Tag: Delhi Metro

  • ಮೆಟ್ರೋದಲ್ಲಿ ತೊಂದರೆ – ಟ್ರ್ಯಾಕ್ ಮೇಲೆ ನಡೆದು ಸಾಗಿದ ಪ್ರಯಾಣಿಕರು

    ಮೆಟ್ರೋದಲ್ಲಿ ತೊಂದರೆ – ಟ್ರ್ಯಾಕ್ ಮೇಲೆ ನಡೆದು ಸಾಗಿದ ಪ್ರಯಾಣಿಕರು

    ನವದೆಹಲಿ: ದೆಹಲಿ ಮೆಟ್ರೋ ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಹಳದಿ ಮಾರ್ಗದ ಮೆಟ್ರೋ ಮಾರ್ಗ ಮಧ್ಯೆಯೇ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಹಳಿ ಮೇಲೆ ನಡೆದುಕೊಂಡು ಹೋಗಿ ನಿಲ್ದಾಣ ತಲುಪಿದ್ದಾರೆ.

    ಮಂಗಳವಾದ ಬೆಳಗ್ಗೆ ಸುಮಾರು 9.30ಕ್ಕೆ ಹಳದಿ ಮಾರ್ಗದಲ್ಲಿ ಕುತಬ್ ಮಿನಾರ್ ನಿಲ್ದಾಣದಿಂದ ಮೆಟ್ರೋ ರೈಲು ನಿಧಾನವಾಗಿ ಚಲಿಸುತ್ತಿತ್ತು. ಹೀಗೆ ಚಲಿಸುತ್ತಿರುವಾಗಲೇ ಸುಲ್ತಾನಪುರ ನಿಲ್ದಾಣಕ್ಕೆ ಮೊದಲೇ ನಿಂತಿದೆ. ಕೊನೆಗೆ ಎಮೆರ್ಜೆನ್ಸಿ ಗೇಟ್‍ನಿಂದ ಪ್ರಯಾಣಿಕರನ್ನು ಹೊರ ಬಂದು, ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಎಂಆರ್ ಸಿ, ಹೂಡಾ ಸಿಟಿ ಸೆಂಟರ್ ಮತ್ತು ಸುಲ್ತಾನಪುರ, ಸಮಯಪುರ ಬಾದಲಿ ಮತ್ತು ಕುತುಬ್ ಮಿನಾರ್ ಮಾರ್ಗ ಮಧ್ಯೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ. ಸುಲ್ತಾನಪುರ ಮತ್ತು ಕುತುಬ್ ಮಿನಾರ್ ನಿಲ್ದಾಣದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದೆ.

    ಹಳದಿ ಮಾರ್ಗದ ಮೆಟ್ರೋ ರೈಲು ಬೆಳಗ್ಗೆ ಸುಲ್ತಾನಪುರ ತಲುಪುವುದರಲ್ಲಿತ್ತು. ರೈಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಓವರ್‍ಹೆಡ್ ವಯರ್ ಕಡಿತಗೊಂಡಿದೆ. ಹೀಗಾಗಿ ಮೆಟ್ರೋ ಸಂಚಾರದಲ್ಲಿ ಅಸ್ತವ್ಯಸ್ತ ಕಂಡು ಬಂದಿದೆ. ಡಿಎಂಆರ್ ಸಿ ಸಿಬ್ಬಂದಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

  • ಮೆಟ್ರೋ ರೈಲು ಬರ್ತಿದ್ದಂತೆ ಟ್ರ್ಯಾಕ್ ಮೇಲೆ ಜಿಗಿದ!

    ಮೆಟ್ರೋ ರೈಲು ಬರ್ತಿದ್ದಂತೆ ಟ್ರ್ಯಾಕ್ ಮೇಲೆ ಜಿಗಿದ!

    ನವದೆಹಲಿ: ವ್ಯಕ್ತಿಯೋರ್ವ ಮೆಟ್ರೋ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಟ್ರ್ಯಾಕ್ ಮೇಲೆ ಜಿಗಿದಿದ್ದಾನೆ. ಇಂದು ಬೆಳಗ್ಗೆ ಗಾಜಿಯಾಬಾದ್ ಜಿಲ್ಲೆಯ ಕೌಶಂಬಿ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ವ್ಯಕ್ತಿ ಟ್ರ್ಯಾಕ್ ಮೇಲೆ ಜಿಗಿಯುತ್ತಿದ್ದಂತೆ ರೈಲನ್ನು ತಕ್ಷಣವೇ ನಿಲ್ಲಿಸಲಾಗಿತ್ತು. ಈ ವೇಳೆ ವ್ಯಕ್ತಿ ಮಹಿಳಾ ಬೋಗಿ ಮತ್ತು ಹಿಂದಿನ ಬೋಗಿಯ ಮಧ್ಯೆ ಸಿಲುಕಿಕೊಂಡಿದ್ದನು. ಕೂಡಲೇ ಮೆಟ್ರೋ ನಿಲ್ದಾಣದ ಸಿಬ್ಬಂದಿ ಆತನನ್ನು ಮೇಲೆಕ್ಕೆತ್ತಿದ್ದಾರೆ. ಬೆಳಗ್ಗೆ ಆಫೀಸ್ ಸಮಯವಾಗಿದ್ದರಿಂದ ಮೆಟ್ರೋ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತು. ಈ ವೇಳೆ ವ್ಯಕ್ತಿ ಪ್ಲಾಟ್ ಫಾರಂನಿಂದ ಟ್ರ್ಯಾಕ್ ಮೇಲೆ ಜಿಗಿದಿದ್ದಾನೆ. ಸದ್ಯ ವ್ಯಕ್ತಿಯನ್ನು ಡಿಎಂಆರ್ ಸಿ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದು, ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

    ಈ ಅವಘಡದಿಂದ ಮೆಟ್ರೋ ರೈಲು 7 ನಿಮಿಷ ನಿಲ್ದಾಣದಲ್ಲಿ ನಿಂತಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಸಂಬಂಧ ಟ್ವೀಟ್ ಮಾಡಿದ ಡಿಎಂಆರ್ ಸಿ, ನೀಲಿ ಮಾರ್ಗದ ಕೌಶಂಬಿ ಟ್ರ್ಯಾಕ್ ಮೇಲೆ ವ್ಯಕ್ತಿ ಜಿಗಿದಿದ್ದರಿಂದ ಯುಮನಾ ಬ್ಯಾಂಕ್ ಮತ್ತು ವೈಶಾಲಿ ನಿಲ್ದಾಣದಲ್ಲಿ ಸೇವೆಯ ವಿಳಂಬವಾಗಲಿದೆ ಎಂದು ಪ್ರಯಾಣಿಕರಿಗೆ ತಿಳಿಸಿದೆ.

    ಕೆಲ ಪ್ರಯಾಣಿಕರ ಪ್ರಕಾರ ವ್ಯಕ್ತಿ ರೈಲು ಹತ್ತಲು ನಿಂತಿದ್ದ. ಕಾಲು ಜಾರಿದ್ದರಿಂದ ಆತ ಟ್ರ್ಯಾಕ್ ಮೇಲೆ ಬಿದ್ದ ಎಂದು ಹೇಳಿದ್ದಾರೆ. ಈ ಸಂಬಂಧ ಅಧಿಕಾರಿಗಳು ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  • ಮಾರ್ಗ ಮಧ್ಯೆ ಕೆಟ್ಟು ನಿಂತ ಮೆಟ್ರೋ- ನಡೆದುಕೊಂಡ ಹೋದ ಪ್ರಯಾಣಿಕರು

    ಮಾರ್ಗ ಮಧ್ಯೆ ಕೆಟ್ಟು ನಿಂತ ಮೆಟ್ರೋ- ನಡೆದುಕೊಂಡ ಹೋದ ಪ್ರಯಾಣಿಕರು

    ನವದೆಹಲಿ: ಭಾನುವಾರ ದೇಶದ ರಾಜಧಾನಿ ಜನರ ರಕ್ಷಾ ಬಂಧನ ದಿನದಂದು ದೆಹಲಿ ಮೆಟ್ರೋ ತಣ್ಣೀರು ಎರಚಿದೆ. ದೆಹಲಿಯ ಹಳದಿ ಮಾರ್ಗದ ಮೆಟ್ರೋ ತಾಂತ್ರಿಕ ಕಾರಣದಿಂದ ಮಧ್ಯೆದಲ್ಲಿಯೇ ನಿಂತ ಪರಿಣಾಮ ಜನ ಮಾರ್ಗದಲ್ಲೇ ನಡೆದುಕೊಂಡು ಹೋಗಿದ್ದಾರೆ.

    ಉತ್ತರ ದೆಹಲಿ ಮತ್ತು ಹರಿಯಾಣದ ಗುರಗಾಂವ್ ನ್ನು ಸಂಪರ್ಕಿಸುವ ರೈಲು ಪ್ರತಿದಿನದಂತೆ ದೆಹಲಿಯ ಹಳದಿ ಮಾರ್ಗದಲ್ಲಿಯೂ ಸಂಚಾರ ಆರಂಭಿಸಿತ್ತು. ಭಾನುವಾರ ರಕ್ಷಾ ಬಂಧನ ಆಗಿರೋದರಿಂದ ಅಂದು ಹೆಚ್ಚಿನ ರೈಲುಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಎಂಆರ್‍ಸಿ ತಿಳಿಸಿತ್ತು. ಆದ್ರೆ ಸಮಯಪುರ ಬಾದ್ಲಿ- ಹುಡಾ ಸಿಟಿಯ ಮಾರ್ಗ ಮಧ್ಯೆಯೇ ಮೆಟ್ರೋ ರೈಲು ಕೆಟ್ಟು ನಿಂತಿದೆ. ಬರೋಬ್ಬರಿ 3 ಗಂಟೆಗಳವರೆಗೆ ಮಾರ್ಗ ಮಧ್ಯೆದಲ್ಲಿಯೇ ನಿಂತಿದೆ.

    ರೈಲು ನಿಲ್ಲುತ್ತಿದ್ದಂತೆ ಆತಂಕಗೊಂಡ ಪ್ರಯಾಣಿಕರು ನಮ್ಮನ್ನು ರಕ್ಷಿಸಿ ಎಂದು ಡಿಎಂಆರ್‍ಸಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಕೊನೆಗೆ ಮೆಟ್ರೋ ಸಿಬ್ಬಂದಿ ರೈಲಿನ ಮುಂಭಾಗದ ತುರ್ತು ನಿರ್ಗಮನದ ಮೂಲಕ ಪ್ರಯಾಣಿಕರನ್ನು ಹೊರ ಬರಲು ಅನುಕೂಲ ಮಾಡಿಕೊಡಲಾಗಿತ್ತು. ಬೆಳಗ್ಗೆ 9.55 ರಿಂದ ಮಧ್ಯಾಹ್ನ 12.40 ರವರೆಗೆ ಹಳದಿ ಮಾರ್ಗದ ಸಮಯಪುರ ಬಾದ್ಲಿ ಮತ್ತು ಹೂಡಾ ಸಿಟಿ ನಡುವಿನ ಸಂಚಾರ ಬಂದ್ ಆಗಿತ್ತು.

    ರಕ್ಷಾ ಬಂಧನಕ್ಕೆ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು ಹೇಳಿದ್ದ ಡಿಎಂಆರ್‍ಸಿ ತನ್ನ ಮಾತು ತಪ್ಪಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅಸಮಾಧಾನ ಹೊರಹಾಕಿದ್ದಾರೆ. ಮಾರ್ಗ ಮಧ್ಯೆಯೇ ಇಳಿದಿದ್ದರಿಂದ ಸುಮಾರು 500 ಮೀಟರ್ ವರೆಗೆ ನಡೆದುಕೊಂಡು ಬಂದು ಮುಂದಿನ ನಿಲ್ದಾಣ ತಲುಪಬೇಕಾಯಿತು. ಅಲ್ಲಿಯೂ ಸಹ ನೂರಾರು ಪ್ರಯಾಣಿಕರು ಮೆಟ್ರೋಗಾಗಿ ಕಾಯುತ್ತಿದ್ದರೆಂದು ರೈಲಿನಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪರೀಕ್ಷಾರ್ಥ ಸಂಚಾರದ ವೇಳೆ ಗೋಡೆಗೆ ಡಿಕ್ಕಿ ಹೊಡೆದ ಚಾಲಕರಹಿತ ಮೆಟ್ರೋ ರೈಲು

    ಪರೀಕ್ಷಾರ್ಥ ಸಂಚಾರದ ವೇಳೆ ಗೋಡೆಗೆ ಡಿಕ್ಕಿ ಹೊಡೆದ ಚಾಲಕರಹಿತ ಮೆಟ್ರೋ ರೈಲು

    ನವದೆಹಲಿ: ದೆಹಲಿ ಮೆಟ್ರೋದ ಮೆಜೆಂತಾ ಲೈನ್‍ನ ಚಾಲಕ ರಹಿತ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರದ ವೇಳೆ ಗೋಡೆಗೆ ಡಿಕ್ಕಿ ಹೊಡೆದಿದೆ.

    ಇಂದು ಪ್ರಾಯೋಗಿಕ ಸಂಚಾರದ ವೇಳೆ ಕಲಿಂದಿ ಕುಂಜ್ ಡಿಪೋ ಬಳಿ ರೈಲು ಗೋಡೆಗೆ ಡಿಕ್ಕಿ ಹೊಡೆದಿದ್ದು, ನೆಲಕ್ಕೆ ಬೀಳೋದ್ರಿಂದ ಸ್ವಲ್ಪದರಲ್ಲೇ ತಪ್ಪಿದೆ. ರೈಲಿನ ಬ್ರೇಕ್ ವ್ಯವಸ್ಥೆಯನ್ನ ಪರೀಕ್ಷಿಸಲಾಗಿರಲಿಲ್ಲ ಎಂದು ದೆಹಲಿ ಮೆಟ್ರೋ ಹೇಳಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

    ಪ್ರಾಯೋಗಿಕ ಪರೀಕ್ಷೆಯ ರೈಲಿನ ಬ್ರೇಕ್ ವ್ಯವಸ್ಥೆ ಪರಿಶೀಲಿಸದೆಯೇ ವರ್ಕ್‍ಶಾಪ್‍ನಿಂದ ತೆಗೆದುಕೊಂಡು ಹೋಗಲಾಗಿತ್ತು. ಇದರಿಂದಾಗಿ ರೈಲು ಗೋಡೆಗೆ ಡಿಕ್ಕಿಯಾಗಿದೆ ಎಂದು ದೆಹಲಿ ಮೆಟ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಸಾಮಾನ್ಯ ಪ್ರಕ್ರಿಯೆಯ ಪ್ರಕಾರ, ವರ್ಕ್‍ಶಾಪಿಗೆ ರೈಲು ಪ್ರವೇಶಿಸಿದಾಗ ಅದರ ಬ್ರೇಕ್ ಸ್ಥಗಿತಗೊಳಿಸಲಾಗಿರುತ್ತದೆ. ಇದರಿಂದ ರೈಲಿನ ಬ್ರೇಕ್ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಪರಿಶೀಲಿಸಬಹುದು. ಹಾಗೇ ಪ್ರಕ್ರಿಯೆ ಪ್ರಕಾರ ರೈಲು ಶೆಡ್‍ನಿಂದ ಹೊರಡುವ ಮುನ್ನ ಇಲ್ಲಿನ ಸಿಬ್ಬಂದಿ ಅದರ ಬ್ರೇಕ್ ಪರೀಕ್ಷಿಸಬೇಕು. ವರ್ಕ್‍ಶಾಪ್‍ನಲ್ಲಿ ರೈಲು ಸಂಚಾರವನ್ನು ಕೈಯಾರೆ ಮಾಡಲಾಗುತ್ತದೆ ಹೊರತು ಸಿಗ್ನಲಿಂಗ್ ವ್ಯವಸ್ಥೆಯಿಂದಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಡಿಸೆಂಬರ್ 25, ಕ್ರಿಸಮಸ್ ದಿನದಂದು ಪ್ರಧಾನಿ ನರೇಂದ್ರ ಮೋದಿ ಕಲ್ಕಾಜಿ ಮಂದಿರ್ ನಿಂದ ಬೊಟಾನಿಕಲ್ ಗಾರ್ಡನ್‍ವರೆಗಿನ ಮೆಜೆಂತಾ ಲೈನ್ ಉದ್ಘಾಟನೆ ಮಾಡಬೇಕಿತ್ತು. ಆದರೆ ಈಗ ಈ ಘಟನೆಯಿಂದಾಗಿ ಕಾರ್ಯಕ್ರಮ ನಡೆಯುವ ಬಗ್ಗೆ ಪ್ರಶ್ನೆ ಎದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  • ಡೋರ್ ಮುಚ್ಚದೆಯೆ ಮೆಟ್ರೋ ರೈಲು ಸಂಚಾರ: ವಿಡಿಯೋ ವೈರಲ್ 

    ಡೋರ್ ಮುಚ್ಚದೆಯೆ ಮೆಟ್ರೋ ರೈಲು ಸಂಚಾರ: ವಿಡಿಯೋ ವೈರಲ್ 

    ನವದೆಹಲಿ: ಮೆಟ್ರೋ ಸಂಚಾರವನ್ನು ಟ್ರಾಫಿಕ್ ಫ್ರೀ ಮಾಡಿದೆ ಅನ್ನೋ ಕಾರಣಕ್ಕೆ ಸಾಕಷ್ಟು ಮಂದಿ ಮೆಟ್ರೋ ಸಂಚಾರವನ್ನೇ ಅವಲಂಭಿಸಿದ್ದಾರೆ. ಆದರೆ ದೆಹಲಿಯಲ್ಲಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸೋಮವಾರ ರಾತ್ರಿ 10 ಗಂಟೆ ವೇಳೆಯಲ್ಲಿ ಮೆಟ್ರೋ ರೈಲು ಬಾಗಿಲು ಮುಚ್ಚದೆ ಸಂಚಾರ ನಡೆಸಿದೆ.

    ಹಳದಿ ಲೈನ್ ರೈಲು ಚೌರಿ ಬಜಾರ್ ಸ್ಟೇಷನ್‍ನಿಂದ ಕಾಶ್ಮೀರಿ ಗೇಟ್ ಸ್ಟೇಷನ್ ತನಕ ಓಪನ್ ಡೋರ್‍ನಲ್ಲೇ ಸಂಚಾರ ಮಾಡಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಈ ದೃಶ್ಯವನ್ನು ರೈಲಿನಲ್ಲಿ ಸಂಚಾರ ಮಾಡುತ್ತಿದ್ದ ಪ್ರಯಾಣಿಕರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೆಟ್ರೋ ಸೇಫ್ಟಿ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    ಒಂದು ಡೋರ್‍ನಲ್ಲಿ ತೊಂದರೆಯಾಗಿತ್ತು ಹಾಗೂ ಡಿಎಂಆರ್‍ಸಿ ಸಿಬ್ಬಂದಿ ಡೋರ್ ಹತ್ತಿರ ಕಾವಲಾಗಿ ನಿಂತಿದ್ದರು. ವಿಳಂಬ ಆಗಬಾರದು ಎಂಬ ಕಾರಣ ರೈಲನ್ನು ವಿಶ್ವವಿದ್ಯಾಲಯ ಸ್ಟೇಷನ್‍ಗೆ ಕೊಂಡೊಯ್ಯಲಾಯ್ತು ಎಂದು ಮೆಟ್ರೋ ವಕ್ತಾರರು ತಿಳಿಸಿದ್ದಾರೆ.

    ಈ ಹಿಂದೆ 2014ರ ಜುಲೈನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಇದೇ ಲೈನ್‍ನಲ್ಲಿ ಘಿಟೋರ್ನಿ ಮತ್ತು ಅರ್ಜನ್‍ಘರ್ ನಿಲ್ದಾಣಗಳ ನಡುವೆ ಬಾಗಿಲು ತೆರೆದುಕೊಂಡೇ ಮೆಟ್ರೋ ರೈಲು ಸಂಚರಿಸಿತ್ತು.

    ಘಟನೆ ನಡೆದ ನಂತರ ಭದ್ರತಾ ವೈಫಲ್ಯದ ಮೇಲೆ ಟ್ರೈನ್ ಆಪರೇಟರ್‍ನನ್ನು ಅಮಾನತು ಮಾಡಲಾಗಿತ್ತು.