Tag: Delhi Chalo

  • ಮತ್ತೆ ರೋಡಿಗಿಳಿದ ರೈತರು; 2021 ರಲ್ಲಿ ಏನಾಗಿತ್ತು? ಈಗ ಏನಾಗ್ತಿದೆ?

    ಮತ್ತೆ ರೋಡಿಗಿಳಿದ ರೈತರು; 2021 ರಲ್ಲಿ ಏನಾಗಿತ್ತು? ಈಗ ಏನಾಗ್ತಿದೆ?

    – ಲೋಕಸಭಾ ಚುನಾವಣೆ ಹೊತ್ತಲ್ಲಿ ಕೇಂದ್ರದ ನಡೆ ಏನು?
    – ರೈತರ ಪ್ರಮುಖ ಬೇಡಿಕೆಗಳು ಈಡೇರುತ್ತಾ?

    ದು 2020-21 ರ ಸಂದರ್ಭ. ಕೇಂದ್ರ ಸರ್ಕಾರಿ ಜಾರಿಗೊಳಿಸಿದ್ದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ದಂಗೆಯೆದ್ದಿದ್ದರು. ವರ್ಷಪೂರ್ತಿ ನಡೆದ ಪ್ರತಿಭಟನೆ ಐತಿಹಾಸಿಕ ಎಂಬಂತಿತ್ತು. ದೆಹಲಿ ಗಡಿಭಾಗಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರ ದಂಡು ಬೀಡಿಬಿಟ್ಟಿತ್ತು. ಸಾವಿರಾರು ಕಿಮೀ ದೂರದಿಂದ ಪ್ರಯಾಣಿಸಿದ್ದ ವಾಹನಗಳನ್ನೇ ಟೆಂಟ್ ಮಾಡಿಕೊಂಡಿದ್ದರು. ಪೊಲೀಸರು ಹಾಕಿದ್ದ ಚಕ್ರವ್ಯೂಹ ಭೇದಿಸಿ ದೆಹಲಿಗೆ ಮುತ್ತಿಗೆ ಹಾಕಿದ್ದರು. ಗಣರಾಜ್ಯೋತ್ಸವದಂದು ಪೊಲೀಸರೊಂದಿಗೆ ಘರ್ಷಣೆ ಮಾಡಿಕೊಂಡು ಕೆಂಪುಕೋಟೆಗೆ ನುಗ್ಗಿ ನಿಶಾನ್ ಸಾಹಿಬ್ ಧ್ವಜ ಹಾರಿಸಿದರು. ರೈತರ ಮುಂದೆ ಶರಣಾದ ಕೇಂದ್ರ ಸರ್ಕಾರ ತಾನು ಜಾರಿಗೊಳಿಸಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿತು.

    ಕೇಂದ್ರದ 3 ಕೃಷಿ ಕಾನೂನುಗಳ ವಿರುದ್ಧ ಎರಡು ವರ್ಷಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸಂಚಲನ ಮೂಡಿಸಿದ್ದ ಅನ್ನದಾತರು ಈಗ ಮತ್ತೆ ಬೀದಿಗಿಳಿದಿದ್ದಾರೆ. ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲೇ ರೈತರು ದಂಗೆ ಎದ್ದಿರುವುದು ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಕೇಂದ್ರದ ಪ್ರಸ್ತಾವನೆ ತಿರಸ್ಕರಿಸಿದ ರೈತರು – ‘ದೆಹಲಿ ಚಲೋ’ ಮುಂದುವರಿಸುವುದಾಗಿ ಘೋಷಣೆ

    ‘ದೆಹಲಿ ಚಲೋ’ (Delhi Chalo) ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತರು ಪಂಜಾಬ್-ಹರಿಯಾಣದ ಶುಂಭು ಗಡಿಯಲ್ಲಿ ಬ್ಯಾರಿಕೇಡ್ ಕಿತ್ತು ಹಾಕಿ ನುಗ್ಗಲು ಯತ್ನಿಸಿದ್ದರು. ಭಾರಿ ಬಂದೋಬಸ್ತ್ ಕಲ್ಪಿಸಿರುವ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗಿಸಿದರು. ಇದ್ಯಾವುದಕ್ಕೂ ಜಗ್ಗದ ರೈತರು ಗಡಿ ಪ್ರವೇಶಿಸಲು ಯತ್ನಿಸಿದ್ದಾರೆ. ಇತ್ತ ರೈತರ ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ರೈತ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಫಲ ಕೊಟ್ಟಿಲ್ಲ. ಇದರಿಂದ ಸ್ಥಳೀಯ ಜನಸಾಮಾನ್ಯರು ಪರದಾಡುವಂತಾಗಿದೆ.

    ಬೇಡಿಕೆಗಳು ಮತ್ತು ನಾಯಕತ್ವ ಎರಡರಲ್ಲೂ, 2024 ರ ಪ್ರತಿಭಟನೆಯು 2020-21 ರಲ್ಲಿ ನಡೆದಿದ್ದ ವರ್ಷಪೂರ್ತಿ ಆಂದೋಲನಕ್ಕಿಂತ ಬಹಳ ಭಿನ್ನವಾಗಿದೆ. ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒಂದು ವರ್ಷದ ವರೆಗೆ ದೆಹಲಿಯಲ್ಲೇ ನೆಲೆನಿಂತು ಪ್ರತಿಭಟಿಸಿ ರೈತರು ಯಶಸ್ವಿಯಾಗಿದ್ದರು. ಆಗ ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಈಗ ಮತ್ತೆ ಕೇಂದ್ರದ ವಿರುದ್ಧ ರೈತರು ದಂಗೆಯೆದ್ದಿದ್ದಾರೆ.

    ಏನಿದು ರೈತರ ಹೊಸ ಪ್ರತಿಭಟನೆ?
    ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ 150 ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ 250 ಕ್ಕೂ ಹೆಚ್ಚು ರೈತ ಸಂಘಟನೆಗಳು ಪಂಜಾಬ್‌ನಿಂದ ಸಂಘಟಿತವಾಗಿ ಪ್ರತಿಭಟನೆ ನಡೆಸುತ್ತಿವೆ. ಎರಡು ವರ್ಷಗಳ ಹಿಂದೆ ರೈತರಿಗೆ ನೀಡಿದ ಭರವಸೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನಪಿಸಲು ಎರಡೂ ವೇದಿಕೆಗಳು ಡಿಸೆಂಬರ್ 2023 ರ ಕೊನೆಯಲ್ಲಿ ‘ದೆಹಲಿ ಚಲೋ’ ಕರೆ ನೀಡಿದ್ದವು.

    ಪೊಲೀಸರೊಂದಿಗೆ ರೈತರ ಘರ್ಷಣೆ
    ಸಾವಿರಾರು ಸಂಖ್ಯೆಯಲ್ಲಿ ಗಡಿ ಭಾಗಗಳನ್ನು ರೈತರು ಪ್ರವೇಶಿಸಿದರು. ಪ್ರತಿಭಟನಾನಿರತರನ್ನು ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಬ್ಯಾರಿಕೇಡ್‌ಗಳು, ಮೊಳೆಗಳು, ಭಾರೀ ಉಪಕರಣಗಳೊಂದಿಗೆ ರೈತರಿಗೆ ಬೇಲಿ ಹಾಕಿದ್ದಾರೆ. ಗಡಿ ನುಗ್ಗಲು ಯತ್ನಿಸಿದ ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ರೈತರ ಪ್ರತಿಭಟನೆಯಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಮಾತುಕತೆಗೆ ಸಿದ್ಧ ಎಂದು ಹೇಳಿದೆ. ಈಗಾಗಲೇ ನಾಲ್ಕು ಸುತ್ತಿನ ಮಾತುಕತೆಯಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ.

