸಮಾರಂಭವನ್ನು ನಿಷೇಧಿಸಿದೆ. ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಬೇಕೆಂದು ಕಂಪನಿಗಳಿಗೆ ಸೂಚಿಸಿದೆ.

    ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡೆನ್ಮಾರ್ಕ್ ಪ್ರಧಾನಿ ಫ್ರೆಡಿರಿಕ್ಸೆನ್, ಬಹಳ ವೇಗವಾಗಿ ಕೊರೊನಾ ಹಬ್ಬುತ್ತಿದೆ. ಇದನ್ನು ನಿಯಂತ್ರಿಸಲು ಕಠಿಣ ನಿಯಮ ಪಾಲನೆ ಮಾಡುವುದು ಅಗತ್ಯವಾಗಿದೆ. ಉದ್ಯಮಗಳು ಮುಚ್ಚಬೇಕು. ಕೆಲವರು ಉದ್ಯೋಗ ಕಳೆದುಕೊಳ್ಳಬಹುದು. ಆದರೆ ರೋಗ ನಿಯಂತ್ರಿಸಲು ನಾವೆಲ್ಲರೂ ಸಹಕರಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

    ಡೆನ್ಮಾರ್ಕಿನಲ್ಲಿ ಇಲ್ಲಿಯವರೆಗೆ 514 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ. ಆದರೆ ಬಹಳ ವೇಗವಾಗಿ ಹರಡುತ್ತಿರುವ ಕಾರಣ ಡೆನ್ಮಾರ್ಕ್ ಎಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದೆ.

    ಸಾಂಕ್ರಾಮಿಕ ರೋಗ: ಕೊರೊನಾ ವೈರಸ್ ಸೋಂಕು ಹರಡುವ ಪ್ರಮಾಣ ತೀವ್ರಗೊಂಡಿರುವುದರಿಂದ ಕೋವಿಡ್ 19 ಸಾಂಕ್ರಾಮಿಕ ರೋಗ ಎಂದು ಘೋಷಿಸಬಹುದು ಎಂದು ವಿಶ್ವ ಆರೋಗ್ಯ (ಡಬ್ಲ್ಯೂಎಚ್‍ಒ) ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ. ಸೋಂಕು ತ್ರೀವ್ರವಾಗಿ ಹರಡುತ್ತಿದ್ದರೂ ಸರ್ಕಾರಗಳು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಇದು ಕಳವಳಕಾರಿ ವಿಚಾರ ಎಂದು ಹೇಳಿದರು.

    ಸಾಧಾರಣವಾಗಿ ಒಂದು ರೋಗವನ್ನು ಡಬ್ಲ್ಯೂಎಚ್‍ಒ ಸಾಂಕ್ರಾಮಿಕ ರೋಗ ಎಂದು ಘೋಷಿಸುವುದಿಲ್ಲ. ಆರಂಭದಲ್ಲಿ ಅದು ‘ಅಪಾಯಕಾರಿ’ ಅಥವಾ ‘ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಹುದು’ ಎಂದು ಹೇಳುತ್ತದೆ. ಆದರೆ ಈಗ ಕೊರೊನಾ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಡಬ್ಲ್ಯೂಎಚ್‍ಒ ಇದನ್ನು ಸಾಂಕ್ರಾಮಿಕ ರೋಗ ಎಂದು ಕರೆದಿದೆ.

    ಯುರೋಪಿಯನ್ನರಿಗೆ ನಿರ್ಬಂಧ: ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳು ಕೊರೊನಾ ತಟೆಗಟ್ಟಲು ವಿಫಲವಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಎಲ್ಲ ರಾಷ್ಟ್ರಗಳು ಎಚ್ಚೆತ್ತುಕೊಳ್ಳುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾಷ್ಟ್ರವನ್ನು ಉದ್ದೇಶಿಸಿ, ಶುಕ್ರವಾರ ಮಧ್ಯರಾತ್ರಿಯಿಂದ ಯುರೋಪ್ ರಾಷ್ಟ್ರಗಳ ಪ್ರವಾಸಿಗರು ಅಮೆರಿಕಕ್ಕೆ ಬರುವುದಕ್ಕೆ ನಿರ್ಬಂಧ ಹೇರಿದ್ದಾರೆ. 30 ದಿನಗಳ ಕಾಲ ಈ ಆದೇಶ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ. ತಮ್ಮ ಭಾಷಣದಲ್ಲಿ ಯುರೋಪ್ ರಾಷ್ಟ್ರಗಳ ವಿರುದ್ಧ ಕಿಡಿಕಾರಿದ ಟ್ರಂಪ್, ಯುರೋಪ್ ರಾಷ್ಟ್ರಗಳು ಕೊರೊನಾ ಹರಡದಂತೆ ತಡೆಯಲು ವಿಫಲವಾಗಿದೆ ಎಂದು ದೂರಿದರು.

