Tag: Delhi Riots

  • ವಾಹನಗಳಿಗೆ ಬೆಂಕಿ ಹಚ್ಚುವ ಮೊದಲು ಮಾಲೀಕನ ವಿವರ ಹುಡುಕಾಟ – ದೆಹಲಿ ಗಲಭೆಕೋರರನ್ನು ಪತ್ತೆ ಹಚ್ಚಿದ್ದು ಹೇಗೆ?

    ವಾಹನಗಳಿಗೆ ಬೆಂಕಿ ಹಚ್ಚುವ ಮೊದಲು ಮಾಲೀಕನ ವಿವರ ಹುಡುಕಾಟ – ದೆಹಲಿ ಗಲಭೆಕೋರರನ್ನು ಪತ್ತೆ ಹಚ್ಚಿದ್ದು ಹೇಗೆ?

    – ಸಿಎಎ ವಿರೋಧಿಸಿ ದೆಹಲಿಯಲ್ಲಿ ದಂಗೆ
    – ತಂತ್ರಜ್ಞಾನ ಬಳಸಿ ಆರೋಪಿಗಳ ಪತ್ತೆ

    ನವದೆಹಲಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಜಾರಿ ವಿರೋಧಿಸಿ ಕಳೆದ ಫೆಬ್ರವರಿಯಲ್ಲಿ ನಡೆದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

    17,500 ಪುಟಗಳ ಚಾರ್ಜ್‌ಶೀಟ್‌ನಲ್ಲಿಒಟ್ಟು 15 ಮಂದಿ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ), ಐಪಿಸಿ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 53 ಮಂದಿ ಸಾನ್ನಪ್ಪಿದ್ದು ಒಟ್ಟು 751 ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಒಟ್ಟು 2,193 ಮಂದಿಯನ್ನು ಬಂಧನ ಅಥವಾ ವಶಕ್ಕೆ ಪಡೆಯಲಾಗಿತ್ತು.

    ಈ ಗಲಭೆಯನ್ನು ಗಂಭೀರವಾಗಿ ಸ್ವೀಕರಿಸಿದ್ದ ದೆಹಲಿ ಪೊಲೀಸರು ವಿವಿಧ ತಂತ್ರಜ್ಞಾನಗಳನ್ನು ಬಳಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ತಂತ್ರಜ್ಞಾನಗಳ ಸಹಾಯವನ್ನು ಬಳಸಿ ಆರೋಪಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಇಲ್ಲಿ ಯಾವೆಲ್ಲ ತಂತ್ರಜ್ಞಾನವನ್ನು ಬಳಸಲಾಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಯಾವೆಲ್ಲ ತಂತ್ರಜ್ಞಾನ ಬಳಕೆ?
    1. ಐಪಿಡಿಆರ್‌ ವಿಶ್ಲೇಷಣೆ:
    ಗಲಭೆಯ ವೇಳೆ ಕರೆ ಮತ್ತು ಮೆಸೇಜ್‌ ಮಾಡಿದರೆ ನಾವು ಸಿಕ್ಕಿ ಬೀಳುತ್ತೇವೆ ಎಂಬ ಕಾರಣಕ್ಕೆ ಇಂಟರ್‌ನೆಟ್‌ ಬಳಸಿ ಗಲಭೆಕೋರರು ಸಂವಹನ ಮಾಡಿದ್ದರು. ಆದರೆ ಪೊಲೀಸರು ಇಂಟರ್‌ನೆಟ್‌ ಪ್ರೊಟಕಲ್‌ ಡಿಟೈಲ್ಸ್‌ ರೆಕಾರ್ಡ್‌(ಐಪಿಡಿಆರ್) ಮೂಲಕ ಯಾರೆಲ್ಲ ಈ ವೇಳೆ ಗಲಭೆಯಾದ ಸ್ಥಳದಲ್ಲಿ ಇಂಟರ್‌ನೆಟ್‌ ಮೂಲಕ ಸಂಹನ ಮಾಡಿದ್ದಾರೋ ಅವರನ್ನು ಪತ್ತೆ ಹಚ್ಚಿದ್ದಾರೆ. ಪ್ರತಿಯೊಂದು ಕಂಪ್ಯೂಟರ್‌ಗೆ ಹೇಗೆ ಐಪಿ ಅಡ್ರೆಸ್‌ ಇರುತ್ತದೋ ಅದೇ ರೀತಿ ಫೋನ್‌ಗಳಿಗೂ ಇರುತ್ತದೆ. ಐಪಿಡಿಆರ್‌ ಮೂಲಕ ಮೊಬೈಲ್‌ ಬಳಕೆದಾರರು ಇಂಟರ್‌ನೆಟ್‌ನಲ್ಲಿ ಏನು ಮಾಡಿದ್ದಾರೋ ಅವೆಲ್ಲದರ ಡೇಟಾ ಸಂಗ್ರಹವಾಗುತ್ತದೆ.

    2.ಜಿಯೋಲೋಕೇಶನ್‌ ವಿಶ್ಲೇಷಣೆ:
    ಗೂಗಲ್‌ ಟೈಮ್‌ಲೈನ್‌ ಅಥವಾ ಗೂಗಲ್‌ ಮ್ಯಾಪ್‌ ಮೂಲಕ ಆರೋಪಿಗಳು ಗಲಭೆ ಪ್ರದೇಶದಲ್ಲಿ ಸಕ್ರಿಯವಾಗಿದ್ದನ್ನು ಪತ್ತೆಹಚ್ಚಲಾಗಿದೆ. ಆರೋಪಿ ಒಂದು ಪ್ರದೇಶದಿಂದ ಯಾವೆಲ್ಲ ಪ್ರದೇಶಕ್ಕೆ ತೆರಳಿದ್ದ ಎಲ್ಲ ಮಾಹಿತಿ ಗೂಗಲ್‌ ಟೈಮ್‌ಲೈನ್‌ನಲ್ಲಿ ಸಂಗ್ರಹವಾಗಿತ್ತು.

    3. ಫೇಶಿಯಲ್‌ ರಿಕನ್‌ಸ್ಟ್ರಕ್ಷನ್‌:
    ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೃತ್ಯ ಎಸಗುವ ದೃಶ್ಯ ಮೊಬೈಲ್‌ ವಿಡಿಯೋದಲ್ಲಿ ಸೆರೆಯಾದರೂ ಆ ವ್ಯಕ್ತಿಗಳೇ ನಿಜವಾದ ಆರೋಪಿಗಳು ಎಂದು ಗುರುತು ಪತ್ತೆಹಚ್ಚುವುದು ಕಷ್ಟ. ಈ ಕಾರಣಕ್ಕೆ ಮುಖಗಳನ್ನು ಸರಿಯಾಗಿ ಗುರುತಿಸುವ ವಿಶೇಷ ಸಾಫ್ಟ್‌ವೇರ್‌ ಬಳಸಿ ಸುಮಾರು 2,655 ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಲಾಗಿದೆ. ಸಿಸಿ ಟಿವಿ ದೃಶ್ಯದ ಆಧಾರದಲ್ಲೂ ಹಲವರನ್ನು ಬಂಧಿಸಲಾಗಿದೆ.

    4. ಫಂಡ್‌ ವಿಶ್ಲೇಷಣೆ:
    ದೆಹಲಿ ಗಲಭೆ ಪೂರ್ವನಿಯೋಜಿತವಾಗಿದ್ದು, ಅದಕ್ಕಾಗಿ ಮೊದಲೇ ಹಣಕಾಸಿನ ನೆರವು ಸಿಕ್ಕಿತ್ತು. ಈ ವಿಚಾರವನ್ನು ಇಟ್ಟುಕೊಂಡು ಆರೋಪಿಗಳ ಖಾತೆಗೆ ಹಣ ಎಲ್ಲಿಂದ ಎಷ್ಟು ಪ್ರಮಾಣದಲ್ಲಿ ಜಮೆಯಾಗಿದೆ ಎಂಬುದನ್ನು ತನಿಖೆ ಮಾಡಲಾಗಿದೆ.

    5. ಇ ವಾಹನ ಡೇಟಾಬೇಸ್‌:
    ಗಲಭೆಕೋರರು ಬೆಂಕಿ ಹಚ್ಚುವ ಮೊದಲು ವಾಹನದ ಮಾಲೀಕರು ಯಾರು ಎಂಬುದನ್ನು ಇ ವಾಹನ ಪೋರ್ಟಲ್‌ಗೆ ಹೋಗಿ ತಿಳಿಯುವ ಪ್ರಯತ್ನ ಮಾಡಿ ಬಳಿಕ ಇತರರಿಗೆ ಅದನ್ನು ಮೆಸೇಜ್‌ ಮಾಡಿದ್ದರು. ಗಲಭೆಯ ಸಂದರ್ಭದಲ್ಲಿ ಯಾರೆಲ್ಲ ವಾಹನ ಸಂಖ್ಯೆಯನ್ನು ಇಂಟರ್‌ನೆಟ್‌ ಮೂಲಕ ಪರಿಶೀಲನೆ ನಡೆಸಿದ್ದಾರೋ ಆ ಡೇಟಾ ಮಾಹಿತಿಯ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ.

    6. ಮೊಬೈಲ್‌ ಫಾರೆನ್ಸಿಕ್ಸ್‌:
    ಗಲಭೆಯ ವೇಳೆ ಭಾರೀ ಸಂಖ್ಯೆಯ ಡೇಟಾ ಮೊಬೈಲ್‌ ಮೂಲಕ ಹರಿದಾಡಿದೆ. ವಶಕ್ಕೆ ಪಡೆದ ಜನರ ಫೋನ್‌ಗಳನ್ನು ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ವಾಯ್ಸ್‌ ರೆಕಾರ್ಡಿಂಗ್‌, ಫೋಟೋ ಇತ್ಯಾದಿ ಮಾಹಿತಿಗಳನ್ನು ರಿಟ್ರೀವ್‌ ಮಾಡುವ ಮೂಲಕ ತನಿಖೆ ಮಾಡಲಾಗಿದೆ.

    7. ಡಂಪ್‌ ಡೇಟಾ ಅನಾಲಿಸಿಸ್‌:
    ಮೊಬೈಲ್‌ ಕರೆ, ಮೆಸೇಜ್‌ ಮಾಡದೇ ಇದ್ದರೂ ಗಲಭೆಕೋರರ ಮೊಬೈಲ್‌ಗಳು ಆನ್‌ ಆಗಿತ್ತು. ಗಲಭೆ ನಡೆದ ಸ್ಥಳಗಳಲ್ಲಿ ಸಕ್ರೀಯವಾಗಿದ್ದ ಫೋನ್‌ ನಂಬರ್‌ಗಳನ್ನು ಟವರ್‌ ಮೂಲಕ ಕಲೆ ಹಾಕಲಾಗಿತ್ತು. ಒಟ್ಟು 10 ಸಾವಿರ ಮೊಬೈಲ್‌ ನಂಬರ್‌ಗಳು ಗಲಭೆಯ ವೇಳೆ ಸಕ್ರೀಯವಾಗಿತ್ತು ಎಂಬ ಅಂಶ ಪೊಲೀಸ್‌ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

  • ದೆಹಲಿ ಗಲಭೆ – ಜಾಮಿಯಾ ಪಿಹೆಚ್‍ಡಿ ವಿದ್ಯಾರ್ಥಿ ಅರೆಸ್ಟ್

    ದೆಹಲಿ ಗಲಭೆ – ಜಾಮಿಯಾ ಪಿಹೆಚ್‍ಡಿ ವಿದ್ಯಾರ್ಥಿ ಅರೆಸ್ಟ್

    ನವದೆಹಲಿ: ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ದೆಹಲಿ ಗಲಭೆಯ ವಿಚಾರವಾಗಿ ಜಾಮಿಯಾ ವಿವಿಯಲ್ಲಿ ಪಿಹೆಚ್‍ಡಿ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ವಿದ್ಯಾರ್ಥಿಯನ್ನು ಮಿರಾನ್ ಹೈದರ್ ಎಂದು ಗುರುತಿಸಲಾಗಿದೆ. ಈತ ಲಾಲು ಯಾದವ್ ಅವರ ರಾಷ್ಟ್ರೀಯ ಜನತಾದಳ (ಆರ್.ಜೆ.ಡಿ) ದೆಹಲಿ ಯುವ ವಿಭಾಗದ ಮುಖ್ಯಸ್ಥನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈತ ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಂದು ಹೇಳಲಾಗಿದೆ.

    ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅವರ ಕುಟುಂಬ ಸಮೇತ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾಗ ಈ ಗಲಭೆ ನಡೆದಿತ್ತು. ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸತತ ನಾಲ್ಕು ದಿನಗಳ ಕಾಲ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆದಿತ್ತು. ಈ ಗಲಭೆಯಲ್ಲಿ 54 ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು.

    ಈ ಹಿಂಸಾಚಾರವು ನೆರೆಹೊರೆಯ ಜನರ ನಡುವೆಯೇ ಜಗಳದ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಈ ವೇಳೆ ಮನೆಗಳು ಮತ್ತು ಅಂಗಡಿಗಳನ್ನು ಸುಟ್ಟುಹಾಕಲಾಗಿತ್ತು. ಪೌರತ್ವ ವಿರೋಧಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ದೊಡ್ಡ ಮಟ್ಟದ ಘರ್ಷಣೆಯಾಗಿತ್ತು. ಇದರಲ್ಲಿ ಕೆಲವು ಪ್ರತಿಭಟನಾಕಾರರು ಬಂದೂಕು ಹಿಡಿದು ದಾಳಿ ಕೂಡ ಮಾಡಿದ್ದರು. ಜೊತೆಗೆ ಅನೇಕ ಪ್ರತಿಭಟನಾಕಾರರು ಗುಂಡೇಟಿನಿಂದ ಗಾಯಗೊಂಡಿದ್ದರು.

    ಟ್ರಂಪ್ ಅವರು ಭಾರತಕ್ಕೆ ಬಂದ ಸಮಯದಲ್ಲೇ ಉದ್ದೇಶಪೂರ್ವಕವಾಗಿಯೇ ಈ ಗಲಭೆಯನ್ನು ಸಂಘಟಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದ್ದವು. ಗಲಭೆಗೆ ಸಂಬಂಧಿಸಿದಂತೆ ಅಮಾನತುಗೊಂಡ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ತಾಹೀರ್ ಹುಸೇನ್ ಮತ್ತು ಆತನ ಸಹೋದರ ಸೇರಿದಂತೆ 7 ಜನರನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ಹಿಂಸಾಚಾರದ ಸಮಯದಲ್ಲಿ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ತಾಹಿರ್ ಹುಸೇನ್ ಆರೋಪಿಯಾಗಿದ್ದಾನೆ.

  • ದೆಹಲಿ ಗಲಭೆ – ಅತ್ತ ಪತ್ನಿಯ ಒಡವೆ ಕದ್ದೊಯ್ದರು, ಇತ್ತ 15 ಲಕ್ಷ ಖರ್ಚು ಮಾಡಿದ್ದ ಮನೆಗೇ ಬೆಂಕಿ ಇಟ್ಟರು

    ದೆಹಲಿ ಗಲಭೆ – ಅತ್ತ ಪತ್ನಿಯ ಒಡವೆ ಕದ್ದೊಯ್ದರು, ಇತ್ತ 15 ಲಕ್ಷ ಖರ್ಚು ಮಾಡಿದ್ದ ಮನೆಗೇ ಬೆಂಕಿ ಇಟ್ಟರು

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಬಗೆದಷ್ಟು ಕಣ್ಣೀರ ಕಥೆಗಳು ಹೊರ ಬರುತ್ತಿವೆ. ಹಿಂಸಚಾರದ ವೇಳೆ ನಡೆದ ಅಗ್ನಿ ದುರಂತದಿಂದ ಹಲವು ಕುಟುಂಬಗಳು ಅಕ್ಷರ ಸಹ ಬೀದಿಗೆ ಬಂದಿದೆ. ಮನೆ ರಿನೋವೇಷನ್ ಮಾಡಿಸಿಕೊಂಡು ಮದುವೆಯಾಗಿದ್ದ ಶಿವ ವಿಹಾರ್ ನಗರದ ಅರುಣ್ ಮಿಶ್ರಾ ಕಥೆ ಇದಕ್ಕೆ ಹೊರತಾಗಿಲ್ಲ.

    ಉತ್ತರ ಪ್ರದೇಶ ಮೂಲದ ಅರುಣ್ ಮಿಶ್ರಾ ಕಳೆದ 14 ವರ್ಷಗಳಿಂದ ಈಶಾನ್ಯ ದೆಹಲಿ ಶಿವ್ ವಿಹಾರ್ ನಲ್ಲಿ ವಾಸ ಮಾಡುತ್ತಿದ್ದಾರೆ. ಕಳೆದ ವಾರ ನಡೆದ ಬೆಂಕಿ ಅನಾಹುತದಲ್ಲಿ ಅರುಣ್ ಮಿಶ್ರಾರ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಅಲ್ಲದೇ ಇತ್ತೀಚೆಗೆ ಅರುಣ್ ಅವರ ಮದುವೆಯಾಗಿತ್ತು, ಆದರೆ ಬೆಂಕಿ ಅನಾಹುತದ ಮೊದಲು ಅರಣ್ ಅವರ ಪತ್ನಿಯ ಒಡೆವೆಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ.

    ಗಲಭೆ ವೇಳೆ ಪ್ರಾಣ ಭೀತಿಯಲ್ಲಿ ಮನೆಗೆ ಬೀಗ ಹಾಕಿ ಶಿವ ವಿಹಾರ್ ನಿಂದ ಸಂಬಂಧಿಕರ ಮನೆಗೆ ಅರುಣ್ ಕುಟುಂಬ ತೆರಳಿ ನೆರವು ಪಡೆದುಕೊಂಡಿತ್ತು. ಗಲಭೆಯ ಮೊದಲ ದಿನ ಅರುಣ್ ಮನೆಯನ್ನು ಸಂಪೂರ್ಣ ದೋಚಲಾಗಿದೆ. ಮನೆಗೆ ಹಾಕಿದ್ದ ಬೀಗ ಒಡೆದು ಒಳ ನುಗ್ಗಿರುವ ದುಷ್ಕರ್ಮಿಗಳು ಮನೆಯ ಬೀರುವಿನಲ್ಲಿದ್ದ ಒಡವೆಗಳನ್ನು ದೋಚಿದ್ದಾರೆ. ಅರುಣ್ ಮಾರನೇ ದಿನ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿದ್ದು ಬೆಳಕಿಗೆ ಬಂದಿದ್ದು, ಒಡವೆ ಹೋದರೆ ಹೋಗಲಿ ಮನೆ ಉಳಿತಲ್ಲ ಅಂತ ನಿಟ್ಟುಸಿರು ಬಿಟ್ಟಿದ್ದರು. ಪರಿಸ್ಥಿತಿ ಸುಧಾರಿಸಿದ ಬಳಿಕ ವಾಪಸ್ ಬರುವ ಪ್ಲಾನ್ ಮಾಡಿಕೊಂಡು ಮತ್ತೆ ಸಂಬಂಧಿಕರ ಮನೆಗೆ ಅರುಣ್ ತೆರಳಿದ್ದರು.

    ಎರಡನೇ ದಿನದ ಘರ್ಷಣೆ ವೇಳೆ ದುಷ್ಕರ್ಮಿಗಳು ಅರುಣ್ ಮನೆಗೆ ಬೆಂಕಿ ಹಚ್ಚಿದ್ದು, ಎರಡು ಅಂತಸ್ತಿನ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಇತ್ತೀಚೆಗೆ ಅರುಣ್ 15 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ತಮ್ಮ ಹಳೆ ಮನೆಯನ್ನು ರಿನೋವೇಷನ್ ಮಾಡಿಸಿಕೊಂಡು ಮದುವೆಯಾಗಿದ್ದರು. ಘಟನೆಯಲ್ಲಿ ಪತ್ನಿಯ ಒಡವೆ ಮತ್ತು ಮನೆ ಎರಡನ್ನೂ ಕಳೆದುಕೊಂಡು ಅರುಣ್ ಕುಟುಂಬ ಈಗ ಬೀದಿಗೆ ಬಂದಿದ್ದು ಕಣ್ಣಿರಿಡುತ್ತಿದ್ದಾರೆ.