Tag: Delhi Capital

  • ಸಿಕ್ಸರ್, ಬೌಂಡರಿ ಸುರಿಮಳೆ – ಸ್ಟೊಯಿನಿಸ್ ಸ್ಫೋಟಕ ಆಟ, ಪಂಜಾಬ್‍ಗೆ 158 ರನ್ ಗುರಿ

    ಸಿಕ್ಸರ್, ಬೌಂಡರಿ ಸುರಿಮಳೆ – ಸ್ಟೊಯಿನಿಸ್ ಸ್ಫೋಟಕ ಆಟ, ಪಂಜಾಬ್‍ಗೆ 158 ರನ್ ಗುರಿ

    ದುಬೈ: 13 ರನ್‍ಗೆ 3 ವಿಕೆಟ್ ಪತನ, 96 ರನ್‍ಗಳಿಸುವಷ್ಟರಲ್ಲಿ 6 ವಿಕೆಟ್ ಪತನ. ಆರಂಭಿಕ ಹಿನ್ನಡೆ ಕಂಡರೂ ಸ್ಟೊಯಿನಿಸ್ ಸ್ಪೋಟಕ ಆಟದಿಂದ ಡೆಲ್ಲಿ ಕ್ಯಾಪಿಟಲ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 158 ರನ್‍ಗಳ ಗುರಿಯನ್ನು ನೀಡಿದೆ.

    ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಗ್ ಗೆದ್ದು ಕಿಂಗ್ಸ್ ಇಲೆವೆನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್‍ಗೆ ಬಂದ ದೆಹಲಿ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆದರೆ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಾರ್ಕಸ್ ಸ್ಟೊಯಿನಿಸ್ 53 ರನ್((20 ಎಸೆತ, 3 ಸಿಕ್ಸರ್ 7 ಬೌಂಡರಿ) ಭರ್ಜರಿ ಅರ್ಧ ಶತಕದ ನೆರವಿನಿಂದ ಡೆಲ್ಲಿ 157ರನ್ ಹೊಡೆಯಿತು.

    ಪಂದ್ಯದ ಆರಂಭದಲ್ಲೇ ಎಡವಿದ ಡೆಲ್ಲಿ ತಂಡದ ಆರಂಭಿಕ ಬ್ಯಾಟ್ಸ್‍ಮ್ಯಾನ್ ಶಿಖರ್ ಧವನ್ ಎರಡನೇ ಓವರ್‍ನಲ್ಲಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಮೂರನೇ ಓವರ್‍ನಲ್ಲಿ ಶಮಿ ಬೌನ್ಸರ್ ಗೆ ಪೃಥ್ವಿ ಶಾ ವಿಕೆಟ್ ಒಪ್ಪಿಸಿದರು. ಅದೇ ಓವರ್‍ನಲ್ಲಿ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ಶಿಮ್ರಾನ್ ಹೆಟ್ಮಿಯರ್ ಕೂಡ ಕ್ಯಾಚ್ ಕೊಟ್ಟ ನಿರ್ಗಗಮಿಸಿದರು. ನಾಲ್ಕು ಓವರ್ ಮುಕ್ತಾಯಕ್ಕೆ 13 ರನ್‍ಗಳಿಸಿ ಡೆಲ್ಲಿ ಕ್ಯಾಪಿಟಲ್ 3 ವಿಕೆಟ್ ಕಳೆದುಕೊಂಡಿತ್ತು.

    ನಂತರ ಜೊತೆಯಾದ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಉತ್ತಮ ಜೊತೆಯಾಟವಾಡಿದರು. ಇದರ ಪರಿಣಾಮ 10 ಓವರ್ ಮುಕ್ತಾಯಕ್ಕೆ ಡೆಲ್ಲಿ 49 ಪೇರಿಸಿತು. ಈ ವೇಳೆ ಕ್ಯಾಪ್ಟನ್ ಇನ್ನಿಂಗ್ಸ್ ಆಡಿದ ಐಯ್ಯರ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಭಾರಿಸಿದರು. ಇವರಿಗೆ ರಿಷಭ್ ಪಂತ್ 31 ರನ್(29 ಎಸೆತ) ಕೂಡ ಉತ್ತಮವಾಗಿ ಸಾಥ್ ನೀಡಿದರು. ಆದರೆ 13ನೇ ಓವರಿನ ಕೊನೆಯ ಬಾಲಿನಲ್ಲಿ ರವಿ ಬಿಷ್ಣೋಯ್ ಅವರಿಗೆ ಪಂತ್ ಬೌಲ್ಡ್ ಆದರು.

    ಇದಾದ ನಂತರ 39 ರನ್ ಗಳಿಸಿ ಆಡುತ್ತಿದ್ದ ಶ್ರೇಯಸ್ ಐಯ್ಯರ್ 14ನೇ ಓವರ್‍ನಲ್ಲಿ ಶಮಿ ಬೌಲಿಂಗ್‍ಗೆ ಕ್ರಿಸ್ ಜೋರ್ಡಾನ್‍ಗೆ ಕ್ಯಾಚ್ ನೀಡಿದರು. ನಂತರ ಆಕ್ಸಾರ್ ಪಟೇಲ್ ಶೆಲ್ಡನ್ ಕಾಟ್ರೆಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಯಾವುದೇ ಆಟಗಾರ ಕ್ರಿಸ್‍ನಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಆದರೆ ಮಾರ್ಕಸ್ ಸ್ಟೊಯಿನಿಸ್ ಮಾತ್ರ ಉತ್ತಮವಾಗಿ ಬ್ಯಾಟ್ ಬೀಸಿ ತಂಡ 157 ರನ್ ಸೇರಿದುವಲ್ಲಿ ಉತ್ತಮ ಕೊಡುಗೆ ನೀಡಿದರು.

    ಸ್ಟೊಯಿನಿಸ್ ಆಟದಿಂದ 18ನೇ ಓವರ್ ನಲ್ಲಿ 13 ರನ್, 19 ನೇ ಓವರ್ ನಲ್ಲಿ 14 ರನ್, 20ನೇ ಓವರ್ ನಲ್ಲಿ 30 ರನ್ ಡೆಲ್ಲಿ ತಂಡಕ್ಕೆ ಬಂದಿತ್ತು. ಜೋರ್ಡನ್ ಎಸೆದ ಕೊನೆಯ ಓವರ್ ನಲ್ಲಿ 2 ಸಿಕ್ಸರ್, 3 ಬೌಂಡರಿಯನ್ನು ಸ್ಟೊಯಿನಿಸ್ ಚಚ್ಚಿದ್ದರು.

    ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಉತ್ತಮವಾಗಿ ಬೌಲ್ ಮಾಡಿದ ಅನುಭವಿ ವೇಗಿ ಮೊಹಮ್ಮದ್ ಶಮಿಯವರು ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು ಕೇವಲ 15 ರನ್ ನೀಡಿದರು. ಇವರಿಗೆ ಉತ್ತಮವಾಗಿ ಸಾಥ್ ಕೊಟ್ಟ ಶೆಲ್ಡನ್ ಕಾಟ್ರೆಲ್ ಅವರು ನಾಲ್ಕು ಓವರ್ ಬೌಲ್ ಮಾಡಿ 24 ರನ್ ನೀಡಿ 2 ವಿಕೆಟ್ ಪಡೆದರು. ಇದೇ ವೇಳೆ ರವಿ ಬಿಷ್ಣೋಯ್ ಅವರು ಕೂಡ ತಮ್ಮ ಚೊಚ್ಚಲ ಐಪಿಎಲ್ ವಿಕೆಟ್ ಪಡೆದರು.

  • ರಾಹುಲ್ Vs ಐಯ್ಯರ್, ಪಾಂಟಿಂಗ್ Vs ಕುಂಬ್ಳೆ – ಪಂಜಾಬ್, ಡೆಲ್ಲಿ ತಂಡಗಳ ಬಲಾಬಲ

    ರಾಹುಲ್ Vs ಐಯ್ಯರ್, ಪಾಂಟಿಂಗ್ Vs ಕುಂಬ್ಳೆ – ಪಂಜಾಬ್, ಡೆಲ್ಲಿ ತಂಡಗಳ ಬಲಾಬಲ

    ನವದೆಹಲಿ: ಐಪಿಎಲ್ ಎರಡನೇ ದಿನವಾದ ಇಂದು ಸಂಡೇ ಧಮಾಕದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ ತಂಡಗಳು ಮುಖಾಮುಖಿಯಾಗಲಿವೆ.

    ಎರಡು ತಂಡದಲ್ಲಿ ಯುವ ಆಟಗಾರರು ಮತ್ತು ಯುವ ನಾಯಕರು ಇಂದು ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಪಂಜಾಬ್ ಮತ್ತು ಡೆಲ್ಲಿ ಎರಡು ತಂಡದಲ್ಲಿ ಒಳ್ಳೆಯ ವಿದೇಶಿ ಆಟಗಾರಿದ್ದು, ಇಂದು ರನ್ ಮಳೆಯೇ ಹರಿಯುವ ಸಾಧ್ಯತೆ ಇದೆ. ಎರಡು ತಂಡಗಳ ಬಲಾಬಲವನ್ನು ನೋಡುವುದಾದರೆ ಉಭಯ ತಂಡಗಳಲ್ಲಿ ಸರಿಸಮಾನ ಆಟಗಾರರು ಇದ್ದಾರೆ.

    ರಾಹುಲ್ ವರ್ಸಸ್ ಐಯ್ಯರ್
    ಈ ಬಾರಿ ಭಾರತ ತಂಡದ ಪ್ರತಿಭಾನ್ವಿತ ಆಟಗಾರ ಕೆಎಲ್ ರಾಹುಲ್ ಅವರು ಕಿಂಗ್ಸ್ ಇಲೆವೆನ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇತ್ತ ಯುವ ಆಟಗಾರ ಶ್ರೇಯಸ್ ಐಯ್ಯರ್ ಕೂಡ ಡೆಲ್ಲಿ ಕ್ಯಾಪಿಟಲ್ ತಂಡದ ಚುಕ್ಕಾಣಿ ಹಿಡಿದಿದ್ದು, ಬ್ಯಾಟಿಂಗ್ ಮತ್ತು ನಾಯಕ್ವ ಎರಡು ವಿಚಾರದಲ್ಲಿ ರಾಹುಲ್ ಹಾಗೂ ಐಯ್ಯರ್ ನಡುವೆ ಇಂದು ಬಿಗ್ ಫೈಟ್ ನಡೆಯಲಿದೆ. ಜೊತೆಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಲು ಇಬ್ಬರಿಗೂ ಐಪಿಎಲ್ ಬಹಳ ಪ್ರಮುಖವಾಗಿದೆ.

    ಪಂಟರ್ ವರ್ಸಸ್ ಜಂಬೋ
    ಇಂದಿನ ಪಂದ್ಯಗಳು ಡೆಲ್ಲಿ ಮತ್ತು ಪಂಜಾಬ್ ತಂಡಗಳ ಕೋಚ್‍ಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಪಂಜಾಬ್ ತಂಡವನ್ನು ಅನಿಲ್ ಕುಂಬ್ಳೆಯವರು ಮುನ್ನಡೆಸುತ್ತಿದ್ದರೆ, ಇತ್ತ ಆಸ್ಟೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ ತಂಡವನ್ನು ಕೋಚ್ ಮಾಡುತ್ತಿದ್ದಾರೆ. ಈ ಇಬ್ಬರು ದಿಗ್ಗಜ ಮಾಜಿ ಆಟಗಾರರ ತರಬೇತಿಯಲ್ಲಿ ಪಳಗಿರುವ ಯುವ ತಂಡಗಳು ಇಂದು ಮುಖಾಮುಖಿಯಾಗಲಿವೆ.

    ಮ್ಯಾಕ್ಸ್‌ವೆಲ್‌ಗೆ ಸ್ಟೋಯಿನಿಸ್ ಪವರ್
    ಎರಡು ತಂಡದಲ್ಲಿ ವಿದೇಶಿ ಆಟಗಾರರ ದಂಡೇ ಇದೆ. ಆದರೆ ಆಸೀಸ್‍ನ ಸ್ಟಾರ್ ಆಲ್‍ರೌಂಡರ್ ಗಳಾದ ಮಾರ್ಕಸ್ ಸ್ಟೋಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಉಭಯ ತಂಡದಲ್ಲಿ ಇದ್ದಾರೆ. ಪಂಜಾಬ್ ತಂಡದಲ್ಲಿ ಮ್ಯಾಕ್ಸ್‌ವೆಲ್ ಮ್ಯಾಜಿಕ್ ಮಾಡಲು ತಯಾರಗಿದ್ದರೆ, ಇತ್ತ ಸ್ಟೋಯಿನಿಸ್ ಕೂಡ ಪಂಜಾಬ್‍ಗೆ ಟಾಂಗ್ ಕೊಡಲು ಸಿದ್ಧವಾಗಿದ್ದಾರೆ. ಈ ಇಬ್ಬರು ಆಟಗಾರರು ಒಳ್ಳೆಯ ಲಯದಲ್ಲಿದ್ದು, ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 174 ರನ್‍ಗಳ ಜೊತೆಯಾಟವಾಡಿದ್ದರು.

    ಅಗರ್ವಾಲ್ ವರ್ಸಸ್ ಪೃಥ್ವಿ
    ಡೋಪಿಂಗ್ ವಿಚಾರದಲ್ಲಿ ಕೆಲ ಕಾಲ ಕ್ರಿಕೆಟ್‍ನಿಂದ ಬ್ಯಾನ್ ಆಗಿದ್ದ ಪೃಥ್ವಿ ಶಾ ಕಾಮ್‍ಬ್ಯಾಕ್ ಮಾಡಲು ಸಿದ್ಧವಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡದ ಪರವಾಗಿ ಶಿಖರ್ ಧವನ್ ಅವರ ಜೊತೆ ಓಪನಿಂಗ್ ಮಾಡಲಿದ್ದಾರೆ. ಇತ್ತ ಮಯಾಂಕ್ ಅಗರ್ವಾಲ್ ಕೂಡ ಪಂಜಾಬ್ ತಂಡದಲ್ಲಿ ಆರಂಭಿಕನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ.

     

    ವಿಕೆಟ್ ಕೀಪಿಂಗ್‍ನಲ್ಲಿ ರಾಹುಲ್, ಪಂತ್
    ಉಭಯ ತಂಡದಲ್ಲಿ ಇಬ್ಬರು ಯುವ ವಿಕೆಟ್ ಕೀಪರ್ ಗಳು ಇದ್ದಾರೆ. ಡೆಲ್ಲಿಯಲ್ಲಿ ರಿಷಭ್ ಪಂತ್ ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತುಕೊಂಡಿದ್ದರೆ, ಇತ್ತ ನಾಯಕ ರಾಹುಲ್ ಪಂಜಾಬ್ ತಂಡದಲ್ಲಿ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಧೋನಿ ನಂತರ ಯಾರು ಟೀಂ ಇಂಡಿಯಾಗೆ ಖಾಯಂ ವಿಕೆಟ್ ಕೀಪರ್ ಆಗಲಿದ್ದಾರೆ ಎಂಬುದಕ್ಕೆ ಈ ಬಾರಿ ಐಪಿಎಲ್ ಉತ್ತರ ನೀಡಲಿದ್ದು, ರಿಷಭ್ ಮತ್ತು ರಾಹುಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

    ಶಮಿ ಸ್ವಿಂಗ್, ಇಶಾಂತ್ ಬೌನ್ಸರ್
    ಬೌಲಿಂಗ್ ವಿಭಾಗಕ್ಕೆ ಬಂದರೆ ಎರಡು ತಂಡಗಳು ಕೂಡ ಒಳ್ಳೆಯ ವೇಗಿಗಳನ್ನು ಹೊಂದಿದೆ. ಭಾರತದ ಟೀಂನಲ್ಲಿ ಅನುಭವಿ ವೇಗಿ ಎನಿಸಿಕೊಂಡಿರುವ ಮೊಹಮ್ಮದ್ ಶಮಿ ಪಂಜಾಬ್ ತಂಡಕ್ಕೆ ಸಾಥ್ ನೀಡಲಿದ್ದಾರೆ. ಮತ್ತೋರ್ವ ಅನುಭವಿ ವೇಗಿ ಇಶಾಂತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ ಆಡಲಿದ್ದಾರೆ. ಇಂದಿನ ಪಂದ್ಯದಲ್ಲಿ ಈ ಇಬ್ಬರು ಅನುಭವಿ ವೇಗಿಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  • ಐಪಿಎಲ್‍ನಲ್ಲಿ ಮತ್ತೆ ಕೊರೊನಾ ಕೋಲಾಹಲ- ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪಾಸಿಟಿವ್

    ಐಪಿಎಲ್‍ನಲ್ಲಿ ಮತ್ತೆ ಕೊರೊನಾ ಕೋಲಾಹಲ- ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪಾಸಿಟಿವ್

    ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಮತ್ತೆ ಕೊರೊನಾ ವೈರಸ್ ಕೋಲಾಹಲವನ್ನು ಉಂಟು ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮೊದಲ ಕೊರೊನಾ ಪ್ರಕರಣ ದೃಢಪಟ್ಟಿದೆ.

    ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ 13 ಮಂದಿ ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದರು. ಇದರ ನಡುವೆಯೇ ಬಿಸಿಸಿಐ ಐಪಿಎಲ್ ಶೆಡ್ಯೂಲನ್ನು ಬಿಡುಗಡೆ ಮಾಡಿತ್ತು. ಆದರೆ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಸಿಸ್ಟೆಂಟ್ ಫಿಜಿಯೋಥೆರಪಿಸ್ಟ್ ಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.

    ಯುಎಇನಲ್ಲಿ ಸೆ.19 ರಿಂದ ನ.10 ರವರೆಗೂ ಐಪಿಎಲ್ 2020ರ ಆವೃತ್ತಿ ನಡೆಯಲಿದೆ. ಆಗಸ್ಟ್ 20ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಯುಎಇಗೆ ಪ್ರಯಾಣಿಸಿತ್ತು. ಆ ಬಳಿಕ ತಂಡದ ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಸದ್ಯ ತಂಡದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ ಎಂದು ತಂಡ ಖಚಿತ ಪಡಿಸಿದೆ.

    ಯುಎಇಗೆ ತೆರಳಿದ ಬಳಿಕ ನಡೆಸಿದ 2 ಕೊರೊನಾ ಪರೀಕ್ಷೆಗಳಲ್ಲಿ ಆತನ ವರದಿ ನೆಗೆಟಿವ್ ಬಂದಿತ್ತು. ಆದರೆ ಸದ್ಯ 3ನೇ ವರದಿಯಲ್ಲಿ ಪಾಸಿಟಿವ್ ಬಂದಿದೆ. ಪರಿಣಾಮ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಯುಎಇ ತೆರಳಿದ ಬಳಿಕ ಯಾವುದೇ ಆಟಗಾರ, ತಂಡದ ಸದಸ್ಯರು ಆತನನ್ನು ಭೇಟಿ ಮಾಡಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಸ್ಪಷ್ಟಪಡಿಸಿದೆ. 14 ದಿನಗಳ ಬಳಿಕ ನಡೆಯುವ ಪರೀಕ್ಷೆಯಲ್ಲಿ ನೆಗೆಟಿವ್ ವರಿದ ಬಂದರೇ ಮಾತ್ರ ಆತನಿಗೆ ತಂಡದೊಂದಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದಿದೆ. ಇತ್ತ 2020ರ ಐಪಿಎಲ್ ಶೆಡ್ಯೂಲನ್ನು ಬಿಸಿಸಿಐ ಭಾನುವಾರವಷ್ಟೇ ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ಚೆನ್ನೈ ಜೊತೆ ಮೊದಲ ಪಂದ್ಯ, ಮೂರನೇ ದಿನ ಬೆಂಗಳೂರು ಮ್ಯಾಚ್

  • ದೆಹಲಿಗೆ ಅಶ್ವಿನ್, ಕಿಂಗ್ಸ್​​ಗೆ ಕನ್ನಡಿಗ ರಾಹುಲ್ ಕ್ಯಾಪ್ಟನ್?

    ದೆಹಲಿಗೆ ಅಶ್ವಿನ್, ಕಿಂಗ್ಸ್​​ಗೆ ಕನ್ನಡಿಗ ರಾಹುಲ್ ಕ್ಯಾಪ್ಟನ್?

    ನವದೆಹಲಿ: 2020ರ ಐಪಿಎಲ್ ಆವೃತ್ತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕನಾಗುವ ಸಾಧ್ಯತೆಯಿದೆ.

    ಕಿಂಗ್ಸ್ ಇಲೆವೆಲ್ ಪಂಜಾಬ್ ತಂಡದ ಆಡಳಿತ ಮಂಡಳಿ, ಕಳೆದ ಆವೃತ್ತಿಯಲ್ಲಿ ಆರಂಭಿಕನಾಗಿ ಉತ್ತಮವಾಗಿ ಬ್ಯಾಟ್ ಬೀಸಿದ ಕೆ.ಎಲ್ ರಾಹುಲ್ ಅವರಿಗೆ ನಾಯಕ ಸ್ಥಾನವನ್ನು ನೀಡಲು ತೀರ್ಮಾನ ಮಾಡಿದೆ. ಕಳೆದ ವರ್ಷ ಪಂಜಾಬ್ ತಂಡದ ನಾಯಕನಾಗಿದ್ದ ಅಶ್ವಿನ್ ದೆಹಲಿ ತಂಡಕ್ಕೆ ಹೋಗಲಿದ್ದಾರೆ ಎಂದು ವರದಿಯಾಗಿದೆ.

    ದೆಹಲಿ ತಂಡ, ನಾಯಕ ಶ್ರೇಯಸ್ ಅಯ್ಯರ್, ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ಮಾರ್ಗದರ್ಶಕ ಸೌರವ್ ಗಂಗೂಲಿಯವರ ನೇತೃತ್ವದಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಆದರೆ ದೆಹಲಿ ತಂಡದಲ್ಲಿ ಅನುಭವಿ ಸ್ಪಿನ್ನರ್‍ ಗಳ ಕೊರತೆ ಇದ್ದು, ಆರ್ ಅಶ್ವಿನ್ ಅವರಿಗೆ ಅ ಸ್ಥಾನ ನೀಡಲು ದೆಹಲಿ ಕ್ಯಾಪಿಟಲ್ ತಂಡದ ಆಡಳಿತ ಮಂಡಳಿ ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.

    ಈಗ ಸದ್ಯ ದೆಹಲಿ ತಂಡದಲ್ಲಿ 36 ವರ್ಷದ ಸ್ಪಿನ್ನರ್ ಅಮಿತ್ ಮಿಶ್ರಾ ಇದ್ದು, ಅವರಿಂದ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ಕಂಡು ಬಂದಿಲ್ಲ. ಅದ್ದರಿಂದ ಭಾರತ ತಂಡದಲ್ಲಿ ಹೆಚ್ಚು ಅನುಭವ ಇರುವ ಆರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ತೀರ್ಮಾನವನ್ನು ದೆಹಲಿ ಕ್ಯಾಪಿಟಲ್ ಮಾಡಿದೆ. ಈ ಮೂಲಕ ಬೌಲಿಂಗ್ ವಿಭಾಗವನ್ನು ಬಲಪಡಿಸುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

    ಕಳೆದ ಎರಡು ಆವೃತ್ತಿಯಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ ಅಶ್ವಿನ್ ಅವರು, ತಂಡವನ್ನು ಫ್ಲೇ ಆಫ್ ಹಂತಕ್ಕೆ ಕರೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಬದಲಾವಣೆಯ ಯೋಜನೆ ಮಾಡಿರುವ ಪಂಜಾಬ್ ತಂಡ ಆರಂಭಿಕನಾಗಿ ಉತ್ತಮ ಪ್ರದರ್ಶನ ನೀಡಿರುವ ಯುವ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್‍ಗೆ ಅ ಸ್ಥಾನವನ್ನು ನೀಡಲು ಮುಂದಾಗಿದೆ ಎಂದು ಹೇಳಲಾಗಿದೆ.

    ಅಶ್ವಿನ್ ಐಪಿಎಲ್‍ನಲ್ಲಿ ಒಟ್ಟು 139 ಪಂದ್ಯಗಳನ್ನು ಆಡಿ 26.48 ಸರಾಸರಿಯಲ್ಲಿ 125 ವಿಕೆಟ್ ಪಡೆದಿದ್ದಾರೆ. 2018 ರಲ್ಲಿ ಚೆನ್ನೈ ತಂಡ ಇವರನ್ನು ಕೈಬಿಟ್ಟ ಮೇಲೆ ಪಂಜಾಬ್ 7.6 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಖರೀದಿ ಮಾಡಿ ನಾಯಕ ಸ್ಥಾನ ನೀಡಿತ್ತು. ಆದರೆ ತಂಡವನ್ನು ಮುನ್ನಡೆಸುವಲ್ಲಿ ವಿಫಲರಾದ ಅಶ್ವಿನ್ ಕೆಳದ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ ಕಿತ್ತು ಕೇವಲ 42 ರನ್ ಗಳಿಸಿದ್ದರು. ಈ ಮೂಲಕ ಪಂಜಾಬ್ ತಂಡ ಅಂಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿತ್ತು.

  • ಕೊಹ್ಲಿ ಒಬ್ಬ ಅಪ್ರಬುದ್ಧ ಆಟಗಾರ – ರಬಾಡ

    ಕೊಹ್ಲಿ ಒಬ್ಬ ಅಪ್ರಬುದ್ಧ ಆಟಗಾರ – ರಬಾಡ

    ನವದೆಹಲಿ: ಕೊಹ್ಲಿ ಪಂದ್ಯದ ಸಮಯದಲ್ಲಿ ಎದುರಾಳಿಗಳನ್ನು ನಿಂದಿಸುತ್ತಾರೆ. ಆದರೆ ಎದುರಾಳಿಗಳು ನಿಂದಿಸಿದಾಗ ಕೋಪಗೊಳ್ಳುತ್ತಾರೆ. ಹೀಗಾಗಿ ಅವರೊಬ್ಬ ಅಪ್ರಬುದ್ಧ ಆಟಗಾರ ಎಂದು ದಕ್ಷಿಣ ಆಫ್ರಿಕಾದ ಯುವ ವೇಗಿ ಕಗಿಸೋ ರಬಾಡ ಅವರು ಹೇಳಿದ್ದಾರೆ.

    ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯದ ವೇಳೆ ಆಕ್ರಮಣಕಾರಿ ವ್ಯಕ್ತಿತ್ವ ತೋರುವ ವಿಚಾರದ ಬಗ್ಗೆ ಮಾತನಾಡಿರುವ ರಬಾಡ ಐಪಿಎಲ್ ವೇಳೆ ತಮ್ಮ ಮತ್ತು ಕೊಹ್ಲಿ ನಡುವಿನ ಘಟನೆಯನ್ನು ಹಂಚಿಕೊಂಡಿದ್ದಾರೆ.

    ಕೊಹ್ಲಿ ಪಂದ್ಯದ ವೇಳೆ ಎದುರಾಳಿಗಳನ್ನು ನಿಂದಿಸುತ್ತಾರೆ. ಆದರೆ ಯಾರದರು ಅವರನ್ನು ನಿಂದಿಸಿದರೆ ಕೋಪಗೊಳ್ಳುತ್ತಾರೆ. ಇದೇ ರೀತಿ ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯವೊಂದರಲ್ಲಿ ನನ್ನ ಎಸೆತಕ್ಕೆ ಬೌಂಡರಿ ಬಾರಿಸಿದ ಕೊಹ್ಲಿ ಅವರು ನನ್ನನ್ನು ನಿಂದಿಸಿ ಮಾತನಾಡಿದರು. ನಂತರ ಎಸೆದ ಎಸೆತ ಡಾಟ್ ಅದ ಕಾರಣ ನಾನು ಅವರನ್ನು ನಿಂದಿಸಿದೆ. ಇದನ್ನು ಸಹಿಸಿಕೊಳ್ಳದ ಕೊಹ್ಲಿ ನನ್ನ ಮೇಲೆ ಕೋಪಗೊಂಡರು ಎಂದು ವಿವರಿಸಿದರು.

    ವಿರಾಟ್ ಒಬ್ಬ ಅತ್ಯುತ್ತಮ ಆಟಗಾರ. ಒಳ್ಳೆಯ ಬ್ಯಾಟ್ಸ್‌ಮನ್ ಆಕ್ರಮಣಕಾರಿ ಆಟದ ಮೂಲಕ ತಂಡಕ್ಕೆ ಗೆಲುವು ತಂದು ಕೊಡುವ ಅದ್ಭುತ ಆಟಗಾರ. ಆದರೆ ಎದುರಾಳಿಗಳನ್ನು ಜರಿಯುವ ಅವರು ಎದುರಾಳಿಗಳ ಜರಿಯುವಿಕೆಯನ್ನು ಸ್ವೀಕಾರ ಮಾಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಬಾಡ ಅವರು 2018ರಲ್ಲಿ ಕೊಹ್ಲಿ ಅವರನ್ನು ಹಿಂದಿಕ್ಕಿ ಐಸಿಸಿಯ ವರ್ಷದ ಆಟಗಾರ ಪ್ರಶಸ್ತಿ ಮತ್ತು ಆದೇ ವರ್ಷ ಅತ್ಯುತ್ತಮ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಕಸಿದುಕೊಂಡಿದ್ದರು.

    ಈ ವಿಚಾರದ ಬಗ್ಗೆ ಮಾತನಾಡಿದ ರಬಾಡ, ಕೊಹ್ಲಿ ಅವರು ಕಳೆದ ಐದು ವರ್ಷದಿಂದ ಭಾರತೀಯ ಕ್ರಿಕೆಟ್‍ನ ಆಧಾರ ಸ್ತಂಭ ಅವರು ಈ ಎಲ್ಲಾ ಪ್ರಶಸ್ತಿಗಳಿಗೂ ಅರ್ಹರಾಗಿದ್ದಾರೆ. ಕೊಹ್ಲಿ ಅವರು ಆಡುವ ಆಟದ ವಿಷಯದಲ್ಲಿ ನೀವು ತಪ್ಪು ಹುಡುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    2019ರ ವಿಶ್ವಕಪ್‍ನ ತನ್ನ ಮೊದಲ ಪಂದ್ಯವನ್ನು ಕೊಹ್ಲಿ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 5 ರಂದು ಆಡಲಿದೆ.