Tag: delhi highcourt

  • ಪ್ರತಿಭಟನೆಯ ಹಕ್ಕಿನ ಕುರಿತು ದೆಹಲಿ ಹೈಕೋರ್ಟ್ ಅಭಿಪ್ರಾಯವನ್ನ ಸ್ವಾಗತಿಸಿದ ಪಾಪ್ಯುಲರ್ ಫ್ರಂಟ್

    ಪ್ರತಿಭಟನೆಯ ಹಕ್ಕಿನ ಕುರಿತು ದೆಹಲಿ ಹೈಕೋರ್ಟ್ ಅಭಿಪ್ರಾಯವನ್ನ ಸ್ವಾಗತಿಸಿದ ಪಾಪ್ಯುಲರ್ ಫ್ರಂಟ್

    ನವದೆಹಲಿ: ಸಾಂವಿಧಾನಾತ್ಮಕವಾಗಿ ಖಾತರಿಪಡಿಸಲಾದ ಪ್ರತಿಭಟನೆಯ ಹಕ್ಕನ್ನು ಭಯೋತ್ಪಾದನಾ ಕೃತ್ಯದಂತೆ ನೋಡುವುದರ ಕುರಿತು ದಿಲ್ಲಿ ಹೈಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಹೇಳಿಕೆಯೊಂದರಲ್ಲಿ ಸ್ವಾಗತಿಸಿದ್ದಾರೆ.

    ಸಾಮಾಜಿಕ ಕಾರ್ಯಕರ್ತರಾದ ನತಾಶಾ ನರ್ವಾಲಾ ಮತ್ತು ದೇವಾಂಗನ ಕಲಿತಾ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿ ಹೋರಾಟಗಾರ ಆಸಿಫ್ ಇಕ್ಬಾಲ್ ತನ್ಹಾರಿಗೆ ಜಾಮೀನು ನೀಡುವ ಆದೇಶ ಹೊರಡಿಸುತ್ತಾ ದೆಹಲಿ ಹೈಕೋರ್ಟ್, ನಾಗರಿಕರ ಪ್ರತಿಭಟನೆಯ ಹಕ್ಕಿನ ಕುರಿತಂತೆ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಸರ್ಕಾರದ ದೃಷ್ಟಿಯಲ್ಲಿ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದನಾ ಚಟುವಟಿಕೆಯ ನಡುವಿನ ರೇಖೆಯು ತೆಳುವಾಗುತ್ತಾ ಹೋಗುತ್ತಿದೆ. ಹಾಗೆಯೇ, ಸರ್ಕಾರವು ವಿರೋಧದ ಧ್ವನಿಗಳನ್ನು ನಿಗ್ರಹಿಸಲು ಉತ್ಸುಕವಾಗಿರುವುದು ಕಂಡುಬರುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಜೊತೆಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯನ್ನು ಅನುದ್ದೇಶಿತ ವಿಧಾನದಲ್ಲಿ ಬಳಸುತ್ತಿರುವುದನ್ನೂ ಕೋರ್ಟ್ ಟೀಕಿಸಿದೆ.

