Tag: dengue fever

  • ಭಾರತದಲ್ಲಿಯೇ ತಯಾರಾಯ್ತು ಡೆಂಗ್ಯೂ ಲಸಿಕೆ – ಶೀಘ್ರದಲ್ಲೇ ಬಿಡುಗಡೆ!

    ಭಾರತದಲ್ಲಿಯೇ ತಯಾರಾಯ್ತು ಡೆಂಗ್ಯೂ ಲಸಿಕೆ – ಶೀಘ್ರದಲ್ಲೇ ಬಿಡುಗಡೆ!

    ಳೆದ ಹಲವು ವರ್ಷಗಳಿಂದ ಭಾರತದಲ್ಲಿ ಡೆಂಗ್ಯೂ ಜ್ವರ ಹರಡುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿದೆ.

    ಸಾಮಾನ್ಯವಾಗಿ ಡೆಂಗ್ಯೂ (Dengue) ಬಂದಾಗ ಜ್ವರ, ತೀವ್ರ ತಲೆನೋವು, ಕಣ್ಣು ನೋವು, ಸ್ನಾಯು, ಕೀಲು ನೋವು ಇದರ ಜೊತೆಗೆ ವಾಕರಿಕೆ, ವಾಂತಿ, ಆಯಾಸದಂತಹ ಲಕ್ಷಣಗಳು ಕಂಡುಬರುತ್ತದೆ. ಹೀಗಾಗಿ ವೈದ್ಯರು ಈ ಲಕ್ಷಣಗಳನ್ನು ಕಡಿಮೆ ಮಾಡುವಂತಹ ಔಷಧಿ ಕೊಟ್ಟು ಈ ಮೂಲಕ ಡೆಂಗ್ಯೂ ಅನ್ನು ಕಡಿಮೆಗೊಳಿಸುತ್ತಾರೆ. ಭಾರತದಲ್ಲಿ ಇಲ್ಲಿಯವರೆಗೂ ಡೆಂಗ್ಯೂ ಜ್ವರಕ್ಕಾಗಿ ಯಾವುದೇ ರೀತಿಯಾದ ಲಸಿಕೆ ಕಂಡುಹಿಡಿದಿಲ್ಲ.

    ಏನಿದು ಕ್ಯೂಡೆಂಗಾ (TAK-003)?
    ಡೆಂಗ್ಯೂ ಜ್ವರ ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಹರಡುವ ಸೋಂಕು. ಈ ವೈರಸ್ DENV-1 ಯಿಂದ DENV-4 ಎಂಬ ನಾಲ್ಕು ವಿಭಿನ್ನ ತಳಿಗಳನ್ನು ಹೊಂದಿದೆ. TAK-003 ಎಂದೂ ಕರೆಯಲ್ಪಡುವ ಕ್ಯೂಡೆಂಗಾ (Qdenga) ಲಸಿಕೆಯು ಎಲ್ಲಾ ನಾಲ್ಕು ಡೆಂಗ್ಯೂ ವೈರಸ್‌ಗಳೊಂದಿಗೆ ಹೋರಾಡುತ್ತದೆ. ಇದನ್ನು ಮೂರು ತಿಂಗಳ ಅಂತರದಲ್ಲಿ ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಇದೀಗ ಭಾರತದಲ್ಲಿ ಜಪಾನಿನ ಟಕೆಡಾ ಔಷಧ ಕಂಪನಿ, ಹೈದರಾಬಾದ್ ನ ಬಯೊಲಾಜಿಕಲ್ ಇ ಪಾಲುದಾರಿಕೆಯೊಂದಿಗೆ ಅಭಿವೃದ್ದಿಪಡಿಸಿರುವ ಕ್ಯೂಡೆಂಗಾ (TAK-003) ಲಸಿಕೆ 2026ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

    ವಿಶ್ವ ಸಂಸ್ಥೆಯ ಮಾಹಿತಿಯ ಪ್ರಕಾರ ಈ ಲಸಿಕೆಯು ಶೇ.50ರಷ್ಟಕ್ಕಿಂತ ಹೆಚ್ಚು ಡೆಂಗ್ಯೂ ಪ್ರಕರಣಗಳನ್ನು ಕಡಿಮೆ ಮಾಡಿದ್ದು, 2024ರ ಮೇ ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅನುಮೋದನೆ ಪಡೆದುಕೊಂಡಿದೆ. 2023ರಲ್ಲಿ ಪ್ರಾರಂಭವಾದ ಈ ಲಸಿಕೆ ಈಗಾಗಲೇ ಇಂಡೋನೇಷಿಯಾ, ಥೈಲ್ಯಾಂಡ್, ಅರ್ಜೆಂಟಿನಾ, ಬ್ರೆಜಿಲ್ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳಲ್ಲಿ ಅನುಮೋದನೆ ಪಡೆದುಕೊಂಡಿದ್ದು, ಈಗಾಗಲೇ 10 ಮಿಲಿಯನ್ ಡೋಸ್‌ ಮಾರಾಟ ಮಾಡಲಾಗಿದೆ. ಇದೀಗ ಭಾರತದಲ್ಲಿ ಈ ಲಸಿಕೆಯನ್ನು ಪ್ರಾರಂಭಿಸಲು ಟಕೆಡಾ ಕಂಪನಿಯು ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (CDSCO) ಯಿಂದ ಕ್ಲಿನಿಕಲ್ ಟ್ರಯಲ್‌ಗಳಿಗೆ ಕೂಡ ಅನುಮತಿ ಪಡೆದಿದೆ.