    2020-21 ರ ನಾಯಕರು ಮತ್ತೆ ಸಕ್ರಿಯ?
    ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) 2022 ರ ಜುಲೈನಲ್ಲಿ ಮೂಲ ಸಂಯುಕ್ತ ಕಿಸಾನ್ ಮೋರ್ಚಾದಿಂದ ಬೇರ್ಪಟ್ಟಿತು. ಇದರ ಜೊತೆ ಪಂಜಾಬ್ ಮೂಲದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸಿಧುಪುರ ಫಾರ್ಮ್‌ನ ಅಧ್ಯಕ್ಷ ಜಗಜಿತ್ ಸಿಂಗ್ ದಲ್ಲೆವಾಲ್ ಪ್ರಮುಖ ಸಂಘಟನೆ ಸೇರಿಕೊಂಡಿದ್ದು, ಪ್ರತಿಭಟನೆಯ ನೇತೃತ್ವ ವಹಿಸಿವೆ. ಬಿಕೆಯು ಕೂಡ ಪ್ರಮುಖ ಸಂಘಟನೆಯ ನಾಯಕರೊಂದಿಗೆ ಭಿನ್ನಾಭಿಪ್ರಾಯಗಳ ನಂತರ ಎಸ್‌ಕೆಎಂನಿಂದ ಬೇರ್ಪಟ್ಟಿತ್ತು. ಪ್ರಸ್ತುತ ಪ್ರತಿಭಟನೆಯಲ್ಲಿರುವ ಇತರ ಸಂಘಟನೆಯಾದ ಕೆಎಂಎಂ ಅನ್ನು ಪಂಜಾಬ್ ಮೂಲದ ಯೂನಿಯನ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ (ಕೆಎಂಎಸ್‌ಸಿ) ಸಂಚಾಲಕ ಸರ್ವಾನ್ ಸಿಂಗ್ ಪಂಧೇರ್ ರಚಿಸಿದ್ದಾರೆ. ಈ ಸಂಘಟನೆ ಎರಡು ವರ್ಷಗಳ ಹಿಂದೆ ನಡೆದಿದ್ದ ಪ್ರಮುಖ ಪ್ರತಿಭಟನೆಗೆ ಸೇರಿರಲಿಲ್ಲ. ಬದಲಿಗೆ ದೆಹಲಿ ಗಡಿಯಲ್ಲಿ ಕುಂಡ್ಲಿಯಲ್ಲಿ ಪ್ರತ್ಯೇಕ ವೇದಿಕೆ ಸ್ಥಾಪಿಸಿತ್ತು. ಹಿಂದಿನ ಪ್ರತಿಭಟನೆ ಕೊನೆಗೊಂಡ ನಂತರ ಕೆಎಂಎಸ್‌ಸಿ ತನ್ನ ನೆಲೆಯನ್ನು ವಿಸ್ತರಿಸಲು ಆರಂಭಿಸಿತು. ಜನವರಿ ಅಂತ್ಯಕ್ಕೆ ದೇಶಾದ್ಯಂತ 100 ಕ್ಕೂ ಹೆಚ್ಚು ಒಕ್ಕೂಟಗಳನ್ನು ಒಳಗೊಂಡಿರುವ ಕೆಎಂಎಂ ರಚಿಸಿರುವುದಾಗಿ ಘೋಷಿಸಿತು. ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆ ಚರ್ಚೆ, ಐದು ಬೆಳೆಗೆ ಬೆಂಬಲ ಬೆಲೆ ಖಾತರಿ ಕಾನೂನು ಪ್ರಸ್ತಾವನೆ

    ಕೃಷಿ ಕಾನೂನುಗಳ ವಿರುದ್ಧ 2020-21 ಆಂದೋಲನದ ನೇತೃತ್ವ ವಹಿಸಿದ್ದ ಭಾರತದ 500 ಕ್ಕೂ ಹೆಚ್ಚು ರೈತ ಸಂಘಗಳ ಪ್ರಮುಖ ಒಕ್ಕೂಟವಾಗಿದ್ದ ಎಸ್‌ಕೆಎಂ ಈಗ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ಪಂಜಾಬ್‌ನಲ್ಲಿ, ದೊಡ್ಡದಾದ, BKU ಉಗ್ರನ್ ಸೇರಿದಂತೆ 37 ರೈತ ಸಂಘಗಳು SKM ನ ಭಾಗವಾಗಿದೆ. ಫೆಬ್ರವರಿ 16 ರಂದು ಗ್ರಾಮೀಣ ಭಾರತ್ ಬಂದ್‌ಗೆ ಎಸ್‌ಕೆಎಂ ತನ್ನದೇ ಆದ ಕರೆ ನೀಡಿದೆ.

    ರೈತರ ಬೇಡಿಕೆಗಳೇನು?
    * ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.
    * 2013ರ ಭೂಸ್ವಾಧೀನ ಕಾಯಿದೆಯ ಅನುಷ್ಠಾನ. ಸ್ವಾಧೀನಕ್ಕೆ ಮುನ್ನ ರೈತರಿಂದ ಲಿಖಿತ ಒಪ್ಪಿಗೆ ಮತ್ತು ಜಿಲ್ಲಾಧಿಕಾರಿ ನಿಗದಿಪಡಿಸಿರುವ ದರಕ್ಕಿಂತ ನಾಲ್ಕು ಪಟ್ಟು ಪರಿಹಾರ ನೀಡಬೇಕು.
    * ಅಕ್ಟೋಬರ್ 2021 ರ ಲಖಿಂಪುರ ಖೇರಿ ಹತ್ಯೆಯ ಅಪರಾಧಿಗಳಿಗೆ ಶಿಕ್ಷೆ ಆಗಬೇಕು.
    * ಭಾರತವು ವಿಶ್ವ ವ್ಯಾಪಾರ ಸಂಸ್ಥೆಯಿಂದ (ಡಬ್ಲ್ಯೂಹೆಚ್‌ಒ) ಹಿಂದೆ ಸರಿಯಬೇಕು ಮತ್ತು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಫ್ರೀಜ್ ಮಾಡಬೇಕು.
    * ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ನೀಡಬೇಕು.
    * ದೆಹಲಿ ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಕೊಡಬೇಕು.
    * ವಿದ್ಯುತ್ ತಿದ್ದುಪಡಿ ಮಸೂದೆ 2020 ಅನ್ನು ರದ್ದುಗೊಳಿಸಬೇಕು.
    * ವರ್ಷಕ್ಕೆ ಮನ್ರೇಗಾ ಅಡಿಯಲ್ಲಿ 8.200 (100 ಬದಲಿಗೆ) ದಿನಗಳ ಉದ್ಯೋಗ, ರೂ. 700 ದೈನಂದಿನ ವೇತನ ಮತ್ತು ಈ ಯೋಜನೆಯನ್ನು ಕೃಷಿಯೊಂದಿಗೆ ಜೋಡಿಸಬೇಕು.
    * ನಕಲಿ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳನ್ನು ಉತ್ಪಾದಿಸುವ ಕಂಪನಿಗಳ ಮೇಲೆ ಕಟ್ಟುನಿಟ್ಟಾದ ನಿಯಮ ಅಳವಡಿಸಬೇಕು. ಬೀಜದ ಗುಣಮಟ್ಟದಲ್ಲಿ ಸುಧಾರಣೆ ಮಾಡಬೇಕು.
    * ಮೆಣಸಿನಕಾಯಿ ಮತ್ತು ಅರಿಶಿನದಂತಹ ಮಸಾಲೆಗಳಿಗಾಗಿ ರಾಷ್ಟ್ರೀಯ ಆಯೋಗ ರಚಿಸಬೇಕು.
    * ಜಲ, ಅರಣ್ಯಗಳು ಮತ್ತು ಭೂಮಿಯ ಮೇಲೆ ಸ್ಥಳೀಯ ಜನರ ಹಕ್ಕುಗಳನ್ನು ಖಾತ್ರಿಪಡಿಸುವುದು ರೈತರ ಪ್ರಮುಖ ಬೇಡಿಕೆಗಳಾಗಿವೆ.

    ಸರ್ಕಾರದ ಸ್ಪಂದನೆ ಹೇಗಿದೆ?
    ಕೆಎಂಎಂ ಮತ್ತು ಎಸ್‌ಕೆಎಂ (ರಾಜಕೀಯೇತರ) ಫೆಬ್ರವರಿ 6 ರಂದು ಕೃಷಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಗಳಿಗೆ ತಮ್ಮ ಬೇಡಿಕೆಗಳ ಕುರಿತು ಇಮೇಲ್ ಮಾಡಿವೆ. ಫೆಬ್ರವರಿ 8 ರಂದು ಕೃಷಿ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು 10 ಸದಸ್ಯರನ್ನು ಭೇಟಿ ಮಾಡಿದರು. ಚಂಡೀಗಢದಲ್ಲಿ ರೈತರ ನಿಯೋಗ ಸಭೆಯನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಂಯೋಜಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಅವಿರೋಧ ಆಯ್ಕೆ

    ಎಎಪಿ & ಕಾಂಗ್ರೆಸ್ ಬೆಂಬಲ
    ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ರೈತರಿಗೆ ಬೆಂಬಲ ನೀಡಿವೆ. 26 ರೈತ ಮುಖಂಡರ ನಿಯೋಗವು ಮೂವರು ಸಚಿವರನ್ನು ಭೇಟಿಯಾದ ಎರಡನೇ ಸಭೆಯಲ್ಲಿ (ಸೋಮವಾರ) ಮಾನ್ ಭಾಗಿಯಾಗಿರಲಿಲ್ಲ. ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ಇಲ್ಲಿಯವರೆಗೆ ಮೌನವಾಗಿದೆ.

    ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ ರೈತರು!
    ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಸರ್ಕಾರದ ಸಂಸ್ಥೆಗಳ ಮೂಲಕ ಖರೀದಿಸುವ ಕೇಂದ್ರದ ಪ್ರಸ್ತಾವನೆಯನ್ನು ಪ್ರತಿಭಟನಾನಿರತ ರೈತರು ತಿರಸ್ಕರಿಸಿದ್ದಾರೆ. ಕೇಂದ್ರ ಮತ್ತು ‘ದೆಹಲಿ ಚಲೋ’ ರೈತರ ನಡುವೆ ಈವರೆಗೆ 4 ಸುತ್ತಿನ ಮಾತುಕತೆಯಾಗಿದ್ದು, ಪ್ರಯೋಜನವಾಗಿಲ್ಲ. ರೈತರು ಬುಧವಾರದಿಂದ ದೆಹಲಿ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಡುವ ಘೋಷಣೆ ಮಾಡಿದ್ದಾರೆ.

    2021 ರಲ್ಲಿ ಏನಾಗಿತ್ತು?
    ಕೆಂಪುಕೋಟೆಗೆ ರೈತರ ಮುತ್ತಿಗೆ: ಗಣರಾಜ್ಯೋತ್ಸವ ದಿನದಂದು 1000 ಕ್ಕೂ ಹೆಚ್ಚು ರೈತರು ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದರು. ಅಲ್ಲದೇ ನಿಶಾನ್‌ ಸಾಹಿಬ್‌ ಮತ್ತು ಕಿಸಾನ್‌ ಬಾವುಟ ಹಾರಿಸಿದ್ದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಏರ್ಪಟ್ಟಿತ್ತು.

    702 ರೈತರು ಸಾವು!
    ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಎರಡು ವರ್ಷಗಳ ಹಿಂದೆ ನಡೆದಿದ್ದ ಪ್ರತಿಭಟನೆಯಲ್ಲಿ ಸುಮಾರು 702 ರೈತರು ಸಾವಿಗೀಡಾಗಿದ್ದಾರೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ತಿಳಿಸಿತ್ತು. ಈಗ ನಡೆಯುತ್ತಿರುವ ಪ್ರತಿಭಟನೆಯಲ್ಲೂ ಮೂವರು ರೈತರು ದುರ್ಮರಣಕ್ಕೀಡಾಗಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಇಬ್ಬರು ಹೃದಯ ಸ್ತಂಭನ ಹಾಗೂ ಒಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ವಿರುದ್ಧ ಮಾನನಷ್ಟ ಹೇಳಿಕೆ – ಯುಪಿ ಕೋರ್ಟ್‍ನಿಂದ ರಾಹುಲ್ ಗಾಂಧಿಗೆ ಜಾಮೀನು

    ಲಖಿಂಪುರ-ಖೇರಿಯಲ್ಲಿ ಪ್ರಕರಣ
    ಕೇಂದ್ರ ರೂಪಿಸಿದ್ದ 3 ಕೃಷಿ ಕಾನೂನುಗಳ ವಿರುದ್ಧ 2021 ರ ಅಕ್ಟೋಬರ್‌ನಲ್ಲಿ ರೈತರು ಲಖಿಂಪುರ-ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ವೇಗವಾಗಿ ವಾಹನ ಹರಿಸಿದ ಪರಿಣಾಮ ನಾಲ್ವರು ರೈತರು ಸೇರಿ 8 ಮಂದಿ ಸಾವನ್ನಪ್ಪಿದ್ದರು. ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಅವರೇ ಈ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿತ್ತು.

  • ಹಳಿ ತಪ್ಪಿದ ರೈತರ ಪ್ರತಿಭಟನೆ; ಕತ್ತಿ ಝಳಪಿಸಿದ ನಿಹಾಂಗ್‌ ಸಿಖ್ಖರು – ಖಲಿಸ್ತಾನಿ ಉಗ್ರನ ಫೋಟೋ ಪತ್ತೆ!

    ಹಳಿ ತಪ್ಪಿದ ರೈತರ ಪ್ರತಿಭಟನೆ; ಕತ್ತಿ ಝಳಪಿಸಿದ ನಿಹಾಂಗ್‌ ಸಿಖ್ಖರು – ಖಲಿಸ್ತಾನಿ ಉಗ್ರನ ಫೋಟೋ ಪತ್ತೆ!

    ಚಂಡೀಗಢ: ಬೆಂಬಲ ಬೆಲೆ ಖಾತ್ರಿ ಪಡಿಸುವ ಕಾನೂನು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಂಜಾಬ್ ಮತ್ತು ಹರಿಯಾಣ ರೈತರು ಕೈಗೊಂಡಿರುವ ‘ದೆಹಲಿ ಚಲೋ’ ಪ್ರತಿಭಟನೆಯು (Delhi Chalo Protest) ಹರ್ಯಾಣದ ಶಂಭು ಗಡಿ ಸೇರಿದಂತೆ ಹಲವೆಡೆ ಹಿಂಸಾಚಾರಕ್ಕೆ ತಿರುಗಿದ್ದು, ಕಿಡಿಗೇಡಿಗಳು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ.

    ಇತ್ತೀಚೆಗೆ ವೈರಲ್ ಆದ ವೀಡಿಯೋವೊಂದರಲ್ಲಿ, ರೈತರ ಪ್ರತಿಭಟನೆಯಲ್ಲಿ (Farmers Protest) ನಿಹಾಂಗ್ ಸಿಖ್ಖರು ಭದ್ರತಾ ಪಡೆಗಳತ್ತ ಕತ್ತಿ ಬೀಸುತ್ತಿರುವ ಭಯಾನಕ ದೃಶ್ಯ ಕಂಡು ಬಂದಿವೆ. ಅಲ್ಲದೇ ತಾನು ರೈತ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಪ್ರಚೋದನಕಾರಿಯಾಗಿ ತೊಡೆ ತಟ್ಟಿ ಸಡ್ಡು ಹೊಡೆದಿದ್ದಾನೆ. ಇದೇ ವೇಳೆ ಕೆಲವರು ಬಿಲ್ಲು ಬಾಣ ಹಿಡಿದು ತಿರುಗಾಡುತ್ತಿರುವುದು ಕಂಡುಬಂದಿದೆ.

