Tag: delivery

  • ಕೊರೊನಾ ಸೋಂಕಿತ ಗರ್ಭಿಣಿಗೆ ಅಂಬುಲೆನ್ಸ್‌ನಲ್ಲೇ ಹೆರಿಗೆ

    ಕೊರೊನಾ ಸೋಂಕಿತ ಗರ್ಭಿಣಿಗೆ ಅಂಬುಲೆನ್ಸ್‌ನಲ್ಲೇ ಹೆರಿಗೆ

    ರಾಯಚೂರು: ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆಯೇ ಅಂಬುಲೆನ್ಸ್‌ನಲ್ಲಿ ಕೊರೊನಾ ಸೋಂಕಿತೆಗೆ ಹೆರಿಗೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ರಾಯಚೂರು ತಾಲೂಕಿನ ಮಂಜರ್ಲಾ ಗ್ರಾಮದ ಸೋಂಕಿತೆ ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಒಂದು ವಾರದ ಹಿಂದೆ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಮಹಿಳೆಯನ್ನ ಇಂದು ರಿಮ್ಸ್‌ಗೆ ಕರೆತರುವಾಗ ಮಾರ್ಗ ಮಧ್ಯೆ ಹೆರಿಗೆ ನೋವು ಕಾಣಿಸಿಕೊಂಡಿದೆ.

    ಹೆರಿಗೆ ನೋವು ತೀವ್ರವಾಗಿದ್ದರಿಂದ ಅಂಬುಲೆನ್ಸ್‌ನಲ್ಲೇ 108 ಸಿಬ್ಬಂದಿ ಭೀಮರಾಯ, ಚಾಲಕ ಭೀಮಸೇನರಾವ್ ಹಾಗೂ ಮನೆಯವರ ನೆರವಿನೊಂದಿಗೆ ಹೆರಿಗೆ ಮಾಡಿಸಿದ್ದಾರೆ. ಬಾಣಂತಿಗೆ ಇದು ಮೂರನೆ ಹೆರಿಗೆಯಾಗಿದ್ದು ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

  • ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    -ಕಡು ಬಡತನದ ಕುಟುಂಬಕ್ಕೀಗ ಬೇಕಿದೆ ಸಹಾಯ

    ಯಾದಗಿರಿ: ಎಷ್ಟೋ ಜನ ಒಂದು ಮಗು ಆಗಲಿ ಅಂತ ಹತ್ತಾರು ದೇವರಿಗೆ ವರ ಬೇಡಿಕೊಳ್ಳತಾರೆ. ಇದರಲ್ಲಿ ಕೆಲವರಿಗೆ ದೇವರು ವರ ಕೊಟ್ಟ್ರೆ, ಇನ್ನೂ ಕೆಲವರಿಗೆ ಕೊನೆಯವರೆಗೂ ಮಕ್ಕಳ ಭಾಗ್ಯ ಕರುಣಿಸುವುದಿಲ್ಲ. ಆದರೆ ಇಲ್ಲೊಬ್ಬಳು ಮಹಾ ತಾಯಿ ಏಕಕಾಲದಲ್ಲಿ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಲ್ಲಿದ್ದಾಳೆ.

    ಅದು ಮೊದಲನೆಯ ಹೆರಿಗೆಯಾಗಿ ಬರೊಬ್ಬರಿ 8 ವರ್ಷದ ಬಳಿಕ ಮೂರು ಗಂಡು ಮಕ್ಕಳಿಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಜಿಲ್ಲೆಯ ರಾಮಸಮುದ್ರದ ನಿವಾಸಿಯಾಗಿರುವ ಪದ್ಮಾ, ಇಂದು ಮಧ್ಯಾಹ್ನ ಜಿಲ್ಲಾಸ್ಪತ್ರೆಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ಮಕ್ಕಳು ಮತ್ತು ತಾಯಿ ನಾಲ್ವರು ಸುರಕ್ಷಿತವಾಗಿದ್ದಾರೆ. ಸರಿಯಾದ ಸಮಯಕ್ಕೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ ಐದು ದಿನಗಳಿಂದ ರಾಮಸಮುದ್ರ ಆಶಾ ಕಾರ್ಯಕರ್ತೆಯರಾದ ಮುತ್ತಮ್ಮ, ಮಂಗಳಮ್ಮ, ಗೌರಮ್ಮ ಪದ್ಮಾಳನ್ನು, ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಪದ್ಮಾ ಇಂದು ಮಧ್ಯಾಹ್ನ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಸಹಾಯಕ್ಕಾಗಿ ಕೈ ಚಾಚಿದ ಪದ್ಮಾ ಕುಟುಂಬ:
    ಪದ್ಮಾ ಕುಟುಂಬಕ್ಕೆ ಒಂದು ಕಡೆ ಸಂತೋಷ ಮತ್ತೊಂದೆಡೆ ಆತಂಕ ಶುರುವಾಗಿದೆ. ಕಡು ಬಡತನದಲ್ಲಿರುವ ಪದ್ಮಾ ಕುಟುಂಬ, ಸದ್ಯ ಹೆರಿಗೆಯ ಖರ್ಚು ವೆಚ್ಚ ಭರಿಸಲು ಒದ್ದಾಡುತ್ತಿದೆ. ಇನ್ನೂ ಮೂರು ಮಕ್ಕಳ ಮುಂದಿನ ಲಾಲನೆ, ಪಾಲನೆ ನೆನಪಿಸಿಕೊಂಡು ಪೆಚಾಡುತ್ತಿದೆ. ಪದ್ಮಾ ಮತ್ತು ನಾಗರಾಜ್ ಬೆಂಗಳೂರಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಕೊರೊನಾ ಭಯದಿಂದ ಸ್ವಂತ ಗ್ರಾಮ ರಾಮಸಮುದ್ರಕ್ಕೆ ವಾಪಸು ಆಗಿದ್ದಾರೆ. ಸದ್ಯ ಪದ್ಮಾ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ಸಹಾಯ ಹಸ್ತಚಾಚಿದೆ.

