Tag: demonetisation

  • ನೋಟ್ ಬ್ಯಾನ್ ನಂತ್ರ ಎಷ್ಟು ಹಣ ಬಂತು? ಎಷ್ಟು ಅಘೋಷಿತ ಆಸ್ತಿ ಪತ್ತೆ ಆಯ್ತು? ಸರ್ಕಾರದ ಉತ್ತರ ಇಲ್ಲಿದೆ

    ನವದೆಹಲಿ: ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಬಳಿಕ ಈವರೆಗೆ ಎಷ್ಟು ಹಣ ಮರಳಿ ಬಂದಿದೆ? ಎಷ್ಟು ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ಜನ ಮತ್ತು ರಾಜಕೀಯ ಪಕ್ಷಗಳು ಸರ್ಕಾರವನ್ನು ಕೇಳಿತ್ತು.

    ಈ ಪ್ರಶ್ನೆಗಳಿಗೆ ಸರ್ಕಾರ ಬಜೆಟ್‍ನಲ್ಲಿ ಉತ್ತರ ನೀಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿತ್ತು. ಈಗ ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಸಹಾಯಕ ಖಾತೆ ರಾಜ್ಯ ಸಚಿವ ಸಂತೋಷ್ ಗಂಗಾವರ್ ಲಿಖಿತ ಉತ್ತರವನ್ನು ನೀಡುವ ಮೂಲಕ ಜನರ ಕುತೂಹಲವನ್ನು ತಣಿಸುವ ಪ್ರಯತ್ನ ಮಾಡಿದ್ದಾರೆ.

    ಎಷ್ಟು ಹಣ ಬಂದಿದೆ?
    ನೋಟು ನಿಷೇಧವಾಗುವ ಮೊದಲು 17,165 ದಶಲಕ್ಷ 500 ರೂ. ಮುಖಬೆಲೆಯ ನೋಟು ಚಲಾವಣೆಯಲ್ಲಿದ್ದರೆ,  1 ಸಾವಿರ ಮುಖಬೆಲೆಯ 6,858 ದಶಲಕ್ಷ ನೋಟು ಚಲಾವಣೆಯಲ್ಲಿತ್ತು. ನೋಟ್ ಬ್ಯಾನ್ ಬಳಿಕ ಡಿಸೆಂಬರ್ 10ರವರೆಗೆ 12.44 ಲಕ್ಷ ಕೋಟಿ ಹಳೇನೋಟು ವಾಪಸ್ ಬಂದಿದೆ ಎಂದು ಸರ್ಕಾರ ಹೇಳಿದೆ.

    ಜನವರಿ 10ವರೆಗೆ ಎಷ್ಟು ಆಸ್ತಿ ಪತ್ತೆಯಾಗಿದೆ?
    1,100 ಕಡೆ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದ್ದು, 5,100 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. 610 ಕೋಟಿ ರೂ. ಆಸ್ತಿ- ಪಾಸ್ತಿ ಜಪ್ತಿ ಮಾಡಲಾಗಿದ್ದು ಇದರಲ್ಲಿ 510 ಕೋಟಿ ರೂ. ನೋಟುಗಳನ್ನು ಜಪ್ತಿ ಮಾಡಲಾಗಿದೆ. ಪತ್ತೆಯಾದ ಹಣದಲ್ಲಿ 110 ಕೋಟಿ ರೂ. ಹೊಸನೋಟು ಸಿಕ್ಕಿದೆ. ಒಟ್ಟು 5,400 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ.

    ವಿತ್‍ಡ್ರಾ ಮಿತಿ ಕೊನೆ:
    ನೋಟ್‍ಬ್ಯಾನ್ ಬಳಿಕ ಹಣದ ಮರುಪೂರೈಕೆ ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದ್ದು ಗ್ರಾಹಕರ ವಿತ್‍ಡ್ರಾ ಮಿತಿ ಕೊನೆಯಾಗಲಿದೆ ಅಂತ ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ. ಶೀಘ್ರದಲ್ಲೇ ಉಳಿತಾಯ ಖಾತೆಗಳ ಮೇಲಿರುವ ವಾರಕ್ಕೆ 24 ಸಾವಿರ ರೂಪಾಯಿ ವಿತ್‍ಡ್ರಾ ಮಿತಿ ಸೇರಿ ಎಲ್ಲಾ ನಿರ್ಬಂಧಗಳು ಅಂತ್ಯಗೊಳ್ಳಲಿದೆ ಅಂತ ಹಣಕಾಸು ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

  • ಮಂತ್ರಾಲಯ ಮಠದ ಹುಂಡಿಗೆ ಬಿತ್ತು ನಿಷೇಧಿತ ಲಕ್ಷಾಂತರ ರೂ.!