    ಎಲ್ಲ ಅಂಗಡಿ ಕ್ಲೋಸ್: ಯುರೋಪ್ ಖಂಡದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿರುವ ಇಟಲಿಯಲ್ಲಿ ಎಲ್ಲ ಆಸ್ಪತ್ರೆಗಳು ಭರ್ತಿಯಾಗಿದ್ದು ರೋಗಿಗಳು ಚಿಕಿತ್ಸೆ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಸರ್ಕಾರ ಆಹಾರ ಮತ್ತು ಫಾರ್ಮಸಿ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ ನೀಡಿದ್ದು ಎಲ್ಲ ಹೋಟೆಲ್, ಬಾರ್ ಸೇರಿದಂತೆ ಎಲ್ಲ ಅಂಗಡಿಗಳು ಮಾರ್ಚ್ 25ರವರೆಗೆ ಮುಚ್ಚಬೇಕು ಎಂದು ಸರ್ಕಾರ ಆದೇಶಿಸಿದೆ.

    ಎಷ್ಟು ಕೇಸ್?
    ಇಲ್ಲಿಯವರೆಗೆ ಚೀನಾ(90,796 ಕೇಸ್, 3,169 ಸಾವು), ಇಟಲಿ(12,462 ಕೇಸ್, 827 ಸಾವು), ಇರಾನ್ (9 ಸಾವಿರ ಕೇಸ್, 354 ಸಾವು) ದಕ್ಷಿಣ ಕೊರಿಯಾ(7,869 ಕೇಸ್, 66 ಸಾವು), ಫ್ರಾನ್ಸ್ (2,281 ಕೇಸ್, 48 ಸಾವು), ಸ್ಪೇನ್(2,277 ಕೇಸ್, 55 ಸಾವು), ಜರ್ಮನಿ(1,966 ಕೇಸ್, 3 ಸಾವು), ಅಮೆರಿಕ(1,329 ಕೇಸ್, 38 ಸಾವು) ಭಾರತ(73 ಕೇಸ್) ದಾಖಲಾಗಿದೆ.

  • ಪೆನಾಲ್ಟಿ ಶೂಟೌಟ್‍ನಲ್ಲಿ ಡೆನ್ಮಾರ್ಕ್ ಔಟ್!

    ಪೆನಾಲ್ಟಿ ಶೂಟೌಟ್‍ನಲ್ಲಿ ಡೆನ್ಮಾರ್ಕ್ ಔಟ್!

    ಮಾಸ್ಕೊ: ಪೆನಾಲ್ಟಿ ಶೂಟೌಟ್ ಕ್ಲೈಮಾಕ್ಸ್ ಕಂಡ ಫಿಫಾ ವಿಶ್ವಕಪ್ ಟೂರ್ನಿಯ ಎರಡನೇ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕ್ರೊವೇಷಿಯಾ, ಡ್ಯಾನಿಶ್ ಡೈನಮೈಟ್ ಖ್ಯಾತಿಯ ಡೆನ್ಮಾರ್ಕ್ ಸವಾಲನ್ನು ಮೀರಿ ನಿಂತು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

    ನೊವ್‍ಗರೊಡ್ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದವು. ಹೆಚ್ಚುವರಿ ಸಮಯ (15+15ನಿಮಿಷ)ದಲ್ಲೂ ಚೆಂಡು ಗೋಲು ಬಲೆ ದಾಟಲು ಉಭಯ ತಂಡಗಳ ಗೋಲು ಕೀಪರ್‍ಗಳು ಅವಕಾಶ ನೀಡಲಿಲ್ಲ. ಅಂತಿಮವಾಗಿ ನಾಟಕೀಯವಾಗಿ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ 3 ಸ್ಪಾಟ್ ಕಿಕ್‍ಗಳಿಗೆ ತಡೆಗೋಡೆಯಾದ ಕ್ರೊಯೇಶಿಯಾದ ಡೆನಿಜೆಲ್ ಸುಬಾಸಿಕ್, 3-2ರ ಅಂತರದಲ್ಲಿ ಡೆನ್ಮಾರ್ಕ್ ವಿರುದ್ಧ ಗೆಲುವು ತಂದಿತ್ತು, ತಂಡವನ್ನು ಕ್ವಾರ್ಟರ್ ಫೈನಲ್ ಹಂತಕ್ಕೆ ಕೊಂಡೊಯ್ದರು.

    ಪಂದ್ಯ ಆರಂಭವಾಗಿ ಕೇವಲ 57ನೇ ಸೆಕೆಂಡ್‍ನಲ್ಲೇ ಕ್ರೊವೇಶಿಯಾದ ರಕ್ಷಣಾ ಗೋಡೆಯನ್ನು ಭೇದಿಸಿದ ಜಾರ್ಗೆನ್‍ಸನ್ ಡೆನ್ಮಾರ್ಕ್‍ಗೆ ಆರಂಭಿಕ ಮುನ್ನಡೆ ಒದಗಿಸಿದ್ದರು. ಆದರೆ ಮುಂದಿನ ನಾಲ್ಕನೇ ನಿಮಿಷದಲ್ಲಿ ತಿರುಗೇಟು ನೀಡಿದ ಕ್ರೊವೇಶಿಯಾದ ಮಾರಿಯೊ ಮಂಡ್ಜುವಿ ಕ್ರೊವೇಶಿಯಾಗೆ ಸಮಬಲ ತಂದುಕೊಟ್ಟರು. ಹೀಗಾಗಿ ಪಂದ್ಯ ಆರಂಭವಾಗಿ ಕೇವಲ ನಾಲ್ಕು ನಿಮಿಷದ ಅಂತರದಲ್ಲಿ ಉಭಯ ತಂಡಗಳು ಗೋಲು ಗಳಿಸಿದ ಅಪರೂಪದ ದಾಖಲೆಯ ಕ್ಷಣಕ್ಕೆ ಪಂದ್ಯ ಸಾಕ್ಷಿಯಾಯಿತು.

    ಬಳಿಕ ಎರಡು ಗಂಟೆಗಳ ಕಾಲ ಉಭಯ ತಂಡಗಳ ಆಟಗಾರರು ನೊವ್‍ಗರೊಡ್ ಮೈದಾನದಲ್ಲಿ ಸಾಕಷ್ಟು ಬೆವರು ಹರಿಸಿದರೂ ಗೋಲು ದಾಖಲಾಗಲಿಲ್ಲ. ಲೂಕಾ ಮಾಡ್ರಿಕ್, ಮಾರಿಯೋ ಮಾಂಡುಜುಕಿಕ್, ಇವಾನ್ ರಾಕೆಟಿಕ್, ಇವಾನ್ ಪೆರಿಸಿಕ್‍ರಂಥ ಸ್ಟಾರ್ ಆಟಗಾರರನ್ನು ಹೊಂದಿದ್ದ ಕ್ರೊವೇಷಿಯಾವನ್ನು, ಕೋಚ್ ಏಜ್ ಹರಾಯ್ಡ್ ಹೆಣೆದ ತಂತ್ರಗಳ ನೆರವಿನಿಂದ ಡೆನ್ಮಾರ್ಕ್ ಕಟ್ಟಿಹಾಕಿತು. ಹೆಚ್ಚುವರಿ ಅವಧಿ ಮುಗಿಯುವ ಐದು ನಿಮಿಷಕ್ಕೂ ಮೊದಲೇ ಕ್ರೊವೇಶಿಯಾ ಗೆಲುವಿನ ಗೋಲು ಬಾರಿಸಬೇಕಿತ್ತು. ಆದರೆ ನಾಯಕ ಲೂಕಾ ಮಾಡ್ರಿಕ್ ಪೆನಾಲ್ಟಿಯನ್ನು ಡೆನ್ಮಾರ್ಕ್ ಗೋಲಿ ಕಾಸ್ಪರ್ ಶೆಮಿಚೆಲ್ ಅದ್ಭುತವಾಗಿ ತಡೆದು, ಪಂದ್ಯವನ್ನು ಪೆನಾಲ್ಟಿ ಶೂಟೌಟ್‍ಗೆ ಒಯ್ದರು.

    ಮೊದಲ ಪೆನಾಲ್ಟಿ ಕಿಕ್‍ನಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಯಿತು. ಬಳಿಕ ಕ್ರೊವೇಷಿಯಾ ಪರ ಆಂದ್ರೆಜ್ ಕ್ರಾಮರಿಕ್, 32 ವರ್ಷ ವಯಸ್ಸಿನ ರಿಯಲ್ ಮ್ಯಾಡ್ರಿಡ್ ಸ್ಟಾರ್ ಲೂಕಾ ಮಾಡ್ರಿಕ್, ಜೋಸೆಫ್ ಪಿವಾರಿಕ್, ಹಾಗೂ ಬಾರ್ಸಿಲೋನಾದ ಇವಾನ್ ರಾಕೆಟಿಕ್ ಗೋಲು ಗಳಿಸಿ ಗೆಲುವಿನ ನಗೆ ಬೀರಿದರು. ಮತ್ತೊಂದೆಡೆ ಡೆನ್ಮಾರ್ಕ್ ಪರ ಎಸ್ ಕಜೇರ್, ಕ್ರೋನ್ ಡೆಹ್ಲಿ ಗೋಲು ಬಾರಿಸಿದರೆ, ಎರಿಕ್ಸನ್, ಸೋಪೋಸ್ ಹಾಗೂ ಜೋರ್ಗನ್‍ಸನ್ ಅಪೂರ್ವ ಅವಕಾಶವನ್ನು ಮಿಸ್ ಮಾಡಿ ನಿರಾಸೆ ಅನುಭವಿಸಿದರು. ಆ ಮೂಲಕ 1998ರಲ್ಲಿ 3ನೇ ಸ್ಥಾನ ಪಡೆದಿದ್ದ ಕ್ರೊವೇಷಿಯಾ, ಈ ಬಾರಿಗೆ ಕ್ವಾರ್ಟರ್ ಫೈನಲ್‍ಗೆ ಪ್ರವೇಶ ಪಡೆಯಿತು. ಶನಿವಾರ ನಡೆಯುವ ಕ್ವಾರ್ಟರ್ ಫೈನಲ್‍ನಲ್ಲಿ ಆತಿಥೇಯ ರಷ್ಯಾವನ್ನು ಕ್ರೊವೇಷಿಯಾ ಎದುರಿಸಲಿದೆ.