Tag: Delhi Results

  • ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?

    ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?

    ನವದೆಹಲಿ: ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದರೆ ಗೆಲುವು ಖಂಡಿತ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ರಾಜಧಾನಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸನ್ನು ಸೋಲಿಸಿ ಅಧಿಕಾರಕ್ಕೆ ಏರಿದೆ. ಈ ಮೂಲಕ ಶೀಲಾ ದೀಕ್ಷಿತ್ ಬಳಿಕ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

    ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲ 7 ಸ್ಥಾನಗಳನ್ನು ಗೆದ್ದುಕೊಂಡಿದ್ದರಿಂದ ವಿಧಾನಸಭಾ ಚುನಾವಣೆಯಲ್ಲೂ ಕಮಲ ಅರಳಿ ಅಧಿಕಾರಕ್ಕೆ ಏರಲಿದ್ದೇವೆ ಎಂದು ಬಿಜೆಪಿ ನಾಯಕರು ಪ್ರಚಾರದಲ್ಲಿ ಹೇಳುತ್ತಿದ್ದರು. ಮಾಜಿ ರಾಷ್ಟ್ರೀಯ ಅಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಈ ಬಾರಿ 45ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಚಾಣಕ್ಯನ ತಂತ್ರಗಾರಿಕೆ ಸೋಲಾಗಿದೆ.

    ಎಲ್ಲ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಯಲ್ಲಿ ಈ ಬಾರಿಯೂ ಕೇಜ್ರಿವಾಲ್‍ರದ್ದೇ ಹವಾ ಎಂದು ಭವಿಷ್ಯ ನುಡಿದಿತ್ತು. ಈ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ. 2015ರ ಚುನಾವಣೆಯಲ್ಲಿ ಒಟ್ಟು 70 ಸ್ಥಾನಗಳ ಪೈಕಿ ಆಪ್ 67, ಬಿಜೆಪಿ 3, ಕಾಂಗ್ರೆಸ್ ಶೂನ್ಯ ಸಂಪಾದಿಸಿತ್ತು. ಆದರೆ ಈ ಬಾರಿ ಆಪ್ 63, ಬಿಜೆಪಿ 7 ಸ್ಥಾನ ಪಡೆದರೆ ಕಾಂಗ್ರೆಸ್ ಈ ಬಾರಿಯೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

    ಹಾಗೆ ನೋಡಿದರೆ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳಿಸಿದೆ. ಅಷ್ಟೇ ಅಲ್ಲದೇ ಶೇಖಡವಾರು ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. 2015ರಲ್ಲಿ ಆಪ್ ಶೇ.54, ಬಿಜೆಪಿ ಶೇ.32, ಕಾಂಗ್ರೆಸ್ ಶೇ.9 ರಷ್ಟು ಮತ ಪಡೆದಿದ್ದರೆ ಈ ಬಾರಿ ಆಪ್ ಶೇ.53, ಬಿಜೆಪಿ ಶೇ.38, ಕಾಂಗ್ರೆಸ್ ಶೇ.4 ರಷ್ಟು ಮತ ಪಡೆದಿದೆ.

    ಆಪ್ ಗೆದ್ದಿದ್ದು ಹೇಗೆ?
    ಎರಡು ವರ್ಷಕ್ಕೂ ಮುನ್ನ ದೆಹಲಿ ಚುನಾವಣೆ ಮೇಲೆ ಆಮ್ ಅದ್ಮಿ ಪಕ್ಷ ಕಣ್ಣಿಟ್ಟಿತ್ತು. ಆರಂಭದಿಂದಲೇ ಬಿಜೆಪಿ ಟೀಕೆಗೆ ಕೇಜ್ರಿವಾಲ್ ತಟಸ್ಥ ನಿಲುವು ಕಾಯ್ದುಕೊಂಡಿದ್ದರು. ಜಗಳಗಂಟ ಎನ್ನುವ ಆರೋಪದಿಂದ ದೂರ ಉಳಿಯುವ ಈ ಪ್ರಯೋಗ ಯಶಸ್ವಿ ಆಯ್ತು.

    ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಟ್ವಿಟ್ಟರ್ ನಲ್ಲಿ ಟೀಕೆ ಮಾಡುತ್ತಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ನಂತರ ಮೋದಿ ವಿರುದ್ಧ ಟೀಕೆಗೆ ಜಾಸ್ತಿ ಹೋಗದೇ ಅಭಿವೃದ್ಧಿ ಮಂತ್ರವನ್ನೇ ಹೆಚ್ಚು ಹೆಚ್ಚು ಜಪಿಸತೊಡಗಿದರು.

    ಬಡವರು, ಸ್ಲಂ ನಿವಾಸಿಗಳಿಗೆ ಉಚಿತವಾಗಿ ವಿದ್ಯುತ್, ಕುಡಿಯುವ ನೀರು, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿತ್ತು. ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ, ಔಷಧಿ ನೀಡಿತ್ತು. ಸ್ಲಂ ನಿವಾಸಿಗಳಿಗಾಗಿ ಮೊಹಲ್ಲಾ ಕ್ಲಿನಿಕ್ ವ್ಯವಸ್ಥೆ, ಇತ್ತಿಚೆಗೆ ಮಹಿಳೆಯರಿಗೆ ಉಚಿತ ಬಸ್ ಸಾರಿಗೆ ವ್ಯವಸ್ಥೆ ಮತ್ತು 200 ಯೂನಿಟ್ ವಿದ್ಯುತ್ ಉಚಿತ ನೀಡುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು.

    ಇತ್ತೀಚೆಗೆ ಮಹಿಳೆಯರಿಗೆ ಉಚಿತ ಸಾರಿಗೆಯನ್ನು ಕೇಜ್ರಿವಾಲ್ ಪ್ರಕಟಿಸಿದ್ದರು. ಸಿಎಎ, ಎನ್‍ಆರ್.ಸಿ ಎನ್‍ಪಿಆರ್ ವಿಚಾರಗಳಲ್ಲಿ ಕೇಜ್ರಿವಾಲ್ ತಟಸ್ಥ ಧೋರಣೆ ಅನುಸರಿಸುವ ಮೂಲಕ ವಿವಾದ ಆಗದಂತೆ ನೋಡಿಕೊಂಡರು. ಬಿಜೆಪಿಯ ಭಯೋತ್ಪಾದಕ ಟೀಕೆಗೆ ಕೇಜ್ರಿವಾಲ್ ಮೌನಕ್ಕೆ ಶರಣಾಗಿದ್ದರು.

    ವಿಶೇಷವಾಗಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ವಿಚಾರದಲ್ಲಿ ಕೇಜ್ರಿವಾಲ್ ಕೇಂದ್ರದ ಪರ ನಿಂತಿದ್ದರು. ಇತ್ತೀಚಿಗೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನದ ಫೆಡರಲ್ ಮಂತ್ರಿ ಫವಾದ್ ಚೌಧರಿ, ಭಾರತೀಯರು ಮೋದಿಯನ್ನು ಸೋಲಿಸಬೇಕು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಕೇಜ್ರಿವಾಲ್ ಮೋದಿ ಪರ ಬ್ಯಾಟ್ ಮಾಡಿ, ಭಯೋತ್ಪಾದನೆಗೆ ನೆರವು ನೀಡುವ ದೇಶ ಭಾರತದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

    ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿ ಮತ್ತು ನನಗೂ ಅವರು ಪ್ರಧಾನ ಮಂತ್ರಿ. ದೆಹಲಿಯ ಚುನಾವಣೆ ಭಾರತದ ಆಂತರಿಕ ವಿಚಾರ. ಹಾಗಾಗಿ ಪಾಕಿಸ್ತಾನ ಎಷ್ಟೇ ಪ್ರಯತ್ನ ಮಾಡಿದರೂ ಭಾರತ ದೇಶದ ಏಕತೆಯನ್ನು ಹಾಳು ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದರು.

    ಬಹಳ ಮುಖ್ಯವಾಗಿ ಆಪ್ ಈ ಹಿಂದಿನ ಎರಡು ಚುನಾವಣೆ ಹೋಲಿಸಿದರೆ ಆಪ್ ಬಹಳ ಗಂಭೀರವಾಗಿ ಈ ಚುನಾವಣೆಯನ್ನು ತೆಗೆದುಕೊಂಡಿತ್ತು. ಸಾಮಾಜಿಕ ಜಾಲತಾಣ ವಿಚಾರ ಬಂದಾಗ ದೆಹಲಿಯಲ್ಲಿ ಕಾಂಗ್ರೆಸ್ಸಿಗಿಂತ ಆಪ್ ಬಲಿಷ್ಟವಾಗಿದ್ದರೂ ಬಿಜೆಪಿಯನ್ನು ಸೋಲಿಸಲು ಚುನಾವಣಾ ತಂತ್ರಗಾರಿಕಾ ನಿಪುಣ ಪ್ರಶಾಂತ್ ಕಿಶೋರ್ ಅವರನ್ನು ಕೇಜ್ರಿವಾಲ್ ಸಂಪರ್ಕಿಸಿದ್ದರು. ಪ್ರಶಾಂತ್ ಕಿಶೋರ್ ಅವರ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ಸಾಮಾಜಿಕ ಜಾಲತಾಣದಲ್ಲಿ ಅತ್ಯುತ್ತಮವಾಗಿ ಪ್ರಚಾರ ನಡೆಸುವ ಮೂಲಕ ಆಪ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ.

    ಬಿಜೆಪಿಗಿಂತ ಆಪ್ ಹೆಚ್ಚು ಸಮರ್ಥವಾಗಿ ಸಮಾಜಿಕ ಜಾಣತಾಣಗಳನ್ನು ಸಮರ್ಥವಾಗಿ ನಿಭಾಯಿಸಿತ್ತು. ಸಿಸಿಟಿವಿ ಅಳವಡಿಕೆ ಪ್ರಶ್ನಿಸಿದ್ದ ಅಮಿತ್ ಶಾಗೆ ಅವರ ಭಾಷಣ ಮೂರು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದ ತುಣುಕು ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಲಾಗಿತ್ತು. ಶಾಲೆ ಅವ್ಯವಸ್ಥೆ ವಿಡಿಯೋ ಮಾಡಿ ಮಾತನಾಡಿದ್ದ ಸಂಸದ ಗೌತಮ್ ಗಂಭೀರ್‍ಗೆ ಅದೇ ವಿಡಿಯೋದಲ್ಲಿನ ನೋಟಿಸ್ ರಿಟ್ವೀಟ್ ಮಾಡಿ ವ್ಯಂಗ್ಯ ಮಾಡಲಾಗಿತ್ತು. ತನ್ನೇಲ್ಲ ನಿಲುವುಗಳನ್ನು ಸೋಷಿಯಲ್ ಮಿಡಿಯಾ ಮೂಲಕ ಜನರಿಗೆ ಯಶಸ್ವಿಯಾಗಿ ತಲುಪಿಸಿದ್ದು ಚುನಾವಣಾ ಗೆಲುವಿಗೆ ಸಹಕಾರಿಯಾಗಿದೆ.

    ಬಿಜೆಪಿ ಸೋತಿದ್ದು ಹೇಗೆ?
    ದೆಹಲಿಯಲ್ಲಿ ಕಾಂಗ್ರೆಸ್ಸಿಗೆ ವೋಟ್ ಹಾಕಿದ್ದರೂ ಅಧಿಕಾರಕ್ಕೆ ಬರುವುದು ಕಷ್ಟ ಎನ್ನುವ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೆಂದು ಕಾಂಗ್ರೆಸ್ ಮತದಾರರು ಆಪ್ ಪಕ್ಷವನ್ನು ಬೆಂಬಲಿಸಿದ್ದರು. ಇದರಿಂದಾಗಿ ಕಾಂಗ್ರೆಸ್ ಮತ ಆಪ್‍ಗೆ ವರ್ಗಾವಣೆಯಾಗಿತ್ತು.

    ಸಿಎಎ, ಎನ್‍ಆರ್‍ಸಿ ವಿರೋಧಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳು ಆಪ್‍ಗೆ ಬಿದ್ದಿತ್ತು. ಚುನಾವಣೆಗೆ ನಾಯಕತ್ವದ ಕೊರತೆ ಎದುರಾದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಮುಖವನ್ನು ಇಟ್ಟುಕೊಂಡು ಬಿಜೆಪಿ ಮತ ಕೇಳಿತ್ತು. ಇದರಿಂದಾಗಿ ಚುನಾವಣೆ ಕೇಂದ್ರ ಸರ್ಕಾರ ವರ್ಸಸ್ ಕೇಜ್ರಿವಾಲ್ ಎಂದೇ ಬಿಂಬಿತವಾಗಿತ್ತು.

    ಕೇಜ್ರಿವಾಲ್ ಎದುರು ಸಿಎಂ ಅಭ್ಯರ್ಥಿಯನ್ನು ಬಿಜೆಪಿ ಘೋಷಣೆ ಮಾಡಿರಲಿಲ್ಲ. ಡಾ. ಹರ್ಷವರ್ಧನ್, ಮನೋಜ್ ತಿವಾರಿ ಬೆಂಬಲಿಗರ ಕಿತ್ತಾಟದಿಂದಾಗಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಹಿರಂಗವಾಗಿತ್ತು. ಬಿಜೆಪಿ ಅಭಿವೃದ್ಧಿ ವಿಚಾರ ಬಿಟ್ಟು ಶಾಹೀನ್ ಭಾಗ್, ಪಾಕ್ ವಿಚಾರಕ್ಕೆ ಹೆಚ್ಚು ಒತ್ತು ನೀಡಿತ್ತು. ಇದರ ಜೊತೆ “ಕೇಂದ್ರಕ್ಕೆ ಮೋದಿ, ದೆಹಲಿಗೆ ಕೇಜ್ರಿವಾಲ್” ಎಂಬ ನಿಲುವಿಗೆ ಮತದಾರರು ಬಂದ ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಮತ್ತು ಕೈಯನ್ನು ಪೊರಕೆ ಗುಡಿಸಿ ಹಾಕಿದೆ.

    ಪ್ರಚಾರದ ಕೊನೆಯಲ್ಲಿ ಚುನಾವಣೆ ಭಾವನ್ಮಾಕ ರೂಪ ಪಡೆದುಕೊಂಡಿತ್ತು. ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಭಾಷಣದ ಅಬ್ಬರದಲ್ಲಿ ಕೇಜ್ರಿವಾಲ್ ಅವರನ್ನ ಭಯೋತ್ಪಾದಕ ಎಂದಿದ್ದರು. ಇದರಿಂದ ನೊಂದಿದ್ದ ಕೇಜ್ರಿವಾಲ್ ಕಣ್ಣಿರಿಟ್ಟಿದ್ದರು. ಇದನ್ನೇ ಬಳಸಿಕೊಂಡ ಕೇಜ್ರಿವಾಲ್, ನಾನು ನಿಮ್ಮ ಮಗ ನಿಮಗಾಗಿ ಕೆಲಸ ಮಾಡುತ್ತೇನೆ ನನ್ನನ್ನು ಭಯೋತ್ಪಾದಕ ಎನ್ನುತ್ತಾರೆ ಎನ್ನುವ ಮೂಲಕ ಅನುಕಂಪದ ಅಲೆ ಸೃಷ್ಟಿಸುವ ಪ್ರಯತ್ನ ಮಾಡಿ ಮತ ಸೆಳೆಯುವಲ್ಲಿ ಯಶಸ್ವಿಯಾದರು.

  • ವಿಜಯದಿಂದ ನಮಗೆ ಅಹಂಕಾರ ಬರುವುದಿಲ್ಲ, ಸೋಲು ನಮ್ಮನ್ನು ನಿರಾಶೆಗೊಳಿಸಲ್ಲ – ಬಿಜೆಪಿ ಪೋಸ್ಟರ್

    ವಿಜಯದಿಂದ ನಮಗೆ ಅಹಂಕಾರ ಬರುವುದಿಲ್ಲ, ಸೋಲು ನಮ್ಮನ್ನು ನಿರಾಶೆಗೊಳಿಸಲ್ಲ – ಬಿಜೆಪಿ ಪೋಸ್ಟರ್

    ನವದೆಹಲಿ: ಆಮ್ ಆದ್ಮಿ ಪಕ್ಷ ಮೂರನೇ ಬಾರಿ ದೆಹಲಿಯಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಕೆಲವೊಮ್ಮೆ ಹಿನ್ನಡೆ ಅನುಭವಿಸಿದರೂ ಈಗ ಆಪ್ ಭಾರೀ ಮುನ್ನಡೆ ಪಡೆದುಕೊಂಡಿದೆ.

    ಬೆಳಗ್ಗೆ 11:30ರ ಟ್ರೆಂಡ್ ಪ್ರಕಾರ ಆಪ್ 54 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಬಿಜೆಪಿ 16 ರಲ್ಲಿ ಮುನ್ನಡೆ ಸಾಧಿಸಿದೆ. ಇಂದು ಮತ ಎಣಿಕೆಯ ಆರಂಭಕ್ಕೆ ಮುನ್ನ ದೆಹಲಿ ಬಿಜೆಪಿ ಕಚೇರಿ ಮುಂದೆ ಹಾಕಲಾದ ದೊಡ್ಡ ಪೋಸ್ಟರ್ ಈಗ ಎಲ್ಲರ ಗಮನ ಸೆಳೆದಿದೆ.

    “ವಿಜಯದಿಂದ ನಮಗೆ ಅಹಂಕಾರ ಬರುವುದಿಲ್ಲ. ಸೋಲು ನಮ್ಮನ್ನು ನಿರಾಶೆಗೊಳಿಸುವುದಿಲ್ಲ” ಎಂದು ಪೋಸ್ಟರ್ ಹಾಕಲಾಗಿದೆ. ಹಿಂದಿಯಲ್ಲಿ ಪೋಸ್ಟರ್ ಇದ್ದು ಇದರಲ್ಲಿ ಅಮಿತ್ ಶಾ ಭಾವಚಿತ್ರವಿದೆ.

    ಒಟ್ಟು 27 ಕ್ಷೇತ್ರಗಳಲ್ಲಿ ಆಪ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಅಂತರ ಮುನ್ನಡೆ ಅಂತರ 1 ಸಾವಿರ ಇದೆ. ಇನ್ನು ಹಲವು ಸುತ್ತುಗಳ ಮತ ಎಣಿಕೆ ಬಾಕಿ ಇದೆ. ಕಾಂಗ್ರೆಸ್ ಮತಗಳಿಕೆ ಪ್ರಮಾಣ ಭಾರೀ ಕುಸಿದಿದೆ.

    ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಪ್ರತಿಕ್ರಿಯಿಸಿ, ಮತ ಎಣಿಕೆ ಪೂರ್ಣಗೊಂಡಿಲ್ಲ, ಫಲಿತಾಂಶಕ್ಕೆ ಕಾಯಿರಿ. ಯಾವುದೇ ಫಲಿತಾಂಶ ಬಂದರೂ ಅದಕ್ಕೆ ನಾನೇ ಸಂಪೂರ್ಣ ಹೊಣೆ ಎಂದು ಪ್ರತಿಕ್ರಿಯಿಸಿದ್ದಾರೆ.

  • ದೆಹಲಿ ಮತ ಎಣಿಕೆ – 27 ಕ್ಷೇತ್ರಗಳಲ್ಲಿ ನೇರ ಹಣಾಹಣಿ

    ದೆಹಲಿ ಮತ ಎಣಿಕೆ – 27 ಕ್ಷೇತ್ರಗಳಲ್ಲಿ ನೇರ ಹಣಾಹಣಿ

    ನವದೆಹಲಿ: ಮತ ಎಣಿಕೆಯ ಆರಂಭದಲ್ಲಿ ಆಪ್ ಭಾರೀ ಮುನ್ನಡೆ ಸಾಧಿಸಿದ್ದರೂ 27 ಕ್ಷೇತ್ರಗಳಲ್ಲಿ ಈಗ ನೇರ ಹಣಾಹಣಿ ಏರ್ಪಟ್ಟಿದೆ.

    ಹೌದು, ಬೆಳಗ್ಗೆ 8 ಗಂಟೆಯಿಂದ 10:30ರವರೆಗಿನ ಟ್ರೆಂಡ್ ನಲ್ಲಿ ಆಪ್ ಮುನ್ನಡೆಯಲ್ಲಿದೆ. ಸದ್ಯ ಈಗ 53 ಕ್ಷೇತ್ರಗಳಲ್ಲಿ ಆಪ್ ಮುನ್ನಡೆಯಲ್ಲಿದ್ದರೆ ಬಿಜೆಪಿ 17 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಬಿಜೆಪಿಯ ಮುನ್ನಡೆ ಇಳಿಕೆಯಾಗಿದ್ದು, ಆಪ್ ಮುನ್ನಡೆ ಏರಿಕೆಯಾಗಿದೆ.

    ಈ ಪೈಕಿ 27 ಕ್ಷೇತ್ರಗಳಲ್ಲಿ ಆಪ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದ್ದು ಆಪ್ ಮುನ್ನಡೆ ಅಂತರ 1 ಸಾವಿರವಿದೆ. ಇನ್ನು ಹಲವು ಸುತ್ತುಗಳ ಮತ ಎಣಿಕೆ ಬಾಕಿ ಇರುವ ಹಿನ್ನೆಲೆಯಲ್ಲಿ ಫಲಿತಾಂಶ ಕ್ಷಣ ಕ್ಷಣ ಬದಲಾಗುತ್ತಿದೆ.

    ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಪ್ರತಿಕ್ರಿಯಿಸಿ, ಮತ ಎಣಿಕೆ ಪೂರ್ಣಗೊಂಡಿಲ್ಲ, ಫಲಿತಾಂಶಕ್ಕೆ ಕಾಯಿರಿ. ಯಾವುದೇ ಫಲಿತಾಂಶ ಬಂದರೂ ಅದಕ್ಕೆ ನಾನೇ ಸಂಪೂರ್ಣ ಹೊಣೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಒಟ್ಟು 70 ಸ್ಥಾನಗಳಿರುವ ದೆಹಲಿ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳಿ ಆಪ್ ಗೆಲ್ಲಲ್ಲಿದೆ ಎನ್ನುವ ಭವಿಷ್ಯ ನಿಜವಾಗುವ ಸಾಧ್ಯತೆಯಿದೆ. ಆದರೆ ಈ ಬಾರಿ ಆಪ್ ಮತ್ತು ಬಿಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲಲ್ಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

    2015ರ ಚುನಾವಣೆಯಲ್ಲಿ ಆಪ್ 67 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಬಿಜೆಪಿ 3, ಕಾಂಗ್ರೆಸ್ ಶೂನ್ಯ ಸಂಪಾದಿಸಿತ್ತು.

  • ಕ್ಷಣ ಕ್ಷಣಕ್ಕೆ ಬದಲಾಗುತ್ತಿದೆ ಫಲಿತಾಂಶ – ಬಿಜೆಪಿ ಮುನ್ನಡೆ ಏರಿಕೆ, ಮತ್ತೆ ಆಪ್ ಸರ್ಕಾರ

    ಕ್ಷಣ ಕ್ಷಣಕ್ಕೆ ಬದಲಾಗುತ್ತಿದೆ ಫಲಿತಾಂಶ – ಬಿಜೆಪಿ ಮುನ್ನಡೆ ಏರಿಕೆ, ಮತ್ತೆ ಆಪ್ ಸರ್ಕಾರ

    ನವದೆಹಲಿ: ದೆಹಲಿಯ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು ಕ್ಷಣ ಕ್ಷಣಕ್ಕೂ ಪಕ್ಷಗಳ ಮುನ್ನಡೆ ಬದಲಾಗುತ್ತಿದ್ದು, ಹಾವು ಏಣಿ ಆಟ ಆರಂಭಗೊಂಡಿದೆ.

    ಮತ ಎಣಿಕೆಯ ಆರಂಭದ ಅರ್ಧಗಂಟೆಯಲ್ಲಿ 56 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 13, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿತ್ತು.

    ನಂತರದ ಒಂದು ಗಂಟೆಯಲ್ಲಿ ಆಪ್ ಮುನ್ನಡೆ ಇಳಿಕೆಯಾಗಿತ್ತು. ಬಿಜೆಪಿ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಕಾಂಗ್ರೆಸ್ ಯಾವುದೇ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರಲಿಲ್ಲ.

     

    ಬೆಳಗ್ಗೆ 10 ಗಂಟೆಯ ಟ್ರೆಂಡ್ ನಲ್ಲಿ ಆಪ್ 49 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಬಿಜೆಪಿ 21 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ.

    ಒಟ್ಟು 70 ಸ್ಥಾನಗಳಿರುವ ದೆಹಲಿ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಆಪ್ ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದ್ದು, ಈ ಭವಿಷ್ಯ ನಿಜವಾಗುವ ಸಾಧ್ಯತೆಯಿದೆ. ಆದರೆ ಈ ಬಾರಿ ಆಪ್ ಮತ್ತು ಬಿಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲಲ್ಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

    2015ರ ಚುನಾವಣೆಯಲ್ಲಿ ಆಪ್ 67 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಬಿಜೆಪಿ 3, ಕಾಂಗ್ರೆಸ್ ಶೂನ್ಯ ಸಂಪಾದಿಸಿತ್ತು.

  • ದೆಹಲಿ ಫಲಿತಾಂಶ : ಆಪ್ 53, ಬಿಜೆಪಿ 16 ಕ್ಷೇತ್ರಗಳಲ್ಲಿ ಮುನ್ನಡೆ

    ದೆಹಲಿ ಫಲಿತಾಂಶ : ಆಪ್ 53, ಬಿಜೆಪಿ 16 ಕ್ಷೇತ್ರಗಳಲ್ಲಿ ಮುನ್ನಡೆ

    ನವದೆಹಲಿ: ದೆಹಲಿ ವಿಧಾನಭೆಯ  70 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು ಆಪ್ ಆರಂಭದಲ್ಲೇ ಮುನ್ನಡೆ ಸಾಧಿಸಿದೆ.

    ಮತ ಎಣಿಕೆ ಆರಂಭಗೊಂಡ ಅರ್ಧಗಂಟೆಯಲ್ಲಿ 53 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 16 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಬಾರಿ ಶೂನ್ಯ ಸಾಧಿಸಿದ್ದ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

    ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಈ ಬಾರಿಯೂ ಆಪ್ ಅಧಿಕಾರಕ್ಕೆ ಏರಲಿದೆ ಎಂದೇ ಭವಿಷ್ಯ ನುಡಿದಿತ್ತು. ಆರಂಭಿಕ ಮುನ್ನಡೆ ಗಮನಿಸುವಾಗ ಈ ಭವಿಷ್ಯವೇ ನಿಜವಾಗುವ ಸಾಧ್ಯತೆಯಿದೆ.

    2015ರ ಚುನಾವಣೆಯಲ್ಲಿ ಆಪ್ 67 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಬಿಜೆಪಿ 3, ಕಾಂಗ್ರೆಸ್ ಶೂನ್ಯ ಸಂಪಾದಿಸಿತ್ತು.