    ಇದೇ ರೀತಿ ಈ ತೀರ್ಪು ರಾಜಕೀಯ ವಿರೋಧಿಗಳ ವಿರುದ್ಧ ಕರಾಳ ಕಾನೂನುಗಳ ದುರುಪಯೋಗ ಮತ್ತು ಅಸಮ್ಮತಿಯ ಧ್ವನಿಗಳನ್ನು ನಿಗ್ರಹಿಸುವ ಬಿಜೆಪಿ ಸರ್ಕಾರದ ಪ್ರಯತ್ನಗಳಿಗೆ ಒಂದು ಎಚ್ಚರಿಕೆಯಾಗಿದೆ. ನ್ಯಾಯಾಲಯದಿಂದ ಜಾಮೀನು ಪಡೆದ ಈ ಮೂರು ಮಂದಿ ದಿಲ್ಲಿ ಪೊಲೀಸರಿಂದ ನಡೆಸಲಾದ ವಿಷಕಾರಿ ರಾಜಕೀಯ ಪ್ರತೀಕಾರದ ಬಲಿಪಶುಗಳಾಗಿದ್ದಾರೆ. ಅವರನ್ನು ವಿವಾದಿತ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆಸಿದ ಪ್ರತಿಭಟನೆಗಾಗಿ ಗುರಿಪಡಿಸಲಾಯಿತು ಮತ್ತು ಈಶಾನ್ಯ ದಿಲ್ಲಿಯಲ್ಲಿ ಗಲಭೆಯ ‘ಮಾಸ್ಟರ್ ಮೈಂಡ್’ ಆಗಿರುವ ಸುಳ್ಳು ಆರೋಪದಲ್ಲಿ ಸಿಲುಕಿಸಲಾಯಿತು. ಜಾಮೀನು ದೊರೆತ ಬಳಿಕವೂ ಈ ಮೂವರನ್ನು ಬಿಡುಗಡೆಗೊಳಿಸಲು ವಿಳಂಬಿಸಿದ ದೆಹಲಿ ಪೊಲೀಸರ ಪ್ರಯತ್ನವು ನ್ಯಾಯಾಲಯ ವ್ಯಕ್ತಪಡಿಸಿದ ಕಳವಳವನ್ನು ಮತ್ತಷ್ಟು ಆಳವಾಗಿ ಚಿಂತಿಸುವಂತೆ ಮಾಡಿದೆ. ಅಂತಿಮವಾಗಿ, ನ್ಯಾಯಾಲಯಕ್ಕೆ ಅವರ ಬಿಡುಗಡೆಯ ವಾರಂಟನ್ನು ಹೊರಡಿಸಬೇಕಾಗಿ ಬಂತು. ಇದೇ ಪರಿಸ್ಥಿತಿಯಲ್ಲಿ ಜೈಲಿನಲ್ಲಿ ಕೊಳೆಯುತ್ತಿರುವಂತಹ ಅಮಾಯಕರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಈ ತೀರ್ಪು ಅವರೆಲ್ಲರಿಗೂ ನ್ಯಾಯದ ನಿರೀಕ್ಷೆಯನ್ನು ಉಜ್ವಲವಾಗಿರಿಸಿದೆ. ಇದನ್ನೂ ಓದಿ: ಬಾಬಾ ಕಾ ಡಾಬಾ ಮಾಲೀಕನಿಂದ ಆತ್ಮಹತ್ಯೆಗೆ ಯತ್ನ – ಆಸ್ಪತ್ರೆಗೆ ದಾಖಲು

  • ನಾನು ಪುರುಷನಲ್ಲ ಮಹಿಳೆ, ಲೈಂಗಿಕ ಕಿರುಕುಳ ನೀಡಲು ಹೇಗೆ ಸಾಧ್ಯ?

    ನಾನು ಪುರುಷನಲ್ಲ ಮಹಿಳೆ, ಲೈಂಗಿಕ ಕಿರುಕುಳ ನೀಡಲು ಹೇಗೆ ಸಾಧ್ಯ?

    – ದೆಹಲಿ ಕೋರ್ಟಿನಲ್ಲಿ ವಿಚಿತ್ರ ಪ್ರಸಂಗ
    – ನ್ಯಾಯಾಲಯದಲ್ಲಿ ಅವನಲ್ಲ, ಅವಳು ವಾದ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೋರ್ಟಿನಲ್ಲಿ ವಿಚಿತ್ರ ಪ್ರಸಂಗ ನಡೆದಿದೆ. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಕೋರ್ಟ್ ಮುಂದೆ ತಾನು ಪುರುಷನಲ್ಲ ಮಹಿಳೆ, ಲೈಂಗಿಕ ಕಿರುಕುಳ ನೀಡಲು ಹೇಗೆ ಸಾಧ್ಯ ಎಂದು ಸಮರ್ಥಿಸಿಕೊಂಡಿದ್ದಾನೆ.

    ಮಹಿಳಾ ಸಹೋದ್ಯೋಗಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತಿತ್ತು. ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದ ಆರೋಪಿ ಮಹಿಳೆಯರ ಬಟ್ಟೆ ಧರಿಸಿ ಮೇಕಪ್ ಹಾಗೂ ಹೇರ್ ಸ್ಟೈಲ್ ಮಾಡಿಕೊಂಡು ವಿಚಾರಣೆ ಆಗಮಿಸಿದ್ದನ್ನು ನೋಡಿ ನ್ಯಾಯಧೀಶರು ಕೆಲಕಾಲ ಗೊಂದಲಕ್ಕೆ ಒಳಗಾದರು.

    ನ್ಯಾಯಧೀಶರ ಮುಂದೆ ವಾದ ಮಂಡಿಸಿದ ಆರೋಪಿ, ತನಗೆ ಎಂದಿಗೂ ಮಹಿಳೆಯರ ಬಗ್ಗೆ ಯಾವುದೇ ಆಕರ್ಷಣೆ ಇಲ್ಲ. ಅಲ್ಲದೆ ಸ್ವತಃ ಮಹಿಳೆಯಾಗುವ ಪ್ರಕ್ರಿಯೆಯಲ್ಲಿದ್ದೇನೆ. ಬಾಲ್ಯದಿಂದಲೂ ಲೈಂಗಿಕ ಡಿಸ್ಫೊರಿಯಾದಿಂದ (sexual dysphoria) ಬಳಲುತ್ತಿದ್ದೇನೆ. ಲೈಂಗಿಕ ಡಿಸ್ಫೊರಿಯಾ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೈವಿಕ ಲಿಂಗಕ್ಕೆ ವಿರುದ್ಧವಾಗಿ ಸ್ತ್ರೀ ಅಥವಾ ಪುರುಷ ಎಂದು ತನ್ನ ಗುರುತನ್ನು ಅನುಭವಿಸಲು ಪ್ರಾರಂಭಿಸುವ ಸಮಸ್ಯೆಯಾಗಿದೆ ಎಂದು ಕೋರ್ಟ್ ಮುಂದೆ ಆರೋಪಿ ವಿವರಿಸಿದ್ದಾನೆ. ತನ್ನನ್ನು ತಾನು ಒಬ್ಬ ಮಹಿಳೆ ಎಂದು ಬಣ್ಣಿಸಿಕೊಂಡಿದ್ದಾನೆ. ಲೈಂಗಿಕ ಕಿರುಕುಳ ನೀಡಿರುವ ಮಹಿಳೆ ನನಗೆ ಸಹೋದರಿ ಸಮ. ಹೀಗಿರುವಾಗ ಹೇಗೆ ಲೈಂಗಿಕ ಕಿರುಕುಳ ನೀಡಲು ಸಾಧ್ಯ ಎಂದು ಕೋರ್ಟ್ ಮುಂದೆ ಪ್ರಶ್ನಿಸಿದ್ದಾನೆ. ಹೀಗಾಗಿ ಈ ಆರೋಪದಲ್ಲಿ ಹುರುಳಿಲ್ಲ ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ಆರೋಪದ ಕ್ರಿಮಿನಲ್ ಮೊಕದ್ದಮೆ ರದ್ದು ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ. ಆದರೆ ಆರೋಪಿಯ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

    ಕೋರ್ಟ್ ಮುಂದೆ ಹಾಜರಾಗಿದ್ದ ದೂರುದಾರ ಮಹಿಳೆ ಆರೋಪಿಯ ಈ ವಾದವನ್ನು ಒಪ್ಪಿಕೊಂಡಿಲ್ಲ. ಕೋರ್ಟ್ ಈ ಪ್ರಕರಣವನ್ನು ಇತ್ಯರ್ಥ ಪಡಿಸುವ ಮನಸ್ಸು ಮಾಡಿದ್ದರೂ ಮಹಿಳೆಯ ಪರ ವಕೀಲರು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಮಾಡಲು ಕೋರ್ಟ್ ನಿರಾಕರಿಸಿತು.

