Tag: delivery

  • ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಹೈದರಾಬಾದ್: ಗರ್ಭಿಣಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ವೈದ್ಯರು ಹರಿಗೆ ಮಾಡಲು ಹಿಂದೇಟು ಹಾಕಿದ್ದಾರೆ. ಈ ವೇಳೆ ಮಹಿಳೆ ನಡುರಸ್ತೆಯಲ್ಲೇ ಮಗುವಿಗೆ ಜನ್ಮ ಕೊಟ್ಟಿರುವ ಘಟನೆ ತೆಲಂಗಣದಲ್ಲಿ ನಡೆದಿದೆ.

    ನಾಗರ್​ಕರ್ನೂಲ್​​ ಜಿಲ್ಲೆಯ ಅಚಂಪೇಟ್​​ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದ ಗರ್ಭಿಣಿಯೋರ್ವರಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಆಸ್ಪತ್ರೆಯೊಳಗೆ ದಾಖಲು ಮಾಡಿಕೊಳ್ಳಲು ವೈದ್ಯರು ನಿರಾಕರಣೆ ಮಾಡಿದ್ದಾರೆ. ಆಸ್ಪತ್ರೆ ಹೊರಗಿನ ರಸ್ತೆಯಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳು, ಆಸ್ಪತ್ರೆಗೆ ಬಂದ ಗರ್ಭಿಣಿಗೆ ವೇಳೆ ಸೋಂಕು ಇರುವುದು ದೃಢಪಟ್ಟಿದೆ. ಇದೇ ಕಾರಣಕ್ಕಾಗಿ ಬೇರೆ ಆರೋಗ್ಯ ಕೇಂದ್ರಕ್ಕೆ ಹೋಗುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಆದರೆ ಗರ್ಭಿಣಿಗೆ ರಸ್ತೆಯಲ್ಲೇ ಹೆರಿಗೆ ಆಗಿದೆ. ಇದಾದ ಬಳಿಕ ಆಕೆಯನ್ನ ಒಳಗೆ ಕರೆತರಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆರೋಗ್ಯ ಸೂಚ್ಯಂಕದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಅಗತ್ಯ ಕ್ರಮ: ಡಾ.ಕೆ.ಸುಧಾಕರ್

    ವೈದ್ಯಕೀಯ ಸಿಬ್ಬಂದಿ ಅಮಾನತು: ನಿರ್ಲಕ್ಷ್ಯ ವಹಿಸಿರುವುದಕ್ಕಾಗಿ ಸಮುದಾಯ ಆರೋಗ್ಯ ಕೇಂದ್ರದ ಸೂಪರಿಂಡೆಂಟ್, ವೈದ್ಯರನ್ನ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಕೆ. ರಮೇಶ್ ರೆಡ್ಡಿ ತಿಳಿಸಿದ್ದಾರೆ. ಕೋವಿಡ್ ದೃಢಪಟ್ಟ ಗರ್ಭಿಣಿಯರಿಗೆ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವುದನ್ನ ನಿರಾಕರಿಸದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಸತ್ಯ, ಸಮಾನತೆಯ ಮೊದಲ ಹೆಜ್ಜೆಗೆ ನನ್ನ ಪ್ರಣಾಮಗಳು: ರಾಹುಲ್ ಗಾಂಧಿ

  • ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

    ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

    ರಾಂಚಿ: ರಸ್ತೆಗಳು ಹದಗೆಟ್ಟ ಪರಿಣಾಮ ಗ್ರಾಮಸ್ಥರು ತುಂಬು ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಅದನ್ನು ತಮ್ಮ ಹೆಗಲಲ್ಲಿ ಹೊತ್ತು ಆಸ್ಪತ್ರೆಗೆ ನಡೆದ ವಿಲಕ್ಷಣ ಘಟನೆಯೊಂದು ಜಾರ್ಖಂಡ್ ನಲ್ಲಿ ನಡೆದಿದೆ.

    ಗುಡಿಯಾ ದೇವಿ ತುಂಬು ಗರ್ಭಿಣಿ. ಈಕೆಗೆ ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ ಈಕೆಯಿದ್ದ ಪ್ರದೇಶದಲ್ಲಿ ರಸ್ತೆ ವ್ಯವಸ್ಥೆ ಸರಿಯಾಗಿಲ್ಲ. ಅಲ್ಲದೆ ಹತ್ತಿರ ಯಾವುದೇ ಆಸ್ಪತ್ರೆಯೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕೆಯನ್ನು ಮಂಚದ ಮೇಲೆ ಮಲಗಿಸಿದ್ದಾರೆ. ನಂತರ ಮಂಚವನ್ನು ಹೊತ್ತು ಗ್ರಾಮಸ್ಥರು ಕೆಲ ದೂರ ಸಾಗಿದ್ದಾರೆ. ಸೂಕ್ತವಾದ ರಸ್ತೆ ಸಿಕ್ಕಿದ ಬಳಿಕ ಗುಡಿಯಾ ದೇವಿಯವರನ್ನು ಕಾರಿನ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಈ ಸಂಬಂಧ ಸಮಾಜ ಸೇವಕ ಭವೇಶ್ ಕುಮಾರ್ ಹೆಂಬ್ರಾಂ ಮಾತನಾಡಿ, ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಹಲವು ಬಾರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅದರಿಂದ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜಾರ್ಖಂಡ್‍ನ 6 ಗ್ರಾಮಗಳಿಗೆ ಮೂಲ ಸೌಕರ್ಯಗಳ ಕೊರತೆಯಿದೆ ಎಂದರು.

    ಗ್ರಾಮದಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಹಾಗೂ ಆಸ್ಪತ್ರೆ ಕೂಡ ಇಲ್ಲ. ಹೀಗಾಗಿ ಈ ಗ್ರಾಮಗಳಲ್ಲಿ ಜನ ವೈದ್ಯಕೀಯ ಚಿಕಿತ್ಸೆ ಪಡೆಯಲು ಜನ ಹರಸಾಹಸಪಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅವರು ಅಳಲು ತೋಡಿಕೊಂಡರು.

  • ಯೂಟ್ಯೂಬ್ ವೀಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಹುಡುಗಿ – ಪ್ರಿಯಕರ ಅರೆಸ್ಟ್

    ಯೂಟ್ಯೂಬ್ ವೀಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಹುಡುಗಿ – ಪ್ರಿಯಕರ ಅರೆಸ್ಟ್

    ತಿರುವನಂತಪುರ: 17 ವರ್ಷದ ಹುಡುಗಿಯೊಬ್ಬಳು ತನ್ನ ಪ್ರಿಯಕರನಿಂದ ಗರ್ಭಿಣಿಯಾಗಿ ಯೂಟ್ಯೂಬ್ ವೀಡಿಯೋಗಳ ಸಹಾಯದಿಂದ ಮನೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

    ಅಕ್ಟೋಬರ್ 20ರಂದು ಹುಡುಗಿ ಮಗುವಿಗೆ ಜನ್ಮ ನೀಡಿದ್ದು, ಯೂಟ್ಯೂಬ್ ವೀಡಿಯೋಗಳನ್ನು ಮಾರ್ಗದರ್ಶಿಯಾಗಿ ಬಳಸಿಕೊಂಡು ಹೊಕ್ಕಳಬಳ್ಳಿಯನ್ನು ಕತ್ತರಿಸಿಕೊಂಡಿದ್ದಾಳೆ. ಸಂಪೂರ್ಣ ಹೆರಿಗೆ ಪ್ರಕ್ರಿಯೆಯನ್ನು ಹುಡುಗಿ ಯಾವುದೇ ಹೊರಗಿನವರ ಸಹಾಯ ಪಡೆಯದೇ ತಾನೇ ಮಾಡಿಕೊಂಡಿದ್ದಾಳೆ ಎಂಬ ವಿಚಾರ ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ. ಇದನ್ನೂ ಓದಿ: ಪ್ರೀತಿಯಿಂದ ಸಾಕಿದ್ದ ಜಾನುವಾರುಗಳು ಸಾವು – ಕಣ್ಣೀರಿಟ್ಟ ಮಾಲೀಕ

    ಸದ್ಯ ಮಂಜೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ದಾಖಲಿಸಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಆಕೆಯನ್ನು ಗರ್ಭಿಣಿ ಮಾಡಿದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 376(ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 282 ಕೇಸ್ – 15 ಮಂದಿಯಲ್ಲಿ ಕಾಣಿಸಿಕೊಂಡ AY 12 ಪ್ರಭೇದ

    ಅಕ್ಟೋಬರ್ 22 ರಂದು ಮಗು ಅಳುವ ಶಬ್ಧ ಕೇಳಿ ಪೋಷಕರಿಗೆ ಘಟನೆ ಕುರಿತಂತೆ ತಿಳಿದುಬಂದಿದೆ. ಮಗುವಿಗೆ ಜನ್ಮ ನೀಡಿದ ಹುಡುಗಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿರುವುದರ ಬಗ್ಗೆ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.

    ಹುಡುಗಿ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಈಕೆಯ ತಾಯಿಗೆ ದೃಷ್ಟಿದೋಷವಿದ್ದು, ಆಕೆಯ ತಂದೆಯಿಂದ ಕೂಡ ಗರ್ಭಾವಸ್ಥೆಯನ್ನು ಮರೆಮಾಡುವಲ್ಲಿ ಯಶಸ್ವಿಯಾಗಿದ್ದಳು. ಅಲ್ಲದೇ ಹುಡುಗಿ ಗರ್ಭಾವಸ್ಥೆಯಲ್ಲಿ ಎರಡು ಆಸ್ಪತ್ರೆಗಳಿಂದ ವೈದ್ಯಕೀಯ ನೆರವು ಪಡೆದಿದ್ದಳು. ಹೀಗಾಗಿ ಈ ಆಸ್ಪತ್ರೆಗಳಿಂದ ಯಾವುದಾದರೂ ಲೋಪಗಳಿದ್ದರೆ ಅದನ್ನು ಸಿಡಬ್ಲೂಸಿ ವಿಚಾರಿಸುತ್ತದೆ ಎಂದು ಮಕ್ಕಳ ಕಲ್ಯಾಣ ಸಮಿತಿ ತಿಳಿಸಿದೆ. ಇದನ್ನೂ ಓದಿ: ವಿದೇಶದಿಂದ ಬೆಂಗಳೂರಿಗೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

    ಹುಡುಗಿ ಮತ್ತು ಯುವಕ ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬಸ್ಥರು ಕಾನೂನುಬದ್ಧವಾಗಿ ಬಾಲಕಿಗೆ 18 ವರ್ಷ ತುಂಬಿದ ಬಳಿಕ ಇಬ್ಬರಿಗೂ ಮದುವೆ ಮಾಡಲು ಚಿಂತನೆ ನಡೆಸಿದ್ದರು. ಇದೀಗ ಹುಡುಗಿ ಹಾಗೂ ಮಗುವಿಗೆ ಯುವಕನ ಕುಟುಂಬಸ್ಥರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ ಹುಡುಗಿಗೆ ಇನ್ನೂ 17 ವರ್ಷವಾಗಿರುವುದರಿಂದ ಪೊಲೀಸರು ಇದನ್ನೂ ಅತ್ಯಾಚಾರ ಪ್ರಕರಣ ಎಂದು ಪರಿಗಣಿಸಿದ್ದಾರೆ.

  • ಕೊರೊನಾ ನೆಗೆಟಿವ್ ವರದಿ ಇಲ್ಲದೆ ಒಳಗೆ ಸೇರಿಸದ ಸಿಬ್ಬಂದಿ- ಆಸ್ಪತ್ರೆ ಆವರಣದಲ್ಲೇ ತುಂಬು ಗರ್ಭಿಣಿ ನರಳಾಟ

    ಕೊರೊನಾ ನೆಗೆಟಿವ್ ವರದಿ ಇಲ್ಲದೆ ಒಳಗೆ ಸೇರಿಸದ ಸಿಬ್ಬಂದಿ- ಆಸ್ಪತ್ರೆ ಆವರಣದಲ್ಲೇ ತುಂಬು ಗರ್ಭಿಣಿ ನರಳಾಟ

    ಹಾಸನ: ಕೊರೊನಾ ವೈರಸ್ ನೆಗೆಟಿವ್ ರಿಪೋರ್ಟ್ ಇಲ್ಲದೆ ಒಳಗೆ ಸೇರಿಸದ ಪರಿಣಾಮ ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆಯ ಆವರಣದಲ್ಲಿಯೇ ನೋವಿನಿಂದ ಒದ್ದಾಡಿದ ಘಟನೆಯೊಂದು ಹಾಸನದಲ್ಲಿ ನಡೆದಿದೆ.

    ಕೋವಿಡ್ ರಿಪೋರ್ಟ್ ಇಲ್ಲದೆ ಗರ್ಭಿಣಿ ಹೇಮಾ ಅಡ್ಮಿಷನ್ ಸಿಕ್ಕಿಲ್ಲ. ಹೀಗಾಗಿ ತುಂಬು ಗರ್ಭಿಣಿ ಶಾಂತಿಗ್ರಾಮ ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಹೆರಿಗೆ ನೋವಿನಿಂದ ನರಳಾಡಿದ್ದಾರೆ. ಕೂಗಾಡಿ ನರಳಾಡಿದರು ಆಸ್ಪತ್ರೆ ಸಿಬ್ಬಂದಿ ನೆರವಿಗೆ ಬರಲಿಲ್ಲ ಎಂದು ಗರ್ಭಿಣಿ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

    ಹಾಸನ ತಾಲೂಕಿನ ಹಲಸಿನಹಳ್ಳಿ ಗ್ರಾಮದ ನಿವಾಸಿಯಾಗಿರುವ ಹೇಮಾ ಅವರು ರಾತ್ರಿ 11.30ಕ್ಕೆ ಹೆರಿಗೆಗೆಂದು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಕೋವಿಡ್ ನೆಗೆಟಿವ್ ವರದಿ ಕೇಳಿದ್ದಾರೆ. ಆದರೆ ಹೇಮಾ ಬಳಿ ರಿಪೋರ್ಟ್ ಇಲ್ಲದ ಕಾರಣ ಅವರನ್ನು ಆಸ್ಪತ್ರೆ ಒಳಗೆ ಸೇರಿಸಿಲ್ಲ. ಈ ಮೂಲಕ 24*7 ಹೆರಿಗೆ ಆಸ್ಪತ್ರೆಯಾದರೂ ಆರೋಗ್ಯ ಇಲಾಖೆ ಸಿಬ್ಬಂದಿ ಮಾನವೀಯತೆ ಮರೆತಿದ್ದಾರೆ.

    ಇತ್ತ ಆಸ್ಪತ್ರೆ ಒಳಗಡೆ ಸೇರಿಸದ ಪರಿಣಾಮ ಹೇಮಾ ಅವರು ಹೊರಗಡೆ ನರಳಿ ನರಳಿ ಅಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಹೆರಿಗೆಯಾದ ಬಳಿಕ ಆಕೆಯ ಕುಟುಂಬದ ಸದಸ್ಯರು ಅಂಬುಲೆನ್ಸ್ ನಲ್ಲಿ ಮಗು ಹಾಗೂ ಹೇಮಾರನ್ನು ಹಾಸನಕ್ಕೆ ಕರೆದುಕೊಂಡು ಹೋಗಿದ್ದಾರೆ.

  • ಸರಕಾರಿ ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ- ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

    ಸರಕಾರಿ ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ- ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

    ಕೊಪ್ಪಳ: ಆಸ್ಪತ್ರೆಗೆ ಆಗಮಿಸಿದ ಮಹಿಳೆಯೊಬ್ಬರು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಆಸ್ಪತ್ರೆಯ ಬಾಗಿಲಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

    ಜಿಲ್ಲೆಯ ಗೌರಿಪುರ ಗ್ರಾಮದ ಗರ್ಭಿಣಿ ಬೃಂದಾ ಅವರಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಕುಟುಂಬಸ್ಥರು ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಬೆಳಿಗ್ಗೆ ಆರು ಗಂಟೆಗೆ ಆಸ್ಪತ್ರೆಯ ಮುಂಭಾಗ ಬಂದು ಬಾಗಿಲು ತೆಗೆಯಿರಿ ಎಂದು ಬೇಡಿಕೊಂಡರೂ ಅಲ್ಲಿದ್ದ ಸಿಬ್ಬಂದಿ ಬಂದು ನೋಡದೆ, ಸಮುದಾಯ ಆರೋಗ್ಯ ಕೇಂದ್ರದ ಬಾಗಿಲು ತೆರೆಯದೆ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಬೃಂದಾ ಅವರು ಹೆರಿಗೆ ನೋವಿನಿಂದ ಬಳಲಿ ಕೆಂದ್ರದ ಬಾಗಿಲಲ್ಲೆ ಹೆರಿಗೆಯಾಗಿದ್ದಾರೆ.

    ಬೃಂದಾ ಅವರು ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ಮನಕಲಕುವ ದೃಶ್ಯ ನೋಡಿ ಸ್ಥಳೀಯರು ದಂಗಾಗಿದ್ದಾರೆ. ಈ ರೀತಿ ಹೆರಿಗೆಯಾಗಿದ್ದರಿಂದ ಕುಟುಂಬಸ್ಥರು ಆರೋಗ್ಯ ಸಿಬ್ಬಂದಿ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ. ವಿಷಯ ತಿಳಿಯುತ್ತಿದಂತೆ ಕುಟುಂಬಸ್ಥರು ಮತ್ತು ಕನ್ನಡ ಪರ ಸಂಘಟನೆಗಳು ಆರೋಗ್ಯ ಕೇಂದ್ರದ ಮುಂದೇ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

  • 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾಗಲೇ ಗಂಡು ಮಗುವಿಗೆ ಜನ್ಮ ನೀಡಿದ್ಳು!

    10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾಗಲೇ ಗಂಡು ಮಗುವಿಗೆ ಜನ್ಮ ನೀಡಿದ್ಳು!

    – ದೇವರ ಉಡುಗೊರೆ ಎಂದ ಪತಿ

    ಪಾಟ್ನಾ: 10 ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ ಘಟನೆಬಿಹಾರದ ಮುಜಾಫರ್ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಶಾಂತಿ ದೇವಿ(20) ಮಗುವಿಗೆ ಜನ್ಮ ನೀಡಿದಾಕೆ. ಈಕೆ ಮಹಾಂತ್ ದರ್ಶನ್ ದಾಸ್ ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 10 ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಳು. ಈ ವೇಳೆ ಆಕೆಗೆ ಪ್ರಸವ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

    ಈ ಸಂಬಂಧ ಪರೀಕ್ಷಾ ಕೇಂದ್ರದ ಮುಖ್ಯಸ್ಥೆ ಮೀರಾ ಮಧುಮಿತ ಮಾತನಾಡಿ, ಕಾಲೇಜಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ. ಅಂತೆಯೇ ಶುಕ್ರವಾರ ಶಾಂತಿ ದೇವಿ ಪರೀಕ್ಷೆ ಬರೆಯಲು ಬಂದಿದ್ದಳು. ಪರೀಕ್ಷೆ ಬರೆಯಲು ಕುಳಿತ 1 ಗಂಟೆಯ ನಂತರ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ಹೇಳಿದರು.

    ಇತ್ತ ಶಾಂತಿ ದೇವಿ ಪರಿಸ್ಥಿತಿ ಅರಿತ ಮೀರಾ ಅವರು ಕೂಡಲೇ ಕೇಂದ್ರ ಉಸ್ತುವಾರಿಗೆ ಮಾಹಿತಿ ರವಾನಿಸಿದ್ದಾರೆ. ಅಲ್ಲದೆ ಶಾಂತಿಯನ್ನು ಪ್ರತ್ಯೇಕ ಕೋಣೆಯಲ್ಲಿ ಮಲಗಲು ಅನುಮತಿ ಕೇಳಿದರು. ನಂತರ ಜಿಲ್ಲಾ ಶಿಕ್ಷಣ ಅಧಿಕಾರಿಗೂ ಈ ಬಗ್ಗೆ ಮಾಹಿತಿ ನೀಡಲಾಯಿತು. ಅವರ ಸೂಚನೆಗಳನ್ನು ಅನುಸರಿಸಿ, ಶಾಂತಿಯನ್ನು ಅಂಬುಲೆನ್ಸ್ ಮೂಲಕ ಸದರ್ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಆಕೆ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದಳು.

    ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಶಾಂತಿ ಆರೋಗ್ಯವಾಗಿದ್ದಾಳೆ. ನೋವು ಪ್ರಾರಂಭವಾಗುವ ಮೊದಲು ಆಕೆ ಟಿಕ್ ಮಾದರಿಯ ಪ್ರಶ್ನೆಗಳನ್ನು ಮುಗಿಸಿದ್ದಾಳೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಪತಿ ಬಿರ್ಜು ಸೆಹ್ನಿ ಹೇಳಿದ್ದಾರೆ.

    ಪರೀಕ್ಷೆಯ ಸಮಯದಲ್ಲಿ ದೇವರು ಮಗು ಕರುಣಿಸಿದ್ದಾನೆ. ಈ ಕಾರಣಕ್ಕಾಗಿ ಮಗುವಿಗೆ ‘ಇಮ್ತಿಹಾನ್’ ಎಂದು ಹೆಸರಿಡಲಾಗಿದೆ. ಶಾಂತು ಓದು ಮುಂದುವರಿಸಲಿದ್ದು, ಒಳ್ಳೆಯ ಉದ್ಯೀಗ ಗಿಟ್ಟಿಸಿಕೊಳ್ಳಲು ಬಯಸಿದ್ದಾಳೆ ಎಂದು ಬಿರ್ಜು ತಿಳಿಸಿದ್ದಾರೆ.

  • ಮರ್ಸಿಡಿಸ್ ಕಾರು ಗುದ್ದಿದ ರಭಸಕ್ಕೆ ಚಕ್ರದಡಿ ಸಿಲುಕಿ ಝೋಮ್ಯಾಟೋ ಡೆಲಿವರಿ ಬಾಯ್ ಸಾವು!

    ಮರ್ಸಿಡಿಸ್ ಕಾರು ಗುದ್ದಿದ ರಭಸಕ್ಕೆ ಚಕ್ರದಡಿ ಸಿಲುಕಿ ಝೋಮ್ಯಾಟೋ ಡೆಲಿವರಿ ಬಾಯ್ ಸಾವು!

    ಮುಂಬೈ: ವೇಗವಾಗಿ ಚಲಿಸುತ್ತಿದ್ದ ಮರ್ಸಿಡಿಸ್ ಕಾರು ಝೋಮ್ಯಾಟೋ ಡೆಲಿವರಿ ಹುಡುಗನ ಬೈಕಿಗೆ ಗುದ್ದಿದೆ. ಈ ವೇಳೆ ಯುವಕ ಚಕ್ರಗಳ ಕೆಳಗೆ ಸಿಲುಕಿಕೊಂಡು ಸಾವನ್ನಪ್ಪಿರುವ ಘಟನೆ ಮುಂಬೈನ ಪಶ್ಚಿಮ ಅಂಧೇರಿಯ ಲೋಖಂಡ್ವಾಲಾ ಪ್ರದೇಶದಲ್ಲಿ ನಡೆದಿದೆ.

    ಮೃತನನ್ನು ಸತೀಶ್ ಗುಪ್ತಾ(19) ಎಂದು ಗುರುತಿಸಲಾಗಿದೆ. ಈತ ಅಂಧೇರಿಯ ನಿವಾಸಿಯಾಗಿದ್ದಾನೆ. ಝೋಮ್ಯಾಟೋ ಆರ್ಡರ್ ಡೆಲಿವರಿಗೆಂದು ಹೋಗುತ್ತಿದ್ದ ವೇಳೆ ರಾಂಗ್ ರೂಟ್‍ನಲ್ಲಿ ಬಂದ ಮರ್ಸಿಡಿಸ್ ಕಾರು ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ.

    ಮರ್ಸಿಡಿಸ್ ಕಾರು ರಾಂಗ್ ರೂಟ್‍ನಲ್ಲಿ ಬಂದಿದ್ದಲ್ಲದೆ, ವೇಗವಾಗಿ ಬಂದು ದ್ವಿಚಕ್ರವಾಹದಲ್ಲಿ ಹೋಗುತ್ತಿದ್ದ ಝೋಮ್ಯಾಟೋ ಹುಡಗನ ಬೈಕಿಗೆ ಗುದ್ದಿದೆ. ಕಾರಿನ ಚಾಲಕ ದ್ವಿಚಕ್ರ ವಾಹನವನ್ನು ಗುದ್ದಿದ ನಂತರ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ. ಈ ವೇಳೆ ಕಾರಿನ ಬಾನೆಟ್ ನಡುವೆ ಯುವಕ ಸಿಲುಕಿಕೊಂಡಿದ್ದಾನೆ. ವೇಗದಲ್ಲಿದ್ದ ಕಾರು ಸ್ವಲ್ಪ ದೂರ ಯುವಕನ್ನು ಎಳೆದುಕೊಂಡು ಹೋಗಿದೆ. ಈ ವೇಳೆ ಸವಾರ ಕಾರಿನ ಚಕ್ರದಡಿ ಸಿಲುಕಿದ್ದಾನೆ. ತಕ್ಷಣ ಚಾಲಕ ಕಾರಿನಿಂದ ಹೊರಬಂದಿದ್ದಾನೆ. ಆಟೋವನ್ನು ಬಾಡಿಗೆಗೆ ತೆಗೆದುಕೊಂಡು ಸತೀಶ್‍ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದನು. ಸತೀಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದನು ಎಂದು ಮೂಲಗಳು ತಿಳಿಸಿವೆ.

    ಓಶಿವಾರಾ ಪೊಲೀಸರ ತಂಡ ಸ್ಥಳಕ್ಕೆ ತಲುಪಿ ಅಪಘಾತದ ಸಮಯದಲ್ಲಿ ಕಾರು ಚಾಲನೆ ಮಾಡುತ್ತಿದ್ದ ತೈಫೂರ್ ತನ್ವೀರ್ ಶೇಖ್ ಅವರನ್ನು ವಶಕ್ಕೆ ಪಡೆದಿದೆ. ಚಾಲನೆ ಮಾಡುವಾಗ ಅವನು ಕುಡಿದಿದ್ದಾನೆಯೇ ಎಂದು ಕಂಡುಹಿಡಿಯಲು ಅವರ ವೈದ್ಯಕೀಯವನ್ನು ನಡೆಸಲಾಗುತ್ತಿದೆ ಎಂದು ಓಶಿವಾರಾ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

  • ಹದಗೆಟ್ಟ ರಸ್ತೆಗಳಿಗಿಲ್ಲ ಮುಕ್ತಿ – ಅಂಬುಲೆನ್ಸ್ ನಲ್ಲೇ ಹೆರಿಗೆ ಆಗುವುದರಲ್ಲಿ ರಾಯಚೂರು ನಂ.1

    ಹದಗೆಟ್ಟ ರಸ್ತೆಗಳಿಗಿಲ್ಲ ಮುಕ್ತಿ – ಅಂಬುಲೆನ್ಸ್ ನಲ್ಲೇ ಹೆರಿಗೆ ಆಗುವುದರಲ್ಲಿ ರಾಯಚೂರು ನಂ.1

    ರಾಯಚೂರು: ಕೆಟ್ಟ ರಸ್ತೆಗಳನ್ನ ಕಂಡಾಗ ಗರ್ಭಿಣಿಯರಿಗೆ ಇಲ್ಲೆ ಹೆರಿಗೆಯಾಗಿ ಬಿಡುತ್ತೆ ಅಂತ ಉದ್ಘಾರ ತೆಗೆಯುವುದು ಸಾಮಾನ್ಯ. ಆದರೆ ಅದು ರಾಯಚೂರು ಪಾಲಿಗೆ ಬಹುತೇಕ ನಿಜವಾಗಿದೆ. ಯಾಕಂದ್ರೆ ರಾಯಚೂರಿನ ರಸ್ತೆಗಳಲ್ಲೇ ಹೆರಿಗೆಯಾಗುವುದು ಸಾಮಾನ್ಯವಾಗಿದೆ. ಈ ಅಂಕಿ ಅಂಶಗಳನ್ನ ನೋಡಿದ್ರೆ ನೀವು ಗಾಬರಿಯಾಗದೆ ಇರಲ್ಲ. ಆಸ್ಪತ್ರೆ ಸೇರುವ ಮುನ್ನವೇ ಅಂಬುಲೆನ್ಸ್ ನಲ್ಲಿ ಹೆರಿಗೆಯಾಗುವುದರಲ್ಲಿ ರಾಜ್ಯದಲ್ಲೇ ರಾಯಚೂರು ಈಗ ನಂಬರ್ 1 ಆಗಿದೆ.ಅಂಬುಲೆನ್ಸ್ ನಲ್ಲಿ ಆರೋಗ್ಯ ಕವಚ ಸಿಬ್ಬಂದಿ ಸುಲಭ ಹೆರಿಗೆ ಮಾಡುವ ಮೂಲಕ ರಾಜ್ಯದಲ್ಲಿ ನೂರಾರು ಹೆರಿಗೆಗಳನ್ನ ಮಾಡಿಸಿ ತಾಯಿ, ಮಗುವನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಲ್ಲಿ ರಾಯಚೂರು ಜಿಲ್ಲೆ ಈಗ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ಅಂಬುಲೆನ್ಸ್ ಕೊರತೆ ಸೇರಿ ನಾನಾ ಕಾರಣಗಳಿರಬಹುದು ಅದರಲ್ಲಿ ಹದಗೆಟ್ಟ ರಸ್ತೆಗಳೇ ಪ್ರಮುಖ ಪಾತ್ರ ವಹಿಸಿವೆ.

    2020 ಜನವರಿಯಿಂದ ಸೆಪ್ಟೆಂಬರ್ ವರೆಗೆ ಅಂಬುಲೆನ್ಸ್ ನಲ್ಲಿ ಆರೋಗ್ಯ ಕವಚ ಸಿಬ್ಬಂದಿ ಇದುವರೆಗೂ ರಾಜ್ಯದಲ್ಲಿ ಒಟ್ಟು 635 ಹೆರಿಗೆಗಳನ್ನು ಮಾಡಿಸಿದ್ದಾರೆ. ಇದರಲ್ಲಿ ರಾಯಚೂರು ಜಿಲ್ಲೆಯಲ್ಲಿ 81 ಹೆರಿಗೆಗಳು ಆಗಿದ್ದು, ಅಂಬುಲೆನ್ಸ್ ನಲ್ಲಿ ಹೆರಿಗೆ ಆಗುವುದರಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಕಲಬುರಗಿಯಲ್ಲಿ 76 ಹೆರಿಗೆಗಳು ಆಗುವ ಮೂಲಕ 2ನೇ ಸ್ಥಾನದಲ್ಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಆಸ್ಪತ್ರೆಗಳು ಹತ್ತಿರ ಸಿಗುವುದರಿಂದ ಅಂಬುಲೆನ್ಸ್ ನಲ್ಲಿ 11 ಹೆರಿಗೆಗಳು ಮಾತ್ರ ನಡೆದಿವೆ. ಬಳ್ಳಾರಿ 54, ಬೆಳಗಾವಿ 59, ವಿಜಯಪುರ 64, ಉತ್ತರ ಕನ್ನಡ 33 ಹೆರಿಗೆಗಳು ಅಂಬುಲೆನ್ಸ್ ನಲ್ಲೇ ಆಗಿದೆ. ಕೋವಿಡ್ ಸೋಂಕಿತರಿಗೂ ಸುರಕ್ಷಿತವಾಗಿ ಅಂಬ್ಯುಲೆನ್ಸ್ ನಲ್ಲೆ ಹೆರಿಗೆಯಾಗಿವೆ. ಅದೃಷ್ಟವಶಾತ್ ಇದುವರೆಗೂ ಹೆರಿಗೆಯಾದ ಎಲ್ಲಾ ತಾಯಂದಿರು ಮಕ್ಕಳು ಆರೋಗ್ಯವಾಗಿದ್ದಾರೆ. ತಜ್ಞ ವೈದ್ಯರ ಸಲಹೆ ಮೇರೆಗೆ ಆರೋಗ್ಯ ಕವಚ ಸಿಬ್ಬಂದಿಯೇ ಹೆರಿಗೆ ಮಾಡಿಸಿರುವುದು ಪ್ರಶಂಸನೀಯವಾಗಿದೆ.

    ಗ್ರಾಮೀಣ ಪ್ರದೇಶದಲ್ಲಿ ದೂರದ ಆಸ್ಪತ್ರೆಗೆ ಗರ್ಭಿಣಿಯರನ್ನ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಗರ್ಭಿಣಿಗೆ ತೀವ್ರ ನೋವು ಕಾಣಸಿಕೊಂಡ ಸಂದರ್ಭದಲ್ಲಿ ಮಗು ಮತ್ತು ತಾಯಿಯ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಕವಚ ಸಿಬ್ಬಂದಿ ಗರ್ಭಿಣಿಯರ ಕುಟುಂಬಸ್ಥರ ಸಹಾಯದಿಂದ ಅಂಬುಲೆನ್ಸ್ ನಲ್ಲಿ ಹೆರಿಗೆ ಮಾಡಿಸುತ್ತಾರೆ. ರಾಜ್ಯದಲ್ಲಿ ಆರೋಗ್ಯ ಕವಚದಡಿ ಸರಿ ಸುಮಾರು 714 ಅಂಬುಲೆನ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 3,500 ಶುಶ್ರೂಷಕರು ಮತ್ತು ಡ್ರೈವರ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 23 ಅಂಬುಲೆನ್ಸ್ ಗಳಿದ್ದು, 90 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

    ಆದ್ರೆ ಅಂಬುಲೆನ್ಸ್‍ನಲ್ಲೆ ಹೆರಿಗೆಗಳು ಆಗುವುದು ಅಷ್ಟು ಸುರಕ್ಷಿತವಲ್ಲ ಈ ಕುರಿತು ಸರ್ಕಾರ ಹೆಚ್ಚು ಗಮನಹರಿಸಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಕವಚ ಯೋಜನೆಯ ಅಂಬುಲೆನ್ಸ್ ಗಳು ಸಮಯಕ್ಕೆ ಲಭ್ಯವಾಗುತ್ತಿದ್ದರೂ ಹೆರಿಗೆಗಳು ಮಾರ್ಗ ಮಧ್ಯದಲ್ಲಿ ಆಗುತ್ತಿವೆ. ಹೀಗಾಗಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಕಡೆ ಸರ್ಕಾರ ಹೆಚ್ಚು ಒತ್ತುಕೊಡಬೇಕಿದೆ.

  • ಬೆಂಗಳೂರಿಗೆ ಬರುವಾಗ ದಾರಿ ಮಧ್ಯೆ ವಿಮಾನದಲ್ಲಿ ಯಶಸ್ವಿ ಹೆರಿಗೆ

    ಬೆಂಗಳೂರಿಗೆ ಬರುವಾಗ ದಾರಿ ಮಧ್ಯೆ ವಿಮಾನದಲ್ಲಿ ಯಶಸ್ವಿ ಹೆರಿಗೆ

    ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಗರ್ಭಿಣಿಯೊಬ್ಬರು ವಿಮಾನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಇಂದು ಸಂಜೆ ದೆಹಲಿಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಇಂಡಿಗೋ ವಿಮಾನದಲ್ಲಿ ಗರ್ಭಿಣಿ ಹತ್ತಿದ್ದರು. ದಾರಿ ಮಧ್ಯೆ ಅವರಿಗೆ ಹೆರಿಗೆ ನೋವಾಗಿದೆ.

