Tag: Delhi Capital

  • ಹೈದರಾಬಾದ್ ವಿರುದ್ಧ ಸ್ಫೋಟಕ ಆಟ – ಹೌ ಇಸ್ ದಿ ಜೋಶ್ ಎಂದ ವಾರ್ನರ್

    ಹೈದರಾಬಾದ್ ವಿರುದ್ಧ ಸ್ಫೋಟಕ ಆಟ – ಹೌ ಇಸ್ ದಿ ಜೋಶ್ ಎಂದ ವಾರ್ನರ್

    ಮುಂಬೈ: ಎಡಗೈ ಬ್ಯಾಟ್ಸ್‌ಮ್ಯಾನ್ ಡೇವಿಡ್ ವಾರ್ನರ್ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನ ಬಳಿಕ ವಾರ್ನರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಂಭ್ರಮಾಚರಣೆಯನ್ನು ಮಾಡಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

    ಬಾಲಿವುಡ್‌ನ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದಲ್ಲಿರುವ ಫೇಮಸ್ ಡೈಲಾಗ್ ಹೌ ಇಸ್ ದಿ ಜೋಶ್ ಎಂಬಂತೆ ವಾರ್ನರ್ ತಮ್ಮ ತಂಡದ ಸದಸ್ಯರನ್ನು ಉದ್ದೇಶಿಸಿ ಫುಲ್ ಜೋಶ್ ತೋರಿಸಿದ್ದಾರೆ. ಈ ವೀಡಿಯೋವನ್ನು ಡೆಲ್ಲಿ ಕ್ಯಾಪಿಟಲ್ಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿ ದಾಖಲೆ ಬರೆದ ಡೇವಿಡ್ ವಾರ್ನರ್

    ವೀಡಿಯೋದಲ್ಲಿ ವಾರ್ನರ್ ತಮ್ಮ ತಂಡದ ಸದಸ್ಯರನ್ನು ಉದ್ದೇಶಿಸಿ ಹೌ ಇಸ್ ದಿ ಜೋಶ್ ಎನ್ನುತ್ತಾರೆ. ಇದಕ್ಕೆ ತಂಡದ ಇತರ ಸದಸ್ಯರು ಅನುಸರಿಸಿ, ಹೈ ಸರ್ ಎಂದು ಕೂಗಿದ್ದಾರೆ.

    ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಡೆಲ್ಲಿ ತಂಡದ ಡೇವಿಡ್ ವಾರ್ನರ್ ಟಿ-20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು. ಇದನ್ನೂ ಓದಿ: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ

    ವಾರ್ನರ್ ತಮ್ಮ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ, 3 ಸಿಕ್ಸ್‌ಗಳನ್ನು ಒಳಗೊಂಡಂತೆ 92 ರನ್‌ಗಳನ್ನು ಗಳಿಸುವ ಮೂಲಕ ಟಿ-20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಅರ್ಧಶತಕಗಳನ್ನು ಗಳಿಸಿ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.

  • ಭದ್ರತಾ ಲೋಪ – ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ

    ಭದ್ರತಾ ಲೋಪ – ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ

    ಮುಂಬೈ: ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ದುಷ್ಕರ್ಮಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿರುವುದಾಗಿ ಮುಂಬೈ ಪೊಲೀಸರು ಬುಧವಾರ ತಿಳಿಸಿದ್ದಾರೆ.

    ಐಪಿಎಲ್ ಸೀಸನ್ 15 ಮಾರ್ಚ್ 26 ರಿಂದ ಆರಂಭವಾಗಲಿದೆ. ಎಲ್ಲಾ ತಂಡಗಳ ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಾರಿ ಎಲ್ಲಾ ಪಂದ್ಯಗಳು ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿವೆ. ಮುಂಬೈನ ಮೂರು ಸ್ಟೇಡಿಯಂಗಳಲ್ಲಿ ಅಂದರೆ ವಾಂಖೆಡೆ, ಬ್ರಾಬನ್ ಮತ್ತು ಡಿವೈ ಪಾಟೀಲ್‍ನಲ್ಲಿ ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಎಲ್ಲಾ ತಂಡಗಳ ಆಟಗಾರರು ಮುಂಬೈ ಕಡೆ ಪ್ರಯಾಣಿಸುತ್ತಿದ್ದಾರೆ. ಇದೆಲ್ಲದರ ನಡುವೆ ಆಟಗಾರರ ಭದ್ರತೆಯಲ್ಲಿ ಭಾರೀ ಲೋಪ ಕಂಡುಬಂದಿದೆ.

    ಮಾರ್ಚ್ 16 ರಂದು, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಆಟಗಾರರನ್ನು ಕರೆತರಲು 5-ಸ್ಟಾರ್ ಹೋಟೆಲ್‍ನ ಹೊರಗೆ ನಿಲ್ಲಿಸಿದ್ದ ಐಷಾರಾಮಿ ಬಸ್‍ನ ಗಾಜುಗಳನ್ನು ಒಡೆದು ದುಷ್ಕೃತ್ಯ ಮೆರೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ, ಸಿಎಂ ಏನೇ ಮಾತಾಡಲಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ: ಡಿಕೆಶಿ

    ದೆಹಲಿ ಕ್ಯಾಪಿಟಲ್ ಐಪಿಎಲ್ ತಂಡದ ನಿಂತಿದ್ದ ಬಸ್ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಐಪಿಸಿಯ 143, 147, 149, 427 ಸೆಕ್ಷನ್‍ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್

    ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಪ್ಯಾಲೇಸ್ ಎಂಬ ಹೋಟೆಲ್‍ನಲ್ಲಿ ದೆಹಲಿ ತಂಡ ತಂಗಿದೆ. ಪ್ರಸಿದ್ಧವಾದ ‘ಗೇಟ್‍ವೇ ಆಫ್ ಇಂಡಿಯಾ’ ಈ ಹೋಟೆಲ್‍ಗೆ ತುಂಬಾ ಹತ್ತಿರದಲ್ಲಿದ್ದು, ಇದು ವಾಂಖೆಡೆ ಸ್ಟೇಡಿಯಂಗೆ ಕೂಡ ಹತ್ತಿರದಲ್ಲಿದೆ.

    ದೆಹಲಿ ಕ್ಯಾಪಿಟಲ್ಸ್ ಕಳೆದ ವಾರವಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ಗಾಗಿ ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿತ್ತು. ಇದರಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್, ವೇಗದ ಬೌಲರ್ ಅನ್ರಿಚ್ ನಾಟ್ರ್ಜೆ ಮತ್ತು ಹೊಸ ಆಟಗಾರ ಡೇವಿಡ್ ವಾರ್ನರ್ ಹೊಸ ಜೆರ್ಸಿಯೊಂದಿಗೆ ಪೋಸ್ ನೀಡಿದ್ದರು.

  • ಕುಟುಂಬ ಕೊರೊನಾ ಸಂಕಷ್ಟದಲ್ಲಿದೆ- IPLನಿಂದ ಹಿಂದೆ ಸರಿದ ಅಶ್ವಿನ್

    ಕುಟುಂಬ ಕೊರೊನಾ ಸಂಕಷ್ಟದಲ್ಲಿದೆ- IPLನಿಂದ ಹಿಂದೆ ಸರಿದ ಅಶ್ವಿನ್

    ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಪಿಎಲ್ ನಿಂದ ಹಿಂದೆ ಸರಿಯುವ ಬಗ್ಗೆ ಘೋಷಣೆ ಮಾಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದ ಸಂತಸದಲ್ಲಿದ್ದ ಡೆಲ್ಲಿ ತಂಡಕ್ಕೆ ಅಶ್ವಿನ್ ನಿರ್ಧಾರ ಶಾಕ್ ನೀಡಿದೆ.

