Tag: Delhi Capitals

  • IPL 2023: ವಿರಾಟ್‌ ಕೊಹ್ಲಿ ಐಪಿಎಲ್‌ ದಾಖಲೆ ಉಡೀಸ್‌ ಮಾಡಿದ ವಾರ್ನರ್‌

    IPL 2023: ವಿರಾಟ್‌ ಕೊಹ್ಲಿ ಐಪಿಎಲ್‌ ದಾಖಲೆ ಉಡೀಸ್‌ ಮಾಡಿದ ವಾರ್ನರ್‌

    ಗುವಾಹಟಿ: ಪ್ರತಿಷ್ಠಿತ 16ನೇ ಐಪಿಎಲ್‌ (IPL 2023) ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್‌ ವಾರ್ನರ್‌ (David Warner) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವು ಬ್ಯಾಟಿಂಗ್‌ ವೈಫಲ್ಯದ ಕೊರತೆಯಿಂದ ಸತತ 3 ಪಂದ್ಯಗಳಲ್ಲೂ ಹೀನಾಯ ಸೋಲನುಭವಿಸಿದೆ.

    ಪ್ರತಿ ಪಂದ್ಯದಲ್ಲೂ ಏಕಾಂಗಿ ಹೋರಾಟ ನಡೆಸುತ್ತಿರುವ ನಾಯಕ ಡೇವಿಡ್‌ ವಾರ್ನರ್‌ ಉತ್ತಮ ಫಾರ್ಮ್ ನಲ್ಲಿದ್ದಾರೆ. ಈ ಹಿಂದಿನ ಪಂದ್ಯದಲ್ಲೂ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಏಕಾಂಗಿಯಾಗಿ ಹೋರಾಡಿ 65 ರನ್‌ ಗಳಿಸಿ, ಐಪಿಎಲ್‌ ಟೂರ್ನಿಯಲ್ಲಿ 6 ಸಾವಿರ ರನ್ ಪೂರೈಸಿದ ಮೊದಲ ವಿದೇಶಿ ಆಟಗಾರ ಎಂಬ ದಾಖಲೆ ಮಾಡಿರುವುದಲ್ಲದೇ, ರನ್ ಮಷಿನ್‌ ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿದ್ದ ದಾಖಲೆಯನ್ನೂ ಉಡೀಸ್‌ ಮಾಡಿದ್ದಾರೆ. ಇದನ್ನೂ ಓದಿ: IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

    6 ಸಾವಿರ ರನ್ ಪೂರೈಸಿದ 3ನೇ ಆಟಗಾರ: ಐಪಿಎಲ್ ಟೂರ್ನಿಯಲ್ಲಿ 6 ಸಾವಿರ ರನ್ ಪೂರೈಸಿದ ಮೊದಲ ವಿದೇಶಿ ಆಟಗಾರ ಹಾಗೂ ಐಪಿಎಲ್‌ ಕ್ರಿಕೆಟ್‌ ಜಗತ್ತಿನ 3ನೇ ಆಟಗಾರ ಎಂಬ ದಾಖಲೆ ಪಟ್ಟಿಗೆ ಈಗ ವಾರ್ನರ್‌ ಸೇರ್ಪಡೆಯಾಗಿದ್ದಾರೆ. ಡೇವಿಡ್ ವಾರ್ನರ್ 165 ಪಂದ್ಯಗಳಲ್ಲಿ ಅತಿ ವೇಗವಾಗಿ 6 ಸಾವಿರ ರನ್‌ ಪೂರೈಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ, 188 ಇನ್ನಿಂಗ್ಸ್‌ ಹಾಗೂ ಶಿಖರ್‌ ಧವನ್‌ 199 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಮಾಡಿದ್ದರು. ಆದರೆ ಡೇವಿಡ್‌ ವಾರ್ನರ್‌ 165 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: IPl 2023: ರಂಗೇರಿಸಿದ ರಹಾನೆ ಬ್ಯಾಟಿಂಗ್‌, ಜಡೇಜಾ ಸ್ಪಿನ್‌ ಜಾದು- ಚೆನ್ನೈಗೆ 7 ವಿಕೆಟ್‌ಗಳ ಭರ್ಜರಿ ಜಯ

    ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ 225 ಪಂದ್ಯಗಳಲ್ಲಿ 6,727 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ 208 ಪಂದ್ಯಗಳಿಂದ 6,370 ರನ್ ಪೂರೈಸಿದ್ದಾರೆ. 5 ಬಾರಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) 229 ಪಂದ್ಯಗಳಲ್ಲಿ 5,901 ರನ್ ಬಾರಿಸಿದ್ದು, 6 ಸಾವಿರ ರನ್‌ ಪೂರೈಸುವ ಸನಿಹದಲ್ಲಿದ್ದಾರೆ.

  • IPL 2023: ಯಶಸ್ವಿ, ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 57 ರನ್‌ಗಳ ಭರ್ಜರಿ ಜಯ

    IPL 2023: ಯಶಸ್ವಿ, ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 57 ರನ್‌ಗಳ ಭರ್ಜರಿ ಜಯ

    – ಡೇವಿಡ್‌ ವಾರ್ನರ್‌ ಏಕಾಂಗಿ ಹೋರಾಟ ವ್ಯರ್ಥ

    ಗುವಾಹಟಿ: ಜೋಸ್‌ ಬಟ್ಲರ್‌ (Jos Buttler), ಯಶಸ್ವಿ ಜೈಸ್ವಾಲ್‌ (Yashasvi Jaiswal) ಬೊಂಬಾಟ್‌ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಅಸ್ಸಾಂನ ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿತು. 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿತು. ಬರೋಬ್ಬರಿ 200 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಡೇವಿಡ್‌ ವಾರ್ನರ್‌ (DavidWarner) ಏಕಾಂಗಿ ಹೋರಾಟದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ನಾಯ ಡೇವಿಡ್‌ ವಾರ್ನರ್‌ ಒಬ್ಬರೇ ಏಕಾಂಗಿ ಹೋರಾಟ ನಡೆಸಿದರು. ರಾಜಸ್ಥಾನ್‌ ಬೌಲರ್‌ಗಳ ಸಂಘಟಿತ ದಾಳಿಗೆ ಬೆಚ್ಚಿದ ಡೆಲ್ಲಿ ಕ್ಯಾಪಿಟಲ್ಸ್‌ ಪವರ್‌ಪ್ಲೇನಲ್ಲೇ 38 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಆರಂಭಿಕನಾಗಿ ಕಣಕ್ಕಿಳಿದ ವಾರ್ನರ್‌ 19ನೇ ಓವರ್‌ವರೆಗೂ ಹೋರಾಡಿ 65 ರನ್‌ (55 ಎಸೆತ, 7 ಬೌಂಡರಿ) ಗಳಿಸಿದರು. ಇದರೊಂದಿಗೆ ಲಲಿತ್‌ ಯಾದವ್‌ 38 ರನ್‌ (24 ಎಸೆತ, 5 ಬೌಂಡರಿ) ಗಳಿಸಿ ತಂಡಕ್ಕೆ ನೆರವಾದರು. ಉಳಿದವರು ರಾಜಸ್ಥಾನ್‌ ಬೌಲರ್‌ಗಳ ದಾಳಿಗೆ ತತ್ತರಿಸಿದರು. ಅಂತಿಮವಾಗಿ 20 ಓವರ್‌ಗಳಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ರಾಜಸ್ಥಾನ್‌ ರಾಯಲ್ಸ್‌ ಪರ ಟ್ರೆಂಟ್‌ ಬೋಲ್ಟ್‌, ಯಜುವೇಂದ್ರ ಚಾಹಲ್‌ ತಲಾ 3 ವಿಕೆಟ್‌ ಪಡೆದರೆ, ರವಿಚಂದ್ರನ್‌ ಅಶ್ವಿನ್‌ 2 ವಿಕೆಟ್‌ ಹಾಗೂ ಸಂದೀಪ್‌ ಶರ್ಮಾ 1 ವಿಕೆಟ್‌ ಕಿತ್ತರು.

    ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ಪರ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ನೀಡಿದರು. ಮೊದಲ ಓವರ್‌ನಲ್ಲಿಯೇ ಬರೋಬ್ಬರಿ 5 ಬೌಂಡರಿಗಳೊಂದಿಗೆ 20 ರನ್‌ ಚಚ್ಚಿದರು. ಈ ಮೂಲಕ 2023ರ ಐಪಿಎಲ್‌ನಲ್ಲಿ ಮೊದಲ ಓವರ್ ನಲ್ಲೇ ಅತಿ ಹೆಚ್ಚು ರನ್ ದಾಖಲಾಯಿತು. ಯಶಸ್ವಿಯೊಂದಿಗೆ ಜೊತೆಯಾದ ಬಟ್ಲರ್‌ ಸಹ ಭರ್ಜರಿ ಸಿಕ್ಸರ್‌, ಬೌಂಡರಿ ಚಚ್ಚಿದರು. ಪರಿಣಾಮ ಮೊದಲ ವಿಕೆಟ್‌ ಜೊತೆಯಾಟಕ್ಕೆ ಈ ಜೋಡಿ 8.3 ಓವರ್‌ಗಳಲ್ಲಿ ಈ ಜೋಡಿ ಬರೋಬ್ಬರಿ 98 ರನ್‌ ಕಲೆಹಾಕಿ, ದೊಡ್ಡ ಮೊತ್ತ ಗಳಿಸಲು ನೆರವಾಯಿತು.

    ಈ ವೇಳೆ ಜೈಸ್ವಾಲ್‌ 60 ರನ್‌ (31 ಎಸೆತ, 11 ಬೌಂಡರಿ, 1 ಸಿಕ್ಸರ್‌) ಬಾರಿಸಿ ಔಟಾದರು. ಈ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ ಸಹ ಶೂನ್ಯ ಸುತ್ತಿ ನಿರ್ಗಮಿಸಿದರೆ, ರಿಯಾನ್‌ ಪರಾಗ್‌ ಕೇವಲ 7 ರನ್‌ ಗಳಿಸಿ ಹೊರನಡೆದರು. ಆದರೂ ಬಟ್ಲರ್‌ ಬ್ಯಾಟಿಂಗ್‌ ಅಬ್ಬರ ನಿಲ್ಲಲಿಲ್ಲ. ಬಳಿಕ 5ನೇ ವಿಕೆಟ್‌ಗೆ ಜೊತೆಯಾದ ಬಟ್ಲರ್‌ ಹಾಗೂ  ಹೆಟ್ಮೇಯರ್‌ 29 ಎಸೆತಗಳಲ್ಲಿ 49 ರನ್‌ ಕಲೆಹಾಕಿ ತಂಡಕ್ಕೆ ಚೇತರಿಕೆ ನೀಡಿತು. 51 ಎಸೆತಗಳಲ್ಲಿ 79 ರನ್‌ (11 ಬೌಂಡರಿ, 1 ಸಿಕ್ಸರ್)‌ ಚಚ್ಚಿ ಬಟ್ಲರ್‌ ಔಟಾದರು. ಕೊನೆಯಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ ಹೆಟ್ಮೇಯರ್‌ 21 ಎಸೆತಗಳಲ್ಲಿ ಸ್ಫೋಟಕ 39 ರನ್‌ (1 ಬೌಂಡರಿ, 4 ಸಿಕ್ಸರ್‌) ಚಚ್ಚಿದರೆ, ಧ್ರುವ್ ಜುರೆಲ್ 3 ಎಸೆತಗಳಲ್ಲಿ 1 ಸಿಕ್ಸರ್‌ನೊಂದಿಗೆ 8 ರನ್‌ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ರಾಜಸ್ಥಾನ್‌ 20 ಓವರ್‌ಗಳಲ್ಲಿ 199 ರನ್‌ ಕಲೆಹಾಕಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಮುಕೇಶ್‌ ಕುಮಾರ್‌ 2 ವಿಕೆಟ್‌ ಕಿತ್ತರೆ, ಕುಲ್‌ದೀಪ್‌ ಯಾದವ್‌, ರೋವ್ಮನ್‌ ಪೋವೆಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ರನ್‌ ಏರಿದ್ದು ಹೇಗೆ?
    50 ರನ್‌, 24 ಎಸೆತ
    100 ರನ್‌, 55 ಎಸೆತ
    150 ರನ್‌, 99 ಎಸೆತ
    199 ರನ್‌, 120 ಎಸೆತ

  • ಸುದರ್ಶನ್‌ ಫಿಫ್ಟಿ, ಮಿಲ್ಲರ್‌ ಸ್ಫೋಟಕ ಆಟ – ಗುಜರಾತ್‌ಗೆ ಸತತ ಎರಡನೇ ಜಯ

    ಸುದರ್ಶನ್‌ ಫಿಫ್ಟಿ, ಮಿಲ್ಲರ್‌ ಸ್ಫೋಟಕ ಆಟ – ಗುಜರಾತ್‌ಗೆ ಸತತ ಎರಡನೇ ಜಯ

    ನವದೆಹಲಿ: ಸಾಯ್‌ ಸುದರ್ಶನ್‌ (Sai Sudharsan) ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ (David Miller) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧಗುಜರಾತ್‌ ಟೈಟಾನ್ಸ್‌ (Gujarat Titans) 6 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 8 ವಿಕೆಟ್‌ ನಷ್ಟಕ್ಕೆ 162 ರನ್‌ ಹೊಡೆಯಿತು. ನಂತರ ಬ್ಯಾಟಿಂಗ್‌ ಮಾಡಿದ ಗುಜರಾತ್‌ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ಅಂತಿಮವಾಗಿ 18.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 163 ರನ್‌ ಹೊಡೆದು ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿತು.

    54 ರನ್‌ ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದಾಗ ಸಾಯ್‌ ಸುದರ್ಶನ್‌ ಮತ್ತು ವಿಜಯ್‌ ಶಂಕರ್‌ (Vijay Shankar) ತಂಡಕ್ಕೆ ನೆರವಾದರು. ಇಬ್ಬರು 44 ಎಸೆತಗಳಲ್ಲಿ 53 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ವಿಜಯ್‌ ಶಂಕರ್‌ 29 ರನ್‌(23 ಎಸೆತ, 3 ಬೌಂಡರಿ) ಹೊಡೆದು ಔಟಾದರು. ಇದನ್ನೂ ಓದಿ: ಜಿಯೋ ಸಿನಿಮಾದಲ್ಲಿ ದಾಖಲೆ ಬರೆದ ಧೋನಿಯ ಅವಳಿ ಸಿಕ್ಸರ್

    ಮುರಿಯದ ಐದನೇ ವಿಕೆಟ್‌ಗೆ ಸುದರ್ಶನ್‌ ಮತ್ತು ಡೇವಿಡ್‌ ಮಿಲ್ಲರ್‌ 29 ಎಸೆತಗಳಲ್ಲಿ 56 ರನ್‌ ಚಚ್ಚುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಸುದರ್ಶನ್‌ ಔಟಾಗದೇ 62 ರನ್(‌ 48 ಎಸೆತ, 4 ಬೌಂಡರಿ, 2 ಸಿಕ್ಸರ್‌) ಡೇವಿಡ್‌ ಮಿಲ್ಲರ್‌ ಔಟಾಗದೇ 31 ರನ್‌(16 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದರು.

    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 8.3 ಓವರ್‌ಗಳಲ್ಲಿ 67 ರನ್‌ಗಳಿಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ನಾಯಕ ಡೇವಿಡ್‌ ವಾರ್ನರ್‌ 37 ರನ್‌(32 ಎಸೆತ, 7 ಔಂಡರಿ), ಸರ್ಫರಾಜ್‌ ಖಾನ್‌ 30 ರನ್‌( 34 ಎಸೆತ), ಅಕ್ಷರ್‌ ಪಟೇಲ್‌ 36 ರನ್‌(22 ಎಸೆತ, 2 ಬೌಂಡರಿ, 3 ಸಿಕ್ಸರ್‌) ಅಭಿಷೇಕ್‌ ಪೂರೆಲ್‌ 20 ರನ್‌(11 ಎಸೆತ, 2 ಸಿಕ್ಸರ್‌) ಹೊಡೆದ ಪರಿಣಾಮ ಅಂತಿಮವಾಗಿ ಡೆಲ್ಲಿ ತಂಡ 162 ರನ್‌ ಗಳಿಸಿತು.

    ಮೊಹಮ್ಮದ್‌ ಶಮಿ ಮತ್ತು ರಶೀದ್‌ ಖಾನ್‌ ತಲಾ ಮೂರು ವಿಕೆಟ್‌ ಪಡೆದರೆ ಅಲ್ಜಾರಿ ಜೋಸೆಫ್‌ 2 ವಿಕೆಟ್‌ ಪಡೆದರು.

  • IPL 2023: ಮಾರ್ಕ್‌ ಮಾರಕ ಬೌಲಿಂಗ್‌, ಡೆಲ್ಲಿಗೆ ಡಿಚ್ಚಿ ಕೊಟ್ಟ ಲಕ್ನೋ – ರಾಹುಲ್‌ ಸೈನ್ಯಕ್ಕೆ 50 ರನ್‌ಗಳ ಭರ್ಜರಿ ಜಯ

    IPL 2023: ಮಾರ್ಕ್‌ ಮಾರಕ ಬೌಲಿಂಗ್‌, ಡೆಲ್ಲಿಗೆ ಡಿಚ್ಚಿ ಕೊಟ್ಟ ಲಕ್ನೋ – ರಾಹುಲ್‌ ಸೈನ್ಯಕ್ಕೆ 50 ರನ್‌ಗಳ ಭರ್ಜರಿ ಜಯ

    ಲಕ್ನೋ: ಕೇಲ್‌ ಮೇಯರ್ಸ್‌ ಬೆಂಕಿ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capital) ವಿರುದ್ಧ 50 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, 16ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ಶುಭಾರಂಭ ಪಡೆದುಕೊಂಡಿದೆ.

    ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆ.ಎಲ್‌.ರಾಹುಲ್‌ (KL Rahul) ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 193 ರನ್‌ ಸಿಡಿಸಿತ್ತು. 194 ರನ್‌ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಡೆಲ್ಲಿ ತಂಡ ಉತ್ತಮ ಶುಭಾರಂಭ ಪಡೆದುಕೊಂಡಿತ್ತು. ಮೊದಲ ವಿಕೆಟ್‌ ಪತನಕ್ಕೆ 4.3 ಓವರ್‌ಗಳಲ್ಲಿ 41 ರನ್‌ ಕಲೆಹಾಕಿತ್ತು. ಆ ನಂತರ ತಂಡದ ಒಂದೊಂದೇ ವಿಕೆಟ್‌ ಪತನಗೊಂಡಿತು.

    ಡೆಲ್ಲಿ ತಂಡದಲ್ಲಿ ನಾಯಕ ಡೇವಿಡ್‌ ವಾರ್ನರ್‌ (David Warner) ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾದರು. ಡೇವಿಡ್‌ ವಾರ್ನರ್‌ 48 ಎಸೆತಗಳಲ್ಲಿ 56 ರನ್‌ (7 ಬೌಂಡರಿ), ರಿಲೀ ರೋಸೌವ್ 20 ಎಸೆತಗಳಲ್ಲಿ 30 ರನ್‌ ಗಳಿಸಿದ್ದು ಬಿಟ್ಟರೆ, ಯಾರೊಬ್ಬರು ಹೆಚ್ಚುವರಿ ರನ್‌ ಕೊಡುಗೆ ನೀಡಲಿಲ್ಲ. ಇದರಿಂದ ತಂಡ ಹೀನಾಯ ಸೋಲಿಗೆ ಗುರಿಯಾಯಿತು.

    ಪೃಥ್ವಿ ಶಾ 12 ರನ್‌, ಸರ್ಫರಾಜ್‌ ಖಾನ್‌ 4 ರನ್‌, ರೋಮ್ನನ್‌ ಪೋವೆಲ್‌ 1 ರನ್‌, ಅಮಮಾನ್‌ ಹಕೀಮ್‌ ಖಾನ್‌ 4 ರನ್‌ ಗಳಿಸಿದರೆ, ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಮಿಚೆಲ್‌ ಮಾರ್ಚ್‌ (Mitchell Marsh) ಶೂನ್ಯಕ್ಕೆ ಔಟಾಗಿ ಕೈಕೊಟ್ಟರು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ 16 ರನ್‌, ಚೇತನ್‌ ಸಕಾರಿಯಾ 4 ರನ್‌ ಗಳಿಸಿ ಔಟಾದರು. ಕುಲ್‌ದೀಪ್‌ ಯಾದವ್‌ 6 ರನ್‌, ಮುಕೇಶ್‌ ಕುಮಾರ್‌ ಯಾವುದೇ ರನ್‌ ಗಳಿಸದೇ ಕ್ರೀಸ್‌ನಲ್ಲಿ ಉಳಿದರು.

    ಮಿಂಚಿದ ಮಾರ್ಕ್‌:
    16ನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲೇ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮಾರ್ಕ್‌ ವುಡ್‌ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಗೆಲುವಿಗೆ ಕಾರಣರಾದರು. ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರ ಮಾರ್ಕ್‌ ವುಡ್‌ (Mark Wood) 5 ವಿಕೆಟ್‌ ಕಿತ್ತರೆ, ಅವೇಶ್‌ ಖಾನ್‌, ರವಿ ಬಿಷ್ಣೋಯ್ ತಲಾ 2 ವಿಕೆಟ್‌ ಕಿತ್ತು ಮಿಂಚಿದರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಕೇಲ್ ಮೇಯರ್ಸ್ ಸ್ಫೋಟಕ ಪ್ರದರ್ಶನ ನೀಡಿ ಮಿಂಚಿದರು. ಆರಂಭದಲ್ಲಿ ಕೆ.ಎಲ್‌ ರಾಹುಲ್‌ ವಿಕೆಟ್‌ ಕಳೆದುಕೊಂಡು ಆಘಾತ ಎದುರಿಸಿತ್ತು. ಆ ನಂತರ ಕೇಲ್ ಮೇಯರ್ಸ್ ಅಬ್ಬರ ಶುರುವಾಯಿತು.

    ಆರಂಭಿಕ ಆಟಗಾರ ಕೇಲ್ ಮೇಯರ್ಸ್ (Kyle Mayers) ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗ ಬೆಂಡೆತ್ತಿದರು. 2ನೇ ವಿಕೆಟ್‌ಗೆ ದೀಪಕ್ ಹೂಡಾ ಅವರೊಂದಿಗೆ ಭರ್ಜರಿ 79 ರನ್‌ಗಳ ಜೊತೆಯಾಟ ಆಡಿದರು. ಈ ನಡುವೆ ದೀಪಕ್‌ ಹೂಡಾ 17 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ಬೆನ್ನಲ್ಲೇ ಮೇಯರ್ಸ್‌ ಸಹ 38 ಎಸೆತಗಳಲ್ಲಿ 73 ರನ್ (7 ಸಿಕ್ಸರ್‌, 3 ಬೌಂಡರಿ) ಚಚ್ಚಿ ಔಟಾದರು.

    ಕೊನೆಯ ಹಂತದಲ್ಲಿ ನಿಕೋಲಸ್‌ ಪೂರನ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದು 36 ರನ್‌ಗಳ ಕೊಡುಗೆ ನೀಡಿದರು. ಯುವ ಆಟಗಾರ ಆಯುಷ್ ಬದೋನಿ ಕೂಡ ಸ್ಫೋಟಕ ಬ್ಯಾಟಿಂಗ್‌ ನಡೆಸಿ, ತಂಡದ ಮೊತ್ತ 193ಕ್ಕೆ ತಂದು ನಿಲ್ಲಿಸಿದರು. ಆಯುಷ್ ಬದೋನಿ 2 ಭರ್ಜರಿ ಸಿಕ್ಸರ್‌, 1 ಬೌಂಡರಿಯೊಂದಿಗೆ 7 ಎಸೆತಗಳಲ್ಲಿ 18 ರನ್‌ಗಳಿಸಿದರು.

    ಡೆಲ್ಲಿ ಪರ ಖಲೀಲ್‌ ಅಹ್ಮದ್‌, ಚೇತನ್‌ ಸಕಾರಿಯಾ ತಲಾ 2 ವಿಕೆಟ್‌ ಪಡೆದರೆ, ಅಕ್ಷರ್‌ ಪಟೇಲ್‌, ಕುಲ್‌ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌

    WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌

    – ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಅಭಿಮಾನಿಗಳು ಕೆಂಡ

    ಮುಂಬೈ: ಪುರುಷರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಆವೃತ್ತಿಯಲ್ಲಿ ಆಗಾಗ್ಗೆ ವಿವಾದಗಳು ನಡೆಯುತ್ತಿರುತ್ತವೆ. ಆದರೆ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲೂ (WPL 2023) ಈಗ ನೋಬಾಲ್‌ ವಿವಾದ ಹುಟ್ಟಿಕೊಂಡಿದೆ.

    ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವಿನ ಫೈನಲ್‌ ಪಂದ್ಯವು ಅತ್ಯಂತ ರೋಚಕತೆಯಿಂದ ಕೂಡಿತ್ತು. ಟೂರ್ನಿಯ ಬಲಿಷ್ಠ ತಂಡವಾಗಿ ಗುರುತಿಸಿಕೊಂಡ ಉಭಯ ತಂಡಗಳ ನಡುವಿನ ಹೋರಾಟ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಇದನ್ನೂ ಓದಿ: ರೋಚಕ ಫೈನಲ್‌ – ಮುಂಬೈ ಇಂಡಿಯನ್ಸ್‌ ಚೊಚ್ಚಲ WPL ಚಾಂಪಿಯನ್‌

    ಮುಂಬೈ ಇಂಡಿಯನ್ಸ್‌ ತಂಡವು ತನ್ನ ಶಿಸ್ತಿನ ಬೌಲಿಂಗ್‌ ದಾಳಿಯಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 131 ರನ್‌ಗಳಿಗೆ ಕಟ್ಟಿಹಾಕಿತ್ತು. ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಮುಂಬೈ ಇಂಡಿಯನ್ಸ್ 19.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 134 ರನ್‌ ಗಳಿಸಿ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಚೊಚ್ಚಲ ಆವೃತ್ತಿಯ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಇದನ್ನೂ ಓದಿ: WPL 2023: ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ವಿಕೆಟ್‌ಗಳ ಜಯ – ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ

    ಮುಂಬೈ ಇಂಡಿಯನ್ಸ್‌ ಟ್ರೋಫಿ ಗೆದ್ದ ಬಳಿಕ ವಿವಾದವೊಂದು ಹುಟ್ಟಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಪರ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಶಫಾಲಿ ವರ್ಮಾ (Shafali Verma) ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್‌ ಬೌಲರ್‌ ಇಸ್ಸಿ ವಾಂಗ್‌ 2ನೇ ಓವರ್‌ನಲ್ಲಿ ಎಸೆದ 3ನೇ ಎಸೆತವು ಹೈ-ಫುಲ್‌ಟಾಸ್ ಆಗಿತ್ತು. ಸೊಂಟದ ಮೇಲ್ಭಾಗದಲ್ಲಿದ್ದರೂ ಶಫಾಲಿ ವರ್ಮಾಗೆ ಔಟ್ ತೀರ್ಪು ನೀಡಲಾಯಿತು. ಮೊದಲ ಓವರ್‌ನಲ್ಲೇ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸಿದ್ದ ಶಫಾಲಿ ವರ್ಮಾ ಔಟ್‌ ಅನ್ನು ಕ್ಯಾಪ್ಟನ್‌ ಮೆಗ್‌ ಲ್ಯಾನಿಂಗ್‌ (Meg Lanning) ಪ್ರಶ್ನಿಸಿದರು. ಇದರ ಹೊರತಾಗಿಯೂ ಔಟ್‌ ನೀಡಲಾಯಿತು. ಇದರಿಂದ ಡೆಲ್ಲಿ ತಂಡವು ಬೃಹತ್ ಮೊತ್ತ ಸಿಡಿಸುವಲ್ಲಿ ವಿಫಲವಾಯಿತು ಎನ್ನಲಾಗುತ್ತಿದೆ.

    ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ ಪ್ರದರ್ಶನದ ಮೂಲಕ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇತ್ತ ಮುಂಬೈ ಇಂಡಿಯನ್ಸ್ ಎಲಿಮಿನೇಟರ್ ಪಂದ್ಯದ ಮೂಲಕ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿತು. ಕೊನೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಶಫಾಲಿ ವರ್ಮಾ ಔಟ್‌ ತಂಡಕ್ಕೆ ಭಾರೀ ಆಘಾತ ನೀಡಿತು. ಅಂತಿಮವಾಗಿ ಮುಂಬೈ ಚಾಂಪಿಯನ್‌ ಪಟ್ಟಕೇರಿತು.

    Rishabh-Pant-1 ipl

    2022ರ ಪುರುಷರ ಐಪಿಎಲ್‌ ಪಂದ್ಯದ ವೇಳೆ ರಿಷಬ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಜಸ್ತಾನ್‌ ರಾಯಲ್ಸ್‌ ನಡುವೆ ಇದೇ ರೀತಿ ನೋಬಾಲ್‌ ವಿವಾದ ಉಂಟಾಗಿತ್ತು. ಇದನ್ನೂ ಓದಿ: ಅಂಪೈರ್ ವಿರುದ್ಧ ಸಿಟ್ಟಾಗಿ ಬ್ಯಾಟರ್‌ಗಳನ್ನು ಕರೆದ ಪಂತ್ – ನಿಜಕ್ಕೂ ನಡೆದಿದ್ದು ಏನು?

  • ರೋಚಕ ಫೈನಲ್‌ – ಮುಂಬೈ ಇಂಡಿಯನ್ಸ್‌ ಚೊಚ್ಚಲ WPL ಚಾಂಪಿಯನ್‌

    ರೋಚಕ ಫೈನಲ್‌ – ಮುಂಬೈ ಇಂಡಿಯನ್ಸ್‌ ಚೊಚ್ಚಲ WPL ಚಾಂಪಿಯನ್‌

    ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ (WPL 2023) ಚೊಚ್ಚಲ ಆವೃತ್ತಿಯಲ್ಲಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ನಾಯಕತ್ವದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ರೋಚಕ ಜಯ ಸಾಧಿಸಿ ಚಾಂಪಿಯನ್‌ ಪಟ್ಟಕ್ಕೇರಿದೆ.

    ರೋಚಕ ಫೈನಲ್‌ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಹಾಗೂ ಶಿಸ್ತಿನ ಬೌಲಿಂಗ್‌ ದಾಳಿ ನಡೆಸಿದ ಮುಂಬೈ ಇಂಡಿಯನ್ಸ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕೊನೆಯ 12 ಎಸೆತಗಳಲ್ಲಿ ಮುಂಬೈಗೆ 21 ರನ್‌ಗಳ ಅಗತ್ಯವಿತ್ತು. ಈ ವೇಳೆ ಅಮೇಲಿಯ ಕೇರ್‌ 19ನೇ ಓವರ್‌ನಲ್ಲಿ ಭರ್ಜರಿ 3 ಬೌಂಡರಿ ಬಾರಿಸಿ ಗೆಲುವಿನ ಹಾದಿ ಸುಗಮವಾಗಿಸಿದರು. ಕೊನೆಯ ಓವರ್‌ನ 3ನೇ ಎಸೆತದಲ್ಲೇ ಬ್ರಂಟ್‌ ಬೌಂಡರಿ ಸಿಡಿಸುವ ಮೂಲಕ ಜಯ ತಂದುಕೊಟ್ಟರು. ಇದನ್ನೂ ಓದಿ: WPL 2023: ಮುಂಬೈ ಫೈನಲ್‌ಗೆ – ಯುಪಿ ವಾರಿಯರ್ಸ್‌ ಮನೆಗೆ

         

    ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತು. 132 ರನ್‌ ಗುರಿ ಬೆನ್ನತ್ತಿದ ಮುಂಬೈ 19.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ ಮುಂಬೈ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿತು. ಆರಂಭಿಕರಾದ ಹೇಲಿ ಮ್ಯಾಥಿವ್ಸ್‌ 13 ರನ್‌, ಯಸ್ತಿಕಾ ಭಾಟಿಯಾ 4 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. 3ನೇ ವಿಕೆಟ್‌ನಲ್ಲಿ ಒಂದಾದ ನಾಟ್‌ ಸ್ಕಿವರ್‌ ಬ್ರಂಟ್‌, ಹರ್ಮನ್‌ ಪ್ರೀತ್‌ ಕೌರ್‌ ತಾಳ್ಮೆಯ‌ ಆಟವಾಡಿದರು. 74 ಎಸೆತಗಳಲ್ಲಿ ಈ ಜೋಡಿ 72 ರನ್‌ ಗಳಿಸಿತ್ತು. ಇದರಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತು. ಅಷ್ಟರಲ್ಲಿ 37 ರನ್‌ (39 ಎಸೆತ 5 ಬೌಂಡರಿ) ಗಳಿಸಿ ಆಟವಾಡುತ್ತಿದ್ದ ಹರ್ಮನ್‌ಪ್ರೀತ್‌ ಕೌರ್‌ ರನೌಟ್‌ಗೆ ತುತ್ತಾಗಿ ಆಘಾತ ನೀಡಿದರು. ಇದನ್ನೂ ಓದಿ: ಐಪಿಎಲ್- ಆರ್‌ಸಿಬಿ ಕೆಲವು ಪಂದ್ಯಗಳಿಗೆ ಮ್ಯಾಕ್ಸ್‌ವೆಲ್ ಅನುಮಾನ

    ನಂತರ ತನ್ನ ಜವಾಬ್ದಾರಿಯುತ ಬ್ಯಾಟಿಂಗ್‌ ಮುಂದುವರಿಸಿದ ಸ್ಕಿವರ್‌ ಬ್ರಂಟ್‌ ಅರ್ಧಶತಕ ಗಳಿಸುವ ಜೊತೆಗೆ ಕೊನೆಯವರೆಗೂ ಹೋರಾಡಿ ತಂಡವನ್ನು ಗೆಲುವಿನ ಹಾದಿಗೆ ತಂದರು. ಬ್ರಂಟ್‌ 55 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 60 ರನ್‌ ಸಿಡಿಸಿ ಮಿಂಚಿದರೆ, ಕೊನೆಯಲ್ಲಿ ಅಮೇಲಿ ಕೇರ್‌ 8 ಎಸೆತಗಳಲ್ಲಿ 14 ರನ್‌ ಚಚ್ಚಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್‌ 19.3 ಓವರ್‌ಗಳಲ್ಲಿ 134 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುವ ಮೂಲಕ ಒತ್ತಡಕ್ಕೆ ಸಿಲುಕಿತು. ಉತ್ತಮ ಫಾರ್ಮ್‌ನಲ್ಲಿದ್ದ ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಮೊದಲ ಓವರ್‌ನಲ್ಲೇ ವಿಕೆಟ್‌ ಒಪ್ಪಿಸಿ ಹೊರನಡೆದರು.

    ಶಫಾಲಿ ವರ್ಮಾ 4 ಎಸೆತಗಳಲ್ಲಿ 11 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಅಲಿಸ್ಸಾ ಕ್ಯಾಪ್ಸಿ ಕೂಡ ಮೊದಲ ಎಸೆತದಲ್ಲೇ ಇಸ್ಸಿ ವಾಂಗ್‌ಗೆ ವಿಕೆಟ್ ಒಪ್ಪಿಸಿದರು. ಜೆಮಿಮಾ ರೊಡ್ರಿಗಸ್‌ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ, 8 ಎಸೆತಗಳಲ್ಲಿ 9 ರನ್ ಗಳಿಸಿ ಕ್ಯಾಚ್‌ ನೀಡಿದರು. ಇದನ್ನೂ ಓದಿ: ಪ್ರಶ್ನೆಪತ್ರಿಕೆಯಲ್ಲಿ ಕೊಹ್ಲಿ ಫೋಟೋ ನೋಡಿ ವಿದ್ಯಾರ್ಥಿಗಳು ಶಾಕ್!

    ಮೆಗ್ ಲ್ಯಾನಿಂಗ್ ಮತ್ತು ಮಾರಿಜಾನ್ನೆ ಕಪ್ 21 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. 29 ಎಸೆತಗಳಲ್ಲಿ 35 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕಿ ಮೆಗ್‌ ಲ್ಯಾನಿಂಗ್‌ ಬೇಡದ ರನ್‌ ಕದಿಯಲು ಹೋಗಿ ರನೌಟ್‌ಗೆ ಬಲಿಯಾದರು. ಜೆಸ್ ಜೊನಾಸ್ಸೆನ್ 11 ಎಸೆತಗಳಲ್ಲಿ 2 ರನ್ ಗಳಿಸಿ ನಿರಾಸೆ ಮೂಡಿಸಿದರು. ಅರುಂಧತಿ ರಾಯ್ ಶೂನ್ಯಕ್ಕೆ ಔಟಾದರು.

    ಒಂದು ಹಂತದಲ್ಲಿ 100 ರನ್‌ಗಳ ಗಡಿ ದಾಟುವುದೇ ಕಷ್ಟ ಎನ್ನುವಂತಿದ್ದಾಗ ಕೊನೆಯಲ್ಲಿ ಶಿಖಾ ಪಾಂಡೆ ಮತ್ತು ರಾಧಾ ಯಾದವ್ ಭರ್ಜರಿ ಸಿಕ್ಸರ್‌, ಬೌಂಡರಿಗಳ ಆಟವಾಡಿ ತಂಡಕ್ಕೆ ಆಸರೆಯಾದರು. ಮುರಿಯದ ಕೊನೆಯ ವಿಕೆಟ್‌ ಜೊತೆಯಾಟಕ್ಕೆ ಈ ಜೋಡಿ 24 ಎಸೆತಗಳಲ್ಲಿ 52 ರನ್‌ ಚಚ್ಚಿತ್ತು. ರಾಧಾಯಾದವ್ 12 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿದರೆ, ಶಿಖಾ ಪಾಂಡೆ 17 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿದರು.

    ಬಿಗಿ ಬೌಲಿಂಗ್‌ ದಾಳಿ ನಡೆಸಿದ ಮುಂಬೈ ಇಂಡಿಯನ್ಸ್‌ ತಂಡದ ಪರವಾಗಿ ಇಸ್ಸಿ ವಾಂಗ್ 4 ಓವರ್ ಗಳಲ್ಲಿ 42 ರನ್ ನೀಡಿ 3 ವಿಕೆಟ್ ಪಡೆದರು. ಹೇಲಿ ಮ್ಯಾಥ್ಯೂಸ್ 4 ಓವರ್ ಗಳಲ್ಲಿ ಕೇವಲ 5 ರನ್ ನೀಡಿ 3 ವಿಕೆಟ್ ಪಡೆದರು. ಅಮೆಲಿ ಕೆರ್ 4 ಎಸೆತಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.

  • WPL 2023: ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ವಿಕೆಟ್‌ಗಳ ಜಯ – ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ

    WPL 2023: ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ವಿಕೆಟ್‌ಗಳ ಜಯ – ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ

    ಮುಂಬೈ: ಸಂಘಟಿತ‌ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವು ಯುಪಿ ವಾರಿಯರ್ಸ್‌ (UP Warriorz) ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ನೇರವಾಗಿ WPL ಫೈನಲ್‌ ಪ್ರವೇಶಿಸಿದೆ.

    ಮಂಗಳವಾರ ಮುಂಬೈನ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ನಡೆದ ಲೀಗ್‌ ಸುತ್ತಿನ ಕೊನೆಯ ಪಂದ್ಯದಲ್ಲಿ ಜಯ ದಾಖಲಿಸುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದು, ನೇರವಾಗಿ ಫೈನಲ್‌ ಪ್ರವೇಶಿಸಿದೆ. ಕ್ರಮವಾಗಿ 2-3ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್‌ ಹಾಗೂ ಯುಪಿ ವಾರಿಯರ್ಸ್‌ ಎಲಿಮಿನೇಟರ್‌ ಪಂದ್ಯದಲ್ಲಿ ಸೆಣಸಲಿವೆ. ಗೆದ್ದ ತಂಡ ಫೈನಲ್‌ ಪ್ರವೇಶಿಸಲಿದೆ. ಇದನ್ನೂ ಓದಿ: WPL 2023: ಮುಂಬೈಗೆ ಜಯ – RCB ಸೋಲಿನ ವಿದಾಯ

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 138 ರನ್‌ ಗಳಿಸಿತ್ತು. 139‌ ರನ್‌ ಗುರಿ ಪಡೆದ ಡೆಲ್ಲಿ 17.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: WPL 2023: ರೋಚಕ ಜಯದೊಂದಿಗೆ ಯುಪಿ ವಾರಿಯರ್ಸ್‌ ಪ್ಲೆ ಆಫ್‌ಗೆ – RCB ಮನೆಗೆ

    ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಮೆಗ್‌ ಲ್ಯಾನಿಂಗ್‌ (Meg Lanning), ಶಫಾಲಿ ವರ್ಮಾ ಉತ್ತಮ ಆರಂಭ ನೀಡಿದರು. ಶಫಾಲಿ 16 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 21 ರನ್‌ ಗಳಿಸಿದರೆ, ಮೆಗ್‌ ಲ್ಯಾನಿಂಗ್‌ 23 ಎಸತೆಗಳಲ್ಲಿ 39 ರನ್‌ (5 ಬೌಂಡರಿ, 2 ಸಿಕ್ಸರ್‌) ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅಲಿಸ್‌ ಕ್ಯಾಪ್ಸಿ 34 ರನ್‌ (4 ಬೌಂಡರಿ, 1 ಸಿಕ್ಸರ್‌) ಗಳಿಸಿದರೆ, ಆಲ್‌ರೌಂಡರ್‌ ಮಾರಿಜಾನ್ನೆ ಕಪ್‌ 31 ಎಸೆತಗಳಲ್ಲಿ 34 ರನ್‌ (4 ಬೌಂಡರಿ, 1 ಸಿಕ್ಸರ್‌) ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ 20 ಓವರ್‌ಗಳಲ್ಲಿ ಯುಪಿ ವಾರಿಯರ್ಸ್ ತಂಡ 6 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿತು. ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಪರವಾಗಿ ತಹಿಲಾ ಮೆಕ್‌ಗ್ರಾಥ್ ಅಜೇಯ 58 ರನ್‌ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಇದರೊಂದಿಗೆ ನಾಯಕಿ ಅಲಿಸ್ಸಾ ಹೀಲಿ ಅವರ 36 ರನ್‌ಗಳ ಕೊಡುಗೆ ತಂಡಕ್ಕೆ ನೆರವಾಯಿತು. ಉಳಿದಂತೆ ಯಾರೊಬ್ಬರೂ ಸ್ಥಿರವಾಗಿ ನಿಲ್ಲದ ಕಾರಣ ವಾರಿಯರ್ಸ್‌ ತಂಡ ಸಾಧಾರಣ ಮೊತ್ತವನ್ನಷ್ಟೇ ಗಳಿಸಲು ಶಕ್ತವಾಯಿತು.

    ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಬೌಲಿಂಗ್‌ನಲ್ಲಿ ಅಲಿಸ್‌ ಕ್ಯಾಪ್ಸಿ 3 ವಿಕೆಟ್ ಕಿತ್ತರೆ, ರಾಧಾ ಯಾದವ್ 2 ವಿಕೆಟ್, ಜೆಸ್ ಜೊನಾಸನ್‌ 1 ವಿಕೆಟ್‌ ಪಡೆದು ಮಿಂಚಿದರು.

  • WPL 2023: ಮುಂಬೈ ಇಂಡಿಯನ್ಸ್‌ಗೆ ಹೀನಾಯ ಸೋಲು – ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

    WPL 2023: ಮುಂಬೈ ಇಂಡಿಯನ್ಸ್‌ಗೆ ಹೀನಾಯ ಸೋಲು – ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

    ಮುಂಬೈ: ಅಲಿಸ್‌ ಕ್ಯಾಪ್ಸಿ, ಶಫಾಲಿ ವರ್ಮಾ (Shafali Verma) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ (Mumbai Indians) 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದು, ಪಾಯಿಂಟ್ಸ್‌ ಟೇಬಲ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 109 ರನ್‌ ಗಳಿಸಿತು. 110 ರನ್‌ಗಳ ಅಲ್ಪಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ನಿರಾಯಾಸವಾಗಿ 9 ಓವರ್‌ಗಳಲ್ಲೇ 1 ವಿಕೆಟ್‌ ನಷ್ಟಕ್ಕೆ 110 ಸಿಡಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: WPL 2023: ರೋಚಕ ಜಯದೊಂದಿಗೆ ಯುಪಿ ವಾರಿಯರ್ಸ್‌ ಪ್ಲೆ ಆಫ್‌ಗೆ – RCB ಮನೆಗೆ

    ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಮೆಗ್‌ ಲ್ಯಾನಿಂಗ್‌, ಶಫಾಲಿ ವರ್ಮಾ ಹಾಗೂ 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅಲಿಸ್‌ ಕ್ಯಾಪ್ಸಿ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸಿ ಮುಂಬೈ ಬೌಲರ್‌ಗಳಿಗೆ ನಿರುಣಿಸಿದರು.

    ಮೆಗ್‌ ಲ್ಯಾನಿಂಗ್‌ 22 ಎಸೆತಗಳಲ್ಲಿ 32 ರನ್‌ (4 ಬೌಂಡರಿ, 1 ಸಿಕ್ಸರ್‌), ಶಫಾಲಿ ವರ್ಮಾ 15 ಎಸೆತಗಳಲ್ಲಿ 33 ರನ್‌ (6 ಬೌಂಡರಿ, 1 ಸಿಕ್ಸರ್‌) ಸಿಡಿಸಿದ್ರೆ, ಕ್ಯಾಪ್ಸಿ 17 ಎಸೆತಗಳಲ್ಲಿ ಸ್ಫೋಟಕ 38 ರನ್‌ (5 ಸಿಕ್ಸರ್‌, 1 ಬೌಂಡರಿ) ಚಚ್ಚಿ ಗೆಲುವು ಸಾಧಿಸಿದರು‌. ಮೂಲಕ ಪಾಯಿಂಟ್ಸ್‌ ಟೇಬಲ್‌ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

    ಡೆಲ್ಲಿ, ಮುಂಬೈ ತಂಡಕ್ಕೆ ಇನ್ನೂ ಒಂದೊಂದು ಪಂದ್ಯಗಳು ಬಾಕಿಯಿದ್ದು, ಈ ಪಂದ್ಯದಲ್ಲಿ ಸೋತವರು ಎಲಿಮಿನೇಟರ್‌ ಪಂದ್ಯದಲ್ಲಿ ಸೆಣಸ‌ಲಿದ್ದಾರೆ. ಗೆದ್ದ ತಂಡ ಅಗ್ರಸ್ಥಾನದೊಂದಿಗೆ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಇದನ್ನೂ ಓದಿ: ಅಭಿಮಾನಿಯನ್ನ ಮದುವೆಯಾಗ್ತೀರಾ ಅಂತಾ ಕೇಳಿದ ರೋಹಿತ್ ಶರ್ಮಾ

    ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಸ್ತಿನ ಬೌಲಿಂಗ್ ದಾಳಿಗೆ ತತ್ತರಿಸಿತು. 2.1 ಓವರ್ ನಲ್ಲಿ ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್ ಕಳೆದುಕೊಂಡಿತು. ಯಸ್ತಿಕ ಭಾಟಿಯಾ 6 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾದರು, ಈ ಬೆನ್ನಲ್ಲೇ ನಾಟ್ ಸ್ಕಿವರ್‌ ಬ್ರಂಟ್ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ವಾಪಸಾದರು. ಮಾರಿಜಾನ್ನೆ ಕಪ್ ಒಂದೇ ಓವರ್ ನಲ್ಲಿ ಈ 2 ವಿಕೆಟ್ ಪಡೆಯುವ ಮೂಲಕ ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಆಘಾತ ನೀಡಿದರು. ಈ ಬೆನ್ನಲ್ಲೇ ಮುಂಬೈ ತಂಡದ ಒಂದೊಂದೆ ವಿಕೆಟ್‌ ಪತನಗೊಂಡಿತು.

    ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) 23 ರನ್, ಪೂಜಾ ವಸ್ತ್ರಾಕರ್ 26 ರನ್, ಇಸ್ಸಿ ವಾಂಗ್ 23 ರನ್ ಹಾಗೂ ಅಮನ್‌ಜೋತ್ ಕೌರ್ 19 ರನ್ ಗಳಿಸಿದರೂ ತಂಡ ಬೃಹತ್‌ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು.

    ಡೆಲ್ಲಿ ಪರ ಮಾರಿಜಾನ್ನೆ ಕಪ್, ಶಿಖಾ ಪಾಂಡೆ ಮತ್ತು ಜೆಸ್ ಜೊನಾಸೆನ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಅರುಂಧತಿ ರೆಡ್ಡಿ ಒಂದು ವಿಕೆಟ್ ಪಡೆದರು. ಮುಂಬೈ ಪರ ಹೇಲಿ ಮ್ಯಾಥಿವ್ಸ್‌ 1 ವಿಕೆಟ್‌ ಪಡೆದರು.

  • ಆಶ್ಲೀ ಗಾರ್ಡ್ನರ್ ಆಲ್‌ರೌಂಡರ್‌ ಆಟ – ಗುಜರಾತ್‌ಗೆ 11 ರನ್‌ಗಳ ಜಯ

    ಆಶ್ಲೀ ಗಾರ್ಡ್ನರ್ ಆಲ್‌ರೌಂಡರ್‌ ಆಟ – ಗುಜರಾತ್‌ಗೆ 11 ರನ್‌ಗಳ ಜಯ

    ಮುಂಬೈ: ಆಶ್ಲೀ ಗಾರ್ಡ್ನರ್ (Ashleigh Gardner) ಆಲ್‌ರೌಂಡರ್‌ ಆಟ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಗುಜರಾತ್ ಜೈಂಟ್ಸ್ (Gujarat Giants) ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ವಿರುದ್ಧ 11 ರನ್‌ಗಳ ರೋಚಕ ಜಯ ಸಾಧಿಸಿದೆ.

    ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಜೈಂಟ್ಸ್‌ ನಿಗದಿತ ಓವರ್‌ಗಳಲ್ಲಿ 147 ರನ್‌ ಗಳಿಸಿತು. 148 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.4 ಓವರ್‌ಗಳಲ್ಲಿ ಸರ್ವಪತನ ಕಂಡು 11 ರನ್‌ಗಳ ಸೋಲು ಅನುಭವಿಸಿತು. ಇದನ್ನೂ ಓದಿ: ವಿರಾಟ್ ಅಣ್ಣನ ಸಲಹೆ ಸಹಾಯವಾಯ್ತು – RCB ಗೆಲುವಿನ ನಂತ್ರ ಮಂದಾನ ಮುಖದಲ್ಲಿ ಮಂದಹಾಸ

    ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ ಆರಂಭಿಸಿದ ನಾಯಕಿ ಮೆಗ್ ಲ್ಯಾನ್ನಿಂಗ್ (Meg Lanning) ಮತ್ತು ಶಫಾಲಿ ವರ್ಮಾ (Shafali Verma) ಸೇರಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು. ಶಫಾಲಿ ವರ್ಮಾ 8 ರನ್ ಗಳಿಸಿ ಔಟಾದರೆ, ಮೆಗ್ ಲ್ಯಾನ್ನಿಂಗ್ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಆಲಿಸ್ ಕ್ಯಾಪ್ಸೆ 11 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 22 ರನ್ ಬಾರಿಸಿದರು. ಜೆಮಿಮಾ ರೋಡ್ರಿಗಸ್ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆಲ್‌ರೌಂಡರ್ ಮಾರಿಜಾನ್ನೆ ಕಪ್ 29 ಎಸೆತಗಳಲ್ಲಿ 36 ರನ್ ಬಾರಿಸಿದರು. ಜೆಸ್ ಜೊನಾಸ್ಸೆನ್ 4 ರನ್, ತಾನಿಯಾ ಭಾಟಿಯಾ 1 ರನ್ ಗಳಿಸಿದರೆ, ಕೊನೆಯಲ್ಲಿ ಅರುಂಧತಿ ರೆಡ್ಡಿ 17 ಎಸೆತಗಳಲ್ಲಿ 25 ರನ್ ಬಾರಿಸಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಅವರ ವಿಕೆಟ್ ಬೀಳುತ್ತಿದ್ದಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲು ಖಚಿತವಾಯಿತು.

    ಗುಜರಾತ್ ಜೈಂಟ್ಸ್ ಪರ ಸಂಘಟಿತ ಬೌಲಿಂಗ್‌ ದಾಳಿ ನಡೆಸಿದ ಕಿಮ್ ಗಾರ್ಥ್, ಆಶ್ಲೀಗ್ ಗಾರ್ಡ್ನರ್ ಹಾಗೂ ತನುಜಾ ಕನ್ವರ್ 2 ವಿಕೆಟ್ ಕಿತ್ತರು. ಉಳಿದಂತೆ ಸ್ನೇಹ ರಾಣಾ ಮತ್ತು ಹರ್ಲೀನ್ ಡಿಯೋಲ್ ತಲಾ ಒಂದೊಂದು ವಿಕೆಟ್ ಪಡೆದರು.

    ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ನೇಹ ರಾಣಾ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ಇದನ್ನೂ ಓದಿ: RCB ಪಂದ್ಯಗಳ ಟಿಕೆಟ್‌ ದರ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು – ಟಿಕೆಟ್‌ ಬುಕ್‌ ಮಾಡೋದು ಹೇಗೆ..?

    ಗುಜರಾತ್ ಜೈಂಟ್ಸ್ ತಂಡದ ಪರ ಸೋಫಿಯಾ ಡಂಕ್ಲೆ ಮತ್ತು ಲಾರಾ ವೊಲ್ವಾರ್ಡ್ಟ್ ಇನ್ನಿಂಗ್ಸ್ ಆರಂಭಿಸಿದರು. ಒಂದು ಓವರ್‌ನಲ್ಲಿ 4 ರನ್‌ಗಳಾಗುವಷ್ಟರಲ್ಲಿ ಸೋಫಿಯಾ ಡಂಕ್ಲೆ ವಿಕೆಟ್ ಕಳೆದುಕೊಂಡಿತು. ನಂತರ ಹರ್ಲೀನ್ ಡಿಯೋಲ್ ಉತ್ತಮ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. 33 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 31 ರನ್ ಗಳಿಸಿದ್ದ ಹರ್ಲೀನ್ ಡಿಯೋಲ್ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಗೂಡಿದ ಲಾರಾ ವೊಲ್ವಾರ್ಡ್ಟ್ ಹಾಗೂ ಆಶ್ಲೀ ಗಾರ್ಡ್ನರ್ ಬೆಂಕಿ ಬ್ಯಾಟಿಂಗ್‌ ಮಾಡಿದರು. ಲಾರಾ 45 ಎಸೆತಗಳಲ್ಲಿ 57 ರನ್ (6 ಬೌಂಡರಿ, 1 ಸಿಕ್ಸರ್) ಚಚ್ಚಿದರೆ, ಗಾರ್ಡ್ನರ್ 33 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ ಸ್ಫೋಟಕ 51 ರನ್ ಬಾರಿಸಿ ಅಜೇಯರಾಗುಳಿದರು.

    ಬೌಲಿಂಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಜೆಸ್ ಜೊನಾಸ್ಸೆನ್ 4 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮರಿಜಾನ್ನೆ ಕಪ್ ಮತ್ತು ಅರುಂಧತಿ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.

  • ಕೊನೆಯಲ್ಲಿ ಸಿಕ್ಸರ್‌, ಬೌಂಡರಿ – ಆರ್‌ಸಿಬಿ ಬಹುತೇಕ ಟೂರ್ನಿಯಿಂದ ಔಟ್‌

    ಕೊನೆಯಲ್ಲಿ ಸಿಕ್ಸರ್‌, ಬೌಂಡರಿ – ಆರ್‌ಸಿಬಿ ಬಹುತೇಕ ಟೂರ್ನಿಯಿಂದ ಔಟ್‌

    ಮುಂಬೈ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL 2023) ಸತತ 5 ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಆರ್‌ಸಿಬಿ ತಂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಸೋಮವಾರ ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವು ಆರ್‌ಸಿಬಿ ವಿರುದ್ಧ ರೋಚಕ ಜಯ ಸಾಧಿಸಿದ್ದು, ಆರ್‌ಸಿಬಿ (RCB) ತಂಡದ ಗೆಲುವಿನ ಕನಸಿಗೆ ತಣ್ಣೀರು ಎರಚಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 150 ರನ್‌ ಗಳಿಸಿತ್ತು. 151 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 19.4 ಓವರ್‌ಗಳಲ್ಲಿ 154 ರನ್‌ ಬಾರಿಸಿ ರೋಚಕ ಜಯ ಸಾಧಿಸಿದೆ.

    ಕೊನೆಯ ಓವರ್‌ನಲ್ಲಿ ಡೆಲ್ಲಿ ತಂಡದ ಗೆಲುವಿಗೆ 9 ರನ್‌ಗಳ ಅಗತ್ಯವಿತ್ತು. ಈ ವೇಳೆ ಮೊದಲ ಎರಡು ಎಸೆತದಲ್ಲಿ ಒಂದೊಂದು ರನ್‌ ತಂಡಕ್ಕೆ ಸೇರ್ಪಡೆಯಾಯಿತು. ನಂತರ ಕ್ರೀಸ್‌ನಲ್ಲಿ ಉಳಿದ ಜೆಸ್‌ ಜೋನಾಸೆನ್‌ 3ನೇ ಎಸೆತವನ್ನು ಸಿಕ್ಸ್‌ಗೆ, 4ನೇ ಎಸೆತವನ್ನು ಬೌಂಡರಿಗಟ್ಟಿ ಇನ್ನೂ ಎರಡು ಎಸೆತಗಳು ಬಾಕಿಯಿರುವಂತೆ ತಂಡವನ್ನು ಗೆಲ್ಲಿಸಿ ನಗೆಬೀರಿದರು. ಇದನ್ನೂ ಓದಿ: ಕೊನೆಯ ಪಂದ್ಯ ಡ್ರಾ – ಆಸೀಸ್ ವಿರುದ್ಧ ಸರಣಿ ಗೆದ್ದ ಭಾರತ

    ಆರಂಭಿಕ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೂರು ಮತ್ತು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಲಿಸ್ ಕ್ಯಾಪ್ಸಿ ಮತ್ತು ಜೆಮಿಮಾ ರೊಡ್ರಿಗಸ್‌ (Jemimah Rodrigues) ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು. ಕ್ಯಾಪ್ಸಿ 24 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 38 ರನ್‌ ಗಳಿಸಿದರೆ, ಜೆಮಿಮಾ 28 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 32 ರನ್‌ ಕಲೆಹಾಕಿ ತಂಡಕ್ಕೆ ನೆರವಾದರು.

    ನಂತರ ಮಾರಿಜಾನ್ನೆ ಕಪ್‌ ಹಾಗೂ ಜೆಸ್‌ ಜೊನಾಸೆನ್‌ (Jess Jonassen) ಜವಾಬ್ದಾರಿಯು ಬ್ಯಾಟಿಂಗ್‌ ನಿಂದ ತಂಡವನ್ನು ಗೆಲುವಿನ ಹಾದಿಗೆ ತಲುಪಿಸಿದರು. ತಾಳ್ಮೆಯ ಆಟವಾಡಿದ ಈ ಜೋಡಿ ಮುರಿಯದ 5ನೇ ವಿಕೆಟ್‌ಗೆ 45 ರನ್‌ ಕಲೆಹಾಕಿತು. ಮಾರಿಜಾನ್ನೆ ಕಪ್‌ 32 ಎಸೆತಗಳಲ್ಲಿ 32 ರನ್‌ (3 ಬೌಂಡರಿ, 1 ಸಿಕ್ಸರ್‌) ಗಳಿಸಿದ್ರೆ, ಜೊನಾಸೆನ್‌ 15 ಎಸೆತಗಳಲ್ಲಿ ಭರ್ಜರಿ 29 ರನ್‌ (4 ಬೌಂಡರಿ, 1 ಸಿಕ್ಸರ್‌) ಚಚ್ಚಿ ಮಿಂಚಿದರು.

    ಡೆಲ್ಲಿ ತಂಡದ ಪರ ನಾಯಕಿ ಮೆಗ್‌ ಲ್ಯಾನಿಂಗ್‌ (Meg Lanning) 15 ರನ್‌ ಗಳಿಸಿದ್ರೆ, ಶಫಾಲಿ ವರ್ಮಾ ಶೂನ್ಯಕ್ಕೆ ನಿರ್ಗಮಿಸಿದರು. ಆರ್‌ಸಿಬಿ ಪರ ಸೋಭಾನ ಆಶಾ 2 ವಿಕೆಟ್‌ ಪಡೆದರೆ, ಮೇಗನ್ ಶುಟ್ ಹಾಗೂ ಪ್ರೀತಿ ಬೋಸ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಸಿಕ್ಸರ್, ಬೌಂಡರಿ ಆಟ – ಹರ್ಮನ್‌ಪ್ರೀತ್ ಕೌರ್ ಫಿಫ್ಟಿ; ಮುಂಬೈಗೆ 8 ವಿಕೆಟ್‌ಗಳ ಜಯ

    ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ (Smriti Mandhana) ಮತ್ತೊಮ್ಮೆ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿ ಟೀಕೆಗೆ ಗುರಿಯಾದರು. 15 ಎಸೆತಗಳಲ್ಲಿ 8 ರನ್ ಗಳಿಸಿ ಮಂದಾನ ವಿಕೆಟ್‌ ಒಪ್ಪಿಸಿದರು. ಈ ಬೆನ್ನಲ್ಲೇ ಸೋಫಿ ಡಿವೈನ್ 21 ರನ್‌ ಗಳಿಸಿ ಔಟಾದರು. ನಂತರ ಬಂದ ಎಲ್ಲಿಸ್ ಪೆರ್ರಿ 52 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 67 ರನ್ ಬಾರಿಸಿ ತಂಡಕ್ಕೆ ನೆರವಾದರು. ಈ ವೇಳೆ ಜೊತೆಗೂಡಿದ ರಿಚಾ ಘೋಷ್‌ 16 ಎಸೆತಗಳಲ್ಲಿ ಸ್ಫೋಟಕ 37 ರನ್ (3 ಬೌಂಡರಿ, 3 ಸಿಕ್ಸರ್‌) ಬಾರಿಸಿದರೆ, ಕೊನೆಯಲ್ಲಿ ಬಂದ ಶ್ರೇಯಾಂಕ ಪಾಟೀಲ್ 4 ರನ್ ಗಳಿಸಿದರು. ಹೀದರ್ ನೈಟ್ 11 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

    ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಶಿಖಾ ಪಾಂಡೆ 4 ಓವರ್‌ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರೆ, ತಾರಾ ನಾರ್ರಿಸ್ 3 ಓವರ್‌ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು.