Tag: Delhi High Court

  • 5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

    5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

    ನವದೆಹಲಿ: ಭಾರತದಲ್ಲಿ 5ಜಿ ನೆಟ್‍ವರ್ಕ್ ಸ್ಥಾಪನೆಯ ವಿರುದ್ಧ ನಟಿ ಹಾಗೂ ಪರಿಸರವಾದಿ ಜೂಹಿ ಚಾವ್ಲಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 5ಜಿ ನೆಟ್‍ವರ್ಕ್‍ನಿಂದಾಗಿ ಮನುಷ್ಯರಿಗೆ, ಪ್ರಾಣಿ, ಪಕ್ಷಿ ಮತ್ತು ಸಸ್ಯ ಪ್ರಭೇದಗಳಿಗೆ ಸಮಸ್ಯೆಯಾಗುತ್ತದೆ ಎಂದು ದೂರಿದ್ದಾರೆ.

    ದೂರಿನಲ್ಲಿ ಏನಿದೆ?
    ಭಾರತದಲ್ಲಿ 5ಜಿಯನ್ನು ಜಾರಿಗೆ ತಂದರೆ ದೇಶದಲ್ಲಿರುವ ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ, ಸಸ್ಯ ಪ್ರಭೇದಗಳು 5ಜಿಯ ವಿಕಿರಣದಿಂದಾಗುವ ತೊಂದರೆಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ದಿನದ 24 ಗಂಟೆ, ವರ್ಷದ 365 ದಿನ, ಈಗಿರುವ ನೆಟ್‍ವರ್ಕ್ ವಿಕಿರಣಗಳಿಂದ ರೇಡಿಯೋ ಫ್ರಿಕ್ವೆನ್ಸಿ ವಿಕಿರಣ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ.ಇದನ್ನೂ ಓದಿ: ಬಂಡೀಪುರ ಪ್ರವಾಸ ಮಾಡಿ ಗಿಡ ನೆಟ್ಟ ಪ್ರೇಮಲೋಕ ಚೆಲುವೆ ಜೂಹಿ ಚಾವ್ಲಾ

    5ಜಿ ಯೋಜನೆಗಳಿಂದಾಗಿ ಮನುಷ್ಯರ ಮೇಲೆ ಹಲವು ದುಷ್ಪರಿಣಾಮಗಳಿದ್ದು, ಮುಂದೆ ಬದಲಾಯಿಸಲು ಸಾಧ್ಯವಾಗದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮನುಷ್ಯರ ಮೇಲೆ ಮಾತ್ರವಲ್ಲದೇ ಭೂಮಿಯ ಮೇಲಿರುವ ಎಲ್ಲಾ ಪರಿಸರ ವ್ಯವಸ್ಥೆಗೆ ಇದರಿಂದ ತೊಂದರೆ ಎದುರಾಗುತ್ತದೆ.

    5ಜಿಯಿಂದ ಮಾನವಕುಲದ, ಪುರುಷ, ಮಹಿಳೆ, ಮಗು, ವಯಸ್ಕ, ಶಿಶು, ಪ್ರಾಣಿ ಮತ್ತು ಎಲ್ಲಾ ವಿದಧ ಜೀವಿಗಳಿಗೂ ಇದರಿಂದ ಯಾವುದೇ ದುಷ್ಟರಿಣಾಮಗಳಿಲ್ಲ ಎಂದು ಪರೀಕ್ಷಿಸುವಂತೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಬೇಕೆಂದು ವಕೀಲರಾದ ದೀಪಕ್ ಖೋಸ್ಲಾ ಅವರ ಮೂಲಕ ಸಲ್ಲಿಸಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಭೂಮಿ ರಹಿತ ರೈತರ ಸಹಾಯಕ್ಕೆ ಮುಂದಾದ ಜೂಹಿ ಚಾವ್ಲಾ

    ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರು ಮತ್ತೊಂದು ನ್ಯಾಯಪೀಠಕ್ಕೆ ವರ್ಗಾಯಿಸಿದ್ದು ಮಂಗಳವಾರ ವಿಚಾರಣೆ ನಡೆಯಲಿದೆ.

  • ಲಸಿಕೆ ಸ್ಟಾಕ್ ಇಲ್ಲದೆ ಹೇಗೆ ಪಡೆಯಬೇಕು? ವ್ಯಾಕ್ಸಿನ್ ಕಾಲರ್ ಟ್ಯೂನ್‍ಗೆ ದೆಹಲಿ ಹೈ ಕೋರ್ಟ್ ಕಿಡಿ

    ಲಸಿಕೆ ಸ್ಟಾಕ್ ಇಲ್ಲದೆ ಹೇಗೆ ಪಡೆಯಬೇಕು? ವ್ಯಾಕ್ಸಿನ್ ಕಾಲರ್ ಟ್ಯೂನ್‍ಗೆ ದೆಹಲಿ ಹೈ ಕೋರ್ಟ್ ಕಿಡಿ

    ನವದೆಹಲಿ: ವ್ಯಾಕ್ಸಿನ್ ಪಡೆಯುವ ಕುರಿತು ಜಾಗೃತಿಯ ಕಾಲರ್ ಟ್ಯೂನ್ ಬಗ್ಗೆ ದೆಹಲಿ ಹೈ ಕೋರ್ಟ್ ಕಿಡಿ ಕಾರಿದ್ದು, ಸಾಕಷ್ಟು ವ್ಯಾಕ್ಸಿನ್ ಇಲ್ಲ, ಹೀಗಿರುವಾಗ ಜನ ಹೇಗೆ ಲಸಿಕೆ ಪಡೆಯಬೇಕು? ಕಿರಿಕಿರಿಯುಂಟು ಮಾಡುವ ಈ ಕಾಲರ್ ಟ್ಯೂನ್‍ನ್ನು ಇನ್ನೂ ಎಷ್ಟು ದಿನ ಕೇಳಬೇಕು ಎಂದು ದೆಹಲಿ ಹೈ ಕೋರ್ಟ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

    ಪ್ರತಿ ಬಾರಿ ಕರೆ ಮಾಡಿದಾಗ ನೀವು ಕಿರಿಕಿರಿ ಉಂಟುಮಾಡುವ ಕಾಲರ್ ಟ್ಯೂನ್ ಪ್ಲೇ ಮಾಡುತ್ತಿದ್ದೀರಿ. ಇನ್ನೂ ಎಷ್ಟು ದಿನ ಇದನ್ನು ಕೇಳಬೇಕೋ ತಿಳಿಯುತ್ತಿಲ್ಲ. ನಿಮ್ಮ ಬಳಿ ಸಾಕಷ್ಟು ಲಸಿಕೆ ಲಭ್ಯತೆ ಇದೆಯೇ ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈ ಕೋರ್ಟ್ ಪ್ರಶ್ನಿಸಿದೆ. ನೀವು ಜನರಿಗೆ ಲಸಿಕೆ ನೀಡುತ್ತಿಲ್ಲ. ಆದರೆ ಲಸಿಕೆ ಹಾಕಿಸಿಕೊಳ್ಳಿ ಎಂದು ಸಂದೇಶ ನೀಡುತ್ತಿದ್ದೀರಿ. ಯಾರಿಗೂ ಲಸಿಕೆ ಇಲ್ಲದಿದ್ದಾಗ, ಯಾರು ಲಸಿಕೆ ಹಾಕಿಸಿಕೊಳ್ಳಬೇಕು? ಈ ಸಂದೇಶದ ಅರ್ಥವೇನು ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ಹಾಗೂ ರೇಖಾ ಪಲ್ಲಿ ಅವರಿದ್ದ ಪೀಠ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