    ನಾನು ನಾಳೆಯಿಂದ ಐಪಿಎಲ್ ಆಡುತ್ತಿಲ್ಲ. ನನ್ನ ಕುಟುಂಬ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದೆ. ಈ ಸಂಕಷ್ಟದಲ್ಲಿ ಅವರ ಜೊತೆ ನಾನಿರಬೇಕು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾದ್ರೆ ಮತ್ತೆ ಅಂಗಳಕ್ಕೆ ಬರಲಿದ್ದೇನೆ ಎಂದು ಅಶ್ವಿನ್ ಟ್ವೀಟ್ ಮೂಲಕ ಆಟದಿಂದ ದೂರ ಉಳಿಯುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

    ಇದಕ್ಕೂ ಮೊದಲು ರಾಜಸ್ಥಾನ ರಾಯಲ್ಸ್ ತಂಡದ ಫಾಸ್ಟ್ ಬೌಲರ್ ಅಂಡ್ರ್ಯೂ ಟೈ ಸಹ ಐಪಿಎಲ್ ಟೂರ್ನಮೆಂಟ್ ನಿಂದ ಹಿಂದೆ ಸರಿದಿದ್ದಾರೆ. ಇನ್ನು ಲಿಯಮ್ ಲಿವಿಂಗ್‍ಸ್ಟೋನ್ ಸಹ ಪಂದ್ಯದಿಂದ ಹೊರ ಬಂದಿದ್ದಾರೆ. ಕೊರೊನ ಸ್ಫೋಟದ ಹಿನ್ನೆಲೆ ಆಸ್ಟ್ರೇಲಿಯಾದ ಇನ್ನಿಬ್ಬರು ಆಟಗಾರರು ಪಂದ್ಯ ದೂರ ಉಳಿಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವರದಿಯಾಗಿದೆ. ಪ್ರಾಂಚೈಸಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಆಟಗಾರರು, ಅನುಮತಿ ಸಿಕ್ಕ ಬೆನ್ನಲ್ಲೇ ತವರಿಗೆ ಮರಳಲಿದ್ದಾರೆ ಎಂದು ಹೇಳಲಾಗಿದೆ.

    ಸೂಪರ್ ಓವರ್ ನಲ್ಲಿ ಡೆಲ್ಲಿಗೆ ರೋಚಕ ಜಯ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೂಪರ್ ಓವರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕವಾಗಿ ಪಂದ್ಯವನ್ನು ಗೆದ್ದುಕೊಂಡಿದೆ. ಗೆಲ್ಲಲು 160 ರನ್‍ಗಳ ಸವಾಲನ್ನು ಪಡೆದ ಹೈದರಾಬಾದ್ ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸೂಪರ್ ಓವರ್‍ನಲ್ಲಿ ಡೆಲ್ಲಿ ಗೆದ್ದ ಪರಿಣಾಮ ಅಂಕಪಟ್ಟಿಯಲ್ಲಿ 8 ಅಂಕಗಳಿಸಿ ಬೆಂಗಳೂರು ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿ ಎರಡನೇ ಸ್ಥಾನಕ್ಕೆ ಏರಿದೆ. ಹೈದರಾಬಾದ್ 7ನೇ ಸ್ಥಾನದಲ್ಲೇ ಮುಂದುವರಿದಿದೆ.

  • ರೋಹಿತ್ ಭರ್ಜರಿ ಆಟಕ್ಕೆ ಐದನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಮುಂಬೈ

    ರೋಹಿತ್ ಭರ್ಜರಿ ಆಟಕ್ಕೆ ಐದನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಮುಂಬೈ

    – ಡೆಲ್ಲಿ ಚೊಚ್ಚಲ ಐಪಿಎಲ್ ಆಸೆ ಭಗ್ನ, ದಾಖಲೆ ಬರೆದ ರೋಹಿತ್

    ದುಬೈ: ಇಂದು ನಡೆದ ಐಪಿಎಲ್-2020ಯ ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ ಮುಂಬೈ ತಂಡ ಗೆದ್ದು ಬೀಗಿದೆ. ಈ ಮೂಲಕ ಐದನೇ ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ.

    ಇಂದಿನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಅವರ ತಾಳ್ಮೆಯ ಆಟದಿಂದ ನಿಗದಿತ 20 ಓವರಿನಲ್ಲಿ 156 ರನ್ ಸಿಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ನಾಯಕ ರೋಹಿತ್ ಶರ್ಮಾ ಅವರು ಸ್ಫೋಟಕ ಬ್ಯಾಟಿಂಗ್‍ನಿಂದ ಇನ್ನೂ 8 ಬಾಲ್ ಬಾಕಿಯಿದ್ದಂತೆ ಮುಂಬೈ 157 ರನ್ ಬಾರಿಸಿ ಟ್ರೋಫಿ ಗೆದ್ದುಕೊಂಡಿತು.

    ದಾಖಲೆ ಬರೆದ ಮುಂಬೈ
    ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‍ನಲ್ಲಿ ಐದು ಬಾರೀ ಚಾಂಪಿಯನ್ ಆಗಿ ದಾಖಲೆ ಬರೆದಿದೆ. ಮುಂಬೈ 2013, 2015, 2017 ಮತ್ತು 2019ರಲ್ಲಿ ಕಪ್ ಗೆದ್ದು ಅತೀ ಹೆಚ್ಚು ಬಾರೀ ಐಪಿಎಲ್ ಟ್ರೋಫಿ ಗೆದ್ದ ತಂಡವಾಗಿತ್ತು. ಈಗ ಈ ಬಾರಿಯು ಕಪ್ ಗೆದ್ದು, ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ತಂಡ ಎಂಬ ದಾಖಲೆ ಬರೆದಿದೆ. ಜೊತೆಗೆ ನಾಯಕನಾಗಿ ರೋಹಿತ್ ಅವರು ಕೂಡ ಐದು ಬಾರೀ ಐಪಿಎಲ್ ಟ್ರೋಫಿ ಗೆದ್ದ ಕ್ಯಾಪ್ಟನ್ ಎಂಬ ಖ್ಯಾತಿ ಪಡೆದಿದ್ದಾರೆ.

    ಡೆಲ್ಲಿ ನೀಡಿದ 157 ರನ್ ಗುರಿಯನ್ನು ಬೆನ್ನಟ್ಟಲು ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡ ಡಿಸೆಂಟ್ ಓಪನಿಂಗ್ ಪಡೆದುಕೊಂಡಿತು. ಆದರೆ ತಂಡದ ಮೊತ್ತ 45 ರನ್ ಆಗಿದ್ದಾಗ ಕ್ವಿಂಟನ್ ಡಿ ಕಾಕ್ ಅವರು ಮಾರ್ಕಸ್ ಸ್ಟೋಯಿನಿಸ್ ಅವರ ಬೌಲಿಂಗ್‍ನಲ್ಲಿ ಔಟ್ ಆದರು. ಈ ಮೂಲಕ ಪವರ್ ಪ್ಲೇ ಹಂತದಲ್ಲಿ ಒಂದು ವಿಕೆಟ್ ಕಳೆದುಕೊಂಡರು ಮುಂಬೈ ಇಂಡಿಯನ್ಸ್ ಆರು ಓವರ್ ಮುಕ್ತಾಯಕ್ಕೆ ಬರೋಬ್ಬರಿ 61 ರನ್ ಸಿಡಿಸಿತು.

    ಎರಡನೇ ವಿಕೆಟ್‍ಗೆ ಜೊತೆಯಾದ ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ 45 ರನ್‍ಗಳ ಜೊತೆಯಾಟವಾಡಿದರು. ಆದರೆ 10ನೇ ಓವರ್ ಐದನೇ ಬಾಲಿನಲ್ಲಿ ಸೂರ್ಯಕುಮಾರ್ ಯಾದವ್ ಅವರು ಔಟ್ ಆದರು. ಇದೇ ವೇಳೆ ಆರಂಭದಿಂದಲು ಸ್ಫೋಟಕವಾಗಿ ಆಡಿಕೊಂಡು ಬಂದ ನಾಯಕ ರೋಹಿತ್ ಶರ್ಮಾ 36 ಬಾಲಿಗೆ ಅರ್ಧಶತಕ ಸಿಡಿಸಿದರು.

