Tag: Delhi Hospitals

  • ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್‌

    ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್‌

    – ಪ್ರತಿಯೊಂದು ಆಸ್ಪತ್ರೆಯೂ ವೈದ್ಯಕೀಯ ಸೌಲಭ್ಯಗಳ ಫಲಕ ಅಳವಡಿಸುವಂತೆ ಸೂಚನೆ

    ನವದೆಹಲಿ: ಸರ್ಕಾರಿ, ಖಾಸಗಿ ಆಸ್ಪತ್ರೆಗಳು (Government And Private Hospitals) ಮತ್ತು ನರ್ಸಿಂಗ್ ಹೋಂಗಳು ಅತ್ಯಾಚಾರ, ಆಸಿಡ್ ದಾಳಿ ಮತ್ತು ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನಿರಾಕರಿಸುವಂತಿಲ್ಲ, ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಚಿಕಿತ್ಸೆ ನಿರಾಕರಿಸುವುದು ಅಪರಾಧವಾಗಿದ್ದು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೆ ದಂಡ ವಿಧಿಸಬಹುದು ಎಂದು ದೆಹಲಿ ಹೈಕೋರ್ಟ್ (Delhi High Court) ಮಹತ್ವದ ಅದೇಶ ನೀಡಿದೆ.

    16 ವರ್ಷದ ಬಾಲಕಿಯ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರ ಪೀಠ ಹಲವು ನಿರ್ದೇಶನಗಳನ್ನು ನೀಡಿದೆ. ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್‌ಗಳು, ವೈದ್ಯಕೀಯ ಕೇಂದ್ರಗಳು ಅತ್ಯಾಚಾರ ಸಂತ್ರಸ್ತರು/ಬದುಕುಳಿದವರು, ಪೋಕ್ಸೋ ಪ್ರಕರಣದಲ್ಲಿ ಬದುಕುಳಿದವರು ಮತ್ತು ಲೈಂಗಿಕ ದಾಳಿಗಳಿಂದ ಬದುಕುಳಿದವರು ಇತ್ಯಾದಿಗಳಿಗೆ ಉಚಿತ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸುವುದು ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

    STOP RAPE

    ದೆಹಲಿಯ ಪ್ರತಿಯೊಂದು ಆಸ್ಪತ್ರೆಯೂ ವೈದ್ಯಕೀಯ ಸೌಲಭ್ಯಗಳ ಫಲಕ ಅಳವಡಿಸಬೇಕು, ಮುಖ್ಯವಾಗಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಆಸಿಡ್ ದಾಳಿಯ ಬಲಿಪಶುಗಳು/ ಬದುಕುಳಿದವರಿಗೆ ಉಚಿತ ಹೊರರೋಗಿ ಮತ್ತು ಒಳರೋಗಿ ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸುವ ಬೋರ್ಡ್ ಅನ್ನು ಹಾಕಬೇಕು. ಅಪರಾಧಗಳಲ್ಲಿ ಬದುಕುಳಿದವರನ್ನು ತಕ್ಷಣವೇ ಪರೀಕ್ಷಿಸಬೇಕು ಮತ್ತು ಅಗತ್ಯವಿದ್ದರೆ HIV ಯಂತಹ ಲೈಂಗಿಕವಾಗಿ ಹರಡುವ ರೋಗಗಳಿಗೆ ಚಿಕಿತ್ಸೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

    ಅಂತಹ ಬಲಿಪಶು/ಬದುಕುಳಿದವರಿಗೆ ದೈಹಿಕ ಮತ್ತು ಮಾನಸಿಕ ಸಮಾಲೋಚನೆ ನೀಡಬೇಕು, ತುರ್ತು ಸಂದರ್ಭಗಳಲ್ಲಿ ಸಂತ್ರಸ್ತೆಯನ್ನು ದಾಖಲಿಸಲು ಸಂಬಂಧಪಟ್ಟ ವೈದ್ಯಕೀಯ ಸಂಸ್ಥೆಯು ಗುರುತಿನ ಪುರಾವೆಯನ್ನು ಒತ್ತಾಯಿಸಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ.

    ಮಗಳ ಮೇಲೆ ಅತ್ಯಾಚಾರವೆಸಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಯ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ನ್ಯಾಯಾಲಯ ಮತ್ತು ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಡಿಎಲ್‌ಎಸ್‌ಎ) ಪುನರಾವರ್ತಿತ ಹಸ್ತಕ್ಷೇಪದ ಹೊರತಾಗಿಯೂ ಬದುಕುಳಿದವರು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಕಾಯಬೇಕಾಯಿತು ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ.

  • 2 ಗಂಟೆ ಅಂತರದಲ್ಲಿ ಮೂರು ಕಡೆ ಬಾಂಬ್‌ ಬೆದರಿಕೆ – ದೆಹಲಿ ಪೊಲೀಸರು ಹೈ‌ ಅಲರ್ಟ್‌

    2 ಗಂಟೆ ಅಂತರದಲ್ಲಿ ಮೂರು ಕಡೆ ಬಾಂಬ್‌ ಬೆದರಿಕೆ – ದೆಹಲಿ ಪೊಲೀಸರು ಹೈ‌ ಅಲರ್ಟ್‌

    – ದೆಹಲಿಯ 2 ಸರ್ಕಾರಿ ಆಸ್ಪತ್ರೆ, ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ!

    ನವದೆಹಲಿ: ಇಲ್ಲಿನ ಬುರಾರಿ ಸರ್ಕಾರಿ ಆಸ್ಪತ್ರೆ ಮತ್ತು ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ (Delhi Hospitals) ಬಾಂಬ್‌ ಬೆದರಿಕೆ ಕೇಳಿಬಂದ ಎರಡು ಗಂಟೆ ಅಂತರದಲ್ಲೇ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ (IGI Airport) ಬಾಂಬ್‌ ಬೆದರಿಕೆಯ ಇಮೇಲ್‌ ಬಂದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಕೂಡಲೇ ಎಚ್ಚೆತ್ತುಕೊಂಡಿರುವ ದೆಹಲಿ ಪೊಲೀಸರು (Delhi Police), ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ. ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ, ಕ್ರೈಂ ಬ್ರಾಂಚ್‌ ಅಧಿಕಾರಿ ತಂಡಗಳು ಆಸ್ಪತ್ರೆಗೆ ತೆರಳಿ ಶೋಧಕಾರ್ಯ ನಡೆಸುತ್ತಿವೆ. ಮತ್ತೊಂದು ಕಡೆ ಇ-ಮೇಲ್‌ ಮೂಲವನ್ನು ತನಿಖೆ ನಡೆಸುತ್ತಿದ್ದಾರೆ. ಸದ್ಯ ಆಸ್ಪತ್ರೆ ಹೊರಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ ಸ್ವೀಕರಿಸಿದ 2 ಗಂಟೆಗಳ ಅಂತರದಲ್ಲೇ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. IGI ಟರ್ಮಿನಲ್-3 ರಲ್ಲಿ ಭಾನುವಾರ ಸಂಜೆ 6:19ಕ್ಕೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮತ್ತು ಸಿಐಎಸ್ಎಫ್ ಸಿಬ್ಬಂದಿಯನ್ನ ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚೆಗೆ ದೆಹಲಿ ಎನ್‌ಸಿಆರ್‌ನ ಸುಮಾರು 130 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಇದರಿಂದ ಕೆಲಕಾಲ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಬಳಿಕ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ನಿಂದ ತೆರವುಗೊಳಿಸಿ, ತೀವ್ರ ಶೋಧ ನಡೆಸಲಾಗಿತ್ತು.

    ಇದೀಗ ಬಾಂಬ್‌ ಬೆದರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವಾಲಯ, ಬಾಂಬ್ ಬೆದರಿಕೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಬೆಂಗಳೂರಿನ ಶಾಲೆಗಳಿಗೂ ಬೆದರಿಕೆ ಬಂದಿದ್ದವು. ಈ ಬಗ್ಗೆ ಜನರು ವಿಚಲಿತರಾಗಬೇಕಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ತಿಳಿಸಿದ್ದಾರೆ.