Tag: Delhi Assembly Election 2020

  • ಕೇಜ್ರಿವಾಲ್ 3.O – ಫೆಬ್ರವರಿ 16ಕ್ಕೆ ಪ್ರಮಾಣ ವಚನ

    ಕೇಜ್ರಿವಾಲ್ 3.O – ಫೆಬ್ರವರಿ 16ಕ್ಕೆ ಪ್ರಮಾಣ ವಚನ

    ನವದೆಹಲಿ: 62 ಸ್ಥಾನಗಳನ್ನು ಗೆಲ್ಲುವ ಮೂಲಕ ದೆಹಲಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಆಮ್ ಅದ್ಮಿ ನಾಯಕ ಅರವಿಂದ್ ಕೇಜ್ರಿವಾಲ್ ಫೆಬ್ರವರಿ 16 ರಂದು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ರಾಮಲೀಲಾ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲು ಚಿಂತನೆ ನಡೆದಿದೆ.

    ಮೂರನೇ ಬಾರಿಗೆ ಸರ್ಕಾರ ರಚನೆ ಕಸರತ್ತು ಆರಂಭಿಸಿರುವ ಕೇಜ್ರಿವಾಲ್ ಇಂದು ಬೆಳಗ್ಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಫೆಬ್ರವರಿ 16 ರಂದು ಕಾರ್ಯಕ್ರಮ ಮಾಡಲು ಒಪ್ಪಿಗೆ ಪಡೆದುಕೊಂಡಿದ್ದಾರೆ. ಬಳಿಕ ನೂತನವಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರಿಗೂ ಕೇಜ್ರಿವಾಲ್ ತಮ್ಮ ನಿವಾಸಕ್ಕೆ ಆಹ್ವಾನ ನೀಡಿದ್ದು ಹೊಸ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಅರವಿಂದ್ ಕೇಜ್ರಿವಾಲ್ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಪ್ರಮಾಣ ವಚನ ಸ್ವೀಕರಿಸಿದ್ದರು.

  • ಜನವರಿ 20ರೊಳಗೆ ಪ್ರಣಾಳಿಕೆ ಬಿಡುಗಡೆ- 2015ಕ್ಕಿಂತ ಚಿಕ್ಕದಿರಲಿದೆ ಆಪ್ ಭರವಸೆ ಪಟ್ಟಿ

    ಜನವರಿ 20ರೊಳಗೆ ಪ್ರಣಾಳಿಕೆ ಬಿಡುಗಡೆ- 2015ಕ್ಕಿಂತ ಚಿಕ್ಕದಿರಲಿದೆ ಆಪ್ ಭರವಸೆ ಪಟ್ಟಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ಫೆಬ್ರವರಿ 8ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಪ್ರಚಾರ ಕಾರ್ಯಗಳನ್ನು ಆರಂಭಿಸಿರುವ ಕಾಂಗ್ರೆಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿವೆ.

    ಈ ನಡುವೆ ಎಎಪಿ ಪ್ರಣಾಳಿಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಜನವರಿ 15ರಿಂದ 20ರೊಳಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಎಎಪಿ ನಾಯಕಿ ಅತೀಶಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮ್ಮುಖದಲ್ಲಿ ಪ್ರಣಾಳಿಕೆ ಸಿದ್ಧಪಡಿಸಲು ಸಿದ್ಧತೆ ಮಾಡಿಕೊಂಡಿದೆ. ಅಷ್ಟೇ ಅಲ್ಲದೆ ಎಎಪಿ ಜೊತೆಗೂಡಿರುವ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಿಶೋರ್ ಕೂಡ ಪ್ರಣಾಳಿಕೆ ತಯಾರಿಕೆಗೆ ಸಹಾಯ ಮಾಡಲಿದ್ದಾರೆ ಎನ್ನಲಾಗಿದೆ.

    ಕಳೆದ ಅವಧಿಯಂತೆ ಈ ಬಾರಿಯೂ ಅತ್ಯಂತ ಚಿಕ್ಕ ಪ್ರಣಾಳಿಕೆ ಬಿಡುಗಡೆ ಮಾಡಲು ಎಎಪಿ ಪ್ಲಾನ್ ಮಾಡಿಕೊಂಡಿದೆ. ಅತ್ಯಂತ ಹೆಚ್ಚು ದತ್ತಾಂಶದಿಂದ ಈ ಪ್ರಣಾಳಿಕೆ ಕೂಡಿರಲಿದೆ ಎಂದು ಮೂಲಗಳು ಹೇಳಿದ್ದು, ಕಳೆದ ಐದು ವರ್ಷಗಳಲ್ಲಿ ಆರೋಗ್ಯ, ಶಿಕ್ಷಣ, ಸಾರಿಗೆ, ಸಂಪರ್ಕ, ಸ್ವಚ್ಛತೆ ಸೇರಿ ವಿವಿಧ ಆಯಾಮಗಳಲ್ಲಿ ದೆಹಲಿಯನ್ನು ಹೇಗೆ ಅಭಿವೃದ್ಧಿ ಪಡಿಸಲಾಗಿದೆ ಎನ್ನುವುದನ್ನು ವಿವರಿಸಲಾಗುತ್ತದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಮನೆ ಮನೆ ಪ್ರಚಾರ ಹಾಗೂ ಟೌನ್ ಹಾಲ್‍ಗಳಲ್ಲಿ ನಡೆಸುತ್ತಿರುವ ಸಭೆಗಳಲ್ಲಿ ಈ ಬಗ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಸುಳಿವು ನೀಡಿದ್ದಾರೆ. ಕಡಿಮೆ ಪುಟಗಳಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುವುದರಿಂದ ಹೆಚ್ಚು ಜನರನ್ನು ಪರಿಣಾಮಕಾರಿಯಾಗಿ ತಲುಪಬಹುದು ಎನ್ನುವುದು ಎಎಪಿ ಪಕ್ಷದ ಲೆಕ್ಕಾಚಾರವಾಗಿದೆ.