  • ಆಸ್ಪತ್ರೆ ಮುಂದೆ ಆಟೋದಲ್ಲೇ ಹೆರಿಗೆ – ಅಮ್ಮನ ಕಾಣುವ ಮುನ್ನವೇ ಮಗು ಸಾವು

    ಆಸ್ಪತ್ರೆ ಮುಂದೆ ಆಟೋದಲ್ಲೇ ಹೆರಿಗೆ – ಅಮ್ಮನ ಕಾಣುವ ಮುನ್ನವೇ ಮಗು ಸಾವು

    – ರಾತ್ರಿ 3 ಗಂಟೆಯಿಂದ ಸುತ್ತಾಡಿದ್ರೂ ಸಿಗಲಿಲ್ಲ ಬೆಡ್

    ಬೆಂಗಳೂರು: ಆಸ್ಪತ್ರೆಗಳ ಎಡವಟ್ಟಿನಿಂದ ನಡೆಯುತ್ತಿರುವ ಅಮಾನವೀಯ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಸುಮಾರು ಎಂಟು ಗಂಟೆಗಳ ಕಾಲ ಸುತ್ತಾಡಿದರೂ ಬೆಡ್ ಸಿಗದ ಪರಿಣಾಮ ಹೆರಿಗೆಯಾದ ಕೆಲವೇ ಕ್ಷಣದಲ್ಲಿ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಕೆಸಿ ಜರಲ್ ಆಸ್ಪತ್ರೆ ಮುಂದೆ ಈ ಘಟನೆ ನಡೆದಿದೆ. ಶ್ರೀರಾಮಪುರದ ನಿವಾಸಿಯಾಗಿರುವ ಗರ್ಭಿಣಿಗೆ ಇಂದು ನಸುಕಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಮನೆಯವರು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.

    ವಿಕ್ಟೋರಿಯಾ, ವಾಣಿ ವಿಲಾಸ್, ಶ್ರೀರಾಮಪುರ ಸರ್ಕಾರಿ ಆಸ್ಪತ್ರೆ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಓಡಾಡಿದ್ದಾರೆ. ರಾತ್ರಿ ಮೂರು ಗಂಟೆಯಿಂದಲೂ ಸುತ್ತಾಡಿದರೂ ಎಲ್ಲೂ ಬೆಡ್ ಸಿಗಲಿಲ್ಲ. ನಂತರ ಕೆಸಿ ಜರಲ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಅಲ್ಲಿಯೂ ತಕ್ಷಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಕೊನೆಗೆ ವೈದ್ಯರ ಎಡವಟ್ಟಿನಿಂದ ಆಟೋದಲ್ಲಿಯೇ ಹೆರಿಗೆಯಾಗಿದೆ. ಆದರೆ ಹೆರಿಗೆಯಾದ ಕೆಲವೇ ಕ್ಷಣದಲ್ಲಿ ಅಮ್ಮನ ಕಾಣುವ ಮುಂಚೆಯೇ ಮಗು ಸಾವನ್ನಪ್ಪಿದೆ.

