Tag: demand

  • ಜಾರಕಿಹೊಳಿ ಸಹೋದರರಿಂದ ಸರ್ಕಾರಕ್ಕೆ 4 ಷರತ್ತು!

    ಜಾರಕಿಹೊಳಿ ಸಹೋದರರಿಂದ ಸರ್ಕಾರಕ್ಕೆ 4 ಷರತ್ತು!

    ಬೆಂಗಳೂರು: ಬೆಳಗಾವಿ ವಿಚಾರವಾಗಿ ಮುನಿಸಿಕೊಂಡಿರುವ ಜಾರಕಿಹೊಳಿ ಸಹೋದರರು ಪಕ್ಷ ಬಿಟ್ಟು ಹೋಗದಂತೆ ಮಾಡಲು ತಮ್ಮದೇ ಆದ ನಾಲ್ಕು ಷರತ್ತುಗಳನ್ನು ಸಮ್ಮಿಶ್ರ ಸರ್ಕಾರದ ಮುಂದೆ ಇಟ್ಟಿದ್ದಾರಂತೆ.

    ಹೌದು, ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆ ನಡೆಯಿಂದ ಮುನಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಬಿಡುವ ಯೋಚನೆಗೆ ಕೈ ಹಾಕಿರುವುದಾಗಿ ಮಾಹಿತಿ ಲಭಿಸಿದೆ. ಒಂದು ವೇಳೆ ಸಹೋದರರು ಪಕ್ಷದಲ್ಲಿಯೇ ಉಳಿಯಬೇಕಾದರೆ ಅವರ 4 ಷರತ್ತುಗಳನ್ನು ಪೂರೈಸುವಂತೆ ಕೆಪಿಸಿಸಿ ಹಾಗೂ ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

    ಅಲ್ಲದೇ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಡಿಸಿಎಂ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗಲೂ ಸಹೋದರರು ಈ ನಾಲ್ಕು ಷರತ್ತುಗಳನ್ನು ಮುಂದಿಟ್ಟಿರುವುದಾಗಿ ತಿಳಿದು ಬಂದಿದೆ.

    ಷರತ್ತುಗಳು ಏನು?
    1. ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ಯಾರೇ ಆದರೂ ಬೆಳಗಾವಿ ಜಿಲ್ಲೆಯ ಆಂತರಿಕ ರಾಜಕೀಯ ವಿಷಯಕ್ಕೆ ತಲೆ ಹಾಕದಂತೆ ನೋಡಿಕೊಳ್ಳಬೇಕು.
    2. ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ನಿರ್ಣಯವೇ ಅಂತಿಮ. ಪಕ್ಷ ಹಾಗೂ ಸರ್ಕಾರ ಎರಡರ ಹಿತ ಕಾಯುವುದು ನಮ್ಮ ಜವಾಬ್ದಾರಿ. ಆದರೆ ಅದಕ್ಕೆ ಧಕ್ಕೆ ಬರಬಾರದು ಅಂದರೆ ನಾವು ಹೇಳಿದ ಮಾತಿಗೆ ಆದ್ಯತೆ ನೀಡಬೇಕು.
    3. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಸೇರಿದ ಶಾಸಕರೊಬ್ಬರಿಗೆ ಸಚಿವ ಸ್ಥಾನ ಕಲ್ಪಿಸಿಕೊಡಬೇಕು.
    4. ನಮ್ಮ ಬೆಂಬಲಿತ ಮೂರರಿಂದ ನಾಲ್ಕು ಜನ ಶಾಸಕರಿಗೆ ಒಳ್ಳೆಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು.

    ಈ ಮೇಲ್ಕಂಡ ಒಟ್ಟು 4 ಷರತ್ತುಗಳನ್ನು ಜಾರಕಿಹೊಳಿ ಸಹೋದರರು ಪ್ರಮುಖವಾಗಿ ಎಐಸಿಸಿ ಹಾಗೂ ಕೆಪಿಸಿಸಿ ನಾಯಕರ ಮುಂದಿಟ್ಟಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಮೊದಲೆರಡು ಷರತ್ತುಗಳಿಗೆ ಅಸ್ತು ಎಂದು, ಬೆಳಗಾವಿ ವಿಷಯದಲ್ಲಿ ಯಾರು ಕೂಡ ಹಸ್ತಕ್ಷೇಪ ಮಾಡಲ್ಲ. ಬೆಳಗಾವಿಯಲ್ಲಿನ ಪಕ್ಷ ಹಾಗೂ ಸರ್ಕಾರದ ಜವಾಬ್ದಾರಿ ನಿಮ್ಮದೆ ಎಂದಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕಿದೆ. ಹೀಗಾಗಿ ಜಾತಿವಾರು ಹಾಗೂ ಪ್ರದೇಶವಾರು ಲೆಕ್ಕಾಚಾರದಲ್ಲಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಅನ್ಯಾಯವಾಗಿದ್ದರೆ, ಅದನ್ನು ಪರಿಶೀಲಿಸಿ ನ್ಯಾಯ ಒದಗಿಸಲಾಗುವುದು. ಇನ್ನು ನಿಗಮ ಮಂಡಳಿ ವಿಚಾರದಲ್ಲಿ ಅರ್ಹರಿಗೆ 2-3 ಬಾರಿ ಗೆದ್ದವರಿಗೆ ಆದ್ಯತೆ ನೀಡಬೇಕಿದೆ. ಅದರಲ್ಲಿ ನಿಮ್ಮ ಬೆಂಬಲಿಗರು ಇದ್ದರೆ ಕಂಡಿತ ಅವಕಾಶ ಸಿಗಲಿದೆ ಎಂದು ತಿಳಿಸಿದ್ದಾರಂತೆ.

    ಎಐಸಿಸಿ ಹಾಗೂ ಕೆಪಿಸಿಸಿ ಪ್ರಮುಖ ನಾಯಕರು ಜಾರಕಿಹೊಳಿ ಸಹೋದರರು ಮುಂದಿಟ್ಟಿದ್ದ ನಾಲ್ಕು ಷರತ್ತುಗಳ ಪೈಕಿ ಎರಡಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಇನ್ನುಳಿದ ಷರತ್ತುಗಳಿಗೆ ಸ್ವಲ್ಪ ಸಮಯ ಕಾಯುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾಲಿಗಿಂತಲೂ ಗೋಮೂತ್ರಕ್ಕೆ ಹೆಚ್ಚಾಯ್ತು ಬೇಡಿಕೆ: 1 ಲೀಟರ್ ಗೆ 30 ರೂ.

    ಹಾಲಿಗಿಂತಲೂ ಗೋಮೂತ್ರಕ್ಕೆ ಹೆಚ್ಚಾಯ್ತು ಬೇಡಿಕೆ: 1 ಲೀಟರ್ ಗೆ 30 ರೂ.

    ಜೈಪುರ: ರಾಜಸ್ಥಾನದಲ್ಲಿ ಈಗ ಗೋಮೂತ್ರದ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಆದಾಯದ ಮೂಲವಾಗಿ ಪರಿವರ್ತನೆಯಾಗಿದೆ.

    ರಾಜಸ್ಥಾನದ ರೈತರು ಗಿರ್ ಮತ್ತು ತಾಪಾರ್ಕರ್ ಎಂಬ ಪ್ರಮುಖವಾದ ತಳಿಯ ಗೋಮೂತ್ರವನ್ನು ಮಾರುಕಟ್ಟೆಗಳಲ್ಲಿ ಪ್ರತಿ ಲೀಟರ್ ಗೆ 15 ರೂ. ನಿಂದ 30 ರೂ. ನಂತೆ ಮಾರಾಟ ಮಾಡುತ್ತಿದ್ದರೆ, ಹಾಲನ್ನು 22 ರೂ. ನಿಂದ 25 ರೂ ವರೆಗೆ ಮಾರಾಟ ಮಾಡುತ್ತಿದ್ದಾರೆ.

    2 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿರುವ ಜೈಪುರದ ಕೈಲೇಶ್ ಗುಜ್ಜರ್ ಪ್ರತಿಕ್ರಿಯಿಸಿ, ಗೋಮೂತ್ರ ಮಾರಾಟದಿಂದಾಗಿ ನನ್ನ ಆದಾಯ 30% ಹೆಚ್ಚಾಗಿದೆ. ಮಾರಾಟದಿಂದಾಗಿ ಈಗ ನನಗೆ ಅದೃಷ್ಟ ಬಂದಿದ್ದು, ಗೋಮೂತ್ರ ಸಂಗ್ರಹಿಸಲು ರಾತ್ರಿಯಿಡಿ ಹಸುವಿನ ಕೊಟ್ಟಿಗೆಯಲ್ಲೇ ಎಚ್ಚರವಾಗಿರಬೇಕಾಗುತ್ತದೆ. ದನ ನಮ್ಮ ತಾಯಿ, ಹಾಗಾಗಿ ರಾತ್ರಿಯಿಡಿ ಗೋಮೂತ್ರಕ್ಕಾಗಿ ಕೊಟ್ಟಿಗೆಯಲ್ಲಿ ಕಾಯುವುದು ನನಗೆ ಬೇಸರವಾಗುವುದಿಲ್ಲ ಎಂದು ಹೇಳಿದ್ದಾರೆ.

    ಓಂ ಪ್ರಕಾಶ್ ಮೀನಾ ಪ್ರತಿಕ್ರಿಯಿಸಿ, ಗಿರ್ ತಳಿಯ ಹಸುವಿನ ಮೂತ್ರವನ್ನು ನಾನು ಮಾರಾಟ ಮಾಡುತ್ತಿದ್ದೇನೆ. ಲೀಟರ್ ಒಂದಕ್ಕೆ 30 ರಿಂದ 50 ರೂಪಾಯಿ ಸಿಗುತ್ತಿದೆ ಎಂದು ಹೇಳಿದರು. ಇದನ್ನು ಓದಿ: ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು!

    ಬೇಡಿಕೆ ಯಾಕೆ?
    ಗೋಮೂತ್ರವನ್ನು ಹೆಚ್ಚಾಗಿ ರೈತರು ತಮ್ಮ ಕೃಷಿಯನ್ನು ಹಾಳು ಮಾಡುವ ಕೀಟಗಳನ್ನು ತಡೆಗಟ್ಟಲು ಬೆಳೆಗಳ ಮೇಲೆ ಸಿಂಪಡಿಸುತ್ತಾರೆ. ಅಷ್ಟೇ ಅಲ್ಲದೇ ಯಜ್ಞ, ಪಂಚಗವ್ಯಗಳಲ್ಲಿ ಮತ್ತು ಧಾರ್ಮಿಕ ಆಚರಣೆ ಕಾರ್ಯಕ್ರಮಗಳಲ್ಲಿ ಬಳಸುವುದರಿಂದ ಬೇಡಿಕೆ ಹೆಚ್ಚಾಗಿದೆ.

    ಉದಯಪುರದ ಸರ್ಕಾರಿ ಮಹಾರಾಣಾ ಪ್ರತಾಪ್ ಕೃಷಿ ವಿಶ್ವವಿದ್ಯಾಲಯ, ಜೈವಿಕ ಕೃಷಿ ಯೋಜನೆಗಾಗಿ ಪ್ರತಿ ತಿಂಗಳಿಗೂ 300 ರಿಂದ 500 ಲೀಟರ್ ನಷ್ಟು ಗೋಮೂತ್ರವನ್ನು ಬಳಸುತ್ತದೆ. ಪ್ರತಿ ತಿಂಗಳು 15,000-20,000 ರೂಪಾಯಿಯ ಮೌಲ್ಯದಷ್ಟು ಗೋಮೂತ್ರವನ್ನು ಖರೀದಿಸುತ್ತದೆ ಎಂದು ಉಪಕುಲಪತಿ ಉಮಾ ಶಂಕರ್ ಹೇಳಿದ್ದಾರೆ.

