Tag: delivery

  • ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ – ಐಎಎಸ್ ಅಧಿಕಾರಿಗೆ ಪ್ರಶಂಸೆ

    ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ – ಐಎಎಸ್ ಅಧಿಕಾರಿಗೆ ಪ್ರಶಂಸೆ

    ರಾಂಚಿ: ಸಾಮಾನ್ಯವಾಗಿ ಉನ್ನತ ಉದ್ದೆಯಲ್ಲಿರುವವರು ಅನಾರೋಗ್ಯ ಉಂಟಾದರೆ ಖಾಸಗಿ ಆಸ್ಪತ್ರೆಗೆ ಹೋಗುವುದು ಅಧಿಕ. ಆದರೆ ಜಾರ್ಖಂಡ್‍ನ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕ ಮಾದರಿಯಾಗಿದ್ದಾರೆ.

    ಜಾರ್ಖಂಡ್ ನ ಗೊಡ್ಡಾ ಪ್ರದೇಶದ ಮಹಿಳಾ ಐಎಎಸ್ ಅಧಿಕಾರಿ ಕಿರಣ್ ಕುಮಾರ್ ಪಾಸಿ ಅವರು ಸದರ್ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿರುವ ಐಎಎಸ್ ಅಧಿಕಾರಿಯನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸಿಸುತ್ತಿದ್ದಾರೆ.

    ಸಾಮಾನ್ಯ ಜನರು ಕೂಡ ಸರ್ಕಾರಿ ಆಸ್ಪತ್ರೆಗೆ ಹೋಗಲು ಯೋಚನೆ ಮಾಡುತ್ತಾರೆ. ಅಂತಹವರಿಗೆ ಐಎಎಸ್ ಅಧಿಕಾರಿ ಪಾಸಿ ಅವರು ಉತ್ತಮ ಉದಾಹರಣೆ ನೀಡಿದ್ದಾರೆ. ಇದೀಗ ಕಿರಣ್ ಕುಮಾರ್ ಪಾಸಿ ಮತ್ತು ಅವರ ಮಗುವಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಅವರು ಇಲ್ಲಿಗೆ ಬಂದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಐಎಎಸ್ ಅಧಿಕಾರಿ ಮಾಡಿರುವ ಕೆಲಸದಿಂದ ಖಂಡಿತವಾಗಿಯೂ ಸರ್ಕಾರಿ ವ್ಯವಸ್ಥೆಯಲ್ಲಿ ವಿಶ್ವಾಸ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಸಿವಿಲ್ ಸರ್ಜನ್ ಎಸ್‍.ಪಿ ಮಿಶ್ರಾ ಹೇಳಿದ್ದಾರೆ.

    ಕಿರಣ್ ಕುಮಾರ್ ಪಾಸಿ ಮುಂದಿನ ಎರಡು ದಿನಗಳವರೆಗೆ ಆಸ್ಪತ್ರೆಯಲ್ಲಿ ಇರುತ್ತಾರೆ. ಅವರ ಯಶಸ್ವಿ ಹೆರಿಗೆಯ ನಂತರ ಅನೇಕ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಬಂದು ಅವರನ್ನು ಅಭಿನಂದಿಸಿದ್ದಾರೆ.

    ಹೆರಿಗೆಯ ನಂತರ ದಿಯೋಘರ್ ಡಿಸಿ ನ್ಯಾನ್ಸಿ ಸಹಯ್ ವೈಯಕ್ತಿಕವಾಗಿ ಸದರ್ ಆಸ್ಪತ್ರೆಗೆ ಬಂದಿದ್ದರು. ಅವರು ಕೂಡ ಕಿರಣ್ ಕುಮಾರ್ ಪಾಸಿ ಅವರನ್ನು ಶ್ಲಾಘಿಸಿದ್ದು, ನಿಮ್ಮಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಜನರಲ್ಲಿ ಆತ್ಮವಿಶ್ವಾಸ ತುಂಬುತ್ತದೆ ಎಂದು ಹೇಳಿದರು.

  • KSRTC ಬಸ್ಸಿನಲ್ಲೇ ಹೆಣ್ಣು ಮಗುವಿನ ಜನನ

    KSRTC ಬಸ್ಸಿನಲ್ಲೇ ಹೆಣ್ಣು ಮಗುವಿನ ಜನನ

    – ಹೊಸ ಪಂಚೆ, ಬಟ್ಟೆ ನೀಡಿದ ಡ್ರೈವರ್, ಕಂಡಕ್ಟರ್

    ಹಾಸನ: ಒಂಬತ್ತು ತಿಂಗಳ ತುಂಬು ಗರ್ಭಿಣಿಯೊಬ್ಬರು ಕೆಎಸ್ಆರ್‌ಟಿಸಿ ಬಸ್ಸಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಹಾಸನದಲ್ಲಿ ನಡೆದಿದೆ.

    ಷಹೀನಾ ಬಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದವರು. ಹುಬ್ಬಳ್ಳಿ ಮೂಲದ ಷಹೀನಾರನ್ನ ಮಡಿಕೇರಿಯ ಹುಡುಗನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮಂಗಳವಾರ ಷಹೀನಾ ಪೋಷಕರ ಜೊತೆ ಬಸ್ಸಿನಲ್ಲಿ ಬರುತ್ತಿದ್ದಾಗ ಹಾಸನದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಸ್ವಲ್ಪ ಸಮಯದ ನಂತರ ಷಹೀನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ತಕ್ಷಣ ಬಸ್ ಚಾಲಕ ಮತ್ತು ನಿರ್ವಾಹಕ ಸ್ವಲ್ಪ ಸಮಯ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ಬಸ್ ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಗೆ ಹೊಸ ಪಂಚೆ ಮತ್ತು ಬಟ್ಟೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಕ್ಷಣ ಅಂಬುಲೆನ್ಸ್‌ಗೆ ಕರೆ ಮಾಡಿ ಮಗು ಮತ್ತು ತಾಯಿಯನ್ನು ಹಾಸನ ಹಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

    ತಾಯಿ ಮಗು ಆರೋಗ್ಯವಾಗಿದ್ದು, ಗರ್ಭಿಣಿಯ ಕಷ್ಟಕ್ಕೆ ಸ್ಪಂದಿಸಿದ ಕೆಎಸ್ಆರ್‌ಟಿಸಿ ನೌಕರರ ಗುಣಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಚಲಿಸುತ್ತಿರುವ ರೈಲಿನಲ್ಲೇ ಹೆರಿಗೆ ಮಾಡಿಸಿದ ಸೇನಾ ವೈದ್ಯರಿಗೆ ನೆಟ್ಟಿಗರ ಮೆಚ್ಚುಗೆ

    ಚಲಿಸುತ್ತಿರುವ ರೈಲಿನಲ್ಲೇ ಹೆರಿಗೆ ಮಾಡಿಸಿದ ಸೇನಾ ವೈದ್ಯರಿಗೆ ನೆಟ್ಟಿಗರ ಮೆಚ್ಚುಗೆ

    ನವದೆಹಲಿ: ಚಲಿಸುತ್ತಿರುವ ರೈಲಿನಲ್ಲಿ ಹೆರಿಗೆ ಮಾಡಿಸಿದ ಸೇನಾ ವೈದ್ಯರಿಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಭಾರತೀಯ ಸೇನೆಯ 172 ಮಿಲಿಟರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುವ ಕ್ಯಾಪ್ಟನ್ ಲಲಿತಾ ಮತ್ತು ಕ್ಯಾಪ್ಟನ್ ಅಮಂದೀಪ್ ಇಬ್ಬರು ಹೌರ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

    ಈ ಸಮಯದಲ್ಲಿ ತಕ್ಷಣ ಸಹಾಯಕ್ಕೆ ಬಂದ ಸೇನಾ ವೈದ್ಯೆಯರಾದ ಲಲಿತಾ ಮತ್ತು ಅಮಂದೀಪ್ ಚಲಿಸುತ್ತಿರುವ ರೈಲಿನಲ್ಲೇ ಹೆರಿಗೆ ಮಾಡಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಇಂಡಿಯನ್ ಆರ್ಮಿ ತಾಯಿ ಮತ್ತು ಹೆಣ್ಣು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದೆ. ಆರ್ಮಿ ಮಾಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಮಗುವಿನ ಜೊತೆ ಲಲಿತಾ ಮತ್ತು ಅಮಂದೀಪ್ ಇರುವ ಫೋಟೋವನ್ನು ಟ್ವೀಟ್ ಮಾಡಿರುವ ಇಂಡಿಯನ್ ಆರ್ಮಿ, ಭಾರತೀಯ ಸೇನೆಯ 172 ಮಿಲಿಟರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುವ ಕ್ಯಾಪ್ಟನ್ ಲಲಿತಾ ಮತ್ತು ಕ್ಯಾಪ್ಟನ್ ಅಮಂದೀಪ್ ಚಲಿಸುತ್ತಿರುವ ಹೌರ ಎಕ್ಸ್ ಪ್ರೆಸ್ ರೈಲಿನಲ್ಲಿ ಹೆರಿಗೆಯನ್ನು ಮಾಡಿಸಿದ್ದಾರೆ. ತಾಯಿ ಮತ್ತು ಹೆಣ್ಣು ಮಗು ಆರೋಗ್ಯವಾಗಿ ಇದ್ದಾರೆ ಎಂದು ಬರೆದುಕೊಂಡಿದೆ.

    ಆರ್ಮಿ ಮಾಡಿರುವ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಸುಮಾರು 20 ಸಾವಿರ ಜನ ಪೋಸ್ಟ್ ಅನ್ನು ಇಷ್ಟಪಟ್ಟಿದ್ದಾರೆ ಮತ್ತು 35 ಸಾವಿರಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡುವ ಮೂಲಕ ಸೇನಾ ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ಸೇನಾ ವೈದ್ಯೆಯರನ್ನು ಹೀರೋ ಎಂದು ಹೊಗಳಿದ್ದಾರೆ.

    https://twitter.com/CharuvillyNair/status/1210854897282736129

    ಈ ಪೋಸ್ಟ್ ಮೆಚ್ಚಿ ಕೆಲವರು ಕಮೆಂಟ್ ಮಾಡಿದ್ದು ಮಗುವಿನ ಪೋಷಕರಿಗೆ ಮಗುವಿಗೆ ಈ ಇಬ್ಬರು ವೈದ್ಯೆಯರಲ್ಲಿ ಯಾರ ಹೆಸರು ಇಡಬೇಕು ಎಂಬ ಪ್ರಶ್ನೆ ಕಾಡುತ್ತಿರಬಹುದು ಎಂದು ಕಮೆಂಟ್ ಮಾಡಿದ್ದಾರೆ. ಆಸ್ಪತ್ರೆಯಿಂದ ಹೊರಗೆ ಹೆರಿಗೆ ಮಾಡಿಸುವುದು ತುಂಬಾ ಕಷ್ಟದ ಕೆಲಸ. ಆದರೆ ಈ ಇಬ್ಬರು ಧೈರ್ಯಶಾಲಿ ಸೇನಾ ವೈದ್ಯೆಯರು ಈ ಕೆಲಸವನ್ನು ಬಹಳ ಸುಲಭದಲ್ಲಿ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

  • ಗರ್ಭಿಣಿಯನ್ನ ವಾಪಸ್ ಕಳುಹಿಸಿದ ವೈದ್ಯರು – ಮಾರ್ಗ ಮಧ್ಯೆ ಆಟೋದಲ್ಲೇ ಹೆರಿಗೆ

    ಗರ್ಭಿಣಿಯನ್ನ ವಾಪಸ್ ಕಳುಹಿಸಿದ ವೈದ್ಯರು – ಮಾರ್ಗ ಮಧ್ಯೆ ಆಟೋದಲ್ಲೇ ಹೆರಿಗೆ

    ಯಾದಗಿರಿ: ಚಲಿಸುತ್ತಿರುವ ಆಟೋದಲ್ಲಿಯೇ ಹೆರಿಗೆಯಾಗಿರುವ ಘಟನೆ ಯಾದಗಿರಿ ನಗರದ ಮಧ್ಯ ಭಾಗದಲ್ಲಿ ತಡರಾತ್ರಿ ನಡೆದಿದೆ.

    ದೇವಿ ಎಂಬಾಕೆ ಮಾರ್ಗ ಮಧ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದೇವಿ ಯಾದಗಿರಿ ತಾಲೂಕಿನ ಮುದ್ನಾಳ ತಾಂಡದ ನಿವಾಸಿಯಾಗಿದ್ದು, ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ದಾಖಲೆಗಳು ಸರಿಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಹೆರಿಗೆ ನೋವು ಅನುಭವಿಸುತ್ತಿದ್ದ ದೇವಿಯನ್ನು ತಡರಾತ್ರಿ ವೈದ್ಯರು ವಾಪಸ್ ಕಳುಹಿಸಿದ್ದಾರೆ.

    ವಾಪಸ್ ಹೋಗುವಾಗ ಆಟೋದಲ್ಲೇ ಹೆರಿಯಾಗಿದೆ. ಸದ್ಯಕ್ಕೆ ದೇವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಮುದ್ನಾಳ ಯಾದಗಿರಿಯ ಬಿಜೆಪಿ ಶಾಸಕ ವೆಂಕಟರೆಡ್ಡಿ ಸ್ವಗ್ರಾಮವಾಗಿದ್ದು, ಸ್ವತಃ ಶಾಸಕರ ಗ್ರಾಮದ ಸರ್ಕಾರಿ ಆಸ್ಪತ್ರೆಯ ವೈದ್ಯರು ಈ ರೀತಿ ಅಮಾನವೀಯತೆ ಪ್ರದರ್ಶನ ಮಾಡಿದ್ದು, ದೇವಿ ಅವರ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

  • ಡೆಲಿವರಿಯಾದ ಮರುದಿನವೇ ಪರೀಕ್ಷೆ ಬರೆದ ಬೆಂಗ್ಳೂರು ಯುವತಿ

    ಡೆಲಿವರಿಯಾದ ಮರುದಿನವೇ ಪರೀಕ್ಷೆ ಬರೆದ ಬೆಂಗ್ಳೂರು ಯುವತಿ

    ಬೆಂಗಳೂರು: 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಮರುದಿನವೇ ತನ್ನ ಮಗುವನ್ನು ಎತ್ತಿಕೊಂಡು ಬಂದು ಪರೀಕ್ಷೆ ಬರೆದಿರುವ ಅಪರೂಪದ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ.

    ವಿದ್ಯಾರ್ಥಿನಿ ಹರ್ಷಿತಾ ಎಸ್.ಆರ್ (20) ಗುರುವಾರ ಮಧ್ಯಾಹ್ನ ಮಗುವಿನೊಂದಿಗೆ ಬಂದು ಪರೀಕ್ಷೆ ಬರೆದಿದ್ದಾಳೆ. ಈಕೆ ಬೆಂಗಳೂರಿನ ಎಚ್.ಕೆ.ಇ.ಎಸ್. ವೀರೇಂದ್ರ ಪಾಟೀಲ್ ಡಿಗ್ರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಳು. ಮಂಗಳವಾರವೇ ಆಕೆಗೆ ಹೆರಿಗೆ ನೋವು ಸ್ವಲ್ಪ ಕಾಣಿಸಿಕೊಂಡಿದೆ. ಆದರೂ ನೋವಿನಲ್ಲೇ ಪರೀಕ್ಷೆ ಬರೆದಿದ್ದಾಳೆ.

    ಬುಧವಾರ ಹರ್ಷಿತಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಒಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡು ಮತ್ತೊಂದು ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಂಡು ಗುರುವಾರ ಆಸ್ಪತ್ರೆಯಿಂದ ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆಯನ್ನು ಬರೆದಿದ್ದಾಳೆ. ಹರ್ಷಿತಾ ಪರೀಕ್ಷೆ ಬರೆಯುವಾಗ ಪಕ್ಕದ ರೋಮಿನಲ್ಲೇ ಆಕೆಯ ತಾಯಿ ಮಗುವನ್ನು ನೋಡಿಕೊಳ್ಳುತ್ತಿದ್ದರು. ಹರ್ಷಿತಾ ಪ್ರತಿ 30 ನಿಮಿಷಕ್ಕೆ ಹೋಗಿ ಮಗುವಿಗೆ ಹಾಲುಣಿಸಿ ಬರುತ್ತಿದ್ದಳು.

    ಈ ಬಗ್ಗೆ ಮಾತನಾಡಿದ ಹರ್ಷಿತಾ, “ನಾನು ಪರೀಕ್ಷೆ ಬರೆಯಲೇಬೇಕು ಎಂದು ನಿರ್ಧರಿಸಿದ್ದೆ. ಒಂದು ವೇಳೆ ಈಗ ಪರೀಕ್ಷೆ ಬರೆಯುವುದನ್ನು ನಾನು ಮಿಸ್ ಮಾಡಿಕೊಂಡಿದ್ದರೆ, ಇನ್ನೊಂದು ವರ್ಷ ನಾನು ಕಾಯಬೇಕಾಗಿತ್ತು. ಹೀಗಾಗಿ ನಾನು ಆಸ್ಪತ್ರೆಯಲ್ಲಿ ಪರೀಕ್ಷೆಗೆಂದು ಓದಿದ್ದೆ. ನನ್ನ ಕುಟುಂಬದವರು ಮತ್ತು ಕಾಲೇಜು ನನಗೆ ಬೆಂಬಲ ನೀಡಿದೆ” ಎಂದು ಸಂತಸದಿಂದ ಹೇಳಿದ್ದಾಳೆ.

    ಅಲ್ಲದೆ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಗುರುವಾರ ಮಧ್ಯಾಹ್ನದೊಳಗೆ ಡಿಸ್ಚಾರ್ಜ್ ಮಾಡುವಂತೆ ಹರ್ಷಿತಾ ವೈದ್ಯರಿಗೆ ಮನವಿ ಮಾಡಿಕೊಂಡಿದ್ದಳು. ಅದರಂತೆಯೇ ಕಾಲೇಜು ಸಹ ಹರ್ಷಿತಾಗೆ ಟೀ ಮತ್ತು ಬಿಸ್ಕೆಟ್‍ಗಳನ್ನು ನೀಡಿತ್ತು. ಜೊತೆಗೆ ಪರೀಕ್ಷೆ ಮುಗಿಯುವರೆಗೂ ಆಗಾಗ ವಿಶ್ರಾಂತಿ ಪಡೆದುಕೊಳ್ಳಲು ವಿರಾಮವನ್ನು ನೀಡಲಾಗಿತ್ತು.

    ಹರ್ಷಿತಾಗೆ ಮಂಗಳವಾರ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ ಎಂದು ನಮಗೆ ಖಚಿತವಿರಲಿಲ್ಲ. ಆದರೂ ಆಕೆ ಪರೀಕ್ಷೆ ಬರೆದಳು. ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹೀಗಾಗಿ ಗುರುವಾರ ಪರೀಕ್ಷೆ ಬರೆಯಲು ಬರುವುದಿಲ್ಲ ಎಂದುಕೊಂಡಿದ್ದೆವು. ಆದರೆ ಆಕೆ ಪರೀಕ್ಷೆ ಬರೆಯಲು ಬರುವ ಮೂಲಕ ನಮ್ಮನ್ನು ಆಶ್ಚರ್ಯಗೊಳಿಸಿದಳು. ಒಬ್ಬ ತಾಯಿ ಮಗುವಿಗೆ ಜನ್ಮ ನೀಡಿದ ಮರುದಿನವೇ 3 ಗಂಟೆ ಬೆಂಚ್ ಮೇಲೆ ಕುಳಿತುಕೊಂಡು ಪರೀಕ್ಷೆ ಬರೆಯುವುದು ಅಷ್ಟು ಸುಲಭವಲ್ಲ. ಅದನ್ನು ಹರ್ಷಿತಾ ಸಾಧಿಸಿ ತೋರಿಸಿದ್ದಾಳೆ. ನಿಜಕ್ಕೂ ಹರ್ಷಿತಾ ಇತರರಿಗೆ ಮಾದರಿಯಾಗಿದ್ದಾಳೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಮ್ಯಾಕ್ವಿಲಿನ್ ಸಿ ಮೋಸೆಸ್ ತಿಳಿಸಿದ್ದಾರೆ.

    ಕೆಫೆ ಕಾಫಿ ಡೇ ಮೇಲ್ವಿಚಾರಕರೊಂದಿಗೆ ಹರ್ಷಿತಾ ಮದುವೆಯಾಗಿದ್ದಾಳೆ. ಪದವಿ ಮುಗಿದ ನಂತರ ಸರ್ಕಾರಿ ಕೆಲಸ ಪಡೆಯಬೇಕೆಂಬುದು ಆಕೆಯ ಕನಸು. ಹೀಗಾಗಿ ಡಿಸೆಂಬರ್ 12ಕ್ಕೆ ನಿಗದಿಯಾಗಿರುವ ಮುಂದಿನ ಪರೀಕ್ಷೆಯನ್ನು ಬರೆಯುತ್ತೇನೆ ಎಂದು ಹೇಳಿದ್ದಾಳೆ.

  • ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ವಿಜಯಪುರ: ತಾಯಿಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ.

    ವಿಜಯಪುರ ನಗರದ ರಾಜ್ ರತನ್ ಕಾಲೋನಿ ನಿವಾಸಿಯಾಗಿರುವ ದಾಲಿಬಾಯಿ ಎಂಬ ಮಹಿಳೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮತ್ತೊಂದು ವಿಷಯವೇನೆಂದರೆ ದಾಲಿಬಾಯಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ನಗರದ ಮುದನೂರು ಆಸ್ಪತ್ರೆಯಲ್ಲಿ ದಾಲಿಬಾಯಿ ಅವರ ಹೆರಿಗೆ ನಡೆದಿದ್ದು, ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಅಲ್ಲದೆ ತಾಯಿ ಹಾಗೂ ನಾಲ್ಕು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ಇತ್ತ ನಾಲ್ಕು ಮಕ್ಕಳು ಒಟ್ಟಿಗೆ ಹುಟ್ಟಿದ್ದ ಕಾರಣ ಕುಟುಂಬ ವರ್ಗದಲ್ಲಿ ಸಂತಸ ಮನೆ ಮಾಡಿದೆ.

  • ಮುಂಜಾನೆ ವಾಕ್ ಮಾಡುವಂತೆ ಹೇಳಿದ ನರ್ಸ್- ಕುಸಿದು ಬಿದ್ದು ಗರ್ಭಿಣಿ ಸಾವು

    ಮುಂಜಾನೆ ವಾಕ್ ಮಾಡುವಂತೆ ಹೇಳಿದ ನರ್ಸ್- ಕುಸಿದು ಬಿದ್ದು ಗರ್ಭಿಣಿ ಸಾವು

    – ಮಗು ಪಾರು
    – ವೈದ್ಯರ ವಿರುದ್ಧ ಪೋಷಕರು ಆಕ್ರೋಶ

    ಮಂಡ್ಯ: ಹೆರಿಗೆ ಸಂದರ್ಭದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಡ್ಯದ ಆಶ್ರಯ ನರ್ಸಿಂಗ್ ಹೋಮ್ ನಲ್ಲಿ ನಡೆದಿದೆ.

    ಸುಶೀಲಾ (32) ಸಾವನ್ನಪ್ಪಿದ ಮಹಿಳೆ. ಈಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದ ನಿವಾಸಿ. ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆ ಮೃತಪಟ್ಟಿರುವುದಾಗಿ ಆಕೆಯ ಪೋಷಕರು ಆರೋಪ ಮಾಡುತ್ತಿದ್ದು, ಪ್ರತಿಭಟನೆ ನಡೆಸಿದ್ದಾರೆ.

    ಗುರುವಾರ ಸುಶೀಲಾರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂಜಾನೆ 3 ಗಂಟೆ ಸುಮಾರಿಗೆ ನರ್ಸ್ ಗಳು ಗರ್ಭಿಣಿಗೆ ವಾಕ್ ಮಾಡಲು ಹೇಳಿದ್ದಾರೆ. ಗರ್ಭಿಣಿ ಜೊತೆಗೆ ನರ್ಸ್ ಬಾರದೇ ಒಬ್ಬರನ್ನೇ ವಾಕ್ ಮಾಡಲು ಬಿಟ್ಟಿದ್ದಾರೆ. ಈ ವೇಳೆ ಮಹಿಳೆ ಕುಸಿದು ಬಿದ್ದು ತೀವ್ರ ರಕ್ತಸ್ರಾವವಾಗಿದೆ.

    ವೈದ್ಯರು ಆಸ್ಪತ್ರೆಯಲ್ಲಿ ಇಲ್ಲದಿದ್ದರಿಂದ ನರ್ಸ್ ಗಳೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ತಡವಾಗಿ ಆಸ್ಪತ್ರೆಗೆ ಬಂದ ವೈದ್ಯೆ ಡಾ. ಶರ್ಮಿಳಾ, ಮಗು ಬದುಕಿದೆ. ಹೈ ಬೀಪಿ, ರಕ್ತ ಸ್ರಾವದಿಂದ ಮಹಿಳೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮೃತ ಮಹಿಳೆಯ ಫೋಷಕರು, ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ವೈದ್ಯರು, ನರ್ಸ್ ಗಳ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವನ್ನಪ್ಪಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು, ಮಂಡ್ಯ ಎಸ್ಪಿ ಪರಶುರಾಮ್ ಭೇಟಿ ನೀಡಿದ್ದಾರೆ. ಮಂಡ್ಯ ಪಶ್ಚಿಮ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಸರ್ಕಾರಿ ಆಸ್ಪತ್ರೆಗೆ ಬೀಗ- ಟಂಟಂ ವಾಹನದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

    ಸರ್ಕಾರಿ ಆಸ್ಪತ್ರೆಗೆ ಬೀಗ- ಟಂಟಂ ವಾಹನದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

    ಯಾದಗಿರಿ: ಭಾನುವಾರ ಎಂಬ ಕಾರಣಕ್ಕೆ ವೈದ್ಯರು, ಸಿಬ್ಬಂದಿ ಸರ್ಕಾರಿ ಆಸ್ಪತ್ರೆ ಬಂದ್ ಮಾಡಿದ್ದು, ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಯೊಬ್ಬರು ನರಳಾಡಿ ಕೊನೆಗೆ ಟಂಟಂ ವಾಹನದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

    ಜಿಲ್ಲೆಯ ಹುಣಸಗಿ ತಾಲೂಕಿನ ಶ್ರೀನಿವಾಸಪುರ ಸರ್ಕಾರಿ ಪ್ರಥಾಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಭಾನುವಾರವೆಂದು ಆಸ್ಪತ್ರೆಗೆ ಬೀಗ ಹಾಕಲಾಗಿತ್ತು. ಬಲಶೆಟ್ಟಿಹಾಳ ಗ್ರಾಮದ ನಿಂಗಮ್ಮ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಅವರನ್ನು ಶ್ರೀನಿವಾಸಪುರ ಸರ್ಕಾರಿ ಪ್ರಥಾಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದರೆ ಆಸ್ಪತ್ರೆಗೆ ಬೀಗ ಹಾಕಿದ್ದ ಕಾರಣಕ್ಕೆ ವೈದ್ಯರು ಸಿಗದೆ ನಿಂಗಮ್ಮ ಹೆರಿಗೆ ನೋವಿನಿಂದ ನರಲಾಡಬೇಕಾಯಿತು.

    ಬೇರೆ ದಾರಿ ಕಾಣದೆ ಮಹಿಳೆಯ ಕುಟುಂಬಸ್ಥರು ಅವರನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿ, ಟಂಟಂ ವಾಹನದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯದಲ್ಲಿಯೇ ಟಂಟಂ ವಾಹನದಲ್ಲಿ ಹೆರಿಗೆಯಾಗಿದ್ದು, ಸದ್ಯ ತಾಯಿ ಮಗು ಸುರಕ್ಷಿತವಾಗಿದ್ದಾರೆ.

    ಸರ್ಕಾರಿ ಆಸ್ಪತ್ರೆಯ ಬಾಗಿಲು ಮುಚ್ಚಿದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ಭಾನುವಾರವೆಂದು ತಮ್ಮ ಪಾಡಿಗೆ ವೈದ್ಯರು, ಸಿಬ್ಬಂದಿ ಹೋಗಿಬಿಟ್ಟರೆ ರೋಗಿಗಳ ಗತಿಯೇನು? ರೋಗಿಗಳು ಎಲ್ಲಿಗೆ ಹೋಗಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 108 ವಾಹನದಲ್ಲೇ ಹೆರಿಗೆ ಮಾಡಿಸಿ 2 ಜೀವ ಉಳಿಸಿದ ಸಿಬ್ಬಂದಿ

    108 ವಾಹನದಲ್ಲೇ ಹೆರಿಗೆ ಮಾಡಿಸಿ 2 ಜೀವ ಉಳಿಸಿದ ಸಿಬ್ಬಂದಿ

    ವಿಜಯಪುರ: ಕಳೆದ ರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಗೆ ಆಸ್ಪತ್ರೆಗೆ ರವಾನಿಸುತ್ತಿದ್ದ ವೇಳೆ 108 ವಾಹನದಲ್ಲಿಯೇ ಸಿಬ್ಬಂದಿ ಹೆರಿಗೆ ಮಾಡಿಸಿ ತಾಯಿ, ಮಗುವಿನ ಜೀವ ಉಳಿಸಿದ್ದಾರೆ.

    ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಬಳಿ 108 ಅಂಬುಲೆನ್ಸ್ ಸಿಬ್ಬಂದಿ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದ ನಿವಾಸಿ ದಿಲಶಾದ್ ಇಸ್ಮಾಯಿಲ್ ಹಚಡದ ಅವರಿಗೆ ಸಿಬ್ಬಂದಿ ಹೆರಿಗೆ ಮಾಡಿಸಿದ್ದು, ಗಂಡು ಮಗು ಜನನವಾಗಿದೆ. ಬಳಿಕ ಸಿಬ್ಬಂದಿ ತಾಯಿ-ಮಗುವನ್ನು ಸುರಕ್ಷಿತವಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಹೆರಿಗೆ ನೋವಿನಿಂದ ದಿಲಶಾದ್ ಅವರು ಯಂಕಂಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದರು. ದಿಲಶಾದ್ ಅವರಿಗೆ ಮೊದಲನೇ ಹೆರಿಗೆ ಸಿಸೇರಿಯನ್ ಆಗಿತ್ತು, ಹೀಗಾಗಿ ಎರಡನೇ ಹೆರಿಗೆ ನಾರ್ಮಲ್ ಡೆಲಿವರಿ ಆಗುವುದು ಕಷ್ಟವೆಂದು ವೈದ್ಯರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಎಂದು ಸೂಚಿಸಿದ್ದರು. ಆದ್ದರಿಂದ 108 ಅಂಬುಲೆನ್ಸ್ ನಲ್ಲಿ ಮಹಿಳೆಯನ್ನು ಜಿಲ್ಲಾಸ್ಪತ್ರಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯದಲ್ಲಿಯೇ ದಿಲಶಾದ್ ಅವರಿಗೆ ಹೆರಿಗೆ ನೋವು ತೀವ್ರವಾಗಿದ್ದು, ಸರಿಯಾದ ಸಮಯಕ್ಕೆ 108 ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್ ಶೋಭಾ ಕೋಳಿ ಹಾಗೂ 108 ಚಾಲಕ ಬಾವುರಾಜ ಮಂಗಳವೆಡೆ ಅವರು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