    ಈ ವೇಳೆ ವಿಮಾನದಲ್ಲಿ ಪ್ರಸೂತಿ ತಜ್ಞೆ ಬೆಂಗಳೂರಿನ ಕ್ಲೌಡ್‌ ನೈನ್‌ ಆಸ್ಪತ್ರೆಯ ಡಾ. ಶೈಲಜಾ ವಲ್ಲಭನಿ ಪ್ರಯಾಣಿಸುತ್ತಿದ್ದರು. ಹೆರಿಗೆ ನೋವಾಗುತ್ತಿದ್ದಂತೆ ಇಂಡಿಗೋ ಸಿಬ್ಬಂದಿ ಸಹಕಾರದಿಂದ ಡಾ. ಶೈಲಜಾ ಅವರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

    ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆ ಅಂಬುಲೆನ್ಸ್‌ ಸಿದ್ಧವಾಗಿ ನಿಂತಿತ್ತು. ಅಂಬುಲೆನ್ಸ್‌ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು.

    ಸಾಮಾಜಿಕ ಜಾಲತಾಣದಲ್ಲಿ ಈಗ ಪ್ರಯಾಣಿಕರು ಈ ವಿಚಾರವನ್ನು ಹಂಚಿಕೊಂಡು ವೈದ್ಯರಿಗೆ ಮತ್ತು ಇಂಡಿಗೋ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಆಸ್ಪತ್ರೆ ಗೇಟ್ ಮುಂದೆ ಮಧ್ಯರಾತ್ರಿ ಗರ್ಭಿಣಿ ನರಳಾಟ – ನಡುರಸ್ತೆಯಲ್ಲೇ ಹೆರಿಗೆ

    ಆಸ್ಪತ್ರೆ ಗೇಟ್ ಮುಂದೆ ಮಧ್ಯರಾತ್ರಿ ಗರ್ಭಿಣಿ ನರಳಾಟ – ನಡುರಸ್ತೆಯಲ್ಲೇ ಹೆರಿಗೆ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಧ್ಯರಾತ್ರಿ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಚಿಕಿತ್ಸೆ ಸಿಗದೆ ತುಂಬು ಗರ್ಭಿಣಿ ನಡುರಾತ್ರಿ ನರಕಯಾತನೆ ಅನುಭವಿಸಿದ ಘಟನೆ ಬೆಂಗಳೂರಿನ ಸಿಂಗಸಂದ್ರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

    ಸರ್ಕಾರಿ ಆಸ್ಪತ್ರೆಯ ಡೋರ್ ಕ್ಲೋಸ್ ಮಾಡಿ ಕ್ವಾಟ್ರರ್ಸ್ ನಲ್ಲೇ ವೈದ್ಯರು ಜಿಂಗಲಾಲ ಮಾಡಿದ್ದಾರೆ. ಕರ್ತವ್ಯಕ್ಕೆ ಚಕ್ಕರ್ ಹೊಡೆದು ಆಸ್ಪತ್ರೆಯನ್ನ ಕ್ಲೋಸ್ ಮಾಡಿಕೊಂಡು ವೈದ್ಯರು ಹೋಗಿದ್ದಾರೆ. ಈ ಮೂಲಕ ಕರ್ತವ್ಯ ಪ್ರಜ್ಞೆ ಮರೆತಿದ್ದಾರೆ.

    ಇತ್ತ ಸರ್ಕಾರಿ ಆಸ್ಪತ್ರೆ ಮುಂದೆ ಮಧ್ಯರಾತ್ರಿ ಒಂದು ಗಂಟೆ ಕಾಲ ನರಳಾಡಿದ ಗರ್ಭಿಣಿಗೆ ವಿಪರೀತ ಹೆರಿಗೆ ನೋವುಂಟಾಗಿ ನಡುರಸ್ತೆಯಲ್ಲೇ ಹೆರಿಗೆಯಾಗಿದೆ. ತಾಯಿ-ಮಗುವಿನ ಕರುಳ ಬಳ್ಳಿ ಬಿಡಿಸದೆ ರಕ್ತಸ್ರಾವದ ಮಧ್ಯೆಯೇ ಮತ್ತೊಂದು ಆಸ್ಪತ್ರೆಗೆ ಕುಟುಂಬಸ್ಥರು ಕರೆದೊಯ್ದಿದ್ದಾರೆ.

    ಆಸ್ಪತ್ರೆಯ ಪಕ್ಕದಲ್ಲಿದ್ದ ಅಂಬುಲೆನ್ಸ್ ಡ್ರೈವರ್ ಗಳು ತಾಯಿ- ಮಗುವನ್ನು ಮತ್ತೊಂದು ಆಸ್ಪತ್ರೆಗೆ ಕಳುಹಿಸಿಕೊಡಲು ಸಹಾಯ ಮಾಡಿದ್ದಾರೆ. ಈ ಮೂಲಕ ಇಬ್ಬರನ್ನು ರಕ್ಷಿಸಲಾಗಿದೆ.