  • 8 ವರ್ಷದಲ್ಲಿ ಫಸ್ಟ್ ಟೈಂ ಭಾರತದಲ್ಲಿ ಚಿನ್ನದ ಬಳಕೆ ಭಾರೀ ಇಳಿಕೆ

    8 ವರ್ಷದಲ್ಲಿ ಫಸ್ಟ್ ಟೈಂ ಭಾರತದಲ್ಲಿ ಚಿನ್ನದ ಬಳಕೆ ಭಾರೀ ಇಳಿಕೆ

    ಮುಂಬೈ: 8 ವರ್ಷದಲ್ಲೇ ಭಾರತದಲ್ಲಿ ಚಿನ್ನದ ಬಳಕೆ ಭಾರೀ ಇಳಿಕೆಯಾಗಿದೆ ಎಂದು ವರ್ಲ್ಡ್  ಗೋಲ್ಡ್ ಕೌನ್ಸಿಲ್ (ಡಬ್ಲ್ಯೂಜಿಸಿ)ಹೇಳಿದೆ.

    ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಸರಾಸರಿ ಪ್ರತಿ ವರ್ಷ 845 ಟನ್ ಚಿನ್ನ ಬಳಕೆಯಾಗುತಿತ್ತು. ಆದರೆ 2017ರಲ್ಲಿ ಅಂದಾಜು 650 ಟನ್ ಬಳಕೆಯಾಗುವ ಸಾಧ್ಯತೆಯಿದೆ ಎಂದು ಭಾರತದ ಡಬ್ಲ್ಯೂಜಿಸಿ ಆಡಳಿತ ನಿರ್ದೇಶಕರಾದ ಸೋಮಸುಂದರಂ ಪಿಆರ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    2016ರಲ್ಲಿ 666.1 ಟನ್ ಚಿನ್ನ ಬಳಕೆಯಾಗಿತ್ತು, ಜಿಎಸ್‍ಟಿ ಜಾರಿ ಮತ್ತು  ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಜಾರಿ ಮಾಡಿ ಆಭರಣ ಖರೀದಿ ಮೇಲೆ ಕಠಿಣ ಕ್ರಮವನ್ನು ಕೇಂದ್ರ ಸರ್ಕಾರ ವಿಧಿಸಿದ ಬಳಿಕ ಚಿನ್ನದ ಬಳಕೆ ಭಾರೀ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಜುಲೈ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಚಿನ್ನ ಬೇಡಿಕೆ ಶೇ.24ರಷ್ಟು ಇಳಿಕೆಯಾಗಿದೆ. ಭಾರತದಲ್ಲಿ ಮೂರನೇ ಎರಡರಷ್ಟು ಚಿನ್ನದ ಬೇಡಿಕೆ ಗ್ರಾಮೀಣ ಭಾಗದಿಂದ ಬರುತ್ತದೆ. ಆದರೆ ಈ ಬಾರಿ ಮುಂಗಾರು ಮಳೆ ಕೆಲವೆಡೆ ಬಾರದೇ ಇದ್ದ ಕಾರಣ ಚಿನ್ನದ ಬೇಡಿಕೆ ಕುಸಿದಿದೆ  ಎಂದು ಡಬ್ಲ್ಯೂಜಿಸಿ ತನ್ನ ವರದಿಯಲ್ಲಿ ತಿಳಿಸಿದೆ.

    ಅಕ್ಟೋಬರ್ – ಡಿಸೆಂಬರ್ ವೇಳೆ ಹಬ್ಬಗಳು ಮತ್ತು ಮದುವೆಗಳು ಹೆಚ್ಚಾಗಿ ನಡೆಯುವ ಕಾರಣ ಈ ಅವಧಿಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಡಬ್ಲ್ಯೂಜಿಸಿ ಹೇಳಿದೆ.

    ಜಿಎಸ್‍ಟಿಗೂ ಮೊದಲು ಚಿನ್ನದ ಮೇಲೆ ಸೇವಾ ತೆರಿಗೆ 1.2% ಇತ್ತು. ಜಿಎಸ್‍ಟಿಯಲ್ಲಿ ಚಿನ್ನದ ಮೇಲೆ 3% ತೆರಿಗೆ ವಿಧಿಸಲಾಗಿದೆ.

    ಇದೇ ಅಕ್ಟೋಬರ್ ನಲ್ಲಿ 50 ಸಾವಿರ ರೂ. ಮೇಲ್ಪಟ್ಟ ಚಿನ್ನಾಭರಣಗಳ ಖರೀದಿಗೆ ಪಾನ್‍ಕಾರ್ಡ್ ಕಡ್ಡಾಯಗೊಳಿಸಿದ್ದ ಕಾನೂನನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಇನ್ನು ಮುಂದೆ 2 ಲಕ್ಷ ರು. ವರೆಗಿನ ಚಿನ್ನಾಭರಣ ಖರೀದಿಗೆ ಪಾನ್‍ಕಾರ್ಡ್ ಕಡ್ಡಾಯ ಇರುವುದಿಲ್ಲ. ಅದಕ್ಕೆ ಮೇಲ್ಪಟ್ಟ ಮೊತ್ತದ ಖರೀದಿಗೆ ಮಾತ್ರವೇ ಪಾನ್ ಕಡ್ಡಾಯ ಎಂದು ಸರ್ಕಾರ ತಿಳಿಸಿತ್ತು.

    ನೋಟ್ ಬ್ಯಾನ್ ಬಳಿಕ ಆಭರಣ ಉದ್ಯಮಿಗಳು, ಅಕ್ರಮ ಹಣ ಸಕ್ರಮ ಮಾಡುವ ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ ಸಂಶಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ- 2002 ಅನ್ನು ಆಭರಣ ಖರೀದಿ ವ್ಯವಹಾರಗಳಿಗೆ ವಿಸ್ತರಿಸಿತ್ತು. ವಿಸ್ತರಿಸಿದ ಪರಿಣಾಮ 50 ಸಾವಿರ ರೂ. ಮೇಲ್ಪಟ್ಟ ಚಿನ್ನಖರೀದಿ ವೇಳೆ ಗ್ರಾಹಕರು ಪಾನ್‍ಕಾರ್ಡ್ ವಿವರ ನೀಡಬೇಕಿತ್ತು. ಜೊತೆಗೆ ವ್ಯಾಪಾರಿಗಳು ಭಾರೀ ಮೌಲ್ಯದ ಖರೀದಿ ಬಗ್ಗೆ ದಾಖಲೆ ಇಟ್ಟುಕೊಳ್ಳುವುದರ ಜತೆಗೆ ಅದನ್ನು ಹಣಕಾಸು ಗುಪ್ತ ಚರ ಇಲಾಖೆಗೆ ಸಲ್ಲಿಸಬೇಕಿತ್ತು.

    ಪ್ರಸ್ತುತ ಈಗ 2 ಲಕ್ಷ ರೂ. ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ಪಾನ್, ಆಧಾರ್ ನಂಬರ್, ಡಿಎಲ್ ಅಥವಾ ಪಾಸ್‍ಪೋರ್ಟ್ ಪ್ರತಿ ನೀಡುವುದು ಕಡ್ಡಾಯವಾಗಿದೆ.