    ಇಂತಹ ವಿಚಾರಗಳಲ್ಲಿ ಸರ್ಕಾರ ಆವಿಷ್ಕಾರಕವಾಗಿರಬೇಕು. ಕೇವಲ ಒಂದನ್ನು ತಯಾರಿಸಿ ಯಾವಾಗಲೂ ಅದನ್ನೇ ಹಾಕುವ ಬದಲು, ಇಂತಹ ಹೆಚ್ಚಿನ ಸಂದೇಶಗಳನ್ನು ಸಿದ್ಧಪಡಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಸ್ಥಿತಿಗೆ ಸ್ಪಂದಿಸಬೇಕು. ಹೀಗಾಗಿ ವಿವಿಧ ರೀತಿಯ ಹೆಚ್ಚು ಸಂದೇಶಗಳನ್ನು ತಯಾರಿಸಿ, ಪ್ರತಿ ಬಾರಿ ಬೇರೆ ಬೇರೆ ಕಾಲರ್ ಟ್ಯೂನ್ ಕೇಳಿದಾಗ ಅವರಿಗೆ ಸಹಾಯವಾಗಬಹುದು ಎಂದು ನ್ಯಾಯಾಲಯ ಸೂಚಿಸಿದೆ.

    ಟಿವಿ ನಿರೂಪಕರು ಹಾಗೂ ನಿರ್ಮಾಪಕರ ಮೂಲಕ ಕಾರ್ಯಕ್ರಮಗಳನ್ನು ರೂಪಿಸಿ, ಈ ಮೂಲಕ ಆಕ್ಸಿಜನ್, ವ್ಯಾಕ್ಸಿನ್ ಸೇರಿದಂತೆ ವಿವಿಧ ವಿಚಾರಗಳ ಕುರಿತು ಅರಿವು ಮೂಡಿಸಿ. ನಾವು ಸಮಯವನ್ನು ಕಳೆಯುತ್ತಿದ್ದೇವೆ. ಕೊರೊನಾ ನಿರ್ವಹಣೆ ಮಾಹಿತಿಯನ್ನು ಟಿವಿ, ಮುದ್ರಣ ಮಾಧ್ಯಮ ಹಾಗೂ ಕಾಲರ್ ಟ್ಯೂನ್‍ಗಳ ಮೂಲಕ ಪ್ರಸಾರ ಮಾಡಲು ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂಬುದರ ಕುರಿತು ಮೇ.18ರೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಹೈ ಕೋರ್ಟ್ ಸೂಚಿಸಿದೆ.

  • ಕಾರಿನಲ್ಲಿ ಪ್ರಯಾಣಿಸುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ- ದೆಹಲಿ ಹೈಕೋರ್ಟ್

    ಕಾರಿನಲ್ಲಿ ಪ್ರಯಾಣಿಸುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ- ದೆಹಲಿ ಹೈಕೋರ್ಟ್

    ನವದೆಹಲಿ: ನೀವು ಕಾರಿನಲ್ಲಿ ಒಬ್ಬರೇ ಪ್ರಯಾಣ ಮಾಡುತ್ತಿದ್ದರೂ ಮಾಸ್ಕ್ ಕಡ್ಡಾಯ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಮಾಡಲೇಬೇಕು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

    ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಪೊಲೀಸರು ಹಾಕಿದ ದಂಡದ ವಿರುದ್ಧ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ಈ ದೂರಿನ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಮುಖ್ಯ ನಾಯಾಧೀಶ ಪ್ರತಿಭಾ ಎಂ ಸಿಂಗ್ ಅವರು ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರು ಕೂಡ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಎಂದು ತೀರ್ಪು ನೀಡಿದ್ದಾರೆ.

    ನೀವು ಒಬ್ಬರೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಕೂಡ ನಿಮ್ಮ ಸುರಕ್ಷತೆಗಾಗಿ ಮಾಸ್ಕ್ ಧರಿಸಲೇಬೇಕು. ಇದೀಗ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜನ ಲಸಿಕೆ ಪಡೆದರು ಅಥವಾ ಪಡೆದುಕೊಳ್ಳದೆ ಇದ್ದರು ಕೂಡ ಮಾಸ್ಕ್ ಧರಿಸುವುದು ಮುಖ್ಯವಾಗಿದೆ ಎಂದರು.

    ಕೊರೊನಾ ಕುರಿತು ದೇಶದಾದ್ಯಂತ ಈಗಾಗಲೇ ಸರ್ಕಾರ ಹಾಗೂ ತಜ್ಞರು ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆ. ಅದೇ ರೀತಿ ಟ್ರಾಫಿಕ್‍ನಲ್ಲಿ ನಿಂತಿರುವಾಗ ಕಾರ್ ನ ಗ್ಲಾಸ್‍ನ್ನು ಕೆಳಗಿಳಿಸಿದಾಗ ಪಕ್ಕದಲ್ಲಿದ್ದವರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

    ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಹೈ ಕೋರ್ಟ್ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್ ಧರಿಸುವಂತೆ ಕಾನೂನು ಜಾರಿಮಾಡಿಲ್ಲ ಆದರೆ ಪ್ರತಿಯೊಂದು ರಾಜ್ಯಗಳು ಈ ಬಗ್ಗೆ ತನ್ನದೇ ಆದ ಕಾನೂನನ್ನು ಜಾರಿಗೊಳಿಸುವ ಅಧಿಕಾರ ಇದೆ ಎಂದು ತಿಳಿಸಿದೆ.

    ಈ ನಡುವೆ ದೆಹಲಿ ಸರ್ಕಾರ ರಾಜ್ಯದಲ್ಲಿ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರು ಮಾಸ್ಕ್ ಧರಿಸುವುದು ಕಡ್ಡಾಯವಾಗಿ ಏಪ್ರಿಲ್ ಒಂದರಿಂದ ಕಾನೂನು ಜಾರಿಗೆ ತಂದಿದೆ ಎಂದು ಸ್ಪಷ್ಟನೆ ನೀಡಿದೆ.

    ದೆಹಲಿಯಲ್ಲಿ ಕಳೆದ ಒಂದೇ ದಿನ 5,100 ಕೊರೊನಾ ಹೊಸ ಪ್ರಕರಣಗಳು ದಾಖಲಾಗಿತ್ತು. ಇನ್ನು ದೇಶದಾದ್ಯಂತ ದಿನದ 24 ಗಂಟೆಗಳಲ್ಲಿ 1.15 ಲಕ್ಷ ಜನರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ ಎಂದು ವರದಿಯಾಗಿದೆ.

  • ವರ್ಷದ ಬಳಿಕ ಬಾಗಿಲು ತೆರೆದ ತಬ್ಲಿಘಿ ಜಮಾತ್ ಮರ್ಕಜ್ – ಭಾನುವಾರ 50 ಜನರಿಂದ ಪ್ರಾರ್ಥನೆ

    ವರ್ಷದ ಬಳಿಕ ಬಾಗಿಲು ತೆರೆದ ತಬ್ಲಿಘಿ ಜಮಾತ್ ಮರ್ಕಜ್ – ಭಾನುವಾರ 50 ಜನರಿಂದ ಪ್ರಾರ್ಥನೆ

    ನವದೆಹಲಿ: 2020ರಲ್ಲಿ ಕೊರೊನಾ ವಿಷಯವಾಗಿ ಸುದ್ದಿಯಾಗಿದ್ದ ತಬ್ಲಿಘಿ ಜಮಾತ್ ಮರ್ಕಜ್ ವರ್ಷದ ಬಳಿಕ ಬಾಗಿಲು ತೆರೆದಿದೆ. ದೆಹಲಿ ಹೈಕೋರ್ಟ್ ಆದೇಶದ ಬಳಿಕ ಮರ್ಕಜ್ ತೆರೆಯಲಾಗಿದ್ದು, ಶಬೆ ಬರಾತ್ ಹಿನ್ನೆಲೆ ಭಾನುವಾರ 50 ಜನರು ಪ್ರಾರ್ಥನೆ ಸಲ್ಲಿಸಿದ್ದಾರೆ.

    ಪ್ರಾರ್ಥನೆ ಸಲ್ಲಿಸುವ 50 ಜನರ ಹೆಸರು ಮತ್ತು ವಿಳಾಸವನ್ನ ಸ್ಥಳೀಯ ಪೊಲೀಸ್ ಠಾಣೆಗೆ ನೀಡಲಾಗಿತ್ತು. ಪ್ರಾರ್ಥನೆ ವೇಳೆ ಮರ್ಕಜ್ ಹೊರ ಭಾಗದಲ್ಲಿ ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಹೈಕೋರ್ಟ್ ಆದೇಶದ ಪ್ರಕಾರ ಸ್ಥಳೀಯ ಪೊಲೀಸರ ಅನುಮತಿ ಪಡೆದುಕೊಳ್ಳಲಾಗಿತ್ತು. ಪ್ರಾರ್ಥನೆ ವೇಳೆ ಕೊರೊನಾ ನಿಯಮಗಳನ್ನ ಪಾಲಿಸುವಂತೆ ಜಮಾತ್ ಗೆ ಸೂಚಿಸಲಾಗಿತ್ತು.

    ಶಬೆ ಬರಾತ್ ಮತ್ತು ರಂಜಾನ್ ಹಿನ್ನೆಲೆ ಮರ್ಕಜ್ ತೆರೆಯಲು ಅನುಮತಿ ನೀಡಬೇಕೆಂದು ದೆಹಲಿಯ ವಕ್ಫ್ ಬೋರ್ಡ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಶಬೆ ಬಾರತ್ ದಿನದಂದು ವಿಶೇಷ ಪ್ರಾರ್ಥನೆ ಮತ್ತು ನಮಾಜ್ ಮಾಡಲಾಗುತ್ತದೆ. ಆದ್ದರಿಂದ ಪವಿತ್ರ ರಂಜಾನ್ ಆಚರಣೆಗೆ ಅವಕಾಶ ನೀಡಬೇಕೆಂದು ವಕ್ಫ್ ಬೋರ್ಡ್ ಮನವಿ ಮಾಡಿಕೊಂಡಿತ್ತು.

    ವಕ್ಫ್ ಬೋರ್ಡ್ ಮನವಿಗೆ ಸ್ಪಂದಿಸಿದ ನ್ಯಾಯಾಲಯ ಮರ್ಕಕ್ ತೆರೆಯಲು ಷರತ್ತು ಬದ್ಧ ಅನುಮತಿ ನೀಡಿತ್ತು. ಮರ್ಕಜ್ ತೆರೆಯೋದನ್ನ ಸ್ಥಳೀಯ ಪೊಲೀಸರ ಗಮನಕ್ಕೆ ತರಬೇಕು. ಮರ್ಕಜ್ ನಲ್ಲಿ ಸದ್ಯ ಕೇವಲ 50 ಜನರು ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 12ಕ್ಕೆ ನಡೆಯಲಿದೆ.

  • ಎಲ್ಲ ಕೇಸ್‍ಗಳಲ್ಲಿ ವಿವಾಹವಾಗುವುದಾಗಿ ನಂಬಿಸಿ ಸೆಕ್ಸ್‌ನಲ್ಲಿ ತೊಡಗಿದ್ರೆ ರೇಪ್ ಆಗಲ್ಲ: ಹೈಕೋರ್ಟ್

    ಎಲ್ಲ ಕೇಸ್‍ಗಳಲ್ಲಿ ವಿವಾಹವಾಗುವುದಾಗಿ ನಂಬಿಸಿ ಸೆಕ್ಸ್‌ನಲ್ಲಿ ತೊಡಗಿದ್ರೆ ರೇಪ್ ಆಗಲ್ಲ: ಹೈಕೋರ್ಟ್

    – ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

    ನವದೆಹಲಿ: ಎಲ್ಲ ಪ್ರಕರಣಗಳಲ್ಲಿ ವಿವಾಹವಾಗುವುದಾಗಿ ನಂಬಿಸಿ ಸುದೀರ್ಘ ಸಮಯದವರೆಗೆ ಲೈಂಗಿಕತೆಯಲ್ಲಿ ತೊಡಗಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ದೆಹಲಿ ಹೈ ಕೋರ್ಟ್ ತಿಳಿಸಿದೆ.

    ಗುರುವಾರ ಅತ್ಯಾಚಾರ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್, ವಿವಾಹವಾಗುವುದನ್ನು ನಂಬಿ ಮಹಿಳೆ ಸುಧೀರ್ಘವಾಗಿ ಲೈಂಗಿಕತೆಯಲ್ಲಿ ತೊಡಗಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸುದೀರ್ಘ ಹಾಗೂ ಅನಿರ್ದಿಷ್ಟ ಅವಧಿಯಲ್ಲಿ ಲೈಂಗಿಕತೆಯಲ್ಲಿ ತೊಡಗಿದರೆ ಅದನ್ನು ವಿವಾಹದ ಭರವಸೆ ಎಂದು ನಂಬಲಾಗುವುದಿಲ್ಲ ಎಂದು ತಿಳಿಸಿದೆ.

    ನ್ಯಾಯಾಧೀಶರಾದ ವಿಭು ಬಖ್ರು ಅವರು ಪ್ರಕರಣದ ವಿಚಾರಣೆ ನಡೆಸಿದ್ದು, ಕೆಲ ಸಂದರ್ಭಗಳಲ್ಲಿ ವಿವಾಹದ ಭರವಸೆ ನೀಡಿದ ಬಳಿಕ ಲೈಂಗಿಕತೆಯಲ್ಲಿ ತೊಡಗುತ್ತಾರೆ. ಆದರೆ ದೀರ್ಘಕಾಲಿನ ಅನ್ಯೂನ್ಯತೆಯ ಪ್ರಕರಣಗಳಿಗೆ ಇದು ಅನ್ವಯಿಸುವುದಿಲ್ಲ. ಕೆಲ ಸಂದರ್ಭಗಳಲ್ಲಿ ವಿವಾಹದ ಭರವಸೆಯಿಂದ ಲೈಂಗಿಕ ಸಂಬಂಧ ಬೆಳೆಸಲು ಒಬ್ಬರು ಪ್ರೇರೇಪಿಸುತ್ತಾರೆ. ಈ ಸಮಯದಲ್ಲಿ ಇಷ್ಟವಿಲ್ಲದವರು ತಿರಸ್ಕರಿಸಬಹುದು. ತಿರಸ್ಕರಿಸದ ಬಳಿಕ ಒತ್ತಾಯವೂ ಕೇಳಿ ಬರಬಹುದು. ಆದರೆ ದೀರ್ಘ ಕಾಲದವರೆಗೆ ಸಂಬಂಧ ಬೆಳೆಸುವುದು ಸಾಧ್ಯವಿಲ್ಲ, ಯಾರಾದರೂ ಒಬ್ಬರು ನಂಬಿಕೆ ಇಲ್ಲವಾದಲ್ಲಿ ತಿರಸ್ಕರಿಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

    ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡಿದ ಪ್ರಕರಣಗಳಲ್ಲಿ ಯಾರಾದರೂ ಒಬ್ಬರು ಒಪ್ಪಿಗೆಯನ್ನು ನಿರಾಕರಿಸಬಹದು. ಇದು ಭಾರತೀಯ ದಂಡ ಸಂಹಿತೆ ಸೆಕ್ಷನ್ 375 ಅಡಿಯಲ್ಲಿ ಅತ್ಯಾಚಾರ ಅಪರಾಧವಾಗುತ್ತದೆ ಎಂದು ಕೋರ್ಟ್ ಹೇಳಿದೆ. ಅಲ್ಲದೆ ದೀರ್ಘಕಾಲದವರೆಗೆ ಅನ್ಯೋನ್ಯತೆ ಹೊಂದಿದ್ದ ಪ್ರಕರಣಗಳಲ್ಲಿ ಇದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.

    ಮಹಿಳೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಖುಲಾಸೆಗೊಳಿಸಿದ ಬಳಿಕ ನ್ಯಾಯಾಲಯ ಈ ಕುರಿತು ಸ್ಪಷ್ಟಪಡಿಸಿದೆ. 2008ರಲ್ಲಿ ವ್ಯಕ್ತಿಯೊಂದಿಗೆ ಮಹಿಳೆ ಲೈಂಗಿಕ ಸಂಪರ್ಕ ಹೊಂದಿರುವುದಾಗಿ ತಿಳಿಸಿದ್ದಾಳೆ. ಅಲ್ಲದೆ ಮೂರ್ನಾಲ್ಕು ತಿಂಗಳ ಬಳಿಕ ವ್ಯಕ್ತಿ ತನ್ನನ್ನು ವಿವಾಹವಾಗುವುದಾಗಿ ಭರವಸೆ ನಿಡಿದ್ದ. ಹೀಗಾಗಿ ಅವನೊಂದಿಗೆ ಓಡಿಹೋಗಿದ್ದೆ ಎಂದು ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ಅಲ್ಲದೆ ಆರೋಪಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಆದರೆ ಕೋರ್ಟ್ ಮಹಿಳೆಯ ವಾದವನ್ನು ತಳ್ಳಿ ಹಾಕಿದ್ದು, ಆರೋಪಿಯನ್ನು ಖುಲಾಸೆಗೊಳಿಸಿದೆ.

  • ಪಿಎಂ ಕೇರ್ಸ್ ಫಂಡ್ ಅನುಮಾನ ಮೂಡಿಸಿದೆ, ವೆಬ್‍ಸೈಟ್‍ನಲ್ಲಿ ಮಾಹಿತಿ ಪ್ರಕಟಿಸುವಂತೆ ಪಿಐಎಲ್ ಸಲ್ಲಿಕೆ

    ಪಿಎಂ ಕೇರ್ಸ್ ಫಂಡ್ ಅನುಮಾನ ಮೂಡಿಸಿದೆ, ವೆಬ್‍ಸೈಟ್‍ನಲ್ಲಿ ಮಾಹಿತಿ ಪ್ರಕಟಿಸುವಂತೆ ಪಿಐಎಲ್ ಸಲ್ಲಿಕೆ

    ನವದೆಹಲಿ: ಪಿಎಂ ಕೇರ್ಸ್ ಫಂಡ್ ಗೆ ಬರುತ್ತಿರುವ ದೇಣಿಗೆ ಮೂಲ ಮತ್ತು ಅದನ್ನು ಯಾವ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ ಎಂಬ ವಿವರವನ್ನು ವೆಬ್‍ಸೈಟ್ ನಲ್ಲಿ ಪ್ರಕಟಿಸಲು ಸೂಚಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

    ಮಾಹಿತಿ ಹಕ್ಕು ಕಾಯ್ದೆಯಡಿ ಪಿಎಂ ಕೇರ್ಸ್ ಮಾಹಿತಿ ಕೋರಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಬಳಿಕ ಡಾ.ಎಸ್.ಎಸ್ ಹೂಡಾ ಅವರು ವಕೀಲ ಆದಿತ್ಯ ಹೂಡಾ ಮೂಲಕ ಈ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸಲ್ಲಿಸಿದ್ದಾರೆ.

    ಸರ್ಕಾರಿ ಸ್ವಾಮ್ಯದ ಅಥಾವ ಸರ್ಕಾರಿ ನಿಯಂತ್ರಿತ ಎಲ್ಲ ಹಣಕಾಸು ಸಂಸ್ಥೆಗಳು ಮಾಹಿತಿ ಹಕ್ಕಿನಡಿ ಬರಲಿದೆ. ಪಿಎಂ ಕೇರ್ಸ್ ಟ್ರಸ್ಟ್ ಗೆ ಪ್ರಧಾನ ಮಂತ್ರಿಗಳು ಅಧ್ಯಕ್ಷರಾಗಿದ್ದು, ಹಣಕಾಸು ಸಚಿವರು, ರಕ್ಷಣಾ ಸಚಿವರು ಮತ್ತು ಗೃಹ ಸಚಿವರು ಟ್ರಸ್ಟಿಗಳಾಗಿದ್ದಾರೆ ಹೀಗಾಗಿ ಪಿಎಂ ಕೇರ್ಸ್ ಕೂಡಾ ಸರ್ಕಾರದ ಹಣಕಾಸು ಸಂಸ್ಥೆಯಾಗಲಿದೆ. ಅಲ್ಲದೆ ಪಿಎಂ ಕೇರ್ಸ್ ಗೆ ಸಾರ್ವಜನಿಕ ವಲಯದ ಉದ್ಯಮ ಕ್ಷೇತ್ರಗಳಿಂದ ದೊಡ್ಡ ಮೊತ್ತದ ಹಣ ಹರಿದು ಬಂದಿದೆ. ಸಾರ್ವಜನಿಕರು ಹಣ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಒಂದು ದಿನದ ಸಂಬಂಳವನ್ನು ನೀಡಿದ್ದಾರೆ. ಪಿಎಂ ಕೇರ್ಸ್ ಈಗ ಸಾರ್ವಜನಿಕ ಪ್ರಾಧಿಕಾರವಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

    ಪಿಎಂ ಕೇರ್ಸ್ ಸಾರ್ವಜನಿಕ ಪ್ರಾಧಿಕಾರವಲ್ಲ ಎಂದಾದರೆ ಇದಕ್ಕೆ ಹಣ ನೀಡುವಂತೆ ಸರ್ಕಾರ ಜನರನ್ನು ಪ್ರೇರೆಪಿಸಬಹುದಾ ಎಂದು ಕೋರ್ಟ್ ಪರಿಶೀಲಿಸಬೇಕು. ಮಾಹಿತಿ ಹಕ್ಕು ಆರ್ಟಿಕಲ್ 19(1)(ಎ) ಸಾರ್ವಜನಿಕ ಪ್ರಾಧಿಕಾರವಲ್ಲದಿದ್ದರೂ ಜನರ ಹಣ ವ್ಯಯದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಇದನ್ನು ತಿಳಿದುಕೊಳ್ಳುವುದು ಜನರ ಮೂಲಭೂತ ಹಕ್ಕಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

    ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಈ ಸಂದರ್ಭದಲ್ಲಿ ಪಿಎಂ ಕೇರ್ಸ್ ಫಂಡ್ ಯಾವುದಕ್ಕೆ ಹೇಗೆ ಬಳಕೆಯಾಗುತ್ತಿದೆ ಎನ್ನುವ ಮಾಹಿತಿಯನ್ನು ನೀಡಬೇಕು. ಈ ಮಾಹಿತಿ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೊರೊನಾಗಾಗಿ ನಿಧಿ ಸ್ಥಾಪಿಸಿರುವಾಗ ಮಾಹಿತಿ ನೀಡಲು ಹಿಂಜರಿಕೆ ಯಾಕೆ ಹಾಗೂ ಇದರ ದುರ್ಬಳಕೆಯಾಗಿಲ್ಲ ಎನ್ನುವುದಾದರೆ ಮಾಹಿತಿ ನೀಡಲು ನಿರಾಕರಿಸುವುದೇಕೆ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಈ ಅರ್ಜಿ ಜೂನ್ 10ರ ಬಳಿಕ ವಿಚಾರಣೆಗೆ ಬರಲಿದೆ.

  • ತುರ್ತು ಅರ್ಜಿಗಳನ್ನು ಮಾತ್ರ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ನಿರ್ಧಾರ

    ತುರ್ತು ಅರ್ಜಿಗಳನ್ನು ಮಾತ್ರ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ನಿರ್ಧಾರ

    ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆ ಮಾರ್ಚ್ 16ರಿಂದ ತುರ್ತು ಅರ್ಜಿಗಳನ್ನು ಮಾತ್ರ ವಿಚಾರಣೆ ನಡೆಸಲಾಗುವುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ನೇತೃತ್ವದಲ್ಲಿ ಇಂದು ನಡೆದ ಹೈಕೋರ್ಟ್ ಆಡಳಿತಾಧಿಕಾರಿಗಳ ಜೊತೆಗಿನ ಸಭೆ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ.

    ಹೋಳಿ ಹಬ್ಬದ ರಜೆ ಬಳಿಕ ಸೋಮವಾರದಿಂದ ಕೋರ್ಟ್ ಪುನಾರಂಭವಾಗಲಿದ್ದು, ದೆಹಲಿಯಲ್ಲೂ ಸೋಂಕು ಹರಡುವ ಭೀತಿ ಹಿನ್ನೆಲೆ ಕೇವಲ ತುರ್ತು ಅರ್ಜಿಗಳ ವಿಚಾರಣೆ ನಡೆಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ. ಸಾಮಾನ್ಯ ಕೋರ್ಟ್ ವಿಚಾರಣೆಗಳು ನಡೆಸಿದರೆ ಕೋರ್ಟಿಗೆ ಆಗಮಿಸುವ ಜನರ ಸಂಖ್ಯೆ ಹೆಚ್ಚಲಿದ್ದು, ಈ ವೇಳೆ ವೈರಸ್ ಹೆಚ್ಚು ಪಸರಿಸಿಬಹುದು. ಹೀಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಮಾರ್ಚ್ 31ರವರೆಗೂ ಕೋರ್ಟ್ ಗೆ ಇಂಟರ್ನಿಗಳಿಗೂ ಪ್ರವೇಶ ನೀಡುವುದಿಲ್ಲ ಎಂದು ಹೈಕೋರ್ಟ್ ಆಡಳಿತಾಧಿಕಾರಿಗಳು ಸಭೆ ಬಳಿಕ ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ದಿನಾಂಕ ಮುಂದೂಡಿಕೆ – ಏ.15ಕ್ಕೆ ಟೂರ್ನಿ ಆರಂಭ

    ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿ ಎಲ್ಲಾ ನಮೂನೆಯ ಥರ್ಮಲ್ ಸ್ಕ್ಯಾನರ್ ಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ಜೊತೆಗೆ ಮುಂದಿನ ಆದೇಶದವರೆಗೆ ನ್ಯಾಯಾಲಯದ ಆವರಣದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು, ಚುನಾವಣೆಗಳಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ.

    ಇದರೊಂದಿಗೆ ಸಾಕ್ಷಿಗಳು ಅಥಾವ ಕಕ್ಷಿಗಾರರನ್ನು ವೈಯಕ್ತಿಕವಾಗಿ ಕೋರ್ಟಿಗೆ ಹಾಜರಾಗಲು ಒತ್ತಾಯಿಸದಿರಲು ನಿರ್ಧರಿಸಿದ್ದು, ಅನಿವಾರ್ಯವಲ್ಲದವರಿಗೆ ಕೋರ್ಟ್ ಭೇಟಿಗೆ ಪಾಸ್ ನೀಡದಂತೆ ಸೂಚಿಸಿದೆ. ಇತರೆ ಕೋರ್ಟ್ ಗಳು ಇದೇ ಮಾದರಿಯನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.

  • ಕೇಂದ್ರದ ವಿರುದ್ಧ ಚಾಟಿ ಬೀಸಿದ್ದ ಜಡ್ಜ್ ವರ್ಗಾವಣೆ – ವಿಪಕ್ಷಗಳ ಆರೋಪ ಏನು? ಸರ್ಕಾರದ ಸ್ಪಷ್ಟನೆ ಏನು?

    ಕೇಂದ್ರದ ವಿರುದ್ಧ ಚಾಟಿ ಬೀಸಿದ್ದ ಜಡ್ಜ್ ವರ್ಗಾವಣೆ – ವಿಪಕ್ಷಗಳ ಆರೋಪ ಏನು? ಸರ್ಕಾರದ ಸ್ಪಷ್ಟನೆ ಏನು?

    ನವದೆಹಲಿ: ರಾಜಧಾನಿಯಲ್ಲಿನ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿ ಕಠಿಣ ಕ್ರಮಗಳಿಗೆ ಸೂಚಿಸಿದ್ದ ಹೈಕೋರ್ಟ್ ನ್ಯಾಯಾಧೀಶರೊಬ್ಬರ ವರ್ಗಾವಣೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ದೆಹಲಿ ಗಲಭೆ ಪ್ರಕರಣದ ತುರ್ತು ಅರ್ಜಿ ವಿಚಾರಣೆಯನ್ನು ಮಂಗಳವಾರ ರಾತ್ರಿ ವಿಚಾರಣೆ ನಡೆಸಿದ್ದ ಮುರಳೀಧರ್ ರಾವ್ ಬುಧವಾರವೂ ವಿಚಾರಣೆ ನಡೆಸಿದ್ದರು. ವಿಚಾರಣೆ ಸಂದರ್ಭದಲ್ಲಿ 1984 ಪರಿಸ್ಥಿತಿ ಮರುಕಳಿಸದಿರಲಿ ಎಂದು ಕಳವಳ ವ್ಯಕ್ತಪಡಿಸಿ ಕೇಂದ್ರ ಹಾಗೂ ದೆಹಲಿಯ ಆಪ್ ಸರ್ಕರಕ್ಕೆ ಬಿಸಿ ಮುಟ್ಟಿಸಿದ್ದರು.

    ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ದಿನವೇ ಮುರಳೀಧರ್ ಅವರನ್ನು ಬುಧವಾರ ರಾತ್ರಿ ಪಂಜಾಬ್ – ಹರ್ಯಾಣ ಹೈಕೋರ್ಟಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ದಿಢೀರ್ ಆಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಈ ವಿಚಾರ ಈಗ ರಾಜಕೀಯ ಆರೋಪ, ಪ್ರತ್ಯೋರಪಕ್ಕೆ ಕಾರಣವಾಗಿದೆ.

    ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರೊಂದಿಗೆ ಸಮಾಲೋಚಿಸಿದ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ವರ್ಗಾಯಿಸಿದ್ದಾರೆಂದು ಆದೇಶದಲ್ಲಿ ತಿಳಿಸಲಾಗಿದೆ.

    ಕೇಂದ್ರ ಹೇಳೋದು ಏನು?
    ವರ್ಗಾವಣೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಶಿಫಾರಸ್ಸು ಆಧರಿಸಿ ವರ್ಗಾವಣೆ ನಡೆದಿದೆ. ಫೆಬ್ರವರಿ 12ರಂದೇ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಈ ವರ್ಗಾವಣೆಗೆ ಮುರಳೀಧರ್ ರಾವ್ ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಚಾಟಿ ಬೀಸಿದ್ದು ಹೇಗೆ?
    ದೆಹಲಿ ಗಲಭೆ ಸಂಬಂಧ ಎಸ್‍ಐಟಿ ತನಿಖೆ ಕೋರಿ ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾ. ಎಸ್ ಮುರಳೀಧರ್ ಮತ್ತು ತಲ್ವಂತ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ಬುಧವಾರ ನಡೆದಿತ್ತು. ಈ ವೇಳೆ ಈ ದೇಶದಲ್ಲಿ ಮತ್ತೂಂದು 1984ರ ಮಾದರಿ ಘಟನೆ ನಡೆಯಲು ನಾವು ಬಿಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಕಪಿಲ್ ಮಿಶ್ರಾ ಅವರ ಹೇಳಿಕೆಯ ವೀಡಿಯೋ ನೋಡಿದ್ದೀರಾ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ದಿಲ್ಲಿ ಡಿಸಿಪಿ ರಾಜೇಶ್ ದೇವ್ ಅವರನ್ನು ಕೋರ್ಟ್ ಪ್ರಶ್ನಿಸಿತ್ತು. ಅದಕ್ಕೆ ಅವರು, ನಾವು ಅಂಥ ವೀಡಿಯೋ ವೀಕ್ಷಿಸಿಲ್ಲ ಎಂದು ಉತ್ತರಿಸಿದ್ದರು.

    ಹಿಂಸಾಚಾರಕ್ಕೆ ಪ್ರೇರಣೆ ಎನ್ನಲಾಗುತ್ತಿರುವ ಬಿಜೆಪಿ ನಾಯಕರಾದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದರಾದ ಪ್ರವೇಶ್ ವರ್ಮಾ, ಅಭಯ್ ವರ್ಮಾ ಹಾಗೂ ಮಾಜಿ ಶಾಸಕ ಕಪಿಲ್ ಮಿಶ್ರಾ ಹೇಳಿಕೆಗಳ ವೀಡಿಯೋ ತುಣುಕುಗಳನ್ನು ಸಹ ಕೋರ್ಟ್‍ನಲ್ಲಿ ಮುರಳೀಧರ್ ರಾವ್ ಪ್ಲೇ ಮಾಡಿಸಿದ್ದರು.

    ಇದು ನಿಜವಾಗಿಯೂ ಕಳವಳಕಾರಿ ಸಂಗತಿಯಾಗಿದ್ದು, ನಿಮ್ಮ ಕಚೇರಿಯಲ್ಲಿ ಹಲವು ಟಿವಿಗಳಿವೆ. ಹೀಗಿದ್ದರೂ ಪೊಲೀಸ್ ಅಧಿಕಾರಿ ನಾನು ವಿಡಿಯೋಗಳನ್ನು ವೀಕ್ಷಿಸಿಲ್ಲ ಎಂದು ಹೇಗೆ ಹೇಳಲು ಸಾಧ್ಯ. ದೆಹಲಿ ಪೊಲೀಸರ ಸ್ಥಿತಿಗತಿಗಳಿಂದ ನಾನು ನಿಜವಾಗಿಯೂ ದಿಗಿಲುಗೊಂಡಿದ್ದೇನೆ ಎಂದು ನ್ಯಾ. ಮುರಳೀಧರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಸೂಕ್ಷ್ಮವಾಗಿ ಆಲಿಸಿದ ಜಡ್ಜ್ ಮುರಳೀಧರ್, ಇಂಥ ಹೇಳಿಕೆಗೆಳು ರಿಪೀಟ್ ಆಗಿವೆ. ಸಾರ್ವಜನಿಕ ಆಸ್ತಿ ನಷ್ಟ ಮಾಡುವವರ ಮೇಲೆ ಎಫ್‍ಐಆರ್ ಹಾಕುವ ನೀವು ಇಂಥ ಹೇಳಿಕೆ ನೀಡುವ ಇವರ ಮೇಲೆ ಕೇಸ್ ಹಾಕುವುದಿಲ್ಲ ಯಾಕೆ? ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದಿಲ್ಲವೇ ಎಂದು ಖಡಕ್ ಆಗಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಟೀಕೆ:
    ನ್ಯಾ. ಮುರಳೀಧರ್ ವರ್ಗಾವಣೆಯಾಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಸೇರಿ ಹಲವು ವಿಪಕ್ಷ ನಾಯಕರಿಂದ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನ್ಯಾ ಲೋಯಾ ವರ್ಗಾವಣೆ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ನ್ಯಾಯಾಧೀಶರು ವರ್ಗಾವಣೆಯಾದಾಗ ಹತ್ತು ದಿನಗಳ ಕಾಲಾವಕಾಶ ನೀಡಬೇಕು. ನ್ಯಾ. ಮುರಳೀಧರ್ ಅವರ ಪ್ರಕರಣದಲ್ಲಿ ತತಕ್ಷಣಕ್ಕೆ ಬರುವಂತೆ ಆದೇಶ ಹೊರಡಿಸಲಾಗಿದೆ. ಕೊಲಿಜಿಯಂ ನ್ಯಾ. ಮುರುಳೀಧರ್ ಜೊತೆ ಇನ್ನು ಇಬ್ಬರನ್ನು ವರ್ಗಾವಣೆ ಮಾಡಲು ಶಿಫಾರಸು ಮಾಡಿದೆ. ಆ ಇಬ್ಬರು ನ್ಯಾಯಾಧೀಶರನ್ನು ಯಾಕೆ ವರ್ಗಾವಣೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ರವಿಶಂಕರ್ ಪ್ರಸಾದ್, ಭಾರತ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಸಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ಮಾಡಿ ಹಾಳು ಮಾಡಿರುವುದು ಕಾಂಗ್ರೆಸ್ ಹೊರತು ನಾವಲ್ಲ. ನ್ಯಾ. ಲೋಯಾ ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾಗಿದೆ. ಕಾಂಗ್ರೆಸ್ ನಿರಂತರವಾಗಿ ಕೋರ್ಟ್, ಸೇನೆ, ಸಿಎಜಿ(ಮಹಾಲೇಖಪಾಲರು), ಪ್ರಧಾನಿ ಮತ್ತು ಭಾರತದ ಜನರ ಮೇಲೆ ದಾಳಿ ನಡೆಸುತ್ತಿದೆ ಎಂದಿದ್ದಾರೆ.

    ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ನಮಗೆ ಗೌರವವಿದೆ. ತುರ್ತು ಪರಿಸ್ಥಿತಿ ಸಮಯದಲ್ಲಿ ಕಾಂಗ್ರೆಸ್ ನ್ಯಾಯಾಂಗವನ್ನು ಸೂಪರ್ ಸೀಡ್ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಅವರ ಪರವಾಗಿ ತೀರ್ಪುಗಳು ಬಂದರೆ ಮಾತ್ರ ಅವರಿಗೆ ಇಷ್ಟವಾಗುತ್ತದೆ. ವಿರುದ್ಧವಾಗಿ ಬಂದರೆ ಸಂವಿಧಾನಿಕ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಪ್ರಶ್ನೆ ಕೇಳುತ್ತದೆ ಎಂದು ಟೀಕಿಸಿ ತಿರುಗೇಟು ನೀಡಿದ್ದಾರೆ.

  • ಠಾಕೂರ್, ಮಿಶ್ರಾ ವಿರುದ್ಧ ಯಾಕೆ ಎಫ್‍ಐಆರ್ ಹಾಕಬಾರದು – ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

    ಠಾಕೂರ್, ಮಿಶ್ರಾ ವಿರುದ್ಧ ಯಾಕೆ ಎಫ್‍ಐಆರ್ ಹಾಕಬಾರದು – ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

    – ಸಂಯಮ ಕಾಪಾಡುವಂತೆ ಮೋದಿ ಮನವಿ
    – ಪ್ರಧಾನಿ, ಶಾ ರಾಜೀನಾಮೆಗೆ ವಿರೋಧ ಪಕ್ಷಗಳ ಆಗ್ರಹ

    ನವದೆಹಲಿ: ಹಿಂಸಾಚಾರ ಸಂಬಂಧ ಕೇಂದ್ರ ಮತ್ತು ದೆಹಲಿ ಸರ್ಕಾರ ಹಾಗೂ ಪೊಲೀಸರಿಗೆ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗಳು ಛೀಮಾರಿ ಹಾಕಿವೆ.

    1984ರ ಸಿಖ್ ದಂಗೆಯಂಥ ಪರಿಸ್ಥಿತಿ ಪುನರಾವರ್ತನೆ ಆಗಬಾರದು ಅಂತ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಹಿಂಸಾಚಾರಕ್ಕೆ ಪ್ರೇರಣೆ ಎನ್ನಲಾಗ್ತಿರೋ ಬಿಜೆಪಿ ನಾಯಕರಾದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದರಾದ ಪ್ರವೇಶ್ ವರ್ಮಾ, ಅಭಯ್ ವರ್ಮಾ ಹಾಗೂ ಮಾಜಿ ಶಾಸಕ ಕಪಿಲ್ ಮಿಶ್ರಾ ಹೇಳಿಕೆಗಳ ವೀಡಿಯೋ ಕ್ಲಿಪ್ಪಿಂಗ್ಸ್ ಗಳನ್ನು ಕೋರ್ಟ್ ನಲ್ಲಿ ಪ್ಲೇ ಮಾಡಲಾಯಿತು.

    ಸೂಕ್ಷ್ಮವಾಗಿ ಆಲಿಸಿದ ಜಡ್ಜ್ ಮುರಳೀಧರ್, ಇಂಥ ಹೇಳಿಕೆಗೆಳು ರಿಪೀಟ್ ಆಗಿವೆ. ಸಾರ್ವಜನಿಕ ಆಸ್ತಿ ನಷ್ಟ ಮಾಡೋವ್ರ ಮೇಲೆ ಎಫ್‍ಐಆರ್ ಹಾಕೋ ನೀವ್ಯಾಕೆ ಇಂಥ ಹೇಳಿಕೆ ಕೊಡೋವ್ರ ಮೇಲೆ ಹಾಕಲ್ಲ. ಸಮಾಜಕ್ಕೆ ತಪ್ಪು ಸಂದೇಶ ಹೋಗಲ್ವಾ ಅಂತ ಪೊಲೀಸರನ್ನು ಪ್ರಶ್ನಿಸಿದ್ರು.

    ಇದಕ್ಕೆ ಉತ್ತರಿಸಿದ ದೆಹಲಿ ಸಾಲಿಟರ್ ಜನರಲ್ ತುಷಾರ್ ಮೆಹ್ತಾ, ದೆಹಲಿ ಪೊಲೀಸರೇನು ಪಿಕ್‍ನಿಕ್‍ಗೆ ಹೋಗಿರಲಿಲ್ಲ. ಅವರ ಮೇಲೂ ಆ್ಯಸಿಡ್ ದಾಳಿಗಳು ನಡೆದಿವೆ ಎಂದರು

    ಇನ್ನೊಂದು ಕಡೆ ನಿಮ್ಮಲ್ಲಿ ವೃತ್ತಿಪರತೆ ಇಲ್ಲವೇ? ಅಂತ ದೆಹಲಿ ಪೊಲೀಸರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹಿಂಸಾಚಾರ ಸಂಭವಿಸಿದ ತಕ್ಷಣವೇ ಕಾರ್ಯಪ್ರವೃತ್ತ ಆಗಿದ್ರೆ ಇಷ್ಟು ಹಾನಿಯನ್ನು ತಡೆಯಬಹುದಿತ್ತು. ಇದು ನಿಮ್ಮ ವಿಫಲತೆಯನ್ನು ತೋರಿಸ್ತಿದೆ ಅಂತ ಜಡ್ಜ್ ಕೆ.ಎಂ. ಜೋಸೆಫ್ ಬಿಸಿಮುಟ್ಟಿಸಿದ್ದಾರೆ.

    ಪ್ರಚೋದನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ. ಯಾರಿಗಾಗಿ ಕಾಯುತ್ತಾ ಕೂತಿದ್ದೀರಿ ಅಂತ ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ದೆಹಲಿ ಹೈಕೋರ್ಟೇ ತೀರ್ಮಾನ ಕೈಗೊಳ್ಳಲಿದೆ ಅಂತ ಸುಪ್ರೀಂಕೋರ್ಟ್ ಹೇಳಿದೆ.

    ಮೋದಿ ಮನವಿ:
    ಶಕ್ತಿಕೇಂದ್ರದಲ್ಲೇ ಸೃಷ್ಟಿಯಾಗಿರೋ ಇಂಥಾ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಶಾಂತಿ ಕಾಪಾಡುವಂತೆ ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.

    ಇನ್ನು,ಸಾವು-ನೋವಿನಲ್ಲೂ ರಾಜಕೀಯ ಕೆಸರೆರಚಾಟ ನಡೀತಿದೆ. ಇಷ್ಟೆಲ್ಲಾ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿ. ಗೃಹ ಸಚಿವರೇ ನೇರಹೊಣೆ. ಅವರು ಎಲ್ಲೋಗಿದ್ರು. ಈ ಕ್ಷಣವೇ ರಾಜೀನಾಮೆ ಕೊಡ್ಬೇಕು ಅಂತ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿಕಾರಿದ್ರು.

    ದ್ವೇಷ ಭಾಷಣಗಳ ಮೂಲಕ ಉದ್ದೇಶ ಪೂರ್ವಕವಾಗಿಯೇ ದೆಹಲಿಯಲ್ಲಿ ಭಯದ ವಾತಾವರಣ ಸೃಷ್ಟಿಸಲಾಗ್ತಿದೆ ಅಂತ ದೂರಿದ್ರು. ನಾಳೆ ಪ್ರತಿಭಟನೆ ಮಾಡಲಿರುವ ಕಾಂಗ್ರೆಸ್, ರಾಷ್ಟ್ರಪತಿಗಳಿಗೆ ದೂರು ನೀಡಲಿದೆ. ಆದರೆ, ಸೋನಿಯಾ ಗಾಂಧಿ ಡರ್ಟಿ ಪಾಲಿಟಿಕ್ಸ್ ಮಾಡ್ತಿದ್ದಾರೆ ಅಂತ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದರು.

    ಸೋನಿಯಾ ಗಾಂಧಿ ಅವರ ಹೇಳಿಕೆ ದುರಾದೃಷ್ಟ. ಖಂಡನೀಯ. ಇಂಥ ಸಮಯದಲ್ಲಿ ಎಲ್ಲಾ ಪಕ್ಷಗಳು ಶಾಂತಿ ಕಾಪಾಡುವಂತೆ ಮನವಿ ಮಾಡ್ಬೇಕು. ಅದನ್ನು ಬಿಟ್ಟು ಸರ್ಕಾರವನ್ನು ನಿಂದಿಸೋದು, ಕೊಳಕು ರಾಜಕೀಯ ಸರಿಯಲ್ಲ ಅಂದ್ರು. ಈ ಮಧ್ಯೆ, ಅಮಿತ್ ಶಾ ರಾಜೀನಾಮೆ ಕೊಡ್ಬೇಕು ಅಂತ ಎನ್‍ಸಿಪಿಯ ಸುಪ್ರಿಯಾ ಸುಳೆ ಹೇಳಿದ್ರೆ, ದೆಹಲಿಯಲ್ಲಿ ಸೇನೆಯ ನಿಯೋಜನೆ ಬಿಟ್ಟರೆ ಬೇರೆ ದಾರಿಯಿಲ್ಲ ಅಂತ ಸಿಪಿಎಂ ಸೀತಾರಾಂ ಯೆಚೂರಿ ಹೇಳಿದ್ದಾರೆ.

  • ಜೈಲಲ್ಲಿ ನಿರ್ಭಯಾ ಹಂತಕನ ಹೈಡ್ರಾಮ- ಗೋಡೆಗೆ ತಲೆ ಚಚ್ಚಿಕೊಂಡ ವಿನಯ್ ಶರ್ಮಾ

    ಜೈಲಲ್ಲಿ ನಿರ್ಭಯಾ ಹಂತಕನ ಹೈಡ್ರಾಮ- ಗೋಡೆಗೆ ತಲೆ ಚಚ್ಚಿಕೊಂಡ ವಿನಯ್ ಶರ್ಮಾ

    ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಹೈ ಡ್ರಾಮಾ ನಡೆಸಿದ್ದು, ಗೋಡೆಗೆ ತಲೆ ಚಚ್ಚಿಕೊಳ್ಳುವ ಮೂಲಕ ನಾಟಕವಾಡಿದ್ದಾನೆ.

    ಈ ಕುರಿತು ಜೈಲಿನ ಮೂಲಗಳು ಮಾಹಿತಿ ನೀಡಿದ್ದು, ಫೆಬ್ರವರಿ 16ರಂದು ಈ ಘಟನೆ ನಡೆದಿದೆ. ತಕ್ಷಣವೇ ಜೈಲು ಅಧಿಕಾರಿಗಳು ತಡೆದಿದ್ದಾರೆ. ಗೋಡೆಗೆ ಬಲವಾಗಿ ತಲೆ ಚಚ್ಚಿಕೊಂಡಿದ್ದರಿಂದ ವಿನಯ್ ಶರ್ಮಾಗೆ ಗಾಯವಾಗಿದೆ. ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ. ನಿರ್ಭಯಾ ಅತ್ಯಾಚಾರಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ಗೋಡೆಗೆ ತಲೆ ಚೆಚ್ಚಿಕೊಂಡಿರುವುದು ಸತ್ಯ, ತಲೆಗೆ ಗಾಯವಾಗಿದೆ ಎಂದು ಜೈಲು ಅಧಿಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ.

    ಇತ್ತೀಚೆಗಷ್ಟೇ ವಿನಯ್ ಪರ ವಕೀಲರು ಕೋರ್ಟಿಗೆ ಹೇಳಿಕೆ ನೀಡಿದ್ದು, ವಿನಯ್ ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ. ಅಲ್ಲದೆ ಸೆಲ್‍ನಲ್ಲಿ ವಿನಯ್ ಮೇಲೆ ಹಲ್ಲೆ ನಡೆಸಲಾಗಿದ್ದು, ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಆದ್ದರಿಂದ ಮರಣದಂಡನೆ ವಿಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಹೇಳಿಕೆ ನಂತರ ಜೈಲು ಅಧಿಕಾರಿಗೆ ಈ ಕುರಿತು ಕೋರ್ಟ್ ಸಹ ಸೂಚನೆ ನೀಡಿದ್ದು, ಕಾನೂನಿನ ಪ್ರಕಾರ ವಿನಯ್ ಕುರಿತು ಕಾಳಜಿ ವಹಿಸುವಂತೆ ಆದೇಶಿಸಿದೆ.

    ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಅಲ್ಲದೆ ಹೊಸ ಮರಣದಂಡನೆ ಜಾರಿಗೊಳಿಸಿದ ನಂತರ ಗಲ್ಲು ಶಿಕ್ಷೆ ಮುಂದೂಡುವುದು ಸಂತ್ರಸ್ತರ ಹಕ್ಕುಗಳಿಗೆ ಚ್ಯುತಿ ತಂದಂತೆ ಎಂದು ದೆಹಲಿ ನ್ಯಾಯಾಲಯ ವ್ಯಾಖ್ಯಾನಿಸಿದೆ.

    ಮುಖೇಶ್ ಕುಮಾರ್ ಸಿಂಗ್(32), ಪವನ್ ಗುಪ್ತಾ(25), ವಿನಯ್ ಕುಮಾರ್ ಶರ್ಮಾ(26), ಅಕ್ಷಯ್ ಕುಮಾರ್(31) ಈ ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸುವಂತೆ ಕೋರ್ಟ್ ಆದೇಶಿಸಿದೆ. ಇದು ಕೋರ್ಟ್ ನೀಡುತ್ತಿರುವ ಮೂರನೇ ಆದೇಶವಾಗಿದ್ದು, ಈ ಬಾರಿಯಾದರೂ ಗಲ್ಲಿಗೇರಿಸಲಾಗುತ್ತದೆಯೇ ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ.

    ಜನವರಿ 7ರಂದು ಕೋರ್ಟ್ ಈ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಅಡಿಷನಲ್ ಸೆಶನ್ ಜಡ್ಜ್ ಧರ್ಮೇಂದ್ರ ರಾಣಾ ಅವರು ಆದೇಶ ಹೊರಡಿಸಿದ್ದರು. ನಂತರ ಜನವರಿ 17 ಹಾಗೂ 31ರಂದು ನಡೆದ ವಿಚಾರಣೆ ವೇಳೆ ಶಿಕ್ಷೆಯನ್ನು ಮುಂದೂಡಲಾಗಿದೆ. ಅದರಂತೆ ಮಾರ್ಚ್ 3ರಂದು ಬೆಳಗ್ಗೆ 6ಕ್ಕೆ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.