Tag: delhi court blast

  • ಪಕ್ಕದ ಮನೆಯ ವಕೀಲನನ್ನು ಕೊಲ್ಲಲು ಕೋರ್ಟ್‌ಗೆ ಬಾಂಬ್‌ ಇಟ್ಟಿದ್ದ ವಿಜ್ಞಾನಿ ಅರೆಸ್ಟ್‌!

    ಪಕ್ಕದ ಮನೆಯ ವಕೀಲನನ್ನು ಕೊಲ್ಲಲು ಕೋರ್ಟ್‌ಗೆ ಬಾಂಬ್‌ ಇಟ್ಟಿದ್ದ ವಿಜ್ಞಾನಿ ಅರೆಸ್ಟ್‌!

    ನವದೆಹಲಿ: ಪಕ್ಕದ ಮನೆಯ ವಕೀಲನನ್ನು ಕೊಲ್ಲುವುದಕ್ಕಾಗಿ ದೆಹಲಿ ನ್ಯಾಯಾಲಯದಲ್ಲಿ ಸ್ಫೋಟಕವನ್ನು ಇರಿಸಿದ್ದ ಆರೋಪದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಭರತ್‌ ಭೂಷಣ್‌ ಕಟಾರಿಯಾ ಬಂಧಿತ ವಿಜ್ಞಾನಿ. ಈತ ಬಾಂಬ್‌ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ದೆಹಲಿಯ ರೋಹಿಣಿ ಕೋರ್ಟ್‍ನಲ್ಲಿ ಸ್ಫೋಟ – ಪೊಲೀಸ್ ಸಿಬ್ಬಂದಿಗೆ ಗಾಯ

    ಡಿ.9 ರಂದು ರೋಹಿಣಿ ಕೋರ್ಟ್‌ ಕಾಂಪ್ಲೆಕ್ಸ್‌ನ ಕೊಠಡಿಯೊಂದರಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದರು. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೆಷಲ್‌ ಸೆಲ್‌ ಟೀಮ್‌ ತನಿಖೆ ನಡೆಸಿತ್ತು. ತನಿಖೆ ವೇಳೆ 1 ಸಾವಿರ ವಾಹನಗಳು ಹಾಗೂ ಕೋರ್ಟ್‌ ಒಳಗೆ ಮತ್ತು ಹೊರಗೆ ಅಳವಡಿಸಿರುವ ಸುಮಾರು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಫೂಟೇಜ್‌ ಅನ್ನು ಪರಿಶೀಲಿಸಲಾಗಿತ್ತು ಎಂದು ದೆಹಲಿ ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.

    Rohini Court

    ಘಟನೆ ಸಂಭವಿಸಿದ ದಿನ ಕೋರ್ಟ್‌ ಬಳಿ ಅನುಮಾನಾಸ್ಪದವಾಗಿ ಓಡಾಡಿದವರ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದರು. ಆ ದಿನ ಎರಡು ಚೀಲಗಳೊಂದಿಗೆ ಕೋರ್ಟ್‌ ಪ್ರವೇಶಿಸಿದ್ದ ವಿಜ್ಞಾನಿ, ನಂತರ ಒಂದು ಚೀಲ ಹಿಡಿದು ಹೊರಬಂದಿದ್ದಾರೆ.

    ಕೃತ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದಾಗ, ವಿಜ್ಞಾನಿ ಮತ್ತು ವಕೀಲ ಪರಸ್ಪರರು ದ್ವೇಷಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಇಬ್ಬರೂ ನೆರೆಹೊರೆಯವರಾಗಿದ್ದು, ಒಂದೇ ಕಟ್ಟಡದಲ್ಲಿ ವಾಸವಾಗಿದ್ದಾರೆ. ವಕೀಲ ನೆಲಮಹಡಿಯಲ್ಲಿ ಹಾಗೂ ವಿಜ್ಞಾನಿ ಅದೇ ಕಟ್ಟಡದ 3ನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ ವಕೀಲನ ವಿರುದ್ಧ ವಿಜ್ಞಾನಿ 5 ಪ್ರಕರಣ ಹಾಗೂ ವಿಜ್ಞಾನಿ ವಿರುದ್ಧ ವಕೀಲ 7 ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಅಂಗಡಿಯವರನ್ನೇ ಕಟ್ಟಿ ಹಾಕಿ 26 ಲಕ್ಷ ರೂ. ಕದ್ದ ಕಳ್ಳರು

    ದ್ವಿಚಕ್ರ ವಾಹನಗಳ ಕಳ್ಳತನಕ್ಕೆ ಬಳಸುವ ʻಅ್ಯಂಟಿ ತೆಫ್ಟ್‌ʼ ವ್ಯವಸ್ಥೆಯನ್ನು ಸ್ಫೋಟಕಕ್ಕೆ ರಿಮೋಟ್‌ ಆಗಿ ವಿಜ್ಞಾನಿ ಬಳಸಿಕೊಂಡಿದ್ದರು. ಐಇಡಿಯನ್ನು ಸರಿಯಾಗಿ ಹೊಂದಿಸದ ಕಾರಣ ಡಿಟೋನೇಟರ್‌ ಮಾತ್ರ ಸ್ಫೋಟಗೊಂಡು ಹೆಚ್ಚಿನ ಅನಾಹುತ ತಪ್ಪಿದೆ. ವಿಜ್ಞಾನಿ ಕಟಾರಿಯಾ ಸ್ಫೋಟಕ ತಯಾರಿಕೆಗೆ ಬಳಸಿದ್ದ ವಸ್ತುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.