Tag: Delhi Government

  • ಶೀಘ್ರದಲ್ಲೇ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ

    ಶೀಘ್ರದಲ್ಲೇ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ

    ನವದೆಹಲಿ: 2012ರ `ನಿರ್ಭಯಾ’ ಅತ್ಯಾಚಾರ ಪ್ರಕರಣದ ದೋಷಿರ್ಯೋವ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ. ಆದ್ದರಿಂದ ಶೀಘ್ರದಲ್ಲೇ ದೋಷಿಗಳನ್ನು ಗಲ್ಲಿಗೇರಿಸಲಾಗುವುದು ಎನ್ನಲಾಗಿದೆ.

    ಈ ಸಂಬಂಧ ದೆಹಲಿ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದ್ದು, ಇದನ್ನು ಗೃಹ ಸಚಿವಾಲಯ ಪರಿಶೀಲಿಸಿ, ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ರವಾನಿಸಲಿದೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ರಾಷ್ಟ್ರಪತಿಗಳು ತೆಗೆದುಕೊಳ್ಳಲಿದ್ದಾರೆ. ಆದರೆ ಅವರು ಕೂಡ ದೆಹಲಿ ಸರ್ಕಾರದಂತೆ ಕ್ಷಮಾದಾನ ಅರ್ಜಿ ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿದ್ದು, ಶೀಘ್ರದಲ್ಲೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 10ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್ – ಪೊಲೀಸ್ ಮಗನ ಜೊತೆ ಸಿಆರ್​ಪಿಎಫ್​ ಯೋಧನಿಂದ ಕೃತ್ಯ

    2012ರ ಡಿ. 16ರಂದು ದೆಹಲಿಯಲ್ಲಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ದುರುಳರು ವಿಕೃತಿ ಮೆರೆದಿದ್ದರು. ಈ ಪ್ರಕರಣ ಸಂಬಂಧ ರಾಮ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಮುಕೇಶ್ ಸಿಂಗ್ ಬಂಧಿಸಲಾಗಿತ್ತು. ಆದರೆ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿಯೇ ರಾಮ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದನು. ಬಳಿಕ ಈ ದುಷ್ಟರ ಕೃತ್ಯ ಸಾಬೀತಾಗಿ, ಅವರನ್ನು ದೋಷಿಗಳು ಎಂದು ಪರಿಗಣಿಸಿ ಇನ್ನುಳಿದ ನಾಲ್ವರಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅವರಲ್ಲಿ ಮೂವರಿಗೆ ಕ್ಷಮಾದಾನ ಕೋರುವ ಯಾವುದೇ ಅವಕಾಶ ಇರಲಿಲ್ಲ. ಆದರೆ ವಿನಯ್ ಶರ್ಮಾಗೆ ಅವಕಾಶವಿದ್ದ ಹಿನ್ನೆಲೆ ಆತ ಮಾತ್ರ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು. ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯ ಖಡಕ್ ಪ್ರಶ್ನೆಗೆ ತಲೆ ತಗ್ಗಿಸಿ ನಿಂತ ಐಸಿಸ್ ರೇಪಿಸ್ಟ್

    ಆದರೆ ಆತನ ಕ್ಷಮದಾನ ಅರ್ಜಿಯನ್ನು ಬುಧವಾರ ದೆಹಲಿ ಸರ್ಕಾರ ತಿರಸ್ಕರಿಸಿದೆ. ಅಲ್ಲದೆ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಷ್ಟ್ರಪತಿಗಳಿಗೂ ದೋಷಿಯ ಕ್ಷಮಾದಾನ ಅರ್ಜಿ ತಿರಸ್ಕರಿಸುವಂತೆ ಶಿಫಾರಸು ಮಾಡಿದೆ. ಒಂದು ವೇಳೆ ಗೃಹ ಸಚಿವಾಲಯ ದೋಷಿಯ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರೆ ನಿರ್ಭಯಾ ಪ್ರಕರಣದ ನಾಲ್ವರು ಅತ್ಯಚಾರಿಗಳನ್ನು ಗಲ್ಲಿಗೇರಿಸುವುದು ಖಚಿತ.