    ಭಾರತದಲ್ಲಿ ಟಕೆಡಾ (Takeda Company) ಮತ್ತು ಬಯೋಲಾಜಿಕಲ್ ಇ (Biological E) ಕಂಪನಿ ಈ ಲಸಿಕೆಯನ್ನು ತಯಾರಿಸುವುದರ ಜೊತೆಗೆ ವರ್ಷಕ್ಕೆ 50 ಮಿಲಿಯನ್ ಡೋಸ್‌ಗಳನ್ನು ತಯಾರಿಸುವ ಗುರಿಯನ್ನು ಇಟ್ಟುಕೊಂಡಿದೆ. ಈ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ, ಮೂರು ತಿಂಗಳ ಅಂತರದಲ್ಲಿ ನೀಡಲಾಗುತ್ತದೆ ಹಾಗೂ 4.5 ವರ್ಷಗಳವರೆಗೆ ಪರಿಣಾಮಕಾರಿಯಾಗಿ ರೋಗದಿಂದ ರಕ್ಷಣೆ ನೀಡುತ್ತದೆ.

    ಯಾರು ಈ ಲಸಿಕೆ ಹಾಕಿಸಿಕೊಳ್ಳಬಹುದು?

    • 6 ರಿಂದ 60 ವರ್ಷ ವಯಸ್ಸಿನವರಿಗೆ ಈ ಲಸಿಕೆಯನ್ನು ನೀಡಬಹುದು. ಆದರೆ ಈತನಕ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಶಿಫಾರಸು ಮಾಡಿಲ್ಲ.

    ಯಾರು ಈ ಲಸಿಕೆ ಹಾಕಿಸಿಕೊಳ್ಳಬಾರದು?

    • ಒಂದು ತಿಂಗಳು ಗರ್ಭಿಣಿಯಾಗಿರುವ ಅಥವಾ ಲಸಿಕೆ ಪಡೆದ ನಂತರ ಗರ್ಭಧಾರಣೆಗೆ ಯೋಚಿಸುತ್ತಿರುವ ಮಹಿಳೆಯರು
    • ಹಾಲುಣಿಸುವ ಮಹಿಳೆಯರು
    • ಲಸಿಕೆ ಹಾಕುವ ನಾಲ್ಕು ವಾರಗಳ ಮೊದಲು, ಕಿಮೊಥೆರಪಿ ಅಥವಾ ಇನ್ನಿತರ ಗಂಭೀರ ಚಿಕಿತ್ಸೆ ಪಡೆಯುವವರು
    • ಹುಟ್ಟಿನಿಂದಲೂ ಅಥವಾ ಇನ್ನಿತರ ರೋಗ ಹೊಂದಿರುವವರು
    • HIV ಸೋಂಕು ಹೊಂದಿರುವವರು

    TAK-003 ಹೇಗೆ ನೀಡಲಾಗುತ್ತೆ?
    TAK-003 ಅನ್ನು ಮೂರು ತಿಂಗಳ ಅಂತರದಲ್ಲಿ ಎರಡು-ಡೋಸ್ ಗಳಲ್ಲಿ ನೀಡಲಾಗುತ್ತದೆ. ಅಧ್ಯಯನಗಳ ಪ್ರಕಾರ 4.5 ವರ್ಷಗಳವರೆಗೆ ಪರಿಣಾಮಕಾರಿಯಾಗಿ ರೋಗದಿಂದ ರಕ್ಷಣೆ ನೀಡುತ್ತದೆ. ಲಸಿಕೆಯನ್ನು ಸಾಮಾನ್ಯವಾಗಿ ತೋಳಿನ ಡೆಲ್ಟಾಯ್ಡ್ ಪ್ರದೇಶಕ್ಕೆ ಚುಚ್ಚಲಾಗುತ್ತದೆ.

    ಲಸಿಕೆ ಬೆಲೆ:
    ಟಕೆಡಾ ಭಾರತದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಮಾರುಕಟ್ಟೆಗಳಿಗೆ ವಿಭಿನ್ನ ಬೆಲೆಯಲ್ಲಿ ಜಾರಿಗೆ ತರಲು ಯೋಜಿಸಿದೆ. ಇತರ ದೇಶಗಳಲ್ಲಿ, ಲಸಿಕೆಯ ಒಂದು ಡೋಸ್‌ನ ಗರಿಷ್ಠ ಬೆಲೆ $40 (3383.06 ರೂ.)ರಿಂದ $115 (9726.29ರೂ.) ರವರೆಗೆ ಇರುತ್ತದೆ.

    ಭಾರತದಲ್ಲಿ ಬಿಡುಗಡೆಗೆ ಕಾರಣ?
    ದೇಶಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಕಾರಣ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ವೆಕ್ಟರ್ ಬೋರ್ನ್ ಡಿಸೀಸ್ ಕಂಟ್ರೋಲ್ ಸೆಂಟರ್ ಪ್ರಕಾರ, 2024ರಲ್ಲಿ ಭಾರತದಲ್ಲಿ 2,30,000 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಮತ್ತು 236 ಸಾವು ವರದಿಯಾಗಿದೆ. ಈ ಲಸಿಕೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

  • ಧಾರವಾಡದಲ್ಲಿ ಶಂಕಿತ ಡೆಂಗ್ಯೂಗೆ 5 ತಿಂಗಳ ಮಗು ಬಲಿ

    ಧಾರವಾಡದಲ್ಲಿ ಶಂಕಿತ ಡೆಂಗ್ಯೂಗೆ 5 ತಿಂಗಳ ಮಗು ಬಲಿ

    ಧಾರವಾಡ: ಶಂಕಿತ ಡೆಂಗ್ಯೂ ಜ್ವರದಿಂದ (Dengue fever) ಬಳಲುತ್ತಿದ್ದ 5 ತಿಂಗಳ ಮಗುವೊಂದು ಮೃತಪಟ್ಟಿರುವ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾದ ಮಗುವನ್ನು ನಗರದ ಪೊಲೀಸ್ ಠಾಣೆಯ ಕಾನ್‍ಸ್ಟೇಬಲ್ ಆಗಿರುವ ಗೋಪಾಲ ಲಮಾಣಿ ಎಂಬವರ ಮಗಳು ಆರಾಧ್ಯ ಎಂದು ಗುರುತಿಸಲಾಗಿದೆ.

    ಮಗು ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿತ್ತು. ಇದರಿಂದ ಮಗುವನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಸೂಚನೆ

    ಗೋಪಾಲ ಲಮಾಣಿಯವರು ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದವರಾಗಿದ್ದಾರೆ. ಈ ಹಿಂದೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಬಾಲಕಿಯೋರ್ವಳು ಶಂಕಿತ ಡೆಂಗ್ಯೂಗೆ ಬಲಿಯಾಗಿದ್ದಳು. ಇದನ್ನೂ ಓದಿ: Valmiki Corporation Scam | ಮಾಜಿ ಸಚಿವ ನಾಗೇಂದ್ರಗೆ ಮತ್ತೆ 5 ದಿನ ಇಡಿ ಕಸ್ಟಡಿ – ಕೋರ್ಟ್ ಆದೇಶ

  • Dengue Alert: ರಾಜ್ಯದಲ್ಲಿ ಒಂದೇ ದಿನ 400ಕ್ಕೂ ಹೆಚ್ಚು ಕೇಸ್‌ ಪತ್ತೆ!

    Dengue Alert: ರಾಜ್ಯದಲ್ಲಿ ಒಂದೇ ದಿನ 400ಕ್ಕೂ ಹೆಚ್ಚು ಕೇಸ್‌ ಪತ್ತೆ!

    ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 437 ಡೆಂಗ್ಯೂ ಪ್ರಕರಣಗಳು (Dengue Case) ವರದಿಯಾಗಿದ್ದು, ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 388ಕ್ಕೇರಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 8,658ಕ್ಕೆ ಏರಿಕೆಯಾಗಿದೆ.

    ಬೆಂಗಳೂರು ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ 165 ಹೊಸ ಕೇಸ್‌ಗಳು ದಾಖಲಾಗಿದ್ದು, ಸದ್ಯ 91 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ 2,704 ಡೆಂಗ್ಯೂ ಟೆಸ್ಟ್‌ ನಡೆಸಲಾಗಿದ್ದು, ಈ ಪೈಕಿ 437 ಜನರಿಗೆ ಪ್ರಕರಣ ಧೃಢವಾಗಿದೆ. ಈವರೆಗೆ ಒಟ್ಟು 63,741 ಮಂದಿಗೆ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಇದನ್ನೂ ಓದಿ: ಪ್ರತಿವರ್ಷ ಜೂನ್‌ 25ರಂದು ʻಸಂವಿಧಾನ ಹತ್ಯಾ ದಿವಸ್‌ʼ ಆಚರಣೆ – ಅಮಿತ್‌ ಶಾ ಘೋಷಣೆ

    ಯಾವ ವಯಸ್ಸಿನವರಲ್ಲಿ ಹೆಚ್ಚಿ ಕೇಸ್‌ ಪತ್ತೆ?
    ಕಳೆದ 24 ಗಂಟೆಯಲ್ಲಿ 2,704 ಮಂದಿಗೆ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 1 ವರ್ಷದೊಳಗಿನ 7 ಮಕ್ಕಳು, 1 ರಿಂದ 18 ವರ್ಷ ವಯಸ್ಸಿನ 154 ಮಕ್ಕಳು ಹಾಗೂ 18 ವರ್ಷ ಮೇಲ್ಪಟ್ಟ 276 ಮಂದಿ ಸೇರಿದಂತೆ ಒಟ್ಟು 437 ಕೇಸ್‌ ಪತ್ತೆಯಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಭಯಂಕರ ಸರ್ವಾಧಿಕಾರಿ, ಭ್ರಷ್ಟಾಚಾರಿ -‌ ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್‍ಗೆ ಸಾಧ್ಯವೇ?: ಜೋಶಿ

    ಎಲ್ಲೆಲ್ಲಿ ಎಷ್ಟು ಕೇಸ್‌?
    ಬಿಎಂಪಿ ವ್ಯಾಪಿಯಲ್ಲಿ 165, ಬೆಂಗಳೂರು ನಗರ 10, ಬೆಂಗಳೂರು ಗ್ರಾಮಾಂತರ 5, ರಾಮನಗರ 14, ಕೋಲಾರ 19, ಚಿಕ್ಕಬಳ್ಳಾಪುರ 7, ತುಮಕೂರು 5, ಚಿತ್ರದುರ್ಗ 3, ದಾವಣಗೆರೆ 24, ಬೆಳಗಾವಿ 32, ಗದಗ 15, ಉತ್ತರ ಕನ್ನಡ 1, ಕಲಬುರಗಿ 20, ಬೀದರ್‌ 10, ಬಳ್ಳಾರಿ 4, ವಿಜಯನಗರ 1, ಕೊಪ್ಪಳ 3, ಮೈಸೂರು 17, ಮಂಡ್ಯ 47, ಹಾಸನ 6, ಉಡುಪಿ 10, ಚಿಕ್ಕಮಗಳೂರು 10, ಕೊಡಗು 9 ಕೇಸ್‌ ಪತ್ತೆಯಾಗಿವೆ. ಶುಕ್ರವಾರ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ಒಟ್ಟು ಮರಣ ಸಂಖ್ಯೆ 7 ಇದೆ.

  • ಡೆಂಗ್ಯೂ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ – ಬಿಪಿಎಲ್‌ ಕಾರ್ಡ್‌ದಾರರಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಿಸಲು ಸೂಚನೆ!

    ಡೆಂಗ್ಯೂ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ – ಬಿಪಿಎಲ್‌ ಕಾರ್ಡ್‌ದಾರರಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಿಸಲು ಸೂಚನೆ!

    ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ (Dengue Cases) ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮಾರ್ಗಸೂಚಿ (Health Department Guidelines) ಪ್ರಕಟಿಸಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ; ಜು.15 ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತೀರ್ಮಾನ

    ಕೋವಿಡ್‌ ಸಂದರ್ಭದಲ್ಲಿ ವಾರ್‌ ರೂಮ್‌ ತೆರೆದ ಮಾದರಿಯಲ್ಲೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಡೆಂಗ್ಯೂ ವಾರ್‌ ರೂಮ್‌ (Dengue War Room) ತೆರೆಯಲು ಸೂಚನೆ ನೀಡಿದೆ. ಇದರೊಂದಿಗೆ ಇನ್ನೂ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದನ್ನೂ ಓದಿ: ಗ್ಯಾರಂಟಿಗೆ 65 ಸಾವಿರ ಕೋಟಿ ಹಣ ಬೇಕು, ಅಭಿವೃದ್ಧಿಗೆ ಹಣ ಇಲ್ಲ – ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ

    ಮಾರ್ಗಸೂಚಿ ಏನು?
    1. ಒಂದೇ ಸ್ಥಳದಲ್ಲಿ ಎರಡು ಅಥವಾ ಮೂರು ಡೆಂಗ್ಯೂ ಕೇಸ್ ಕಂಡುಬಂದರೆ ಹಾಟ್ ಸ್ಪಾಟ್ ಅಂತ ಪರಿಗಣನೆ
    2. ಹಾಟ್‌ಸ್ಪಾಟ್‌ಗಳಲ್ಲಿ ಲಾರ್ವಾ ನಾಶ ಚಟುವಟಿಕೆಯನ್ನು ತೀವ್ರಗೊಳಿಸುವುದು, ಒಳಾಂಗಣ/ಹೊರಾಂಗಣದಲ್ಲಿ ಲಾರ್ವಾನಾಶಕಗಳ ಬಳಕೆ ಹಾಗೂ ಒಳಾಂಗಣದಲ್ಲಿ ಡೆಂಗ್ಯೂ ನಾಶಕವನ್ನು ಸಿಂಪಡಿಸಿ ಮನೆಯ ಸದಸ್ಯರನ್ನ 30 ನಿಮಿಷಗಳ ಕಾಲ ಮನೆಯಿಂದ ಹೊರಗಡೆ ಇರುವಂತೆ ಸೂಚಿಸುವುದು
    3. ಡೆಂಗ್ಯೂ ಪಾಸಿಟಿವ್ ಆದ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್‌ಗಳನ್ನು ತುರ್ತಾಗಿ ಸಕ್ರೀಯಗೊಳಿಸಬೇಕು.
    4. ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಬಿಪಿಎಲ್‌ ಕುಟುಂಬಗಳಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಣೆ ಖಚಿತಪಡಿಸಿಕೊಳ್ಳುವುದು ಹಾಗೂ ಕೈ, ಕಾಲು – ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳುವಂತೆ ತಿಳಿಸುವುದು.
    5. ಡೆಂಗ್ಯೂ ಪಾಸಿಟಿವ್ ಆದ ವ್ಯಕ್ತಿಯನ್ನ ಜ್ವರ ಕಾಣಿಸಿಕೊಂಡ ದಿನದಿಂದ 14 ದಿನಗಳ ಕಾಲ ಅನುಪಾಲನೆ ಮಾಡುವುದು
    6. ಬೇವಿನ ಎಣ್ಣೆ ಇಲ್ಲದೇ ಹೋದರೆ ಸಿಟ್ರೋನೆಲ್ ಆಯಿಲ್, ಲೆಮನ್ ಗ್ರೇಸ್ ಆಯಿಲ್ ಅಥವಾ ಡೀಟ್ ಆಧಾರಿತ ಕ್ರೀಂ ಆಯಿಲ್‌ಗಳನ್ನ ವಿತರಣೆ ಮಾಡಬೇಕು
    7. ಡೆಂಗ್ಯೂ ಪ್ರಕರಣಗಳ ನಿರ್ವಹಣೆಗಾಗಿ ತಾಲ್ಲೂಕು ಮತ್ತು ಜಿಲ್ಲಾ ಆಸ್ಫತ್ರೆಗಳಲ್ಲಿ 5 ರಿಂದ 10 ಹಾಸಿಗೆಗಳನ್ನು ಮೀಸಲಿಡಬೇಕು.
    8. ಡೆಂಗ್ಯೂ ಜ್ವರ ಪ್ರಕರಣಗಳ ಪರೀಕ್ಷೆ, ಚಿಕಿತ್ಸೆ ಹಾಗೂ ನಿರ್ವಹಣಾ ಸೌಲಭ್ಯವನ್ನು ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ಆರೋಗ್ಯ ಸಂಸ್ಥೆಗಳು ಎಲ್ಲರಿಗೂ ಸಂಪೂರ್ಣ ಉಚಿತವಾಗಿ ನೀಡಬೇಕು.
    9. ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಟೆಸ್ಟಿಂಗ್‌ ಕಿಟ್‌, ಅಗತ್ಯ ಪ್ರಮಾಣದ ಔಷಧಿ ಹಾಗೂ IV Fluids ಔಷಧ ದಾಸ್ತಾನು ಲಭ್ಯತೆಯನ್ನು ಖಚಿತಪಡಿಸಬೇಕು. ಜಿಲ್ಲಾವಾರು ಸರ್ಕಾರಿ ಹಾಗೂ ಖಾಸಗಿ ರಕ್ತನಿಧಿಗಳಿಂದ ಪ್ಲೇಟ್‌ಲೆಟ್‌, ಪ್ಲಾಸ್ಮಾ ಹಾಗೂ ಇತರ ಕಾಂಪೊನೆಂಟ್‌ಗಳ ಬಗ್ಗೆ ಪ್ರತಿದಿನ ಮಾಹಿತಿ ನೀಡಬೇಕು.
    10. ಕಡ್ಡಾಯವಾಗಿ ಡೆಂಗ್ಯೂ ಜ್ವರ ನಿರ್ವಹಣೆ ಸಂಬಂಧ ಶಿಷ್ಟಾಚಾರ ಪಾಲನೆ ಮಾಡಬೇಕು.

  • ಡೆಂಗ್ಯೂ ಹೆಚ್ಚಳಕ್ಕೆ ಹೈಕೋರ್ಟ್ ಕಳವಳ – ಸುಮೋಟೋ ಕೇಸ್ ದಾಖಲು

    ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ (Dengue fever) ಪ್ರಕರಣ ಹೆಚ್ಚಳಕ್ಕೆ ಹೈಕೋರ್ಟ್ (High Court) ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ನ್ಯಾಯಾಲಯ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿಗೊಳಿಸಿದೆ.

    ಬೆಂಗಳೂರು (Bengaluru )ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಜು.23ರ ಒಳಗೆ ಉತ್ತರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಕಾರ್ಯದರ್ಶಿ ಹಾಗೂ ಬಿಬಿಎಂಪಿಗೆ (BBMP) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

    ಮುಖ್ಯ ನ್ಯಾ.ಎನ್.ವಿ ಅಂಜಾರಿಯಾ ನೇತೃತ್ವದ ಪೀಠ ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದು, ಅಧಿಕಾರಿಗಳಿಗೆ ಪೀಠ ಕೆಲವು ಪ್ರಮುಖ ಪ್ರಶ್ನೆಗಳನ್ನು ಇಟ್ಟಿದೆ. ಈ ಪ್ರಶ್ನೆಗಳಿಗೆ ನಿಗದಿತ ಸಮಯದಲ್ಲಿ ಉತ್ತರಿಸುವಂತೆ ಕೋರ್ಟ್ ಸೂಚಿಸಿದೆ.

    ಹೈಕೋರ್ಟ್ ನೋಟಿಸ್‍ನಲ್ಲೇನಿದೆ?
    1.ಬೆಂಗಳೂರು ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳೇನು?
    2.ಬೆಂಗಳೂರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆಯೇ?
    3.ಒದಗಿಸಿರುವ ಮೂಲಸೌಕರ್ಯಗಳ ಮಾಹಿತಿ
    4.ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕೈಗೊಂಡ ಕ್ರಮಗಳೇನು?
    5.ಸೊಳ್ಳೆಗಳ ಉತ್ಪತ್ತಿ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.
    ಈ ಸಂಬಂಧ ಸಂಪೂರ್ಣ ಮಾಹಿತಿ ಒದಗಿಸುವುದಾಗಿ ಎಜಿ ಶಶಿಕಿರಣ್ ಶೆಟ್ಟಿ ಹೈಕೋರ್ಟ್‍ಗೆ ಉತ್ತರಿಸಿದ್ದಾರೆ.

  • Dengue Cases Alert: ರಾಜ್ಯದಲ್ಲಿಂದು 197 ಕೇಸ್‌ ದಾಖಲು – ಪ್ರಕರಣಗಳ ಸಂಖ್ಯೆ 7,362ಕ್ಕೆ ಏರಿಕೆ!

    Dengue Cases Alert: ರಾಜ್ಯದಲ್ಲಿಂದು 197 ಕೇಸ್‌ ದಾಖಲು – ಪ್ರಕರಣಗಳ ಸಂಖ್ಯೆ 7,362ಕ್ಕೆ ಏರಿಕೆ!

    ಬೆಂಗಳೂರು: ಡೆಡ್ಲಿ ಡೆಂಗ್ಯೂ ಪ್ರಕರಣಗಳು (Dengue Cases) ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಮವಾರ (ಜು.8) 197 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7,362ಕ್ಕೆ ಏರಿಕೆಯಾಗಿದೆ.

    7,362 ಪ್ರಕರಣಗಳಲ್ಲಿ 303 ಸಕ್ರೀಯ ಪ್ರಕರಣಗಳಿವೆ. ಡೆಂಗ್ಯೂ ಜ್ವರಕ್ಕೆ ಸೋಮವಾರವೂ ಓರ್ವ ವ್ಯಕ್ತಿ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಪೈಕಿ ಹಾಸನದಲ್ಲಿ 2, ಮೈಸೂರು, ಹಾವೇರಿ, ಧಾರವಾಡ, ಶಿವಮೊಗ್ಗ ಹಾಗೂ ಬೆಂಗಳೂರಲ್ಲಿ ತಲಾ ಒಂದೊಂದು ಮರಣ ಕೇಸ್‌ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ (Health Department) ಮಾಹಿತಿ ನೀಡಿದೆ.

    ಏನಿದು ಡೆಂಗ್ಯೂ?
    ಇದೊಂದು ವೈರಸ್.

    ಯಾವುದರಿಂದ ಹರಡುತ್ತೆ?
    ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆ (Idis Aegypti Mosquito).

    ಡೆಂಗ್ಯೂ ವೈರಸ್ ಮೂಲ ಯಾವುದು?
    ಡೆಂಗ್ಯೂ ತರಹದ ಕಾಯಿಲೆಯು ಮೊದಲು ಚೀನಾದಲ್ಲಿ ಜಿನ್ ರಾಜವಂಶದಿಂದ (265-420 ಶತಮಾನ) ಬಂದಿದೆ. 17 ನೇ ಶತಮಾನದಲ್ಲಿ ಡೆಂಗ್ಯೂಗೆ ಹೋಲುವ ಸಾಂಕ್ರಾಮಿಕ ರೋಗಗಳು ಸಂಭವಿಸಿದವು ಎಂಬುದಕ್ಕೆ ಪುರಾವೆಗಳಿವೆ.