    ಕಡೆಗೆ ಕೆಸಿ ಜನರಲ್ ಆಸ್ಪತ್ರೆಯವರು ಅರ್ಧಗಂಟೆ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ವೈದ್ಯರ ಎಡವಟ್ಟಿಗೆ ಹಸುಗೂಸು ಸಾವನ್ನಪ್ಪಿದೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ‘ರಾತ್ರಿ ರಕ್ತ ತರುವಂತೆ ಹೇಳಿ ಬೆಳಗ್ಗೆ ಸಾವಿನ ಸುದ್ದಿ ತಿಳಿಸಿದ್ರು’- ವೈದ್ಯರ ವಿರುದ್ಧ ಕಿಡಿ

    ‘ರಾತ್ರಿ ರಕ್ತ ತರುವಂತೆ ಹೇಳಿ ಬೆಳಗ್ಗೆ ಸಾವಿನ ಸುದ್ದಿ ತಿಳಿಸಿದ್ರು’- ವೈದ್ಯರ ವಿರುದ್ಧ ಕಿಡಿ

    ವಿಜಯಪುರ: ಹೆರಿಗೆ ಸಮಯದಲ್ಲಿ ತಾಯಿ-ಮಗು ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ನಗರದ ಜಿಲ್ಲಾ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹೆರಿಗೆಗೆಂದು ಕವಿತಾರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗ ನಾರ್ಮಲ್ ಡೆಲಿವರಿಯಾಗುತ್ತೆ ಎಂದು ವೈದ್ಯರು ಹೇಳಿದ್ದಾರೆ.

    ತಡರಾತ್ರಿ ರಕ್ತ ತೆಗೆದುಕೊಂಡು ಬರಲು ವೈದ್ಯರು ಸೂಚಿಸಿದ್ದಾರೆ. ಆದರೆ ಬೆಳಗ್ಗೆ ಸಾವಿನ ವಿಚಾರವನ್ನೇ ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ವೈದ್ಯರ ನಿರ್ಲಕ್ಷ್ಯದಿಂದಲೇ ತಾಯಿ ಹಾಗೂ ಮಗುವಿನ ಸಾವಾಗಿದೆ ಎಂದು ಆರೋಪಿಸುತ್ತಿದ್ದಾರೆ.

    ಘಟನೆಯ ಬಳಿಕ ಜಿಲ್ಲಾ ಹೆರಿಗೆ ಆಸ್ಪತ್ರೆ ಎದುರು ಸಂಬಂಧಿಕರು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಸೋಂಕಿತೆಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ ವೈದ್ಯರು – ಗಂಡು ಮಗು ಜನನ

    ಸೋಂಕಿತೆಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ ವೈದ್ಯರು – ಗಂಡು ಮಗು ಜನನ

    ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹಾವೇರಿಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿಯನ್ ಮೂಲಕ ಯಶಸ್ವಿ ಹೆರಿಗೆಯನ್ನು ಜಿಲ್ಲಾಸ್ಪತ್ರೆ ವೈದ್ಯರು ಮಾಡಿಸಿದ್ದಾರೆ.

    ಜಿಲ್ಲೆಯ ಹಾನಗಲ್ ತಾಲೂಕಿನ ಜಾನಗುಂಡಿಕೊಪ್ಪ ಗ್ರಾಮದ ಮೂವತ್ತು ವರ್ಷದ ಮಹಿಳೆಗೆ ವೈದ್ಯರು ಜೀವದ ಹಂಗು ತೊರೆದು ಹೆರಿಗೆ ಮಾಡಿಸಿದ್ದಾರೆ. ಜುಲೈ 3ರಂದು ಜಿಲ್ಲಾಸ್ಪತ್ರೆಗೆ ತಪಾಸಣೆಗೆ ಬಂದಿದ್ದ ಗರ್ಭಿಣಿ ಗಂಟಲು ದ್ರವದ ಮಾದರಿಯನ್ನು ಸಹ ನೀಡಿ ಹೋಗಿದ್ದರು. ಈ ವೇಳೆ ಜುಲೈ 10ರಂದು ಹೆರಿಗೆಯ ವೈದ್ಯರು ದಿನಾಂಕ ನೀಡಿದ್ದರು. ಆದರೆ ಸೋಮವಾರ ಬಂದ ವರದಿಯಲ್ಲಿ ಮಹಿಳೆಯಲ್ಲಿ ಕೊರೊನಾ ಸೋಂಕು ಇರುವ ದೃಢಪಟ್ಟಿದೆ.

    ಸೋಂಕು ದೃಢಪಟ್ಟ ಮಹಿಳೆಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಇವತ್ತು ಬೆಳಗಿನ ಜಾವ ಸೋಂಕಿತ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸಿಸೇರಿಯನ್ ಮೂಲಕ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

  • ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿನ್ ಮೂಲಕ ಹೆರಿಗೆ- ಹೆಣ್ಣು ಮಗು ಜನನ

    ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿನ್ ಮೂಲಕ ಹೆರಿಗೆ- ಹೆಣ್ಣು ಮಗು ಜನನ

    ಗದಗ: ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ ವೈದ್ಯಕೀಯ ಸಿಬ್ಬಂದಿಗಳ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿರುವ ಘಟನೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಜಿಲ್ಲೆಯ ಗೋಜನೂರು ಗ್ರಾಮದ ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ಸೋಂಕಿತರು ಅಂದರೆ ನಿಷ್ಠೂರವಾಗಿ ನೋಡುವುದರ ಜೊತೆಗೆ ಯಾರು ಹತ್ರಾನೂ ಸುಳಿಯಲ್ಲ. ಈ ಸಂದರ್ಭದಲ್ಲಿ ಗದಗ ಜಿಮ್ಸ್ ವೈದ್ಯರು ಸಿಸೇರಿನ್ ಮೂಲಕ ಎರಡು ಜೀವ ಉಳಿಸಿದ್ದಾರೆ. ವೈದ್ಯರಾದ ಡಾ.ಶಿವನಗೌಡ, ಡಾ.ಶೃತಿ ಹಾಗೂ ಡಾ ಅಜಯ್ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಸೋಂಕಿತೆಗೆ ಹೆಣ್ಣು ಮಗು ಜನನವಾಗಿದೆ.

    ನವಜಾತ ಶಿಶು 2.7 ಕೆಜಿ ತೂಕ ಹೊಂದಿದೆ. ಶಿಶುವಿಗೆ ಸ್ವಲ್ಪ ಉಸಿರಾಟದ ತೊಂದರೆ ಇರೋದರಿಂದ ಕೋವಿಡ್-19 ವಾರ್ಡ್‍ನಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿದೆ. ಮಗು ಚೇತರಿಸಿಕೊಳ್ಳುವ ಲಕ್ಷಣಗಳು ಇದೆ ಎಂದು ವೈದ್ಯರು ಹೇಳಿದ್ದಾರೆ. ಸೋಂಕಿತ ಮಹಿಳೆಗೆ ಮೊದಲನೇಯ ಹೆರಿಗೆ ಕೂಡ ಶಸ್ತ್ರಚಿಕಿತ್ಸೆಯಿಂದ ಆಗಿತ್ತು. ಈಗ 2ನೇ ಹೆರಿಗೆಯನ್ನು ಕೂಡ ಶಸ್ತ್ರಚಿಕಿತ್ಸೆ ಮೂಲಕ ಮಾಡಲಾಗಿದೆ. ಗದಗ ವೈದ್ಯಕೀಯ ಸಿಬ್ಬಂದಿ ತಂಡದ ಉತ್ತಮ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೀಯ ವ್ಯಕ್ತವಾಗುತ್ತಿದೆ.

  • ಆರ್ಡರ್ ಮಾಡದಿದ್ರೂ 9 ವರ್ಷದಿಂದ ಮನೆಗೆ ಬರ್ತಿದೆ ಪಿಜ್ಜಾ

    ಆರ್ಡರ್ ಮಾಡದಿದ್ರೂ 9 ವರ್ಷದಿಂದ ಮನೆಗೆ ಬರ್ತಿದೆ ಪಿಜ್ಜಾ

    – ಒಮ್ಮೆ 14 ಪಿಜ್ಜಾ ಡೆಲಿವರಿ

    ಬ್ರಸೆಲ್ಸ್: ಸಾಮಾನ್ಯವಾಗಿ ಪಿಜ್ಜಾ ಆರ್ಡರ್ ಮಾಡಿದರೆ ಒಮ್ಮೆ ವಿಳಂಬವಾಗಿ ಬರುತ್ತದೆ. ಆದರೆ 65 ವರ್ಷದ ವೃದ್ಧರೊಬ್ಬರು ಆರ್ಡರ್ ಮಾಡದಿದ್ದರೂ ಸುಮಾರು ಒಂಬತ್ತು ವರ್ಷಗಳಿಂದ ಅವರ ಮನೆಗೆ ಪಿಜ್ಜಾ ಬರುತ್ತಿರುವ ಘಟನೆ ನಡೆದಿದೆ.

    ಬೆಲ್ಜಿಯಂನ ಆಂಟ್‍ವರ್ಪ್ ನ 65 ವರ್ಷದ ಜೆನ್ ವ್ಯಾನ್ ಲ್ಯಾಂಡೆಘೇಮ್ ಮನೆಗೆ ಪಿಜ್ಜಾ ಬರುತ್ತಿದೆ. ಒಂಬತ್ತು ವರ್ಷಗಳಿಂದ ನಮ್ಮ ಮನೆಗೆ ಡೆಲಿವರಿ ಬಾಯ್‍ಗಳು ಪಿಜ್ಜಾ ಹಿಡಿದುಕೊಂಡು ಬರುತ್ತಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಡೋರ್ ಬೆಲ್ ಬಾರಿಸಿದರು. ಬಾಗಿಲು ತೆಗೆದು ನೋಡಿದಾಗ ಪಿಜ್ಜಾ ಡೆಲಿವರಿ ಬಾಯ್ ನಿಂತಿದ್ದನು. ಆಗ ನಾನು ಯಾವುದೇ ಪಿಜ್ಜಾವನ್ನು ಆರ್ಡರ್ ಮಾಡಿಲ್ಲ ಅಂತ ಹೇಳಿದೆ. ಆದರೂ ಅವರು ಕೊಟ್ಟರು. ಅಂದಿನಿಂದ ನಿರಂತರವಾಗಿ ಪಿಜ್ಜಾ ಡೆಲಿವರಿ ಬರುತ್ತಿದೆ ಎಂದು ಜೆನ್ ಹೇಳಿದ್ದಾರೆ.

    ಸ್ಥಳೀಯ ಆಹಾರ ಮಳಿಗೆಯಿಂದ ರುಚಿ-ರುಚಿಯಾದ ಪಿಜ್ಜಾ ಬರುತ್ತಿದ್ದಾವೆ. ವಾರದ ದಿನದಂದು ಅಥವಾ ವಾರಾಂತ್ಯದಲ್ಲಿ ಪಿಜ್ಜಾ ಬರುತ್ತಿದೆ. ಅಲ್ಲದೇ ಒಂದೆರಡು ಬಾರಿ ರಾತ್ರಿ 2 ಗಂಟೆಗೂ ಪಿಜ್ಜಾ ಬಂದಿದೆ. ನಾನು ಒಮ್ಮೆಯೂ ಡೆಲಿವರಿ ಬಾಯ್‍ನನ್ನು ವಾಪಸ್ ಕಳುಹಿಸಲಿಲ್ಲ. ಎಲ್ಲವನ್ನು ಖರೀದಿಸುತ್ತಿದ್ದೆ. ಜನವರಿ 2019 ರಲ್ಲಿ ಒಮ್ಮೆಲೆ 14 ಪಿಜ್ಜಾಗಳು ಬಂದಿದ್ದವು. ಅನಿರೀಕ್ಷಿತವಾಗಿ ಬರುತ್ತಿದ್ದ ಪಿಜ್ಜಾದಿಂದ ತುಂಬಾ ಹಣ ಖರ್ಚಾಗಿದೆ. ಒಮ್ಮೆ 14 ಪಿಜ್ಜಾಗಳಿಗೆ ಸುಮಾರು 450 ಡಾಲರ್ (38 ಸಾವಿರ ರೂ.) ಅನ್ನು ನೀಡಿದ್ದೇನೆ. ಒಂದು ವೇಳೆ ನಾನು ಪಿಜ್ಜಾ ಖರೀದಿಸದಿದ್ದರೆ ತಂದ ಪಿಜ್ಜಾ ವ್ಯರ್ಥವಾಗಿ ಎಸೆಯಬೇಕಿತ್ತು. ಆದ್ದರಿಂದ ನಾನು ಪಿಜ್ಜಾ ಖರೀದಿಸುತ್ತಿದ್ದೆ ಎಂದಿದ್ದಾರೆ.

    ಈಗ ನಾನು ಮಲಗಲು ಭಯಪಡುತ್ತೇನೆ. ಯಾಕೆಂದರೆ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಹೋಗುವಾಗ ಯಾರಾದರೂ ಮತ್ತೆ ಬಿಸಿ ಪಿಜ್ಜಾ ಕೊಡಲು ಬಂದು ಬಿಟ್ಟರೆ ಎಂದು ಆತಂಕವಾಗುತ್ತದೆ. ನಾನು ಪೊಲೀಸರನ್ನು ಸಹ ಸಂಪರ್ಕಿಸಿ ಈ ಬಗ್ಗೆ ಮಾತನಾಡಿದ್ದೆ. ಆದರೆ ಪೊಲೀಸರು ಕೂಡ ಯಾವುದೇ ಸಹಾಯ ಮಾಡಲಿಲ್ಲ ಎಂದು ಜೆನ್ ಹೇಳಿದರು.

    ಜೆನ್ ಮಾತ್ರವಲ್ಲದೇ ಅವರ ನಿವಾಸದಿಂದ 15 ಮೈಲಿ ದೂರದಲ್ಲಿರುವ ಫ್ಲಾಂಡರ್ಸ್ ಪಟ್ಟಣದಲ್ಲಿ ವಾಸಿಸುವ ಅವರ ಸ್ನೇಹಿತರೊಬ್ಬರಿಗು ಇದೇ ರೀತಿ ಪಿಜ್ಜಾ ಬರುತ್ತಿಯಂತೆ. ಕೆಲವೊಮ್ಮೆ ನಮ್ಮಿಬ್ಬರಿಗೂ ಒಂದೇ ದಿನ ಪಿಜ್ಜಾ ಬಂದಿದ್ದವು. ಈ ಬಗ್ಗೆ ನಾವು ಚರ್ಚೆ ಕೂಡ ಮಾಡಿದ್ದೇವೆ ಎಂದು ಹೇಳಿದರು.

  • ಝೊಮ್ಯಾಟೊ, ಸ್ವಿಗ್ಗಿಗೆ ಟಕ್ಕರ್ ಕೊಡಲು ಫೀಲ್ಡಿಗಿಳಿದ ಅಮೆಜಾನ್ ಫುಡ್

    ಝೊಮ್ಯಾಟೊ, ಸ್ವಿಗ್ಗಿಗೆ ಟಕ್ಕರ್ ಕೊಡಲು ಫೀಲ್ಡಿಗಿಳಿದ ಅಮೆಜಾನ್ ಫುಡ್

    – ಬೆಂಗಳೂರಿನಿಂದಲೇ ಸೇವೆ ಆರಂಭ
    – ಮದ್ಯ ಡೆಲಿವರಿ ಸೇವೆ ಆರಂಭಿಸಿದ ಸ್ವಿಗ್ಗಿ, ಝೊಮ್ಯಾಟೊ

    ನವದೆಹಲಿ: ಇ-ಕಾಮರ್ಸ್ ಫೇಮಸ್ ಕಂಪನಿ ಅಮೆಜಾನ್ ಇದೀಗ ಫುಡ್ ಡೆಲಿವರಿಗೂ ಲಗ್ಗೆ ಇಟ್ಟಿದ್ದು, ಝೊಮ್ಯಾಟೊ, ಸ್ವಿಗ್ಗಿಯಂತೆ ಹೊಸ ಅಮೆಜಾನ್ ಫುಡ್ ಎಂಬ ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನಿಂದಲೇ ತನ್ನ ಸೇವೆಯನ್ನು ಪ್ರಾರಂಭ ಮಾಡಿದ್ದು, ಝೊಮ್ಯಾಟೊ, ಸ್ವಿಗ್ಗಿಗೆ ಟಕ್ಕರ್ ಕೊಡಲು ಸಜ್ಜಾಗಿದೆ.

    ನಮ್ಮ ಗ್ರಾಹಕರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸುರಕ್ಷತೆಯ ಉನ್ನತ ಮಾನದಂಡಗಳಿಗೆ ಬದ್ಧರಾಗಿದ್ದೇವೆ. ಶುಚಿತ್ವದ ಖಾತ್ರಿಯಿರುವ ರೆಸ್ಟೊರೆಂಟ್‍ಗಳಿಂದ ಯಾರ ಸಂಪರ್ಕಕ್ಕೂ ಬಾರದಂತೆ ಸುರಕ್ಷಿತವಾಗಿ ಆರ್ಡರ್ ಮಾಡಿದ ಆಹಾರವನ್ನು, ಬೆಂಗಳೂರಿನ ಆಯ್ದ ಪಿನ್‍ಕೋಡ್‍ಗಳಲ್ಲಿ ನಾವು ಅಮೆಜಾನ್ ಫುಡ್ ಸೇವೆಯನ್ನು ಪ್ರಾರಂಭಿಸುತ್ತಿದ್ದೇವೆ. ಸ್ಥಳೀಯ ರೆಸ್ಟೋರೆಂಟ್‍ಗಳಿಂದ ಮತ್ತು ನಮ್ಮ ಉನ್ನತ ನೈರ್ಮಲ್ಯ ಪ್ರಮಾಣೀಕರಣವನ್ನು ದೃಢೀಕರಿಸಿದ ಕ್ಲೌಡ್ ಅಡುಗೆ ಮನೆಗಳಿಂದ ಗ್ರಾಹಕರಿಗೆ ಆಹಾರವನ್ನು ಆರ್ಡರ್ ಮಾಡಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತದೆ ಎಂದು ಅಮೆಜಾನ್ ತನ್ನ ಆ್ಯಪ್‍ನಲ್ಲಿ ಪ್ರಕಟಿಸಿದೆ.

    ಕಳೆದ ಫೆಬ್ರವರಿಯಲ್ಲಿಯೇ ಆರಂಭಿಸಬೇಕಾಗಿದ್ದ ಅಮೆಜಾನ್ ಫುಡ್ ಸೇವೆಯನ್ನು ಕೊರೊನಾ ವೈರಸ್ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಸಾಂಕ್ರಾಮಿಕ ರೋಗದ ಹಿನ್ನೆಲೆ ಆನ್‍ಲೈನ್ ಡೆಲಿವರಿ ಆ್ಯಪ್‍ಗಳಾದ ಸ್ವಿಗ್ಗಿ, ಝೊಮ್ಯಾಟೊ, ಬಿಗ್ ಬಾಸ್ಕೆಟ್ ಮತ್ತು ಗ್ರೋಫರ್ಸ್ ನಂತಹ ಇತರ ಸೇವೆಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ವಸ್ತುಗಳ ಡೆಲಿವರಿಯಲ್ಲಿ ಬ್ಯುಸಿಯಾಗಿವೆ. ಅಲ್ಲದೇ ಸ್ವಿಗ್ಗಿ ಮತ್ತು ಝೊಮ್ಯಾಟೊ ಜಾರ್ಖಂಡ್ ರಾಜಧಾನಿ ರಾಂಚಿನಲ್ಲಿ ಮದ್ಯ ಮತ್ತು ಮದ್ಯಯುಕ್ತ ಪಾನೀಯಗಳ ಸೇವೆಗಳ ಡೆಲಿವರಿ ಆರಂಭಿಸಿದೆ.

    ಮದ್ಯ ಆರ್ಡರ್ ಮಾಡುವ ಗ್ರಾಹಕರು ತಮ್ಮ ವಯಸ್ಸು, ಸರ್ಕಾರ ವಿತರಿಸಿರುವ ಗುರುತಿನ ಪತ್ರ ಮತ್ತು ಸೆಲ್ಫಿಯೊಂದಿಗೆ ದೃಢೀಕರಿಸಬೇಕು. ಸ್ವಿಗ್ಗಿಯಲ್ಲಿ ‘ವೈನ್ ಶಾಪ್ಸ್’ ಎಂಬ ಹೊಸ ಆಪ್ಷನ್ ಅನ್ನು ಹೊಂದಿದ್ದು, ಗ್ರಾಹಕರು ಮನೆಯಿಂದಲೇ ಮದ್ಯವನ್ನು ಆರ್ಡರ್ ಮಾಡಿದರೆ ಡೆಲಿವರಿಯನ್ನು ಮನೆ ಬಾಗಲಿದೆ ತಲುಪಿಸಲಾಗುತ್ತದೆ.

    ಸದ್ಯ ಬೆಂಗಳೂರಿನ ಬೆಳ್ಳಂದೂರು, ಹರಳೂರು, ಮಾರತ್‍ಹಳ್ಳಿ ಮತ್ತು ವೈಟ್‍ಫೀಲ್ಡ್ ನ ಕೆಲವು ಭಾಗಗಳಲ್ಲಿ ಈ ಸೇವೆಯನ್ನು ಅಮೆಜಾನ್ ಫುಡ್ ಶುರು ಮಾಡಿದೆ. ಕಂಪನಿಯು ತನ್ನ ಆಹಾರ ಸೇವೆಗಳನ್ನು ನಗರದ ಉಳಿದ ಭಾಗಗಳಲ್ಲಿ ವಿಸ್ತರಿಸುವುದೇ ಎಂಬ ಬಗ್ಗೆ ಇನ್ನೂ ಸ್ಪಷ್ಟೀಕರಣ ಸಿಕ್ಕಿಲ್ಲ.

  • ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡಿದ್ದ ಗರ್ಭಿಣಿಗೆ ಸುರಕ್ಷಿತ ಹೆರಿಗೆ

    ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡಿದ್ದ ಗರ್ಭಿಣಿಗೆ ಸುರಕ್ಷಿತ ಹೆರಿಗೆ

    ರಾಯಚೂರು: ಲಿಂಗಸುಗೂರಿನ ಅಡವಿಬಾವಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆಗೆ ಹೆರಿಗೆಯಾಗಿದ್ದು ತಾಯಿ, ಮಗು ಆರೋಗ್ಯದಿಂದಿದ್ದಾರೆ.

    ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿತ್ತು. ಹೆರಿಗೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಲು ತಯಾರಿ ನಡೆದಿತ್ತು. ಅಷ್ಟರಲ್ಲೇ ಹೆರಿಗೆ ನೋವು ಹಿನ್ನೆಲೆ ಸಿಬ್ಬಂದಿ ಕಣ್ತಪ್ಪಿಸಿ ಖಾಸಗಿ ಆಸ್ಪತ್ರೆಗೆ ತೆರಳಲು ಪತಿ, ಪತ್ನಿ ಇಬ್ಬರು ಮಕ್ಕಳು ಪರಾರಿಯಾಗಿದ್ದರು. ಅವರ ಸ್ವಗ್ರಾಮ ಲಿಂಗಸುಗೂರಿನ ಹಾಲುಬಾವಿ ತಾಂಡ ಬಳಿ ಸಂಬಂಧಿಕರ ಮನೆಯಲ್ಲಿ ಹೆರಿಗೆಯಾಗಿದೆ. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.

    ಹೆರಿಗೆ ಬಳಿಕ ಕುಟುಂಬವನ್ನು ಲಿಂಗಸುಗೂರಿನ ರೊಡಲಬಂಡಾ ಆಸ್ಪತ್ರೆಗೆ ಕರೆತರಲಾಗಿದೆ. ಆಸ್ಪತ್ರೆ ಕ್ವಾಟ್ರಸ್‍ನಲ್ಲೇ ಐಸೋಲೇಷನ್ ವಾರ್ಡ್ ನಿರ್ಮಾಣ ಮಾಡಲಾಗಿದ್ದು, ನಾಲ್ಕು ಜನರ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಣಂತಿ, ಪತಿ, ಇಬ್ಬರು ಮಕ್ಕಳನ್ನ ಐಸೋಲೇಷನ್ ವಾರ್ಡಿನಲ್ಲಿಡಲಾಗಿದೆ. ಹೆರಿಗೆ ಹಿನ್ನೆಲೆ ಸ್ಥಳೀಯರ ಮಾಹಿತಿ ಮೇರೆಗೆ ಕುಟುಂಬವನ್ನ ಪತ್ತೆ ಹಚ್ಚಿ ಆರೋಗ್ಯ ಇಲಾಖೆ ಸಿಬ್ಬಂದಿ ವಾಪಸ್ ಕರೆತಂದಿದ್ದಾರೆ.

  • ಬೆಂಗ್ಳೂರಲ್ಲಿ ಹುಟ್ಟುತ್ತಲೇ ತಾಯಿ- ಮಗುವನ್ನು ಬೇರ್ಪಡಿಸಿದ ಕೊರೊನಾ

    ಬೆಂಗ್ಳೂರಲ್ಲಿ ಹುಟ್ಟುತ್ತಲೇ ತಾಯಿ- ಮಗುವನ್ನು ಬೇರ್ಪಡಿಸಿದ ಕೊರೊನಾ

    – ಕೋವಿಡ್ 19 ಇರೋದನ್ನು ಮುಚ್ಚಿಟ್ಟು ಡೆಲಿವರಿ

    ಬೆಂಗಳೂರು: ಹುಟ್ಟುತ್ತಲೇ ತಾಯಿ ಮತ್ತು ಕಂದನನ್ನು ಮಹಾಮಾರಿ ಕೊರೊನಾ ದೂರ ಮಾಡಿದ ಮನ ಮಿಡಿಯುವ ಘಟನೆಯೊಂದು ಕುರುಬರಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

    ಗರ್ಭಿಣಿಗೆ ಸರ್ಜರಿ ಆಗಿದ್ದು ಮಗುವನ್ನು ಹೆತ್ತಿದ್ದಾರೆ. ಪತಿಗೆ ಕೊರೊನಾ ಇದ್ದಿದ್ದರಿಂದ ಪತ್ನಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿ ಮಗುವಿಗೆ ಜನ್ಮ ನೀಡಿದ ತಕ್ಷಣ ತಾಯಿಯನ್ನು ವಿಕ್ಟೋರಿಯಾ ಹಾಗೂ ಮಗುವನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವೈದ್ಯರು ಹಾಗೂ ನರ್ಸ್ ಗಳನ್ನು ಕೂಡ ಶಿಫ್ಟ್ ಮಾಡಲಾಗಿದೆ.

    ಆಘಾತಕಾರಿ ವಿಚಾರವೆಂದರೆ ದಂಪತಿ ಕೆಂಗೇರಿ ಉಪನಗರ ಕಡೆಯವರಾಗಿದ್ದು, ಪತಿ ಹಾಗೂ ಇಬ್ಬರೂ ತಮಗೆ ಕೊರೊನಾ ಇರುವುದನ್ನು ಮುಚ್ಚಿಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆಯವರಿಗೆ ಮಾಹಿತಿ ಇಲ್ಲದೆ ಸರ್ಜರಿ ಮಾಡಿದ್ದಾರೆ. ಡೆಲಿವರಿ ಮಾಡಿಸಿದ ಮೇಲೆ ಕೊರೊನಾ ಇರುವುದು ಗೊತ್ತಾಗಿದೆ. ಪರಿಣಾಮ ಇದೀಗ ಕುರುಬರಹಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಘಟನೆಯಿಂದ ಆಸ್ಪತ್ರೆ ಸುತ್ತಮುತ್ತ ಬರೋಬ್ಬರಿ 3 ಬಾರಿ ಔಷಧಿ ಸಿಂಪಡನೆ ಮಾಡುವ ಮೂಲಕ ಆಸ್ಪತ್ರೆ ಪಕ್ಕದ ಕಟ್ಟಡ ವಾಸಿಗಳ ಮೇಲೂ ನಿಗಾ ವಹಿಸಲಾಗಿದೆ. ಪದೇ ಪದೇ ಸಹಾಯವಾಣಿ ಕರೆ ಮಾಡಿ ಸುರಕ್ಷತಾ ಕ್ರಮಗಳ ಬಗ್ಗೆ ಜನರು ಮಾಹಿತಿ ಪಡೆಯುತ್ತಿದ್ದಾರೆ. ಇಂದು ಆರೋಗ್ಯ ಇಲಾಖಾ, ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಅಗತ್ಯ ಕ್ರಮಗಳ ಬಗ್ಗೆ ನಿಗಾ ಇರಿಸಿದ್ದಾರೆ. ಸದ್ಯ ತಾಯಿ, ಮಗುವಿನ ಪರೀಕ್ಷಾ ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ.