Tag: delhi assembly

  • ದೆಹಲಿ ವಿಧಾನಸಭೆಯಲ್ಲಿ ಗದ್ದಲ – 15 ಎಎಪಿ ಶಾಸಕರ ಅಮಾನತು

    ದೆಹಲಿ ವಿಧಾನಸಭೆಯಲ್ಲಿ ಗದ್ದಲ – 15 ಎಎಪಿ ಶಾಸಕರ ಅಮಾನತು

    ನವದೆಹಲಿ: ಮದ್ಯ ನೀತಿ ಹಗರಣದ ಕುರಿತು ಲೆಕ್ಕಪರಿಶೋಧಕರ ವರದಿಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಜೊತೆಗೆ ಗದ್ದಲದ ವೇಳೆ ಮಾಜಿ ಮುಖ್ಯಮಂತ್ರಿ ಅತಿಶಿ (ಈಗ ವಿರೋಧ ಪಕ್ಷದ ನಾಯಕಿ) ಸೇರಿದಂತೆ 15 ಮಂದಿ ಎಎಪಿ ಶಾಸಕರನ್ನು ದೆಹಲಿ ವಿಧಾನಸಭೆಯಿಂದ ಮಂಗಳವಾರ ಅಮಾನತುಗೊಳಿಸಲಾಗಿದೆ.

    ಫೆ.5 ರ ಚುನಾವಣೆಯಲ್ಲಿ ಸೋಲನ್ನು ತಪ್ಪಿಸಿಕೊಂಡ ಕೆಲವೇ ಕೆಲವು ಉನ್ನತ ವ್ಯಕ್ತಿಗಳಲ್ಲಿ ಒಬ್ಬರಾದ ಹಿರಿಯ ಎಎಪಿ ನಾಯಕ ಗೋಪಾಲ್ ರೈ ಅವರನ್ನು ಸಹ ವಿಧಾನಸಭೆಯಿಂದ ಅಮಾನತು ಮಾಡಲಾಯಿತು. ಇದನ್ನೂ ಓದಿ: AAP ಸರ್ಕಾರದಲ್ಲಿ ಹಗರಣ – ದೆಹಲಿ ವಿಧಾನಸಭೆಯಲ್ಲಿ ಇಂದು ಸರ್ಕಾರದಿಂದ ಸಿಎಜಿ ವರದಿ ಮಂಡನೆ

    ವಿಧಾನಸಭೆಯನ್ನುದ್ದೇಶಿಸಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಆರಂಭಿಕ ಭಾಷಣದ ವೇಳೆ ಗದ್ದಲ ಪ್ರಾರಂಭವಾಯಿತು. ನೂತನ ಸಿಎಂ ರೇಖಾ ಗುಪ್ತಾ ಅವರ ಕಚೇರಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಭಗತ್‌ಸಿಂಗ್ ಅವರ ಛಾಯಾಚಿತ್ರಗಳನ್ನು ತೆಗೆದುಹಾಕಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಎಎಪಿ ಶಾಸಕರು ‘ಜೈ ಭೀಮ್’ ಘೋಷಣೆಗಳನ್ನು ಕೂಗಿದರು. ಅಂಬೇಡ್ಕರ್‌ ಮತ್ತು ಭಗತ್‌ಸಿಂಗ್ ಅವರ ಛಾಯಾಚಿತ್ರಗಳನ್ನು ಹಿಡಿದು ಪ್ರತಿಭಟಿಸಿದರು. ಈ ಛಾಯಾಚಿತ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರಗಳೊಂದಿಗೆ ಬದಲಾಯಿಸಲಾಗಿದೆ ಎಂದು ಎಎಪಿ ಆರೋಪಿಸಿದೆ.