    ಡೆಂಗ್ಯೂ ರೋಗ ಬರುವುದು ಹೇಗೆ?
    ಸೊಳ್ಳೆ ಕಡಿತದಿಂದ ಡೆಂಗ್ಯೂ ರೋಗ ಬರುತ್ತದೆ. ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆ ಕಡಿತದಿಂದ ಡೆಂಗ್ಯೂ ವೈರಸ್ ಸೋಂಕು ಹರಡುತ್ತದೆ.

    ಸೋಂಕಿನ ಪರಿಣಾಮವೇನು?
    ರಕ್ತನಾಳಗಳಿಗೆ ಡೆಂಗ್ಯೂ ವೈರಸ್ ಹಾನಿಯುಂಟು ಮಾಡುತ್ತದೆ. ರಕ್ತಕಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಪರಿಣಾಮವಾಗಿ ಅಂಗಾಂಗ ವೈಫಲ್ಯವಾಗುತ್ತದೆ. ಕೆಲವೊಮ್ಮೆ ಜೀವಕ್ಕೂ ಸಂಚಕಾರ ತರಬಹುದು.

    ರೋಗ ಲಕ್ಷಣಗಳೇನು?
    ಜ್ವರ, ತಲೆನೋವು, ವಾಂತಿ, ಕಣ್ಣು ಊದಿಕೊಂಡು ನೋವು ಉಂಟಾಗುವುದು, ಕೈ-ಕಾಲುಗಳಲ್ಲಿ ಸೆಳೆತ, ನೋವು, ಆಯಾಸ.

    ಡೆಂಗ್ಯೂ ತಡೆಗಟ್ಟುವುದು ಹೇಗೆ?
    * ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು
    * ನೀರು ಶೇಖರಣೆಯಾಗುವ ಯಾವುದೇ ಪ್ರದೇಶವಿದ್ದರೂ ಶುಚಿಗೊಳಿಸಬೇಕು
    * ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು
    * ಸರಾಗವಾಗಿ ನೀರು ಹರಿಯುವಂತೆ ಚರಂಡಿ, ಮೋರಿಗಳನ್ನು ಸುಸ್ಥಿತಿಯಲ್ಲಿಡಬೇಕು
    * ಮನೆ, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು
    * ಸೊಳ್ಳೆ ನಿವಾರಕ ಬಳಕೆ ಮಾಡಬೇಕು

    ಚಿಕಿತ್ಸಾ ಕ್ರಮ ಏನು?
    ಆರಂಭಿಕ ಹಂತದಲ್ಲಿ ಡೆಂಗ್ಯೂ ಜ್ವರದ ಲಕ್ಷಣ ಕಾಣಿಸಿಕೊಂಡರೆ, ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಎಲ್ಲಾ ಆಸ್ಪತ್ರೆಗಳಲ್ಲೂ ಡೆಂಗ್ಯೂ ರೋಗಕ್ಕೆ ಚಿಕಿತ್ಸೆ ಲಭ್ಯವಿದೆ. ಡೆಂಗ್ಯೂ ಜ್ವರ ತೀವ್ರಮಟ್ಟದಲ್ಲಿದ್ದರೆ, ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ವೈದ್ಯರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ.

  • ಡೆಂಗ್ಯೂ ನಿಯಂತ್ರಣದಲ್ಲಿ ಸರ್ಕಾರ ವಿಫಲ: ಶೋಭಾ ಕರಂದ್ಲಾಜೆ ಕಿಡಿ

    ಡೆಂಗ್ಯೂ ನಿಯಂತ್ರಣದಲ್ಲಿ ಸರ್ಕಾರ ವಿಫಲ: ಶೋಭಾ ಕರಂದ್ಲಾಜೆ ಕಿಡಿ

    – ಸಿಎಂ ಹುದ್ದೆಯ ಹಗ್ಗ ಜಗ್ಗಾಟದಿಂದ ಅಭಿವೃದ್ಧಿ ಇಲ್ಲ

    ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ (Dengue fever) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸರ್ಕಾರ ಡೆಂಗ್ಯೂ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಿಡಿಕಾರಿದ್ದಾರೆ.

    ಶೇಷಾದ್ರಿಪುರದಲ್ಲಿ ಕರ್ನಾಟಕ ಮೆಮೊರಿ ಚಾಂಪಿಯನ್‍ಶಿಪ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆ ಜಗಳದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿವೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರ ನಡುವೆ ಡೆಂಗ್ಯೂ ಹಾಗೂ ಝಿಕಾ ಹೆಚ್ಚಾಗುತ್ತಿದೆ. ಸರ್ಕಾರ ಡೆಂಗ್ಯೂ ನಿಯಂತ್ರಣದ ಬಗ್ಗೆ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಶಂಕಿತ ಡೆಂಗ್ಯೂಗೆ ಯುವತಿ ಬಲಿ

    ಮುಂದಿನ ಅಧಿವೇಶನದಲ್ಲಿ ಡೆಂಗ್ಯೂ ಹಾಗೂ ಝಿಕಾ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಆಸ್ಪತ್ರೆಗಳಲ್ಲಿ ಬಹಳಷ್ಟು ಜನರು ದಾಖಲಾಗುತ್ತಿದ್ದು, ಸರಿಯಾಗಿ ಔಷಧಿ ಸಿಗುತ್ತಿಲ್ಲ. ಔಷಧಿಯ ದರ ಹೆಚ್ಚಿಸಿದ್ದಾರೆ. ಡೆಂಗ್ಯೂ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಯಾರೂ ಪಾಲಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂ ಅಬ್ಬರದ ನಡುವೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ

  • ಮೈಸೂರಿನಲ್ಲಿ ಡೆಂಗ್ಯೂಗೆ ಆರೋಗ್ಯಾಧಿಕಾರಿ ನಿಧನ

    ಮೈಸೂರಿನಲ್ಲಿ ಡೆಂಗ್ಯೂಗೆ ಆರೋಗ್ಯಾಧಿಕಾರಿ ನಿಧನ

    – ಹಾಸನಲ್ಲಿ ಮಕ್ಕಳನ್ನೇ ಕಾಡ್ತಿದೆ ಡೆಂಗ್ಯೂ

    ಮೈಸೂರು: ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಮೊದಲ ಬಲಿಯಾಗಿದೆ. ಆರೋಗ್ಯಾಧಿಕಾರಿ ನಾಗೇಂದ್ರ (32) ನಿಧನರಗಿದ್ದಾರೆ.

    ನಾಗೇಂದ್ರ ಅವರು ಹುಣಸೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೈಸೂರು ಜಿಲ್ಲೆಯಲ್ಲಿ ಒಟ್ಟು 162 ಆಕ್ಟೀವ್ ಪ್ರಕರಣಗಳಿವೆ. ಇತ್ತ ಹಾಸನ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಿ ಮಕ್ಕಳನ್ನೇ ಹೆಚ್ಚಾಗಿ ಕಾಡುತ್ತಿದೆ. ಒಂದೇ ವಾರದಲ್ಲಿ ಮೂವರು ಬಾಲಕಿಯರು ಮೃತಪಟ್ಟಿದ್ದಾರೆ.

    ಇನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲೂ ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಹಿಮ್ಸ್ ನಲ್ಲಿ 48 ಮಕ್ಕಳು ಹಾಗೂ 22 ವಯಸ್ಕರು ಚಿಕಿತ್ಸೆಗೆ ದಾಖಲಾಗಿದ್ದಾರೆ. 48 ಮಕ್ಕಳ ಪೈಕಿ 11 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಮುಂದೆ ತಡೆದಿದ್ದಕ್ಕೆ ಕಾಲೇಜ್ ಸೆಕ್ಯೂರಿಟಿ ಹತ್ಯೆ – ಪೊಲೀಸರ ಮುಂದೆ ಬಾಯ್ಬಿಟ್ಟ ವಿದ್ಯಾರ್ಥಿ

    ಕಳೆದ ಜನವರಿಯಿಂದ ಈವರೆಗೆ ಡೆಂಗ್ಯೂ ಶಂಕಿತ 628 ವಯಸ್ಕರು ಹಾಗೂ 602 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಳರೋಗಿಯಾಗಿ ದಾಖಲಿಸಿ ಹಿಮ್ಸ್ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೆ ಇದೆ. ಈವರೆಗೆ ಒಟ್ಟು ನಾಲ್ವರು ಮಹಾಮಾರಿ ಡೆಂಗ್ಯೂಗೆ ಬಲಿಯಾಗಿದ್ದಾರೆ. ಅದರಲ್ಲಿ ಎರಡು ಸಾವುಗಳನ್ನು ರಾಜ್ಯ ಡೆಂಗ್ಯೂ ಡೆತ್ ಆಡಿಟ್ ಸಮಿತಿ ದೃಢಪಡಿಸಿದೆ.

    ಇದುವರೆಗೆ ಜಿಲ್ಲೆಯಲ್ಲಿ 6400 ಜನರಿಗೆ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಡೆಂಗ್ಯೂ ನಿಯಂತ್ರಕ್ಕೆ ಹಲವು ಕ್ರಮ ಕೈಗೊಂಡ ಬಗ್ಗೆ ಹಿಮ್ಸ್ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • ಹಾಸನದಲ್ಲಿ ಡೆಂಗ್ಯೂಗೆ 13 ವರ್ಷದ ಬಾಲಕಿ ಬಲಿ!

    ಹಾಸನದಲ್ಲಿ ಡೆಂಗ್ಯೂಗೆ 13 ವರ್ಷದ ಬಾಲಕಿ ಬಲಿ!

    ಹಾಸನ: ಬೆಂಗಳೂರು ಬಳಿಕ ಮಾರಕ ಡೆಂಗ್ಯೂ ಜ್ವರಕ್ಕೆ (Dengue Fever) ಹಾಸನದಲ್ಲೊಂದು ಜೀವ ಬಲಿಯಾಗಿದೆ. 13 ವರ್ಷದ ಬಾಲಕಿ ಡೆಂಗ್ಯೂ ಜ್ವರದಿಂದ ಮೃತಪಟ್ಟ ಘಟನೆ ಹಾಸನ ತಾಲೂಕಿನ ಬೊಮ್ಮನಾಯಕಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಅಕ್ಷತಾ (13) ಮೃತ ಬಾಲಕಿ. ಅಕ್ಷತಾ ಮೂಲತಃ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದವರು. ಕೂಲಿ ಕೆಲಸ ಮಾಡುತ್ತಿದ್ದ ಅಪ್ಪಣ್ಣ ಶೆಟ್ಟಿ ಹಾಗೂ ಪದ್ಮಾ ದಂಪತಿ ಪುತ್ರಿ ಅಕ್ಷತಾ, ಹಾಸನದ ಖಾಸಗಿ ಶಾಲೆಯಲ್ಲಿ (Hassan Private School) 7ನೇ ತರಗತಿ‌ ಓದುತ್ತಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂಗೆ 27 ವರ್ಷದ ಯುವಕ ಬಲಿ

    ಕಳೆದ ಬುಧವಾರ ಜ್ವರಕ್ಕೆ ತುತ್ತಾಗಿದ್ದರು. ನಂತರ ಬಾಲಕಿಗೆ ಬೊಮ್ಮನಾಯಕಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದಾಗ್ಯೂ ಬಾಲಕಿ ಗುಣಮುಖಳಾಗದೇ ಇದ್ದ ಕಾರಣ ಪೋಷಕರು ಆಕೆಯನ್ನ ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಅಕ್ಷತಾ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಮತ್ತೊಂದು ಆಸ್ಪತ್ರೆಗೆ ದಾಖಲಿಸಿದ್ದರು.

    ಬಾಲಕಿ ಸ್ಥಿತಿ ಗಂಭೀರವಾಗುತ್ತಿದ್ದಂತೆ ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗುವಂತೆ ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ನಂತರ ಪೋಷಕರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ. ಬಾಲಕಿ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಹಿನ್ನಡೆಗೆ ಅತಿಯಾದ ಆತ್ಮವಿಶ್ವಾಸ, ಕಾರ್ಯಕರ್ತರ ಕಡೆಗಣನೆ ಕಾರಣ: ಡಿವಿಎಸ್

  • ಡೆಂಗ್ಯೂಗೆ ಕಾಲೇಜು ವಿದ್ಯಾರ್ಥಿನಿ ಬಲಿ

    ಡೆಂಗ್ಯೂಗೆ ಕಾಲೇಜು ವಿದ್ಯಾರ್ಥಿನಿ ಬಲಿ

    ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿದೆ. ಕಾಲೇಜು ವಿದ್ಯಾರ್ಥಿನಿಯೊಬ್ಬಳು ಡೆಂಗ್ಯೂ ಜ್ವರದಿಂದ (Dengue Fever) ಮೃತಪಟ್ಟಿದ್ದಾಳೆ.

    ಮೃತಳನ್ನು ಸಹನಾ ಬಾನು (18) ಎಂದು ಗುರುತಿಸಲಾಗಿದೆ. ಈಕೆ ಚಿಕ್ಕಮಗಳೂರು ನಗರದ ಮಹಮ್ಮದ್ ಖಾನ್ ಗಲ್ಲಿ ನಿವಾಸಿ. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಸಹನಾ ಬಾನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಿಸದೇ ಸಹನಾ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ.

    ಡೆಂಗ್ಯೂ ಜ್ವರದ ಲಕ್ಷಣಗಳು:
    * ಅಧಿಕ ಜ್ವರ, ತಲೆನೋವು, ಸುಸ್ತು ಕಾಣಿಸಿಕೊಳ್ಳುತ್ತವೆ.
    * ಮಾಂಸಖಂಡಗಳಲ್ಲಿ, ಕೈ, ಕಾಲುಗಳ ಕೀಲುಗಳಲ್ಲಿ ನೋವು ಉಂಟಾಗುತ್ತದೆ.
    * ಕಣ್ಣಿನಲ್ಲಿ ಹೇಳಲಾಗದ ನೋವು, ಉರಿಯಾಗುತ್ತದೆ.
    * ಕೆಮ್ಮು, ಗಂಟಲು ಕೆರೆತ ಬರುತ್ತದೆ.
    * ಕೆಲವರಿಗೆ ವಾಂತಿ, ತಲೆ ಸುತ್ತು ಕಾಣಿಸಿಕೊಳ್ಳುತ್ತವೆ.

    ಮುಂಜಾಗ್ರತಾ ಕ್ರಮಗಳೇನು?:
    * ಡೆಂಗ್ಯೂ ಹರಡುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ನೀವು ಎಚ್ಚರಗೊಳ್ಳಬೇಕು. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಬೇಕು.
    * ಸೊಳ್ಳೆಗಳಿಗೆ ಸೂಕ್ತವಾದ ತಾಣಗಳನ್ನು ನಾಶಪಡಿಸುವುದು.
    * ಮನೆಯ ಸುತ್ತಮುತ್ತ ನಿಂತಿರುವ ನೀರಿನ ನೆಲೆಗಳನ್ನು ನಾಶ ಪಡಿಸಬೇಕು.
    * ತೆಂಗಿನ ಚಿಪ್ಪು, ಟಯರ್ಗಳು, ಚಿಕ್ಕ ಗುಂಡಿಗಳು, ಬೇಡ ಎಂದು ಬಿಸಾಡಿದ ಪ್ಲಾಸ್ಟಿಕ್ ಬಕೆಟ್, ಜಗ್ ಇತ್ಯಾದಿಗಳ ಸಂಗ್ರಹ ಬೇಡ.
    * ನೀರು ನಿಂತಿರುವ ಕಡೆ ಸೂಕ್ತ ಕೀಟನಾಶಕ ಸಿಂಪಡಿಸಿ.
    * ಮಕ್ಕಳಿಗೆ ಉದ್ದ ತೋಳಿನ ಬಟ್ಟೆ, ಸಾಕ್ಸ್ ಹಾಕಿರಿ.
    * ಸೊಳ್ಳೆಗಳು ಮೊಟ್ಟೆಗಳನ್ನು ಇಡಲು ಅವಕಾಶ ಇರುವ ಕುಂಡಗಳು, ಮತ್ತಿತರ ವಸ್ತುಗಳನ್ನು ಸ್ವಚ್ಛ ಮಾಡಿರಿ.

    ಒಟ್ಟಿನಲ್ಲಿ ಡೆಂಗ್ಯೂ ಜ್ವರ ಬಂತೆಂದರೆ ಭಯ ಪಡುವುದು ಬೇಡ. ದಿನ ನಿತ್ಯದ ಆಹಾರ ಕ್ರಮ, ನಾಲಿಗೆ ರುಚಿಯನ್ನು ನಿಯಂತ್ರಣದಲ್ಲಿಡುವುದರಿಂದ ಡೆಂಗ್ಯೂವನ್ನು ಹೊಡೆದೋಡಿಸಬಹುದು. ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರ ಭೇಟಿ ಮಾಡಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಿ. ಸಾಕಷ್ಟು ಮನೆಮದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಸಲಹೆಗಳನ್ನೂ ಪಾಲಿಸಿದರೆ ನೀವು ಡೆಂಗ್ಯೂ ಜ್ವರದಿಂದ ಪಾರಾಗಬಹುದು.