    2012ರಲ್ಲಿ ನಡೆದಿದ್ದ ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅತ್ಯಾಚಾರಿಗಳ ವಿರುದ್ಧ ಸಾರ್ವಜನಿಕರು ಹೋರಾಟ, ಪ್ರತಿಭಟನೆಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತನ್ನಿ ಎಂಬ ಕೂಗು ಕೇಳಿಬಂದಿತ್ತು. ಇದನ್ನೂ ಓದಿ: ಕೊಲೆಗೈದು ಮಹಿಳೆ ಶವದ ಮೇಲೆ ರೇಪ್ – ವಿಡಿಯೋ ಸೆರೆಹಿಡಿದ ವಿಕೃತಕಾಮಿ ಅರೆಸ್ಟ್

    ನಿರ್ಭಯಾ ಪ್ರಕರಣದ ರೀತಿಯೇ ನವೆಂಬರ್ 27ರಂದು ಹೈದರಾಬಾದಿನಲ್ಲಿಯೂ ಪಶುವೈದ್ಯೆಯ ಅತ್ಯಾಚಾರ ಪ್ರಕರಣ ನಡೆದಿದ್ದು, ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ಹೆತ್ತವರು ಕೂಡ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿ, ತಮ್ಮ ಮಕ್ಕಳ ದುಷ್ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊಲೆಗೈದ ಮೇಲೂ ಪಶುವೈದ್ಯೆ ಮೇಲೆ ಅತ್ಯಾಚಾರವೆಸೆಗಿದ ರಾಕ್ಷಸರು

    ಹೈದರಾಬಾದ್ ಅತ್ಯಾಚಾರ, ಕೊಲೆ ಪ್ರಕರಣದ ಬಳಿಕ ದೇಶದಲ್ಲಿ ಪ್ರತಿನಿತ್ಯ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅಪ್ರಾಪ್ತೆಯರು, ಮಹಿಳೆಯರು ಮಾತ್ರವಲ್ಲದೆ ವೃದ್ಧೆಯರ ಮೇಲೂ ಕಾಮುಕರು ಕ್ರೌರ್ಯ ಮೆರೆದ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ ದೇಶದೆಲ್ಲೆಡೆ ಆತ್ಯಾಚಾರಿಗಳನ್ನು ಗಲ್ಲಿಗೇರಿಸಿ ಆಗ ಹೆಣ್ಣನ್ನು ಕಾಮ ದೃಷ್ಠಿಯಿಂದ ನೋಡುವ ದುರುಳರು ಹೆದರುತ್ತಾರೆ ಎಂದು ಜನರು ಆಗ್ರಹಿಸುತ್ತಿದ್ದಾರೆ.

  • ಅಕ್ಟೋಬರ್‌ನಿಂದ ಮೆಟ್ರೋ, ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯ – ಕೇಜ್ರಿವಾಲ್ ಗಿಫ್ಟ್

    ಅಕ್ಟೋಬರ್‌ನಿಂದ ಮೆಟ್ರೋ, ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯ – ಕೇಜ್ರಿವಾಲ್ ಗಿಫ್ಟ್

    ನವದೆಹಲಿ: ರಕ್ಷಾ ಬಂಧನ ಹಬ್ಬದ ಅಂಗವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಿದ್ದು, ದೆಹಲಿ ಮೆಟ್ರೋ, ದೆಹಲಿ ನಗರ ಸಾರಿಗೆ ಹಾಗೂ ಸ್ಥಳೀಯ ಸರ್ಕಾರಿ ಬಸ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಯೋಜನೆಯನ್ನು ಘೋಷಿಸಿದ್ದಾರೆ.

    ಅಕ್ಟೋಬರ್ 29ರಿಂದ ಈ ಕಾರ್ಯಕ್ರಮ ಜಾರಿಗೆ ಬರಲಿದ್ದು, ಇದಕ್ಕೆ ‘ಭಾಯ್ ದೂಜ್’ ಎಂದು ಹೆಸರಿಡಲಾಗಿದೆ. ಇಂದು ನಡೆದ ಸ್ವಾತಂತ್ರ್ಯ ದಿನಾಚಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಈ ಯೋಜನೆಯನ್ನು ಕೇಜ್ರಿವಾಲ್ ಘೋಷಿಸಿದ್ದಾರೆ. ದೆಹಲಿ ಮೆಟ್ರೋ, ದೆಹಲಿ ಸಾರಿಗೆ ಸಂಸ್ಥೆ ಹಾಗೂ ಸ್ಥಳೀಯ ಬಸ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಯೋಜನೆಯನ್ನು ಕೇಜ್ರಿವಾಲ್ ಅವರು 2 ತಿಂಗಳ ಹಿಂದೆಯೇ ಘೋಷಿಸಿದ್ದರು. ಆದರೆ, ಇದೀಗ ಅಧಿಕೃತವಾಗಿ ತಿಳಿಸಿದ್ದಾರೆ.

    ರಕ್ಷಾ ಬಂಧನದ ನಿಮಿತ್ತ ನನ್ನ ಸಹೋದರಿಯರಿಗೆ ಅದ್ಭುತ ಉಡುಗೊರೆ ನೀಡುತ್ತಿದ್ದೇನೆ. ಅದುವೇ ಉಚಿತ ಪ್ರಯಾಣದ ವ್ಯವಸ್ಥೆ. ದೆಹಲಿ ಮೆಟ್ರೋ, ದೆಹಲಿ ಸಾರಿಗೆ ಸಂಸ್ಥೆ ಹಾಗೂ ಸ್ಥಳೀಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಅಕ್ಟೋಬರ್ 29ರಿಂದ ಮಹಿಳೆಯರು ಉಚಿತವಾಗಿ ಪ್ರಯಣಿಸಬಹುದಾಗಿದೆ. ಮಹಿಳೆಯರ ಭದ್ರತೆಗಾಗಿ ಈ ಯೋಜನೆಯನ್ನು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮುಂದಿನ ವರ್ಷ ಜೂನ್ ತಿಂಗಳಲ್ಲಿ ದೆಹಲಿಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದರ ಭಾಗವಾಗಿ ಈ ಜನಪ್ರಿಯ ಯೋಜನೆಯನ್ನು ಘೋಷಿಸಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಈ ಕುರಿತು ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿ, ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡುವ ಮೂಲಕ ಸಾರ್ವಜನಿಕ ಸಾರಿಗೆಯನ್ನು ಬಳಸಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವುದು ಹಾಗೂ ಮಹಿಳೆಯರ ಭದ್ರತೆಯ ದೃಷ್ಟಯಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

    2019ರ ಲೋಕಸಭಾ ಚುನಾವಣೆ ನಂತರ ಈ ಘೋಷಣೆ ಹೊರ ಬಿದ್ದಿದ್ದು, ಎಎಪಿ 2015ರಿಂದ ಆಡಳಿತ ನಡೆಸುತ್ತಿದ್ದರೂ ಸಹ ಲೋಕಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ ಒಂದೂ ಕ್ಷೇತ್ರದಲ್ಲಿ ಆಪ್ ಜಯಗಳಿಸಿರಲಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಕೇಜ್ರಿವಾಲ್ ಈಗ ಈ ಆಫರ್ ಪ್ರಕಟಿಸಿದ್ದಾರೆ.

    ಯೋಜನೆಯಿಂದಾಗಿ ಕೇಜ್ರಿವಾಲ್ ಸರ್ಕಾರಕ್ಕೆ ಸುಮಾರು 700 ಕೋಟಿ ರೂ.ಗಳಷ್ಟು ಹೊರೆಯಾಗಲಿದ್ದು, ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯೋಜನೆಯನ್ನು ಘೋಷಿಸಿದ ನಂತರ ಬಿಜೆಪಿ ಕೇಜ್ರಿವಾಲ್ ಅವರನ್ನು ಕಟುವಾಗಿ ಟೀಕಿಸಿದ್ದು, ಮುಖ್ಯಮಂತ್ರಿಗಳು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ ಎಂದು ದೂರಿದೆ.

    ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಸಹ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಯೋಜನೆಯನ್ನು ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ. ಇದೇ ರೀತಿ ಮೆಟ್ರೋದಲ್ಲೂ ಉಚಿತ ಪ್ರಯಾಣ ಸೌಲಭ್ಯ ನೀಡಿರುವುದರಿಂದ ಮೆಟ್ರೋ ನಿರ್ವಹಣೆ ಅಸಾಧ್ಯ ಎಂದು ತಿಳಿಸಿದ್ದಾರೆ. ಅಲ್ಲದೆ, ಮೆಟ್ರೋ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವವಿದೆ. ಒಂದು ವೇಳೆ ಹಣಕಾಸಿನ ವಿಚಾರವಾಗಿ ಕೇಂದ್ರ ಸರ್ಕಾರ ಒಪ್ಪಂದವನ್ನು ಹಿಂಪಡೆದರೆ ರಾಜ್ಯ ಸರ್ಕಾರಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಡಸಿದ್ದಾರೆ. ರಕ್ಷಾ ಬಂಧನ ಹಿನ್ನೆಲೆ ಇಂದೂ ಸಹ ಮಹಿಳೆಯರು ದೆಹಲಿಯ ಬಸ್ ಹಾಗೂ ಮೆಟ್ರೋಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

  • ವಾಯುಮಾಲಿನ್ಯ ನಿಯಂತ್ರಣ ವಿಫಲ – ಎನ್‍ಜಿಟಿಯಿಂದ ದೆಹಲಿ ಸರ್ಕಾರಕ್ಕೆ 25 ಕೋಟಿ ರೂ. ಫೈನ್

    ವಾಯುಮಾಲಿನ್ಯ ನಿಯಂತ್ರಣ ವಿಫಲ – ಎನ್‍ಜಿಟಿಯಿಂದ ದೆಹಲಿ ಸರ್ಕಾರಕ್ಕೆ 25 ಕೋಟಿ ರೂ. ಫೈನ್

    – ಸರ್ಕಾರದ ಖಜಾನೆಯಿಂದ ದಂಡ ಕಟ್ಟುವಂತಿಲ್ಲ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್(ಎಎಪಿ) ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‍ಜಿಟಿ) 25 ಕೋಟಿ ರೂಪಾಯಿಯನ್ನು ದಂಡ ವಿಧಿಸಿದೆ.

    ದೆಹಲಿಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ವಾಯು ಮಾಲಿನ್ಯವನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ವಾಯು ಮಾಲಿನ್ಯದ ಗುಣಮಟ್ಟವನ್ನು ಪರಿಶೀಲಿಸುವಲ್ಲಿಯೂ ಅಸಮರ್ಥವಾಗಿರುವ ಸರ್ಕಾರದ ವಿರುದ್ಧ ಎನ್‍ಜಿಟಿ ತೀವ್ರ ಅಸಮಾಧಾನ ಹೊರಹಾಕಿದೆ. ಅಲ್ಲದೇ ಸರ್ಕಾರಕ್ಕೆ ಬರೋಬ್ಬರಿ 25 ಕೋಟಿ ರೂಪಾಯಿಯ ದಂಡವನ್ನು ಸಹ ಹಾಕಿದೆ.

    ದಂಡದ ಹಣವನ್ನು ಸರ್ಕಾರ ಖಜಾನೆಯಿಂದ ನೀಡುವಂತಿಲ್ಲ. ಬದಲಾಗಿ ಸರ್ಕಾರಿ ಅಧಿಕಾರಿಗಳ ಸಂಬಳ ಹಾಗೂ ಮಾಲಿನ್ಯ ಮಾಡಿದ್ದವರಿಂದ ವಸೂಲಿ ಮಾಡಿ ನೀಡುವಂತೆ ಸೂಚನೆ ನೀಡಿದೆ. ಒಂದು ವೇಳೆ ದೆಹಲಿ ಸರ್ಕಾರ 25 ಕೋಟಿ ರೂಪಾಯಿಯನ್ನು ನೀಡಲು ವಿಫಲವಾದರೇ, ಪ್ರತಿ ತಿಂಗಳು 10 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕೆಂದು ಎನ್‍ಜಿಟಿ ಹೇಳಿದೆ.

    ದೆಹಲಿಯ ಗುರುಗ್ರಾಮ, ನೋಯ್ಡಾ, ಪರಿದಾಬಾದ್, ಗಾಜಿಯಾಬಾದ್ ಸೇರಿದಂತೆ ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಅಲ್ಲದೇ ಜನರು ವಿಷಯುಕ್ತ ಗಾಳಿ ಸೇವನೆಯಿಂದಾಗಿ ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಸಂಬಂಧ ದೆಹಲಿ ಸರ್ಕಾರದ ವಿರುದ್ಧ ಎನ್‍ಜಿಟಿಯಲ್ಲಿ 6ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಸೋಮವಾರ ಇದರ ವಿಚಾರಣೆ ನಡೆಸಿದ ಎನ್‍ಜಿಟಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಎಎಪಿ ಸರ್ಕಾರಕ್ಕೆ ಛೀಮಾರಿ ಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಓಲಾ-ಊಬರ್‌ನಲ್ಲಿ ಬುಕ್ಕಿಂಗ್ ಮಾಡಿದ್ಮೇಲೆ, ಬರಲ್ಲ ಅಂದ್ರೆ ಬೀಳುತ್ತೆ 25 ಸಾವಿರ ದಂಡ!

    ಓಲಾ-ಊಬರ್‌ನಲ್ಲಿ ಬುಕ್ಕಿಂಗ್ ಮಾಡಿದ್ಮೇಲೆ, ಬರಲ್ಲ ಅಂದ್ರೆ ಬೀಳುತ್ತೆ 25 ಸಾವಿರ ದಂಡ!

    -ನೂತನ ವಾಹನ ನಿಯಮ ಜಾರಿಗೊಳಿಸಿದ ದೆಹಲಿ ಸರ್ಕಾರ

    ನವದೆಹಲಿ: ಆ್ಯಪ್ ಆಧಾರಿದ ಟ್ಯಾಕ್ಸಿ ಸೇವೆಗಳಾದ ಓಲಾ ಮತ್ತು ಊಬರ್ ಗಳಲ್ಲಿ, ಪ್ರಯಾಣಿಕರು ಬುಕ್ಕಿಂಗ್ ಮಾಡಿದ ಮೇಲೆ ಚಾಲಕರು ಬರಲ್ಲ ಎಂದರೆ 25 ಸಾವಿರ ರೂಪಾಯಿ ದಂಡ ವಿಧಿಸುವ ನೂತನ ಯೋಜನೆಯನ್ನು ದೆಹಲಿ ಸರ್ಕಾರ ಜಾರಿಗೊಳಿಸಿದೆ.

    ಹೌದು, ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ನೀಡುತ್ತಿರುವ ಓಲಾ ಹಾಗೂ ಊಬರ್ ನಂತಹ ಖಾಸಗಿ ಕಂಪೆನಿಗಳ ಚಾಲಕರು, ಬುಕ್ಕಿಂಗ್ ಮಾಡಿದ ಬಳಿಕ, ಟ್ರಿಪ್‍ಗಳನ್ನು ರದ್ದು ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಅಲ್ಲದೇ ಪ್ರಯಾಣಿಕರು ನಿಗದಿಪಡಿಸಿರುವ ಸ್ಥಳಗಳಿಗೆ ಬರಲು ಚಾಲಕರು ನಿರಾಕರಿಸುತ್ತಿರುವ ದೂರುಗಳು ಸಾಕಷ್ಟು ಪ್ರಮಾಣದಲ್ಲಿ ಕೇಳಿ ಬಂದಿದೆ.

