Tag: Delhi North East district

  • ಆತಂಕದ ಛಾಯೆ- ಈಶಾನ್ಯ ದೆಹಲಿ ತೊರೆಯುತ್ತಿರುವ ಯುವಕರು

    ಆತಂಕದ ಛಾಯೆ- ಈಶಾನ್ಯ ದೆಹಲಿ ತೊರೆಯುತ್ತಿರುವ ಯುವಕರು

    – ಸಾವಿನ ಸಂಖ್ಯೆ 20ಕ್ಕೆ ಏರಿಕೆ, 180ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಆತಂಕ ಪರಿಸ್ಥಿತಿ ನಿರ್ಮಾಣವಾಗಿದ್ದು, ಮತ್ತಷ್ಟು ದಾಳಿಗಳು ನಡೆಯುವ ಭೀತಿ ಹಿನ್ನೆಲೆಯಲ್ಲಿ ಯುವಕರು ಊರು ತೊರೆಯುತ್ತಿದ್ದಾರೆ. ಮಂಗಳವಾರ ಹಿಂಸಾಚಾರ ನಡೆದ ಸಿಲಂಪುರ್, ಜಫರಬಾದ್, ಮೌಜ್‍ಪುರ್, ಗೋಕುಲ್ಪುರಿಯ ನಿವಾಸಿಗಳು ಸ್ವಗ್ರಾಮಗಳಿಗೆ ತೆರಳುತ್ತಿದ್ದಾರೆ.

    ಉತ್ತರ ಪ್ರದೇಶ ಬಿಹಾರ ಹರಿಯಾಣ ಪಂಜಾಬ್ ಸೇರಿದಂತೆ ಇನ್ನಿತರ ರಾಜ್ಯಗಳಿಂದ ಆಗಮಿಸಿದ್ದ ಯುವಕರು ಈ ಪ್ರದೇಶಗಳಲ್ಲಿ ಗಾರ್ಮೆಂಟ್ಸ್ ಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ನಡೆದ ಘಟನೆಯಿಂದ ಆತಂಕಕ್ಕೆ ಈಡಾಗಿರುವ ಯುವಕರು ಇಂದು ಬೆಳಗ್ಗೆಯಿಂದ ಗುಂಪು ಗುಂಪಾಗಿ ಊರು ತೊರೆಯುತ್ತಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹಿಂಸಾಚಾರ – ತಡರಾತ್ರಿ ವಿಚಾರಣೆ ನಡೆಸಿದ ಹೈಕೋರ್ಟ್ ರಕ್ಷಣೆ ನೀಡಲು ಆದೇಶ

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿರುವ ಕೆಲ ಯುವಕರು, ಸದ್ಯ ಈ ಪ್ರದೇಶಗಳಲ್ಲಿ ಪರಿಸ್ಥಿತಿ ಸರಿ ಇಲ್ಲ. ಹೀಗಾಗಿ ಹಳ್ಳಿಗಳಿಗೆ ತೆರಳುತ್ತಿದ್ದೇವೆ. ಯಾವಾಗ ಏನು ಆಗುತ್ತೋ ಎನ್ನುವ ಭೀತಿ ಇದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ದೆಹಲಿಗೆ ವಾಪಸ್ ಬರುತ್ತೇವೆ ಎಂದಿದ್ದಾರೆ.

    ಈಶಾನ್ಯ ದೆಹಲಿಯಲ್ಲಿ ಕೇಂದ್ರದ ಮೀಸಲು ಪಡೆ ಹಾಗೂ ದೆಹಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅನುಮಾನಸ್ಪದ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ನಿನ್ನೆಯಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಸದ್ಯ ಪೊಲೀಸ್ ಪೇದೆ ಒಳಗೊಂಡಂತೆ 20 ಮಂದಿ ಸಾವನ್ನಪ್ಪಿದ್ದಾರೆ. 180ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.