Tag: Delhi Capitals

  • 10 ಬೌಂಡರಿ, 5 ಸಿಕ್ಸರ್‌ – ಶಫಾಲಿ ವರ್ಮ ಸ್ಫೋಟಕ ಫಿಫ್ಟಿ; ಡೆಲ್ಲಿ ಕ್ಯಾಪಿಟಲ್ಸ್‌ಗೆ 10 ವಿಕೆಟ್‌ಗಳ ಭರ್ಜರಿ ಜಯ

    10 ಬೌಂಡರಿ, 5 ಸಿಕ್ಸರ್‌ – ಶಫಾಲಿ ವರ್ಮ ಸ್ಫೋಟಕ ಫಿಫ್ಟಿ; ಡೆಲ್ಲಿ ಕ್ಯಾಪಿಟಲ್ಸ್‌ಗೆ 10 ವಿಕೆಟ್‌ಗಳ ಭರ್ಜರಿ ಜಯ

    ಮುಂಬೈ: ಶಫಾಲಿ ವರ್ಮಾ (Shafali Verma) ಸ್ಫೋಟಕ ಅರ್ಧ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಟಾಸ್‌ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 105 ರನ್‌ ಗಳಿಸಿತ್ತು. 106 ರನ್‌ಗಳ ಅಲ್ಪಮೊತ್ತದ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೇವಲ 7.1 ಓವರ್‌ಗಳಲ್ಲೇ 107 ರನ್‌ ಚಚ್ಚಿ ಗೆಲುವು ಸಾಧಿಸಿತು.

    ಶಫಾಲಿ ವರ್ಮಾ ಆರಂಭದಿಂದಲೇ ಗುಜರಾತ್‌ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿ, ಕೇವಲ 18 ಎಸೆತಗಳಲ್ಲೇ ಸ್ಫೋಟಕ ಅರ್ಧಶತಕ ಸಿಡಿಸಿದ್ದರು. 271.42 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಶಫಾಲಿ 28 ಎಸೆತಗಳಲ್ಲಿ 76 ರನ್‌ (10 ಬೌಂಡರಿ, 5 ಸಿಕ್ಸರ್‌) ಚಚ್ಚಿದರು. ಇದಕ್ಕೆ ಜೊತೆಯಾದ ನಾಯಕಿ ಮೆಗ್‌ ಲ್ಯಾನಿಂಗ್‌ (Meg Lanning) 15 ಎಸೆತಗಳಲ್ಲಿ 21 ರನ್‌ ಗಳಿಸುವ ಮೂಲಕ ಸಾಥ್‌ ನೀಡಿದರು. ಅಂತಿಮವಾಗಿ ಕೇವಲ 7.1 ಓವರ್ ಗಳಲ್ಲಿ 107 ರನ್ ಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್‌ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಆಲ್‌ರೌಂಡರ್ ಮಾರಿಜಾನ್ನೆ ಕಪ್ (Marizanne Kapp) ತೀವ್ರ ಆಘಾತ ನೀಡಿದರು. ಇದನ್ನೂ ಓದಿ: ಸೋಲಿನ ಹೊಣೆ ನಾನೇ ಹೊರುತ್ತೇನೆ – ತನ್ನನ್ನು ತಾನೇ ಟೀಕಿಸಿಕೊಂಡ ಸ್ಮೃತಿ ಮಂದಾನ

    ಆರಂಭದಲ್ಲೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಗುಜರಾತ್‌ 33 ರನ್ ಗಳಾಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜಾರ್ಜಿಯಾ ವಾರೆಹಾಮ್ 22 ರನ್, ಕಿಮ್ ಗಾರ್ತ್ 32 ರನ್ ಗಳಿಸುವ ಮೂಲಕ ತಂಡ 100 ರನ್‌ಗಳ ಗಡಿ ದಾಟಲು ನೆರವಾದರು. ಇದನ್ನೂ ಓದಿ: ಗಿಲ್‌ ಶತಕದ ಮಿಂಚು, ಬ್ಯಾಟಿಂಗ್‌ ಲಯಕ್ಕೆ ಮರಳಿದ ಕೊಹ್ಲಿ ಅರ್ಧ ಶತಕ – ಉತ್ತಮ ಸ್ಥಿತಿಯಲ್ಲಿ ಭಾರತ

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಮಾರಿಜಾನ್ನೆ ಕಪ್ 4 ಓವರ್ ಗಳಲ್ಲಿ ಕೇವಲ 15 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರೆ, ಶಿಖಾ ಪಾಂಡೆ 3 ವಿಕೆಟ್, ರಾಧಾ ಯಾದವ್ 1 ವಿಕೆಟ್ ಪಡೆದರು.

  • ಡೆಲ್ಲಿಗೆ ಡಿಚ್ಚಿ – ಬೌಲರ್‌ಗಳ ಆಟದಲ್ಲಿ ಮುಂಬೈಗೆ 8 ವಿಕೆಟ್‌ಗಳ ಸುಲಭ ಜಯ

    ಡೆಲ್ಲಿಗೆ ಡಿಚ್ಚಿ – ಬೌಲರ್‌ಗಳ ಆಟದಲ್ಲಿ ಮುಂಬೈಗೆ 8 ವಿಕೆಟ್‌ಗಳ ಸುಲಭ ಜಯ

    ಮುಂಬೈ: ಸಾಂಘಿಕ ಬೌಲಿಂಗ್‌ ಪ್ರದರ್ಶನದಿಂದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ 18 ಓವರ್‌ಗಳಲ್ಲಿ 105 ರನ್‌ಗಳಿಗೆ ಸರ್ವಪತನ ಕಂಡಿತು. 106 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡ 15 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 109 ರನ್‌ ಗಳಿಸಿ ಸುಲಭ ಜಯ ಸಾಧಿಸಿತು. ಈ ಮೂಲಕ ಪಾಯಿಂಟ್ಸ್‌ ಟೇಬಲ್‌ ಪಟ್ಟಿಯಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿ ಅಗ್ರ ಸ್ಥಾನಕ್ಕೇರಿತು.

    ಆರಂಭಿಕರಾಗಿ ಕಣಕ್ಕಿಳಿದ ಹೇಲಿ ಮ್ಯಾಥ್ಯೂಸ್‌ (Hayley Matthews), ಯಸ್ತಿಕಾ ಭಾಟಿಯಾ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದರೂ ಉತ್ತಮ ರನ್‌ ಕಲೆಹಾಕುವಲ್ಲಿ ಯಶಸ್ವಿಯಾದರು. ಮುಂಬೈ ಮೊದಲ ವಿಕೆಟ್‌ ಪತನಕ್ಕೆ 8.5 ಓವರ್‌ಗಳಲ್ಲಿ 65 ರನ್‌ ಕಲೆಹಾಕಿತು. ಈ ವೇಳೆ ಯಸ್ತಿಕಾ ಭಾಟಿಯಾ 32 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 41 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ಹೇಲಿ ಮ್ಯಾಥ್ಯೂಸ್‌ ಸಹ 31 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 32 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ನಂತರ ಜೊತೆಗೂಡಿದ ನ್ಯಾಟ್ ಸ್ಕಿವರ್-ಬ್ರಂಟ್ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಜೋಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಯಿತು. ಸ್ಕಿವರ್‌ 19 ಎಸೆತಗಳಲ್ಲಿ 4 ಬೌಂಡರಿ ಸಹಿತ 23 ರನ್‌ ಚಚ್ಚಿದರೆ, ಕೌರ್‌ 11 ರನ್‌ ಗಳಿಸಿದರು. ಇತರೇ ರೂಪದಲ್ಲಿ 2 ರನ್‌ ತಂಡಕ್ಕೆ ಸೇರ್ಪಡೆಯಾಯಿತು.

    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ ಮುಂಬೈ ಬೌಲರ್‌ಗಳ ದಾಳಿಗೆ ತತ್ತರಿಸಿತು. ಶಫಾರ್ಲಿ ವರ್ಮಾ (Shafali Verma) ಕೇವಲ 2 ರನ್‌ಗಳಿಸಿ ಔಟಾಗುವ ಮೂಲಕ ಡೆಲ್ಲಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಬಳಿಕ ಏಕಾಂಗಿ ಹೋರಾಟ ನಡೆಸಿದ ನಾಯಕಿ ಮೆಗ್‌ ಲ್ಯಾನಿಂಗ್‌ 41 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 43 ರನ್‌ ಗಳಿಸಿದರು. ಇದರೊಂದಿಗೆ ಜೆಮಿಮಾ ರೊಡ್ರಿಗಸ್‌ 25 ರನ್‌ (18 ಎಸೆತ, 3 ಬೌಂಡರಿ) ಗಳಿಸಿ ಸಾತ್‌ ನೀಡಿದರು. ಕೊನೆಯಲ್ಲಿ ಕ್ರೀಸ್‌ಗಿಳಿದ ರಾಧಾ ಯಾದವ್‌ 10 ರನ್‌ ಗಳಿಸಿದ್ರೆ, ಉಳಿದ ಎಲ್ಲ ಬ್ಯಾಟರ್‌ಗಳು ಒಂದಂಕಿ ರನ್‌ಗಳಿಸಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

    ಪರಿಣಾಮ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ರನ್‌ ಕಲೆಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 105 ಗಳಿಸಿ ಮುಂಬೈಗೆ ಸುಲಭ ತುತ್ತಾಯಿತು.

    ಬೌಲರ್‌ಗಳ ಕಮಾಲ್‌: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸಾಂಘಿಕ ಪ್ರದರ್ಶನ ನೀಡಿದ ಬೌಲರ್‌ಗಳು ಅತ್ಯಲ್ಪ ಮೊತ್ತಕ್ಕೆ ಡೆಲ್ಲಿ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸೈಕಾ ಇಶಾಕ್, ಇಸೀ ವಾಂಗ್ ಹಾಗೂ ಹೇಲಿ ಮ್ಯಾಥ್ಯೂಸ್ ತಲಾ 3 ವಿಕೆಟ್ ಕಬಳಿಸಿದರೆ, ಪೂಜಾ ವಸ್ತ್ರಾಕರ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • ಜೊನಾಸೆನ್‌ ಆಲ್‌ರೌಂಡರ್‌ ಆಟ, ತಾಲಿಯಾ ಏಕಾಂಗಿ ಹೋರಾಟ – ಡೆಲ್ಲಿ ಕ್ಯಾಪಿಟಲ್ಸ್‌ಗೆ 42 ರನ್‌ಗಳ ಭರ್ಜರಿ ಜಯ

    ಜೊನಾಸೆನ್‌ ಆಲ್‌ರೌಂಡರ್‌ ಆಟ, ತಾಲಿಯಾ ಏಕಾಂಗಿ ಹೋರಾಟ – ಡೆಲ್ಲಿ ಕ್ಯಾಪಿಟಲ್ಸ್‌ಗೆ 42 ರನ್‌ಗಳ ಭರ್ಜರಿ ಜಯ

    ಮುಂಬೈ: ನಾಯಕಿ ಮೆಗ್‌ ಲ್ಯಾನಿಂಗ್‌ (Meg Lanning) ಹಾಗೂ ಜೆಸ್ ಜೊನಾಸೆನ್ (Jess Jonassen) ಹೊಡಿಬಡಿ ಆಟದಿಂದ ಡೆಲ್ಲಿ ತಂಡವು ಯುಪಿ ವಾರಿಯರ್ಸ್‌ (UP Warriorz)ವಿರುದ್ಧ 42 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಯುಪಿ ವಾರಿಯರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮಳೆ ಅಡ್ಡಿಯ ಹೊರತಾಗಿಯೂ 211 ರನ್‌ ಬಾರಿಸಿತ್ತು. 212 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಯುಪಿ ವಾರಿಯರ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 169 ರನ್‌ ಗಳಿಸಿ ಸೋಲೊಪ್ಪಿಕೊಂಡಿದೆತು.

    ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ನಡೆಸಲು ಮುಂದಾದ ಯುಪಿ ವಾರಿಯರ್ಸ್‌ ತಂಡಕ್ಕೆ ಆಘಾತ ಎದುರಾಯಿತು. 3ನೇ ಓವರ್‌ನಲ್ಲಿ ಕ್ಯಾಪ್ಟನ್‌ ಅಲಿಸ್ಸಾ ಹೀಲಿ ಔಟಾಗುತ್ತಿದ್ದಂತೆ ಒಂದೊಂದೇ ವಿಕೆಟ್‌ ಪತನಗೊಂಡಿತು. ನಾಯಕಿ ಹೀಲಿ 17 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 24 ರನ್‌ ಗಳಿಸಿದರೆ ಶ್ವೇತಾ ಸೆಹ್ರಾವತ್ ಕೇವಲ 1 ರನ್‌ಗಳಿಗೆ ಔಟಾದರು. ಈ ಬೆನ್ನಲ್ಲೇ ಕಿರಣ್ ನವಗಿರೆ 2 ರನ್‌, ದೀಪ್ತಿ ಶರ್ಮಾ 12 ರನ್‌, ದೇವಿಕಾ ವೈದ್ಯ 23 ರನ್‌ ಗಳಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು.

    ತಾಲಿಯಾ ಏಕಾಂಗಿ ಹೋರಾಟ: ಯುಪಿ ವಾರಿಯರ್ಸ್‌ ತಂಡದ ಗೆಲುವಿಗಾಗಿ ತಾಲಿಯಾ ಮೆಕ್‌ಗ್ರಾತ್ (Tahlia McGrath) ಕೊನೆಯವರೆಗೂ ಏಕಾಂಗಿಯಾಗಿ ಹೋರಾಡಿದರು. 50 ಎಸೆತಗಳಲ್ಲಿ ಬರೋಬ್ಬರಿ 90 ರನ್‌ (11 ಬೌಂಡರಿ, 4 ಸಿಕ್ಸರ್‌) ಚಚ್ಚಿದರು, ಸಿಮ್ರಾನ್ ಶೇಖ್ 6 ರನ್‌ ಗಳಿಸಿ ಅಜೇಯರಾಗುಳಿದರು.

    ಡೆಲ್ಲಿ ತಂಡದ ಪರ ಜೊನಾಸೆನ್‌ 3 ವಿಕೆಟ್‌ ಪಡೆದು ಮಿಂಚಿದರು. ಶಿಖಾ ಪಾಂಡೆ, ಮರಿಜಾನ್ನೆ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಕೊಹ್ಲಿ ಪರಂಪರೆ ಮುಂದುವರಿಸಿದ ಮಂದಾನ – ಹೀನಾಯ ಸೋಲಿನ ಬೆನ್ನಲ್ಲೇ ಅಭಿಮಾನಿಗಳಿಂದ ಕಿಡಿ

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿತು. ನಾಯಕಿ ಮೆಗ್‌ ಲ್ಯಾನಿಂಗ್‌ ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸುತ್ತಾ ವಾರಿಯರ್ಸ್‌ ಬೌಲರ್‌ಗಳನ್ನು ಬೆಂಡೆತ್ತಿದರು.

    ಆರಂಭಿಕರಾಗಿ ಕಣಕ್ಕಿಳಿಸ ಮೆಗ್‌ ಲ್ಯಾನಿಂಗ್‌ ಹಾಗೂ ಶಫಾಲಿ ವರ್ಮಾ ಜೋಡಿ ಉತ್ತಮ ಆರಂಭ ನೀಡಿತು. ಮೊದಲ ವಿಕೆಟ್‌ ಜೊತೆಯಾಟಕ್ಕೆ 6.3 ಓವರ್‌ಗಳಲ್ಲಿ 67 ರನ್‌ ಚಚ್ಚಿತ್ತು. ಈ ವೇಳೆ 17 ರನ್‌ ಗಳಿಸಿದ್ದ ಶಫಾಲಿ ಸಿಕ್ಸರ್‌ ಸಿಡಿಸುವ ಬರದಲ್ಲಿ ಬೌಂಡರಿ ಲೈನ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದ್ರು. ಈ ವೇಳೆ ಕೆಲಹೊತ್ತು ಮಳೆ ಅಡ್ಡಿಯಾಗಿತ್ತು. ಬಳಿಕ ತನ್ನ ಆರ್ಭಟ ಮುಂದುವರಿಸಿದ ಲ್ಯಾನಿಂಗ್‌ 42 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 70 ರನ್‌ ಚಚ್ಚಿ ವಿಕೆಟ್‌ ಒಪ್ಪಿಸಿದರು. ಇದನ್ನೂ ಓದಿ: ಶಫಾಲಿ, ಲ್ಯಾನಿಂಗ್‌ ಬೆಂಕಿ ಬ್ಯಾಟಿಂಗ್‌ – ಡೆಲ್ಲಿಗೆ 60 ರನ್‌ಗಳ ಭರ್ಜರಿ ಜಯ; RCBಗೆ ಹೀನಾಯ ಸೋಲು

    ನಂತರ ಕ್ರೀಸ್‌ಗಿಳಿದ ಜೆಮಿಮಾ ರೊಡ್ರಿಗಸ್‌ ಹಾಗೂ ಜೆಸ್‌ ಜೊನಾಸೆನ್‌ ಸಹ ಸ್ಫೋಟಕ ಬ್ಯಾಟಿಂಗ್‌ ನಡೆಸಿ ತಂಡದ ಮೊತ್ತ 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಜೆಮಿಮಾ, ಜೊನಾಸೆನ್‌ ಜೋಡಿ ಮುರಿಯದ 5ನೇ ವಿಕೆಟ್‌ ಜೊತೆಯಾಟಕ್ಕೆ 34 ಎಸೆತಗಳಲ್ಲಿ ಬರೋಬ್ಬರಿ 67 ರನ್‌ ಕಲೆಹಾಕಿತ್ತು. ಜೆಮಿಮಾ 22 ಎಸೆತಗಳಲ್ಲಿ 4 ಬೌಂಡರಿ ಸಹಿತ 34 ರನ್‌ ಗಳಿಸಿದ್ರೆ, ಜೊನಾಸೆನ್‌ 20 ಎಸೆತಗಳಲ್ಲಿ ಸ್ಫೋಟಕ 42 ರನ್‌ (3 ಸಿಕ್ಸರ್‌, 3 ಬೌಂಡರಿ) ಚಚ್ಚಿದರು. ಈ ನಡುವೆ ಆಲಿಸ್‌ ಕ್ಯಾಪ್ಸಿ ಸಹ 10 ಎಸೆತಗಳಲ್ಲಿ 21 ರನ್‌, ಮರಿಜಾನ್ನೆ ಕಪ್ 16 ರನ್‌ ಗಳಿಸಿ ತಂಡಕ್ಕೆ ನೆರವಾದರು. ಪರಿಣಾಮ ಡೆಲ್ಲಿ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 211 ರನ್‌ ಗಳಿಸಿತು.

    ಯುಪಿ ವಾರಿಯರ್ಸ್‌ ಪರ ಶಬ್ನಿಮ್ ಇಸ್ಮಾಯಿಲ್, ತಹ್ಲಿಯಾ ಮೆಕ್‌ಗ್ರಾತ್, ಸೋಫಿ ಎಕ್ಲೆಸ್ಟೋನ್ ಹಾಗೂ ರಾಜೇಶ್ವರಿ ಗಾಯಕ್ವಾಡ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

    ರನ್‌ ಏರಿದ್ದು ಹೇಗೆ?
    50 ರನ್‌ 32 ಎಸೆತ
    100 ರನ್‌ 64 ಎಸೆತ
    153 ರನ್‌ 96 ಎಸೆತ
    211 ರನ್‌ 120 ಎಸೆತ

  • ಶಫಾಲಿ, ಲ್ಯಾನಿಂಗ್‌ ಬೆಂಕಿ ಬ್ಯಾಟಿಂಗ್‌ – ಡೆಲ್ಲಿಗೆ 60 ರನ್‌ಗಳ ಭರ್ಜರಿ ಜಯ; RCBಗೆ ಹೀನಾಯ ಸೋಲು

    ಶಫಾಲಿ, ಲ್ಯಾನಿಂಗ್‌ ಬೆಂಕಿ ಬ್ಯಾಟಿಂಗ್‌ – ಡೆಲ್ಲಿಗೆ 60 ರನ್‌ಗಳ ಭರ್ಜರಿ ಜಯ; RCBಗೆ ಹೀನಾಯ ಸೋಲು

    ಮುಂಬೈ: ಶಫಾಲಿ ವರ್ಮ, ಮೆಗ್‌ ಲ್ಯಾನಿಂಗ್‌ ಸಿಕ್ಸರ್‌, ಬೌಂಡರಿಗಳ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಮಹಿಳಾ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮಹಿಳಾ ತಂಡದ ವಿರುದ್ಧ 60 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಚೊಚ್ಚಲ ಡಬ್ಲ್ಯೂಪಿಎಲ್‌ (WPL) ಆವೃತ್ತಿಯ ಆರಂಭಿಕ ಪಂದ್ಯದಲ್ಲೇ ಆರ್‌ಸಿಬಿ ತಂಡ ಹೀನಾಯವಾಗಿ ಸೋತು ನಿರಾಸೆ ಅನುಭವಿಸಿದೆ.

    ಸಿಕ್ಸರ್‌, ಬೌಂಡರಿಗಳ ಆಟದಲ್ಲಿ ಬರೋಬ್ಬರಿ 51 ಬೌಂಡರಿ, 10 ಸಿಕ್ಸರ್‌ ಗಳು ದಾಖಲಾದವು. ಡೆಲ್ಲಿ ಕ್ಯಾಪಿಟಲ್ಸ್‌ ಪರ 30 ಬೌಂಡರಿ 7 ಸಿಕ್ಸರ್‌ಗಳು ಸಿಡಿದರೆ, ಆರ್‌ಸಿಬಿ ಪರ 21 ಬೌಂಡರಿ 3 ಸಿಕ್ಸರ್‌ ದಾಖಲಾಯಿತು. ಮಹಿಳಾ ಮಣಿಗಳು ಪುರುಷರಿಗೇನೂ ಕಮ್ಮಿಯಿಲ್ಲ ಎನ್ನುವಂತೆ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸುತ್ತಾ ಆರ್ಭಟ ಮೆರೆದರು.

    ಸೂಪರ್‌ ಸಂಡೆ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ 2ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 223 ರನ್‌ ಬಾರಿಸಿತು. ಬೃಹತ್ ರನ್‌ಗಳ ಗುರಿ ಬೆನ್ನಟ್ಟಿದ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್‌ಗಳನ್ನು ಗಳಿಸಲಷ್ಟೆ ಶಕ್ತವಾಗಿ, 60 ರನ್‌ಗಳಿಂದ ಸೋಲು ಕಂಡಿತು.

    ನಾಯಕಿ ಮಂದಾನ 35 ರನ್‌, ಎಲ್ಲಿಸ್‌ ಪೆರ್ರಿ 31 ರನ್‌ ಹಾಗೂ ಹೀದರ್ ನೈಟ್ 34 ರನ್‌ ಗಳಿಸಿದರು. ನಂತರ ಡೆಲ್ಲಿ ಬೌಲರ್‌ಗಳ ಆರ್ಭಟಕ್ಕೆ ತತ್ತರಿಸಿದ ಆರ್‌ಸಿಬಿ ತಂಡ ಒಂದೊಂದೇ ವಿಕೆಟ್‌ ಕಳೆದುಕೊಂಡಿತು. ಪರಿಣಾಮ 163 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲನುಭವಿಸಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ತಾರಾ ನಾರಿಸ್ 5 ವಿಕೆಟ್ ಪಡೆದು ಮಿಂಚಿದರೆ, ಆಲಿಸ್ ಕ್ಯಾಪ್ಸಿ 2 ವಿಕೆಟ್‌, ಶಿಖಾ ಪಾಂಡೆ ಒಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡದ ಮಹಿಳಾ ಮಣಿಗಳು ಆರ್‌ಸಿಬಿ ಬೌಲರ್ ಗಳನ್ನು ಬೆಂಡೆತ್ತಿದರು. ಮೊದಲ ವಿಕೆಟ್‌ ಜೊತೆಯಾಟಕ್ಕೆ 14.3 ಓವರ್ ಗಳಲ್ಲಿ 162 ರನ್‌ಗಳ ಬೃಹತ್ ಮೊತ್ತ ಪೇರಿಸಿದರು. ನಂತರ ಬಂದ ಮರಿಜಾನ್ನೆ ಕಾಪ್, ಜೆಮಿಮಾ ರೋಡ್ರಿಗಸ್‌ ಸಹ ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದರು.

    186.67 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಶಫಾಲಿ ವರ್ಮಾ 45 ಎಸೆತಗಳಲ್ಲಿ ಭರ್ಜರಿ 84 ರನ್‌ (10 ಬೌಂಡರಿ, 4 ಸಿಕ್ಸರ್) ಚಚ್ಚಿದರೆ, ನಾಯಕಿ ಮೆಗ್ ಲ್ಯಾನಿಂಗ್ 43 ಎಸೆತಗಳಲ್ಲಿ 14 ಬೌಂಡರಿ ಸಹಿತ 72 ರನ್ ಬಾರಿಸಿದರು.

    ಶಫಾಲಿ ವರ್ಮಾ ಮತ್ತು ಮೆಗ್ ಲ್ಯಾನಿಂಗ್ ಔಟಾದ ನಂತರ ಬಂದ ಮರಿಜಾನ್ನೆ ಕಾಪ್ ಮತ್ತು ಜೆಮಿಮಾ ರೊಡ್ರಿಗಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಮರಿಜಾನ್ನೆ ಕಾಪ್ 17 ಎಸೆತಗಳಲ್ಲಿ ಸ್ಪೋಟಕ 39 ರನ್‌ (3 ಬೌಂಡರಿ 3 ಸಿಕ್ಸರ್) ಗಳಿಸಿದರೇ, ಜೆಮಿಮಾ 15 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 22 ರನ್ ಗಳಿಸಿ ಮಿಂಚಿದರು. ಆರ್​​ಸಿಬಿ ಪರವಾಗಿ ಹೀಥರ್ ನೈಟ್ ಮಾತ್ರ 2 ವಿಕೆಟ್ ಪಡೆದರು.

  • ಪಂದ್ಯ ಗೆದ್ದು IPL ಸೀಸನ್‌ಗೆ ಗುಡ್‌ಬೈ ಹೇಳಿದ ಮುಂಬೈ- ಸೋಲಿಗೆ ಕಾರಣ ಬಿಚ್ಚಿಟ್ಟ ರಿಷಭ್ ಪಂತ್

    ಪಂದ್ಯ ಗೆದ್ದು IPL ಸೀಸನ್‌ಗೆ ಗುಡ್‌ಬೈ ಹೇಳಿದ ಮುಂಬೈ- ಸೋಲಿಗೆ ಕಾರಣ ಬಿಚ್ಚಿಟ್ಟ ರಿಷಭ್ ಪಂತ್

    ನವದೆಹಲಿ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ IPL ಟೂರ್ನಿಯ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ದೆಹಲಿ ಕ್ಯಾಪಿಟಲ್ಸ್ ಸೋಲು ಕಂಡಿತು. ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿದ್ದ ಮುಂಬೈ ತನ್ನ ಜೊತೆಗೆ ದೆಹಲಿಯನ್ನೂ ಸೀಸನ್‌ನಿಂದ ಹೊರಗೆಳೆಯಿತು.

    ಐಪಿಎಲ್ 15ನೇ ಆವೃತ್ತಿಯಲ್ಲಿ ತನ್ನ 14ನೇ ಪಂದ್ಯವನ್ನಾಡಿದ ಮುಂಬೈ ಇಂಡಿಯನ್ಸ್ ತಂಡ ಗೆದ್ದು ಆವೃತ್ತಿಗೆ ಗುಡ್‌ಬೈ ಹೇಳಿತು. 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ರೋಹಿತ್ ಶರ್ಮಾ ಪಡೆಯಿಂದ RCB ತಂಡವು ಪ್ಲೇ ಆಫ್ ಪ್ರವೇಶಿಸಲು ಸಹಕಾರಿಯಾಯಿತು. ಇದನ್ನೂ ಓದಿ: ಈಡೇರಿದ ಬೆಂಗ್ಳೂರು ಅಭಿಮಾನಿಗಳ ಬಯಕೆ – ಆರ್‌ಸಿಬಿ ಪ್ಲೇ ಆಫ್‍ಗೆ ಡೆಲ್ಲಿ ಮನೆಗೆ

    TIM DEVID

    ಕೊನೆಯ ಪಂದ್ಯವನ್ನು ಗೆದ್ದಿದ್ದರೆ ದೆಹಲಿಗೆ ಪ್ಲೇ ಆಫ್ ಪ್ರವೇಶಿಸುವ ಉತ್ತಮ ಅವಕಾಶವಿತ್ತು. ಮುಂಬೈ ವಿರುದ್ಧ ರಿಷಭ್ ಪಂತ್ ಪಡೆಯ ಗೆಲುವಿಗೆ ಉತ್ತಮ ಅವಕಾಶವಿತ್ತು. ಆದರೆ ಸುಲಭವಾಗಿ ಗೆಲ್ಲುವ ಪಂದ್ಯದಲ್ಲಿ ದೆಹಲಿ ಸೋಲಬೇಕಾಯಿತು. ಮ್ಯಾಚ್ ಮುಗಿದ ಬಳಿಕ ತಮ್ಮ ತಂಡದ ಸೋಲಿಗೆ ಕಾರಣವೇನೆಂಬುದನ್ನು ನಾಯಕ ರಿಷಭ್ ಪಂತ್ ಹೇಳಿದ್ದಾರೆ. ಇದನ್ನೂ ಓದಿ: ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್‍ಗೆ ಪದಾರ್ಪಣೆ?

    ಈ ಕುರಿತು ಮಾತನಾಡಿದ ರಿಷಭ್ ಪಂತ್, ನಾವು ಉತ್ತಮವಾಗಿಯೇ ಆಡಿದ್ದೆವು. ಆದರೆ ಕೆಲವು ತಪ್ಪುಗಳಿಂದಾಗಿ ಸೋಲಬೇಕಾಯಿತು. ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಫೇಲ್ ಆಗಿದ್ದರಿಂದ ಸೋಲಾಗಿದೆ. ಟೂರ್ನಿಯುದ್ದಕ್ಕೂ ನಾವು ಇದೇ ತೊಂದರೆಯನ್ನು ಎದುರಿಸಿದ್ದೇವೆ. ನಾವು ನಮ್ಮ ತಪ್ಪುಗಳಿಂದ ಪಾಠ ಕಲಿತಿದ್ದೇವೆ. ಮುಂದಿನ ಸೀಸನ್‌ನಲ್ಲಿ ಬಲಿಷ್ಠ ತಂಡವಾಗಿ ಮರಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮುಂಬೈ ಇಂಡಿಯನ್ಸ್ ತಂಡದ ಈ ಗೆಲುವಿನಲ್ಲಿ ಟಿಮ್ ಡೇವಿಡ್ ಪಾತ್ರ ಬಹುಮುಖ್ಯವಾಗಿದೆ. ಕೇವಲ 11 ಎಸೆತಗಳಲ್ಲಿ ಅವರು 34 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಒಂದು ಬಾರಿ ಟಿಮ್ ಡೇವಿಡ್ ಕ್ಲೀನ್ ಔಟ್ ಆಗಿದ್ದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಈ ವೇಳೆ ರಿಷಭ್ ಪಂತ್ ಡಿಆರ್‌ಎಸ್ ರಿವ್ಯೂ ತೆಗೆದುಕೊಳ್ಳಲಿಲ್ಲ. ಆದರೆ ಟಿಮ್ ಡೇವಿಡ್ ಸ್ಪಷ್ಟವಾಗಿ ಔಟಾಗಿರುವುದು ಬಳಿಕ ಗೊತ್ತಾಯಿತು. ಇದರಿಂದಾಗಿ ದೆಹಲಿಗೆ ದೊಡ್ಡ ಹೊಡೆತ ಬಿದ್ದಂತಾಯಿತು. ಒಂದು ವೇಳೆ ರಿವ್ಯೂ ತೆಗೆದುಕೊಂಡಿದ್ದರೆ ಟಿಮ್ ಡೇವಿಡ್ ಸ್ಫೋಟಕ ಆಟಕ್ಕೆ ಬ್ರೇಕ್ ಬೀಳುತ್ತಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧ್ಯವೂ ಆಗುತ್ತಿತ್ತು.

    ಕ್ಯಾಚ್ ಕೈಚೆಲ್ಲಿದ್ದೇ ಎಡವಟ್ಟಾಯ್ತು: ರಿಷಭ್ ಪಂತ್ ಸೇರಿದಂತೆ ದೆಹಲಿಯ ಕೆಲ ಆಟಗಾರರು ಕೆಲವು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ತಂಡಕ್ಕೆ ಭಾರೀ ಪೆಟ್ಟು ನೀಡಿತು. ಉತ್ತಮ ಫೀಲ್ಡಿಂಗ್ ಮಾಡಿದ್ದರೆ ಮುಂಬೈ ವಿರುದ್ಧ ದೆಹಲಿ ಗೆಲುವು ಸಾಧಿಸುವ ಎಲ್ಲ ಸಾಧ್ಯತೆಗಳು ಇದ್ದವು. ಆದರೆ ಕೈಚೆಲ್ಲಿದ ಕ್ಯಾಚ್‌ಗಳಿಂದ ದೆಹಲಿ ಸೋಲು ಕಾಣಬೇಕಾಯಿತು.

  • ಈಡೇರಿದ ಬೆಂಗ್ಳೂರು ಅಭಿಮಾನಿಗಳ ಬಯಕೆ – ಆರ್‌ಸಿಬಿ ಪ್ಲೇ ಆಫ್‍ಗೆ ಡೆಲ್ಲಿ ಮನೆಗೆ

    ಈಡೇರಿದ ಬೆಂಗ್ಳೂರು ಅಭಿಮಾನಿಗಳ ಬಯಕೆ – ಆರ್‌ಸಿಬಿ ಪ್ಲೇ ಆಫ್‍ಗೆ ಡೆಲ್ಲಿ ಮನೆಗೆ

    ಮುಂಬೈ: ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಮುಂಬೈ 5 ವಿಕೆಟ್‌ಗಳ ಗೆಲುವಿನೊಂದಿಗೆ ಕೂಟಕ್ಕೆ ವಿದಾಯ ಘೋಷಿಸಿದರೆ, ಇತ್ತ ಈ ಸೋಲಿನೊಂದಿಗೆ ಡೆಲ್ಲಿ ಪ್ಲೇ ಆಫ್ ಕನಸು ನುಚ್ಚುನೂರಾಗಿದೆ.

    160 ರನ್‍ಗಳ ಗುರಿ ಪಡೆದ ಮುಂಬೈ ಗೆಲುವಿಗಾಗಿ ತಿಲಕ್ ವರ್ಮಾ ಮತ್ತು ಟಿಮ್ ಡೇವಿಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ವೇಳೆ ಸ್ಫೋಟಕ ಆಟವಾಡುತ್ತಿದ್ದ ಟಿಮ್ ಡೇವಿಡ್ 34 ರನ್ (15 ಎಸೆತ, 2 ಬೌಂಡರಿ, 4 ಸಿಕ್ಸ್) ವಿಕೆಟ್ ಕಳೆದುಕೊಂಡಿತು. ಈ ಮೊದಲು ಡೇವಿಡ್‌ ಅವರ ಸ್ಫೋಟಕ ಆಟ ಮುಂಬೈ ಗೆಲುವನ್ನು ಮತ್ತಷ್ಟು ಸನಿಹಕ್ಕೆ ತಂದು ನಿಲ್ಲಿಸಿತ್ತು. ಅಂತಿಮವಾಗಿ 19.1 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 160 ರನ್‌ ಸಿಡಿಸಿ ಮುಂಬೈ ಗೆಲುವಿನ ನಗೆ ಬೀರಿತು. ಈ ಗೆಲುವು ಆರ್‌ಸಿಬಿ ಪ್ಲೇ ಆಫ್‍ಗೇರಲು ನೆರವಾಯಿತು. ಇತ್ತ ಮಹತ್ವದ ಪಂದ್ಯ ಸೋತ ಡೆಲ್ಲಿ ತಂಡದ ಈವರೆಗಿನ ಹೋರಾಟ ವ್ಯರ್ಥವಾಯಿತು.

    ಸಾಧಾರಣ ಮೊತ್ತ ಬೆನ್ನಟ್ಟಿದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಬಂದಷ್ಟೇ ವೇಗವಾಗಿ 2 ರನ್ ಗಳಿಸಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ಆ ಬಳಿಕ ಒಂದಾದ ಇಶಾನ್ ಕಿಶನ್ ಮತ್ತು ಡೆವಾಲ್ಡ್ ಬ್ರೆವಿಸ್ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಬ್ರೆವಿಸ್ 37 ರನ್ (33 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಕಿಶನ್ 48 ರನ್ (35 ಎಸೆತ, 3 ಬೌಂಡರಿ, 4 ಸಿಕ್ಸ್) ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ 51 ರನ್ (37 ಎಸೆತ) ಜೊತೆಯಾಟವಾಡಿದರು.

    ಈ ಮೊದಲು ತೀವ್ರ ಕುತೂಹಲ ಮೂಡಿಸಿದ ಪಂದ್ಯದ ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಆದರೆ ಈ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದ ಡೆಲ್ಲಿ ತಂಡದ ಆರಂಭಿಕರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

    ಡೇವಿಡ್ ವಾರ್ನರ್ 5 ರನ್‍ಗೆ ಸುಸ್ತಾದರೆ, ಮಿಚೆಲ್ ಮಾರ್ಷ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಇತ್ತ ಉತ್ತಮ ಹೊಡೆತಗಳ ಮೂಲಕ ಭರವಸೆ ಮೂಡಿಸಿದ ಪೃಥ್ವಿ ಶಾ 24 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು.

    ಪಂತ್, ಪೊವೆಲ್ ಜೊತೆಯಾಟ
    50 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ನಾಯಕ ರಿಷಭ್ ಪಂತ್ ಮತ್ತು ರೋವ್ಮನ್ ಪೊವೆಲ್ ಚೇತರಿಕೆ ನೀಡಲು ಮುಂದಾದರು. ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಬೌಂಡರಿ, ಸಿಕ್ಸ್ ಸಿಡಿಸುತ್ತ ಮೊತ್ತ ಹೆಚ್ಚಿಸಿದ ಈ ಜೋಡಿ 5ನೇ ವಿಕೆಟ್‍ಗೆ 75 ರನ್ (44 ಎಸೆತ) ಜೊತೆಯಾಟವಾಡಿತು. ಈ ವೇಳೆ ಪಂತ್ 39 ರನ್ (33 ಎಸೆತ, 4 ಬೌಂಡರಿ, 1 ಸಿಕ್ಸ್) ಚಚ್ಚಿ ಔಟ್ ಆದರು. ಆ ಬಳಿಕ ಪೊವೆಲ್ 43 ರನ್ (34 ಎಸೆತ, 1 ಬೌಂಡರಿ, 4 ಸಿಕ್ಸ್) ಸಿಡಿಸಿ ಮುನ್ನುಗ್ಗುತ್ತಿದ್ದ ವೇಳೆ ಬುಮ್ರಾ ಎಸೆದ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.

    ಕೊನೆಯಲ್ಲಿ ಅಕ್ಷರ್ ಪಟೇಲ್ ಬಿರುಸಿನ ಅಜೇಯ 19 ರನ್ (10 ಎಸೆತ, 2 ಸಿಕ್ಸ್) ನೆರವಿನಿಂದ ತಂಡದ ಮೊತ್ತ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159ಕ್ಕೆ ಏರಿತು.

    ಮುಂಬೈ ಪರ ಬೌಲಿಂಗ್‍ನಲ್ಲಿ ಮಿಂಚಿದ ಬುಮ್ರಾ 3 ವಿಕೆಟ್ ಕಿತ್ತು ಡೆಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಉಳಿದಂತೆ ರಮಣದೀಪ್ ಸಿಂಗ್ 2, ಡೇನಿಯಲ್ ಸ್ಯಾಮ್ ಮತ್ತು ಮಯಾಂಕ್ ಮಾರ್ಕಂಡೆ ತಲಾ 1 ವಿಕೆಟ್ ಪಡೆದರು.

  • ಕೆಂಪಿದ್ದ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಚಿತ್ರವನ್ನು ಕಡುನೀಲಿ ಬಣ್ಣಕ್ಕೆ ಬದಲಾಯಿಸಿಕೊಂಡ ಆರ್‌ಸಿಬಿ

    ಕೆಂಪಿದ್ದ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಚಿತ್ರವನ್ನು ಕಡುನೀಲಿ ಬಣ್ಣಕ್ಕೆ ಬದಲಾಯಿಸಿಕೊಂಡ ಆರ್‌ಸಿಬಿ

    ಮುಂಬೈ: ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೇರುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ತಂಡದ ಭವಿಷ್ಯ ಇಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ನಿರ್ಧಾರವಾಗಲಿದೆ.

    ಆರ್‌ಸಿಬಿ ಈಗಾಗಲೇ ತನ್ನ ಚರಣದ 14 ಪಂದ್ಯಗಳನ್ನು ಆಡಿ 8 ಜಯ, 6 ಸೋಲುಗಳನ್ನು ಅನುಭವಿಸಿದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆದರೆ ತಂಡದ ರನ್-ರೇಟ್ ತೀರಾ ಕಡಿಮೆ ಇದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ರನ್-ರೇಟ್ ಉತ್ತಮವಾಗಿದೆ. ಒಂದು ವೇಳೆ ಇಂದು ನಡೆಯುವ ಡೆಲ್ಲಿ ಮತ್ತು ಮುಂಬೈ ಪಂದ್ಯದಲ್ಲಿ ರೋಹಿತ್ ಬಳಗವು ಸೋತರೆ ಡೆಲ್ಲಿ ತಂಡವು ರನ್ ರೆಟ್ ಆಧಾರದ ಮೇಲೆ ಪ್ಲೇ ಆಫ್‌ಗೇರಲಿದೆ. ಇದನ್ನೂ ಓದಿ: ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್‍ಗೆ ಪದಾರ್ಪಣೆ?

    ಈಗಾಗಲೇ ತಮ್ಮ ತಂಡದ ಭವಿಷ್ಯ ಮುಂಬೈ ಕೈಯಲ್ಲಿರುವ ಹಿನ್ನೆಲೆ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಮುಂಬೈ ಇಂಡಿಯನ್ಸ್ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಅಲ್ಲದೆ ಆರ್‌ಸಿಬಿಯು ಮುಂಬೈ ತಂಡವನ್ನು ಮತ್ತಷ್ಟು ಬೆಂಬಲಿಸಲು ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್ ಚಿತ್ರವನ್ನು ಮುಂಬೈ ತಂಡದ ಜೆರ್ಸಿಯ ಬಣ್ಣವನ್ನು ಹೋಲುವ ರೀತಿಯ ಬಣ್ಣಕ್ಕೆ ಬದಲಾಯಿಸಿಕೊಂಡಿದೆ. ಇದನ್ನೂ ಓದಿ: ಚೆನ್ನೈಗೆ ಸಿಂಹಸ್ವಪ್ನವಾದ ಅಶ್ವಿನ್ – ಸೋಲಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಹಾಲಿ ಚಾಂಪಿಯನ್

    ಈ ಕುರಿತು ವೀಡಿಯೋವೊಂದರಲ್ಲಿ ಮಾತನಾಡಿದ ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ, ನಾವು ಮೇ 21 ರಂದು ನಡೆಯುವ ಮುಂಬೈ ಮತ್ತು ಡೆಲ್ಲಿ ಪಂದ್ಯದಲ್ಲಿ ರೋಹಿತ್ ಬಳಗವನ್ನು ಬೆಂಬಲಿಸುತ್ತೇವೆ. ಕೇವಲ ಇಬ್ಬರಲ್ಲ, ಇನ್ನೂ 25 ಬೆಂಬಲಿಗರು ಸೇರಿ ಚಿಯರ್ ಅಪ್ ಮಾಡುತ್ತೇವೆ ಎಂದರು.

    IPL 2022 RCB VS SRH 5

    ಮುಂಬೈ ಮತ್ತು ಡೆಲ್ಲಿ ನಡುವಿನ ಪಂದ್ಯ ಮುಂಬೈಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಾದರೆ, ಡೆಲ್ಲಿಗೆ ಪ್ಲೇ ಆಫ್‌ಗೆ ಏರಲು ಕಡೆಯ ಅವಕಾಶವಾಗಿದೆ. ಈ ಪಂದ್ಯದಲ್ಲಿ ಮುಂಬೈ ಗೆದ್ದರೆ, ಆರ್‌ಸಿಬಿ ಪ್ಲೇ ಆಫ್‌ಗೆ ಎಂಟ್ರಿ ಕೊಡಲಿದೆ. ಡೆಲ್ಲಿ ಗೆದ್ದರೆ, ಆರ್‌ಸಿಬಿ ಅದೃಷ್ಟದಾಟದಲ್ಲಿ ಸೋತು ಮನೆ ದಾರಿ ಹಿಡಿಯಬೇಕಾಗಿದೆ. ಹಾಗಾಗಿ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿದೆ.

  • RCBಗೆ ಇಂದು ಅಗ್ನಿಪರೀಕ್ಷೆ – ಗೆದ್ದರಷ್ಟೇ ಪ್ಲೆ-ಆಫ್ ಕನಸು ಜೀವಂತ

    RCBಗೆ ಇಂದು ಅಗ್ನಿಪರೀಕ್ಷೆ – ಗೆದ್ದರಷ್ಟೇ ಪ್ಲೆ-ಆಫ್ ಕನಸು ಜೀವಂತ

    ಮುಂಬೈ: ಐಪಿಎಲ್ ಟೂರ್ನಿಯ ಟಾಪ್ 4 ತಂಡಗಳಲ್ಲಿ ಕಾಣಿಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಇಂದು ನಿರ್ಣಾಯಕ ದಿನ.

    ಐಪಿಎಲ್‌ ಅಂಕಪಟ್ಟಿಯಲ್ಲಿ ಟಾಪ್- 1 ಆಗಿರೋ ಗುಜರಾತ್ ಟೈಟಾನ್ಸ್ ವಿರುದ್ಧ ಡು ಪ್ಲೆಸಿಸ್ ಪಡೆ ಶತಾಯಗತಾಯ ಗೆಲುವು ದಾಖಲಿಸಲೇಬೇಕಿದೆ. ಗೆಲುವಿನ ಹಿಂದೆ ನಾನಾ ಲೆಕ್ಕಾಚಾರಗಳೂ ಇವೆ. ಆರ್‌ಸಿಬಿ ಇಂದಿನ ಪಂದ್ಯ ಗೆದ್ದು, ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ವಿರುದ್ಧ ಸೋತರೆ ಮಾತ್ರವೇ ಆರ್‌ಸಿಬಿ ಪ್ಲೇ-ಆಫ್ ತಲುಪಲಿದೆ. ಇದನ್ನೂ ಓದಿ: ಸ್ಟೋಯಿನಿಸ್ ಸ್ಟನ್‌ ಬೌಲಿಂಗ್, ಡಿ ಕಾಕ್ ದರ್ಬಾರ್‌ – ಪ್ಲೇ ಆಫ್‍ಗೆ ಎರಡನೇ ತಂಡವಾಗಿ ಎಂಟ್ರಿಕೊಟ್ಟ ಲಕ್ನೋ

    IPL 2022 RCB VS SRH 5

    ಏಕೆಂದರೆ ಐಪಿಎಲ್ ಅಂಕಪಟ್ಟಿಯ ಮೊದಲ 4 ತಂಡಗಳಾಗಿ ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್‌ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮೊದಲ 4 ಸ್ಥಾನಗಳಲ್ಲಿವೆ. ಆರ್‌ಸಿಬಿ 5ನೇ ಸ್ಥಾನದಲ್ಲಿದೆ.

    ಇಂದು ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ ಗೆಲ್ಲಲೇಬೇಕಿದೆ. ಒಂದು ವೇಳೆ ರಿಷಭ್ ಪಂತ್ ಬಳಗಕ್ಕೆ, ರೋಹಿತ್ ಬಳಗ ಶರಣಾದರೆ ಆರ್‌ಸಿಬಿ ಪ್ಲೇ-ಆಫ್ ನಿಂದ ಹೊರಬೀಳಲಿದೆ. ಇದನ್ನೂ ಓದಿ: ಐರ್ಲೆಂಡ್ ಪ್ರವಾಸ – ಭಾರತ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್

    IPL

    ನಿನ್ನೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ವಿರುದ್ಧ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ 2 ರನ್‌ಗಳ ರೋಚಕ ಜಯ ದಾಖಲಿಸಿದೆ. ಕ್ವಿಂಟನ್ ಡಿಕಾಕ್ 140, ರಾಹುಲ್ 68 ರನ್‌ಗಳ ಜೊತೆಯಾಟದಿಂದ ಸೂಪರ್ ಜೈಂಟ್ಸ್ ಬೃಹತ್ 210 ರನ್ ಗಳಿಸಿತ್ತು. ಇದಕ್ಕೆ ಕೋಲ್ಕತ್ತಾ ಕೂಡ ಭರ್ಜರಿ ಆಟವಾಡಿ 208 ರನ್‌ಗಳಿಸಿ, ಮಂಡಿಯೂರಿತು.

  • ಪ್ಲೇ ಆಫ್ ಸನಿಹಕ್ಕೆ ಡೆಲ್ಲಿ – ಪಂಜಾಬ್ ಕನಸು ನುಚ್ಚುನೂರು

    ಪ್ಲೇ ಆಫ್ ಸನಿಹಕ್ಕೆ ಡೆಲ್ಲಿ – ಪಂಜಾಬ್ ಕನಸು ನುಚ್ಚುನೂರು

    ಮುಂಬೈ: ಪ್ಲೇ ಆಫ್‍ಗೇರಲು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ ಡೆಲ್ಲಿ ತಂಡ ಪಂಜಾಬ್ ವಿರುದ್ಧ 17 ರನ್‍ಗಳ ಅಂತರದ ಗೆಲುವು ದಾಖಲಿಸಿತು. ಈ ಮೂಲಕ ಡೆಲ್ಲಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡರೆ, ಇತ್ತ ಪಂಜಾಬ್ ಈ ಸೋಲಿನೊಂದಿಗೆ ಬಹತೇಕ ಟೂರ್ನಿಯಿಂದ ಹೊರಬಿದ್ದಿದೆ.

    ಡೆಲ್ಲಿ ನೀಡಿದ 160 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡದ ಗೆಲುವಿಗಾಗಿ ಜಿತೇಶ್ ಶರ್ಮಾ ಮತ್ತು ರಾಹುಲ್ ಚಾಹರ್ ಹೋರಾಟ ನಡೆಸಿದರು. ಕೊನೆಯಲ್ಲಿ ಡೆಲ್ಲಿ ಬೌಲರ್‌ಗಳ ವೇಗಕ್ಕೆ ಥಂಡಾ ಹೂಡಿದ ಪಂಜಾಬ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಸಿಡಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

    ಅಲ್ಪಮೊತ್ತವನ್ನು ಬೆನ್ನಟ್ಟುವ ವಿಶ್ವಾಸದಲ್ಲಿ ಕಣಕ್ಕಿಳಿದ ಪಂಜಾಬ್‍ನ ಆರಂಭಿಕ ಆಟಗಾರರಾದ ಜಾನಿ ಬೈರ್‌ಸ್ಟೋವ್ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಬೈರ್‌ಸ್ಟೋವ್ ಸಿಡಿಯುವ ಸೂಚನೆ ನೀಡಿ 28 ರನ್ (15 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. ಆ ಬಳಿಕ ವಿಕೆಟ್ ಒಂದರ ಹಿಂದೆ ಒಂದು ಬೀಳತೊಡಗಿತು. ಈ ನಡುವೆ ಉತ್ತಮವಾಗಿ ಬ್ಯಾಟ್‍ಬೀಸುತ್ತಿದ್ದ ಧವನ್ 19 ರನ್ (16 ಎಸೆತ, 3 ಬೌಂಡರಿ) ವಿಕೆಟ್ ಕಳೆದುಕೊಂಡರು. ಆ ಬಳಿಕ ಡೆಲ್ಲಿ ಚೇತರಿಸಿಕೊಳ್ಳಲಿಲ್ಲ.

    ಈ ಮೊದಲು ಟಾಸ್ ಗೆದ್ದ ಪಂಜಾಬ್ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಡೆಲ್ಲಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಸರ್ಫರಾಜ್ ಖಾನ್ ಸ್ಫೋಟಕ 32 ರನ್ (16 ಎಸೆತ, 5 ಬೌಂಡರಿ, 1 ಸಿಕ್ಸ್) ಚಚ್ಚಿ ಔಟ್ ಆದರು.

    ಇನ್ನೊಂದೆಡೆ ಮಿಚೆಲ್ ಮಾರ್ಷ್ ಡೆಲ್ಲಿ ರನ್ ಏರಿಸುವ ಹೊಣೆ ಹೊತ್ತರು. ಇವರಿಗೆ ಕೆಲ ಹೊತ್ತು ಲಲಿತ್ ಯಾದವ್ 24 ರನ್ (21 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ಆ ಬಳಿಕ ಪಟಪಟನೇ ವಿಕೆಟ್ ಕಳೆದುಕೊಂಡು ಸಾಗಿದ ಡೆಲ್ಲಿಗೆ ಮಾರ್ಷ್ ಮಾತ್ರ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಸಿಡಿಸಿ ಮಿಂಚಿದರು.

    ಪಂಜಾಬ್ ಬೌಲರ್‌ಗಳಿಗೆ ಕಾಡಿದ ಮಾರ್ಷ್ 63 ರನ್ (48 ಎಸೆತ, 4 ಬೌಂಡರಿ, 3 ಸಿಕ್ಸ್) ಬಾರಿಸಿ ವಿಕೆಟ್ ಕಳೆದುಕೊಂಡರು. ಕೊನೆಯಲ್ಲಿ ಅಕ್ಷರ್ ಪಟೇಲ್ ಅಜೇಯ 17 ರನ್ (20 ಎಸೆತ, 2 ಬೌಂಡರಿ) ಸಿಡಿಸಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು.

    ಅಂತಿಮವಾಗಿ ಡೆಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಒಟ್ಟುಗೂಡಿಸಿತು. ಪಂಜಾಬ್ ಪರ ಲಿವಿಂಗ್‍ಸ್ಟೋನ್ ಮತ್ತು ಅರ್ಷದೀಪ್ ಸಿಂಗ್ ತಲಾ 3 ವಿಕೆಟ್ ಕಿತ್ತು ಡೆಲ್ಲಿ ರನ್ ಓಟಕ್ಕೆ ಬ್ರೇಕ್ ಹಾಕಿದರು.

  • ಮಾರ್ಷ್‌, ವಾರ್ನರ್‌ ಅಬ್ಬರಕ್ಕೆ ರಾಜಸ್ಥಾನ ಪಂಚರ್‌ – ಡೆಲ್ಲಿಗೆ 8 ವಿಕೆಟ್‌ಗಳ ಭರ್ಜರಿ ಜಯ

    ಮಾರ್ಷ್‌, ವಾರ್ನರ್‌ ಅಬ್ಬರಕ್ಕೆ ರಾಜಸ್ಥಾನ ಪಂಚರ್‌ – ಡೆಲ್ಲಿಗೆ 8 ವಿಕೆಟ್‌ಗಳ ಭರ್ಜರಿ ಜಯ

    ಮುಂಬೈ: ಮಿಚೆಲ್ ಮಾರ್ಷ್ ಮತ್ತು ಡೇವಿಡ್‌ ವಾರ್ನರ್‌ ಅವರ ಅಬ್ಬರದ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್‌ ರಾಜಸ್ಥಾನ ರಾಯಲ್ಸ್‌ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 161 ರನ್‌ಗಳ ಗುರಿಯನ್ನು ಪಡೆದ ಡೆಲ್ಲಿ 18.1 ಓವರ್‌ಗಳಲ್ಲಿ 2  ವಿಕೆಟ್‌ ನಷ್ಟಕ್ಕೆ 161 ರನ್‌ ಹೊಡೆಯುವ ಮೂಲಕ ಗೆಲುವು ಸಾಧಿಸಿತು. ಪ್ಲೇ ಆಫ್‌ಗೆ ಹೋಗಲು ಡೆಲ್ಲಿಗೆ ಇಂದಿನ ಪಂದ್ಯದಲ್ಲಿ ಗೆಲುವು ಅಗತ್ಯವಾಗಿತ್ತು.

    ಬ್ಯಾಟಿಂಗ್‌ ಆರಂಭಿಸಿದ ಡೆಲ್ಲಿ ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ಟ್ರೆಂಟ್‌ ಬೌಲ್ಟ್‌ ಎಸೆತದಲ್ಲಿ ಶ್ರೀಕಾರ್‌ ಭರತ್‌ ಖಾತೆ ತೆರೆಯದೇ ಕೀಪರ್‌ ಸ್ಯಾಮ್ಸನ್‌ಗೆ ಕ್ಯಾಚ್‌ ನೀಡಿ ಔಟಾಗಿದ್ದರು.

    ಸಂಕಷ್ಟದ ಸಮಯದಲ್ಲಿ ಒಂದಾದ ಆಸ್ಟ್ರೇಲಿಯಾದ ಆಟಗಾರರಾದ ಮಾರ್ಷ್‌ ಮತ್ತು ಡೇವಿಡ್‌ ವಾರ್ನರ್‌ ನಿಧನವಾಗಿ ಇನ್ನಿಂಗ್ಸ್‌ ಕಟ್ಟಲು ಆರಂಭಿಸಿದರು. ಇವರಿಬ್ಬರೂ ಎರಡನೇ ವಿಕೆಟ್‌ಗೆ 101 ಎಸೆತಗಳಲ್ಲಿ 144 ರನ್‌ ಜೊತೆಯಾಡುವ  ಮೂಲಕ ಭದ್ರವಾದ ಅಡಿಪಾಯ ಹಾಕಿದರು.  ಇದನ್ನೂ ಓದಿ: RCB ಫ್ಯಾನ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್ – ಎಬಿಡಿ ಮತ್ತೆ ಎಂಟ್ರಿ

    ನಾಯಕ ಸಂಜು ಸ್ಯಾಮ್ಸನ್‌ ಅವರು ವಾರ್ನರ್‌ ಮತ್ತು ಮಾರ್ಷ್‌ ಅವರನ್ನು ಬೇರ್ಪಡಿಸಲು ಸಾಕಷ್ಟು ತಂತ್ರ ಮಾಡಿದರೂ ಇಬ್ಬರು ಸಿಕ್ಸರ್‌, ಬೌಂಡರಿಗಳನ್ನು ಸಿಡಿಸುತ್ತಿದ್ದರು.  ಮಾರ್ಷ್‌ 89 ರನ್‌(62 ಎಸೆತ, 5 ಬೌಂಡರಿ, 7 ಸಿಕ್ಸ್‌)  ಗಳಿಸಿದ್ದಾಗ ಸಿಕ್ಸ್‌ ಸಿಡಿಸಲು ಹೋಗಿ ಕ್ಯಾಚ್‌ ನೀಡಿ ಔಟಾದರು.

    ಡೇವಿಡ್‌ ವಾರ್ನರ್‌ ಔಟಾಗದೇ 52 ರನ್‌( 41 ಎಸೆತ, 5 ಬೌಂಡರಿ, 1 ಸಿಕ್ಸರ್‌) ನಾಯಕ ರಿಷಭ್‌ ಪಂತ್‌ ಔಟಾಗದೇ  13 ರನ್‌( 4 ಎಸೆತ, 2 ಸಿಕ್ಸರ್)‌ ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಇಂದಿನ ಪಂದ್ಯವನ್ನು ಜಯಗಳಿಸಿದ ಡೆಲ್ಲಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲೇ ಮುಂದುವರಿದಿದೆ. 12 ಪಂದ್ಯವಾಡಿರುವ ಡೆಲ್ಲಿ 6 ಜಯದೊಂದಿಗೆ 12 ಅಂಕವನ್ನು ಪಡೆದಿದೆ. ಗುಜರಾತ್‌ ಟೈಟನ್ಸ್‌ 18 ಅಂಕದೊಂದಿಗೆ ಈಗಾಗಲೇ ಫ್ಲೇ ಆಫ್‌ ಪ್ರವೇಶಿಸಿದೆ. 16 ಅಂಕ ಸಂಪಾದಿಸಿರುವ ಲಕ್ನೋ ಎರಡನೇ ಸ್ಥಾನದಲ್ಲಿದೆ. 14 ಅಂಕ ಪಡೆದಿರುವ ರಾಜಸ್ಥಾನ ಮತ್ತು ಬೆಂಗಳೂರು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ.

    ಸಾಧಾರಣ ಮೊತ್ತ:
    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ರಾಯಲ್ಸ್‌ 11 ರನ್‌ ಗಳಿಸುವಷ್ಟರಲ್ಲೇ ಜೋಸ್‌ ಬಟ್ಲರ್‌ ವಿಕೆಟ್‌ ಕಳೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್‌ 19 ರನ್‌ ಹೊಡೆದು ಔಟಾದರೆ ಸ್ಪಿನ್ನರ್‌ ಅಶ್ವಿನ್‌ ಸ್ಫೋಟಕ ಅರ್ಧಶತಕ ಸಿಡಿಸಿ ಔಟಾದರು.

    ಅಶ್ವಿನ್‌ 50 ರನ್‌(38 ಎಸೆತ, 4 ಬೌಂಡರಿ, 2 ಸಿಕ್ಸರ್‌) ಹೊಡೆದರೆ ದೇವದತ್‌ ಪಡಿಕ್ಕಲ್‌ 48 ರನ್‌(30 ಎಸೆತ, 6 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿದ್ದರಿಂದ ಅಂತಿಮವಾಗಿ ರಾಜಸ್ಥಾನ 6 ವಿಕೆಟ್‌ ನಷ್ಟಕ್ಕೆ 160 ರನ್‌ ಹೊಡೆಯಿತು.

    ಚೇತನ್‌ ಸಕಾರಿಯಾ, ಅನ್ರಿಚ್ ನಾರ್ಟ್ಜೆ, ಮಿಚೆಲ್ ಮಾರ್ಷ್ ತಲಾ ಎರಡು ವಿಕೆಟ್‌ ಪಡೆದರು.