    ಬಳಿಕ ಸುರಕ್ಷಿತವಾಗಿ ತಾಯಿ-ಮಗುವನ್ನು ಜಿಲ್ಲಾಸ್ಪತ್ರಗೆ ದಾಖಲಿಸಿದ್ದಾರೆ. ಸಿಬ್ಬಂದಿ ಸರಿಯಾದ ಸಮಯಕ್ಕೆ ಸಹಾಯ ಮಾಡಿ ಎರಡು ಜೀವಗಳನ್ನು ಉಳಿಸಿದ್ದಕ್ಕೆ ದಿಲಶಾದ್ ಹಾಗೂ ಅವರ ಕುಟುಂಬಸ್ಥರು ಧನ್ಯವಾದ ಹೇಳಿದ್ದಾರೆ.

  • ಬಿಪಿ ಜಾಸ್ತಿಯಿದೆಯೆಂದು ಜಿಲ್ಲಾಸ್ಪತ್ರೆಗೆ ರವಾನೆ- ಅಂಬುಲೆನ್ಸ್‌ನಲ್ಲೇ ಗಂಡು ಮಗು ಜನನ

    ಬಿಪಿ ಜಾಸ್ತಿಯಿದೆಯೆಂದು ಜಿಲ್ಲಾಸ್ಪತ್ರೆಗೆ ರವಾನೆ- ಅಂಬುಲೆನ್ಸ್‌ನಲ್ಲೇ ಗಂಡು ಮಗು ಜನನ

    ವಿಜಯಪುರ: ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ 108 ವಾಹನದಲ್ಲೇ ಹೆರಿಗೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಾನ್ಯಾಳ ಗ್ರಾಮದ ರಮಿಜಾ ಜಾವೇದ ತಾಂಬೋಳಿ ಅವರಿಗೆ ಹೆರಿಗೆಯಾಗಿದೆ. ರಮಿಜಾ ಅವರನ್ನು ಹೆರಿಗೆಗಾಗಿ ಕಾನ್ಯಾಳ ಗ್ರಾಮದಿಂದ ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಗೆ 108 ಅಂಬುಲೆನ್ಸ್ ನಲ್ಲಿ ತರಲಾಗಿತ್ತು. ಈ ವೇಳೆ ಅವರನ್ನು ಪರೀಕ್ಷೆಗೆ ಒಳಪಡಿಸಿದ ಆಸ್ಪತ್ರೆ ಸಿಬ್ಬಂದಿ ಜಾಸ್ತಿ ಬಿಪಿ ಇದೆ ಇಲ್ಲಿ ಹೆರಿಗೆ ಮಾಡಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಸ್ಪತ್ರೆಗೆ ರವಾನಿಸಿದ್ರು.

    108 ಅಂಬುಲೆನ್ಸ್ ನಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಮನಗೂಳಿಯಲ್ಲಿ ಹೆರಿಗೆ ನೋವು ಜಾಸ್ತಿಯಾದಾಗ 108 ಸಿಬ್ಬಂದಿಯೇ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ವೇಳೆ 108 ಅಂಬುಲೆನ್ಸ್ ಸಿಬ್ಬಂದಿಗೆ ಮಗುವಿನ ಕುತ್ತಿಗೆಗೆ ಹುರಿ ಬಿದ್ದಿರುವುದು ಗೊತ್ತಾಗಿದೆ. ಆದರೂ ಮಹಿಳೆಯ ಹೆರಿಗೆಯನ್ನು ಸರಳವಾಗಿ ಅಂಬುಲೆನ್ಸ್ ನಲ್ಲಿಯೇ ಮಾಡಿಸಿದ್ದಾರೆ. ಇದರಿಂದ ತುಂಬಾ ಖುಷಿಯಾಗಿ ಮಹಿಳೆಯ ಸಂಬಂಧಿಕರು 108 ಅಂಬುಲೆನ್ಸ್ ಸಿಬ್ಬಂದಿ ಇಒಖಿ ವಿಜಯಕುಮಾರ ಲಿಂಗದಳ್ಳಿ ಹಾಗೂ ವಿಜಯ ಗದ್ದನಕೇರಿ ಅವರನ್ನು ಅಭಿನಂದಿಸಿದರು.

    ಅಪರೂಪಕ್ಕೊಮ್ಮೆ ನಡೆಯುವ ಇಂತಹ ಘಟನೆಗಳು 108 ಸಿಬ್ಬಂದಿಯ ಹೃದಯ ವೈಶಾಲ್ಯತೆಗೆ ಕೈಗನ್ನಡಿಯಾಗಿವೆ. ರಮೀಜಾಗೆ ಗಂಡು ಮಗು ಜನಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.