Tag: deli

  • ದೆಹಲಿಯ ರೈತ ಹೋರಾಟದ ಬಗ್ಗೆ ಜಾಗೃತಿಗೊಳಿಸಿ ಅಕ್ಟೋಬರ್ 2ರಿಂದ ಕಿಸಾನ್ ಸ್ವರಾಜ್ ಯಾತ್ರೆ

    ದೆಹಲಿಯ ರೈತ ಹೋರಾಟದ ಬಗ್ಗೆ ಜಾಗೃತಿಗೊಳಿಸಿ ಅಕ್ಟೋಬರ್ 2ರಿಂದ ಕಿಸಾನ್ ಸ್ವರಾಜ್ ಯಾತ್ರೆ

    – ರೈತ ಮುಖಂಡರ ಎರಡನೇ ದಿನದ ಸಭೆಯಲ್ಲಿ ನಿರ್ಣಯ

    ಚೆನ್ನೈ: ಕೇಂದ್ರ ಕೃಷಿ ಕಾಯ್ದೆಗಳ ಮಾರಕ ಪರಿಣಾಮಗಳು ಮತ್ತು ಎಂಎಸ್‍ಪಿ ಶಾಸನಬದ್ಧ ಖಾತ್ರಿ ಬೆಲೆ ಆಗಬೇಕು ಎನ್ನುವ ಬೇಡಿಕೆ ಈಡೇರಿಕೆಗಾಗಿ ರೈತ ಜಾಗೃತಿ ದೇಶವ್ಯಾಪಿ, ಕಿಸಾನ್ ಸ್ವರಾಜ್ ಯಾತ್ರೆ ಅಕ್ಟೋಬರ್ 2 ಗಾಂಧೀಜಯಂತಿಯ ದಿನದಿಂದ ಆರಂಭಿಸುವುದಾಗಿ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ರೈತ ಮುಖಂಡರ ಎರಡನೇ ದಿನದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

    ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ದೇಶಾದ್ಯಂತ ರೈತರನ್ನು ಜಾಗೃತಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ತರಲು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಅಕ್ಟೋಬರ್ 2 ಗಾಂಧಿ ಜಯಂತಿ ದಿನದಂದು ಕಿಸಾನ್ ಸ್ವರಾಜ್ ಯಾತ್ರೆ ನಡೆಸಲು ರಾಷ್ಟ್ರೀಯ ರೈತ ಮುಖಂಡರ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ನಿರ್ಣಯವನ್ನು ಸಂಯುಕ್ತ ಕಿಸಾನ್ ಮೋರ್ಚಾ ಸಮಿತಿಯ ಮುಂದೆ ಮಂಡಿಸಿ ಕಿಸಾನ್ ಯಾತ್ರೆಯ ಮಾರ್ಗಸೂಚಿ ಕಾರ್ಯಕ್ರಮಗಳನ್ನು ಯೋಚಿಸಲು ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಹಾಗೂ ಯದುವೀರ ಸಿಂಗ್ ರವರಿಗೆ ಜವಾಬ್ದಾರಿ ನೀಡಲಾಯಿತು. ಇದನ್ನೂ ಓದಿ: ದೇಶವ್ಯಾಪಿ ಹೋರಾಟ ನಡೆಸಲು ರೈತರ ಸಭೆ

    2 ದಿನ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ರೈತ ಮುಖಂಡರ ಸಭೆಯಲ್ಲಿ ದೇಶವ್ಯಾಪಿ ರೈತರ ಸಮಸ್ಯೆ, ನೀರು ಬಳಕೆ ಪರಿಸರ ಸುರಕ್ಷತೆ ಸಮಸ್ಯೆ 9ತಿಂಗಳ ರೈತರ ಹೋರಾಟದ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು ನಿರ್ಣಯವನ್ನು ರಾಷ್ಟ್ರೀಯ ಜಲತಜ್ಞ ರಾಜೇಂದ್ರಸಿಂಗ್ ಸಭೆಯಲ್ಲಿ ಮಂಡಿಸಿದರು.

    ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ದಿಕ್ಕುಗಳಿಂದ ಯಾತ್ರೆ ಆರಂಭಿಸಿ, ಯಾತ್ರೆ ದೆಹಲಿಯಲ್ಲಿ ಸಂಗಮವಾಗಲು ಯೋಚಿಸುತ್ತಿದ್ದೇವೆ. ದೇಶಾದ್ಯಂತ ಆರೂವರೆ ಲಕ್ಷ ಹಳ್ಳಿಗಳಿವೆ. ಪ್ರತಿ ಹಳ್ಳಿಯಿಂದ ಒಬ್ಬರು ಬಂದರೆ ಆರೂವರೆ ಲಕ್ಷ ಜನ ದೆಹಲಿಯಲ್ಲಿ ಸಂಗಮವಾಗಬಹುದು ಎಂಬುದನ್ನು ಅರಿತುಕೊಳ್ಳಬೇಕು ಎಂದು ರಾಕೇಶ್ ಟಿಕಾಯತ್ ತಿಳಿಸಿದರು. ಇದನ್ನೂ ಓದಿ: ಇನ್ಫಿ ಸಿಇಒ ಸಲೀಲ್ ಪರೇಖ್‍ಗೆ ಹಣಕಾಸು ಸಚಿವಾಲಯದಿಂದ ಸಮನ್ಸ್

    ತಮಿಳುನಾಡಿನ ಜಂಟಿ ರೈತ ಸಂಘಟನೆಗಳ ಒಕ್ಕೂಟದ ಪರವಾಗಿ ಗುರುಸ್ವಾಮಿ, ಸಭೆಯಲ್ಲಿ ಭಾಗವಹಿಸಿದ ಎಲ್ಲಾ ರಾಷ್ಟ್ರೀಯ ರೈತ ಮುಖಂಡರಿಗೆ ಧನ್ಯವಾದ ಸಮರ್ಪಿಸಿದರು. ಕರ್ನಾಟಕ ರೈತ ಸಂಘಟನೆಗಳ ಮುಖಂಡರಾದ ಕೆ.ಟಿ ಗಂಗಾಧರ್, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಚುಕ್ಕಿನಂಜುಂಡಸ್ವಾಮಿ ಮುಂತಾದವರಿದ್ದರು.

  • ರೈತನಾಯಕ ರಾಕೇಶ್ ಟಿಕಾಯತ್ 80 ಕೋಟಿ ಆಸ್ತಿಯ ಒಡೆಯ

    ರೈತನಾಯಕ ರಾಕೇಶ್ ಟಿಕಾಯತ್ 80 ಕೋಟಿ ಆಸ್ತಿಯ ಒಡೆಯ

    – ಆರಂಭದಲ್ಲಿ ದೆಹಲಿ ಕಾನ್‍ಸ್ಟೇಬಲ್ ಹುದ್ದೆ
    – ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ

    ನವದೆಹಲಿ: ಕೃಷಿ ಕಾಯ್ದೆಯ ವಿರುದ್ಧ ಉತ್ತರ ಪ್ರದೇಶದ ಘಾಜಿಪುರ ಗಡಿಯಲ್ಲಿ ಹೋರಾಟ ಮಾಡುತ್ತಿರುವ ಭಾರತ್ ಕಿಸಾನ್ ಯೂನಿಯನ್ ಸಂಘಟನೆಯ ನಾಯಕನಾಗಿ ಗುರುತಿಸಿಕೊಂಡಿರುವ ರಾಕೇಶ್ ಟಿಕಾಯತ್ 80 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ವಿಚಾರ ಈಗ ಪ್ರಕಟವಾಗಿದೆ.

    ಕಳೆದ ಎರಡು ತಿಂಗಳಿನಿಂದ 40 ಕ್ಕೂ ಹೆಚ್ಚು ಸಂಘಟನೆಗಳು ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ಪಟ್ಟು ಬಿಡದೆ ಹೋರಾಟ ನಡೆಸುತ್ತಿದೆ. ಇದರೊಂದಿಗೆ ಜನವರಿ 26ರಂದು ನಡೆದ ಹಿಂಸಾಚಾರದ ಬಳಿಕ ಕೆಲವು ರೈತ ಸಂಘಟನೆಗಳು ಹೋರಾಟದಿಂದ ಹಿಂದೆ ಸರಿದರೆ ಇತ್ತ ರಾಕೇಶ್ ಟಿಕಾಯತ್ ಮುಂದಾಳತ್ವದಲ್ಲಿ ಬಿಕೆಯು ಪಟ್ಟು ಬಿಡದೇ ದಿನೇ ದಿನೇ ವಿಭಿನ್ನರೀತಿಯ ಪ್ರತಿಭಟನೆ ಮಾಡುತ್ತಿದೆ.

    ಹೊಸ ಹೊಸ ಪ್ರತಿಭಟನೆಯ ಮೂಲಕ ಬಾರಿ ಚರ್ಚೆಗೆ ಕಾರಣರಾಗಿರುವ ರೈತ ಸಂಘದ ನಾಯಕನಾಗಿ ಗುರುತಿಸಿಕೊಂಡಿರುವ ಟಿಕಾಯತ್ ಅವರ ಆಸ್ತಿ ವಿವರ ಇದೀಗ ಬಾರಿ ಸದ್ದು ಮಾಡುತ್ತಿದೆ. ಮಾಧ್ಯಮವೊಂದು ವರದಿ ಮಾಡಿರುವಂತೆ ಟಿಕಾಯತ್ ಬರೋಬ್ಬರಿ 80 ಕೋಟಿ ಒಡೆಯನಾಗಿದ್ದು, ಉತ್ತರ ಪ್ರದೇಶ, ಮಹಾರಾಷ್ಟ್ರ, ದುಬೈ, ಉತ್ತರ್‍ಖಾಂಡ್, ದೆಹಲಿ ಸೇರಿದಂತೆ, ಪ್ರಮುಖ 13 ನಗರಗಳಲ್ಲಿ ಕೋಟಿ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

    ಮುಜಾಫರನಗರ, ಲಲಿತ್‍ಪುರ, ಝಾನ್ಸಿ, ಲಖಿಮ್‍ಪುರ ಖೇರಿ, ಬಿಜ್ನೂರ್, ಬದನ್, ಡೆಲ್ಲಿ, ನೊಯ್ಡಾ, ಘಾಜಿಪುರ, ಡೆಹ್ರಾಡೊನ್, ರೊರ್ಕೀ, ಹರಿದ್ವಾರ ಮತ್ತು ಮುಂಬೈನಲ್ಲಿ ಟಿಕಾಯತ್ ತಮ್ಮ ಆಸ್ತಿಯನ್ನು ಹೊಂದಿದ್ದಾರೆ.

    ಟಿಕಾಯತ್ ರೈತ ನಾಯಕನಾಗವುದರೊಂದಿಗೆ ಉದ್ಯಮಿ ಆಗಿದ್ದಾರೆ. ಪೆಟ್ರೋಲ್ ಬಂಕ್, ಶೋರೂಮ್ ಸೇರಿದಂತೆ ಅನೇಕ ಉದ್ಯಮಗಳನ್ನು ನಡೆಸುತ್ತಿದ್ದಾರೆ.

    ಮೂಲತಃ ಉತ್ತರ ಪ್ರದೇಶದ ಮುಜಾಫರನಗರದ ಸಿಸಾವುಲಿ ಪಟ್ಟಣದಲ್ಲಿ ಹುಟ್ಟಿದ ರಾಕೇಶ್ ಟಿಕಾಯತ್, ರೈತ ಹೋರಾಟ ಕುಟುಂಬದ ಕುಡಿಯಾಗಿದ್ದಾರೆ. ಬಿಕೆಯು ಸಹ ಸಂಸ್ಥಾಪಕ ಮಹೇಂದ್ರ ಸಿಂಗ್ ಟಿಕಾಯತ್ ಅವರ ಮಗನಾಗಿ ಜನಿಸಿ ಇದೀಗ ಬಿಕೆಯು ವಕ್ತಾರರಾಗಿ ರೈತ ಹೋರಾಟವನ್ನು ಮಾಡುತ್ತಿದ್ದರೆ, ಇವರ ಹಿರಿಯಣ್ಣ ನರೇಶ್ ಟಿಕಾಯತ್ ಬಿಕೆಯುನ ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ರಾಕೇಶ್ ಟಿಕಾಯತ್‍ಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ ಅವರೂ ಕೂಡ ರೈತರ ಪ್ರತಿಭಟನೆಗೆ ಸಹಕಾರ ಮಾಡುತ್ತಿದ್ದು ಫೆಬ್ರವರಿ 8ರಂದು ಮೆಲ್ಬೋರ್ನ್‍ನಲ್ಲಿ ನಡೆದ ರೈತ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು ಎಂದು ವರದಿಯಾಗಿದೆ.

    ರಾಕೇಶ್ ಟಿಕಾಯತ್ ಮಾಸ್ಟರ್ ಡಿಗ್ರಿ ಪದವಿಧರರಾಗಿದ್ದು. ಮೀರತ್ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದು 1992 ರಲ್ಲಿ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕೆಲಸ ಮಾಡಿ ನಂತರ ಸಬ್ ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ವೃತ್ತಿ ತೊರೆದು ಬಿಕೆಯು ಸಂಘಟನೆಯಲ್ಲಿ ತೊಡಗಿಕೊಂಡು 2018ರಿಂದ ವಕ್ತಾರರಾಗಿ ರೈತರ ಪರ ಕೆಲಸ ಮಾಡುತ್ತಿದ್ದರು.

    ಈ ಹಿಂದೆ ಹರಿದ್ವಾರ, ಉತ್ತರಖಾಂಡ್, ದೆಹಲಿ ಕಿಸಾನ್ ಕ್ರಾಂತಿಯಾತ್ರೆಯಾ ನಾಯಕರಾಗಿ ಗುರುತಿಸಿಕೊಂಡಿದ್ದ ಟಿಕಾಯತ್, 2007ರಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಖತಾವುಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಆರ್‍ ಜೆ ಡಿ  ಪಕ್ಷದಿಂದ ಅಮ್ರೋಹ ಕ್ಷೇತ್ರದಿಂದ ಆಕಾಡಕ್ಕೆ ಇಳಿದಿದ್ದರು.

    ಟಿಕಾಯತ್ ಇಷ್ಟೆಲ್ಲ ಸಾಧನೆಯೊಂದಿಗೆ ಜೆಂಕೆಯೊಂದನ್ನು ಸೆರೆ ಹಿಡಿದ ಆರೋಪವನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ಕಾನೂನಿನ ಪ್ರಕಾರ ಜಿಂಕೆಯನ್ನು ಸೆರೆ ಹಿಡಿದರೆ 7 ವರ್ಷ ಜೈಲು ಶಿಕ್ಷೆ, 25 ಸಾವಿರ ದಂಡವನ್ನೂ ಕಟ್ಟಬೇಕಾಗುತ್ತದೆ.

  • ಭಾರತದಲ್ಲಿ 93 ರೂ., ಶ್ರೀಲಂಕಾದಲ್ಲಿ 51 ರೂ. – ಪೆಟ್ರೋಲ್ ಬೆಲೆ ಏರಿಕೆಗೆ ಸ್ವಾಮಿ ಟೀಕೆ

    ಭಾರತದಲ್ಲಿ 93 ರೂ., ಶ್ರೀಲಂಕಾದಲ್ಲಿ 51 ರೂ. – ಪೆಟ್ರೋಲ್ ಬೆಲೆ ಏರಿಕೆಗೆ ಸ್ವಾಮಿ ಟೀಕೆ

    ನವದೆಹಲಿ: ಸ್ವಪಕ್ಷೀಯರು, ಎದುರಾಳಿಗಳು ಎನ್ನದೇ ತಮಗೆ ಸರಿ ಎನಿಸಿದ ವಿಷಯದ ಕುರಿತು ಧ್ವನಿ ಎತ್ತುವ ರಾಜ್ಯಸಭಾ ಸದಸ್ಯ ವಿ. ಸುಬ್ರಮಣಿಯನ್ ಸ್ವಾಮಿ, ಇದೀಗ ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ಕುರಿತು ತಮ್ಮದೇ ಶೈಲಿಯಲ್ಲಿ ಪ್ರಶ್ನೆ ಮಾಡಿದ್ದಾರೆ.

     

    ಕೇಂದ್ರ ಸರ್ಕಾರ ಪ್ರತಿದಿನ ತೈಲ ಬೆಲೆ ಹೆಚ್ಚಳ ಮಾಡುತ್ತಿದ್ದರೆ. ಇತ್ತ ಸುಬ್ರಮಣಿಯನ್ ಸ್ವಾಮಿ ತೈಲ ಬೆಲೆ ಹೆಚ್ಚಳ ಕುರಿತು ತಮ್ಮದೇ ಶೈಲಿಯಲ್ಲಿ ಕೇಂದ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ. ಶ್ರೀರಾಮನ ತವರು ಭಾರತದಲ್ಲಿ ಲೀಟರ್ ಪೆಟ್ರೋಲ್ ದರ 93 ರೂಪಾಯಿ, ಸೀತೆಯ ತವರು ನೇಪಾಳದಲ್ಲಿ ಲೀಟರ್ ಪೆಟ್ರೋಲ್ ಬೆಲೆ 53 ರೂಪಾಯಿ, ರಾವಣನ ಲಂಕೆಯಲ್ಲಿ 51 ರೂಪಾಯಿ ಎಂದು ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.

    ಸ್ವಾಮಿಯ ಈ ಟ್ವೀಟ್‍ನಿಂದ ಕೆರಳಿರುವ ನೆಟ್ಟಿಗರು ಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಲಂಕಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 161 ರೂಪಾಯಿಯಿದೆ. ನೇಪಾಳದಲ್ಲಿ 110 ರೂಪಾಯಿ ಇದೆ. ವಾಸ್ತವಾಂಶ ನೋಡಿ ಟ್ವೀಟ್ ಮಾಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

  • ದೆಹಲಿ ಪ್ರತಿಭಟನೆ – ಟ್ರ್ಯಾಕ್ಟರ್ ಪಲ್ಟಿಯಾಗಿ ಮೃತಪಟ್ಟವನು ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿ

    ದೆಹಲಿ ಪ್ರತಿಭಟನೆ – ಟ್ರ್ಯಾಕ್ಟರ್ ಪಲ್ಟಿಯಾಗಿ ಮೃತಪಟ್ಟವನು ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿ

    – ಪ್ರತಿಭಟನೆಯಲ್ಲಿ ಭಾಗಿಯಾದ ವಿಚಾರ ಮನೆಯವರಿಗೆ ಗೊತ್ತಿಲ್ಲ

    ನವದೆಹಲಿ: ಗಣರಾಜೋತ್ಸವ ದಿನದಂದು ದೆಹಲಿಯಲ್ಲಿ ರೈತ ಹೋರಾಟದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ವ್ಯಕ್ತಿ ಆಸ್ಟ್ರೇಲಿಯಾದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

     

    ಮೃತ ಯುವಕನನ್ನು ಉತ್ತರಪ್ರದೇಶ ರಾಂಪೂರಿನ ನರ್ವೀತ್ ಸಿಂಗ್(27) ಎಂದು ಗುರುತಿಸಲಾಗಿದೆ. ಈತ ಆಸ್ಟ್ರೇಲಿಯಾದ ಕಾಲೇಜು ಒಂದರಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದು 3 ದಿನಗಳ ಹಿಂದೆ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿದ್ದ.

    ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದಿಂದ ಮನೆಗೆ ಬಂದಿದ್ದ ನರ್ವೀತ್ ಏಕಾಏಕಿ 3 ದಿನಗಳ ಹಿಂದೆ ರೈತರ ಪ್ರತಿಭಟನೆಗೆ ಪಾಲ್ಗೊಳ್ಳಲು ದೆಹಲಿಗೆ ಬಂದಿದ್ದ. ಮಂಗಳವಾರ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸಿದ ರ್ಯಾಲಿಯಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಈತ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗುದ್ದಿ ಮುಂದಕ್ಕೆ ಹೋಗಲು ಯತ್ನಿಸುತ್ತಿದ್ದ. ಆದರೆ ಈ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿ ಮೃತಪಟ್ಟಿದ್ದಾನೆ.

    ನರ್ವೀತ್ ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾದ ಮಾಹಿತಿ ಅವರ ಕುಟುಂಬದವರಿಗೆ ತಿಳಿದಿರಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ರೈತರು ಮಾತ್ರ ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿದ ಕಾರಣ ಟ್ರ್ಯಾಕ್ಟರ್ ನ  ನಿಯಂತ್ರಣ ಕಳೆದುಕೊಂಡು ನರ್ವೀತ್ ಸಿಂಗ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ

  • ಮೈದಾನ ಮಾತ್ರವಲ್ಲ ಹೊರಗಡೆಯೂ ಟೀಂ ಇಂಡಿಯಾವನ್ನು ಕೆಣಕಿದ್ದ ಆಸ್ಟ್ರೇಲಿಯಾ

    ಮೈದಾನ ಮಾತ್ರವಲ್ಲ ಹೊರಗಡೆಯೂ ಟೀಂ ಇಂಡಿಯಾವನ್ನು ಕೆಣಕಿದ್ದ ಆಸ್ಟ್ರೇಲಿಯಾ

    – ಕಹಿ ಘಟನೆಯನ್ನು ಹಂಚಿಕೊಂಡ ಅಶ್ವಿನ್
    – ಬಯೋ ಬಬಲ್‍ನಲ್ಲಿದ್ದರೂ ದೂರವಿಟ್ಟಿದ್ದ ಆಸೀಸ್

    ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದ ವೇಳೆ ಆಸಿಸ್ ಆಟಗಾರರೊಂದಿಗೆ ಲಿಫ್ಟ್‍ನಲ್ಲೂ ಕೂಡ ಜೊತೆಯಾಗಿ ಪ್ರಯಾಣಿಸಲು ಅವಕಾಶ ಇರಲಿಲ್ಲ ಎಂಬ ಕಹಿ ಘಟನೆಯೊಂದನ್ನು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಿಚ್ಚಿಟ್ಟಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಭಾರತದ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಜೊತೆ ಈ ಮಾತನ್ನು ಅಶ್ವಿನ್ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಆಸ್ಟ್ರೇಲಿಯಾ ಆಟಗಾರರೂ ಮತ್ತು ಅಲ್ಲಿನ ಅಭಿಮಾನಿಗಳು ಪದೇ ಪದೇ ಭಾರತದ ಆಟಗಾರೊಂದಿಗೆ ಒಂದಲ್ಲ ಒಂದು ಕಾರಣಗಳಿಂದ ಕೆಣಕುತ್ತಿದ್ದರು. ಇದೇ ರೀತಿ ಆಸ್ಟ್ರೇಲಿಯಾ ಮತ್ತು ಭಾರತ ತಂಡದ ಎಲ್ಲಾ ಸದಸ್ಯರು ಸರಣಿಯಲ್ಲಿ ಭಾಗವಹಿಸುವಾಗ ಕೊರೊನಾ ಮುನ್ನೆಚ್ಚರಿಕೆಯಾಗಿ ಬಯೋ ಬಬಲ್‍ನಲ್ಲಿದ್ದರು. ಆದರೂ ಕೂಡ ಆಸ್ಟ್ರೇಲಿಯಾ ತಂಡ ಭಾರತೀಯ ಆಟಗಾರರನ್ನು ತುಂಬಾ ದೂರವಿಟ್ಟಿತ್ತು. ನಾವು ಅವರೊಂದಿಗೆ ಲಿಫ್ಟ್‍ನಲ್ಲಿ ಕೂಡ ಜೊತೆಯಾಗಿ ಹೊಗಲು ಅವಕಾಶ ಕೊಡುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇದಕ್ಕೆ ಉತ್ತರಿಸಿದ ಆರ್ ಶ್ರೀಧರ್ ನಾವು ಒಂದೇ ಬಯೋ ಬಬಲ್‍ನಲ್ಲಿದ್ದರೂ ಕೂಡ ಅವರು ನಮ್ಮಿಂದ ಆ ರೀತಿಯ ಅಂತರ ಕಾಯ್ದುಕೊಂಡಿರುವುದು ಅರಗಿಸಿಕೊಳ್ಳಲು ಆಗಿರಲಿಲ್ಲ. ಅವರು ಆ ರೀತಿ ನಮ್ಮನ್ನು ನೋಡಿಕೊಳ್ಳಬಾರದಿತ್ತು ಎಂದು ಅಭಿಪ್ರಾಯಪಟ್ಟರು.

    ಬ್ರಿಸ್ಬೇನ್‍ನಲ್ಲಿ ಕೊನೆಯ ಪಂದ್ಯವಾಡಲು ಭಾರತ ಹಾಗೂ ಆಸ್ಟ್ರೇಲಿಯಾ ತಂಡ ಹೊಟೇಲ್ ಒಂದರಲ್ಲಿ ಉಳಿದುಕೊಂಡಿತ್ತು. ಈ ವೇಳೆ ಈ ಕಹಿ ಘಟನೆ ನಡೆದಿದೆ. ಆದರೂ ಈ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು 2-1 ಅಂತರದಲ್ಲಿ ಸರಣಿ ಗೆದ್ದು ಐತಿಹಾಸಿಕ ಸಾಧನೆಯೊಂದಿಗೆ ಟೀಂ ಇಂಡಿಯಾ ತವರಿಗೆ ಮರಳಿದೆ.

  • ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಅಡ್ಮಿಶನ್ ಆರಂಭ

    ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಅಡ್ಮಿಶನ್ ಆರಂಭ

    ನವದೆಹಲಿ: ಕೊರೊನಾ ಆತಂಕದ ನಡುವೆಯೇ ದೆಹಲಿಯ ಆಪ್ ಸರ್ಕಾರ ಸರ್ಕಾರಿ ಶಾಲೆಗಳ ನೋಂದಣಿಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಸಂಬಂಧ ಸುತ್ತೋಲೆಯನ್ನು ಸರ್ಕಾರ ಹೊರಡಿಸಿದೆ.

    ಕೇವಲ ಆರು ಮತ್ತು ಒಂಬತ್ತನೇ ತರಗತಿಗಳಿಗೆ ನೋಂದಣಿ ಆರಂಭವಾಗಿದ್ದು, ಎಲ್ಲ ಪ್ರಕ್ರಿಯೆ ಆನ್‍ಲೈನ್ ಮೂಲಕ ನಡೆಯಲಿದೆ. ಆರು ಮತ್ತು ಒಂಬತ್ತನೇ ತರಗತಿಗೆ ಅಡ್ಮಿಷನ್ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುವ ಕೋಡ್ ಜುಲೈ 17ರಿಂದ ಜನರೇಟ್ ಮಾಡಲಾಗುವುದು.

    ಪೋಷಕರು ಶಾಲೆಗೆ ಬಂದು ಮಕ್ಕಳ ದಾಖಲಾತಿ ಪಡೆಯಲು ಸರ್ಕಾರ ನಿರ್ಬಂಧ ಹೇರಿದೆ. ಎಲ್ಲ ಪ್ರಕ್ರಿಯೆಗಳು ಆನ್‍ಲೈನ್ ಮೂಲಕವೇ ನಡೆಯಲಿದೆ. ಪೋಷಕರು ಶಾಲೆಗಳಿಗೆ ಬಂದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲ್ಲ. ಈ ಹಿನ್ನೆಲೆ ಸರ್ಕಾರದ ಈ ಆದೇಶ ಹೊರಡಿಸಿದೆ. ಆದ್ರೆ ಶಾಲೆಗಳು ಯಾವಾಗ ಆರಂಭವಾಗುತ್ತೆ ಅನ್ನೋದನ್ನ ಸರ್ಕಾರ ತಿಳಿಸಿಲ್ಲ.