    ಸಿಎಂ ರೇಖಾ ಗುಪ್ತ ಅವರು ಇಂದು ಕಂಟ್ರೋಲರ್ ಮತ್ತು ಆಡಿಟರ್-ಜನರಲ್ (ಸಿಎಜಿ) ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಎಎಪಿ ಅವಧಿಯಲ್ಲಿ ಹಲವು ಭ್ರಷ್ಟಾಚಾರಗಳು ನಡೆದಿವೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: Maha Kumbh Mela: ಮಹಾಶಿವರಾತ್ರಿಯಂದು ಕಡೆಯ ಅಮೃತಸ್ನಾನಕ್ಕೆ ಜಿಲ್ಲಾಡಳಿತ ಸಜ್ಜು

    ಈ ಹೇಳಿಕೆಯನ್ನು ಬಿಜೆಪಿ ತಳ್ಳಿಹಾಕಿದ್ದು, ಎಎಪಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದೆ. ಬಿಜೆಪಿ ಬಿಡುಗಡೆ ಮಾಡಿದ ಗುಪ್ತಾ ಅವರ ಕಚೇರಿಯ ವೀಡಿಯೊಗಳು, ಎಎಪಿ ಆಡಳಿತದಲ್ಲಿ ಮುಖ್ಯಮಂತ್ರಿಗಳ ಮೇಜಿನ ಹಿಂದೆ ನೇತುಹಾಕಲಾಗಿದ್ದ ಡಾ. ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳನ್ನು ಪಕ್ಕದ ಗೋಡೆಗಳಿಗೆ ಸ್ಥಳಾಂತರಿಸಿ, ಮಹಾತ್ಮ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿಯವರ ಫೋಟೋಗಳನ್ನು ಅಳವಡಿಸಿರುವುದನ್ನು ತೋರಿಸಿವೆ.

    ಎಎಪಿ, ಹಲವಾರು ತಿಂಗಳುಗಳ ಕಾಲ ಜೈಲಿನಲ್ಲಿದ್ದ ಕೇಜ್ರಿವಾಲ್ ಮತ್ತು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರು ಈ ಆರೋಪಗಳನ್ನು ಎದುರಿಸಿದ್ದಾರೆ. ಹಲವು ಹಗರಣಗಳ ಆರೋಪಗಳ ಮಧ್ಯೆ ನಡೆದ ಚುನಾವಣೆಯಲ್ಲಿ ಎಎಪಿ ಸೋತಿತು. ಬಿಜೆಪಿ ದೆಹಲಿಯ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದುಕೊಂಡಿತು. ಕಳೆದ ಎರಡು ಚುನಾವಣೆಗಳಲ್ಲಿ ಗೆದ್ದಿದ್ದಕ್ಕಿಂತ 37 ಹೆಚ್ಚು ಸ್ಥಾನಗಳನ್ನು ಗೆದ್ದಿದೆ.

  • AAP ಸರ್ಕಾರದಲ್ಲಿ ಹಗರಣ – ದೆಹಲಿ ವಿಧಾನಸಭೆಯಲ್ಲಿ ಇಂದು ಸರ್ಕಾರದಿಂದ ಸಿಎಜಿ ವರದಿ ಮಂಡನೆ

    AAP ಸರ್ಕಾರದಲ್ಲಿ ಹಗರಣ – ದೆಹಲಿ ವಿಧಾನಸಭೆಯಲ್ಲಿ ಇಂದು ಸರ್ಕಾರದಿಂದ ಸಿಎಜಿ ವರದಿ ಮಂಡನೆ

    * 14 ವರದಿಗಳನ್ನು ಮಂಡಿಸಲಿರುವ ಬಿಜೆಪಿ ಸರ್ಕಾರ

    ನವದೆಹಲಿ: ದೆಹಲಿಯ ಬಿಜೆಪಿ ಸರ್ಕಾರವು ಹಿಂದಿನ ಎಎಪಿ ಆಡಳಿತದ ಕಾರ್ಯಕ್ಷಮತೆಗೆ ಸಂಬಂಧಿಸಿದ 14 ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಗಳನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಿದೆ.

    ಆಪ್ ಸರ್ಕಾರದ ಹಗರಣಗಳು, ಶೀಷ್‌ ಮಹಲ್, ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಸರ್ಕಾರ ವರದಿ ಮಂಡನೆ ಮಾಡಲಿದೆ.

    ಶೀಷ್‌ ಮಹಲ್ ನವೀಕರಣಕ್ಕೆ 8.62 ಕೋಟಿಗೆ ಮಂಜೂರು ಮಾಡಲಾಗಿದ್ದರೂ, ಅಂತಿಮವಾಗಿ 33.66 ಕೋಟಿ ರೂ. ಖರ್ಚು ಮಾಡಲಾಗಿತ್ತು. ಮೊಹಲ್ಲಾ‌ ಕ್ಲಿನಿಕ್ ಯೋಜನೆಗಳಲ್ಲಿ ಅಕ್ರಮದ ಶಂಕೆ ಇದೆ. ಈ ಬಗ್ಗೆ ಆಡಳಿತಾರೂಢ ಬಿಜೆಪಿ ಸರ್ಕಾರ ವರದಿ ಮಂಡಿಸಲಿದೆ.

    ಎಎಪಿ ‘ತಡೆಹಿಡಿದ’ ಸಿಎಜಿ ವರದಿಗಳಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ನಿರ್ಣಾಯಕ ಲೆಕ್ಕಪರಿಶೋಧನೆಗಳು ಮತ್ತು ಮೌಲ್ಯಮಾಪನಗಳು ಸೇರಿವೆ ಎನ್ನಲಾಗಿದೆ.

    * ರಾಜ್ಯ ಹಣಕಾಸು ಲೆಕ್ಕಪರಿಶೋಧನಾ ವರದಿ (2021ರ ಮಾರ್ಚ್‌ಗೆ ಕೊನೆಗೊಂಡ ವರ್ಷಕ್ಕೆ)
    * ಆದಾಯ, ಆರ್ಥಿಕ, ಸಾಮಾಜಿಕ ಮತ್ತು ಸಾಮಾನ್ಯ ವಲಯಗಳು ಮತ್ತು ಸಾರ್ವಜನಿಕ ಉದ್ದಿಮೆಗಳು (2020ರ ಮಾರ್ಚ್ 31, ಮತ್ತು 2021 ಕ್ಕೆ ಕೊನೆಗೊಂಡ ವರ್ಷಗಳಿಗೆ)
    * ವಾಹನ ವಾಯು ಮಾಲಿನ್ಯ ತಡೆಗಟ್ಟುವಿಕೆ ಮತ್ತು ತಗ್ಗಿಸುವಿಕೆಯ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆ (2021ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ)
    * ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳ ಕಾರ್ಯಕ್ಷಮತೆ ಲೆಕ್ಕಪರಿಶೋಧನೆ (2021ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ)
    * ರಾಜ್ಯ ಹಣಕಾಸು ಲೆಕ್ಕಪರಿಶೋಧನಾ ವರದಿ (2022ರ ಮಾರ್ಚ್‌ಗೆ ಕೊನೆಗೊಂಡ ವರ್ಷಕ್ಕೆ)
    * ಮದ್ಯ ಪೂರೈಕೆಯ ಕಾರ್ಯಕ್ಷಮತೆ ಲೆಕ್ಕಪರಿಶೋಧನೆ
    * ರಾಜ್ಯ ಹಣಕಾಸು ಲೆಕ್ಕಪರಿಶೋಧನಾ ವರದಿ (2023ರ ಮಾರ್ಚ್‌ಗೆ ಕೊನೆಗೊಂಡ ವರ್ಷಕ್ಕೆ)
    * ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಸೇವೆಗಳ ನಿರ್ವಹಣೆಯ ಕಾರ್ಯಕ್ಷಮತೆ ಲೆಕ್ಕಪರಿಶೋಧನೆ
    * ದೆಹಲಿ ಸಾರಿಗೆ ನಿಗಮದ ಕಾರ್ಯನಿರ್ವಹಣೆಯ ಕುರಿತು ಕಾರ್ಯಕ್ಷಮತೆ ಲೆಕ್ಕಪರಿಶೋಧನಾ ವರದಿ

  • ಲೈವ್ ಡೆಮೋ ಮಾಡಿ ಆಪ್‍ನಿಂದ ಇವಿಎಂ ಹ್ಯಾಕ್: ಯಾರಿಗೆ ಎಷ್ಟು ವೋಟ್ ಬಿತ್ತು?

    ಲೈವ್ ಡೆಮೋ ಮಾಡಿ ಆಪ್‍ನಿಂದ ಇವಿಎಂ ಹ್ಯಾಕ್: ಯಾರಿಗೆ ಎಷ್ಟು ವೋಟ್ ಬಿತ್ತು?

    – ಆಪ್ ಆರೋಪವನ್ನು ತಿರಸ್ಕರಿಸಿದ ಚುನಾವಣಾ ಆಯೋಗ

    ನವದೆಹಲಿ: ಚುನಾವಣೆಯಲ್ಲಿ ಕೇಂದ್ರ ಸರ್ಕಾರದಿಂದ ಇವಿಎಂ ದುರ್ಬಳಕೆ ಆಗುತ್ತಿದೆ ಎಂದು ಆರೋಪ ಮಾಡಿದ್ದ ಆಪ್ ಇಂದು ವಿಧಾನಸಭೆಯಲ್ಲಿ ಲೈವ್ ಡೆಮೋ ನಡೆಸಿ ಹೇಗೆ ಹ್ಯಾಕ್ ಮಾಡಬಹುದು ಎನ್ನುವುದನ್ನು ವಿವರಿಸಿದೆ.

    ಆಪ್ ಶಾಸಕ ಸೌರಭ್ ಭಾರದ್ವಾಜ್ ಸದನದಲ್ಲಿ ಇವಿಎಂ ಹಿಡಿದು ಲೈವ್ ಡೆಮೋ ನೀಡಿದ್ದಾರೆ. ಕೋಡ್ ಬಳಸಿಕೊಂಡು, ಇವಿಎಂ ತಿರುಚಿ ಯಾವುದೇ ಪಕ್ಷ ಗೆಲುವು ಸಾಧಿಸಬಹುದು. ಆಡಳಿತರೂಢ ಕೇಂದ್ರ ಸರ್ಕಾರಕ್ಕೆ ಇದು ಅಸಾಧ್ಯವಲ್ಲ. ಬಿಜೆಪಿ ಇವಿಎಂ ದುರ್ಬಳಕೆ ಮಾಡಿಕೊಂಡು ಚುನಾವಣೆ ಗೆಲ್ಲುತ್ತಿದೆ ಎಂದು ದೂರಿದರು.

    ಡೆಮೋ ತೋರಿಸುವ ಮುನ್ನ ಮಾತನಾಡಿದ ಅವರು, ಇಲ್ಲಿ ತೋರಿಸುತ್ತಿರುವುದು ಚುನಾವಣೆಯಲ್ಲಿ ಬಳಕೆಯಾಗುತ್ತಿರುವ ಇವಿಎಂ ಅಲ್ಲ. ಇವಿಎಂ ರೀತಿಯಲ್ಲೇ ತಯಾರಾಗಿರುವ ಯಂತ್ರವಿದು. ನಾನು ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಆಗಿದ್ದು, ರಾಜಕೀಯಕ್ಕೆ ಸೇರುವ ಮೊದಲು ಹಲವಾರು ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇನೆ. ಎವಿಎಂ ಹ್ಯಾಕ್ ಮಾಡುವುದು ಕಷ್ಟದ ಕೆಲಸವಲ್ಲ. ಕೇವಲ 90 ಸೆಕೆಂಡ್ ನಲ್ಲಿ ಮದರ್‍ಬೋರ್ಡ್ ಬದಲಾಯಿಸಿ ಹ್ಯಾಕ್ ಮಾಡಬಹುದು ಎಂದು ಅವರು ವಿವರಿಸಿದರು.

    ಡೆಮೋದಲ್ಲಿ ಏನಾಯ್ತು?
    ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಆಪ್‍ಗೆ 10, ಬಿಎಸ್‍ಪಿ 2, ಬಿಜೆಪಿ 3, ಕಾಂಗ್ರೆಸ್ 2, ಎಸ್‍ಪಿ 2 ಮತಗಳನ್ನು ಹಾಕಿದ್ದಾರೆ. ಆದರೆ ಫಲಿತಾಂಶ ಬಂದಾಗ ಆಪ್‍ಗೆ 2 ವೋಟ್ ಬಿದ್ದಿದ್ದರೆ, ಬಿಜೆಪಿಗೆ ಆಪ್‍ನ ವೋಟ್ ಸೇರಿ 11 ವೋಟ್ ಬಿದ್ದಿದೆ. ಬಿಎಸ್‍ಪಿಗೆ 2, ಕಾಂಗ್ರೆಸ್ 2, ಎಸ್‍ಪಿ 2 ವೋಟ್ ಬಿದ್ದಿದೆ.

    ಇವಿಎಂ ತಯಾರಿಸಿದ್ದು ಯಾರು?
    ಐಐಟಿಯ ಹಳೆ ವಿದ್ಯಾರ್ಥಿಗಳು ವಿಶೇಷ ಇವತ್ತಿನ ಡೆಮೋಗಾಗಿ ಇವಿಎಂ ಹೋಲುವ ಯಂತ್ರವನ್ನು ತಯಾರಿಸಿದ್ದಾರೆ. ಅಷ್ಟೇ ಅಲ್ಲದೇ ಇವಿಎಂ ತಜ್ಞರು ಸಹ ಇದನ್ನು ಪರಿಶೀಲಿಸಿದ್ದಾರೆ ಎಂದು ಎಎಪಿಯ ಮೂಲಗಳು ಮಾಹಿತಿ ನೀಡಿವೆ.

    ಇದೆ ವೇಳೆ, ನಾನು ಸವಾಲು ಎಸೆಯುತ್ತೇನೆ, ಮುಂದೆ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪೇಪರ್ ಬ್ಯಾಲೆಟ್ ಬಳಸಿದರೆ ಬಿಜೆಪಿ ಜಯಗಳಿಸಲು ಸಾಧ್ಯವೇ ಇಲ್ಲ ಎಂದು ಸೌರಭ್ ಭಾರದ್ವಾಜ್ ಹೇಳಿದರು. ಈ ವೇಳೆ ವಿಧಾನಸಭೆಯಲ್ಲಿ ತೀವ್ರ ಗದ್ದಲ ಕೋಲಾಹಲ ಸೃಷ್ಟಿಯಾಯ್ತು.

    ಈ ಮಧ್ಯೆ ಚುನಾವಣಾ ಆಯೋಗ ಆಮ್ ಆದ್ಮಿ ಆರೋಪ ನಿರಾಕರಿಸಿದೆ. ಆಯೋಗ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಆಪ್ ಚುನಾವಣೆಯಲ್ಲಿ ಬಳಕೆಯಾಗದ ಇವಿಎಂ ಬಳಸಿ ಡೆಮೋ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಅನುಮತಿ ಪಡೆಯದೇ ಪ್ರಾತ್ಯಕ್ಷಿಕೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮೇ 12ರಂದು ಎಲ್ಲ ಪಕ್ಷಗಳ ಸಭೆಯನ್ನು ಚುನಾವಣಾ ಆಯೋಗ ಕರೆದಿದ್ದು, ಈ ಸಭೆಯ ಬಳಿಕ ಇವಿಎಂ ಹ್ಯಾಕಥಾನ್ ನಡೆಯುವ ದಿನಾಂಕ ಪ್ರಕಟವಾಗಲಿದೆ.