Tag: Delhi Police

  • ಬ್ರಿಜ್‌ ಭೂಷಣ್‌ ವಿರುದ್ಧ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆ ಹಿಂಪಡೆಯಲಾಗಿದೆ: ವಿನೇಶ್‌

    ಬ್ರಿಜ್‌ ಭೂಷಣ್‌ ವಿರುದ್ಧ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆ ಹಿಂಪಡೆಯಲಾಗಿದೆ: ವಿನೇಶ್‌

    ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಸಾಕ್ಷಿ ಹೇಳಲಿರುವ ಮಹಿಳಾ ಕುಸ್ತಿಪಟುಗಳ (Women Wrestlers) ಭದ್ರತೆಯನ್ನು ದೆಹಲಿ ಪೊಲೀಸರು ಹಿಂಪಡೆದಿದ್ದಾರೆ ಎಂದು ಒಲಿಂಪಿಯನ್‌ ವಿನೇಶ್ ಫೋಗಟ್ (Vinesh Phogat) ಗಂಭೀರ ಆರೋಪ ಮಾಡಿದ್ದಾರೆ.

    ಹೌದು.. ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ದೆಹಲಿ ಪೊಲೀಸರು (Delhi Police) ಹಿಂಪಡೆದಿದ್ದಾರೆ ಎಂದು ವಿನೇಶ್ ಆರೋಪಿಸಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಭದ್ರತೆಯನ್ನು ಹಿಂತೆಗೆದುಕೊಂಡಿರುದರಿಂದ ಕುಸ್ತಿಪಟುಗಳು ಸುರಕ್ಷಿತವಾಗಿ ನ್ಯಾಯಾಲಯದಲ್ಲಿ ಹಾಜರಾಗಲು ಹಾಗೂ ಸಾಕ್ಷ್ಯಗಳನ್ನು ನೀಡುವ ಅವರ ಸಾಮರ್ಥ್ಯದ ಮೇಲೆ ಪ್ರಭಾವ ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಆದ್ರೆ ವಿನೇಶ್‌ ಆರೋಪವನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದಾರೆ.

    ಇದಕ್ಕೂ ಮುನ್ನ ಕುಸ್ತಿಪಟುಗಳು ದೆಹಲಿ ನ್ಯಾಯಾಲಯ ಸಂಪರ್ಕಿಸಿದ್ದರು. ಬಳಿಕ ಕೋರ್ಟ್‌ ತಕ್ಷಣವೇ ಭದ್ರತಾ ಕವಚ ಮರುಸ್ಥಾಪಿಸುವಂತೆ ನಗರ ಪೊಲೀಸರಿಗೆ ಸೂಚಿಸಿತ್ತು. ಬಳಿಕ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು, ಕುಸ್ತಿಪಟುಗಳಿಗೆ ಒದಗಿಸಲಾದ ಭದ್ರತೆಯನ್ನು ಹಿಂತೆಗೆದುಕೊಂಡಿಲ್ಲ. ಭವಿಷ್ಯದಲ್ಲಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಹರಿಯಾಣ ಪೊಲೀಸರಿಗೆ ವಿನಂತಿಸಲು ನಿರ್ಧರಿಸಲಾಗಿದೆ. ಆದ್ರೆ ನಿಯೋಜಿತ ದೆಹಲಿ ಪೊಲೀಸ್ ಪಿಎಸ್‌ಒಗಳು ಈ ನಿರ್ಧಾರವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಈ ಕಾರಣದಿಂದಾಗಿ ಗುರುವಾರ ವರದಿ ಮಾಡಲು ತಡಮಾಡಿದ್ದಾರೆ, ಗೊಂದಲವನ್ನು ಸರಿಪಡಿಸಿದ್ದೇವೆ ಎಂದು ತಿಳಿಸಿದರು.

    ಹಿಂದೆ ಏನಾಗಿತ್ತು?
    ಈ ಹಿಂದೆ ಕುಸ್ತಿ ಫೆಡರೇಷನ್‌ (Wrestling Federation of India) ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಬಂದಿದ್ದರಿಂದ ದೂರು ದಾಖಲಾಗಿತ್ತು. ನಂತರ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದವು. ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್‌, ವಿನೇಶ್‌ ಫೋಗಟ್‌, ಬಜರಂಗ್‌ ಪುನಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದವು. ಕೊನೆಗೆ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮಧ್ಯಪ್ರವೇಶಿಸಿ ಸಾಂಧಾನ ನಡೆಸಿದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದರು. ಈ ವರ್ಷಾರಂಭದಲ್ಲಿ ಬ್ರಿಜ್‌ ಭೂಷಣ್‌ ಅಧ್ಯಕ್ಷಗಿರಿಯಿಂದ ಕೆಳಗಿಳಿದಿದ್ದರು

    ಇತ್ತೀಚೆಗೆ ಒಲಿಂಪಿಕ್ಸ್‌ ಫೈನಲ್‌ ತಲುಪಿ ವಿನೇಶ್‌ ಅನರ್ಹಗೊಂಡರು. ಭಾರತಕ್ಕೆ ಮರಳಿದ ಬಳಿಕ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಸತ್ಯವೇ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದ್ದರು.

  • ದೆಹಲಿ, ಮುಂಬೈನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಐಸಿಸ್ ಶಂಕಿತ ಭಯೋತ್ಪಾದಕ ಅರೆಸ್ಟ್‌

    ದೆಹಲಿ, ಮುಂಬೈನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಐಸಿಸ್ ಶಂಕಿತ ಭಯೋತ್ಪಾದಕ ಅರೆಸ್ಟ್‌

    ನವದೆಹಲಿ: ಇಸ್ಲಾಮಿಕ್ ಸ್ಟೇಟ್ (ISIS) ಮಾಡ್ಯೂಲ್‌ನ ಪ್ರಮುಖ ಸದಸ್ಯ ರಿಜ್ವಾನ್ ಅಬ್ದುಲ್ ಹಾಜಿ ಅಲಿಯನ್ನು ದೆಹಲಿ ಪೊಲೀಸರ ವಿಶೇಷ ಸೆಲ್ (Delhi Police Speical Cell) ಶುಕ್ರವಾರ (ಆ.9) ಮುಂಜಾನೆ ಬಂಧಿಸಿದೆ.

    ಪುಣೆ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಲಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ದೆಹಲಿಯ ದರಿಯಾಗಂಜ್ ನಿವಾಸಿಯಾಗಿರುವ ಅಲಿ, ಪುಣೆ ಐಸಿಸ್ ಮಾಡ್ಯೂಲ್‌ನ (ISIS Module) ಇತರ ಸದಸ್ಯರೊಂದಿಗೆ ದೆಹಲಿ ಮತ್ತು ಮುಂಬೈನಲ್ಲಿ (Mumbai) ವಿಧ್ವಂಸಕ ಕೃತ್ಯ ಎಸಗಲು ಹಲವಾರು ಪ್ಲ್ಯಾನ್‌ ಮಾಡಿದ್ದನು ಎಂದು ಆರೋಪಿಸಲಾಗಿದೆ.

    ಬಂಧನದ ವೇಳೆ ಅಲಿ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪುಣೆ ಐಸಿಸ್ ಮಾಡ್ಯೂಲ್‌ನ ಹಲವಾರು ಸದಸ್ಯರನ್ನು ಈ ಹಿಂದೆ ಪುಣೆ ಪೊಲೀಸರು ಮತ್ತು ಎನ್‌ಐಎ ಅಧಿಕಾರಿಗಳ ತಂಡ ಬಂಧಿಸಿತ್ತು.

    ಈ ಹಿಂದೆಯೇ 11 ಆರೋಪಿಗಳ ಬಂಧನ:
    ಮಹಾರಾಷ್ಟ್ರದ ಪುಣೆಯಲ್ಲಿ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ರಾಸಾಯನಿಕಗಳು ಮತ್ತು ಐಸಿಸ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2023 ರಲ್ಲಿ ಎನ್‌ಐಎ ಒಟ್ಟು 11 ಆರೋಪಿಗಳನ್ನು ಬಂಧಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ಭಯೋತ್ಪಾದನಾ ನಿಗ್ರಹ ಸಂಸ್ಥೆ ಸಲ್ಲಿಸಿದ ಪೂರಕ ಆರೋಪ ಪಟ್ಟಿಯಲ್ಲಿ ಇತರ ಮೂವರು ಆರೋಪಿಗಳೊಂದಿಗೆ ರಿಜ್ವಾನ್ ಅಲಿಯನ್ನು ಹೆಸರಿಸಲಾಗಿತ್ತು.

    ಎಲ್ಲಾ ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಸದಸ್ಯರಾಗಿದ್ದರು. ಹಾಗೂ ಎನ್‌ಐಎ ಪ್ರಕಾರ, ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುವ ದೊಡ್ಡ ಪಿತೂರಿಯ ಭಾಗವಾಗಿ ಪುಣೆ ಮತ್ತು ಸುತ್ತಮುತ್ತ ಭಯೋತ್ಪಾದನೆಯ ಯೋಜನೆಗಳಲ್ಲಿ ಭಾಗಿಯಾಗಿದ್ದರು. ಈ ವ್ಯಕ್ತಿಗಳು ಪುಣೆಯ ಕೊಂಧ್ವಾದಲ್ಲಿ ಐಇಡಿ ಫ್ಯಾಬ್ರಿಕೇಶನ್ ತರಬೇತಿಯನ್ನು ಪಡೆದಿದ್ದರು ಮತ್ತು ನಿಯಂತ್ರಿತ ಸ್ಫೋಟವನ್ನು ಸಹ ನಡೆಸಿದ್ದರು ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.

    ಪಶ್ಚಿಮ ಘಟ್ಟದ ​​ಪ್ರದೇಶಗಳನ್ನು ಅಡಗುತಾಣ ಮಾಡಿಕೊಂಡಿದ್ದರು. ಭಯೋತ್ಪಾದಕ ದಾಳಿಗಳನ್ನು ನಡೆಸಲು ಮಹಾರಾಷ್ಟ್ರ ಮತ್ತು ಗುಜರಾತ್‌ನಾದ್ಯಂತ ನಗರಗಳಲ್ಲಿ ಸ್ಥಳಗಳನ್ನು ಪರಿಶೀಲಿಸಿದ್ದರು. ಅಲ್ಲದೇ ಭಯೋತ್ಪಾದಕ ದಾಳಿಗೆ ಶೂಟಿಂಗ್‌ ತರಬೇತಿಯನ್ನೂ ಪಡೆದಿದ್ದರು ಎಂದು ಎನ್‌ಐಎ ತಿಳಿಸಿದೆ.

  • ಬರ್ಗರ್ ಕಿಂಗ್ ರೆಸ್ಟೋರೆಂಟ್ ಶೂಟೌಟ್ ಕೇಸ್ – ಮೂವರು ಗ್ಯಾಂಗ್‍ಸ್ಟರ್‌ಗಳ ಎನ್‍ಕೌಂಟರ್

    ಬರ್ಗರ್ ಕಿಂಗ್ ರೆಸ್ಟೋರೆಂಟ್ ಶೂಟೌಟ್ ಕೇಸ್ – ಮೂವರು ಗ್ಯಾಂಗ್‍ಸ್ಟರ್‌ಗಳ ಎನ್‍ಕೌಂಟರ್

    ನವದೆಹಲಿ: ದೆಹಲಿ (Delhi) ಹಾಗೂ ಹರ್ಯಾಣ ಪೊಲೀಸರು ಜಂಟಿಯಾಗಿ ನಡೆಸಿದ ಎನ್‍ಕೌಂಟರ್‌ನಲ್ಲಿ ರಜೌರಿಯ ಬರ್ಗರ್ ಕಿಂಗ್ ರೆಸ್ಟೋರೆಂಟ್‍ನಲ್ಲಿ (Delhi Burger King) ನಡೆದಿದ್ದ ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪಿ ಸೇರಿದಂತೆ ಮೂವರು ದರೋಡೆಕೋರರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎನ್‍ಕೌಂಟರ್‌ನಲ್ಲಿ ಹತರಾದ ದರೋಡೆಕೋರರನ್ನು ಆಶಿಶ್ ಕಾಲು, ವಿಕ್ಕಿ ರಿಧಾನ್ ಮತ್ತು ಸನ್ನಿ ಗುಜ್ಜರ್ ಎಂದು ಗುರುತಿಸಲಾಗಿದೆ. ಎನ್‍ಕೌಂಟರ್ ನಡೆದ ಸ್ಥಳದಿಂದ ಜಂಟಿ ಪಡೆ ಐದು ಪಿಸ್ತೂಲ್‍ಗಳನ್ನು ವಶಪಡಿಸಿಕೊಂಡಿದೆ. ಈ ದರೋಡೆಕೋರರ ತಂಡ ಉದ್ಯಮಿಗಳಿಂದ ಲಕ್ಷಾಂತರ ರೂ. ಸುಲಿಗೆ ಮಾಡುತ್ತಿತ್ತು ಎಂದು ಪೊಲಿಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ 6 ದಿನ ಇ.ಡಿ ಕಸ್ಟಡಿಗೆ

    ಜೂ.18 ರಂದು ಬರ್ಗರ್ ಕಿಂಗ್ ರೆಸ್ಟೋರೆಂಟ್‍ನಲ್ಲಿ ಅಮನ್ ಎಂಬಾತನನ್ನು ಹತ್ಯೆಗೈಯಲಾಗಿತ್ತು. ಈ ವೇಳೆ ಆತನೊಂದಿಗೆ ಕುಳಿತಿದ್ದ ಮಹಿಳೆ ತನ್ನ ಫೋನ್‍ನಲ್ಲಿ ವ್ಯಕ್ತಿಯೊಬ್ಬನಿಗೆ ಚಿತ್ರವನ್ನು ತೋರಿಸಿದ್ದಳು. ಬಳಿಕ ಆತನ ಮೇಲೆ ಮೊದಲು ಗುಂಡು ಹಾರಿಸಲಾಯಿತು. ಬಳಿಕ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಪಿಸ್ತೂಲುಗಳಿಂದ ಆತನ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ ಅಮನ್ ಬಿಲ್ಲಿಂಗ್ ಕೌಂಟರ್ ಕಡೆಗೆ ಓಡಿಹೋಗಿದ್ದ. ಆತನನ್ನು ಹಿಂಬಾಲಿಸಿ ಪಾಯಿಂಟ್-ಬ್ಲಾಂಕ್ ರೇಂಜ್‍ನಿಂದ ಅನೇಕ ಬಾರಿ ಗುಂಡು ಹಾರಿಸಲಾಗಿತ್ತು.

    ಶೂಟೌಟ್ ನಡೆಯುವಾಗ ಬರ್ಗರ್ ಕಿಂಗ್ ರೆಸ್ಟೋರೆಂಟ್‍ನಲ್ಲಿದ್ದ ಗ್ರಾಹಕರು ಓಡಿ ಹೋಗಿದ್ದರು. ಆದರೆ ಅಮನ್ ಜೊತೆ ಕುಳಿತಿದ್ದ ಮಹಿಳೆ ಘಟನೆಯಿಂದ ವಿಚಲಿತಳಾಗದೆ ಅಲ್ಲೇ ಇದ್ದಳು. ಬಳಿಕ ಅಲ್ಲಿಂದ ಆಕೆ ಪರಾರಿಯಾಗಿದ್ದಳು. ತನಿಖೆ ವೇಳೆ ಆಕೆ ಹನಿಟ್ರ್ಯಾಪ್ ಮಾಡಿ ಅಮನ್‍ನನ್ನು ಕರಸಿಕೊಂಡಿದ್ದಳು ಎಂದು ತಿಳಿದು ಬಂದಿತ್ತು.

    ಈ ಕೊಲೆಯ ಹೊಣೆಯನ್ನು 2022ರಲ್ಲಿ ಪೋರ್ಚುಗಲ್‍ಗೆ ಪಾರಾರಿಯಾಗಿರುವ ದರೋಡೆಕೋರ ಹಿಮಾಂಶು ಭಾವು ಹೊತ್ತುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ: ಸದನದಲ್ಲಿ ಮುಡಾ, ವಾಲ್ಮೀಕಿ ಹಗರಣ ಅಸ್ತ್ರ ಪ್ರಯೋಗಕ್ಕೆ ಸಜ್ಜು!

  • 2 ಗಂಟೆ ಅಂತರದಲ್ಲಿ ಮೂರು ಕಡೆ ಬಾಂಬ್‌ ಬೆದರಿಕೆ – ದೆಹಲಿ ಪೊಲೀಸರು ಹೈ‌ ಅಲರ್ಟ್‌

    2 ಗಂಟೆ ಅಂತರದಲ್ಲಿ ಮೂರು ಕಡೆ ಬಾಂಬ್‌ ಬೆದರಿಕೆ – ದೆಹಲಿ ಪೊಲೀಸರು ಹೈ‌ ಅಲರ್ಟ್‌

    – ದೆಹಲಿಯ 2 ಸರ್ಕಾರಿ ಆಸ್ಪತ್ರೆ, ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ!

    ನವದೆಹಲಿ: ಇಲ್ಲಿನ ಬುರಾರಿ ಸರ್ಕಾರಿ ಆಸ್ಪತ್ರೆ ಮತ್ತು ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ (Delhi Hospitals) ಬಾಂಬ್‌ ಬೆದರಿಕೆ ಕೇಳಿಬಂದ ಎರಡು ಗಂಟೆ ಅಂತರದಲ್ಲೇ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ (IGI Airport) ಬಾಂಬ್‌ ಬೆದರಿಕೆಯ ಇಮೇಲ್‌ ಬಂದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಕೂಡಲೇ ಎಚ್ಚೆತ್ತುಕೊಂಡಿರುವ ದೆಹಲಿ ಪೊಲೀಸರು (Delhi Police), ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ. ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ, ಕ್ರೈಂ ಬ್ರಾಂಚ್‌ ಅಧಿಕಾರಿ ತಂಡಗಳು ಆಸ್ಪತ್ರೆಗೆ ತೆರಳಿ ಶೋಧಕಾರ್ಯ ನಡೆಸುತ್ತಿವೆ. ಮತ್ತೊಂದು ಕಡೆ ಇ-ಮೇಲ್‌ ಮೂಲವನ್ನು ತನಿಖೆ ನಡೆಸುತ್ತಿದ್ದಾರೆ. ಸದ್ಯ ಆಸ್ಪತ್ರೆ ಹೊರಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ ಸ್ವೀಕರಿಸಿದ 2 ಗಂಟೆಗಳ ಅಂತರದಲ್ಲೇ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. IGI ಟರ್ಮಿನಲ್-3 ರಲ್ಲಿ ಭಾನುವಾರ ಸಂಜೆ 6:19ಕ್ಕೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮತ್ತು ಸಿಐಎಸ್ಎಫ್ ಸಿಬ್ಬಂದಿಯನ್ನ ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚೆಗೆ ದೆಹಲಿ ಎನ್‌ಸಿಆರ್‌ನ ಸುಮಾರು 130 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಇದರಿಂದ ಕೆಲಕಾಲ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಬಳಿಕ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ನಿಂದ ತೆರವುಗೊಳಿಸಿ, ತೀವ್ರ ಶೋಧ ನಡೆಸಲಾಗಿತ್ತು.

    ಇದೀಗ ಬಾಂಬ್‌ ಬೆದರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವಾಲಯ, ಬಾಂಬ್ ಬೆದರಿಕೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಬೆಂಗಳೂರಿನ ಶಾಲೆಗಳಿಗೂ ಬೆದರಿಕೆ ಬಂದಿದ್ದವು. ಈ ಬಗ್ಗೆ ಜನರು ವಿಚಲಿತರಾಗಬೇಕಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ತಿಳಿಸಿದ್ದಾರೆ.

  • ಪ್ರತಿಭಟಿಸುತ್ತಿದ್ದ ಟಿಎಂಸಿ ಸಂಸದರು ಸೇರಿ 10 ನಾಯಕರನ್ನು ಎಳೆದೊಯ್ದ ಪೊಲೀಸರು

    ಪ್ರತಿಭಟಿಸುತ್ತಿದ್ದ ಟಿಎಂಸಿ ಸಂಸದರು ಸೇರಿ 10 ನಾಯಕರನ್ನು ಎಳೆದೊಯ್ದ ಪೊಲೀಸರು

    ನವದೆಹಲಿ: ಭಾರತ ಚುನಾವಣಾ ಆಯೋಗದ ಕಚೇರಿ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ತೃಣಮೂಲ ಕಾಂಗ್ರೆಸ್‌ (TMC)ನ ಸಂಸದರು ಸೇರಿ 10 ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಜಾರಿ ನಿರ್ದೇಶನಾಲಯ (ED), ಕೇಂದ್ರೀಯ ತನಿಖಾ ದಳ (CBI), ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಆದಾಯ ತೆರಿಗೆ ಇಲಾಖೆ ಮುಖ್ಯಸ್ಥರನ್ನು ಬದಲಾಯಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿ ಪ್ರತಿಭಟಿಸಿದ್ದರು. ಇದನ್ನೂ ಓದಿ: ಸಿಎಂ ಸ್ಥಾನದಿಂದ ಕೇಜ್ರಿವಾಲ್ ವಜಾ ಕೋರಿ ಮೂರನೇ ಅರ್ಜಿ – ಅರ್ಜಿದಾರರನ್ನು ತರಾಟೆ ತೆಗೆದುಕೊಂಡ ಕೋರ್ಟ್; ದಂಡದ ಎಚ್ಚರಿಕೆ

    ಡೆರೆಕ್ ಒ’ಬ್ರೇನ್, ಡೋಲಾ ಸೇನ್, ಸಾಕೇತ್ ಗೋಖಲೆ ಮತ್ತು ಸಾಗರಿಕಾ ಘೋಸ್ ಸೇರಿದಂತೆ ತೃಣಮೂಲ ಕಾಂಗ್ರೆಸ್‌ನ ಹತ್ತು ಸದಸ್ಯರ ನಿಯೋಗವು ಚುನಾವಣಾ ಆಯೋಗದ ಪೂರ್ಣ ಪೀಠದ ಭೇಟಿಗೆ ಮುಂದಾಗಿತ್ತು.

    ಎನ್‌ಐಎ, ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಮುಖ್ಯಸ್ಥರನ್ನು ಬದಲಾಯಿಸುವಂತೆ ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಈ ಬೇಡಿಕೆಯೊಂದಿಗೆ ನಾವು 24 ಗಂಟೆಗಳ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಚುನಾವಣಾ ಆಯೋಗದ ಕಚೇರಿಯ ಹೊರಗೆ ಸೇನ್ ತಿಳಿಸಿದ್ದರು. ಬಿಜೆಪಿ ನೇತೃತ್ವದ ಕೇಂದ್ರದ ನಿರ್ದೇಶನದ ಮೇರೆಗೆ ಕೇಂದ್ರೀಯ ಸಂಸ್ಥೆಗಳು ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ ಆರೋಪಿಸಿದೆ. ಇದನ್ನೂ ಓದಿ: ಕೇಂದ್ರ, ರಾಜ್ಯದ ನಡುವೆ ಸ್ಪರ್ಧೆ ಬೇಡ – ಬರ ಪರಿಹಾರ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಸಲಹೆ

    ಬಿಜೆಪಿಯು ನಮ್ಮ ವಿರುದ್ಧ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಎನ್‌ಐಎ, ಇಡಿ ಮತ್ತು ಸಿಬಿಐ ಕೆಲಸ ಮಾಡುತ್ತಿರುವ ರೀತಿ ಮತ್ತು ಟಿಎಂಸಿ ನಾಯಕರನ್ನು ಗುರಿಯಾಗಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸೇನ್‌ ಹೇಳಿದ್ದರು.

  • ನಕಲಿ ಕೀಮೋಥೆರಪಿ ಔಷಧ ತಯಾರಿಸಿ, ಆಸ್ಪತ್ರೆಗೆ ವಿತರಣೆ – 7 ಮಂದಿ ಅರೆಸ್ಟ್

    ನಕಲಿ ಕೀಮೋಥೆರಪಿ ಔಷಧ ತಯಾರಿಸಿ, ಆಸ್ಪತ್ರೆಗೆ ವಿತರಣೆ – 7 ಮಂದಿ ಅರೆಸ್ಟ್

    ನವದೆಹಲಿ: ನಕಲಿ ಕೀಮೋಥೆರಪಿ ಔಷಧಗಳನ್ನು (Chemotherapy Drugs) ತಯಾರಿಸಿ ಸರಬರಾಜು ಮಾಡುತ್ತಿದ್ದ ಏಳು ಆರೋಪಿಗಳನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ವಿಫಿಲ್ ಜೈನ್ (46), ಸೂರಜ್ ಶಾತ್ (28), ನೀರಜ್ ಚೌಹಾಣ್ (38), ಪರ್ವೇಜ್ (33), ಕೋಮಲ್ ತಿವಾರಿ (39), ಅಭಿನಯ್ ಕೊಹ್ಲಿ (30) ಮತ್ತು ತುಷಾರ್ ಚೌಹಾಣ್ (28) ಎಂದು ಗುರುತಿಸಲಾಗಿದೆ. ಆರೋಪಿಗಳು ನಕಲಿ ಕ್ಯಾನ್ಸರ್ ಔಷಧಿ ತಯಾರಿಕೆ ಮತ್ತು ಪೂರೈಕೆಯಲ್ಲಿ ತೊಡಗಿರುವ ದಂಧೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧರಿಸಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ವಿಶೇಷ ಪೆÇಲೀಸ್ ಆಯುಕ್ತೆ (ಅಪರಾಧ ವಿಭಾಗ) ಶಾಲಿನಿ ಸಿಂಗ್ ಹೇಳಿದ್ದಾರೆ.

    ಪೊಲೀಸರು, ಮೋತಿ ನಗರದಲ್ಲಿ ಎರಡು ಫ್ಲಾಟ್‍ಗಳು, ಗುಗಾರ್ಂವ್‍ನ ದಕ್ಷಿಣ ನಗರದಲ್ಲಿ ಒಂದು ಫ್ಲಾಟ್, ಈಶಾನ್ಯ ದೆಹಲಿಯ ಯಮುನಾ ವಿಹಾರ್‍ನಲ್ಲಿರುವ ಒಂದು ಫ್ಲಾಟ್ ಮತ್ತು ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ ಸೇರಿ ನಾಲ್ಕು ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ನಕಲಿ ಕ್ಯಾನ್ಸರ್ ಚುಚ್ಚುಮದ್ದಿನ 140 ತುಂಬಿದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಆರೋಪಿಗಳಲ್ಲಿ ಕೆಲವರು ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • 22 ವರ್ಷಗಳ ಬಳಿಕ ಬಲೆಗೆ ಬಿದ್ದ ಸಿಮಿ ಉಗ್ರ- ಬದಲಿಸಿಕೊಂಡ ಹೆಸರೇ ಪೊಲೀಸರಿಗೆ ಸುಳಿವು

    22 ವರ್ಷಗಳ ಬಳಿಕ ಬಲೆಗೆ ಬಿದ್ದ ಸಿಮಿ ಉಗ್ರ- ಬದಲಿಸಿಕೊಂಡ ಹೆಸರೇ ಪೊಲೀಸರಿಗೆ ಸುಳಿವು

    ನವದೆಹಲಿ: 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಿಷೇಧಿತ ಸಂಘಟನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ ಉಗ್ರನನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ. ಈತ ಕರ್ನಾಟಕ, ಕೆರಳ ಸೇರಿದಂತೆ ದೇಶದ ವಿವಿಧ ಭಾಗಗಳ ಯುವಕರನ್ನು ಭಯೋತ್ಪಾದನಾ ಸಂಘಟನೆಗೆ ಸೇರಲು ಕುಮ್ಮಕ್ಕು ಕೊಡುತ್ತಿದ್ದ ಎಂದು ತಿಳಿದುಬಂದಿದೆ.

    ಬಂಧಿತ ಉಗ್ರನನ್ನು ಹನೀಫ್ ಶೇಖ್ (47) ಎಂದು ಗರುತಿಸಲಾಗಿದೆ. ಈತ ಸಿಮಿ ಮೂವ್ಮೆಂಟ್‍ನ ನಿಕಯತಕಾಲಿಕೆಯಲ್ಲಿ ಸಂಪಾದಕ ಸಹ ಆಗಿದ್ದ. ಇದರಲ್ಲಿ ಹನೀಫ್ ಹುದೈ ಎಂಬ ಹೆಸರಿನಲ್ಲಿ ಬರೆಯುತ್ತಿದ್ದ. ಈ ಹೆಸರೇ ಈತನನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿದು ಬಂದಿದೆ. ಈತನನ್ನು 2002ರಲ್ಲಿ ಉಗ್ರ ಎಂದು ಘೋಷಿಸಲಾಗಿತ್ತು.

    ಆರೋಪಿ ವಿರುದ್ಧ 2001 ರಲ್ಲಿ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಆರೋಪ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇಷ್ಟಾದರೂ ಆತನ ಗುರುತು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಪೊಲೀಸರಿಗೆ ಏಕೈಕ ಸುಳಿವು ಎಂದರೆ ಪತ್ರಿಕೆಯಲ್ಲಿ ಮುದ್ರಿಸಲಾದ `ಹನೀಫ್ ಹುದೈ’ ಎಂಬ ಹೆಸರು ಎಂದು ತಿಳಿದು ಬಂದಿದೆ.

    ಬಂಧಿತ ಹನೀಫ್ ಶೇಖ್ ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಕರ್ನಾಟಕ ಮತ್ತು ಕೇರಳದಲ್ಲಿ ಸಿಮಿ ಸಭೆಗಳಲ್ಲಿ ಪಾಲ್ಗೊಂಡಿದ್ದ. ಶೇಖ್ ನನ್ನು ಬಂಧಿಸಲು ದೆಹಲಿ ಪೊಲೀಸರು ವಿವಿಧ ರಾಜ್ಯಗಳಿಂದ ಆತನ ಬಗ್ಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದರು. ಶೇಖ್ ಮತ್ತು ಆತನ ಸಹಚರರನ್ನು ಪತ್ತೆಹಚ್ಚಲು ಪೊಲೀಸರ ತಂಡ ಮಾಹಿತಿದಾರರನ್ನು ಏಳು ರಾಜ್ಯಗಳಲ್ಲಿ ನಿಯೋಜಿಸಿತ್ತು.

    ಶೇಖ್ ತನ್ನ ಗುರುತನ್ನು ಬದಲಾಯಿಸಿಕೊಂಡು ಮಹಾರಾಷ್ಟ್ರದ (Maharashtra) ಭುಸಾವಾಲ್‍ನಲ್ಲಿರುವ ಉರ್ದು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಮಾಹಿತಿದಾರರೊಬ್ಬರು ಪೊಲೀಸರಿಗೆ ತಿಳಿಸಿದ್ದರು. ಬಳಿಕ ಆತನನನ್ನು ಪೊಲೀಸರು ಗುರುತಿಸಿದ್ದಾರೆ. ಬಂಧನದ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದ, ಆದರೆ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ಇಂದು ರೈತರಿಂದ ʻದೆಹಲಿ ಚಲೋʼ – ಗಡಿಯಲ್ಲಿ 5,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

    ಇಂದು ರೈತರಿಂದ ʻದೆಹಲಿ ಚಲೋʼ – ಗಡಿಯಲ್ಲಿ 5,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

    – ಬ್ಯಾರಿಕೇಡ್‌, ತಂತಿಗಳಿಂದ ಗಡಿಭಾಗಗಳು ಬಂದ್‌, ಸೆಕ್ಷನ್‌ 144 ಜಾರಿ

    ನವದೆಹಲಿ: ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿಯಾಗಬೇಕು, ಸ್ವಾಮಿನಾಥನ್ ವರದಿ ಜಾರಿಯಾಗಬೇಕು, ರೈತರಿಗೆ ಪಿಂಚಣಿ ಸೌಲಭ್ಯ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ರೈತರು (Farmers) ದೆಹಲಿಯಲ್ಲಿ ಮತ್ತೊಮ್ಮೆ ಐತಿಹಾಸಿಕ ಪ್ರತಿಭಟನೆ ನಡೆಸಲು ತಿರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.13 (ಇಂದು) ʻದೆಹಲಿ ಚಲೋʼಗೆ (Delhi Chalo) ಪಂಜಾಬ್‌ ಮತ್ತು ಹರಿಯಾಣ ರೈತರು ʻದೆಹಲಿ ಚಲೋʼಗೆ ಕರೆ ನೀಡಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

    ಪಂಜಾಬ್, ಹರಿಯಾಣ, ಉತ್ತರಪ್ರದೇಶದಿಂದಲೂ ರೈತರು ದೆಹಲಿಗೆ ಪ್ರವೇಶಿಸಲಿದ್ದಾರೆ. ಕರ್ನಾಟಕದಿಂದಲೂ ರೈತ ಮುಖಂಡ ಕುರುಬೂರು ಶಾಂತಕುಮಾರ್ ಭಾಗಿಯಾಗಲಿದ್ದಾರೆ. ಈ ರೈತ ಹೋರಾಟದಲ್ಲಿ ಸುಮಾರು 200 ಸಂಘಟನೆಗಳಿಂದ 25,000 ರೈತರು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಇದನ್ನೂ ಓದಿ: 1,078 ತಂಡಗಳು, 16,100 ಆಟಗಾರರು – ಮೋದಿ ತವರಲ್ಲಿ ʻಲೋಕಸಭಾ ಪ್ರೀಮಿಯರ್‌ ಲೀಗ್‌ʼಗೆ ಚಾಲನೆ

    ಅಧಿಕ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವುದರಿಂದ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಪೊಲೀಸರು (Delhi Police) ಸೆಕ್ಷನ್‌ 144 ಜಾರಿಗೊಳಿಸಿದ್ದಾರೆ. ಜೊತೆಗೆ ರಾಜಧಾನಿಯಲ್ಲಿ ಎಲ್ಲಾ ರೀತಿಯ ರ‍್ಯಾಲಿ, ಮೆರವಣಿಗೆ, ರಸ್ತೆ ಮಾರ್ಗಗಳನ್ನ ನಿರ್ಬಂಧಿಸಲಾಗಿದೆ. ಟ್ಯಾಕ್ಟರ್‌ಗಳಲ್ಲಿ ಜನರನ್ನು ತುಂಬಿಕೊಂಡು ಹೋಗುವುದಕ್ಕೂ ನಿಷೇಧ ಹೇರಲಾಗಿದೆ. ಮಾರ್ಚ್‌ 12ರ ವರೆಗೂ ಈ ಕ್ರಮ ಇದೇ ರೀತಿ ಮುಂದುವರಿಯಲಿದೆ. ಸಿಂಘು, ಘಾಜಿಪುರ, ಟಿಕ್ರಿ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಭಾರೀ ಭದ್ರತೆ:
    ಪ್ರತಿಭಟನೆ ತಡೆಯಲು ಭದ್ರತೆಗೆ 11 ಪ್ಯಾರಾ ಮಿಲಿಟರಿ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ. 5,000ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ. ಇದರೊಂದಿಗೆ ತಂತಿಗಳಿಂದ ಹಾಗೂ ಬ್ಯಾರಿಕೇಡ್‌ಗಳಿಂದ ಗಡಿ ರಸ್ತೆಗಳನ್ನ ಬಂದ್‌ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಮಾಜಿ ಸಿಎಂ ಅಶೋಕ್ ಚವಾಣ್ ಗುಡ್ ಬೈ- ಲೋಕಸಭೆ ಹೊಸ್ತಿಲಲ್ಲಿ ಮಹಾರಾಷ್ಟ್ರದಲ್ಲಿ ಕೈಗೆ ಹಿನ್ನಡೆ

    ರೈತರೊಂದಿಗೆ ಅಮಾನವೀಯ ವರ್ತನೆ ಆರೋಪ:
    ಇನ್ನೂ ದೆಹಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಆಗಮಿಸುತ್ತಿದ್ದ ರೈತರು, ರೈತ ಮಹಿಳೆಯರ ಮೇಲೆ ಮಧ್ಯಪ್ರದೇಶದ ಪೊಲೀಸರು ಬಲವಂತವಾಗಿ ಬೆದರಿಸಿ ದಬ್ಬಾಳಿಕೆ ನಡೆಸಿದ್ದಾರೆ. ಮಹಿಳೆಯರನ್ನು ಎಳೆದಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ರೈತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನೂ ಕೊಡಿಸದೇ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ. ಇದನ್ನೂ ಓದಿ: ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ಐದು ಮಂದಿ ಸಜೀವ ದಹನ

    ಅಲ್ಲದೇ ಪ್ರತಿಭಟನೆಗೆ ತೆರಳುತ್ತಿದ್ದ ಬೆಳಗಾವಿ ಜಿಲ್ಲೆಯ ಗುರುಸಿದ್ದಪ್ಪ, ಧಾರವಾಡ ಜಿಲ್ಲೆಯ ಪರಶುರಾಮ್, ಚಾಮರಾಜನಗರ ಜಿಲ್ಲೆಯ ಪಟೇಲ್ ಶಿವಮೂರ್ತಿ, ಮೂಕಳ್ಳಿ ಮಾದೇವಸ್ವಾಮಿ, ಹಾಸನ ಜಿಲ್ಲೆಯ ಧರ್ಮರಾಜ್, ಮೈಸೂರು ಜಿಲ್ಲೆಯ ಬರಡನಪುರ ನಾಗರಾಜ್, ಮಹೇಶ್, ಉಡಿಗಾಲ ರೇವಣ್ಣ, ಕುರುಬೂರು ಸಿದ್ದೇಶ್, ಗುರುಸ್ವಾಮಿ, ಗೌರಿಶಂಕರ್,ಕಮಲಮ್ಮ, ಪ್ರೇಮ, ಮಮತಾ, ಶ್ವೇತಾ, ನಾಗವೇಣಿ, ಪ್ರದೀಪ್ ಕುರುಬೂರು,. ಮಂಜೇಶ್ ಸೇರಿ ನೂರಕ್ಕೂ ಅಧಿಕ ರೈತರನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಶಾಂತಕುಮಾರ್‌ ದೂರಿದ್ದಾರೆ.

  • ಗೃಹ ಇಲಾಖೆ ಕಾರ್ಯದರ್ಶಿಗೆ ನಿಂದನೆ- ದೆಹಲಿ ಪೊಲೀಸರಿಂದ ಆರೋಪಿ ಬಂಧನ

    ಗೃಹ ಇಲಾಖೆ ಕಾರ್ಯದರ್ಶಿಗೆ ನಿಂದನೆ- ದೆಹಲಿ ಪೊಲೀಸರಿಂದ ಆರೋಪಿ ಬಂಧನ

    ತುಮಕೂರು: ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ಕರೆ ಮಾಡಿ ನಿಂದನೆ ಮಾಡಿದ ಆರೋಪದ ಮೇಲೆ ಪಾವಗಡ ತಾಲೂಕಿನ ವೆಂಕಟಾಪುರದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಗ್ರಾಮದ ನಿರಂಜನ್ (40) ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ಆರೋಪಿ ಫೋನ್ ಮಾಡಿ ನಿಂದನೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಆತನನ್ನ ಹುಡುಕಿಕೊಂಡು ದೆಹಲಿ ಪೊಲೀಸರು ಬಂದಿದ್ದು, ಇದೀಗ ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು CWRC ಶಿಫಾರಸು

    ಎಂಜಿನಿಯರ್ ಪದವೀಧರನಾಗಿರುವ ನಿರಂಜನ್, ಕೆಲಸವಿಲ್ಲದೇ ನಿರುದ್ಯೋಗಿಯಾಗಿದ್ದು ಸದಾ ಮನೆಯಲ್ಲೇ ಇರುತ್ತಿದ್ದ ಎಂಬ ಮಾಹಿತಿ ದೊರಕಿದೆ. ಕೆಲಸ ಸಿಗದ ಹಿನ್ನೆಲೆ ಮನನೊಂದು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ. ನಿರಂಜನ್ ನಿಂದನೆ ಮಾಡಿರುವ ಮಾಹಿತಿ ಬಗ್ಗೆ ಪೊಲೀಸರು ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ.

    ಆರೋಪಿಯ ಸ್ನೇಹಿತರು ಹಾಗೂ ಗ್ರಾಮಸ್ಥರ ಬಳಿ ಸ್ಥಳೀಯ ಪೊಲೀಸರ ಸಹಾಯದಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದನ್ನೂ ಓದಿ: ಅಪಘಾತದಿಂದ ಯುವಕನ ಸಾವಿಗೆ ನಾನೇ ಕಾರಣ ಎಂದು ಆತ್ಮಹತ್ಯೆಗೆ ಶರಣಾದ!

  • ʻದೆಹಲಿ ಚಲೋʼ ಪ್ರತಿಭಟಗೆ ತೆರಳುತ್ತಿದ್ದ ರಾಜ್ಯದ 100ಕ್ಕೂ ಹೆಚ್ಚು ರೈತರು ಪೊಲೀಸ್‌ ವಶಕ್ಕೆ

    ʻದೆಹಲಿ ಚಲೋʼ ಪ್ರತಿಭಟಗೆ ತೆರಳುತ್ತಿದ್ದ ರಾಜ್ಯದ 100ಕ್ಕೂ ಹೆಚ್ಚು ರೈತರು ಪೊಲೀಸ್‌ ವಶಕ್ಕೆ

    ನವದೆಹಲಿ: ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿಯಾಗಬೇಕು, ಸ್ವಾಮಿನಾಥನ್ ವರದಿ ಜಾರಿಯಾಗಬೇಕು, ರೈತರಿಗೆ ಪಿಂಚಣಿ ಸೌಲಭ್ಯ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ರೈತರು ದೆಹಲಿಯಲ್ಲಿ ಮತ್ತೊಮ್ಮೆ ಐತಿಹಾಸಿಕ ಪ್ರತಿಭಟನೆ (Delhi Protest) ನಡೆಸಲು ತಿರ್ಮಾನಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲು ಕರ್ನಾಟಕದಿಂದ ಆಗಮಿಸುತ್ತಿದ್ದ ರೈತರನ್ನು ಮಧ್ಯಪ್ರದೇಶದ ಭೂಪಾಲ್ ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ‌.

    ರೈತರೊಂದಿಗೆ ಅಮಾನವೀಯ ವರ್ತನೆ:
    ದೆಹಲಿಗೆ ಆಗಮಿಸುವ ವೇಳೆ ಭೂಪಾಲ್ ರೈಲ್ವೆ ನಿಲ್ದಾಣದಲ್ಲಿ ಮಧ್ಯರಾತ್ರಿ ಎರಡು ಗಂಟೆ ಸಮಯದಲ್ಲಿ ರೈಲಿನ ಒಳಗೆ ನುಗ್ಗಿದ ಪೊಲೀಸರು ಬಲವಂತವಾಗಿ ಬೆದರಿಸಿ ದಬ್ಬಾಳಿಕೆ ನಡೆಸಿ, ಮಹಿಳೆಯರನ್ನೂ ಸೇರಿ ರೈತರನ್ನು (Farmers) ರೈಲಿನ ಒಳಗೆ ಎಳೆದಾಡಲಾಗಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನೂ ಕೊಡಿಸದೇ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ‌. ಇದನ್ನೂ ಓದಿ: 200 ಸಂಘಟನೆಗಳು, 20,000 ರೈತರಿಂದ ನಾಳೆ `ದೆಹಲಿ ಚಲೋ’ – ದೆಹಲಿ ಗಡಿ ಬಂದ್!

    ಬೆಳಗಾವಿ (Belagavi) ಜಿಲ್ಲೆಯ ಗುರುಸಿದ್ದಪ್ಪ, ಧಾರವಾಡ ಜಿಲ್ಲೆಯ ಪರಶುರಾಮ್, ಚಾಮರಾಜನಗರ ಜಿಲ್ಲೆಯ ಪಟೇಲ್ ಶಿವಮೂರ್ತಿ, ಮೂಕಳ್ಳಿ ಮಾದೇವಸ್ವಾಮಿ, ಹಾಸನ ಜಿಲ್ಲೆಯ ಧರ್ಮರಾಜ್, ಮೈಸೂರು ಜಿಲ್ಲೆಯ ಬರಡನಪುರ ನಾಗರಾಜ್, ಮಹೇಶ್, ಉಡಿಗಾಲ ರೇವಣ್ಣ, ಕುರುಬೂರು ಸಿದ್ದೇಶ್, ಗುರುಸ್ವಾಮಿ, ಗೌರಿಶಂಕರ್,ಕಮಲಮ್ಮ, ಪ್ರೇಮ, ಮಮತಾ, ಶ್ವೇತಾ, ನಾಗವೇಣಿ, ಪ್ರದೀಪ್ ಕುರುಬೂರು,. ಮಂಜೇಶ್ ಸೇರಿ ನೂರಕ್ಕೂ ಅಧಿಕ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌.

    ಘಟನೆಯ ಬಗ್ಗೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುರುಬೂರು ಶಾಂತಕುಮಾರ್ (Kurubur Shantakumar), ನಾಳೆ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆಗೆ ತಿರ್ಮಾನಿಸಿದೆ. ಭರವಸೆಗಳನ್ನು ನೀಡಿ ಒಂದು ವರ್ಷವಾದರೂ ಸರ್ಕಾರ ಬೇಡಿಕೆ ಈಡೇರಿಸಿಲ್ಲ. ರೈತರ ಸಾಲ ಮನ್ನಾ, ರೈತರಿಗೆ ಪಿಂಚಣಿ, ಬೆಂಬಲ ಬೆಲೆ ಕಾನೂನು, ಸ್ವಾಮಿನಾಥನ್ ವರದಿ ಅನಿಷ್ಠಾನಕ್ಕೆ ಮನವಿ ಮಾಡಿದೆ ಕೇಂದ್ರ ಸರ್ಕಾರ ಈವರೆಗೂ ಬೇಡಿಕೆ ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆಗೆ ಕರೆ ನೀಡಿದೆ. ಇದನ್ನೂ ಓದಿ: ಆಂಧ್ರ ಸಿಎಂ ಜಗನ್‌ ತಮ್ಮ ಚಿಕ್ಕಪ್ಪನನ್ನೇ ಹತ್ಯೆಗೈದಿದ್ದಾರೆ – ಎನ್.ಚಂದ್ರಬಾಬು ನಾಯ್ಡು ಪುತ್ರ ಗಂಭೀರ ಆರೋಪ

    ಫೆ.13ರಂದು ನಡೆಯಲಿರುವ ಪ್ರತಿಭಟನೆಗೂ ಮುನ್ನ ರೈತರನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ. ದೆಹಲಿಗೆ ಆಗಮಿಸುವ ರೈತರನ್ನು ತಡೆಯಲಾಗುತ್ತಿದೆ. ಕರ್ನಾಟಕದಿಂದ ಆಗಮಿಸುತ್ತಿದ್ದ ನೂರಕ್ಕೂ ಅಧಿಕ ರೈತರನ್ನು ಭೂಪಾಲ್ ನಲ್ಲಿ ವಶಕ್ಕೆ ಪಡೆದು, ರೈತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ನನ್ನ ಪತ್ನಿಯೂ ಸೇರಿ ಹಲವು ಮಹಿಳೆಯರು ಗಾಯಗೊಂಡಿದ್ದಾರೆ ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ದೊಡ್ಡ ಗೆಲುವು – ಕತಾರ್‌ನಲ್ಲಿ ಅರೆಸ್ಟ್‌ ಆಗಿದ್ದ ನೌಕಾ ಅಧಿಕಾರಿಗಳು ಬಿಡುಗಡೆ, ಸ್ವದೇಶಕ್ಕೆ ವಾಪಸ್‌