Tag: Delhi protest

  • ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಸಾವು – ಪೊಲೀಸರೊಂದಿಗೆ ಘರ್ಷಣೆ, ಎರಡು ದಿನ ಮೆರವಣಿಗೆ ಬಂದ್‌!

    ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಸಾವು – ಪೊಲೀಸರೊಂದಿಗೆ ಘರ್ಷಣೆ, ಎರಡು ದಿನ ಮೆರವಣಿಗೆ ಬಂದ್‌!

    ಚಂಡೀಗಢ: ಹರಿಯಾಣದ ಖಾನೌರಿ ಗಡಿಯಲ್ಲಿ (Haryana Khanauri border) ಪ್ರತಿಭಟನಾ ನಿರತ ರೈತರೊಬ್ಬರು ಸಾವನ್ನಪ್ಪಿದ್ದು, ಪೊಲೀಸರೊಂದಿಗೆ ರೈತರು (Farmers) ಘರ್ಷಣೆಗಿಳಿದಿದ್ದಾರೆ.

    23 ವರ್ಷದ ಶುಭಕರಣ್ ಸಿಂಗ್ ಮೃತ ರೈತ. ಇವರು ಬಟಿಂಡಾ ನಗರದ ನಿವಾಸಿಯಾಗಿದ್ದಾರೆ. ಪೊಲೀಸರು (Haryana Police) ರೈತರನ್ನು ಚದುರಿಸಲು ಅಶ್ರುವಾಯು ಸೇರಿದಂತೆ ವಿವಿಧ ರೀತಿಯ ಕ್ರಮಗಳನ್ನು ಅನುಸರಿಸುತ್ತಿದ್ದರು, ಈ ವೇಳೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ರೈತರೊಬ್ಬರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಧರಣಿ, ಸತ್ಯಾಗ್ರಹ ಮುಂದುವರಿಯಲಿದ್ದರೂ ಎರಡು ದಿನಗಳ ಕಾಲ ದೆಹಲಿಗೆ ಬರುವ ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದಾರೆ.

    ಸದ್ಯ ಮೃತ ರೈತನಿಗೆ ಗುಂಡು ತಗುಲಿದೆ ಎಂದು ಪಟಿಯಾಲ ಆಸ್ಪತ್ರೆಯ (Patiyala H ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಿದ್ದು, ಮರಣೋತ್ತರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ಇದನ್ನೂ ಓದಿ: 24 ಜಿಲ್ಲೆಗಳ 106 ತಾಲೂಕುಗಳಲ್ಲಿ `ಕೃಷಿ ಭಾಗ್ಯ’ ಯೋಜನೆ ಜಾರಿ: ಎನ್. ಚಲುವರಾಯಸ್ವಾಮಿ

    ಖಾನೌರಿ ಗಡಿ ಪ್ರತಿಘಟನೆಯಲ್ಲಿ ಭಾಗವಹಿಸಿದ್ದ ರೈತರ ಪೈಕಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಒಬ್ಬರು ಆಸ್ಪತ್ರೆಗೆ ಕರೆತರುತ್ತಿದ್ದ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರ ಆರೋಗ್ಯ ಸ್ಥಿರವಾಗಿದೆ. ಹೆಚ್ಚಿನ ವಿವರಗಳನ್ನ ಮರಣೋತ್ತರ ಪರೀಕ್ಷೆಯ ಬಳಿಕವೇ ನೀಡಲಾಗುತ್ತದೆ ಎಂದು ಪಟಿಯಾಲದ ರಾಜೇಂದ್ರ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ರೇಖಿ ತಿಳಿಸಿದ್ದಾರೆ. ಇದನ್ನೂ ಓದಿ: ಯುಪಿ ಬಗ್ಗೆ ರಾಗಾ ವಿವಾದಾತ್ಮಕ ಮಾತು- ಮಗನಿಗೆ ಬುದ್ಧಿ ಹೇಳುವಂತೆ ಸೋನಿಯಾಗೆ ಸ್ಮೃತಿ ಸಲಹೆ

  • ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ರದ್ದುಗೊಳಿಸಿ, ನಮ್ಮ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳಿ- ರೈತರ ಬಿಗಿಪಟ್ಟು

    ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ರದ್ದುಗೊಳಿಸಿ, ನಮ್ಮ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳಿ- ರೈತರ ಬಿಗಿಪಟ್ಟು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಆದರೆ ಕಾಯ್ದೆಗಳು ಸಂಪೂರ್ಣ ರದ್ದಾಗುವವರೆಗೂ ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ರೈತರು ದೆಹಲಿ ಗಡಿಯಲ್ಲಿ ಪಟ್ಟು ಹಿಡಿದು ಕುಳಿತಿದ್ದಾರೆ.

    ಕೃಷಿ ಕಾಯ್ದೆಗಳ ರದ್ದುಗೊಳಿಸುವುದು ಸೇರಿದಂತೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸಬೇಕು ಹಾಗೂ ಕಳೆದ ಒಂದು ವರ್ಷದಿಂದ ನಡೆದ ಪ್ರತಿಭಟನೆಯಲ್ಲಿ ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಈಗ ರದ್ದಾಗಿದ್ರೂ ಅಗತ್ಯ ಎನಿಸಿದ್ರೆ ಮತ್ತೆ ಕೃಷಿ ಕಾಯ್ದೆ ಜಾರಿ: ರಾಜಸ್ಥಾನ ರಾಜ್ಯಪಾಲ

    ನವೆಂಬರ್‌ ತಿಂಗಳ ಅಂತ್ಯದಲ್ಲಿ ನಡೆಯುವ ಸಂಸತ್‌ ಚಳಿಗಾಲದ ಅಧಿವೇಶನದಲ್ಲಿ ಮಾತ್ರ ಈ ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ಹಿಂತೆಗೆದುಕೊಳ್ಳಲಾಗುವುದು.

    ಕೃಷಿ ಕಾನೂನುಗಳ ಕುರಿತು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಯುಕ್ತ ಕಿಸಾನ್‌ ಮಾರ್ಚ್‌ (ಎಸ್‌ಕೆಎಂ) ಪೂರ್ವ ನಿರ್ಧಾರಿತ ಕಾರ್ಯಕ್ರಮಗಳನ್ನು ಹಾಗೆಯೇ ಮುಂದುವರಿಸುತ್ತೇವೆ ಎಂದು ರೈತ ನಾಯಕ ಬಲ್ಬೀರ್‌ ಸಿಂಗ್‌ ರಾಜೇವಾಲ ತಿಳಿಸಿದ್ದಾರೆ. ಇದನ್ನೂ ಓದಿ: ತಿದ್ದುಪಡಿಯೊಂದಿಗೆ ಕೃಷಿ ಮಸೂದೆ ಮತ್ತೆ ಮಂಡನೆ ಆಗುತ್ತೆ: ಪ್ರಭಾಕರ ಭಟ್

    ಲಕ್ನೋದಲ್ಲಿ ನ.22ಕ್ಕೆ ನಿಗದಿಪಡಿಸಿರುವ ರೈತರ ಸಭೆ, ನ.26ರಂದು ಪಾರ್ಲಿಮೆಂಟ್‌ಗೆ ರೈತರ ಮಾರ್ಚ್‌ ನಡೆಸಲು ನಿರ್ಧರಿಸಲಾಗಿದ್ದು, ಅದನ್ನು ನಿಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಹಲವು ಬೇಡಿಕೆಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರಿಗೆ ರೈತರು ಪತ್ರ ಬರೆದಿದ್ದಾರೆ.

    ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಅವರು ಘೋಷಿಸಿದ್ದರು. ಈ ನಿರ್ಧಾರವನ್ನು ಕೇಳಿ ರೈತರು ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಆದರೆ ಕೃಷಿ ಕಾಯ್ದಗಳನ್ನು ಅಧಿವೇಶನದಲ್ಲಿ ಅಧಿಕೃತವಾಗಿ ರದ್ದುಗೊಳಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

  • ದೆಹಲಿ ಗಡಿಯಲ್ಲಿ ಇಂಟರ್‌ನೆಟ್‌ ಸೇವೆ ಬಂದ್‌

    ದೆಹಲಿ ಗಡಿಯಲ್ಲಿ ಇಂಟರ್‌ನೆಟ್‌ ಸೇವೆ ಬಂದ್‌

    ನವದೆಹಲಿ/ ಬೆಂಗಳೂರು: ದೆಹಲಿ ಗಡಿಗಳಲ್ಲಿ ಹೈಡ್ರಾಮಾ ಮುಂದುವರಿದಿದೆ. ಮೊನ್ನೆ ಘಾಜಿಪುರ ಗಡಿಯಲ್ಲಿ ಕರೆಂಟ್, ನೀರು ಕಡಿತಗೊಳಿಸಿದ್ದ ಸರ್ಕಾರ ಈಗ ರೈತರು ಪ್ರತಿಭಟನೆ ನಡೆಸುತ್ತಿರುವ ಎಲ್ಲ ಗಡಿಗಳಲ್ಲಿ ಇಂಟರ್‌ನೆಟ್‌ ಸೇವೆಯನ್ನು ಇದ್ದಕ್ಕಿದ್ದಂತೆ ಬಂದ್ ಮಾಡಿದೆ.

    ಸಿಂಘು, ಟಿಕ್ರಿ, ಗಾಜಿಪುರ್ ಗಡಿಯಲ್ಲಿ ಜ.31ರ ರಾತ್ರಿ 11 ಗಂಟೆಯವರೆಗೆ ತಾತ್ಕಾಲಿಕವಾಗಿ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ನಡೆಯುತ್ತಿರುವ ರೈತರ ಪ್ರತಿಭಟನೆಯ ಮಧ್ಯೆ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ.

    ವಿಚಾರಣೆಗೆ ಹಾಜರಾಗುವಂತೆ ಟಿಕಾಯತ್ ಸೇರಿ 9 ರೈತ ಮುಖಂಡರಿಗೆ ಎಸ್‍ಐಟಿ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ. ಈ ಮಧ್ಯೆ, ಇಂದು ನಡೆದ ಸರ್ವ ಪಕ್ಷ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ಫೋನ್‍ನಲ್ಲಿ ರೈತರ ಜೊತೆ ಮಾತುಕತೆಗೂ ಈಗಲೂ ಸಿದ್ಧ. ಕೂಡಲೇ ಹೋರಾಟ ಕೈಬಿಡಿ ಎಂದು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಬೆಂಗಳೂರಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರೈತ ಚಳವಳಿ ಹತ್ತಿಕ್ಕಲು ಬಿಜೆಪಿ ನೋಡುತ್ತಿದೆ. ಇದು ನಾಚಿಕೆಗೇಡಿನ ಕೆಲಸ. ಮೋದಿ ತಂದ ಮನೆಹಾಳು ಕಾನೂನುಗಳನ್ನು ಒಪ್ಪಿಕೊಳ್ಳಬೇಕೇ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ರೈತರ ಮೇಲಿನ ದೌರ್ಜನ್ಯ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕೃಷಿ ಮಾರುಕಟ್ಟೆಗೆ ಕಾಲಿಟ್ಟರೆ ಮೋದಿ ಸರ್ಕಾರದ ಕಾಲು ಮುರಿಯುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಗುಡುಗಿದ್ದಾರೆ.

  • ಪ್ರತಿಭಟನಾಕಾರರ ಆಕ್ರೋಶಕ್ಕೆ ವಿಜಯನಗರ ಸಾಮ್ರಾಜ್ಯದ ಟ್ಯಾಬ್ಲೊ ಜಖಂ

    ಪ್ರತಿಭಟನಾಕಾರರ ಆಕ್ರೋಶಕ್ಕೆ ವಿಜಯನಗರ ಸಾಮ್ರಾಜ್ಯದ ಟ್ಯಾಬ್ಲೊ ಜಖಂ

    ನವದೆಹಲಿ: ಪ್ರತಿಭಟನಾಕಾರರ ಆಕ್ರೋಶಕ್ಕೆ ವಿಜಯ ನಗರ ಸಾಮ್ರಾಜ್ಯದ ಟ್ಯಾಬ್ಲೊ ತುತ್ತಾಗಿದ್ದು, ಜಖಂ ಆಗಿದೆ. ಶ್ರೀಕೃಷ್ಣದೇವರಾಯನ ವೇಷದಲ್ಲಿದ್ದ ಡಾ.ರಾಜಕುಮಾರ್ ಮೂರ್ತಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.

    ಗಲಭೆಕೋರರು ನಡೆಸಿದ ದಾಂಧಲೆಯಿಂದ ಕೆಂಪುಕೋಟೆ ಸಂಪೂರ್ಣ ಹಾಳಾಗಿ ಹೋಗಿದೆ. ಸೆಕ್ಯೂರಿಟಿ ರೂಂನಿಂದ ಹಿಡಿದುಕೊಂಡು, ಪರಿಶೀಲನಾ ಕೊಠಡಿ, ಸಿಸಿಟಿವಿ, ಕಂಪ್ಯೂಟರ್, ಟಿಕೆಟ್ ಕೌಂಟರ್, ಫ್ಯಾನ್, ಪೀಠೋಪಕರಣ, ಬ್ಯಾರಿಕೇಡ್‍ಗಳನ್ನು ಧ್ವಂಸ ಮಾಡಲಾಗಿದೆ. ಕಂಡ ಕಂಡ ಗಾಜುಗಳನ್ನು ಧ್ವಂಸ ಮಾಡಲಾಗಿದೆ. ವೈರ್ ಗಳನ್ನು ಕಟ್ ಮಾಡಲಾಗಿದ್ದು, ಕೆಂಪುಕೋಟೆಯ ಎಲ್ಲಾ ಕಡೆ ವಿದ್ಯುತ್ ಸರಬರಾಜಿಗೂ ವ್ಯತ್ಯಯ ಉಂಟಾಗಿದೆ. ಪೊಲೀಸ್ ಜೀಪ್ ಜಖಂ ಆಗಿದ್ದು, ಕೆಲಸಕ್ಕೆ ಬಾರದಂತಾಗಿದೆ. ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.

    ಕೆಂಪುಕೋಟೆ ಹಿಂಸಾಚಾರದ ಮತ್ತಷ್ಟು ಘನಘೋರ ದೃಶ್ಯಗಳು ಒಂದೊಂದಾಗೇ ಬೆಳಕಿಗೆ ಬರ್ತಿವೆ. ಇದರಲ್ಲಿನ ಒಂದು ದೃಶ್ಯದಲ್ಲಂತೂ, ರೈತರ ವೇಷದಲ್ಲಿದ್ದ ಪಾತಕಿಗಳು ದೊಡ್ಡಮಟ್ಟದ ಹಿಂಸಾಕಾಂಡವನ್ನೇ ಸೃಷ್ಟಿಸಿರೋದು ಕಂಡು ಬರುತ್ತೆ. ಖಾಲಿ ಮಾಡಿಸಲು ಬಂದ ಪೊಲೀಸರ ಮೇಲೆ ಕಿಡಿಗೇಡಿಗಳು ತಿರುಗಿಬಿದ್ದಿದ್ದಾರೆ. ಗಲಭೆಕೋರರಿಂದ ತಪ್ಪಿಸಿಕೊಳ್ಳಲು, ತಮ್ಮ ಪ್ರಾಣ ಉಳಿಸಿಕೊಳ್ಳಲು ಕೆಂಪುಕೋಟೆ ಸಮೀಪದಲ್ಲಿದ್ದ 15 ಅಡಿ ಆಳದ ಕಂದಕಕ್ಕೆ ಪೊಲೀಸರು ಧುಮುಕುತ್ತಾರೆ. ಕೆಲವರು ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿಬೀಳುತ್ತಾರೆ. ಕೇವಲ ಇಲ್ಲೇ 150ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

    ಟ್ರ್ಯಾಕ್ಟರ್ ಮೂಲಕ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು, ದೊಣ್ಣೆಗಳ ಮೂಲಕ ಜಖಂ ಮಾಡುವ ದೃಶ್ಯವನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಈ ಮಧ್ಯೆ ಗಲಭೆಕೋರರು ಟ್ಯಾಬ್ಲೋ ಗಳನ್ನು ಬಿಟ್ಟಿಲ್ಲ. ಅದರಲ್ಲೂ ಪ್ರತಿಭಟನಕಾರರ ಆಕ್ರೋಶಕ್ಕೆ ವಿಜಯ ನಗರ ಸಾಮ್ರಾಜ್ಯದ ಟ್ಯಾಬ್ಲೊ ಬಲಿಯಾಗಿದೆ.

  • ದೆಹಲಿ ರೈತರಲ್ಲಿ ಬಿರುಕು – ಪ್ರತಿಭಟನೆಯಿಂದ ಹಿಂದಕ್ಕೆ ಸರಿದ 2 ಪ್ರಮುಖ ಸಂಘಟನೆಗಳು

    ದೆಹಲಿ ರೈತರಲ್ಲಿ ಬಿರುಕು – ಪ್ರತಿಭಟನೆಯಿಂದ ಹಿಂದಕ್ಕೆ ಸರಿದ 2 ಪ್ರಮುಖ ಸಂಘಟನೆಗಳು

    ನವದೆಹಲಿ: ಗಣರಾಜ್ಯೋತ್ಸವ ದಿನದಂದು ನಡೆದ ದಾಂಧಲೆ ಪ್ರಕರಣಕ್ಕೆ ರೈತ ಸಂಘಟನೆಗಳನ್ನೇ ನೇರ ಹೊಣೆ ಮಾಡಲು ಕೇಂದ್ರ ಗೃಹ ಸಚಿವಾಲಯ ಮುಂದಾಗುತ್ತಿದ್ದಂತೆ ಎರಡು ಪ್ರಮುಖ ರೈತ ಸಂಘಟನೆಗಳು ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿವೆ.

    ನಾನು ಈ ಪ್ರತಿಭಟನೆಯ ನೇತೃತ್ವವನ್ನು ವಹಿಸುವುದಿಲ್ಲ. ಈ ಪ್ರತಿಭಟನೆಯನ್ನು ನಾವು ಹಿಂದಕ್ಕೆ ಸರಿಯುತ್ತೇವೆ ಎಂದು ರಾಷ್ಟ್ರೀಯ ಕಿಸಾನ್‌ ಮಜ್ದೂರ್‌ ಸಂಘಟನೆ ಮುಖ್ಯಸ್ಥ ವಿಎಂ ಸಿಂಗ್‌ ಹೇಳಿದ್ದಾರೆ. ಬೇರೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ನನಗೆ ಏನು ಪಾತ್ರವಿಲ್ಲ ಎಂದು ಅವರು ತಿಳಿಸಿದ್ದಾರೆ.

    ಭಾರತೀಯ ಕಿಸಾನ್‌ ಸಂಘದ ಅಧ್ಯಕ್ಷ ಬಾನು ಪ್ರತಾಪ್‌ ಸಿಂಗ್‌ ಮಾತನಾಡಿ, ನಿನ್ನೆಯ ಘಟನೆಯಿಂದ ನನಗೆ ಬಹಳ ನೋವಾಗಿದೆ. ಹೀಗಾಗಿ 58 ದಿನಗಳ ಪ್ರತಿಭಟನೆಯನ್ನು ನಾವು ಕೊನೆಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ಎರಡು ಪ್ರಮುಖ ಸಂಘಟನೆಗಳು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವ ಮೂಲಕ ರೈತರ ಸಂಘಟನೆಯಲ್ಲಿ ಬಿರುಕು ಮೂಡಿದೆ. ಹೀಗಿದ್ದರೂ ಈಗಾಗಲೇ ಬೆಂಬಲ ನೀಡಿರುವ ಸಂಘಟನೆಗಳು ನಾವು ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಹೇಳಿವೆ.

  • ದೆಹಲಿಯಲ್ಲಿ ರೈತರ ಸಾವಿಗೆ ಕಾಂಗ್ರೆಸ್ ಪಕ್ಷವೇ ಹೊಣೆ: ಜಗದೀಶ್ ಶೆಟ್ಟರ್

    ದೆಹಲಿಯಲ್ಲಿ ರೈತರ ಸಾವಿಗೆ ಕಾಂಗ್ರೆಸ್ ಪಕ್ಷವೇ ಹೊಣೆ: ಜಗದೀಶ್ ಶೆಟ್ಟರ್

    ಧಾರವಾಡ: ದೆಹಲಿಯಲ್ಲಿ ರೈತರ ಸಾವಿಗೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರೈತಪರ ಯೋಜನೆ ತರುತ್ತಿದ್ದಾರೆ. ರೈತರ ಹೋರಾಟ ಹರಿಯಾಣ ಮತ್ತು ಪಂಜಾಬ್ ಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದರು.

    ನಮ್ಮ ರಾಜ್ಯದಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ಮಾಡುವ ಪ್ರಯತ್ನ ನಡೆದಿದೆ. ನಮ್ಮ ರಾಜ್ಯದಲ್ಲಿ ಯಾವ ರೈತರು ಸಹ ಕಾನೂನು ಬೇಡ ಎಂದಿಲ್ಲ. ಹಿಂದಿನ ಯಾವ ಸರ್ಕಾರ ಕೊಡದಷ್ಟು ನೆರವು ನಮ್ಮ ಸರ್ಕಾರ ರೈತರಿಗೆ ನೀಡುತ್ತಿದೆ. ರೈತರ ಹಿತಾಸಕ್ತಿಗಾಗಿ ಸರ್ಕಾರ ಒಳ್ಳೆ ಕೆಲಸ ಮಾಡಲಾಗುತ್ತಿದೆ. ಇಂತಹ ವೇಳೆ ಪ್ರತಿಪಕ್ಷ ನೈತಿಕ ಬೆಂಬಲ ಕೊಡಬೇಕಿತ್ತು, ಆದರೆ ಬೆಳಗ್ಗೆಯಿಂದ ಸಂಜೆಯವರೆಗೂ ಟೀಕೆ ಮಾಡುತ್ತಿದ್ದಾರೆ ಎಂದರು.

    ಮೋದಿ ಪಾರದರ್ಶಕ ಆಡಳಿತ ಕೊಡುತ್ತಿದ್ದಾರೆ. ಕಾಂಗ್ರೆಸಿಗೆ ವಿರೋಧಿಸಲು ವಿಷಯ ಇಲ್ಲದ ಕಾರಣ ಈ ಹೋರಾಟಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಯಾವುದೇ ಕಾಯಿದೆಯನ್ನು ಒತ್ತಾಯದಿಂದ ಹೇರಲಾಗುತ್ತಿಲ್ಲ. 20-30 ವರ್ಷ ಆಡಳಿತ ಮಾಡಿದವರು ರೈತರಿಗೆ ಏನು ಮಾಡಿಲ್ಲ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಪ್ರಚೋದನೆ ಕೊಟ್ಟು ಹೋರಾಟಕ್ಕೆ ಹಚ್ಚಿದೆ. ಕಾಂಗ್ರೆಸ್ ನಿರುದ್ಯೋಗಿ ಆಗಿದೆ. ನಿಜವಾಗಿ ನಿದ್ದೆ ಮಾಡುವವರನ್ನು ಎಬ್ಬಿಸಬಹುದು, ಆದರೆ ನಿದ್ದೆ ಮಾಡುವಂತೆ ನಾಟಕ ಮಾಡುವವರನ್ನು ಎಬ್ಬಿಸಲು ಆಗುವುದಿಲ್ಲ ಎಂದು ಹೇಳಿದರು.

  • ದೆಹಲಿ ಪ್ರತಿಭಟನೆಗೆ ಬಂದಿದ್ದ ಯುವಕ ಶವವಾಗಿ ಪತ್ತೆ

    ದೆಹಲಿ ಪ್ರತಿಭಟನೆಗೆ ಬಂದಿದ್ದ ಯುವಕ ಶವವಾಗಿ ಪತ್ತೆ

    ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದ ಯುವಕನ ಶವ ಹೆದ್ದಾರಿ ಬಳಿ ಪತ್ತೆಯಾಗಿದೆ. ಒಂದು ದಿನದ ಹಿಂದೆ ಯುವಕ ಮನೆಯಿಂದ ದೆಹಲಿಯತ್ತ ಪ್ರಯಾಣ ಬೆಳೆಸಿದ್ದನು.

    ಪಂಜಾಬ್ ರಾಜ್ಯದ ಸಂಗರೂರ ಜಿಲ್ಲೆಯ ಝನೆಡಿ ಗ್ರಾಮದ ನಿವಾಸಿ ಭೀಮ್ ಸಿಂಗ್ (36) ಮೃತ ಯುವಕ. ಕೆಲ ದಿನಗಳಿಂದ ಫತೇಗಢನಲ್ಲಿ ವಾಸವಾಗಿದ್ದ ಯುವಕ ಗುರುವಾರ ಬೆಳಗ್ಗೆ ಆಂದೋಲನದಲ್ಲಿ ಭಾಗಿಯಾಗಲು ದೆಹಲಿ- ಹರಿಯಾಣ ಗಡಿಯತ್ತ ಹೊರಟು ಬಂದಿದ್ದನು. ಹೆದ್ದಾರಿ ಪಕ್ಕದಲ್ಲಿಯೇ ಯುವಕನ ಶವವನ್ನ ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಆತನ ಗುರುತಿನ ಚೀಟಿಯಿಂದ ಆತನ ಗುರುತು ಪತ್ತೆ ಮಾಡಿ, ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಭೀಮ್ ಸಿಂಗ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.