    ಪ್ರಯಾಣಿಕರಿಂದ ದಿನೇ ದಿನೇ ದೂರುಗಳು ದಾಖಲಾಗುತ್ತಿದ್ದರೂ, ಓಲಾ ಹಾಗೂ ಊಬರ್ ಕಂಪೆನಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಖಾಸಗಿ ಕಂಪೆನಿ ಹಾಗೂ ಚಾಲಕರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ದೆಹಲಿ ಸರ್ಕಾರ, ನೂತನ ಸಾರಿಗೆ ನಿಯಮವನ್ನು ಜಾರಿಗೆ ತಂದಿದೆ.

    ದೆಹಲಿ ಸರ್ಕಾರ ಜಾರಿಗೆ ತಂದಿರುವ ನಿಯಮದ ಪ್ರಕಾರ, ಯಾವುದೇ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಾದ ಓಲಾ ಮತ್ತು ಊಬರ್ ಗಳಲ್ಲಿ, ಪ್ರಯಾಣಿಕರು ಬುಕ್ಕಿಂಗ್ ಮಾಡಿದ ಬಳಿಕ ಟ್ರಿಪ್‍ಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವಂತಿಲ್ಲ. ಅಲ್ಲದೇ ಪ್ರಯಾಣಿಕರು ನಿಗದಿಪಡಿಸಿದ ಸ್ಥಳಗಳಿಗೆ ತೆರಳಲು ಕೊನೆ ಸಮಯದಲ್ಲಿ ಚಾಲಕರು ನಿರಾಕರಿಸುವಂತಿಲ್ಲ ಎನ್ನುವ ಆದೇಶವನ್ನು ನೀಡಿದೆ. ಒಂದು ವೇಳೆ ಚಾಲಕರು ಅಥವಾ ಸಂಸ್ಥೆಗಳು ಕೊನೆ ಕ್ಷಣದಲ್ಲಿ ಪ್ರಯಾಣವನ್ನು ರದ್ದುಗೊಳಿಸಿದರೆ, ಅಂತವರ ವಿರುದ್ಧ ಸುಮಾರು 25,000 ರೂಪಾಯಿ ದಂಡ ವಿಧಿಸುವ ನಿಯಂತ್ರಕ ನೀತಿಯನ್ನು ಜಾರಿಗೊಳಿಸಿದೆ.

    ಪ್ರಸ್ತುತ ಈ ನಿಯಮವು ದೆಹಲಿಯಲ್ಲಿ ಜಾರಿಯಾಗುತ್ತಿದೆ. ಅಲ್ಲದೇ ದೆಹಲಿ ಸರ್ಕಾರ ನೂತನ ಸಂಚಾರಿ ನಿಯಮಗಳನ್ನು ಸಾಕಷ್ಟು ಪರಿಷ್ಕರಣೆ ಮಾಡುತ್ತಿದೆ. ಇದಲ್ಲದೇ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿರುವ ಸರ್ಕಾರವು, ಪ್ರಯಾಣಿಕರ ಮೇಲೆ ದೌರ್ಜನ್ಯ ಅಥವಾ ಅವರೊಂದಿಗೆ ಅಸಭ್ಯವಾಗಿ ವರ್ತಿಸುವ ದೂರುಗಳು ದಾಖಲಾದರೆ, ಅಂತವರ ಮೇಲೆ 1 ಲಕ್ಷ ರೂಪಾಯಿ ವರೆಗಿನ ದಂಡ ವಸೂಲಾತಿಗೆ ನಿಯಮವನ್ನು ರೂಪಿಸಿದೆ.

    ಇದಲ್ಲದೇ ದೆಹಲಿಯ ಲೋಕೋಪಯೋಗಿ ಸಚಿವ ಎಸ್.ಜೈನ್ ನೇತೃತ್ವದ ತಜ್ಞರ ಸಮಿತಿಯು 2017 ರ ಪರವಾನಗಿ ಹಾಗೂ ಆ್ಯಪ್ ಆಧಾರಿದ ಟ್ಯಾಕ್ಸಿ ಸೇವೆಗಳು ಮತ್ತು ಸಿಟಿ ಟ್ಯಾಕ್ಸಿ ನಿಯಮಗಳನ್ನು ಪುನರ್ ಪರಿಷ್ಕರಣೆ ನಡೆಸಿ, ನೂತನ ನಿಯಾಮಳಿಗಳನ್ನು ದಿಲ್ಲಿ ಸಂಪುಟಕ್ಕೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

    ಕಡ್ಡಾಯವಾಗಿ ಟ್ಯಾಕ್ಸಿಗಳು ಪಾಲಿಸಬೇಕಾದ ನಿಯಮಗಳು:
    1. ಆ್ಯಪ್ ಆಧಾರಿತ ಹಾಗೂ ಸಿಟಿ ಟ್ಯಾಕ್ಸಿ ಸೇವೆಗಳ ಕಾಲ್ ಸೆಂಟರ್ ಗಳನ್ನು ಕಡ್ಡಾಯವಾಗಿ 24 ಗಂಟೆ ಜಾರಿಯಲ್ಲಿಡುವುದು.
    2. ಆದಾಯ ತೆರಿಗೆ ಇಲಾಖೆಯಿಂದ ಮಾನ್ಯತೆ ಪಡೆದ ಆ್ಯಪ್ ಆಧಾರಿತ ಸೇವೆಗಳನ್ನು ಬಳಸುವುದು.
    3. ಕಡ್ಡಾಯವಾಗಿ ಸಂಚಾರಿ ಇಲಾಖೆಯಿಂದ ಪರವಾನಿಗೆ ಪಡೆಯುವುದು.
    4. ಪ್ರತಿ ವಾಹನಗಳಿಗೂ ಕಡ್ಡಾಯವಾಗಿ ಜಿಪಿಎಸ್ ಸಾಧನಗಳನ್ನು ಅಳವಡಿಸುವುದು.
    5. ತುರ್ತು ಸಂದರ್ಭಗಳಲ್ಲಿ ಸ್ಥಳೀಯ ಪೊಲೀಸರಿಗೆ ಸಂದೇಶ ರವಾನಿಸುವ ಪ್ಯಾನಿಕ್ ಬಟನ್‍ಗಳನ್ನು ಸ್ಥಾಪಿಸುವುದು.

    ಏನನ್ನು ಮಾಡಬಾರದು:
    1. ಬುಕ್ಕಿಂಗ್ ಆಧಾರಿತ ಟ್ರಿಪ್ ಹಾಗೂ ಸರ್ವೀಸ್‍ಗಳನ್ನು ನಿರಾಕರಿಸುವಂತಿಲ್ಲ.
    2. ಪ್ರಯಾಣಿಕರ ಲಿಂಗ, ಜಾತಿ, ಮತ, ಧರ್ಮ, ರಾಷ್ಟ್ರೀಯತೆ ಅಥವಾ ವೈಕಲ್ಯತೆಗಳ ಮೇಲೆ ತಾರತಮ್ಯ ಮಾಡುವಂತಿಲ್ಲ.
    3. ಸಂಚಾರಿ ಇಲಾಖೆ ನಿಗದಿಪಡಿಸಿರುವ ನಿಗದಿತ ದರಕ್ಕಿಂತ ಅಧಿಕ ಮೊತ್ತ ಪಡೆಯುವಂತಿಲ್ಲ. ಒಂದು ವೇಳೆ ನಿಯಮವನ್ನು ಮೀರಿದರೆ ಪರವಾನಗಿ ರದ್ದುಪಡಿಸಲಾಗುತ್ತದೆ.
    4. ಕುಡಿದು ವಾಹನಗಳನ್ನು ಚಲಾಯಿಸುವಂತಿಲ್ಲ.
    5. ವಿಶೇಷವಾಗಿ ಮಹಿಳಾ ಪ್ರಯಾಣಿಕರು ಹಾಗೂ ಪ್ರಯಾಣಿಕರ ಜೊತೆ ಕೆಟ್ಟದಾಗಿ ನಡೆದುಕೊಳ್ಳುವಂತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv