Tag: Delhi Capitals

  • ಡೆಲ್ಲಿಗೆ 6 ವಿಕೆಟ್‌ಗಳ ಭರ್ಜರಿ ಜಯ – ಕೊನೆಯ ಸ್ಥಾನಕ್ಕೆ ಜಾರಿದ ಆರ್‌ಸಿಬಿ

    ಡೆಲ್ಲಿಗೆ 6 ವಿಕೆಟ್‌ಗಳ ಭರ್ಜರಿ ಜಯ – ಕೊನೆಯ ಸ್ಥಾನಕ್ಕೆ ಜಾರಿದ ಆರ್‌ಸಿಬಿ

    ಲಕ್ನೋ: ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಗೆಲ್ಲಲು 168 ರನ್‌ಗಳ ಸವಾಲು ಪಡೆದ ಡೆಲ್ಲಿ ಇನ್ನೂ 11 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 170 ರನ್‌ ಹೊಡೆದು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಿಗಿದಿದೆ.

    ಡೇವಿಡ್‌ ವಾರ್ನರ್‌ (David Warner) ಬೇಗನೇ ಔಟಾದರೂ ಪೃಥ್ವಿ ಶಾ 32 ರನ್‌ (22 ಎಸೆತ, 4 ಬೌಂಡರಿ), ಜೇಕ್ ಫ್ರೇಸರ್ 55 ರನ್(35‌ ಎಸೆತ, 2 ಬೌಂಡರಿ, 5 ಸಿಕ್ಸರ್‌), ರಿಷಭ್‌ ಪಂತ್‌ (Rishab Pant) 41 ರನ್‌(24 ಎಸೆತ, 4 ಬೌಂಡರಿ, 2 ಸಿಕ್ಸ್‌) ಸಿಡಿಸಿದ ಪರಿಣಾಮ ಡೆಲ್ಲಿ ಜಯಗಳಿಸಿತು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಲಕ್ನೋಗೆ ಕ್ವಿಂಟನ್‌ ಡಿ ಕಾಕ್‌ 19 ರನ್‌, ನಾಯಕ ಕೆಎಲ್‌ ರಾಹುಲ್‌ (KL Rahul) 39 ರನ್‌(22 ಎಸೆತ, 5 ಬೌಂಡರಿ, 1 ಸಿಕ್ಸರ್‌), ಕೊನೆಯಲ್ಲಿ ಆಯುಷ್ ಬದೋನಿ ಅವರ ಸ್ಫೋಟಕ ಔಟಾಗದೇ 55 ರನ್‌(35 ಎಸೆತ, 5 ಬೌಂಡರಿ, 1 ಸಿಕ್ಸರ್‌) ನೆರವಿನಿಂದ ಲಕ್ನೋ 7 ವಿಕೆಟ್‌ ನಷ್ಟಕ್ಕೆ 167 ರನ್‌ ಹೊಡೆಯಿತು.  ಕುಲದೀಪ್‌ ಯಾದವ್‌ 20 ರನ್‌ ನೀಡಿ 3 ವಿಕೆಟ್‌ ಕಿತ್ತರು.

    ಕೊನೆಯಲ್ಲಿ ಆರ್‌ಸಿಬಿ:
    ಇಂದಿನ ಪಂದ್ಯವನ್ನು ಡೆಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಏರಿದರೆ ಆರ್‌ಸಿಬಿ (RCB) ಕೊನೆಯ ಸ್ಥಾನಕ್ಕೆ ಜಾರಿದೆ. ಡೆಲ್ಲಿ 6 ಪಂದ್ಯಗಳ ಪೈಕಿ 2 ರಲ್ಲಿ ಜಯ ಸಾಧಿಸಿದ್ದರೆ ಆರ್‌ಸಿಬಿ 6 ಪಂದ್ಯಗಳ ಪೈಕಿ 5 ರಲ್ಲಿ ಸೋಲುವ ಮೂಲಕ 2 ಅಂಕ ಸಂಪಾದಿಸಿ 10ನೇ ಸ್ಥಾನಕ್ಕೆ ಕುಸಿದಿದೆ.

  • IPL 2024: ಕೊನೆಗೂ ಗೆಲುವಿನ ಖಾತೆ ತೆರೆದ ಮುಂಬೈ – ಜಿದ್ದಾಜಿದ್ದಿ ಕಣದಲ್ಲಿ ಹೋರಾಡಿ ಸೋತ ಡೆಲ್ಲಿ

    IPL 2024: ಕೊನೆಗೂ ಗೆಲುವಿನ ಖಾತೆ ತೆರೆದ ಮುಂಬೈ – ಜಿದ್ದಾಜಿದ್ದಿ ಕಣದಲ್ಲಿ ಹೋರಾಡಿ ಸೋತ ಡೆಲ್ಲಿ

    – ಪಾಂಡ್ಯ ಫುಲ್‌ ಖುಷ್‌, ಟ್ರಿಸ್ಟಾನ್‌ ಸ್ಟಬ್ಸ್‌ ಸ್ಫೋಟಕ ಅರ್ಧಶತಕ ವ್ಯರ್ಥ

    ಮುಂಬೈ: ಕೊನೇ ಓವರ್‌ವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ (Hardik Pandya) ನಾಯಕತ್ವದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 29 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಗೆಲುವಿನ ಖಾತೆ ತೆರೆದಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 234 ರನ್‌ ಗಳಿಸಿತ್ತು. 235 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 3.4 ಓವರ್‌ಗಳಲ್ಲೇ ಡೇವಿಡ್‌ ವಾರ್ನರ್‌ (10 ರನ್‌) ಅವರ ವಿಕೆಟ್‌ ಕಳೆದುಕೊಂಡಿತು. ಈ ವೇಳೆ ತಂಡದ ಮೊತ್ತ 22 ಆಗಿತ್ತು. ಬಳಿಕ ಜೊತೆಗೂಡಿದ ಅಭಿಷೇಕ್‌ ಪೋರೆಲ್‌ ಹಾಗೂ ಪೃಥ್ವಿ ಶಾ ಜೋಡಿ ತಂಡಕ್ಕೆ ಚೇತರಿಕೆ ನೀಡಿತ್ತು. ಅಲ್ಲದೇ ಟ್ರಿಸ್ಟಾನ್ಸ್‌ ಸಬ್ಟ್‌ ಅವರ ಸ್ಫೋಟಕ ಪ್ರದರ್ಶನ ತಂಡದಲ್ಲಿ ಗೆಲುವಿನ ಕನಸು ಚಿಗುರಿಸಿತ್ತು. ಆದ್ರೆ ಇತರೆ ಬ್ಯಾಟರ್‌ಗಳ ಸಾಥ್‌ ನೀಡದೇ ತಂಡ ಸೋಲನುಭವಿಸಿತು.

    ಡೆಲ್ಲಿ ಪರ ಕೊನೇವರೆಗೂ ಹೋರಾಡಿದ ಸ್ಟಬ್ಸ್‌ 71 ರನ್‌ (25 ಎಸೆತ, 7 ಸಿಕ್ಸರ್‌, 3 ಬೌಂಡರಿ), ಪೃಥ್ವಿ ಶಾ 40 ಎಸೆತಗಳಲ್ಲಿ 66 ರನ್‌ (3 ಸಿಕ್ಸರ್‌, 8 ಬೌಂಡರಿ), ಅಭಿಷೇಕ್‌ 31 ಎಸೆತಗಳಲ್ಲಿ 41 ರನ್‌, ಡೇವಿಡ್‌ ವಾರ್ನರ್‌ 10 ರನ್‌, ರಿಷಭ್‌ ಪಂತ್‌ 1 ರನ್‌, ಅಕ್ಷರ್‌ ಪಟೇಲ್‌ 8 ರನ್‌, ಲಲಿತ್‌ ಯಾದವ್‌ 3 ರನ್‌, ಜೇ ರಿಚ್ಚರ್ಡ್‌ಸನ್‌ 2 ರನ್‌ ಗಳಿಸಿದರು. ಮುಂಬೈ ಪರ ಜೆರಾಲ್ಡ್ ಕೋಟ್ಜಿ 4 ವಿಕೆಟ್‌ ಕಿತ್ತರೆ, ಜಸ್ಪ್ರೀತ್‌ ಬುಮ್ರಾ 2 ವಿಕೆಟ್‌ ಹಾಗೂ ಶೆಫರ್ಡ್‌ 1 ವಿಕೆಟ್‌ ಪಡೆದು ಮಿಂಚಿದರು.

    ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಮುಂಬೈ ಇಂಡಿಯನ್ಸ್‌ ಪರ ಬ್ಯಾಟರ್‌ಗಳು ಸಂಘಟಿತ ಪ್ರದರ್ಶನ ನೀಡಿದರು. ಯಾರೊಬ್ಬರೂ ಅರ್ಧಶತಕ ಗಳಿಸದಿದ್ದರೂ 200 ರನ್‌ಗಳ ಗಡಿ ದಾಟುವಲ್ಲಿ ಮುಂಬೈ ಯಶಸ್ವಿಯಾಯಿತು.

    ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಜೋಡಿ ಮೊದಲ 7 ಓವರ್‌ಗಳಲ್ಲಿ 80 ರನ್‌ ಬಾರಿಸಿತ್ತು. ನಂತರ ಕ್ರೀಸ್‌ಗಿಳಿದವರಲ್ಲಿ ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ ಹೊರತುಪಡಿಸಿದ್ರೆ ಉಳಿದ ಆಟಗಾರರು ಸಾಮರ್ಥ್ಯ ಪ್ರದರ್ಶಿಸುವಲ್ಲಿ ಯಶಸ್ವಿಯಾದರು.

    ಮುಂಬೈ ಪರ ರೋಹಿತ್‌ ಶರ್ಮಾ 49 ರನ್‌ (27 ಎಸೆತ, 3 ಸಿಕ್ಸರ್‌, 6 ಬೌಂಡರಿ), ಇಶಾನ್‌ ಕಿಶನ್‌ 42 ರನ್‌ (23 ಎಸೆತ, 4 ಬೌಂಡರಿ, 2 ಸಿಕ್ಸರ್‌), ಟಿಮ್‌ ಡೇವಿಡ್‌ 45 ರನ್‌ (21 ಎಸೆತ, 4 ಸಿಕ್ಸರ್‌, 2 ಬೌಂಡರಿ), ರೊಮಾರಿಯೋ ಶೆಫರ್ಡ್ ಸ್ಫೋಟಕ 39 ರನ್‌ (10 ಎಸೆತ, 4 ಸಿಕ್ಸರ್‌, 3 ಬೌಂಡರಿ), ಹಾರ್ದಿಕ್‌ ಪಾಂಡ್ಯ 39 ರನ್‌ ಚಚ್ಚಿದರೆ, ತಿಲಕ್‌ ವರ್ಮಾ 6 ರನ್‌, ಸೂರ್ಯಕುಮಾರ್‌ ಯಾದವ್‌ ಶೂನ್ಯ ಸುತ್ತಿದರು. ಹೆಚ್ಚುವರಿ 14 ರನ್‌ ತಂಡಕ್ಕೆ ಸೇರ್ಪಡೆಯಾಯಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಕ್ಷರ್‌ ಪಟೇಲ್‌ ಮತ್ತು ಅನ್ರಿಚ್ ನಾರ್ಟ್ಜೆ ತಲಾ ಎರಡು ವಿಕೆಟ್‌ ಕಿತ್ತರು, ಖಲೀಲ್‌ ಅಹ್ಮದ್‌ ಒಂದು ವಿಕೆಟ್‌ ಪಡೆದರು.

  • ರಿಷಭ್‌ ಪಂತ್‌ ಸೇರಿದಂತೆ ಇಡೀ ಡೆಲ್ಲಿ ತಂಡಕ್ಕೆ ಭಾರೀ ದಂಡ

    ರಿಷಭ್‌ ಪಂತ್‌ ಸೇರಿದಂತೆ ಇಡೀ ಡೆಲ್ಲಿ ತಂಡಕ್ಕೆ ಭಾರೀ ದಂಡ

    ವಿಶಾಖಪಟ್ಟಣಂ: ಸತತ ಎರಡು ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡದ ನಾಯಕ ರಿಷಭ್‌ ಪಂತ್‌ಗೆ ಬಿಸಿಸಿಐ (BCCI) 24 ಲಕ್ಷ ರೂ. ದಂಡ ವಿಧಿಸಿದೆ.

    ರಿಷಭ್‌ ಪಂತ್‌ (Rishabh Pant) ಅವರಿಗೆ 24 ಲಕ್ಷ ರೂ. ದಂಡ ವಿಧಿಸಿದರೆ ತಂಡದ ಇಂಪ್ಯಾಕ್ಟ್‌ ಆಟಗಾರ ಅಭಿಷೇಕ್‌ ಸೇರಿದಂತೆ ಉಳಿದ ಆಟಗಾರರಿಗೆ 6 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಬುಧವಾರ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧ ನಿಧಾನಗತಿಯ ಬೌಲಿಂಗ್‌ ಮಾಡಿದ್ದರೆ, ಮಾರ್ಚ್‌ 21 ರಂದು ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ವಿರುದ್ದದ ಪಂದ್ಯದಲ್ಲಿ ಡೆಲ್ಲಿ ನಿಧಾನಗತಿಯ ಬೌಲಿಂಗ್‌ ಮಾಡಿತ್ತು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಕೋಲ್ಕತ್ತಾ 7 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 272 ರನ್ ಹೊಡೆದಿತ್ತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ 17.2 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್‌ ಆಯ್ತು. ಇದನ್ನೂ ಓದಿ: 2ನೇ ಬಾರಿಗೆ ಆರ್‌ಸಿಬಿ ದಾಖಲೆ ನುಚ್ಚುನೂರು – ಐಪಿಎಲ್‌ ಇತಿಹಾಸದಲ್ಲಿ ಮತ್ತೊಂದು ವಿಶೇಷ ಸಾಧನೆ

    24 ಲಕ್ಷ ಯಾಕೆ?
    ಐಪಿಎಲ್‌ನಲ್ಲಿ ಮೊದಲ ಬಾರಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. ಎರಡನೇ ಬಾರಿ ಈ ತಪ್ಪನ್ನು ಮಾಡಿದರೆ ನಾಯಕನಿಗೆ 24 ಲಕ್ಷ ರೂ. ದಂಡದ ಜೊತೆ ಆಟಗಾರರಿಗೂ ದಂಡ ವಿಧಿಸಲಾಗುತ್ತದೆ.

    ಐಪಿಎಲ್‌ ನಿಯಮದ ಪ್ರಕಾರ ಒಂದು ತಂಡ 20 ಓವರ್‌ಗಳನ್ನು 90 ನಿಮಿಷದ ಒಳಗಡೆ ಮುಗಿಸಬೇಕು. ಈ ಅವಧಿಯಲ್ಲಿ ಓವರ್‌ಗಳನ್ನು ಪೂರ್ಣ ಮಾಡದೇ ಇದ್ದರೂ 20ನೇ ಓವರ್‌ ಅನ್ನು 90ನೇ ನಿಮಿಷದಲ್ಲೇ ಆರಂಭಿಸಬೇಕು. ಈ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದರೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ.

    ಪ್ರತಿ ಪಂದ್ಯದಲ್ಲಿ 2 ನಿಮಿಷ 30 ಸೆಕೆಂಡಿನ 4 ಸ್ಟ್ರಟೆಜಿಕ್‌ ಟೈಮ್‌ ಔಟ್‌ ಬ್ರೇಕ್‌ಗಳು ಇರುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ತಂಡ 6-9 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. ಎರಡನೇ ಸ್ಟ್ರಟೆಜಿಕ್‌ ಟೈಮ್‌ ಔಟ್‌ ಅನ್ನು ಬ್ಯಾಟಿಂಗ್ ತಂಡ 13-16 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.  ಇದನ್ನೂ ಓದಿ: ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಮಳೆ – ಯಾವ ಜಿಲ್ಲೆಗಳಲ್ಲಿ ಯಾವಾಗ ಮಳೆ?

    ದಂಡ ಯಾಕೆ?
    ಐಪಿಎಲ್‌ ಅಂದ್ರೆ ಬಿಸಿನೆಸ್‌. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ.

    ಮಳೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾದರೆ ಅದು ಬೇರೆ ವಿಷಯ. ಆದರೆ ಒಂದು ತಂಡ ನಿಧಾನಗತಿ ಬೌಲಿಂಗ್‌ ಮಾಡಿದರೆ ಅದು ಐಪಿಎಲ್‌ ದಿನದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚಗಳು ಜಾಸ್ತಿಯಾಗುತ್ತದೆ.

    ಐಪಿಎಲ್‌ಗೆ ಹೆಚ್ಚಿನ ಆದಾಯ ಬರುತ್ತಿರುವುದು ಟಿವಿ ರೈಟ್ಸ್‌ನಿಂದ. ಟಿವಿಯಲ್ಲಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ. ಅದರಲ್ಲೂ 2 ಪಂದ್ಯ ಒಂದೇ ದಿನ ನಿಗದಿಯಾದರೆ ಎರಡನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಯಾಕೆಂದರೆ ಜಾಹೀರಾತುಗಳು ಮೊದಲೇ ಬುಕ್‌ ಆಗಿರುತ್ತದೆ.

    ಏನೇ ಮಾಡಿದರೂ ಶಿಸ್ತು ಇರಬೇಕು. ಹೀಗಾಗಿ ಯಾರಿಗೂ ಸಮಸ್ಯೆ ಆಗದೇ ಇರಲು ಮತ್ತು ಎಲ್ಲ ಸರಿಯಾದ ಸಮಯಕ್ಕೆ ಮುಕ್ತಾಯವಾಗಲು ಪಂದ್ಯ ಮುಗಿಯಲು ಸಮಯವನ್ನು ನಿಗದಿ ಮಾಡಲಾಗಿದೆ. ಹೆಚ್ಚು ಸಮಯ ತೆಗೆದುಕೊಂಡರೆ ದಂಡ ವಿಧಿಸಲಾಗುತ್ತದೆ. ಈ ಕಾರಣಕ್ಕೆ ಶಿಸ್ತುಬದ್ಧವಾಗಿ ನಡೆದುಕೊಂಡ ತಂಡಕ್ಕೆ ಫೇರ್‌ ಪ್ಲೇ ಅಂಕಗಳನ್ನು ನೀಡಲಾಗುತ್ತದೆ. ಇಬ್ಬರು ಫೀಲ್ಡ್‌ ಅಂಪೈರ್‌ ಮತ್ತು ಮೂರನೇ ಅಂಪೈರ್‌ ಈ ಅಂಕವನ್ನು ತಂಡಗಳಿಗೆ ನೀಡುತ್ತಾರೆ.

     

  • ‌ಕೆಕೆಆರ್‌ ರನ್‌ ಹೊಳೆಯಲ್ಲಿ ಮುಳುಗಿದ ಡೆಲ್ಲಿ – ನೈಟ್‌ರೈಡರ್ಸ್‌ಗೆ 106 ರನ್‌ಗಳ ಭರ್ಜರಿ ಜಯ

    ‌ಕೆಕೆಆರ್‌ ರನ್‌ ಹೊಳೆಯಲ್ಲಿ ಮುಳುಗಿದ ಡೆಲ್ಲಿ – ನೈಟ್‌ರೈಡರ್ಸ್‌ಗೆ 106 ರನ್‌ಗಳ ಭರ್ಜರಿ ಜಯ

    – ಸಿಕ್ಸರ್‌, ಬೌಂಡರಿ ಸುರಿಮಳೆ – ಪಂತ್‌ ಸ್ಪೋಟಕ ಅರ್ಧಶತಕ ವ್ಯರ್ಥ

    ವಿಶಾಖಪಟ್ಟಣಂ: ಸುನೀಲ್‌ ನರೇನ್‌, ರಘುವಂಶಿ, ರಿಂಕು, ರಸೆಲ್‌ ಸ್ಫೋಟಕ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 106 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಅಲ್ಲದೇ ಅಧಿಕ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

    ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 272 ರನ್‌ ಸಿಡಿಸಿತ್ತು. ಈ ಗುರಿ ಡೆಲ್ಲಿ ಕ್ಯಾಪಿಟಲ್ಸ್‌ 17.2 ಓವರ್‌ಗಳಲ್ಲೇ 166 ರನ್‌ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.

    273‌ ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭದಲ್ಲೇ ಸ್ಫೋಟಕ ಪ್ರದರ್ಶನ ನೀಡಲು ಮುಂದಾಯಿತು. ಆದ್ರೆ ರನ್‌ ಕಲೆಹಾಕುವ ಅವಸರದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಷಭ್‌ ಪಂತ್‌, ಟ್ರಿಸ್ಟಾನ್‌ ಸ್ಟಬ್ಸ್‌ ಸ್ಫೋಟಕ ಅರ್ಧಶತಕಗಳ ಹೋರಾಟವೂ ವ್ಯರ್ಥವಾಯಿತು.

    ಡೆಲ್ಲಿ ಪರ 220 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ರಿಷಭ್‌ ಪಂತ್‌ (Rishabh Pant) 55 ರನ್‌ (25 ಎಸೆತ, 5 ಸಿಕ್ಸರ್‌, 4 ಬೌಂಡರಿ), ಸ್ಟಬ್ಸ್‌ 54 ರನ್‌ (32 ಎಸೆತ, 4 ಸಿಕ್ಸರ್‌, 4 ಬೌಂಡರಿ), ಡೇವಿಡ್‌ ವಾರ್ನರ್‌ (David Warner) 18 ರನ್‌, ಪೃಥ್ವಿ ಶಾ 10 ರನ್‌ ಗಳಿಸಿದರೆ, ಮಿಚೆಲ್‌ ಮಾರ್ಷ್‌ ಹಾಗೂ ಅಭಿಷೇಕ್‌ ಪೋರೆಲ್‌ ಶೂನ್ಯ ಸುತ್ತಿದರು. ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನೆಲೆಯೂರದೇ ಪೆವಿಲಿಯನ್‌ ಪರೇಡ್‌ ನಡೆಸಿದರು. ಅಂತಿಮವಾಗಿ ಡೆಲ್ಲಿ 166 ರನ್‌ಗಳಿಗೆ ಆಲೌಟ್‌ ಆಯಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ವೈಭವ್‌ ಅರೋರ ಮತ್ತು ವರುಣ್‌ ಚಕ್ರವರ್ತಿ ತಲಾ 3 ವಿಕೆಟ್‌ ಕಿತ್ತರೆ, ದುಬಾರಿ ಆಟಗಾರ ಮಿಚೆಲ್‌ ಸ್ಟಾರ್ಕ್‌ 2 ವಿಕೆಟ್‌ ಹಾಗೂ ಆಂಡ್ರೆ ರಸೆಲ್‌, ಸುನೀಲ್‌ ನರೇನ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಕೆಕೆಆರ್‌ 7 ವಿಕೆಟ್‌ ನಷ್ಟಕ್ಕೆ 20 ಓವರ್‌ಗಳಲ್ಲಿ 272 ರನ್‌ ಬಾರಿಸಿತ್ತು. ಪಿಲ್‌ ಸಾಲ್ಟ್‌ 18 ರನ್‌, ಸುನೀಲ್‌ ನರೇನ್‌ 85 ರನ್‌ (39 ಎಸೆತ, 7 ಸಿಕ್ಸರ್‌, 7 ಬೌಂಡರಿ), ರಘು ವಂಶಿ 54 ರನ್‌ (27 ಎಸೆತ, 3 ಸಿಕ್ಸರ್‌, 5 ಬೌಂಡರಿ), ರಸೆಲ್‌ 41 ರನ್‌ (19 ಎಸೆತ, 3 ಸಿಕ್ಸರ್‌, 4 ಬೌಂಡರಿ), ರಿಂಕು ಸಿಂಗ್‌ 26 ರನ್‌ (8 ಎಸೆತ, 3 ಸಿಕ್ಸರ್‌, 1 ಬೌಂಡರಿ), ಶ್ರೇಯಸ್‌ ಅಯ್ಯರ್‌ 18 ರನ್‌, ವೆಂಕಟೇಶ್‌ ಅಯ್ಯರ್‌ 5 ರನ್‌, ರಮಣದೀಪ್‌ ಸಿಂಗ್‌ 2 ರನ್‌, ಮಿಚೆಲ್‌ ಸ್ಟಾರ್ಕ್‌ 1 ರನ್‌ ಗಳಿಸಿದರು. ಅಲ್ಲದೇ ತಂಡಕ್ಕೆ ಹೆಚ್ಚುವರಿ 22 ರನ್‌ಗಳು ತಂಡಕ್ಕೆ ಸೇರ್ಪಡೆಯಾಯಿತು.

    ಬಲ ನೀಡಿದ ಶತಕ, ಅರ್ಧಶತಕಗಳ ಜೊತೆಯಾಟ:
    ಆರಂಭದಿಂದಲೇ ಡೆಲ್ಲಿ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದ ಕೆಕೆಆರ್‌ ಬ್ಯಾಟರ್‌ಗಳು ಕೊನೇವರೆಗೂ ಕ್ರೀಸ್‌ನಲ್ಲಿ ಅಬ್ಬರಿಸಿದರು. ಮೊದಲ ವಿಕೆಟ್‌ಗೆ ಪಿಲ್‌ ಸಾಲ್ಟ್‌ – ಸುನೀಲ್‌ ನರೇನ್‌ ಜೋಡಿ 27 ಎಸೆತಗಳಲ್ಲಿ 60 ರನ್‌ ಬಾರಿಸಿದರೆ, 2ನೇ ವಿಕೆಟ್‌ಗೆ ರಘುವಂಶಿ ಮತ್ತು ಸುನೀಲ್‌ ನರೇನ್‌ ಜೋಡಿ 48 ಎಸೆತಗಳಲ್ಲಿ ಬರೋಬ್ಬರಿ 104 ರನ್‌ ಕಲೆಹಾಕಿತು. ಈ ಬೆನ್ನಲ್ಲೇ ರಸೆಲ್‌-ಅಯ್ಯರ್‌ ಜೋಡಿ ಕೇವಲ 24 ಎಸೆತಗಳಲ್ಲಿ ಸ್ಫೋಟಕ 56 ರನ್‌ ಬಾರಿಸಿದರೆ, ರಿಂಕು-ರಸೆಲ್‌ ಜೋಡಿ ಕೇವಲ 11 ಎಸೆತಗಳಲ್ಲಿ 32 ರನ್‌ ಚಚ್ಚಿತು. ಪರಿಣಾಮ ತಂಡದ ಮೊತ್ತ 270 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಪರ ಅನ್ರಿಚ್ ನಾರ್ಟ್ಜೆ 3 ವಿಕೆಟ್‌ ಕಿತ್ತರೆ, ಇಶಾಂತ್‌ ಶರ್ಮಾ 2 ವಿಕೆಟ್‌ ಹಾಗೂ ಖಲೀಲ್‌ ಅಹ್ಮದ್‌ ಮತ್ತು ಮಿಚೆಲ್‌ ಮಾರ್ಷ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಕೆಕೆಆರ್‌ ರನ್‌ ಏರಿದ್ದು ಹೇಗೆ?
    50 ರನ್‌ 23 ಎಸೆತ
    100 ರನ್‌ 45 ಎಸೆತ
    150 ರನ್‌ 66 ಎಸೆತ
    200 ರನ್‌ 92 ಎಸೆತ
    250 ರನ್‌ 111 ಎಸೆತ
    272 ರನ್‌ 120 ಎಸೆತ

  • 2ನೇ ಬಾರಿಗೆ ಆರ್‌ಸಿಬಿ ದಾಖಲೆ ನುಚ್ಚುನೂರು – ಐಪಿಎಲ್‌ ಇತಿಹಾಸದಲ್ಲಿ ಮತ್ತೊಂದು ವಿಶೇಷ ಸಾಧನೆ

    2ನೇ ಬಾರಿಗೆ ಆರ್‌ಸಿಬಿ ದಾಖಲೆ ನುಚ್ಚುನೂರು – ಐಪಿಎಲ್‌ ಇತಿಹಾಸದಲ್ಲಿ ಮತ್ತೊಂದು ವಿಶೇಷ ಸಾಧನೆ

    ವಿಶಾಖಪಟ್ಟಣಂ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬ್ಯಾಟರ್‌ಗಳರು ಸಿಕ್ಸರ್‌, ಬೌಂಡರಿ ಚಚ್ಚಿದ ಪರಿಣಾಮ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು ಐಪಿಎಲ್‌ನಲ್ಲಿ (IPL) ಮತ್ತೊಂದು ವಿಶೇಷ ಸಾಧನೆ ಮಾಡಿದೆ.

    7 ವಿಕೆಟ್‌ ನಷ್ಟಕ್ಕೆ 272 ರನ್‌ ಸಿಡಿಸುವ ಮೂಲಕ ಐಪಿಎಲ್‌ ಟೂರ್ನಿ ಇತಿಹಾಸದಲ್ಲೇ ಅತಿ ಹೆಚ್ಚು ರನ್‌ ಸಿಡಿಸಿದ 2ನೇ ತಂಡ ಹೆಗ್ಗಳಿಗೆಕೆ ಕೆಕೆಆರ್‌ ತಂಡ ಪಾತ್ರವಾಗಿದೆ. ಈ ಹಿಂದೆ ಅತಿ ಹೆಚ್ಚು ರನ್‌ ಸಿಡಿಸಿದ ದಾಖಲೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಹೆಸರಿನಲ್ಲಿತ್ತು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 263 ರನ್‌ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್‌ ಗೇಲ್‌ ಔಟಾಗದೇ 175 ರನ್‌ ಚಚ್ಚಿದ್ದರು.

    ಆದ್ರೆ ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 277 ಬಾರಿಸುವ ಮೂಲಕ ಆರ್‌ಸಿಬಿ ಹೆಸರಿನಲ್ಲಿದ್ದ ದಾಖಲೆಯನ್ನು ನುಚ್ಚುನೂರು ಮಾಡಿತ್ತು. ಈದೀಗ ಕೋಲ್ಕತ್ತಾ ನೈಟ್‌ರೈಡರ್ಸ್‌ 272 ರನ್‌ ಸಿಡಿಸುವ ಮೂಲಕ ಆರ್‌ಸಿಬಿ ದಾಖಲೆಯನ್ನ ನುಚ್ಚುನೂರು ಮಾಡಿದೆ. ಆದ್ರೆ ಹೈದರಾಬಾದ್‌ ತಂಡದ 277 ರನ್‌ಗಳ ದಾಖಲೆ ಮುರಿಯುವಲ್ಲಿ ವಿಫಲವಾಯಿತು.

    IPL ನಲ್ಲಿ ರನ್‌ ಹೊಳೆ ಹರಿಸಿದ ಟಾಪ್‌-5 ತಂಡಗಳು:
    ಸನ್‌ ರೈಸರ್ಸ್‌ ಹೈದರಾಬಾದ್‌ – 277 ರನ್‌
    ಕೋಲ್ಕತ್ತಾ ನೈಟ್‌ ರೈಡರ್ಸ್‌ – 272 ರನ್‌
    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 263 ರನ್‌
    ಲಕ್ನೋ ಸೂಪರ್‌ ಜೈಂಟ್ಸ್‌ – 257 ರನ್‌
    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 248

    ರನ್‌ ಏರಿದ್ದು ಹೇಗೆ?
    50 ರನ್‌ 23 ಎಸೆತ
    100 ರನ್‌ 45 ಎಸೆತ
    150 ರನ್‌ 66 ಎಸೆತ
    200 ರನ್‌ 92 ಎಸೆತ
    250 ರನ್‌ 111 ಎಸೆತ
    272 ರನ್‌ 120 ಎಸೆತ

    ಬಲ ನೀಡಿದ ಶತಕ, ಅರ್ಧಶತಕಗಳ ಜೊತೆಯಾಟ:
    ಆರಂಭದಿಂದಲೇ ಡೆಲ್ಲಿ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದ ಕೆಕೆಆರ್‌ ಬ್ಯಾಟರ್‌ಗಳು ಕೊನೇವರೆಗೂ ಕ್ರೀಸ್‌ನಲ್ಲಿ ಅಬ್ಬರಿಸಿದರು. ಮೊದಲ ವಿಕೆಟ್‌ಗೆ ಪಿಲ್‌ ಸಾಲ್ಟ್‌ – ಸುನೀಲ್‌ ನರೇನ್‌ ಜೋಡಿ 27 ಎಸೆತಗಳಲ್ಲಿ 60 ರನ್‌ ಬಾರಿಸಿದರೆ, 2ನೇ ವಿಕೆಟ್‌ಗೆ ರಘುವಂಶಿ ಮತ್ತು ಸುನೀಲ್‌ ನರೇನ್‌ ಜೋಡಿ 48 ಎಸೆತಗಳಲ್ಲಿ ಬರೋಬ್ಬರಿ 104 ರನ್‌ ಕಲೆಹಾಕಿತು. ಈ ಬೆನ್ನಲ್ಲೇ ರಸೆಲ್‌-ಅಯ್ಯರ್‌ ಜೋಡಿ ಕೇವಲ 24 ಎಸೆತಗಳಲ್ಲಿ ಸ್ಫೋಟಕ 56 ರನ್‌ ಬಾರಿಸಿದರೆ, ರಿಂಕು-ರಸೆಲ್‌ ಜೋಡಿ ಕೇವಲ 11 ಎಸೆತಗಳಲ್ಲಿ 32 ರನ್‌ ಚಚ್ಚಿತು. ಪರಿಣಾಮ ತಂಡದ ಮೊತ್ತ 270 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಡೆಲ್ಲಿಗೆ 273 ರನ್‌ಗಳ ಗುರಿ:
    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಕೆಕೆಆರ್‌ 7 ವಿಕೆಟ್‌ ನಷ್ಟಕ್ಕೆ 20 ಓವರ್‌ಗಳಲ್ಲಿ 272 ರನ್‌ ಬಾರಿಸಿತು. ಪಿಲ್‌ ಸಾಲ್ಟ್‌ 18 ರನ್‌, ಸುನೀಲ್‌ ನರೇನ್‌ 85 ರನ್‌ (39 ಎಸೆತ, 7 ಸಿಕ್ಸರ್‌, 7 ಬೌಂಡರಿ), ರಘು ವಂಶಿ 54 ರನ್‌ (27 ಎಸೆತ, 3 ಸಿಕ್ಸರ್‌, 5 ಬೌಂಡರಿ), ರಸೆಲ್‌ 41 ರನ್‌ (19 ಎಸೆತ, 3 ಸಿಕ್ಸರ್‌, 4 ಬೌಂಡರಿ), ರಿಂಕು ಸಿಂಗ್‌ 26 ರನ್‌ (8 ಎಸೆತ, 3 ಸಿಕ್ಸರ್‌, 1 ಬೌಂಡರಿ) ಚಚ್ಚಿದರು. ಹೆಚ್ಚುವರಿ 22 ರನ್‌ಗಳು ತಂಡಕ್ಕೆ ಸೇರ್ಪಡೆಯಾಯಿತು.

  • IPL 2024: ಮಹಿ ಬ್ಯಾಟಿಂಗ್‌ ಕಿಚ್ಚಿಗೂ ಬೆಚ್ಚದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 20 ರನ್‌ಗಳ ಜಯ

    IPL 2024: ಮಹಿ ಬ್ಯಾಟಿಂಗ್‌ ಕಿಚ್ಚಿಗೂ ಬೆಚ್ಚದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 20 ರನ್‌ಗಳ ಜಯ

    – ಕೊನೇ ಓವರ್‌ನಲ್ಲಿ  20 ರನ್‌ ಚಚ್ಚಿದ ಮಹಿ
    – ಪುಟಿದೆದ್ದ ಪಂತ್‌ – ವಾರ್ನರ್‌, ಶಾ ಬ್ಯಾಟಿಂಗ್‌ಗೆ ಕಂಗಾಲಾದ ಸಿಎಸ್‌ಕೆ

    ವಿಶಾಖಪಟ್ಟಣಂ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ಅವರ ಮಿಂಚಿನ ಬ್ಯಾಟಿಂಗ್‌ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2024ರ ಐಪಿಎಲ್‌ ಆವೃತ್ತಿಯಲ್ಲಿ ರಿಷಬ್‌ ಪಂತ್‌ ನಾಯಕತ್ವದ ಡೆಲ್ಲಿ ತಂಡ ಗೆಲುವಿನ ಖಾತೆ ತೆರೆದಿದೆ.

    ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿತ್ತು. 192 ರನ್‌ಗಳ ಗುರಿ ಪಡೆ ಸಿಎಸ್‌ಕೆ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 171 ರನ್‌ ಬಾರಿಸಿ ಸೋಲೊಪ್ಪಿಕೊಂಡಿತು.

    ಡೆಲ್ಲಿ ಕ್ಯಾಪಿಟಲ್ಸ್‌, ಸಿಎಸ್‌ಕೆ ನಡುವಿನ ಪಂದ್ಯ ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಡೆವಿಡ್ ವಾರ್ನರ್ , ಪೃಥ್ವಿ ಶಾ ಹಾಗೂ ರಿಷಬ್ ಪಂತ್ ಅಬ್ಬರ, ಪತಿರಾಣ ಅದ್ಬುತ ಕ್ಯಾಚ್‌, 42ನೇ ವಯಸ್ಸಿನಲ್ಲೂ ಚಿರಯುವಕನಂತೆ ಮಹಿ ಸಿಕ್ಸರ್‌ ಬೌಂಡರಿ ಆಟ ಇವೆಲ್ಲವೂ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಿತು. ಕೊನೇ ಓವರ್‌ನಲ್ಲಿ ಸಿಕ್ಸರ್‌-ಬೌಂಡರಿ ಚಚ್ಚಿದ ಮಹಿ ಒಂದೇ ಓವರ್‌ನಲ್ಲಿ 20 ರನ್‌ ಸಿಡಿಸಿದರು.

    ಆರಂಭದಲ್ಲೇ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದ್ದು ಸಿಎಸ್‌ಕೆ ತಂಡದ ಸೋಲಿಗೆ ಕಾರಣವಾಯಿತು. ಮೊದಲ 2.5 ಓವರ್‌ಗಳಲ್ಲೇ ಕೇವಲ 7 ರನ್‌ಗಳಿಗೆ 2 ಪ್ರಮುಖ ವಿಕೆಟ್‌ ಕಳೆದುಕೊಂಡಿತ್ತು. ಬಳಿಕ ಡೇರಿಲ್‌ ಮಿಚೆಲ್‌, ಅಜಿಂಕ್ಯಾ ರಹಾನೆ ಸ್ಫೋಟಕ ಬ್ಯಾಟಿಂಗ್‌ನಿಂದ ಇನ್ನಿಂಗ್ಸ್‌ ಕಟ್ಟಲು ಪ್ರಯತ್ನಿಸಿದರೂ ವಿಫಲವಾಯಿತು.

    ಸಿಎಸ್‌ಕೆ ಪರ‌ ನಾಯಕ ರುತುರಾಜ್‌ 1 ರನ್‌, ರಚಿನ್‌ ರವಿಂದ್ರ 12 ಎಸೆತಗಳಲ್ಲಿ 2 ರನ್‌, ಅಜಿಂಕ್ಯಾ ರಹಾನ್‌ 45 ರನ್‌, ಡೇರಿಲ್‌ ಮಿಚೆಲ್‌ 34 ರನ್‌, ಶಿವಂ ದುಬೆ 18 ರನ್‌, ರವೀಂದ್ರ ಜಡೇಜಾ 21 ರನ್‌ ಗಳಿಸಿದರೆ, 231 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಎಂ,ಎಸ್‌ ಧೋನಿ 16 ಎಸೆತಗಳಲ್ಲಿ 37 ರನ್‌ ಬಾರಿಸಿದರು.

    ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, ಫೀಲ್ಡಿಂಗ್‌ ಮಾಡುವ ಅವಕಾಶವನ್ನು ಡೆಲ್ಲಿ ತಂಡಕ್ಕೆ ಬಿಟ್ಟುಕೊಟ್ಟಿತು. ಆರಂಭದಿಂದಲೇ ಸ್ಫೋಟಕ ಇನ್ನಿಂಗ್ಸ್‌ ಶುರು ಮಾಡಿದ ಡೆಲ್ಲಿ ತಂಡ ಸಿಎಸ್‌ಕೆ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದರು. ಮೊದಲ ವಿಕೆಟ್‌ಗೆ ಪೃಥ್ವಿ ಶಾ ಹಾಗೂ ಡೇವಿಡ್‌ ವಾರ್ನರ್‌ ಜೋಡಿ 9.3 ಓವರ್‌ಗಳಲ್ಲಿ 93 ರನ್‌ಗಳ ಜೊತೆಯಾಟ ನೀಡಿತ್ತು. ಇದು ಡೆಲ್ಲಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಸ್ಫೋಟಕ ಬ್ಯಾಟಿಂಗ್‌ ಮೂಲಕ ಅರ್ಧಶತಕ ಸಿಡಿಸಿದ್ದ ವಾರ್ನರ್‌ ಮತ್ತೊಂದು ಸ್ಫೋಟಕ ಹೊಡೆತಕ್ಕೆ ಮುಂದಾಗಿ ಮಥೀಶ ಪತಿರಾಣಗೆ ಕ್ಯಾಚ್ ನೀಡಿದರು.

    ಡೇವಿಡ್ ವಾರ್ನರ್ 35 ಎಸೆತದಲ್ಲಿ 52 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಪೃಥ್ವಿ ಶಾ ವಿಕೆಟ್ ಪತನಗೊಂಡಿತು ಕೇವಲ 27 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 43 ರನ್ ಸಿಡಿಸಿ ಶಾ ಔಟಾದರು. ಬಳಿಕ ಕಣಕ್ಕಿಳಿದ ನಾಯಕ ರಿಷಬ್ ಪಂತ್ ಬ್ಯಾಟಿಂಗ್ ಸಹ ಡೆಲ್ಲಿ ತಂಡದ ಕೈಹಿಡಿಯಿತು. 14 ದಿನಗಳ ಬಳಿಕ ಐಪಿಎಲ್‌ ಅಂಗಳದಲ್ಲಿ ಆಡುತ್ತಿರುವ ಪಂತ್‌ ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಪಂತ್ 31 ಎಸೆತದಲ್ಲಿ 51 ರನ್ (3 ಸಿಕ್ಸರ್‌, 4 ಬೌಂಡರಿ) ಸಿಡಿಸಿದರು.

    ಆರಂಭಿಕರು ಹಾಗೂ ಪಂತ್‌ ವಿಕೆಟ್‌ ಕಳೆದುಕೊಂಡ ಬಳಿಕ ಡೆಲ್ಲಿ ತಂಡದ ರನ್‌ ವೇಗದ ಗತಿಯೂ ಕಡಿಮೆಯಾಯಿತು. ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಅಬ್ಬರದಿಂದ ಡೆಲ್ಲಿ 191 ರನ್‌ಗಳ ಬೃಹತ್‌ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.

    ಸಿಎಸ್‌ಕೆ ಪರ ಅದ್ಭುತ ಕ್ಯಾಚ್ ಹಿಡಿದ ಮಥೀಶ ಪತಿರಾಣ 3 ವಿಕೆಟ್ ಕಬಳಿಸಿ ಮಿಂಚಿದರು. ರವೀಂದ್ರ ಜಡೇಜಾ ಹಾಗೂ ಮುಸ್ತಫಿಜೂರ್‌ ತಲಾ ಒಂದೊಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • ಪರಾಗ್‌ ಬೆಂಕಿ ಆಟಕ್ಕೆ ಡೆಲ್ಲಿ ಭಸ್ಮ – ರಾಯಲ್ಸ್‌ಗೆ 12 ರನ್‌ಗಳ ಗೆಲುವು

    ಪರಾಗ್‌ ಬೆಂಕಿ ಆಟಕ್ಕೆ ಡೆಲ್ಲಿ ಭಸ್ಮ – ರಾಯಲ್ಸ್‌ಗೆ 12 ರನ್‌ಗಳ ಗೆಲುವು

    ಜೈಪುರ: ರಿಯಾನ್‌ ಪರಾಗ್‌ (Riyan Parag) ಅವರ ಸ್ಫೋಟಕ ಅರ್ಧಶತಕ ಮತ್ತು ಬೌಲರ್‌ಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್‌ (Rajasthan Royals) ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 12 ರನ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 186 ರನ್‌ಗಳ ಗುರಿಯನ್ನು ಪಡೆದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 173 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಸತತ ಎರಡು ಪಂದ್ಯಗಳನ್ನು ಗೆದ್ದ ರಾಜಸ್ಥಾನ 4 ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಮುಂದುವರಿದಿದೆ.

    ಕೊನೆಯ 18 ಎಸೆತಗಳಲ್ಲಿ ಡೆಲ್ಲಿ ತಂಡಕ್ಕೆ 41 ರನ್‌ಗಳ ಅಗತ್ಯವಿತ್ತು. 18ನೇ ಓವರ್‌ನಲ್ಲಿ ಅವೇಶ್‌ ಖಾನ್‌ (Avesh Khan) 9 ರನ್‌, 19ನೇ ಓವರ್‌ನಲ್ಲಿ ಸಂದೀಪ್‌ ಶರ್ಮಾ (Sandeep Sharma) 15 ರನ್‌ ಕೊಟ್ಟರೆ ಕೊನೆಯ ಓವರ್‌ನಲ್ಲಿ ಅವೇಶ್‌ ಖಾನ್‌ ಕೇವಲ 4 ರನ್‌ ನೀಡಿದ್ದರಿಂದ ರಾಜಸ್ಥಾನ ಗೆಲುವು ಸಾಧಿಸಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಆರಂಭ ಉತ್ತಮವಾಗಿತ್ತು. ಮಿಚೆಲ್ ಮಾರ್ಷ್ 23 ರನ್‌ (12 ಎಸೆತ, 5 ಬೌಂಡರಿ) ಹೊಡೆದು ಔಟಾದರು. ನಂತರ ರಿಕಿ ಭುಯಿ ಸೊನ್ನೆ ಸುತ್ತಿದರು.

    ನಾಯಕ ರಿಷಭ್‌ ಪಂತ್‌ 28 ರನ್‌ (26 ಎಸೆತ, 2 ಬೌಂಡರಿ, 1 ಸಿಕ್ಸರ್)‌ ಹೊಡೆದರೆ, ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ 49 ರನ್‌(34 ಎಸೆತ, 5 ಬೌಂಡರಿ, 3 ಸಿಕ್ಸರ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಅಕ್ಷರ್‌ ಪಟೇಲ್‌ ಮುರಿಯದ 6ನೇ ವಿಕೆಟಿಗೆ 27 ಎಸೆತದಲ್ಲಿ 51 ರನ್‌ ಜೊತೆಯಾಟವಾಡಿದರೂ ತಂಡಕ್ಕೆ ಜಯ ದಕ್ಕಲಿಲ್ಲ. ಟ್ರಿಸ್ಟಾನ್ ಸ್ಟಬ್ಸ್ ಔಟಾಗದೇ 44 ರನ್‌ (23 ಎಸೆತ, 2 ಬೌಂಡರಿ, 3 ಸಿಕ್ಸರ್‌) ಹೊಡೆದರೆ ಅಕ್ಷರ್‌ ಪಟೇಲ್‌ ಔಟಾಗದೇ 15 ರನ್‌ (13 ಎಸೆತ, 1 ಬೌಂಡರಿ) ಹೊಡೆದರು.  ಇದನ್ನೂ ಓದಿ: 42ನೇ ವಯಸ್ಸಿನಲ್ಲೂ ಎಷ್ಟೊಂದು ಉತ್ಸಾಹ – ಚಿರತೆಯಂತೆ ನೆಗೆದು ಕ್ಯಾಚ್‌ ಹಿಡಿದ ಮಹಿ; ವೀಡಿಯೋ ವೈರಲ್‌

    ಆರಂಭದಲ್ಲೇ ಕುಸಿತ: ರಾಜಸ್ಥಾನ 36 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್‌ 5 ರನ್‌, ಜೋಸ್‌ ಬಟ್ಲರ್‌ 11 ರನ್‌, ನಾಯಕ ಸಂಜು ಸ್ಯಾಮ್ಸನ್‌ 15 ರನ್‌ ಗಳಿಸಿ ಔಟಾಗಿದ್ದರು.

    ಈ ಹಂತದಲ್ಲಿ ಬೌಲರ್‌ ಅಶ್ವಿನ್‌ ಸ್ಫೋಟಕ ಬ್ಯಾಟ್‌ ಮಾಡಿ 19 ಎಸೆತಗಳಲ್ಲಿ 29 ರನ್‌ (3 ಸಿಕ್ಸರ್‌) ಸಿಡಿಸಿ ಚೇತರಿಕೆ ನೀಡಿದರು. ವಿಕೆಟ್‌ ಉರುಳುತ್ತಿದ್ದರೂ ರಿಯನ್‌ ಪರಾಗ್‌ ಸಿಡಿಲಬ್ಬರದ ಬ್ಯಾಟ್‌ ಬೀಸಿದ ಪರಿಣಾಮ ರಾಜಸ್ಥಾನ 5 ವಿಕೆಟ್‌ ನಷ್ಟಕ್ಕೆ 185 ರನ್‌ ಗಳಿಸಿತು.

    34 ಎಸೆತದಲ್ಲಿ ಅರ್ಧಶತಕ ಹೊಡೆದ ಪರಾಗ್‌ ಅಂತಿಮವಾಗಿ 45 ಎಸೆತದಲ್ಲಿ ಔಟಾಗದೇ 84 ರನ್‌ (7 ಬೌಂಡರಿ, 6 ಸಿಕ್ಸರ್‌) ಹೊಡೆದರೆ ಧ್ರುವ್‌ ಜರೇಲ್‌ 20 ರನ್‌(12 ಎಸೆತ, 3 ಬೌಂಡರಿ) ಹೇಟ್ಮೆಯರ್‌ ಔಟಾಗದೇ 14 ರನ್‌ (7 ಎಸೆತ, 1 ಬೌಂಡರಿ, 1ಸಿಕ್ಸರ್‌) ಚಚ್ಚಿದರು.

    ಅಶ್ವಿನ್‌ ಮತ್ತು ಪರಾಗ್‌ 37 ಎಸೆತಗಳಲ್ಲಿ 54 ರನ್‌ ಜೊತೆಯಾಟವಾಡಿದರೆ, ಪರಾಗ್‌ ಮತ್ತು ಜರೇಲ್‌ 23 ಎಸೆತಗಳಲ್ಲಿ 52 ರನ್‌ ಹೊಡೆದರು. ಅಂತಿಮವಾಗಿ ಹೇಟ್ಮೆಯರ್‌ ಮತ್ತು ಜರೇಲ್‌ ಮುರಿಯದ 6ನೇ ವಿಕೆಟಿಗೆ ಕೇವಲ 16 ಎಸೆತಗಳಲ್ಲಿ 43 ರನ್‌ ಜೊತೆಯಾಟವಾಡಿದ ಪರಿಣಾಮ ತಂಡದ ಮೊತ್ತ 180ರ ಗಡಿ ದಾಟಿತು.

  • ಫಲಿಸದ ಪಂತ್‌ ಮ್ಯಾಜಿಕ್‌; ಕರ್ರನ್‌ ಅಮೋಘ ಅರ್ಧಶತಕ – ಪಂಜಾಬ್‌ ಕಿಂಗ್ಸ್‌ಗೆ 4 ವಿಕೆಟ್‌ ಜಯ

    ಫಲಿಸದ ಪಂತ್‌ ಮ್ಯಾಜಿಕ್‌; ಕರ್ರನ್‌ ಅಮೋಘ ಅರ್ಧಶತಕ – ಪಂಜಾಬ್‌ ಕಿಂಗ್ಸ್‌ಗೆ 4 ವಿಕೆಟ್‌ ಜಯ

    – ಲಿಯಾಮ್‌ ಲಿವಿಂಗ್‌ಸ್ಟೋನ್‌ ಬ್ಯಾಟಿಂಗ್‌ ಬಲ

    ಚಂಡೀಗಢ: ಸ್ಯಾಮ್‌ ಕರ್ರನ್‌ (Sam Curran) ಅಮೋಘ ಅರ್ಧಶತಕದ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದೆ.

    ಪಂಜಾಬ್‌ ಗೆಲುವಿಗೆ ಕೊನೇ ಓವರ್‌ನಲ್ಲಿ 6 ರನ್‌ಗಳ ಅಗತ್ಯವಿತ್ತು. ಆದ್ರೆ ಬೌಲಿಂಗ್‌ನಲ್ಲಿದ್ದ ಸುಮಿತ್ ಕುಮಾರ್ ಆರಂಭದಲ್ಲೇ 2 ವೈಡ್‌ ಎಸೆದರು. ಮೊದಲ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲವಾದರೂ ಕ್ರೀಸ್‌ನಲ್ಲಿದ್ದ ಲಿಯಾಮ್‌ ಲಿವಿಂಗ್‌ಸ್ಟೋನ್‌ (Liam Livingstone) 2ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿ ಗೆಲುವು ತಂದುಕೊಟ್ಟರು.

    ಪಂಜಾಬ್‌ನ ಮುಲ್ಲನ್ಪುರ್‌ನಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಪಂಜಾಬ್‌ ಕಿಂಗ್ಸ್‌ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಟ್ಟುಕೊಟ್ಟಿತು.

    ಮೊದಲು ಬ್ಯಾಟಿಂಗ್‌ ಮಾಡಿದ ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿತ್ತು. 175 ರನ್‌ ಗಳ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ (Punjab Kings) 19.2 ಓವರ್‌ಗಳಲ್ಲೇ 6 ವಿಕೆಟ್‌ಗೆ 177 ರನ್‌ ಗಳಿಸಿ ಗೆಲುವು ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ ಕಿಂಗ್ಸ್‌ ಪಂಜಾಬ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಪವರ್‌ಪ್ಲೇನಲ್ಲೇ ಎರಡು ಪ್ರಮುಖ ವಿಕೆಟ್‌ ಕಳೆದುಕೊಂಡಿತು. ಆದ್ರೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಸ್ಯಾಮ್‌ ಕರ್ರನ್‌ 63 ರನ್‌ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಕರ್ರನ್‌ ಜೊತೆಗೂಡಿದ ಲಿವಿಂಗ್‌ಸ್ಟೋನ್‌ ಸಹ ಇದಕ್ಕೆ ಸಾಥ್‌ ನೀಡಿದರು.

    ಕಿಂಗ್ಸ್‌ ಪಂಜಾಬ್‌ ಪರ ಸ್ಯಾಮ್‌ ಕರ್ರನ್‌ 63 ರನ್‌ (47 ಎಸೆತ, 6 ಬೌಂಡರಿ, 1 ಸಿಕ್ಸರ್‌), ಲಿವಿಂಗ್‌ಸ್ಟೋನ್‌ 38 ರನ್‌, ಶಿಖರ್‌ ಧವನ್‌ 22 ರನ್‌, ಜಾನಿ ಬೈರ್‌ಸ್ಟೋವ್‌ 9 ರನ್‌, ಪ್ರಭ್‌ಸಿಮ್ರನ್‌ ಸಿಂಗ್‌ 26 ರನ್‌, ಜಿತೇಶ್‌ ಶರ್ಮಾ 9 ರನ್‌, ಹರ್ಪ್ರೀರ್‌ ಬ್ರಾರ್‌ 2 ರನ್‌ ಗಳಿಸಿದರು.

    ಡೆಲ್ಲಿ ಪರ ಖಲೀಲ್‌ ಅಹ್ಮದ್‌, ಕುಲ್ದೀಪ್‌ ಯಾದವ್‌ 2 ವಿಕೆಟ್‌ ಕಿತ್ತರೆ, ಇಶಾಂತ್‌ ಶರ್ಮಾ ಒಂದು ವಿಕೆಟ್‌ ಕಿತ್ತರು.

    ಕೊನೇ ಓವರ್‌ನಲ್ಲಿ 25 ರನ್‌ ಚಚ್ಚಿದ ಅಭಿಷೇಕ್‌:
    ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಸ್ಫೋಟಕ ಆರಂಭದ ಹೊರತಾಗಿಯೂ ಅಗ್ರಕ ಕ್ರಮಾಂಕದ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 19 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿತ್ತು. ಡೆಲ್ಲಿ ತಂಡ 160 ರನ್‌ ತಲುಪುವುದೂ ಕಷ್ಟವಾಗಿತ್ತು. ಆದ್ರೆ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದ ಪಶ್ಚಿಮ ಬಂಗಾಳದ ಅಭಿಷೇಕ್‌ ಪೋರೆಲ್‌ ಒಂದೇ ಓವರ್‌ನಲ್ಲಿ 25 ರನ್‌ ಚಚ್ಚಿದರು. ಇದರಿಂದ ತಂಡದ ಮೊತ್ತ 170 ರನ್‌ಗಳ ಗಡಿ ದಾಟಿತು.

    ಪಂತ್‌ ಕಂಬ್ಯಾಕ್‌ – ಅಭಿಮಾನಿಗಳಿಂದ ವೆಲ್‌ಕಮ್‌:
    ಕಾರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್‌ ಪಂತ್‌ 14 ತಿಂಗಳ ಬಳಿಕ ಮತ್ತೆ ಕ್ರೀಸ್‌ಗಿಳಿದು ಬ್ಯಾಟಿಂಗ್‌ ಮಾಡಿದರು. ರಿಷಭ್‌ ಕ್ರೀಸ್‌ಗೆ ಬರುತ್ತಿದ್ದಂತೆ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.

    ಡೆಲ್ಲಿ ಪರ ಡೇವಿಡ್‌ ವಾರ್ನರ್‌ 29 ರನ್‌, ಮಿಚೆಲ್‌ ಮಾರ್ಷ್‌ 20 ರನ್‌, ಶಾಯಿ ಹೋಪ್‌ 33 ರನ್‌, ರಿಷಭ್‌ ಪಂತ್‌ 18 ರನ್‌, ರಿಕಿ ಭುಯಿ 3 ರನ್‌, ಟ್ರಿಸ್ಟಾನ್ ಸ್ಟಬ್ಸ್ 5 ರನ್‌, ಅಕ್ಷರ್‌ ಪಟೇಲ್‌ 21 ರನ್‌, ಸುಮಿತ್‌ ಕುಮಾರ್‌ 2 ರನ್‌, ಕುಲ್ದೀಪ್‌ 1 ರನ್‌ ಗಳಿಸಿದ್ರೆ, ಅಭಿಷೇಕ್‌ 10 ಎಸೆತಗಳಲ್ಲಿ 32 ರನ್‌ ಬಾರಿಸಿ ಕ್ರೀಸ್‌ನಲ್ಲಿ ಉಳಿದರು.

    ಪಂಜಾಬ್‌ ಪರ ಅರ್ಷ್‌ದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌ ತಲಾ 2 ವಿಕೆಟ್‌ ಕಿತ್ತರೆ, ಕಗಿಸೋ ರಬಾಡ, ಹರ್ಪ್ರೀತ್‌ ಬ್ರಾರ್‌, ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • IPL 2024: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್‌ ಪಂತ್ ನಾಯಕ

    IPL 2024: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್‌ ಪಂತ್ ನಾಯಕ

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2024) ಮುಂಬರುವ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗಿ ರಿಷಬ್ ಪಂತ್ (Rishabh Pant) ಅವರ ಹೆಸರನ್ನು ಮಂಗಳವಾರ ಫ್ರಾಂಚೈಸಿ ಘೋಷಿಸಲಾಗಿದೆ. ವಿಕೆಟ್‌ಕೀಪರ್-ಬ್ಯಾಟರ್ 14 ತಿಂಗಳ ನಂತರ ವೃತ್ತಿಪರ ಕ್ರಿಕೆಟ್‌ಗೆ ಮರಳಿದ್ದಾರೆ.

    ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಅಧ್ಯಕ್ಷ ಮತ್ತು ಸಹ-ಮಾಲೀಕ ಪಾರ್ಥ್ ಜಿಂದಾಲ್, ‘ರಿಷಭ್ ಅವರನ್ನು ಮತ್ತೆ ನಮ್ಮ ನಾಯಕನಾಗಿ ಸ್ವಾಗತಿಸಲು ನಾವು ಸಂತೋಷ ಪಡುತ್ತೇವೆ. ಉತ್ಸಾಹ, ಚೈತನ್ಯದೊಂದಿಗೆ ನಾವು ಹೊಸ ಋತುವಿಗಾಗಿ ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇದು ಆರ್‌ಸಿಬಿಯ ಹೊಸ ಅಧ್ಯಾಯ – ಕನ್ನಡದಲ್ಲೇ ಕೊಹ್ಲಿ ಮಾತು

    ತಂಡದ ಸಹ-ಮಾಲೀಕ ಕಿರಣ್ ಕುಮಾರ್ ಗ್ರಾಂಧಿ, ‘ರಿಷಭ್ ತಮ್ಮ ಜೀವನದ ಅತ್ಯಂತ ಸವಾಲಿನ ಹಂತಗಳಲ್ಲಿ ನಂಬಲಾಗದಷ್ಟು ಶ್ರಮಿಸಿದ್ದಾರೆ. ಅವರು ಹೊಸ ಋತುವನ್ನು ಪ್ರಾರಂಭಿಸಿದಾಗ ಅವರ ತಂಡದ ಸಹ ಆಟಗಾರರು ಅದರಿಂದ ಅಪಾರವಾದ ಸ್ಫೂರ್ತಿ ಪಡೆದುಕೊಳ್ಳಲಿದ್ದಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ನಾಯಕ ರಿಷಭ್ ಮತ್ತು ತಂಡಕ್ಕೆ ನಮ್ಮ ಶುಭ ಹಾರೈಕೆಗಳಿವೆ ಎಂದಿದ್ದಾರೆ.

    ಮಾರ್ಚ್ 23 ರಂದು ಚಂಡೀಗಢದಲ್ಲಿ ನಡೆಯಲಿರುವ IPL 2024 ರ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಇದನ್ನೂ ಓದಿ: RCB Unbox: ‘ಬೆಂಗಳೂರ್‌’ ಅಲ್ಲ ಇನ್ಮುಂದೆ ಹೇಳಿ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’

  • WPL Final; ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಇಂದು ಮುಖಾಮುಖಿ – ಈ ಸಲ ಕಪ್ ಯಾರಿಗೆ?

    WPL Final; ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಇಂದು ಮುಖಾಮುಖಿ – ಈ ಸಲ ಕಪ್ ಯಾರಿಗೆ?

    ನವದೆಹಲಿ: ಮಹಿಳಾ ಪ್ರೀಮಿಯರ್ (WPL Final) ಲೀಗ್‍ನ 2ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ವಿರುದ್ಧ ರೋಚಕ ಗೆಲುವು ದಾಖಲಿಸುವ ಮೂಲಕ ಮೊದಲ ಬಾರಿಗೆ ಫೈನಲ್ ತಲುಪಿದೆ. ಇಂದು (ಭಾನುವಾರ) ದೆಹಲಿಯ ಅರುಣ್ ಜೆಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಡಬ್ಲ್ಯೂಪಿಎಲ್ 2024ರ (WPL 2024) ಫೈನಲ್ ಪಂದ್ಯದಲ್ಲಿ ಆರ್‌ಸಿಬಿ (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಗಳು ಸೆಣಸಾಡಲಿವೆ.

    ಇಬ್ಬರಲ್ಲಿ ಯಾರೇ ಗೆದ್ದರೂ ಸಹ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ 2ನೇ ಬಾರಿಗೆ ಡಬ್ಲ್ಯೂಪಿಎಲ್ ಫೈನಲ್ ತಲುಪಿದ್ದು, ಬೆಂಗಳೂರು ತಂಡವು ಇದೇ ಮೊದಲ ಬಾರಿಗೆ ಫೈನಲ್ ಹಂತಕ್ಕೆ ತಲುಪಿದೆ. ಇದರಿಂದಾಗಿ ಇಬ್ಬರಲ್ಲಿ ಯಾರೇ ಗೆದ್ದರೂ ಇಬ್ಬರಿಗೂ ಅದು ಮೊದಲ ಕಪ್ ಆಗಲಿದೆ. ಈ ಹೈವೋಲ್ಟೇಜ್ ಪಂದ್ಯವು ಸಂಜೆ 7 ಗಂಟೆಗೆ ಟಾಸ್ ನಡೆದು, 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈಗಾಗಲೇ ಪಂದ್ಯದ ಬಗ್ಗೆ ಕುತೂಹಲ ಹೆಚ್ಚಿದ್ದು, ಉಭಯ ತಂಡಗಳ ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಐಪಿಎಲ್‌ ಸಂಪೂರ್ಣ ಲೀಗ್‌ ಭಾರತದಲ್ಲೇ ನಡೆಯುತ್ತೆ – ಜಯ್‌ ಶಾ ಸ್ಪಷ್ಟನೆ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (Smriti Mandhana), ಸೋಫಿ ಮೊಲಿನೆಕ್ಸ್, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ರಿಚಾ ಘೋಷ್, ಜಾರ್ಜಿಯಾ ವಾರೆಹಮ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ಶ್ರದ್ಧಾ ಪೋಖರ್ಕರ್, ರೇಣುಕಾ ಠಾಕೂರ್ ಸಿಂಗ್, ಸಿಮ್ರಾನ್ ಬಹದ್ದೂರ್, ಇಂದ್ರಾಣಿ ರಾಯ್, ಶುದಿನೆ ರಾಯ್, ಡಿ ಕ್ಲರ್ಕ್, ಸಬ್ಬಿನೇನಿ ಮೇಘನಾ, ಕೇಟ್ ಕ್ರಾಸ್, ಏಕ್ತಾ ಬಿಷ್ಟ್.

    ಡೆಲ್ಲಿ ಕ್ಯಾಪಿಟಲ್ಸ್ ತಂಡ: ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಮಿಮಾ ರಾಡ್ರಿಗಸ್, ಜೆಸ್ ಜೊನಾಸೆನ್, ಲಾರಾ ಹ್ಯಾರಿಸ್, ಮರಿಜಾನ್ನೆ ಕಪ್, ಮೆಗ್ ಲ್ಯಾನಿಂಗ್, ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತನಿಯಾ ಭಾಟಿಯಾ, ಅನ್ನಾಪರ್ ಮೊನ್‍ಡಾಲ್ ಸಾಧು, ಅಶ್ವನಿ ಕುಮಾರಿ. ಇದನ್ನೂ ಓದಿ:RCB – CSK ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ – ಸೋಮವಾರದಿಂದಲೇ ಟಿಕೆಟ್‌ ಮಾರಾಟ ಶುರು, ದರ ಎಷ್ಟು?