    ಮುಂಬೈ ಟ್ರೋಫಿ ಗೆಲ್ಲಲು 20 ರನ್‍ಗಳ ಅವಶ್ಯಕತೆ ಇದ್ದಾಗ ದೊಡ್ಡ ಹೊಡೆತಕ್ಕೆ ಕೈಹಾಕಿದ ರೋಹಿತ್ ಶರ್ಮಾ, 51 ಎಸೆತಗಳಲ್ಲಿ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಮೇತ 68 ರನ್ ಸಿಡಿಸಿ ಔಟ್ ಆದರು. ರೋಹಿತ್ ನಂತರ ಬಂದು ಎರಡು ಬೌಂಡರಿ ಸಿಡಿಸಿ ಅಬ್ಬರಿಸಿದ್ದ ಕೀರನ್ ಪೊಲಾರ್ಡ್ ಅವರು 9 ರನ್ ಗಳಿಸಿ ಕಗಿಸೊ ರಬಾಡಾ ಅವರಿಗೆ ಬೌಲ್ಡ್ ಆದರು. ಕೊನೆಯ ರನ್ ಬೇಕಿದ್ದಾಗ ಹಾರ್ದಿಕ್ ಪಾಂಡ್ಯ ಕ್ಯಾಚ್ ಕೊಟ್ಟರು. ಕೊನೆಯವರೆಗೂ ಔಟ್ ಆಗದೇ ಉಳಿದ ಇಶಾನ್ ಕಿಶನ್ 19 ಬಾಲಿಗೆ 33 ರನ್ ಸಿಡಿಸಿ ಮುಂಬೈ ಅನ್ನು ಗೆಲುವಿನ ದಡ ಸೇರಿಸಿದರು.

    ಇದಕ್ಕೂ ಮುನ್ನ ಬ್ಯಾಟ್ ಮಾಡಿದ್ದ ಡೆಲ್ಲಿ ತಂಡ ಆರಂಭದಲ್ಲೇ ಟ್ರೆಂಟ್ ಬೌಲ್ಟ್ ಅವರ ದಾಳಿಗೆ ನಲುಗಿ ಬೇಗ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಜೊತೆಯಾದ ಶ್ರೇಯಾಸ್ ಐಯ್ಯರ್ (65 ರನ್, 50 ಎಸೆತ, 6 ಬೌಂಡರಿ. 2 ಸಿಕ್ಸರ್) ಮತ್ತು ರಿಷಭ್ ಪಂತ್ ಇಬ್ಬರೂ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು ಮೇಲೆತ್ತಿದರು. ಪರಿಣಾಮ ಪ್ರಮುಖ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ತಂಡಕ್ಕೆ 157 ರನ್‍ಗಳ ಗುರಿ ನೀಡಿತ್ತು.

  • ಕುಸಿದ ಡೆಲ್ಲಿಗೆ ಪಂತ್, ಐಯ್ಯರ್ ಆಸರೆ – ಐದನೇ ಬಾರಿ ಟ್ರೋಫಿ ಗೆಲ್ಲಲು ಮುಂಬೈಗೆ 157 ರನ್‍ಗಳ ಗುರಿ

    ಕುಸಿದ ಡೆಲ್ಲಿಗೆ ಪಂತ್, ಐಯ್ಯರ್ ಆಸರೆ – ಐದನೇ ಬಾರಿ ಟ್ರೋಫಿ ಗೆಲ್ಲಲು ಮುಂಬೈಗೆ 157 ರನ್‍ಗಳ ಗುರಿ

    – ಬೌಲ್ಟ್ ದಾಳಿಗೆ ಮತ್ತೆ ತತ್ತರಿಸಿದ ಕ್ಯಾಪಿಟಲ್ಸ್ ಟಾಪ್ ಆರ್ಡರ್

    ದುಬೈ: ಇಂದು ನಡೆಯುತ್ತಿರುವ ಐಪಿಎಲ್-2020ಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ತಂಡಕ್ಕೆ 157 ರನ್‍ಗಳ ಟಾರ್ಗೆಟ್ ನೀಡಿದೆ.

    ಇಂದು ದುಬೈ ಮೈದಾನದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಆರಂಭದಲ್ಲೇ ಟ್ರೆಂಟ್ ಬೌಲ್ಟ್ ಅವರ ದಾಳಿಗೆ ನಲುಗಿ ಬೇಗ ಮೂರು ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಶ್ರೇಯಾಸ್ ಐಯ್ಯರ್ (65 ರನ್, 50 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ರಿಷಭ್ ಪಂತ್ ತಲಾ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನ ಮೇಲೆತ್ತಿದರು. ಪರಿಣಾಮ ಪ್ರಮುಖ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ತಂಡಕ್ಕೆ 157 ರನ್‍ಗಳ ಗುರಿ ನೀಡಿತು.

    ಬೌಲ್ಟ್ ದಾಳಿ
    ಕ್ವಾಲಿಫೈಯರ್-1ರಲ್ಲಿ ಡೆಲ್ಲಿ ತಂಡವನ್ನು ಕಾಡಿದ್ದ ಮುಂಬೈ ವೇಗಿ ಟ್ರೆಂಟ್ ಬೌಲ್ಟ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಟಾಪ್ ಆರ್ಡರ್ ಗೆ ಮುಳುವಾದರು. ನಾಲ್ಕು ಓವರ್ ಬೌಲ್ ಮಾಡಿದ ಟ್ರೆಂಟ್ ಬೌಲ್ಟ್ 30 ರನ್ ನೀಡಿ ಮೂರು ವಿಕೆಟ್ ಪಡೆದು ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಥನ್ ಕೌಲ್ಟರ್-ನೈಲ್ ಎರಡು ವಿಕೆಟ್ ಪಡೆದು ಮಿಂಚಿದರು. ಜಯಂತ್ ಯಾದವ್ ಒಂದು ವಿಕೆಟ್ ಪಡೆದುಕೊಂಡರು. ಜಸ್ಪ್ರೀತ್ ಬುಮ್ರಾಗೆ ಇಂದು ಯಾವುದೇ ವಿಕೆಟ್ ಬೀಳಲಿಲ್ಲ.

    ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ ವೇಗಿ ಟ್ರೆಂಟ್ ಬೌಲ್ಟ್ ಮೊದಲ ಬಾಲಿನಲ್ಲೇ ಶಾಕ್ ನೀಡಿದರು. ಈ ಮೂಲಕ ಆರಂಭಿಕನಾಗಿ ಬಂದ ಮಾರ್ಕಸ್ ಸ್ಟೋಯಿನಿಸ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ನಂತರ ಬಂದ ಅಜಿಂಕ್ಯ ರಹಾನೆ ಕೂಡ 2 ರನ್ ಗಳಿಸಿ ಟ್ರೆಂಟ್ ಬೌಲ್ಟ್ ಅವರ ಬೌಲಿಂಗ್‍ನಲ್ಲಿ ಡಿ ಕಾಕ್‍ಗೆ ಕ್ಯಾಚ್ ಕೊಟ್ಟು ಹೊರನಡೆದರು.

    ಬೌಲ್ಟ್ ನಂತರ ದಾಳಿಗಿಳಿದ ಜಯಂತ್ ಯಾದವ್ ಇನ್ ಫಾರ್ಮ್ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರನ್ನು ಔಟ್ ಮಾಡಿದರು. ಪವರ್ ಪ್ಲೇ ಹಂತದಲ್ಲಿ ಎಡವಿದ ಡೆಲ್ಲಿ ಆರು ಓವರ್ ಮುಕ್ತಾಯಕ್ಕೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು 41 ರನ್ ಪೇರಿಸಿತು. ನಂತರ ಜೊತೆಯಾದ ನಾಯಕ ಶ್ರೇಯಾಸ್ ಐಯ್ಯರ್ ಮತ್ತು ರಿಷಭ್ ಪಂತ್ ಸೇರಿಕೊಂಡು ತಾಳ್ಮೆಯ ಆಟದ ಜೊತೆಗೆ ರನ್ ಕಲೆ ಹಾಕಿದರು. ಜೊತೆಗೆ ಅರ್ಧಶತಕದ ಜೊತೆಯಾಟವಾಡಿದರು.

    ಪಂತ್ ಮತ್ತು ಐಯ್ಯರ್ ಉತ್ತಮ ಆಟದ ಫಲವಾಗಿ ಆರಂಭದಲ್ಲೇ ಕುಸಿದಿದ್ದ ಡೆಲ್ಲಿ ತಂಡ 13 ಓವರಿನಲ್ಲಿ 100 ರನ್ ಸಿಡಿಸಿತು. ಇದೇ ವೇಳೆ 35 ಬಾಲಿಗೆ ರಿಷಭ್ ಪಂತ್ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಪಂತ್ ಬೌಂಡರಿ ಗೆರೆ ಬಳಿ ಕ್ಯಾಚ್ ಕೊಟ್ಟು ಔಟ್ ಆದರು. ಆದರೆ ಆರಂಭದಿಂದ ತಾಳ್ಮೆಯಿಂದ ಆಡಿ ತಂಡಕ್ಕೆ ನೆರವಾಗಿದ್ದ ಐಯ್ಯರ್ 40 ಬಾಲಿನಲ್ಲಿ ಅರ್ಧಶತಕ ಸಿಡಿಸಿದರು. ಶಿಮ್ರಾನ್ ಹೆಟ್ಮಿಯರ್ ಐದು ರನ್ ಸಿಡಿಸಿ ಔಟ್ ಆದರು. ನಂತರ ಆಕ್ಸಾರ್ ಪಟೇಲ್ ಮತ್ತು ರಬಾಡಾ ಔಟ್ ಆಗಿ ಹೊರನಡೆದರು.

  • 4 ಓವರ್ 4 ವಿಕೆಟ್ 14 ರನ್, ಬುಮ್ರಾ ಬೌಲಿಂಗ್ ದಾಳಿಗೆ ಡೆಲ್ಲಿ ತತ್ತರ – ಮುಂಬೈ ಫೈನಲ್‍ಗೆ ಲಗ್ಗೆ

    4 ಓವರ್ 4 ವಿಕೆಟ್ 14 ರನ್, ಬುಮ್ರಾ ಬೌಲಿಂಗ್ ದಾಳಿಗೆ ಡೆಲ್ಲಿ ತತ್ತರ – ಮುಂಬೈ ಫೈನಲ್‍ಗೆ ಲಗ್ಗೆ

    – ರೋಹಿತ್, ರಹಾನೆ, ದವನ್ ಸೇರಿ ಆರು ಜನ ಆಟಗಾರರು ಶೂನ್ಯಕ್ಕೆ ಔಟ್

    ದುಬೈ: ಇಂದು ನಡೆದ ಕ್ವಾಲಿಫಯರ್-1 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ತಂಡ 57 ರನ್‍ಗಳ ಅಂತರದಿಂದ ಗೆದ್ದು ಫೈನಲ್ ತಲುಪಿದೆ.

    ಇಂದು ದುಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಬೇಗನೇ ಔಟ್ ಆದರು ಕೂಡ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅಬ್ಬರದ ಆಟದಿಂದ ನಿಗದಿತ 20 ಓವರಿನಲ್ಲಿ 200 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ 143 ರನ್‍ಗಳಿಸಿ ಸೋತಿತು.

    ಬುಮ್ರಾ ಬೌಲಿಂಗ್ ಅಬ್ಬರ
    ಇಂದು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅಬ್ಬರದ ಬ್ಯಾಟಿಂಗ್ ಮಾಡಿದರು. ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಬುಮ್ರಾ ಕೇವಲ 14 ರನ್ ನೀಡಿ ಬರೋಬ್ಬರಿ ನಾಲ್ಕು ವಿಕೆಟ್ ಪಡೆದರು. ಜೊತೆಗೆ ಒಂದು ಮೇಡನ್ ಓವರ್ ಕೂಡ ಮಾಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಟ್ರೆಂಟ್ ಬೌಲ್ಟ್ ಎರಡು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು ಒಂದು ಮೇಡನ್ ಸಮೇತ 9 ರನ್ ನೀಡಿದರು.

    ಶೂನ್ಯ ಸುತ್ತಿದ 6 ಜನ ಆಟಗಾರರು
    ಇಂದು ನಡೆದ ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲೇ ಒಂದೇ ಪಂದ್ಯದಲ್ಲಿ ಆರು ಜನ ಆಟಗಾರರು ಶೂನ್ಯಕ್ಕೆ ಔಟ್ ಆಗಿದ್ದಾರೆ. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದಿಂದ ನಾಯಕ ರೋಹಿತ್ ಶರ್ಮಾ ಮತ್ತು ಇನ್ ಫಾರ್ಮ್ ಆಟಗಾರ ಕೀರನ್ ಪೊಲಾರ್ಡ್ ಶೂನ್ಯಕ್ಕೆ ಔಟ್ ಆಗಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ನೀಡಿದ ಬೃಹತ್ ಮೊತ್ತ ಬೆನ್ನಟ್ಟಲು ಬಂದ ಡೆಲ್ಲಿ ತಂಡದ ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ ಮತ್ತು ಡೇನಿಯಲ್ ಸ್ಯಾಮ್ಸ್ ಶೂನ್ಯಕ್ಕೆ ಔಟ್ ಆಗಿದ್ದಾರೆ.

    ಮುಂಬೈ ಇಂಡಿಯನ್ಸ್ ನೀಡದ ಬೃಹತ್ ಮೊತ್ತವನ್ನು ಬೆನ್ನಟ್ಟಲು ಬಂದ ಡೆಲ್ಲಿ ತಂಡಕ್ಕೆ ಮುಂಬೈ ವೇಗಿ ಟ್ರೆಂಟ್ ಬೌಲ್ಟ್ ಅವರು ಡಬಲ್ ಶಾಕ್ ನೀಡಿದರು. ಆರಂಭಿಕನಾಗಿ ಕಣಕ್ಕಿಳಿದ ಪೃಥ್ವಿ ಶಾ ಇನ್ನಿಂಗ್ಸ್ ನ ಎರಡನೇ ಬಾಲಿನಲ್ಲಿ ಕ್ಯಾಚ್ ನೀಡಿ ಶೂನ್ಯಕ್ಕೆ ಔಟ್ ಆದರು. ನಂತರ ಬಂದ ಅಜಿಂಕ್ಯ ರಹಾನೆ ಅವರು ಕೂಡ ಮೊದಲನೇ ಓವರ್ ಐದನೇ ಬಾಲಿನಲ್ಲಿ ಶೂನ್ಯ ಸುತ್ತಿ ಟ್ರೆಂಟ್ ಬೌಲ್ಟ್ ಗೆ ಔಟ್ ಆಗಿ ಪೆವಿಲಿಯನ್ ಸೇರಿದರು.

    ಎರಡನೇ ಓವರ್ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ತಮ್ಮ ಸ್ಪೀಡ್ ಯಾರ್ಕರ್ ಮೂಲಕ ಶಿಖರ್ ಧವನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ನಂತರ ತಾಳ್ಮೆಯಿಂದ ಬ್ಯಾಟ್ ಬೀಸುತ್ತಿದ್ದ ನಾಯಕ ಶ್ರೇಯಸ್ ಐಯ್ಯರ್ ಮೂರನೇ ಓವರ್ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ರಿಷಭ್ ಪಂತ್ ಮತ್ತು ಮಾರ್ಕಸ್ ಸ್ಟೊಯಿನಿಸ್ ರನ್ ಕಲೆ ಹಾಕಿದರು. ಆದರೆ 7ನೇ ಓವರ್ 5ನೇ ಬಾಲಿನಲ್ಲಿ 3 ರನ್‍ಗಳಿಸಿ ರಿಷಭ್ ಪಂತ್ ಔಟ್ ಆದರು.

