Tag: Delhi violence

  • ದೆಹಲಿಯಲ್ಲಿ ಬುಲ್ಡೋಜರ್‌ ಕಾರ್ಯಾಚರಣೆಗೆ ಸುಪ್ರೀಂ ಬ್ರೇಕ್‌

    ದೆಹಲಿಯಲ್ಲಿ ಬುಲ್ಡೋಜರ್‌ ಕಾರ್ಯಾಚರಣೆಗೆ ಸುಪ್ರೀಂ ಬ್ರೇಕ್‌

    ನವದೆಹಲಿ: ಜಹಾಂಗೀರ್‌ಪುರಿಯಲ್ಲಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿದ್ದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ.

    ಕಳೆದ ಶನಿವಾರ ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಉಂಟಾದ ರಾಜಧಾನಿ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಗಲಭೆಕೋರರಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಬಿಸಿ ಮುಟ್ಟಿಸಲು ಬಿಜೆಪಿ ನೇತೃತ್ವದ ಪಾಲಿಕೆ ಮುಂದಾಗಿತ್ತು. ಪೊಲೀಸ್‌ ಬಿಗಿ ಬಂದೋಬಸ್ತ್‌ನೊಂದಿಗೆ ಕಾರ್ಪೊರೇಷನ್‌ ನೆಲಸಮ ಕಾರ್ಯಾಚರಣೆಯನ್ನು ಚುರುಕುಗೊಳಿಸಿತ್ತು. ಆದರೆ ಅದಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಇದನ್ನೂ ಓದಿ: ದೆಹಲಿಯಲ್ಲಿ ಜೆಸಿಬಿ ಘರ್ಜನೆ- ಜಹಾಂಗೀರ್‌ಪುರಿಯಲ್ಲಿ ಅಕ್ರಮ ಆಸ್ತಿಗಳ ಧ್ವಂಸ

    SUPREME COURT

    ಹಿರಿಯ ವಕೀಲರಾದ ದುಷ್ಯಂತ್‌ ದಾವೆ, ಕಪಿಲ್‌ ಸಿಬಲ್‌, ಪಿ.ವಿ.ಸುರೇಂದ್ರನಾಥ್‌ ಹಾಗೂ ಪ್ರಶಾಂತ್‌ ಭೂಷಣ್‌ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಜೆಐ ಎನ್.ವಿ.ರಮಣ ಅವರ ಮುಂದೆ ವಿಷಯ ಪ್ರಸ್ತಾಪಿಸಿದರು. ಗಲಭೆಪೀಡತ ಜಹಾಂಗೀರ್‌ಪುರಿಯಲ್ಲಿ ಪಾಲಿಕೆ ನಡೆಸುತ್ತಿರುವ ಕಾರ್ಯಾಚರಣೆ ಕಾನೂನುಬಾಹಿರವಾಗಿದೆ. ಈ ಸಂಬಂಧ ಯಾರಿಗೂ ಯಾವುದೇ ನೋಟಿಸ್‌ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

    ನಂತರ ಸಿಜೆಐ ರಮಣ ಅವರು, ಕಾರ್ಯಾಚರಣೆ ನಿಲ್ಲಿಸಿ ಯಥಾಸ್ಥಿತಿ ಕಾಪಾಡಬೇಕು ಎಂದು ಆದೇಶ ಹೊರಡಿಸಿದರು. ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ಕೋರ್ಟ್‌ ಆದೇಶ ಹೊರಬೀಳುತ್ತಿದ್ದಂತೆ ಪಾಲಿಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದನ್ನೂ ಓದಿ: ದೆಹಲಿಯಲ್ಲೂ ಪ್ರಾರಂಭವಾಯ್ತು ಬುಲ್ಡೋಜರ್ ಸದ್ದು

    ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಆರೋಪಿಗಳ ಆಸ್ತಿಗಳನ್ನು ಧ್ವಂಸಗೊಳಿಸಲು ಬುಲ್ಡೋಜರ್‌ಗಳನ್ನು ಬಳಸುವುದರ ವಿರುದ್ಧ ಜಮೀಯತ್ ಉಲಾಮಾ-ಇ-ಹಿಂದ್ ಸಲ್ಲಿಸಿದ ಮನವಿಯಲ್ಲಿ ಜಹಾಂಗೀರ್‌ಪುರಿ ಧ್ವಂಸ ಅಭಿಯಾನದ ವಿಷಯವನ್ನು ಉಲ್ಲೇಖಿಸಲಾಗಿತ್ತು.

    ಇತ್ತೀಚೆಗೆ ಹನುಮ ಜಯಂತಿ ವೇಳೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅತಿಕ್ರಮಣ ವಿರೋಧಿ ಅಭಿಯಾನ ಬುಧವಾರ ಬೆಳಗ್ಗೆ ಪೊಲೀಸ್ ಹಾಗೂ ಅರೆಸೇನಾ ಪಡೆಗಳ ನಿಯೋಜನೆಯಲ್ಲಿ ಪ್ರಾರಂಭವಾಗಿತ್ತು. ಬುಲ್ಡೋಜರ್ ಬಳಸಿ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ನಡೆದಿತ್ತು. ರಸ್ತೆ ಬದಿಯ ಆಹಾರ ಮಳಿಗೆಗಳು ಮತ್ತು ಅಂಗಡಿಗಳನ್ನು ಬುಲ್ಡೋಜರ್ ಮೂಲಕವಾಗಿ ಕೆಡವಲಾಗುತ್ತಿತ್ತು. ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸುಮಾರು 400 ಪೊಲೀಸರನ್ನು ಸ್ಥಳದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿತ್ತು.

  • ಟೂಲ್‍ಕಿಟ್ ತನಿಖೆ- ಪ್ರತಿಭಟನೆಗೆ ಕೆನಡಾ ಲಿಂಕ್, ರೈತ ನಾಯಕರ ಮೇಲೆ ಕಣ್ಣು

    ಟೂಲ್‍ಕಿಟ್ ತನಿಖೆ- ಪ್ರತಿಭಟನೆಗೆ ಕೆನಡಾ ಲಿಂಕ್, ರೈತ ನಾಯಕರ ಮೇಲೆ ಕಣ್ಣು

    – ಝೂಮ್ ಸಭೆಯಲ್ಲಿ ಪಾಲ್ಗೊಂಡಿದ್ದವರ ವಿವರ ಕೇಳಿದ ಪೊಲೀಸರು
    – ವಾಟ್ಸಪ್ ಗ್ರೂಪ್‍ಗೆ ಅಂತರಾಷ್ಟ್ರೀಯ ರೈತ ಪ್ರತಿಭಟನೆಯ ಹೆಸರು

    ನವದೆಹಲಿ: ದೆಹಲಿಯ ರೈತರ ದಂಗೆ ಹಾಗೂ ಕೆಂಪು ಕೋಟೆಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ರೈತರ ಪ್ರತಿಭಟನೆಗೆ ಕೆನಡಾ ಪ್ರಜೆಯ ಕುಮ್ಮಕ್ಕು ಇರುವುದು ತನಿಖೆ ವೇಳೆ ಪತ್ತೆಯಾಗಿದೆ.

    ದೆಹಲಿ ಪೊಲೀಸರು ಟೂಲ್‍ಕಿಟ್ ಕುರಿತು ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಆಘಾತಕಾರಿ ಮಾಹಿತಿ ಲಭ್ಯವಾಗುತ್ತಿದೆ. ಖಲಿಸ್ಥಾನಿ ಪರ ಸಂಘಟನೆ ಪೊಯೆಟಿಕ್ ಜಸ್ಟಿಸ್ ಫೌಂಡೇಶನ್(ಪಿಜೆಎಫ್) ಸಹ ಸಂಸ್ಥಾಪಕ ಮೋ ಧಲಿವಾಲ್  ಶಂತನು ಮುಲಿಕ್‌ ನನ್ನು ಸಂಪರ್ಕಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ ದೆಹಲಿ ಹೊರವಲಯದಲ್ಲಿ ರೈತರ ಪ್ರತಿಭಟನೆ ಹಾಗೂ ಆಂದೋಲನ ಪ್ರಾರಂಭವಾಗುತ್ತಿದ್ದಂತೆ ರೈತ ನಾಯಕರನ್ನು ಸಂಪರ್ಕಿಸಬೇಕು ಎಂದು ಕೇಳಿಕೊಂಡಿದ್ದ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿದೆ ಮಾಡಿದೆ.

     ಮುಂಬೈ ಮೂಲದ ವಕೀಲೆ ಹಾಗೂ ಹೋರಾಟಗಾರ್ತಿ ನಿಕಿತಾ ಜಾಕೋಬ್ ಜೊತೆ ಶಂತನು ನಿರಂತರ ಸಂಪರ್ಕ ಹೊಂದಿದ್ದ. ಟೆಲಿಗ್ರಾಮ್, ಇನ್‍ಸ್ಟಾಗ್ರಾಮ್, ಪ್ರೊಟೋಮೇಲ್ ಬಳಸಿ ಇಬ್ಬರೂ ಮಾತುಕತೆ ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ರೈತರ ಪ್ರತಿಭಟನೆ ಕುರಿತು ಸ್ವೀಡಿಷ್ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‍ಬರ್ಗ್ ಹಂಚಿಕೊಂಡಿರುವ ಟೂಲ್‍ಕಿಟ್‍ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಜಾಕೋಬ್ ಸೋಮವಾರ ಬಾಂಬೆ ಹೈ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾಳೆ.

    ಮುಂಬೈ ಮೂಲದ ನಿಕಿತಾ ಜಾಕೋಬ್ ಶನಿವಾರ ಬಂಧಿಸಲ್ಪಟ್ಟಿದ್ದ 21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿ ಹಾಗೂ ಈ ಪ್ರಕರಣದ ಶಂಕಿತ ಶಾಂತನುನನ್ನು ಸಂಪರ್ಕಿಸಿರುವುದು ಇದೇ ವೇಳೆ ಬಹಿರಂಗವಾಗಿದೆ.

    ಮೂಲಗಳ ಪ್ರಕಾರ, ಧಲಿವಾಲ್ ಕೇವಲ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳನ್ನು ಮಾತ್ರ ಸಂಪರ್ಕಿಸಿಲ್ಲ. ಬದಲಿಗೆ ನವೆಂಬರ್‍ನಲ್ಲಿ ದೆಹಲಿಯ ವಿವಿಧ ಗಡಿಗಳಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದ ಕೆನಡಾದ ಸಂಸದರ ಜೊತೆ ಸಹ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    ಟೂಲ್‍ಕಿಟ್ ದಾಖಲೆ ತಯಾರಿಕೆಯಲ್ಲಿ ಕೆಲ ರೈತ ಮುಖಂಡರ ಪಾತ್ರ ಇರುವ ಬಗ್ಗೆ ಸಹ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಫೇಕ್ ಐಡಿ ಬಳಸಿ ಗಣರಾಜ್ಯೋತ್ಸ ದಿನದಂದು ಹಿಂಸಾಚಾರ ಬಡೆಸುವ ಬಗ್ಗೆ ಜನವರಿ 11ರಂದು ಜಾಕೋಬ್, ದಿಶಾ ಹಾಗೂ ಶಾಂತನು ಝೂಮ್ ಆ್ಯಪ್ ಮೂಲಕ ಮೀಟಿಂಗ್ ನಡೆಸಿದ್ದರು. ಹೀಗಾಗಿ ಈ ಮೀಟಿಂಗ್‍ನಲ್ಲಿ ಭಾಗವಹಿಸಿದವರ ಯುಆರ್‍ಎಲ್ ಹಾಗೂ ಐಪಿ ಅಡ್ರೆಸ್ ನೀಡುವಂತೆ ದೆಹಲಿ ಪೊಲೀಸರು ಝೂಮ್ ಸಂಸ್ಥೆಗೆ ಪತ್ರ ಬರೆದಿದ್ದಾರೆ.

    ಟೂಲ್‍ಕಿಟ್‍ನ್ನು ಕಳುಹಿಸಲು ಡಿಸೆಂಬರ್‍ನಲ್ಲಿ ದಿಶಾ ರಚಿಸಿದ ವಾಟ್ಸಪ್ ಗ್ರೂಪ್‍ಗೆ ಅಂತರಾಷ್ಟ್ರೀಯ ರೈತರ ಮುಷ್ಕರ ಎಂದು ಹೆಸರಿಡಲಾಗಿತ್ತು. ಈಗ ಡಿಲೀಟ್ ಮಾಡಲಾದ ಈ ಗುಂಪಿನಲ್ಲಿ 10ಕ್ಕೂ ಹೆಚ್ಚು ಸದಸ್ಯರನ್ನು ಸೇರಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಗ್ರೂಪ್‍ನ ವಿವರಗಳು ಹಾಗೂ ಸದಸ್ಯರ ಚಾಟ್‍ಗಳನ್ನು ನೀಡುವಂತೆ ಪೊಲೀಸರು ವಾಟ್ಸಪ್‍ಗೆ ಸಹ ಪತ್ರ ಬರೆದಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ದೆಹಲಿ ಹಿಂಸಾಚಾರವನ್ನ ಮುಚ್ಚಿಹಾಕಲು ಕೊರೊನಾ ವೈರಸ್ ಭೀತಿ ಸೃಷ್ಟಿ: ದೀದಿ

    ದೆಹಲಿ ಹಿಂಸಾಚಾರವನ್ನ ಮುಚ್ಚಿಹಾಕಲು ಕೊರೊನಾ ವೈರಸ್ ಭೀತಿ ಸೃಷ್ಟಿ: ದೀದಿ

    ಕೋಲ್ಕತ್ತಾ: ದೇಶದಲ್ಲಿ ಕೊರೊನಾ ವೈರಸ್ ಭಾರೀ ತಲ್ಲಣ ಉಂಟು ಮಾಡಿದೆ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೊರೊನಾ ವೈರಸ್ ಭೀತಿಯು ಇತ್ತೀಚಿನ ದೆಹಲಿ ಹಿಂಸಾಚಾರದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.

    ಕೋಲ್ಕತ್ತಾದಲ್ಲಿ ಬುಧವಾರ ಮಾತನಾಡಿದ ಅವರು, ‘ಜನರು ಕೊರೊನಾ, ಕೊರೊನಾ ಎಂದು ಕಿರುಚುತ್ತಿದ್ದಾರೆ. ಇದಕ್ಕೆಲ್ಲ ಭಯಪಡಬೇಡಿ. ಕೆಲವು ಚಾನೆಲ್‍ಗಳು ದೆಹಲಿ ಹಿಂಸಾಚಾರವನ್ನು ಕರೋನವೈರಸ್ ಭೀತಿಯಿಂದ ಮುಚ್ಚಿಡಲು ಪ್ರಯತ್ನಿಸುತ್ತಿವೆ. ಇದು ಒಂದು ರೋಗವಷ್ಟೇ ಜನರು ಭಯಭೀತರಾಗಬಾರದು. ದೆಹಲಿ ಹಿಂಸಾಚಾರದಲ್ಲಿ ಜನರು ಕೊಲ್ಲಲ್ಪಟ್ಟಿದ್ದು, ಕೊರೊನಾ ವೈರಸ್ ಕಾರಣದಿಂದಲ್ಲ ಬಿಜೆಪಿಯಿಂದ ಕೊಲೆಯಾಗಿದ್ದಾರೆ ಎಂದು ದೂರಿದರು.

    ಬಿಜೆಪಿ ವಿರುದ್ಧ ಗುಡುಗು:
    ದೆಹಲಿ ಹಿಂಸಾಚಾರವು ‘ರಾಜ್ಯ ಪ್ರಾಯೋಜಿತ ಯೋಜಿತ ನರಮೇಧ’ ಎಂದು ಪಶ್ಚಿಮ ಬಂಗಾಳ ಸಿಎಂ ಮಂಗಳವಾರ ಬಿಜೆಪಿಯ ವಿರುದ್ಧ ತೀವ್ರ ದಾಳಿ ನಡೆಸಿದ್ದರು. ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ‘ಗುಜರಾತ್ ಮಾದರಿಯ ಗಲಭೆ’ಯನ್ನು ಪುನರಾವರ್ತಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.

    ‘ದೆಹಲಿಯಲ್ಲಿ ಮುಗ್ಧ ಜನರನ್ನು ಹತ್ಯೆಗೈದಿದ್ದು ನನಗೆ ತುಂಬಾ ನೋವು ತಂದಿದೆ. ಇದು ಯೋಜಿತ ನರಮೇಧ ಎಂದು ನಾನು ಭಾವಿಸುತ್ತೇನೆ. ದೆಹಲಿ ಪೊಲೀಸರು ಕೇಂದ್ರದ ಅಡಿಯಲ್ಲಿದ್ದಾರೆ. ದೆಹಲಿ ಪೊಲೀಸರು, ಸಿಆರ್‍ಪಿಎಫ್, ಸಿಐಎಸ್‍ಎಫ್ ಯಾರೂ ಗಲಭೆಯನ್ನು ನಿಯಂತ್ರಿಸಲಿಲ್ಲ’ ಎಂದು ಆರೋಪಿಸಿದ್ದರು.

    ಕೊರೊನಾ ವೈರಸ್:
    ಚೀನಾದ ವೂಹಾನ್‍ನಲ್ಲಿ ಮೊದಲು ಕಾಣಿಸಿಕೊಂಡ ಮಾರಣಾಂತಿಕ ವೈರಸ್ ಇದುವರೆಗೆ 80ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಕೊರೊನಾ ವೈರಸ್‍ಗೆ 3,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಪ್ರಪಂಚದಾದ್ಯಂತ 93,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.

    ಬುಧವಾರ ಬೆಳಗ್ಗೆಯವರೆಗೆ ಭಾರತದಲ್ಲಿ 438 ಮಂದಿ ಕೊರೊನಾ ಶಂಕಿತರೆಂದು ವರದಿಯಾಗಿದೆ. ಅದರಲ್ಲಿ 225 ಜನರ ಮೇಲೆ 28 ದಿನಗಳ ಕಾಲ ತೀವ್ರ ನಿಗಾ ವಹಿಸಲಾಗಿತ್ತು. 189 ಮಂದಿ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. 89 ಮಂದಿಯನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 118 ಮಂದಿ ಕೊರೊನಾ ಪರೀಕ್ಷೆ ಮಾಡಿಸಿದ್ದು, 103 ಜನರ ವರದಿಯಲ್ಲಿ ನೆಗೆಟೀವ್ ಬಂದಿದ್ದು, 4 ಮಂದಿಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಇಟಲಿಯಿಂದ ಬಂದ 21 ಮಂದಿಯನ್ನು ಪರೀಕ್ಷಿಸಲಾಗಿದ್ದು ಇದರಲ್ಲಿ 15 ಮಂದಿ ರಕ್ತದ ಮಾದರಿಯಲ್ಲಿ ಕೊರೊನಾ ಪಾಸಿಟಿವ್ ಅಂಶ ಕಂಡುಬಂದಿದೆ. ಇಟಲಿಯ ಪ್ರವಾಸಿಗರ ಗುಂಪಿನ ಸದಸ್ಯರನ್ನು ದೆಹಲಿಯ ಐಟಿಬಿಪಿ(ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್) ಕೇಂದ್ರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜೈಪುರಕ್ಕೆ ಆಗಮಿಸಿದ ಇಟಲಿಯ ಪ್ರವಾಸಿಗನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆತನ ಪತ್ನಿಗೂ ಕೊರೊನಾ ವೈರಸ್‍ನ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡಿತ್ತು. ಈ ದಂಪತಿ ರಾಜಸ್ಥಾನ ಪ್ರವಾಸ ಮಾಡುವ ಈ ಪ್ರವಾಸಿ ಗುಂಪಿನ ಭಾಗವಾಗಿದ್ದರು.