    ಅಲ್ಲದೇ ಪ್ರತಿಭಟನಾಕಾರರ ಟ್ರಕ್‌ನಲ್ಲಿ ಖಲಿಸ್ತಾನಿ ಉಗ್ರ (Khalistan Terrorist) ಭಿಂದ್ರನ್ ವಾಲೆ ಭಾವಚಿತ್ರವಿರುವುದೂ ಕಂಡುಬಂದಿದೆ. ಹೀಗಾಗಿ ರೈತರ ಹೋರಾಟವನ್ನು ಕೆಲ ದುಷ್ಕರ್ಮಿಗಳು ದೇಶ ವಿರೋಧಿ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ರೈತರ ಪ್ರತಿಭಟನೆಗೆ ಮಣಿಯಿತಾ ಸರ್ಕಾರ – ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ ಪ್ರಸ್ತಾಪಿಸುವ ಸಾಧ್ಯತೆ?

    2021ರಲ್ಲಿಯೂ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತರು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆಗಲೂ ಇದೇ ರೀತಿ ಹಿಂಸಾಚಾರ ನಡೆದಿತ್ತು. ದೆಹಲಿ ಪ್ರವೇಶಿಸಲು ಹೊರಟಿದ್ದ ರೈತರನ್ನು ಪಂಜಾಬ್ ಮತ್ತು ಹರಿಯಾಣ ಗಡಿಗಳಲ್ಲಿ ತಡೆಹಿಡಿಯಲಾಗಿತ್ತು. ಅದೇ ರೀತಿ ಶನಿವಾರ ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಕಡೆವಲು ಯತ್ನಿಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದರು. ಘಟನೆಗಳಲ್ಲಿ ಅನೇಕ ಭದ್ರತಾ ಪಡೆಗಳು ಹಾಗೂ ಪತ್ರಕರ್ತರೂ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸದ್ಯ ರೈತರ ಪ್ರತಿಭಟನೆ 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು (ಫೆ.18) ಕೇಂದ್ರ ಸರ್ಕಾರ 4ನೇ ಬಾರಿಗೆ ರೈತರೊಂದಿಗೆ ಮಾತುಕತೆ ನಡೆಸಲಿದೆ ಎಂದು ರೈತ ಸಂಘಟನೆಯ ಮುಖಂಡರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಇಂದಿರಾ ಗಾಂಧಿ 3ನೇ ಮಗ ಶಾಕ್? – ಪುತ್ರನ ಜೊತೆ ಕಮಲ್‌ನಾಥ್ ಬಿಜೆಪಿ ಸೇರ್ಪಡೆ?

  • ರೈತರ ಪ್ರತಿಭಟನೆಗೆ ಮಣಿಯಿತಾ ಸರ್ಕಾರ – ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ ಪ್ರಸ್ತಾಪಿಸುವ ಸಾಧ್ಯತೆ?

    ರೈತರ ಪ್ರತಿಭಟನೆಗೆ ಮಣಿಯಿತಾ ಸರ್ಕಾರ – ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ ಪ್ರಸ್ತಾಪಿಸುವ ಸಾಧ್ಯತೆ?

    ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ ಹೋರಾಟ ಆರಂಭಿಸಿರುವ ರೈತರಿಗೆ (Farmers Protest) ಕೇಂದ್ರ ಸರ್ಕಾರ ಮಣಿದಂತೆ ಕಾಣಿಸುತ್ತಿದೆ. ಲೋಕಸಭಾ ಚುನಾವಣೆ (Lok Sabha Election 2024 )ಹೊತ್ತಲ್ಲಿ ರೈತರ ಪ್ರತಿಭಟನೆ ದೊಡ್ಡದು ಮಾಡದಿರಲು ನಿರ್ಧರಿಸಲು ಮೋದಿ ಸರ್ಕಾರ ಸರ್ಕಾರಿ ಅಧಿಕಾರಿಗಳ ಪ್ರತಿನಿಧಿಗಳು ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚನೆಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಈ ಸಮಿತಿಯು ಕನಿಷ್ಠ ಬೆಂಬಲ ಬೆಲೆ (MSP) ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಕಾರ್ಯ ಸಾಧ್ಯತೆ ಬಗ್ಗೆ ಪರಿಶೀಲನೆ ಮಾಡಲಿದೆ. ಸಮಿತಿಯು ಚರ್ಚೆಗಾಗಿ ರೈತ ಸಂಘಟನೆಗಳ ಪ್ರತಿನಿಧಿಗಳ ಹೆಸರನ್ನು ಸಹ ಕೇಳಬಹುದು. ರೈತರ ಬೇಡಿಕೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರಗಳು ಮತ್ತು ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಚರ್ಚೆ ಅಗತ್ಯ ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: ನಾನು ಲೋಕಸಭೆಗೆ ನಿಲ್ಲೋದಿಲ್ಲ: ಸಚಿವ ಹೆಚ್.ಸಿ.ಮಹದೇವಪ್ಪ ಸ್ಪಷ್ಟನೆ

    ರೈತರಿಗಾಗಿ ರಚಿಸಲಾದ ಕಳೆದ ಸಮಿತಿಯಲ್ಲಿ ಸಂಜಯ್ ಅಗರವಾಲ್ ನೇತೃತ್ವದಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ತಮ್ಮ ಪ್ರತಿನಿಧಿಗಳ ಹೆಸರನ್ನು ನೀಡಿಲ್ಲ ಎನ್ನುವುದನ್ನು ಸರ್ಕಾರ ಗಮನಿಸಿದೆ. ಪ್ರಸ್ತುತ ಪಂಜಾಬ್-ಹರಿಯಾಣ ಗಡಿಯ ಶಂಭು ಮತ್ತು ಖಾನೌರಿ ಪಾಯಿಂಟ್‍ಗಳಲ್ಲಿ ಬೀಡುಬಿಟ್ಟಿರುವ ರೈತರು ಎಂಎಸ್‍ಪಿಗೆ ಕಾನೂನು ಖಾತರಿ ನೀಡುವ ಬಗ್ಗೆ ಕೇಂದ್ರವು ಸುಗ್ರೀವಾಜ್ಞೆಯನ್ನು ತರಬೇಕು ಎಂದು ಒತ್ತಾಯಿಸಿದ್ದಾರೆ.

    ತಮ್ಮ ವಿವಿಧ ಬೇಡಿಕೆಗಳ ಕುರಿತು ರೈತ ಮುಖಂಡರು ಮತ್ತು ಕೇಂದ್ರ ಸಚಿವರ ನಡುವಿನ ನಾಲ್ಕನೇ ಸುತ್ತಿನ ಮಾತುಕತೆಗೆ ಒಂದು ದಿನ ಮೊದಲು ಈ ಬೇಡಿಕೆ ಬಂದಿದೆ. ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಮತ್ತು ರೈತ ಮುಖಂಡರು ಭಾನುವಾರ ನಾಲ್ಕನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಈ ಹಿಂದೆ ಫೆಬ್ರವರಿ 8, 12 ಮತ್ತು 15 ರಂದು ಸಭೆ ನಡೆದಿತ್ತು. ಈ ವೇಳೆ ಮಾತುಕತೆ ವಿಫಲವಾಗಿತ್ತು. ಇದನ್ನೂ ಓದಿ: ಬಿಜೆಪಿಯವ್ರು, ಹಿಂದುತ್ವವಾದಿಗಳು ಹೇಳುವ ಗ್ರಂಥ ನಮ್ಮದಲ್ಲ.. ಸಂವಿಧಾನವೇ ನಮ್ಮ ಧರ್ಮಗ್ರಂಥ: ಸಿದ್ದರಾಮಯ್ಯ

  • ಪ್ರತಿಭಟನಾ ನಿರತರ ಮೇಲೆ ಮತ್ತೆ ಅಶ್ರುವಾಯು ದಾಳಿ – ಹೃದಯಾಘಾತದಿಂದ ರೈತ ಸಾವು!

    ಪ್ರತಿಭಟನಾ ನಿರತರ ಮೇಲೆ ಮತ್ತೆ ಅಶ್ರುವಾಯು ದಾಳಿ – ಹೃದಯಾಘಾತದಿಂದ ರೈತ ಸಾವು!

    ನವದೆಹಲಿ: ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನು (Farmers) ಚದುರಿಸಲು ಪೊಲೀಸರು ಮತ್ತೆ ಅಶ್ರುವಾಯು ಪ್ರಯೋಗಿಸಿದ್ದಾರೆ. ಅಶ್ರುವಾಯು ಶೆಲ್‌ಗಳಿಂದ ಪಾರಾಗಲು ರೈತರು ಚೆಲ್ಲಾಪಿಲ್ಲಿಯಾಗಿದ್ದಾರೆ. ಇದೇ ವೇಳೆ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 63 ವರ್ಷದ ರೈತರೊಬ್ಬರು ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ.

    ʻದೆಹಲಿ ಚಲೋʼ (Delhi Chalo) ರೈತರ ಪ್ರತಿಭಟನೆ ಶುಕ್ರವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಭಾರತ್ ಬಂದ್‌ಗೆ ಹಲವು ಸಂಘಟನೆಗಳು ಕರೆ ನೀಡಿದ್ದವು. ಸ್ಥಳದಲ್ಲಿ ಸೆಕ್ಷನ್ 144 ವಿಧಿಸಿರುವುದರಿಂದ ಪೊಲೀಸ್ ಮತ್ತು ರೈತರು ಮುಖಾಮುಖಿಗೊಂಡಿದ್ದು ಗಡಿ ದಾಟಲು ಪ್ರಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಲಾಯಿತು‌.

    ನೋಯ್ಡಾ ಮೂಲದ ಭಾರತೀಯ ಕಿಸಾನ್ ಪರಿಷತ್ (Bharatiya Kisan Union) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬೆಂಬಲ ನೀಡುವುದರೊಂದಿಗೆ ರೈತರು ಸ್ತಬ್ಧತೆಯನ್ನು ತೀವ್ರಗೊಳಿಸಲು ಪ್ರತಿಜ್ಞೆ ಮಾಡಿದ್ದಾರೆ. ಇದನ್ನೂ ಓದಿ: 7 ವರ್ಷದಲ್ಲಿ ರಾಜ್ಯಕ್ಕೆ 59,274 ಕೋಟಿ ಜಿಎಸ್‌ಟಿ ನಷ್ಟ: ಬಜೆಟ್‌ನಲ್ಲಿ ಕೇಂದ್ರಕ್ಕೆ ತಿವಿದ ಸಿದ್ದರಾಮಯ್ಯ

    ರೈತರ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರಿಂದ ರಾಷ್ಟ್ರ ರಾಜಧಾನಿಯ ಗಾಜಿಪುರ ಗಡಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತು. ಇದಕ್ಕೂ ಮುನ್ನ ಗುರುವಾರ, ಪ್ರತಿಭಟನಾನಿರತ ರೈತ ಸಂಘಗಳ ಮುಖಂಡರು ಮತ್ತು ಮೂವರು ಕೇಂದ್ರ ಸಚಿವರ ನಡುವೆ 5 ಗಂಟೆಗಳ ಮ್ಯಾರಥಾನ್ ಮಾತುಕತೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ? 

  • ರೈತರೊಂದಿಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ: ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ

    ರೈತರೊಂದಿಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ: ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ

    ನವದೆಹಲಿ: ಉತ್ತರ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ (Farmers Protest) ಎರಡನೇ ದಿನಕ್ಕೆ ಕಾಲಿಟ್ಟಿದ್ದು, ರೈತರೊಂದಿಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ (Arjun Munda) ಹೇಳಿದ್ದಾರೆ. ಅಲ್ಲದೇ ಚರ್ಚೆಗೆ ಯೋಗ್ಯವಾದ ವಾತಾವರಣವನ್ನು ರೈತರು ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

    ನವದೆಹಲಿಯಲ್ಲಿ (New Delhi) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾವು ಚರ್ಚೆಗೆ ಸಿದ್ಧರಿದ್ದೇವೆ. ನಾವು ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮಾತುಕತೆ ನಡೆಸಬೇಕಾಗಿದೆ ಎಂದು ಹೇಳಿದರು. ಚರ್ಚೆಯ ವಾತಾವರಣವನ್ನು ಕಾಪಾಡಿಕೊಳ್ಳಲು ರೈತ ಸಂಘವನ್ನು ನಾನು ವಿನಂತಿಸುತ್ತೇನೆ. ರೈತರ ಸಂಘದೊಂದಿಗೆ ಸಕಾರಾತ್ಮಕ ಚರ್ಚೆ ನಡೆಸುವ ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಹೇಳಿದರು. ಇದನ್ನೂ ಓದಿ: ದೆಹಲಿ ಚಲೋ ಪ್ರತಿಭಟನೆ ನಿಗ್ರಹಕ್ಕೆ ಯತ್ನ – ಪೊಲೀಸರ ವರ್ತನೆ ಖಂಡಿಸಿ ಶುಕ್ರವಾರ ದೇಶಾದ್ಯಂತ ರಸ್ತೆ ತಡೆ

    ರೈತರು ದೆಹಲಿಗೆ ತೆರಳಲು ಉದ್ದೇಶಿಸಿರುವ ದೆಹಲಿ ಚಲೋ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪೊಲೀಸರು ಹಲವಾರು ಪದರಗಳ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದರಿಂದ ಬುಧವಾರ ದೆಹಲಿಯ ಗಡಿ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಹರಿಯಾಣದ ಸಿಂಘು ಮತ್ತು ಟಿಕ್ರಿ ಗಡಿಗಳು ಸಂಚಾರಕ್ಕಾಗಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದರೂ, ಗಾಜಿಪುರ ಗಡಿಯಲ್ಲಿ ವಾಹನ ಸಂಚಾರವನ್ನು ನಿಯಂತ್ರಿತ ರೀತಿಯಲ್ಲಿ ಅನುಮತಿಸಲಾಗಿದೆ. ಇದನ್ನೂ ಓದಿ: ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿ – ನಾಮಪತ್ರ ಪ್ರಕ್ರಿಯೆ ಪೂರ್ಣಗೊಳಿಸಿದ ಕಾಂಗ್ರೆಸ್ ವರಿಷ್ಠೆ

    ದೆಹಲಿಗೆ ರೈತರ ಪಾದಯಾತ್ರೆಯನ್ನು ತಡೆಯಲು ಸಿಂಘು ಗಡಿಯ ಸಮೀಪವಿರುವ ಹಳ್ಳಿಯೊಂದರಲ್ಲಿ ರಸ್ತೆಯ ಒಂದು ಭಾಗವನ್ನು ಅಗೆಯಲಾಯಿತು. ತಮ್ಮ ಬೇಡಿಕೆಗಳ ಕುರಿತು ಕೇಂದ್ರ ಸಚಿವರ ತಂಡದೊಂದಿಗೆ ನಡೆಸಿದ ಸಭೆ ವಿಫಲವಾದ ನಂತರ ಕನಿಷ್ಠ ಬೆಂಬಲ ಬೆಲೆಯ ಕಾನೂನಿಗೆ ಒತ್ತಾಯಿಸಿ ರೈತರು ದೆಹಲಿಯತ್ತ ಪಾದಯಾತ್ರೆ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಮಗನನ್ನು ಕೊಂದ ಸುಚನಾ ಸೇಠ್‌ಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲ

  • 6 ತಿಂಗಳ ಆಹಾರ ಸಾಮಾಗ್ರಿ ಹಿಡಿದು ದೆಹಲಿಚಲೋಗೆ ಬಂದ ರೈತರು

    6 ತಿಂಗಳ ಆಹಾರ ಸಾಮಾಗ್ರಿ ಹಿಡಿದು ದೆಹಲಿಚಲೋಗೆ ಬಂದ ರೈತರು

    ನವದೆಹಲಿ: ಹರಿಯಾಣ ಮತ್ತು ಪಂಜಾಬ್‍ನ ಪ್ರತಿಭಟನಾ ನಿರತ ರೈತರು ಮಂಗಳವಾರ ದೆಹಲಿಯತ್ತ ಪ್ರಯಾಣ ಆರಂಭಿಸಲಿದ್ದಾರೆ. ಸುದೀರ್ಘ ಅವಧಿಯ ಪ್ರತಿಭಟನೆಗಾಗಿ ಸುಮಾರು ಆರು ತಿಂಗಳಿಗೆ ಬೇಕಾಗುವಷ್ಟು ದವಸ ಧಾನ್ಯಗಳು ಹಾಗೂ ಇಂಧನವನ್ನು ಸಂಗ್ರಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಖಾತ್ರಿ ಸೇರಿದಂತೆ ಹಲವು ಬೇಡಿಕೆಗಳಿಗೆ ಮಣಿಯುವಂತೆ ಕೇಂದ್ರವನ್ನು ಒತ್ತಾಯಿಸುವ ಉದ್ದೇಶದಿಂದ 200 ಕ್ಕೂ ಹೆಚ್ಚು ರೈತ ಸಂಘಗಳು `ದೆಹಲಿ ಚಲೋ’ (Delhi Chalo) ಮೆರವಣಿಗೆಗಾಗಿ ರಾಷ್ಟ್ರ ರಾಜಧಾನಿಗೆ ತೆರಳುತ್ತಿವೆ. ಪಂಜಾಬ್ ಒಂದರಿಂದಲೇ ರೈತರ ಪ್ರತಿಭಟನೆಗೆ (Farmers Protest) 1,500 ಟ್ರಾಕ್ಟರ್‌ಗಳು ಮತ್ತು 500 ವಾಹನಗಳಲ್ಲಿ ರೈತರು ತೆರಳುತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಹರಿಯಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರಿಕೊಳ್ಳಲಿದ್ದಾರೆ ಎಂದು ಗುಪ್ತಚರ ಇಲಾಖೆ (Intelligence Report) ಸಹ ಎಚ್ಚರಿಸಿದೆ.

    ಇತ್ತೀಚೆಗೆ ರೈತ ಮುಖಂಡರು ಮತ್ತು ಕೇಂದ್ರ ಸಚಿವರ ನಡುವಿನ ಸಭೆ ಯಾವುದೇ ನಿರ್ಣಯವಿಲ್ಲದೆ ಮುಕ್ತಾಯಗೊಂಡಿತ್ತು. ಇದಾದ ಬಳಿಕ ರೈತರು, ಪ್ರತಿಭಟನೆಯನ್ನು ಮುಂದುವರೆಸಲು ರೈತರು ನಿರ್ಧರಿಸಿದ್ದರು. ರೈತರ ಪ್ರತಿಭಟನೆಗೆ ಕರೆ ನೀಡುವ ಮುನ್ನ, ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ (ಕೆಎಂಎಸ್‍ಸಿ) ಹಿರಿಯ ನಾಯಕತ್ವ ಮತ್ತು ಕೋರ್ ಕಮಿಟಿ ಕೇರಳ, ಉತ್ತರ ಪ್ರದೇಶ, ಬಿಹಾರ, ಛತ್ತೀಸ್‍ಗಢ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ತಮಿಳುನಾಡುಗಳಿಗೆ ಭೇಟಿ ನೀಡಿ ಆಯಾ ರಾಜ್ಯಗಳ ರೈತರಿಂದ ಬೆಂಬಲವನ್ನು ಕೋರಿತ್ತು.

    ರೈತರು ಗುಂಪುಗಳಲ್ಲಿ ಬಂದು ದೆಹಲಿಯ ಸುತ್ತಮುತ್ತಲಿನ ಗುರುದ್ವಾರ, ಧರ್ಮಶಾಲಾಗಳು, ಆಶ್ರಮಗಳು, ಅತಿಥಿ ಗೃಹಗಳಲ್ಲಿ ಅಡಗಿಕೊಂಡು ಕ್ಷಿಪ್ರ ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ. ಅಲ್ಲದೇ ಪ್ರಧಾನ ಮಂತ್ರಿ ಭವನ, ಗೃಹ ಸಚಿವರ ಭವನ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ವರದಿ ಮಾಡಿದೆ.

    ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ಪೊಲೀಸರು ಬ್ಯಾರಿಕೇಡ್‍ಗಳು, ಕಬ್ಬಿಣದ ಮೊಳೆಗಳನ್ನು ರಸ್ತೆಗೆ ಹಾಕಿದ್ದಾರೆ. ಇನ್ನೂ ಈ ವಿಚಾರವಾಗಿ ಬಲಪ್ರಯೋಗ ಅಂತಿಮ ಮಾರ್ಗವಾಗಬೇಕು ಎಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಹೇಳಿದೆ.

  • ಪ್ರಧಾನಿ, ಗೃಹ ಸಚಿವರ ನಿವಾಸದ ಮುಂದೆ ರೈತರ ದೀಢಿರ್ ಪ್ರತಿಭಟನೆ ಸಾಧ್ಯತೆ

    ಪ್ರಧಾನಿ, ಗೃಹ ಸಚಿವರ ನಿವಾಸದ ಮುಂದೆ ರೈತರ ದೀಢಿರ್ ಪ್ರತಿಭಟನೆ ಸಾಧ್ಯತೆ

    – ರೈತ ಹೋರಾಟ ಗಂಭೀರತೆ ಬಗ್ಗೆ ಗುಪ್ತಚರ ಇಲಾಖೆ ವರದಿ

    ನವದೆಹಲಿ: ಬೆಂಬಲ ಬೆಲೆ ಖಾತ್ರಿ ಪಡಿಸುವ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟ (Farmers Protest) ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

    ಸಣ್ಣ ಸಣ್ಣ ಗುಂಪುಗಳಲ್ಲಿ ದೆಹಲಿಗೆ ಆಗಮಿಸುತ್ತಿರುವ ರೈತರು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಮೈದಾನವನ್ನು ಜೈಲಾಗಿಸಲು ಅನುಮತಿ ನೀಡಲ್ಲ – ರೈತರ ಹೋರಾಟಕ್ಕೆ ದೆಹಲಿ ಸರ್ಕಾರದ ಬೆಂಬಲ

    ಕೇಂದ್ರ ಸಚಿವರ ಜೊತೆಗಿನ ಮಾತುಕತೆ ವಿಫಲವಾದ ಬಳಿಕ ರೈತರು ದೆಹಲಿ ಚಲೋ ಹೋರಾಟ ಆರಂಭಿಸಿದ್ದಾರೆ. ಈ ಸಂಬಂಧ ಗುಪ್ತಚರ ಇಲಾಖೆ ವರದಿ (Intelligence Report) ಬಿಡುಗಡೆ ಮಾಡಿದೆ. ವರದಿ ಪ್ರಕಾರ ಪಂಜಾಬ್ ಒಂದರಿಂದಲೇ 1500 ಟ್ರ್ಯಾಕ್ಟರ್, 509 ವಿವಿಧ ವಾಹನಗಳ ಮೂಲಕ ರೈತರು ದೆಹಲಿಯತ್ತ ಹೊರಟಿದ್ದಾರೆ. ಹರಿಯಾಣದಿಂದ ಬರುವ ರೈತರ ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ.

    ಪ್ರತಿಭಟನಾಕಾರರು ಸುಮಾರು ಆರು ತಿಂಗಳಿಗೆ ಬೇಕಾಗುವ ಆಹಾರ ಧಾನ್ಯಗಳನ್ನು ಟ್ರ್ಯಾಕ್ಟರ್‍ನಲ್ಲಿ ಸಂಗ್ರಹ ಮಾಡಿಕೊಂಡಿದ್ದಾರೆ. ಟ್ರ್ಯಾಕ್ಟರ್‍ಗಳನ್ನೇ ಶೆಲ್ಟರ್ ಮಾಡಿಕೊಂಡಿದ್ದಾರೆ. ಹೀಗಾಗಿ ಕಳೆದ ಬಾರಿಯಂತೆ ದೆಹಲಿಯ ಗಡಿಯಲ್ಲಿ ಸುದೀರ್ಘ ಧರಣಿ ನಡೆಯಬಹುದು. ಅಲ್ಲದೇ ಈ ಹೋರಾಟಕ್ಕೆ ದಕ್ಷಿಣ ರಾಜ್ಯಗಳ ನೆರವನ್ನು ಕೋರಲಾಗಿದೆ ಎಂದು ಇಲಾಖೆ ಎಚ್ಚರಿಸಿದೆ.

    ಮುಂದುವರಿದು ರೈತರು ಸಣ್ಣ ಗುಂಪುಗಳಲ್ಲಿ ಬಂದು ದೆಹಲಿಯ ಸುತ್ತಮುತ್ತಲಿನ ಗುರುದ್ವಾರಗಳು, ಧರ್ಮಶಾಲಾಗಳು, ಆಶ್ರಮಗಳು, ಅತಿಥಿ ಗೃಹಗಳಲ್ಲಿ ಅಡಗಿಕೊಂಡಿದ್ದು, ಕ್ಷಿಪ್ರ ಪ್ರತಿಭಟನೆಗಳನ್ನು ನಡೆಸಲು ಯೋಜಿಸಿದ್ದಾರೆ. ಅವರು ಪ್ರಧಾನ ಮಂತ್ರಿ ಭವನ, ಗೃಹ ಸಚಿವರ ಭವನದಂತಹ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಬಹುದೆಂದು ಎಚ್ಚರಿಸಲಾಗಿದೆ. ಇದನ್ನೂ ಓದಿ: ಡಿಕೆಶಿ ಮೇಲೆ ಲೋಕಾಯುಕ್ತದಿಂದ ಎಫ್‌ಐಆರ್‌ ದಾಖಲು

  • ಮೈದಾನವನ್ನು ಜೈಲಾಗಿಸಲು ಅನುಮತಿ ನೀಡಲ್ಲ – ರೈತರ ಹೋರಾಟಕ್ಕೆ ದೆಹಲಿ ಸರ್ಕಾರದ ಬೆಂಬಲ

    ಮೈದಾನವನ್ನು ಜೈಲಾಗಿಸಲು ಅನುಮತಿ ನೀಡಲ್ಲ – ರೈತರ ಹೋರಾಟಕ್ಕೆ ದೆಹಲಿ ಸರ್ಕಾರದ ಬೆಂಬಲ

    ನವದೆಹಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಕರೆ ಕೊಟ್ಟಿರುವ ದೆಹಲಿ ಚಲೋ (Delhi Chalo) ಹೋರಾಟಕ್ಕೆ ದೆಹಲಿಯ ಆಮ್ ಆದ್ಮಿ ಸರ್ಕಾರ ಬೆಂಬಲ ನೀಡಿದೆ. ಬವಾನಾ ಸ್ಟೇಡಿಯಂನ್ನು ಜೈಲಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಕೇಜ್ರಿವಾಲ್ ಸರ್ಕಾರ ಅನ್ನದಾತರನ್ನು ಜೈಲಿಗೆ ಹಾಕುವುದು ತಪ್ಪು ಎಂದು ಹೇಳಿದೆ.

    ರೈತರ ಪ್ರತಿಭಟನೆಯಲ್ಲಿ (Farmers Protest) ಬಂಧಿತರಾದ ಪ್ರತಿಭಟನಾಕಾರರಿಗೆ ಬವಾನಾ ಕ್ರೀಡಾಂಗಣವನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸಿ, ವ್ಯವಸ್ಥೆ ಮಾಡಿಕೊಡುವಂತೆ ಸೋಮವಾರ ಕೇಂದ್ರ ಸರ್ಕಾರ ದೆಹಲಿ (Delhi) ಸರ್ಕಾರಕ್ಕೆ ಪತ್ರ ಬರೆದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸರ್ಕಾರ ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿದೆ. ಶಾಂತಿಯುತ ಪ್ರತಿಭಟನೆಯು ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಹೇಳಿದೆ.

    ಇಂದು (ಮಂಗಳವಾರ) ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ರೈತರ `ದೆಹಲಿ ಚಲೋ’ ಮೆರವಣಿಗೆಯನ್ನು ತಡೆಯಲು ದೆಹಲಿ ಗಡಿಗಳಲ್ಲಿ ಹಲವು ಹಂತದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಬ್ಯಾರಿಕೇಡ್‍ಗಳು, ಕಾಂಕ್ರೀಟ್ ಬ್ಲಾಕ್‍ಗಳು, ಕಬ್ಬಿಣದ ಮೊಳೆಗಳು ಮತ್ತು ಕಂಟೈನರ್‍ಗಳನ್ನು ಬಳಸಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರೈತ ಮುಖಂಡರು ಮತ್ತು ಕೇಂದ್ರದ ನಡುವಿನ ಮಾತುಕತೆ ವಿಫಲವಾದ ಬಳಿಕ ರೈತರನ್ನು ಗಡಿಯಲ್ಲಿ ತಡೆಯುವ ಪ್ರಯತ್ನ ಆರಂಭವಾಗಿದೆ.

    ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಗಳಲ್ಲಿ ಗಲಭೆ ನಿಗ್ರಹ ಪಡೆಗಳಲ್ಲಿ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿಯನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ರೈತರ ಪ್ರತಿಭಟನಾ ಮೆರವಣಿಗೆ ಸಲುವಾಗಿ ನಿರ್ದಿಷ್ಟ ಸ್ಥಳಗಳಲ್ಲಿ ತಾತ್ಕಾಲಿಕ ಜೈಲುಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ದೆಹಲಿ ಚಲೋ ರೈತರ ಮೇಲೆ ಅಶ್ರುವಾಯು ಪ್ರಯೋಗ – ಹಲವರು ವಶಕ್ಕೆ

    ದೆಹಲಿ ಚಲೋ ರೈತರ ಮೇಲೆ ಅಶ್ರುವಾಯು ಪ್ರಯೋಗ – ಹಲವರು ವಶಕ್ಕೆ

    ನವದೆಹಲಿ: ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೆಹಲಿ ಚಲೋ (Delhi Chalo) ಹಮ್ಮಿಕೊಂಡಿರುವ ರೈತರ (Farmers) ಮೇಲೆ ಶಂಭು ಗಡಿಯಲ್ಲಿ (Shambhu Border) ಪೊಲೀಸರು ಅಶ್ರುವಾಯು (Tear Gas) ಪ್ರಯೋಗ ಮಾಡಿದ್ದಾರೆ.

    ಹರ್ಯಾಣ-ಪಂಜಾಬ್‌ (Punjab-Haryana) ಗಡಿಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಹರ್ಯಾಣ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ರೈತರ ಗುಂಪಿನ ಮಧ್ಯೆ ಪೊಲೀಸರಿಗೆ ಹೋಗಲು ಸಾಧ್ಯವಿಲ್ಲದ ಕಾರಣ ಡ್ರೋನ್‌ ಮೂಲಕ ಟಿಯರ್‌ ಗ್ಯಾಸ್‌ ಶೆಲ್‌ಗಳನ್ನು ಬೀಳಿಸಿ ರೈತರನ್ನು ಚದುರಿಸಲಾಗುತ್ತಿದೆ.  ಇದನ್ನೂ ಓದಿ: ಪರೀಕ್ಷೆ ವೇಳೆ ಲೋಡ್ ಶೆಡ್ಡಿಂಗ್ – ಸೋಲಾರ್ ಬೀದಿ ದೀಪದ ಕೆಳಗೆ ಓದುತ್ತಿದ್ದಾರೆ ವಿದ್ಯಾರ್ಥಿನಿಯರು

     

    ಉತ್ತರ ಪ್ರದೇಶ,ಹರ್ಯಾಣ ಮತ್ತು ಪಂಜಾಬ್‌ ಭಾಗಗಳಿಂದ ಭಾರಿ ಸಂಖ್ಯೆಯ ರೈತರು ದೆಹಲಿಯತ್ತ ಧಾವಿಸುತ್ತಿದ್ದಾರೆ. ಆದರೆ ಅವರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ತಡೆಯಲು ಸಿಂಘು, ಟಿಕ್ರಿ, ಗಾಜೀಪುರ ಗಡಿಯಲ್ಲಿ ಹಲವು ಹಂತಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

    ರಸ್ತೆಗಳಿಗೆ ಅಡ್ಡಲಾಗಿ ಮೊಳೆಗಳ ಪಟ್ಟಿ, ಸಿಮೆಂಟ್‌ ಇಟ್ಟಿಗೆ, ಮುಳ್ಳು ತಂತಿ ಇಡಲಾಗಿದೆ. ಹೀಗಿದ್ದರೂ ಟ್ರ್ಯಾಕ್ಟರ್‌ ಇದನ್ನು ಬೇಧಿಸಿಯೂ ಟ್ರ್ಯಾಕ್ಟರ್‌ ಮುಂದೆ ಸಾಗಿದರೂ ಅವುಗಳನ್ನು ತಡೆಯಲು ಕಂಟೈನರ್‌ ಲಾರಿಗಳನ್ನು ಸಿದ್ಧವಾಗಿ ಇಡಲಾಗಿದೆ.

     

  • ಇಂದು ರೈತರಿಂದ ʻದೆಹಲಿ ಚಲೋʼ – ಗಡಿಯಲ್ಲಿ 5,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

    ಇಂದು ರೈತರಿಂದ ʻದೆಹಲಿ ಚಲೋʼ – ಗಡಿಯಲ್ಲಿ 5,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

    – ಬ್ಯಾರಿಕೇಡ್‌, ತಂತಿಗಳಿಂದ ಗಡಿಭಾಗಗಳು ಬಂದ್‌, ಸೆಕ್ಷನ್‌ 144 ಜಾರಿ

    ನವದೆಹಲಿ: ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿಯಾಗಬೇಕು, ಸ್ವಾಮಿನಾಥನ್ ವರದಿ ಜಾರಿಯಾಗಬೇಕು, ರೈತರಿಗೆ ಪಿಂಚಣಿ ಸೌಲಭ್ಯ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ರೈತರು (Farmers) ದೆಹಲಿಯಲ್ಲಿ ಮತ್ತೊಮ್ಮೆ ಐತಿಹಾಸಿಕ ಪ್ರತಿಭಟನೆ ನಡೆಸಲು ತಿರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.13 (ಇಂದು) ʻದೆಹಲಿ ಚಲೋʼಗೆ (Delhi Chalo) ಪಂಜಾಬ್‌ ಮತ್ತು ಹರಿಯಾಣ ರೈತರು ʻದೆಹಲಿ ಚಲೋʼಗೆ ಕರೆ ನೀಡಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

    ಪಂಜಾಬ್, ಹರಿಯಾಣ, ಉತ್ತರಪ್ರದೇಶದಿಂದಲೂ ರೈತರು ದೆಹಲಿಗೆ ಪ್ರವೇಶಿಸಲಿದ್ದಾರೆ. ಕರ್ನಾಟಕದಿಂದಲೂ ರೈತ ಮುಖಂಡ ಕುರುಬೂರು ಶಾಂತಕುಮಾರ್ ಭಾಗಿಯಾಗಲಿದ್ದಾರೆ. ಈ ರೈತ ಹೋರಾಟದಲ್ಲಿ ಸುಮಾರು 200 ಸಂಘಟನೆಗಳಿಂದ 25,000 ರೈತರು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಇದನ್ನೂ ಓದಿ: 1,078 ತಂಡಗಳು, 16,100 ಆಟಗಾರರು – ಮೋದಿ ತವರಲ್ಲಿ ʻಲೋಕಸಭಾ ಪ್ರೀಮಿಯರ್‌ ಲೀಗ್‌ʼಗೆ ಚಾಲನೆ

    ಅಧಿಕ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವುದರಿಂದ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಪೊಲೀಸರು (Delhi Police) ಸೆಕ್ಷನ್‌ 144 ಜಾರಿಗೊಳಿಸಿದ್ದಾರೆ. ಜೊತೆಗೆ ರಾಜಧಾನಿಯಲ್ಲಿ ಎಲ್ಲಾ ರೀತಿಯ ರ‍್ಯಾಲಿ, ಮೆರವಣಿಗೆ, ರಸ್ತೆ ಮಾರ್ಗಗಳನ್ನ ನಿರ್ಬಂಧಿಸಲಾಗಿದೆ. ಟ್ಯಾಕ್ಟರ್‌ಗಳಲ್ಲಿ ಜನರನ್ನು ತುಂಬಿಕೊಂಡು ಹೋಗುವುದಕ್ಕೂ ನಿಷೇಧ ಹೇರಲಾಗಿದೆ. ಮಾರ್ಚ್‌ 12ರ ವರೆಗೂ ಈ ಕ್ರಮ ಇದೇ ರೀತಿ ಮುಂದುವರಿಯಲಿದೆ. ಸಿಂಘು, ಘಾಜಿಪುರ, ಟಿಕ್ರಿ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಭಾರೀ ಭದ್ರತೆ:
    ಪ್ರತಿಭಟನೆ ತಡೆಯಲು ಭದ್ರತೆಗೆ 11 ಪ್ಯಾರಾ ಮಿಲಿಟರಿ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ. 5,000ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ. ಇದರೊಂದಿಗೆ ತಂತಿಗಳಿಂದ ಹಾಗೂ ಬ್ಯಾರಿಕೇಡ್‌ಗಳಿಂದ ಗಡಿ ರಸ್ತೆಗಳನ್ನ ಬಂದ್‌ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಮಾಜಿ ಸಿಎಂ ಅಶೋಕ್ ಚವಾಣ್ ಗುಡ್ ಬೈ- ಲೋಕಸಭೆ ಹೊಸ್ತಿಲಲ್ಲಿ ಮಹಾರಾಷ್ಟ್ರದಲ್ಲಿ ಕೈಗೆ ಹಿನ್ನಡೆ

    ರೈತರೊಂದಿಗೆ ಅಮಾನವೀಯ ವರ್ತನೆ ಆರೋಪ:
    ಇನ್ನೂ ದೆಹಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಆಗಮಿಸುತ್ತಿದ್ದ ರೈತರು, ರೈತ ಮಹಿಳೆಯರ ಮೇಲೆ ಮಧ್ಯಪ್ರದೇಶದ ಪೊಲೀಸರು ಬಲವಂತವಾಗಿ ಬೆದರಿಸಿ ದಬ್ಬಾಳಿಕೆ ನಡೆಸಿದ್ದಾರೆ. ಮಹಿಳೆಯರನ್ನು ಎಳೆದಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ರೈತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನೂ ಕೊಡಿಸದೇ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ. ಇದನ್ನೂ ಓದಿ: ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ಐದು ಮಂದಿ ಸಜೀವ ದಹನ

    ಅಲ್ಲದೇ ಪ್ರತಿಭಟನೆಗೆ ತೆರಳುತ್ತಿದ್ದ ಬೆಳಗಾವಿ ಜಿಲ್ಲೆಯ ಗುರುಸಿದ್ದಪ್ಪ, ಧಾರವಾಡ ಜಿಲ್ಲೆಯ ಪರಶುರಾಮ್, ಚಾಮರಾಜನಗರ ಜಿಲ್ಲೆಯ ಪಟೇಲ್ ಶಿವಮೂರ್ತಿ, ಮೂಕಳ್ಳಿ ಮಾದೇವಸ್ವಾಮಿ, ಹಾಸನ ಜಿಲ್ಲೆಯ ಧರ್ಮರಾಜ್, ಮೈಸೂರು ಜಿಲ್ಲೆಯ ಬರಡನಪುರ ನಾಗರಾಜ್, ಮಹೇಶ್, ಉಡಿಗಾಲ ರೇವಣ್ಣ, ಕುರುಬೂರು ಸಿದ್ದೇಶ್, ಗುರುಸ್ವಾಮಿ, ಗೌರಿಶಂಕರ್,ಕಮಲಮ್ಮ, ಪ್ರೇಮ, ಮಮತಾ, ಶ್ವೇತಾ, ನಾಗವೇಣಿ, ಪ್ರದೀಪ್ ಕುರುಬೂರು,. ಮಂಜೇಶ್ ಸೇರಿ ನೂರಕ್ಕೂ ಅಧಿಕ ರೈತರನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಶಾಂತಕುಮಾರ್‌ ದೂರಿದ್ದಾರೆ.