    ಒಂದು ಕಡೆ ವಿಕೆಟ್ ಕಳೆದುಕೊಂಡರು ಉತ್ತಮವಾಗಿ ಆಡಿದ ಮಾರ್ಕಸ್ ಸ್ಟೊಯಿನಿಸ್ ಅವರು 36 ಬಾಲಿಗೆ ಅರ್ಧಶತಕ ಸಿಡಿಸಿದರು. ಆದರೆ 15ನೇ ಓವರಿನಲ್ಲಿ 46 ಬಾಲಿಗೆ 65 ರನ್ ಸಿಡಿಸಿ ಆಡುತ್ತಿದ್ದ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಜಸ್ಪ್ರೀತ್ ಬುಮ್ರಾ ಅವರು ಔಟ್ ಮಾಡಿದರು. ನಂತರ ಬಂದ ಡೇನಿಯಲ್ ಸ್ಯಾಮ್ಸ್ ಅವರು ಕೂಡ ಶೂನ್ಯ ಸುತ್ತಿ ಔಟ್ ಆಗಿ ಹೊರನಡೆದರು. ನಂತರ 42ರನ್ ಗಳಿಸಿ ಆಕ್ಸರ್ ಪಟೇಲ್ ಔಟ್ ಆದರು.

  • ಐಪಿಎಲ್2020: 2ನೇ ಸ್ಥಾನ ಯಾರಿಗೆ? ಕೊಹ್ಲಿ ಪಡೆಗೆ ಪ್ಲೇ ಆಫ್ ಸ್ಥಾನ ಕನ್ಫರ್ಮ್ ಆಗುತ್ತಾ?

    ಐಪಿಎಲ್2020: 2ನೇ ಸ್ಥಾನ ಯಾರಿಗೆ? ಕೊಹ್ಲಿ ಪಡೆಗೆ ಪ್ಲೇ ಆಫ್ ಸ್ಥಾನ ಕನ್ಫರ್ಮ್ ಆಗುತ್ತಾ?

    – ಕೆಕೆಆರ್ ಪ್ಲೇ ಆಫ್ ಪ್ರವೇಶಿಸಲು ಅವಕಾಶವಿದೆ

    ಅಬುಧಾಬಿ: 2020ರ ಐಪಿಎಲ್ ಟೂರ್ನಿಯಲ್ಲಿ 45 ದಿನಗಳಲ್ಲಿ 54 ತಂಡಗಳು ಪೂರ್ಣಗೊಂಡರೂ ಪ್ಲೇ ಆಫ್ ರೇಸ್ ಅಂತ್ಯವಾಗಿಲ್ಲ. ಇವತ್ತು ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಇವತ್ತು ದೆಹಲಿ ಮತ್ತು ಬೆಂಗಳೂರು ನಡುವೆ ಐಪಿಎಲ್ ಮ್ಯಾಚ್ ನಡೆಯಲಿದೆ.

    ಇಂದಿನ ಮ್ಯಾಚ್‍ನಲ್ಲಿ ಆರ್‌ಸಿಬಿ ಗೆಲ್ಲಲೇಬೇಕಾಗಿದೆ. ಗೆದ್ದರಷ್ಟೇ ಪ್ಲೇ ಆಫ್‍ಗೆ ಆರ್ ಸಿಬಿಗೆ ಎಂಟ್ರಿ ಸಿಗುತ್ತೆ. ಅಪ್ಪಿತಪ್ಪಿ ಸೋತರೆ ಆಗ ಬೆಂಗಳೂರು ತಂಡದ ಭವಿಷ್ಯ ಹೈದ್ರಾಬಾದ್-ಮುಂಬೈ ನಡುವಿನ ಪಂದ್ಯದ ಮೇಲೆ ಅವಲಂಬಿತ ಆಗಿರುತ್ತೆ. ಮುಂಬೈ ಎದುರು ಹೈದ್ರಾಬಾದ್ ಸೋತರಷ್ಟೇ ಆರ್ ಸಿಬಿ ಆಸೆ ಜೀವಂತವಾಗಿರಲಿದೆ.

    ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆಲ್ಲಿ, ಬೆಂಗಳೂರು ತಂಡವನ್ನು 59 ರನ್ ಗಳ ಅಂತರದಿಂದ ಸೋಲುಣಿಸಿತ್ತು. ಈ ಸೋಲಿಗೆ ಕೊಹ್ಲಿ ಸೇನೆ ಪ್ರತಿಕಾರ ತೀರಿಸಿಕೊಳ್ಳಬೇಕಿದೆ. ಸದ್ಯ 13 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು 14 ಅಂಕಗಳೊಂದಿಗೆ ಬೆಂಗಳೂರು, ಡೆಲ್ಲಿ ತಂಡಗಳು ಕ್ರಮವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿವೆ. ಆರ್ ಸಿಬಿ ಸದ್ಯ -0.145 ರನ್ ರೇಟ್ ಹೊಂದಿದ್ದು, ಡೆಲ್ಲಿ -0.159 ರನ್ ರೇಟ್ ಹೊಂದಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಪ್ಲೇ ಆಫ್ ಸ್ಥಾನ ಖಚಿತವಾಗುತ್ತದೆ. ಆದರೆ ಸೋತ ತಂಡದ ಭವಿಷ್ಯ ಹೈದರಾಬಾದ್-ಮುಂಬೈ ಪಂದ್ಯಗಳ ಫಲಿತಾಂಶದ ಮೇಲೆ ನಿರ್ಧಾರವಾಗುತ್ತದೆ.

    ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಮುಂಬೈ ಗೆಲುವು ಪಡೆದರೇ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದೊಮ್ಮೆ ಸೋತರೆ ರನ್ ರೇಟ್ ಕಾರಣದಿಂದ ಹೈದರಾಬಾದ್ ತಂಡ 3ನೇ ಸ್ಥಾನ ಪಡೆಯಲಿದೆ. ಸದ್ಯ ಹೈದರಾಬಾದ್ ತಂಡ +0.555 ರನ್ ರೇಟ್ ಹೊಂದಿದೆ. ಆಗ 4ನೇ ಸ್ಥಾನಕ್ಕಾಗಿ ಆರ್ ಸಿಬಿ, ಡೆಲ್ಲಿ ಪಂದ್ಯದಲ್ಲಿ ಸೋತ ತಂಡ ಹಾಗೂ ಕೋಲ್ಕತ್ತಾ ನಡುವಿನ ತಂಡಗಳ ರನ್ ರೇಟ್ ಮೇಲೆ 4ನೇ ಸ್ಥಾನ ಖಚಿತವಾಗುತ್ತದೆ. ಕೋಲ್ಕತ್ತಾ ತಂಡ ಸದ್ಯ -0.214 ರನ್ ರೇಟ್ ಹಾಗೂ 14 ಅಂಕಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿದೆ.

    4ನೇ ಸ್ಥಾನಕ್ಕೆ ರನ್ ರೇಟ್ ಪ್ರಮುಖ ಪಾತ್ರವಹಿಸುವ ಕಾರಣದಿಂದ ಪಂದ್ಯದಲ್ಲಿ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಿದರೆ 15 ರನ್ ಬಾಕಿ ಇರುವಂತೆ ಗೆಲ್ಲಬೇಕಿದೆ. ಆರ್ ಸಿಬಿ ಮೊದಲು ಬೌಲ್ ಮಾಡಿದರೆ ಡೆಲ್ಲಿ 22 ರನ್ ಗಳ ಗೆಲುವು ಪಡೆಯಬೇಕಿದೆ. ಇತ್ತ ಡೆಲ್ಲಿ ಮೊದಲು ಬ್ಯಾಟಿಂಗ್ ಮಾಡಿದರೆ 12 ಎಸೆತ ಬಾಕಿ ಇರುವಂತೆ ಆರ್ ಸಿಬಿ ಗೆಲುವು ಪಡೆಯಬೇಕಿದೆ. ಅಥವಾ ಡೆಲ್ಲಿ ಮೊದಲು ಬೌಲ್ ಮಾಡಿದರೆ 18 ಪ್ಲಸ್ ರನ್ ಗಳೊಂದಿಗೆ ಆರ್ ಸಿಬಿ ಗೆಲುವು ಪಡೆಯಬೇಕಿದೆ. ಉಳಿದಂತೆ ರಾಜಸ್ಥಾನ ತಂಡ ಅಂತಿಮ ಸ್ಥಾನ ಪಡೆದರೆ, ಚೆನ್ನೈ 7 ಹಾಗೂ ಪಂಜಾಬ್ ತಂಡ 6ನೇ ಸ್ಥಾನದಲ್ಲಿ ಟೂರ್ನಿಯಿಂದ ಹೊರ ನಡೆಯಲಿದೆ.

  • 5 ವಿಕೆಟ್ 20 ರನ್, ಚಕ್ರವರ್ತಿ ಮಿಸ್ಟ್ರಿ ಸ್ಪಿನ್‍ಗೆ ಡೆಲ್ಲಿ ತತ್ತರ – ಕೋಲ್ಕತ್ತಾಗೆ 59 ರನ್‍ಗಳ ಜಯ

    5 ವಿಕೆಟ್ 20 ರನ್, ಚಕ್ರವರ್ತಿ ಮಿಸ್ಟ್ರಿ ಸ್ಪಿನ್‍ಗೆ ಡೆಲ್ಲಿ ತತ್ತರ – ಕೋಲ್ಕತ್ತಾಗೆ 59 ರನ್‍ಗಳ ಜಯ

    – ಬೌಲಿಂಗ್‍ನಲ್ಲಿ ಅಬ್ಬರಿಸಿದ ದುಬಾರಿ ಆಟಗಾರ ಪ್ಯಾಟ್ ಕಮ್ಮಿನ್ಸ್

    ಅಬುಧಾಬಿ: ಇಂದು ನಡೆದ ಸೂಪರ್ ಶನಿವಾರದ ಮೊದಲನೇ ಮ್ಯಾಚಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 59 ರನ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.

    ಇಂದು ನಡೆದ ಐಪಿಎಲ್-2020ಯ 42 ಮ್ಯಾಚಿನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮೊದಲು ಎಡವಿದರು, ಮಧ್ಯದಲ್ಲಿ ನರೈನ್ ಮತ್ತು ರಾಣಾ ಅವರ ಉತ್ತಮ ಜೊತೆಯಾಟದಿಂದ ನಿಗದಿತ 20 ಓವರಿನಲ್ಲಿ 194 ರನ್ ಸಿಡಿಸಿದರು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ನಿಗದಿತ 20 ಓವರಿನಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಸೇರಿಸಿ ಸೋಲನ್ನು ಒಪ್ಪಿಕೊಂಡಿತು.

    ಚಕ್ರವರ್ತಿ ಸೂಪರ್ ಬೌಲಿಂಗ್
    ಇಂದಿನ ಪಂದ್ಯದಲ್ಲಿ ಸೂಪರ್ ಆಗಿ ಬೌಲ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಕೇವಲ 20 ರನ್ ನೀಡಿ ಬರೋಬ್ಬರಿ ಐದು ವಿಕೆಟ್ ಪಡೆದರು. ಈ ಮೂಲಕ ಐಪಿಎಲ್-2020ಯಲ್ಲಿ ಐದು ವಿಕೆಟ್ ಕಿತ್ತ ಮೊದಲ ಬೌಲರ್ ಎಂಬ ಖ್ಯಾತಿ ಪಡೆದರು. ಇವರಿಗೆ ಉತ್ತಮ ಸಾಥ್ ನೀಡಿದ ದುಬಾರಿ ಆಟಗಾರ ಪ್ಯಾಟ್ ಕಮ್ಮಿನ್ಸ್ ನಾಲ್ಕು ಓವರ್ ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದು 17 ರನ್ ನೀಡಿ ಮಿಂಚಿದರು.

    195 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೋಲ್ಕತಾ ನೈಟ್ ರೈಡರ್ಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಆರಂಭಿಕ ಆಘಾತ ನೀಡಿದರು. ಇನ್ನಿಂಗ್ಸ್ ಮೊದಲ ಬಾಲಿನಲ್ಲಿಯೇ ಅಜಿಂಕ್ಯ ರಹಾನೆ ಅವರನ್ನು ಔಟ್ ಮಾಡಿದರು. ಈ ಮೂಲಕ ರಹಾನೆ ಮತ್ತೆ ನಿರಾಸೆ ಮೂಡಿಸಿ ಶೂನ್ಯ ಸುತ್ತಿ ಹೊರನೆಡದರು. ಬಳಿಕ ಶಿಖರ್ ಧವನ್ ಅವರನ್ನು 2ನೇ ಓವರ್ ಮೂರನೇ ಬಾಲಿನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರೇ ಬೌಲ್ಡ್ ಮಾಡಿದರು.

    ಆ ನಂತರ ಒಂದಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ತಾಳ್ಮೆಯ ಆಟವಾಡಿ ತಂಡಕ್ಕಾಗಿ ಮೊತ್ತವನ್ನು ಪೇರಿಸುತ್ತಾ ಬಂದರು. ಹೀಗಾಗಿ ಪವರ್ ಪ್ಲೇ ಅಂತ್ಯದ ವೇಳೆಗೆ ಡೆಲ್ಲಿ ಎರಡು ವಿಕೆಟ್ ಕಳೆದುಕೊಂಡು ಕೇವಲ 36 ರನ್ ಪೇರಿಸಿತು. ನಂತರ 11ನೇ ಓವರ್ ಎರಡನೇ ಬಾಲಿನಲ್ಲಿ 33 ಬಾಲಿಗೆ 27 ರನ್ ಸಿಡಿಸಿ ಆಡುತ್ತಿದ್ದ ರಿಷಭ್ ಪಂತ್ ಔಟ್ ಆದರು. ನಂತರ ಬಂದ ಶಿಮ್ರಾನ್ ಹೆಟ್ಮಿಯರ್ ಅವರು ಕೂಡ ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಗೆರೆಯ ಬಳಿ ಕ್ಯಾಚ್ ಕೊಟ್ಟರು.

    ಆರಂಭದಿಂದಲೂ ಉತ್ತಮವಾಗಿ ಬ್ಯಾಟ್ ಬೀಸಿದ್ದ ನಾಯಕ ಶ್ರೇಯಸ್ ಐಯ್ಯರ್ 13ನೇ ಓವರ್ ಮೂರನೇ ಬಾಲಿನಲ್ಲಿ 38 ಬಾಲಿಗೆ 47 ರನ್ ಸಿಡಿಸಿ ಔಟ್ ಆದರು. ಈ ಮೂಲಕ 14ನೇ ಓವರ್ ಮುಕ್ತಾಯಕ್ಕೆ ಡೆಲ್ಲಿ ತಂಡ ಐದು ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತು. ನಂತರ ಅಬ್ಬರಿಸುವ ಸೂಚನೆ ನೀಡಿದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಮಾರ್ಕಸ್ ಸ್ಟೊಯಿನಿಸ್ ಅವರು ಕೂಡ ವರುಣ್ ಚಕ್ರವರ್ತಿ ಅವರ ಬೌಲಿಂಗ್ ಮೋಡಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು.

    ಅದೇ ಓವರಿನಲ್ಲಿ ಆಕ್ಸರ್ ಪಟೇಲ್ ಅವರು ಕೂಡ ವರುಣ್ ಚಕ್ರವರ್ತಿ ಅವರಿಗೆ ಬೌಲ್ಡ್ ಆದರು. ನಂತರ 18ನೇ ಓವರಿನಲ್ಲಿ ಕಗಿಸೊ ರಬಾಡಾ ಅವರು 9 ರನ್ ಗಳಿಸಿ ಪ್ಯಾಟ್ ಕಮ್ಮಿನ್ಸ್ ಅವರಿಗೆ ಔಟ್ ಆದರು. ಇವರ ನಂತರ ತುಷಾರ್ ದೇಶಪಾಂಡೆ ಅವರು ಔಟ್ ಆದರು. ಈ ಮೂಲಕ ಡೆಲ್ಲಿ 20 ಓವರ್ ಆಡಿ 9 ವಿಕೆಟ್ ಕಳೆದುಕೊಂಡು ಕೇವಲ 135 ರನ್ ಪೇರಿಸಿ ಸೋತಿತು.

  • ಐಪಿಎಲ್ ಇತಿಹಾಸದಲ್ಲೇ ದಾಖಲೆ ಬರೆದ ನಾಟ್ರ್ಜೆ – ಡೆಲ್ಲಿಗೆ 13 ರನ್‍ಗಳ ಜಯ

    ಐಪಿಎಲ್ ಇತಿಹಾಸದಲ್ಲೇ ದಾಖಲೆ ಬರೆದ ನಾಟ್ರ್ಜೆ – ಡೆಲ್ಲಿಗೆ 13 ರನ್‍ಗಳ ಜಯ

    – ಡೆಲ್ಲಿ ವೇಗಿಗಳ ವೇಗಕ್ಕೆ ರಾಜಸ್ಥಾನ್ ರಾಯಲ್ಸ್ ಉಡೀಸ್

    ದುಬೈ: ಇಂದು ಐಪಿಎಲ್-2020ಯಲ್ಲಿ ಇಂದು ನಡೆದ 30ನೇ ಪಂದ್ಯದಲ್ಲಿ ಭರ್ಜರಿಯಾಗಿ ಬೌಲಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 13 ರನ್‍ಗಳಿಂದ ಗೆದ್ದು ಅಂಕ ಪಟ್ಟಿಯಲ್ಲಿ 12 ಅಂಕಗಳಿಸಿ ಮೊದಲ ಸ್ಥಾನಕ್ಕೆ ಏರಿದೆ.

    ಇಂದು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಐಯ್ಯರ್ ಮತ್ತು ಶಿಖರ್ ಧವನ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 162 ರನ್ ಸೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಡೆಲ್ಲಿ ವೇಗಿಗಳಾದ ಅನ್ರಿಚ್ ನಾಟ್ರ್ಜೆ ಮತ್ತು ಕಗಿಸೊ ರಬಡಾ ಅವರ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ 148 ರನ್ ಗಳಿಸಿತು.

    ಐಪಿಎಲ್ ಇತಿಹಾಸದಲ್ಲೇ ನಾಟ್ರ್ಜೆ ಮಿಂಚು
    ಇಂದು ಡೆಲ್ಲಿ ಕ್ಯಾಪಿಟಲ್ ತಂಡದ ವೇಗಿ ಅನ್ರಿಚ್ ನಾಟ್ರ್ಜೆ ಅವರು ಐಪಿಎಲ್ ಇತಿಹಾದಲ್ಲೇ ವೇಗದ ಬೌಲ್ ಎಸೆದು ದಾಖಲೆ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಗಂಟೆಗೆ 156.22 ಕಿಮೀ ವೇಗದಲ್ಲಿ ಬೌಲ್ ಮಾಡಿದ್ದಾರೆ. ಜೊತೆಗೆ ಗಂಟೆಗೆ 155.21 ಕಿಮೀ ವೇಗದಲ್ಲೇ ಐಪಿಎಲ್ ಇತಿಹಾಸದಲ್ಲೇ ಎರಡನೇ ವೇಗದ ಬಾಲ್ ಎಸೆದಿದ್ದಾರೆ. ಮೂರನೇ ವೇಗದ ಎಸೆತವು ಕೂಡ ಅನ್ರಿಚ್ ನಾಟ್ರ್ಜೆ ಅವರ ಹೆಸರಿನಲ್ಲಿದ್ದು, ಗಂಟೆಗೆ 154.74 ಕಿ.ಮೀ ವೇಗದಲ್ಲಿ ಮೂರನೇ ಬಾಲ್ ಬೌಲ್ ಮಾಡಿದ್ದಾರೆ. ಗಂಟೆಗೆ 154.40 ಕಿ.ಮೀ ವೇಗದಲ್ಲಿ ಬೌಲ್ ಮಾಡಿರುವ ವೇಗ ಡೇಲ್ ಸ್ಟೇನ್ ಅವರು ನಾಲ್ಕನೇ ಸ್ಥಾನದಲ್ಲಿ ಇದ್ದಾರೆ.

    ಡೆಲ್ಲಿ ವೇಗಿಗಳ ಅಬ್ಬರ
    ಇಂದು ಆರಂಭದಿಂದಲೇ ಉತ್ತಮವಾಗಿ ಬೌಲ್ ಮಾಡಿದ ಡೆಲ್ಲಿ ಬೌಲರ್ಸ್, ರಾಜಸ್ಥಾನ್ ಬ್ಯಾಟ್ಸ್ ಮ್ಯಾನ್‍ಗಳನ್ನು ಕಾಡಿದರು. ನಾಲ್ಕು ಓವರ್ ಬೌಲ್ ಮಾಡಿದ ಅನ್ರಿಚ್ ನಾಟ್ರ್ಜೆ ಅವರು ಎರಡು ವಿಕೆಟ್ ಕಿತ್ತು 33 ರನ್ ಕೊಟ್ಟರು. ಇವರಿಗೆ ಉತ್ತಮ ಸಾಥ್ ಕೊಟ್ಟ ಯುವ ವೇಗ ತುಷಾರ್ ದೇಶಪಾಂಡೆ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು 37 ರನ್ ನೀಡಿದರು. ಕಗಿಸೊ ರಬಡಾ, ಆಕ್ಸರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದುಕೊಂಡರು.

    ಡೆಲ್ಲಿ ಕೊಟ್ಟ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ರಾಜಸ್ಥಾನ್ ರಾಯಲ್ಸ್ ತಂಡ ಆರಂಭಿಕರಾಗಿ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಅವರು ಕಣಕ್ಕಿಳಿದರು. ಆರಂಭದಲ್ಲೇ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ತಂಡ 37 ರನ್ ಗಳಿಸಿದ್ದಾಗ ಮೂರನೇ ಓವರಿನ ಕೊನೆ ಬಾಲಿನಲ್ಲಿ ಅನ್ರಿಚ್ ನಾಟ್ರ್ಜೆ ಅವರಿಗೆ 9 ಬಾಲಿಗೆ 22 ರನ್ ಗಳಿಸಿ ಜೋಸ್ ಬಟ್ಲರ್ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ನಾಯಕ ಸ್ಟೀವ್ ಸ್ಮಿತ್ ಅವರು ರವಿಚಂದ್ರನ್ ಅಶ್ವಿನ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ಹೊರನಡೆದರು.

    ನಂತರ ಜೊತೆಯಾದ ಸ್ಟೋಕ್ಸ್ ಮತ್ತು ಸ್ಯಾಮ್ಸನ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದರು. ನಂತರ 35 ಬಾಲಿಗೆ 41 ರನ್‍ಗಳಿಸಿ ಆಡುತ್ತಿದ್ದ ಬೆನ್ ಸ್ಟೋಕ್ಸ್ ಅವರು ತುಷಾರ್ ದೇಶಪಾಂಡೆ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಬಳಿಕ 18 ಬಾಲಿಗೆ 25 ರನ್‍ಗಳಿಸಿ ತಾಳ್ಮೆಯಿಂದ ಆಡುತ್ತಿದ್ದ ಸಂಜು ಸ್ಯಾಮ್ಸನ್ ಅವರು 11ನೇ ಓವರ್ 4ನೇ ಬಾಲಿನಲ್ಲಿ ಆಕ್ಸರ್ ಪಟೇಲ್ ಸ್ಪಿನ್ ಮೋಡಿಗೆ ಕ್ಲೀನ್ ಬೌಲ್ಡ್ ಆದರು.

    ಇಲ್ಲದ ರನ್ ಕದಿಯಲು ಹೋದ ರಿಯಾನ್ ಪರಾಗ್ ಅವರು ರನೌಟ್ ಆದರು. ನಂತರ 17ನೇ ಓವರಿನ ಮೂರನೇ ಬಾಲಿನಲ್ಲಿ 27 ಬಾಲಿಗೆ 32 ರನ್ ಸಿಡಿಸಿ ಆಡುತ್ತಿದ್ದ ರಾಬಿನ್ ಉತ್ತಪ್ಪ ಅವರು ನಾಟ್ರ್ಜೆ ಅವರ ಯಾರ್ಕರ್ ಗೆ ಬೌಲ್ಡ್ ಆದರು. ಸ್ಫೋಟಕ ಆಟಗಾರ ಜೋಫ್ರಾ ಆರ್ಚರ್ ಅವರು ಇಂದು ರಾಜಸ್ಥಾನ್ ರಾಯಲ್ಸ್ ಪರವಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ ನಾಲ್ಕು ಬಾಲಿಗೆ ಕೇವಲ ಒಂದು ರನ್ ಸಿಡಿಸಿ ಔಟ್ ಆದರು.

    ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಡೆಲ್ಲಿ ತಂಡ ಇನ್ನಿಂಗ್ಸ್ ನ ಮೊದಲ ಬಾಲಿನಲ್ಲೇ ಇನ್ ಫಾರ್ಮ್ ಆಟಗಾರ ಪೃಥ್ವಿ ಶಾ ಅವರ ಔಟ್ ಆದರು. ಆದರೆ ನಂತರ ಜೊತೆಯಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ಅನುಭವಿ ಆಟಗಾರ ಶಿಖರ್ ಧವನ್ ಅವರು, ಇಬ್ಬರು ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. 33 ಬಾಲಿನಲ್ಲಿ ಎರಡು ಸಿಕ್ಸರ್ ಮತ್ತು ಆರು ಬೌಂಡರಿ ಸಮೇತ ಧವನ್ 27 ರನ್ ಸಿಡಿಸಿದರೆ, ಶ್ರೇಯಸ್ ಐಯ್ಯರ್ ಅವರು, 43 ಬಾಲಿಗೆ ಎರಡು ಸಿಕ್ಸರ್ ಮತ್ತು ಮೂರು ಫೋರ್ ಸಮೇತ 53 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ್ ತಂಡಕ್ಕೆ 163 ರನ್‍ಗಳ ಟಾರ್ಗೆಟ್ ನೀಡಿದ್ದರು.

  • ಐಪಿಎಲ್‍ನಲ್ಲಿ ಫಿಕ್ಸಿಂಗ್? – ಭಾರೀ ಚರ್ಚೆಗೆ ಗ್ರಾಸವಾಗಿದೆ ಮುಂಬೈ ಇಂಡಿಯನ್ಸ್ ಟ್ವೀಟ್

    ಐಪಿಎಲ್‍ನಲ್ಲಿ ಫಿಕ್ಸಿಂಗ್? – ಭಾರೀ ಚರ್ಚೆಗೆ ಗ್ರಾಸವಾಗಿದೆ ಮುಂಬೈ ಇಂಡಿಯನ್ಸ್ ಟ್ವೀಟ್

    ಮುಂಬೈ: ಐಪಿಎಲ್ 2020ರ ಆವೃತ್ತಿಯಲ್ಲಿ ಫಿಕ್ಸಿಂಗ್ ನಡೆಯುತ್ತಿದ್ದೆಯೇ ಎಂಬ ಅನುಮಾನವನ್ನು ಕ್ರಿಕೆಟ್ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಈ ಆರೋಪಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಡುವೆ ಭಾನುವಾರ ನಡೆದ ಪಂದ್ಯಕ್ಕೂ ಮುನ್ನ ಮುಂಬೈ ಫ್ರಾಂಚೈಸಿ ಮಾಡಿದ ವಿವಾದಾತ್ಮಕ ಟ್ವೀಟ್ ಕಾರಣವಾಗಿದೆ.

    ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಟೂರ್ನಿಯ ಎಲ್ಲಾ ಫ್ರಾಂಚೈಸಿಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ತಮ್ಮ ತಂಡದ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸೋಶಿಯಲ್ ಮೀಡಿಯಾ ವೇದಿಕೆಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿವೆ.

    2020ರ ಆವೃತ್ತಿಯ 27ನೇ ಪಂದ್ಯದಲ್ಲಿ ಭಾನುವಾರ ದುಬೈ ಕ್ರೀಡಾಂಗಣದಲ್ಲಿ ಡೆಲ್ಲಿ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್‍ಗಳ ಗೆಲುವನ್ನು ಪಡೆದುಕೊಂಡಿತ್ತು. ಆದರೆ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಅಧಿಕೃತ ಖಾತೆಯಿಂದ ಮಾಡಿರುವ ಟ್ವೀಟ್ ಸದ್ಯ ವಿವಾದಕ್ಕೆ ಕಾರಣವಾಗಿದ್ದು, ಅಭಿಮಾನಿಗಳು ಟ್ರೋಲ್ ಮಾಡಿ ಫಿಕ್ಸಿಂಗ್ ಆರೋಪ ಮಾಡುತ್ತಿದ್ದಾರೆ.

    ಟ್ವೀಟ್‍ನಲ್ಲಿ ಏನಿತ್ತು?
    ಡೆಲ್ಲಿ ವಿರುದ್ಧದ ಪಂದ್ಯ ಆರಂಭವಾಗುವುದಕ್ಕೂ ಮುನ್ನ ರಾತ್ರಿ 7:38ಕ್ಕೆ ಮುಂಬೈ ಇಂಡಿಯನ್ಸ್ ತಂಡದ ಖಾತೆಯಲ್ಲಿ ಡೆಲ್ಲಿ ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ಗಳಿಸುವ ಮೊತ್ತದ ಎಷ್ಟು ಎಂದು ಟ್ವೀಟ್ ಮಾಡಿತ್ತು. ಆದರೆ ಕೆಲ ಕ್ಷಣಗಳು ಬಳಿಕ ಆ ಟ್ವೀಟ್ ಡಿಲೀಟ್ ಆಗಿತ್ತು. ಟ್ವೀಟ್‍ನಲ್ಲಿ ಡೆಲ್ಲಿ ತಂಡ ಇನ್ನಿಂಗ್ಸ್ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದೆ ಎಂದು ಬರೆಯಲಾಗಿತ್ತು. ವಿಶೇಷ ಎಂಬಂತೆ ಡೆಲ್ಲಿ ತಂಡ ಇನ್ನಿಂಗ್ಸ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತ್ತು. ಈ ಎರಡು ಮೊತ್ತಗಳು ಸಮೀಪವಿರುವುದರಿಂದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.

    ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಫ್ರಾಂಚೈಸಿ ತಂಡವೊಂದು ಅನುಮಾನಾಸ್ಪದವಾಗಿ ಟ್ವೀಟ್ ಮಾಡಿರುವ ಕಾರಣ ಇದಕ್ಕೆ ಬಿಸಿಸಿಐ ಅಥವಾ ಐಪಿಎಲ್ ಆಡಳಿತ ಮಂಡಳಿ ಉತ್ತರಬೇಕಾಗುವ ಸಾಧ್ಯತೆ ಇದೆ. ಉಳಿದಂತೆ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಕಳೆದ ಪಂದ್ಯದಲ್ಲಿ ರಿಷಬ್ ಪಂತ್ ಗಾಯಗೊಂಡಿದ್ದ ಕಾರಣ ರಹಾನೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತ್ತು. ಶಿಖರ್ ಧವನ್ ಗಳಿಸಿದ ಅರ್ಧ ಶತಕ ಡೆಲ್ಲಿ ತಂಡದ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಕಾರಣವಾಗಿತ್ತು. ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ ಡಿ ಕಾಕ್, ಸೂರ್ಯ ಕುಮಾರ್ ಯಾದವ್ ಅವರ ಅರ್ಧ ಶತಕದ ನೆರವಿನಿಂದ 2 ಎಸೆತ ಬಾಕಿ ಇರುವಂತೆಯೇ 166 ರನ್ ಸಿಡಿಸಿ ಪಂದ್ಯದಲ್ಲಿ ಗೆಲುವು ಪಡೆದಿತ್ತು.