    ರಾಯಚೂರು: ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಗಳಿಗೆ ಈಗಲೂ ಭಕ್ತರು ಲಕ್ಷಾಂತರ ರೂಪಾಯಿ ರದ್ದಾದ 500, 1000 ರೂ ಮುಖಬೆಲೆ ನೋಟುಗಳನ್ನೇ ಹಾಕುತ್ತಿದ್ದಾರೆ. ಜನವರಿ ಅಂತ್ಯಕ್ಕೆ ಎಣಿಸಲಾದ ಮಠದ ಹುಂಡಿಗಳ ಒಂದು ತಿಂಗಳ ಒಟ್ಟು ಕಾಣಿಕೆ 1 ಕೋಟಿ 49 ಲಕ್ಷ ರೂಪಾಯಿ ಇದ್ದು, ಇದರಲ್ಲಿ 4 ಲಕ್ಷ 28 ಸಾವಿರದ 500 ರೂಪಾಯಿ ರದ್ದಾದ ನೋಟುಗಳಿವೆ. 1000 ರೂ. ಮುಖಬೆಲೆಯ 157 ನೋಟು ಹಾಗೂ 500 ರೂ. ಮುಖಬೆಲೆಯ 543 ನೋಟುಗಳಿವೆ.

    ಕಳೆದ ವರ್ಷ ಡಿಸೆಂಬರ್ ನಲ್ಲಿ 14 ಲಕ್ಷ 74 ಸಾವಿರ ರೂಪಾಯಿ ರದ್ದಾದ ನೋಟುಗಳು ಪತ್ತೆಯಾಗಿದ್ದವು. ಹಳೆಯ ನೋಟುಗಳು ಕಳೆದ ತಿಂಗಳಿಗಿಂತ 10 ಲಕ್ಷ ರೂಪಾಯಷ್ಟು ಕಡಿಮೆಯಾದ್ರು, ನೋಟು ಬದಲಾವಣೆ ಮಠಕ್ಕೆ ತಲೆನೋವಾಗಿದೆ. ಚೆನೈನ ಆರ್ ಬಿ ಐ ಕಚೇರಿಗೆ ಮಠದ ಆಡಳಿತ ಮಂಡಳಿ ಪತ್ರ ಬರೆದಿದ್ದು, ಮಾಹಿತಿ ಬಂದ ಬಳಿಕ ಹಣ ಬದಲಾವಣೆ ಮಾಡಲಾಗುವುದು ಅಂತ ಮಠದ ವ್ಯವಸ್ಥಾಪಕ ಶ್ರೀನಿವಾಸರಾವ್ ತಿಳಿಸಿದ್ದಾರೆ.

    ಇನ್ನೂ ದೊಡ್ಡ ಮೊತ್ತದ ನೋಟುಗಳು ರದ್ದಾಗಿರುವುದು ಮಠದ ಆದಾಯದ ಮೇಲೆ ಇದುವರೆಗೆ ಯಾವುದೇ ಪರಿಣಾಮ ಬೀರಿಲ್ಲ. ಪ್ರತಿ ತಿಂಗಳು ಸರಾಸರಿ 1 ಕೋಟಿ 30 ಲಕ್ಷದಷ್ಟು ಕಾಣಿಕೆ ಸಂಗ್ರಹವಾಗುತ್ತಲೇ ಇದೆ. ನಗದು ಕಾಣಿಕೆ ಜೊತೆಗೆ ಜನವರಿ ತಿಂಗಳಲ್ಲಿ ಭಕ್ತರು 76 ಗ್ರಾಂ ಚಿನ್ನ. 650 ಗ್ರಾಂ.ಬೆಳ್ಳಿ ಹಾಗೂ 2764 ರೂ.ವಿದೇಶಿ ಕರೆನ್ಸಿಯನ್ನೂ ದೇಣಿಗೆಯಾಗಿ ನೀಡಿದ್ದಾರೆ.

  • ಸ್ವಚ್ಛ್ ಧನ್: ವಿಶೇಷ ಸಾಫ್ಟ್ ವೇರ್ ಬಳಸಿ ಐಟಿ ಶೋಧ- 18 ಲಕ್ಷ ಖಾತೆದಾರರಿಗೆ ನೋಟಿಸ್

    ನವದೆಹಲಿ: ನೋಟ್‍ಬ್ಯಾನ್ ಬಳಿಕ ನವೆಂಬರ್ 9ರಿಂದ ಡಿಸೆಂಬರ್ 31ರವರೆಗೆ ಬ್ಯಾಂಕ್‍ಗಳಲ್ಲಿ ಡೆಪಾಸಿಟ್ ಮಾಡಿರುವ ಹಣದ ಮೇಲೆ ಐಟಿ ಈ ಮೊದಲೇ ಕಣ್ಣಿಟ್ಟಿತ್ತು. ಮಂಗಳವಾರದಂದು ಸ್ವಚ್ಛ್ ಧನ್/ಕ್ಲೀನ್ ಮನಿ ಅಭಿಯಾನವನ್ನು ಆರಂಭಿಸಿರೋ ಕೇಂದ್ರ ಸರ್ಕಾರ ವಿಶೇಷ ಸಾಫ್ಟ್‍ವೇರ್ ಬಳಸಿ ಬ್ಯಾಂಕ್‍ಗಳ ಬಗ್ಗೆ ಶೋಧ ಕಾರ್ಯ ನಡೆಸಿದ್ದು, ಖಾತೆದಾರರ ಡೆಪಾಸಿಟ್ ಮಾಹಿತಿ ಹೊಂದಾಣಿಕೆ ಆಗದ ಕಾರಣ 18 ಲಕ್ಷ ಮಂದಿಗೆ ನೋಟಿಸ್ ನೀಡಿದೆ.

    ಇ-ಮೇಲ್, ಎಸ್‍ಎಂಎಸ್ ಮೂಲಕ ನೊಟೀಸ್ ರವಾನಿಸಲಾಗಿದ್ದು, 10 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಅವರಿಂದ ಪ್ರತಿಕ್ರಿಯೆ ಬರದಿದ್ರೆ ಐಟಿಯಿಂದ ಮತ್ತೊಮ್ಮೆ ನೋಟಿಸ್ ಸಿಗಲಿದ್ದು ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ಪ್ರೋಗ್ರಾಮಿಂಗ್ ಸಾಫ್ಟ್‍ವೇರ್‍ನಿಂದ ನೋಟ್‍ಬ್ಯಾನ್ ನಂತರ ಬ್ಯಾಂಕ್‍ಗಳಲ್ಲಾಗಿರುವ ಎಲ್ಲಾ ಠೇವಣಿಗಳ ಬಗ್ಗೆ ಇ- ವೇರಿಫಿಕೇಷನ್ ಮಾಡಬಹುದಾಗಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಕ್ ಅಧಿಯಾ ಹೇಳಿದ್ದಾರೆ.

    ಈ ಮಧ್ಯೆ, ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ 4 ಕೋಟಿ 12 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಮೂವರನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನ ಅಬ್ದುಲ್, ಶಂಶುದ್ದೀನ್, ಅಫ್ಜಲ್ ಅಂತ ಗುರುತಿಸಲಾಗಿದೆ. ಇವರ ಬಳಿ ಹೊಸ 2000 ರೂಪಾಯಿಯ 3 ಕೋಟಿ 10 ಲಕ್ಷ ರೂ. ಹಾಗೂ 1 ಕೋಟಿ ರೂ. ಮೌಲ್ಯದಷ್ಟು ಹೊಸ 500 ಹಾಗು 100 ರೂಪಾಯಿಗಳ 193 ಕಂತೆಗಳಿದ್ದವು.