    ಪ್ರಕರಣದ ಹಿನ್ನೆಲೆ:
    2014ರಿಂದ ದೂರುದಾರ ಮಹಿಳೆ ಮತ್ತು ಆರೋಪಿ ಇಬ್ಬರು ನೊಯ್ಡಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2016ರ ಅಕ್ಟೋಬರ್‍ನಲ್ಲಿ ದಾಖಲಾದ ಎಫ್‍ಐಆರ್ ಪ್ರಕಾರ, ದೆಹಲಿಯ ಕೇನ್ನಾಟ್ ಪ್ಲೇಸ್‍ನಲ್ಲಿರುವ ಪಬ್‍ವೊಂದರಲ್ಲಿ ಪಾರ್ಟಿ ವೇಳೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ತಾವು ಕೆಲಸ ಮಾಡುತ್ತಿದ್ದ ಕಂಪನಿಗೆ ಹಲವಾರು ಬಾರಿ ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಆರೋಪಿಗಳ ಪರವಾಗಿ ತೀರ್ಮಾನ ತೆಗದುಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಕಳೆದ ಆಗಸ್ಟ್ ನಲ್ಲಿ ಕೆಳ ನ್ಯಾಯಾಲಯವು ಆರೋಪಿಯ ವಿರುದ್ಧ ವಿಚಾರಣೆ ನಡೆಯುತಿತ್ತು. ಈ ಪ್ರಕರಣ ರದ್ದು ಕೋರಿ ದೆಹಲಿ ಹೈಕೋರ್ಟ್ ನಲ್ಲಿ ಆರೋಪಿ ಅರ್ಜಿ ಸಲ್ಲಿಸಿದ್ದನು.

  • ಡಿಕೆಶಿ ತಾಯಿ, ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನವೆಂಬರ್ 4ಕ್ಕೆ ಮುಂದೂಡಿಕೆ

    ಡಿಕೆಶಿ ತಾಯಿ, ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನವೆಂಬರ್ 4ಕ್ಕೆ ಮುಂದೂಡಿಕೆ

    ನವದೆಹಲಿ: ಅಕ್ರಮ ಹಣ ವರ್ಗಾವಣೆಯ ಆರೋಪ ಹೊತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ತಾಯಿ ಹಾಗೂ ಪತ್ನಿಯ ಅರ್ಜಿ ವಿಚಾರಣೆ ನವೆಂಬರ್ 4ಕ್ಕೆ ಮುಂದೂಡಿಕೆಯಾಗಿದೆ.

    ಬೆಂಗಳೂರಿನಲ್ಲಿ ವಿಚಾರಣೆ ನಡೆಸುವಂತೆ ಡಿಕೆಶಿ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ದೆಹಲಿ ಹೈಕೋರ್ಟಿನಲ್ಲಿ ಇಂದು ವಿಚಾರಣೆಗೆ ಬಂದಿತ್ತು. ಹೀಗಾಗಿ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಇದೀಗ ವಿಚಾರಣೆಯನ್ನು ಮುಂದೂಡಿದೆ.

    ವಿಚಾರಣೆಯ ವೇಳೆ ಗೌರಮ್ಮ ಪರ ವಕೀಲರು ಬೆಂಗಳೂರಿನಲ್ಲಿ ವಿಚಾರಣೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಆದರೆ ಈ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು. ಇದುವರೆಗೂ ಯಾವುದೇ ಸಮನ್ಸ್ ಸಿಕ್ಕಿಲ್ಲ ಎಂದು ಡಿಕೆಶಿ ಪತ್ನಿ, ತಾಯಿ ಗೌರಮ್ಮ ಪರ ವಕೀಲರು ತಿಳಿಸಿದರು. ಈ ವೇಳೆ ಜಡ್ಜ್, ಹೊಸ ಸಮನ್ಸ್ ನೀಡಿ ಎಂದಾಗ ಇಡಿ ಪರ ವಕೀಲರು ಈಗಾಗಲೇ ಸಮನ್ಸ್ ನೀಡಲಾಗಿದ್ದು, ಹೊಸ ಸಮನ್ಸ್ ಅವಶ್ಯಕತೆ ಇಲ್ಲ ಎಂದಿದ್ದಾರೆ. ಹಾಗಾದ್ರೆ ಸ್ವಲ್ಪ ಕಾಯಿರಿ. ಸಮನ್ಸ್ ತಲುಪಬಹುದು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದು, ವಿಚಾರಣೆ ನ.4ಕ್ಕೆ ಮುಂದೂಡಿದರು.

    ಈ ಹಿಂದೆ ಅಕ್ಟೋಬರ್ 17 ಕ್ಕೆ ವಿಚಾರಣೆ ಬರುವಂತೆ ಡಿಕೆ ತಾಯಿ ಮತ್ತು ಮಡದಿಗೆ ಇಡಿಯಿಂದ ಸಮನ್ಸ್ ನೀಡಲಾಗಿತ್ತು. ಆದರೆ ಸಮನ್ಸ್ ರದ್ದು ಮಾಡಬೇಕು, ಬೆಂಗಳೂರಿನಲ್ಲಿ ವಿಚಾರಣೆ ನಡೆಸಬೇಕು ಅಂತ ಕೋರಿ ಡಿಕೆಶಿ ಪತ್ನಿ ಮತ್ತು ತಾಯಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಇಂದಿಗೆ ವಿಚಾರಣೆ ನಿಗದಿ ಮಾಡಿತ್ತು. ಅಲ್ಲದೆ 7 ದಿನಗಳ ಕಾಲ ಸಮನ್ಸ್ ನೀಡದಂತೆ ಇಡಿಗೆ ಸೂಚನೆ ನೀಡಿತ್ತು. ಈಗಾಗಲೇ 7 ದಿನ ಕಳೆದಿರುವ ಹಿನ್ನೆಲೆಯಲ್ಲಿ ನಾಳೆ ವಿಚಾರಣೆ ಬನ್ನಿ ಅಂತ ಡಿಕೆ ತಾಯಿ ಮತ್ತು ಮಡದಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.

  • ನನಗೋಸ್ಕರ ರಸ್ತೆಗಿಳಿದು ಹೋರಾಟ ಮಾಡಿದವರಿಗೆ ದೊಡ್ಡ ನಮಸ್ಕಾರ: ಡಿಕೆಶಿ

    ನನಗೋಸ್ಕರ ರಸ್ತೆಗಿಳಿದು ಹೋರಾಟ ಮಾಡಿದವರಿಗೆ ದೊಡ್ಡ ನಮಸ್ಕಾರ: ಡಿಕೆಶಿ

    – ತಿಹಾರ್ ಜೈಲಿನಿಂದ ಹೊರ ಬಂದ ಕನಕಪುರ ಬಂಡೆ
    – 48 ದಿನಗಳ ತಿಹಾರ್ ಜೈಲ್ ಸೆರೆವಾಸ ಅಂತ್ಯ

    ನವದೆಹಲಿ: ನನಗೋಸ್ಕರ ರಸ್ತೆಗಿಳಿದು ಹೋರಾಟ ಮಾಡಿದವರಿಗೆ ನನ್ನದೊಂದು ದೊಡ್ಡ ನಮಸ್ಕಾರ ಎಂದು ಮಾಜಿ ಸಚಿವರ ಡಿ.ಕೆ.ಶಿವಕುಮಾರ್ ಬೆಂಬಲಿಗರಿಗೆ ಧನ್ಯವಾದ ತಿಳಿಸಿದರು.

    ತಿಹಾರ್ ಜೈಲಿನಿಂದ ಹೊರ ಬಂದು ಮಾತನಾಡಿದ ಮಾಜಿ ಸಚಿವರು, ನನ್ನ ಬಂಧುಗಳು, ಕಾಂಗ್ರೆಸ್ ಕಾರ್ಯಕರ್ತರು, ನನ್ನ ಹಿತೈಶಿಗಳು, ನಾಯಕರು ನನಗಾಗಿ ಹೋರಾಡಿದರು. ಕೆಲವರು ಪೂಜೆ ಮಾಡಿ ಬೇಗ ಬಿಡುಗಡೆಯಾಗುವಂತೆ ದೇವರಲ್ಲಿ ಪಾರ್ಥನೆ ಸಲ್ಲಿಸಿದರು. ಅವರಿಗೆ ಹಾಗೂ ದೆಹಲಿ ಮತ್ತು ಬೆಂಗಳೂರಿನಲ್ಲಿ ನನ್ನ ಪರ ವಾದ ಮಂಡಿಸಿದ ವಕೀಲರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

    ನನ್ನಿಂದ ಅನೇಕ ಜನ ಕಣ್ಣೀರಿಟ್ಟಿದ್ದಾರೆ, ಕಷ್ಟ ಎದುರಿಸಿದ್ದಾರೆ, ಸಂತೋಷಪಟ್ಟಿದ್ದಾರೆ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಮುಖ್ಯ ವಿಚಾರವಾಗಿ ನಾನು ವಕೀಲರನ್ನು ನಾಳೆ ಭೇಟಿಯಾಗಬೇಕಿದೆ. ಆಮೇಲೆ ಉಳಿದ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

    ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ತಿಹಾರ್ ಜೈಲಿನಿಂದ ರಾತ್ರಿ 9:30ರ ಸುಮಾರಿಗೆ ಹೊರ ಬಂದಿದ್ದಾರೆ. ಈ ಮೂಲಕ ಮಾಜಿ ಸಚಿವರ 48 ದಿನಗಳ ತಿಹಾರ್ ಜೈಲ್ ಸೆರೆವಾಸ ಅಂತ್ಯವಾಗಿದೆ. ಜೈಲಿನಿಂದ ಹೊರ ಬಂದ ಮಾಜಿ ಸಚಿವರನ್ನು ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು.

    ಡಿ.ಕೆ.ಶಿವಕುಮಾರ್ ಅವರು ಗುರುವಾರ ವಕೀರಲನ್ನು ಭೇಟಿ ಮಾಡಲಿದ್ದಾರೆ. ಹೀಗಾಗಿ ಇಂದು ದೆಹಲಿಯ ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ.

    ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಸಂಬಂಧ ಗುರುವಾರ (ಅಕ್ಟೋಬರ್ 17)ರಂದು ಸುಮಾರು 3 ಗಂಟೆಗೂ ಅಧಿಕ ಕಾಲ ವಾದ-ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್ ನ್ಯಾ. ಸುರೇಶ್ ಕುಮಾರ್ ಕೈಟ್ ಇಂದಿಗೆ ಆದೇಶವನ್ನು ಕಾಯ್ದಿರಿಸಿದ್ದರು. ಇಂದು ಬೆಳಗ್ಗೆ ಡಿಕೆ ಶಿವಕುಕಮಾರ್ ಅವರನ್ನು ತಿಹಾರ್ ಜೈಲಿನಲ್ಲಿ ಸೋನಿಯಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಭೇಟಿ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸೋನಿಯಾ ಜೊತೆ ಆಗಮಿಸಿದ್ದರು.

  • ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

    ದೆಹಲಿ ಹೈಕೋರ್ಟಿನ ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದರೆ ಕೋರ್ಟಿಗೆ ಡಿಕೆಶಿ ಪರ ವಕೀಲರು ಬರಲಿಲ್ಲ. ಹೀಗಾಗಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

    ಕಳೆದ ವಿಚಾರಣೆಯಲ್ಲಿ ಡಿಕೆಶಿ ಪ್ರಕರಣದ ಸಂಪೂರ್ಣ ತನಿಖಾ ಪ್ರಗತಿಯನ್ನು ಕೋರ್ಟಿಗೆ ಸಲ್ಲಿಸಬೇಕು ಅಂತ ನ್ಯಾಯಾಧೀಶರು ಇಡಿ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ, ತನಿಖೆ ಪ್ರಗತಿ ವರದಿಯನ್ನು ಕೋರ್ಟಿಗೆ ಇಡಿ ಅಧಿಕಾರಿಗಳು ಸಲ್ಲಿಸಿ, ಹೆಚ್ಚುವರಿ ವರದಿ ಸಲ್ಲಿಸಬೇಕಿದೆ ಎಂದು ತಿಳಿಸಿದ್ದಾರೆ.

    ಡಿಕೆಶಿ ನ್ಯಾಯಂಗ ಬಂಧನ ನಾಳೆಗೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಡಿ ಕೋರ್ಟಿಗೆ ನಾಳೆ ಡಿಕೆಶಿ ಹಾಜರಾಗಲಿದ್ದಾರೆ. ಇತ್ತ ಹೈಕೋರ್ಟಿನಲ್ಲಿ ವಿಚಾರಣೆ ಇನ್ನೂ ಬಾಕಿಯಿದೆ.

    ಈ ಹಿಂದೆ ವಿಚಾರಣೆ ನಡೆಸಿದ್ದ ಪೀಠ ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿತ್ತು. ಡಿಕೆಶಿ ಪರ ಹಿರಿಯ ವಕೀಲರಾದ ಅಭಿಷೇಕ್ ಮನುಸಿಂಘ್ವಿ, ಮುಕುಲ್ ರೋಹಟಗಿ, ದಯಾನ್ ಕೃಷ್ಣನ್ ವಾದ ಮಂಡಿಸಬೇಕಿತ್ತು.

  • ದೆಹಲಿ ಹೈಕೋರ್ಟಿನಿಂದ ಡಿಕೆಶಿಗೆ ಸಿಗುತ್ತಾ ಬೇಲ್?

    ದೆಹಲಿ ಹೈಕೋರ್ಟಿನಿಂದ ಡಿಕೆಶಿಗೆ ಸಿಗುತ್ತಾ ಬೇಲ್?

    ನವದೆಹಲಿ: ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಇಂದು ಮಹತ್ವ ದಿನವಾಗಿದೆ. ಜಾಮೀನು ಕೋರಿ ದೆಹಲಿ ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿ ಇಂದು ವಿಚಾರಣೆ ಬರಲಿದೆ.

    ಹೌದು. ಅಕ್ರಮ ಹಣ ವರ್ಗಾವಣೆ ಬೇನಾಮಿ ಆಸ್ತಿ ಗಳಿಕೆ ಆರೋಪ ಹೊತ್ತು ಜಾರಿ ನಿರ್ದೇಶನಾಲಯ(ಇಡಿ) ಸುಳಿಯಿಂದ ನ್ಯಾಯಾಂಗ ಬಂಧನದಡಿ ತಿಹಾರ್ ಜೈಲ್ ಸೇರಿರುವ ಡಿಕೆಶಿ ಸಲ್ಲಿಸಿರುವ ಜಾಮೀನು ಅರ್ಜಿ ಇಂದು ವಿಚಾರಣೆ ಬರಲಿದೆ. ಬೆಳಗ್ಗೆ ದೆಹಲಿ ಹೈಕೋರ್ಟಿನ ನ್ಯಾ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ ಪೀಠ ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿತ್ತು. ಇಡಿ ವಿಶೇಷ ನ್ಯಾಯಾಲಯ ಜಾಮೀನು ರದ್ದು ಮಾಡಿದ್ದ ಆದೇಶ ಪ್ರಶ್ನಿಸಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ಆಲಿಸಲಿದೆ.

    ಕಳೆದ ವಿಚಾರಣೆಯಲ್ಲಿ ಡಿಕೆಶಿ ಪ್ರಕರಣದ ಸಂಪೂರ್ಣ ತನಿಖಾ ಪ್ರಗತಿಯನ್ನು ಕೋರ್ಟಿಗೆ ಸಲ್ಲಿಸಬೇಕು ಅಂತ ನ್ಯಾಯಾಧೀಶರು ಇಡಿ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ, ತನಿಖೆ ಪ್ರಗತಿ ವರದಿಯನ್ನು ಕೋರ್ಟಿಗೆ ಇಡಿ ಅಧಿಕಾರಿಗಳು ಸಲ್ಲಿಸಲಿದ್ದಾರೆ. ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿರುವ ಡಿಕೆಶಿ ಪರ ವಕೀಲರು ಮೊದಲು ವಾದ ಮಂಡಿಸಲಿದ್ದಾರೆ.

    ಡಿಕೆಶಿ ಪರ ವಕೀಲರ ವಾದ ಏನಿರಬಹುದು?
    ಡಿಕೆಶಿ 28 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಲ್ಲದೆ ಜೈಲಿನಲ್ಲೂ 2 ದಿನ ವಿಚಾರಣೆಗೆ ಒಳಪಟ್ಟಿದ್ದಾರೆ. ಅನಾರೋಗ್ಯವಿದ್ದರೂ ತನಿಖೆಗೆ ಸಹಕರಿಸಿದ್ದಾರೆ. ಪ್ರಕರಣದ ಇತರೆ ಆರೋಪಿಗಳ ವಿಚಾರಣೆಯೂ ಅಂತ್ಯಕ್ಕೆ ಬಂದಿದೆ. ಹೀಗಾಗಿ, ಡಿಕೆಶಿ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇಡುವ ಅವಶ್ಯಕತೆ ಇಲ್ಲ ಎಂದು ಡಿಕಶಿ ಪರ ವಕೀಲರು ವಾದ ಮಂಡಿಸುವ ಸಾಧ್ಯತೆಗಳಿವೆ.

    ಇಂದೇ ಇಡಿ ಪರ ವಕೀಲರು ವಾದ ಮಂಡಿಸುವ ಸಾಧ್ಯತೆ ಇದ್ದು ಹೆಚ್ಚುವರಿ ತನಿಖಾ ವರದಿಯನ್ನು ಹೈಕೋರ್ಟ್ ಮುಂದೆ ಇಡಲಿದ್ದು ಜಾಮೀನು ನೀಡದಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

    ಇಡಿ ಪರ ವಕೀಲರ ವಾದ ಏನಿರಬಹುದು..?
    ಪ್ರಕರಣ ಸಂಬಂಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದ ಡಿ.ಕೆ ಸುರೇಶ್, ಡಿಕೆಶಿ ಆಪ್ತ ಸುನೀಲ್ ಕುಮಾರ್ ಶರ್ಮಾ, ಪುತ್ರಿ ಐಶ್ವರ್ಯ ವಿಚಾರಣೆ ನಡೆಸಲಾಗಿದೆ. ಮಾಜಿ ಶಾಸಕ ಕೆ.ಎನ್ ರಾಜಣ್ಣ ವಿಚಾರಣೆ ಬಾಕಿ ಇದೆ. ಸಾಕಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ಹೀಗಾಗಿ ಜಾಮೀನಿ ನೀಡಿದರೆ ಸಾಕ್ಷಿನಾಶ ಆಗಬಹುದು. ಹೀಗಾಗಿ ತನಿಖೆ ಮುಗಿಯೋವರೆಗೂ ಜಾಮೀನು ನೀಡಬೇಡಿ ಎಂದು ಇಡಿ ಪರ ವಕೀಲರು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

    ಡಿಕೆಶಿ ಪರ ಹಿರಿಯ ವಕೀಲರಾದ ಅಭಿಷೇಕ್ ಮನುಸಿಂಘ್ವಿ, ಮುಕುಲ್ ರೋಹಟಗಿ, ದಯಾನ್ ಕೃಷ್ಣನ್ ವಾದ ಮಂಡಿಸುವ ಸಾಧ್ಯತೆ ಇದ್ದು, ಜಾಮೀನು ಪಡೆಯಲು ದೊಡ್ಡ ವಕೀಲರ ಪಡೆಯನ್ನೇ ಡಿಕೆಶಿ ನೇಮಿಸಿಕೊಂಡಿದ್ದಾರೆ.